Tag: Bangalore

  • ಗೌರಿ ಲಂಕೇಶ್ ಹತ್ಯೆಗೂ ನಮಗೂ ಯಾವುದೇ ಸಂಬಂಧವಿಲ್ಲ: ಸನಾತನ ಸಂಸ್ಥೆ

    ಗೌರಿ ಲಂಕೇಶ್ ಹತ್ಯೆಗೂ ನಮಗೂ ಯಾವುದೇ ಸಂಬಂಧವಿಲ್ಲ: ಸನಾತನ ಸಂಸ್ಥೆ

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸನಾತನ ಸಂಸ್ಥೆ ಹೇಳಿದೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚೇತನ್, ಗೌರಿ ಹತ್ಯೆ ಕೇಸಿನಲ್ಲಿ ಬಲಪಂಥೀಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇತರೆ ಹಿಂದೂ ಸಂಘಟಕರ ಹತ್ಯೆಯ ಹಿಂದಿದ್ದಾರೆ ಎನ್ನುವ ಗಾಳಿಸುದ್ದಿಯೂ ಕೇಳಿಬರುತ್ತಿವೆ. ಸನಾತನ ಸಂಸ್ಥೆಯ ಆಶ್ರಮದ ಒಳಗೆ ಇದುವರೆಗೂ ಯಾರು ಬಂದಿಲ್ಲ. ಗೌರಿ ಹತ್ಯೆಗೂ, ನಮಗೂ, ಯಾವುದೇ ರೀತಿಯ ಸಂಬಂಧವಿಲ್ಲ ಎಂದು ತಿಳಿಸಿದರು.

    ಎಸ್‍ಐಟಿ ಅಧಿಕಾರಿಗಳ ತಂಡ ಆಶ್ರಮದೊಳಗೆ ಹೋಗಿದೆ ಎನ್ನುವ ಸುದ್ದಿ ಪ್ರಕಟವಾಗಿದೆ. ಆದರೆ ಯಾರೂ ಇದೂವರೆಗೆ ಬಂದಿಲ್ಲ. ಅನಾವಶ್ಯಕವಾಗಿ ಬಲಪಂಥೀಯರನ್ನು ಸುಮ್ಮನೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

    ದಾಬೋಲ್ಕರ್, ಪನ್ಸಾರೆ ಹತ್ಯೆ ಪ್ರಕರಣಗಳು ನ್ಯಾಯ ರೀತಿಯಲ್ಲಿ ತನಿಖೆಯಾಗುತ್ತಿಲ್ಲ. ರಾಜಕೀಯ ಒತ್ತಡದಿಂದ ಸನಾತನ ಸಂಸ್ಥೆ ಮೇಲೆ ಅನುಮಾನ ವ್ಯಕ್ತವಾಗುವಂತೆ ಮಾಡಲಾಗುತ್ತಿದೆ. ಪ್ರಶಾಂತ್ ಪೂಜಾರಿ ಕೊಲೆಯಾದಾಗ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಎಸ್‍ಐಟಿ ಮಾಡಲಿಲ್ಲ, ಗೌರಿ ಹತ್ಯೆ ಆದಾಗ ಮಾತ್ರ ಯಾಕೆ ಎಂದು ಪ್ರಶ್ನಿಸಿದರು. ನಾವು ತನಿಖೆಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧರಿದ್ದೇವೆ ಎಂದು ಚೇತನ್ ರಾಜೇಶ್ ವ್ಯಕ್ತಪಡಿಸಿದರು.

    ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಇರುವುದರಿಂದ ಗೌರಿ ಹತ್ಯೆಯಲ್ಲಿ ರಾಜಕೀಯ ಒತ್ತಡದ ತನಿಖೆ ನಡೆಯುತ್ತಿದೆ. ಬೆಳಗಾವಿ ಸ್ಫೋಟ ಪ್ರಕರಣವನ್ನು ನಮ್ಮವರೇ ಮಾಡಿದ್ದು ಅಂತ ಹೇಳಿದರು. ದಾಬೋಲ್ಕರ್, ಪನ್ಸಾರೆ ಕೇಸುಗಳಲ್ಲಿಯೂ ನಮ್ಮ ಹೆಸರನ್ನೇ ಹೇಳುತ್ತಿದ್ದಾರೆ. ಅಮಾಯಕರನ್ನು ಆರೋಪಿಗಳನ್ನಾಗಿ ಮಾಡುತ್ತಿದ್ದಾರೆ. ಕಲುಬುರಗಿ ಹಾಗೂ ಗೌರಿ ಹತ್ಯೆಗೂ ಒಂದೇ ಸಾಮ್ಯತೆ ಇದೆ ಅಂತಾರೆ. ಕಂಟ್ರಿ ಮೇಡ್ ಪಿಸ್ತೂಲ್‍ನಿಂದ ಇಬ್ಬರ ಕೊಲೆ ಮಾಡಿದ್ದಾರೆ ಅಂತಾರೆ, ಸಾವಿರ ರೂಪಾಯಿಗೆ ಪಿಸ್ತೂಲು ಸಿಕ್ಕುತ್ತೆ, 7.65 ಎಂಎಂ ಪಿಸ್ತೂಲ್‍ನಲ್ಲಿ ಮಹಾರಾಷ್ಟ್ರದಲ್ಲಿ 400 ಕೊಲೆ ಮಾಡಿದ್ದಾರೆ ಎಂದೆಲ್ಲ ಹೇಳಿ ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ದೂರಿದರು.

