Tag: Bangalore

  • ಟಿವಿಎಸ್ ಗೆ ಕ್ಯಾಂಟರ್ ಡಿಕ್ಕಿ- ಬೈಕ್ ಸವಾರ ಸಾವು

    ಟಿವಿಎಸ್ ಗೆ ಕ್ಯಾಂಟರ್ ಡಿಕ್ಕಿ- ಬೈಕ್ ಸವಾರ ಸಾವು

    ಬೆಂಗಳೂರು: ಟಿವಿಎಸ್ ಗಾಡಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪಡಿಣಾಮ ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಹೋಟೆಲ್ ಮುಂಭಾಗದಲ್ಲಿ ನಡೆದಿದೆ.

    ಸುಮಾರು 50 ವರ್ಷದ ರಾಮ್‍ಚಂದನ್ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಇಂದು ಬೆಳಗ್ಗೆ ಸುಮಾರು 7.50 ಗಂಟೆಗೆ ರಾಮ್‍ಚಂದನ್ ಮೆಜಸ್ಟಿಕ್‍ನಿಂದ ಶಿವಾನಂದ ಸರ್ಕಲ್‍ಗೆ ನ್ಯೂಸ್ ಪೇಪರ್ ಹಾಕಲು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿ ಅತಿ ವೇಗವಾಗಿ ಹಿಂಬದಿಯಿಂದ ಕ್ಯಾಂಟರ್ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಚಂದನ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಅಪಘಾತ ನಡೆದ ಸ್ಥಳಕ್ಕೆ ಹೈಗ್ರೌಂಡ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಾರಿಯಾಗುತ್ತಿದ್ದ ಕ್ಯಾಂಟರ್ ಚಾಲಕ ರಾಮ್‍ವೀರ್ ಸಿಂಗ್ ನನ್ನು ಬಂಧಿಸಿ ವಿಚಾರಣೆನಡೆಸುತ್ತಿದ್ದಾರೆ.

  • ಪತ್ರಕರ್ತೆ ಗೌರಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು

    ಪತ್ರಕರ್ತೆ ಗೌರಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣಕ್ಕೆ ದಿನಕ್ಕೊಂದು ಸುಳಿವು ಸಿಗುತ್ತಿದ್ದು, ಎಸ್‍ಐಟಿ ತಂಡ ಚುರುಕಾಗಿ ಕಾರ್ಯನಿವಹಿಸುತ್ತಿದೆ. ಹಂತಕರ ಹಿಂದೆ ಬಿದ್ದಿರುವ ಎಸ್‍ಐಟಿಗೆ ಒಂದು ಸ್ಫೋಟಕ ಸುಳಿವು ಸಿಕ್ಕಿದೆ.

    ಗೌರಿ ಲಂಕೇಶ್ ಹತ್ಯೆಯ ಸಂದರ್ಭದಲ್ಲಿ ಹಂತಕರು ಬಳಸಿದ್ದ ಬೈಕ್ ಖರೀದಿಯ ಬಗ್ಗೆ ಸುಳಿವು ಸಿಕ್ಕಿದ್ದು, ಮಹಾರಾಷ್ಟ್ರದ ಪುಣೆಯ ಸಣ್ಣ ಹಳ್ಳಿಯೊಂದರಲ್ಲಿ ಸೆಕೆಂಡ್ ಹ್ಯಾಂಡ್ ಪಲ್ಸರ್ ಬೈಕ್ ಅನ್ನು ಖರೀದಿ ಮಾಡಿರುವ ಬಗ್ಗೆ ಮಾಹಿತಿ ದೊರೆತಿದೆ.

