Tag: Bangalore

  • ಬೆಂಗ್ಳೂರಿನಲ್ಲಿ ಭಾರೀ ಮಳೆ: ನಿಮ್ಮ ಊರಿನಲ್ಲಿ ಹೇಗಿದೆ?

    ಬೆಂಗ್ಳೂರಿನಲ್ಲಿ ಭಾರೀ ಮಳೆ: ನಿಮ್ಮ ಊರಿನಲ್ಲಿ ಹೇಗಿದೆ?

    ಬೆಂಗಳೂರು: ಬಿಟ್ಟುಬಿಡದೇ ಸುರಿಯುತ್ತಿರುವ ಶತಮಾನದ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಶುಕ್ರವಾರ ರಾತ್ರಿಯಿಡಿ ಸುರಿದ ಭಾರೀ ಮಳೆಯಿಂದ ಐಟಿ ಸಿಟಿ ಈಗ ಗುಂಡಿ ಸಿಟಿಯಾಗಿದೆ. ಬೆಂಗಳೂರು ಅಲ್ಲದೇ ರಾಜ್ಯದ ಹಲವಡೆ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಜಿಲ್ಲೆಗಳಲ್ಲಿ ಮಳೆ ಹೇಗಿದೆ ಎನ್ನುವ ಮಾಹಿತಿ ಈ ವರದಿಯಲ್ಲಿದೆ.

    ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ಶುಕ್ರವಾರ ಇಡೀ ಜಿಲ್ಲೆಯಲ್ಲಿ ಕೇವಲ 0.2ಮಿ.ಮೀ. ಮಳೆ ಆಗಿದೆ. ಭದ್ರಾ ಅಣೆಕಟ್ಟೆ ಜಲಾನಯನ ವ್ಯಾಪ್ತಿಯಲ್ಲಿ ಮಳೆ ಕೊರತೆ ಇರುವ ಕಾರಣ ಮೋಡ ಭಿತ್ತನೆಗೆ ಭದ್ರಾ ಅಭಿವೃದ್ಧಿ ಪ್ರಾಧಿಕಾರ ಸರ್ಕಾರವನ್ನು ಕೋರಿದೆ.

    ಕಲಬುರಗಿ: ಈ ವರ್ಷವು ಸಹ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಆದರೆ ಕಳೆದ 15 ದಿನಗಳಿಂದ ಸುರಿದ ಮಳೆಯಿಂದ ತೊಗರಿ ಬೆಳೆ ನಾಶವಾಗುತ್ತಿದೆ.

    ಧಾರವಾಡ: ಜಿಲ್ಲೆಯಲ್ಲಿ ಸಂಜೆ ಹೊತ್ತಿಗೆ ಮಳೆ ಆರಂಭವಾಗುತ್ತಿದೆ. ಸಂಜೆ ಧಾರಾಕಾರವಾಗಿ ಸುರಿಯುವ ಮಳೆ ರಾತ್ರಿ ಸ್ವಲ್ಪ ಜಿಟಿಜಿಟಿಯಾಗಿ ಬರುತ್ತಿದೆ. ಹತ್ತಿ ಬೆಳೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ. ಉಳಿದಂತೆ ಕೆರೆಗಳು, ಬೆಣ್ಣಿಹಳ್ಳ, ತುಪ್ರಿ ಹಳ್ಲ ತುಂಬಿ ಹರಿಯುತ್ತಿವೆ. ಕೆಲ ಗ್ರಾಮಗಳಲ್ಲಿ ಮಳೆಯಿಂದ ನೀರು ನುಗ್ಗಿದ್ದು ರಸ್ತೆಗಳಿಗೆ ಹಾನಿಯಾಗಿದೆ.

    ಯಾದಗಿರಿ: ಜಿಲ್ಲೆಯಲ್ಲಿ ಈ ತಿಂಗಳು ವಾಡಿಕೆ ಮಳೆಗಿಂತ ಶೇ.43 ಹೆಚ್ಚಾಗಿದೆ. ಜೀವ ನದಿಗಳಾದ ಭೀಮಾ, ಕೃಷ್ಣಾ ನದಿಗಳು ಮೈದುಂಬಿ ಹರಿಯುತ್ತಿದೆ. ಬಸವಸಾಗರ ಜಲಾಶಯವು ಸಂಪೂರ್ಣ ಭರ್ತಿಯಾಗಿದೆ. ಮಳೆಗೆ ಹತ್ತಿ, ಭತ್ತ ಹಾಗೂ ತೂಗರಿ ಬೆಳೆ ಹಾನಿಯಾಗಿದೆ.

    ಹಾವೇರಿ: ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಉತ್ತಮ ಮಳೆಯಾಗಿದೆ. ಜಿಲ್ಲೆಯ ತುಂಗಾಭದ್ರ, ವರದಾ ನದಿ ಸೇರಿದಂತೆ ಕೆರೆಗಳು ತುಂಬುತ್ತಿವೆ. ಜಿಲ್ಲೆಯಲ್ಲಿ ಮಳೆ ಹೆಚ್ಚಾದ ಹಿನ್ನೆಲೆ ಮೆಕ್ಕೆಜೋಳ ಮತ್ತು ಹತ್ತಿ ಬೆಳೆ ವಿವಿಧ ರೋಗ ಬಂದಿದ್ದು ಬೆಳೆ ನಷ್ಟವಾಗುತ್ತಿವೆ.

