ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ್ದ ಬೆನ್ನಲ್ಲೇ ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರು ಬುಧವಾರ ರಾತ್ರಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಕರೆ ಮಾಡಿ ಮಾತನಾಡಿದ್ದಾರೆ. ಕತ್ತಿಯವರ ಈ ನಡೆ ಸದ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸಚಿವ ಸಂಪುಟ ರಚನೆಯಾದ ಬೆನ್ನಲ್ಲೆ ಬಿಜೆಪಿ ವಲಯದಲ್ಲಿ ಸಚಿವ ಸ್ಥಾನ ಸಿಗದ ನಾಯಕರು ಬಂಡಾಯ ಎದ್ದಿದ್ದಾರೆ. ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ತಿಪ್ಪಾರೆಡ್ಡಿ ಸೇರಿ ಇತರೇ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಉಮೇಶ್ ಕತ್ತಿ ಅವರು ಸಿದ್ದರಾಮಯ್ಯ ಅವರ ಜೊತೆ ಫೋನಿನಲ್ಲಿ ಮಾತನಾಡಿರುವುದು ಸಾಕಷ್ಟು ಪ್ರಶ್ನೆ ಹುಟ್ಟು ಹಾಕಿದೆ.
ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಉಮೇಶ್ ಕತ್ತಿ ಅವರು ಬಿಜೆಪಿ ನಾಯಕರ ಮೇಲೆ ಒತ್ತಡ ತರಲು ಸಿದ್ದರಾಮಯ್ಯ ಜೊತೆಗೆ ಮಾತನಾಡಿದರಾ? ಅವರನ್ನು ಭೇಟಿ ಮಾಡಲು ಹೋಗುತ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಮೂಲಗಳ ಪ್ರಕಾರ ಕರೆಯಲ್ಲಿ ಉಮೇಶ್ ಕತ್ತಿಯವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ಬಾದಾಮಿಯಿಂದ ಮರಳಿದ ಬಳಿಕ ಅವರನ್ನು ಕಚೇರಿಯಲ್ಲಿ ಭೇಟಿ ಆಗುತ್ತಾರೆ ಎನ್ನಲಾಗಿತ್ತು.
ಆದರೆ ಈ ಬಗ್ಗೆ ಉಮೇಶ್ ಕತ್ತಿ ಪಬ್ಲಿಕ್ ಟಿವಿ ಜೊತೆ ಕರೆಯಲ್ಲಿ ಮಾತನಾಡಿ, ನಾನು ಸಿದ್ದರಾಮಯ್ಯ ಫೋನಿನಲ್ಲಿ ಮಾತನಾಡಿದ್ದು ನಿಜ, ಸಚಿವ ಸ್ಥಾನದ ಬಗ್ಗೆ ತಿಳಿದು ಅವರು ಕರೆ ಮಾಡಿದ್ದರು. ನಾನು, ಸಿದ್ದರಾಮಯ್ಯ, ಬಸವರಾಜ ಹೊರಟ್ಟಿ ಎಲ್ಲಾ ಬಹಳ ವರ್ಷದಿಂದ ಸ್ನೇಹಿತರು, ಆದ್ದರಿಂದ ಮಾತನಾಡಿದ್ದೇವೆ ಅಷ್ಟೇ. ನಾನು ಬಿಜೆಪಿ ಬಿಟ್ಟು ಹೋಗಲ್ಲ ಎಂದು ಹೇಳಿದ್ದಾರೆ.
ನಿನ್ನೆ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಕರೆ ಮಾಡಿದ್ದರು. ನಾನು ಯಾರ ವೈರಿನೂ ಅಲ್ಲ, ಮಿತ್ರನೂ ಅಲ್ಲ. ನಾನು ಬಿಜೆಪಿಯವನು, ಬಿಜೆಪಿಯಲ್ಲೇ ಇರುತ್ತೇನೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ಸಿನಲ್ಲೇ ಇರಲಿ. 20 ವರ್ಷಗಳಿಂದ ನಾವಿಬ್ಬರು ಸ್ನೇಹಿತರು. ಜನತಾ ದಳದಲ್ಲಿ ಇದ್ದಾಗ ಇಬ್ಬರೂ ಸೇರಿ ಕೆಲಸ ಮಾಡಿದ್ದೇವೆ. ಸ್ನೇಹಿತರಾಗಿದ್ದರಿಂದ ನಿನ್ನೆ ಸಿದ್ದರಾಮಯ್ಯ ಅವರು ನನಗೆ ಫೋನ್ ಮಾಡಿದ್ದರು. ಸಚಿವ ಸ್ಥಾನದ ಬಗ್ಗೆ ಕೇಳಿದರು, ಆಗ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದೆ ಅಷ್ಟೇ. ಬಿಡುವಿದ್ದರೆ ಇಬ್ಬರು ಭೇಟಿಯಾಗುತ್ತೇವೆ. ಹಾಗಂತಾ ನಾನು ಬಿಜೆಪಿ ಬಿಟ್ಟು ಹೋಗಲ್ಲ. ಇಲ್ಲೇ ಇರುತ್ತೇನೆ. ಮಾಧ್ಯಮಗಳಲ್ಲಿ ಬೇಕಾದ ಹಾಗೆ ಸುದ್ದಿ ಬರುತ್ತಿದೆ ನಾನು ನೋಡುತ್ತಿದ್ದೇನೆ. ಆದರೆ ನಾನು ಬಿಜೆಪಿ ಬಿಡಲ್ಲ. ಈಗ ಕೇವಲ 17 ಮಂದಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದೆ. ಉಳಿದ ಸ್ಥಾನಗಳೂ ಇನ್ನೂ ನಿರ್ಧಾರವಾಗಿಲ್ಲ, ನೋಡೋಣ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು: ರಾಜ್ಯ ಎದುರಿಸಿದ ಭೀಕರ ಪ್ರವಾಹದಿಂದ ಒಂದೆಡೆ ಬೆಳೆಗಳು ಹಾನಿಯಾಗಿ, ಇನ್ನೊಂದೆಡೆ ತರಕಾರಿ ಸಾಗಿಸಲು ಹಲವೆಡೆ ಸರಿಯಾದ ರಸ್ತೆ ಸಂಪರ್ಕವಿಲ್ಲದ ಕಾರಣ ತರಕಾರಿ ಬೆಲೆ ಗಗನಕ್ಕೇರಿದೆ.
ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಪ್ರವಾಹದಿಂದ ತರಕಾರಿ ಬೆಲೆ ಹೆಚ್ಚಾಗಿದೆ. ಭೀಕರ ಪ್ರವಾಹಕ್ಕೆ ತರಕಾರಿ ಬೆಳೆಗಳು ನಾಶವಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ತರಕಾರಿ ಸಾಗಾಟ ಮಾಡಲು ಆಗುತ್ತಿಲ್ಲ. ಹೀಗಾಗಿ ಸಂಚಾರ ವ್ಯವಸ್ತೆ ಇಲ್ಲದೆ ಮಾರುಕಟ್ಟೆಯಲ್ಲಿ ತರಕಾರಿ ಪೂರೈಕೆ ಕಡಿಮೆಯಾಗಿದೆ.
ಕಳೆದ 10 ದಿನಗಳಲ್ಲಿ ಈರುಳ್ಳಿ ಬೆಲೆ ದುಪ್ಪಟ್ಟಾಗಿದೆ. ಕೆಜಿಗೆ 25 ರೂ. ಇದ್ದ ಈರುಳ್ಳಿ ಬೆಲೆ 40 ರೂಪಾಯಿಗೆ ಏರಿಕೆಯಾಗಿದೆ. ಬೀಟ್ ರೋಟ್ 40 ರಿಂದ 60 ರೂಪಾಯಿ ತಲುಪಿದೆ. ಬೆಳ್ಳುಳ್ಳಿ 100 ರಿಂದ 140 ರೂ. ಏರಿಕೆಯಾಗಿದೆ. ಹಾಗೆಯೇ ಶುಂಠಿ 120 ರಿಂದ 160 ರೂಪಾಯಿಗೆ ಬಂದು ನಿಂತಿದೆ. ಹೀಗೆ ಇತರೆ ತರಕಾರಿಗಳ ಬೆಲೆ ಕೂಡ ಏರಿಕೆಯಾಗಿದ್ದು, ಗ್ರಾಹಕರಿಗೆ ದುಬಾರಿಯಾಗಿದೆ.
ಬೆಂಗಳೂರು: ನೂತನ ಬಿಜೆಪಿ ರಾಜ್ಯಾಧ್ಯಕ್ಷರಾದ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ ಶುಭಕೋರಿದ್ದಾರೆ.
ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಹೊಸ ಸ್ಥಾನ ಪಡೆದಿರುವ ಶ್ರೀ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆಗಳು. ಆಲ್ ದಿ ವೆರಿ ಬೆಸ್ಟ್ ಎಂದು ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮೂಲಕ ಶುಭಕೋರಿದ್ದಾರೆ. ಈಗ ಬಿಜೆಪಿ ನಾಯಕನಿಗೆ ವಿರೋಧ ಪಕ್ಷದ ಶಾಸಕ ಶುಭಕೋರಿರುವುದು ಚರ್ಚೆಗೆ ಗ್ರಾಸವಾಗಿದೆ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 21, 2019
ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆದೇಶ ಹೊರಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಬಿಜೆಪಿಯ ಸಿದ್ಧಾಂತದ ಪ್ರಕಾರ ಒಬ್ಬರಿಗೆ ಒಂದೇ ಹುದ್ದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನವನ್ನು ಸಿಎಂ ಯಡಿಯೂರಪ್ಪ ಅವರಿಂದ ಹಿಂಪಡೆದಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ನೀಡಲಾಗಿದೆ.
ಇದೇ ಹಿನ್ನೆಲೆಯಲ್ಲಿ ಕೊಚ್ಚಿಯಿಂದ ಮಂಗಳೂರಿಗೆ ಬಂದಿಳಿದ ನಳಿನ್ ಕುಮಾರ್ ಅವರಿಗೆ ರೈಲು ನಿಲ್ದಾಣದಲ್ಲಿಯೇ ಹಾರ ಹಾಕಿ, ಶಾಲು ಹೊದಿಸಿ ಅಭಿಮಾನಿಗಳು ಭುಜದ ಮೇಲೆ ಹೊತ್ತು ಸಂಭ್ರಮಿಸಿದರು. ಈ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಉನ್ನತ ಸ್ಥಾನ ದೊರಕಿರುವ ಖುಷಿಯನ್ನು ವ್ಯಕ್ತಪಡಿಸಿದ್ದರು.
