Tag: Bangalore

  • ಮೊದಲ ಹಂತದಲ್ಲಿ ನಾಲ್ವರ ವಿರುದ್ಧ ಬಿಡುಗಡೆಯಾಗಲಿದೆ ಬಿಜೆಪಿಯ ಚಾರ್ಜ್‍ಶೀಟ್

    ಮೊದಲ ಹಂತದಲ್ಲಿ ನಾಲ್ವರ ವಿರುದ್ಧ ಬಿಡುಗಡೆಯಾಗಲಿದೆ ಬಿಜೆಪಿಯ ಚಾರ್ಜ್‍ಶೀಟ್

    ಬೆಂಗಳೂರು: ದಸರಾ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ ಆಂಡ್ ಟೀಂ ವಿರುದ್ಧ ಚಾರ್ಜ್‍ಶೀಟ್ ರಿಲೀಸ್ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮುಂದಾಗಿದ್ದಾರೆ.

    ಮೊದಲು ರಾಜ್ಯ ಬಿಜೆಪಿ ಕೋರ್ ಕಮಿಟಿ ಮುಂದೆ ಚಾರ್ಜ್‍ಶೀಟ್ ಇಟ್ಟು ಚರ್ಚೆ ನಡೆದ ಬಳಿಕ ನಂತರ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲು ಬಿಜೆಪಿ ಮುಂದಾಗಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ತಿಳಿಸಿದೆ.

    ಚಾರ್ಜ್‍ಶೀಟ್ ಸ್ಕ್ವಾಡ್ ಟೀಂನಲ್ಲಿ 7 ಜನರಿದ್ದು, ಅವರೆಲ್ಲರೂ ಬಿಎಸ್‍ವೈ ಆಪ್ತರೆ ಆಗಿರುವುದು ವಿಶೇಷ. ಒಬ್ಬರು ಹಾಲಿ ಪರಿಷತ್ ಸದಸ್ಯ, ಒಬ್ಬರು ಹಾಲಿ ಶಾಸಕ, ಇಬ್ಬರು ಮಾಜಿ ಪರಿಷತ್ ಸದಸ್ಯರು, ಒಬ್ಬರು ಬಿಜೆಪಿ ಪ್ರಧಾನ ಕಾರ್ಯದರ್ಶಿ, ಇಬ್ಬರು ಹಿರಿಯ ವಕೀಲರು ತಂಡದಲ್ಲಿ ಇದ್ದಾರೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

    ಯಾರ ಮೇಲೆ ಚಾರ್ಜ್‍ಶೀಟ್?
    ಮೊದಲ ಹಂತದಲ್ಲಿ ಸಿದ್ದರಾಮಯ್ಯ, ಬೆಂಗಳೂರಿನ ಇಬ್ಬರು ಪ್ರಭಾವಿ ಸಚಿವರು ಮತ್ತು ಮತ್ತೊಬ್ಬರು ಮೈಸೂರು ಜಿಲ್ಲೆಯ ಸಚಿವರ ವಿರುದ್ಧ ದಾಖಲೆಗಳನ್ನು ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

    ದಸರಾಕ್ಕೆ ಮೊದಲೇ ಚಾರ್ಜ್‍ಶೀಟ್ ಬಿಡುಗಡೆ ಮಾಡಲಾಗುವುದು ಎಂದು ಬಿಎಸ್ ಯಡಿಯರೂಪ್ಪ ಈ ಹಿಂದೆ ಹೇಳಿದ್ದರು. ಆದರೆ ಕೆಲ ಅಧಿಕಾರಿಗಳು ದಾಖಲೆಯನ್ನು ನೀಡಲು ಸಹಕರಿಸದ ಹಿನ್ನೆಲೆಯಲ್ಲಿ ಚಾರ್ಜ್‍ಶೀಟ್ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ ಎಂದು ಬಿಎಸ್‍ವೈ ತಿಳಿಸಿದ್ದರು.

  • ಪ್ರೇಯಸಿಯ ಬೆತ್ತಲೆ ಫೋಟೋ ಪೋಸ್ಟ್ ಮಾಡಿದ್ದ ಬೆಂಗಳೂರು ವಿದ್ಯಾರ್ಥಿ ಅರೆಸ್ಟ್

    ಪ್ರೇಯಸಿಯ ಬೆತ್ತಲೆ ಫೋಟೋ ಪೋಸ್ಟ್ ಮಾಡಿದ್ದ ಬೆಂಗಳೂರು ವಿದ್ಯಾರ್ಥಿ ಅರೆಸ್ಟ್

    ಬೆಂಗಳೂರು: ಪ್ರೇಯಸಿ ತನ್ನ ಜೊತೆ ಬ್ರೇಕ್ ಆಪ್ ಮಾಡಿಕೊಂಡ ಕಾರಣಕ್ಕೆ ಆಕೆಯ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತಿಯ ವರ್ಷದ ಬಿಬಿಎಂ ವ್ಯಾಸಂಗ ಮಾಡುತ್ತಿರುವ ಶೋವಿಕ್ ಭುವನ್ (22) ಎಂಬ ಯುವಕ ಈ ಕೃತ್ಯವನ್ನು ನಡೆಸಿದ್ದು, ತನ್ನ ಮಾಜಿ ಪ್ರೇಯಸಿಯ ಮೇಲಿನ ದ್ವೇಷದಿಂದ ಆಕೆಯ ಫೋಟೋಗಳನ್ನು ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾನೆ.

    ಯುವತಿಯು ಅಸ್ಸಾಂ ಮೂಲದ ನಿವಾಸಿಯಾಗಿದ್ದು, ಕಳೆದ ವರ್ಷ ಬೆಂಗಳೂರಿನಲ್ಲಿ ನೆಲೆಸಿದ್ದಳು. ಈ ಸಂದರ್ಭದಲ್ಲಿ ಭುವನ್ ಆಕೆಯ ಫೋಟೋಗಳನ್ನು ತೆಗೆದುಕೊಂಡಿದ್ದ. ನಂತರ ಯುವತಿ ಮುಂಬೈಗೆ ವಾಪಸ್ಸಗಿದ್ದಳು.

