Tag: Bangalore

  • ಸಂಪಿಗೆರಸ್ತೆ-ಯಲೇಚನಹಳ್ಳಿ ನಡುವೆ ಮೆಟ್ರೋ ರೈಲು- ರಾಷ್ಟ್ರಪತಿಗಳಿಂದ ಉದ್ಘಾಟನೆ

    ಸಂಪಿಗೆರಸ್ತೆ-ಯಲೇಚನಹಳ್ಳಿ ನಡುವೆ ಮೆಟ್ರೋ ರೈಲು- ರಾಷ್ಟ್ರಪತಿಗಳಿಂದ ಉದ್ಘಾಟನೆ

    ಬೆಂಗಳೂರು: ಸಿಲಿಕಾನ್ ಸಿಟಿ ಜನರ 10 ವರ್ಷಗಳ ಕನಸು ನನಸಾಗಿದೆ. ಬೆಂಗಳೂರಿನ ಹೆಮ್ಮೆಯ ಪ್ರತೀಕವಾದ ನಮ್ಮ ಮೆಟ್ರೋ ಇಂದು ಅಧಿಕೃತವಾಗಿ ಉದ್ಘಾಟನೆಗೊಂಡಿತು.
    ಇಂದು ದಕ್ಷಿಣ ಭಾರತದ ಮೊದಲ ಹಂತದ ನಮ್ಮ ಮೆಟ್ರೋವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಂಜೆ 6 ಗಂಟೆಗೆ ಉದ್ಘಾಟನೆ ಮಾಡಿದ್ದಾರೆ. ನಾಳೆ ಬೆಳೆಗ್ಗೆ 6 ಗಂಟೆಯಿಂದ ಸಾರ್ವಜನಿಕರ ಓಡಾಟಕ್ಕೆ ಮೊದಲ ಹಂತದ ನಮ್ಮ ಮೆಟ್ರೋ ಮಾರ್ಗ ಮುಕ್ತವಾಗಲಿದೆ.

    ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ವಜುಬಾಯಿ ವಾಲಾ, ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು, ಕೆ.ಬಿ. ಕೋಳಿವಾಡ, ಬಿ.ಕೆ. ಶಂಕರಮೂರ್ತಿ, ಮೇಯರ ಪದ್ಮಾವತಿ, ಕೇಂದ್ರ ಸಚಿವರಾದ ಅನಂತಕುಮಾರ ಮತ್ತು ಸದಾನಂದ ಗೌಡ ಸೇರಿದಂತೆ ಅನೇಕ ಗಣ್ಯವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

    ಸಮಯ ಬದಲಾವಣೆ: ಮಹತ್ವದ ನಿರ್ಧಾರವೊಂದರಲ್ಲಿ ಮೆಟ್ರೋ ನಿಗಮ ರೈಲುಗಳ ಓಡಾಟದ ಸಮಯದಲ್ಲಿ ಬದಲಾವಣೆ ಮಾಡಿದೆ. ಸೋಮವಾರದಿಂದ ಹೊಸ ವೇಳಾಪಟ್ಟಿ ಅನ್ವಯವಾಗಲಿದೆ. ಈಗಿರುವ 6 ಗಂಟೆಗೆ ಬದಲು ಬೆಳಗ್ಗೆ 5 ಗಂಟೆಯಿಂದ ಮೆಟ್ರೋ ರೈಲು ತನ್ನ ಸಂಚಾರ ಆರಂಭಿಸಲಿದೆ. ರಾತ್ರಿ 10 ಗಂಟೆ ಬದಲು 11 ಗಂಟೆಯವರೆಗೂ ಸಂಚಾರ ಇರಲಿದೆ. ಕೆಂಪೇಗೌಡ ರೈಲು ನಿಲ್ದಾಣದಿಂದ ನಾಲ್ಕು ಟರ್ಮಿನಲ್ ನಿಲ್ದಾಣಗಳ ಕಡೆಗೆ ರಾತ್ರಿ 11.25ಕ್ಕೆ ಕಡೆಯ ರೈಲು ಸಂಚರಿಸಲಿದೆ. ನಾಗಸಂದ್ರ ಟರ್ಮಿನಲ್‍ಗೆ ರಾತ್ರಿ 10.50ಕ್ಕೆ ಕೊನೆಯ ರೈಲು, ಯಲೇಚಲನಹಳ್ಳಿ ಟರ್ಮಿನಲ್‍ಗೆ 11 ಗಂಟೆಗೆ, ಮೈಸೂರು ರಸ್ತೆಗೆ 11.05ಕ್ಕೆ ಕೊನೆಯ ರೈಲು ಹೊರಡಲಿದೆ.

    ಭಾನುವಾರ ಒಂದು ದಿನ ಮಾತ್ರ ಬೆಳಗ್ಗೆ 5.30ಕ್ಕೆ ರೈಲುಗಳ ಓಡಾಟ ಆರಂಭವಾಗಲಿದೆ. ಇನ್ನು ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಅವಧಿಯಲ್ಲಿ ಪ್ರತಿ ನಾಲ್ಕು ನಿಮಿಷಕ್ಕೊಮ್ಮೆ ರೈಲುಗಳ ಓಡಾಟ ಇರಲಿದೆ. ಕಡಿಮೆ ಇರುವ ಅವಧಿಯಲ್ಲಿ ಪ್ರತಿ 20 ನಿಮಿಷಕ್ಕೊಮ್ಮೆ ರೈಲುಗಳು ಓಡಲಿವೆ. ಸಾಮಾನ್ಯ ಅವಧಿಯಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ಸಂಚರಿಸಲಿವೆ ಎಂದು ಬಿಎಂಆರ್‍ಸಿಎಲ್ ತಿಳಿಸಿದೆ.

    ಮೆಟ್ರೋ ರೈಲಿನ ಅಧಿಕೃತ ಕೆಲಸ ಆರಂಭವಾಗಿದ್ದು ಏಪ್ರಿಲ್ 15 2007 ರಂದು. ಅಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಈ ಯೋಜನೆಗೆ ಚಾಲನೆ ನೀಡಿದ್ರು. ಬಿಎಂಆರ್‍ಸಿಎಲ್ ಈ ಯೋಜನೆಯನ್ನ 2005 ರಲ್ಲೆ ಆರಂಭ ಮಾಡಲು ಯೋಜನೆ ರೂಪಿಸಿಕೊಂಡಿತ್ತು. ಆದ್ರೆ ಸರ್ಕಾರದಲ್ಲಿ ಆದ ಬದಲಾವಣೆಯಿಂದ ಮೆಟ್ರೋ ಕಾಮಗಾರಿಗೆ ಒಪ್ಪಿಗೆ ದೊರೆಯಲು ನಿಧಾನವಾಯ್ತು. ಆದ್ರೆ 2006 ರಲ್ಲಿ ಕೇಂದ್ರ ಸಂಪುಟ ಸಭೆಯಲ್ಲಿ ಅಧಿಕೃತವಾಗಿ ಅನುಮೋದನೆ ಪಡೆದು ಆ ನಂತರ ಬಿಎಂಆರ್‍ಸಿಎಲ್ ತನ್ನ ಕೆಲಸ ಆರಂಭಿಸಿತು.

