Tag: Bangalore

  • ಸಿನಿಮಾ ರಂಗಕ್ಕೆ ರಶ್ಮಿಕಾ ಗುಡ್ ಬೈ ಸುದ್ದಿಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು?

    ಸಿನಿಮಾ ರಂಗಕ್ಕೆ ರಶ್ಮಿಕಾ ಗುಡ್ ಬೈ ಸುದ್ದಿಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು?

    ಬೆಂಗಳೂರು: ಕಿರಿಕ್ ಪಾರ್ಟಿಯ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ರಂಗಕ್ಕೆ ಗುಡ್‍ಬೈ ಹೇಳಲಿದ್ದಾರೆ ಎಂಬ ಗಾಸಿಪ್ ಸ್ಯಾಂಡಲ್‍ವುಡ್‍ನಲ್ಲಿ ಹರಿದಾಡುತ್ತಿದೆ.

    ಇತ್ತೀಚೆಗಷ್ಟೇ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಇಬ್ಬರಿಗೂ ಎಂಗೇಜ್‍ಮೆಂಟ್ ಆಗಿದೆ. ಇನ್ನೆರಡು ವರ್ಷ ಬಿಟ್ಟು ಈ ಜೋಡಿ ಮದುವೆಯಾಗಲಿದ್ದಾರೆ. ಈ ನಡುವೆ ರಶ್ಮಿಕಾ ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಒಂದು ಗೋಲ್ಡನ್ ಸ್ಟಾರ್ ಗಣೇಶ್ ಜೊತೆ `ಚಮಕ್’ ಸಿನಿಮಾ. ಮತ್ತೊಂದು ಪುನೀತ್ ರಾಜ್ ಕುಮಾರ್ ಅಭಿನಯದ `ಅಂಜನಿಪುತ್ರ’ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಅಷ್ಟೇ ಅಲ್ಲದೇ ಇನ್ನು ಕೆಲವು ತಿಂಗಳು ಕಳೆದರೆ ಮತ್ತೆರಡು ಸಿನಿಮಾಗಳು ಶುರುವಾಗಲಿವೆ.

    ಕನ್ನಡದಲ್ಲಿ ಮಾತ್ರವಲ್ಲದೇ ಟಾಲಿವುಡ್‍ನಲ್ಲೂ ರಶ್ಮಿಕಾ ಫುಲ್ ಬ್ಯುಸಿಯಾಗಿದ್ದಾರೆ. ಅರ್ಜುನ್ ರೆಡ್ಡಿ ಚಿತ್ರದ ಖ್ಯಾತಿಯ ದೇವರಕೊಂಡ ವಿಜಯಸಾಯಿ ಜೊತೆಗಿನ ಚಿತ್ರ ಅರ್ಧ ಶೂಟಿಂಗ್ ಮುಗಿದಿದೆ. ಇದಕ್ಕಿಂತ ಮುಂಚೆ ಸೆಟ್ಟೇರಿದ್ದ ನಾಗಶೌರ್ಯ ಜೊತೆಗಿನ ಚಿತ್ರ ಮುಗಿಯುವ ಹಂತದಲ್ಲಿದೆ. ಅಷ್ಟೇ ಅಲ್ಲದೇ ಇನ್ನೊಂದು ತೆಲುಗು ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ. ಆದರೆ ಇವೆಲ್ಲ ಚಿತ್ರಗಳು ಮುಗಿದ ಮೇಲೆ ರಶ್ಮಿಕಾ ಸಿನಿಮಾದಲ್ಲಿ ಅಭಿನಯಿಸುವುದಿಲ್ಲ ಎನ್ನುವ ಸುದ್ದಿ ಹರಿದಾಡಲು ಆರಂಭಿಸಿದೆ.