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಆರೋಪಿ ಮನ್ಸೂರ್ ಜನರಿಗೆ ಮೋಸ ಮಾಡಿದ್ದ ಹಣವನ್ನು ಎಲ್ಲೆಲ್ಲಿ ಬಚ್ಚಿಟ್ಟಿದ್ದ ಎಂದು ಕೇಳಿದರೆ ದಂಗಾಗುತ್ತೀರಿ. ಕೇವಲ ಬೆಂಗಳೂರು ಮಾತ್ರವಲ್ಲದೆ ಬೇರೆ ಜಿಲ್ಲೆಗಳಲ್ಲಿಯೂ ಚಿನ್ನ, ಹಣವನ್ನು ಮನ್ಸೂರ್ ಬಚ್ಚಿಟ್ಟಿದ್ದನು.
ಹೌದು, ಸದ್ಯ ಇಡಿ ಅಧಿಕಾರಿಗಳ ಬಳಿಕ ಮನ್ಸೂರ್ ಖಾನ್ ಎಸ್‍ಐಟಿ ಪೊಲೀಸರ ವಶದಲ್ಲಿದ್ದು ವಿಚಾರಣೆ ನಡೆಯುತ್ತಿದೆ. ಈ ವೇಳೆ ಬೆಂಗಳೂರು ನಗರದಲ್ಲಷ್ಟೇ ಅಲ್ಲದೇ ಹೊರಗಿನ ಜಿಲ್ಲೆಗಳಲ್ಲಿ ಕೋಟಿಗಟ್ಟಲೆ ಹಣವನ್ನು ಬಚ್ಚಿಟ್ಟಿದ್ದ ವಿಚಾರ ಬೆಳಕಿಗೆ ಬಂದಿದೆ.
ಎಸ್‍ಐಟಿ ಪೊಲೀಸರ ತನಿಖೆಯಲ್ಲಿ ಮನ್ಸೂರ್ ಮತ್ತೊಂದು ಅಡುಗುತಾಣ ಬಯಲಾಗಿದೆ. ಕೋಲಾರದ ಮಾಲೂರಿನ ಬಳಿ ಇರುವ ಸಿಮೆಂಟ್ ಬ್ಲಾಕ್ ತಯಾರಕ ಫ್ಯಾಕ್ಟರಿಯಲ್ಲಿ ಮನ್ಸೂರ್ ನೂರಾರು ಕೋಟಿ ಹಣ, ಚಿನ್ನಾಭರಣ ಪತ್ತೆಯಾಗಿದೆ.
ಅಷ್ಟೇ ಅಲ್ಲದೆ, ಈ ಹಣ, ಒಡವೆ ಕಾಯಲೆಂದೇ ಫ್ಯಾಕ್ಟರಿಯಲ್ಲಿ ಗನ್‍ಮ್ಯಾನ್‍ಗಳನ್ನು ಕೂಡ ನೇಮಕ ಮಾಡಲಾಗಿತ್ತು. ಮನ್ಸೂರ್ ಖಾನ್ ಸ್ನೇಹಿತ ನಾಟಿ ವೈದ್ಯ ಖಮರುಲ್ಲಾ ಜಮಾಲ್ ಇದರ ಉಸ್ತುವಾರಿ ವಹಿಸಿಕೊಂಡಿದ್ದನು. ತಾನೇ ಜಮೀನು ತೆಗೆದುಕೊಂಡು, ಖಮರುಲ್ಲಾ ಜಮಾಲ್‍ಗೆ ಮನ್ಸೂರ್ ಫ್ಯಾಕ್ಟರಿ ಮಾಡಿಕೊಟ್ಟಿದ್ದನು. ಹಾಗೆಯೇ ನಾಟಿ ವೈದ್ಯದ ಜೊತೆ ಮಾಟ ಮಂತ್ರ ಮಾಡುತ್ತೇನೆ ಎಂದು ಖಮರುಲ್ಲಾ ಜನರನ್ನು ಹೆದರಿಸುತ್ತಿದ್ದನು. ಹೀಗೆ ಈ ಫ್ಯಾಕ್ಟರಿ ಬಳಿ ಜನರು ಬಾರದಂತೆ ನೋಡಿಕೊಂಡಿದ್ದನು.