    ನಮ್ಮ ಮೆಟ್ರೋ ಮೊದಲ ಹಂತ ಎಲ್ಲಿಂದ ಎಲ್ಲಿಗೆ ಓಡುತ್ತೆ ಎಷ್ಟು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೆಟ್ರೋ ಸಂಚಾರ ಮಾಡುತ್ತೆ ಅನ್ನೋದನ್ನ ನೊಡೋದಾದ್ರೆ
    * ಬೈಯಪ್ಪನಹಳ್ಳಿ ಟು ನಾಯಂಡಹಳ್ಳಿ
    * ಯಲೇಚನಹಳ್ಳಿ ಟು ನಾಗಸಂದ್ರ
    * ಮೆಟ್ರೋ ಸಂಚಾರದ ಒಟ್ಟು ದೂರ: 42.3 ಕಿ.ಮೀ
    * ಸುರಂಗ ಮಾರ್ಗದ ಒಟ್ಟು ದೂರ: 8.8 ಕಿ.ಮೀ
    * ಎತ್ತರಿಸಿದ ಮಾರ್ಗದ ಒಟ್ಟು ದೂರ: 33.42 ಕಿ.ಮೀ
    * ಒಟ್ಟು ನಿಲ್ದಾಣ: 40
    * ಒಟ್ಟು ವೆಚ್ಚ: 14,291 ಕೋಟಿ ರೂಪಾಯಿ

    ಒಟ್ಟು 42.3 ಕೀಲೋ ಮೀಟರ್ ದೂರ ಮೆಟ್ರೋ ಸಂಚರಿಸಲಿದೆ. ಇದ್ರಲ್ಲಿ 8.8 ಕಿಲೋ ಮೀಟರ್ ದೂರದವರೆಗೆ ಸುರಂಗ ಮಾರ್ಗವಿದ್ರೆ, 33.42 ಕಿಲೋ ಮೀಟರ್ ದೂರದವರೆಗೆ ಎತ್ತರಿಸಿದ ಮಾರ್ಗದಲ್ಲಿ ಮೆಟ್ರೋ ಸಂಚರಿಸಲಿದೆ. ಒಟ್ಟು 40 ಮೆಟ್ರೋ ನಿಲ್ದಾಣಗಳಿದ್ದು, ಈ ಎಲ್ಲಾ ಪ್ರಾಜೆಕ್ಟ್‍ಗೆ ಇದೂವರೆಗೂ ತಗುಲಿದ ಒಟ್ಟು ವೆಚ್ಚ 14,291 ಕೋಟಿ ರೂಪಾಯಿ.

    ಇನ್ನು ನಮ್ಮ ಮೆಟ್ರೋನ ಪ್ರಮುಖ ಆಕರ್ಷಣೆ ಅಂದ್ರೆ ಅದು ಮೆಜೆಸ್ಟಿಕ್ ನಿಲ್ದಾಣ. ಸುಮಾರು 6 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರೋ ಈ ನಿಲ್ದಾಣದಲ್ಲಿ ಒಂದೇ ಸಮಯದಲ್ಲಿ 70 ಸಾವಿರ ಪ್ರಯಾಣಿಕರು ಬರಬಹುದು. ಸಿಟಿ ರೈಲ್ವೇ ನಿಲ್ದಾಣ, ಬಿಎಂಟಿಸಿ ನಿಲ್ದಾಣ. ಮತ್ತು ಕೆಎಸ್‍ಆರ್‍ಟಿಸಿ ನಿಲ್ದಾಣ ದಿಂದ ನೇರವಾಗಿ ಮೆಜೆಸ್ಟಿಕ್‍ನ ಈ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಕರು ಬರಬಹುದಾದಂತಹ ಸೌಲಭ್ಯವನ್ನು ಇಲ್ಲಿ ಕಲ್ಪಿಸಲಾಗಿದೆ.

    ನಮ್ಮ ಮೆಟ್ರೋ ಮೊದಲ ಹಂತ ಮುಗಿಸಲು 10 ವರ್ಷಗಳ ಸುದೀರ್ಘ ಅವಧಿಯನ್ನು ತಗೆದುಕೊಂಡ ಅಧಿಕಾರಿಗಳು ಎರಡನೇ ಹಂತ ಮತ್ತು 3 ನೇ ಹಂತವನ್ನು 2022ರ ಒಳಗೆ ಮುಗಿಸುತ್ತೇವೆ ಅನ್ನೋ ಭರವಸೆ ನೀಡಿದ್ದಾರೆ.

     

     

     

  • ಪಿಯು ಬೋರ್ಡ್ ಎಡವಟ್ಟಿನಿಂದ ವಿದ್ಯಾರ್ಥಿ ಕನ್ನಡದಲ್ಲಿ ಫೇಲ್- ಉತ್ತರಪತ್ರಿಕೆಯ ಹಾಳೆಗಳೇ ನಾಪತ್ತೆ

    ಪಿಯು ಬೋರ್ಡ್ ಎಡವಟ್ಟಿನಿಂದ ವಿದ್ಯಾರ್ಥಿ ಕನ್ನಡದಲ್ಲಿ ಫೇಲ್- ಉತ್ತರಪತ್ರಿಕೆಯ ಹಾಳೆಗಳೇ ನಾಪತ್ತೆ

    – 2 ಪುಟ ಚೆಕ್ ಮಾಡಿ 17 ಅಂಕ- ಚಿಕ್ಕೋಡಿಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯ ಭವಿಷ್ಯ ಅತಂತ್ರ

    ಬೆಂಗಳೂರು/ಬೆಳಗಾವಿ: ಪಿಯುಸಿ ಪರೀಕ್ಷಾ ಮಂಡಳಿ ಪ್ರತಿಬಾರಿ ಪಿಯುಸಿ ಪರೀಕ್ಷೆಯಲ್ಲಿ ಒಂದಿಲ್ಲೊಂದು ಎಡವಟ್ಟು ಮಾಡ್ತಾನೆ ಇರುತ್ತೆ. ಈ ಬಾರಿ ಅದ್ರೂ ಯಾವುದೇ ಎಡವಟ್ಟು ಇಲ್ಲದೆ ಪರೀಕ್ಷೆ ಮುಗಿಸಿತು ಎನ್ನುವಷ್ಟರಲ್ಲಿ ಇಲ್ಲೊಬ್ಬ ವಿದ್ಯಾರ್ಥಿ ನನಗೆ ಅನ್ಯಾಯವಾಗಿದೆ ಅಂತಾ ಹೇಳಿದ್ದಾನೆ.

    ಮೂಲತಃ ಯಾದಗಿರಿ ಜಿಲ್ಲೆಯ ಖಾಸಗಿ ಕಾಲೇಜಿನ ವಿಜ್ಞಾನ ವಿದ್ಯಾರ್ಥಿ ಅಕ್ಷಯ್ ಕುಮಾರ್ ದ್ವಿತಿಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಫಲಿತಾಂಶ ಏನೋ ಬಂತು. ಎಲ್ಲಾ ವಿಷಯದಲ್ಲೂ ಫಸ್ಟ್ ಕ್ಲಾಸ್. ಅದ್ರೇ ಕನ್ನಡದಲ್ಲಿ ಜಸ್ಟ್ 15 ಅಂಕ. ಕನ್ನಡದಲ್ಲಿ ಫೇಲ್ ಅಗೋ ಛಾನ್ಸೇ ಇಲ್ಲ, 60 ಮೇಲೆ ಮಾಕ್ರ್ಸ್ ಬರಬೇಕಿತ್ತು ಅಂತಾ ಮರುಮೌಲ್ಯಮಾಪನಕ್ಕೆ ಹಾಗೂ ಫೋಟೋ ಕಾಪಿಗೆ ಅರ್ಜಿ ಹಾಕಿದ್ದ.

