Tag: Bangalore

  • ಪಕ್ಷಾಂತರಿಗಳಿಗೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ ಮಲ್ಲಿಕಾರ್ಜುನ ಖರ್ಗೆ!

    ಪಕ್ಷಾಂತರಿಗಳಿಗೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ ಮಲ್ಲಿಕಾರ್ಜುನ ಖರ್ಗೆ!

    ಬೆಂಗಳೂರು: ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಒಪ್ಪಿಗೆ ಇರುವ ಯಾರು ಬೇಕಾದರೂ ಪಕ್ಷಕ್ಕೆ ಸೇರಬಹುದು, ಆದರೇ ಪಕ್ಷಕ್ಕ ಸೇರ್ಪಡೆ ಮಾಡಿಕೊಳ್ಳುವ ಅಂತಿಮ ನಿರ್ಧಾರದಲ್ಲಿ ಹೈಕಮಾಂಡ್ ಅನುಮತಿ ಕಡ್ಡಾಯ ಎಂದು ಲೋಕಸಭಾ ಸಂಸದೀಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

    ಮುಂದಿನ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಪಕ್ಷದಿಂದ ಹಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು. ಆದರೆ ಪಕ್ಷಕ್ಕೆ ಬಂದ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

    ಕಾಂಗ್ರೆಸ್ ಮುಖಂಡರು ಬಿಜೆಪಿ ಗೆ ಹೋಗ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಹೇಳ್ತಾರೆ. ಯಾರು, ಯಾಕೆ, ಯಾವಾಗ ಹೋಗ್ತಾರೆ ಅನ್ನೋದನ್ನ ನೋಡೋಣ ಎಂದು ಹೇಳಿದರು.

    ಇದೇ ವೇಳೆ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಖರ್ಗೆ, ಕೇದಾರನಾಥ್ ಪ್ರಕೃತಿ ವಿಕೋಪದ ವೇಳೆ ಅಂದಿನ ಯುಪಿಎ ಕೇಂದ್ರ ಸರ್ಕಾರ ಏನು ಮಾಡಲಿಲ್ಲ ಅಂತಾ ಪ್ರಧಾನಿ ಮೋದಿ ಹೇಳಿರೋದು ಸರಿಯಲ್ಲ. ಅಂದು ನಾನು ರೈಲ್ವೇ ಮಂತ್ರಿಯಾಗಿದ್ದೆ. ಮೋದಿ ಗುಜರಾತ್ ಸಿಎಂ ಆಗಿ ಗುಜರಾತ್ ಜನತೆಗೆ ಅಲ್ಲಿ ತೊಂದರೆಯಾಗಿದೆ ಅಂದಾಗ ನಾನೇ ಎರಡು ರೈಲು ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟೆ ಅಂತ ಸ್ಪಷ್ಟಪಡಿಸಿದ್ರು.

    ಹಿಮಾಚಲ ಪ್ರದೇಶ ರಾಜ್ಯದ ಚುನಾವಣೆ ಘೋಷಣೆ ಮಾಡುತ್ತೀರಿ. ಆದ್ರೆ ಗುಜರಾತ್ ಚುನಾವಣೆ ದಿನಾಂಕವನ್ನು ಮಾತ್ರ ಘೋಷಣೆ ಮಾಡಲ್ಲ ಯಾಕೆ ಅಂತ ಪ್ರಶ್ನೆ ಮಾಡಿದ ಖರ್ಗೆ ಮೋದಿ ಕೇವಲ ಸುಳ್ಳು ಹೇಳುತ್ತಿದ್ದಾರೆ. ಸಾಮಾನ್ಯ ಜನರಿಗೆ ತೊಂದರೆ ಕೊಟ್ಟಿದ್ದಾಯ್ತು. ಸಂಸತ್ತಿನಲ್ಲಿ ಜಿಎಸ್‍ಟಿ ಕಡಿಮೆ ಮಾಡಲಿಕ್ಕೆ ಒತ್ತಾಯ ಮಾಡಿದರೂ ಮಾಡಲಿಲ್ಲ. ಈಗ ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಜಿಎಸ್‍ಟಿ ಕಡಿಮೆ ಮಾಡಲು ಮೋದಿ ಹೊರಟಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು.

     

  • ಬೆಂಗ್ಳೂರು ನಿವಾಸಿಗಳೇ ಎಚ್ಚರ- ಮನೆ ಮುಂದೇ ವಾಹನಗಳನ್ನು ನಿಲ್ಲಿಸೋ ಮುನ್ನ ಈ ಸುದ್ದಿ ಓದಿ

    ಬೆಂಗ್ಳೂರು ನಿವಾಸಿಗಳೇ ಎಚ್ಚರ- ಮನೆ ಮುಂದೇ ವಾಹನಗಳನ್ನು ನಿಲ್ಲಿಸೋ ಮುನ್ನ ಈ ಸುದ್ದಿ ಓದಿ

    ಬೆಂಗಳೂರು: ಬೆಂಗಳೂರು ನಿವಾಸಿಗಳೇ ನಿಮ್ಮ ಮನೆ ಮುಂದೇ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಮುನ್ನ ಒಮ್ಮೆ ಯೋಚಿಸಿ ಯಾಕೆ? ಅಂತೀರಾ ಈ ಸುದ್ದಿ ಓದಿ.

