Tag: Bangalore

  • ತಡರಾತ್ರಿ ಗುಡುಗು ಸಹಿತ ವರ್ಷಧಾರೆ-ಮನೆಗಳಿಗೆ ನುಗ್ಗಿದ ಮಳೆ ನೀರು

    ತಡರಾತ್ರಿ ಗುಡುಗು ಸಹಿತ ವರ್ಷಧಾರೆ-ಮನೆಗಳಿಗೆ ನುಗ್ಗಿದ ಮಳೆ ನೀರು

    -ಜನಜೀವನ ಸಂಪೂರ್ಣ ಅಸ್ತವ್ಯಸ್ಥ

    ಬೆಂಗಳೂರು: ನಗರದ ಹೊರವಲಯದ ನೆಲಮಂಗಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಬೆಳಗಿನ ಜಾವ 4 ಗಂಟೆಗೆ ಅಬ್ಬರಿಸಿ ಬೊಬ್ಬಿರಿದ ಮಳೆಗೆ ಅಮಾನಿಕೆರೆ ಕೋಡಿ ಒಡೆದಿದೆ.

    ಕೆರೆ ಕೋಡಿ ಒಡೆದ ಪರಿಣಾಮ 8 ಬಡಾವಣೆಯ 400ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮಾರುತಿ ಲೇಔಟ್, ಗಜೇರಿಯಾ ಲೇಔಟ್, ಮಹಾತ್ಮಗಾಂಧಿ, ಚನ್ನಪ್ಪ ಬಡಾವಣೆ, ಶೇಷ ಬಡಾವಣೆಗಳು ಮುಳುಗಡೆಯಾಗಿವೆ.

    ಮನೆಗಳಲ್ಲಿ ನಾಲ್ಕೈದು ಅಡಿ ನೀರು ನಿಂತಿದೆ. ಹೀಗಾಗಿ ಜನರು ರಾತ್ರಿಯೆಲ್ಲಾ ಜಾಗರಣೆ ಮಾಡಿದ್ದಾರೆ. ರಾಜಕಾಲುವೆ ಮೇಲೆ ನಿರ್ಮಾಣವಾಗಿರುವ ಜನಪ್ರಿಯ ಅಪಾರ್ಟ್ ಮೆಂಟ್ ಜಲಾವೃತವಾಗಿದೆ. ಸ್ಥಳಕ್ಕೆ ಸ್ಥಳೀಯ ಜೆಡಿಎಸ್ ಶಾಸಕ ಶ್ರೀನಿವಾಸಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

  • ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಮೀಟರ್ ಬಡ್ಡಿದಂಧೆ!

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಮೀಟರ್ ಬಡ್ಡಿದಂಧೆ!

    ಬೆಂಗಳೂರು: ಜೈಲುಗಳಲ್ಲಿ ಇಷ್ಟು ದಿನ ಬಿರಿಯಾನಿ ಪೊಟ್ಟಣ, ಮೂಸಂಬಿ, ಕಿತ್ತಾಳೆಹಣ್ಣುಗಳಲ್ಲಿ ಕೈದಿಗಳಿಗೆ ಗಾಂಜಾ ಸರಬರಾಜಾಗುತ್ತಿದ್ದು ಬೆಳಕಿಗೆ ಬಂದಿತ್ತು. ಆದರೆ ಬಾಳೆಹಣ್ಣಿನಲ್ಲಿ 500 ರೂ. 2000 ರೂ. ನೋಟುಗಳನ್ನು ರವಾನೆ ಮಾಡುವ ಮೂಲಕ ಬಡ್ಡಿ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

    ಹಲವು ಹಗರಣಗಳಿಂದ ಸದಾ ಸುದ್ದಿಯಲ್ಲಿರುವ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇದೀಗ ಮೀಟರ್ ಬಡ್ಡಿ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಜೈಲಿನ ಒಳಗಿರುವ ಪ್ರಭಾವಿ ಕೈದಿಗಳು ತಮ್ಮ ಕುಟುಂಬ ಹಾಗು ಸ್ನೇಹಿತರ ಮೂಲಕ ವಾಮ ಮಾರ್ಗದಲ್ಲಿ ಜೈಲಿನ ಒಳಭಾಗಕ್ಕೆ ಹಣ ತರಿಸಿಕೊಂಡು ಆ ಹಣವನ್ನು ಜೈಲಿನಲ್ಲಿ ಇರುವ ಕೈದಿಗಳಿಗೆ ನೀಡಿ ಬಡ್ಡಿ ವಸೂಲಿ ಮಾಡುತ್ತಿರುವ ಘಟನೆ ನಡೆಯುತ್ತಿದೆ. ಕೈದಿಗಳು ಒಳಭಾಗದಲ್ಲಿ 100 ರೂಪಾಯಿಗೆ 10 ರೂಪಾಯಿಯಂತೆ ಬಡ್ಡಿ ಹಣ ಪಡೆದು ಜೈಲಿನ ಒಳಭಾಗದಲ್ಲೂ ತಮ್ಮ ವೃತ್ತಿಯನ್ನು ವಿಸ್ತರಿಸಿದ್ದಾರೆ.

    ಜೈಲಿನ ಕೈದಿಗಳಿಗೆ ಅವರ ಕುಟುಂಬದವರು ನೀಡಿದ್ದ ಬಾಳೆ ಹಣ್ಣನ್ನು ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬಾಳೆಹಣ್ಣಿನಲ್ಲಿ ಹೊಸ 500 ಹಾಗೂ 2000 ರೂಪಾಯಿಗಳ ನೋಟುಗಳನ್ನು ಸುರುಳಿ ಸುತ್ತಿ ಕಳುಹಿಸಲು ಯತ್ನಿಸಿದ್ದು ಇದೀಗ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ಇನ್ನು ಜೈಲಿನಲ್ಲಿ ಬಡ್ಡಿ ದಂಧೆ ನಡೆಯುತ್ತಿದೆ ಎಂದು ಡಿಐಜಿ ರೂಪಾ ಈ ಹಿಂದೆ ನೀಡಿದ್ದ ಜೈಲಿನ ಭ್ರಷ್ಟಾಚಾರದ ವರದಿಯಲ್ಲಿ ತಿಳಿಸಿದ್ದರು. ಈಗ  ಈ ವಿಡಿಯೋದಿಂದ ರೂಪಾ ಮಾಡಿದ್ದ ಅರೋಪ ಸಾಬೀತಾಗಿದೆ.

