Tag: Bangalore

  • ನ.2ರಂದು ನವಕರ್ನಾಟಕ ಪರಿವರ್ತನಾ ರ್ಯಾಲಿಗೆ ಮೋದಿ, ಶಾ ಚಾಲನೆ- ಬಿಜೆಪಿಯವರಿಂದ ಇಂದು ಭೂಮಿ ಪೂಜೆ

    ನ.2ರಂದು ನವಕರ್ನಾಟಕ ಪರಿವರ್ತನಾ ರ್ಯಾಲಿಗೆ ಮೋದಿ, ಶಾ ಚಾಲನೆ- ಬಿಜೆಪಿಯವರಿಂದ ಇಂದು ಭೂಮಿ ಪೂಜೆ

    ಬೆಂಗಳೂರು: ನಗರದಲ್ಲಿ ನವ ಕರ್ನಾಟಕ ಪರಿವರ್ತನಾ ರ್ಯಾಲಿಗೆ ಸಿದ್ಧವಾಗುತ್ತಿರೋ ವೇದಿಕೆಗೆ ಇಂದು ಬಿಜೆಪಿ ನಾಯಕರು ಭೂಮಿ ಪೂಜೆ ನೆರವೇರಿಸಿದ್ದಾರೆ.

    ನವೆಂಬರ್ 2 ರಂದು ನೆಲಮಂಗಲದ ಅಂತರ್ ರಾಷ್ಟ್ರೀಯ ವಸ್ತು ಪ್ರದರ್ಶನ ಆವರಣದಲ್ಲಿ ನವ ಕರ್ನಾಟಕ ಪರಿವರ್ತನಾ ಜಾಥಾಗೆ ಚಾಲನೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಿದ್ಧವಾಗುತ್ತಿರುವ ವೇದಿಕೆಗೆ ಇಂದು ಭೂಮಿ ಪೂಜೆ ನೆರವೇರಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಂದು ಬೆಂಗಳೂರಿಗೆ ಆಗಮಿಸಲಿದ್ದು, ನವಕರ್ನಾಟಕ ಜಾಥಾಗೆ ಚಾಲನೆ ನೀಡಲಿದ್ದಾರೆ.

    ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಮಾತನಾಡಿ, ನವ ಪರಿವರ್ತನಯಾತ್ರೆ ಕಾರ್ಯಕ್ರಮದ ಉದ್ಘಾಟನಾ ಸ್ಥಳದಲ್ಲಿ ಭೂಮಿ ಪೂಜೆ ಮಾಡಿದ್ದೇವೆ. ರಾಜ್ಯದಲ್ಲಿ ಸರ್ಕಾರ ಬದಲಾವಣೆ ಮಾಡುವ ಕಾರ್ಯಕ್ರಮ ಇದು. ಸಿದ್ದರಾಮಯ್ಯ ಸರ್ಕಾರ ಹಲವು ವಿಚಾರಗಳಲ್ಲಿ ವಿಫಲವಾಗಿದೆ. ಕಮಿಷನ್ ಪಡೆಯುವುದರಲ್ಲಿ ನಿಸ್ಸೀಮರಾಗಿದ್ದಾರೆ. ಒಡೆದು ಆಳುವ ರಾಜಕಾರಣ ಮಾಡಲು ಸಿಎಂ ಮುಂದಾಗಿದ್ದಾರೆ. ಹೊಸ ರಾಜ್ಯ ಕಟ್ಟುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯ ಮಾಡಲಿದೆ. ನಾವು ಯಾವುದೇ ಒಂದು ವರ್ಗ, ಜಾತಿ ಪರ ಅಲ್ಲ ಅಂತ ತಿಳಿಸಿದ್ದಾರೆ.

    ಪರಿವರ್ತನೆ ಮಾಡುವುದು ಅಂದ್ರೆ ಪ್ಯಾಚ್ ವರ್ಕ್ ಮಾಡುವ ಕಾರ್ಯಕ್ರಮವಲ್ಲ. ಸಂಪೂರ್ಣ ಬದಲಾವಣೆಯೇ ಇದರ ಉದ್ದೇಶ. ಹೊಸದೊಂದು ರಾಜಕಾರಣದ ಪರ್ವ ನಿರ್ಮಿಸಲು ಮುಂದಾಗಿದ್ದೇವೆ. ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸಲಿದ್ದಾರೆಂದು ಮುರಳೀಧರ್ ಹೇಳಿದರು.

    ಭೂಮಿ ಪೂಜೆಯಲ್ಲಿ ಕೇಂದ್ರ ಸಚಿವ ಡಿವಿ ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ, ಆರ್ ಅಶೋಕ್, ಪರಿಷತ್ ಸದಸ್ಯ ಸೋಮಣ್ಣ, ಶಾಸಕರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

  • ಬಿಎಸ್‍ವೈ V/S ಬಿಎಲ್‍ಎಸ್- ವರದಿ ರೂಪಿಸಲು ನೂತನ ಕಾರ್ಯದರ್ಶಿಯನ್ನು ನೇಮಿಸಿದ ಹೈಕಮಾಂಡ್

    ಬಿಎಸ್‍ವೈ V/S ಬಿಎಲ್‍ಎಸ್- ವರದಿ ರೂಪಿಸಲು ನೂತನ ಕಾರ್ಯದರ್ಶಿಯನ್ನು ನೇಮಿಸಿದ ಹೈಕಮಾಂಡ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಬಿಎಲ್ ಸಂತೋಷ್ ನಡುವಿನ ಮುಸುಕಿನ ಗುದ್ದಾಟ ವಿಚಾರಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ವರದಿ ಕಳುಹಿಸಿಕೊಡುವಂತೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಯಾದವ್ ಅವರನ್ನು ಬಿಜೆಪಿ ಹೈಕಮಾಂಡ್ ನೇಮಿಸಿದೆ.