    ಹಂತಕ ಬಂದಿದ್ದ ಬೈಕ್ 150 ಸಿಸಿ ಕಪ್ಪು ಮತ್ತು ಕೆಂಪು ಬಣ್ಣದಾಗಿದೆ. ಖರೀದಿ ಮಾಡಿ ಶಿವಮೊಗ್ಗ ಮೂಲದಿಂದ ಬೈಕ್ ತಂದಿರುವ ಬಗ್ಗೆ ಎಸ್‍ಐಟಿಗೆ ಮಾಹಿತಿ ಲಭ್ಯವಾಗಿದ್ದು, ಎಸ್‍ಐಟಿಯಿಂದ ತೀವ್ರ ಹುಡುಕಾಟ ಶುರುವಾಗಿದೆ.

    ಇತ್ತೀಚೆಗೆ ಎಸ್‍ಐಟಿ ಗೌರಿ ಹಂತಕರ ರೇಖಾಚಿತ್ರ ಮತ್ತು ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಗೆ ಹಂತಕರ ಬಗ್ಗೆ ಸುಳಿವು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಮೂವರು ಆರೋಪಿಗಳಲ್ಲಿ ಇಬ್ಬರು ನೋಡುವುದಕ್ಕೆ ಒಂದೇ ತರಹನಾಗಿ ಕಾಣುತ್ತಿದ್ದು, ಆರೋಪಿಗಳು ನಗರದಲ್ಲಿ ಮೂರು ವಾರಗಳ ಕಾಲ ಉಳಿದುಕೊಂಡಿದ್ದರು ಎಂದು ಎಸ್‍ಐಟಿ ತಿಳಿಸಿತ್ತು.  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ ಸುಮಾರು ಒಂದು ತಿಂಗಳು 20 ದಿನಗಳಾಗಿದೆ.

    https://www.youtube.com/watch?v=gMCRfdWRT8w

    https://www.youtube.com/watch?v=Wm2_FgKUvtA

    https://www.youtube.com/watch?v=E47pvUQ887A

    https://www.youtube.com/watch?v=h54A6zdpI3A

    https://www.youtube.com/watch?v=d5V8Pu3eGnM

    https://www.youtube.com/watch?v=CZ76KMF2i74

  • ಬೆಂಗಳೂರಿನಲ್ಲಿ ಮಹಿಳೆಯರಿಗೆ ವಾಹನ ಪಾರ್ಕಿಂಗ್‍ನಲ್ಲಿ ಮೀಸಲಾತಿ

    ಬೆಂಗಳೂರಿನಲ್ಲಿ ಮಹಿಳೆಯರಿಗೆ ವಾಹನ ಪಾರ್ಕಿಂಗ್‍ನಲ್ಲಿ ಮೀಸಲಾತಿ

    ಬೆಂಗಳೂರು: ಇನ್ಮುಂದೆ ಬೆಂಗಳೂರಿನಲ್ಲಿ ಪಾರ್ಕಿಂಗ್ ವಿಚಾರಕ್ಕೆ ಮಹಿಳೆಯರು ಹೆಚ್ಚು ತೆಲೆಕೆಡಿಸಿಕೊಳ್ಳಬೇಕಾಗಿಲ್ಲ. ಯಾಕೆಂದರೆ, ವಾಹನ ಪಾರ್ಕಿಂಗ್ ಸ್ಪೇಸ್ ನಲ್ಲಿ ಮಹಿಳೆಯರಿಗೆ ಶೇ.20 ರಷ್ಟು ಮೀಸಲಾತಿ ಸಿಗಲಿದೆ.

    ಬೆಂಗಳೂರಿನಲ್ಲಿ ವಾಹನ ಪಾರ್ಕಿಂಗ್ ಜಾಗದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗುವುದೆಂದು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಟ್ವೀಟ್ ಮಾಡಿದ್ದಾರೆ.