    ಕುಣಿಗಲ್ ಗಿರಿ ರೀತಿ ಪ್ರಚಾರಕ್ಕಾಗಿ ನಾವು ಎಸ್‍ಐಟಿ ಮುಂದೆ ಹೋಗಲು ನಾವು ಸಿದ್ಧರಿಲ್ಲ. ಎಸ್‍ಐಟಿ ಅಧಿಕಾರಿಗಳು ಯಾವುದೇ ರೀತಿಯಲ್ಲಿ ನಮ್ಮನ್ನು ಪ್ರಶ್ನಿಸಿಲ್ಲ, ಸನಾತನ ಸಂಸ್ಥೆಯ ಕಾರ್ಯಕರ್ತರ ತನಿಖೆ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿವೆ. ಗೌರಿ ಕೊಲೆಗೂ ಸನಾತನ ಸಂಸ್ಥೆಗೂ ಸಂಬಂಧವಿಲ್ಲ. ನಮ್ಮಿಂದ ಯಾವುದೇ ಸಹಾಯ ಕೇಳಿದರೆ ಹೇಳಲು ಸಂಸ್ಥೆ ಸಿದ್ಧವಿದೆ. ಅಗತ್ಯಬಿದ್ದಲ್ಲಿ ಕಾನೂನಿನ ಹೋರಾಟಕ್ಕೂ ಸಿದ್ಧವಿದ್ದೇವೆ ಎಂದು ಅಮೃತೇಶ್ ಹೇಳಿಕೆ ನೀಡಿದರು.

    ಸನಾತನ ಸಂಸ್ಥೆ ಸುದ್ದಿಗೋಷ್ಠಿಯ ನಡೆಸುವ ವಿಚಾರ ತಿಳಿದು ಎಸ್‍ಐಟಿಯ 8 ಮಂದಿ ಸದಸ್ಯರು ಪ್ರೆಸ್ ಕ್ಲಬ್‍ಗೆ ಬಂದಿದ್ದರು.

  • ಬೆಂಗಳೂರು ರೈಲಿನಲ್ಲಿ ಬೆಡ್‍ಶೀಟ್ ಕದಿಯುತ್ತಿದ್ದ ವ್ಯಕ್ತಿ ಅರೆಸ್ಟ್

    ಬೆಂಗಳೂರು ರೈಲಿನಲ್ಲಿ ಬೆಡ್‍ಶೀಟ್ ಕದಿಯುತ್ತಿದ್ದ ವ್ಯಕ್ತಿ ಅರೆಸ್ಟ್

    ಬೆಂಗಳೂರು: ರೈಲಿನ ಎಸಿ ಕೋಚ್‍ನಲ್ಲಿದ್ದ ಬೆಡ್‍ಶೀಟ್‍ಗಳನ್ನು ಕದ್ದು ಕೊಂಡ್ಯೊಯುತ್ತಿದ್ದ ಕಳ್ಳನನ್ನು ಬಂಧಿಸಿರುವ ಘಟನೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

    ಬುಧವಾರ ಮುಂಜಾನೆ 7 ಘಂಟೆಗೆ ನಗರದ ರೈಲ್ವೇ ನಿಲ್ದಾಣ ಪ್ಲಾಟ್ ಫಾರಂ 1ಕ್ಕೆ ಆಗಮಿಸಿದ ಕರ್ನಾಟಕ ಎಕ್ಸ್ ಪ್ರೆಸ್ (ಬೆಂಗಳೂರು-ನವದೆಹಲಿ) ರೈಲಿನ ಬಿ-01 ಎಸಿ ಕೋಚ್‍ನಲ್ಲಿದ್ದ ಬೆಡ್‍ಶೀಟ್‍ಗಳನ್ನು ಕಂಠ ಪೂರ್ತಿ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬ ಕಳ್ಳತನ ಮಾಡಲು ಯತ್ನಿಸಿದ್ದಾನೆ.

    ಈ ವೇಳೆ ಈತ ಬೆಡ್‍ಶೀಟ್ ಗಂಟನ್ನು ಹೆಗಲ ಮೇಲೆ ಇಟ್ಟುಕೊಂಡು ಸಾಗುತ್ತಿದ್ದನ್ನು ಪ್ರಯಾಣಿಕ ಮಹಮ್ಮದ್ ಅಲಿ ಎಂಬವರು ಗಮನಿಸಿ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ವ್ಯಕ್ತಿ ಮದ್ಯ ಸೇವಿಸಿರುವುದು ತಿಳಿದ ಅವರು ಅನುಮಾನಗೊಂಡು ಕರ್ತವ್ಯದಲ್ಲಿದ್ದ ರೈಲ್ವೇ ರಕ್ಷಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ.

    ರೈಲ್ವೇ ಪ್ರಯಾಣದ ನಂತರ ಬೆಡ್‍ಶೀಟ್‍ಗಳನ್ನು ಸ್ವಚ್ಛ ಮಾಡಲು ರೈಲ್ವೇ ಸ್ವಚ್ಛತಾ ಸಿಬ್ಬಂದಿ ಅದನ್ನು ಒಂದೆಡೆ ಸಂಗ್ರಹಿಸಿದ್ದರು. ಈ ವೇಳೆ ಸಿಬ್ಬಂದಿಯ ಕಣ್ಣು ತಪ್ಪಿಸಿ ಈತ ಬೆಡ್‍ಶೀಟ್‍ಗಳನ್ನು ಕದ್ದು ಪರಾರಿಯಾಗಲು ಯತ್ನಿಸಿ ಪೋಲಿಸರ ಅತಿಥಿಯಾಗಿದ್ದಾನೆ.

  • ಪತಿ ಬೈದಿದ್ದಕ್ಕೆ ಪತ್ನಿ ಆತ್ಮಹತ್ಯೆ- ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರ!

    ಪತಿ ಬೈದಿದ್ದಕ್ಕೆ ಪತ್ನಿ ಆತ್ಮಹತ್ಯೆ- ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರ!

    ಬೆಂಗಳೂರು: ಸಾರು ಚೆನ್ನಾಗಿಲ್ಲ ಅಂತಾ ಗಂಡ ಬೈದಿದ್ದಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ಬೆಂಗಳೂರಿನ ಚೋಳೂರುಪಾಳ್ಯದಲ್ಲಿ ನಡೆದಿದೆ.

