Tag: Bangaluru

  • ಡೆಕ್ಕನ್ ವಿಮಾನ ಸಂಸ್ಥೆಯಿಂದ ವಾಯುಯಾನ ಸೇವೆ: ಯೋಗೇಶ್ವರ್

    ಡೆಕ್ಕನ್ ವಿಮಾನ ಸಂಸ್ಥೆಯಿಂದ ವಾಯುಯಾನ ಸೇವೆ: ಯೋಗೇಶ್ವರ್

    ಬೆಂಗಳೂರು: ಕಲಬುರಗಿ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಬೀದರ್, ಕೊಪ್ಪಳ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡೆಕ್ಕನ್ ವಿಮಾನಯಾನ ಸಂಸ್ಥೆ ಚಿಕ್ಕ ವಿಮಾನಗಳ ಹಾಗೂ ಹೆಲಿಕಾಪ್ಟರ್ ಗಳ ವಾಯುಯಾನ ಸೇವೆಯನ್ನು ಒದಗಿಸಲು ಮುಂದೆ ಬಂದಿವೆ. ಈ ಸಂಬಂಧ ಇಂದು ಒಂದು ಪ್ರಾತ್ಯಕ್ಷಿಕೆಯನ್ನು ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ವೀಕ್ಷಿಸಿದರು.

    ಅಪೋಲೋ ಆಸ್ಪತ್ರೆ ಸಮೂಹ ಹಾಗೂ ಟ್ರೇಡ್ ಇಂಡಿಯಾ ಪ್ರೈ.ಲಿ. ಸಂಸ್ಥೆಯವರು The Deccan Circuit ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶ ಹಾಗೂ ಕರ್ನಾಟಕದಲ್ಲಿ 3000 ಕಿ.ಮೀ. ವಾಯು ಯಾನ ಸೇವೆಯನ್ನು Deccan ಸಂಸ್ಥೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಪ್ರವಾಸಿ ಸ್ಥಳಗಳಿಗೆ ಡೆಕ್ಕನ್ ಸಂಸ್ಥೆ ತನ್ನ ಸೇವೆಯನ್ನು ವಿಸ್ತರಿಸಲಿವೆ. ಅಲ್ಲದೆ ಪ್ರವಾಸಿ ಸ್ಥಳಗಳನ್ನು ಸಹ ಅಭಿವೃದ್ಧಿಪಡಿಸಲು ಉತ್ಸುಕವಾಗಿರುವುದಾಗಿ ಟ್ರೇಡ್ ಇಂಡಿಯಾ ಪ್ರೈ.ಲಿ ನಿರ್ದೇಶಕ ಅನಿಲ್ ಕಾಮಿನೇನಿ ಇದೇ ವೇಳೆ ತಿಳಿಸಿದರು.

    ಇದೇ ವೇಳೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ ಸಚಿವ ಯೋಗೇಶ್ವರ್, ಡೆಕ್ಕನ್ ಸಂಸ್ಥೆಯವರಿಗೆ ಅವಶ್ಯಕತೆಯಿರುವ ಜಮೀನನ್ನು ಗುತ್ತಿಗೆಗೆ ನೀಡುವ ಸಂಬಂಧ ಹಾಗೂ ವಾಯುಯಾನಕ್ಕೆ ಅಗತ್ಯವಿರುವ ಅನುಮತಿಯನ್ನು ಕೊಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

  • ಮಂತ್ರಾಲಯದ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಸಚಿವ ಅರವಿಂದ ಲಿಂಬಾವಳಿ

    ಮಂತ್ರಾಲಯದ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಸಚಿವ ಅರವಿಂದ ಲಿಂಬಾವಳಿ

    ರಾಯಚೂರು: ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಲು ಅಗತ್ಯ ಸಹಕಾರ ನೀಡುವುದಾಗಿ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

    ಇಂದು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಈ ವೇಳೆ ಮಠದಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಈ ಸಮಯದಲ್ಲಿ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಭುಧೇಂದ್ರ ತೀರ್ಥ ಸ್ವಾಮೀಜಿ ಈ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

    ಸಚಿವ ಅರವಿಂದ ಲಿಂಬಾವಳಿ ಮಂತ್ರಾಲಯ ಗುರು ಶ್ರೀ ರಾಘವೇಂದ್ರ ಮಠದ ಅಭಿವೃದ್ಧಿ ಸಮಿತಿ ಸದಸ್ಯರಾಗಿ 2009ರಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದು, ಶ್ರೀಮಠದ ಕೆಲಸಗಳಲ್ಲಿ ಸಕ್ರಿಯವಾಗಿದ್ದಾರೆ. ಹೀಗಾಗಿ ಅವರು ಇಂದು ಮಂತ್ರಾಲಯದ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ ನಡೆಸಿದರು. ನಾನಾ ಹಂತಗಳಲ್ಲಿ ಈ ಕಾಮಗಾರಿಗಳು ನಡೆಯುತ್ತಿದ್ದು, ಹಲವು ಸಮಸ್ಯೆಗಳು ಮತ್ತು ಅಡಚಣೆಗಳಿಂದಾಗಿ ಕೆಲಸ ನಿಧಾನವಾಗುತ್ತಿದೆ ಎಂದು ಸಚಿವರ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಕೂಡಲೇ ಕ್ರಮ ವಹಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು.

