Tag: Bangalore

  • ಬೆಂಗಳೂರು ಮಹಾ ಮಳೆಗೆ ಆಟೋ ಸಮೇತ ಕೊಚ್ಚಿ ಹೋದ ಯುವಕ

    ಬೆಂಗಳೂರು ಮಹಾ ಮಳೆಗೆ ಆಟೋ ಸಮೇತ ಕೊಚ್ಚಿ ಹೋದ ಯುವಕ

    ಬೆಂಗಳೂರು: ನಗರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಪ್ರವಾಹ ಪರಿಸ್ಥಿತಿಯನ್ನು ಉಂಟು ಮಾಡಿದ್ದು, ಮಂಗಳವಾರ ರಾತ್ರಿ ಯುವಕನೊಬ್ಬ ಆಟೋ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿರುವ ದಾರುಣ ಘಟನೆ ಕನಕಪುರದಲ್ಲಿ ನಡೆದಿದೆ.

    ಮೃತ ಯುವಕ ನಗರದ ಬನಶಂಕರಿ ನಿವಾಸಿ ಸಂತೋಷ್(26) ಎಂದು ಗುರುತಿಸಲಾಗಿದ್ದು, ಸ್ನೇಹಿತರ ಜೊತೆ ಪಾರ್ಟಿಗೆ ಎಂದು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

    ಸಂತೋಷ್ ತನ್ನ ಸ್ನೇಹಿತರಾದ ವಿಜಯ್ ಕುಮಾರ್ ಹಾಗೂ ಇಬ್ಬರು ಅಪ್ರಾಪ್ತ ಹುಡುಗಿಯರೊಂದಿಗೆ ಕಗ್ಗಲಿಪುರ ಬೆಟ್ಟಕ್ಕೆ ಹೋಗಿದ್ದರು. ಬೆಟ್ಟದ ಪಕ್ಕದ ಹಳ್ಳದಲ್ಲಿ ಪಾರ್ಟಿ ಏರ್ಪಡಿಸಿದ್ದರು ಎಂದು ತಿಳಿದು ಬಂದಿದೆ. ನಂತರ ಕನಕಪುರ ರಸ್ತೆ ಗಣಕನದೊಡ್ಡಿ ಬಳಿ ಇವರಿಬ್ಬರು ಆಟೋವನ್ನು ತಿರುಗಿಸಿ ಕೊಂಡು ಬರುವುದಾಗಿ ಹೇಳಿ ಇಬ್ಬರು ಹುಡುಗಿಯರನ್ನು ಕೆಳಗಿಳಿಸಿದ್ದಾರೆ.

    ಮಳೆಯ ಪ್ರಮಾಣ ಅಧಿಕವಾದ್ದರಿಂದ ಆಟೋ ನೀರಿನಲ್ಲಿ ಆಫ್ ಆಗಿದ್ದು, ವಿಜಯ್ ಆಟೋದಿಂದ ಕೆಳಗಿಳಿದು ತಳ್ಳಲು ಮುಂದಾಗಿದ್ದಾನೆ ಈ ಸಂದರ್ಭದಲ್ಲಿ ಆಟೋ ಸಮೇತ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಆದರೆ ವಿಜಯ್ ಕುಮಾರ್ ಕಾಲುವೆಯಲ್ಲಿ ಸಿಕ್ಕ ಮರವನ್ನು ಹಿಡಿದುಕೊಂಡು ಬೆಳಗಿನ ತನಕ ಕಾಲ ಕಳೆದಿದ್ದು, ಸಂತೋಷ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಬುಧವಾರ ಬೆಳಗ್ಗೆ ಇಬ್ಬರು ಹುಡುಗಿಯರು ಊರಿನವರಿಗೆ ಮಾಹಿತಿ ನೀಡಿದ್ದು, ಸಂತೋಷ್‍ಗಾಗಿ ಹುಡುಕಾಟ ನಡೆಸಿದ್ದಾರೆ. ಸಂತೋಷ್‍ನ ಮೃತ ದೇಹ ಘಟನ ಸ್ಥಳದಿಂದ 5 ಕಿ.ಮೀ ದೂರದಲ್ಲಿ ದೊರೆತಿದೆ.

    ಸಂತೋಷ್ ಮನೆಯಿಂದ ಹೊರಡುವಾಗ ಯಾರಿಗೂ ಹೇಳದೆ ಪ್ರವಾಸಕ್ಕೆ ಹೋಗಿದ್ದು, ಗುರುವಾರ ಮೃತ ದೇಹ ದೊರಕಿದೆ. ಆಟೋ ಇನ್ನೂ ಸಿಕ್ಕಿಲ್ಲ ಎಂದು ಮೃತ ಸಂತೋಷ್ ಸಹೋದರ ಪ್ರಶಾಂತ್ ತಿಳಿಸಿದ್ದಾರೆ.

  • ರಾಜ್ಯ ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ: ಶೋಭಾ ಕರಂದ್ಲಾಜೆ

    ರಾಜ್ಯ ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ: ಶೋಭಾ ಕರಂದ್ಲಾಜೆ

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಎದ್ದಿಲ್ಲ. ಯಡಿಯೂರಪ್ಪ ನಾಯಕತ್ವದಲ್ಲಿ ಎಲ್ಲರೂ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಆರ್.ಅಶೋಕ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬಿಜೆಪಿ ವಿರೋಧಿ ಗುಂಪುಗಳು ಈ ಸುದ್ದಿಯನ್ನು ಹರಡಿಸುತ್ತಿದೆ ಎಂದು ಎಂದು ಟ್ವೀಟ್ ಮಾಡಿದ್ದಾರೆ.

    ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಅತ್ಯಂತ ಭ್ರಷ್ಟ ಪಕ್ಷವಾಗಿದ್ದು, ಅದರ ವಿರುದ್ಧ ಹೋರಾಡುತ್ತೇವೆ. ಕೆಲ ಮಂದಿಯಿಂದ ಗೊಂದಲ ಆಗುತ್ತಿದೆ. ತಾನು ಇರುವ ಸಂಪ್ರದಾಯಿಕ ಪ್ರಚಾರ ತಂಡಕ್ಕೆ ಮಾಜಿ ಸಚಿವರಾದ ರವೀಂದ್ರನಾಥ್, ಸೊಗಡು ಶಿವಣ್ಣ, ನಂದೀಶ್ ಸೇರ್ಪಡೆ ಮಾಡಬೇಕೆಂದು ಬಿಎಸ್‍ವೈ ಅವರನ್ನು ನಾನೇ ವಿನಂತಿಸಿಕೊಂಡಿದ್ದೆ ಎಂದು ಅವರು ಹೇಳಿದ್ದಾರೆ.

    ಏನಿದು ಅಸಮಾಧಾನ:
    ಪರಿವರ್ತನಾ ರ‌್ಯಾಲಿಯ ಪೂರ್ಣ ಪ್ರಮಾಣದ ಸಂಚಾಲಕಿಯಿಂದ ಕೊಕ್ ನೀಡಿದ ಹಿನ್ನಲೆ ಶೋಭಾ ಕರಂದ್ಲಾಜೆ ಬೇಸರಗೊಂಡಿದ್ದಾರೆ. ಬೆಂಗಳೂರಿನ ಜವಾಬ್ದಾರಿ ಅಶೋಕ್‍ಗೆ ವಹಿಸಿದ್ದಕ್ಕೆ ಕರಂದ್ಲಾಜೆ ಈ ವಿಚಾರದ ಬಗ್ಗೆ ಹಿರಿಯ ನಾಯಕರ ಬಳಿ ಹೇಳಿದ್ದಾರೆ. ರವೀಂದ್ರ ನಾಥ್, ಸೊಗಡು ಶಿವಣ್ಣ, ನಂದೀಶ್ ಅವರು ಪಕ್ಷದ ಶೋಭಾ ಕರಂದ್ಲಾಜೆ ಅವರಿಗೆ ಪ್ರಾಶಸ್ತ್ಯ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಆಕ್ಷೇಪ ಎತ್ತಿದ್ದರು. ಈಗ ಅವರನ್ನು ಸಂಪ್ರದಾಯಿಕ ತಂಡಕ್ಕೆ ಸೇರಿಸಿದ್ದಕ್ಕೆ ಹಿರಿಯ ನಾಯಕರಲ್ಲಿ ತಮ್ಮ ಅಸಮಾಧಾನವನ್ನು ಹೇಳಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಿಗೆ ಮೂಲಗಳಿಂದ ಸಿಕ್ಕಿತ್ತು. ಈ ಸುದ್ದಿಗಳಿಗೆ ಶೋಭಾ ಕರಂದ್ಲಾಜೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿ ಅವುಗಳೆಲ್ಲ ಸುಳ್ಳು ಎಂದು ಹೇಳಿದ್ದಾರೆ.

     

    https://twitter.com/ShobhaBJP/status/918369708092506112

    https://twitter.com/ShobhaBJP/status/918345654467883008

    https://twitter.com/ShobhaBJP/status/918342755411042305

    https://twitter.com/ShobhaBJP/status/918341008831627265

  • ಅಭಿಮಾನಿಗಳಿಗಾಗಿ `ತಾರಕ್’ ಸ್ಪೆಷಲ್ ಶೋ

    ಅಭಿಮಾನಿಗಳಿಗಾಗಿ `ತಾರಕ್’ ಸ್ಪೆಷಲ್ ಶೋ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ತಾರಕ್’ ಸಿನಿಮಾ ಚಂದನವನದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ 25 ದಿನಗಳನ್ನು ಪೂರೈಸಿ ಚಿತ್ರಮಂದಿರಗಳಲ್ಲಿ ಮುನ್ನುಗುತ್ತಿದೆ. `ಡಿ ಕಂಪನಿ’ ಫ್ಯಾನ್ಸ್ ಗಾಗಿಯೇ ಸ್ಪೆಷಲ್ ಶೋ ಆಯೋಜನೆ ಮಾಡಿದೆ.

    ತಾರಕ್ ಸಿನಿಮಾ ತಾತಾ ಮತ್ತು ಮೊಮ್ಮಗನ ಅವಿನಾಭಾವ ಸಂಬಂಧದ ಫ್ಯಾಮಿಲಿ ಎಂಟರ್ ಟೈನ್‍ಮೆಂಟ್ ಕಥೆಯನ್ನು ಹೊಂದಿದೆ. ಸಿನಿಮಾ ಫ್ಯಾಮಿಲಿ ಆಡಿಯನ್ಸ್ ಗಳನ್ನು ಸೆಳೆಯುವುದರ ಜೊತೆ ಮಾಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

    ತಾರಕ್ ಸಿನಿಮಾ ಮೂರನೇ ವಾರ ಯಶಸ್ವಿಯಾಗಿರುವುದಕ್ಕೆ `ಡಿ-ಕಂಪನಿ’ ವತಿಯಿಂದ ಅಭಿಮಾನಿಗಳಿಗೊಸ್ಕರ ಫ್ಯಾನ್ಸ್ ಶೋ ಏರ್ಪಡಿಸಿದ್ದಾರೆ. ಅಕ್ಟೋಬರ್ 15 ರಂದು ನಗರದ ಕೆ.ಜಿ. ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಶೋ ಆಯೋಜಿಸಲಾಗಿದೆ.

    ತಾರಕ್ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶಿಸಿದ್ದು, ತಾತನಾಗಿ ನಟ ದೇವರಾಜ್ ನಟಿಸಿದ್ದಾರೆ. ಶೃತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾತ್ಸವ್ ಅಭಿನಯಿಸಿದ್ದಾರೆ.