    ಹೌದು, ಈ ಬಗ್ಗೆ ಕೆಜೆ ಜಾರ್ಜ್ ಇಂದು ಟ್ವೀಟ್ ಮಾಡಿದ್ದು, ಅತಿ ಹೆಚ್ಚು ವಾಣಿಜ್ಯ ವಹಿವಾಟು ನಡೆಯುವ ಪ್ರದೇಶದಲ್ಲಿ ಬಿಬಿಎಂಪಿ ಪಾರ್ಕಿಂಗ್ ಸ್ಥಳದಲ್ಲಿ ಶೇ.20 ರಷ್ಟು ಮಹಿಳೆಯರ ವಾಹನಕ್ಕೆ ಮೀಸಲಾತಿ ನೀಡಲಾಗುವುದೆಂದು ಟ್ವೀಟ್ ಮಾಡಿದ್ದಾರೆ.

    ಬೆಂಗಳೂರಿನ ಇಂದಿರಾನಗರ, ಕೋರಮಂಗಲ, ಜೆಸಿ ರೋಡ್, ಸಿಐಡಿ, ವಿಧಾನಸೌಧ ಸುತ್ತಮುತ್ತಾ ಸೇರಿದಂತೆ ಸಿಬಿಡಿ ಸ್ಥಳದಲ್ಲಿ ಮಹಿಳೆಯರಿಗೆ ಪಾರ್ಕಿಂಗ್ ಸೌಲಭ್ಯದಲ್ಲಿ ಮೀಸಲಾತಿ ಸಿಗಲಿದೆ ಎಂದು ತಿಳಿಸಿದ್ದಾರೆ.

  • ಕನ್ನಡದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶ

    ಕನ್ನಡದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶ

    ಬೆಂಗಳೂರು: ಕನ್ನಡದ ಸಾಕಷ್ಟು ಸಿನಿಮಾ ಧಾರಾವಾಹಿಗಳಲ್ಲಿ ಪೊಷಕ ನಟನಾಗಿ, ಖಳನಟನಾಗಿ ಅಭಿನಯಿಸಿದ್ದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶರಾಗಿದ್ದಾರೆ.

    ವೇಣುಗೋಪಾಲ್ ಅವರು ಮಂಗಳವಾರ ಬೆಳಿಗ್ಗೆ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಹೃದಯಘಾತದಿಂದ ನಿಧನರಾದರು. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದ ಇವರು ಕೊನೆಯದಾಗಿ ಶುದ್ಧಿ ಚಿತ್ರದಲ್ಲಿ ನಟಿಸಿದ್ದರು.

    ವೇಣುಗೊಪಾಲ್ ಅವರು ಡಾ. ವಿಷ್ಣುವರ್ಧನ್ ಅವರ ಚಿತ್ರದಲ್ಲಿ ಹೆಚ್ಚಾಗಿ ನಟಿಸಿದ್ದರು. ಸೂರಪ್ಪ, ರಾಜನರಸಿಂಹ, ಕೋಟಿಗೊಬ್ಬ, ಡಕೋಟ ಎಕ್ಸ್ ಪ್ರೆಸ್ ಇನ್ನೂ ಅನೇಕರ ಚಿತ್ರದಲ್ಲಿ ನಟಿಸಿದ್ದು, ಮನೆತನ, ಜನನಿ ಧಾರಾವಾಹಿಗಳಲ್ಲಿಯೂ ನಟಿಸಿದ್ದರು.

  • ಬೆಳ್ಳಂಬೆಳಗ್ಗೆ ಸಿಎಂ, ಡಿಕೆಶಿ ಆಪ್ತನ ಮನೆ ಮೇಲೆ ಐಟಿ ದಾಳಿ

    ಬೆಳ್ಳಂಬೆಳಗ್ಗೆ ಸಿಎಂ, ಡಿಕೆಶಿ ಆಪ್ತನ ಮನೆ ಮೇಲೆ ಐಟಿ ದಾಳಿ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಧನ ಸಚಿವ ಡಿ.ಕೆ. ಶಿವಕುಮಾರ್ ಆಪ್ತ ಲಕ್ಷ್ಮಣ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ.