    ಕೊಪ್ಪಳ: ಹಳ್ಳದ ನೀರು ಹೊಲಕ್ಕೆ ನುಗ್ಗಿ ಅಂದಾಜು 5 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಈರುಳ್ಳಿ, ಮತ್ತಿತರ ಬೆಳೆ ಚಿಕ್ಕಸಿಂದೋಗಿ, ಹಿರೇಸಿಂದೋಗಿಯಲ್ಲಿ ಜಲಾವೃತವಾಗಿ ಭಾರಿ ನಷ್ಟವಾಗಿದೆ. ಇನ್ನೊಂದೆಡೆ ಕೊಪ್ಪಳದ ಗಣೇಶನಗರದಲ್ಲಿ ಮನೆಗಳು ಜಲಾವೃತವಾಗಿದ್ದು, ರೈಲು ನಿಲ್ದಾಣದ ಬಳಿಯ ಹುಲಿಗಿ ಆಚಾರ್ಯ ಎಂಬವರ ಮನೆ ಮೇಲ್ಛಾವಣೆ ಕುಸಿದುಬಿದ್ದಿದೆ. ಜಿಲ್ಲೆಯ ಹೇಮಗುಡ್ಡ, ಮುಕ್ಕುಂಪಿ ಕೆರೆ ಸೇರಿದಂತೆ ಬಹುತೇಕ ಕೆರೆಕಟ್ಟೆಗಳು ತುಂಬಿದೆ. ಕಿರು ಜಲಪಾತಗಳು ಸೃಷ್ಟಿಯಾಗುತ್ತಿವೆ.

    ರಾಯಚೂರು: ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಕಳೆದ ಮೂರು ವರ್ಷಗಳಿಂದ ಬರಗಾಲ ಅನುಭವಿಸಿದ್ದ ರೈತರು ಈಗ ಮಳೆಯಿಂದ ತತ್ತರಿಸಿದ್ದಾರೆ. ಬಹುತೇಕ ಹಳ್ಳಗಳು ತುಂಬಿ ರಸ್ತೆ ಸಂಪರ್ಕ ಕಡಿತಗೊಂಡಿವೆ. ಹೊಲಗದ್ದೆಗಳಿಗೆ ನೀರು ನುಗ್ಗಿ ನೂರಾರು ಕೋಟಿ ರೂಪಾಯಿ ಬೆಳೆ ಹಾನಿಯಾಗಿದೆ.

    ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಾಂತ ಈ ಭಾರೀ ಉತ್ತಮ ಮಳೆಯಾಗಿದೆ. ಜಿಲ್ಲೆಯಾದ್ಯಾಂತ ಹಳ್ಳ-ಕೊಳ್ಳಗಳು ತುಂಬಿದರೆ, ಕೆರೆಗಳು ಕೋಡಿ ಹರಿದಿದ್ದು ನದಿ ಪಾತ್ರಗಳು ಮರು ಜೀವ ಪಡೆದುಕೊಂಡಿವೆ. ಜಿಲ್ಲೆಯ ಕುಡಿಯುವ ನೀರಿನ ಮೂಲಗಳಾದ ಜಲಾಶಯಗಳು ಕೆರೆಗಳು ತುಂಬಿ ಕುಡಿಯುವ ನೀರಿನ ಅಭಾವ ನೀಗುವುದರ ಜೊತೆಗೆ ಅಂತರ್ಜಲದ ಅಭಿವೃದ್ಧಿ ಆಗಿದೆ. ಸತತ 7 ವರ್ಷಗಳಿಂದ ಬರಪೀಡಿತ ಜಿಲ್ಲೆಯಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಈ ಬರದ ಶಾಪದಿಂದ ವಿಮೋಚನೆ ಸಿಕ್ಕಿದೆ.

     

    ಮಂಡ್ಯ: ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ಉತ್ತಮ ಮಳೆಯಾಗುತ್ತಿದೆ. ಆದರೆ ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಅಲ್ಲಲ್ಲಿ ಕೆಲ ಊರುಗಳಲ್ಲಿ ಮಳೆಯಾಗಿದೆ. ಆದ್ರೆ ಮಂಡ್ಯ ನಗರ ಸೇರಿದಂತೆ ಹಲವೆಡೆ ನಾಲ್ಕು ದಿನಗಳಿಂದ ಮಳೆಯಾಗಿಲ್ಲ.

    ಬಳ್ಳಾರಿ: ಜಿಲ್ಲೆಯಲ್ಲಿ ಕಳೆದ ರಾತ್ರಿ ಮೂರು ಗಂಟೆಗಳ ಕಾಲ ಮಳೆಯಾಗಿದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರ. ಸಂಡೂರು. ಹಗರಿಬೊಮ್ಮನಹಳ್ಳಿ ಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಕೆಲವಡೆ ಹಳೆಯ ಮನೆಗಳ ಗೋಡೆ ಕುಸಿದಿವೆ. ಯಾವೂದೇ ಪ್ರಾಣ ಹಾನಿ ಸಂಭವಿಸಿಲ್ಲ ಜಲಾಶಯ ತುಂಬಲು 5 ಅಡಿ ಮಾತ್ರ ಬಾಕಿ ಇದೆ.

    ಚಾಮರಾಜನಗರ: ಕಳೆದ 6 ವರ್ಷಗಳಿಂದ ಭೀಕರ ಬರಗಾಲಕ್ಕೆ ತುತ್ತಾಗಿದ್ದ ಚಾಮರಾಜನಗರದಲ್ಲಿ ಕಳೆದ ಎರಡು ತಿಂಗಳಿಂದ ಉತ್ತಮ ಮಳೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ 10 ವರ್ಷಗಳಿಂದ ತುಂಬದ ಜಲಾಶಯಗಳು ಹಾಗೂ ಕೆರೆ ಕಟ್ಟೆಗಳು ಭರ್ತಿಯಾಗಿವೆ.

    ದಕ್ಷಿಣ ಕನ್ನಡ: ದಕ್ಷಿಣ ಕನ್ನಡದಲ್ಲಿ ಮಳೆ ಕಡಿಮೆಯಾಗಿದ್ದು, ಕೆಲವೊಮ್ಮೆ ಚದುರಿದಂತೆ ಮಳೆಯಾಗುತ್ತಿದೆ.

    ಚಿಕ್ಕಬಳ್ಳಾಪುರ ಮಳೆಯ ದೃಶ್ಯಗಳು:

    ಬಳ್ಳಾರಿ ಮಳೆಯ ದೃಶ್ಯಗಳು:

    ಹಾವೇರಿ ಮಳೆಯ ದೃಶ್ಯಗಳು:

     

    ಧಾರವಾಡ ಮಳೆಯ ದೃಶ್ಯಗಳು:

    ರಾಯಚೂರು ಮಳೆಯ ದೃಶ್ಯಗಳು:

  • ಕಾರು ಗುದ್ದಿದ ರಭಸಕ್ಕೆ ಬೆಂಗ್ಳೂರು ಫ್ಲೈ ಓವರ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ರು!