  • ಮುಂದುವರಿದ ಮಳೆ ಅಬ್ಬರ: ಬೆಂಗ್ಳೂರು ರಸ್ತೆಗಳೆಲ್ಲಾ ಜಲಾವೃತ, ಜಿಲ್ಲೆಗಳಲ್ಲಿ ಎಲ್ಲಾ ಕಡೆ ನೀರೋ ನೀರು

    ಮುಂದುವರಿದ ಮಳೆ ಅಬ್ಬರ: ಬೆಂಗ್ಳೂರು ರಸ್ತೆಗಳೆಲ್ಲಾ ಜಲಾವೃತ, ಜಿಲ್ಲೆಗಳಲ್ಲಿ ಎಲ್ಲಾ ಕಡೆ ನೀರೋ ನೀರು

    ಬೆಂಗಳೂರು: ರಾಜ್ಯಾದಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಬಾಗಲಕೋಟೆ, ಬೀದರ್, ರಾಯಚೂರು, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ. ವರುಣನ ಅಬ್ಬರದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಸತತ ಒಂದು ಗಂಟೆ ಸುರಿದ ಮಳೆಗೆ ರಸ್ತೆಗಳಿಗೆ ನೀರು ನುಗ್ಗಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು ವಾಹನ ಸವಾರರು ಪರದಾಡಿದ್ದಾರೆ. ಜಿಲ್ಲೆಯ ಹಲವು ಕೆರೆ ಕಟ್ಟೆ ಹಳ್ಳಗಳು ಭರ್ತಿಯಾಗಿವೆ. ಅಲ್ಲದೇ ಹಲವು ಗ್ರಾಮಗಳಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ರಸ್ತೆಗಳು ಹಳ್ಳಗಳಂತಾಗಿವೆ. ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಚೆಕ್ ಡ್ಯಾಂ ತುಂಬಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಬೇಡರೆಡ್ಡಿ, ಭರಮಸಾಗರ ಸೇರಿದಂತೆ ಐಮಂಗಲ, ವದ್ದಿಕೆರೆ ಗ್ರಾಮಗಳಲ್ಲೂ ಭಾರೀ ಮಳೆಯಾಗಿ ಆ ಭಾಗದ ಎಲ್ಲಾ ಕೆರೆಗಳು ಭರ್ತಿಯಾಗಿವೆ. ಅಲ್ಲದೇ ಘಟಪರ್ತಿ ಹೊನ್ನೂರು ಭರಮಸಾಗರದ ಅಡಿಕೆ-ತೆಂಗಿನ ತೋಟಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಹೊನ್ನೂರು ಘಟಪರ್ತಿ ಗ್ರಾಮಗಳ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಅಗಿದ್ದರೂ ಬಹಳ ವರ್ಷಗಳ ನಂತರ ಭರ್ಜರಿಯಾಗಿ ಮಳೆ ಸುರಿಯುತ್ತಿರೋದರಿಂದ ಜನರು ಹರ್ಷಿತರಾಗಿದ್ದಾರೆ.

    ಬಾಗಲಕೋಟೆಯ ಮೈಗೂರಿನಲ್ಲಿ ಪೀಡಶೆಟ್ಟಿ ಎಂಬವರ ಮನೆ ಗೋಡೆ ಕುಸಿದು ಮನೆಯಲಿದ್ದ ಮೀನಾಕ್ಷಿ ಎಂಬವರಿಗೆ ಗಾಯವಾಗಿದೆ. ಅಬ್ಬರದ ಮಳೆಗೆ ನಗರದ ಜಮಖಂಡಿ ಬಸ್ ನಿಲ್ದಾಣ, ಹನುಮಾನ್ ಚೌಕ ಜಲಾವೃತಗೊಂಡಿವೆ.

    ಬೆಳಗಾವಿಯ ಗೋಕಾಕ್‍ನಲ್ಲಿ ಮಳೆರಾಯ ಅಬ್ಬರಿಸಿದ್ದು, ಸತತ 2 ಗಂಟೆಗಳ ಕಾಲ ಸುರಿದ ಮಳೆಗೆ ಕೆರೆ-ಕಟ್ಟೆ ಒಡೆದು 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರು ಮನೆಗೆ ನುಗ್ಗಿದ್ದರಿಂದ ಸಂಗ್ರಹಿಸಿಟ್ಟಿದ್ದ ದವಸ-ಧಾನ್ಯ ಸಂಪೂರ್ಣ ಹಾಳಾಗಿದೆ.

    ಬೆಣ್ಣೆ ನಗರಿ ದಾವಣಗೆರೆಯ ಹರಿಹರ, ಹೊನ್ನಾಳಿ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆಯಾಗಿದ್ದು ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.

    ತುಮಕೂರಿನಲ್ಲಿ ಕೊರಟಗೆರೆ, ಮಧುಗಿರಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಕೊರಟಗೆರೆಯ ಕಾಳಿದಾಸ ನಗರ ಸಂಪೂರ್ಣ ಜಲಾವೃತವಾಗಿದ್ದು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ನುಗ್ಗಿರುವ ನೀರು ಹೊರಹಾಕಲು ಜನ ಹರಸಾಹಸ ಪಡುತ್ತಿದ್ದಾರೆ. ಅಲ್ಲದೇ ಜಿಲ್ಲೆಯ ವಿವಿಧೆಡೆ ವಿದ್ಯುತ್ ಸ್ಥಗಿತವಾಗಿದ್ದು, ಜನ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.

    ಬಳ್ಳಾರಿಯಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ ನಗರದ ಎಂಪಿಎಂಸಿಯ ಲಾರಿ ಟರ್ಮಿನಲ್ ಬಳಿಯ ಮನೆಯೊಂದು ಕುಸಿದು ಇಬ್ಬರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಮಾರಕ್ಕ ಮತ್ತು ಆಕೆಯ ಮಗು ನಾಗರಾಜ ಎಂದು ಗುರುತಿಸಲಾಗಿದೆ. ಇನ್ನೂ ಗುಗ್ಗರಹಟ್ಟಿ ಬಳಿಯ ತಗ್ಗು ಪ್ರದೇಶಗಳ ಮನೆಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿದೆ. ಹೀಗಾಗಿ ಜನರು ಮನೆಗೆ ನುಗ್ಗಿರುವ ನೀರನ್ನು ಹೊರಹಾಕುವಲ್ಲಿ ನಿರತರಾಗಿದ್ದಾರೆ. ಪಾಲಿಕೆ ಆಯುಕ್ತರು ಮುಂಜಾನೆಯಿಂದಲೇ ನಗರ ಸಂಚಾರ ಆರಂಭಿಸಿದ್ದು, ತಗ್ಗು ಪ್ರದೇಶದ ಜನರಿಗೆ ಸಹಾಯ ಮಾಡುವಲ್ಲಿ ನಿರಾತರಾಗಿದ್ದಾರೆ.