    ರೂಪ ವರ್ಗಾವಣೆ ನಂತರ ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಗೃಹ ಇಲಾಖೆ ಹಲವು ಬದಲಾವಣೆಗಳನ್ನು ಮಾಡಿ ಇನ್ನು ಮುಂದೆ ಜೈಲಿನಲ್ಲಿ ಯಾವುದೇ ಅಕ್ರಮಗಳು ನಡೆಯಲು ಅವಕಾಶ ನೀಡುವುದಿಲ್ಲವೆಂದು ಹೇಳಿದ್ದ ಸಚಿವ ರಾಮಲಿಂಗಾರೆಡ್ಡಿ ಇದಕ್ಕೆ ಯಾವ ರೀತಿ ಉತ್ತರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

    https://youtu.be/SYfLxC_73bY

  • ಸಿಎಂನಿಂದ 300 ಕೋಟಿ ರೂ. ಬೆಲೆ ಬಾಳುವ ಜಾಗ ಡಿನೋಟಿಫಿಕೇಶನ್

    ಸಿಎಂನಿಂದ 300 ಕೋಟಿ ರೂ. ಬೆಲೆ ಬಾಳುವ ಜಾಗ ಡಿನೋಟಿಫಿಕೇಶನ್

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತೊಂದು ಅಕ್ರಮ ಡಿನೋಟಿಫಿಕೇಶನ್ ಚಾರ್ಜ್ ಶೀಟ್  ಬಿಡುಗಡೆ ಮಾಡಿದೆ. ಸಿಎಂ ಆಪ್ತನ ಕಾರಣಕ್ಕಾಗಿ ನ್ಯಾಯಾಲಯದ ಆದೇಶವನ್ನೂ ಉಲ್ಲಂಘಿಸಿ 300 ಕೋಟಿ ಬೆಲೆಬಾಳುವ 6.26 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿದ್ದು, ಅದಕ್ಕೆ ಸಂಬಂಧಪಟ್ಟ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದೆ.

    ಬಿಜೆಪಿ ಕಚೇರಿಯಲ್ಲಿ ಮೂವರು ಶಾಸಕರ ಜತೆ ಸುದ್ದಿಗೋಷ್ಠಿ ನಡೆಸಿದ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಗೈದ್ರು. ಬೆಂಗಳೂರಿನ ಉತ್ತರ ವಲಯದ ಭೂಪಸಂದ್ರದ ಸರ್ವೆ ನಂ. 20 ಹಾಗೂ 21ರಲ್ಲಿ ಒಟ್ಟು 6.26 ಎಕರೆ ಭೂಮಿಯನ್ನ ಅಕ್ರಮವಾಗಿ ಡಿನೋಟಿಫಿಫೈ ಮಾಡಿದ್ದಾರೆ, ಡಿನೋಟಿಫೈ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸಹಿ ಮಾಡಿದ್ದಾರೆ, ಮುಖ್ಯಮಂತ್ರಿಗಳೇ ಇದಕ್ಕೆ ನೇರ ಹೊಣೆ ಅಂತಾ ಆರೋಪಿಸಿದ್ದಾರೆ.

    ಬೆಳ್ತಂಗಡಿ ಶಾಸಕ ವಸಂತ ಬಂಗೇರಾ ಅವರ ಡಿನೋಟಿಫೈ ಮಾಡುವಂತೆ ಮನವಿ ಮಾಡಿರುವ ಪತ್ರದ ಮೇಲೆ ಪರಿಶೀಲಿಸಿ ಕೂಡಲೇ ಚರ್ಚಿಸಿ ಅಂತಾ ಬರೆದು ಸಿಎಂ ಸಿದ್ದರಾಮಯ್ಯ ಸಹಿ ಹಾಕಿರುವ ಪತ್ರವನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಆದ್ರೆ ಡಿನೋಟಿಫೈ ಮಾಡಿರುವ ಅಗತ್ಯ ದಾಖಲೆಯ ಮಾತ್ರ ರಿಲೀಸ್ ಆಗಿಲ್ಲದಿರೋದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

    ಬಿಜೆಪಿ ಆರೋಪಗಳೇನು?
    1988ರಲ್ಲಿ ರಾಜಮಹಲ್ ವಿಲಾಸ್ 2ನೇ ಹಂತದ ಬಡಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಬೆಂಗಳೂರು ಉತ್ತರ ತಾಲೂಕು ಭೂಪಸಂದ್ರದ ಸ.ನಂ20ರಲ್ಲಿ 3.34 ಎಕರೆ, ಸ.ನಂ.21ರಲ್ಲಿ 2.32 ಎಕರೆ ನೋಟಿಫಿಕೇಶನ್ ಆಗಿತ್ತು. ಬಡಾವಣೆ ನಿರ್ಮಿಸಿ 22 ಮಂದಿಗೆ ಬಿಡಿಎ ಸೈಟ್ ಹಂಚಿಕೆ ಮಾಡಿತ್ತು. ಆದರೆ 1992ರಲ್ಲಿ ಅಂದಿನ ಸರ್ಕಾರ 6.26ಎಕರೆ ಭೂಮಿ ಡಿನೋಟಿಫಿಕೇಶನ್ ಮಾಡಿತ್ತು. ಈ ವೇಳೆ ಬಿಡಿಎಯಿಂದ ಜಾಗ ಪಡೆದವರು ಡಿನೋಟಿಫಿಕೇಶನ್ ರದ್ದು ಮಾಡುವಂತೆ ಹೈಕೋರ್ಟ್ ಮೊರೆ ಹೋಗಿದ್ದರು. 1996ರಲ್ಲಿ ಹೈಕೋರ್ಟ್ ಡಿನೋಟಿಫಿಕೇಶನ್ ರದ್ದು ಮಾಡಿತ್ತು. ಆದರೆ ಮೂಲ ಮಾಲೀಕರಲ್ಲಿ ಒಬ್ಬರಾದ ಸೈಯದ್ ಬಾಷಿದ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಕೆ ಮಾಡುತ್ತಾರೆ. ಅಲ್ಲೂ ಸೈಯದ್ ಬಾಷಿದ್ ಅರ್ಜಿ ತಿರಸ್ಕೃತವಾಗುತ್ತದೆ. ನಂತರ ಸುಪ್ರೀಂ ಕೋರ್ಟ್ ಮೊರೆ ಹೋದ್ರೂ ಅಲ್ಲೂ ಅರ್ಜಿ ವಜಾಗೊಳ್ಳುತ್ತದೆ.

