Tag: Bangaluru

  • ಡಿಸಿಪಿ ಮುಂದೆ ಹಾಜರಾಗುವಂತೆ ದುನಿಯಾ ವಿಜಿಗೆ ನೋಟಿಸ್

    ಡಿಸಿಪಿ ಮುಂದೆ ಹಾಜರಾಗುವಂತೆ ದುನಿಯಾ ವಿಜಿಗೆ ನೋಟಿಸ್

    ಬೆಂಗಳೂರು: ನಟ ದುನಿಯಾ ವಿಜಿಗೆ ಜೈಲಿಗೆ ಹೋಗಿ ಬಂದ್ರೂ ಪೊಲೀಸ್ ವಿಚಾರಣೆಯ ಬಿಸಿ ಮಾತ್ರ ಕಡಿಮೆ ಆಗಿಲ್ಲ. ದುನಿಯಾ ವಿಜಿ ಮೇಲೆ ಗಿರಿ ನಗರ ಪೊಲೀಸರು ಹಾಕಿರುವ ಸಿಆರ್‌ಪಿಸಿ ಸೆಕ್ಷನ್ 107 ಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ದುನಿಯಾ ವಿಜಿಗೆ ನೋಟಿಸ್ ನೀಡಲಾಗಿದೆ. ಹೀಗಾಗಿ ವಿಜಯ್ ಇಂದು ದಕ್ಷಿಣ ವಿಭಾಗದ ಡಿಸಿಪಿ ಎದುರು ಹಾಜರಾಗಿ ಬಾಂಡ್ ನೀಡಿ ಹೇಳಿಕೆ ಕೊಡಬೇಕು.

    ನಟ ದುನಿಯಾ ವಿಜಿ ಕುಟುಂಬ ಹಾಗೂ ಹೊರಗಡೆ ಪದೇ ಪದೇ ಪ್ರಕರಣಗಳು ದಾಖಲಾಗುತ್ತಿದ್ದ ಹಿನ್ನೆಲೆಯಲ್ಲಿ ಗಿರಿ ನಗರ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 107 ಹಾಕಿದ್ದರು. ಹೀಗಾಗಿ ಇಂದು ಪೊಲೀಸರ ಮುಂದೆ ಹಾಜರಾಗಬೇಕಿದೆ.

    ದುನಿಯಾ ವಿಜಿ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಸಂಬಂಧ ಈಗಾಗಲೇ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವ ನಾಗರತ್ನ ಸದ್ಯಕ್ಕೆ ರಿಲ್ಯಾಕ್ಸ್ ಆಗುವ ಹಾಗಿಲ್ಲ. ಯಾಕಂದ್ರೆ ನಾಗರತ್ನ ಮೇಲೆ ಕೂಡ ಗಿರಿನಗರ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 107 ಹಾಕಿದ್ದಾರೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ನಾಗರತ್ನ ಕೂಡ ದಕ್ಷಿಣ ವಿಭಾಗದ ಡಿಸಿಪಿ ಎದಿರು ಹಾಜರಾಗಿ ಬಾಂಡ್ ನೀಡಿ ಮುಚ್ಚಳಿಕೆ ಬರೆದು ಕೊಡಬೇಕು. ಇಷ್ಟು ದಿನ ನಾಪತ್ತೆಯಾಗಿದ್ದ ನಾಗರತ್ನಗೆ ಮಧ್ಯಂತರ ಜಾಮೀನು ಸಿಕ್ಕಿರುವುದರಿಂದ ಶೀಘ್ರದಲ್ಲೇ ಪೊಲೀಸರು ಅವರನ್ನು ಡಿಸಿಪಿ ಎದುರು ಹಾಜರಾಗಲು ನೋಟೀಸ್ ನೀಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಮುಂದಾಗುವವರಿಗೆ ಜನರೇ ಉತ್ತರ ನೀಡಿದ್ದಾರೆ: ಎಚ್‍ಡಿಡಿ

    ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಮುಂದಾಗುವವರಿಗೆ ಜನರೇ ಉತ್ತರ ನೀಡಿದ್ದಾರೆ: ಎಚ್‍ಡಿಡಿ

    ಬೆಂಗಳೂರು: ಇಂದು ಕರ್ನಾಟಕ ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಮಾಜಿ ಪ್ರಧಾನ ಮಂತ್ರಿ ದೇವೇಗೌಡ ಅವರು ಟ್ವೀಟ್ ಮೂಲಕ ರಾಜ್ಯದ ಜನತೆಗೆ ಅಭಿನಂದನೆಯನ್ನು ತಿಳಿಸಿದ್ದಾರೆ.

    ಉಪಚುನಾವಣೆಯಲ್ಲಿ ಮೈತ್ರಿ ಸರ್ಕಾರ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಎಚ್‍ಡಿ ದೇವೇಗೌಡ ಅವರು “ಅಭಿವೃದ್ಧಿ ಕೇಂದ್ರಿತ ಆಡಳಿತವನ್ನು ಬೆಂಬಲಿಸುತ್ತಿರುವ ರಾಜ್ಯದ ಜನತೆಗೆ ನನ್ನ ಅಭಿನಂದನೆಗಳು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗುವವರಿಗೆ ಜನರೇ ಉತ್ತರ ನೀಡಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

    ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ನಾವು ಒಂದಾಗಿದ್ದೇವೆ ಎಂದು ವಿಧಾನಸಭಾ ಚುನಾವಣೆಯ ಫಲಿತಾಂಶದ ವೇಳೆ ಹೇಳಿದ್ದ ಎಚ್‍ಡಿಡಿ ಈ ಚುನಾವಣೆಯ ಸಮಯದಲ್ಲಿ ಮೋದಿಯನ್ನು ಸೋಲಿಸಲು ಒಂದಾಗಿದ್ದೇವೆ. ಲೋಕಸಭಾ ಚುನಾವಣೆಗೆ ಇಲ್ಲಿಂದಲೇ ಸ್ಪಷ್ಟ ಸಂದೇಶ ರವಾನಿಸುತ್ತೇವೆ ಎಂದು ಪ್ರಚಾರದ ವೇಳೆ ಭಾಷಣ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರಲ್ಲಿ ಸಿಲಿಂಡರ್ ಸ್ಫೋಟ: ಮಗು ಸೇರಿ ಮೂವರಿಗೆ ಗಂಭೀರ ಗಾಯ

    ಬೆಂಗ್ಳೂರಲ್ಲಿ ಸಿಲಿಂಡರ್ ಸ್ಫೋಟ: ಮಗು ಸೇರಿ ಮೂವರಿಗೆ ಗಂಭೀರ ಗಾಯ

    ಬೆಂಗಳೂರು: ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ನಗರದ ಯಶವಂತಪುರದ ತ್ರಿವೇಣಿ ರೋಡ್‍ನಲ್ಲಿ ನಡೆದಿದೆ.