    ಇನ್ನು ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

     

     

  • ಪೆಟ್ರೋಲ್, ಡೀಸೆಲ್ ವ್ಯಾಟ್ ಇಳಿಸಲ್ಲ: ಸಿಎಂ ಸಿದ್ದರಾಮಯ್ಯ

    ಪೆಟ್ರೋಲ್, ಡೀಸೆಲ್ ವ್ಯಾಟ್ ಇಳಿಸಲ್ಲ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಗುಜರಾತ್, ಮಹಾರಾಷ್ಟ್ರ ಸರ್ಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಇಳಿಸಿ ದರವನ್ನು ಕಡಿಮೆ ಮಾಡಿವೆ. ಆದರೆ ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೆಲೆ ಇಳಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದೆ.

    ನಾವು ತೈಲ ಬೆಲೆ ಕಡಿಮೆ ಮಾಡುವುದಕ್ಕೆ ಆಗುವುದಿಲ್ಲ. ಕೇಂದ್ರ ಸರ್ಕಾರವೇ ಮಾಡಬೇಕು ಎಂದು ಹೇಳಿ ಮತ್ತೆ ಜಾರಿಕೊಂಡಿದ್ದಾರೆ. ಬೇರೆ ರಾಜ್ಯಗಳು ಒಂದೊಂದು ರೂ. ಕಡಿಮೆ ಮಾಡಿದ್ದಾರೆ. ಬೇರೆ ರಾಜ್ಯಗಳಿಗೆ ಹೊಲಿಸಿದರೆ ನಮ್ಮಲ್ಲಿ ತೈಲ ಬೆಲೆ ಕಡಿಮೆ ಇದೆ. ಹೀಗಾಗಿ ನಾವು ವ್ಯಾಟ್ ಇಳಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

    ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಬಳಿಕ ಮಂಗಳವಾರ ಗುಜರಾತ್ ಸರ್ಕಾರ ಶೇ.4 ವ್ಯಾಟ್ ಕಡಿತಗೊಳಿಸಿತ್ತು. ವ್ಯಾಟ್ ಕಡಿತಗೊಳಿಸಿದ ಪರಿಣಾಮ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 2.93 ರೂ., ಡೀಸೆಲ್ 2.72 ರೂ. ಇಳಿಕೆಯಾಗಿದೆ.

    ಮಹಾರಾಷ್ಟ್ರ ಸಚಿವ ಸಂಪುಟ ಮಂಗಳವಾರ ಪೆಟ್ರೋಲ್ ದರವನ್ನು ಲೀಟರ್‍ಗೆ 2 ರೂ. ಮತ್ತು ಡೀಸೆಲ್ ದರವನ್ನು ಲೀಟರ್‍ಗೆ 1 ರೂ. ಇಳಿಸಲು ನಿರ್ಧರಿಸಿ ನಿರ್ಣಯ ಕೈಗೊಂಡಿತ್ತು.

    ಕೇಂದ್ರ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ಕೆಲ ದಿನಗಳ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ರಾಜ್ಯ ಸರ್ಕಾರಗಳು ವ್ಯಾಟ್ ಇಳಿಸಬೇಕೆಂದು ಹೇಳಿದ್ದರು.

  • ನಿನ್ನನ್ನು ಮುಂದೆ ನೋಡ್ಕೋತ್ತೀನಿ: ಶಾಸಕ ಶಿವಮೂರ್ತಿ ನಾಯ್ಕ್ ಬೆದರಿಕೆ ಬಗ್ಗೆ ಕಟಾರಿಯಾ ತಿಳಿಸಿದ್ದು ಹೀಗೆ

    ನಿನ್ನನ್ನು ಮುಂದೆ ನೋಡ್ಕೋತ್ತೀನಿ: ಶಾಸಕ ಶಿವಮೂರ್ತಿ ನಾಯ್ಕ್ ಬೆದರಿಕೆ ಬಗ್ಗೆ ಕಟಾರಿಯಾ ತಿಳಿಸಿದ್ದು ಹೀಗೆ

    ಬೆಂಗಳೂರು: ಮಾಯಕೊಂಡ ಕ್ಷೇತ್ರದ ಶಾಸಕ ಶಿವಮೂರ್ತಿ ನಾಯ್ಕ್ ಅವರು ಮುಂದೆ ನಿನ್ನನ್ನು ನೋಡಿಕೊಳ್ಳುತ್ತೀನಿ ಎಂದು ನನಗೆ ಬೆದರಿಕೆ ಹಾಕಿದ್ದರು ಎಂದು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹೇಳಿದ್ದಾರೆ.

    ಶಾಸಕ ಶಿವಮೂರ್ತಿ ನಾಯ್ಕ್ ಅವರು ಕಚೇರಿಗೆ ಬಂದು ಹೇಗೆ ಬೆದರಿಕೆ ಹಾಕಿದ್ದರು ಎನ್ನುವುದನ್ನು ರಾಜೇಂದ್ರ ಕುಮಾರ್ ಕಟಾರಿಯಾ ಪಬ್ಲಿಕ್ ಟಿವಿಗೆ ವಿವರಿಸಿದ್ದಾರೆ.