    ಹೌದು. ನಗರದಲ್ಲಿ ವಾಹನ ಚಾಲಕನೊಬ್ಬ ಉದ್ದೇಶ ಪೂರಕವಾಗಿ ತನ್ನ ಕಾರನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಗಿರಿನಗರದ ನಾಗೇಂದ್ರ ಬ್ಲಾಕ್‍ನಲ್ಲಿ ಈ ಘಟನೆ ನಡೆದಿದ್ದು, ಚಾಲಕನ ಈ ಹುಚ್ಚುತನಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

    ಕಳೆದ ಶನಿವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಾಲಕನ ಹುಚ್ಚುತನದಿಂದ ಮನೆ ಮುಂದೆ ನಿಂತಿದ್ದ ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು, ಸ್ಥಳೀಯ ನಿವಾಸಿ ತಿಮ್ಮಪ್ಪ ಎಂಬವರ ಹೋಂಡಾ ಆಕ್ಟೀವಾ ಬೈಕನ್ನು ಸುಮಾರು 500 ಮೀಟರ್ ದೂರವರೆಗೆ ಎಳೆದುಕೊಂಡು ಹೋಗಲಾಗಿದೆ. ಕಾರ್ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ನೋಡಿದ ಬಳಿಕ ಸ್ಥಳೀಯರಲ್ಲಿ ಆತಂಕ ಮೂಡಿದೆ.

    ದುಷ್ಕರ್ಮಿಯು ಉದ್ದೇಶ ಪೂರ್ವಕವಾಗಿಯೇ ಈ ಕೃತ್ಯವನ್ನು ನಡೆಸಿದ್ದು, ಸ್ಥಳೀಯರು ಅಪಘಾತದ ಶಬ್ಧ ಕೇಳಿ ಮನೆಯಿಂದ ಹೊರಬರುತ್ತಿದಂತೆ ಕಾರು ಸಮೇತ ವ್ಯಕ್ತಿ ಪರಾರಿಯಾಗಿದ್ದಾನೆ. ಘಟನೆಯ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

     

    https://www.youtube.com/watch?v=N5I4ZAt_v5g

     

  • 62ನೇ ರಾಜ್ಯೋತ್ಸವ ಪ್ರಶಸ್ತಿಗೆ 1200 ಅರ್ಜಿ ಸಲ್ಲಿಕೆ

    62ನೇ ರಾಜ್ಯೋತ್ಸವ ಪ್ರಶಸ್ತಿಗೆ 1200 ಅರ್ಜಿ ಸಲ್ಲಿಕೆ

    ಬೆಂಗಳೂರು: 62ನೇ ರಾಜ್ಯೋತ್ಸವ ಪ್ರಶಸ್ತಿಗೆ ಸುಮಾರು 1200 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.

    ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಲು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಹಲವಾರು ಸಾಧಕರಿಂದ ಸುಮಾರು 1200 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.

    ನವೆಂಬರ್ 1 ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಬಾರಿ 62 ನೇ ವರ್ಷದ ರಾಜ್ಯೋತ್ಸವ ಆಚರಣೆ ಇರುವುದರಿಂದ 62 ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತೀರ್ಮಾನಿಸಿದೆ.

    ಪ್ರಶಸ್ತಿ ಪುರಸ್ಕೃತರನ್ನ ಆಯ್ಕೆ ಮಾಡಲು ಸಚಿವೆ ಉಮಾಶ್ರೀ ಅವರ ಅಧ್ಯಕ್ಷತೆಯಲ್ಲಿ 13 ತಜ್ಞರ ಸಮಿತಿ ನೇಮಕ ಮಾಡಲಾಗಿದೆ. ಸಮಿತಿಯ ಮುಂದೆ ಪ್ರಶಸ್ತಿಗಾಗಿ 1200 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು ಅರ್ಜಿಗಳನ್ನ ನೋಡಿ ಪ್ರಶಸ್ತಿ ಆಯ್ಕೆ ಸಮಿತಿಯವರು ಸುಸ್ತಾಗಿದ್ದಾರೆ.

    ಪ್ರತಿ ವರ್ಷದಂತೆ ಈ ವರ್ಷವು ನವೆಂಬರ್ 1 ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕದ ಮುಖ್ಯ ಮಂತ್ರಿಗಳು ಈ ಪ್ರಶಸ್ತಿಯನ್ನು ನೀಡುತ್ತಾರೆ. ರ್ಯಾಜೋತ್ಸವ ಪ್ರಶಸ್ತಿಗೆ ಭಾಜನರಾದವರಿಗೆ 20 ಗ್ರಾಂ ಚಿನ್ನದ ಪದಕದ ಜೊತೆಗೆ 1 ಲಕ್ಷ ರೂಪಾಯಿಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ.