    ಬಿಜೆಪಿ ಅಧ್ಯಕ್ಷರ ಗಮನಕ್ಕೆ ತರದೆ ರಾಜ್ಯ ಬಿಜೆಪಿ ಸ್ಥಿತಿ ವರದಿ ತರಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ವಾಸ್ತವ ಪರಿಸ್ಥಿತಿ ಬಗ್ಗೆ ವರದಿ ನೀಡಲು ಹೈಕಮಾಂಡ್ ಶಿವಪ್ರಕಾಶ್ ಅವರನ್ನು ನೇಮಕ ಮಾಡಿದೆ. ಹೀಗಾಗಿ ಇಂದಿನಿಂದ ಶಿವಪ್ರಕಾಶ್ ಯಾದವ್ ಮೂರು ದಿನಗಳ ರಾಜ್ಯ ಪ್ರವಾಸ ನಡೆಸಿ ವರದಿ ತಯಾರಿಸಲಿದ್ದಾರೆ ಎಂಬುದಾಗಿ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.

    ಸಂತೋಷ್ 2018 ರ ವಿಧಾನಸಭೆ ಚುನಾವಣೆ ಹಿನ್ನೆಲೆ ವಾಸ್ತವ ಪರಿಸ್ಥಿತಿ ಬಗ್ಗೆ ಈಗಾಗಲೇ ವರದಿ ನೀಡಿದ್ದಾರೆ. ಆದರೆ ಸಂತೋಷ್ ರ ಕಾರ್ಯವೈಖರಿ ಬಗ್ಗೆ ಕೆಲವರು ಅಸಮಧಾನ ವ್ಯಕ್ತಪಡಿಸಿದ್ದರಿಂದ ಎಲ್ಲರೂ ಒಪ್ಪುವ ಸಂಘಟನಾ ಕಾರ್ಯದರ್ಶಿಯಿಂದ ವರದಿ ತರಿಸಿಕೊಳ್ಳಲು ಹೈಕಮಾಂಡ್ ಮುಂದಾಗಿದೆ. ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್‍ಗೆ ಈಗಾಗಲೇ ಸಂತೋಷ್ ವರದಿ ನೀಡಿದ್ರು ಮತ್ತೊಂದು ವರದಿ ತರಿಸಿಕೊಳ್ಳುವ ಹೈಕಮಾಂಡ್ ಪ್ರಯತ್ನ ನಡೆಸುತ್ತಿದೆ.

    ಶಿವಪ್ರಕಾಶ್ ಅವರ ನೇತೃತ್ವದಲ್ಲಿ ಅಕ್ಟೋಬರ್ 22ರಂದು ಮಂಗಳೂರು, 23 ರಂದು ಮೈಸೂರು ವಿಭಾಗ, ಹಾಗೂ 24 ರಂದು ಬೆಂಗಳೂರು ವಿಭಾಗದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಬಿಜೆಪಿಯ ಎಲ್ಲ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಭಾಗಿಯಾಗಲಿದ್ದು, ಈ ಸಭೆಯಲ್ಲಿ ಸಂಪೂರ್ಣವಾಗಿ ಚುನಾವಣೆ ಸಿದ್ಧತೆಯ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ.

    ಯಾರು ಈ ಬಿಎಲ್ ಸಂತೋಷ್?: ಬಿಜೆಪಿ ಹಾಗೂ ಸಂಘ ಪರಿವಾರದ ಮಂದಿ ಇವರನ್ನು ಸಂತೋಷ್ ಜಿ ಎಂದೇ ಗೌರವಿಸುತ್ತಾರೆ. ಸದ್ಯ ಇವರು ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ. ಇದರ ಜತೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಮಲ ಪಕ್ಷದ ಸಂಘಟನೆಯ ಹೊಣೆ ಇವರ ಮೇಲಿದೆ. ಆರ್ ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜೊತೆ ಇವರಿಗೆ ನಿಕಟ ಸಂಬಂಧವಿದೆ.

    ಸಂತೋಷ್ ಮೂಲತಃ ಉಡುಪಿ ಜಿಲ್ಲೆಯ ಹಿರಿಯಡ್ಕ ನಿವಾಸಿ. ಸಾಧಾರಣ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸಂತೋಷ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಕೇಶವ ಬಲಿರಾಂ ಹೆಡಗೇವಾರ್ ಅವರ ಆದರ್ಶ, ಆಶಯಗಳನ್ನು ಮೈಗೂಡಿಸಿಕೊಂಡು ಬಂದಿರುವ ಇವರು ಸಂಘದ ಅಪ್ಪಟ ಕಾರ್ಯಕರ್ತರ ಜೀವನ ಶೈಲಿ ರೂಢಿಸಿಕೊಂಡಿದ್ದಾರೆ.

    ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಮುಗಿಸುತ್ತಲೇ ಪೂರ್ಣಾವಧಿ ಪ್ರಚಾರಕರಾಗಿ ತಮ್ಮ ಜೀವನ ಆರಂಭಿಸಿದರು. ಬಳಿಕ ಮೈಸೂರು ನಗರದ ಪ್ರಚಾರಕರಾಗಿ ಕೆಲಸ ಮಾಡಿ, ಸಂಘವನ್ನು ಕಟ್ಟಿ ಬೆಳೆಸಿದ್ದರು. ಸಂಘ ಪರಿವಾರದ ಗರಡಿಮನೆಯಂತಿರುವ ಶಿವಮೊಗ್ಗ ಜಿಲ್ಲಾ ಪ್ರಚಾರಕರಾಗಿಯೂ ಕೆಲಸ ಮಾಡಿದ್ದಾರೆ.