    2015ರಲ್ಲಿ ಮತ್ತೊಬ್ಬ ಮೂಲ ಮಾಲೀಕರಾದ ಕೆ.ವಿ.ಜಯಲಕ್ಷ್ಮಮ್ಮ ಹೈಕೋರ್ಟ್ ಮೆಟ್ಟಿಲೇರುತ್ತಾರೆ. ಆದ್ರೆ ಹೈಕೋರ್ಟ್ ನಲ್ಲಿ ಜಯಲಕ್ಷ್ಮಮ್ಮ ಮನವಿ ಪುರಸ್ಕಾರವಾಗಿ ಡಿನೋಟಿಫಿಕೇಶನ್ ಯಥಾಸ್ಥಿತಿಗೆ ಆದೇಶ ನೀಡುತ್ತದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಬಿಡಿಎ ಮೇಲ್ಮನವಿ ಸಲ್ಲಿಸುತ್ತದೆ. ಆದ್ರೆ ಮೇಲ್ಮನವಿಗೆ ಬಿಡಿಎ ಅರ್ಜಿ ಯೋಗ್ಯವಲ್ಲ ಎಂದು ಸರ್ಕಾರದ ಕಾನೂನು ಕೋಶ ಅಭಿಪ್ರಾಯ ವ್ಯಕ್ತಪಡಿಸುತ್ತದೆ. 2016ರ ಜೂನ್ 7 ರಂದು ಬಿಡಿಎ ಮನವಿ ಮೇರೆಗೆ ಮೇಲ್ಮನವಿಯನ್ನು ದ್ವಿಸದಸ್ಯ ಪೀಠ ರದ್ದುಗೊಳಿಸುತ್ತದೆ. ಆ ಬಳಿಕ 15-06-2016ರಂದು ಬಿಡಿಎ ಆಯುಕ್ತರು ಭೂ ಸ್ವಾಧೀನ ಪ್ರಕ್ರಿಯೆ ರದ್ದಾಗಿರುತ್ತದೆ ಎಂದು ಕೆ.ವಿ ಜಯಲಕ್ಷ್ಮಮ್ಮ ಮತ್ತು ಇತರರಿಗೆ ಹಿಂಬರಹ ನೀಡುತ್ತಾರೆ.

    ಈ ಆಸ್ತಿಯ ಇಂದಿನ ಮಾರುಕಟ್ಟೆ ಬೆಲೆ 300 ಕೋಟಿ ರೂ. ಆಗಿದ್ದು, ಸುಪ್ರೀಂ ಕೋರ್ಟ್ ತೀರ್ಪಿನಿಂದ ಉಳಿಸಿಕೊಂಡ ಆಸ್ತಿಯನ್ನು ಬಿಟ್ಟುಕೊಟ್ಟಿರುವುದರಲ್ಲಿ ಸರ್ಕಾರದ ನೇರ ಕೈವಾಡವಿದೆ. 37 ವರ್ಷದಿಂದ ಈ ವ್ಯವಹಾರದಲ್ಲಿ ಕಾಣಸಿದೇ ಇದ್ದ ಕೆ.ವಿ ಜಯಲಕ್ಷ್ಮಮ್ಮ ಮತ್ತು ಇತರರು ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ನಂತರ ಹೈಕೋರ್ಟ್ ನಲ್ಲಿ ಅರ್ಜಿ ಹಾಕಿದ್ದು ಅನುಮಾನಕ್ಕೆ ಬರುತ್ತದೆ. ಜನತಾದಳದಲ್ಲಿ ಸಿದ್ದರಾಮಯ್ಯ ಜೊತೆಯಲ್ಲಿ ಆಪ್ತರಾಗಿದ್ದ ಪ್ರಬಲ ರಾಜಕಾರಣಿ ಜಯಲಕ್ಷ್ಮಮ್ಮ ರಿಂದ ಪವರ್ ಆಫ್ ಅಟಾರ್ನಿ ಪಡೆದು ಈ ಅವ್ಯವಹಾರದಲ್ಲಿ ಸಕ್ರಿಯರಾಗಿದ್ದರಿಂದಲೇ ಸರ್ಕಾರ ಬಿಡಿಎ ಸಲ್ಲಿಸಿದ್ದ ಮೇಲ್ಮನವಿಯನ್ನು ವಾಪಸ್ ಪಡೆಯಲು ಆದೇಶ ನೀಡಿದೆ. ಈ ಆರೋಪ ತಿರಸ್ಕರಿಸುವುದಾದರೆ ಸಿಎಂ ಸಿದ್ದರಾಮಯ್ಯ ಒಂದು ವಾರದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿ ಆಸ್ತಿಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಈ ಆರೋಪ ಸತ್ಯವಾಗುತ್ತದೆ ಎಂದು ಬಿಜೆಪಿ ಹೇಳಿದೆ.