    ಇಂದು ಸಂಜೆ ಗ್ಯಾಸ್‍ನ ಕ್ಯಾಪ್ ತೆಗೆಯುವಾಗ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ಮಗು ಸೇರಿ ಮೂವರು ಗಂಭೀರ ಗಾಯಗಳಾಗಿವೆ. ಅಷ್ಟೇ ಅಲ್ಲದೇ ಮನೆಯಲ್ಲಿದ್ದ ಫ್ರಿಡ್ಜ್ ಸೇರಿ ಪೀಠೋಪಕರಣ ಧ್ವಂಸವಾಗಿದೆ. ಗಾಯಾಳುಗಳನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ವಾಹನ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಸಿಲಿಂಡರ್ ಮೇಲಿನ ಕ್ಯಾಪ್ ತೆಗೆದ ರಭಸಕ್ಕೆ ಟ್ಯಾಂಕ್‍ನಲ್ಲಿದ್ದ ಗ್ಯಾಸ್ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಶವಂತಪುರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರಾಜ್ಯಾದ್ಯಂತ 2 ದಿನ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ

    ರಾಜ್ಯಾದ್ಯಂತ 2 ದಿನ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ

    ಬೆಂಗಳೂರು: ಎರಡು ವಾರಗಳ ಕಾಲ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ಸುರಿಯುವ ಮುನ್ಸೂಚನೆ ಕೊಟ್ಟಿದ್ದಾನೆ. ರಾಜ್ಯಾದ್ಯಂತ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿವೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.

    ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಂಭವಿದ್ದು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

    ಬೆಂಗಳೂರಿನಲ್ಲಿ ಎಲ್ಲೆಡೆ ಮೋಡಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಬೆಂಗ್ಳೂರಲ್ಲಿದ್ದ ಐನಾತಿ ಕಳ್ಳಿಯರಿಬ್ಬರ ಬಂಧನ

    ಬೆಂಗ್ಳೂರಲ್ಲಿದ್ದ ಐನಾತಿ ಕಳ್ಳಿಯರಿಬ್ಬರ ಬಂಧನ

    ಬೆಂಗಳೂರು: ನಗರದ ಕಳ್ಳತನ ಮಾಡುತ್ತಿದ್ದ ಇಬ್ಬರು ಖರ್ತಾನಕ್ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ.

    ಉಷಾವಾಣಿ ಹಾಗೂ ಮೀನಾಕ್ಷಿ ಎಂಬ ಆರೋಪಿಗಳು ಬಸ್‍ನ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದರು. ಈ ಅಕ್ಕ-ತಂಗಿಯರ ಬೇಟೆಗೆ ಆರ್ ಎಂ ಸಿ ಯಾರ್ಡ್ ಪೊಲೀಸ್ ತಂಡ ತಿಂಗಳು ಕಟ್ಟಲೆ ಕಾದು ಕುಳಿತ್ತಿತ್ತು. ಪೊಲೀಸರ ಸತತ ಪ್ರಯತ್ನಕ್ಕೆ ಕೊನೆಗೆ ಆರೋಪಿಗಳಾದ ಉಷಾವಾಣಿ ಹಾಗೂ ಮೀನಾಕ್ಷಿ ಸಿಕ್ಕಿಬಿದ್ದಿದ್ದಾರೆ.

    ಸತತ ಎರಡು ತಿಂಗಳುಗಳ ಕಾಲ ಆರ್ ಎಂ ಸಿ ಯಾರ್ಡ್ ಪೊಲೀಸರು ಬಸ್ ನಿಲ್ದಾಣದಲ್ಲೇ ಠಿಕಾಣಿ ಹೂಡಿ ಮಫ್ತಿಯಲ್ಲೇ ನಿಂತು ಆರೋಪಿಗಳ ಭೇಟೆಯಾಡಿದ್ದಾರೆ. ಪೊಲೀಸರು ಕಳ್ಳಿಯರನ್ನ ವಾಚ್ ಮಾಡಿ ಹಿಡಿದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • ಶೋಕಿಗಾಗಿ ಬೈಕ್ ಕದ್ದು ದರೋಡೆ ಮಾಡುತ್ತಿದ್ದ ಕುಚುಕು ಗೆಳೆಯರು ಬಂಧನ!

    ಶೋಕಿಗಾಗಿ ಬೈಕ್ ಕದ್ದು ದರೋಡೆ ಮಾಡುತ್ತಿದ್ದ ಕುಚುಕು ಗೆಳೆಯರು ಬಂಧನ!

    ಬೆಂಗಳೂರು: ಶೋಕಿಗಾಗಿ ಬೈಕ್ ಕದ್ದು ದರೋಡೆ ಮಾಡುತ್ತಿದ್ದ ಇಬ್ಬರು ಕುಚುಕು ಗೆಳೆಯರನ್ನು ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಹಾಸನ ಮೂಲದ ಸುದೀಪ್ ಹಾಗೂ ದರ್ಶನ್ ಇಬ್ಬರು ಬಂಧಿತ ಆರೋಪಿಗಳಾಗಿದ್ದಾರೆ. ಕಳ್ಳತನ ಮಾಡಿದ ಬೈಕ್‍ಗಳಲ್ಲೇ ತೆರಳಿ ಮೊಬೈಲ್, ಸರಗಳ್ಳತನ, ಹಣ ದೋಚುವಿಕೆ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಈ ಆರೋಪಿಗಳ ಖರ್ತಾನಕ್ ಕೆಲಸಗಳಾಗಿತ್ತು.