    ಈ ಎಲ್ಲಾ ಗಾಸಿಪ್ ಬಗ್ಗೆ ರಶ್ಮಿಕಾ ತಾಯಿ ಸುಮನ್ ಅವರು, ನಾವು ಅಂಜನಿಪುತ್ರ, ಚಮಕ್ ಚಿತ್ರಕ್ಕೆ ಡೇಟ್ಸ್ ಕೊಟ್ಟಿದ್ದೀವೆ. ಜೊತೆಗೆ ಎರಡು ತೆಲುಗು ಚಿತ್ರಗಳೂ ಇದೆ. ಇದರಿಂದ ಬಿಡುವಿಲ್ಲದೆ ಚಿತ್ರೀಕರಣ ನಡೆಯುತ್ತಲೇ ಇದೆ. ಆದರೆ ರಶ್ಮಿಕಾಗೆ ಒಂದು ತಿಂಗಳಾದರೂ ರೆಸ್ಟ್ ಬೇಕು. ಇದರ ಜೊತೆಗೆ ಅನೇಕ ಒಳ್ಳೆಯ ಕಥೆಗಳೂ ಬಂದಿದ್ದವು. ಆದರೆ ಡೇಟ್ಸ್ ಸಮಸ್ಯೆಯಿಂದ ಬೇರೆ ಚಿತ್ರಗಳನ್ನು ಒಪ್ಪಿಕೊಳ್ಳೋಕೆ ಆಗಲಿಲ್ಲ. ಈ ಮಧ್ಯೆ ರಿಮೇಕ್ ಚಿತ್ರಗಳಿಗೂ ಆಫರ್ ಬಂದಿತ್ತು. ಆದರೆ ನಮಗೆ ಪರ್ಫಾಮೆನ್ಸ್ ಓರಿಯೆಂಟೆಡ್ ಹಾಗೂ ಚಾಲೆಂಜಿಂಗ್ ಪಾತ್ರಗಳು ಬೇಕು. ಹೊಸಬರ ಚಿತ್ರ, ಸ್ಟಾರ್ ನಟರ ಚಿತ್ರ ಎಂದು ಭಾಗ ಮಾಡುವುದಿಲ್ಲ. ಪಾತ್ರದಲ್ಲಿ ವೈವಿಧ್ಯತೆ ಇದ್ದರೆ ಒಪ್ಪಿಕೊಳ್ಳುತ್ತೇವೆ. ಶೀಘ್ರದಲ್ಲೇ ಹೊಸ ಚಿತ್ರ ಅನೌನ್ಸ್ ಮಾಡಲಿದ್ದೇವೆ. ಮದುವೆ ಇನ್ನೂ ತಡ ಒಟ್ಟಿನಲ್ಲಿ ಈ ಗಾಸಿಪ್ ಸುಳ್ಳು ಎಂದು ಉತ್ತರಿಸಿದ್ದಾರೆ.

    ರಶ್ಮಿಕಾ ತಾಯಿ ಮಾತ್ರವಲ್ಲದೆ ಭಾವಿ ಪತಿ ನಟ ರಕ್ಷಿತ್ ಶೆಟ್ಟಿ ಕೂಡ ಟ್ವಿಟರ್ ಖಾತೆಯಲ್ಲಿ ಈ ವದಂತಿ ಸುಳ್ಳು. ರಶ್ಮಿಕಾ ಅಭಿನಯವನ್ನು ಮುಂದುವರೆಸುತ್ತಾರೆ. ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವುದು ರಶ್ಮಿಕಾ ಅವರ ಮೊದಲ ಆದ್ಯತೆ. ಈ ರೀತಿಯ ಸುಳ್ಳು ವದಂತಿಯನ್ನು ಹಬ್ಬಿಸಬೇಡಿ ಎಂದು ತಿಳಿಸಿದ್ದಾರೆ.

    ನಿಶ್ಚಿತಾರ್ಥವಾದ ಬಳಿಕ ರಶ್ಮಿಕಾ ತೆಲುಗು ಪ್ರಾಜೆಕ್ಟ್ ಬಿಟ್ಟರೆ ಕನ್ನಡದಲ್ಲಿ ಒಂದೇ ಒಂದು ಸಿನಿಮಾ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಈ ಗಾಸಿಪ್ ಹಬ್ಬಿದೆ. ಯಾವುದೇ ಕಾರಣಕ್ಕೂ ಅಭಿನಯ ನಿಲ್ಲಿಸುವುದಿಲ್ಲ. ರಶ್ಮಿಕಾ ಇಲ್ಲಿಯವರೆಗೂ ಪ್ರೇಕ್ಷಕರ ಮನಸ್ಸಿನಲ್ಲಿ ಸಾನ್ವಿ ಆಗಿಯೇ ಇದ್ದಾರೆ. ಮುಂಬರುವ ಪಾತ್ರಗಳಲ್ಲಿ ಬದಲಾವಣೆ ಬೇಕು. ಮುಂದಿನ ಚಿತ್ರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬುವುದನ್ನು ನೋಡಿಕೊಂಡು ಯಾವ ಥರದ ಪಾತ್ರ ಮಾಡಿದರೆ ಉತ್ತಮ ಎಂದು ರಶ್ಮಿಕಾ ಕುಟುಂಬ ಯೋಚಿಸುತ್ತಿದೆ.

    https://twitter.com/rakshitshetty/status/923408569407377408

     

  • ವಿದೇಶ ಪ್ರವಾಸದಿಂದ ಚಾಲೆಂಜಿಂಗ್ ಸ್ಟಾರ್ ವಾಪಸ್- ಒಂದು ವಾರ ವಿದೇಶದಲ್ಲಿ ಏನೇನೆಲ್ಲಾ ಮಾಡಿದ್ರು ಗೊತ್ತಾ?