    ಫೋಟೋಗಳನ್ನು ಪೋಸ್ಟ್ ಮಾಡುವ ಮೊದಲು ಯುವತಿಯನ್ನು ಬ್ಲಾಕ್ ಮೇಲ್ ಮಾಡಿದ್ದ ಭುವನ್ ತನ್ನ ಜೊತೆಗಿನ ಸಂಬಂಧನವನ್ನು ಮುಂದುವರೆಸುವಂತೆ ಬೇಡಿಕೆ ಇಟ್ಟಿದ್ದ. ಆದರೆ ಯುವತಿ ಅದನ್ನು ನಿರಾಕರಿಸಿದ್ದರಿಂದ ಕುಪಿತನಾಗಿ ಆಕೆಯ ಫೋನ್ ನಂಬರ್ ಜೊತೆ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾನೆ. ಅಲ್ಲದೆ ಈಕೆ ವೇಶ್ಯೆಯಾಗಿದ್ದು ಯಾರು ಬೇಕಾದರು ಸಂಪರ್ಕಿಸಬಹುದು ಎಂದು ಪೋಸ್ಟ್ ಮಾಡಿದ್ದ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಂತ್ರಸ್ತೆಯು ಯುವಕನ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು. ಯುವತಿಗೆ ಆಕೆಯ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪೋಟೋ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ ಆಕೆಯ ಮೊಬೈಲ್ ಸಂಖ್ಯೆಗೆ ಹಲವರಿಂದ ಫೋನ್ ಕರೆಗಳು ಬಂದಿವೆ. ಭುವನ್ ಸುಮಾರು 20ಕ್ಕೂ ಹೆಚ್ಚು ನಗ್ನ ಫೋಟೋಗಳನ್ನು ಪೋಸ್ಟ್ ಮಾಡಿದ್ದು. ಆಕೆಯ ಮೊಬೈಲ್ ಸಂಖ್ಯೆಯನ್ನು ನೀಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಮುಂಬೈ ವಲಯ 10ರ ಪೊಲೀಸ್ ಆಯುಕ್ತ ನವಿಚಂದ್ರ ರೆಡ್ಡಿ, ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಶೈಲೇಸ್ ಪಸಾಲ್ವರ್ ನೇತೃತ್ವದಲ್ಲಿ ತಂಡವನ್ನು ರಚಿಸಿ ಆರೋಪಿಯ ಬಂಧನಕ್ಕೆ ಬಲೆ ಬಿಸಿದ್ದರು. ಇದರಂತೆ ಯುವತಿಯನ್ನು ಭೇಟಿ ಮಾಡಲು ಮುಂಬೈಗೆ ಬಂದ ಆರೋಪಿ ಭುವನ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯು ಸಂತ್ರಸ್ತೆಯ ನಗ್ನ ಫೋಟೋಗಳ ಮೂಲಕ ಆಕೆಯನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ. ತನ್ನ ಬೇಡಿಕೆಗೆ ಬದ್ದರಾಗಿರುವಂತೆ ತಿಳಿಸಿದ್ದ. ಯುವ ಜನಾಂಗದವು ಇಂತಹ ಘಟನೆಗಳಿಂದ ಎಚ್ಚೆತ್ತುಕೊಂಡು ಜಾಗೃತರಾಗಿದಬೇಕು. ತಮ್ಮ ಘನತೆಗೆ ದಕ್ಕೆ ತರುವಂತಹ ಯಾವುದೇ ಭಾವಚಿತ್ರಗಳನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳಬಾರದು ಎಂದು ಪಸಾಲ್ವರ್ ತಿಳಿಸಿದರು.

  • ಮನೆಗೆ ಮಳೆ ನೀರು ನುಗ್ಗಿತೆಂದು UPS ಆಫ್ ಮಾಡಲು ಹೋಗಿ ಮಹಿಳೆ ಸಾವು

    ಮನೆಗೆ ಮಳೆ ನೀರು ನುಗ್ಗಿತೆಂದು UPS ಆಫ್ ಮಾಡಲು ಹೋಗಿ ಮಹಿಳೆ ಸಾವು

    ಬೆಂಗಳೂರು: ಕಳೆದ ರಾತ್ರಿ ಸುರಿದ ಭಾರೀ ಮಳೆ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ವಿದ್ಯುತ್ ಶಾಕ್‍ನಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆಯೂ ನಡೆದಿದೆ.

    ಕೆ.ಆರ್.ಪುರ ಆರ್.ಎಂ.ಎಸ್ ಬಡಾವಣೆಯ ಮನೆಯೊಂದಕ್ಕೆ ನೀರು ನುಗ್ಗಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಮೀನಮ್ಮ ಎಂದು ಗುರುತಿಸಲಾಗಿದೆ. ಮನೆಗೆ ನೀರು ನುಗ್ಗಿದ ಸಂದರ್ಭದಲ್ಲಿ ಯುಪಿಎಸ್ ಸ್ವಿಚ್ ಆಫ್ ಮಾಡಲು ಹೋದಾಗ ಘಟನೆ ನಡೆದಿದೆ. ವಿಷಯ ತಿಳಿದ ಸ್ಥಳೀಯ ಶಾಸಕ ಬಿ.ಎ.ಬಸವರಾಜು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.

    ಕೊಚ್ಚಿ ಹೋದ ಅಂಗಡಿಗಳು: ಭಾರೀ ಮಳೆಯಿಂದ ನೆಲಮಂಗಲ ತಾಲೂಕಿನ ಅಮಾನಿಕೆರೆ, ಬಿನ್ನಮಂಗಲ, ದಾಸನಪುರ ಕರೆಗೆಗಳು ಭರ್ತಿಯಾಗಿದ್ದು, ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದೆ. ರಸ್ತೆಯ ಮೇಲೆ ಸುಮಾರು ಮೂರು ಅಡಿ ನೀರು ನಿಂತಿದ್ದು, ನೀರಿನ ರಭಸಕ್ಕೆ ಹಲವು ಅಂಗಡಿಗಳು ಕೊಚ್ಚಿ ಹೋಗಿವೆ. ರಸ್ತೆ ದಾಟಲಾಗದೆ ವಾಹನ ಸವಾರರು ಪರದಾಟ ಅನುಭವಿಸುತ್ತಿದ್ದಾರೆ. ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಕಿಲೋಮೀಟರ್‍ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸ್ಥಳೀಯ ಜನರು ತೆರವು ಕಾರ್ಯಚರಣೆಯನ್ನು ನಡೆಸುತ್ತಿದ್ದಾರೆ.

    ಗೋಡೆ ಕುಸಿತ: ಮಳೆಯ ಅರ್ಭಟಕ್ಕೆ ನೆಲಮಂಗಲ ಸಮೀಪದ ಹಿಮಾಲಯ ಡ್ರಗ್ ಕಂಪನಿಯ ಒಳ ಕಾಂಪೌಂಡ್ ಕುಸಿತವಾಗಿದೆ. ಬಿನ್ನಮಂಗಲ ಕೆರೆ ಕೋಡಿ ಒಡೆದ ಪರಿಣಾಮ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯಿಂದ ಕಂಪನಿಯ ಒಳಗೆ ನೀರು ಹರಿದುಬಂದಿದೆ. ಕಂಪನಿಯ ಕೆಲವು ಸ್ಥಳಗಳು ಜಲಾವೃತಗೊಂಡಿದೆ.

  • ರಣಮಳೆಗೆ ನ್ಯಾಷನಲ್ ಹೈವೇ ಜಲಾವೃತ -ವಾಹನಗಳ ಮುಳುಗಡೆ, ಕೋರಮಂಗಲದಲ್ಲಿ ನದಿಯಂತಾದ ರಸ್ತೆ

    ರಣಮಳೆಗೆ ನ್ಯಾಷನಲ್ ಹೈವೇ ಜಲಾವೃತ -ವಾಹನಗಳ ಮುಳುಗಡೆ, ಕೋರಮಂಗಲದಲ್ಲಿ ನದಿಯಂತಾದ ರಸ್ತೆ

    ಬೆಂಗಳೂರು: ನವರಾತ್ರಿ ವೇಳೆ ರಣಚಂಡಿ ಮಳೆಗೆ ಬೆಂಗಳೂರು ಬೆಚ್ಚಿಬಿದ್ದಿದೆ. ಸಿಲಿಕಾನ್ ಸಿಟಿಯಲ್ಲಿ ರಾತ್ರಿಯಿಡಿ ನಿರಂತರವಾಗಿ ಭಾರಿ ಮಳೆ ಆಗಿದೆ. ರಾತ್ರಿ 10.30 ರಿಂದ ಬೆಳಗಿನ ಜಾವದವರೆಗೂ ಬಿಟ್ಟುಬಿಡದೇ ದಾಖಲೆಯ ಮಳೆ ಸುರಿದಿದೆ. ಇದರ ಪರಿಣಾಮ ಕೋರಮಂಗಲದ ಎನ್‍ಜಿವಿ ಗೇಟ್ ಬಳಿಯ ಪ್ರಮುಖ ರಸ್ತೆ ನದಿಯಂತಾಗಿಬಿಟ್ಟಿದೆ. ತುಂಬಿ ಹರಿಯುತ್ತಿರುವ ರಸ್ತೆಯಲ್ಲೇ ವಾಹನಗಳು ಮಂದಗತಿಯಲ್ಲಿ ಸಾಗುತ್ತಿವೆ. ಅಶಕ್ತರು, ಮಕ್ಕಳು ಈ ರಸ್ತೆಯಲ್ಲಿ ಸಾಗಿದ್ರೆ ಕೊಚ್ಚಿಕೊಂಡು ಹೋಗೋದು ಗ್ಯಾರಂಟಿ. ನೀರಿನ ರಭಸ ಅಷ್ಟು ಪ್ರಮಾಣ ಇದೆ.