    ಆರೋಪಿಗಳಿಂದ 8 ಪಲ್ಸರ್ ಬೈಕ್, 21 ಮೊಬೈಲ್, ಚಿನ್ನಾಭರಣ ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ ಬಟನ್ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಈ ಇಬ್ಬರು ಕಳ್ಳರು ಪಲ್ಸರ್ ಬೈಕ್ ಬಿಟ್ಟು, ಬೇರೆ ಬೈಕ್‍ಗಳನ್ನು ಬಳಸಿ ಕೃತ್ಯ ನಡೆಸುತ್ತಿರಲಿಲ್ಲ. ಖಚಿತ ಮಾಹಿತಿ ಮೇರೆಗೆ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

  • ಸಿಲಿಕಾನ್ ಸಿಟಿಯಲ್ಲಿ ನಾಯಿಯ ಪುಣ್ಯ ತಿಥಿ!

    ಸಿಲಿಕಾನ್ ಸಿಟಿಯಲ್ಲಿ ನಾಯಿಯ ಪುಣ್ಯ ತಿಥಿ!

    ಬೆಂಗಳೂರು: ಸಹಜವಾಗಿ ಮನುಷ್ಯರ ಪುಣ್ಯ ತಿಥಿ ನೋಡಿದ್ದೇವೆ ಆದರೆ ಬುಧವಾರ ಮಲ್ಲೇಶ್ವರಂ ಮನೆಯೊಂದರಲ್ಲಿ ನಾಯಿಯ ಪುಣ್ಯ ತಿಥಿಯನ್ನು ಮಾಡಿದ್ದಾರೆ.

    ಮಾಲೀಕ ಅರುಣ್ ಅವರು 17 ವರ್ಷಗಳಿಂದಲೂ ಸಿಂಧೂ ಹೆಸರಿನ ನಾಯಿಯನ್ನು ಸಾಕಿದ್ದರು. 12 ಜುಲೈ 1999 ರಲ್ಲಿ ಜನಿಸಿದ ಸಿಂಧೂ, ಕಳೆದ 17 ಜುಲೈ 2017 ರಲ್ಲಿ  ಸಾವನ್ನಪ್ಪಿತ್ತು. ಅದರ ನೆನಪಿಗಾಗಿ ಅರುಣ್ ಈ ಪುಣ್ಯ ತಿಥಿ ಕಾರ್ಯವನ್ನು ಮಾಡಿದರು.

    ಇಂದು ಸಂಪ್ರದಾಯ ಬದ್ಧವಾಗಿ, ವಿಧಿವಿಧಾನಗಳ ಮೂಲಕ ನಾಯಿಯ ಒಂದು ವರ್ಷದ ಪುಣ್ಯ ತಿಥಿಯನ್ನು ಅರುಣ್ ಮಾಡಿದ್ದಾರೆ. ವಿಶೇಷ ಏನೆಂದರೆ 100 ಕ್ಕೂ ಹೆಚ್ಚು ಜನರಿಗೆ ಅರುಣ್ ಊಟ ಹಾಕಿ ಪ್ರೀತಿಯ ನಾಯಿಯ ಪುಣ್ಯಸ್ಮರಣೆಯನ್ನು ಕೈಗೊಂಡರು.

  • ಕ್ಯಾನ್ಸರ್ ರೋಗಿಗಳ ಒಂದು ಹೊಸ ಆಶಾಕಿರಣ ಸೈಟ್ ಕೇರ್ ಆಸ್ಪತ್ರೆ!

    ಕ್ಯಾನ್ಸರ್ ರೋಗಿಗಳ ಒಂದು ಹೊಸ ಆಶಾಕಿರಣ ಸೈಟ್ ಕೇರ್ ಆಸ್ಪತ್ರೆ!

    ರೋಗಿಗಳಿಗೆ ಕ್ಯಾನ್ಸರ್ ಇರುವುದು ಪತ್ತೆಯಾದ ಹೊಸತರಲ್ಲಿ ಆದರೆ ಆಗಲಿ ಎಂಬ ಪ್ರಯತ್ನದ ವಿಧಾನದ/ (ಏನಾಗುತ್ತದೋ ನೋಡೋಣ ಎಂಬ ಅನಿರ್ದಿಷ್ಟ ವಿಧಾನದ) ಚಿಕಿತ್ಸೆ ಕೆಲಸ ಮಾಡುವುದಿಲ್ಲ. ರೋಗದ ಸ್ವರೂಪ ಜಟಿಲವಾಗಿರುವುದರಿಂದ ಸರಿಯಾದ ಚಿಕಿತ್ಸೆಯನ್ನು ಕಂಡು ಹಿಡಿಯಲು ಸಮಯ ಮತ್ತು ವಿಶೇಷ ಕೌಶಲ್ಯ ಇರಬೇಕಾಗುತ್ತದೆ.

    ಕ್ಯಾನ್ಸರ್ ಎಂದರೆ ಪ್ರತಿಯೊಂದು ಒಂದಕ್ಕಿಂತ ಒಂದು ವಿಭಿನ್ನವಾಗಿರುವ 200 ಕ್ಕಿಂತ ಹೆಚ್ಚು ರೋಗಲಕ್ಷಣಗಳಿದ್ದು, ಭಾರತದಲ್ಲಿ ಸರಿಯಾದ ಸಮಯಕ್ಕೆ ರೋಗ ಪತ್ತೆಯಾಗಿ ಮತ್ತು ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಅಕಾಲ ಮರಣಕ್ಕೆ ಗುರಿಯಾದ ರೋಗಿಗಳ ಅಸಂಖ್ಯಾ ನಿದರ್ಶನಗಳಿವೆ.

