Tag: Bangalore

  • ಬ್ರಿಡ್ಜ್ ಮೇಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

    ಬ್ರಿಡ್ಜ್ ಮೇಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

    ಬೆಂಗಳೂರು: ಬ್ರಿಡ್ಜ್ ಮೇಲಿನಿಂದ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ವಿಂಡ್ಸನ್ ಮ್ಯಾನರ್ ಹೋಟೆಲ್ ಬಳಿ ನಡೆದಿದೆ.

    ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಬಿಹಾರ ಮೂಲದ ಅಜಯ್(26) ಎಂದು ಗುರುತಿಸಲಾಗಿದ್ದು, ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

    ಬ್ಲೂವೇಲ್ ಗೇಮ್ ಹೆಚ್ಚಾಗಿ ಅಡುತ್ತಿದ್ದ ಅಜಯ್ ಸೋಮವಾರವಷ್ಟೇ ನಗರಕ್ಕೆ ಆಗಮಿಸಿದ್ದ. ಇದೇ ಆಟ ಆತ್ಮಹತ್ಯೆಗೆ ಪ್ರೇರೆಪಿಸಿದೆ ಎನ್ನಲಾಗಿದೆ. ಇನ್ನೊಂದು ಮಾಹಿತಿಯ ಪ್ರಕಾರ ಅಜಯ್ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.

    ಸದ್ಯ ಆತ್ಮಹತ್ಯೆಗೆ ಯತ್ನಿಸಿದ ಅಜಯ್‍ನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸಲಾಗಿದೆ.

  • ರಾಜ್ಯದ ಹಲವೆಡೆ ಭರ್ಜರಿ ಮಳೆ – ಹಾಸನದಲ್ಲಿ ಸಿಡಿಲು ಬಡಿದು ಓರ್ವ ಮಹಿಳೆ ಸಾವು

    ರಾಜ್ಯದ ಹಲವೆಡೆ ಭರ್ಜರಿ ಮಳೆ – ಹಾಸನದಲ್ಲಿ ಸಿಡಿಲು ಬಡಿದು ಓರ್ವ ಮಹಿಳೆ ಸಾವು

    ಬೆಂಗಳೂರು: ರಾಜ್ಯದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿವರೆಗೂ ಜಿಟಿ ಜಿಟಿ ಮಳೆ ಸುರಿದಿದೆ. ಭಾನುವಾರ ಸಂಜೆ ಪ್ರಾರಂಭವಾದ ಮಳೆ ಬೆಳಗಿನ ಜಾವದವರೆಗೂ ಮುಂದುವರೆದಿತ್ತು.

    ಮಳೆಯಿಂದ ನಗರದ ಹಲವೆಡೆ ಮರಗಳು ನೆಲಕ್ಕುರುಳಿದ್ದು, ಗಾಂಧಿನಗರ, ಹಲಸೂರು ರೋಡ್, ಕಸ್ತೂರ್ ಬಾ ರಸ್ತೆಯಲ್ಲಿ ತಲಾ ಒಂದೊಂದು ಮರ ಬಿದ್ದಿವೆ. ಧಾರಾಕಾರ ಮಳೆಯಿಂದಾಗಿ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

    ನೂತನ ಮೇಯರ್ ಪರಿಶೀಲನೆ: ಜಯನಗರ, ಕೆ.ಆರ್.ರಸ್ತೆ, ಬನಶಂಕರಿ, ಇಂದಿರಾನಗರ, ಕನಕಪುರ ರೋಡ್ ಸೇರಿದಂತೆ ಹಲವೆಡೆ ನೂತನ ಮೇಯರ್ ಸಂಪತ್‍ರಾಜ್ ಭೇಟಿ ನೀಡಿ ತಗ್ಗು ಪ್ರದೇಶಗಳ ಪರಿಶೀಲನೆ ಮಾಡಿದರು. ಈ ವೇಳೆ ಮಾತಾನಾಡಿದ ಅವರು ಈಗಾಗಲೇ ಆರಂಭ ಮಾಡಲಾಗಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಿ ಅಂತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಇನ್ನುಳಿದಂತೆ ಇಂದಿರಾನಗರದ ಬಳಿ ಮರ ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸಂಪತ್‍ರಾಜ್ ಈ ಬಗ್ಗೆ ಪರಿಶೀಲನೆ ನಡೆಸಿದರು. ಅಷ್ಟೇ ಅಲ್ಲದೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ಕಂಟ್ರೋಲ್ ರೂಂನಲ್ಲಿ ತಾವೇ ಖುದ್ದು ಕುಳಿತುಕೊಂಡು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.

    ಬೆಂಗಳೂರು ಹೊರವಲಯ ಆನೇಕಲ್ ಸುತ್ತಮುತ್ತಲೂ ಗುಡುಗು ಮಿಂಚು ಸಹಿತ ಮಳೆ ಬಿದ್ದಿದ್ದು, ಪಾದಚಾರಿಗಳು ಹಾಗೂ ಬೈಕ್ ಸವಾರರು ಮನೆ ತಲುಪಲು ಪರದಾಡಿದರು. ಸತತ ಮಳೆಯ ಪರಿಣಾಮದಿಂದ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿವೆ.

    ರಾಮನಗರ, ತುಮಕೂರಿನಲ್ಲೂ ಭಾನುವಾರ ಸಂಜೆಯಿಂದ ಮಳೆ ಭಾರೀ ಮಳೆಯಾಗಿದ್ದು, ರಾಮನಗರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಹಾಸನದಲ್ಲೂ ಭರ್ಜರಿ ಮಳೆಯಾಗಿದೆ. ಜಿಲ್ಲೆಯ ಅರಸೀಕೆರೆ ತಾಲೂಕು ಜಾವಗಲ್ ಹೋಬಳಿ ದೊಡ್ಡಗಟ್ಟ ಗ್ರಾಮದಲ್ಲಿ ಓರ್ವ ಮಹಿಳೆ ಸಿಡಿಲಿಗೆ ಬಲಿಯಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲಾದ್ಯಾಂತ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಶಿರಸಿ ಭಾಗದಲ್ಲಿ ರಸ್ತೆಗಳಲ್ಲಿ ನೀರು ನಿಂತಿದ್ದು ವಾಹನ ಸವಾರರು ಸಂಕಷ್ಟ ಪಡುವಂತಾಗಿದೆ. ಚಿತ್ರದುರ್ಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಮಿಂಚು ಸಹಿತ ಮಳೆ ಸುರಿದಿದೆ. ಚಿತ್ರದುರ್ಗ-ಚಳ್ಳಕೆರೆ ಮಾರ್ಗ ಮಧ್ಯದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರಿಂದ, 1 ಕಿಲೋಮೀಟರ್ ಉದ್ದ ಟ್ರಾಫಿಕ್ ಜಾಮ್ ಆಗಿತ್ತು.

    ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಅಪಾರ ಪ್ರಮಾಣ ಬೆಳೆ ನಾಶವಾಗಿದೆ.

  • ಸಿಎಂ ಗಾದಿಗಾಗಿ ಚಾಮುಂಡೇಶ್ವರಿ ಜಪ ಮಾಡತೊಡಗಿದ ನಾಯಕರು

    ಸಿಎಂ ಗಾದಿಗಾಗಿ ಚಾಮುಂಡೇಶ್ವರಿ ಜಪ ಮಾಡತೊಡಗಿದ ನಾಯಕರು

    ಬೆಂಗಳೂರು: ಚುನಾವಣೆ ನಡೆಯುವ ಮೊದಲೇ ಕರ್ನಾಟಕದಲ್ಲಿ ಮೂರು ಪಕ್ಷದ ನಾಯಕರು ಮಾತ್ರ 2018ರಲ್ಲಿ ರಾಜ್ಯದ ಮುಖ್ಯಮಂತ್ರಿ ನಾನೇ ಆಗುತ್ತೇನೆ ಎಂದು ಹೇಳಿ ಚಾಮುಂಡಿ ಮಾತೆಯ ಜಪ ಮಾಡಲು ಮುಂದಾಗಿದ್ದಾರೆ.

    ಸಂಸದೆ ಶೋಭಾ ಕರಂದ್ಲಾಜೆ ಮುಂದಿನ ದಸರೆಗೆ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದರೆ, ಸಿಎಂ ಸಿದ್ದರಾಮಯ್ಯ ಶನಿವಾರ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿ ಮುಂದಿನ ಬಾರಿಯೂ ನಾನೇ ಚಾಲನೆ ನೀಡುತ್ತೇನೆ ಎಂದು ಹೇಳಿದ್ದರು. ಆದರೆ ಭಾನುವಾರ ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿಯಾಗಿ ನಾನು ಆಯ್ಕೆ ಆಗುತ್ತೇನೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

    ಅಪೋಲೋ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಅಂತ ತಾಯಿ ಚಾಮುಂಡೇಶ್ವರಿ ನಿರ್ಧರಿಸುತ್ತಾಳೆ. ಜಾತಿ ಜಾತಿಯನ್ನು ಎತ್ತಿಕಟ್ಟಿ ಈಗ ಮತ್ತೆ ಅಧಿಕಾರಕ್ಕೆ ಬರಲು ಸಿಎಂ ಪ್ಲ್ಯಾನ್ ಮಾಡುತ್ತಿದ್ದಾರೆ. ಜನರಿಗೆ ಹಣವನ್ನ ಹಂಚಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ತಿಳಿದುಕೊಂಡಿದ್ದಾರೆ. ಆದರೆ, ಜನರು ಅಷ್ಟು ದಡ್ಡರಲ್ಲ ಎಂದು ಹೇಳಿ ಟಾಂಗ್ ಕೊಟ್ಟರು.