    ಸೋಮವಾರ ಶಿವಮೂರ್ತಿನಾಯ್ಕ್ ಅವರು ತಮ್ಮ ಮಗನ ಕೇಸ್ ಬಗ್ಗೆ ಕಚೇರಿಗೆ ಬಂದು ನಿಮ್ಮಲ್ಲಿ ಅರ್ಜಿ ಪೆಂಡಿಂಗ್ ಇದೆ, ಅದನ್ನು ಬೇಗನೆ ಅನುಮೋದನೆ ನೀಡಬೇಕೆಂದು ಕೇಳಿದರು.

    ನಾನು ಅವರಿಗೆ ಇದನ್ನು ಕಾನೂನಾತ್ಮಕವಾಗಿ ಅನುಮೋದನೆ ಮಾಡಲು ಬರುವುದಿಲ್ಲ. ನಿಮ್ಮ ಅರ್ಜಿ ನಿರ್ದೇಶಕರ ಹತ್ತಿರ ಪೆಂಡಿಂಗ್ ಇದೆ, ಅವರು ಅವರ ಕಾನೂನು ಚೌಕಟ್ಟಿನಲ್ಲಿ ಏನು ಮಾಡಲು ಬರುತ್ತೋ ಅದನ್ನು ಮಾಡುತ್ತಾರೆ ಎನ್ನುವುದನ್ನು ವಿವರಿಸಿದೆ.

    ನಾನು ತಿಳಿಸಿದರೂ ಅವರು ಇವತ್ತೇ ನನಗೆ ಬೇಕು, ಇವತ್ತೆ ಆರ್ಡರ್ ಕೊಡಬೇಕು ಎಂದು ವಾದಿಸುತ್ತಿದ್ದರು. ಜೋರಾಗಿ ಬಾಯಿ ಮಾಡುತ್ತಿದ್ದರು. ತುಂಬಾ ಅವಾಚ್ಯ ಶಬ್ಧಗಳನ್ನು ಬಳಸುತ್ತಿದ್ದರು. ನಾನು ನಿರಾಕರಿಸಿದ್ದಕ್ಕೆ ನಿನ್ನ ಮುಂದೆ ನೋಡ್ಕೋತ್ತೀನಿ ಅಂತ ಎಲ್ಲಾ ಹೆದರಿಸಿದರು. ತುಂಬಾ ಜಾಸ್ತಿನೆ ಜಗಳ ಆಯ್ತು ಅದರ ಬಗ್ಗೆ ನಾನು ವಿವರವಾಗಿ, ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿ ಅವರಿಗೆ ದೂರು ಕೊಟ್ಟಿದ್ದೇನೆ. ಇವತ್ತು ನಾನು ಸಿಎಂ ಅವರನ್ನು ಭೇಟಿ ಮಾಡಿ ಅವರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.

    ಎಸ್‍ಸಿ, ಎಸ್‍ಟಿ ಅನುಕೂಲಗಳಿಗೆ ಅಧಿಕಾರಿಗಳು ಅಡ್ಡಿ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ, ಆ ಪಂಗಡಗಳಿಗೆ ಏನು ಸಿಗಬೇಕೋ ಅದು ಸಿಗುತ್ತದೆ. ಅವುಗಳಿಗಾಗಿ ಬೇರೆ ಬೇರೆ ಕಛೇರಿಗಳಿವೆ. ಅನುದಾನ ಏನು ನೀಡಬೇಕೋ ಅದನ್ನು ಸರಿಯಾಗಿ ನೀಡುತ್ತಿದ್ದೇವೆ ಎಂದು ತಿಳಿಸಿದರು.

    ಸಿಎಂ ಸಿದ್ದರಾಮಯ್ಯನವರು ನನಗೆ ಭರವಸೆಯನ್ನು ನೀಡಿದ್ದಾರೆ. ಇಂತಹ ನಾನ್ ಸೆನ್ಸ್ ಗಳಿಗೆ ನೀವು ತಲೆ ಕೆಡಿಸಿಕೊಳ್ಳಬೇಡಿ ನಾನು ನೋಡಿಕೊಳ್ಳುತ್ತೇನೆ. ನಿಮ್ಮ ಡ್ಯೂಟಿಯನ್ನು ನೀವು ಮಾಡಿ ಎಂದು ಹೇಳಿದ್ದಾರೆ. ಸಿಎಂ ಅವರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನನಗೆ ಇದೆ ಎಂದು ತಿಳಿಸಿದರು.

    ತಮ್ಮ ಪುತ್ರ ಸೂರಜ್ ಎಸ್. ನಾಯ್ಕ್ ಅವರಿಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸಿದ್ದೇಶ್ವರನದುರ್ಗದಲ್ಲಿ ಗ್ರಾನೈಟ್ ಗಣಿಗಾರಿಕೆ ನಡೆಸಲು ಪರವಾನಗಿ ನೀಡಿಲ್ಲ ಎನ್ನುವ ಕಾರಣಕ್ಕೆ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಖುಂಟಿಆ ಅವರಿಗೆ ರಾಜೇಂದ್ರ ಕುಮಾರ್ ಕಟಾರಿಯಾ ದೂರು ನೀಡಿದ್ದರು.

    ಅಕ್ಟೋಬರ್ 9ರಂದು ಕಚೇರಿಗೆ ನುಗ್ಗಿದ ಶಿವಮೂರ್ತಿ ನಾಯ್ಕ್ ತಕ್ಷಣವೇ ಕಡತ ತರಿಸಿ ಗಣಿಗಾರಿಕೆಗೆ ಅನುಮೋದನೆ ನೀಡಬೇಕೆಂದು ಒತ್ತಡ ಹೇರಿದರು. ನಾನೇ ಸರ್ಕಾರ. ನನ್ನ ಆದೇಶವನ್ನು ಪಾಲಿಸಲೇಬೇಕು ಎಂದು ಕೂಗಾಡಿದರು ಎಂದು ಕಟಾರಿಯಾ ದೂರಿನಲ್ಲಿ ತಿಳಿಸಿದ್ದಾರೆ.