    ದೇಹದ ಜೀವಕೋಶಗಳು ರೂಪಾಂತರಗೊಂಡು ಶರವೇಗದಲ್ಲಿ ಅವುಗಳ ಸಂಖ್ಯೆ ಹೆಚ್ಚಾದಾಗ ಕ್ಯಾನ್ಸರ್ ಉಂಟಾಗುತ್ತದೆ. ನಮ್ಮ ದೇಹದಲ್ಲಿ ಜೀವಕೋಶಗಳು ಸಹಜವಾಗಿ ಸಾವನ್ನಪ್ಪುವ ಪ್ರಕ್ರಿಯೆ ಕುಂಠಿತಗೊಂಡಾಗ ಪರಿಸ್ಥಿತಿ ವಿಷಮಿಸುತ್ತದೆ. ಮಾರಣಾಂತಿಕ ಕೋಶಗಳನ್ನು ಕೂಡಲೇ ಕಂಡುಹಿಡಿಯದಿದ್ದರೆ ಅವು ಇತರ ಆರೋಗ್ಯಕರ ಅಂಗಾಂಶಗಳಿಗೂ ಹರಡಿ ಹಾನಿ ಉಂಟುಮಾಡುತ್ತದೆ.

    ವೈದ್ಯರು ಮತ್ತು ರೋಗಿಗಳಿಗೂ ಇದು ಸಮಯದ ವಿರುದ್ಧದ ಓಟ. ಅನಗತ್ಯ ಶುಲ್ಕಗಳನ್ನು ಹೇರದೆ ಸೂಕ್ತ ಚಿಕಿತ್ಸೆ ಒದಗಿಸುವ ಸರಿಯಾದ ಚಿಕಿತ್ಸಾ ಕೇಂದ್ರವೊಂದನ್ನು ಆದಷ್ಟು ಬೇಗ ಸಂಪರ್ಕಿಸುವುದು ರೋಗಿಯ ಮೊದಲ ಸವಾಲು.

    200 ಸ್ಥಿತಿಗಳಲ್ಲಿ ಯಾವುದೆಂದು ನಿಖರವಾಗಿ ಗುರುತಿಸಿ, ಪರಿಸ್ಥಿತಿಯನ್ನು ವಿಷಮಗೊಳಿಸಬಲ್ಲ ಅದರ ಅಸಂಖ್ಯಾತ ಪರಿಣಾಮಗಳನ್ನು ಪತ್ತೆ ಹಚ್ಚುವುದು ರೋಗ ನಿರ್ಣಯ ಪ್ರಕ್ರಿಯೆಯಲ್ಲಿ ಅತ್ಯಂತ ಸವಾಲಿನ ಹಂತ. ಕ್ಯಾನ್ಸರ್ ಬೇರೆ ಬೇರೆ ರೋಗಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಯಾವುದೇ ಒಂದೇ ತೆರನಾದ ಮಾದರಿ ಕಂಡುಬರದೇ ಇದ್ದಾಗ ಚಿಕಿತ್ಸೆಯು ಕೂಡ ಬಹುಮುಖಿಯಾಗಿದ್ದು ಸಮೃದ್ಧವಾಗಿರಬೇಕಾಗುತ್ತದೆ.

    ಸರಿಯಾದ ಸಮೃದ್ಧವಾದ ಕ್ಯಾನ್ಸರ್ ಚಿಕಿತ್ಸೆಗೆ ಸರಿಯಾದ ಸಮಯಕ್ಕೆ ಪರಿಣಾಮಕಾರಿ ಚಿಕಿತ್ಸೆ ಒದಗಿಸುವುದು ನಿರ್ಣಾಯಕ. ವೈದ್ಯ ವಿಜ್ಞಾನದ ಬೆಳವಣಿಗೆ ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಿರಂತರ ಸಂಶೋಧನೆ ಮತ್ತು ಅಭಿವೃದ್ಧಿಯ ಕಾರಣ ಈ ರೋಗದಿಂದ ನಿಧನವಾಗುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ.

    ಒಂದು ಸಂಶೋಧನೆಯ ಪ್ರಕಾರ ಸುಮಾರು 40% ಕ್ಯಾನ್ಸರ್ ರೋಗಿಗಳು ಚಿಕಿತ್ಸೆಯ ನಂತರ ಐದು ವರ್ಷಗಳೊಳಗೆ ರೋಗದಿಂದ ಸಂಪೂರ್ಣ ಮುಕ್ತಿ ಹೊಂದಿದ್ದಾರೆ. ರೋಗಿಯು ರೋಗದಿಂದ ಸಂಪೂರ್ಣ ಗುಣಮುಖರಾಗುವ ಸಾಧ್ಯತೆಗೆ ಇದೊಂದು ಅಳತೆಗೋಲು. ಶೀಘ್ರ ರೋಗ ಮತ್ತೆ ಮತ್ತು ನಿರ್ಣಯ ಕ್ಯಾನ್ಸರ್ ಎದುರಿಸಲು ಶಕ್ತಿಯುತ ಮಂತ್ರ. ಜಗತ್ತಿನ ಕ್ಯಾನ್ಸರ್ ರೋಗಿಗಳ ಐದನೇ ಒಂದು ಭಾಗ ಈಗ ಭಾರತದಲ್ಲಿದ್ದು ತ್ವರಿತಗತಿಯ ಗುರಿ ಕೇಂದ್ರಿತ ಚಿಕಿತ್ಸೆಯ ಅಗತ್ಯವಿದೆ.

    ಗುರಿ ಕೇಂದ್ರಿತ ಪರಿಣಾಮಕಾರಿ ಚಿಕಿತ್ಸೆಗೆ ಸೂಪರ್-ಸ್ಪೆಷಾಲಿಟಿ ಆಂಕಾಲಜಿ ಕೇಂದ್ರ ಕಡ್ಡಾಯವಾಗಿ ಇರಬೇಕು. ಕ್ಯಾನ್ಸರ್ ಗುಣಮಾಡುವ ಆಸ್ಪತ್ರೆಯಲ್ಲಿ ರೋಗನಿರ್ಣಯದ ಸರಿಯಾದ ವ್ಯಾಖ್ಯಾನ ಅತ್ಯಗತ್ಯ. ರೋಗಿಯ ನಿರ್ದಿಷ್ಟ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆಯ ಕ್ರಮವನ್ನು ನಿರ್ಧರಿಸಲು ಇದು ಸಹಾಯಕ.