     

  • ಬಿಎಸ್‍ವೈ ಜೊತೆ ಕೆಜೆಪಿ ಪಕ್ಷ ಸೇರ್ಕೊಂಡು ಶೋಭಾ ಕರಂದ್ಲಾಜೆ ಟಿಪ್ಪು ಜಯಂತಿ ಆಚರಿಸಿದ್ದರು- ರಾಮಲಿಂಗಾರೆಡ್ಡಿ

    ಬಿಎಸ್‍ವೈ ಜೊತೆ ಕೆಜೆಪಿ ಪಕ್ಷ ಸೇರ್ಕೊಂಡು ಶೋಭಾ ಕರಂದ್ಲಾಜೆ ಟಿಪ್ಪು ಜಯಂತಿ ಆಚರಿಸಿದ್ದರು- ರಾಮಲಿಂಗಾರೆಡ್ಡಿ

    ಬೆಂಗಳೂರು: ಟಿಪ್ಪು ಜಯಂತಿ ವಿಚಾರದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕೆಜೆಪಿಯಲ್ಲಿ ಇದ್ದಾಗ ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಕೆಜೆಪಿ ಪಕ್ಷಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಬಿಎಸ್‍ವೈ ಜೊತೆಯಲ್ಲಿ ಟಿಪ್ಪು ಜಯಂತಿ ಆಚರಣೆಯಲ್ಲಿ ಭಾಗವಹಿಸಿದ್ದರು. ಟಿಪ್ಪು ಜಯಂತಿಯನ್ನು ಸರ್ಕಾರ ಆಚರಿಸುತ್ತದೆ, ಭಾಗವಹಿಸುವುದು ಬಿಡುವುದು ಅವರವರಿಗೆ ಬಿಟ್ಟದ್ದು. ಆದರೆ, ಆಗ ವಿರೋಧ ವ್ಯಕ್ತಪಡಿಸಿದವರು ಈಗ ಯಾಕೆ ವಿರೋಧ ವ್ಯಕ್ತಪಡಿಸುತ್ತಿದ್ದೀರಿ. ಬಿಜೆಪಿಯಲ್ಲಿದ್ದಾಗ ಒಂದು ನಿಲುವು, ಕೆಜೆಪಿಯಲ್ಲಿ ಇದ್ದಾಗ ಒಂದು ನಿಲುವು ಯಾಕೆ ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: 418 ಕೋಟಿ ರೂ. ಹಗರಣದ ಆರೋಪ- ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಎಸ್‍ವೈ ದಾಖಲೆ ಬಿಡುಗಡೆ

    ಇದೇ ಸಂದರ್ಭದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಅವ್ಯವಹಾರಕ್ಕೆ ಸಂಬಂಧಿಸಿ ಸಿಎಂ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಬಿಎಸ್ ಯಡಿಯೂರಪ್ಪ ಮಾಡಿದ್ದ ಆರೋಪಕ್ಕೆ ಕುರಿತಂತೆ ಮಾತನಾಡಿದ ಅವರು, ಯಡಿಯೂರಪ್ಪ ಹತ್ತಿರ ದಾಖಲೆ ಇದ್ರೆ ಕೊಡಲಿ. ದಾಖಲೆ ಕೊಟ್ರೆ ಅದಕ್ಕೆ ಒಂದು ಅರ್ಥ ಇರುತ್ತದೆ. ಹಿಂದೆ ಬಿಜೆಪಿ ಅಧಿಕಾರದಲ್ಲೂ ಇಂಧನ ಸಚಿವರ ಮೇಲೆ ಆರೋಪ ಕೇಳಿ ಬಂದಿತ್ತು. ಆದರೆ ಸಚಿವರ ಮೇಲೆ, ಸಿಎಂ ಮೇಲೆ ದಾಖಲೆ ಬಿಡುಗಡೆ ಮಾಡೋದಾಗಿ ಯಡಿಯೂರಪ್ಪ 2-3 ತಿಂಗಳಿಂದ ಹೇಳುತ್ತಾನೆ ಇದ್ದಾರೆ. ಬಿಡುಗಡೆ ಮಾಡಿದ್ದು ಯಾವುದೂ ಇಲ್ಲ ಎಂದು ಬಿಎಸ್‍ವೈ ಆರೋಪಕ್ಕೆ ಅವರು ತಿರುಗೇಟು ನೀಡಿದ್ದಾರೆ.

    ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಮಾಧ್ಯಮದ ಮುಂದೆ ಗೊತ್ತಿರುವ ಎಲ್ಲ ವಿಚಾರ ಹೇಳೋದಕ್ಕೆ ಆಗುವುದಿಲ್ಲ. ಸಮಯ ಬಂದಾಗ ಎಲ್ಲವನ್ನೂ ಹೇಳ್ತೀವಿ ಎಂದು ತಿಳಿಸಿದರು.