    ಮುಂಬೈನಲ್ಲೇ ಹೃದಯಾಘಾತವಾಗಿತ್ತು: ಇಸ್ರೇಲ್‍ಗೆ ಹೋಗುವಾಗಲೇ ಮುಂಬೈನಲ್ಲಿ ಹೃದಯಾಘಾತವಾಗಿತ್ತು. ಒಂದು ಹೆಜ್ಜೆ ಇಡಲಿಕ್ಕೂ ಆಗದ ಸ್ಥಿತಿ ಇತ್ತು. 2007ರಲ್ಲೇ ಸಿಎಂ ಆಗಿದ್ದಾಗಲೇ ಆಪರೇಷನ್‍ಗೆ ಒಳಗಾಗಬೇಕಿತ್ತು. ಆದರೆ ಜನರ ಕೆಲಸ ಮಾಡಬೇಕು ಅನ್ನೋ ಉದ್ದೇಶಕ್ಕಾಗಿ ಮುಂದಕ್ಕೆ ಹಾಕಿದ್ದೆ. ನಾನು ಇಸ್ರೇಲ್ ತಲುಪುತ್ತೆನಾ ಎನ್ನುವ ಅನ್ನೋ ಭಯ ಇತ್ತು. ಕಾರಿನಿಂದ ಇಳಿಯಲು ಕೂಡ ಆಗಲಿಲ್ಲ. ಆ ಎಂಟು ಗಂಟೆ ವಿಮಾನ ಪ್ರಯಾಣ ಹೇಳೋಕೆ ನನ್ನಿಂದ ಸಾಧ್ಯವಿಲ್ಲ. ಇಸ್ರೇಲ್ ವೈದ್ಯರು ಅಲ್ಲೇ ಅಡ್ಮಿಟ್ ಆಗಲು ಹೇಳಿದ್ದರು. ಆದ್ರೆ ನಾನು ಅಡ್ಮಿಟ್ ಆಗಲಿಲ್ಲ, ಮಾತ್ರೆ ಕೊಡುವಂತೆ ಮನವಿ ಮಾಡಿದ್ದೆ. ಮತ್ತೆ ಜೆರುಸಲೆಂ ನಲ್ಲಿ ವಾಲ್ವ್ ಹೋಗಿರೋದು ಗೊತ್ತಾಯ್ತು. ಅಲ್ಲಿಂದ ಬಂದು ಅಮೆರಿಕ, ಆಸ್ಟ್ರೇಲಿಯ, ಲಂಡನ್ ವೈದ್ಯರು ಚರ್ಚೆ ಮಾಡಿದರು. ಆ ಮೇಲೆ ಡಾ. ಸತ್ಯ ಕೀ ಅಂಡ್ ಟೀಂ ಆಪರೇಷನ್ ಮಾಡಿದರು ಎಂದು ಕುಮಾರಸ್ವಾಮಿ ತಿಳಿಸಿದರು.

    ನಾನು ವೈದ್ಯರ ಮೇಲೆ ಭಾರ ಹಾಕಿದ್ದೆ, ಹೊರ ದೇಶಕ್ಕೆ ಶಸ್ತ್ರಚಿಕಿತ್ಸೆಗೆ ಹೋಗೋದು ಬೇಡವೆಂದು ಹೇಳಿದೆ. ನನಗೆ ಅವತ್ತು ಆಪರೇಷನ್ ಮುಗಿದಾಗ 2, 3 ಗಂಟೆ ಆಗಿತ್ತು. ಆ ದಿನ ಆಸ್ಪತ್ರೆಯ ವೈದ್ಯರು ನಿದ್ದೆ ಮಾಡಲೇ ಇಲ್ಲ. ನನಗೆ ಹುಟ್ಟಿದಿಂದಲೇ ಹೃದಯ ಸಮಸ್ಯೆ ಇತ್ತು. ನಾನು ಸಿಎಂ ಆಗಿದ್ದಾಗ ಹೃದಯ ಸಮಸ್ಯೆ ಗೊತ್ತಾಯ್ತು ಎಂದು ತಿಳಿಸಿದರು.

    ಉತ್ತೇಜನ ನೀಡಬೇಕು: ನಾಡಿನ ಪ್ರತಿಯೊಬ್ಬ ಪ್ರಜೆಗೂ ನನಗೆ ಸಿಕ್ಕ ಚಿಕಿತ್ಸೆ ಎಲ್ಲರಿಗೂ ಸಿಗಬೇಕು. ಬೆಂಗಳೂರಿನಲ್ಲಿ ಜಯದೇವ ಬಿಟ್ಟರೆ ಅಪೋಲೋ ಉತ್ತಮವಾಗಿದೆ. ಡಾ.ಸತ್ಯಕೀ ಅಂಥವರಿಗೆ ಸರ್ಕಾರ ಉತ್ತೇಜನ ಕೊಡಬೇಕು. ಆರೋಗ್ಯ ಸಚಿವರು ಬಹಳ ಬುದ್ಧಿವಂತರು ಅಂದುಕೊಂಡಿದ್ದೆ, ಆದರೆ ಅಂಥ ಕೆಟ್ಟ ಸಚಿವರನ್ನು ನೋಡಲಿಲ್ಲ. ವೈದ್ಯರನ್ನು ಜೈಲಿಗೆ ಕಳುಹಿಸೋಕೆ ಹೊರಟಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

    ಉತ್ತರ ಕರ್ನಾಟಕ ಜನ ಕ್ಷಮಿಸಬೇಕು ಅಲ್ಲಿ ಮನೆ ಮಾಡಿದ್ದೆ. ಆದರೆ ಒಂದು ತಿಂಗಳಲ್ಲಿ ಇವೆಲ್ಲಾ ಬಂದವು. ನವೆಂಬರ್ ತಿಂಗಳಿಂದ 50 ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತೇನೆ. ದಿನಕ್ಕೆ ಎಂಟು ಗಂಟೆ ಕೆಮ್ಮಿದ್ದೇನೆ ಅದರಿಂದ ಹೊರ ಬಂದಿದ್ದೇನೆಂದು ಹೇಳಿದರು.

    ಕಾಲ ಉತ್ತರ ನೀಡುತ್ತೆ: ಕುಮಾರಸ್ವಾಮಿಯವರಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಆದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡೋದಕ್ಕೆ ಆಗಲ್ಲ. ದೇವೇಗೌಡರಿಗೆ 85 ವರ್ಷ ವಯಸ್ಸು ಆಗಿದೆ ಅವರು ಪ್ರವಾಸ ಮಾಡೋದಕ್ಕೆ ಆಗಲ್ಲ ಎಂದು ಎರಡೂ ರಾಷ್ಟ್ರೀಯ ಪಕ್ಷಗಳು ನಾಯಕರು ತಿಳಿದುಕೊಂಡಿದ್ದಾರೆ. ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ಪ್ರಾದೇಶಿಕ ಪಕ್ಷವನ್ನು ಅಷ್ಟೊಂದು ಸುಲಭವಾಗಿ ತಿಳಿದುಕೊಳ್ಳಬೇಡಿ. ಕಾಲ ಎಲ್ಲದ್ದಕ್ಕೂ ಉತ್ತರ ನೀಡುತ್ತದೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಅದರ ಮೇಲೆ ಸಿಎಂ ಸಿದ್ದರಾಮಯ್ಯ ಗಮನ ಕೊಡಲಿ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿ ರ್ಯಾಲಿಗೆ ಟಾಂಗ್: ಬಿಜೆಪಿಯವರು ನವೆಂಬರ್ 2 ರಂದು ಅಮಿತ್ ಶಾ ಮೂಲಕ ಪರಿವರ್ತನಾ ರ್ಯಾಲಿ ಮಾಡಲು ಹೊರಟಿದ್ದಾರೆ. ಈ ಹಿಂದೆ ಅವರು ಮಾಡಿದ್ದ ತಪ್ಪುಗಳನ್ನು ಸರಿ ಮಾಡಿಕೊಳ್ಳಲು ಬಿಜೆಪಿಯವರು ಈಗ ಮುಂದಾಗಿದ್ದಾರೆಂದು ಟಾಂಗ್ ನೀಡಿದರು.