    ಕನ್ನಡ ಉತ್ತರಪತ್ರಿಕೆಯ ಫೋಟೋ ಕಾಪಿ ಏನೋ ಬಂತು. ಆದ್ರೆ ಫೋಟೋ ಕಾಪಿ ನೋಡಿದ ಹುಡುಗ ತುಂಬಾ ಶಾಕ್ ಆಗಿದ್ದ. ಯಾಕಂದ್ರೆ ಉತ್ತರಪತ್ರಿಕೆಯ 22 ಪುಟಗಳಲ್ಲಿ 3 ರಿಂದ 8ರವರೆಗಿನ ಪುಟಗಳು ನಾಪತ್ತೆಯಾಗಿವೆ. ಅಂದ್ರೆ ಒಟ್ಟು 6 ಪುಟಗಳು ನಾಪತ್ತೆಯಾಗಿವೆ. ಈ ವಿಷಯವನ್ನ ಯಾದಗಿರಿ ಕಾಲೇಜಿನ ಅಧಿಕಾರಿಗಳಿಗೆ ಅಕ್ಷಯ್ ತಿಳಿಸಿದ್ದಾನೆ. ಅಲ್ಲಿಯ ಅಧಿಕಾರಿಗಳು ನೀನು ಪಿಯು ಬೋರ್ಡ್‍ಗೆ ಹೋಗಿ ನಿನ್ನ ಸಮಸ್ಯೆಯನ್ನ ಬಗೆಹರಿಸಿಕೊಳ್ಳಬೇಕು ಅಂತಾ ಹೇಳಿದ್ದಾರೆ.

    ಕಾಣೆಯಾಗಿರೋ ಪುಟಗಳನ್ನ ಹುಡುಕಿ ನನ್ನ ಅಂಕ ನನಗೆ ಬರುವಂತೆ ಮಾಡಿ ಅಂತಾ ಈ ವಿದ್ಯಾರ್ಥಿ ಪಿಯು ಬೋರ್ಡ್‍ಗೆ ಅಲೆದು ಅಲೆದು ಸಾಕಗಿದೆ. ಈಗಾಗಲೇ ಸಿಇಟಿ ಕೌನ್ಸಿಲಿಂಗ್ ಶುರುವಾಗಿದ್ದು, ಡಾಕ್ಯುಮೆಂಟ್ ವೆರಿಫಿಕೇಷನ್ ನಡೀತಿದೆ. ಆದ್ರೂ ಸರಿಯಾದ ರಿಸಲ್ಟ್ ದೊರೆತ್ತಿಲ್ಲ. ಈ ತಪ್ಪಿನಲ್ಲಿ ಕೊಠಡಿ ಮೇಲ್ವಿಚಾರಕ, ಪರೀಕ್ಷಾ ಕೇಂದ್ರದ ಇನ್ಚಾರ್ಜ್, ಜೊತೆಗೆ ಉತ್ತರಪತ್ರಿಕೆ ಮೌಲ್ಯಮಾಪನ ಮಾಡಿದ ಅಧ್ಯಾಪಕ, ಹಾಗೂ ಮೇನ್ ವ್ಯಾಲ್ಯೂವರ್ ನೇರ ಹೊಣೆಯಾಗ್ತಾರೆ.

    ಅತ್ತ ಎಸ್‍ಎಸ್‍ಎಲ್‍ಸಿ ಬೋರ್ಡ್‍ನ ಅವಾಂತರದಿಂಗಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಅಪ್ತಾದ ಶೇಖಜಿ ಎಂಬ ವಿದ್ಯಾರ್ಥಿಯ ಮುಂದಿನ ಭವಿಷ್ಯ ಅತಂತ್ರವಾಗಿದೆ. ಈ ವಿದ್ಯಾರ್ಥಿಯ ಇಂಗ್ಲಿಷ್ ಉತ್ತರ ಪತ್ರಿಕೆಯಲ್ಲಿ ಕೇವಲ 2 ಪುಟಗಳನ್ನ ಚೆಕ್ ಮಾಡಿ ಇನ್ನುಳಿದ ಪುಟಗಳನ್ನ ಹಾಗೆಯೇ ಬಿಟ್ಟಿದ್ದಾರೆ. ಇನ್ನೂ 2 ಪುಟಗಳಿಗೆ ಕೇವಲ 17 ಅಂಕಗಳನ್ನ ನೀಡಿದ್ದು, ವಿದ್ಯಾರ್ಥಿಯನ್ನ ಇಂಗ್ಲಿಷ್ ವಿಷಯದಲ್ಲಿ ಅನುತ್ತೀರ್ಣ ಮಾಡಿದ್ದಾರೆ.

     

    ಇನ್ನುಳಿದ ವಿಷಯಗಳಲ್ಲಿ ವಿದ್ಯಾರ್ಥಿಯು 80ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾನೆ. ಎಸ್‍ಎಸ್‍ಎಲ್‍ಸಿ ಬೋರ್ಡ್‍ನ ಅವಾಂತರದಿಂಗಾಗಿ ಈಗ ಕಾಲೇಜಿನಲ್ಲಿ ದಾಖಲಾತಿ ಸಿಗದೆ ಪರದಾಡುತ್ತಿದ್ದಾನೆ ಶಾಲೆಯಲ್ಲಿ ಆದರ್ಶ ವಿದ್ಯಾರ್ಥಿ ಎನಿಸಿಕೊಂಡಿರುವ ಅಪ್ತಾಬ್ ಈಗ ಮಾನಸಿಕವಾಗಿ ಕುಗ್ಗಿ ಹೊಗಿದ್ದಾನೆ. ಎಸ್‍ಎಸ್‍ಎಲ್‍ಸಿ ಬೋರ್ಡ್‍ನಿಂದ ಉತ್ತರಪತ್ರಿಕೆ ನಕಲು ಪ್ರತಿ ತರಿಸಿಕೊಂಡಾಗ ಬರೀ 2 ಪುಟಗಳನ್ನು ಮಾತ್ರ ಚೆಕ್ ಮಾಡಿ ಇನ್ನುಳಿದ ಪತ್ರಿಕೆಗಳನ್ನ ಚೆಕ್ ಮಾಡದೆ ಹಾಗೆಯೇ ಬಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

    ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಪ್ರತಿಯನ್ನ ಸ್ಥಳೀಯ ಶಿಕ್ಷಕರು ಚೆಕ್ ಮಾಡಿದ್ದು 50ಕ್ಕೂ ಹೆಚ್ಚು ಅಂಕಗಳು ಈ ವಿಧ್ಯಾರ್ಥಿಗೆ ಬರುತ್ತೆ ಅಂತಾ ಹೇಳಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಈಗ ವಿಧ್ಯಾರ್ಥಿ ಪರದಾಡುವಂತಾಗಿದೆ.

     

  • ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿದ ‘ಸಿಬಿಐ ಅಧಿಕಾರಿ’ ವಶಕ್ಕೆ!

    ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿದ ‘ಸಿಬಿಐ ಅಧಿಕಾರಿ’ ವಶಕ್ಕೆ!

    ಬೆಂಗಳೂರು: ಸಿಬಿಐ ಹೆಸರನ್ನು ಹೇಳಿಕೊಂಡು ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿ ಯುವತಿಯರನ್ನ ಕೆಟ್ಟದಾಗಿ ನಡೆಸಿಕೊಂಡಿರುವ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ.

    ಶ್ರೀನಿವಾಸ್ ಮತ್ತು ಅವರ ತಂಡ ತಾವು ದೆಹಲಿಯ ನ್ಯಾಷನಲ್ ಇನ್ವೆಸ್ಟಿಗೇಷನ್ ಕ್ರೈಂ ಟೀಂ ಮತ್ತು ಸಿಬಿಐ ಅಧಿಕಾರಿಗಳು ಎಂದು ಸುಳ್ಳು ಹೇಳಿಕೊಂಡು ಶುಕ್ರವಾರ ಸಂಜೆ 5 ಗಂಟೆಗೆ ಮಸಾಜ್ ಪಾರ್ಲರ್ ಮನೆ ಮೇಲೆ ದಾಳಿ ಮಾಡಿದ್ದಾರೆ.