    ಈ ಹಿಂದೆ ಡಿಕೆ ಶಿವಕುಮಾರ್ ಮನೆಯ ಮೇಲೆ, ಅವರ ಸಂಬಂಧಿಕರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಆದರೆ ಈಗ ಮತ್ತೆ ಅವರ ಆಪ್ತರಾದ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

    ಸದಾಶಿವ ನಗರದಲ್ಲಿರುವ ಅವರ ಮನೆ ಮತ್ತು ಬಸವೇಶ್ವರ ನಗದಲ್ಲಿರುವ ಕಚೇರಿ ಸೇರಿದಂತೆ 5 ಕಡೆಗಳಲ್ಲಿ ಸುಮಾರು 50 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಲಕ್ಷ್ಮಣ್ ಸಿಎಂ ಹಾಗೂ ಡಿಕೆಶಿಗೆ ಆಪ್ತರಾಗಿದ್ದು, ಅವರ ಮನೆಯ ಮೇಲೆ ನಡೆಯುತ್ತಿರುವ 2ನೇ ದಾಳಿ ಇದಾಗಿದೆ.

  • ಟನ್ ಗಟ್ಟಲೆ ಕೊಳೆಯುತ್ತಿವೆ ಅನ್ನಭಾಗ್ಯ ಯೋಜನೆಯ ಆಹಾರ ಪದಾರ್ಥಗಳು!

    ಟನ್ ಗಟ್ಟಲೆ ಕೊಳೆಯುತ್ತಿವೆ ಅನ್ನಭಾಗ್ಯ ಯೋಜನೆಯ ಆಹಾರ ಪದಾರ್ಥಗಳು!

    ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಆಹಾರ ಪದಾರ್ಥಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೋದಾಮುಗಳಲ್ಲೇ ಕೊಳೆಯುತ್ತಿದ್ದು, ಸರ್ಕಾರ ನೂರಾರು ಕೋಟಿ ರೂ. ನೀಡಿ ಖರೀದಿಸಿದ್ದ ಪಡಿತರ ವ್ಯರ್ಥವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಆನೇಕಲ್, ಜಿಗಣಿ ಹಾಗೂ ಸರ್ಜಾಪುರದಲ್ಲಿರುವ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಗೋದಾಮುಗಳಲ್ಲಿ ಟನ್‍ಗಟ್ಟಲೇ ಗೋಧಿ ಕೊಳೆಯುತ್ತಿದೆ.

    ಆನೇಕಲ್ ತಾಲೂಕಿನ ಕೇಂದ್ರ ಭಾಗವಾಗಿರುವ ಆನೇಕಲ್ ಪಟ್ಟಣದ ಗೋದಾಮಿನಲ್ಲಿ 331 ಕ್ವಿಂಟಾಲ್, ಜಿಗಣಿಯಲ್ಲಿ 125 ಕ್ವಿಂಟಲ್ ಹಾಗೂ ಸರ್ಜಾಪುರದಲ್ಲಿ 100 ಕ್ವಿಂಟಾಲ್ ಗೋಧಿ ಪತ್ತೆಯಾಗಿದ್ದು ಸಂಪೂರ್ಣವಾಗಿ ಹಾಳಾಗಿದ್ದು ಮನುಷ್ಯ ತಿನ್ನಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ.

    ರಾಜ್ಯ ಸರ್ಕಾರ ಒಂದು ವರ್ಷದ ಹಿಂದೆಯೇ ಈ ಗೋಧಿಯನ್ನು ಖರಿದೀ ಮಾಡಿದ್ದು, ಫಲಾನುಭವಿಗಳಿಗೆ ಸಿಗಬೇಕಾದ ಆಹಾರ ಇಲಿಗಳ ಪಾಲಾಗಿದೆ. ರಾಜ್ಯ ಸರ್ಕಾರ ಗೋಧಿ ವಿತರಣೆಯನ್ನು ಅವೈಜ್ಞಾನಿಕವಾಗಿ ನಿಲ್ಲಿಸಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇಲಾಖೆಯ ಮೂಲಗಳ ಪ್ರಕಾರ ರಾಜ್ಯಾದ್ಯಂತ 1,25 ಲಕ್ಷ ಕ್ವಿಂಟಾಲ್ ಗೋಧಿ ಹೀಗೆ ಕೊಳೆಯುತ್ತಿದೆ ಎಂದು ತಿಳಿದುಬಂದಿದೆ.