    ಸಮಿತಿಯ ಸದಸ್ಯರು: 2017ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರದ ಗಣ್ಯರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಲಹಾ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಉಮಾಶ್ರೀ ಹೇಳಿದ್ದಾರೆ. ಈ ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಅಧ್ಯಕ್ಷರು, ಡಾ.ಲೀಲಾ ಅಪ್ಪಾಜಿ, ಡಾ.ಎಲ್.ಹನುಮಂತಯ್ಯ, ಪ.ಸ.ಕುಮಾರ್, ಪ್ರೋ. ಸಿಕೆ ನಾವಲಗಿ, ಕೆ.ಮುನಿಯಪ್ಪ, ಕೆ.ರಾಮಮೂರ್ತಿರಾವ್, ಶ್ರೀಮತಿ ಸುಭದ್ರಮ್ಮ ಮನ್ಸೂರ್, ಪ್ರೋ.ಕೆ.ಇ.ರಾಧಾಕೃಷ್ಣ, ಪ್ರೋ.ಜಿಕೆ.ವೀರೇಶ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರು, ಶ್ರೀ ನರಸಿಂಹಲು ವಡಿವಟ್ಟಿ, ಶ್ರೀ ಮುರುಳಿ ಕಡೇಕರ್ ಹಾಗೂ ಶ್ರೀ ಬೋಳುವಾರು ಮಹಮ್ಮದ್ ಕುಂಞ ಇವರುಗಳನ್ನೊಳಗೊಂಡು ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

  • ಮಹಾರಾಷ್ಟ್ರದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಮ್ಮತಿ, ಕರ್ನಾಟಕದಲ್ಲಿ ಯಾಕಿಲ್ಲ – ಧಾರ್ಮಿಕ ಮುಖಂಡರ ಪ್ರಶ್ನೆ

    ಮಹಾರಾಷ್ಟ್ರದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಮ್ಮತಿ, ಕರ್ನಾಟಕದಲ್ಲಿ ಯಾಕಿಲ್ಲ – ಧಾರ್ಮಿಕ ಮುಖಂಡರ ಪ್ರಶ್ನೆ

    ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ವಿವಾದಕ್ಕೆ ಈಗ ತಿರುವು ಸಿಗುತ್ತದೆ. ಮಹಾರಾಷ್ಟ್ರ ಕ್ಯಾಬಿನೆಟ್‍ನಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಮ್ಮತಿ ಇದೆ. ಆದರೆ ಕರ್ನಾಟಕದಲ್ಲಿ ಯಾಕಿಲ್ಲ ಎಂದು ಧಾರ್ಮಿಕ ಮುಖಂಡರು ಪ್ರಶ್ನೆ ಮಾಡುತ್ತಿದ್ದಾರೆ.

    ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಅಂದಿನ ಕಾಂಗ್ರೆಸ್ ಸರ್ಕಾರ 2014 ರಲ್ಲೇ ಒಪ್ಪಿಗೆ ಸೂಚಿಸಿದೆ. ಒಪ್ಪಿಗೆ ಸೂಚಿಸುವ ಮುಂಚೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವನ್ನು ಚರ್ಚೆ ಮಾಡುವುದಕ್ಕೆ ಒಂದು ಕ್ಯಾಬಿನೆಟ್ ಸಮಿತಿ ರಚನೆ ಮಾಡಿದ್ದು, ನಂತರ ಗ್ರೀನ್ ಸಿಗ್ನಲ್ ನೀಡಿತ್ತಂತೆ. ಅಂದಿನ ಮಹಾರಾಷ್ಟ್ರದ ಸರ್ಕಾರದ ಗ್ರೀನ್ ಸಿಗ್ನಲ್ ಆಧಾರವಾಗಿಟ್ಟುಕೊಂಡು ಕರ್ನಾಟಕದಲ್ಲೂ ಪ್ರತ್ಯೇಕ ಧರ್ಮ ಮಾಡಬೇಕು ಎಂದು ಲಿಂಗಾಯತ ಸಮುದಾಯದ ಮುಖಂಡರು ಹಠಕ್ಕೆ ಬಿದ್ದಿದ್ದಾರೆ.

    ಇನ್ನು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ 10 ಮಂದಿ ತಜ್ಞರ ಸಮಿತಿ ರಚನೆಗೆ ಲಿಂಗಾಯಿತ ಮುಖಂಡರು ಪುನಃ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಪದೇ ಪದೇ ಸಮಿತಿಗಳ ರಚನೆಯಿಂದ ಯಾವುದೇ ಅಂತಿಮ ನಿರ್ಧಾರ ಹೊರಬರುವುದಿಲ್ಲ. ಆದ್ದರಿಂದ ಅಂತಿಮ ನಿರ್ಧಾರವನ್ನು ಸರ್ಕಾರದ ಮುಂದೆ ಇಡಬೇಕು ಎಂದು ಸಮುದಾಯಗಳ ಮುಖಂಡರು ವಾದಿಸಿದ್ದಾರೆ.

    ಲಿಂಗಾಯುತ ಧರ್ಮದ ಮುಖಂಡರು ಈ ಹೊಸ ದಾಖಲೆಯನ್ನು ಹುಡುಕಿ ಎಲ್ಲರ ಮುಂದೆ ಇಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಉಪಪಂಗಡಗಳನ್ನು ಒಟ್ಟಾಗಿ ಸೇರಿಸಿ ಕ್ಯಾಬಿನೆಟ್‍ನಲ್ಲಿ ಒಂದು ನೋಟ್ ರೆಡಿ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ಯಾಕೆ ಈ ರೀತಿ ಮಾಡುತ್ತಿಲ್ಲ ಎಂದು ಇದರ ಮೂಲಕ ಹೋರಾಟ ಮಾಡಲು ಮುಂದಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ವೀರಶೈವ ಲಿಂಗಾಯತ ಹೆಸರಿನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೋರ್ಟ್ ಎರಡು ಬಾರಿ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಲಿಂಗಾಯತ ಧರ್ಮ ಅಂತ ಹೋಗುವುದು ಉತ್ತಮ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ.