    ವಿದೇಶ ಪ್ರವಾಸದಿಂದ ಚಾಲೆಂಜಿಂಗ್ ಸ್ಟಾರ್ ವಾಪಸ್- ಒಂದು ವಾರ ವಿದೇಶದಲ್ಲಿ ಏನೇನೆಲ್ಲಾ ಮಾಡಿದ್ರು ಗೊತ್ತಾ?

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಶೂಟಿಂಗ್‍ಗಾಗಿ ವರ್ಷಕ್ಕೆ ನಾಲ್ಕು ಬಾರಿಯಾದರೂ ವಿದೇಶಕ್ಕೆ ಹೋಗೋದು ಸಾಮಾನ್ಯ. ಈ ಹಿಂದೆ ಕೂಡ ಎಷ್ಟೋ ಬಾರಿ ಲಂಡನ್‍ಗೆ ದಾಸ ಭೇಟಿ ನೀಡಿದ್ದರು. ಆದರೆ ಈ ಬಾರಿ ಲಂಡನ್ ನಲ್ಲಿ ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್ ಪಡೆದುಕೊಂಡು ಹಾಗೇ ಟ್ರಿಪ್ ಮುಗಿಸಿಕೊಂಡು ಮರಳಿದ್ದಾರೆ.

    ದರ್ಶನ್ ಅವರ ಈ ಬಾರಿಯ ಲಂಡನ್ ಪ್ರವಾಸ ಹಿಂದಿನಂತಿರಲಿಲ್ಲ. ಒಬ್ಬ ಸಾಮಾನ್ಯ ಪ್ರವಾಸಿನಾಗಿ ಹೋಗಿದ್ದರೇ ಹೊರತು ನಟನಾಗಿ ಹೋಗಿರಲಿಲ್ಲ. ಕಳೆದ ವಾರ 18ಕ್ಕೆ ಮಗ ವಿನೀಶ್ ಹಾಗೂ ಸ್ನೇಹಿತ ಮಲ್ಲಿಕಾರ್ಜುನ್ ಜೊತೆ ಲಂಡನ್‍ಗೆ ತೆರಳಿದ್ದು, ಒಂದು ವಾರ ಯೂರೋಪ್ ಟ್ರಿಪ್ ಮಾಡಿಕೊಂಡು ಬಂದಿದ್ದಾರೆ. ಅಲ್ಲಿ ತನ್ನ ಮಗನೊಂದಿಗೆ ಅಪರೂಪದ ಪ್ರವಾಸವನ್ನು ಕೈಗೊಂಡಿದ್ದರು. ಅಷ್ಟೇ ಅಲ್ಲದೇ ಲಂಡನ್‍ನಲ್ಲಿ ವಿಶೇಷ ಕಾರ್ಯಕ್ರಮವೊಂದರಲ್ಲಿ ಸಂದರ್ಶನವನ್ನೂ ಕೊಟ್ಟು ಬಂದಿದ್ದಾರೆ.

    ಅಕ್ಟೊಬರ್ 19ಕ್ಕೆ ಪ್ರಶಸ್ತಿ ಪಡೆದಕೊಂಡು ನಂತರ ಲಂಡನ್ ಸ್ನೇಹಿತರ ಜೊತೆಗೂಡಿ ಜಾಲಿ ಟೂರ್ ಮಾಡಿದ್ದಾರೆ. ಅಲ್ಲಿನ ಕಲರ್‍ಫುಲ್ ಸ್ಥಳಗಳನ್ನು ನೋಡಿ, ಉಳಿದೆಲ್ಲ ಕೆಲಸದ ಟೆನ್ಷನ್ ಅನ್ನು ಪಕ್ಕಕ್ಕಿಟ್ಟು ಸಾದಾಸೀದಾ ತಂದೆಯಂತೆ ಮಗನಿಗೆ ಇಷ್ಟವಾದ ಊಟ ತಿಂಡಿ ಕೊಡಿಸಿ ಪ್ರವಾಸ ಮುಗಿಸಿದ್ದಾರೆ.