     

  • 6 ಲಕ್ಷ ಬಿಲ್ ಕಟ್ಟದ್ದಕ್ಕೆ ಹೆರಿಗೆಯಾಗಿ ವಾರವಾದ್ರೂ ಬಾಣಂತಿಗೆ ತ್ರಿವಳಿ ಮಕ್ಕಳನ್ನ ತೋರಿಸ್ಲಿಲ್ಲ ವೈದ್ಯರು

    6 ಲಕ್ಷ ಬಿಲ್ ಕಟ್ಟದ್ದಕ್ಕೆ ಹೆರಿಗೆಯಾಗಿ ವಾರವಾದ್ರೂ ಬಾಣಂತಿಗೆ ತ್ರಿವಳಿ ಮಕ್ಕಳನ್ನ ತೋರಿಸ್ಲಿಲ್ಲ ವೈದ್ಯರು

    ಬೆಂಗಳೂರು: ಮೂರು ಮಕ್ಕಳಿಗೆ ಜನ್ಮ ನೀಡಿದ ತಾಯಿಗೆ 6 ಲಕ್ಷ ರೂ. ಆಸ್ಪತ್ರೆ ಬಿಲ್ ಕಟ್ಟಿಲ್ಲವೆಂದರೆ ಮಕ್ಕಳನ್ನು ಕೊಡಲ್ಲ ಎಂದು ಆಸ್ಪತ್ರೆ ವೈದ್ಯರು ಗೂಂಡಾಗಿರಿ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಹೋಸಕೋಟೆಯ ನಿವಾಸಿ ರೇಷ್ಮಾ ಮಲ್ಲೇಶ್ವರಂ 9ನೇ ಕ್ರಾಸ್‍ನಲ್ಲಿರುವ ನಾರಾಯಣ ಹೆಲ್ತ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕಳೆದ ವಾರ ಅವರಿಗೆ ಹೆರಿಗೆಯಾಗಿದ್ದು, ಇಂದಿಗೂ ವೈದ್ಯರು ಮಕ್ಕಳನ್ನು ಪೋಷಕರಿಗೆ ತೋರಿಸಿಲ್ಲ. ಈಗಾಗಲೇ 3 ಲಕ್ಷ ರೂ. ಬಿಲ್ ಕಟ್ಟಿದ್ರೂ ಮತ್ತೆ 3 ಲಕ್ಷ ರೂ. ಹಣ ಕೇಳಿದ್ದಾರೆ. ಮಕ್ಕಳನ್ನ ತೋರಿಸುವುದಾಗಿ ಐಸಿಯುಗೆ ಕರೆದೊಯ್ಯುವ ವೇಳೆಯಲ್ಲಿ ಬಾಕಿ ಮೂರು ಲಕ್ಷ ಕಟ್ಟುವವರೆಗೂ ಮಕ್ಕಳನ್ನು ನೀಡೋದಿಲ್ಲ ಎಂದು ವೈದ್ಯರು ಗೂಂಡಾಗಿರಿ ನಡೆಸಿದ್ದಾರೆ. ಬಾಣಂತಿಗೆ ಊಟ ನೀಡದೆ, ಮಕ್ಕಳನ್ನು ತೋರಿಸಿದೆ ಆಸ್ಪತ್ರೆ ಸಿಬ್ಬಂದಿ ಕಿರುಕುಳ ನೀಡಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ವಿಷಯ ತಿಳಿಸಿದ್ದಕ್ಕೆ ಬಾಣಂತಿ, ಮಕ್ಕಳನ್ನು ಹೊರಹಾಕಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಮಾಧ್ಯಮಗಳ ಮೇಲೂ ಗೂಂಡಾಗಿರಿ ನಡೆಸಿ ಕ್ಯಾಮೆರಾ ಒಡೆಯಲು ಮುಂದಾಗಿದ್ದರು.

    ನಂತರ ಪೋಷಕರು ಬಾಣಂತಿ ಹಾಗೂ ಮಕ್ಕಳನ್ನು ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಡಿಸ್ಜಾರ್ಜ್ ಮಾಡದೆ ಬಂದಿರೋದ್ರಿಂದ ಅಡ್ಮಿಟ್ ಮಾಡಿಕೊಳ್ಳೋಕೆ ಆಗಲ್ಲ ಎಂದು ಕೆಸಿ ಜರ್ನಲ್ ಆಸ್ಪತ್ರೆಯಿಂದ ಕೂಡ ವಾಪಸ್ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯಲ್ಲಿ ಈ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ಮಹಿಳೆಯನ್ನು ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ. ಡಿಸ್ಚಾರ್ಜ್ ಆದ ನಂತರ ಬಾಣಂತಿ ಮಕ್ಕಳೊಂದಿಗೆ ಹೊಸಕೋಟೆಗೆ ತೆರಳಿದ್ದಾರೆ.