    ಬ್ರಹ್ಮಾಂಡ ಭ್ರಷ್ಟಾಚಾರ: ಭೂಪಸಂದ್ರ ಡಿನೋಟಿಫಿಕೇಷನ್ ಹಗರಣದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ, ಸಿಎಂ ಬೇನಾಮಿ ಆಸ್ತಿ ಮಾಡಲು ಹೊರಟಿದ್ದಾರೆ, ಸಿಎಂ ವಿರುದ್ಧ ಬುಧವಾರ ಅಥವಾ ಗುರುವಾರ ಎಸಿಬಿ ಗೆ ದೂರು ಕೊಡುತ್ತೇವೆ. ಬಿಡಿಎ ಇದ್ದಿದ್ದು ಹಣ ಮಾಡೋಕಾ, ಮುಚ್ಚಿಬಿಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು, ಮಾನ ಮರ್ಯಾದೆ ಇದೆಯೇನ್ರಿ ನಿಮಗೆ ಎಂದು ಸಿಎಂ ವಿರುದ್ಧ ಕೆಂಡಕಾರಿದ್ದಾರೆ. ಅಷ್ಟೇ ಅಲ್ಲ, ಮಾನನಷ್ಟ ಮೊಕದ್ದಮೆ ಹೂಡುವ ಸಿಎಂ ಹೇಳಿಕೆಗೆ ಸವಾಲು ಹಾಕಿರುವ ಪುಟ್ಟಸ್ವಾಮಿ, ನಾಳೆನೇ ನನ್ನ ಮೇಲೆ ಮೊಕದ್ದಮೆ ಹೂಡಲಿ, ಇನ್ನಷ್ಟು ವಿಚಾರ ಹೊರತೆಗೆಯುತ್ತೇನೆ, ಮಾನನಷ್ಟ ಮೊಕದ್ದಮೆ ಹೂಡಿದರೆ ಎದುರಿಸಲು ಸಿದ್ಧ ಅಂತಾ ಹೇಳಿದರು.

     

  • ಬಿಬಿಎಂಪಿ ವಾಟರ್ ಟ್ಯಾಂಕರ್‍ಗೆ 14 ವರ್ಷದ ಬಾಲಕ ಬಲಿ

    ಬಿಬಿಎಂಪಿ ವಾಟರ್ ಟ್ಯಾಂಕರ್‍ಗೆ 14 ವರ್ಷದ ಬಾಲಕ ಬಲಿ

    ಬೆಂಗಳೂರು: ಮನೆ ಮುಂದಿನ ರಸ್ತೆಯಲ್ಲಿ ಆಟವಾಡುತ್ತಿದ್ದ 14 ವರ್ಷದ ಬಾಲಕನಿಗೆ ಬಿಬಿಎಂಪಿ ವಾಟರ್ ಟ್ಯಾಂಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಬೆಂಗಳೂರಿನ ಅಂದ್ರಾಳ್ಳಿಯ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ರಮೇಶ ಮತ್ತು ಜಯಮ್ಮ ದಂಪತಿಯ 14 ಮಗ ವರ್ಷದ ತರುಣ್ ಎಂಬಾತನೇ ಮೃತ ಪಟ್ಟ ದುರ್ದೈವಿ.

    ಸ್ಥಳೀಯ ಕಾರ್ಪೊರೇಟರ್ ಟ್ರ್ಯಾಕ್ಟರ್ ಮೂಲಕ ವಾರ್ಡ್ ಜನರಿಗೆ ನೀರು ಸರಬರಾಜು ಮಾಡುತ್ತಿದ್ದರು. ಇದೇ ಟ್ಯ್ರಾಕ್ಟರ್‍ಗೆ ಬಾಲಕ ಬಲಿಯಾಗಿದ್ದಾನೆ. ವಾರ್ಡ್ ನಂಬರ್ 72 ನ ಹೇರೋ ಹಳ್ಳಿ ಕಾರ್ಪೊರೇಟರ್ ರಾಜಣ್ಣ ಉಚಿತವಾಗಿ ವಾರ್ಡ್ ಜನರಿಗೆ ಅಂತ ಒಂದು ಟ್ರಾಕ್ಟರ್ ನಲ್ಲಿ ನೀರಿನ ಸೌಲಭ್ಯ ಒದಗಿಸುತ್ತಿದ್ದರು.

    ಪ್ರಕರಣದ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಪೊಲೀಸರು ಟ್ರಾಕ್ಟರ್ ಅನ್ನು ಸಿಜ್ ಮಾಡಿ, ಚಾಲಕ ರವಿ ಎಂಬಾತನನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಮೃತ ಬಾಲಕನ ಪೋಷಕರು ತಮ್ಮ ಮಗನ ಸಾವಿಗೆ ಯಾವುದೇ ನ್ಯಾಯ ಸಿಕ್ಕಿಲ್ಲ. ಅಪಘಾತ ಮಾಡಿದ ಚಾಲಕನನ್ನು ಬಂಧಿಸಿ ತಕ್ಷಣ ಬಿಡುಗಡೆ ಮಾಡಲಾಗಿದೆ. ಅಂದ್ರಾಳ್ಳಿಯ ಕಾರ್ಪೊರೇಟರ್ ವಾಸುದೇವ ಮತ್ತು ಹೇರೋಹಳ್ಳಿಯ ಬಿಬಿಎಂಪಿ ಸದಸ್ಯ ರಾಜಣ್ಣ ಬಳಿ ಹೋಗಿ ನಮಗೆ ನ್ಯಾಯ ಕೊಡಿಸಿ ಅಂತ ಕೇಳಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.

    ಅಲ್ಲದೇ ರಮೇಶ್ ಬಾಡಿಗೆಗೆ ಇದ್ದ ಮನೆಯ ಮಾಲೀಕ ಮೂಡಲಯ್ಯ ಮನೆಗೆ ಅಂತ ಹಾಕಿಸಿದ್ದ ಬೋರ್ವೆಲ್ ನಿಂದ ಹಣದ ಆಸೆಗೆ ಆಕ್ರಮವಾಗಿ ಟ್ಯಾಂಕರ್ ಗಳಿಗೆ ನೀರು ತುಂಬಿಸುತ್ತಿದ್ದ ಎಂಬ ಮೃತ ಬಾಲಕನ ಪೋಷಕರು ಆರೋಪಿಸಿದ್ದಾರೆ.

  • ದೇಶದಲ್ಲೇ ಫಸ್ಟ್, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಧಾರ್ ಇದ್ರೆ ಪ್ರವೇಶ ಸುಲಭ!

    ದೇಶದಲ್ಲೇ ಫಸ್ಟ್, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಧಾರ್ ಇದ್ರೆ ಪ್ರವೇಶ ಸುಲಭ!