    ಲಂಡನ್‍ನಲ್ಲಿ ಕನ್ನಡಿಗರ ದೊಡ್ಡ ಕೂಟವೇ ಇದೆ. ಅಲ್ಲಿನ ಅಭಿಮಾನಿಗಳಿಗಾಗಿ ದಚ್ಚು ಪ್ರಖ್ಯಾತ ಬಿಬಿಸಿ ರೇಡಿಯೋ ಕಚೇರಿಗೆ ತೆರಳಿ ವಿಶೇಷ ಸಂದರ್ಶನ ನೀಡಿ ಬಂದಿದ್ದಾರೆ.

    ದರ್ಶನ್ ಸಿನಿಮಾಗಳು ಮಾತ್ರವಲ್ಲದೇ ಪ್ರಸ್ತುತ ಕನ್ನಡ ಚಿತ್ರಗಳು ಇಂಗ್ಲೆಂಡಿನಲ್ಲಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಈ ಹಿಂದೆ ತಮ್ಮ ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವ ವೇಳೆ ಲಂಡನ್‍ಗೆ ಶಿವಣ್ಣ, ರಕ್ಷಿತ್ ಶೆಟ್ಟಿ, ಗಣೇಶ್ ಸೇರಿದಂತೆ ಅನೇಕ ನಟರು ಬಿಬಿಸಿಗೆ ತೆರಳಿ ಸಂದರ್ಶನ ನೀಡಿದ್ದರು. ಹಾಗೆಯೇ ದರ್ಶನ್ ಕೂಡ ಬಿಬಿಸಿ ರೇಡಿಯೋದಲ್ಲಿ ಮಾತನಾಡಿ ಬಂದಿದ್ದಾರೆ.

    ಕಳೆದ ಮಂಗಳವಾರ ಯುರೋಪ್ ಪ್ರವಾಸದಿಂದ ವಾಪಸ್ಸಾದ ದರ್ಶನ್ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ನಂತರ 28 ರಂದು ಹೈದ್ರಾಬಾದ್‍ಗೆ ತೆರಳಿ ಕುರುಕ್ಷೇತ್ರ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

     

  • ಕನ್ನಡದಲ್ಲಿ ಎರಡನೇ ಡಬ್ಬಿಂಗ್ ಸಿನಿಮಾ ‘ಧೀರ’ ತೆರೆಗೆ ಬರಲು ಸಿದ್ಧ

    ಕನ್ನಡದಲ್ಲಿ ಎರಡನೇ ಡಬ್ಬಿಂಗ್ ಸಿನಿಮಾ ‘ಧೀರ’ ತೆರೆಗೆ ಬರಲು ಸಿದ್ಧ

    ಬೆಂಗಳೂರು: ಕನ್ನಡದಲ್ಲಿ ಎರಡನೇ ಡಬ್ಬಿಂಗ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇದು ತಮಿಳಿನ `ಆರಂಭಂ’ ಸಿನಿಮಾವನ್ನು ಕನ್ನಡದಲ್ಲಿ `ಧೀರ’ ಎಂದು ಹೆಸರಿಟ್ಟು ಡಬ್ ಮಾಡಿ ಬಿಡುಗಡೆಯಾಗಲು ಚಿತ್ರತಂಡ ಸಿದ್ಧವಾಗಿದೆ.

    ಈ ಹಿಂದೆ ತಮಿಳು ನಟ ಅಜಿತ್ ಕುಮಾರ್ ಅಭಿನಯಿಸಿದ ಸಿನಿಮಾ ಕನ್ನಡದಲ್ಲಿ ಡಬ್ ಆಗಿ `ಸತ್ಯದೇವ್ ಐಪಿಎಸ್’ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಈಗ ಅವರು ಅಭಿನಯಿಸಿರುವ ಮತ್ತೊಂದು ತಮಿಳು ಸಿನಿಮಾ ಕನ್ನಡದಲ್ಲಿ ಡಬ್ ಆಗಿ ಬಿಡುಗಡೆ ಆಗುತ್ತಿದೆ.

    ನಟ ಅಜಿತ್ ಅಭಿನಯದ `ಆರಂಭಂ’ ಚಿತ್ರವನ್ನು ಕನ್ನಡದಲ್ಲಿ `ಧೀರ’ ಎಂಬ ಹೆಸರಿನಲ್ಲಿ ಡಬ್ ಮಾಡಿ ತೆರೆಗೆ ತರಲು ನಿರ್ಮಾಪಕರು ಸಿದ್ಧವಾಗಿದ್ದಾರೆ. ಈಗಾಗಲೇ ಕನ್ನಡದಲ್ಲಿ ಈ ಸಿನಿಮಾದ ಚಿತ್ರೀಕರಣ ಮುಗಿದು ಸೆನ್ಸಾರ್ ಅನ್ನು ಮುಗಿಸಿ ಚಿತ್ರಮಂದಿರಕ್ಕೆ ಕಾಲಿಡಲು ಸಜ್ಜಾಗಿದೆ.