    https://youtu.be/6e7unazDKdI

  • ಕುಡಿದು ಪಾರ್ಟಿ ಮಾಡಿ, ಮಹಿಳೆಯನ್ನ ಟೆರೆಸ್ ನಿಂದ ತಳ್ಳಲೆತ್ನಿಸಿದ ವಿದ್ಯಾರ್ಥಿಗಳ ಬಂಧನ

    ಕುಡಿದು ಪಾರ್ಟಿ ಮಾಡಿ, ಮಹಿಳೆಯನ್ನ ಟೆರೆಸ್ ನಿಂದ ತಳ್ಳಲೆತ್ನಿಸಿದ ವಿದ್ಯಾರ್ಥಿಗಳ ಬಂಧನ

    ಬೆಂಗಳೂರು: ವಿದ್ಯಾರ್ಥಿಗಳು ಅಂತಾ ಬಾಡಿಗೆ ಕೊಟ್ರೆ ಮನೆಯನ್ನೇ ಬಾರ್ ಮಾಡ್ಕೊಂಡ ಯುವಕರು ತಾವಲ್ಲದೇ ಇತರರನ್ನ ಕರೆಯಿಸಿ ರಾತ್ರಿಯೆಲ್ಲಾ ಫುಲ್ ಪಾರ್ಟಿ ಮಾಡಿದ್ದಲ್ಲದೆ ಮಹಿಳೆಯನ್ನು ಟೆರೆಸ್ ಮೇಲಿನಿಂದ ಕೆಳಗೆ ತಳ್ಳಲು ಯತ್ನಿಸಿದ್ದು, ಸದ್ಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಮೈಕೋಲೇಔಟ್ ಪೊಲೀಸ್ ಠಾಣೆಯ ಅನತಿ ದೂರದಲ್ಲೇ ಈ ಘಟನೆ ನಡೆದಿದೆ. ಶುಕ್ರವಾರ ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ವಿದ್ಯಾರ್ಥಿಗಳು ಪಾರ್ಟಿ ಮಾಡಿದ್ದಾರೆ. ವಿದ್ಯಾರ್ಥಿಗಳನ್ನು ಪ್ರಶ್ನಿಸಲು ಹೋಗಿದ್ದ ಸ್ಥಳಿಯರ ಮೇಲೆ ಹಲ್ಲೆ ನಡೆಸಿದ್ದಾರೆ. ಕುಡಿದ ಅಮಲಿನಲ್ಲಿ ಸ್ಥಳೀಯ ಮಹಿಳೆಯನ್ನ ಟೆರೆಸ್ ಮೇಲಿನಿಂದ ಕೆಳಗೆ ತಳ್ಳಲು ಯತ್ನಿಸಿದ್ದಾರೆ. ನಂತರ ವಿದ್ಯಾರ್ಥಿಗಳನ್ನು ಸ್ಥಳೀಯರು ಗೃಹಬಂಧನ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    https://youtu.be/et0yEPmdIkI

  • 418 ಕೋಟಿ ರೂ. ಹಗರಣದ ಆರೋಪ- ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಎಸ್‍ವೈ ದಾಖಲೆ ಬಿಡುಗಡೆ

    418 ಕೋಟಿ ರೂ. ಹಗರಣದ ಆರೋಪ- ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಎಸ್‍ವೈ ದಾಖಲೆ ಬಿಡುಗಡೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರ 418 ಕೋಟಿ ಹಣವನ್ನ ಲೂಟಿ ಮಾಡಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಗರಣದ ದಾಖಲಾತಿ ಬಿಡುಗಡೆ ಮಾಡಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಕೆಪಿಸಿಎಲ್ ಸಹಭಾಗಿತ್ವದಲ್ಲಿ 13-02-2003ರಲ್ಲಿ ಜಂಟಿ ಕಂಪನಿ ಸ್ಥಾಪನೆಯಾಗಿತ್ತು. ಕೆಪಿಸಿಎಲ್ ಜವಾಬ್ದಾರಿ ಕೇವಲ 24% ಮಾತ್ರ ಇತ್ತು. ಮನೋಹರ್ ಲಾಲ್ ಶರ್ಮ ಕೇಸ್‍ನಲ್ಲಿ ಹಲವು ಕಲ್ಲಿದ್ದಲು ಹಂಚಿಕೆಯನ್ನ ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಕೆಪಿಸಿಎಲ್ ಲೈಸೆನ್ಸ್ ಸಹ ರದ್ದುಪಡಿಸಿ ದಂಡವನ್ನು ಹಾಕಿತ್ತು. ಕಂಪನಿ ನೀಡಬೇಕಾದ ದಂಡದ ಹಣವನ್ನ ರಾಜ್ಯ ಸರ್ಕಾರವೇ ಭರಿಸಿದೆ. ಬಡ್ಡಿ ಸೇರಿ ಸುಮಾರು 447 ಕೋಟಿ ದಂಡದ ಹಣವನ್ನ ಸರ್ಕಾರವೇ ಕಂಪನಿಯ ಪರವಾಗಿ ಕಟ್ಟಿದೆ. ಈ ಹಗರಣದಲ್ಲಿ ಒಳ ಒಪ್ಪಂದವಾಗಿದೆ ಎಂದು ಆರೋಪ ಮಾಡಿದ್ದಾರೆ.

    ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇದರ ರೂವಾರಿಗಳು. ಒಂದೇ ದಿನದಲ್ಲಿ ನಿಮ್ಮ ಮಧ್ಯೆ ಯಾವ ಡೀಲ್ ಆಯ್ತು? ರಾಜ್ಯದ ಜನತೆಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಉತ್ತರ ಹೇಳಬೇಕು ಎಂದು ಬಿಎಸ್‍ವೈ ಹೇಳಿದ್ರು.

     

    ಸುಪ್ರೀಂಕೋರ್ಟ್, ಹೈಕೋರ್ಟ್ ತೀರ್ಪಿಗೆ ವಿರುದ್ಧವಾಗಿ ರಾಜ್ಯ ಸರ್ಕಾರ ಹಣವನ್ನ ನೀಡಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ಸಿದ್ದರಾಮಯ್ಯ ಹಗಲು ದರೋಡೆ ಮಾಡಿದ್ದಾರೆ. ಕಂಪನಿಯವರೊಂದಿಗೆ ಡೀಲ್ ಮಾಡಿಕೊಂಡು 100% ದಂಡದ ಮೊತ್ತವನ್ನ ಸರ್ಕಾರವೇ ಕಟ್ಟಿದೆ. ಇದು ಸಿದ್ದರಾಮಯ್ಯ ಸರ್ಕಾರದ ದೊಡ್ಡ ಹಗರಣ. ಸುಪ್ರೀಂಕೋರ್ಟ್ ನಲ್ಲಿ ಹಾಗೂ ಹೈಕೋರ್ಟ್ ಗಳಲ್ಲಿ ಪ್ರಕರಣ ನಡೆಯುತ್ತಿದೆ. ಹೀಗಿದ್ರೂ ಸರ್ಕಾರದ ಬೊಕ್ಕಸದಿಂದ ಯಾಕೆ ಹಣ ನೀಡಿದ್ದೀರಾ? ಎಂದು ಪ್ರಶ್ನಿಸಿದ್ರು.

    ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಲೋಕಸಭೆ ಕಾಂಗ್ರೆಸ್ ನಾಯಕರು ಎಲ್ಲರಿಗೂ ಈ ದಾಖಲೆಗಳನ್ನ ತಲುಪಿಸುತ್ತೇವೆ. ಕೊಲ್ಕತ್ತಾ ಕಂಪನಿ ಪರವಾಗಿ ಏಜೆಂಟ್ ರೀತಿ ಸರ್ಕಾರ ಹಣವನ್ನ ಕಟ್ಟಿದೆ ಎಂದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ರು.

    ಈ ಸುದ್ಧಿಗೋಷ್ಠಿಯಲ್ಲಿ ಮಾಜಿ ಸಚಿವ ಅರವಿಂದ್ ಲಿಂಬಾವಳಿ, ಮುರುಗೇಶ್ ನಿರಾಣಿ, ಬಿಜೆ ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಾಗೂ ಬಿಜೆಪಿಯ ಹಲವು ಮುಖಂಡರು ಉಪಸ್ಥಿತರಿದ್ದರು.

  • ವರದಕ್ಷಿಣೆಯಿಂದ ಹ್ಯಾಂಡ್ಸಮ್ ಹುಡ್ಗ ಸಿಗ್ತಾನಂತೆ, ವರರಿಗೆ ಸ್ವಯಂ ಉದ್ಯೋಗ ಸಿಗುತ್ತಂತೆ- ಕಾಲೇಜಿನ ಸ್ಟಡಿ ಮೆಟೀರಿಯಲ್ ವೈರಲ್

    ವರದಕ್ಷಿಣೆಯಿಂದ ಹ್ಯಾಂಡ್ಸಮ್ ಹುಡ್ಗ ಸಿಗ್ತಾನಂತೆ, ವರರಿಗೆ ಸ್ವಯಂ ಉದ್ಯೋಗ ಸಿಗುತ್ತಂತೆ- ಕಾಲೇಜಿನ ಸ್ಟಡಿ ಮೆಟೀರಿಯಲ್ ವೈರಲ್

    ಬೆಂಗಳೂರು: ಸಾಮಾಜಿಕ ಪಿಡುಗುಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಅವರನ್ನು ಜಾಗೃತರಾಗಿಸಬೇಕಾದ ಕಾಲೇಜೊಂದು ವಿದ್ಯಾರ್ಥಿಗಳಿಗೆ ವರದಕ್ಷಣೆಯನ್ನು ಬೆಂಬಲಿಸುವಂತಹ ಸ್ಟಡಿ ಮೆಟೀರಿಯಲ್ ನೀಡಿ ಮಹಾ ಎಡವಟ್ಟು ಮಾಡಿಕೊಂಡಿದೆ. ಈಗ ಆ ಸ್ಟಡಿ ಮೆಟೀರಿಯಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ನಗರದ ಶಾಂತಿ ನಗರದಲ್ಲಿರುವ ಸೆಂಟ್ ಜೋಸೆಫರ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವರದಕ್ಷಿಣೆಯನ್ನು ಬೆಂಬಲಿಸುವಂತಹ ಸ್ಟಡಿ ಮೆಟೀರಿಯಲ್ ನೀಡಲಾಗಿದೆ. ಇದನ್ನ ವಿದ್ಯಾರ್ಥಿಯೊಬ್ಬರು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.

    ವರದಕ್ಷಿಣೆಯಿಂದ ಕುರೂಪಿ ಹೆಣ್ಮಕ್ಕಳ ಮದುವೆ ಆಗುತ್ತದೆ. ವರದಕ್ಷಿಣೆಯಿಂದ ಒಳ್ಳೆಯ ಹ್ಯಾಂಡ್ಸಮ್ ಹುಡುಗ ಸಿಗುತ್ತಾನೆ. ವರರಿಗೆ ಸ್ವಯಂ ಉದ್ಯೋಗ ದೊರೆಯುತ್ತದೆ. ಇದರಿಂದ ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಾರೆ. ಅಷ್ಟೇ ಅಲ್ಲದೇ ಬಡ ಹುಡುಗರಿಗೆ ಅನುಕುಲವಾಗುತ್ತೆ. ಇದರಿಂದ ಅವರು ತಮ್ಮ ಓದನ್ನು ಮುಂದುವರೆಸಬಹುದು. ನವ ದಂಪತಿಯ ಜೀವನ ಸುಖಮಯವಾಗಿರುತ್ತೆ. ಜೊತೆಗೆ ಆಸ್ತಿ ಮಾಡಬಹುದು ಎಂದೆಲ್ಲಾ ಅಧ್ಯಯನ ಸಾಮಗ್ರಿಯಲ್ಲಿ ಹೇಳಲಾಗಿದೆ.

    ವರದಕ್ಷಿಣೆ ಬೆಂಬಲಿಸುವ ಈ ಪಾಠವನ್ನು ಚೆನ್ನೈನ ರಿತಿಕಾ ರಮೇಶ್ ಎಂಬುವರು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಇವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸೆಂಟ್ ಜೋಸೇಫ್ ಕಾಲೇಜು ಸ್ಪಷ್ಟನೆ ನೀಡಿದೆ.

