ಬೆಂಗಳೂರು: ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಕೆಲವೆಡೆ ಭಾರೀ ಮಳೆಯಿಂದಾಗಿ ಸಾವು-ನೋವುಗಳು ಸಂಭವಿಸಿದ್ದು, ಜನರು ಮನೆಗಳಲ್ಲಿಯೇ ಕೂರುವಂತಾಗಿದೆ.
ಯಾದಗಿರಿ: ಜಿಲ್ಲೆಯಲ್ಲಿ ಹಲವೆಡೆ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ಕಳೆದ ಒಂದು ತಿಂಗಳಿನಲ್ಲಿ 7 ಜನ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಜನರು ಹೊರಗಡೆ ಬರಲು ಭಯಪಡುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಿಂದ ತೆರಳಲು ಅಂತಕ ವ್ಯಕ್ತಪಡಿಸುತ್ತಿದ್ದಾರೆ.
ದಾವಣಗೆರೆ: ಶುಕ್ರವಾರ ರಾತ್ರಿ ಸುರಿದ ಮಳೆಗೆ ದಾವಣಗೆರೆಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಸಂಪೂರ್ಣವಾಗಿ ನೀರಿನಿಂದ ಜಲಾವೃತ ವಾಗಿದ್ದು, ಹೋಟೆಲ್ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದೆ. ಬಸ್ ನಿಲ್ದಾಣದಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದೇ ನೀರು ತುಂಬಿಕೊಳ್ಳಲಿ ಕಾರಣವಾಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.

ಚಾಮರಾಜನಗರ: ಜಿಲ್ಲೆಯಾದ್ಯಂತ ಇಂದು ಎಡಬಿಡದೆ ಮಳೆ ಸುರಿಯುತ್ತಿದೆ. ಕಳೆದ ಐದು ವರ್ಷಗಳಿಂದ ಬರಕ್ಕೆ ತುತ್ತಾಗಿದ್ದ ಜಿಲ್ಲೆಯಲ್ಲಿ ಈಗಾ ಉತ್ತಮ ಮಳೆಯಾಗುತ್ತಿದ್ದು, ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ರಾಮನಗರ: ಶುಕ್ರವಾರ ರೇಷ್ಮೆನಗರಿ ರಾಮನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಹತ್ತಾರು ಕೆರೆಗಳು ತುಂಬಿ ಕೋಡಿ ಹೊಡೆದು ಕೆಲವು ಕಡೆಗಳಲ್ಲಿ ಅವಾಂತರ ಸೃಷ್ಟಿಸಿರುವ ಘಟನೆ ನಡೆದಿದೆ. ತಾಲೂಕಿನ ಶೇಷಗಿರಿ ಹಳ್ಳಿಯ ಕೆರೆ ಹಾಗೂ ರಂಗರಾಯರ ದೊಡ್ಡಿ ಕೆರೆ ಮಳೆಗೆ ಕೋಡಿ ಹೊಡೆದಿವೆ. ರಾಮನಗರ ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುವ ರಂಗರಾಯರದೊಡ್ಡಿ ಹಾಗೂ ಅರ್ಚಕರ ಹಳ್ಳಿ ಗ್ರಾಮದ ರಸ್ತೆ ಕೊಚ್ಚಿಕೊಂಡು ಹೋಗಿದೆ. ಗ್ರಾಮಸ್ಥರು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೇ ವಾಹನ ಸವಾರರು ತಮ್ಮ ವಾಹನಗಳನ್ನು ಪ್ರಾಣಾಪಾಯದ ನಡುವೆಯು ಚಲಾಯಿಸುತ್ತಿದ್ದಾರೆ. ಈ ಬಗ್ಗೆ ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದವರು ಕೂಡಲೇ ರಸ್ತೆ ದುರಸ್ಥಿ ಕಾರ್ಯ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ವರುಣನ ಆರ್ಭಟಕ್ಕೆ ಎರಡು ಮನೆಗಳು ಕುಸಿದಿವೆ. ನಗರದ ಧರ್ಮಶಾಲಾ ರಸ್ತೆಯಲ್ಲಿರೋ ದಿವಾಕರ್ ಹಾಗು ಮಂಜಮ್ಮ ಎಂಬವರ ಹಳೆಯ ಮನೆಗಳ ಮೇಲ್ಚಾವಣೆ ಹಾಗು ಗೋಡೆ ನೆಲಕ್ಕೆ ಕುಸಿದಿದ್ದೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಪೌರಾಯುಕ್ತ ಚಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೂ ಕೂಡಲೇ ಕಟ್ಟಡ ತೆರವುಗೊಳಿಸುವಂತೆ ಮನೆ ಮಾಲಿಕರಿಗೆ ನೋಟೀಸ್ ನೀಡಿದ್ದಾರೆ. ಜಿಲ್ಲೆಯ ಚಳ್ಳಕೆರೆ, ಹಿರಿಯೂರು ತಾಲೂಕುಗಳಾದ್ಯಂತ ಬಾರಿ ಮಳೆಯಾಗಿದ್ದೂ ಕೆರೆ, ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತಿವೆ.





