    ಬೆಂಗಳೂರು: ಶೀಘ್ರದಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದಲ್ಲಿಯೇ ಮೊದಲ ಆಧಾರ್ ಬಯೋಮೆಟ್ರಿಕ್ ಪ್ರವೇಶವನ್ನು ಹೊಂದಿರುವ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    ಹೊಸ ಆಧಾರ್ ಪರಿಶೀಲನಾ ವ್ಯವಸ್ಥೆ 2108 ಮಾರ್ಚ್ ವೇಳೆಗೆ ಆರಂಭವಾಗಲಿದ್ದು, ಡಿಸೆಂಬರ್ 31ರ ವೇಳೆಗೆ ಮುಕ್ತಾಯವಾಗಬೇಕೆಂಬ ಡೆಡ್‍ಲೈನನ್ನು ಕೆಐಎಎಲ್ ಹಾಕಿಕೊಂಡಿದೆ.

    ವಿಮಾನ ನಿಲ್ದಾಣದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯ ಅಳವಡಿಕೆಯಿಂದ ಪ್ರಯಾಣಿಕರ ಪರಿಶೀಲನಾ ವೇಳೆಯು ಕಡಿಮೆಯಾಗಲಿದೆ. ಅಲ್ಲದೆ ರಕ್ಷಣಾ ದೃಷ್ಟಿಯಿಂದಲೂ ಈ ವ್ಯವಸ್ಥೆ ಅತ್ಯುತ್ತಮ ಎಂದು ವಿಶ್ಲೇಷಿಸಲಾಗುತ್ತಿದೆ. ಒಮ್ಮೆ ಪ್ರಯಾಣಿಕರ ವಿವರ ದಾಖಲಾಗಿ ಪ್ರೊಫೈಲ್ ಕ್ರಿಯೆಟ್ ಮಾಡಿದರೆ ಸೇವೆಯನ್ನು ಮತ್ತಷ್ಟು ಸುಧಾರಿಸಲು ಸಹಾಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಲ್ಲದೇ ಪ್ರತಿ ಬಾರಿಯೂ ಪ್ರಯಾಣಿಕರು ದಾಖಲೆಗಳನ್ನು ಪರೀಶಿಲನೆಗೆ ತರುವ ಅಗತ್ಯವಿಲ್ಲವದ್ದರಿಂದ ಮುಕ್ತ ಪ್ರವೇಶವನ್ನು ಪಡೆಯಲು ಸಾಧ್ಯವಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಏರುತ್ತಿರುವುದರಿಂದ ಪ್ರಯಾಣಿಕರ ತ್ವರಿತ ಆಗಮನ ಮತ್ತು ನಿರ್ಗಮನಕ್ಕಾಗಿ ಆಧಾರ್ ಸಂಪರ್ಕ ವ್ಯವಸ್ಥೆಯನ್ನು ಆರಂಭಿಸಲಾಗುತ್ತಿದೆ.

     

  • ಪಾಕ್ ನಿಂದ ಒಂದು ಗುಂಡು ಗಡಿ ದಾಟಿದ್ರೂ ಅಸಂಖ್ಯಾತ ಗುಂಡು ಹಾರಿಸಿ: ರಾಜನಾಥ್ ಸಿಂಗ್

    ಪಾಕ್ ನಿಂದ ಒಂದು ಗುಂಡು ಗಡಿ ದಾಟಿದ್ರೂ ಅಸಂಖ್ಯಾತ ಗುಂಡು ಹಾರಿಸಿ: ರಾಜನಾಥ್ ಸಿಂಗ್

    ಬೆಂಗಳೂರು: ಭಾರತೀಯ ಸೈನಿಕರ ಗುಂಡಿನ ದಾಳಿಗೆ ಪ್ರತಿದಿನ ಗಡಿಯಲ್ಲಿ 5-6 ಉಗ್ರರು ಹತ್ಯೆಯಾಗುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಹೇಳಿದ್ದಾರೆ.

    ಪಾಕಿಸ್ತಾನ ಪದೇ-ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ನೆರೆಯ ದೇಶಗಳು ನಿರಂತರವಾಗಿ ಭಾರತದ ಗಡಿಯೊಳಗೆ ಉಗ್ರಗಾಮಿಗಳನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಗಡಿಯಲ್ಲಿ ದೇಶದ ರಕ್ಷಣೆ ಮಾಡುತ್ತಿರುವ ಭಾರತೀಯ ಸೈನಿಕರ ಗುಂಡಿಗೆ ಪ್ರತಿ ದಿನ 5-6 ಉಗ್ರರು ಸಾಯುತ್ತಿದ್ದಾರೆ ಎಂದು ತಿಳಿಸಿದರು.

    ನೀವಾಗಿಯೇ ಮೊದಲು ಗುಂಡನ್ನು ಹಾರಿಸಬೇಡಿ, ಒಂದು ವೇಳೆ ಪಾಕಿಸ್ತಾನದಿಂದ ಒಂದು ಗುಂಡು ನಮ್ಮ ಗಡಿ ಪ್ರದೇಶವನ್ನು ದಾಟಿದರೂ, ಪ್ರತ್ಯುತ್ತರವಾಗಿ ಅಸಂಖ್ಯಾತ ಗುಂಡುಗಳನ್ನು ಹಾರಿಸುವಂತೆ ತಿಳಿಸಿರುವುದಾಗಿ ಹೇಳಿದರು.

    ಇದೇ ಸಂದರ್ಭದಲ್ಲಿ ಚೀನಾದೊಂದಿಗಿನ ಡೋಕ್ಲಾಂ ಗಡಿ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಭಾರತದ ದುರ್ಬಲ ದೇಶವಲ್ಲ, ಡೋಕ್ಲಾಂ ಸಂಘರ್ಷವನ್ನು ಚೀನಾದೊಂದಿಗೆ ಬಗೆಹರಿಸಿದ ವಿಧಾನವೇ ಭಾರತದ ಬಲವನ್ನು ತಿಳಿಸುತ್ತದೆ. ವಿಶ್ವ ಹಲವು ಜನರು ಆಸಕ್ತಿಯಿಂದ ಚೀನಾ ಮತ್ತು ಭಾರತದ ನಡುವಿನ ಸಂಘರ್ಷವನ್ನು ಗಮನಿಸುತ್ತಿದ್ದರು ಎಂದು ತಿಳಿಸಿದರು.