    ನನ್ನ ವೈಯಕ್ತಿಕ ವಿಚಾರಗಳಿಂದ ಹಿಂದೆ ನಾನು ದಾರಿ ತಪ್ಪಿದ್ದೆ, ಈಗ ಸರಿ ಮಾಡಿಕೊಳ್ಳುತ್ತೇನೆಂದು ಹೇಳಿದ ಎಚ್‍ಡಿಕೆ ಕಾರ್ಯಕರ್ತರು, ಅಭಿಮಾನಿಗಳು ಮುಂದಿನ 25 ದಿನ ನನ್ನ ಭೇಟಿಗೆ ಬರದಂತೆ ಮನವಿ ಮಾಡಿಕೊಂಡರು. ನನಗೆ 2ನೇ ಬಾರಿ ಜನ್ಮ ಕೊಟ್ಟವರು ವೈದ್ಯರು. ಶೀಘ್ರ ಚೇತರಿಕೆಯಾಗಲಿ ಅಂತಾ ಹಾರೈಸಿದ ಎಲ್ಲಾ ನನ್ನ ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು, ಮಾಧ್ಯಮದವರಿಗೂ, ಚರ್ಚ್, ಮಸೀದಿ, ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ಈ ಸಂದರ್ಭದಲ್ಲಿ ಎಚ್‍ಡಿಕೆ ಸಲ್ಲಿಸಿದರು.

    ಡಾ.ಸತ್ಯ ಕೀ ಮಾತನಾಡಿ, ಕುಮಾರಸ್ವಾಮಿ ಅವರು ಶೇ.90 ರಷ್ಟು ಗುಣ ಮುಖರಾಗಿದ್ದಾರೆ. ಅವರು ಬಯಸಿದಾಗ ನಾವು ಡಿಸ್ಜಾರ್ಜ್ ಮಾಡುತ್ತೇವೆ. ಬಹುತೇಕ ನಾಳೆ ಡಿಸ್ಚಾರ್ಜ್ ಆಗಬಹುದು. ನಾವು ಕಳುಹಿಸಿಕೊಡಲು ಸಿದ್ಧರಿದ್ದೇವೆ. ಆದರೆ ಅವರನ್ನು ಯಾರೂ ಭೇಟಿ ಮಾಡದಂತೆ ನೋಡಿಕೊಳ್ಳಬೇಕು. ಈಗ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸ್ತಾರೋ ಮುಂದೆ ಅಷ್ಟು ಚೆನ್ನಾಗಿ ಇರುತ್ತಾರೆ ಎಂದು ತಿಳಿಸಿದರು.

  • ಮಾಜಿ ಶಾಸಕ ನೆಲ ನರೇಂದ್ರ ಬಾಬು, ಕಿರುತೆರೆ ನಟಿಯರು ಬಿಜೆಪಿಗೆ ಸೇರ್ಪಡೆ

    ಮಾಜಿ ಶಾಸಕ ನೆಲ ನರೇಂದ್ರ ಬಾಬು, ಕಿರುತೆರೆ ನಟಿಯರು ಬಿಜೆಪಿಗೆ ಸೇರ್ಪಡೆ

    ಬೆಂಗಳೂರು: ಮಾಜಿ ಶಾಸಕ ನೆಲ ನರೇಂದ್ರ ಬಾಬು ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.

    ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನರೇಂದ್ರ ಬಾಬು ಅವರಿಗೆ ಬಾವುಟ ನೀಡಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಅವರ ಜೊತೆಯಲ್ಲಿ ಕಿರುತೆರೆ ನಟಿಯರಾದ ಜ್ಯೋತಿ, ಆಶಾಲತಾ, ಸಂಗೀತಾ ಅವರೂ ಬಿಜೆಪಿ ಸೇರಿಕೊಂಡರು.

    ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ನರೇಂದ್ರ ಬಾಬು ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಕಾಂಗ್ರೆಸ್ ಪಕ್ಷ ನನ್ನನ್ನು ನಿರ್ಲಕ್ಷಿಸಿದೆ. ಕಾಂಗ್ರೆಸ್ ನಿರ್ಲಕ್ಷ್ಯ ಧೋರಣೆಯಿಂದ ನನಗೆ ನೋವಾಗಿದೆ. ಕುತಂತ್ರ ಬುದ್ದಿ ಹಾಗೂ ಪಕ್ಷ ದ್ರೋಹಿಗಳಿಗೆ ಬೆಲೆಯಿದೆ ಹೊರತು ನನ್ನಂತಹ ನಿಷ್ಠಾವಂತ, ಪ್ರಾಮಾಣಿಕರಿಗೆ ಬೆಲೆಯಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆಂದು ತಿಳಿಸಿದ್ದರು.

    ಪಕ್ಷದಲ್ಲಿ 35 ವರ್ಷಗಳಿಂದ ಸಕ್ರಿಯ ಕಾರ್ಯಕರ್ತನಾಗಿ ದುಡಿದಿದ್ದೇನೆ. ಮೂರು ಬಾರಿ ಕಾರ್ಪೊರೇಟರ್, ಎರಡು ಬಾರಿ ಶಾಸಕನಾಗಿ ಕೆಲಸ ಮಾಡಿರುವ ನನ್ನನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂದು ಹೇಳಿದರು.

    ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮಾಜಿ ಡಿಸಿಎಂ ಆರ್ ಅಶೋಕ್, ಬಿಜೆಪಿ ಉಪಾಧ್ಯಕ್ಷ ಕೆಪಿ ನಂಜುಂಡಿ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಉಪಸ್ಥಿತರಿದ್ದರು.

    ಈ ವೇಳೆ ಮಾತನಾಡಿದ ಯಡಿಯೂರಪ್ಪ, ಬಿಜೆಪಿಯ ಗಾಳಿ ಕರ್ನಾಟಕದ ಉದ್ದಗಲಕ್ಕೆ ಬೀಸುತ್ತಿದೆ. ರಾಮಕೃಷ್ಣ ಹೆಗ್ಡೆಯವರ ಕಾಲದಲ್ಲಿ ಪಕ್ಷದಲ್ಲಿದ್ದ ನರೇಂದ್ರ ಬಾಬು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದರು. ಆದರೆ ಮರಳಿ ಬಿಜೆಪಿಗೆ ಪಕ್ಷಕ್ಕೆ ಆಗಮಿಸಿರುವುದಕ್ಕೆ ಸ್ವಾಗತ ಕೋರುತ್ತೇನೆ. ಅವರಿಗೆ ಸೂಕ್ತ ಸ್ಥಾನಮಾನವನ್ನು ನೀಡಿ ಪಕ್ಷ ಸಂಘಟನೆಗೆ ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದರು.

    ಪ್ರಧಾನಿ ಕಾರ್ಯಕ್ರಮದ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಪರ್ಯಾಯವಾಗಿ, ಸಿಎಂ ಸಿದ್ದರಾಮಯ್ಯ ಕಾಮ್ ಕಿ ಬಾತ್ ಮಾಡ್ತಿರುವುದು ಮೂರ್ಖತನದ ಪರಮಾವಧಿ ಎಂದು ವಗ್ವಾದ ನಡೆಸಿದರು.

    ಸಚಿವ ಹೆಚ್ ಆಂಜನೇಯ ಆಯುಧ ಪೂಜೆ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕ ಸಂಪ್ರದಾಯ, ಧರ್ಮಾಚರಣೆಗೆ ಅಪಮಾನ ಮಾಡಿದ್ದಾರೆ. ದುರಂಹಕಾರ ದರ್ಪದಿಂದ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆದು, ರಾಜ್ಯದಲ್ಲಿ ಬಿಜೆಪಿ ಅಧಿಕಾರ ತರುತ್ತೇವೆಂದು ಯಡಿಯೂರಪ್ಪ ತಿಳಿಸಿದರು.

    ನರೇಂದ್ರ ಬಾಬು ಮಾತನಾಡಿ, ಕೇಂದ್ರ ಸರ್ಕಾರ ಗಾಂಧಿ ತತ್ವಗಳನ್ನು ಜಾರಿಗೊಳಿಸುತ್ತಿದೆ. ನನ್ನನ್ನು ಕಾಯ ವಾಚ ಮನಸ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆಂದು ತಿಳಿಸಿದರು.

    ಬೈಕ್ ರ್ಯಾಲಿ: ನವೆಂಬರ್ 2 ರಿಂದ ನವ ಕರ್ನಾಟಕ ಪರಿವರ್ತನಾ ಯಾತ್ರೆಯನ್ನು ಬೆಂಗಳೂರು ಮತ್ತು ಹುಬ್ಬಳ್ಳಿಗೆ ಬೃಹತ್ ಬೈಕ್ ರ್ಯಾಲಿ ನಡೆಸಲು ತೀರ್ಮಾನಿಸಲಾಯಿತು. ನವಕರ್ನಾಟಕ ಪರಿವರ್ತನಾ ಯಾತ್ರೆ ಬಗ್ಗೆ ಪ್ರಚಾರ ಕಾರ್ಯ ಕೈಗೊಳ್ಳುವ ರೀತಿ ಬಗ್ಗೆಯೂ ಚರ್ಚಿಸಲಾಯಿತು ಎಂದು ಯಡಿಯೂರಪ್ಪ ತಿಳಿಸಿದರು.