     

  • ಹೊರರಾಜ್ಯದಿಂದ ಬೆಂಗ್ಳೂರಿಗೆ ಬಂದು ಎಟಿಎಂಗೆ ಕನ್ನ ಹಾಕೋ ಖದೀಮರು- 2 ಕೋಟಿ ರೂ. ಅಧಿಕ ಹಣ ಲೂಟಿ

    ಹೊರರಾಜ್ಯದಿಂದ ಬೆಂಗ್ಳೂರಿಗೆ ಬಂದು ಎಟಿಎಂಗೆ ಕನ್ನ ಹಾಕೋ ಖದೀಮರು- 2 ಕೋಟಿ ರೂ. ಅಧಿಕ ಹಣ ಲೂಟಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಟಿಎಂ ದರೋಡೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹೊರ ರಾಜ್ಯಗಳಿಂದ ನಗರಕ್ಕೆ ಬಂದು ಬಿಡುಬಿಟ್ಟಿರುವ ಖತರ್ನಾಕ್ ಕಳ್ಳರ ಗ್ಯಾಂಗ್ ರಾತ್ರಿಯಾಗುತ್ತಿದ್ದಂತೆ ಎಟಿಎಂ ಮಷೀನ್‍ಗಳನ್ನು ದರೋಡೆ ಮಾಡುತ್ತಿದ್ದಾರೆ. ಈ ಕಳ್ಳರ ಕೈಚಳಕದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ನೋಡಿ ಬ್ಯಾಂಕ್ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ.

    ತಡರಾತ್ರಿ ಇಬ್ಬರು ಬಂದು ಕ್ಷಣ ಮಾತ್ರದಲ್ಲಿ ಎಟಿಎಂ ಹಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಖದೀಮರ ಕೈಚಳಕ ನೋಡಿ ಬ್ಯಾಂಕ್ ಸಿಬ್ಬಂದಿಯೇ ಶಾಕ್ ಗೆ ಒಳಗಾಗಿದ್ದಾರೆ. ಎಟಿಎಂನ ನಕಲಿ ಕೀ ಬಳಸಿ ಕೈಚಳಕ ಆರಂಭಿಸೋ ಕಳ್ಳರು ಎಟಿಎಂ ಆಫ್ ಮಾಡಿದ ನಂತರ ಹಣ ಕದ್ದಿದ್ದಾರೆ.

    ಮಲ್ಲೇಶ್ವರಂನ ಆಕ್ಸಿಸ್ ಬ್ಯಾಂಕ್‍ನಲ್ಲಿ ಕಳ್ಳರು ದರೋಡೆ ಮಾಡುತ್ತಿರುವ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿದೆ. ನಗರದ ಹಲವೆಡೆ ಈಗಾಗಲೇ ತಮ್ಮ ಕೈಚಳಕವನ್ನು ತೋರಿಸಿರುವ ಈ ಕಳ್ಳರು, ನಕಲಿ ಕೀಗಳನ್ನು ಬಳಸಿ ಇದುವರೆಗೂ ಸುಮಾರು 2 ಕೋಟಿ ರೂ.ಗಿಂತಲೂ ಅಧಿಕ ಹಣವನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ.

    ಇದುವರೆಗೂ ನಗರದ ನೃಪತುಂಗ ರಸ್ತೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ, ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಟಿಎಂ ಮತ್ತು ಮಂತ್ರಿಮಾಲ್ ಬಳಿಯ ಕಾರ್ಪೊರೇಷನ್ ಬ್ಯಾಂಕ್ ಎಟಿಎಂಗೆ ಕಳ್ಳರು ಕನ್ನ ಹಾಕಿದ್ದಾರೆ.

    ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಟಿಎಂ ದರೋಡೆ ವೇಳೆ ಉತ್ತರಪ್ರದೇಶ ಮೂಲದ ಆಯುಷ್ ಯಾದವ್ ಎಂಬ ಕಳ್ಳ ಸಿಕ್ಕಿಬಿದ್ದಿದ್ದು, ಮತ್ತೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಸೆರೆಸಿಕ್ಕ ಕಳ್ಳ ಪೊಲೀಸ್ ವಿಚಾರಣೆಯಲ್ಲಿ ತನ್ನ ಗ್ಯಾಂಗ್ ಯಶವಂತಪುರ ಲಾಡ್ಜ್ ವೊಂದರಲ್ಲಿ ತಂಗಿರುವ ಮಾಹಿತಿಯನ್ನು ನೀಡಿದ್ದ. ಆದರೆ ಪೊಲೀಸರು ಸ್ಥಳಕ್ಕೆ ತೆರಳುವ ವೇಳೆಗೆ ಎಲ್ಲರೂ ಪರಾರಿಯಾಗಿದ್ದಾರೆ.