    ಮಸಾಜ್ ಪಾರ್ಲರ್ ಮನೆಯಲ್ಲಿ ಇದ್ದ ಆರು ಯುವತಿಯರನ್ನ ಇವರು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಇವರು ವಿಡಿಯೋ ಮಾಡೋದನ್ನ ನೋಡಿ ಯುವತಿಯರು ಮುಖ ಮುಚ್ಚಿಕೊಂಡಿದ್ದಾರೆ. ಅದಕ್ಕೆ ಸಿಟ್ಟಾದ ಇವರು ಮುಖ ತೆಗೆಯದಿದ್ದರೆ ಟಿವಿಯಲ್ಲಿ ಹಾಕಿ, ನಡುರಸ್ತೆಯಲ್ಲಿ ಮೆರವಣಿಗೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಲವಂತವಾಗಿ ಯುವತಿಯರು ಮುಖ ಮುಚ್ಚಿಕೊಂಡಿದ್ದರೂ ಕೈ ತೆಗೆದು ಅವರ ಮೇಲೆ ದೌರ್ಜನ್ಯ ನಡೆಸಿದ್ದಾರೆ.

    ಸಾರ್ವಜನಿಕರು ನೇರವಾಗಿ ನುಗ್ಗಿ ದಾಳಿ ನಡೆಸುವಂತಿಲ್ಲ. ಸಂಬಂಧಪಟ್ಟ ಠಾಣೆಗೆ ತಿಳಿಸಿ ನಂತರ ಪೊಲೀಸರು ದಾಳಿ ನಡೆಸಬೇಕಾಗುತ್ತದೆ. ಆದರೆ ಇಲ್ಲಿ ಇವರೇ ಕಾನೂನು ಕೈಗೆ ತೆಗೆದುಕೊಂಡು ದಾಳಿ ನಡೆಸಿದ್ದಕ್ಕೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀನಿವಾಸ್ ಮತ್ತು ಗೌರಮ್ಮಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಹಲವು ವಿಸಿಟಿಂಗ್ ಕಾರ್ಡ್: ಶ್ರೀನಿವಾಸ್ ಹಲವು ಇಲಾಖೆ ಹೆಸರಿನಲ್ಲಿ ವಿಸಿಟಿಂಗ್ ಮಾಡಿಸಿದ್ದಾನೆ. ನ್ಯಾಷನಲ್ ಇನ್ವೆಸ್ಟಿಗೇಷನ್ ಬ್ಯುರೋ, ನ್ಯಾಷನಲ್ ಮಿಡಿಯಾ ಕೌನ್ಸಿಲ್, ಸಿಟಿಜನ್ ರೈಟ್ಸ್ ಪ್ರೊಟೆಕ್ಷನ್ ಕೌನ್ಸಿಲ್ ಹೆಸರಿನ ಕಾರ್ಡ್ ಬಳಸಿ ಬೆದರಿಕೆ ಹಾಕಿದ್ದಾನೆ.

  • ಗಮನಿಸಿ, ಶುಕ್ರವಾರ ಬಂಕ್‍ಗಳಲ್ಲಿ ಪೆಟ್ರೋಲ್ ಸಿಗೋದು ಡೌಟ್

    ಗಮನಿಸಿ, ಶುಕ್ರವಾರ ಬಂಕ್‍ಗಳಲ್ಲಿ ಪೆಟ್ರೋಲ್ ಸಿಗೋದು ಡೌಟ್

    ಬೆಂಗಳೂರು: ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ವಿರೋಧಿಸಿ ಶುಕ್ರವಾರ ರಾಜ್ಯಾಧ್ಯಂತ ಪೆಟ್ರೋಲ್ ಬಂಕ್ ಬಂದ್ ಮಾಡಿ ಪ್ರತಿಭಟನೆ ನಡೆಸಲು ಬಂಕ್ ಮಾಲೀಕರು ಮುಂದಾಗಿದ್ದಾರೆ.

    ಬಂದ್‍ಗೆ ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಬೆಂಬಲ ನೀಡಿದ್ದು, ಶುಕ್ರವಾರ ದೇವನಹಳ್ಳಿ ಪೆಟ್ರೋಲ್ ಟ್ಯಾಂಕರ್ ಟರ್ಮಿನಲ್‍ನಿಂದ ತೈಲವನ್ನು ಖರೀದಿಸದೇ ಇರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ, ದೈನಂದಿನ ದರ ಪರಿಷ್ಕರಣೆಯಿಂದ ಕೇವಲ ಕಂಪನಿಗಳಿಗೆ ಲಾಭವಾಗಲಿದೆ. ದಿನವೊಂದಕ್ಕೆ 4000 ಕೋಟಿ ರೂ. ಲಾಭವಾಗಲಿದೆ. ಡೀಲರ್‍ಗಳಿಂದ ಕಿತ್ತುಕೊಳ್ಳಲು ಇಂಥಾ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದರು.

    ನಿಜವಾದ ಉಪಯೋಗ ನೀಡಬೇಕು ಅಂದರೆ ಬ್ಯಾರಲ್ ದರಕ್ಕೆ ತಕ್ಕಂತೆ ತೆರಿಗೆಯನ್ನು ಕಡಿಮೆ ಮಾಡಬೇಕು. ತೈಲ ಕಂಪೆನಿಗಳ ಈ ನಿರ್ಧಾರವನ್ನು ವಿರೋಧಿಸಿ ಶುಕ್ರವಾರ ಒಂದು ದಿನ ದೇವನಹಳ್ಳಿ ಟ್ಯಾಂಕರ್ ಟರ್ಮಿನಲ್ ನಿಂದ ನಾವು ಪೆಟ್ರೋಲ್, ಡೀಸೆಲ್ ಖರೀದಿ ಮಾಡುವುದಿಲ್ಲ. ಸ್ಟಾಕ್ ಇರುವ ಪೆಟ್ರೋಲ್ ಮಾತ್ರ ಮಾರಾಟ ಮಾಡುತ್ತೇವೆ ಹೊರತು ಖರೀದಿ ಮಾಡುವುದಿಲ್ಲ ಎಂದು ತಿಳಿಸಿದರು.

    ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳುತ್ತೇವೆ. ಶುಕ್ರವಾರ ಎಲ್ಲಿಯವರೆಗೂ ಸ್ಟಾಕ್ ಇರುತ್ತದೋ ಅಲ್ಲಿಯವರೆಗೆ ಮಾರಾಟ ಮಾಡುತ್ತೇವೆ. ಗ್ರಾಹಕರಿಗೆ ಯಾವುದೇ ಸಮಸ್ಯೆ ಮಾಡುವುದಿಲ್ಲ ಎಂದು ರವೀಂದ್ರ ಹೇಳಿದರು.

     

  • ಪಠಾಣ್‍ಕೋಟ್ ಹುತಾತ್ಮ ಯೋಧ ನಿರಂಜನ್‍ಗೆ ರಾಜ್ಯ ಸರ್ಕಾರದಿಂದ ಅವಮಾನ

    ಪಠಾಣ್‍ಕೋಟ್ ಹುತಾತ್ಮ ಯೋಧ ನಿರಂಜನ್‍ಗೆ ರಾಜ್ಯ ಸರ್ಕಾರದಿಂದ ಅವಮಾನ

    ಬೆಂಗಳೂರು: ಕರುನಾಡ ಮಣ್ಣಿನ ವೀರ ಯೋಧ ಹುತಾತ್ಮ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಸಮಾಧಿಯಲ್ಲೂ ರಾಜಕೀಯದಾಟ, ರಸ್ತೆಗೆ ಯೋಧನ ಹೆಸರಿಡಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಚಿವರೇ ಅಡ್ಡ, ಬೆಂಗಳೂರಿನ ವೀರ ಯೋಧನಿಗೆ ಕನ್ನಡ ಮಣ್ಣಿನಲ್ಲೇ ಅವಮಾನ.