    ನಾಗರತ್ನಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ ರಾತ್ರಿ ನಾಗರತ್ನಮ್ಮ ಅವರಿಗೆ ಪತಿ ಶ್ರೀನಿವಾಸ್ ಸಾರು ಚೆನ್ನಾಗಿ ಮಾಡಿಲ್ಲ ಅಂತಾ ಬೈದಿದ್ದಾರೆ. ಇದರಿಂದ ಮನನೊಂದ ನಾಗರತ್ನಮ್ಮ ತಮ್ಮ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

    ಮದುವೆಯಾಗಿ 28 ವರ್ಷವಾಗಿದ್ದ ಶ್ರೀನಿವಾಸ್ ಗೆ ಲಕ್ವ ಹೊಡೆದಿತ್ತು. ಮಗ ಮಿಥುನ್ ರೂಮ್ ಗೆ ಹೋಗಿ ನೋಡಿದಾಗ ತಾಯಿ ನೇಣು ಹಾಕಿಕೊಂಡಿದ್ದು ಬೆಳಕಿಗೆ ಬಂದಿದೆ.

    ಈ ಸಂಬಂಧವನ್ನು ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗೌರಿ ಲಂಕೇಶ್ ಹಂತಕರನ್ನು ಕೂಡಲೇ ಬಂಧಿಸಿ: ಸಮಾವೇಶದಲ್ಲಿ ಕೈಗೊಂಡ 3 ಹಕ್ಕೊತ್ತಾಯ ಏನು?

    ಗೌರಿ ಲಂಕೇಶ್ ಹಂತಕರನ್ನು ಕೂಡಲೇ ಬಂಧಿಸಿ: ಸಮಾವೇಶದಲ್ಲಿ ಕೈಗೊಂಡ 3 ಹಕ್ಕೊತ್ತಾಯ ಏನು?

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಬೆಂಗಳೂರಲ್ಲಿ ಮಂಗಳವಾರ ಬೃಹತ್ ರ‍್ಯಾಲಿ ಹಾಗೂ ಸಮಾವೇಶ ನಡೆಯಿತು. ನಾನೂ ಗೌರಿ ಹೆಸರಿನ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ವಿವಿಧ ಸಾಮಾಜಿಕ ಹೋರಾಟಗಾರರು, ಚಿಂತಕರು, ಪ್ರಗತಿಪರರು, ವಿಚಾರವಾದಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

    ಬಿಜೆಪಿ ಹಾಗೂ ಆರ್‍ಎಸ್‍ಎಸ್ ಕಡೆ ಬೊಟ್ಟು ಮಾಡಿದ ಇವರು ಹಿಂಸೆಯನ್ನು ವಿರೋಧಿಸಿದ ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ, ಮಾದರಿಯಲ್ಲೇ ಗೌರಿ ಲಂಕೇಶ್ ಹತ್ಯೆಯಾಗಿದೆ. ದಾಬೋಲ್ಕರ್‍ರಿಂದ ಗೌರಿ ತನಕ ನಡೆದ ಹತ್ಯೆಗಳಲ್ಲಿ ಗೋವಾದ ಸನಾತನ ಸಂಸ್ಥೆಯಂತ ಮೂಲಭೂತವಾದಿಗಳ ಕೈವಾಡವಿದೆ ಎಂದು ಆರೋಪಿಸಿದ್ರು. ಭಾಷಣದ ವೇಳೆ ಕೆಲವರು ಕಣ್ಣೀರಿಟ್ಟರು.

    ಬೇಟಿ ಬಚಾವ್-ಬೇಟಿ ಪಡಾವ್ ಅಂತಾ ಘೋಷಣೆ ಮಾಡ್ತಾರೆ. ಆದರೆ ಆಕೆ ಹೆಚ್ಚು ಮಾತನಾಡಿದರೆ ಗುಂಡಿಟ್ಟು ಹೊಡೆದು ಉರುಳಿಸ್ತಾರೆ ಅಂತಾ ಕೇಂದ್ರದ ವಿರುದ್ಧ ಹರಿಹಾಯ್ದರು. ರ‍್ಯಾಲಿಯಲ್ಲಿ ಮಾತಾಡಿದ ಪ್ರಗತಿಪರರರು, ಚಿಂತಕರ ಹತ್ಯೆ ಬಗ್ಗೆ ವಿಶ್ವಸಂಸ್ಥೆಗೆ ದೂರು ನೀಡೋದಾಗಿ ಹೇಳಿದರು. ವಿಶೇಷ ಅಂದರೆ ಗೌರಿ ಲಂಕೇಶ್ ಮಾಜಿ ಪತಿ ಚಿದಾನಂದ ರಾಜಘಟ್ಟ ತಮ್ಮ ವಿದೇಶಿ ಪತ್ನಿ ಜೊತೆ ಸಮಾವೇಶಕ್ಕೆ ಬಂದಿದ್ದರು.

    ನನಗೆ 99 ವರ್ಷ ವಯಸ್ಸು, ಈ ವಯಸ್ಸಿನಲ್ಲೂ ನನಗೆ ಹೋರಾಡುವ ಕಿಚ್ಚಿದೆ. ಆದ್ರೆ, ನಿಮ್ಮಲ್ಲಿ ಯಾಕೆ ಇಲ್ಲ ಕಿಚ್ಚು? ದ್ವೇಷ ಪ್ರಚೋದಿಸುವ ಧರ್ಮವನ್ನ ನಾವು ಒಪ್ಪಲ್ಲ. ಬದಲಾವಣೆಗೆ ಈ ಹೋರಾಟ ಅನಿವಾರ್ಯ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಕಿರಿಯರನ್ನು ಪ್ರಶ್ನಿಸಿದರು.

    ಅನೇಕ ಗೌರಿಯರಿಗೆ ನಮಸ್ಕಾರ ಎಂದು ಕಣ್ಣೀರು ಸುರಿಸುತ್ತಾ ಮಾತು ಆರಂಭಿಸಿದ ಗೌರಿ ಲಂಕೇಶ್ ತಾಯಿ ಇಂದಿರಾ ಲಂಕೇಶ್ ನೀವೆಲ್ಲಾ ನನ್ನ ಗೌರಿಯರು ಎಂದರು. ಸಾಹಿತಿ ಚಂಪಾ, ಸತ್ತವರು ಎಲ್ಲಿ ಹೋಗುತ್ತಾರೆ, ನೆನಪಿನಾಳದಲ್ಲಿ ಪ್ರತಿಭಟನೆ ಕಾವು ಕೊಡುತ್ತಲೇ ಇರುತ್ತಾರೆ ಎಂದು ಕವನ ವಾಚನ ಮಾಡಿದರು.