    ಒಂದು ವೇಳೆ ಭಾರತವು ದುರ್ಬಲ ರಾಷ್ಟ್ರವಾಗಿದ್ದಾರೆ ಚೀನಾದೊಡನೆ ಇದ್ದ ಸಂಘರ್ಷವನ್ನು ಪರಿಹಾರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

  • ಸಿಗರೇಟ್ ತಂದುಕೊಡಲಿಲ್ಲವೆಂದು ವ್ಯಾಪಾರಿಗೆ ಚಾಕು ಇರಿತ- ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಚಕ್ರವರ್ತಿ ಸೂಲಿಬೆಲೆ

    ಸಿಗರೇಟ್ ತಂದುಕೊಡಲಿಲ್ಲವೆಂದು ವ್ಯಾಪಾರಿಗೆ ಚಾಕು ಇರಿತ- ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಚಕ್ರವರ್ತಿ ಸೂಲಿಬೆಲೆ

    ಬೆಂಗಳೂರು: ಸಿಗರೇಟು ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ವ್ಯಾಪಾರಿ ಮೇಲೆ ಮಾರಣಾಂತಿಕವಾಗಿ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ನಗರದ ಉತ್ತರ ಹಳ್ಳಿಯಲ್ಲಿ ನಡೆದಿದೆ.

    ಹಲ್ಲೆಗೊಳಗಾದ ವ್ಯಾಪಾರಿಯನ್ನು ಅಂಜಧ ಚ್ಹಾನ್ ಎಂದು ಗುರುತಿಸಲಾಗಿದೆ. ಅಂಜದ್ ಮತ್ತು ಆತನ ಕುಟುಂಬ ಉತ್ತರಹಳ್ಳಿ ಪೆಟ್ರೋಲ್ ಬಂಕ್ ಸಮೀಪದ ಬಾರ್ ಬಳಿ ಅಗರಬತ್ತಿ ವ್ಯಾಪಾರ ನಡೆಸುತ್ತಿದ್ದಾರೆ. ಈ ವೇಳೆ ಕಂಠ ಪೂರ್ತಿ ಕುಡಿದು ಸ್ಥಳಕ್ಕೆ ಆಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬ ಸಿಗರೇಟು ತರಲು ಅಂಜದ್ ಅವರಿಗೆ ಹೇಳಿದ್ದಾನೆ. ಆದರೆ ಅಂಜದ್ ವ್ಯಾಪಾರದಲ್ಲಿ ನಿರತರಾಗಿದ್ದರಿಂದ ಅಲ್ಲಿಂದ ಸಿಗರೇಟು ತರಲು ಹೋಗಿಲ್ಲ. ಇದರಿಂದ ಕೆರಳಿದ ಅಪರಿಚಿತ ಅಂಜದ್ ಮೇಲೆ ಚಾಕುವಿನಿಂದ ಮಾರಣಾಂತಿಕವಾಗಿ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.

    ಘಟನೆಯಿಂದ ಹಲ್ಲೆಗೊಳಗಾಗಿದ್ದ ಅಂಜದ್‍ರನ್ನು ಆಸ್ಪತ್ರೆಗೆ ಸೇರಿಸಲು ಸ್ಥಳೀಯರು ಮುಂದೆ ಬಾರದೇ ಇದ್ದಾಗ ಅದೇ ಹಾದಿಯಲ್ಲಿ ಊಟ ಮುಗಿಸಿಕೊಂಡು ಬರುತ್ತಿದ್ದ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರು ತಮ್ಮ ಕಾರಿನಲ್ಲೇ ಗಾಯಾಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಪರೀಕ್ಷಿಸಿದ ಆಸ್ಪತ್ರೆ ವೈದ್ಯರು ಆತನಿಗೆ ತೀವ್ರವಾಗಿ ಗಾಯವಾಗಿರುವುದರಿಂದ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸುವಂತೆ ಸೂಚನೆ ನೀಡಿದರು. ಹೀಗಾಗಿ ಹಲ್ಲೆಗೊಳಗಾದ ಅಂಜದ್‍ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಜದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ನಗರದ ಸುಬ್ರಮಣ್ಯಪುರ ಪೊಲೀಸ್, ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

  • ಹೈಕಮಾಂಡ್‍ಗೆ ಕಪ್ಪ ವಿವಾದ – ಬಿಎಸ್‍ವೈ, ಅನಂತ್ ವಿರುದ್ಧ ಚಾರ್ಜ್‍ಶೀಟ್ ಸಾಧ್ಯತೆ

    ಹೈಕಮಾಂಡ್‍ಗೆ ಕಪ್ಪ ವಿವಾದ – ಬಿಎಸ್‍ವೈ, ಅನಂತ್ ವಿರುದ್ಧ ಚಾರ್ಜ್‍ಶೀಟ್ ಸಾಧ್ಯತೆ

    ಬೆಂಗಳೂರು: ಹೈಕಮಾಂಡ್‍ಗೆ ಕಪ್ಪ ಸಲ್ಲಿಸಿರುವ ಪ್ರಕರಣಕ್ಕೆ ಸ್ಫೋಟಕ ತಿರುವು ದೊರೆತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಚ್.ಎನ್.ಅನಂತಕುಮಾರ್ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಮತ್ತು ಆಡಿಯೋ ಸಂಭಾಷಣೆ ಅಸಲಿ ಎಂದು    ಧೃಡಪಟ್ಟಿದೆ.

    ಸಮಾರಂಭವೊಂದರ ವೇದಿಕೆಯಲ್ಲಿ ಸಚಿವ ಅನಂತ್ ಕುಮಾರ್ ಹಾಗೂ ಬಿಎಸ್‍ವೈ ಹೈಕಮಾಂಡ್‍ಗೆ ಕಪ್ಪ ಕೊಟ್ಟಿರುವ ಕುರಿತು ಪರಸ್ಪರ ಚರ್ಚೆ ನಡೆಸಿದ್ದ ದೃಶ್ಯಾವಳಿಗಳನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿತ್ತು. ಈ ಸಂಬಂಧ ಕೆಪಿಸಿಸಿ ಕಾನೂನು ವಿಭಾಗದ ಅಧ್ಯಕ್ಷ ಸಿ.ಎಂ. ಧನಂಜಯ್ ಫೆಬ್ರುವರಿ 15ರಂದು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದರು. ಕೋರ್ಟ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಸೂಚನೆ ನೀಡಿತ್ತು. ಇದರ ಅನ್ವಯ ಇಬ್ಬರೂ ಬಿಜೆಪಿ ನಾಯಕರ ವಿರುದ್ಧ ಸೈಬರ್ ಕ್ರೈಂ ವಿಭಾಗದ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು.