ಈ ಬಗ್ಗೆ ತಿಳಿದು ಸಿಮೆಂಟ್ ಫ್ಯಾಕ್ಟರಿ ಪರಿಶೀಲನೆ ನಡೆಸಿರುವ ಎಸ್‍ಐಟಿ ಪೊಲೀಸರು ಖಮರುಲ್ಲಾನನ್ನು ಬಂಧಿಸಿ, ನಗದು ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಶಾಂತಿನಗರದ ತನ್ನ ಅಪಾರ್ಟ್‌ಮೆಂಟಿನಲ್ಲಿ ಮನ್ಸೂರ್ ಸ್ವಿಮ್ಮಿಂಗ್ ಪೂಲ್‍ನಲ್ಲಿ 300 ನಕಲಿ ಚಿನ್ನದ ಬಿಸ್ಕತ್ ಬಚ್ಚಿಟ್ಟಿರುವುದು ಕೂಡ ಬೆಳಕಿಗೆ ಬಂದಿದ್ದು, ಅದನ್ನೂ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರು: ತಂಗಿಯನ್ನು ಪ್ರೇಮ ವಿವಾಹವಾಗಿದ್ದ ಬಾವನ ಮೇಲೆ ಅಣ್ಣ ಕೊಲೆಗೆ ಯತ್ನಿಸಿ, ಕಿರು ಬೆರಳು ಕತ್ತರಿಸಿದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗಸಂದ್ರದಲ್ಲಿ ನಡೆದಿದೆ.
ಪೀಣ್ಯ ಇಂಡಸ್ಟ್ರಿಯಲ್ ಏರಿಯಾದ ನಿವಾಸಿ ಹನುಮಂತನ ಮೇಲೆ ಹಲ್ಲೆ ಮಾಡಲಾಗಿದೆ. ಹನುಮಂತನ ಅತ್ತೆ ಮಗ ಸಂತೋಷ ಹಲ್ಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಆಗಸ್ಟ್ 12ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತೋಷ್ ಮನೆಯಲ್ಲೇ ವಾಸವಾಗಿದ್ದ ಹನುಮಂತ ಆರೋಪಿಯ ತಂಗಿಯನ್ನು ಪ್ರೀತಿಸಿದ್ದನು. ಇದಕ್ಕೆ ಸಂತೋಷ್ ತಂಗಿ ಕೂಡ ಒಪ್ಪಿದ್ದಳು. ಆದರೆ ಮನೆಯಲ್ಲಿ ತಮ್ಮ ಪ್ರೀತಿ ಒಪ್ಪದ ಕಾರಣಕ್ಕೆ ಇಬ್ಬರೂ ಕಳೆದ ಒಂದು ವರ್ಷದ ಹಿಂದೆ ಓಡಿಹೋಗಿದ್ದರು. ಆ ನಂತರ ಮದುವೆಯನ್ನು ಕೂಡ ಮಾಡಿಕೊಂಡಿದ್ದರು. ಇತ್ತ ಮನೆಯ ಮರ್ಯಾದೆ ಕಳೆದಿದ್ದಾರೆ ಎಂದು ಸಂತೋಷ್‍ಗೆ ಇಬ್ಬರ ಮೇಲೂ ಕೋಪವಿತ್ತು. ಆದರೆ ಓಡಿಹೋಗಿದ್ದವರು ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ.
ಮದುವೆ ಬಳಿಕ ಆಗಸ್ಟ್ 12ರಂದು ಹನುಮಂತ ಸಂತೋಷನ ಕಣ್ಣಿಗೆ ಬಿದ್ದಿದ್ದನು. ಮೊದಲೇ ಕೋಪದಲ್ಲಿದ್ದ ಸಂತೋಷ್ ಸ್ನೇಹಿತನ ಜೊತೆ ಸೇರಿ ಹನುಮಂತನನ್ನು ಕೊಲೆ ಮಾಡಲು ಯತ್ನಿಸಿದ್ದನು. ಹನುಮಂತನನ್ನು ಚಾಕುವಿನಿಂದ ಸಂತೋಷ್ ಎದೆಗೆ ಇರಿಯಲು ಹೋದಾಗ, ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಬರದಲ್ಲಿ ಹನುಮಂತನ ಎಡಗೈ ಕಿರುಬೆರಳು ಕಟ್ ಆಗಿತ್ತು. ಆಗ ಇಬ್ಬರು ಆರೋಪಿಗಳು ಪರಾರಿಯಾಗಿದ್ದರು.
ಈ ಬಗ್ಗೆ ಹನುಮಂತ ಪೊಲೀಸರಿಗೆ ದೂರು ನೀಡಿದ್ದು, ಪರಪ್ಪನ ಅಗ್ರಹಾರ ಪೊಲೀಸರು ಆರೋಪಿಗಳಾದ ಸಂತೋಷ್ ಮತ್ತು ಪ್ರೇಮ್‍ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣ ಹಿನ್ನೆಲೆ ಬಿಜೆಪಿ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅವರಿಗೆ ಮಾನ ಮರ್ಯಾದೆ ಇದೆಯಾ? ಫೋನ್ ಕದ್ದಾಲಿಕೆ ವಿಚಾರವಾಗಿ ನಾನು ತುಂಬಾ ಮಾತನಾಡಬಲ್ಲೆ. ನನಗೆ ಎಲ್ಲಾ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.