    ಎಟಿಎಂ ಮಷೀನ್ ಆಫ್ ಮಾಡಿದ ಮೇಲೆ ಕಳ್ಳರು ತಮ್ಮ ಕೈಚಳಕವನ್ನು ತೋರಿಸುತ್ತಿದ್ದರು ಎಂದು ತಿಳಿದುಬಂದಿದೆ. ಎಟಿಎಂನಲ್ಲಿ ಹಣ ವ್ಯತ್ಯಾಸವಾದಾಗ ಎಟಿಎಂಗೆ ಹಣ ತುಂಬುವ ಏಜಿನ್ಸಿಗಳು ಠಾಣೆಗಳಿಗೆ ದೂರು ನೀಡಿದ ನಂತರ ಈ ಪ್ರಕರಣಗಳು ಬೆಳಕಿಗೆ ಬಂದಿದೆ. ಕಳ್ಳರ ಚಲನವಲನ, ಚಹರೆ ಸಿಸಿಟಿಯಲ್ಲಿ ಸೆರೆಯಾಗಿದ್ದು, ಪೊಲೀಸರ ಕಾರ್ಯಾಚರಣೆಗೆ ಸಹಾಯಕವಾಗಿದೆ.

    ಪ್ರಸ್ತುತ ನಗರದಲ್ಲಿ ನಡೆದಿರುವ ಎಟಿಎಂ ಕಳ್ಳತನಗಳ ಪ್ರಕರಣಗಳು ಬಗ್ಗೆ ರಾಜಾಜಿನಗರ, ಶ್ರೀರಾಂಪುರ, ಮಲೇಶ್ವರಂ, ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಂತರ್ ರಾಜ್ಯ ಕಳ್ಳರ ಬೆನ್ನುಬಿದಿದ್ದಾರೆ.

  • ಆಟೋಗೆ ಬೈಕ್ ಟಚ್ ಆಗಿದ್ದಕ್ಕೆ ಜಗಳ- ವ್ಯಕ್ತಿಯನ್ನ ಕೊಚ್ಚಿ ಕೊಂದೇಬಿಟ್ರು

    ಆಟೋಗೆ ಬೈಕ್ ಟಚ್ ಆಗಿದ್ದಕ್ಕೆ ಜಗಳ- ವ್ಯಕ್ತಿಯನ್ನ ಕೊಚ್ಚಿ ಕೊಂದೇಬಿಟ್ರು

    – ದೀಪಾವಳಿ ಅಮಾವಾಸ್ಯೆಗೆ ಬೆಂಗ್ಳೂರಲ್ಲಿ 7 ಸಾವು
    – ಪಟಾಕಿ ಸಿಡಿತಕ್ಕೆ 30ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಕೆಜಿ ಹಳ್ಳಿ ನಿವಾಸಿ ಸೈಯದ್ ಯೂಸುಫ್‍ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಗುರುವಾರ ರಾತ್ರಿ ಯೂಸಫ್ ಕೆಲಸ ಮುಗಿಸಿ ಮನೆಗೆ ಹೋಗಿದ್ದಾರೆ. ಮತ್ತೆ ಟೀ ಕುಡಿಯಲೆಂದು ಮನೆಯಿಂದ ಆಚೆ ಬಂದಾಗ ಅವರ ಬೈಕ್ ರೌಡಿಶೀಟರ್ ಚಪ್ಡಿ ನದೀಮ್ ಆಟೋಗೆ ಟಚ್ ಆಗಿದೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದ್ರಿಂದ ಕೋಪಗೊಂಡ ನದೀಮ್ ಮತ್ತೆ ತನ್ನ ಗ್ಯಾಂಗ್ ಜೊತೆ ಬಂದು ಮಚ್ಚು ಲಾಂಗ್‍ಗಳಿಂದ ಯೂಸುಫ್ ಮೇಲೆ ಬರ್ಬರವಾಗಿ ಹಲ್ಲೆ ಮಾಡಿದ್ದಾರೆ. ಎಷ್ಟೇ ಅಂಗಲಾಚಿದ್ರು ಬಿಡದೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ.

    ಗಂಭೀರವಾಗಿ ಗಾಯಗೊಂಡಿದ್ದ ಯೂಸುಫ್ ಅವರನ್ನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಕೆಜಿ ಹಳ್ಳಿ ಪೊಲೀಸರು ರೌಡಿಶೀಟರ್ ನದೀಮ್ ಹಾಗೂ ಆತನ ಗ್ಯಾಂಗ್‍ನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

    ಯೂಸುಫ್ ಕೊಲೆ ಸೇರಿದಂತೆ ದೀಪಾವಳಿ ಅಮವಾಸ್ಯೆಗೆ ಗುರುವಾರ ಒಂದೇ ದಿನಕ್ಕೆ ಬೆಂಗಳೂರಿನಲ್ಲಿ 7ಕ್ಕೂ ಹೆಚ್ಚು ಸಾವು ನೋವು ಸಂಭವಿಸಿದೆ. ನೆಲಮಂಗಲದಲ್ಲಿ ಭೀಕರ ಅಪಘಾತಕ್ಕೆ ಐವರು ಬಲಿಯಾಗಿದ್ದಾರೆ. ಉತ್ನಳ್ಳಿಯಲ್ಲಿ ಯುವಕನ ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ಬಾಲಕಿ ಸಾವನ್ನಪ್ಪಿದ್ದಾಳೆ.