    ಹೌದು. ಪಂಜಾಬಿನಲ್ಲಿರುವ ವಾಯುನೆಲೆ ಪಠಾಣ್ ಕೋಟ್‍ನಲ್ಲಿ ಲೆಫ್ಟಿನೆಂಟ್ ನಿರಂಜನ್ ಎದೆಯುಬ್ಬಿಸಿ ಉಗ್ರರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ್ದರು. ಕನ್ನಡ ಮಣ್ಣಿನ ಯೋಧ, ನಮ್ಮ ಬೆಂಗಳೂರಿನ ಹೆಮ್ಮೆಯ ನಿರಂಜನ್ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟರು.

    ಆದರೆ ನಮ್ಮ ನೀಚ ರಾಜಕೀಯ ವ್ಯವಸ್ಥೆ ನಿರಂಜನ್ ಹೆಸರನ್ನು ರಸ್ತೆಗೆ ಇಡುವುದಕ್ಕೆ ರಾಜಕೀಯದಾಟ ಆಡುತ್ತಿದೆ. ದೊಡ್ಡ ಬೊಮ್ಮಸಂದ್ರ ಹೆಬ್ಬಾಗಿಲಿನಿಂದ ವಿದ್ಯಾರಣ್ಯಪುರದ ನಂಜಪ್ಪ ವೃತ್ತದವರೆಗಿನ ಮುಖ್ಯರಸ್ತೆಗೆ ನಿರಂಜನ್ ಹೆಸರು ಇಡೋದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ರು. ಅಂತಿಮ ತೀರ್ಮಾನವೂ ಆಗಿತ್ತು.

    ಈ ಮಧ್ಯೆ ಇದಕ್ಕಿದ್ದ ಹಾಗೆ ಕೃಷಿ ಸಚಿವ ಕೃಷ್ಣಬೈರೇಗೌಡರು ಯೋಧನ ಹೆಸರು ಬೇಡ, ಸ್ವಾತಂತ್ರ್ಯ ಹೋರಾಟಗಾರ ಪೇಟಾ ಸಿದ್ದಪ್ಪನ ಹೆಸರು ಇಡಿ ಎಂದು ಬಿಬಿಎಂಪಿಗೆ ಆದೇಶ ಕೊಟ್ಟು ಪತ್ರ ಬರೆದಿದ್ದಾರೆ. ಅಸಲಿಗೆ ಈ ಹೆಸರಿನ ಸ್ವಾತಂತ್ರ್ಯ ಹೋರಾಟಗಾರರು ಯಾರು ಇಲ್ಲ ಎಂದು ದೊರೆಸ್ವಾಮಿಯೇ ಹೇಳಿದ್ದಾರಂತೆ. ಆದ್ರೆ ಮಿನಿಸ್ಟರ್ ಮಾತನ್ನು ಪಾಲಿಸೋದಕ್ಕೆ ಮೇಯರ್ ಅವರು ಮುಂದಾಗುತ್ತಿದ್ದಾರೆ ಎಂದು ನಿರಂಜನ್ ಸ್ನೇಹಿತ ಶಶಾಂಕ್ ಹೇಳಿದ್ದಾರೆ.

    ಶೌರ್ಯ ಚಕ್ರ ಪ್ರಶಸ್ತಿ ವಾಪಾಸ್:
    ಹರ್ಯಾಣ ಸರ್ಕಾರ ನಿರಂಜನ್ ಅವರ ಹೆಸರಿನಲ್ಲಿ ಆಡಿಟೋರಿಯಂ ಸ್ಥಾಪನೆ ಮಾಡಿದೆ. ಆದರೆ ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಚಿವರಿಗೆ ನಿಜಕ್ಕೂ ಮಾನ ಮರ್ಯಾದೆ ಇಲ್ಲ, ನಿರಂಜನ್ ಹೆತ್ತವರು ಈ ಬೆಳವಣಿಗೆ ನೋಡಿ ಕಣ್ಣೀರಿಡುತ್ತಿದ್ದಾರೆ. ಕೇಂದ್ರ ಸರ್ಕಾರ ನಿರಂಜನ್‍ಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಿದೆ. ಆದ್ರೇ ನಮ್ಗೆ ಈಗ ಬೇಸರವಾಗಿದೆ, ಇದನ್ನು ವಾಪಾಸ್ ಮಾಡುವ ಬಗ್ಗೆಯೂ ಯೋಚನೆ ಮಾಡುತ್ತೇವೆ ಅಂತಾ ಶಶಾಂಕ್ ಹೇಳಿದ್ದಾರೆ.

    ನಿರಂಜನ್ ಯಾರು?
    2016ರ ಜನವರಿ 1 ಮತ್ತು 2ರ ನಡುರಾತ್ರಿಯಲ್ಲಿ ಉಗ್ರರು ಪಠಾಣ್‍ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದಾಗ, ಎನ್‍ಎಸ್‍ಜಿ ಯೋಧರನ್ನು ಅಲ್ಲಿಗೆ ಕಳುಹಿಸಲಾಯಿತು. ಎನ್‍ಎಸ್‍ಜಿ ತಂಡದಲ್ಲಿ ಕರ್ನಾಟಕದ ನಿರಂಜನ್ ಅವರೂ ಇದ್ದರು. ದಾಳಿ ಎಸಗಿದ್ದ ಉಗ್ರನ ಬಳಿಯಿದ್ದ ಗ್ರೆನೇಡ್ ನಿಷ್ಕ್ರಿಯಗೊಳಿಸಲು ನಿರಂಜನ್ ಮುಂದಾಗಿದ್ದ ವೇಳೆ ಅದು ಸ್ಫೋಟಗೊಂಡಿತ್ತು. ಗ್ರೆನೇಡ್ ಸ್ಫೋಟದಿಂದಾಗಿ ಅವರ ಶ್ವಾಸಕೋಶಗಳು ಒಡೆದಿದ್ದವು. ಆಸ್ಪತ್ರೆಗೆ ಸಾಗಿಸುವ ಮುನ್ನವೇ ನಿರಂಜನ್ ಹುತಾತ್ಮರಾಗಿದ್ದರು. ನಿರಂಜನ್ ಅವರು ಅಮೆರಿಕದ ಎಫ್‍ಬಿಐನಿಂದ ತರಬೇತಿ ಪಡೆದಿದ್ದರು. ಪಾಲಕ್ಕಾಡ್ ಜಿಲ್ಲೆಯ ಮುನ್ನರಾರ್ ಕಾಡ್ ಮೂಲದ ನಿರಂಜನ್, ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲೇ. 40 ವರ್ಷದ ಹಿಂದೆಯೇ ಅವರ ಕುಟುಂಬವು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿತ್ತು.

     

     

     

  • ಸ್ನೇಹಿತನಿಂದ ಹೆಂಡ್ತಿ ಸೀರೆ ಎಳೆಸಿ ಪತಿಯಿಂದಲೇ ಮಾನಭಂಗಕ್ಕೆ ಯತ್ನ!

    ಸ್ನೇಹಿತನಿಂದ ಹೆಂಡ್ತಿ ಸೀರೆ ಎಳೆಸಿ ಪತಿಯಿಂದಲೇ ಮಾನಭಂಗಕ್ಕೆ ಯತ್ನ!