ಜೆಡಿಎಸ್ ಕಾರ್ಯದರ್ಶಿ ನಾರಾಯಣರಾವ್ ಅವರು ಇಂದು ಜನತಾ ದಳ ಕಚೇರಿಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು, ಪರಿಷತ್ ಸದಸ್ಯ ಶರವಣ, ಬೆಂಗಳೂರು ನಗರ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ಧ್ವಜಾರೋಹಣ ನೆರವೇರಿದ ಬಳಿಕ ದೇವೇಗೌಡರು ಮಾಧ್ಯಮಗಳ ಜೊತೆ ಮಾತನಾಡಿ ನಾಡಿನ ಜನತೆಗೆ 73ನೇ ವರ್ಷದ ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು. ಬಳಿಕ ಫೋನ್ ಕದ್ದಾಲಿಕೆ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಅವರಿಗೆ ಮಾನ ಮರ್ಯಾದೆ ಇದೆಯಾ? ಫೋನ್ ಕದ್ದಾಲಿಕೆ ವಿಚಾರ ನಾನು ತುಂಬಾ ಮಾತನಾಡಬಲ್ಲೆ. ಯಾವ ಮುಖ್ಯಮಂತ್ರಿ ಕಾಲದಲ್ಲಿ ಏನಾಗಿದೆ ಎನ್ನುವ ಬಗ್ಗೆ ನನಗೆ ಎಲ್ಲಾ ಗೊತ್ತಿದೆ. ಯಾವ ರಾಜ್ಯದಲ್ಲಿ ಫೋನ್ ಕದ್ದಾಲಿಕೆ ಆಗಿದೆ ಅನ್ನೋ ವಿಚಾರವೂ ಗೊತ್ತಿದೆ. ಕೇಂದ್ರದಲ್ಲಿ ಏನು ನಡೀತಿದೆ? ಯಾರ ಕಾಲದಲ್ಲಿ ಏನು ಆಗಿದೆ ಎಂಬುದು ಗೊತ್ತಿದೆ. ಈ ಬಗ್ಗೆ ಚರ್ಚೆ ಬೇಕಿಲ್ಲ. ಆದರೆ ಸರ್ಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಕದ್ದಾಲಿಕೆ ಮಾಡಿದ್ದಾರೆ ಅನ್ನೋ ಬಿಜೆಪಿ ಆರೋಪಿಸಿದೆ. ಬಿಜೆಪಿ ಅವರಿಗೆ ಬೇರೆ ಕೆಲಸ ಇಲ್ಲ ಅಲ್ವಾ? ಅವರು ಏನೇನು ಮಾಡಿದ್ದಾರೆ ಗೊತ್ತಿದೆ. ಕದ್ದಾಲಿಕೆ ಯಾಕೆ? ಅವರು ನೇರವಾಗಿ ಹೊತ್ತುಕೊಂಡು ಹೋದ ಜನ ಎಂದು ಮಗನ ಮೇಲಿನ ಆರೋಪದಕ್ಕೆ ದೇವೇಗೌಡರು ಕೆಂಡಾಮಂಡಲರಾದರು.
ಕರ್ನಾಟಕ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಪ್ರವಾಹ ಉಂಟಾಗಿದೆ. ಹಿದೆಂದೂ ಕಂಡು ಕೇಳದ ಪ್ರವಾಹ ದೇಶದಲ್ಲಿ ಬಂದಿದೆ. ರೈತರು, ಜನರು, ಸಾವನ್ನಪಿದ್ದಾರೆ. ಸರ್ಕಾರ ಕೂಡಾ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿ ಈ ಸಮಯದಲ್ಲಿ ಕೆಲಸ ಮಾಡಬೇಕು. ಸರ್ಕಾರ ನೆರೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ನೆರೆ ಪರಿಹಾರಕ್ಕೆ ಅನುದಾನ ನೀಡದ ಪ್ರಧಾನಿ ಮೋದಿ ವಿರುದ್ಧ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ಮೋದಿ ಒಂದು ಮೀಟಿಂಗ್ ಮಾಡಿ ಹಣ ಕೊಡದೇ ಇರೋದು ದುರಂತ. ಅವರಿಗೆ ಏನ್ ಕಷ್ಟ ಇದೆಯೋ ಗೊತ್ತಿಲ್ಲ. ಇಲ್ಲಿಯವರೆಗೂ ಒಂದು ರೂಪಾಯಿ ರಾಜ್ಯಕ್ಕೆ ಬಂದಿಲ್ಲ ಎಂದು ಟಾಂಗ್ ಕೊಟ್ಟರು.