    ಕೇಂದ್ರ ರೈಲ್ವೇ ನಿಲ್ದಾಣದಿಂದ ಶುರುವಾದ ನಾನು ಗೌರಿ ಬೃಹತ್ ರ‍್ಯಾಲಿ, ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮುಕ್ತಾಯಗೊಂಡಿತು. ನಗಾರಿ ಬಾರಿಸುವ ಮೂಲಕ ಪ್ರತಿರೋಧ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ದೊರೆಸ್ವಾಮಿಯವರು ಲಂಕೇಶ್ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಗೌರಿಗೆ ಪೆರಿಯಾರ್ ಪ್ರಶಸ್ತಿ ಘೋಷಣೆ ಆಯ್ತು. ಶೀಘ್ರ ಕ್ರಮಕ್ಕೆ ಹಕ್ಕೋತ್ತಾಯ ಮಾಡಲಾಯ್ತು.

    ಪ್ರತಿರೋಧ ಸಮಾವೇಶಕ್ಕೆ ಸ್ವಯಂಪ್ರೇರಿತವಾಗಿ ಸಾವಿರಾರು ಮಂದಿ ಬಂದಿದ್ದರು. ವಿಶೇಷ ಎಂದರೆ ಸಚಿವರಾದ ಖಾದರ್, ಹೆಚ್‍ಎಂ ರೇವಣ್ಣ, ಸಿಪಿಎಂ ನಾಯಕ ಸೀತಾರಂ ಯೆಚೂರಿ, ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್, ಸಾಹಿತಿ ದೇವನೂರು ಮಹಾದೇವ, ಪತ್ರಕರ್ತ ಪಿ. ಸಾಯಿನಾಥ್, ತೀಸ್ತಾ ಸೆಟಲ್ವಾಡ್, ಮುರುಘಾಶ್ರೀಗಳು, ಸ್ವಾಮಿ ಅಗ್ನಿವೇಶ್, ಸ್ವರಾಜ್ ಇಂಡಿಯಾ ಮುಖಂಡರಾದ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್, ಕವಿತಾ ಕೃಷ್ಣನ್, ಜಿಗ್ನೆಶ್ ಮೇವಾನಿ ನಟ ಪ್ರಕಾಶ್ ರೈ ಸೇರಿದಂತೆ ಹಲವು ಪ್ರಗತಿ ಪರ ಚಿಂತಕರು ಭಾಗವಹಿಸಿದ್ದರು.

    ಸಮಾವೇಶದಲ್ಲಿ ಕೈಗೊಂಡ 3 ಹಕ್ಕೊತ್ತಾಯಗಳು:

    1. ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ರಾಜ್ಯ ಸರ್ಕಾರ ರಚಿಸಿರುವ ಎಸ್‍ಐಟಿ ಮುಖಾಂತರ ತೀವ್ರಗೊಳಿಸಿ, ಕಾಲನಿಗದಿತವಾಗಿ ಮುಗಿಸಿ ಹಂತಕರನ್ನು ಹಾಗೂ ಅವರ ಹಿಂದೆ ಇರುವ ಶಕ್ತಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕು.

    2. ಗೌರಿ ಲಂಕೇಶ್‍ರು ಕಳೆದ ಒಂದೂವರೆ ದಶಕಗಳಿಂದ ಕೆಲವು ಸಂವಿಧಾನ ವಿರೋಧಿ ಹಾಗೂ ಮಾನವತೆಯ ವಿರೋಧಿಗಳನ್ನು ಖಂಡಿಸುತ್ತಾ ಚಿಂತನೆ ಹಾಗೂ ಹೋರಾಟವನ್ನು ನಡೆಸಿದ್ದರು. ಅವರು ಮಾತ್ರವಲ್ಲದೇ, ಈ ದೇಶದಲ್ಲಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ವಿಚಾರವಾದಿಗಳ ಸರಣಿ ಕೊಲೆಗಳು ಇನ್ನೂ ಹಲವಡೆ ನಡೆಯುತ್ತಿದೆ. ಹಾಗಾಗಿ ಈ ಆಯಾಮಗಳನ್ನು ವಿಶೇಷವಾಗಿ ಪರಿಗಣಿಸಿ ತನಿಖೆಯನ್ನು ಚುರುಕುಗೊಳಿಸಬೇಕೆಂದು ಈ ಸಮಾವೇಶವು ಒತ್ತಾಯಿಸುತ್ತದೆ.

    3. ಆರ್‍ಎಸ್‍ಎಸ್, ಹಿಂದೂ ಜಾಗರಣ ವೇದಿಕೆ, ವಿಎಚ್‍ಪಿ, ಭಜರಂಗದಳ, ಶ್ರೀರಾಮಸೇನೆ, ಸನತನ ಸಂಸ್ಥೆ ಇತ್ಯಾದಿ ಆರೆಸ್ಸೆಸ್‍ನ ಅಂಗಸಂಘಟನೆಗಳ ಸದಸ್ಯರು/ಬೆಂಬಲಿಗರು ಈ ಹತ್ಯೆಯನ್ನು ಸಂಭ್ರಮಿಸಿದ ದುರಂತವು ಈ ನಾಡಿನಲ್ಲಿ ನಡೆದುದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಹಾಗೆಯೇ ಬಿಜೆಪಿಯ ನಾಯಕರುಗಳು ಹತ್ಯೆಗೆ ಪರೋಕ್ಷ ಸಮರ್ಥನೆ ನೀಡಿ ಮಾತಾಡಿದ್ದನ್ನೂ ಈ ನಾಡು ನೋಡಿದೆ. ಯಾವುದೇ ಧರ್ಮದ ಬೋಧನೆಗಳಿಗೂ ವಿರುದ್ಧವಾದ ಇಂತಹ ಅಮಾನವೀಯ ನಡವಳಿಕೆಗಳನ್ನು ಸಮಾವೇಶವು ಖಂಡಿಸುತ್ತದೆ. ಈ ಬಗೆಯ ಮನಸ್ಥಿಯನ್ನು ಇಲ್ಲವಾಗಿಸಲು ಪ್ರಯತ್ನ ಪಡುವುದು ನಾಗರಿಕ ಸಮಾಜದ ಸರ್ಕಾರಗಳ ಕರ್ತವ್ಯವಾಗಿದೆ. ಆ ಒಟ್ಟಿನಲ್ಲಿ ಕರ್ನಟಕ ಸರ್ಕರವು ಪರಿಣಾಮಕಾರಿ ಕ್ರಮಗಳನ್ನು ತಗೆದುಕೊಳ್ಳಬೇಕೆಂದು ಆಗ್ರಹಿಸಿಸುತ್ತೇವೆ.