    ಬೆಂಗಳೂರು: ಕಟ್ಟಿಕೊಂಡ ಹೆಂಡತಿ ಮೇಲೆ ಯಾರಾದರೂ ಕಣ್ಣು ಹಾಕಿದ್ರೆ ಅವರ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಅಂತದ್ರಲ್ಲಿ ಪಾಪಿ ಪತಿಯೊಬ್ಬ ಸ್ನೇಹಿತನ ಜೊತೆ ಸೇರಿ ಕೈ ಹಿಡಿದ ಧರ್ಮಪತ್ನಿಯ ಮಾನಭಂಗಕ್ಕೆ ಯತ್ನಿಸಿದ್ದಾನೆ.

    ಬೆಂಗಳೂರಿನ ಏರ್‍ಪೋರ್ಟ್ ಬಳಿಯ ಸಾದಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದ್ದು, ಈ ಘಟನೆಯ ಸೂತ್ರದಾರ ಮುನಿರಾಜು. ಈತ ಮೊದಲ ಮದುವೆಯಾಗಿ 18 ವರ್ಷಗಳೇ ಕಳೆದಿತ್ತು. ಆದ್ರೆ ಮೊದಲ ಹೆಂಡತಿಗೆ ಗೊತ್ತಾಗದ ಹಾಗೆ ಮತ್ತೊಂದು ಮದುವೆ ಮಾಡಿಕೊಂಡಿದ್ದ.

    ಕಳೆದ ಮೂರು ದಿನಗಳ ಹಿಂದೆ ಸ್ನೇಹಿತನ ಜೊತೆ ಮುನಿರಾಜ ತನ್ನ ಮೊದಲ ಹೆಂಡತಿಯ ಮನೆಗೆ ಬಂದಿದ್ದಾನೆ. ಚೆನ್ನಾಗಿ ಕುಡಿದು ಸ್ನೇಹಿತನ ಜೊತೆಯಲ್ಲಿ ಹಾಸಿಗೆ ಹಂಚಿಕೊಳ್ಳುವಂತೆ ಪಾಪಿ ಪತಿ ಹೇಳಿದ್ದಾನೆ. ಆದರೆ ಈ ಮಾತು ಪತ್ನಿಯನ್ನ ಕೆರಳಿಸಿದೆ. ಇದಕ್ಕೆ ಬಿಲ್‍ಕುಲ್ ಒಪ್ಪದ ಪತ್ನಿಯನ್ನ ಪತಿ ಹಾಗು ಆತನ ಸ್ನೇಹಿತ ಸೇರಿ ಸೀರೆ ಹಿಡಿದು ಎಳೆದಾಡಿದ್ದಾರೆ. ಅಲ್ಲದೇ ಕಾಮುಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

    ಈ ವೇಳೆ ತಾಯಿಯ ಸಹಾಯಕ್ಕೆ ಬಂದ ಮಕ್ಕಳನ್ನು ಇದೇ ನೀಚರು ಥಳಿಸಿದ್ದಾರೆ. ಮಕ್ಕಳ ಕೂಗಾಟ ಕೇಳಿದ ಸ್ಥಳೀಯರು ಮನೆ ಬಳಿ ಬಂದು ಆರೋಪಿಗಳಾದ ಮುನಿರಾಜು ಆತನ ಸ್ನೇಹಿತರಾದ ರವಿ ಮತ್ತು ಸುಬ್ರಮಣಿಯನ್ನ ಬಂಧಿಸಿದ್ದಾರೆ.

    ಸದ್ಯ ಬೆಂಗಳೂರು ಏರ್‍ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸ್ರು ಆರೋಪಿಗಳ ವಿಚಾರಣೆ ನಡೆಸ್ತಿದ್ದಾರೆ.

    https://www.youtube.com/watch?v=a9QGXgvv6kM

     

  • ಖೋಟಾ ನೋಟು ದಂಧೆ ನಡೆಸುತ್ತಿದ್ದ ಸಹನಟಿ ಜಯಮ್ಮ ಅರೆಸ್ಟ್

    ಖೋಟಾ ನೋಟು ದಂಧೆ ನಡೆಸುತ್ತಿದ್ದ ಸಹನಟಿ ಜಯಮ್ಮ ಅರೆಸ್ಟ್

    ಬೆಂಗಳೂರು: 2000 ರೂ. ಮುಖಬೆಲೆಯ ನೋಟುಗಳ ಖೋಟಾನೋಟು ದಂಧೆ ನಡೆಸುತ್ತಿದ್ದ ಸಹನಟಿ ಜಯಮ್ಮ ಹಾಗು ಆಕೆಯ ಸಹಾಯಕ ಎನ್ನಲಾದ ಆಟೋ ಡ್ರೈವರ್ ಗೋವಿಂದರಾಜುನನ್ನು ಪೊಲೀಸರು ಬಂಧಿಸಿದ್ದಾರೆ.

    ನಿರ್ಮಾಪಕರು, ಕೆಲವು ನಟ- ನಟಿಯರೇ ಖೋಟಾನೋಟು ಕೊಟ್ಟು ಚಲಾವಣೆ ಮಾಡ್ತಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಜಯಮ್ಮಳ ಇಂಚಿಂಚು ಮಾಹಿತಿ ಕಲೆ ಹಾಕುತ್ತಿದ್ದಾರೆ. ಜಯಮ್ಮ ಫೋನ್‍ನಲ್ಲಿದ್ದ ನಂಬರ್‍ಗಳನ್ನ ಹಿಡಿದು ಜಾಲಾಡುತ್ತಿದ್ದಾರೆ.

    ಸಿಕ್ಕಿಬಿದ್ದಿದ್ದು ಹೇಗೆ?: ನೆಲಮಂಗಲದ ದಾಬಸ್‍ಪೇಟೆ ಬಳಿ ಖೋಟಾನೋಟು ಚಲಾಯಿಸುತ್ತಿದ್ದಾಗ ಅನುಮಾನ ಬಂದ ಅಂಗಡಿಯವರು ಈಕೆಯನ್ನ ಪ್ರಶ್ನೆ ಮಾಡಿದ್ರು. ಆದ್ರೆ ಈ ಜಯಮ್ಮ ಅಲ್ಲಿಂದ ಕಾಲ್ಕಿತ್ತಳು. ಕೊನೆಗೆ ಜನ ಈಕೆಯ ಬೆನ್ನತ್ತಿ ಹಿಡಿದಾಗ 2 ಸಾವಿರ ರೂ. ಮುಖಬೆಲೆಯ 24 ಖೋಟಾನೋಟುಗಳು ಸಿಕ್ಕಿದೆ. ತಕ್ಷಣ ಸರ್ವಜನಿಕರು ದಾಬಸ್‍ಪೇಟೆ ಪೊಲೀಸರನ್ನ ಕರೆಸಿ ಈಕೆಯನ್ನ ಅವರ ವಶಕ್ಕೆ ನೀಡಿದ್ದಾರೆ. ಈ ಕೃತ್ಯದ ವಿಡಿಯೋವನ್ನ ಅಲ್ಲಿನ ಸಾರ್ವಜನಿಕರು ಪಬ್ಲಿಕ್ ಟಿವಿಗೆ ವಾಟ್ಸಪ್ ಮೂಲಕ ರವಾನಿಸಿದ್ದರು.