    ಕಾರು ಗುದ್ದಿದ ರಭಸಕ್ಕೆ ಬೆಂಗ್ಳೂರು ಫ್ಲೈ ಓವರ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ರು!

    ಬೆಂಗಳೂರು: ಕಾರು ಗುದ್ದಿದ್ದ ರಭಸಕ್ಕೆ ಬೈಕ್ ಸವಾರರಿಬ್ಬರು ಫ್ಲೈಓವರ್ ಮೇಲಿನಿಂದ ಕೆಳಗಿನ ರಸ್ತೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಅಪಘಾತದಲ್ಲಿ ಮೃತಪಟ್ಟವರನ್ನು ತಮಿಳುನಾಡು ಮೂಲದ ಮೊಹಮದ್ ಹುಸೈನ್(37) ಫಕ್ರುದ್ದಿನ್(34) ಎಂದು ಗುರುತಿಸಲಾಗಿದೆ. ಬೆಂಗಳೂರಿನ ನೀಲಸಂದ್ರದಲ್ಲಿ ವಾಸವಾಗಿದ್ದ ಇವರು ಕಾರ್ಯ ನಿಮಿತ್ತ ಎಲೆಕ್ಟ್ರಾನಿಕ್ ಸಿಟಿಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ.

    ಕೆಳಭಾಗದ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಎಂದು ಬೆಂಗಳೂರು-ಹೊಸೂರು ರಸ್ತೆಯ ಎಲಿವೆಟೆಡ್ ಫ್ಲೈಓವರ್ ಮೇಲೆ ಹೋಗುತ್ತಿದ್ದಾಗ ಗಾರೆಭಾವಿ ಪಾಳ್ಯ ಸಮೀಪದಲ್ಲಿ ಹಿಂದಿನಿಂದ ಅತಿ ವೇಗವಾಗಿ ಬಂದ ಉಬರ್ ಕಂಪನಿಯ ಮಾರುತಿ ರಿಟ್ಜ್ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ನಲ್ಲಿದ್ದ ಇಬ್ಬರು ಗಾಳಿಯಲ್ಲಿ ತೇಲಿಕೊಂಡು ಕೆಳಗಿನ ರಸ್ತೆಗೆ ಬಿದ್ದಿದ್ದಾರೆ. ಈ ದೃಶ್ಯ ಹತ್ತಿರದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅಪಘಾತಕ್ಕೆ ಸಾಕ್ಷಿಯಾಗಿದೆ.

    ಸ್ಥಳದಲ್ಲಿ ಮೊಹಮದ್ ಹುಸೈನ್ ಸಾವನ್ನಪ್ಪಿದ್ದರೆ ಫಕ್ರುದ್ದಿನ್ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವಿಗಿಡಾಗಿದ್ದಾರೆ. ಕಾರು ಚಾಲಕ ಅಪಘಾತದ ನಂತರ ಪರಾರಿಯಾಗಿದ್ದಾನೆ. ಈ ಸಂಬಂಧ ಮಡಿವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರು ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.

    https://youtu.be/qeItjehTEWE

     

  • ನಾನು ತಪ್ಪು ಮಾಡಿದ್ರೆ, ಸಾರ್ವಜನಿಕ ಜೀವನದಿಂದ ನಿವೃತ್ತಿ: ವೇಣುಗೋಪಾಲ್

    ನಾನು ತಪ್ಪು ಮಾಡಿದ್ರೆ, ಸಾರ್ವಜನಿಕ ಜೀವನದಿಂದ ನಿವೃತ್ತಿ: ವೇಣುಗೋಪಾಲ್

    ಬೆಂಗಳೂರು: ನಾನು ತಪ್ಪು ಮಾಡಿದ್ದೇನೆಂದು ಸಾಬೀತಾದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

    ಶಾಂತಿನಗರದಲ್ಲಿ ಇಂದು ಬೆಂಗಳೂರಿನಿಂದ ಕೇರಳದ ಆಲೆಪ್ಪಿಗೆ ಜೆಎಸ್‍ಆರ್‍ಡಿಸಿ ಬಸ್ಸು ಸೇವೆಗೆ ಹಸಿರು ನಿಶಾನೆ ತೋರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೋಲಾರ್ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನುವ ಆರೋಪಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

    ನಾನು 40 ವರ್ಷದಿಂದ ರಾಜಕಾರಣದಲ್ಲಿದ್ದೇನೆ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಈ ರೀತಿಯ ಆರೋಪಗಳನ್ನು ವಿಪಕ್ಷಗಳು ಮೊದಲಿನಿಂದಲೂ ಮಾಡಿಕೊಂಡು ಬಂದಿವೆ. ನಾನು ಚುನಾವಣೆಗೆ ನಿಂತಾಗ ಹೆಚ್ಚು ಅಪಪ್ರಚಾರ ಮಾಡಿದ್ದರು. ಸರೀತಾ ನಾಯರ್ ಮೇಲೆ 36 ಕ್ರಿಮಿನಲ್ ಕೇಸುಗಳಿವೆ. ಅವರು ನನ್ನ ಬಗ್ಗೆ ಆರೋಪ ಮಾಡಿದ್ದು ವಿರುದ್ಧ ನಾನು ಎರ್ನಾಕುಲಂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದರು.

    ಬೆಂಗಳೂರಿನ ಮಳೆಗೆ 5 ಜನ ಸಾವನ್ನಪ್ಪಿದ್ದಾರೆ. ಇದು ಆಕಸ್ಮಿಕವಾಗಿ ಆಗಿರುವ ಘಟನೆ. ಇನ್ನು ಮುಂದೆ ಈ ರೀತಿ ಆಗದ ರೀತಿಯಲ್ಲಿ ಸರಿಪಡಿಸಿಕೊಳ್ಳುತ್ತೇವೆಂದು ತಿಳಿಸಿದರು.

    ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್ ಬೇಗ್ ಅವಾಚ್ಯ ಶಬ್ದ ಬಳಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಎಐಸಿಸಿಯ ಪರವಾಗಿ ಮಾತನಾಡುತ್ತಿದ್ದೇನೆ. ಬಿಜೆಪಿಯ ನಾಯಕರು ಇದಕ್ಕಿಂತ ಹೆಚ್ಚಾಗಿ ಕಾಮೆಂಟ್ ಮಾಡಿದ್ದಾರೆ. ರೋಷನ್ ಬೇಗ್‍ಗಿಂತ ಕೆಟ್ಟದಾಗಿ ಮಾತನಾಡಿದ್ದು ಕೇಳಿದ್ದೇನೆ. ರೋಷನ್ ಬೇಗ್ ಉದ್ದೇಶ ಪೂರಕವಾಗಿ ಮಾತನಾಡಿಲ್ಲ. ಇದರ ಬಗ್ಗೆ ಸ್ಪಷ್ಟನೆ ನೀಡಿದರೂ ಸಹ ಇಂತಹ ಪದ ಬಳಕೆ ಸರಿ ಅಲ್ಲ. ರಾಹುಲ್ ಗಾಂಧಿ ಅವರು ಕೆಲವೇ ದಿನಗಳಲ್ಲಿ ಎಐಸಿಸಿ ಅಧ್ಯಕ್ಷರಾಗಲಿದ್ದಾರೆ. ಕೆಪಿಸಿಸಿ ಸಹ ಇದರ ಪರವಾಗಿದೆ ಎಂದು ತಿಳಿಸಿದರು.

    ಏನಿದು ಪ್ರಕರಣ?
    ಸೋಲಾರ್ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್ 2013ರ ಜುಲೈನಲ್ಲಿ ಜೈಲಿನಿಂದಲೇ ಒಂದು ಪತ್ರ ಬರೆದಿದ್ದರು. ಆ ಪತ್ರವನ್ನು ಆಧರಿಸಿ ರಾಜ್ಯದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗುವ ಸಾಧ್ಯತೆಯಿದೆ.

    ಸೋಲಾರ್ ಹಗರಣದ ಬಗ್ಗೆ ಈ ಹಿಂದೆ ತಿರುವನಂತಪುರಂನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ಸರಿತಾ ನಾಯರ್ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ. ಹೀಗಾಗಿ ಸರಿತಾ ನಾಯರ್ ಪತ್ರದಲ್ಲಿ ಯಾರ ಹೆಸರನ್ನು ಬರೆದಿದ್ದಾರೋ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ತಿಳಿಸಿದ್ದರು.

    ಕೇರಳ ಸಿಎಂ ಪಿಣರಾಯ್ ವಿಜಯನ್ ನೇತೃತ್ವದ ಎಡಪಕ್ಷಗಳ ಒಕ್ಕೂಟದ ಸರ್ಕಾರಕ್ಕೆ ಸೋಲಾರ್ ತನಿಖಾ ಆಯೋಗದ ವರದಿ ಬಂದಿದ್ದು, ಆರೋಪಿ ಸರಿತಾ ಪತ್ರದಲ್ಲಿ ಉಲ್ಲೇಖ ಮಾಡಿರುವ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಬಹುದು ಎಂದು ಹೇಳಿದೆ. ಲೈಂಗಿಕ ಬಯಕೆ ಈಡೇರಿಸುವಂತೆ ಬೇಡಿಕೆ ಇಡುವುದು ಭ್ರಷ್ಟಾಚಾರದ ಭಾಗವೆಂದು ಪರಿಗಣಿಸಲಾಗಿದೆ. ವರದಿಯನ್ನೇ ಆಧರಿಸಿ ಕಾಂಗ್ರೆಸ್‍ಗೆ ಶಾಕ್ ನೀಡಲು ಕೇರಳದ ಎಡಪಕ್ಷಗಳ ಸರ್ಕಾರ ಮುಂದಾಗಿದೆ.

    ಮಾಧ್ಯಮಗಳಿಗೆ ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಮಾಜಿ ಸರಿತಾ ನಾಯರ್ ಪತ್ರದಲ್ಲಿ, ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಸಂಸದ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಆಗಿರುವ ವೇಣುಗೋಪಾಲ್, ಹೈಬಿ ಈಡನ್, ಅರ್ಯಾಡನ್ ಮೊಹಮ್ಮದ್, ಅಡೂರ್ ಪ್ರಕಾಶ್, ಲೋಕಸಭಾ ಸಂಸದ ಜೋಸ್ ಕೆ ಮನಿ, ಕೆಪಿ ಅನಿಲ್ ಕುಮಾರ್ ಹೆಸರು ಇದೆ.

     

  • ಕ್ವಾರಿಯಲ್ಲಿ ಈಜಲು ಹೋಗಿ ಯುವಕ ನೀರು ಪಾಲು

    ಕ್ವಾರಿಯಲ್ಲಿ ಈಜಲು ಹೋಗಿ ಯುವಕ ನೀರು ಪಾಲು

    ಬೆಂಗಳೂರು: ಈಜಲು ಹೋಗಿ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಬಳಿಯ ಜಿಗಣಿ ಸಮೀಪದ ಕಲ್ಲುಬಾಳ ಗ್ರಾಮದಲ್ಲಿರುವ ಬಾಲರ್ ಬಂಡೆ ಕ್ವಾರಿಯಲ್ಲಿ ನಡೆದಿದೆ.

    ನರೇಶ್ (18) ಕ್ವಾರಿಯಲ್ಲಿ ಈಜಲು ಹೋಗಿ ಮೃತಪಟ್ಟ ಯುವಕ.