    ಆದರೆ ಬಿಜೆಪಿಯ ಇಬ್ಬರು ನಾಯಕರು ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳ ಮುಂದೆ ಹಾಜರಾಗಿ ಧ್ವನಿ ಮಾದರಿಗಳನ್ನು ಪರೀಕ್ಷೆಗೆ ನೀಡಲು ನಿರಾಕರಿಸಿದ್ದರು. ಇದರಿಂದ ಕಾಂಗ್ರೆಸ್ ಮತ್ತೆ ಧ್ವನಿ ಮಾದರಿ ನೀಡುವಂತೆ ನಿರ್ದೇಶಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿತ್ತು. ಆನಂತರ ಧ್ವನಿ ಮಾದರಿ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು.

    ಕೋರ್ಟ್ ಸೂಚನೆ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಆಕ್ಟೋಬರ್ 4ರಂದು ಆಡಿಯೋದಲ್ಲಿದ್ದ ಬಿಎಸ್ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರದ್ದೇನಾ ಅಂತ ಪರೀಕ್ಷಿಸಲು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‍ಎಸ್‍ಎಲ್)ಕ್ಕೆ ಸ್ಯಾಂಪಲ್ ಕಳಿಸಿಕೊಟ್ಟಿತ್ತು. ಸೈಬರ್ ಕ್ರೈಂ ಪೊಲೀಸರಿಗೆ ತಲುಪಿರುವ ಎಫ್‍ಎಸ್‍ಎಲ್‍ನ ವರದಿಯ ಪ್ರಕಾರ ಸಿಡಿಯಲ್ಲಿನ ಧ್ವನಿ ಬಿಎಸ್‍ವೈ ಮತ್ತು ಅನಂತ್ ಕುಮಾರ್ ಅವರದ್ದೇ ಎಂಬುದು ಸಾಬೀತಾಗಿದೆ. ಹೀಗಾಗಿ ಸೋಮವಾರ ಬಿಎಸ್‍ವೈ, ಅನಂತಕುಮಾರ್ ವಿರುದ್ದ ಐಪಿಸಿ ಸೆಕ್ಷನ್ 124(ಂ) ಅನ್ವಯ ಎಫ್‍ಐಆರ್ ದಾಖಲಾಗುವ ಸಾಧ್ಯತೆ ಇದೆ.

    ಎಸಿಬಿಯು ಎಫ್‍ಐಆರ್ ದಾಖಲಿಸಿದರೆ, ಸಚಿವ ಅನಂತಕುಮಾರ್ ಮತ್ತು ಯಡಿಯೂರಪ್ಪ ಸಂಕಷ್ಟಕ್ಕೆ ತುತ್ತಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ ಅವರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ ಸಮಯದಲ್ಲಿ ವಶಪಡಿಸಿಕೊಂಡಿದ್ದಾರೆ ಎನ್ನಲಾದ ಡೈರಿಯ ಆಯ್ದ ಭಾಗಗಳನ್ನು 2017ರ ಫೆಬ್ರುವರಿಯಲ್ಲಿ ಬಿಜೆಪಿ ನಾಯಕರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ಇದರಲ್ಲಿ ರಾಜ್ಯ ಕಾಂಗ್ರೆಸ್, ಹೈಕಮಾಂಡ್‍ನ ಪ್ರಮುಖ ನಾಯಕರಿಗೆ ಕಪ್ಪ ಕಾಣಿಕೆ ನೀಡಿರುವ ವಿವರಗಳಿವೆ ಎಂದೂ ಅವರು ಆರೋಪಿಸಿದ್ದರು.

     

    https://www.youtube.com/watch?v=t_IzZbNc9OM

  • ಜಮ್ಮು-ಕಾಶ್ಮೀರದಲ್ಲಿ ಬೆಂಗ್ಳೂರು ಯೋಧ ಆತ್ಮಹತ್ಯೆ – ತನಿಖೆಗೆ ಪೋಷಕರ ಆಗ್ರಹ

    ಜಮ್ಮು-ಕಾಶ್ಮೀರದಲ್ಲಿ ಬೆಂಗ್ಳೂರು ಯೋಧ ಆತ್ಮಹತ್ಯೆ – ತನಿಖೆಗೆ ಪೋಷಕರ ಆಗ್ರಹ

    ಶ್ರೀನಗರ: ಬೆಂಗಳೂರು ಮೂಲದ ಸೈನಿಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಮ್ಮು-ಕಾಶ್ಮೀರದ ಪಹಗಾಮ್ ಸೈನಿಕ ನೆಲೆಯಲ್ಲಿ ನಡೆದಿದೆ.

    ಆರ್. ನರೇಂದ್ರ ಆತ್ಮಹತ್ಯೆ ಮಾಡಿಕೊಂಡಿರುವ ಸೈನಿಕ ಎಂದು ತಿಳಿದುಬಂದಿದ್ದು, ಇವರು ಜಮ್ಮು-ಕಾಶ್ಮೀರದ ಪಹಗಾಮ್ ಪ್ರದೇಶದಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು.