    ಇದು ಕಾಲೇಜಿನ ಲೆಕ್ಚರರ್ ನೀಡಿರುವ ಅಧ್ಯಯನ ಸಾಮಾಗ್ರಿ. ಇದಕ್ಕೂ ಕಾಲೇಜಿಗೂ ಸಂಬಂಧವಿಲ್ಲ. ಇದು ಮಹಾರಾಷ್ಟ್ರದ ಒಂದು ಪಠ್ಯಪುಸ್ತಕದಿಂದ ತೆಗೆದ ವಿಷಯ. ವಿದ್ಯಾರ್ಥಿಗಳು ಇದನ್ನೇ ಫೇಸ್‍ಬುಕ್ ಗೆ ಹಾಕಿದ್ದಾರೆ ಎಂದು ಹೇಳಿದೆ.

  • ಪಟಾಕಿ ಬಾಕ್ಸ್ ಗೆ ಬೆಂಕಿ ತಗುಲಿ ಇಡೀ ಮನೆಯೇ ಹೊತ್ತಿ ಉರಿಯಿತು

    ಪಟಾಕಿ ಬಾಕ್ಸ್ ಗೆ ಬೆಂಕಿ ತಗುಲಿ ಇಡೀ ಮನೆಯೇ ಹೊತ್ತಿ ಉರಿಯಿತು

    ಧಾರವಾಡ: ಪಟಾಕಿ ಬಾಕ್ಸ್ ಗೆ ಬೆಂಕಿ ತಗುಲಿದ ಪರಿಣಾಮ ಮನೆಯೊಂದು ಹೊತ್ತಿ ಉರಿದ ಘಟನೆ ನಗರದ ಉಣಕಲ್ ಕ್ರಾಸ್‍ನಲ್ಲಿ ನಡೆದಿದೆ.

    ಪ್ರವೀಣ್ ನವಲಗುಂದ ಎಂಬವರ ಮನೆಯಲ್ಲಿದ್ದ ಪಟಾಕಿ ಬಾಕ್ಸ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಪಟಾಕಿ ಸಿಡಿದ್ದಿದ್ದರಿಂದ ಮನೆಯಲ್ಲಿದ್ದ ವಸ್ತುಗಳೆಲ್ಲಾ ಹೊತ್ತಿ ಉರಿದಿವೆ. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಮನೆಯನ್ನೇ ಆವರಿಸಿ ಧಗಧಗನೆ ಉರಿದಿದೆ.

    ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ರಾತ್ರಿಯಿಡೀ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

    ಈ ಬಾರಿಯ ದೀಪಾವಳಿ ಸುಮಾರು 40ಕ್ಕೂ ಹೆಚ್ಚು ಮಕ್ಕಳ ಬದುಕನ್ನ ಕತ್ತಲು ಮಾಡಿದೆ. ಶುಕ್ರವಾರ ರಾತ್ರಿ ಸುಮಾರು 14 ಜನ ಪಟಾಕಿ ಸಿಡಿತದಿಂದ ಕಣ್ಣು ಕಳೆದುಕೊಂಡಿದ್ದಾರೆ. ಚಾಮರಾಜಪೇಟೆಯ ಸಿದ್ದರಾಜು ರಾಕೆಟ್ ಹಚ್ಚಲು ಹೋಗಿ ಅದೇ ಈತನಿಗೆ ತಿರುಗುಬಾಣವಾಗಿದೆ. ಆಂಧ್ರ ಮೂಲದ ಸುಧಾಕರ್ ಪಟಾಕಿ ಹಚ್ಚಲು ಹೋಗಿ ತನ್ನ ಎಡಗಣ್ಣನ್ನ ಕಳೆದುಕೊಂಡಿದ್ದಾನೆ. ಸದ್ಯ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

  • ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ಮಹಿಳಾ ಅಧಿಕಾರಿಗಳಿಗೆ ಸಿಗುತ್ತಾ ಉನ್ನತ ಸ್ಥಾನ?

    ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ಮಹಿಳಾ ಅಧಿಕಾರಿಗಳಿಗೆ ಸಿಗುತ್ತಾ ಉನ್ನತ ಸ್ಥಾನ?

    ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳು ರಾಜ್ಯದ ಉನ್ನತ ಸ್ಥಾನ ಅಲಂಕಾರಿಸುವ ಅವಕಾಶ ಒದಗಿ ಬಂದಿದೆ. ಪೊಲೀಸ್ ಮಹಾ ನಿರ್ದೇಶಕರ ಹುದ್ದೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಮಹಿಳಾ ಅಧಿಕಾರಿಗಳು ನೇಮಕವಾಗುವ ಸಂದರ್ಭ ಬಂದಿದೆ.

    ಪೊಲೀಸ್ ಮಹಾನಿರ್ದೇಶಕ ದತ್ತಾ ಅವರ ಅಧಿಕಾರಾವಧಿ ಈ ತಿಂಗಳ 31ಕ್ಕೆ ಮುಕ್ತಾಯವಾಗಲಿದೆ. ಖಾಲಿಯಾಗಲಿರುವ ಹುದ್ದೆಗೆ ಹಿರಿತನದ ಆಧಾರದಲ್ಲಿ ಮಹಿಳಾ ಐಪಿಎಸ್ ಅಧಿಕಾರಿ ನೀಲಮಣಿ ರಾಜು, ಹಿರಿಯ ಐಪಿಎಸ್ ಅಧಿಕಾರಿಗಳಾದ ಕಿಶೋರ್ ಚಂದ್ರ ಮತ್ತು ಎಂ.ಎನ್.ರೆಡ್ಡಿ ಹೆಸರು ರೇಸ್‍ನಲ್ಲಿದೆ. ಹಿರಿತನದಲ್ಲಿ ನೀಲಮಣಿ ರಾಜು ಅವರೇ ಮುಂದಿದ್ದಾರೆ.