    ಶಿವಾಜಿನಗರ ರಸ್ತೆಯಲ್ಲಿ ಹೋಗುತ್ತಿದ್ದ ಯುವಕನಿಗೆ ಯಾರೋ ಹಚ್ಚಿದ್ದ ಪಟಾಕಿ ಸಿಡಿದು ಎಡಗಣ್ಣಿಗೆ ಗಾಯವಾಗಿದೆ. ಕೆಂಗೇರಿ ಜ್ಞಾನಭಾರತಿ ವಾರ್ಡ್ ನಿವಾಸಿ 9 ವರ್ಷದ ಸಮರ್ಥ್ ಮರಳಿನಲ್ಲಿ ಲಕ್ಷ್ಮಿ ಪಟಾಕಿ ಇಟ್ಟು ಸುಡುತ್ತಿದ್ದ. ಈ ವೇಳೆ ಪಟಾಕಿ ಸಿಡಿದು ಮರಳು ಮುಖಕ್ಕೆ ರಾಚಿ ಮುಖದ ತುಂಬಾ ಗಾಯಗಳಾಗಿವೆ. ಸದ್ಯ ಇಬ್ಬರಿಗೂ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ಮೂವರು, ಗುರುವಾರ 15 ಮಕ್ಕಳು ಅಡ್ಮಿಟ್ ಆಗಿದ್ದರು. ರಾತ್ರಿ ಮತ್ತಿಬ್ಬರು ಆಸ್ಪತ್ರೆ ಸೇರಿದ್ದಾರೆ. ಇನ್ನು ರಾಜ್ಯಾದ್ಯಂತ ಪಟಾಕಿ ಸಿಡಿದು 30ಕ್ಕೂ ಹೆಚ್ಚು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

  • ವಿಧಾನಸೌಧ ವಜ್ರಮಹೋತ್ಸವ: ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಬೇಕಂತೆ 8 ತಿಂಗಳ ಟೈಂ

    ವಿಧಾನಸೌಧ ವಜ್ರಮಹೋತ್ಸವ: ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಬೇಕಂತೆ 8 ತಿಂಗಳ ಟೈಂ

    ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವಕ್ಕೆ ಭರ್ಜರಿಯಾಗಿಯೇ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವಜ್ರಮಹೋತ್ಸವಕ್ಕೆ ಸಾಕ್ಷ್ಯಚಿತ್ರಗಳ ಸಿದ್ಧತೆಯನ್ನು ಕೂಡ ಪ್ರಾರಂಭಿಸಲಾಗಿದೆ.

    ಇದೇ ತಿಂಗಳು 25 ಮತ್ತು 26 ನೇ ದಿನಾಂಕದಂದು ವಿಧಾನಸೌಧದ ವಜ್ರಮಹೋತ್ಸವ ನಡೆಯಲಿದೆ. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ. ಆದರೆ ಈ ವಜ್ರಮಹೋತ್ಸಕ್ಕೆ ಸಾಕ್ಷ್ಯಚಿತ್ರಗಳು ಸಿದ್ಧವಾಗುತ್ತಿದ್ದು, ಅದಕ್ಕೆ ಇನ್ನು 8 ತಿಂಗಳು ಸಮಯ ಬೇಕಾಗಿದೆ.

    ಇದು ಕೇವಲ ಸಾಕ್ಷ್ಯಚಿತ್ರವಲ್ಲ, ನಮ್ಮ ಇತಿಹಾಸದ ಮರುಸೃಷ್ಟಿ ಎಂದು ನಿರ್ದೇಶಕರಾದ ಟಿ.ಎನ್.ಸೀತಾರಾಮ್ ಹೇಳಿದ್ದಾರೆ. ಅದಕ್ಕಾಗಿ 1950 ರಿಂದ ಇಲ್ಲಿಯ ತನಕ ವಿಧಾನಸಭೆ ನಡೆದು ಬಂದಿರುವ ಹಾದಿಯನ್ನು ಮರುಸೃಷ್ಟಿ ಮಾಡಲಾಗುತ್ತದೆ. ಇದಕ್ಕಾಗಿ ಇಡೀ ವಿಧಾನಸಭೆಯ ಮಾದರಿ ಸೆಟ್ ಹಾಕಿ, ಮರುಸೃಷ್ಟಿ ಮಾಡಲಾಗುತ್ತದೆ. ಕರ್ನಾಟಕದ ಔನ್ಯತೆಗಾಗಿ ತೆಗೆದುಕೊಂಡಿರುವ ಇತಿಹಾಸ ಪ್ರಸಿದ್ಧ ತೀರ್ಮಾನಗಳು ಕೂಡ ಇದರಲ್ಲಿ ಅಡಕವಾಗಿರುತ್ತವೆ. ಪ್ರಮುಖವಾಗಿ ನಾಲ್ಕು ಗಂಟೆಗಳ ಕಾಲದ ಈ ಸಾಕ್ಷ್ಯಚಿತ್ರಕ್ಕೆ ಸಂಗೀತ ಬ್ರಹ್ಮ ಹಂಸಲೇಖ ಅವರು ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನಲಾಗಿದೆ.

    ಈಗ ನಡೆಯುವ ಅರ್ಧ ಗಂಟೆಯ ಕಾರ್ಯಕ್ರಮ ಬರೀ ಸ್ಯಾಂಪಲ್ ಎಂದು ಹೇಳಲಾಗಿದೆ.