    ಇದೇ ವೇಳೆ ನಾಡಿದ್ದು ಮಂತ್ರಾಲಯದಲ್ಲಿ ಉದ್ಘಾಟನೆ ಆಗಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ದರ್ಶನ ಪಡೆದು, ಕಾಮಗಾರಿಗಳ ಪರಿಶೀಲನೆ ನಡೆಸಿದರು. ಅಲ್ಲದೆ ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ಸಚಿವರು ಮಾಹಿತಿ ಪಡೆದರು.

  • ರಮೇಶ್ ಜಾರಕಿಹೊಳಿ ದೂರಿನ ಬೆನ್ನಲ್ಲೇ ಎಫ್‍ಐಆರ್ ದಾಖಲು

    ರಮೇಶ್ ಜಾರಕಿಹೊಳಿ ದೂರಿನ ಬೆನ್ನಲ್ಲೇ ಎಫ್‍ಐಆರ್ ದಾಖಲು

    ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೊನೆಗೂ ದೂರು ದಾಖಲಿಸಿದ್ದು, ಇದೀಗ ದೂರಿನ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಸಿಡಿ ಹೊರ ಬಿದ್ದ 12 ದಿನಗಳ ನಂತರ ಇಂದು ರಮೇಶ್ ಜಾರಕಿಹೊಳಿ ಅವರು ತಮ್ಮ ಆಪ್ತನ ಮೂಲಕ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಂದು ಪುಟದ ದೂರಿನಲ್ಲಿ ಜಾರಕಿಹೊಳಿ ಯಾರ ಹೆಸರನ್ನೂ ಉಲ್ಲೆಖಿಸಿಲ್ಲ. ಅಲ್ಲದೆ ಈ ಪ್ರಕರಣದಲ್ಲಿ ನನ್ನ ತಪ್ಪಿಲ್ಲ. ಇದೊಂದು ನಕಲಿ ಸಿಡಿಯಾಗಿದೆ ಎಂದಿದ್ದಾರೆ. ನಾಲ್ಕು ತಿಂಗಳ ಹಿಂದಿನ ಷಡ್ಯಂತ್ರವನ್ನು ಸಹ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಮಾಜಿ ಸಚಿವರ ಸಿಡಿ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ವಿಶೇಷ ತನಿಖಾ ತಂಡ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಇಂದು ಕೂಡ ಎಸ್‍ಐಟಿ ವಿಚಾರಣೆ ಮುಂದುವರಿಸಿದ್ದು, ಈ ಮಧ್ಯೆ ರಮೇಶ್ ಜಾರಕಿಹೊಳಿ ಅವರೇ ಸ್ವತಃ ದೂರು ದಾಖಲಿಸಿದ್ದಾರೆ.

    ಈ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ಜಾರಕಿಹೊಳಿ, ನನ್ನ ಹೆಸರನ್ನು ಕೆಡಿಸಲೆಂದೇ ಸಿಡಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನೂ ನಾನು ಜೈಲಿಗೆ ಕಳುಹಿಸುತ್ತೇನೆ. ಯಶವಂತಪುರ ಅಪಾರ್ಟ್‍ಮೆಂಟ್ ಮತ್ತು ಹುಳಿಮಾವಿನಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಆರೋಪಿಸಿದ್ದರು.

  • ಡ್ರೀಮ್ ಕಾರಿನಲ್ಲಿ ದಾಸನ ಜೊತೆ ರಿಷಬ್ ಶೆಟ್ಟಿ ಜಾಲಿ ರೈಡ್

    ಡ್ರೀಮ್ ಕಾರಿನಲ್ಲಿ ದಾಸನ ಜೊತೆ ರಿಷಬ್ ಶೆಟ್ಟಿ ಜಾಲಿ ರೈಡ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಬೆಲ್‍ಬಾಟಮ್ ಖ್ಯಾತಿಯ ಹೀರೋ ರಿಷಬ್ ಶೆಟ್ಟಿಯವರು ತನ್ನ ಕನಸಿನ ಕಾರಿನಲ್ಲಿ ಜಾಲಿ ರೈಡ್ ಹೋಗಿದ್ದಾರೆ.