    ಈಕೆ ಖೋಟಾನೋಟು ಚಲಾವಣೆಯಲ್ಲಿದ್ದಾಗಲೇ ರೆಡ್‍ಹ್ಯಾಂಡಾಗಿ ಬುಧವಾರದಂದು ಸಿಕ್ಕಿಬಿದ್ದಿದ್ದಾಳೆ. ಕೊನೆಗೆ ತಪ್ಪಾಯ್ತು, ಕಾಲಿಡ್ಕೋತೀನಿ, ನಿಮ್ಮಕ್ಕ ಅಂತಾ ತಿಳ್ಕೊಳಿ ಅಂತ ಗೋಗರೆದಿದ್ದಾಳೆ. ಪೊಲೀಸರಿಗೆ ಹೇಳ್ಬೇಡಿ ಅಂತ ಜನರನ್ನ ಯಾಮಾರಿಸೋ ಯತ್ನ ಮಾಡಿದ್ದಾಳೆ.

    https://www.youtube.com/watch?v=uscmCy4cZN0

     

  • “ನಮ್ಮ ಊರು ಬೆಂಗಳೂರು, ಸಖತ್ ಕೂಲು”- ಹಳೇ ಬೆಂಗ್ಳೂರನ್ನ ನೆನಪಿಸೋ ಈ ವಿಡಿಯೋ ನೋಡಿ

    “ನಮ್ಮ ಊರು ಬೆಂಗಳೂರು, ಸಖತ್ ಕೂಲು”- ಹಳೇ ಬೆಂಗ್ಳೂರನ್ನ ನೆನಪಿಸೋ ಈ ವಿಡಿಯೋ ನೋಡಿ

    ಬೆಂಗಳೂರು: ನೀವು ಬೆಂಗ್ಳೂರಲ್ಲೇ ಹುಟ್ಟಿ ಬೆಳೆದವರಾಗಿದ್ರೆ ಅಥವಾ ಬಹಳ ವರ್ಷಗಳಿಂದ ಬೆಂಗ್ಳೂರಲ್ಲೇ ನೆಲೆಸಿದ್ರೆ ಈ ವಿಡಿಯೋ ನಿಮಗೆ ಹಳೇ ಬೆಂಗ್ಳೂರನ್ನ, ಅದರ ಸೊಬಗನ್ನ ನೆನಪಿಸೋದ್ರಲ್ಲಿ ಡೌಟಿಲ್ಲ.

    ಯುವತಿಯೊಬ್ಬರು ಬೆಂಗ್ಳೂರಿನಿಂದ ಲಂಡನ್‍ಗೆ ಹಾರೋ ಮುನ್ನ ಒಮ್ಮೆ ತನ್ನ ಪ್ರೀಮಿಯರ್ ಪದ್ಮಿನಿ ಕಾರಿನಲ್ಲಿ ನಗರಪ್ರದಕ್ಷಿಣೆ ಮಾಡೋ ವಿಡಿಯೋ ಇದು. ಈಕೆಗೆ ಬೆಂಗ್ಳೂರು ಕೇವಲ ನಗರವಲ್ಲ, ಒಂದು ಬಾಂಧವ್ಯ. ಬೆಂಗ್ಳೂರು ಇಸ್ ಎ ಸಿಟಿ ಆಫ್ ಅಟ್ಯಾಚ್‍ಮೆಂಟ್ ಎಂತಲೇ ವಿಡಿಯೋ ಆರಂಭವಾಗುತ್ತೆ.

    ಬೆಂಗ್ಳೂರಿನ ಪ್ರಖ್ಯಾತ ಎಂಟಿಆರ್ ರೆಸ್ಟೊರೆಂಟ್‍ನಿಂದ ಹಿಡಿದು ಚಿಕ್ಕ ಚಿಕ್ಕ ಗಲ್ಲಿಗಳಿಗೊಮ್ಮೆ ಭೇಟಿ. ವಿಧಾನಸೌಧ, ಎಂಜಿ ರೋಡ್, ಟೌನ್ ಹಾಲ್, ಲಾಲ್‍ಬಾಗ್ ಹೀಗೆ ಬೆಂಗ್ಳೂರಿನ ಎಲ್ಲಾ ಪ್ರಮುಖ ಸ್ಥಳಗಳನ್ನ, ಅದರ ವೈಭವವನ್ನ ಈ ವಿಡಿಯೋ ಸಾರುತ್ತೆ. ಅಲ್ಲದೆ ಈ ವಿಡಿಯೋದಲ್ಲಿ ಹಳೇ ಬೆಂಗಳೂರಿನ ಚಿತ್ರಣಗಳೂ ಇದ್ದು, ನಿಮ್ಮನ್ನ ಆ ಹಳೇ ದಿನಗಳಿಗೆ ಕರೆದುಕೊಂಡು ಹೋಗುತ್ತೆ. “ನಮ್ಮ ಊರು ಬೆಂಗಳೂರು…. ಸಖತ್ ಕೂಲು..” ಅನ್ನೋ ಸಾಲುಗಳು ಇದು ನಮ್ಮೂರು ಅನ್ನೋ ಹೆಮ್ಮೆಯ ಭಾವ ಮೂಡಿಸುತ್ತೆ.

    ಫ್ಲಾಶ್ ಫ್ರೇಮ್ ವಿಶುವಲ್ಸ್ ಅಕಾಡಮಿ ಆಫ್ ಫಿಲ್ಮ್ ಅಂಡ್ ಟೆಲಿವಿಶನ್‍ನವರು ನಿರ್ಮಾಣ ಮಾಡಿರೋ ಈ ಬೆಂಗ್ಳೂರು ಹಾಡು ಈಗಾಗಲೇ 98 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು 6 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

    ಬೆಂಗಳೂರು ತುಂಬಾ ಬದಲಾಗಿದೆ ಅಂತ ನಾವು ಯಾವಾಗಲೂ ದೂರುತ್ತಿರುತ್ತೇವೆ. ಆದ್ರೆ ವಿಡಿಯೋದಲ್ಲಿ ಹಳೇ ಹಾಗೂ ಹೊಸ ಬೆಂಗಳೂರಿನ ದೃಶ್ಯಗಳನ್ನ ನೋಡಿದಾಗ, ಬದಲಾಗಿರೋದು ಬೆಂಗ್ಳೂರಲ್ಲ, ಜನರಿಂದಲೇ ಈ ರೀತಿ ಆಗಿದೆ ಅನ್ನೋದು ಕಾಣುತ್ತೆ. ನಾವು ಬೆಂಗ್ಳೂರಿನ ಒಳ್ಳೇ ಅಂಶಗಳನ್ನ ತೋರಿಸಲು ಬಯಸಿದ್ವಿ ಅಂತ ವಿಡಿಯೋ ನಿರ್ಮಾಣ ಮಾಡಿರೋ ಕೀರ್ತಿ ಕುಮಾರ್ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

    ನೀವೂ ಒಮ್ಮೆ ಈ ವಿಡಿಯೋ ನೋಡಿ…. ರಿವೈಂಡ್ ಮೋಡ್‍ನಲ್ಲಿ ಬೆಂಗಳೂರು ಪ್ರದಕ್ಷಿಣೆ ಮಾಡಿದ ಅನುಭವವಾಗುತ್ತೆ.

    https://www.facebook.com/ffvacademy/videos/1589373407739350/

     

  • ಮದುವೆಯಾಗಿ 10 ವರ್ಷವಾದ್ರೂ ಹತ್ರಕ್ಕೆ ಬಾರದ ಪತಿಯ ವಿರುದ್ಧ ದೂರು ದಾಖಲು

    ಮದುವೆಯಾಗಿ 10 ವರ್ಷವಾದ್ರೂ ಹತ್ರಕ್ಕೆ ಬಾರದ ಪತಿಯ ವಿರುದ್ಧ ದೂರು ದಾಖಲು

    ಬೆಂಗಳೂರು: ನನ್ನ ಪತಿಗೆ ಪುರಷತ್ವವಿಲ್ಲ ಎಂದು ಗೃಹಿಣಿಯೊಬ್ಬರು ನಗರದ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಮೇರಿ (ಹೆಸರು ಬದಲಾಯಿಸಿದೆ) ಎಂಬ ಮಹಿಳೆ ಪತಿ ಆಂಟೋನಿ ಪ್ರವೀಣ ವಿರುದ್ಧ ದೂರು ದಾಖಲಿಸಿದ್ದಾರೆ. ಮದುವೆಯಾಗಿ ಹತ್ತು ವರ್ಷವಾದರೂ ಪತಿ ನನ್ನ ಮೈ ಮುಟ್ಟಿಲ್ಲ. ದೈಹಿಕ ಸಂಪರ್ಕಕ್ಕೆ ಕರೆದರೆ ಜಗಳದ ನೆಪ ಮಾಡಿ ಎಸ್ಕೇಪ್ ಆಗ್ತಾನೆ ಎಂದು ದೂರಿನಲ್ಲಿ ಹೇಳಿದ್ದಾರೆ.