    ಇತ್ತ ನೆಲಮಂಗಲ ಬಳಿಯ ಬಿನ್ನಮಂಗಲ ಕೆರೆ ತುಂಬಿ ಕೋಡಿ ಬಿದ್ದ ಪರಿಣಾಮ ಕಳೆದೊಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ರಾಷ್ಟ್ರೀಯ ಹೆದ್ದಾರಿ ನಾಲ್ಕು ಮುಳುಗಡೆಯಾಗಿದೆ. ಬಸ್ಸು, ಲಾರಿ ಸೇರಿದಂತೆ ಹಲವು ವಾಹನಗಳು ಮುಳುಗಡೆಯಾಗಿವೆ. ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

    ದೊಡ್ಡಬಿದರಕಲ್ಲಿನ ಕೆರೆ ಒಡೆದಿದ್ದು ಅಂದಾನಪ್ಪ ಲೇಔಟ್ ನದಿಯಂತಾಗಿಬಿಟ್ಟಿದೆ. ನದಿಯೋಪಾದಿಯಲ್ಲಿ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ಹರಿಯುತ್ತಿದೆ. ಮನೆಗಳಿಗೆಲ್ಲಾ ನೀರು ನುಗ್ಗಿದ್ದು, ಸ್ಥಳೀಯರು ಪರದಾಡ್ತಿದ್ದಾರೆ.

    ಜೆ.ಪಿ ನಗರದ ಐದನೇ ಬ್ಲಾಕ್‍ನಲ್ಲಿರುವ ಶಾಕಾಂಬರಿ ನಗರದಲ್ಲಿರುವ ಶೋಭಾ ಡಿಪ್ಲೋರ್ ಅಪಾರ್ಟ್‍ಮೆಂಟ್‍ನ ಕಾಂಪೌಂಡ್ ಪಕ್ಕದ ಮನೆಯ ಮೇಲೆ ಕುಸಿದುಬಿದ್ದಿದೆ. ತಡರಾತ್ರಿ 2 ಗಂಟೆಗೆ ಅವಘಡ ಸಂಭವಿಸಿದ್ದು, ಮನೆ ಬಾಗಿಲಿಗೆ ಸರಿಯಾಗಿ ಕಾಂಪೌಂಡ್ ಬಂದಿದೆ. ನಾಲ್ವರು ಮನೆಯಲ್ಲೇ ಸಿಲುಕಿದ್ದು, ಬೆಳಗ್ಗೆ ಬಂದ ಅಧಿಕಾರಿಗಳು ಜೆಸಿಬಿ ಮೂಲಕ ಕಾರ್ಯಾಚರಣೆ ಮಾಡಿ ನಾಲ್ವರನ್ನು ರಕ್ಷಿಸಿದ್ದಾರೆ. ಇನ್ನು ಎಂದಿನಂತೆ ಈ ಬಾರಿಯೂ ಕೋರಮಂಗಲ ಸಮೀಪದ ಎಸ್‍ಟಿ ಬೆಡ್ ಲೇಔಟ್ ಜಲಾವೃತವಾಗಿದೆ. ಅಪಾರ್ಟ್‍ಮೆಂಟ್‍ಗಳೆಲ್ಲಾ ಜಲಮಯವಾಗಿವೆ. ಎಲ್ಲೆಲ್ಲೂ ನೀರೇ ಕಂಡುಬರ್ತಿದೆ. ಗಾರೆಪಾಳ್ಯದಲ್ಲಿ ಪ್ರವಾಹ ಸ್ಥಿತಿಯನ್ನು ನೆನಪಿಸುವ ವಾತಾವರಣ ಇದೆ. ಇಡೀ ಗಾರೆಪಾಳ್ಯದಲ್ಲಿ ಎಲ್ಲಿ ನೊಡಿದ್ರೂ ನೀರೋ ನೀರು. ಇಲ್ಲಿನ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಜನ ಪರದಾಡ್ತಾ ಇದ್ದಾರೆ.

    ಮಳೆ ಬಂತು ಅಂದ್ರೆ ಸಾಕು ಶೇಷಾದ್ರಿ ರಸ್ತೆಯ ರೈಲ್ವೇ ಅಂಡರ್‍ಪಾಸ್ ಮತ್ತು ಶಿವಾನಂದ ವೃತ್ತದ ಅಂಡರ್ ಪಾಸ್ ಮುಳುಗಡೆ ಆಗುತ್ತಿದ್ದವು. ವಾಹನಗಳು ನೀರಲ್ಲಿ ಸಿಲುಕಿ ಸವಾರರು ಪರದಾಡ್ತಿದ್ರು. ಆದ್ರೆ ನಿನ್ನೆ ರಾತ್ರಿ ರಣಚಂಡಿ ಮಳೆ ಸುರಿದ್ರೂ ಈ ಅಂಡರ್‍ಪಾಸ್‍ಗಳಲ್ಲಿ ಮಳೆ ನೀರು ನಿಂತಿರಲಿಲ್ಲ. ಬಿಬಿಎಂಪಿ ಸಿಬ್ಬಂದಿ ಸಕಾಲಕ್ಕೆ ಈ ಭಾಗದ ಚರಂಡಿ ಕ್ಲೀನ್ ಮಾಡಿದ್ದ ಕಾರಣ ನೀರು ಸರಾಗವಾಗಿ ಹರಿಯುತ್ತಿತ್ತು. ವಾಹನಗಳು ಸಹ ಸರಾಗವಾಗಿ ಚಲಿಸ್ತಿದ್ದವು.

    ಇನ್ನು ಮಾರುತಿ ಲೇಔಟ್‍ನಲ್ಲಿ ಗೋಡೆ ಕುಸಿದುಬಿದ್ದ ಬೆನ್ನಲ್ಲೇ, ಚಂದ್ರಾಲೇಔಟ್‍ನ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿನ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಮಲಗಲು ಜಾಗ ಇಲ್ಲದೇ ಇಲ್ಲಿನ ಜನ ರಾತ್ರಿಯಿಡಿ ನಿದ್ದೆಗೆಡುವಂತಾಯ್ತು. ಧವಸಧಾನ್ಯಗಳು ನೀರು ಪಾಲಾದವು. ಮನೆಗಳಿಂದ ನೀರನ್ನು ಎತ್ತಿ ಹಾಕಿ ಜನ ಸುಸ್ತಾದ್ರು. ಇದೇ ವೇಳೆ ಕೆಆರ್ ಪುರಂನ ಭೀಮಯ್ಯ ಬಡಾವಣೆಯಂತೂ ಸಂಪೂರ್ಣ ಜಲಾವೃತವಾಗಿದೆ. ಬಡಾವಣೆಯ ತುಂಬಾ ಮೊಣಕಾಲುದ್ದ ನೀರು ನಿಂತಿದೆ. ಲೇಔಟ್‍ನ ಗ್ರೌಂಡ್‍ಫ್ಲೋರ್ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯೆಲ್ಲಾ ಜಾಗರಣೆ ಮಾಡುವಂತಾಯ್ತು. ಮೂರ್ನಾಲ್ಕು ಅಡಿವರೆಗೂ ಹರಿಯುತ್ತಿದ್ದ ನೀರಲ್ಲಿ ಕಾರುಗಳು ಪ್ರಯಾಸಪಟ್ಟು ಚಲಿಸ್ತಾ ಇದ್ದಿದ್ದು ಕಂಡುಬಂತು.