    ನವ ಕರ್ನಾಟಕ ಪರಿವರ್ತನಾ ಯಾತ್ರೆ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ನವ ಕರ್ನಾಟಕ ಪರಿವರ್ತನಾ ಯಾತ್ರೆ ವಿಚಾರವಾಗಿ, ಬಿಜೆಪಿ ಕಚೇರಿಯಲ್ಲಿ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಪ್ರಚಾರ ತಂಡಗಳ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ ಬಿಜೆಪಿ ಉಸ್ತುವಾರಿ ಮುರುಳೀಧರ ರಾವ್, ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಅರವಿಂದ ಲಿಂಬಾವಳಿ,  ಬಿ.ಸೋಮಶೇಖರ್, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ ಭಾಗಿಯಾಗಿದ್ದರು.

  • ರಸ್ತೆ ಗುಂಡಿ ತಪ್ಪಿಸೋ ಭರದಲ್ಲಿ ಫುಟ್‍ಪಾತ್‍ಗೆ ಡಿಕ್ಕಿ ಹೊಡೆದ ಕಾರು – 6 ಜನರಿಗೆ ಗಾಯ

    ರಸ್ತೆ ಗುಂಡಿ ತಪ್ಪಿಸೋ ಭರದಲ್ಲಿ ಫುಟ್‍ಪಾತ್‍ಗೆ ಡಿಕ್ಕಿ ಹೊಡೆದ ಕಾರು – 6 ಜನರಿಗೆ ಗಾಯ

    ಬೆಂಗಳೂರು: ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ಗುಂಡಿಯನ್ನು ತಪ್ಪಿಸುವ ಭರದಲ್ಲಿ ಫುಟ್ ಪಾತ್‍ಗೆ ಡಿಕ್ಕಿ ಹೊಡೆದಿರುವ ಘಟನೆ ನಗರದ ಕೋರಮಂಗಲ ವಾಟರ್ ಟ್ಯಾಂಕ್ ಸಿಗ್ನಲ್ ಬಳಿ ನಡೆದಿದೆ.

    ತಡರಾತ್ರಿ ನಡೆದ ಈ ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಜನರಿಗೆ ತೀವ್ರ ಗಾಯಗಳಾಗಿವೆ. ಅಪಘಾತದಲ್ಲಿ ಗಾಯಗೊಂಡವರನ್ನು ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 10 ಗಂಟೆಯ ಸಮಯದಲ್ಲಿ ಹೆಚ್‍ಎಸ್‍ಆರ್ ಲೇಔಟ್ ಕಡೆಯಿಂದ ಬಂದ ಟಾಟಾ ಸುಮೊ ಕಾರು ಕೋರಮಂಗಲದ ವಾಟರ್ ಟ್ಯಾಂಕ್ ಬಳಿ ರಸ್ತೆಯಲ್ಲಿದ್ದ ಗುಂಡಿಗಳನ್ನ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡು ಫುಟ್‍ಪಾತ್‍ಗೆ ಡಿಕ್ಕಿ ಹೊಡೆದಿದೆ.

    ಕಾರನ್ನು ವೇಗವಾಗಿ ಚಲಿಸುತ್ತಿದ್ದರಿಂದ ಫುಟ್‍ಪಾತ್ ಬದಿಯ ಸಿಗ್ನಲ್ ಕಂಬಗಳಿಗೆ ಡಿಕ್ಕಿ ಹೊಡೆದು ಸಂಪೂರ್ಣ ಜಖಂಗೊಂಡಿದೆ. ಇನ್ನೂ ಇದೇ ವೇಳೆ ಕಾರಿನಲ್ಲಿ ಇಬ್ಬರು ಯುವತಿಯರು ಸೇರಿ ಒಟ್ಟು ಆರು ಜನರು ಪ್ರಯಾಣಿಸುತ್ತಿದರು ಎಂದು ತಿಳಿದು ಬಂದಿದೆ. ಎಲ್ಲರೂ ಹಬ್ಬ ಪ್ರಯುಕ್ತ ರಜೆ ಇದ್ದರಿಂದ ಔಟಿಂಗ್ ತೆರಳಿದ್ದರು ಎಂದು ತಿಳಿದು ಬಂದಿದೆ.

    ಅಪಘಾತದ ನಡೆದ ಕೂಡಲೇ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೋಲಿಸರು ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಕುಡಿದು ವಾಹನ ಚಲಾಹಿಸಿದ್ದೇ ಅಪಘಾತಕ್ಕೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಲುಷಿತ ನೀರು ಸೇವಿಸಿ-60ಕ್ಕೂ ಹೆಚ್ಚು ಜನರು ಆಸ್ಪತ್ರೆ ಪಾಲು

    ಕಲುಷಿತ ನೀರು ಸೇವಿಸಿ-60ಕ್ಕೂ ಹೆಚ್ಚು ಜನರು ಆಸ್ಪತ್ರೆ ಪಾಲು

    ಬೆಂಗಳೂರು: ಒಳಚರಂಡಿ ಪೈಪ್‍ಲೈನ್ ಒಡೆದು ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರಣವಾಗಿದ್ದು. ಈ ನೀರನ್ನು ಸೇವಿಸಿರುವ 60ಕ್ಕೂ ಹೆಚ್ಚು ಜನರು ಆನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್‍ನ 10 ಕ್ರಾಸ್‍ನಲ್ಲಿ ನಡೆದಿದೆ.

    ಕಳೆದ ಮೂರು ದಿನಗಳಿಂದ ಲೇಔಟ್‍ನ 5ನೇ ಕ್ರಾಸ್‍ನಲ್ಲಿ ಒಳಚರಂಡಿ ಪೈಪ್‍ಲೈನ್ ಒಡೆದು ಹೋಗಿದ್ದು, ಮನೆಗಳಿಗೆ ಬರುವ ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರಣವಾಗಿ ಬರುತ್ತಿದೆ. ಪೈಪ್ ಸರಿಪಡಿಸಲು ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಿಲ್ಲ ಎಂದು ಸ್ಥಳೀಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಕಲುಷಿತ ನೀರನ್ನು ಕುಡಿದ ಜನರು ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, ವಾಂತಿ, ಭೇದಿ, ಜ್ವರದಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಯಾವುದೇ ಅಧಿಕಾರಿಗಳು ಇದರ ಬಗ್ಗೆ ಗಮನ ನೀಡುತ್ತಿಲ್ಲ. ಇನ್ನೂ ಇದೇ ನೀರನ್ನು ಸ್ನಾನಕ್ಕೆ ಬಳಸಲು ಸಾಧ್ಯವಿಲ್ಲದಷ್ಟು ಕೆಟ್ಟ ವಾಸನೆ ಬರುತ್ತಿದೆ. ಏರಿಯಾದ ಎಲ್ಲಾ ಮಕ್ಕಳ ಆರೋಗ್ಯ ಮೇಲು ಕೆಟ್ಟ ಪರಿಣಾಮ ಬೀರಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಇದು ರಾಜ್ಯದ ಗೃಹ ಸಚಿವರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರದೇಶವಾಗಿದೆ. ಪ್ರಸ್ತುತ ಇದುವರೆಗೂ ಕಲುಷಿತ ನೀರು ಸೇವಿಸಿ 60 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಿದ್ದರು ಒಮ್ಮೆಯೂ ಬಿಡಬ್ಲ್ಯೂಎಸ್‍ಎಸ್‍ಪಿ ಭೇಟಿ ಕೊಟ್ಟಿಲ್ಲ. ಜಲಮಂಡಳಿಯವರು ಈ ಪೈಪ್ ಲೈನ್ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಒಟ್ಟಾರೆ ರಾಜ್ಯದ ಗೃಹ ಸಚಿವರ ಕ್ಷೇತ್ರದ ಜನರು ಕಲುಷಿತ ನೀರು ಕುಡಿದು ಅನುಭವಿಸುತ್ತಿರುವ ಕಷ್ಟಗಳಿಗೆ ಅಧಿಕಾರಿಗಳು ಅದಷ್ಟು ಬೇಗ ಪರಿಹಾರ ನೀಡಬೇಕಿದೆ.