ನೀರು ಕಡಿಮೆ ಆದ ಮೇಲೆ ನಾನು ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗುತ್ತೇನೆ. ಈ ಬಗ್ಗೆ ರಾಜ್ಯ ಸರ್ಕಾರ ವರದಿ ಕೊಡುತ್ತೆ. ಕೇಂದ್ರ ತಂಡ ಕೂಡಾ ಬಂದು ಹೋಗುತ್ತೆ. ಆಗಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳದೆ ಹೋದರೆ ನಾನೇ ಪ್ರಧಾನಿಯನ್ನು ಭೇಟಿಯಾಗುತ್ತೇನೆ. ಅಗತ್ಯ ಬಿದ್ದರೆ ಪ್ರಧಾನಿ ಮೋದಿ ಅವರಿಗೆ ಇನ್ನೊಂದು ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ವಿಚಾರದ ಬಗ್ಗೆ ಮಾತನಾಡಿ, 370ನೇ ವಿಧಿ ತೆಗೆದಿರುವುದರಿಂದ ಸ್ವಲ್ಪ ಬಿಕ್ಕಟ್ಟು ಉಂಟಾಗಿದೆ. ಕೇಂದ್ರ ಸರ್ಕಾರ ಕಾಶ್ಮೀರ ಜನರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಈ ಬಿಕ್ಕಟ್ಟು ಮುಂದುವರೆಯುತ್ತದೆ. ಕಾಶ್ಮೀರದಲ್ಲಿ ಹೆಚ್ಚು ಸೈನ್ಯ ಇಟ್ಟು ನಿರ್ಬಂಧದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗಿದೆ. ಬಂಧನದಲ್ಲಿ ಇರೋರನ್ನ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು. ಸಹಬಾಳ್ವೆಯಿಂದ ಬಾಳಲು ಕೇಂದ್ರ ಸರ್ಕಾರ ಅನುವು ಮಾಡಿಕೊಡಬೇಕು. ಹಿಂದೂ-ಮುಸ್ಲಿಂ ಎನ್ನುವ ಒಡಕು ಮೂಡದಂತೆ ಕ್ರಮವಹಿಸಬೇಕು. ಸುಮಧುರ ಭಾವನೆ ಮೂಡುವ ವಾತಾವರಣ ಕೇಂದ್ರ ಸರ್ಕಾರ ಸೃಷ್ಟಿ ಮಾಡಬೇಕು. ಇಂತಹ ಬಿಕ್ಕಟ್ಟನ್ನ ಹೆಚ್ಚು ದಿನ ಕೇಂದ್ರ ಸರ್ಕಾರ ಮುಂದುವರಿಸಬಾರದು ಎಂದು ಕೇಂದ್ರ ಸರ್ಕಾರಕ್ಕೆ ದೇವೇಗೌಡರು ಮನವಿ ಮಾಡಿಕೊಂಡರು.
ದೇಶದಲ್ಲಿ ಹಲವು ಸಮಸ್ಯೆಗಳು ಇದೆ. 3 ತಿಂಗಳಲ್ಲಿ 5 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಬೇಸಾಯದ ಬಗ್ಗೆ ಸರಿಯಾದ ಕ್ರಮ ಆಗಿಲ್ಲ. ಕೇಂದ್ರ ಸರ್ಕಾರ ಹೇಳೊದೊಂದು ಮಾಡುವುದು ಮತ್ತೊಂದು ಆಗಿದೆ. ರೈತರು ಸಂಕಷ್ಟದಲ್ಲಿ ಇದ್ದಾರೆ. ಇದನ್ನ ಕೇಂದ್ರ ಸರಿಪಡಿಸಬೇಕು. ಕೇಂದ್ರ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ದೇಶದಲ್ಲಿ ಅನೇಕ ಸಮಸ್ಯೆ ಇದೆ. ಅಪೌಷ್ಟಿಕತೆಯಿಂದ ಮಕ್ಕಳು ಸಾಯುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಧ್ವಜಾರೋಹಣದ ಬಳಿಕ ಜೆಡಿಎಸ್ ಮುಖಂಡ ನಾರಾಯಣರಾವ್ ಮಾತನಾಡಿ, ಈಗಾಗಲೇ ದೇಶದಲ್ಲಿ ಒಮ್ಮೆ ತುರ್ತು ಪರಿಸ್ಥಿತಿ ನೋಡಿದ್ದೇವೆ. ಮತ್ತೊಮ್ಮೆ ಅಂತಹ ಸ್ಥಿತಿ ಬರುವ ಸನ್ನಿವೇಶ ಕಾಣುತ್ತಿದೆ. ಹಾಗೆ ಆಗದಂತೆ ತಡೆಯಬೇಕಿದೆ. ಅದಕ್ಕೆ ದೇವೇಗೌಡರೇ ನೇತೃತ್ವ ವಹಿಸಿಕೊಳ್ಳಬೇಕು. ಎಲ್ಲಾ ರಾಜಕೀಯ ಪಕ್ಷಗಳನ್ನು ಒಂದುಗೂಡಿಸಿ ಹೋರಾಡಬೇಕು. ಈ ಕಾರ್ಯ ದೇವೇಗೌಡರಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ ನೆರೆ ಉಂಟಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಸರಿಯಾಗಿ ಸ್ಪಂಧಿಸಿಲ್ಲ. ರಾಜ್ಯ ಸರ್ಕಾರವೂ ಸೂಕ್ತ ಪರಿಹಾರ ನೀಡಿಲ್ಲ ಎಂದು ಕಿಡಿಕಾರಿದರು. ಬಳಿಕ ಜೆಡಿಎಸ್ ಪಕ್ಷ ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣಿಸಿದೆ. ಈ ಮಾತನ್ನ ಸ್ವತಃ ದೇವೇಗೌಡರೂ ಒಪ್ಪಿಕೊಂಡಿದ್ದಾರೆ. ಅದೆಲ್ಲವನ್ನೂ ಸರಿಪಡಿಸಿಕೊಂಡು ಹೋಗಬೇಕಿದೆ. ದೇವೇಗೌಡರ ಕೈ ಬಲಪಡಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನಲೆಯಲ್ಲಿ ಆಗಸ್ಟ್ 15ರಿಂದ 19ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡಿನಲ್ಲಿ ಗಾಳಿ ಬೀಸುತ್ತಿದ್ದು, ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹಾಗೆಯೇ ಮುಂದಿನ ಐದು ದಿನ ಕರಾವಳಿ ಭಾಗದಲ್ಲಿ ಅತಿಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.