    ಅನ್ನಭಾಗ್ಯ ಯೋಜನೆಯಲ್ಲಿ ನೀಡುವ ಇತರೇ ಆಹಾರ ಪದಾರ್ಥಗಳಾದ ರಾಗಿಯೂ ಇದೇ ರೀತಿ ಕೊಳೆಯುತ್ತಿದೆ. ಬಡ ಜನರ ಹಸಿವನ್ನು ನೀಗಿಸುವ ಪ್ರಮುಖ ಯೋಜನೆಯಾಗಿ ರಾಜ್ಯ ಸರ್ಕಾರ ಹೆಮ್ಮೆಯಿಂದ ಜಾರಿಗೆ ತಂದಿರುವ ಯೋಜನೆ ಇದಾಗಿದ್ದು, ಬಡವರ ಹಸಿವನ್ನು ನೀಗಿಸ ಬೇಕಾದ ಆಹಾರ ಕೊಳೆಯುತ್ತಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಆಹಾರ ಪದಾರ್ಥಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ನಾವು ಈಗಾಗಲೇ ಆಹಾರ ಪದಾರ್ಥದ ಸ್ಯಾಂಪಲ್‍ಗಳನ್ನು ಪರೀಕ್ಷೆ ಮಾಡಲು ಲ್ಯಾಬ್‍ಗೆ ಕಳುಹಿಸಿಕೊಟ್ಟಿದ್ದೇವೆ. ವರದಿ ಬಂದ ನಂತರ ಆಹಾರ ಜನರು ತಿನ್ನಲು ಯೋಗ್ಯವಾಗಿದ್ದಲ್ಲಿ ಅದನ್ನು ವಿತರಣೆ ಮಾಡುತ್ತೇವೆ. ಮುಂದಿನ ಕ್ರಮವನ್ನು ಉನ್ನತ ಅಧಿಕಾರಿಗಳು ಕೈಗೊಳ್ಳುತ್ತಾರೆ ಎಂಬ ಉತ್ತರವನ್ನು ನೀಡಿದ್ದಾರೆ.

  • ಕನ್ನಡ ಸಿನಿಮಾಗಳಿಗೆ ಬುಕ್‍ಮೈಶೋದಿಂದ ಅನ್ಯಾಯ: ಕೆ ಮಂಜು ವಾಗ್ದಾಳಿ

    ಕನ್ನಡ ಸಿನಿಮಾಗಳಿಗೆ ಬುಕ್‍ಮೈಶೋದಿಂದ ಅನ್ಯಾಯ: ಕೆ ಮಂಜು ವಾಗ್ದಾಳಿ

    ಬೆಂಗಳೂರು: ಬುಕ್ ಮೈ ಶೋ ಹಣವನ್ನು ಪಡೆದು ಪರಭಾಷಾ ಸಿನಿಮಾಗಳಿಗೆ ಪ್ರಚಾರ ನೀಡಿ ಕನ್ನಡ ಚಿತ್ರಗಳನ್ನು ತುಳಿಯುತ್ತಿದೆ ಎಂದು ಸತ್ಯ ಹರಿಶ್ಚಂದ್ರ ಚಿತ್ರದ ನಿರ್ಮಾಪಕ ಕೆ ಮಂಜು ಆರೋಪಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡ ಸಿನಿಮಾಗಳು ಚೆನ್ನಾಗಿದ್ದರೂ, ಉತ್ತಮ ಸಿನಿಮಾ ಅಂತ ಕನ್ನಡ ಚಿತ್ರಗಳಿಗೆ ಪ್ರಚಾರ ನೀಡುವುದಿಲ್ಲ. ಹೀಗಾಗಿ ಪರಭಾಷೆ ಚಿತ್ರಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿರುವ ಬುಕ್‍ಮೈ ಶೋ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡೋದಾಗಿ ಹೇಳಿದರು.