  • 7ನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್-ಅಭಿಮಾನಿಗಳ ಆಕ್ರೋಶ

    7ನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್-ಅಭಿಮಾನಿಗಳ ಆಕ್ರೋಶ

    ಬೆಂಗಳೂರು: ಭಾರತದ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಎಂಎಸ್ ಧೋನಿ ಅವರನ್ನು ಕಳಹಿಸಿದ್ದಕ್ಕೆ ನಾಯಕ ಕೊಹ್ಲಿ ಹಾಗೂ ಟೀಮ್ ಮ್ಯಾನೆಜ್‍ಮೆಂಟ್ ತೀರ್ಮಾನದ ವಿರುದ್ಧ ಅಭಿಮಾನಿಗಳು ಟ್ವಿಟ್ಟರ್‍ನಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಪಂದ್ಯದ ನಂತರ ಮಾತನಾಡಿದ ಕೊಹ್ಲಿ ಬ್ಯಾಟಿಂಗ್ ವೈಫಲ್ಯವೇ ನಮ್ಮ ಸೋಲಿಗೆ ಕಾರಣ ಎಂದು ತಿಳಿಸಿದ್ದರು. ಆದರೆ ಟೀಂ ಇಂಡಿಯಾ ಅಭಿಮಾನಿಗಳು ಭಾರತದ ಸೋಲನ್ನು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸಿದ್ದು, ನಾಯಕ ಕೊಹ್ಲಿ ಹಾಗೂ ಟೀಮ್ ಮ್ಯಾನೆಜ್‍ಮೆಂಟ್ ತಪ್ಪು ನಿರ್ಧಾರಗಳಿಂದಲೇ ಭಾರತ ಸೋತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬೆಸ್ಟ್ ಫಿನಿಷರ್ ಎಂದು ಕರೆಯುವ ಧೋನಿಯನ್ನು 7 ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಕಳುಹಿಸಲಾಯಿತು. ಅದು ಕೇವಲ 26 ಬಾಲ್‍ಗಳಷ್ಟೇ ಉಳಿದಿತ್ತು. ಇದರಿಂದ ಮ್ಯಾಚ್ ಗೆಲ್ಲಿಸಿಕೊಡಲು ಧೋನಿಯವರಿಂದ ಸಾಧ್ಯವಾಗಲಿಲ್ಲ.

    ಜನ ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ:
    ಧೋನಿ ನಂ.11 ನಲ್ಲಿ ಬ್ಯಾಟ್ ಮಾಡಲು ಅವಕಾಶವನ್ನು ನೀಡಬೇಕು. ಏಕೆಂದರೆ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಲಭಿಸುತ್ತದೆ. ಉದಾಹರಣೆಗೆ ಉಮೇಶ್ ಯಾದವ್ 2039ರ ವಿಶ್ವ ಕಪ್‍ಗೆ ಸಿದ್ಧರಾಗಬೇಕಿದೆ ಎಂದು ಅಭಿಮಾನಿಯೊಬ್ಬರು ವ್ಯಂಗ್ಯವಾಡಿದ್ದಾರೆ.

    ಕೊಹ್ಲಿ ನಂ.1 ಸ್ವಾರ್ಥಿ. ಧೋನಿಯವರಿಗೆ ಕೊನೆಯಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಿ ಮಾಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ವಿರುದ್ಧ ಆರೋಪ ಮಾಡುವುದು ಸರಿಯಲ್ಲ.

    https://twitter.com/Ashwin_Gour/status/913434798152024067?ref_src=twsrc%5Etfw

    ಭಾರತದ ಸೋಲಿಗೆ ತಪ್ಪು ನಿರ್ಧಾರಗಳೇ ಕಾರಣ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಭಾರತ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಹಾರ್ದಿಕ್ ಪಾಂಡ್ಯ ಹಾಗೂ ಮನೀಶ್ ಪಾಂಡೆ ನಡುವೆ ಪೈಪೋಟಿ ನಡೆಯುತ್ತಿದೆ.

    https://twitter.com/crazyCancer_ian/status/913635524648169472?ref_src=twsrc%5Etfw

    ಸತತ 9 ಪಂದ್ಯಗಳನ್ನು ಗೆಲ್ಲುವ ಮೂಲಕ ಅತೀ ಆತ್ಮ ವಿಶ್ವಾಸದಲ್ಲಿ ಕಣಕ್ಕೆ ಇಳಿದ ಟೀಂ ಇಂಡಿಯಾ ರೋಹಿತ್ ಶರ್ಮಾ ಹಾಗೂ ಅಜಿಂಕ್ಯಾ ರಹಾನೆ ಮೊದಲ ವಿಕೆಟ್‍ಗೆ 106ರ ರನ್‍ಗಳ ಜೊತೆಯಾಟ ನೀಡಿದ ನಂತರವು 21 ರನ್ ಗಳಿಂದ ಸೋಲನ್ನು ಅನುಭವಿಸಿತ್ತು. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಹಾಗೂ ಐದನೇ ಪಂದ್ಯವು ಭಾನುವಾರ ವಿದರ್ಭ ಕ್ರೀಡಾಂಗಣದಲ್ಲಿ ನಡೆಯಲಿದೆ.

  • ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗ ವಿಷ್ಣು ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದು ಹೇಗೆ?

    ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗ ವಿಷ್ಣು ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದು ಹೇಗೆ?

    ಬೆಂಗಳೂರು: ಬುಧವಾರ ತಡರಾತ್ರಿ ಗುಂಡು ಪಾರ್ಟಿ ಮುಗಿಸಿ ಡ್ರಗ್ಸ್ ಸೇವಿಸಿ ದುಬಾರಿ ಮರ್ಸಿಡಿಸ್ ಬೆಂಜ್ ಕಾರ್‍ನಲ್ಲಿ ಜಾಲಿ ಡ್ರೈವ್ ಹೋಗಿ ಜಯನಗರದ ಸೌತ್ ಎಂಡ್ ಸರ್ಕಲ್‍ನಲ್ಲಿ ಸರಣಿ ಅಪಘಾತ ಮಾಡಿದ್ದ, ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗ ವಿಷ್ಣು ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದಾನೆ.

    ಶುಕ್ರವಾರ ಬೆಳಗ್ಗೆ ಬಾತ್‍ರೂಮ್‍ಗೆ ಹೋಗ್ಬೇಕು ಅಂತ ಹೇಳಿ ಗನ್‍ಮ್ಯಾನ್ ಜೊತೆ ಫೈರ್ ಎಕ್ಸಿಟ್‍ನಿಂದ ಎಕ್ಸಿಟ್ ಆಗಿದ್ದಾನೆ. ಆ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಮಲ್ಯ ಆಸ್ಪತ್ರೆಗೆ ಉದ್ಯಮಿ ಆದಿಕೇಶವುಲು ಅವರ ಒಡೆತನ ಇದ್ದು, ಆಸ್ಪತ್ರೆ ನಿರ್ದೇಶಕಿ ಹಾಗೂ ವೈದ್ಯೆಯಾಗಿರುವ ತಾಯಿ ತೇಜಸ್ವಿನಿ ಅವರೇ ಮಗನ ಎಸ್ಕೇಪ್‍ಗೆ ಪ್ಲಾನ್ ನೀಡಿದ್ರು ಎನ್ನಲಾಗಿದೆ. ಆಸ್ಪತ್ರೆಯವರು ಮಾತ್ರ ರೋಗಿಯಾಗಿ ಬಂದಿದ್ದ ವಿಷ್ಣುಗೆ ಚಿಕಿತ್ಸೆ ಕೊಡ್ತಿದ್ವಿವಿ ಅಷ್ಟೆ. ಎಸ್ಕೇಪ್ ಆಗೋದಕ್ಕೆ ನಮ್ಮ ಯಾವ ಸಿಬ್ಬಂದಿಯೂ ಹೆಲ್ಪ್ ಮಾಡಿಲ್ಲ. ಎಸ್ಕೇಪ್ ಆಗಿದ್ದ ಗೊತ್ತಾದ ತಕ್ಷಣ ಪೊಲೀಸರಿಗೆ ದೂರು ನೀಡಿದ್ದೀವಿ ಅಂತ ಸಮಜಾಯಿಷಿ ಹೇಳಿಕೆ ಕೊಟ್ಟಿದ್ದಾರೆ.