    ಚಿತ್ರದ ಟೀಸರ್ ಅನ್ನು ಚಿತ್ರತಂಡ ಪ್ರಾಯೋಗಿಕವಾಗಿ ಬಿಡುಗಡೆ ಮಾಡಿದ್ದು, ದರ್ಶನ್ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಬಿ. ಕೃಷ್ಣಮೂರ್ತಿ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಟ ಆರ್ಯ, ನಟಿ ನಯನತಾರ, ತಾಪ್ಸಿ ಪನ್ನು ಅಭಿನಯಿಸಿದ್ದಾರೆ. ಇದೊಂದು ಲವ್ ಅಂಡ್ ಸಸ್ಪೆನ್ಸ್ ಸಿನಿಮಾವಾಗಿದೆ.

    ಈ ಹಿಂದೆ ಸತ್ಯದೇವ್ ಐಪಿಎಸ್ ಬಿಡುಗಡೆ ಸಂದರ್ಭದಲ್ಲಿ ಜಗ್ಗೇಶ್, ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿಚಾರದ ಬಗ್ಗೆ ನಿರ್ಮಾಪಕ ಕೃಷ್ಣಮೂರ್ತಿ ಅವರು ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ)ಗೆ ದೂರು ನೀಡಿದ್ದರು. ಈ ಸಂಬಂಧ ಅಡ್ಡಿಪಡಿಸಿದ್ದಕ್ಕೆ ಸಿಸಿಐ ಸಾರಾ ಗೋವಿಂದ್, ವಾಟಾಳ್ ನಾಗರಾಜ್, ಜಗ್ಗೇಶ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು.

    ಕೃಷ್ಣಮೂರ್ತಿಯವರು ಕನ್ನಡದಕ್ಕೆ ಡಬ್ ಮಾಡಿರುವ ಮುಂದಿನ ಚಿತ್ರ ಧೀರ ಬಿಡುಗಡೆಗೆ ಯಾರೂ ಯಾವುದೇ ರೀತಿ ಅಡೆ ತಡೆಗಳನ್ನ ಮಾಡಬಾರದೆಂದು ಸಿಸಿಐ ಆದೇಶ ಹೊರಡಿಸಿದೆ. ಹಾಗೆಯೇ ಸತ್ಯದೇವ್ ಐಪಿಎಸ್ ಚಿತ್ರ ಬಿಡುಗಡೆಗೆ ಆದ ತೊಡಕುಗಳ ಬಗ್ಗೆ ತನಿಖೆ ನಡೆಸುವಂತೆ ಡಿಜಿ (ಇನ್ವೆಸ್ಟಿಗೇಷನ್) ಅವರಿಗೆ ಸಿಸಿಐ ಆದೇಶ ಹೊರಡಿಸಿತ್ತು.

     

     

     

  • ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ

    ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ

    ಬೆಂಗಳೂರು: ದಿನದಿಂದ ದಿನಕ್ಕೆ ವರದಕ್ಷಿಣೆ ಕಿರುಕುಳಕ್ಕೆ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನೊಂದ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ರಾಮಮೂರ್ತಿ ನಗರ ಓಲ್ಡ್ ಪೆÇಲೀಸ್ ಸ್ಟೇಷನ್ ಸಮೀಪದಲ್ಲಿ ನಡೆದಿದೆ.

    ಅನಿತಾ (23) ನೇಣಿಗೆ ಶರಣಾದ ಗೃಹಿಣಿ. ಇವರಿಗೆ 7 ವರ್ಷಗಳ ಹಿಂದೆ ತರಕಾರಿ ವ್ಯಾಪಾರಿಯಾದ ಶಿವಕುಮಾರ್ ಎಂಬವರ ಜೊತೆ ವಿವಾಹವಾಗಿದ್ದು, ಎರಡು ವರ್ಷದ ಹೆಣ್ಣು ಮಗು ಕೂಡ ಇದೆ. ಶಿವಕುಮಾರ್ ತನ್ನ ಪತ್ನಿಗೆ ತವರು ಮನೆಯಿಂದ ಹಣ ತರುವಂತೆ ದಿನವೂ ಪೀಡಿಸುತ್ತಿದ್ದ. ಮತ್ತೆ ರಾತ್ರಿ ಹಣ ತರುವಂತೆ ಜಗಳವಾಡಿದ್ದಾನೆ. ಇದರಿಂದ ನೊಂದ ಅನಿತಾ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ .

    ಘಟನೆ ನಡೆದ ಸ್ಥಳಕ್ಕೆ ರಾಮಮೂರ್ತಿ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಶಿವಕುಮಾರ್‍ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅನಿತಾರನ್ನು ಗಂಡ ಮತ್ತು ಮಾವ ಸೇರಿ ಕೊಲೆ ಮಾಡಿದ್ದಾರೆ ಎಂದು ಅನಿತಾ ಪೋಷಕರ ಆರೋಪ ಮಾಡುತ್ತಿದ್ದಾರೆ.

    ಸದ್ಯಕ್ಕೆ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

  • ಬಾಡಿಗೆ ಮನೆ ಕೇಳೋ ನೆಪದಲ್ಲಿ ಸರ ಕದಿಯಲು ಯತ್ನಿಸಿದಾತನಿಗೆ ಬಿತ್ತು ಗೂಸ!

    ಬಾಡಿಗೆ ಮನೆ ಕೇಳೋ ನೆಪದಲ್ಲಿ ಸರ ಕದಿಯಲು ಯತ್ನಿಸಿದಾತನಿಗೆ ಬಿತ್ತು ಗೂಸ!

    ಬೆಂಗಳೂರು: ಮನೆ ಬಾಡಿಗೆ ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಮಾಂಗಲ್ಯ ಸರ ಕದಿಯಲು ಯತ್ನಿಸಿದ ಕಳ್ಳನನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನೆಲಮಂಗಲ ತಾಲೂಕಿನ ಭೈರನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬರಗೂರು ಗ್ರಾಮದ ನಿವಾಸಿ ಲೋಪಾಕ್ಷಿ ಸರ ಕಳವು ಮಾಡಿ ಈಗ ಸಾರ್ವಜನಿಜಕರಿಂದ ಹೊಡೆತ ತಿಂದಿದ್ದಾನೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಭೈರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಮನೆ ಒಡತಿ ಪ್ರೇಮಾ ಎಂಬುವವರ ಸರವನ್ನು ಕಳುವು ಮಾಡಲು ಯತ್ನಿಸಿದಾಗ ಕಳ್ಳ ಸಿಕ್ಕಿ ಬಿದ್ದಿದ್ದಾನೆ.

    ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದ ಆತ ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಮಹಿಳೆಯ ಚಿನ್ನದ ಮಾಂಗಲ್ಯ ಸರ ಕಸಿದು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಪ್ರೇಮಾ ಅವರು ಕಿರುಚಿದಾಗ ಜನರು ಸರಗಳ್ಳನನ್ನು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

    ಸದ್ಯ ನೆಲಮಂಗಲ ಗ್ರಾಮಾಂತರ ಪೊಲೀಸರ ವಶದಲ್ಲಿ ಲೋಪಾಕ್ಷಿ ಇದ್ದು, ವಿಚಾರಣೆ ನಡೆಯುತ್ತಿದೆ.

  • ಕೋಟೆಯಲ್ಲಿ ಮೃತಪಟ್ಟ ಟಿಪ್ಪುವಿನ ಮರಣ ವೀರಮರಣ ಹೇಗೆ ಆಗುತ್ತೆ: ರಾಷ್ಟ್ರಪತಿಗಳಿಗೆ ಪ್ರತಾಪ್ ಸಿಂಹ ಪ್ರಶ್ನೆ

    ಕೋಟೆಯಲ್ಲಿ ಮೃತಪಟ್ಟ ಟಿಪ್ಪುವಿನ ಮರಣ ವೀರಮರಣ ಹೇಗೆ ಆಗುತ್ತೆ: ರಾಷ್ಟ್ರಪತಿಗಳಿಗೆ ಪ್ರತಾಪ್ ಸಿಂಹ ಪ್ರಶ್ನೆ

    ಬೆಂಗಳೂರು: ಕೋಟೆಯಲ್ಲಿ ಮೃತಪಟ್ಟ ಟಿಪ್ಪುವಿನ ಮರಣ, ವೀರಮರಣ ಹೇಗೆ ಆಗುತ್ತದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.

    ರಾಜ್ಯ ವಿಧಾನಸಭೆ ವಜ್ರಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಟಿಪ್ಪುವನ್ನು ಹೊಗಳಿ ರಾಷ್ಟ್ರಪತಿಗಳು ಭಾಷಣ ಮಾಡಿದ ವಿಚಾರದ ಬಗ್ಗೆ ಪ್ರಶ್ನೆ ಎತ್ತಿ ಪ್ರತಾಪ್ ಸಿಂಹ ಅವರು ಎರಡು ಟ್ವೀಟ್ ಮಾಡಿದ್ದಾರೆ.