    ಡಿ ಬಾಸ್ ದರ್ಶನ್ ಅವರು ಬೈಕ್ ಮತ್ತು ಕಾರಿನ ಬಗ್ಗೆ ಹೆಚ್ಚಿನ ಕ್ರೇಜ್ ಹೊಂದಿರುವ ನಾಯಕನಟ. ದರ್ಶನ್ ಅವರು ಲ್ಯಾಂಬೋರ್ಗಿನಿ, ಪೋರ್ಷೆ ಕಂಪನಿಯ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಅಂತೆಯೇ ಚಿಂಗಾರಿಯ ಬಳಿ ಹಳದಿ ಬಣ್ಣದ ಫೋರ್ಡ್ ಮಸ್ಟಂಗ್ ಕಾರು ಕೂಡ ಇದೆ. ಈ ಕಾರು ರಿಷಬ್ ಶೆಟ್ಟಿಯವರ ನೆಚ್ಚಿನ ಕಾರಗಿದ್ದು, ಇದರಲ್ಲಿ ರಿಷಬ್ ದರ್ಶನ್ ಜೊತೆ ರೈಡ್ ಹೋಗಿದ್ದಾರೆ.

    ಈ ವಿಚಾರವನ್ನು ತಮ್ಮ ಟ್ವಿಟ್ಟರಿನಲ್ಲಿ ಫೋಟೋ ಹಂಚಿಕೊಂಡಿರುವ ರಿಷಬ್ ಅವರು, ನನ್ನ ಕನಸಿನ ಕಾರು ಫೋರ್ಡ್ ಮಸ್ಟಂಗ್. ನಿನ್ನೆ ಸಂಜೆ ದರ್ಶನ್ ಸರ್ ತಮ್ಮ ಫೋರ್ಡ್ ಮಸ್ಟಂಗ್ ಕಾರಿನಲ್ಲಿ ಒಂದು ಡ್ರೈವ್ ಕರೆದುಕೊಂಡು ಹೋದಾಗ ಆದ ಖುಷಿ ಅಷ್ಟಿಷ್ಟಲ್ಲ. ಧನ್ಯವಾದಗಳು ನಿಮಗೆ ದರ್ಶನ್ ಸರ್ ನಿಮ್ಮ ಜೊತೆ ಒಳ್ಳೆಯ ಸಮಯವನ್ನು ಕಳೆದೆ ಎಂದು ಬರೆದುಕೊಂಡಿದ್ದಾರೆ.

    2018ರಲ್ಲಿ ಸಂಕ್ರಾಂತಿ ಹಬ್ಬದೊಂದು ದರ್ಶನ್ ಅವರು ಈ ಮಸ್ಟಂಗ್ ಕಾರನ್ನು ಖರೀದಿ ಮಾಡಿದ್ದರು. ಈ ಕಾರಿನ ಬೆಲೆ ಅಂದು 75 ಲಕ್ಷ ಆಗಿದ್ದು, ಅದರ ವಿನ್ಯಾಸದ ಖರ್ಚು ಎಲ್ಲ ಸೇರಿ ಅನ್‍ರೋಡ್ ಬೆಲೆ ಒಂದು ಕೋಟಿಯಾಗಿತ್ತು. ದರ್ಶನ್ ಬಳಿ ಜಾಗ್ವಾರ್, ಆಡಿ ಕ್ಯೂ 7, ಬಿಎಂಡಬ್ಲ್ಯು, ರೇಂಜ್ ರೋವರ್, ಫಾಚ್ರ್ಯೂನರ್ ಕಾರುಗಳ ಕಲೆಕ್ಷನ್ ಇದೆ. ಇತ್ತೀಚೆಗೆ ಲ್ಯಾಂಬೋರ್ಗಿನಿಯನ್ನು ಖರೀದಿಸಿದ್ದರು.

    ಸದ್ಯ ದರ್ಶನ್ ಅವರು ರಾಬರ್ಟ್ ಸಿನಿಮಾ ಚಿತ್ರೀಕರಣ ಮುಗಿದಿದೆ. ಸದ್ಯ ಅವರು ವೀರ ಮದಕರಿ ನಾಯಕ ಸಿನಿಮಾದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಸ್ನೇಹಿತರ ಜೊತೆ ದರ್ಶನ್ ಅವರು ಮಡಿಕೇರಿಗೆ ಜಾಲಿ ರೈಡ್ ಕೂಡ ಹೋಗಿ ಬಂದಿದ್ದರು. ರಿಷಬ್ ಶೆಟ್ಟಿಯವರು ಹೀರೋ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಸದ್ಯ ‘ಹರಿಕಥೆಯಲ್ಲ ಗಿರಿಕಥೆ’ ಎಂಬ ಸಿನಿಮಾದಲ್ಲಿ ರಿಷಬ್ ನಿರತರಾಗಿದ್ದಾರೆ.