    ಪೊಲೀಸರಿಂದ ನಾಟಕ: ವಿಷ್ಣು ಎಸ್ಕೇಪ್ ಆಗೋದ್ರಲ್ಲಿ ಪೊಲೀಸರು ಮಹಾ ನಾಟಕ ಆಡಿದ್ರಾ ಅನ್ನೋ ಅನುಮಾನ ಮೂಡಿದೆ. ವಿಷ್ಣು ಎಸ್ಕೇಪ್ ಆಗಲು ಐಪಿಎಸ್ ಅಧಿಕಾರಿಯೊಬ್ಬರು ಸಹಕರಿಸಿದ್ದರು ಎನ್ನಲಾಗಿದೆ. ಬುಧವಾರ ಸಾರ್ವಜನಿಕರಿಂದ ಒದೆ ತಿಂದ ಬಳಿಕ ಜಯನಗರ ಪೊಲೀಸರು ಗಾಂಜಾ ಪ್ರಕರಣ ದಾಖಲಿಸಿಕೊಂಡು, ಆರೋಪಿ ವಿಷ್ಣುವಿನ ರಕ್ತ ಮತ್ತು ಮೂತ್ರದ ಮಾದರಿ ಸಂಗ್ರಹಿಸಿದ್ದರು. ಆರೋಪಿಯನ್ನ ಸರ್ಕಾರಿ ಆಸ್ಪತ್ರೆಗೆ ಸೇರಿಸೋ ಬದಲಿಗೆ ಮಲ್ಯ ಆಸ್ಪತ್ರೆಗೆ ಸೇರಿಸಿದ್ಯಾಕೆ. ಭದ್ರತೆಗೆ ಇಬ್ಬರನ್ನ ನಿಯೋಜಿಸಿದ್ರೂ ಆರೋಪಿ ಎಸ್ಕೇಪ್ ಆಗಿದ್ದು ಅವರಿಗೆ ಗೊತ್ತಾಗ್ಲಿಲ್ವಾ ಅನ್ನೋ ಶಂಕೆ ಮೂಡಿದೆ. ಆರೋಪಿ ಎಸ್ಕೇಪ್ ಆದಮೇಲೆ ಸಿಸಿಟಿವಿ ಪರಿಶೀಲಿಸಿ, ವಿಷ್ಣುವಿನ ಮನೆಗೆ ಹೋಗಿ ಸರ್ಚ್ ಮಾಡಿದ್ದೀವಿ ಅಂದಿದ್ದಾರೆ. ಈ ಮಧ್ಯೆ ಡಾ. ತೇಜಸ್ವಿನಿ ಮತ್ತು ಮಲ್ಯ ಆಸ್ಪತ್ರೆಯ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರಿಗೆ ಜಯನಗರ ಪೊಲೀಸರು ದೂರು ನೀಡಿದ್ದಾರೆ.

    ಪೊಲೀಸರಿಗೆ ‘ಪಬ್ಲಿಕ್’ ಪ್ರಶ್ನೆ
    * ದೊಡ್ಡವರ ಮೊಮ್ಮಗ ಅಂತ ಪೊಲೀಸರು ಈ ಕೇಸು ನಿರ್ಲಕ್ಷ್ಯ ಮಾಡಿದ್ರಾ?
    * ಪೊಲೀಸ್ ವಶದಲ್ಲಿದ್ದ ಆರೋಪಿ ತಪ್ಪಿಸಿಕೊಂಡಿದ್ದು ಹೇಗೆ?
    * ಬೇಕಾಬಿಟ್ಟಿಯಾಗಿ ಆದಿಕೇಶವುಲು ಮೊಮ್ಮಗ ಓಡಾಡೋಕೆ ಬಿಟ್ಟ್ರಾ?

    * ಗೊತ್ತಿದ್ದು ಗೊತ್ತಿದ್ದು ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಿಟ್ಟಿದ್ಯಾಕೆ?
    * ವಿಷ್ಣುವಿನ ತಾಯಿಯೇ ಆಸ್ಪತ್ರೆಯ ನಿರ್ದೇಶಕಿ ಅಂತ ಪೊಲೀಸರಿಗೆ ಗೊತ್ತಾಗಲಿಲ್ಲವೇ?
    * ವಿಷ್ಣುವಿನ ಹೇಳಿಕೆ ಪಡೆಯಲು ಅಡ್ಡಗಾಲು ಹಾಕಿದ್ದಾಗಲೇ ಏಕೆ ಎಚ್ಚೆತ್ತುಕೊಳ್ಳಲಿಲ್ಲ?

    * ವೈದ್ಯಕೀಯ ಕಾರಣ ಹೇಳಿ ಬಚಾವ್ ಮಾಡುತ್ತಿದ್ದಾರೆ ಅಂತ ಗೊತ್ತಾಗಲಿಲ್ವಾ?
    * ಆರೋಪಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಏಕೆ ಚಿಕಿತ್ಸೆ ದಾಖಲಿಸಲಿಲ್ಲ?
    * ಕಾರಿನಲ್ಲಿದ್ದ ಮತ್ತಿತರರ ಬಗ್ಗೆ ಪೊಲೀಸರಿಗೆ ಮಾಹಿತಿ ಇಲ್ವಾ?
    * ನಿಜಕ್ಕೂ ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಸಿಕ್ಕೇ ಇಲ್ವಾ?

    ವಿಷ್ಣು ದೂರು: ನಾನು ಕಾರಿನಲ್ಲಿ ಇದ್ದೆ, ಆದರೆ ಡ್ರೈವ್ ಮಾಡ್ತಿರ್ಲಿಲ್ಲ ನನ್ನ ಡ್ರೈವರ್ ಸಂತೋಷ್ ಡ್ರೈವ್ ಮಾಡ್ತಿದ್ದ ಎಂದು ವಿಷ್ಣು ಹೇಳಿದ್ದು, ಈಗ ಸ್ಥಳೀಯರೆಲ್ಲಾ ಸೇರ್ಕೊಂಡು ಹೊಡೆದರು ಅಂತ ದೂರು ನೀಡಿದ್ದಾನೆ.

    ರೇವ್ ಪಾರ್ಟಿ?: ಈ ಹಿಟ್ ಅಂಡ್ ರನ್‍ಗೆ ಮುನ್ನ ಸದಾಶಿವನಗರದ ಪಬ್ ಒಂದಲ್ಲಿ ಕಂಠಪೂರ್ತಿ ಕುಡಿದು ಡ್ರಗ್ಸ್ ತೆಗೆದುಕೊಂಡಿದ್ದ ವಿಷ್ಣು ರೇವ್ ಪಾರ್ಟಿಗೆ ಹೊರಟಿದ್ದನಂತೆ. ಸದಾಶಿವಾನಗರದಿಂದ ಎಂಜಿ ರೋಡ್‍ಗೆ ಹೋಗಿ ಅಲ್ಲಿ ಫ್ರೆಂಡ್ ಜುನೇದ್ ರನ್ನ ಪಿಕಪ್ ಮಾಡ್ಕೊಂಡು ಲಾಲ್‍ಬಾಗ್ ರೋಡ್ ಮೂಲಕ ಆಗಾಗಲೇ ರೇವ್ ಪಾರ್ಟಿಗೆ ಸಿದ್ಧತೆ ನಡೆದಿದ್ದ ಕನಕಪುರದ ರೆಸಾರ್ಟ್‍ಗೆ ಹೋಗ್ತಿದ್ರಂತೆ. ಈ ರೇವ್ ಪಾರ್ಟಿಯಲ್ಲಿ ಸ್ಯಾಂಡಲ್‍ವುಡ್ ಸ್ಟಾರ್ರ್ಸ್, ಮಾಡೆಲ್‍ಗಳು, ಬಿಸಿನೆಸ್‍ಮನ್‍ಗಳು ಇದ್ರಂತೆ. ಆದರೆ ಮಾರ್ಗ ಮಧ್ಯದಲ್ಲಿ ಅಪಘಾತವಾಗಿದ್ರಿಂದ ರೇವ್ ಪಾರ್ಟಿ ಕ್ಯಾನ್ಸಲ್ ಆಗಿತ್ತು ಅನ್ನೋ ಮಾಹಿತಿ ತಿಳಿದು ಬಂದಿದೆ.

    ಲವ್ಲಿ ಸ್ಟಾರ್ ಪ್ರೇಮ್ ಸ್ಪಷ್ಟನೆ:
    ಸ್ಯಾಂಡಲ್‍ವುಡ್ ನಟ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಮೇಲಿನ ಆರೋಪ ಸುಳ್ಳು. ಅಪಘಾತ ನಡೆದ ಸಂದರ್ಭದಲ್ಲಿ ಪ್ರಜ್ವಲ್ ಶೂಟಿಂಗ್‍ನಲ್ಲಿದ್ದರು. ದಿಗಂತ್ ಕೂಡ ಕನಕಪುರದಲ್ಲಿ ಶೂಟಿಂಗ್‍ನಲ್ಲಿ ಇದ್ದರು ಅಂತ ಪ್ರೇಮ್ ಹೇಳಿದ್ದಾರೆ. ನಟ ಪ್ರಜ್ವಲ್ ಕೂಡ ನಾನು ಶೂಟಿಂಗ್‍ನಲ್ಲಿದ್ದೆ ಎಂದು ಮತ್ತೊಮ್ಮೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಇದೇ ವೇಳೆ ಸುಮಲತಾ ಅಂಬರೀಷ್ ಪ್ರತಿಕ್ರಿಯಿಸಿದ್ದು, ಪ್ರಜ್ವಲ್ ದೇವರಾಜ್ ಗೋವಾದಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾನೆ. ದಿಗಂತ್ ಮೈಸೂರಿನಲ್ಲಿದ್ದು ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದೆ ಎಂದು ಕಿಡಿಕಾರಿದ್ದಾರೆ.