    ಬೆಂಗಳೂರಿನ ಸೈಟ್‍ಕೇರ್ ಕೇಂದ್ರ ಈ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಅತ್ಯಾಧುನಿಕ ರೋಗನಿರ್ಣಯ ಸೌಲಭ್ಯ ಮತ್ತು ಆರ್ಗನ್ ಸ್ಪೆಸಿಫಿಕ್ ಪರಿಣಿತ ಆಂಕಾಲಿಜಿಸ್ಟ್ ಗಳ ತಂಡದೊಂದಿಗೆ ಸೈಟ್‍ಕೇರ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಂದು ಹೊಸ ನೆಲೆಯನ್ನು ಸೃಷ್ಟಿಮಾಡಿದೆ.

    ಆರ್ಗನ್-ಸ್ಪೆಸಿಫಿಕ್ ಆಂಕಾಲಿಜಿಸ್ಟ್ ಆಯಾ ಅಂಗಗಳ ಚಿಕಿತ್ಸೆಯಲ್ಲಿ ಅನೇಕ ವರ್ಷಗಳ ಅನುಭವ ಮತ್ತು ವಿಶೇಷಜ್ಞತೆ ಹೊಂದಿದ್ದಾರೆ. ಇದರಿಂದ ಅವರು ವರ್ಷಗಳ ಸವಾಲುಗಳನ್ನು ಎದುರಿಸುವಲ್ಲಿ ಹೆಚ್ಚಿನ ಪರಿಣಿತಿ ಹೊಂದಿದ್ದಾರೆ. ಉದಾಹರಣೆ, ಕೆಲವು ರೋಗಗಳು ಕ್ಯಾನ್ಸರಿನಂತೆ ಭಾಸವಾಗಬಹುದು. ಇಲ್ಲವೇ, ಕಳಪೆ ಇಮೇಜಿಂಗ್ ಅಥವಾ ಕ್ಲಿನಿಷಿಯನ್ ಗಳ ಸೀಮಿತ ಅರಿವಿನ ಕಾರಣ ಕೆಲವು ಸಾಮಾನ್ಯ ಕಾಯಿಲೆಗಳು ಕ್ಯಾನ್ಸರ್ ಎಂದು ತಪ್ಪಾಗಿ ಬಿಂಬಿತವಾಗಬಹುದು ಇಲ್ಲವೇ ರೋಗನಿರ್ಣಯದಲ್ಲಿ ನಿಖರತೆ ಕಡಿಮೆಯಾಗಬಹುದು. ಇಂತಹ ಸಂದರ್ಭಗಳಲ್ಲಿ ಆರ್ಗನ್-ಸ್ಪೆಸಿಫಿಕ್ ಆಂಕಾಲಿಜಿಸ್ಟ್ ಪಾತ್ರ ಮಹತ್ವದ್ದು. ಅವರು ಮಾನವಸಹಜ ತಪ್ಪುಗಳನ್ನು ಸಾಧ್ಯವಾದಷ್ಟೂ ನಿವಾರಿಸಿ, ರೋಗವನ್ನು ಸರಿಯಾಗಿ ಗುರುತಿಸಿ, ಅತ್ಯಂತ ಸೂಕ್ತ ಚಿಕಿತ್ಸಾ ಕ್ರಮವನ್ನು ರೂಪಿಸುತ್ತಾರೆ. ನಿರ್ದಿಷ್ಟ ಅಂಗಗಳ ರೋಗನಿರ್ಣಯದಲ್ಲಿ ಹಲವು ವರ್ಷಗಳ ತರಬೇತಿಯ ಕಾರಣ, ಆರ್ಗನ್ ಸ್ಪೆಸಿಫಿಕ್ ಆಂಕಾಲಿಜಿಸ್ಟ್ ಜಟಿಲ ಸಮಸ್ಯೆಗಳನ್ನು ಸುಲಭವಾಗಿ ನಿರ್ವಹಿಸಿ ತಪ್ಪುಗಳಿಂದಾಗುವ ಅಡ್ಡ ಪರಿಣಾಮ ಅಥವಾ ಮರುಶಸ್ತ್ರಚಿಕಿತ್ಸೆಯ ಸಾಧ್ಯತೆಗಳನ್ನು ಕಡಿಮೆ ಮಡುತ್ತಾರೆ. ಸೈಟ್‍ಕೇರ್ ರೋಗಿಗಳ ಪ್ರಶಂಸೆಗೆ ಪಾತ್ರವಾಗಿದ್ದು ಅವರಿಗೆ ಹೊಸ ಆಶಾಕಿರಣವಾಗಿ ಬೆಳೆಯುತ್ತಿದೆ.

    ಇಷ್ಟೇ ಅಲ್ಲದೇ, ಸೇಟ್‍ಕೇರ್ ನಲ್ಲಿ ವಿಶೇಷಜ್ಞರು, ಸ್ತನ ಮತ್ತು ಬಾಯಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮೈಕ್ರೋ ವಾಸ್ಕ್ಯುಲಾರ್ ರಿಕನ್ಸ್ಟ್ರಕ್ಷನ್ ನಲ್ಲಿ ಆಧುನಿಕ ರಿಕನ್ಸ್ಟ್ರಕ್ಷನ್ ಟೆಕ್ನಾಲಜಿ ಅನುಸರಿಸುತ್ತಾರೆ. ಇದು ತೊಂದರೆಗೊಳಗಾದ ಅಂಗ ಹೆಚ್ಚು ವಿರೂಪಗೊಳ್ಳದಂತೆ ನೋಡಿಕೊಳ್ಳುತ್ತದೆ.