     

     

  • ಬಿಬಿಎಂಪಿ ಆಸ್ತಿಯನ್ನ ಅಡ ಇಟ್ಟಿದ್ದ ಬಿಜೆಪಿಯವರು ಈಗ ಜಾಸ್ತಿ ಮಾತಾಡ್ತಿದ್ದಾರೆ: ಸಿಎಂ

    ಬಿಬಿಎಂಪಿ ಆಸ್ತಿಯನ್ನ ಅಡ ಇಟ್ಟಿದ್ದ ಬಿಜೆಪಿಯವರು ಈಗ ಜಾಸ್ತಿ ಮಾತಾಡ್ತಿದ್ದಾರೆ: ಸಿಎಂ

    ಬೆಂಗಳೂರು: ಬಿಬಿಎಂಪಿ ಆಸ್ತಿಯನ್ನು ಅಡ ಇಟ್ಟಿದ್ದ ಬಿಜೆಪಿಯವರು ಈಗ ಜಾಸ್ತಿ ಮಾತನಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

    ಶಂಕರಮಠ ವಾರ್ಡ್ ಹಾಗೂ ಮಹಾಲಕ್ಷ್ಮಿ ಲೇಔಟ್‍ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕು ಸ್ಥಾಪನೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು, ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಜಾಸ್ತಿ ಮಾತಾಡುತ್ತಿದ್ದಾರೆಂದು ಬಿಜೆಪಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇಬೇಕು ಅಂತ ನಿತ್ಯ ಸುಳ್ಳು ಹೇಳಿಕೊಂಡು ರಾಜ್ಯಾದ್ಯಂತ ತಿರುಗಾಡುತ್ತಿದ್ದಾರೆ. ಅವರೂ ಕೆಲಸ ಮಾಡಲ್ಲ, ಒಳ್ಳೆ ಕೆಲಸ ಮಾಡೋರಿಗೂ ಅಡ್ಡಗಾಲು ಹಾಕುತ್ತಾರೆ. ಬಿಜೆಪಿಯವರ ಅಧಿಕಾರವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿ, ಕಸ ವಿಲೇವಾರಿ, ಒಳಚರಂಡಿ, ರಾಜಕಾಲುವೆ ಅಭಿವೃದ್ಧಿಯನ್ನ ಮಾಡಲಿಲ್ಲ. ಇವತ್ತಿನ ಬೆಂಗಳೂರಿನ ಪರಿಸ್ಥಿತಿಗೆ ಬಿಜೆಪಿಯವರೇ ಕಾರಣವೆಂದು ವಾಗ್ದಾಳಿ ನಡೆಸಿದರು.

    ರಾಜಕಾಲುವೆ ಅಭಿವೃದ್ಧಿ ಕೆಲಸ ನಾವು ಮಾಡ್ತಿದ್ದೇವೆ. ಸಾವಿರಾರು ಕೋಟಿ ಬೆಂಗಳೂರು ಅಭಿವೃದ್ದಿಗೆ ನಮ್ಮ ಸರ್ಕಾರದಿಂದ ಹಣ ನೀಡಿದ್ದೇವೆ. ಮುಂದಿನ ಅವಧಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಮುಂದಿನ ಅವಧಿಯಲ್ಲಿ ಎಷ್ಟೇ ಕೋಟಿ ಖರ್ಚು ಆದರೂ ಇಡೀ ಬೆಂಗಳೂರಿಗೆ ವೈಟ್ ಟ್ಯಾಪಿಂಗ್ ರೋಡ್ ಹಾಕಿಸುತ್ತೇನೆಂದು ಸಿಎಂ ಘೋಷಣೆ ಮಾಡಿದರು.

    109 ಕೋಟಿ.ರೂ. ವೆಚ್ಚದಲ್ಲಿ, ಉದ್ಯಾನವನದ ಶೆಲ್ಟರ್ ನಿರ್ಮಾಣ, ಈಜುಕೊಳದ ಉನ್ನತೀಕರಣ ಕಾಮಗಾರಿ, ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಸಿಎಂ ಸಿದ್ದರಾಮಯ್ಯ ಶಂಕು ಸ್ಥಾಪನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಪದ್ಮಾವತಿ, ಸಚಿವ ಸೀತಾರಾಂ, ಶಾಸಕರಾದ ಗೋಪಾಲಯ್ಯ, ಮುನಿರತ್ನ ಭಾಗಿಯಾಗಿದ್ದರು.

    ಗೋಪಾಲಯ್ಯ ವಾಗ್ದಾಳಿ: ಇವತ್ತು ಬಿಬಿಎಂಪಿ ಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಇದೆ. ನಮ್ಮ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಬಿಜೆಪಿ ಪಾಲಿಕೆಯ ಅಧಿಕಾರದಲ್ಲಿ ಇದ್ದಾಗ ಯಾವುದೇ ಕೆಲಸ ಮಾಡಿಲ್ಲ. ನಾವು ಅಭಿವೃದ್ಧಿ ಕೆಲಸ ಮಾಡಲು ಹೋದರೆ ಬಿಜೆಪಿಯವರು ವಿನಾಕಾರಣ ವಿರೋಧ ಮಾಡಿ ತೊಂದರೆ ಕೊಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸಗಳಾಗಿಲ್ಲ. ನಮ್ಮ ಅಧಿಕಾರ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ ಎಂದು ಬಿಜೆಪಿ ವಿರುದ್ಧ ಗೋಪಾಲಯ್ಯ ವಾಗ್ದಾಳಿ ನಡೆಸಿದರು.

  • ರಾಜ್ಯದ ಎಲ್ಲಾ ರೈತರಿಗೂ ಎ ಗ್ರೇಡ್ ಬಿತ್ತನೆ ಬೀಜ ನೀಡಲು ಸರ್ಕಾರ ನಿರ್ಧಾರ

    ರಾಜ್ಯದ ಎಲ್ಲಾ ರೈತರಿಗೂ ಎ ಗ್ರೇಡ್ ಬಿತ್ತನೆ ಬೀಜ ನೀಡಲು ಸರ್ಕಾರ ನಿರ್ಧಾರ

    ಬೆಂಗಳೂರು: ರಾಜ್ಯದ ಎಲ್ಲಾ ರೈತರಿಗೂ ಎ ಗ್ರೇಡ್ ಬಿತ್ತನೆ ಬೀಜ ನೀಡುವುದಾಗಿ ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

    ಹೆಬ್ಬಾಳ, ಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ನಿರ್ಮಿಸಿರುವ ಬೀಜ ಭವನದಲ್ಲಿ ಮಾರಾಟ ಭವನ ಕಟ್ಟಡ ಉದ್ಘಾಟನೆ ವೇಳೆಯಲ್ಲಿ ಮಾತನಾಡಿದ ಕೃಷಿ ಸಚಿವ ಕೃಷ್ಣಭೈರೇಗೌಡ ರಾಜ್ಯದ ಎಲ್ಲಾ ರೈತರಿಗೂ ಎ ಗ್ರೇಡ್ ಬಿತ್ತನೆ ಬೀಜ ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದರು.

    ರೈತರಿಗೆ ನಮ್ಮ ಸರ್ಕಾರ ಬಂದ ಮೇಲೆ ಅಗತ್ಯ ಬಿತ್ತನೆ ಬೀಜಗಳನ್ನ ನೀಡಿದ್ದೇವೆ. ಹಿಂದಿನ ಸರ್ಕಾರಗಳು ಸಮರ್ಪಕವಾಗಿ ಬಿತ್ತನೆ ಬೀಜ ನೀಡದೇ ಗಲಾಟೆಗಳಾಗಿ ರೈತರು ಸತ್ತಿದ್ದಾರೆ. ಆದರೆ ನಮ್ಮ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆದಿಲ್ಲ. ರೈತರಿಗೆ ಮುಂದಿನ 3 ವರ್ಷಗಳ ಕಾಲ ಉತ್ತಮ ಬಿತ್ತನೆ ಬೀಜ ನೀಡಲು ಸರ್ಕಾರ ನಿರ್ಧಾರ ಮಾಡಿಕೊಂಡಿದೆ. ಇನ್ಮುಂದೆ ರೈತರಿಗೆ ಈ ವರ್ಷದಿಂದಲೇ ಎ ದರ್ಜೆಯ ಬೀಜ ಮಾತ್ರ ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಎರಡನೇ ದರ್ಜೆಯ ಬೀಜ ರೈತರಿಗೆ ನೀಡದಿರಲು ಸೂಚನೆಯನ್ನು ನೀಡಲಾಗಿದೆ.