  • ಫೇಕ್ ಸುದ್ದಿಗಳ ವಿರುದ್ಧ ಮೇಘನಾ ಗರಂ – ಅಭಿಮಾನಿಗಳ ಬಳಿ ಚಿರು ಪತ್ನಿ ಮನವಿ

    ಫೇಕ್ ಸುದ್ದಿಗಳ ವಿರುದ್ಧ ಮೇಘನಾ ಗರಂ – ಅಭಿಮಾನಿಗಳ ಬಳಿ ಚಿರು ಪತ್ನಿ ಮನವಿ

    ಬೆಂಗಳೂರು: ಇತ್ತೀಚೆಗೆ ಕೆಲ ಯೂಟ್ಯೂಬ್ ಚಾನಲ್‍ಗಳಲ್ಲಿ ಮೇಘನಾ ರಾಜ್ ಅವರಿಗೆ ಅವಳಿ ಮಕ್ಕಳಾಗಿವೆ ಎಂಬ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಲಾಗಿತ್ತು. ಆ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಗಮನಿಸಿದ ಮೇಘನಾ ರಾಜ್ ಫೇಕ್ ಸುದ್ದಿಗಳ ವಿರುದ್ಧ ಗರಂ ಆಗಿದ್ದಾರೆ.

    ನಟಿ ಮೇಘನಾ ಟ್ವಿಟ್ಟರ್, ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಫೇಕ್ ಸುದ್ದಿಗಳ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ವಿಡಿಯೋದ ಸ್ಕ್ರೀನ್‍ಶಾಟ್ ತೆಗೆದುಕೊಂಡು ಆ ಫೋಟೋವನ್ನು ಪೋಸ್ಟ್ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    “ಎಲ್ಲರಿಗೂ ನಮಸ್ಕಾರ..ಶೀಘ್ರದಲ್ಲೇ ಈ ವಿಚಾರಗಳ ಬಗ್ಗೆ ನಾನೇ ಮಾತನಾಡುತ್ತೇನೆ. ಅಲ್ಲಿಯವರೆಗೆ ನನ್ನ ಅಭಿಮಾನಿಗಳು ಮತ್ತು ಫಾಲೋವರ್ಸ್ ಯಾವುದೇ ವಿಡಿಯೋ ಅಥವಾ ಸುದ್ದಿಗಳನ್ನು ಗಮನಿಸದೆ ನಂಬಬೇಡಿ. ಅಂತಹ ಸುದ್ದಿಗಳನ್ನು ಪರಿಶೀಲಿಸಿ” ಎಂದು ಮೇಘನಾ ರಾಜ್ ಮನವಿ ಮಾಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ “ಸತ್ಯ ಏನೆಂದು ತಿಳಿದುಕೊಳ್ಳದೆ ಕೆಲವರು ಹೆಚ್ಚಿನ ವೀಕ್ಷಕರು ಮತ್ತು ಅಧಿಕ ವೀಕ್ಷಣೆ ಪಡೆದುಕೊಳ್ಳಲು ಈ ರೀತಿ ಹೇಳುತ್ತಿದ್ದಾರೆ. ಹಾಗೇನಾದರೂ ನನ್ನ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನಾವೇ ನೇರವಾಗಿ ನೀಡುತ್ತೇವೆ. ಇಂತಹ ಸುದ್ದಿಗಳಿಗೆ ಕಿವಿಗೊಡಬೇಡಿ “ಎಂದು ಮೇಘನಾ ರಾಜ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಫೇಕ್ ಸುದ್ದಿ ಏನು?
    ಕೆಲ ಯೂಟ್ಯೂಬ್ ಚಾಲನ್‍ಗಳಲ್ಲಿ “ಎರಡು ಗಂಡು ಮಗು ಜೊತೆ ಮೇಘನಾ-ಧ್ರುವ, ಮಗು ಹಿಡಿದು ಕಣ್ಣೀರು ಹಾಕಿದ ಧ್ರುವ ಎಂದು ಬರೆದುಕೊಂಡು ವಿಡಿಯೋವನ್ನು ಅಪ್ಲೋಡ್ ಮಾಡಿವೆ. ಮತ್ತೊಂದರಲ್ಲಿ ಸಮಾಧಿ ಬಳಿ ಹೋಗಿ ಮೇಘನಾ ಕಣ್ಣೀರಾಕುತ್ತಾ ಮಾಡಿದ್ದೇನು ಗೊತ್ತಾ ಎಂಬ ಪ್ರಶ್ನೆಗಳನ್ನು ಹಾಕಿ ವಿಡಿಯೋ ಶೇರ್ ಮಾಡಿದ್ದಾರೆ.

  • ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಅರೆಸ್ಟ್

    ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಅರೆಸ್ಟ್

    – ಕೇರಳದಲ್ಲಿ ಎಟಿಎಸ್‍ನಿಂದ ಬಂಧನ

    ಬೆಂಗಳೂರು: ಸಿಲಿಕಾನ್ ಸಿಟಿಯನ್ನು ತಲ್ಲಣಗೊಳಿಸಿದ್ದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯನ್ನು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

    ಶೋಯೆಬ್ ಬಂಧಿತ ಆರೋಪಿಯಾಗಿದ್ದು, ಎಟಿಎಸ್ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. 2008ರಿಂದ ಆರೋಪಿ ತಲೆಮರೆಸಿಕೊಂಡಿದ್ದ. ಆದರೆ ಪೊಲೀಸರು ಮಾತ್ರ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ಹುಡುಕಾಟದಲ್ಲೇ ತೊಡಗಿದ್ದರು. ಹೀಗೆ ತನಿಖೆ ನಡೆಸುವಾಗ ಕೇರಳದಲ್ಲಿರುವುದು ಪತ್ತೆಯಾಗಿದ್ದು, ಹೊಂಚು ಹಾಕಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಮೂಲಕ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದಂತಾಗಿದೆ.

    ಪ್ರಕರಣದ ಬಹುತೇಕ ಆರೋಪಿಗಳು ಕೇರಳದಲ್ಲೇ ತಲೆ ಮರೆಸಿಕೊಂಡಿದ್ದು, ಎಟಿಎಸ್ ಪೊಲೀಸರು ಎಷ್ಟೇ ಹುಡುಕಿದರೂ ಪ್ರಮುಖ ಆರೋಪಿ ಶೋಯೆಬ್ ಸಿಕ್ಕಿರಲಿಲ್ಲ. ಈ ಹಿಂದೆ ಆರೋಪಿ ಸಲೀಂನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈತ ಸಹ ಕೇರಳದಲ್ಲಿಯೇ ತಲೆಮರೆಸಿಕೊಂಡಿದ್ದ. 2018ರಲ್ಲಿ ಸಲೀಂನನ್ನು ಬಂಧಿಸಲಾಗಿತ್ತು. ಬಳಿಕ ಪ್ರಮುಖ ಆರೋಪಿಗಾಗಿ ಬಲೆ ಬೀಸಲಾಗಿತ್ತು.

    2008ರ ಜುಲೈ 25ರಂದು ಮಡಿವಾಳ ಸೇರಿದಂತೆ ಒಟ್ಟು ಒಂಬತ್ತು ಕಡೆ ಬಾಂಬ್ ಸ್ಫೋಟಗಳು ನಡೆದಿದ್ದವು. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು. 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಅದೇ ವರ್ಷ ಜೈಪುರ ಮತ್ತು ಅಹಮದಾಬಾದ್‍ಗಳಲ್ಲಿಯೂ ಸರಣಿ ಸ್ಫೋಟ ಸಂಭವಿಸಿದ್ದವು. ಈ ಸ್ಫೋಟದ ಪ್ರಮುಖ ಸಂಚುಕೋರ ಈತನೇ ಎಂದು ಶಂಕಿಸಲಾಗಿದೆ.

  • ನಾಳೆ ಸುದೀಪ್ ಅಭಿಮಾನಿಗಳಿಗೆ ಸರ್ಪ್ರೈಸ್ – ವಿಕ್ರಾಂತ್ ರೋಣನ ಫಸ್ಟ್‌ಲುಕ್ ರಿಲೀಸ್

    ನಾಳೆ ಸುದೀಪ್ ಅಭಿಮಾನಿಗಳಿಗೆ ಸರ್ಪ್ರೈಸ್ – ವಿಕ್ರಾಂತ್ ರೋಣನ ಫಸ್ಟ್‌ಲುಕ್ ರಿಲೀಸ್

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಚಿತ್ರತಂಡ ಸಣ್ಣ ಸಣ್ಣ ವಿಡಿಯೋ ರಿಲೀಸ್ ಮಾಡುವ ಮೂಲಕ ಸದ್ದು ಮಾಡುತ್ತಿದೆ. ಈ ನಡುವೆ ಚಿತ್ರತಂಡ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲು ಮುಂದಾಗಿದೆ.