     

    ಇದನ್ನೂ ಓದಿ: ಕಟಾರಿಯಾಗೆ ಬೆದರಿಕೆ ಹಾಕಿದ್ದ ಶಾಸಕ ಶಿವಮೂರ್ತಿಗೆ ಸಿಎಂ ಕ್ಲಾಸ್ ತೆಗೊಂಡಿದ್ದು ಹೀಗೆ

  • ಕಟಾರಿಯಾಗೆ ಬೆದರಿಕೆ ಹಾಕಿದ್ದ ಶಾಸಕ ಶಿವಮೂರ್ತಿಗೆ ಸಿಎಂ ಕ್ಲಾಸ್ ತೆಗೊಂಡಿದ್ದು ಹೀಗೆ

    ಕಟಾರಿಯಾಗೆ ಬೆದರಿಕೆ ಹಾಕಿದ್ದ ಶಾಸಕ ಶಿವಮೂರ್ತಿಗೆ ಸಿಎಂ ಕ್ಲಾಸ್ ತೆಗೊಂಡಿದ್ದು ಹೀಗೆ

    ಬೆಂಗಳೂರು: ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಕೊಂಡ ಶಾಸಕ ಶಿವಮೂರ್ತಿನಾಯ್ಕ್ ಗೆ ಸಿಎಂ ಸಿದ್ದರಾಮಯ್ಯ ಚೆನ್ನಾಗಿ ಕ್ಲಾಸ್ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಮಂಗಳವಾರ ಸಂಜೆ ಶಿವಮೂರ್ತಿ ನಾಯ್ಕ್ ಅವರು ಗಲಾಟೆ ಬಗ್ಗೆ ಸಿಎಂ ಗೆ ಮಾಹಿತಿ ನೀಡಲು ಸಿಎಂ ನಿವಾಸಕ್ಕೆ ತೆರಳಿದ್ದರು. ಎಸ್‍ಸಿ ಎಸ್‍ಟಿ ಸೌಲಭ್ಯಗಳಿಗೆ ಅಧಿಕಾರಿ ಕಟಾರಿಯಾ ಅಡ್ಡಿ ಮಾಡುತ್ತಿದ್ದಾರೆಂದು ಶಿವಮೂರ್ತಿ ಆರೋಪಿಸಿದಾಗ, ಅಧಿಕಾರಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಅನ್ನೋದು ಗೊತ್ತಿಲ್ವೇನಯ್ಯ ನಿನಗೆ ಎಂದು ಪ್ರಶ್ನಿಸಿ ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದೆ.

    ಇಂತಹ ನಾನ್ ಸೆನ್ಸ್ ಕೆಲಸ ಎಲ್ಲಾ ಮಾಡಬೇಡ, ಐಎಎಸ್ ಅಧಿಕಾರಿಗಳಿಗೆ ಬೈಯೋದು ಅಂದ್ರೆ ಏನು ಅನ್ಕೋಂಡಿದಿಯಾ, ಹೆಚ್ಚು ಕಡಿಮೆ ಆದರೆ ಜೈಲಿಗೆ ಕಳುಹಿಸುತ್ತಾರೆ ಹುಷಾರ್. ಲಾಸ್ಟ್ ಎಲೆಕ್ಷನ್‍ನಲ್ಲಿ ಬಿ-ಫಾರಂ ಕೊಡಿಸಿದ್ದು ನಾನೇ ಅಲ್ವ ನಿನಗೆ, ಎಲೆಕ್ಷನ್ ಸಮಯದಲ್ಲಿ ಹೀಗಿಲ್ಲ ಮಾಡಿಕೊಂಡರೆ ಬಿ-ಫಾರಂ ಸಿಗಲ್ಲ ತಿಳ್ಕೋ ಎಂದು ಎಚ್ಚರಿಸಿದ್ದಾರೆನ್ನಲಾಗಿದೆ.

    ಅಧಿಕಾರಿ ವಿರುದ್ಧ ದೂರು ನೀಡಲು ಹೋದಂತಹ ಶಿವಮೂರ್ತಿ ನಾಯ್ಕ್ ಸಿಎಂ ಆಕ್ರೋಶಗೊಂಡಿದ್ದನ್ನು ನೋಡಿ ಹಾಗಲ್ಲ ಸರ್, ಹೀಗೆ ಎಂದು ಹೇಳಿ ಮರು ಮಾತನಾಡದೆ ಜಾಗ ಖಾಲಿ ಮಾಡಿ ರಾತ್ರಿಯೇ ತಮ್ಮ ಸ್ವಕ್ಷೇತ್ರ ಮಾಯಕೊಂಡಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

    ತಮ್ಮ ಪುತ್ರ ಸೂರಜ್ ಎಸ್. ನಾಯ್ಕ್ ಅವರಿಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸಿದ್ದೇಶ್ವರನದುರ್ಗದಲ್ಲಿ ಗ್ರಾನೈಟ್ ಗಣಿಗಾರಿಕೆ ನಡೆಸಲು ಪರವಾನಗಿ ನೀಡಿಲ್ಲ ಎನ್ನುವ ಕಾರಣಕ್ಕೆ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಖುಂಟಿಆ ಅವರಿಗೆ ರಾಜೇಂದ್ರ ಕುಮಾರ್ ಕಟಾರಿಯಾ ದೂರು ಸಲ್ಲಿಸಿದ್ದರು.

    ಅಕ್ಟೋಬರ್ 9ರಂದು ಕಚೇರಿಗೆ ನುಗ್ಗಿದ ಶಿವಮೂರ್ತಿ ನಾಯ್ಕ್ ತಕ್ಷಣವೇ ಕಡತ ತರಿಸಿ ಗಣಿಗಾರಿಕೆಗೆ ಅನುಮೋದನೆ ನೀಡಬೇಕೆಂದು ಒತ್ತಡ ಹೇರಿದರು. ನಾನೇ ಸರ್ಕಾರ. ನನ್ನ ಆದೇಶವನ್ನು ಪಾಲಿಸಲೇಬೇಕು ಎಂದು ಕೂಗಾಡಿದರು ಎಂದು ಕಟಾರಿಯಾ ದೂರಿನಲ್ಲಿ ತಿಳಿಸಿದ್ದಾರೆ.