  • ಸಾವು ಗೆದ್ದು ಬಂದಿದ್ದ ಸಂಜನಾ ಬದುಕುಳಿಯಲಿಲ್ಲ

    ಸಾವು ಗೆದ್ದು ಬಂದಿದ್ದ ಸಂಜನಾ ಬದುಕುಳಿಯಲಿಲ್ಲ

    ಬೆಂಗಳೂರು: ಈಜೀಪುರ ಕಟ್ಟಡ ಕುಸಿತ ದುರಂತದಲ್ಲಿ ಪವಾಡ ಸದೃಶ್ಯವಾಗಿ ಬದುಕುಳಿದಿದ್ದ ಬಾಲಕಿ ಸಂಜನಾ ಮೃತ ಪಟ್ಟಿದ್ದಾಳೆ.

    ಅಕ್ಟೋಬರ್ 16 ರಂದು ನಡೆದಿದ್ದ ಕಟ್ಟಡ ಕುಸಿತ ದುರಂತದಲ್ಲಿ ಕಟ್ಟಡದ ಅವಷೇಶಗಳ ಅಡಿಯಲ್ಲಿ ಸಿಲುಕಿದ್ದ ಬಾಲಕಿ ಸಂಜನಾರನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೂರು ದಿನಗಳ ನಿರಂತರ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಂಜನಾ ಮೃತಪಟ್ಟಿದ್ದಾಳೆ.

    ಸಂಜನಾ ಸಾವಿಗೆ ಪ್ರಮುಖ ಕಾರಣ ಬಾಲಕಿಯ ದೇಹ ಶೇ. 60 ರಷ್ಟು ಸುಟ್ಟು ಹೋಗಿತ್ತು. ಮೊದಲ ಎರಡು ದಿನಗಳ ಅವಧಿಯಲ್ಲಿ ಸಂಜನಾ ದೇಹ ಚಿಕಿತ್ಸೆಗೆ ಸ್ಪಂದಿಸಿದರು ನಂತರ ಬಾಲಕಿಯ ದೇಹ ಯಾವುದೇ ರೀತಿ ಚೇತರಿಕೆ ಕಾಣಲಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

    ಏನಾಗಿತ್ತು?: ಅಕ್ಟೋಬರ್ 16ರ ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 2 ಅಂತಸ್ತಿನ ಮನೆ ಕುಸಿದು ಏಳು ಜನರು ಮೃತಪಟ್ಟಿದ್ದರು. ಗ್ರೀನ್‍ವ್ಯೂ ಹೋಟೆಲ್ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ಬೆಳಗ್ಗೆ 7.10ಕ್ಕೆ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಸುಮಾರು 7.15ಕ್ಕೆ ಕಟ್ಟಡ ಕುಸಿದಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಅಗ್ನಿಶಾಮಕ ದಳ ಸಿಬ್ಬಂದಿಯ ಮೇಲೂ ಗೋಡೆ ಕುಸಿದಿದ್ದು ಸುರೇಶ್, ಸುಬಾನ್, ಸೋಮಶೇಖರ್ ಎಂಬವರಿಗೆ ಗಾಯಗೊಂಡಿದ್ದರು. ಸುಮಾರು 20 ವರ್ಷ ಹಳೆಯ ಕಟ್ಟಡ ಇದಾಗಿದ್ದು, ಬ್ಯಾಚುಲರ್ಸ್ ಸುಮಾರು 5-6 ವರ್ಷದಿಂದ ಈ ಕಟ್ಟಡದಲ್ಲಿ ನೆಲೆಸಿದ್ದರು. ಘಟನೆಯಿಂದಾಗಿ ಅಕ್ಕಪಕ್ಕದ ಮನೆಗಳೂ ಕೂಡ ಬಿರುಕುಬಿಟ್ಟಿತ್ತು.

    https://www.youtube.com/watch?v=Ybpd5J__WuM

     

  • ಟಿಪ್ಪು ಜಯಂತಿ ವಿರೋಧಿಸಿ ಹೋರಾಟಕ್ಕೆ ಬಿಜೆಪಿ ಪ್ಲಾನ್

    ಟಿಪ್ಪು ಜಯಂತಿ ವಿರೋಧಿಸಿ ಹೋರಾಟಕ್ಕೆ ಬಿಜೆಪಿ ಪ್ಲಾನ್

    ಬೆಂಗಳೂರು: ಈ ಬಾರಿಯೂ ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.

    ಟಿಪ್ಪು ಜಯಂತಿ ವಿರೋಧಿ ಸಮಿತಿ ವೇದಿಕೆಯಲ್ಲಿ ಆಕ್ಟೋಬರ್ 23ರಂದು ಬಿಜೆಪಿ ಮತ್ತು ಸಂಘಪರಿವಾರದ ಸಭೆ ನಡೆಯಲಿದೆ. ಸಂಘ ಪರಿವಾರದ ಮುಖಂಡರು, ಬಿಜೆಪಿ ಸಂಸದರಾದ ಪ್ರತಾಪ್ ಸಿಂಹ, ಶ್ರೀರಾಮುಲು ಸೇರಿದಂತೆ ಹಲವರು ಬೆಂಗಳೂರಿನಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಟಿಪ್ಪು ಜಯಂತಿ ಆಚರಣೆ ವಿರುದ್ಧ ಹೋರಾಟ ನಡೆಸಲು ತೀರ್ಮಾನ ಮಾಡಿದ್ದು, 23ರ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲು ಬಿಜೆಪಿ ಪ್ಲ್ಯಾನ್ ಮಾಡಿದೆ.