    ‘ಫ್ಯಾಂಟಮ್’ ಚಿತ್ರತಂಡ ಸಿನಿಮಾದ ಫಸ್ಟ್‌ಲುಕ್ ರಿಲೀಸ್ ಮಾಡಲು ಮುಂದಾಗಿದೆ. ಸೋಮವಾರ ಅಂದರೆ ನಾಳೆ ಸುದೀಪ್ ಅವರ ಫಸ್ಟ್‌ಲುಕ್ ರಿಲೀಸ್ ಆಗಲಿದೆ. ಈ ಬಗ್ಗೆ ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ ಅವರು ಟ್ವಿಟ್ಟರಿನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

    “ನಮ್ಮ ಪ್ಯಾಂಟಮ್ ಸಿನಿಮಾದ ಪ್ರತಿಯೊಂದು ಪಾತ್ರವನ್ನು ಪೋಸ್ಟರ್ ಮೂಲಕ ತಿಳಿಸಲು ಮುಂದಾಗಿದ್ದೇವೆ. ಅದೇ ರೀತಿ ಮೊದಲು ಚಿತ್ರದ ನಾಯಕ ವಿಕ್ರಾಂತ್ ರೋಣ ಅವರ ಮೊದಲ ಪೋಸ್ಟರ್ ರಿಲೀಸ್ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ. ಜೊತೆಗೆ ಸೋಮವಾರ ಬೆಳಗ್ಗೆ 10 ಗಂಟೆಗೆ ಸುದೀಪ್ ಅವರ ಫಸ್ಟ್‌ಲುಕ್ ರಿಲೀಸ್ ಆಗಲಿದೆ. ಈ ಮೂಲಕ ‘ಫ್ಯಾಂಟಮ್’ ಸಿನಿಮಾದಲ್ಲಿ ಸುದೀಪ್ ಯಾವ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

    ಕೊರೊನಾ ಲಾಕ್‍ಡೌನ್‍ನಿಂದ ಚಿತ್ರರಂಗ ಸ್ತಬ್ಧವಾಗಿತ್ತು. ಆದರೆ ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಸಿನಿಮಾ ಶೂಟಿಂಗ್‍ಗೆ ಅನುಮತಿ ನೀಡಲಾಗಿತ್ತು. ಹೀಗಾಗಿ ಸುದೀಪ್ ನಟನೆಯ ಫ್ಯಾಂಟಮ್ ಚಿತ್ರತಂಡ ಚಿತ್ರೀಕರಣಕ್ಕಾಗಿ ಹೈದರಾಬಾದಿಗೆ ಹೋಗಿದ್ದು, ಅಲ್ಲಿ ಕಾಡಿನ ಅದ್ಧೂರಿ ಸೆಟ್ ಹಾಕಿ ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾರೆ.

    ಮೊದಲಿಗೆ ‘ಫ್ಯಾಂಟಮ್’ ಚಿತ್ರತಂಡ ಒಂದು ಚಿಕ್ಕ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಕಿಚ್ಚ ಸುದೀಪ್ ಮತ್ತು ಒಂದು ಚಿಕ್ಕ ಮಗು ಮಾತ್ರ ಪ್ರಮುಖವಾಗಿ ಕಾಣಿಸಿಕೊಂಡಿತ್ತು. ಈ ದೃಶ್ಯದಲ್ಲಿನ ಹಿನ್ನೆಲೆ ಸಂಗೀತಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಮತ್ತೆ ಕಿಚ್ಚ ಸುದೀಪ್ ಅವರು ತಮ್ಮ ಟ್ವಿಟ್ಟರಿನಲ್ಲಿ ಇನ್ನೊಂದು ದೃಶ್ಯವನ್ನು ಹಂಚಿಕೊಂಡಿದ್ದರು. ಅದರಲ್ಲಿ ಬೈಕಿನಲ್ಲಿ ಬರುವ ಕಿಚ್ಚ ನಂತರ ಟಾರ್ಚ್ ಹಿಡಿದು ಏನನ್ನೋ ಹುಡುಕುತ್ತಾ ಕಾಡಿನೊಳಗೆ ಹೋಗುವುದನ್ನು ನಾವು ಕಾಣಬಹುದು. ಈ ದೃಶ್ಯದ ಹಿನ್ನೆಲೆ ಸಂಗೀತ ಕೂಡ ಸಖತ್ ಕ್ಯಾಚಿಯಾಗಿದೆ.

  • ಮಣಿಪಾಲ ಆಸ್ಪತ್ರೆಯಲ್ಲಿ ಶಿರಾ ಶಾಸಕ ಸತ್ಯನಾರಾಯಣ ವಿಧಿವಶ

    ಮಣಿಪಾಲ ಆಸ್ಪತ್ರೆಯಲ್ಲಿ ಶಿರಾ ಶಾಸಕ ಸತ್ಯನಾರಾಯಣ ವಿಧಿವಶ

    ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಶಿರಾ ಶಾಸಕ ಸತ್ಯನಾರಾಯಣ (69) ಬೆಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

    ಶಾಸಕ ಸತ್ಯನಾರಾಯಣ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ರಾತ್ರಿ 10.45ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

    ಸತ್ಯನಾರಾಯಣ ಅವರು ನಾನ್ ಕೋವಿಡ್ ಆಗಿದ್ದು, ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳಿಂದ ಮಾಹಿತಿ ಬಂದಿದೆ. ಇವರಿಗೆ ಅನೇಕ ವರ್ಷಗಳಿಂದ ಲಿವರ್ ಸಮಸ್ಯೆ ಇತ್ತು ಎಂದು ತಿಳಿದುಬಂದಿದೆ.