    ಸೈಟ್‍ಕೇರ್ ನಲ್ಲಿ ಇತರ ಕೇಂದ್ರಗಳಿಗಿಂತ ಬೇರೆಯಾದದ್ದೇನಿದೆ?
    ಸೈಟ್‍ಕೇರ್ ನ ಸಹಸಂಸ್ಥಾಪಕ ಮತ್ತು ಛೇರ್ಮನ್ ಫರ್ಜಾನ್ ಇಂಜಿನಿಯರ್, “ಇತರ ರೋಗಗಳಂತಲ್ಲದೆ, ಕ್ಯಾನ್ಸರ್ ನಿರ್ವಹಣೆಯಲ್ಲಿ ರೋಗದ ವಿವಿಧ ಹಂತದ ಚಿಕಿತ್ಸೆಯಲ್ಲಿ ಒಬ್ಬರಿಗಿಂತ ಹೆಚ್ಚು ವಿಶೇಷಜ್ಞರು ಇರುತ್ತಾರೆ. ನಮ್ಮದು ಬಹುಮುಖಿ ಚಿಕಿತ್ಸಾ ವಿಧಾನ. ಇಲ್ಲಿ ತಜ್ಞರು ಸಮಗ್ರ ತಂಡವಾಗಿ ರೋಗಿಯ ಪಯಣವನ್ನು ಅರ್ಥಮಾಡಿಕೊಂಡು ಮುಂದುವರಿಯುತ್ತಾರೆ. ನಮ್ಮ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಕಾರ್ಯಕ್ರಮ, ಸ್ಕ್ರೀನಿಂಗ್ ಮತ್ತು ರೋಗನಿರ್ಣಯದಿಂದ ಹಿಡಿದು ಚಿಕಿತ್ಸೆ ಮತ್ತು ಪುನರ್ವಸತಿಯವರೆಗೆ ಎಲ್ಲಾ ಹಂತದಲ್ಲೂ ರೋಗಿಯ ಜೊತೆಗಿರುತ್ತದೆ. ರೋಗಿಯು ಪೆಥಾಲಜಿ, ಮೆಡಿಕಲ್-ಆಂಕಾಲಜಿ, ಪೆಯ್ನ್ ಅಂಡ್ ಪ್ಯಾಲಿಯೇಟಿವ್ ಚಿಕಿತ್ಸೆ, ರಿಕನ್ಸ್ಟ್ರಕ್ಷನ್, ಕೋಮಾರ್ಬಿಡಿಟಿ ಮ್ಯಾನೇಜ್‍ಮೆಂಟ್, ಡಯಟ್ ಅಂಡ್ ನ್ಯೂಟ್ರಿಷನ್, ರಿಹ್ಯಾಬಿಲಿಟೇಷನ್ ಅಂಡ್ ಹೋಂ ಕೇರ್ ಗಳ ಅನುಕೂಲತೆ ಪಡೆದುಕೊಳ್ಳಬಹುದು. ಇಲ್ಲಿನ ಚಿಕಿತ್ಸಾ ವಿಧಾನವು ಇದೇ ಆಗಿರುತ್ತದೆ.” ಎಂದು ಹೇಳುತ್ತಾರೆ.

    ಅಂತಿಮವಾಗಿ ಕ್ಯಾನ್ಸರ್ ರೋಗಿಗೆ ಅತ್ಯುತ್ತಮ ಅನುಭವವಾಗುವಂತೆ ಮಾಡುವುದು ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆಯ ಅಥವಾ ಆಸ್ಪತ್ರೆಯ ಪ್ರಮುಖ ಧ್ಯೇಯವಾಗಿರುತ್ತದೆ. ಶಸ್ತ್ರಚಿಕಿತ್ಸೆಯಲ್ಲಿನ ಬೆಳವಣಿಗೆಗಳೊಂದಿಗೆ ಈ ರೋಗವು ಮಾರಣಾಂತಿಕ ಎಂಬ ಹಣೆಪಟ್ಟಿಯನ್ನು ಕ್ರಮೇಣ ಕಳೆದುಕೊಳ್ಳುತ್ತಿದೆ. ಆಧುನಿಕ ರಿಕನ್ಸ್ಟ್ರಕ್ಷನ್ ಟೆಕ್ನಿಕ್ ಗಳ ಪರಿಚಯ ಕ್ಯಾನ್ಸರ್ ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಿದೆ ಅಲ್ಲದೇ ರೋಗಿಗಳು ಬಹುಬೇಗ ಗುಣಮುಖರಾಗಲು ಸಹಾಯ ಮಾಡಿದೆ.

    “ನಾವು ಬಹುಮುಖಿ ಚಿಕಿತ್ಸಾ ವಿಧಾನದ ಕಡೆ ಗಮನ ಕೊಡುತ್ತೇವೆ. ಇಲ್ಲಿ ತಜ್ಞರು ಸಮಗ್ರ ತಂಡವಾಗಿ ರೋಗಿಯ ಪಯಣವನ್ನು ಅರ್ಥಮಾಡಿಕೊಂಡು ಮುಂದುವರಿಯುತ್ತಾರೆ.” ಫರ್ಜಾನ್ ಇಂಜಿನಿಯರ್, ಸೈಟ್‍ಕೇರ್ ನ ಸಹಸಂಸ್ಥಾಪಕ ಮತ್ತು ಛೇರ್ಮನ್.

    ಸೈಟ್ ಕೇರ್ ಆಸ್ಪತ್ರೆಯ ವೆಬ್‍ಸೈಟಿಗೆ ಭೇಟಿ ನೀಡಲು ಕ್ಲಿಕ್ ಮಾಡಿ: www.cytecare.com

  • ಬೌರಿಂಗ್ ಕ್ಲಬ್‍ನಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ರೋಚಕ ತಿರುವು

    ಬೌರಿಂಗ್ ಕ್ಲಬ್‍ನಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ರೋಚಕ ತಿರುವು

    ಬೆಂಗಳೂರು: ನಗರದ ಬೌರಿಂಗ್ ಇನ್‍ಸ್ಟಿಟ್ಯೂಟ್ ನಲ್ಲಿ ಪತ್ತೆಯಾದ ಕೋಟಿ ಕೋಟಿ ಹಣ ಹಿಂದಿರುಗಿಸುವಂತೆ ವ್ಯಕ್ತಿಯೊಬ್ಬರು 5 ಕೋಟಿ ರೂ, ಅಮಿಷ ನೀಡಿದ್ದರು ಎಂದು ಇನ್‍ಸ್ಟಿಟ್ಯೂಟ್ ಕಾರ್ಯದರ್ಶಿ ಹೆಚ್ ಎಸ್ ಶ್ರೀಕಾಂತ್ ಹೇಳಿದ್ದಾರೆ.