    ಶುಕ್ರವಾರ ಸಂಜೆ ಸುಮಾರು 4.30ಕ್ಕೆ ನರೇಶ್ ಮತ್ತು ಆತನ ಜೊತೆ 8 ಜನ ಸ್ನೇಹಿತರು ಕಲ್ಲುಬಾಳು ಗ್ರಾಮದಲ್ಲಿರುವ ಬಾಲರ್ ಬಂಡೆ ಕ್ವಾರಿಯಲ್ಲಿ ಈಜುಲು ಹೋಗಿದ್ದಾರೆ. ಮೊದಲು ನರೇಶ್ ಜೊತೆ ಮೂವರು ಸ್ನೇಹಿತರು ಈಜಲು ಹೋಗಿದ್ದಾರೆ. ಆದರೆ ಕಲ್ಲು ಕ್ವಾರಿ ಸುಮಾರು 30-40 ಅಡಿ ಆಳ ಇದ್ದುದ್ದರಿಂದ ನರೇಶ್ ನೀರಿನಲ್ಲಿ ಮುಳುಗಿ ಹೋಗಿದ್ದಾನೆ. ನಂತರ ಸ್ನೇಹಿತರೆಲ್ಲರೂ ಭಯಗೊಂಡು ಓಡಿ ಹೋಗಿ ಪೋಷಕರಿಗೆ ವಿಚಾರ ತಿಳಿಸಿದ್ದಾರೆ.

    ಪೋಷಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ಸಿಬ್ಬಂದಿ ಅಗ್ನಿಶಾಮಕ ದಳದ ಜೊತೆ ಕ್ವಾರಿಯ ಬಳಿ ಹೋಗಿ ಶವಕ್ಕಾಗಿ ಶೋಧ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಆದರೆ ಕತ್ತಲಾಗಿದ್ದರಿಂದ ಹುಡುಕಾಟ ಮಾಡಲು ಸಾಧ್ಯವಾಗದೆ ಇಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಶವ ಪತ್ತೆಯಾಗಿದೆ.

    ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಘಟನೆಯ ಸಂಬಂಧ ಜಿಗಣಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.

  • ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಶೂಟೌಟ್ ಮಾಡಿ ದುಷ್ಕರ್ಮಿಗಳು ಪರಾರಿ!

    ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಶೂಟೌಟ್ ಮಾಡಿ ದುಷ್ಕರ್ಮಿಗಳು ಪರಾರಿ!

    ಬೆಂಗಳೂರು: ದುಷ್ಕರ್ಮಿಗಳು ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಹೋಗಿ ಗುಂಡಿನ ದಾಳಿ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲ ಗ್ರಾಮದಲ್ಲಿ ನಡೆದಿದೆ.

    ಕೃಷಿ ಹಾಗೂ ಹಣಕಾಸು ವ್ಯವಹಾರ ಮಾಡಿಕೊಂಡಿದ್ದ ಮುದ್ದುಕೃಷ್ಣ (41) ಗುಂಡಿನ ದಾಳಿಗೆ ಬಲಿಯಾದ ಮೃತ ದುರ್ದೈವಿ.

    ಮುದ್ದುಕೃಷ್ಣ ಶುಕ್ರವಾರ ಸಂಜೆ ದೊಡ್ಡ ಬೆಳವಂಗಲದಿಂದ ಚಿಕ್ಕ ಬೆಳವಂಗಲ ಗ್ರಾಮಕ್ಕೆ ಬರುತ್ತಿದ್ದು, ಈ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಕಾರಿನಲ್ಲಿ ಅವರನ್ನು ಫಾಲೋ ಮಾಡಿಕೊಂಡು ಬಂದಿದ್ದಾರೆ. ನಂತರ ಏಕಾಏಕಿ ಶೂಟೌಟ್ ಮಾಡಿ ಪರಾರಿಯಾಗಿದ್ದಾರೆ.

    ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಇನ್ನು ಘಟನೆ ನಡೆದ ಸ್ಥಳಕ್ಕೆ ಡಿವೈಎಸ್ಪಿ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

    ಕೃಷಿ ಹಾಗೂ ಹಣಕಾಸು ವ್ಯವಹಾರ ಮಾಡುತ್ತಿದ್ದುದ್ದರಿಂದ ಹಣಕಾಸು ವಿಚಾರಕ್ಕೆ ಕೊಲೆ ನಡೆದಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮುದ್ದುಕೃಷ್ಣನ ಹತ್ಯೆಯಿಂದ ಸಂಬಂಧಿಕರು ಮತ್ತು ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.

  • ಬೆಂಗ್ಳೂರು ಮಹಾಮಳೆ ಕುರಿತು ಸಚಿವ ಜಾರ್ಜ್ ಹೇಳಿದ್ದು ಹೀಗೆ

    ಬೆಂಗ್ಳೂರು ಮಹಾಮಳೆ ಕುರಿತು ಸಚಿವ ಜಾರ್ಜ್ ಹೇಳಿದ್ದು ಹೀಗೆ

    ಬೆಂಗಳೂರು: ಕಳೆದ ರಾತ್ರಿ ನಗರದಲ್ಲಿ ಸುರಿದ ಮಹಾ ಮಳೆಗೆ 7 ಜನರ ದಾರುಣ ಸಾವು ಸಂಭವಿಸಿದ್ದು, ದುರ್ಘಟನೆ ಕುರಿತು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಬೆಂಗಳೂರಿನಲ್ಲಿ ಮಳೆಯನ್ನು ಎದುರಿಸಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಹಲವು ವರ್ಷಗಳ ಹಿಂದೆಯೇ ಸೂಕ್ತ ಅಭಿವೃದ್ಧಿ ಯೋಜನೆಗಳನ್ನು ಆರಂಭ ಮಾಡಬೇಕಾಗಿತ್ತು ಆದರೆ ಮಾಡಿಲ್ಲ. ನಮ್ಮ ಸರ್ಕಾರವು ಇಂದು 1200 ಕೋಟಿ ರೂ. ಗಳ ರಾಜಕಾಲುವೆ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದೇವೆ. ಶೀಘ್ರವೇ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು.