    ಬೀಜ ಕಂಪನಿಗಳು, ಬೀಜ ನಿಗಮ ವಿಶ್ವವಿದ್ಯಾಲಯಗಳು ಜೊತೆ ಮಾತುಕತೆಯಾಗಿದೆ. ಎ ದರ್ಜೆ ಬಿತ್ತನೆ ಬೀಜ ನೀಡಲು ನಿಯಮ ರೂಪಿಸಿದ ಮೊದಲ ಸರ್ಕಾರ ನಮ್ಮದು ಎಂದು ಕೃಷ್ಣಭೈರೇಗೌಡರು ಹೇಳಿಕೆ ನೀಡಿದರು.

    ಪುಷ್ಪೋದ್ಯಮದಲ್ಲಿ ನಮ್ಮ ರಾಜ್ಯ ಅತ್ಯಂತ ಮುಂಚೂಣಿಯಲ್ಲಿದೆ. 2000 ರಿಂದ ಇಲ್ಲಿಯವರೆಗೂ ನಿತ್ಯ ಪುಷ್ಪ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಭಾರತದಲ್ಲೇ ಮೊದಲ ಪುಷ್ಪ ಹರಾಜು ಕೇಂದ್ರ ನಮ್ಮದು. ಏಷ್ಯಾದಲ್ಲಿ ಜಪಾನ್ ಬಿಟ್ಟರೆ ಎರಡನೇ ಸ್ಥಾನ, ನಮ್ಮ ಪುಷ್ಪ ಹರಾಜು ಕೇಂದ್ರ. ಪುಷ್ಪ ವಾಣಿಜ್ಯ ಉದ್ಯಮವನ್ನ ಉನ್ನತೀಕರಿಸಲು ಪುಷ್ಪ ಸ್ಟುಡಿಯೋ ನಿರ್ಮಾಣ ಮಾಡಲಾಗಿದೆ ಎಂದರು.

    ದೇಶದಲ್ಲೇ ಅತಿ ಹೆಚ್ಚು ಪುಷ್ಪ ಬೆಳೆಯುವ ರಾಜ್ಯ ಕರ್ನಾಟಕ. ಪುಷ್ಪೋದ್ಯಮ ಕ್ಷೇತ್ರದಲ್ಲಿ ದೇಶಕ್ಕೆ ಕರ್ನಾಟಕ ನಂಬರ್ ಒನ್. 2006-07 ರಿಂದ ಹಾಲೆಂಡ್ ಮಾದರಿಯಲ್ಲಿ ಹರಾಜು ಪ್ರಕ್ರಿಯೆ ನಡೆಸುತ್ತಿದ್ದೇವೆ. ಜನವರಿಯಿಂದ ಎಪಿಎಂಸಿಗಳಂತೆ ಪುಷ್ಪ ಹರಾಜಿಗೆ ಆನ್‍ಲೈನ್ ಟ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆಂದು ಕೃಷ್ಣಭೈರೇಗೌಡ ತಿಳಿಸಿದರು.

    ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ವತಿಯಿಂದ ಅತ್ಯಾಧುನಿಕ 7 ಅಂತಸ್ತಿನ ಬೀಜ ಭವನ ನೂತನ ಕಟ್ಟಡವನ್ನು ಒಂದು ಎಕರೆ ಜಾಗದಲ್ಲಿ, 14 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡ ಉದ್ಘಾಟಿಸಿದರು.

  • ತಡರಾತ್ರಿಯಿಂದ ಬೆಂಗ್ಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ- ಮನೆಗಳಿಗೆ ನುಗ್ಗಿದ ನೀರು, ಮುಳುಗಿದ ವಾಹನಗಳು

    ತಡರಾತ್ರಿಯಿಂದ ಬೆಂಗ್ಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ- ಮನೆಗಳಿಗೆ ನುಗ್ಗಿದ ನೀರು, ಮುಳುಗಿದ ವಾಹನಗಳು

    ಕರ್ನಾಟಕ: ರಾಜ್ಯದ ಹಲವೆಡೆ ತಡರಾತ್ರಿ ವರುಣನ ಆರ್ಭಟಕ್ಕೆ ಮತ್ತೆ ಅವಾಂತರಗಳು ಮುಂದುವರಿದಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಯಲ್ಲಿಯೇ ವಾಹನಗಳು ಮುಳುಗಿ ಹೋಗಿವೆ. ಇಂದು ಬೆಳ್ಳಂಬೆಳಗ್ಗೆಯೇ ಮಳೆ ಶುರುವಾಗಿದ್ದು, ಶಾಲಾ-ಕಾಲೇಜು ಮತ್ತು ಕಚೇರಿಗೆ ತೆರಳಲು ಜನ ಪರದಾಡುತ್ತಿದ್ದಾರೆ.

    ಬೆಂಗಳೂರಿನಲ್ಲಿ ತಡರಾತ್ರಿ ಮತ್ತೆ ಮಳೆರಾಯ ಆರ್ಭಟಿಸಿದ್ದಾನೆ. ಯಶವಂತಪುರ, ಯುಬಿಸಿಟಿ, ಶಾಂತಿನಗರ, ಮಲ್ಲೇಶ್ವರಂ, ಎಂಜಿ ರೋಡ್, ವಿಜಯನಗರ ಸೇರಿದಂತೆ ನಗರದ ಎಲ್ಲೆಡೆ ಧಾರಾಕಾರವಾಗಿ ಮಳೆ ಸುರಿದಿದೆ. ತಡರಾತ್ರಿ ಸುಮಾರು 1.30ರ ಸುಮಾರಿಗೆ ಬಿರುಸಾಗಿ ಸುರಿಯಲಾರಂಭಿಸಿದ ಮಳೆ ವಾಹನಸವಾರರಿಗೆ ತೊಡಕುಂಟು ಮಾಡಿದೆ. ಶಿವಾನಂದ ಸರ್ಕಲ್, ಡಬಲ್ ರೋಡ್ ಹಾಗೂ ನಗರದ ಹಲವು ರಸ್ತೆಗಳು ನೀರಿನಿಂದ ತುಂಬಿ ಕೆರೆಗಳಂತಾಗಿವೆ. ಅದರಲ್ಲೂ ಶಿವಾನಂದ ವೃತ್ತದ ಸಮೀಪದಲ್ಲಿರುವ ರೈಲ್ವೇ ಅಂಡರ್‍ಪಾಸ್‍ನಲ್ಲಿ ಮಳೆಯ ಪರಿಣಾಮ ಕಾರು, ಲಾರಿ ಸಿಲುಕಿಕೊಂಡಿದೆ. ನೀರಿನ ರಭಸ ಹೆಚ್ಚಿದ್ದ ಕಾರಣ ಉಳಿದ ವಾಹನಗಳ ಸವಾರರು ಚಾಲನೆ ಮಾಡಲು ಹಿಂದೇಟು ಹಾಕಿದ್ದಾರೆ.