    https://youtu.be/SrOsUvt0IkA

  • ಮಹಿಳೆಯರಿಗೆ ಸಿಹಿ ಸುದ್ದಿ: ಚಿನ್ನದ ಬೆಲೆಯಲ್ಲಿ ದಿಢೀರ್ ಭಾರೀ ಇಳಿಕೆ

    ಮಹಿಳೆಯರಿಗೆ ಸಿಹಿ ಸುದ್ದಿ: ಚಿನ್ನದ ಬೆಲೆಯಲ್ಲಿ ದಿಢೀರ್ ಭಾರೀ ಇಳಿಕೆ

    ಬೆಂಗಳೂರು: ದುಬಾರಿಯಾಗಿ ಬಲು ಭಾರವಾಗಿದ್ದ ಚಿನ್ನದ ದರ ಈಗ ಕೊಂಚ ಇಳಿಕೆಯಾಗಿ ರಿಲೀಫ್ ಮೂಡಿಸಿದೆ. ಕಳೆದ ಮೂರು ದಿನದಲ್ಲಿ ಬರೋಬ್ಬರಿ 2,000 ರೂ. ಏರಿಕೆಯಾಗಿದ್ದ ಚಿನ್ನ ಇಂದು ಏಕಾಏಕಿ ಹತ್ತು ಗ್ರಾಂಗೆ 1200 ರೂ ಕುಸಿತ ಕಂಡಿದೆ.

    24 ಕ್ಯಾರೆಟ್ ಚಿನ್ನದ ಹಿಂದಿನ ದರ 31,900 ರೂ. ಆಗಿತ್ತು. ಆದರೆ ಇಂದು 1,270 ರೂ. ಕಡಿಮೆಯಾಗಿ 30,630 ರೂ. ಆಗಿದೆ. 22 ಕ್ಯಾರೆಟ್ ಚಿನ್ನದ ಹಿಂದಿನ ದರ 28,750 ರೂ. ಆಗಿತ್ತು. ಆದರೆ ಈಗ 300 ರೂ. ಕಡಿಮೆಯಾಗಿದ್ದು 28,450 ರೂ. ಆಗಿದೆ.

    ಸಪ್ಟೆಂಬರ್ 8 ರಂದು ಒಂದೇ ದಿನ 990 ರೂ. ಏರಿಕೆಯಾಗಿತ್ತು. ಇದರಿಂದಾಗಿ 10 ಗ್ರಾಂ ಚಿನ್ನದ ಬೆಲೆ 31,350 ರೂ.ಗಳಿಗೆ ನೆಗೆದಿತ್ತು. ಈ ಬೆಲೆ ಕಳೆದ ಒಂದು ವರ್ಷಕ್ಕೂ ಮೀರಿದ ಅವಧಿಯಲ್ಲಿ ಚಿನ್ನ ಕಂಡಿರುವ ಗರಿಷ್ಠ ಏರಿಕೆ ಎಂದು ಮಾಧ್ಯಮಗಳು ವರದಿ ಮಾಡಿತ್ತು.

    ಇದನ್ನೂ ಓದಿ: 2.5 ಲಕ್ಷದ ಚಿನ್ನದ ಸರ ಕದ್ದು ಮತ್ತೊಂದು ಅಂಗಡಿಯಲ್ಲಿ ಬಟ್ಟೆ ಎಗರಿಸಿದ್ರು: ಕಾರ್ಕಳ ಕಳ್ಳಿಯರ ಕೈ ಚಳಕ ವಿಡಿಯೋ ನೋಡಿ

    ಉತ್ತರ ಕೊರಿಯ ತನ್ನ ಪರಮಾಣು ಶಕ್ತಿಯ ದುಸ್ಸಾಹಸದ ಪ್ರದರ್ಶನಕ್ಕೆ ಇಳಿದಿದ್ದು ಮತ್ತು ಅಮೆರಿಕದಲ್ಲಿ ಉದ್ಯೋಗ ಅಂಕಿ ಅಂಶಗಳು ನಿರೀಕ್ಷೆಗಿಂತ ದುರ್ಬಲವಾಗಿ ದಾಖಲಾಗಿದ್ದ ಹಿನ್ನೆಲೆಯಲ್ಲಿ ಚಿನ್ನದ ದರ ಭಾರೀ ಏರಿಕೆಯಾಗಿತ್ತು.

    ಇದನ್ನೂ ಓದಿ: ಗಂಡನ ಬಳಿಯೇ 1 ಕೆಜಿ ಚಿನ್ನಾಭರಣ ಕದ್ದ ಖತರ್ನಾಕ್ ಹೆಂಡತಿ ಅರೆಸ್ಟ್

  • ಗೌರಿ ಲಂಕೇಶ್ ಹಂತಕರ ಸುಳಿವು ಕೊಟ್ಟವರಿಗೆ 10 ಲಕ್ಷ ಸಾಲಲ್ಲ, 10 ಕೋಟಿಗೆ ಏರಿಸಿ: ಸಿಟಿ ರವಿ

    ಗೌರಿ ಲಂಕೇಶ್ ಹಂತಕರ ಸುಳಿವು ಕೊಟ್ಟವರಿಗೆ 10 ಲಕ್ಷ ಸಾಲಲ್ಲ, 10 ಕೋಟಿಗೆ ಏರಿಸಿ: ಸಿಟಿ ರವಿ

    ಬೆಂಗಳೂರು: ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದ ಹಂತಕರ ಸುಳಿವು ಕೊಟ್ಟವರಿಗೆ ಸರ್ಕಾರ 10 ಲಕ್ಷ ರೂ. ಬಹುಮಾನ ಮೊತ್ತವನ್ನು ನಿಗದಿಪಡಿಸಿದೆ. ಆದರೆ ಈ ಬಹುಮಾನದ ಮೊತ್ತವನ್ನು 10 ಕೋಟಿ ರೂ. ಗೆ ಸರ್ಕಾರ ಹೆಚ್ಚಿಸಬೇಕು ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