    ನಾವು ಅಧಿಕಾರ ವಹಿಸಿಕೊಂಡಾಗ ಬೆಂಗಳೂರು 50 ಕಿ.ಮೀ ಮಾತ್ರ ರಾಜಕಾಲುವೆ ಇತ್ತು. ಇಂದು ಈ ಕಾಲುವೆಗಳನ್ನು 350 ಕಿ.ಮೀ ವರೆಗೆ ವಿಸ್ತರಿಸಿದ್ದೇವೆ. ಇನ್ನು ಒಂದು ವರ್ಷದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ ಅಂತ ಅವರು ಭರವಸೆ ನೀಡಿದ್ರು.

    ಇದೇ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಸಾವನ್ನಪ್ಪಿರುವ ಜನರಿಗೆ ತಲಾ 5 ಲಕ್ಷ ರೂ.ಗಳನ್ನು ಪರಿಹಾರವಾಗಿ ಘೋಷಿಸಿರುವುದಾಗಿ ತಿಳಿಸಿದರು.

  • ಬೆಂಗಳೂರು ಭಾರೀ ಮಳೆಗೆ ಮನೆಯ ಗೋಡೆ ಕುಸಿದು ದಂಪತಿ ಸಾವು

    ಬೆಂಗಳೂರು ಭಾರೀ ಮಳೆಗೆ ಮನೆಯ ಗೋಡೆ ಕುಸಿದು ದಂಪತಿ ಸಾವು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿದ್ದ ಭಾರೀ ಮಳೆಗೆ ದಂಪತಿ ಮೃತಪಟ್ಟಿರುವ ಘಟನೆ ಕುರುಬರಹಳ್ಳಿಯಲ್ಲಿ ನಡೆದಿದೆ.

    ವೃದ್ಧ ದಂಪತಿಗಳಾದ ಶಂಕ್ರಪ್ಪ ಮತ್ತು ಕಮಲಮ್ಮ ಮೃತ ದುರ್ದೈವಿಗಳು. ಮನೆಯೊಳಗೆ ತುಂಬಿದ್ದ ನೀರನ್ನು ಹೊರಗೆ ಹಾಕುವ ಸಂದರ್ಭದಲ್ಲಿ ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದು ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ.

    ಪ್ರತ್ಯಕ್ಷ ದರ್ಶಿಯೊಬ್ಬರು ವಿವರಿಸಿ, ಶಂಕ್ರಪ್ಪ ಮತ್ತು ಕಮಲಮ್ಮ ಮನೆ ಹತ್ತಿರ ನಿಂತಿದ್ದರು. ಮನೆಗೆ ಒಂದೇ ಬಾರಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಬಂತು. ಅವರನ್ನು ಇಲ್ಲಿಗೆ ಬರಲು ಕೆರೆದೆವು. ಆದರೆ ಆವರು ಬರಲು ಅಲ್ಲಿ ಜಾಗನೇ ಇರಲಿಲ್ಲ. ಈ ಗೋಡೆ ಕುಸಿದು ಮೃತಪಟ್ಟಿದ್ದಾರೆ ಎಂದು ಹೇಳಿದರು.

     

     

     

  • ಬೆಂಗಳೂರಿನಿಂದ ಉತ್ತರಪ್ರದೇಶಕ್ಕೆ ಸಿಆರ್‍ಪಿಎಫ್ ಕೇಂದ್ರ ಸ್ಥಳಾಂತರಕ್ಕೆ ಚಿಂತನೆ

    ಬೆಂಗಳೂರಿನಿಂದ ಉತ್ತರಪ್ರದೇಶಕ್ಕೆ ಸಿಆರ್‍ಪಿಎಫ್ ಕೇಂದ್ರ ಸ್ಥಳಾಂತರಕ್ಕೆ ಚಿಂತನೆ

    ಬೆಂಗಳೂರು: ನಗರದಲ್ಲಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ(ಸಿಆರ್‍ಪಿಎಫ್) ಕೇಂದ್ರ ಕಚೇರಿಯನ್ನು ಉತ್ತರಪ್ರದೇಶಕ್ಕೆ ಶಿಫ್ಟ್ ಮಾಡುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

    ಇಡೀ ದೇಶಾದ್ಯಂತ ಎಲ್ಲೇ ಕಾನೂನು ಸುವ್ಯವಸ್ಥೆಗೆ ಹದಗೆಟ್ಟರೂ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಿಆರ್‍ಪಿಎಫ್ ಯೋಧರು ಅತಂಕದಲ್ಲಿದ್ದಾರೆ. ಹೌದು ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಮಲ ತಾಯಿ ದೋರಣೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ.

    ಸದ್ಯ ಬೆಂಗಳೂರಿನ ತರಳು ಹಾಗೂ ಯಲಹಂಕಲ್ಲಿರುವ ಎರಡು ಸಿಆರ್‍ಪಿಎಫ್ ಗ್ರೂಪ್ ಕೇಂದ್ರಗಳಲ್ಲಿ ಒಂದನ್ನು ಯಾವುದೇ ಕಾರಣ ನೀಡದೇ ಕೇಂದ್ರ ಸರ್ಕಾರ ಉತ್ತರಪ್ರದೇಶದ ಚಂದೋಲಿ ಪ್ರದೇಶಕ್ಕೆ ಶಿಫ್ಟ್ ಮಾಡುವುದಕ್ಕೆ ಚಿಂತನೆ ನಡೆಸಿದೆ.

    ಈಗಾಗಲೇ ಉತ್ತರ ಪ್ರದೇಶದಲ್ಲಿ ಐದು ಸಿಆರ್‍ಪಿಎಫ್ ಗ್ರೂಪ್ ಸೆಂಟರ್‍ಗಳಿವೆ. ಪ್ರಸ್ತುತ ಕೇಂದ್ರ ಸರ್ಕಾರ ಶಿಪ್ಟ್ ಮಾಡಲು ನಿರ್ಧಾರಿಸಿರುವ ಪ್ರದೇಶ ಕೇಂದ್ರ ಗೃಹಮಂತ್ರಿ ರಾಜನಾಥ್ ಸಿಂಗ್ ಅವರ ಸ್ವಕ್ಷೇತ್ರವಾಗಿದೆ. ಹೀಗಾಗಿ ಕೇಂದ್ರದ ನಿರ್ಧಾರಕ್ಕೆ ರಾಜ್ಯದಲ್ಲಿ ತೀವ್ರ ಆಕ್ಷೇಪ ಎದ್ದಿದೆ.