    ಯೋಧ ನರೇಂದ್ರ ಅವರು ಭಾನುವಾರ ಮಧ್ಯಾಹ್ನದ ವೇಳೆ ಆರ್ಮಿ ಕ್ಯಾಂಪ್ ನಲ್ಲಿ ತಮ್ಮ ಸರ್ವಿಸ್ ರೈಫಲ್ ನಿಂದ ಶೂಟ್ ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಕುರಿತು ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬೆಂಗಳೂರಿನ ರಾಜಗೋಪಾಲನಗರದ ಮಾರುತಿ ಟ್ಯಾಕೀಸ್ ಬಳಿ ಮೃತ ಸೈನಿಕ ನರೇಂದ್ರ ಪೋಷಕರು ವಾಸಿಸುತ್ತಿದ್ದಾರೆ. ಯೋಧ ನರೇಂದ್ರ ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಸೇವೆಗೆ ಮರಳಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಿನ ತಮ್ಮ ಪೋಷಕರಿಗೆ ವಿಡಿಯೋ ಕಾಲ್ ಮಾಡಿ ಸಂತೋಷದಿಂದ ಮಾತನಾಡಿದ್ದರು. ತಮ್ಮ ಮಗ ಆತ್ಮಹತ್ಯೆಗೆ ಶರಣಾಗಿರುವ ಮಾಹಿತಿ ಪಡೆದ ಪೋಷಕರು ತೀವ್ರ ದುಃಖದಲ್ಲಿದ್ದು, ತಮ್ಮ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ್ದಾರೆ.

    ಮೃತ ಯೋಧನ ಪಾರ್ಥೀವ ಶರೀರ ಇಂದು ಬೆಳ್ಳಿಗೆ 11.30ರ ವೇಳೆಗೆ ಬೆಂಗಳೂರಿಗೆ ಆಗಮಿಸಲಿದೆ ಎಂದು ಮೂಲಗಳು ತಿಳಿಸಿವೆ.

  • 2018 ರ ವಿಧಾನಸಭೆ ಚುನಾವಣೆ ಸಿದ್ಧತೆ- ಪಕ್ಷಾಂತರಿಗಳ ಮೇಲೆ ಕಾಂಗ್ರೆಸ್ ಕಣ್ಣು

    2018 ರ ವಿಧಾನಸಭೆ ಚುನಾವಣೆ ಸಿದ್ಧತೆ- ಪಕ್ಷಾಂತರಿಗಳ ಮೇಲೆ ಕಾಂಗ್ರೆಸ್ ಕಣ್ಣು

    ಬೆಂಗಳೂರು: 2018ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‍ನಲ್ಲಿ ತಯಾರಿ ಜೋರಗಿ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ ಹೈಕಮಾಂಡ್ ಪಕ್ಷಾಂತರಿಗಳ ಮೇಲೆ ಕಣ್ಣಿಟ್ಟಿದೆ.

    ಈ ಕುರಿತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿರುವ ರಾಜ್ಯ ಉಸ್ತುವಾರಿ ಕೆ.ಸಿ.ವೇಣಗೋಪಾಲ್ ಪಕ್ಷಾಂತರಕ್ಕೆ ಮನಸ್ಸು ಮಾಡಿರುವವರನ್ನು ಗುರುತಿಸಲು ಸೂಚಿಸಿದ್ದಾರೆ.

    2018ರ ಕರ್ನಾಟಕ ವಿಧಾನ ಸಭಾ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಮಹತ್ವ ಚುನಾವಣೆಯಾಗಿದ್ದು, ರಾಷ್ಟ್ರ ಮಟ್ಟದಲ್ಲಿಯು ಪಕ್ಷದ ಬಲವರ್ಧನೆಗೆ ಇದು ಸಹಕಾರಿಯಾಗಲಿದೆ ಎಂದೇ ವಿಶ್ಲೇಷಿಸಲಾಗಿದೆ.

    ಪಕ್ಷದ ಗೆಲುವಿನ ಹಾದಿಯಲ್ಲಿ ಯಾರೊಂದಿಗೂ ರಾಜೀ ಮಾಡಿಕೊಳ್ಳುವುದು ಬೇಡ ಎಂದು ತಿಳಿಸಿರುವ ಉಸ್ತುವಾರಿ ವೇಣುಗೋಪಾಲ್, ಶೀಘ್ರವೇ ವರದಿಯನ್ನು ನೀಡಲು ತಿಳಿಸಿದ್ದಾರೆ. ಈ ವರದಿಯು ಕಾಂಗ್ರೆಸ್ ಹೈಕಮಾಂಡ್‍ಗೆ ಗೌಪ್ಯವಾಗಿ ಸಲ್ಲಿಕೆಯಾಗಲಿದೆ.

    ಪಕ್ಷದಿಂದ ಹೊರಹೋಗಲು ಮಾನಸಿಕವಾಗಿ ಸಿದ್ಧರಾಗಿರುವ ಶಾಸಕರು ಯಾರು? ಗೊಂದಲದಲ್ಲಿರುವ ಶಾಸಕರು ಯಾರು ಎಂಬುದರ ಬಗ್ಗೆಯು ವರದಿಯಲ್ಲಿ ಮಾಹಿತಿ ನೀಡಲು ತಿಳಿಸಿದ್ದಾರೆ.

    ಈ ವರದಿಯ ಅಧಾರವಾಗಿ ಕಾಂಗ್ರೆಸ್ ಹೈಕಮಾಂಡ್ ಪಕ್ಷದದಿಂದ ಹೊರ ಹೋಗುವವರ ಮನವೊಲಿಸಬೇಕಾ, ಇಲ್ಲಾ ಅಂತಹ ಕ್ಷೇತ್ರದಲ್ಲಿ ಪರ್ಯಾಯ ನಾಯಕತ್ವಕ್ಕೆ ಮಣೆ ಹಾಕಬೇಕಾ ಎಂಬುದರ ಬಗ್ಗೆ ರಾಜ್ಯ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಚುನಾವಣೆಗೂ ಒಂದು ತಿಂಗಳ ಮುಂಚೆಯೇ ಕಾಂಗ್ರೆಸ್ ಪಕ್ಷದ ಶಾಸಕರ ಅಂತಿಮ ಪಟ್ಟಿ ಸಿದ್ಧಗೊಳ್ಳಲಿದ್ದು, ಗುಪ್ತ ವರದಿಯಲ್ಲಿ ಯಾವ ಶಾಸಕರು ಔಟ್ ಯಾವ ಶಾಸಕರು ಇನ್ ಎಂದುವುದು ಶೀಘ್ರವಾಗಿಯೇ ಹೈ ಕಮಾಂಡ್ ಕೈ ಸೇರಲಿದೆ.