    ಲಾಕರ್ಸ್ ಗಳಲ್ಲಿ ಪತ್ತೆಯಾದ ಆಪಾರ ಹಣದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕ್ರೀಡಾ ಪರಿಕರಗಳನ್ನು ಇಡಲು ಬೌರಿಂಗ್ ಇನ್‍ಸ್ಟಿಟ್ಯೂಟ್ ಅನ್ನು ನಿರ್ಮಾಣ ಮಾಡಲಾಗಿತ್ತು. 38 ವರ್ಷಗಳಿಂದ ನಾನು ಸಂಸ್ಥೆಯ ಸದಸ್ಯನಾಗಿ, 2010 ರಿಂದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 5000 ಕ್ಕೂ ಹಚ್ಚಿನ ಮೆಂಬರ್ಸ್ ಇದ್ದಾರೆ. ಇಲ್ಲಿ 670 ಲಾಕರ್ಸ್ ವ್ಯವಸ್ಥೆ ಮಾಡಲಾಗಿದೆ ಎಂದರು.

    ಸಂಸ್ಥೆಯ ಫ್ಲಾಟ್‍ನಲ್ಲಿ ಕೆಲ ನವೀಕರಣ ಕಾರ್ಯಗಳು ನಡೆಯಬೇಕಾಗಿದ್ದರಿಂದ ಫೆಬ್ರವರಿಯಲ್ಲಿ ಸದಸ್ಯರಿಗೆ ನೊಟೀಸ್ ನೀಡಲಾಗಿತ್ತು. ಆದರೆ ಈ ನೋಟಿಸ್ ಯಾವುದೇ ಪ್ರತಿಕ್ರಿಯೆಬಾರದ ಕಾರಣ ನಮ್ಮ ಸಿಬ್ಬಂದಿಯೊಂದಿಗೆ ನಾವೇ ಲಾಕರ್ಸ್ ತೆರೆದು ನೋಡಿದಾಗ ಕಪ್ಪು ಬ್ಯಾಗ್ ಗಳು ಪತ್ತೆಯಾಗಿವೆ. ಈ ಕುರಿತು ಪೊಲೀಸ್ ಡಿಜಿಪಿ ಚಂದ್ರಹಾಸ್ ಗುಪ್ತ ಅವರಿಗೆ ಮಾಹಿತಿ ನೀಡಿ, ಬ್ಯಾಗ್ ಗಳನ್ನು ತೆಗೆದ ಎಲ್ಲಾ ದೃಶ್ಯಗಳನ್ನು ವಿಡಿಯೋ ಮಾಡಿ ಸೀಲ್ ಮಾಡಲಾಗಿದೆ. ಬಳಿಕ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದರು.

    ಪ್ರಮುಖವಾಗಿ ಟೆನಿಸ್ ಕೋರ್ಟ್ ನಲ್ಲಿನ ಲಾಕರ್ ರೂಮ್‍ನ 79, 62 ಎಂಬ ಲಾಕರ್ ಗಳಲ್ಲಿ 6 ಬ್ಯಾಗ್ ಪತ್ತೆಯಾಗಿದೆ. ಇದರಲ್ಲಿ ಮೂರುವರೆ ಕೋಟಿ ದುಡ್ಡು, 8 ಕೋಟಿ ಮೌಲ್ಯದ ವಜ್ರಾಭರಣ, ಆಸ್ತಿ ದಾಖಲೆ ಪತ್ರ ಪತ್ತೆಯಾಗಿದೆ. ಒಟ್ಟಾರೆ ಸಂಸ್ಥೆಯ ಕಟ್ಟಡದಲ್ಲಿದ್ದ ಒಟ್ಟು 126 ಲಾಕರ್ ಓಪನ್ ಮಾಡಲಾಗಿತ್ತು ಎಂದು ತಿಳಿಸಿದರು.

    ಲಾಕರ್ ನಲ್ಲಿ ಸಿಕ್ಕಿದ್ದೇನು?
    * 2000 ರೂ. ನೋಟುಗಳ 18 ಬಂಡಲ್ (3 ಕೋಟಿ 90 ಲಕ್ಷ ರೂ.)
    * 7.8 ಕೋಟಿ ಮೌಲ್ಯದ ಡೈಮಂಡ್
    * ಗೋಲ್ಡ್ ಬಿಸ್ಕಟ್ 650 ಗ್ರಾಂ
    * 30 ರಿಂದ 40 ಲಕ್ಷ ರೂ. ಮೌಲ್ಯದ ಎರಡು ವಾಚ್
    * ನೂರಾರು ಕೋಟಿ ಮೌಲ್ಯದ ಆಸ್ತಿ ಪತ್ರ
    * ಹಲವು ಕೋಟಿ ರೂ. ಮೌಲ್ಯ ಚೆಕ್ ಹಾಗೂ ಸಹಿ ಮಾಡದ ಖಾಲಿ ಚೆಕ್‍ಗಳು ಪತ್ತೆ

    ಅಂದಹಾಗೇ ಪತ್ತೆಯಾದ ಅಪಾರ ಪ್ರಮಾಣದ ಹಣ ರಾಜ್ಯ ಪ್ರತಿಷ್ಠಿತ ಉದ್ಯಮಿ ಅವಿನಾಶ್ ಅಮರ್ ಲಾಲ್ ಅವರದ್ದು ಎಂದು ತಿಳಿಸಿದ್ದಾರೆ. ಅಮರ್ ಲಾಲ್ ಪ್ರೆಸ್ಟಿಜ್ ಗ್ರೂಪ್ ಆಫ್ ಕಂಪೆನಿಯಲ್ಲಿ ಪಾಲುದಾರರಾಗಿದ್ದು, ಮೂಲತಃ ರಾಜಸ್ಥಾನದವರಾಗಿದ್ದು, ಬೆಂಗಳೂರಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದು, 30% ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದರು. ಸಾಲ ಕೊಟ್ಟು ಆಸ್ತಿ ಪತ್ರಗಳನ್ನು ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.