    ಕೇಂದ್ರ ಈ ನಿರ್ಣಯದಿಂದ ಉತ್ತರ ಪ್ರದೇಶಕ್ಕೆ ಐದು ಸಿಆರ್‍ಪಿಎಫ್ ಕೇಂದ್ರಗಳ ಅವಶ್ಯಕತೆಯಾದರೂ ಏಕೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಅಲ್ಲದೇ ಸಿಆರ್‍ಪಿಎಫ್ ಕೇಂದ್ರವನ್ನು ಶಿಫ್ಟ್ ಮಾಡುವುದರಿಂದ ಕರ್ನಾಟಕದ ಮೂಲದ ಸಿಆರ್‍ಪಿಎಫ್ ಪೊಲೀಸರು, ತಮ್ಮ ಕುಟುಂಬಗಳ ಸಮೇತ ಉತ್ತರಪ್ರದೇಶಕ್ಕೆ ಶಿಫ್ಟ್ ಆಗಬೇಕಾಗುತ್ತದೆ.

    ಕೇಂದ್ರದ ಚಿಂತನೆಯ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರ ಸ್ವಾಮಿ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದು, ಸಿಆರ್‍ಪಿಎಫ್ ಕೇಂದ್ರವನ್ನು ಸ್ಥಾಪನೆ ಮಾಡುವುದಕ್ಕಾಗಿ ರಾಜ್ಯ ಸರ್ಕಾರವು 230 ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಅಲ್ಲದೇ ಈ ಕೇಂದ್ರವನ್ನು ಆಧರಿಸಿರುವ ಸುಮಾರು 15 ಸಾವಿರ ಕನ್ನಡಿಗರಿಗೆ ಇದರಿಂದ ಅನ್ಯಾಯವಾಗುತ್ತದೆ ಎಂದು ವಿವರಿಸಿದ್ದಾರೆ.

    ಇನ್ನೂಳಿದಂತೆ ಕರ್ನಾಟಕ ಎಲ್ಲಾ ರಾಜಕೀಯ ನಾಯಕರು ಈ ಕುರಿತು ಯಾವುದೇ ಪ್ರತಿಕ್ರಿಯೇಯನ್ನು ನೀಡಿಲ್ಲ. ರಾಜಕಾರಣಿಗಳ ಜಾಣಕುರುಡುನಿಂದ ದೇಶದ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡುವ ಯೋಧರಿಗೆ ತಮ್ಮ ಸರ್ವಿಸ್‍ನ ಕೊನೆಯ ದಿನಗಳನ್ನು ಕರ್ನಾಟದಲ್ಲಿ ಸೇವೆ ಸಲ್ಲಿಸಬೇಕು ಅನ್ನೋ ಆಸೆಗೆ ತಣ್ಣೀರು ಎರಚಿದ್ದಂತಾಗಿದೆ.

  • ಸಿದ್ದು ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಇಲ್ಲ: ಕಾಂಗ್ರೆಸ್ ಸಮೀಕ್ಷಾ ವರದಿಯಲ್ಲಿ ಏನಿದೆ?

    ಸಿದ್ದು ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಇಲ್ಲ: ಕಾಂಗ್ರೆಸ್ ಸಮೀಕ್ಷಾ ವರದಿಯಲ್ಲಿ ಏನಿದೆ?

    ಬೆಂಗಳೂರು: ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಹೇಳುತ್ತಿದ್ದರೆ, ಕಾಂಗ್ರೆಸ್ ಹೈಕಮಾಂಡ್ ಸಿದ್ದು ಸರ್ಕಾರಕ್ಕೆ ಫುಲ್ ಮಾರ್ಕ್ ನೀಡಿದೆ.

    ಹೌದು, ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಮೂಲಕ ಮೊದಲ ಆಂತರಿಕ ಸಮೀಕ್ಷೆಯನ್ನು ನಡೆಸಿದ್ದು, ಈ ಸಮೀಕ್ಷೆಯಲ್ಲಿ ರಾಜ್ಯ ಸರ್ಕಾರಕ್ಕೆ ಆಡಳಿತ ಅಲೆ ಇಲ್ಲ ಎನ್ನುವ ಅಂಶ ಪ್ರಕಟವಾಗಿದೆ ಎಂದು ಪಬ್ಲಿಕ್ ಟಿವಿಗೆ ಕಾಂಗ್ರೆಸ್ ಉನ್ನತ ಮೂಲಗಳಿಂದ ಮಾಹಿತಿ ನೀಡಿದೆ.

    ಅಷ್ಟೇ ಅಲ್ಲದೇ ಆಂತರಿಕ ಸಮೀಕ್ಷೆಯ ವರದಿ ಆಧರಿಸಿ ಟಿಕೆಟ್ ನೀಡಲು ನಿರ್ಧಾರ ತೆಗೆದು ಕೊಂಡಿದೆ. ಮುಂದಿನ ಸಮೀಕ್ಷೆಯಲ್ಲಿ ಅಭ್ಯರ್ಥಿಗಳ ಬಗ್ಗೆ ದೂರು ಬಂದರೆ ಆ ಅಭ್ಯರ್ಥಿಗಳಿಗೆ ಟಿಕೆಟ್ ನೀಡದಿರಲು ನಿರ್ಧಾರ ತೆಗೆದುಕೊಂಡಿದೆ. ಅವರ ಬದಲು ಹೊಸಬರಿಗೆ ಟಿಕೆಟ್ ನೀಡಲು ಹೈಕಮಾಂಡ್ ಪ್ಲಾನ್ ಮಾಡಿಕೊಂಡಿದೆ ಎನ್ನುವ ವಿಚಾರ ಲಭ್ಯವಾಗಿದೆ.