    ಟಿಪ್ಪು ಯುದ್ಧ ಭೂಮಿಯಲ್ಲಿ ಹೋರಾಟ ಮಾಡುತ್ತಾ ಮರಣ ಹೊಂದಿಲ್ಲ. ಕೋಟೆಯಲ್ಲಿ ಮರಣ ಹೊಂದಿದ್ದಾನೆ. ಕೋಟೆಯಲ್ಲಿ ಮರಣ ಹೊಂದಿದರೆ ಅದು ಹೇಗೆ ವೀರ ಮರಣವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

    ಒಂದು ವೇಳೆ ಟಿಪ್ಪು ಕ್ಷಿಪಣಿಯ ಜನಕನಾಗಿದ್ದರೆ ಬ್ರಿಟಿಷರ ವಿರುದ್ಧ ಕ್ಷಿಪಣಿಯನ್ನು ಪ್ರಯೋಗಿಸಬಹುದಿತ್ತು. ಆದರೆ 3ನೇ ಮತ್ತು 4ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಸೋತಿದ್ದು ಯಾಕೆ? ಕ್ಷಿಪಣಿಯನ್ನು ಬ್ರಿಟಿಷರ ವಿರುದ್ಧ ಪ್ರಯೋಗಿಸದ್ದು ಯಾಕೆ ಎಂದು ಪ್ರಶ್ನಿಸಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

    ಇಂದು ವಿಧಾನಸೌಧದ ವಜ್ರ ಮಹೋತ್ಸವ ಕಾರ್ಯಕ್ರಮದ ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಟಿಪ್ಪು ಸುಲ್ತಾನ್ ಬಗ್ಗೆ ಗುಣಗಾನ ಮಾಡಿದ್ದರು. ಅಲ್ಲದೇ ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ವೀರಮರಣವನ್ನಪ್ಪಿದ. ಭಾರತದ ಮೊದಲ ಕ್ಷಿಪಣಿ ಜನಕ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಜನಕ ಎಂದು ಹಾಡಿಹೊಗಳುವ ವೇಳೆ ಕಾಂಗ್ರೆಸ್ ಶಾಸಕರು ಮೇಜುಕುಟ್ಟಿ ಸ್ವಾಗತಿಸಿದರೆ, ಬಿಜೆಪಿ ಶಾಸಕರು ಮಾತ್ರ ಸುಮ್ಮನೆ ಕುಳಿತಿದ್ದರು.

  • ಅಲೆಕ್ಸಾಂಡರ್  ಸಿನಿಮಾ ನಟ ರಾಕೇಶ್ ಮೇಲೆ ಗುಂಡಾ ವರ್ತನೆ ತೋರಿದ ಪೊಲೀಸರು

    ಅಲೆಕ್ಸಾಂಡರ್ ಸಿನಿಮಾ ನಟ ರಾಕೇಶ್ ಮೇಲೆ ಗುಂಡಾ ವರ್ತನೆ ತೋರಿದ ಪೊಲೀಸರು

    ಬೆಂಗಳೂರು: ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಅಲೆಕ್ಸಾಂಡರ್ ಚಿತ್ರದ ನಟ ರಾಕೇಶ್ ಮೇಲೆ ಪೊಲೀಸರು ಗೂಂಡಾ ವರ್ತನೆ ತೋರಿದಂತಹ ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಂಗಳವಾರ ತಡರಾತ್ರಿ ರಾಕೇಶ್ ವಿಜಯನಗರದ ಸ್ನೇಹಿತನ ಹುಟ್ಟು ಹಬ್ಬದ ಪಾರ್ಟಿಗೆ ಹೋಗಿದ್ದರು. ಪಾರ್ಟಿ ಮುಗಿಸಿ ಮಾಗಡಿ ರಸ್ತೆಯ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

    ಆಗಿದ್ದು ಏನು? ನಟ ರಾಕೇಶ್ ಸ್ನೇಹಿತನ ಮನೆಯಿಂದ ಪಾರ್ಟಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆಯಲ್ಲಿ ಗೋಪಾಲಪುರದ ಬಳಿ ಸಿಗರೇಟ್ ಸೇದುತ್ತಾ ನಿಂತಿದ್ದರು. ಈ ವೇಳೆ ನೈಟ್ ಬೀಟ್ ನಲ್ಲಿದ್ದ ಮಾಗಡಿ ರೋಡ್ ಪೊಲೀಸರು ತಡರಾತ್ರಿ ರಾಕೇಶ್ ನಿಂತಿರುವುದನ್ನು ಗಮನಿಸಿದ್ದಾರೆ. ಈ ವೇಳೆ ರಾಕೇಶ್ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು, ಪೊಲೀಸರು ರಾಕೇಶರನ್ನು ಠಾಣೆಗೆ ಕರೆದೊಯ್ದು ಲಾಠಿಯಿಂದ ಮನಬಂದಂತೆ ಹೊಡೆದಿದ್ದಾರೆ. ಇದರಿಂದಾಗಿ ರಾಕೇಶ್ ಎಡಗಾಲಿನ ತೊಡೆಯ ಭಾಗ ಸಂಪೂರ್ಣವಾಗಿ ರಕ್ತಹೆಪ್ಪುಗಟ್ಟಿದ್ದು ನಡೆದಾಡಲೂ ಕಷ್ಟ ಪಡುವ ಪರಿಸ್ಥಿತಿ ತಲುಪಿದ್ದಾರೆ.