    ಹಣ ಪಡೆದು ಬೇರೆ ಭಾಷೆಯ ಸಿನಿಮಾಗಳಿಗೆ ಬುಕ್ ಮೈ ಶೋ ಪ್ರಚಾರ ನೀಡುತ್ತಿದೆ. ನಾನು ಬುಕ್ ಮೈ ಶೋ ನವರನ್ನು ಇಲ್ಲಿಗೆ ಬಿಡುವುದಿಲ್ಲ, ಬುಕ್ ಮೈ ಶೋ ಪರ್ಸೆಂಟೇಜ್ ನಿಂದಾಗಿ ಕನ್ನಡ ಸಿನಿಮಾಗಳಿಗೆ ಹೊಡೆತವಾಗುತ್ತಿದೆ. ಹೀಗಾದರೆ ಕನ್ನಡ ಚಿತ್ರಗಳ ನಿರ್ಮಾಪಕರ ಗತಿಯೇನು? ಒಳ್ಳೆ ಸಿನಿಮಾಗಳು ಇದ್ದರೂ ಸಹ ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲೇ ಬೆಂಬಲ ಇಲ್ಲ. ಮಾಫಿಯಾ ಗ್ಯಾಂಗ್ ನಿಯಂತ್ರಿಸುತ್ತಿದ್ದು, ನಮ್ಮ ಕನ್ನಡ ಸಿನಿಮಾಗಳಿಗೆ ಮಾರ್ಕ್ಸ್ ಕೊಡೋದಕ್ಕೆ ಇವರು ಯಾರು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

  • ಬೆಂಗಳೂರು ಚರಂಡಿ ಅವ್ಯವಸ್ಥೆಗೆ ಕಾರಣರಾದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ: ಎನ್‍ಜಿಟಿ ಪ್ರಶ್ನೆ

    ಬೆಂಗಳೂರು ಚರಂಡಿ ಅವ್ಯವಸ್ಥೆಗೆ ಕಾರಣರಾದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ: ಎನ್‍ಜಿಟಿ ಪ್ರಶ್ನೆ

    ಬೆಂಗಳೂರು: ನಗರದ ಚರಂಡಿ ಅವ್ಯವಸ್ಥೆ ಬಗ್ಗೆ ದೆಹಲಿಯ ರಾಷ್ಟೀಯ ಹಸಿರು ನ್ಯಾಯಾಧಿಕರಣ ಕಳವಳ ವ್ಯಕ್ತಪಡಿಸಿದ್ದು, ಬೆಂಗಳೂರಿನ ಚರಂಡಿ ಅವ್ಯವಸ್ಥೆಗೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದೆ.

    ಬೆಳ್ಳಂದೂರು ಕೆರೆ ಮಾಲಿನ್ಯ ಅರ್ಜಿ ವಿಚಾರಣೆ ವೇಳೆ ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಒಟ್ಟು 16 ಮಂದಿ ಸಾವನ್ನಪ್ಪಿದ್ದರು, ಇದಕ್ಕೆ ಅಸಮರ್ಪಕ ಚರಂಡಿ ವ್ಯವಸ್ಥೆ ಕಾರಣ ಅಂತಾ ಆರೋಪಿಸಿ ಅರ್ಜಿದಾರ ಕುಪೇಂದ್ರ ರೆಡ್ಡಿ ಪರ ವಕೀಲ ಫೋಟೊ ಸಹಿತ ದಾಖಲೆಗಳನ್ನು ನ್ಯಾಯಾಧಿಕರಣ ಸಲ್ಲಿಸಿದ್ದರು.