     

  • ಕರ್ನಾಟಕದಲ್ಲಿ ಪಟಾಕಿ ನಿಷೇಧಿಸುವಂತೆ ಪಿಐಎಲ್ ಹಾಕಲಿದೆ ಹಿಂದೂ ಜನಜಾಗೃತಿ ಸಮಿತಿ

    ಕರ್ನಾಟಕದಲ್ಲಿ ಪಟಾಕಿ ನಿಷೇಧಿಸುವಂತೆ ಪಿಐಎಲ್ ಹಾಕಲಿದೆ ಹಿಂದೂ ಜನಜಾಗೃತಿ ಸಮಿತಿ

    ಬೆಂಗಳೂರು: ಕರ್ನಾಟಕದಲ್ಲಿ ಪಟಾಕಿಯನ್ನು ನಿಷೇಧಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಹಾಕುವುದಕ್ಕೆ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆ ಮುಂದಾಗಿದೆ.

    ಹಿಂದೂ ಧರ್ಮದಲ್ಲಿ ದೀಪಾವಳಿಗೆ ಪಟಾಕಿ ಹೊಡೆಯಬೇಕು ಎಂದು ಎಲ್ಲೂ ಉಲ್ಲೇಖವಾಗಿಲ್ಲ, ಪಟಾಕಿಯಲ್ಲಿ ದೇವರ ಚಿತ್ರಗಳು ಇರುತ್ತವೆ. ಅದಕ್ಕೆ ಬೆಂಕಿಯಿಟ್ಟರೆ ದೇವರಿಗೆ ಅವಮಾನ ಅಲ್ಲದೆ ಪಟಾಕಿಯಿಂದ ಪರಿಸರ ಮಾಲಿನ್ಯವಾಗುತ್ತದೆ. ಪಟಾಕಿ ಹೊಡೆಯುವುದು ರಾಷ್ಟ್ರದ್ರೋಹದ ಕೆಲಸ ಅದಕ್ಕಾಗಿ ಸರ್ಕಾರಕ್ಕೆ ಪಟಾಕಿ ನಿಷೇಧವಾಗಲೇ ಬೇಕು ಎಂದು ಒತ್ತಾಯಿಸಿ ಪಿಎಐಎಲ್ ಹಾಕಲು ಈ ಎರಡು ಸಂಘಟನೆಗಳು ಮುಂದಾಗಿವೆ.

    ದೀಪಾವಳಿ ಸಂದರ್ಭದಲ್ಲಿ ಮಾತ್ರವಲ್ಲದೇ, ಹಬ್ಬ ಜಾತ್ರೆ ಇನ್ನೂ ಯಾವುದೇ ಸಂದರ್ಭಗಳಲ್ಲಿ ಪಟಾಕಿ ಹೊಡೆಯುವುದು ನಿಷೇಧವಾಗಬೇಕು. ಹಾಗೆಯೇ ಶಬ್ಧ ಮಾಲಿನ್ಯವಾಗುವ ಮುಸ್ಲಿಂ ಅಜಾನ್ ನಿಷೇಧಮಾಡುವಂತೆ, ಸದ್ಯದಲ್ಲೇ ಕೋರ್ಟ್ ಮೆಟ್ಟಿಲೇರಲು ನಿರ್ಧಾರವನ್ನು ಮಾಡಲಿದ್ದೇವೆಂದು ಪಬ್ಲಿಕ್ ಟಿವಿಗೆ ಹಿಂದೂ ಜನಜಾಗೃತಿ ಸಂಸ್ಥೆಯ ಮೋಹನ್ ಗೌಡ ಹೇಳಿದ್ದಾರೆ.

  • ಪ್ರೇಮಿಗಳ ಮಿಲನದ ವಿಡಿಯೋ ಇಟ್ಕೊಂಡು ಬ್ಲಾಕ್‍ಮೇಲ್: ಕೊನೆಗೆ ಯುವತಿ ಮೇಲೆ ಗ್ಯಾಂಗ್ ರೇಪ್

    ಪ್ರೇಮಿಗಳ ಮಿಲನದ ವಿಡಿಯೋ ಇಟ್ಕೊಂಡು ಬ್ಲಾಕ್‍ಮೇಲ್: ಕೊನೆಗೆ ಯುವತಿ ಮೇಲೆ ಗ್ಯಾಂಗ್ ರೇಪ್

    ಬೆಂಗಳೂರು: ಪ್ರೇಮಿಗಳು ಏಕಾಂತದಲ್ಲಿದ್ದಾಗ ಅದನ್ನು ಚಿತ್ರೀಕರಣ ಮಾಡಿ ನಂತರ ಪೋಷಕರಿಗೆ ನೀಡುವುದಾಗಿ ಬೆದರಿಕೆ ಒಡ್ಡಿ 5 ಜನ ಕಾಮುಕರು ಸೇರಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ದಾರುಣ ಘಟನೆ ಆನೇಕಲ್‍ನ ಕಕ್ಕಮಲ್ಲೇಶ್ವರ ಬೆಟ್ಟದಲ್ಲಿ ನಡೆದಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿಗಳು ಆನೇಕಲ್‍ನ ಗೌರೇನಹಳ್ಳಿ ನಿವಾಸಿಗಳಾಗಿದ್ದು, ಮುರುಗೇಶ್, ರಮೇಶ್, ವಿಕಾಸ್ ಮತ್ತು ರಾಜು ಎಂದು ಗುರುತಿಸಲಾಗಿದೆ.

    ಯಲ್ಲರಾಜು 20 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ. ಒಂದು ದಿನ ಇವರಿಬ್ಬರು ಕಕ್ಕಮಲ್ಲೇಶ್ವರ ಬೆಟ್ಟಕ್ಕೆ ಹೋಗಿದ್ದರು. ಇಬ್ಬರು ಮಿಲನದಲ್ಲಿದ್ದಾಗ ಆರೋಪಿಗಳು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದರು.