    ಶಾಸಕ ಸತ್ಯನಾರಾಯಣ ಅವರು ನಾಲ್ಕು ಬಾರಿ ಶಿರಾದಲ್ಲಿ ಶಾಸಕರಾಗಿದ್ದು, ಎರಡು ಬಾರಿ ಸಚಿವರಾಗಿದ್ದರು. ಸಣ್ಣ ಕೈಗಾರಿಕಾ, ನೀರಾವರಿ ಮತ್ತು ಲಾಟರಿ ಸಚಿವರಾಗಿದ್ದರು. ಸತ್ಯನಾರಾಯಣ ಅವರು ಮೂಲತಃ ಶಿರಾದ ಭುವನಹಳ್ಳಿ ಗ್ರಾಮದವರಾಗಿದ್ದು, ವಕೀಲರಾಗಿದ್ದರು. ಇವರು ಓರ್ವ ಪುತ್ರ ಮತ್ತು ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

    ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ ಸತ್ಯನಾರಾಯಣ ನಿಧನ ಬಗ್ಗೆ ಸಂತಾಪ ಸೂಚಿಸಿದ್ದಾರೆ. “ಮಾಜಿ ಸಚಿವರು ಮತ್ತು ಶಾಸಕರು ಹಾಗೂ ನನ್ನ ಸನ್ಮಿತ್ರರು ಆದ ಶ್ರೀ ಬಿ. ಸತ್ಯನಾರಾಯಣ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಸತ್ಯನಾರಾಯಣ್ ಮತ್ತು ನನ್ನ ಸ್ನೇಹ ಸುಮಾರು 3 ದಶಕಗಳದ್ದು ಅವರಿಲ್ಲದ ದಿನಗಳನ್ನು ನೆನೆಯಲು ನನ್ನಿಂದ ಸಾಧ್ಯವೇ ಇಲ್ಲ” ಎಂದು ನೆನಪಿಸಿಕೊಂಡಿದ್ದಾರೆ.

    ಸತ್ಯನಾರಾಯಣ್ ಅವರು ತುಂಬಾ ಮೃದು ಸ್ವಭಾವದವರು ಅವರ ಅಗಲಿಕೆಯಿಂದ ನಮ್ಮ ನಾಡಿಗೆ ತುಂಬಲಾಗದ ನಷ್ಟ ಉಂಟಾಗಿದೆ. ಮೃತರ ಆತ್ಮಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

  • ನಿರ್ದೇಶಕ ಜೋಗಿ ಪ್ರೇಮ್‍ಗೆ ಮಾತೃವಿಯೋಗ

    ನಿರ್ದೇಶಕ ಜೋಗಿ ಪ್ರೇಮ್‍ಗೆ ಮಾತೃವಿಯೋಗ

    ಬೆಂಗಳೂರು: ನಟ, ನಿರ್ದೇಶಕ ಜೋಗಿ ಪ್ರೇಮ್ ಅವರ ತಾಯಿ ಭಾಗ್ಯಮ್ಮ (75) ನಿಧನರಾಗಿದ್ದಾರೆ

    ಭಾಗ್ಯಮ್ಮ ಕೆಲವು ತಿಂಗಳಿನಿಂದ ಲ್ಯುಕೇಮಿಯಾ ಕ್ಯಾನ್ಸರ್ ನಿಂದ (ರಕ್ತ ಕ್ಯಾನ್ಸರ್) ಬಳಲುತ್ತಿದ್ದರು. ಹೀಗಾಗಿ ಬೆಂಗಳೂರಿನ ಜಯನಗರದ ಶಾಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮ್ ಅವರ ತಾಯಿ ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

    ಅತ್ತೆ ಭಾಗ್ಯಮ್ಯ ಅವರ ನಿಧನದ ಸುದ್ದಿಯನ್ನು ರಕ್ಷಿತಾ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಭಾಗ್ಯಮ್ಮ ಅವರಿಗೆ ಪ್ರೇಮ್ ಮತ್ತು ಅರುಣ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

    ಭಾಗ್ಯಮ್ಮ ಅವರಿಗೆ ಕೊರೊನಾ ಪರೀಕ್ಷೆ ಮಾಡಿಸಿದ್ದು, ವರದಿ ನೆಗೆಟಿವ್ ಬಂದಿದೆ. ಇಂದು ಮಂಡ್ಯದ ಬೆಸಗರಹಳ್ಳಿ ಫಾರ್ಮ್ ಹೌಸ್‍ನಲ್ಲಿ ಅಂತ್ಯಕ್ತಿಯೆ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