    ನ್ಯಾ. ಸ್ವತಂತ್ರಕುಮಾರ್ ನೇತೃತ್ವದ ತ್ರಿಸದಸ್ಯ ಪೀಠ ಮಳೆಯಿಂದ 16 ಮಂದಿ ಸಾವನ್ನಪ್ಪಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತು. ಮಳೆಗೆ ಜನರು ಚರಂಡಿಯಲ್ಲಿ ಕೊಚ್ಚಿ ಹೋಗಿ ಸಾಯುತ್ತಾರೆ ಅಂದರೆ ಬೆಂಗಳೂರಿನ ಚರಂಡಿ ವ್ಯವಸ್ಥೆಗೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿತು.

    ಇದೇ ಸಂದರ್ಭದಲ್ಲಿ ನಗರದ ಬೆಳಂದೂರು ಕೆರೆ ವ್ಯಾಪ್ತಿಯ ಅಪಾರ್ಟ್ ಮೆಂಟ್ ನಿವಾಸಿಗಳ ಒಕ್ಕೂಟ ಘನ ತಾಜ್ಯ ಘಟಕ ಅವಳವಡಿಕೆ ಸಮಯ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಎನ್‍ಜಿಟಿ ಮುಂದೂಡಿತು.

     

  • ಬೆಂಗಳೂರು ಜಾನ್ಸನ್ ಮಾರುಕಟ್ಟೆ ಮಸೀದಿ ಕಾಂಪೌಂಡ್ ವಿವಾದಕ್ಕೆ ಸಿಕ್ತು ಪರಿಹಾರ

    ಬೆಂಗಳೂರು ಜಾನ್ಸನ್ ಮಾರುಕಟ್ಟೆ ಮಸೀದಿ ಕಾಂಪೌಂಡ್ ವಿವಾದಕ್ಕೆ ಸಿಕ್ತು ಪರಿಹಾರ

    ಬೆಂಗಳೂರು: ನಗರದ ಪ್ರಮುಖ ಕೇಂದ್ರವಾಗಿರುವ ಜಾನ್ಸನ್ ಮಾರುಕಟ್ಟೆ ಬಳಿಯ ಮಸೀದಿ ವಿವಾದಕ್ಕೆ ಶಾಂತಿಯುತ ಪರಿಹಾರ ಸಿಕ್ಕದೆ.

    ಪ್ರಮುಖವಾಗಿ ಹೊಸೂರು ರಸ್ತೆ ಅಗಲೀಕರಣ ಕಾಮಗಾರಿಯನ್ನು ಆರಂಭಿಸಿದ್ದ ಸರ್ಕಾರ ರಸ್ತೆ ನಿರ್ಮಾಣಕ್ಕೆ ಅಡ್ಡವಾಗಿ ನಿರ್ಮಿಸಿದ್ದ ಮಸೀದಿಯ ಕಾಂಪೌಂಡ್ ತೆರವುಗೊಳಿಸಲು ಮುಂದಾಗಿತ್ತು. ಆದರೆ ಈ ಕ್ರಮಕ್ಕೆ ಮಸೀದಿಯ ಆಸ್ಕರ್ ಕಮಿಟಿ ಭಾರೀ ವಿರೋಧ ವ್ಯಕ್ತ ಪಡಿಸಿತ್ತು. ರಸ್ತೆಯ ತುದಿಗೂ ಮಸೀದಿಯ ಕಾಂಪೌಂಡ್ ನಿರ್ಮಾಣ ಮಾಡಿದ್ದರಿಂದ ಸ್ಥಳದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.