    ಇನ್ನು ವಿಜಯಪುರ, ದಾವಣಗೆರೆ, ಗದಗ, ಧಾರವಾಡ, ಮೈಸೂರು, ರಾಮನಗರ ಸೇರಿದಂತೆ ಹಲವೆಡೆ ಧಾರಕಾರವಾಗಿ ಮಳೆ ಸುರಿದಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಬಳಿಯ ಪಾರ್ವತಿ ಕಟ್ಟೆ ಸೇತುವೆ ಹತ್ತಿರ ರೈಲ್ವೇ ಹಳಿ ಮೇಲೆ ಮಣ್ಣು ಕುಸಿದಿದ್ದು, ಗ್ಯಾಂಗ್‍ಮನ್ ಸಮಯ ಪ್ರಜ್ಞೆಯಿಂದ ಮಣ್ಣನ್ನು ಕೂಡಲೇ ತೆರವು ಮಾಡಲಾಗಿದೆ. ಇಲ್ಲದಿದ್ದರೆ ದೊಡ್ಡ ಅನಾಹುತಗಳೇ ಸಂಭವಿಸುತ್ತಿತ್ತು.

    ದಾವಣಗೆರೆಯ ಬಾಷಾನಗರ, ಶೇಖರಪ್ಪ ಬಡಾವಣೆ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ರಾತ್ರಿಯೆಲ್ಲಾ ಜಾಗರಣೆ ಮಾಡಿದ್ದಾರೆ. ಕೆಲವು ಕಡೆ ನೀರಿನಲ್ಲಿ ಬೈಕು, ಕಾರುಗಳು ಮುಳುಗಡೆಯಾಗಿವೆ. ಅದೇ ಸಂದರ್ಭದಲ್ಲಿ ವಿದ್ಯುತ್ ಕೂಡ ಕೈಕೊಟ್ಟಿದೆ. ಇದರಿಂದ ಜನರು ಪರದಾಡುವಂತಾಯಿತು.

    ಧಾರವಾಡ, ಗದಗದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವು ಮನೆಗಳು ಜಲಾವೃತಗೊಂಡಿವೆ. ಇದೆಲ್ಲದರ ಮಧ್ಯೆ ಇತ್ತ ಮೈಸೂರು ದಸರೆಗೂ ಮಳೆ ಅಡ್ಡಿಯುಂಟುಮಾಡಿದೆ. ವಾರದ ಕೊನೆಯಲ್ಲಿ ಮೈಸೂರು ದಸರಾ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ಪರದಾಡುವಂತಾಗಿದೆ. ರಾಮನಗರದಲ್ಲೂ ಅತಿಯಾದ ಮಳೆ ಸುರಿದಿದ್ದು, ವಾಹನ ಸಂಚಾರ ಸ್ಥಗಿತವಾಗಿ ಜನರು ಪರದಾಡುವಂತಾಗಿದೆ.

  • ಇನ್ನು ಮುಂದೆ ಪ್ಯಾಂಟ್, ಟೀ ಶರ್ಟ್ ಧರಿಸಿ ದೇವಾಲಯ ಪ್ರವೇಶಿಸುವಂತಿಲ್ಲ!

    ಇನ್ನು ಮುಂದೆ ಪ್ಯಾಂಟ್, ಟೀ ಶರ್ಟ್ ಧರಿಸಿ ದೇವಾಲಯ ಪ್ರವೇಶಿಸುವಂತಿಲ್ಲ!

    ಬೆಂಗಳೂರು: ಮುಜುರಾಯಿ ಇಲಾಖೆಯ ವ್ಯಾಪ್ತಿಯ ಅಡಿಯಲ್ಲಿ ಬರುವ ದೇವಾಲಯವನ್ನು ಇನ್ನು ಮುಂದೆ ಜೀನ್ಸ್, ಶಾಟ್ಸ್, ಟೀ ಶರ್ಟ್ ಗಳು ಧರಿಸಿ ಭಕ್ತಾಧಿಗಳು ಪ್ರವೇಶುವಂತಿಲ್ಲ.

    ಹೌದು, ಸರ್ಕಾರ ನೇಮಿಸಿದ್ದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ದೇವಾಲಯಗಳಿಗೆ ಭೇಟಿ ನೀಡುವವರಿಗೆ ಸೂಕ್ತ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ದೇವಾಲಯಕ್ಕೆ ಬರುವ ಇಂದಿನ ಯುವ ಜನಾಂಗದವರು ಪಾಶ್ಚಿಮಾತ್ಯ ಶೈಲಿಯ ಬಟ್ಟೆಗಳನ್ನು ಧರಿಸಿ ದೇವಾಲಕ್ಕೆ ಆಗಮಿಸುತ್ತಿದ್ದು, ಇದರಿಂದಾಗಿ ದೇವಾಲಯಕ್ಕೆ ಆಗಮಿಸುವ ಸಂಪ್ರದಾಯಿಕ ಭಕ್ತರ ಭಾವನೆಗಳಿಗೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲು ಮುಂದಾಗುತ್ತಿದೆ ಎಂದು ಹೇಳಿದೆ.

    ಯಾವುದಕ್ಕೆ ನಿಷೇಧ?
    ವಸ್ತ್ರ ಸಂಹಿತೆ ನಿಯಮಗಳ ಪ್ರಕಾರ ದೇವಾಲಯಕ್ಕೆ ಬರುವ ಭಕ್ತರು ಜೀನ್ಸ್, ಶಾಟ್ಸ್, ಅರ್ಧ ಪ್ಯಾಂಟ್ ಮತ್ತು ಟಿ-ಶರ್ಟ್ ಗಳನ್ನು ಧರಿಸಿಬರುವಂತಿಲ್ಲ. ಬದಲಾಗಿ ಮಹಿಳೆಯರು ಸೀರೆ ಹಾಗೂ ಸಲ್ವಾರ್ ಕಮಿಜ್‍ಗಳನ್ನು ಹಾಗೂ ಪುರುಷರ ಪಂಚೆ, ಪ್ಯಾಟ್ ಮತ್ತು ಶರ್ಟ್‍ಗಳನ್ನು ಧರಿಸಿಬರಲು ಅವಕಾಶವನ್ನು ನೀಡಲಾಗಿದೆ. ಅಕ್ಟೋಬರ್ 3 ರಂದು ನಡೆಯುವ ಪರಿಷತ್‍ನ ಸಭೆಯಲ್ಲಿ ಈ ಕುರಿತು ಪ್ರಸ್ತಾಪ ಮಾಡಿ ರಾಜ್ಯಾದ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ವಸ್ತ್ರ ಸಂಹಿತೆಯನ್ನು ಅನುಸರಿಸಲು ಸೂಚಿಸಲಾಗುವುದು. ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆಗಳನ್ನು ಕಳುಹಿಸಲಾಗುವುದು ಎಂದು ರಾಜ್ಯ ಧಾರ್ಮಿಕ ಪರಿಷತ್‍ನ ಸದಸ್ಯರಾದ ಪದ್ಮನಾಭ ಕೋಟ್ಯಾನ್ ತಿಳಿಸಿದ್ದಾರೆ.

    ಪರಿಷತ್ ಧಾರ್ಮಿಕ ಅಚರಣೆಗಳು ಮತ್ತು ಸಂಪ್ರಾದಾಯಗಳ ಅಂಶಗಳಿಗೆ ಸಂಬಂಧಿಸಿದಂತೆ ಉಂಟಾಗುವ ಗೊಂದಲಗಳು ಹಾಗೂ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ಕಾರ್ಯವನ್ನು ಮಾಡುತ್ತದೆ. ವಸ್ತ್ರ ಸಂಹಿತೆ ಕುರಿತು ಈ ಹಿಂದಿನ ಸಭೆಯಲ್ಲಿ ಚರ್ಚೆಯನ್ನು ನಡೆಸಲಾಗಿದೆ. ಈ ಕುರಿತು ವರದಿ ನೀಡುವಂತೆ ಸಮಿತಿಯನ್ನು ರಚಿಸಿ ಅದರ ಸಲಹೆಗಳ ಮೇರೆಗೆ ನಿಯಮಗಳನ್ನು ಸಿದ್ಧಪಡಿಸಲಾಗಿದೆ. ವಸ್ತ್ರ ಸಂಹಿತೆಯನ್ನು ಜಾರಿಗೆ ತರುತ್ತಿರುವುದು ಕರ್ನಾಟಕ ಮಾತ್ರ ಅಲ್ಲ. ಈಗಾಗಲೇ ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶಗಳಲ್ಲಿ ಈ ಕುರಿತು ನಿಯಮಗಳನ್ನು ರೂಪಿಸಲಾಗಿದೆ ಎಂದರು.