    ಕಳೆದ ಬಾರಿ ಮಡಿಕೇರಿಯಲ್ಲಿ ಗಲಾಟೆಯಾಗಿ ಸಂಘ ಪರವಾರದ ಕಾರ್ಯಕರ್ತ ಕುಟ್ಟಪ್ಪ ಸಾವನ್ನಪ್ಪಿದ್ರು. ಆಗ ಟಿಪ್ಪು ಜಯಂತಿಗೆ ಬಿಜೆಪಿ, ಸಂಘ ಪರಿವಾರ ತೀವ್ರ ವಿರೋಧ ವ್ಯಕ್ತಪಡಿಸಿತು. ಅಷ್ಟೇ ಅಲ್ಲ ವಿಧಾನಸೌಧದಲ್ಲಿ ನಡೆದ ಟಿಪ್ಪು ಜಯಂತಿಯಲ್ಲೂ ಗಲಾಟೆಯಾಗಿತ್ತು. ಇನ್ನು ಈ ವರ್ಷವೂ ಸಹ ಟಿಪ್ಪು ಜಯಂತಿ ವಿರೋಧಕ್ಕೆ ಬಿಜೆಪಿ ನಿರ್ಧಾರ ಮಾಡಿದ್ದು, ದೊಡ್ಡ ಮಟ್ಟದ ಹೋರಾಟಕ್ಕೆ ಪ್ಯ್ಲಾನ್ ಮಾಡಿದೆ.

  • ಇದೇ ಕೊನೆಯ ಚುನಾವಣೆ ಎಂದ ಪರಮೇಶ್ವರ್- ರಾಜಕೀಯಕ್ಕೆ ಗುಡ್ ಬೈ?

    ಇದೇ ಕೊನೆಯ ಚುನಾವಣೆ ಎಂದ ಪರಮೇಶ್ವರ್- ರಾಜಕೀಯಕ್ಕೆ ಗುಡ್ ಬೈ?

    ಬೆಂಗಳೂರು: ಇದೇ ನನ್ನ ಕೊನೆ ಚುನಾವಣೆ. ಮುಂದಿನ ಚುನಾವಣೆಯಿಂದ ನಾನು ಸ್ಪರ್ಧಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ತಮ್ಮ ಆಪ್ತರಿಗೆ ತಿಳಿಸಿದ್ದಾರೆ ಎಂದು ಹೇಳಲಾಗ್ತಿದೆ.

    ಪರಮೇಶ್ವರ್ ಅವರು ರಾಜಕೀಯಕ್ಕೆ ಗುಡ್ ಬೈ ಹೇಳಿ ಶಿಕ್ಷಣ ಸಂಸ್ಥೆಗಳನ್ನು ನೋಡಿಕೊಳ್ಳಲು ನಿರ್ಧಾರ ತೆಗೆದುಕೊಂಡಿದ್ದಾರೆ. 2018ರಲ್ಲಿ ನಡೆಯುವ ಚುನಾವಣೆಯಲ್ಲಿ ಕೊರಟಗೆರೆಯಿಂದಲೇ ಸ್ಪರ್ಧಿಸಿ, 2023ಕ್ಕೆ ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಲಿದ್ದೇನೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

    ಅತ್ತ ಎಐಸಿಸಿ ಅಧ್ಯಕ್ಷ ಗಾದಿಗೆ ಏರೋ ರಾಹುಲ್ ಗಾಂಧಿ ಕನಸು ದೀಪಾವಳಿ ಬಳಿಕ ನನಸಾಗುವ ಲಕ್ಷಣ ಕಾಣಿಸ್ತಾ ಇದೆ. ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಅಕ್ಟೋಬರ್ 24 ರಂದು ನಡೆಯಲಿದ್ದು, ಇದೇ ಸಭೆಯಲ್ಲಿ ರಾಹುಲ್‍ಗೆ ಪಟ್ಟಾಭಿಷೇಕ ಘೋಷಣೆಯಾಗುವ ಸಾಧ್ಯತೆ ಇದೆ. ಪಕ್ಷದ ಹಲವು ಘಟಕಗಳಿಗೆ ಆಂತರಿಕ ಚುನಾವಣಾ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ಪ್ರಕಿಯೆಗಳನ್ನು ಡಿಸೆಂಬರ್ ಒಳಗಾಗಿ ಮುಗಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ. ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ರಾಹುಲ್‍ಗೆ ಪಕ್ಷದ ಅಧ್ಯಕ್ಷ ಗಾದಿ ನೀಡಿ ಚುನಾವಣೆ ಎದುರಿಸಲು ಕಾಂಗ್ರೆಸ್ ಗಂಭೀರ ಚಿಂತನೆ ನಡೆಸಿದೆ.

    ಶೀಘ್ರದಲ್ಲೇ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದರೆ ಎಂದು ಸ್ವತಃ ಸೋನಿಯಾ ಗಾಂಧಿ ಕಳೆದ ವಾರ ಹೇಳಿದ್ದರು.