     

  • ಮೊಹರಂಗಾಗಿ ಉಚಿತ ರೇಷನ್ ಕೂಪನ್ ವಿತರಣೆ- ನೂಕುಗ್ಗಲಾಗಿ ಇಬ್ಬರ ಸಾವು

    ಮೊಹರಂಗಾಗಿ ಉಚಿತ ರೇಷನ್ ಕೂಪನ್ ವಿತರಣೆ- ನೂಕುಗ್ಗಲಾಗಿ ಇಬ್ಬರ ಸಾವು

    ಚಿಕ್ಕಬಳ್ಳಾಪುರ: ನಗರದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಉಚಿತ ರೇಷನ್ ಕೂಪನ್ ವಿತರಣೆ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಜನರ ಮಧ್ಯೆ ನೂಕುನುಗ್ಗಲು ಉಂಟಾಗಿ ಇಬ್ಬರು ಸಾವನ್ನಪಿರುವ ಘಟನೆ ಯಲಹಂಕ ಬಳಿ ನಡೆದಿದೆ.

    ಉಚಿತ ರೇಷನ್ ಕೂಪನ್ ಪಡೆಯಲು ಮುಂದಾಗಿದ್ದ ರೆಹಮತ್(70), ಅನ್ವರ್(60) ಸಾವನ್ನಪ್ಪಿದ ದುದೈವಿಗಳು. ಯಲಹಂಕ ಬಳಿಯ ಮಿಟ್ಟಗಾನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ.

    ಶಿವಾಜಿನಗರದ ಆಸಿಫ್ ಎಂಬವರು ಮುಸ್ಮಿಮರಿಗೆ ಉಚಿತ ಕೂಪನ್ ವಿತರಣೆ ಮಾಡುತ್ತಿದ್ದರು. ಬೆಳ್ಳಗೆಯಿಂದಲೇ ಕೂಪನ್‍ಗಾಗಿ ಸಾವಿರಾರು ಮಂದಿ ಸಾಲುಗಟ್ಟಿ ನಿಂತಿದ್ದರು. ಉಚಿತ ಕೂಪನ್ ವಿತರಣೆ ಕುರಿತು ಸಾಮಾಜಿಕ ಜಾಲತಾಣ ವಾಟ್ಸಾಪ್‍ನಲ್ಲಿ ಮಾಹಿತಿ ಪ್ರಚಾರ ಮಾಡಲಾಗಿತ್ತು.

    ಪ್ರಸ್ತುತ ಬಾಗಲೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆಸಿಫ್‍ರನ್ನು ವಶಕ್ಕೆ ಪಡೆದಿದ್ದಾರೆ. ಉಚಿತ ಕೂಪನ್ ಪಡೆಯಲು ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಜನರು ಆಗಮಿಸಿದ್ದರು.

  • ಮೌಢ್ಯ ನಿಷೇಧ ಕಾಯ್ದೆಗೆ ಕ್ಯಾಬಿನೆಟ್ ಒಪ್ಪಿಗೆ: ಯಾವುದಕ್ಕೆ ನಿಷೇಧ?

    ಮೌಢ್ಯ ನಿಷೇಧ ಕಾಯ್ದೆಗೆ ಕ್ಯಾಬಿನೆಟ್ ಒಪ್ಪಿಗೆ: ಯಾವುದಕ್ಕೆ ನಿಷೇಧ?

    ಬೆಂಗಳೂರು: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಮೌಢ್ಯ ನಿಷೇಧ ತಿದ್ದುಪಡಿ ಕಾಯ್ದೆಗೆ ಅಂತೂ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ.ಕೆಂಡ ಹಾಯುವಂತಹ ಆಚರಣೆಗಳು ಬಲವಂತದಿಂದ ನಡೆಯಬಾರದೆಂದು ಸೂಚಿಸಿದೆ.

    ಬೆತ್ತಲೆ ಸೇವೆಗೆ ಸಂಪೂರ್ಣ ನಿಷೇಧ, ದೇವರ ಹೆಸರಿನಲ್ಲಿ ಹಿಂಸೆಗೆ ಆಸ್ಪದವಿಲ್ಲ, ಉರುಳು ಸೇವೆ ನಿಷೇಧ, ಎಂಜಲೆಲೆ ಮೇಲೆ ಉರುಳುವುದು ನಿಷೇಧ, ಮಡೆಸ್ನಾನ ನಿಷೇಧ, ಜ್ಯೋತಿಷ್ಯ, ವಾಸ್ತುಗೆ ಯಾವುದೇ ಅಡ್ಡಿ ಇಲ್ಲ, ದೆವ್ವ ಭೂತ ಬಿಡಿಸುವ ನೆಪದಲ್ಲಿ ಹಿಂಸೆ ಶಿಕ್ಷಾರ್ಹವಾಗಿದೆ. ಜೈನ ಸಮುದಾಯದ ಕೇಶಲೋಚನಕ್ಕೆ ನಿಷೇಧವಿಲ್ಲ ಎಂದು ಸೂಚಿಸಿದೆ.

    ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿಬಿ ಜಯಚಂದ್ರ, ಅಮಾನವೀಯ ಆಚರಣೆಗಳು ಮನುಷ್ಯನನ್ನು ನಗ್ನಗೊಳಿಸುವ ವಾಮಾಚಾರ, ಮಾಟ, ಭಾನಾಮತಿ, ಮಡೆಸ್ನಾನ ಮನುಷ್ಯನಿಗೆ ದೈಹಿಕ, ಮಾನಸಿಕ ಹಿಂಸೆ ನೀಡುವಂತಹ ಆಚರಣೆಗಳಿಗೆ ನಿಷೇಧ ಹೇರಿದೆ. ಪ್ರದಕ್ಷಿಣೆ, ಯಾತ್ರೆ, ಹರಿಕತೆ, ಕೀರ್ತನೆ, ಪ್ರವಚನ, ಭಜನೆ, ಪುರಾತನ ಸಂಪ್ರದಾಯ ಶಿಕ್ಷಣಗಳಿಗೆ ಯಾವುದೇ ತೊಂದರೆ ಇಲ್ಲ. ಪವಾಡಗಳ ಕುರಿತು ಸಂತರು ಪ್ರಚಾರ ಮಾಡುವುದು, ಅದಕ್ಕೆ ಪೂರಕವಾದ ಸಾಹಿತ್ಯ ರಚಿಸಲು ಅಡ್ಡಿ ಇಲ್ಲ ಎಂದು ಹೇಳಿದರು.

    ದೇವಸ್ಥಾನ, ದರ್ಗಾ, ಮಸೀದಿ, ಗುರುದ್ವಾರ, ಚರ್ಚ್‍ಗಳಲ್ಲಿ ನಡೆಯುವ ಆಚರಣೆಗಳಿಗೆ ಯಾವುದೇ ರೀತಿಯ ಅಡಚಣೆ ಇಲ್ಲ. ದೈಹಿಕ ಹಿಂಸೆ ಆಗಬಾರದು ಅಷ್ಟೇ ಎಂದು ಮೌಢ್ಯ ನಿಷೇಧ ಕಾಯ್ದೆ ಹೇಳಿದೆ. ಎಲ್ಲ ಧರ್ಮಗಳ ಸಾಂಪ್ರದಾಯಿಕ ಆಚರಣೆ, ಮೆರವಣಿಗೆಯಂತಹ ಕ್ರಮಗಳಿಗೂ ನಿಷೇಧವಿಲ್ಲ. ಜ್ಯೋತಿಷ್ಯ, ವಾಸ್ತುವಿನಿಂತಹ ವಿಷಯಗಳಲ್ಲಿ ಸಲಹೆ ಪಡೆಯಲು ಯಾವುದೇ ತೊಂದರೆಯಿಲ್ಲ ಎಂದು ವಿವರಿಸಿದರು.

    ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಈ ಮೌಢ್ಯ ನಿಷೇಧ ತಿದ್ದುಪಡಿ ಕಾಯ್ದೆಯನ್ನು ಮಂಡಿಸಲಾಗುವುದು. ಅಲ್ಲಿ ಸುಧೀರ್ಘ ಚರ್ಚೆಯ ನಂತರ ಕೆಲವು ಅಂಶಗಳು ಸೇರಿಕೆಯಾಗಬಹುದು ಕೆಲವು ಅಂಶಗಳನ್ನು ಕೈ ಬಿಡಬಹುದು ಎಂದರು. ಒಟ್ಟಿನಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಇದು ಅಂಗೀಕಾರ ಪಡೆದ ನಂತರದ ದಿನಗಳಲ್ಲಿ ಗೆಜೆಟ್ ಮೂಲಕ ಪ್ರಕಟವಾಗಲಿದೆ. ಆದರೆ ಕಾಲ ಕಾಲಕ್ಕೆ ಇದರಲ್ಲಿ ಬದಲಾವಣೆ ಮಾಡಲು ಅವಕಾಶವಿದೆ ಎಂದು ಅವರು ಹೇಳಿದರು.