    ಮೇರಿ ಮತ್ತು ಆಂಟೋನಿ 2007 ರಲ್ಲಿ ಬೆಂಗಳೂರಿನಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ ಮೈಕೋ ಲೇಔಟ್ ನ ಸಾರ್ವಭೌಮ ನಗರದಲ್ಲಿ ವಾಸವಾಗಿದ್ದರು. ಮದುವೆಯ ನಂತರ ಮೇರಿ ಅವರು ಫರ್ಟಿಲಿಟಿ ಚಿಕಿತ್ಸೆ ಪೆಡದು ಮಗು ಪಡೆದಿದ್ದಾರೆ. ಗಂಡನಿಗೆ ಪುರಷತ್ವ ಇಲ್ಲದಿರುವುದು ಗೊತ್ತಿದ್ರೂ ವಂಚಿಸಿ ಮದುವೆ ಆಗಿದ್ದಾನೆ. ಅಲ್ಲದೇ ಅನುಮಾನದಿಂದ ಗಂಡ ಚಿತ್ರಹಿಂಸೆ ನೀಡುತ್ತಿದ್ದಾನೆ ಎಂದು ಪ್ರಕರಣ ದಾಖಲಿಸಿದ್ದಾರೆ.

     

  • ಕಾಂಗ್ರೆಸ್ ಸಹವಾಸ ಮಾಡಿದವ್ರು ಧೂಳಿಪಟ ಆಗ್ತಾರೆ: ಅನಂತ್‍ಕುಮಾರ್

    ಕಾಂಗ್ರೆಸ್ ಸಹವಾಸ ಮಾಡಿದವ್ರು ಧೂಳಿಪಟ ಆಗ್ತಾರೆ: ಅನಂತ್‍ಕುಮಾರ್

    ಬೆಂಗಳೂರು: ಅಖಿಲೇಶರಿಗೆ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಕಾಂಗ್ರೆಸ್ ಜೊತೆ ಹೋಗಬೇಡ ಅಂದ್ರು ಕೇಳಲಿಲ್ಲ. ಈಗ ಯಾರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಸಹವಾಸ ಮಾಡುತ್ತಾರೋ ಅವರು ಧೂಳಿಪಟ ಆಗ್ತಾರೆ ಎಂದು ಅಖಿಲೇಶ್ ಯಾದವ್‍ರ ವಿಚಾರದಲ್ಲಿ ಸಾಬೀತಾಗಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅನಂತ್‍ಕುಮಾರ್ ಅವರು ಪಂಚ ರಾಜ್ಯ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಉತ್ತರಪ್ರದೇಶ ರಾಜ್ಯದಲ್ಲಿ ನಮ್ಮದು ಅಭೂತಪೂರ್ವ ಗೆಲವು. ಜನರು ಮೋದಿಯವರ ಆಡಳಿತವನ್ನು ಒಪ್ಪಿದ್ದಾರೆ. ಭ್ರಷ್ಟಾಚಾರ ರಹಿತ, ಜನರ ಕಲ್ಯಾಣ ನಮ್ಮ ಪಕ್ಷದ ಉದ್ದೇಶ. ಹಾಗಾಗಿ ಜನರು ಜಾತಿ- ಬೇಧ ಮರೆತು ಮೋದಿ ಅವರ ಆಡಳಿತಕ್ಕೆ ಮನಸೋತು ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.

    ಸಮಾಜವಾದಿ ಪಾರ್ಟಿ ಹಾಗು ಬಹುಜನ ಸಮಾಜವಾದಿ ಪಾರ್ಟಿಗಳು ಗೂಂಡಾಗಿರಿಗೆ, ಭ್ರಷ್ಟಾಚಾರಕ್ಕೆ ಸಂಕೇತವಾಗಿವೆ. ನಮಗೆ ಗೂಂಡಾಗಿರಿ ಆಡಳಿತ ಹಾಗೂ ಭ್ರಷ್ಟಾಚಾರ ಆಡಳಿತ ಬೇಡ, ನಮಗೆ ಒಳ್ಳೆಯ ಆಡಳಿತ, ಜನಕಲ್ಯಾಣ ಆಡಳಿತದ ಪಕ್ಷ ಬೇಕೆಂದು ಉತ್ತರಾಖಂಡ್ ಮತ್ತು ಉತ್ತರಪ್ರದೇಶದ ಜನರು ಮೋದಿ ನೇತೃತ್ವದ ಪಕ್ಷವನ್ನು ಮುನ್ನಡಿಸುವ ಮೂಲಕ ವಿಜಯಪತಾಕೆ ಹಾರುವಂತೆ ಮಾಡಿದ್ದಾರೆ ಎಂದು ಅನಂತ್ ಕುಮಾರ್ ಪಕ್ಷದ ಗೆಲುವುನ್ನ ಹಂಚಿಕೊಂಡರು.

    2014ರಲ್ಲಿ ಮೋದಿ ಹಾಗು ಅಮೀತ್ ಶಾ ನೇತೃತ್ವದಲ್ಲಿ ಉತ್ತರಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ 71 ರಲ್ಲಿ ಗೆಲುವು ಸಾಧಿಸಿದ್ದೇವು. ಈಗ ಅದೇ ರೀತಿ ವಿಧಾನಸಭಾ ಚುನಾವಣೆಯಲ್ಲಿ ಮುನ್ನಡೆಯನ್ನು ಸಾಧಿಸಿದ್ದೇವೆ ಎಂದು ಹೇಳಿದರು.

    ಕುಟುಂಬ ರಾಜಕಾರಣ ಇಲ್ಲ: ನಮ್ಮದು ಏಕಶಿಲೆಯ ಪಾರ್ಟಿ, ಪ್ರಜಾತಾಂತ್ರಿಕ ಪಾರ್ಟಿ, ಪಕ್ಷ ಕಲೆ ನಿಯಮಗಳಿಗೆ ಬದ್ಧವಾಗಿದೆ. ಕಾಂಗ್ರೆಸ್‍ನ ಹಾಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರೈವೇಟ್ ಲಿಮೆಟೆಡ್ ಅಲ್ಲ ಮತ್ತು ಸಮಾಜವಾದಿ ಪಾರ್ಟಿ ಅಂತೆ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಪ್ರೈವೇಟ್ ಲಿಮಿಟೆಡ್ ಅಲ್ಲ. ನಮ್ಮಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದರು.

    ಬಿಎಸ್‍ವೈ ಸಿಎಂ: ಕರ್ನಾಟಕದಲ್ಲಿಯೂ ಸಹ ಮುಂದಿನ ಚುನಾವಣೆಯಲ್ಲಿ ನಾವು ಮೋದಿ ಹಾಗು ರಾಜ್ಯಧ್ಯಾಕ್ಷ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ. ಸಿದ್ದರಾಮಯ್ಯನವರು ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅವರ ಪಕ್ಷದಲ್ಲಿ ಭ್ರಷ್ಟಾಚಾರ ಬೇರೂರಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚಿಸಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.