    ಹಂತಕರ ಸುಳಿವಿನ ಬಗ್ಗೆ ಮಾಹಿತಿ ನೀಡುವ ಬಹುತೇಕ ಜನರಿಗೆ 10 ಲಕ್ಷ ರೂ. ಮೊತ್ತವನ್ನು ಹಂಚಲು ಸಾಧ್ಯವಿಲ್ಲ. ಅಲ್ಲದೆ ರಾಮಚಂದ್ರ ಗುಹಾ, ರಾಹುಲ್ ಗಾಂಧಿ ಅಂತಹವರಿಗೆ ಇಷ್ಟು ಕಡಿಮೆ ಮೊತ್ತ ಕೊಡಲು ಸಾಧ್ಯವಿಲ್ಲ. ಹೀಗಾಗಿ ಈ ಮೊತ್ತವನ್ನು 10 ಕೋಟಿ ರೂ ಬಹುಮಾನ ಮೊತ್ತ ನೀಡಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

    ಇಂದು ಬಿಜೆಪಿ ಮತ್ತು ಆರ್‍ಎಸ್‍ಎಸ್ ಮೇಲೆ ಆರೋಪ ಮಾಡುತ್ತಿರುವರು, ಮುಂದೆ ಸತ್ಯ ಹೊರ ಬಂದಾಗ ಅವರು ಮುಖಕ್ಕೆ ಬುರ್ಕಾ ಹಾಕಿಕೊಂಡು ಒಡಾಡಬೇಕಾಗುತ್ತದೆ. ಅಲ್ಲದೆ ಇದು ಬೆಂಗಳೂರಿನಲ್ಲಿ ನಡೆಯುತ್ತಿರುವುದು ಪ್ರತಿರೋಧ ಸಮಾವೇಶವಲ್ಲ, ಇದು ಬಿಜೆಪಿ-ಆರ್‍ಎಸ್‍ಎಸ್ ವಿರೋಧಿ ಸಮಾವೇಶವಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಆರ್‍ಎಸ್‍ಎಸ್ ಅನ್ನು ವಿರೋಧಿಸುವುದು ರಾಹುಲ್ ಗಾಂಧಿ ಅವರಿಗೆ ಪರಂಪರೆಯಿಂದ ಬಂದಂತಹ ಬಳುವಳಿಯಾಗಿದೆ. ಅಂದು ನೆಹರು ಗಾಂಧಿ ಹತ್ಯೆಗೆ ಸಂಬಂಧಿಸಿದ ಗುರೂಜಿ ಗೋಲ್ವಾಲ್ಕರ್ ಅವರನ್ನು ಜೈಲಿಗೆ ಕಳುಹಿಸಿದ್ದರು. ಆಮೇಲೆ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ವ್ಯಂಗ್ಯವಾಗಿ ಹೇಳಿದರು.

  • ಬಸ್ ನಲ್ಲಿ ಗರ್ಭಿಣಿಯ ಪರಿಚಯ ಮಾಡ್ಕೊಂಡು ಬ್ಯಾಗ್ ಕದ್ದು ಹಣ ದೋಚಿದ್ಳು!

    ಬಸ್ ನಲ್ಲಿ ಗರ್ಭಿಣಿಯ ಪರಿಚಯ ಮಾಡ್ಕೊಂಡು ಬ್ಯಾಗ್ ಕದ್ದು ಹಣ ದೋಚಿದ್ಳು!

    ಬೆಂಗಳೂರು: ಗಮನ ಬೇರೆಡೆಗೆ ಸೆಳೆದು ಗರ್ಭಿಣಿಯ ಪರ್ಸನ್ನು ಕದ್ದು ಅದರಲ್ಲಿದ್ದ ಡೆಬಿಟ್ ಕಾರ್ಡ್‍ನ ಸಂಪೂರ್ಣ ಹಣ ದೋಚಿದ ಘಟನೆ ಕಳೆದ ಕೆಆರ್ ಪುರಂನಲ್ಲಿ ನಡೆದಿದೆ.

    ಬುಧವಾರ ಸೆಪ್ಟಂಬರ್ 6ರಂದು ಲಕ್ಷ್ಮಿ ಪ್ರಿಯಾ ಎಂಬವರು ಬಸ್ ನಲ್ಲಿ ಸಂಜೆ 6 ಗಂಟೆಗೆ ಭಟರಹಳ್ಳಿಯಿಂದ ಕೆಆರ್‍ಪುರಂಗೆ ತೆರಳುತಿದ್ದರು. ಈ ವೇಳೆ ಮಹಿಳೆಯೊಬ್ಬಳು ಲಕ್ಷ್ಮಿ ಅವರನ್ನು ಪರಿಚಯ ಮಾಡಿಕೊಂಡು ಮಾತನಾಡಲು ಆರಂಭಿಸಿದ್ದಾಳೆ.

    ನಂತರ ಮಾತಿನ ನಡುವೆಯೇ ಲಕ್ಷ್ಮೀಪ್ರಿಯಾ ಅವರು ಎಡಗೈನಲ್ಲಿ ಹಾಕಿಕೊಂಡಿದ್ದ ಬ್ಯಾಗ್ ಪರ್ಸ್ ಕಳ್ಳತನ ಮಾಡಿ ಮುಂದಿನ ನಿಲ್ದಾಣ ಟಿಸಿ ಪಾಳ್ಯದಲ್ಲಿ ಇಳಿದುಕೊಂಡಿದ್ದಾಳೆ. ನಂತರ ಭಟ್ಟರಹಳ್ಳಿ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂನಿಂದ 40 ಸಾವಿರ ಹಣವನ್ನು ಡ್ರಾ ಮಾಡಿದ್ದಳು.