    ಕ್ಯಾಬಿನೆಟ್ ನಿರ್ಧಾರಗಳು:
    ರಾಜ್ಯದಲ್ಲಿರುವ ಪಶುಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ನಿರ್ಧರಿಸಿದ್ದು 2017-18 ರ ಸಾಲಿನಲ್ಲಿ 36.72 ಕೋಟಿ ರೂ. ವೆಚ್ಚದಲ್ಲಿ 306 ಪಶುಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಅಲ್ಲಿ ಹೆಚ್ಚುವರಿ ಅನುಕೂಲಗಳನ್ನು ಒದಗಿಸಲಾಗುವುದು ಎಂದರು.

    ಕೃಷಿ ಭಾಗ್ಯ ಯೋಜನೆ ಅಡಿ ಕರಾವಳಿ ಜಿಲ್ಲೆಗಳ ಕೆಲವು ಸೀಮಿತ ಪ್ರದೇಶಗಳನ್ನು ಸೇರಿಸಿ ಉಳಿದಂತೆ ರಾಜ್ಯಾದ್ಯಂತ ರೈತರಿಗೆ ತರಕಾರಿ ಬೀಜಗಳ ಕಿಟ್ ಅನ್ನು ಒದಗಿಸಲು ಸರ್ಕಾರ ನಿರ್ಧರಿಸಿದ್ದು ಇದಕ್ಕಾಗಿ ಮೂವತ್ತು ಕೋಟಿ ರೂ ಗಳನ್ನು ಒದಗಿಸಲು ತೀರ್ಮಾನಿಸಿದೆ. ಒಂದು ತರಕಾರಿ ಬೀಜಗಳ ಕಿಟ್ ಅನ್ನು ತಲಾ ಎರಡು ಸಾವಿರ ರೂ ಗಳ ವೆಚ್ಚದಲ್ಲಿ ಒದಗಿಸಲಾಗುವುದು ಎಂದು ತಿಳಿಸಿದರು. ಇದರಿಂದ ರಾಜ್ಯದ ಅತಿ ಸಣ್ಣ ಮತ್ತು ಸಣ್ಣ ರೈತರಿಗೆ ಅನುಕೂಲವಾಗಲಿದ್ದು ಸುಮಾರು 1.47 ಲಕ್ಷ ಎಕರೆ ಪ್ರದೇಶದಲ್ಲಿ ಈ ಕೀಟಗಳ ಸಹಾಯದಿಂದ ತರಕಾರಿ ಬೆಳೆಯಲು ಅನುಕೂಲವಾಗಲಿದೆ ಎಂದು ಹೇಳಿದರು.

    ಆರ್ಥಿಕ ದುರ್ಬಲರಿಗೆ 6000 ಕೋಟಿ ರೂ ವೆಚ್ಚದಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಿಲು ಸಂಪುಟ ನಿರ್ಧರಿಸಿದೆ. ಇದಕ್ಕಾಗಿ 468 ಎಕರೆ ಭೂಮಿಯನ್ನು ಗುರುತಿಸಿದ್ದು, ಈ ಯೋಜನೆಯಡಿ ಫಲಾನುಭವಿಗಳು ತಲಾ ಒಂದು ಲಕ್ಷ ರೂ ಪಾವತಿಸಿ ಬೇಕು. ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ನಿರ್ಮಿಸಲಾಗುವ ಮನೆಗಳ ನಿರ್ಮಾಣಕ್ಕೆ ಹುಟ್ಟಿಕೊಂಡಂತಹ ಹೌಸ್ಸಿಂಗ್ ಬೋರ್ಡ್ ಕೊಳಚೆ ನಿರ್ಮೂಲನಾ ಮಂಡಳಿ, ರಾಜೀವ್ ಗಾಂಧಿ ಕಾರ್ಪೊರೇಷನ್ ಸಂಸ್ಥೆಗಳ ವತಿಯಿಂದ ಐನೂರು ಕೋಟಿ ರೂ ಕೇಂದ್ರ ಸರ್ಕಾರದಿಂದ 1300 ಕೋಟಿ ರೂಗಳನ್ನು ಪಡೆಯಲಾಗುವುದು. ರಾಜ್ಯ ಸರ್ಕಾರವೂ ತನ್ನ ಪಾಲು ಹಾಕಲಿದೆ ಎಂದು ವಿವರ ನೀಡಿದರು.

    ಬಿಎಂಟಿಸಿಗೆ ಒಂದೂವರೆ ಸಾವಿರ ಬಸ್ಸುಗಳನ್ನು ಖರೀದಿಸಲು ಸರ್ಕಾರ ನಿರ್ಧರಿಸಿದ್ದು ಉಳಿದಂತೆ ಒಂದೂವರೆ ಸಾವಿರ ಬಸ್ಸುಗಳನ್ನು ಖಾಸಗಿಯವರಿಂದ ಗುತ್ತಿಗೆ ಆಧಾರದ ಮೇಲೆ ಪಡೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಇದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ಕೆಲಸವಲ್ಲವೇ? ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಭಾವನೆಗಳನ್ನು ಸಂಪುಟದ ಮುಂದಿಡುತ್ತೇನೆ ಎಂದರಲ್ಲದೇ, ಗುತ್ತಿಗೆ ಆಧಾರದ ಮೇಲೆ ಪಡೆಯುವ ಒಂದೂವರೆ ಸಾವಿರ ಬಸ್ಸುಗಳಿಗೆ ಪ್ರತಿವರ್ಷ ಎಪ್ಪತ್ತೇಳು ಕೋಟಿ ರೂ ಗಳನ್ನು ಪಾವತಿಸಲಾಗಿದೆ ಎಂದರು.

    ಸೈಕಲ್ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಯೋಜನೆ ಯಶಸ್ವಿಯಾಗಿರುವುದರಿಂದ ಬೆಂಗಳೂರಿನಲ್ಲೂ ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 80.18 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಹೇಳಿದರು. ಬಿಬಿಎಂಪಿ ವ್ಯಾಪ್ತಿಗೆ ಹೊಸತಾಗಿ 110 ಗ್ರಾಮಗಳು ಸೇರಿರುವುದರಿಂದ ಕುಡಿಯುವ ನೀರಿನ ಐದನೇ ಹಂತದ ಯೋಜನೆಯನ್ನು 5,550 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಲಾಗುವುದು ಎಂದು ವಿವರಿಸಿದರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುವಂತೆ ಯುವ ಚೈತನ್ಯ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ 20 ಕೋಟಿ ರೂ. ಅನುದಾನ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಜಯಚಂದ್ರ ಅವರು ವಿವರವಾಗಿ ತಿಳಿಸಿದರು.

    ಎಂಬಿ ಪಾಟೀಲ್ ಹೇಳಿಕೆ:
    ಕೃಷ್ಣ ಮೇಲ್ದಂಡೆ ಯೋಜನೆ ಹಂತಕ್ಕೆ 17 ಸಾವಿರ ಕೋಟಿ ರೂಪಾಯಿ ಹಿಂದಿನ ಸರ್ಕಾ ನಿಗದಿ ಪಡಿಸಿತ್ತು. ಆದರೆ ಹೊಸ ಭೂಸ್ವಾಧೀನ ಕಾಯ್ದೆ ಅಂತೆ 51.148 ಕೋಟಿ ಪರಿಷ್ಕೃತ ಅಂದಾಜು ಮೊತ್ತಕ್ಕೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. 6.19 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಇದ್ರಿಂದ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುವುದು. ಹೊಸ ಕಾಯ್ದೆಯ ನಿಯಮದಂತೆ ಭೂಸ್ವಾದೀನ ರೈತರಿಗೆ ನಾಲ್ಕು ಪಟ್ಟು ಹಣ ಸಿಗಲಿದೆ. ಉತ್ತರ ಕರ್ನಾಟಕದ ನೀರಾವರಿ ದೃಷ್ಟಿಯಿಂದ ಈ ಮಹತ್ವದ ನಿರ್ಧಾರ ತೆಗೆದು ಕೊಳ್ಳಲಾಗಿದೆ ಎಂದು ಎಂಬಿ ಪಾಟೀಲ್ ಹೇಳಿಕೆ ನೀಡಿದರು.

    ಕಾವೇರಿ ವಿಚಾರವಾಗಿ ಮಾತನಾಡಿದ ಎಂಬಿ ಪಾಟೀಲ್ ನಿರ್ವಹಣ ಮಂಡಳಿಗೆ ರಾಜ್ಯದ ವಿರೋಧವಿದೆ. ಅದಕ್ಕೆ ಸೂಕ್ತ ದಾಖಲೆಗಳೊಂದಿಗೆ ಸ್ಪಷ್ಟವಾದ ವರದಿಯನ್ನು ಸುಪ್ರೀಂಗೆ ಸಲ್ಲಿಕೆ ಮಾಡುತ್ತೇವೆ ಎಂದು ತಿಳಿಸಿದರು.