ಪಶ್ಚಿಮಘಟ್ಟ ಪ್ರದೇಶಗಳಲ್ಲೂ ಭಾರೀ ಮಳೆಯಾಗೋ ಮುನ್ಸೂಚನೆ ದೊರಕಿದೆ. ದಕ್ಷಿಣ ಒಳನಾಡಿನಲ್ಲಿ ಕೂಡ 16ರಿಂದ 18ರವರೆಗೆ ಮಳೆಯಾಗಲಿದೆ. ಬೆಂಗಳೂರು, ಕೋಲಾರ, ಮಂಡ್ಯ, ಮೈಸೂರು ತುಮಕೂರು ಹಾಗೂ ಸುತ್ತ ಮುತ್ತಿನ ಪ್ರದೇಶದಲ್ಲಿ ಸಾಧಾರಣ ಮಳೆ ಆಗಲಿದೆ. ಹಾಗೆಯೇ ಬೆಂಗಳೂರಿನಲ್ಲಿ ಒಮ್ಮೊಮ್ಮೆ ಅತಿ ಹೆಚ್ಚು ಮಳೆಯಾಗೋ ಸಾಧ್ಯತೆ ಕೂಡ ಇದೆ ಎಂದು ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು: ಹಲ್ಲೆಗೆ ಮುಂದಾದ ಕೊಲೆ ಆರೋಪಿಗಳಿಗೆ ಮಾದನಾಯಕನಹಳ್ಳಿ ಪೊಲೀಸರು ಕಾಲಿಗೆ ಗುಂಡು ಹೊಡೆದಿದ್ದಾರೆ.
ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿಶೀಟರ್ ಗಳಾಗಿರುವ ಚಂದನ್ ಮತ್ತು ಶರಣ್ ಮೇಲೆ ಮಾದನಾಯಕನಹಳ್ಳಿ ಸಿಪಿಐ ಸತ್ಯನಾರಾಯಣ್ ಅವರು ಗುಂಡು ಹಾರಿಸಿದ್ದಾರೆ.
ಆರೋಪಿಗಳು ಕಳೆದ ಜುಲೈ 23 ರಂದು ಮಂಜುನಾಥ್ ಎಂಬುವರನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಅವರನ್ನು ಕೊಲೆ ಮಾಡಿದ್ದರು. ಈ ಆರೋಪಿಗಳು ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ ಫಾರೆಸ್ಟ್ ಗೇಟ್ ಬಳಿ ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಪೇದೆ ಮನಗುಂಡಿ ಮತ್ತು ಪಿ.ಎಸ್.ಐ ಮುರಳಿ ಅವರು ಮೇಲೆ ಹಲ್ಲೆ ಮಾಡಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ಸಿಪಿಐ ಸತ್ಯನಾರಾಯಣ್ ಆರೋಪಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಆರೋಪಿಗಳು ಹಾಗೂ ಪೊಲೀಸರನ್ನು ಮಾಗಡಿ ರಸ್ತೆಯ ಅನುಪಮ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಮಂತ್ರಿ ಸ್ಥಾನದ ಜೊತೆಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಈಗ ಕೆಎಂಎಫ್ ಪಟ್ಟದ ಮೇಲೆ ಕಣ್ಣಿಟ್ಟಿದ್ದ ರೇವಣ್ಣಗೆ ನಿರಾಸೆಯಾಗಿದೆ.
ಕೆಎಂಎಫ್ ಅಧ್ಯಕ್ಷ ಸ್ಥಾನ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಅವರ ಪಾಲಾಗಿದೆ. ಮೊದಲು ನನಗೆ ಅಸಮಾಧಾನ ಇದ್ದಿದ್ದು ನಿಜ. ಆದರೆ ಈಗ ಅಸಮಾಧಾನ ಇಲ್ಲ. ಕೆಎಂಎಫ್ ಅಧ್ಯಕ್ಷರ ವಿಚಾರದಲ್ಲಿ ರಾಜೀ ಇಲ್ಲ. ಕಾಂಗ್ರೆಸ್ ಅತೀ ಹೆಚ್ಚು ನಿರ್ದೇಶಕರನ್ನ ಹೊಂದಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಈ ಬಾರಿ ಕೆಎಂಎಫ್ ವಿಚಾರದಲ್ಲಿ ರಾಜೀ ಇಲ್ಲವೇ ಇಲ್ಲ. ಸರ್ಕಾರ ಉಳಿಸುವ ನಿಟ್ಟಿನಲ್ಲಿ ಸಿಎಲ್‍ಪಿ(ಕಾಂಗ್ರೆಸ್ ಶಾಸಕಾಂಗ ಸಭೆ) ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಒಂದು ವೇಳೆ ಕೆಎಂಎಫ್ ಅಧ್ಯಕ್ಷ ಸ್ಥಾನ ಕೊಟ್ಟಿಲ್ಲ ಅಂದರೆ ಬೇರೆ ಶಾಸಕರಂತೆ ನನ್ನ ದಾರಿ ನೋಡಿಕೊಳ್ಳುತ್ತೇನೆ ಎಂದು ಭೀಮಾನಾಯ್ಕ್ ಹೇಳಿದ್ದರು.