    ಬಸ್ಸಿನಿಂದ ಇಳಿಯಬೇಕಾದರೆ ಲಕ್ಷ್ಮೀ ಪ್ರಿಯಾಗೆ ಬ್ಯಾಗ್ ನಾಪತ್ತೆಯಾಗಿರುವ ವಿಚಾರ ತಿಳಿದಿದೆ. ನಂತರ ಕಾರ್ಡ್ ಬ್ಲಾಕ್ ಮಾಡಿಸಲು ಬ್ಯಾಂಕಿಗೆ ತೆರೆಳಿದ್ದಾಗ ಹಣ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ.

    ಹಣ ಡ್ರಾ ಮಾಡಿದ ಎಟಿಎಮ್‍ನ ಸಿಸಿಟಿವಿಯಲ್ಲಿ ಮಹಿಳೆಯ ಕೃತ್ಯ ಸೆರೆಯಾಗಿದ್ದು ಸಿಸಿಟಿವಿ ಆಧರಿಸಿ ಲಕ್ಷ್ಮಿ ಪ್ರಿಯಾ ಅವರು ದೂರನ್ನು ನೀಡಿದ್ದು ಈ ಸಂಬಂಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡೆಲಿವರಿಗೆಂದು ಲಕ್ಷ್ಮೀ ಹಣವನ್ನು ಕೂಡಿಟ್ಟಿದ್ದರು.

  • ಬೆಂಗಳೂರು ಪೊಲೀಸರಿಂದ ದರೋಡೆಕೋರರ ಮೇಲೆ ಶೂಟೌಟ್

    ಬೆಂಗಳೂರು ಪೊಲೀಸರಿಂದ ದರೋಡೆಕೋರರ ಮೇಲೆ ಶೂಟೌಟ್

    ಬೆಂಗಳೂರು: ಇಬ್ಬರು ದರೋಡೆಕೋರರ ಮೇಲೆ ಬೆಂಗಳೂರು ಪೊಲೀಸರು ಶೂಟೌಟ್ ನಡೆಸಿರುವ ಘಟನೆ ವೈಟ್ ಫೀಲ್ಡ್ ನಲ್ಲಿ ನಡೆದಿದೆ.

    ಅಮರ್ ಮತ್ತು ಮುಜಾಮಿಲ್ ಮೇಲೆ ಬೆಳ್ಳಂದೂರು ಪೊಲೀಸರು ಶೂಟೌಟ್ ನಡೆಸಿದ್ದು, ಕಾಲಿಗೆ ಗುಂಡು ತಗಲಿದ ಹಿನ್ನೆಲೆಯಲ್ಲಿ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಆರೋಪಿಗಳು ಶನಿವಾರ ಹೆಚ್‍ಪಿ ಪೆಟ್ರೋಲ್ ಬಂಕ್ ಬಳಿ ಮೊಬೈಲ್ ಕದಿದ್ದರು. ಈ ವೇಳೆ ಇಬ್ಬರು ಆರೋಪಿಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಜಾಡು ಹಿಡಿದು ಪೊಲೀಸರು ದರೋಡೆಕೋರರ ಮೇಲೆ ಶೂಟೌಟ್ ನಡೆಸಿದ್ದಾರೆ.

    ಇದನ್ನೂ ಓದಿ: ನಗರದಲ್ಲಿ ರೌಡಿಸಂ ಸ್ಟಾಪ್ ಆಗ್ಬೇಕು, ಅವರು ರೌಡಿಸಂ ಬಿಡ್ಬೇಕು ಇಲ್ಲ ರಾಜ್ಯ ಬಿಡ್ಬೇಕು: ಪೊಲೀಸರಿಗೆ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

    ವೈಟ್ ಫೀಲ್ಡ್ ಇನ್ಸ್‍ಪೆಕ್ಟರ್ ವಿಕ್ಟರ್ ಸೈಮನ್ ಮತ್ತು ಸುಧಾಕರ್ ನೇತೃತ್ವದಲ್ಲಿ ಫೈರಿಂಗ್ ನಡೆದಿದೆ. ಆರೋಪಿಗಳು 11 ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು ತಮಿಳುನಾಡು ಹೊಸೂರಿನಲ್ಲಿ ಮುಖ್ಯಪೇದೆಯನ್ನು ಹತ್ಯೆ ಮಾಡಿದ್ದರು. ಶೂಟೌಟ್ ವೇಳೆ ಇಬ್ಬರು ಪೇದೆಗಳಿಗೆ ಗಾಯವಾಗಿದ್ದು ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ಸಿಲಿಕಾನ್ ಸಿಟಿಯಲ್ಲಿ ವರುಣನ ಅರ್ಭಟ: ಕೆರೆಗಳಂತಾದ ರಸ್ತೆಗಳು

    ಸಿಲಿಕಾನ್ ಸಿಟಿಯಲ್ಲಿ ವರುಣನ ಅರ್ಭಟ: ಕೆರೆಗಳಂತಾದ ರಸ್ತೆಗಳು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ವರುಣನ ಅರ್ಭಟ ಮುಂದುವರೆದಿದ್ದು ತಡರಾತ್ರಿವರೆಗೂ ಸುರಿದ ಮಳೆಗೆ ರಸ್ತೆಗಳೆಲ್ಲಾ ಕೆರೆಗಳಂತಾಗಿದೆ. ಶಾಂತಿನಗರ, ಡಬ್ಬಲ್ ರೋಡ್, ಮೆಜೆಸ್ಟಿಕ್, ರಾಜಾಜಿನಗರ, ಯಶವಂತಪುರ, ಪೀಣ್ಯ ಸೇರಿದಂತೆ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗಿದೆ. ವರುಣನ ಅಬ್ಬರಕ್ಕೆ ನಗರದ ಬಹುತೇಕ ರಸ್ತೆಗಳು ಕೆರೆಗಳಾಂತಾಗಿದೆ. ಕೋರಮಂಗಲದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು ವಾಹನ ಸವಾರರು ಪರದಾಡುವಂತಾಯಿತು.