    ಈ ನಡುವೆ ಸಮಸ್ಯೆಯನ್ನು ಬಗೆಹರಿಸಲು ಮಸೀದಿಯ ಆಸ್ಕರ್ ಕಮಿಟಿ ಯೊಂದಿಗೆ ಚರ್ಚೆ ನಡೆಸಿದ ಬಿಬಿಎಂಪಿ ಅವರ ಮನವೊಲಿಸಲು ಯಶಸ್ವಿಯಾಗಿತ್ತು. ಹಿನ್ನಲೆಯ ಶಾಸಕ ಹ್ಯಾರಿಸ್ ಮತ್ತು ಮೇಯರ್ ಸಂಪತ್ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸರ್ಕಾರದ ವತಿಯಿಂದ ಕಾಂಪೌಂಡ್ ತೆರವು ಕಾರ್ಯಾಚರಣೆ ನಡೆಸಲಾಯಿತು.

    ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಮೇಯರ್ ಸಂಪತ್ ರಾಜ್ ನಗರದಲ್ಲಿ ನಡೆಯುತ್ತಿರುವ ಗುಂಡಿ ಮುಚ್ಚುವ ಕಾರ್ಯಾಚರಣೆಯಲ್ಲಿ ಕೆಲವು ಸ್ಥಳಗಳಲ್ಲಿ ಕಳಪೆ ಕಾಮಗಾರಿ ನಡೆದಿರುವ ಮಾಹಿತಿ ಇದ್ದು, ಮತ್ತೆ ಅದೇ ಗುತ್ತಿಗೆದಾರರಿಗೆ ಸರಿಪಡಿಸಲು ಸೂಚಿಸಲಾಗಿದೆ. ಸಿಎಂ ಸಿದ್ದರಾಮಯ್ಯನವರು ನೀಡಿರುವ ಗಡುವಿನ ವೇಳೆಗೆ ಗುಂಡಿಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದರು.

     

  • ಬೆಂಗ್ಳೂರು ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಮಹಿಳೆಯ ಶವ 9 ದಿನಗಳ ನಂತ್ರ ಸಿಕ್ತು

    ಬೆಂಗ್ಳೂರು ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಮಹಿಳೆಯ ಶವ 9 ದಿನಗಳ ನಂತ್ರ ಸಿಕ್ತು

    ಬೆಂಗಳೂರು: ನಗರದಲ್ಲಿ ಕಳೆದ 13 ರ ರಾತ್ರಿ ಸುರಿದ ಭಾರೀ ಮಳೆಗೆ ಕುರುಬರಹಳ್ಳಿ ರಾಜ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ನಿಂಗಮ್ಮ ಅವರ ಶವ ಒಂಭತ್ತು ದಿನಗಳ ನಂತರ ಪತ್ತೆಯಾಗಿದೆ.

    ನಗರದ ಜ್ಞಾನಭಾರತಿ ಸಮೀಪದ ರಾಜಕಾಲುವೆಯಲ್ಲಿ ನಿಂಗಮ್ಮ ಅವರ ಶವ ಪತ್ತೆಯಾಗಿದ್ದು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.

    ಅಕ್ಟೋಬರ್ 13 ರಾತ್ರಿ ಸುರಿದ ಮಳೆಗೆ ನಿಂಗಮ್ಮ ಹಾಗೂ ಅವರ ಪುತ್ರಿ ಪುಷ್ಪಾ ಅವರು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರು. ಪುಷ್ಪಾ ಅವರ ಶವ ನಗರದ ಕುಂಬಳಗೋಡು ಸೇತುವೆ ಬಳಿ ಘಟನೆ ನಡೆದ 3 ದಿನಗಳ ನಂತರ ಪತ್ತೆಯಾಗಿತ್ತು.

    ಪುಷ್ಪಾ ಅವರ ಶವ ಸಿಕ್ಕ ಬಳಿಕ ವೃಷಭಾವತಿ ಕಾಲುವೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ (ಎನ್‍ಡಿಆರ್‍ಆಫ್) ಶೋಧಕಾರ್ಯ ನಡೆಸಿದ್ದರೂ ಅವರ ಮೃತ ದೇಹ ಪತ್ತೆಯಾಗಿರಲಿಲ್ಲ.