ಭೀಮಾನಾಯ್ಕ್ ಮಾತಿಗೆ ಸಿಎಂ ಬೆದರಿದ್ದಾರೆ ಎನ್ನಲಾಗಿದೆ. ಹಾಗಾಗಿ ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಅಂದಹಾಗೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಭೀಮಾನಾಯ್ಕ್ ನಡುವೆ ತೀವ್ರ ಫೈಟ್ ಶುರುವಾಗಿತ್ತು.
ಈ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬಳಿ ರೇವಣ್ಣ ಬೇಡಿಕೆ ಇಟ್ಟಿದ್ದರು. ಎಚ್‍ಡಿಡಿ ಅವರೂ ಕೂಡ ಸಮ್ಮತಿ ಸೂಚಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಭೀಮಾನಾಯ್ಕ್ ಅವರಿಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಸಿಎಂ ತಿಳಿಸಿದ್ದಾರೆ.
ಬೆಂಗಳೂರು: ಎರಡು ದಿನಗಳಿಂದ ನಗರದಲ್ಲಿ ಗಾಳಿ ಸಹಿತ ಮಳೆಯಾಗುತ್ತಿದ್ದ ಪರಿಣಾಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ ಮರ ಧರೆಗುರುಳಿತ್ತು. ಆದರೆ ಎರಡು ದಿನಗಳಾದರೂ ಬಿಬಿಎಂಪಿ ಅವರು ಮರವನ್ನು ತೆರವು ಮಾಡಿರಲಿಲ್ಲ. ಇದೀಗ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸುತ್ತಿದ್ದಂತೆ ಮರಗಳನ್ನು ತೆರವು ಮಾಡಿದ್ದಾರೆ.
ನಟ ದರ್ಶನ್ ಮನೆ ಮುಂದೆ 2 ಮರಗಳು ನೆಲಕ್ಕೆ ಉರುಳಿದ್ದವು. ಹೀಗಾಗಿ ಬಿಬಿಎಂಪಿ ಕಂಟ್ರೋಲ್ ರೂಂಗೆ ಫೋನ್ ಮಾಡಿ ಗೋರೂರು ರಾಮಚಂದ್ರಪ್ಪ ದೂರು ನೀಡಿದ್ದರು. ದೂರು ನೀಡಿ 24 ಗಂಟೆ ಕಳೆದಿದ್ದರೂ ಬಿಬಿಎಂಪಿ ಸಿಬ್ಬಂದಿ ಬಂದು ಮರದ ತೆರವು ಕಾರ್ಯ ಮಾಡಿರಲಿಲ್ಲ.
ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದನ್ನು ನೋಡಿ ಎಚ್ಚೆತ್ತ ಅರಣ್ಯ ಘಟಕ ತಕ್ಷಣ ದರ್ಶನ್ ಮನೆ ಮುಂದೆ ಬಂದು ಮರ ತೆರವು ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಗೊರೂರು ಚೆನ್ನಬಸಪ್ಪ ಅವರು, ಬಿಬಿಎಂಪಿಗೆ ನಾನೇ ದೂರು ನೀಡಿದೆ. ಆದರೆ ಶುಕ್ರವಾರ ಪಾಲಿಕೆ ಸಿಬ್ಬಂದಿ ಎಲ್ಲ ಕಡೆ ಮರ ತೆರವು ಮಾಡಿದ್ದರು. ಆದರೆ ದರ್ಶನ್ ಮನೆ ಮುಂದೆ ಯಾಕೆ ಬಿಟ್ಟು ಹೋದರು ಗೊತ್ತಾಗಲಿಲ್ಲ. ಮರ ಬಿದ್ದ ಜಾಗದಲ್ಲಿ ಸಂದಿ ಮಾಡಿಕೊಂಡು ಜನರು ಓಡಾಡುತ್ತಿದ್ದರು ಎಂದು ತಿಳಿಸಿದರು.
20ಕ್ಕೂ ಹೆಚ್ಚು ಸಿಬ್ಬಂದಿಯಿಂದ ಮರ ತೆರವು ಕಾರ್ಯ ಚುರುಕುಗೊಂಡಿದೆ. ಮಂಡ್ಯದಲ್ಲಿ ಸುಮಲತಾ ಬೆನ್ನಿಗೆ ನಿಂತಿದ್ದಕ್ಕೆ ನಟ ದರ್ಶನ್ ಅವರ ಮುಂದೆ ಮರ ಬಿದ್ದರೂ ಬಿಬಿಎಂಪಿ ಸಿಬ್ಬಂದಿ ಮರ ತೆರವು ಕಾರ್ಯ ಮಾಡುತ್ತಿಲ್ಲವೇ ಎಂದು ದರ್ಶನ್ ಅಭಿಮಾನಿಗಳು ಪ್ರಶ್ನಿಸುತ್ತಿದ್ದರು.