    ನಂತರ ಹುಡುಗಿಗೆ ಬ್ಲಾಕ್ ಮೇಲ್ ಮಾಡಿ ನಮ್ಮೊಂದಿಗೂ ಮಿಲನವಾದರೇ ಈ ವಿಷಯವನ್ನು ಮುಚ್ಚಿಡುತ್ತೇವೆ. ಇಲ್ಲವಾದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿ ಯುವತಿಯನ್ನು ಬೆಟ್ಟಕ್ಕೆ ಕರೆಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

    ಆರೋಪಿಗಳು ನಿತಂತರವಾಗಿ ಬೆದರಿಕೆ ಒಡ್ಡಿ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ. ಈಗ ಯುವತಿ 6 ತಿಂಗಳ ಗರ್ಭಿಣಿಯಾಗಿರುವ ವಿಚಾರ ಮನೆಯವರಿಗೆ ತಿಳಿದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೋಷಕರು ಆನೇಕಲ್ ಪೊಲೀಸ್ ಠಾಣೆಗೆ ಹೋಗಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.

    ಪೊಲೀಸರು ಆರೋಪಿಗಳ ಜೊತೆಗೆ ಈ ವಿಚಾರವನ್ನು ಮುಚ್ಚಿಟ್ಟದ್ದಕ್ಕೆ ಯುವತಿಯ ಪ್ರೇಮಿ ಯಲ್ಲರಾಜುನನ್ನು ಬಂಧಿಸಿದ್ದಾರೆ.

     

  • ಮೊದಲ ಬಾರಿಗೆ 34 ಕನ್ನಡಿಗರಿಗೆ ಐಎಎಸ್ ಪದವಿ ಭಾಗ್ಯ

    ಮೊದಲ ಬಾರಿಗೆ 34 ಕನ್ನಡಿಗರಿಗೆ ಐಎಎಸ್ ಪದವಿ ಭಾಗ್ಯ

    ಬೆಂಗಳೂರು: ಇದೇ ಮೊದಲ ಬಾರಿಗೆ 34 ಕನ್ನಡಿಗರಿಗೆ ಐಎಎಸ್ ಪದವಿ ಭಾಗ್ಯ ದೊರೆತಿದೆ. 34 ಹಿರಿಯ ಕೆಎಎಸ್ ಅಧಿಕಾರಿಗಳಿಗೆ ಯುಪಿಎಸ್‍ಸಿ ಸಮಿತಿ ಐಎಎಸ್ ಪದವಿ ಕೊಡಲು ನಿರ್ಧಾರ ಮಾಡಿದೆ.

    ವಿಧಾನಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಭಾವ ಸಚಿವರ ನಾಲ್ವರು ಆಪ್ತ ಕಾರ್ಯದರ್ಶಿಗಳು ಐಎಎಸ್ ಪದವಿಯನ್ನು ಪಡೆದುಕೊಂಡಿದ್ದಾರೆ. ಸಚಿವ ಜಾರ್ಜ್ ಆಪ್ತ ಕಾರ್ಯದರ್ಶಿ ಡಾ. ಶಿವಶಂಕರ್, ರೋಷನ್ ಬೇಗ್ ಆಪ್ತ ಕಾರ್ಯದರ್ಶಿ ಗೋಪಾಲಕೃಷ್ಣ, ಎಂ.ಬಿ.ಪಾಟೀಲ್ ಆಪ್ತ ಕಾರ್ಯದರ್ಶಿ ವೈ.ಎಸ್.ಪಾಟೀಲ್, ತನ್ವೀರ್‍ಸೇಠ್ ಆಪ್ತ ಕಾರ್ಯದರ್ಶಿ ರವಿಕುಮಾರ್ ಅವರು ಐಎಎಸ್ ಪದವಿ ಪಡೆದಿದ್ದಾರೆ. ಆದರೆ ಈ ಬಗ್ಗೆ ಆಡಳಿತ ವಲಯದಲ್ಲಿ ತೀವ್ರ ಚರ್ಚೆ ಶುರುವಾಗಿದೆ.

    ಎಸಿಬಿಯಿಂದ ಕಿರುಕುಳಕ್ಕೆ ಒಳಗಾದ ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಅವರಿಗೂ ಕೂಡ ಐಎಎಸ್ ಭಾಗ್ಯ ಸಿಕ್ಕಿದೆ. ಆದರೆ ಲೋಕಾಯುಕ್ತ ಕೇಸ್ ವಿಚಾರಣೆಯಲ್ಲಿದ್ದ ರಾಜಮ್ಮ ಚೌಡರೆಡ್ಡಿ ಅವರಿಗೆ ಮಾತ್ರ ಐಎಎಸ್ ಭಾಗ್ಯ ದೊರೆತಿಲ್ಲ.

    ಇದೇ ಮೊದಲ ಬಾರಿಗೆ 34 ಕನ್ನಡಿಗರಿಗೆ ಐಎಎಸ್ ಪದವಿ ಭಾಗ್ಯ ಸಿಕ್ಕಿದ್ದು, ಈ ಹಿರಿಯ ಕೆಎಎಸ್ ಅಧಿಕಾರಿಗಳಿಗೆ ಯುಪಿಎಸ್‍ಸಿ ಸಮಿತಿ ಐಎಎಸ್ ಕೊಡಲು ಒಪ್ಪಿದೆ. ಇನ್ನು ಇದೇ ವೇಳೆ ಕನ್ನಡಿಗರಿಗೆ ಐಎಎಸ್ ಬಡ್ತಿ ಸಿಗದಂತೆ ಉತ್ತರ ಭಾರತದ ಐಎಎಸ್ ಅಧಿಕಾರಿಗಳು ನಡೆಸಿದ್ದ ಕುತಂತ್ರ ಕೂಡ ಈಗ ಚರ್ಚೆಗೆ ಗ್ರಾಸವಾಗಿದೆ.