    ನಗರದಲ್ಲಿ ಮತ್ತೊಮೆ ಮಳೆ ತನ್ನ ಆರ್ಭಟ ತೋರಿಸಿದೆ. ಮೊನ್ನೆಯಷ್ಟೆ ನಾಲ್ವರನ್ನು ಬಲಿ ಪಡೆದ ಮಳೆ ಶನಿವಾರ ತಡರಾತ್ರಿ ಹಾಗೂ ಭಾನುವಾರ ಬೆಳಗಿನ ಜಾವದವರೆಗೂ ಎಡಬಿಡದೆ ಸುರಿದಿದೆ. ಇನ್ನೂ ನಾಯಂಡಹಳ್ಳಿ ಬಳಿ ವಿಪರೀತ ಮಳೆ ಬಂದ ಕಾರಣ ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿಯಿಡೀ ಜಾಗರಣೆ ನಡೆಸುವಂತಾಗಿತ್ತು. ತಗ್ಗು ಪ್ರದೇಶವಾದ ಕಾರಣ ನೀರು ಮನೆಗೆ ನುಗ್ಗಿದ್ದು ಮನೆಯಲ್ಲಿದ್ದ ವಸ್ತುಗಳೆಲ್ಲವೂ ನಾಶವಾಗಿದೆ. ಇನ್ನು ಈ ಸಂಬಂಧದ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಬೆಂಗಳೂರಲ್ಲಿ ಮುಂದುವರೆದ ವರುಣನ ಆರ್ಭಟ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಮುಳುಗಿದೆ. ನೆಲಮಂಗಲ ರಸ್ತೆ, ಮೈಸೂರು ರೋಡ್ ಸಂಪೂರ್ಣ ಜಲಾವೃತಗೊಂಡಿದ್ದು ಮೈಸೂರು ರೋಡ್ ಫ್ಲೆಓವರ್ ಬಳಿ ಸಾರಿಗೆ ಬಸ್ ಹಾಗೂ ಲಾರಿ ಮುಳುಗಿತ್ತು. ಮೈಸೂರು ರಸ್ತೆಯ ಕೆಂಗೇರಿ ಬಸ್ ನಿಲ್ದಾಣದ ಬಳಿ ಹೆದ್ದಾರಿ ಕೆರೆಗಳಂತೆ ಆಗಿದೆ. ಎರಡು ಬಸ್‍ಗಳು ಅರ್ಧಭಾಗ ಮುಳುಗಿತ್ತು. ರಾಜರಾಜೇಶ್ವರಿ ನಗರದ ಆರ್ಚ್ ವರೆಗೂ ಟ್ರಾಫಿಕ್ ಜಾಮ್ ಹಾಗೂ ವಾಹನಗಳು ನಿಂತಲ್ಲೇ ನಿಂತಿತ್ತು. ಎರಡೂ ಬದಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.

    ಮೈಸೂರು ರಸ್ತೆ ಸಂಪೂರ್ಣ ಜಲಾವೃತ ಆಗಿದ್ದು ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ರಸ್ತೆಗೆ ರಾಜಕಾಲುವೆ ನೀರು ನುಗಿತ್ತು. ಮೈಸೂರ್ ರೋಡ್, ಆರ್ ಆರ್ ನಗರ, ಆರ್‍ಟಿಓ ರೋಡ್‍ಗಳಲ್ಲಿ ಬಿಎಂಟಿಸಿ ಬಸ್‍ಗಳು ನೀರಿನಲ್ಲಿ ಮುಳುಗಿತ್ತು. ಮೈಸೂರು ರೋಡ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು ಹಾಗೂ ಕೋರಮಂಗಲ ಮುಖ್ಯರಸ್ತೆಯಲ್ಲಿ ಸಂಪೂರ್ಣ ಜಲಾವೃತ ಆಗಿತ್ತು.

  • ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ಆಪೆರಿಕ್ಷಾಗೆ KSRTC ಬಸ್ ಡಿಕ್ಕಿ- ಇಬ್ಬರ ದುರ್ಮರಣ

    ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ಆಪೆರಿಕ್ಷಾಗೆ KSRTC ಬಸ್ ಡಿಕ್ಕಿ- ಇಬ್ಬರ ದುರ್ಮರಣ

    ರಾಮನಗರ: ಆಪೆ ರಿಕ್ಷಾಗೆ ಕೆಎಸ್‍ಆರ್‍ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆಪೆ ರಿಕ್ಷಾದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಬೆಂಗಳೂರು-ಮಾಗಡಿ ಹೆದ್ದಾರಿಯಲ್ಲಿ ಬರುವ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಜ್ಯೋತಿ ಪಾಳ್ಯದ ಬಳಿ ಈ ಘಟನೆ ನಡೆದಿದೆ. ಚಿತ್ರದುರ್ಗ ಮೂಲದ ರಘು, ಪರಮೇಶ್ವರ್ ಮೃತ ದುರ್ದೈವಿಗಳು.

    ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಾಗಿದ್ದ ಮೃತರಿಬ್ಬರು ಮಾಗಡಿಯಿಂದ ತರಕಾರಿ ಕೊಂಡು ಬೆಂಗಳೂರಿನಲ್ಲಿ ಮಾರಾಟ ಮಾಡ್ತಾ ಇದ್ರು ಎನ್ನಲಾಗಿದೆ. ಇಂದು ಬೆಳಿಗ್ಗೆ ಮಾಗಡಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡಿ ಬೆಂಗಳೂರಿಗೆ ಹೊರಟಿದ್ರು. ಆದ್ರೆ ಮಾಗಡಿಯ ಜ್ಯೋತಿ ಪಾಳ್ಯದ ಬಳಿ ಎದುರಿಗೆ ಬಂದ ಕೆಎಸ್ ಆರ್ ಟಿಸಿ ಬಸ್ – ಆಪೆ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ರಘು ಹಾಗೂ ಪರಮೇಶ್ ಮೃತಪಟ್ಟಿದ್ದಾರೆ.

    ಮಾಗಡಿ ರಸ್ತೆಯ ಅಂಜನ್ ಥಿಯೇಟರ್ ಬಳಿ ಚಲಿಸುತ್ತಿದ್ದ ಆಟೋಗೆ ಹಿಂಬದಿಯಿಂದ ಬಿಎಂಟಿಸಿ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗೊಂಡಿರೂ ಘಟನೆ ಕೂಡ ನಡೆದಿದೆ.

    ಘಟನೆ ಸಂಬಂಧ ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.