    ತಮಿಳುನಾಡು ಮತ್ತು ಕೇರಳ ರಾಜ್ಯದ ಎಲ್ಲಾ ದೇವಾಲಯಗಲ್ಲಿಯು ಈ ನಿಯಮ ಜಾರಿಗೆ ಬಂದಿಲ್ಲ. ಗುರುವಾಯೂರ್ ಶ್ರೀ ಕೃಷ್ಣ ದೇವಾಲಯ ಹಾಗೂ ತಿರುವನಂತಪುರ ಪದ್ಮನಾಭಸ್ವಾಮಿ ದೇವಾಲಯಗಳಲ್ಲಿ ಮಾತ್ರ ವಸ್ತ್ರ ಸಂಹಿತೆ ನಿಯಮವನ್ನು ಜಾರಿಗೆ ಮಾಡಲಾಗಿದೆ. ಈ ವೇಳೆಯಲ್ಲಿಯೂ ಸಹ ವಸ್ತ್ರ ಸಂಹಿತೆ ಜಾರಿಗೆ ಕುರಿತು ಹಲವು ವಾದ ವಿವಾದಗಳು ನಡೆದವು.

    ಕೇವಲ ದೇವಾಲಯಾದ ಭಕ್ತರಿಗೆ ಮಾತ್ರ ವಸ್ತ್ರ ಸಂಹಿತೆಯನ್ನು ಜಾರಿಗೆಗೊಳಿಸಿಲ್ಲ. ಆರ್ಚಕರಿಗೂ ಈ ಕುರಿತು ಪ್ರತ್ಯೇಕ ನಿಯಮಗಳನ್ನು ರಚಿಸಲಾಗಿದೆ. ದೇವಾಲಯದಲ್ಲಿ ಆರ್ಚಕರನ್ನು ಗುರುತಿಸಲು ಸುಲಭವಾಗುವಂತೆ ಈ ನಿಯಮಗಳನ್ನು ಜಾರಿಗೆ ಮಾಡಲಾಗಿದೆ. ಈ ಕುರಿತು ದೇವಾಲಯದ ಆಡಳಿತ ಮಂಡಳಿ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿದ್ದಾರೆ.

    ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ಸಂಸ್ಥೆಗಳ ತಿದ್ದುಪಡಿ ಅಧಿನಿಯಮದ ಪ್ರಕಾರ ಸರ್ಕಾರ `ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್~ ರಚಿಸಿದ್ದು ಇದರಲ್ಲಿ ಎಂಟು ಸದಸ್ಯರು ಇರುತ್ತಾರೆ. ಧಾರ್ಮಿಕ ಪರಿಷತ್ ಅಧಕ್ಷರಾಗಿ ಮುಜರಾಯಿ ಸಚಿವರು ಕಾರ್ಯನಿರ್ವಹಿಸಿದರೆ, ಇತರೆ ಏಳು ಜನ ಸದಸ್ಯರನ್ನು ಹೊಂದಿರುತ್ತದೆ. ಧಾರ್ಮಿಕ ಇಲಾಖೆ ಅಡಿಯಲ್ಲಿ ರಾಜ್ಯದ್ಯಾಂತ ಸುಮಾರು 34 ಸಾವಿರ ದೇವಾಲಯಗಳು ಬರುತ್ತವೆ. ಇದರಲ್ಲಿ 160 `ಎ’ ಗ್ರೇಡ್ ದೇವಾಲಯಗಳಿವೆ. ಇವುಗಳಿಂದ ವಾರ್ಷಿಕವಾಗಿ ಒಂದೊಂದು ದೇವಾಲಯಗಳಿಂದ 25 ಲಕ್ಷ ರೂ.ಗಿಂತಲೂ ಹೆಚ್ಚು ಆದಾಯ ಸರ್ಕಾರಕ್ಕೆ ಲಭಿಸುತ್ತದೆ.

  • ಕೋರ್ಟ್ ಸ್ಟೇ ನೀಡದೇ ಇದ್ರೆ ಬಿಎಸ್‍ವೈ ವಿರುದ್ಧ 30 ಎಫ್‍ಐಆರ್ ಆಗ್ತಿತ್ತು: ಗೋ ಮಧುಸೂದನ್

    ಕೋರ್ಟ್ ಸ್ಟೇ ನೀಡದೇ ಇದ್ರೆ ಬಿಎಸ್‍ವೈ ವಿರುದ್ಧ 30 ಎಫ್‍ಐಆರ್ ಆಗ್ತಿತ್ತು: ಗೋ ಮಧುಸೂದನ್

    ಬೆಂಗಳೂರು: ಬಿಎಸ್ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹಾಕಿದ್ದ ಎಫ್‍ಐಆರ್‍ಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡುವ ಮೂಲಕ ಸರ್ಕಾರಕ್ಕೆ ತಪರಾಕಿ ಹಾಕಿದೆ ಎಂದು ಬಿಜೆಪಿ ವಕ್ತಾರ ಗೋ ಮಧುಸೂದನ್ ಹೇಳಿದ್ದಾರೆ.

    ಹೈಕೋರ್ಟ್ ಆದೇಶ ಪ್ರಕಟವಾದ ಬಳಿಕ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಮೇಲೆ ಒಂಂದೇ ಪ್ರಕರಣಕ್ಕೆ ಎರಡು ಎಫ್‍ಐಆರ್‍ಗಳನ್ನು ಎಸಿಬಿ ಹಾಕಿರುವುದು ಸರಿಯಲ್ಲ ಅಂತಾ ಕೋರ್ಟ್ ತಿಳಿಸಿದೆ. ಅಷ್ಟೇ ಅಲ್ಲದೇ ಇನ್ನೂ 25-30 ಎಫ್‍ಐಆರ್‍ಯನ್ನು ಬಿಎಸ್‍ವೈ ವಿರುದ್ಧ ಹಾಕುವುದು ಎಸಿಬಿನ ಉದ್ದೇಶವಾಗಿತ್ತು. ಆದರೆ ಅದಕ್ಕೆಲ್ಲಾ ಕೋರ್ಟ್ ತಡೆ ನೀಡಿದೆ ಎಂದು ಸಂತಸದಿಂದ ಹೇಳಿದರು.

    ಶಿವರಾಂ ಕಾರಂತ ಬಡಾವಣೆಗೆ ನೋಟಿಫಿಕೇಷನ್ ಆಗಿದ್ದ ಭೂಮಿಯಲ್ಲಿ ಒಂದಿಂಚೂ ಭೂಮಿಯನ್ನು ಬಿಡಿಎ ಬಿಟ್ಟುಕೊಟ್ಟಿಲ್ಲ. ಹಾಗಾಗಿ ನೊಟಿಫೈ ಆಗಿದ್ದ ಭೂಮಿ ಡಿನೊಟಿಫೈ ಆಗೇ ಇಲ್ಲ. ಆದ್ದರಿಂದ ಎಸಿಬಿ ಎಫ್‍ಐಆರ್ ಹಾಕಿರುವುದೇ ಕಾನೂನು ಬಾಹಿರವಾಗಿದೆ. ಇನ್ನೂ ಮುಂದೆ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಎಸಿಬಿಗೆ ಅಧಿಕಾರವೇ ಇಲ್ಲ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

    ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಸ ಮಾಡಲು ನಿರ್ಧಾರ ಮಾಡಿದ್ದರು. ಆದರೆ ಅದನ್ನು ಸಿಎಂ ಸಿದ್ದರಾಮಯ್ಯ ತಡೆಯುವ ಉದ್ದೇಶವನ್ನು ಇಟ್ಟುಕೊಂಡಿದ್ದರು. ಆದರೆ ಇಂದು ಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಸಿಎಂಗೆ ಮುಖಭಂಗವಾಗಿದೆ ಎಂದರು.

    ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಡಾ.ಶಿವರಾಮ ಖಾರಂತ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಶಪಡಿಸಿಕೊಂಡಿದ್ದ ಜಮೀನಿನಲ್ಲಿ 257 ಎಕರೆ 20.5 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಲು ಆದೇಶಿಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎಸಿಬಿ ಎಫ್‍ಐಆರ್ ದಾಖಲಾಗಿತ್ತು.

    ಹೈಕೋರ್ಟ್ ತಡೆಯಾಜ್ಞೆ:
    ಎಫ್‍ಐಆರ್ ದಾಖಲಿಸಲು ವಿಳಂಬ ಮಾಡಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತು ಮಾಡುವ ದಾಖಲೆಗಳಿಲ್ಲ ಎಂದು ಹೇಳಿ ನ್ಯಾ. ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಬಿಎಸ್‍ವೈ ವಿರುದ್ಧ ದಾಖಲಾಗಿದ್ದ ಎಫ್‍ಐಆರ್‍ಗೆ ತಡೆಯಾಜ್ಞೆ ನೀಡಿದೆ. ಡಿನೋಟಿಫೈ ಮಾಡಿ ಲಾಭ ಮಾಡಿಕೊಂಡಿರುವ ಬಗ್ಗೆ ಸೂಕ್ತ ಸಾಕ್ಷ್ಯಗಳಿಲ್ಲ. ಅಷ್ಟೇ ಅಲ್ಲದೇ ಒಂದೇ ದೂರಿನಲ್ಲಿ ಎರಡು ಎಫ್‍ಐಆರ್ ದಾಖಲಿಸುವುದು ಕಾನೂನು ಬಾಹಿರ ಎಂದು ನ್ಯಾ. ಅರವಿಂದ್ ಕುಮಾರ್ ಅಭಿಪ್ರಾಯಪಟ್ಟು ತಡೆಯಾಜ್ಞೆ ನೀಡಿದ್ದಾರೆ.

  • ಪಾರ್ಕ್‍ನಲ್ಲಿ ಎಸಿ ಹಾಕಿಸಿದ ಶಾಸಕರು- ಸುಮ್ಮನೆ ಹಣಪೋಲು ಎಂದು ಸ್ಥಳೀಯರ ಆಕ್ರೋಶ

    ಪಾರ್ಕ್‍ನಲ್ಲಿ ಎಸಿ ಹಾಕಿಸಿದ ಶಾಸಕರು- ಸುಮ್ಮನೆ ಹಣಪೋಲು ಎಂದು ಸ್ಥಳೀಯರ ಆಕ್ರೋಶ

    ಬೆಂಗಳೂರು: ಮಳೆ ಬಂದ್ರೆ ಬೆಂಗಳೂರು ತೊಯ್ದು ತೊಪ್ಪೆಯಾಗತ್ತೆ. ಮತ್ತೊಂದು ಕಡೆ ರಸ್ತೆ ಗುಂಡಿ ವಾಹನ ಸವಾರರನ್ನ ಹಿಂಡಿ ಹಿಪ್ಪೆ ಮಾಡತ್ತೆ. ನೈಸರ್ಗಿಕ ಗಾಳಿ ಸಿಗಲಿ ಅಂತ ಪಾರ್ಕ್‍ಗೆ ವೃದ್ಧರು, ಮಹಿಳೆಯರು, ಮಕ್ಕಳು ಪಾರ್ಕ್‍ಗೆ ಬರ್ತಾರೆ. ಆದ್ರೆ ಈ ಪಾರ್ಕ್ ಮಾತ್ರ ಸಿಕ್ಕಾಪಟ್ಟೆ ಹೈಫೈ. ಈ ಪಾರ್ಕ್‍ಗೆ ಬಂದ್ರೆ ಎಸಿ ಗಾಳಿ ಕುಡೀಬೇಕು.

    ಇಂಥದ್ದೊಂದು ಪಾರ್ಕ್ ಇರೋದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನಲ್ಲಿ. ಇದನ್ನ ಉಪಮಹಾಪೌರರ ಅನುದಾನದಡಿಯಲ್ಲಿ ಮಾಡಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಹಾಗೂ ಕಾರ್ಪೊರೇಟರ್ ಕೇಶವಮೂರ್ತಿ ಪಾರ್ಕ್‍ನಲ್ಲೂ ಎಸಿ ಹಾಕಿಸಿದ್ದಾರೆ.

    ಪಾರ್ಕ್‍ನಲ್ಲಿ ಎಸಿ ಅಳವಡಿಕೆ ಮಾಡುವ ಯೋಜನೆಗೆ ಬಿಬಿಎಂಪಿ ಹಾಗೂ ಸರ್ಕಾರದ ಹಣವನ್ನು ಬಳಕೆ ಮಾಡಿ ಹಣ ದೋಚುವ ಸಾಹಸಕ್ಕೆ ಶಾಸಕ ಗೋಪಾಲಯ್ಯ ಹಾಗೂ ಕಾರ್ಪೊರೇಟರ್ ಕೇಶವಮೂರ್ತಿ ಮುಂದಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಕೆಲ ಸ್ಥಳೀಯರು ಮಾತನಾಡಿ, ಬಡಾವಣೆಯಲ್ಲಿ ಎಷ್ಟೆಲ್ಲಾ ಸಮಸ್ಯೆಗಳು ಇವೆ. ಮಳೆ ಬಂತೆಂದರೆ ಬಡಾವಣೆಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡುತ್ತಿದೆ. ಅಲ್ಲದೇ ರಸ್ತೆಗಳೆಲ್ಲ ಹದಗೆಟ್ಟಿದ್ದು, ವಾಹನ ಸವಾರರಿಗೆ ತಲೆ ನೋವಾಗಿದೆ. ಇಂತಹ ಕೆಲಸಗಳಿಗೆ ಅನುದಾನ ಪಡೆದು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಮೂಲಭೂತ ಸೌಕರ್ಯಗಳ ಬಗ್ಗೆ ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಹೈಫೈ ಎಸಿ ಪಾರ್ಕ್ ಯೋಜನೆ ಸಮಂಜಸವಲ್ಲ ಎಂದು ಆರೋಪಿಸಿದ್ದಾರೆ.

    ಸರ್ಕಾರದ ಮತ್ತು ಬಿಬಿಎಂಪಿ ಉಪಮೇಯರ್ ಅನುದಾನವನ್ನ ಒಳ್ಳೆಯ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಬೇಕು. ಅವ್ಯವಸ್ಥೆಯ ಬಗ್ಗೆ ಗಮನಹರಿಸದೇ ಶಾಸಕ ಗೋಪಾಲಯ್ಯ ಹಾಗೂ ಕಾರ್ಪೊರೇಟರ್ ಕೇಶವಮೂರ್ತಿ ಸಾರ್ವಜನಿಕ ಪಾರ್ಕ್‍ನಲ್ಲಿ ಎಸಿ ಅಳವಡಿಕೆ ಮಾಡಲು ಮುಂದಾಗಿದ್ದಾರೆ. ಜನರಿಗೆ ಹೈಫೈ ಎಸಿ ಪಾರ್ಕ್‍ನ ಅವಶ್ಯಕತೆಯಿಲ್ಲ. ಇದು ಹುಚ್ಚಾಟದ ಆಲೋಚನೆ. ಪಾರ್ಕ್‍ನಲ್ಲಿ ಎಸಿ ಅಳವಡಿಕೆ ಆಲೋಚನೆ ಬಿಟ್ಟು ಜನಪರ ಕೆಲಸ ಮಾಡಬೇಕು ಎಂದು ಸ್ಥಳೀಯ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.