    ಇನ್ನು ಸುಭಾಷ್ ಕುಂಟಿ ಅವರ ಅಧಿಕಾರ ಕೂಡಾ ಈ ತಿಂಗಳು ಅಂತ್ಯವಾಗಲಿದ್ದು, ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಮಹಿಳಾ ಐಎಎಸ್ ಅಧಿಕಾರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಹಾಗೂ ಪಟ್ನಾಯಕ್ ಹೆಸರು ರೇಸ್‍ನಲ್ಲಿದೆ. ಇಲ್ಲೂ ಹಿರಿತನದಲ್ಲಿ ಪಟ್ನಾಯಕ್ ಗಿಂತ ರತ್ನಪ್ರಭಾ ಮುಂದಿದ್ದಾರೆ. ಹೀಗಾಗಿ ಎರಡು ಹುದ್ದೆಗಳಲ್ಲಿ ಹಿರಿತನದಲ್ಲಿ ಮಹಿಳಾ ಅಧಿಕಾರಿಗಳು ಮುಂದಿದ್ದಾರೆ.

    ಹಿರಿಯತನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾಶಸ್ತ್ಯ ನೀಡಿದರೆ ಇದೇ ಮೊದಲ ಬಾರಿಗೆ ರಾಜ್ಯದ ಇತಿಹಾಸದಲ್ಲಿ ಎರಡು ಪ್ರಮುಖ ಹುದ್ದೆಗಳಿಗೆ ಮಹಿಳಾ ಅಧಿಕಾರಿಗಳು ಅಧಿಕಾರ ಪಡೆಯುವ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

    ಚುನಾವಣೆಯ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಮಹಿಳಾ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳನ್ನು ನೀಡುವ ಮೂಲಕ ಮಹಿಳಾ ಮತಗಳ ಮೇಲೆ ಸಿದ್ದರಾಮಯ್ಯ ಕಣ್ಣಿಡುವ ಸಾಧ್ಯತೆ ಇದೆ. ಅಂದುಕೊಂಡಂತೆ ಎಲ್ಲವೂ ಆದರೆ ರಾಜ್ಯದಲ್ಲಿ ಪೋಲೀಸ್ ಮಹಾನಿರ್ದೇಶಕರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಹಿಳೆಯರಾಗುತ್ತಾರೆ.

     

  • ವರದಕ್ಷಿಣೆ ಕಿರುಕುಳ ಆರೋಪ- ಪ್ರೀತಿಸಿ ಕೈಹಿಡಿದ ಪತಿಯೇ ವಿಷಪ್ರಾಶನ ಮಾಡಿದ್ನಾ?

    ವರದಕ್ಷಿಣೆ ಕಿರುಕುಳ ಆರೋಪ- ಪ್ರೀತಿಸಿ ಕೈಹಿಡಿದ ಪತಿಯೇ ವಿಷಪ್ರಾಶನ ಮಾಡಿದ್ನಾ?

    ಬೆಂಗಳೂರು: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಮೈಕೋಲೇಔಟ್‍ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ವರದಕ್ಷಿಣೆಗಾಗಿ ಗಂಡನೇ ಪತ್ನಿಯನ್ನೇ ಕೊಲೆ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ.

    28 ವರ್ಷ ವಯುಸ್ಸಿನ ನೇತ್ರಾ ಸಾವನ್ನಪ್ಪಿರೋ ಮಹಿಳೆ. ಉದಯ್ ಹಾಗೂ ನೇತ್ರಾ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ದಿನ ಕಳೆದಂತೆ ಪತಿ ಉದಯ್ ಆಕೆಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ನೇತ್ರಾಳ ಪೋಷಕರು ಮೊದಮೊದಲು ಹಣ ಕೇಳಿದಾಗೆಲ್ಲಾ ಕೊಡುತ್ತಿದ್ದರು. ಇಲ್ಲಿವರೆಗೆ ಸುಮಾರು 5 ಲಕ್ಷ ರೂ. ಹಣ ಕೊಟ್ಟಿದ್ದಾರೆ. ಹಣ ಕೈಗೆ ಸಿಗುತ್ತಿದ್ದಂತೆ ಪತಿ ಉದಯ್ ಕಂಠಪೂರ್ತಿ ಕುಡಿದು ಖರ್ಚು ಮಾಡಿ ಮತ್ತೆ ಹಣ ತುರುವಂತೆ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ.

    ಶುಕ್ರವಾರ ರಾತ್ರಿ ಇದೇ ವಿಚಾರಕ್ಕೆ ಮತ್ತೆ ಇಬ್ಬರ ನಡುವೆ ಜಗಳವಾಗಿ ಊಟದಲ್ಲಿ ವಿಷ ಹಾಕಿ ಕೊಲೆ ಮಾಡಿದ್ದಾನೆ. ಆದ್ರೆ ಊಟ ಮಾಡಿದ ನಂತರ ರಕ್ತ ವಾಮಿಟ್ ಮಾಡಿಕೊಂಡು ಸಾವನ್ನಪ್ಪಿದ್ದಾಳೆ ಅಂತ ಉದಯ್ ಕಥೆ ಕಟ್ಟಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

    ಸದ್ಯಕ್ಕೆ ಮೈಕೋಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.