    ಡಿಸೆಂಬರ್ ವೇಳೆಗೆ ಮತ್ತೊಂದು ಸಮೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ಡಿಸೆಂಬರ್ ಅಥವಾ ಜನವರಿಯಲ್ಲೇ ಅಂತಿಮಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರಿಗೆ ಹೈ ಕಮಾಂಡ್ ಮಾಹಿತಿ ನೀಡಿದೆ ಎನ್ನಲಾಗಿದೆ.

    ಹೈಕಮಾಂಡ್ ಕೆಲ ಪ್ರಮುಖ ಶಾಸಕರ ಕಾರ್ಯವೈಖರಿ ಬಗ್ಗೆ ಅತೃಪ್ತಿಯನ್ನು ಹೊಂದಿದ್ದು, ಈಗಾಗಲೇ ಶಾಸಕರಿಗೆ ತಿದ್ದಿಕೊಳ್ಳಲು ಸೂಚನೆಯನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಕಾಂಗ್ರೆಸ್ ಗೆ ಐಟಿ ಶಾಕ್ ನೀಡಿದ್ದ ಬಿಜೆಪಿಗೆ 80 ಸೀಟಿನ ಶಾಕ್!

  • ಪ್ರೀತ್ಸೇ ಅಂತಾ ಆಂಟಿ ಹಿಂದೆ ಬಿದ್ದಿದ್ದ..! – ನೋ ಅಂದಿದ್ದಕ್ಕೆ ಕೆರೆಗೆ ಹಾರಿ ಪ್ರಾಣಬಿಟ್ಟ?

    ಪ್ರೀತ್ಸೇ ಅಂತಾ ಆಂಟಿ ಹಿಂದೆ ಬಿದ್ದಿದ್ದ..! – ನೋ ಅಂದಿದ್ದಕ್ಕೆ ಕೆರೆಗೆ ಹಾರಿ ಪ್ರಾಣಬಿಟ್ಟ?

    ಬೆಂಗಳೂರು: ಪ್ರೀತ್ಸೇ, ಪ್ರೀತ್ಸೇ ಅಂತಾ ಮದುವೆಯಾದ ಯುವತಿ ಹಿಂದೆ ಬಿದ್ದ. ಆದರೆ ಆ ಯುವತಿ ಈತನ ಪ್ರೀತಿಯನ್ನು ಸ್ಪಷ್ಟವಾಗಿ ನಿರಾಕರಿಸಿದಳು. ಇದರಿಂದ ಮನನೊಂದಿದ್ದ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬೆಂಗಳೂರು ಹೊರವಲಯದ ಸರ್ಜಾಪುರ ಕೆರೆಯಲ್ಲಿ ನಡೆದಿದೆ.

    ಸರ್ಜಾಪುರ ನಿವಾಸಿ ವೆಂಕಟೇಶ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಬುಧವಾರದಿಂದ ವೆಂಕಟೇಶ್ ನಾಪತ್ತೆಯಾಗಿದ್ದ. ಬುಧವಾರ ಸಂಜೆ 5 ಗಂಟೆಗೆ ಮನೆಯವರು ಫೋನ್ ಮಾಡಿದಾಗ ವೆಂಕಟೇಶ್, ನಾನು ಸರ್ಜಾಪುರ ಕೆರೆ ಪಕ್ಕ ಇದ್ದೇನೆ. ಇನ್ನೆರಡು ಗಂಟೆಯಲ್ಲಿ ಮನೆಗೆ ವಾಪಸ್ ಬರುತ್ತೇನೆ ಎಂದು ಹೇಳಿದ್ದನಂತೆ. ಆದರೆ 2 ತಾಸು ಕಳೆದರೂ ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ವೆಂಕಟೇಶ್ ತಂದೆ, ತಾಯಿ ಹಾಗೂ ತಮ್ಮ ಕೆರೆ ಬಳಿ ಬಂದಿದ್ದಾರೆ. ಈ ವೇಳೆ ಹುಡುಕಾಟ ನಡೆಸುತ್ತಿದ್ದಾಗ ವೆಂಕಟೇಶ್ ಚಪ್ಪಲಿ ಕೆರೆಯಲ್ಲಿ ತೇಲುತ್ತಿರುವುದು ಗಮನಕ್ಕೆ ಬಂದಿದೆ. ನಂತರ ಪೋಷಕರು ಸರ್ಜಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈತ 6 ತಿಂಗಳ ಹಿಂದಷ್ಟೇ ಮದುವೆಯಾಗಿರೋ ಯುವತಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದ. ಆದರೆ ಆ ಯುವತಿ ಈತನ ಪ್ರೀತಿಗೆ ನೋ ಅಂದಿದ್ದಳು. ಇದರಿಂದ ಆತ ತುಂಬಾ ಮನನೊಂದಿದ್ದ. ಹೀಗಾಗಿ ಆತ ಈ ಕೃತ್ಯವೆಸಗಿರಬಹುದು ಎಂದು ವೆಂಕಟೇಶ್ ಸ್ನೇಹಿತರು ಮಾಹಿತಿ ನೀಡಿದ್ದಾರೆ.

    ನಿನ್ನೆ ದಿನಪೂರ್ತಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಆದರೆ ಇಂದು ಬೆಳಗ್ಗೆ 11.30ರ ವೇಳೆಗೆ ಮೃತದೇಹ ಕೆರೆಯಲ್ಲಿ ತೇಲಿ ಬಂದಿದೆ. ಈ ಕೆರೆ 15 ರಿಂದ 20 ಅಡಿ ಆಳವಿದೆ. ಪೊಲೀಸರು ಸದ್ಯ ವೆಂಕಟೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಪುತ್ರನನ್ನು ಕಳೆದುಕೊಂಡ ವೆಂಕಟೇಶ್ ಪೋಷಕರ ಆಕ್ರಂದನ ಸ್ಥಳದಲ್ಲಿ ಮುಗಿಲುಮುಟ್ಟಿತ್ತು. ಪ್ರಕರಣ ದಾಖಲಿಸಿರುವ ಸರ್ಜಾಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.