  • ‘ನನ್ನ ರೋಮಿಯೋ ಸಿಕ್ಕಿ 9 ವರ್ಷ’- ಪ್ರೀತಿ ವಿಚಾರ ಬಿಚ್ಚಿಟ್ಟ ‘ಬಚ್ಚನ್’ ಬೆಡಗಿ

    ‘ನನ್ನ ರೋಮಿಯೋ ಸಿಕ್ಕಿ 9 ವರ್ಷ’- ಪ್ರೀತಿ ವಿಚಾರ ಬಿಚ್ಚಿಟ್ಟ ‘ಬಚ್ಚನ್’ ಬೆಡಗಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಭಾವನಾ ಮೆನನ್ ತಮ್ಮ ಬಹು ಕಾಲದ ಗೆಳೆಯ ನವೀನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಇದೀಗ ನಟಿ ಭಾವನಾ ತಮ್ಮ ಪ್ರೀತಿಯ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

    ನಟಿ ಭಾವನಾ ಕನ್ನಡದ ನಟ ಮತ್ತು ನಿರ್ಮಾಪಕ ನವೀನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ನಟಿ ಭಾವನಾ ಪತಿಯ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದು, ತಮ್ಮಿಬ್ಬರ ಪ್ರೀತಿ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

    ನಟಿ ಭಾವನಾ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಪ್ರೀತಿ ಯಾವಾಗ, ಎಲ್ಲಿ ಆಯಿತು ಎಂಬುದನ್ನು ತಿಳಿಸಿದ್ದಾರೆ. “ರೋಮಿಯೋ ಸಿನಿಮಾಗೆ 8 ವರ್ಷ ಆಗಿದೆ. ಅದೇ ರೀತಿ ನಮ್ಮ ಪ್ರೀತಿಗೆ 9 ವರ್ಷ ಆಗಿದೆ. ಈ ಸಿನಿಮಾ ನನಗೆ ನನ್ನ ರೋಮಿಯೋವನ್ನು ನೀಡಿದೆ. ನಾವು ಹೇಗೆ ಭೇಟಿ ಆದೆವು, ಪ್ರೀತಿಯಲ್ಲಿ ಬಿದ್ದೆವು ಎನ್ನುವುದು ಮ್ಯಾಜಿಕ್. ಅಲ್ಲದೇ ನಾನು ಹೇಗೆ ನಿಮ್ಮ ಜೊತೆ ಜೀವನ ಪೂರ್ತಿ ಕಳೆಯಲು ನಿರ್ಧರಿಸಿದೆ ಎಂಬುದು ಗೊತ್ತಿಲ್ಲ. ಆದರೆ ನನ್ನ ಜೀವನಕ್ಕೆ ಬಂದಿದ್ದಕ್ಕಾಗಿ ಮತ್ತು ನಿಮ್ಮ ಪ್ರೀತಿಯಲ್ಲಿ ಬಿದ್ದಿದ್ದಕ್ಕೆ ಧನ್ಯವಾದಗಳು. 9 ವರ್ಷ ಜೊತೆಗಿದ್ದೀವಿ” ಎಂದು ತಮ್ಮ ಪ್ರೇಮ ವಾರ್ಷಿಕೋತ್ಸವಕ್ಕೆ ಶುಭಾಶಯ ತಿಳಿಸಿದ್ದಾರೆ.

    ನವೀನ್ ‘ರೋಮಿಯೋ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ‘ರೋಮಿಯೋ’ ಸಿನಿಮಾ 2012 ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‍ಗೆ ನಾಯಕಿಯಾಗಿ ಭಾವನಾ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಸಿನಿಮಾದಿಂದ ಇವರಿಬ್ಬರ ಪರಿಯಚವಾಗಿದೆ. ಪರಿಯಚ ಸ್ನೇಹವಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ಜೋಡಿ 2018ರಲ್ಲಿ ಕೇರಳದ ತ್ರಿಶೂರ್‌ನ ತಿರುವಂಬಾಡಿ ದೇವಸ್ಥಾನದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಭಾವನಾ ಅನೇಕ ಕನ್ನಡದ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸದ್ಯಕ್ಕೆ ಮೂರು ಕನ್ನಡದ ಸಿನಿಮಾದಲ್ಲಿ ಭಾವನಾ ಬ್ಯುಸಿಯಾಗಿದ್ದಾರೆ. ‘ಭಜರಂಗಿ-2’, ‘ಇನ್ಸ್ಪೆಕ್ಟರ್ ವಿಕ್ರಮ್’ ಮತ್ತು ‘ಗೋವಿಂದ ಗೋವಿಂದ’ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    https://www.instagram.com/p/CCTfYLvFsOY/?igshid=1kz2ehb6wpwln