  • ಬೆಂಗ್ಳೂರಿನ ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಒಳಗೆ ಸಿಕ್ತು ಕೋಟಿ ಕೋಟಿ ನಿಧಿ

    ಬೆಂಗ್ಳೂರಿನ ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಒಳಗೆ ಸಿಕ್ತು ಕೋಟಿ ಕೋಟಿ ನಿಧಿ

    ಬೆಂಗಳೂರು: ನಗರದ ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಕ್ಲಾಬ್ ಒಳಗೆ ಕೋಟಿ ಕೋಟಿ ನಿಧಿ ಸಿಕ್ಕಿದೆ.

    ಅವಿನಾಶ್ ಅಮರ್ ಲಾಲ್ ಎಂಬ ಉದ್ಯಮಿ ಟೆನಿಸ್ ಕೋರ್ಟ್ ನಲ್ಲಿ ಕಳೆದ 1 ವರ್ಷದಿಂದ ನಿಧಿಯನ್ನು ಬಚ್ಚಿಟ್ಟಿದ್ದನು. ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಆಡಳಿತ ಮಂಡಳಿ ಆತ ಬಚ್ಚಿಟ್ಟಿದ್ದ ಲಾಕರ್ ಓಪನ್ ಮಾಡಿದ್ದಾರೆ. ಆಗ 2 ಲಾಕರ್ ಓಪನ್ ಮಾಡಿದಾಗ ಅದರಲ್ಲಿ 2 ಬ್ಯಾಗ್ ಪತ್ತೆಯಾಗಿದೆ. 2 ಬ್ಯಾಗಿನಲ್ಲಿ ಸುಮಾರು 3.90 ಕೋಟಿ ನಗದು, 5 ಕೋಟಿ ಮೌಲ್ಯದ ವಜ್ರಾಭರಣ ಮತ್ತು 100ಕೋಟಿ ರೂ. ಆಸ್ತಿ ಪತ್ರ ಪತ್ತೆಯಾಗಿದೆ.

    ಬೌರಿಂಗ್ ಆಡಳಿತ ಮಂಡಳಿ ಲಾಕರ್ ಓಪನ್ ಮಾಡಿ ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಬೌರಿಂಗ್ ಕ್ಲಬ್ ಸೆಕ್ರೆಟರಿ ಶ್ರೀಕಾಂತ್ ಮತ್ತು ಬ್ಯಾಡ್ಮಿಂಟನ್ ಕಮಿಟಿಯ ಸಂದೀಪ್‍ಗೆ ಉದ್ಯಮಿ ಆಮಿಷ ಒಡ್ಡಿದ್ದಾನೆ. ಹಣ ಮತ್ತು ವಜ್ರಾಭರಣ ನೀವೆ ಇಟ್ಟುಕೊಳ್ಳಿ. ಆದರೆ ಆಸ್ತಿ ಪತ್ರ ಮಾತ್ರ ಕೊಡಿ ಎಂದು ಆಮಿಷ ಒಡ್ಡಿದ್ದಾನೆ. ಆದರೆ ಉದ್ಯಮಿಯ ಆಮಿಷಕ್ಕೆ ಒಳಗಾಗದ ಬೌರಿಂಗ್ ಆಡಳಿತ ಮಂಡಳಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಮತ್ತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಗುರುವಾರ ರಾತ್ರಿ 12 ಗಂಟೆವರೆಗೂ ಐಟಿ ಇಲಾಖೆ ಪರೀಶಿಲನೆ ನಡೆಸಿದ್ದಾರೆ.

    ಸಿಕ್ಕಿಬಿದ್ದಿದ್ದು ಹೇಗೆ?
    ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಆಡಳಿತ ಮಂಡಳಿ 15 ದಿನಗಳ ಹಿಂದೆ, ನೀವು ಲಾಕರ್ ನಲ್ಲಿ ಇಟ್ಟಿದ್ದ ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗಿ ಒಂದು ವೇಳೆ ಲಾಕರ್ ನಲ್ಲಿರುವ ವಸ್ತುವನ್ನು ಕೊಂಡೊಯ್ಯದಿದ್ದರೆ ಲಾಕರ್ ಒಡೆಯುದಾಗಿ ಉದ್ಯಮಿಗೆ ನೋಟಿಸ್ ಕಳುಹಿಸಿದ್ದಾರೆ. ಸ್ವಲ್ಪ ಕೆಲಸ ಕಾರ್ಯಗಳಿವೆ. ಆದ್ದರಿಂದ ಅವುಗಳನ್ನು ಒಡೆದು ನವೀಕರಣಗೊಳಿಸಬೇಕಿದೆ ಎಂದು ಬೌರಿಂಗ್ ಆಡಳಿತ ಮಂಡಳಿ ತಿಳಿಸಿದೆ. ಆದರೆ ಉದ್ಯಮಿ ನೋಟಿಸ್ ಬಗ್ಗೆ ತಲೆ ತಲೆಕೆಸಿಕೊಂಡಿಲ್ಲ. ಕೊನೆಗೆ ಆಡಳಿತ ಮಂಡಳಿ 86, 87ರಲ್ಲಿ ಲಾಕರ್ ಹೊಡೆದಿದೆ. ಆಗ ಈ ಕೋಟಿ ಕೋಟಿ ಆಸ್ತಿ ಪತ್ತೆಯಾಗಿದೆ.

    ಅವಿನಾಶ್ ಅಮರ್ ಲಾಲ್ ಪ್ರೆಸ್ಟಿಜ್ ಗ್ರೂಪ್ ಆಫ್ ಕಂಪೆನಿಯಲ್ಲಿ ಪಾಲುದಾರನಾಗಿದ್ದು, ಮೂಲತಃ ರಾಜಸ್ಥಾನದವನು ಎಂದು ತಿಳಿದು ಬಂದಿದೆ. ಜೊತೆಗೆ ಬೆಂಗಳೂರಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದು, 30% ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದನು. ಸಾಲ ಕೊಟ್ಟು ಆಸ್ತಿ ಪತ್ರಗಳನ್ನು ಪಡೆಯುತ್ತಿದ್ದನು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಈ ಬಗ್ಗೆ ಐಟಿ ಇಲಾಖೆ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.