    ಪೊಲೀಸರು ನಡೆಸಿದ ದೌರ್ಜನ್ಯದಿಂದ ಮಾನಸಿಕವಾಗಿ ಜರ್ಜರಿತರಾಗಿರುವ ರಾಕೇಶ್, ಇದೀಗ ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್ ರ ಬಳಿ ತಮಗದ ಕೆಟ್ಟ ಅನುಭವದ ಕುರಿತು ದೂರು ಕೊಟ್ಟಿದ್ದಾರೆ.

  • ಇದೇ ಶುಕ್ರವಾರ ತೆರೆಗೆ ಬರಲಿದೆ ರಾಕ್‍ಲೈನ್ ನಿರ್ಮಾಣದ ಮೋಹನ್‍ಲಾಲ್ ಅಭಿನಯದ ವಿಲನ್

    ಇದೇ ಶುಕ್ರವಾರ ತೆರೆಗೆ ಬರಲಿದೆ ರಾಕ್‍ಲೈನ್ ನಿರ್ಮಾಣದ ಮೋಹನ್‍ಲಾಲ್ ಅಭಿನಯದ ವಿಲನ್

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ 25ಕ್ಕೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಾಕ್‍ಲೈನ್ ವೆಂಕಟೇಶ್ ಈಗ ಭಾರತೀಯ ಚಿತ್ರರಂಗದ ಹೆಸರಂತ ನಿರ್ಮಾಪಕರಾಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ರವಿತೇಜ, ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಚಿತ್ರಗಳಿಗೆ ಬಂಡವಾಳ ಹೂಡಿದ ಹೆಗ್ಗಳಿಕೆ ರಾಕ್‍ಲೈನ್ ವೆಂಕಟೇಶ್‍ಗೆ ಸಲ್ಲುತ್ತದೆ. ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್‍ನಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಾಕ್‍ಲೈನ್ ಈಗ ಮಲೆಯಳಂ ನಟ ಮೋಹನ್ ಲಾಲ್ ನಟನೆಯ `ವಿಲನ್’ ನಿರ್ಮಾಪಕರಾಗಿದ್ದು ಚಿತ್ರ ಇದೇ 28ಕ್ಕೆ ಬಿಡುಗಡೆಯಾಗಲಿದೆ.

    ಒಬ್ಬ ಸಾಮಾನ್ಯ ಸಹ ಕಲಾವಿದನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಕ್‍ಲೈನ್ ವೆಂಕಟೇಶ್ ಅವರು ಇಂದು ಆಕಾಶದೇತ್ತರಕ್ಕೆ ಬೆಳೆದು ನಿಂತಿದ್ದಾರೆ. ತಮಗೇ ಯಾವುದೇ ಬೌಂಡರಿ ಲೈನ್ ಹಾಕಿಕೊಳ್ಳದೆ ಟಾಲಿವುಡ್, ಕಾಲಿವುಡ್ ಹಾಗೂ ದೂರದ ಬಾಲಿವುಡ್ ತನಕ ತಮ್ಮ ಛಾಪನ್ನು ಈಗಾಗಲೇ ಮೂಡಿಸಿದ್ದಾರೆ. ಇನ್ನೂ ಭಾರತೀಯ ಚಿತ್ರರಂಗದಲ್ಲೇ ಸ್ಟೋರಿ ಬೆಸ್ಟ್ ಸಿನಿಮಾಗಳಿಗೆ ಹೆಸರು ವಾಸಿಯಾಗಿರುವ ಮಾಲಿವುಡ್ ಚಿತ್ರರಂಗಕ್ಕೆ ರಾಕ್‍ಲೈನ್ ವೆಂಕಟೇಶ್ ವಿಲನ್ ಮೂಲಕ ಪ್ರವೇಶವನ್ನು ಪಡೆಯುತ್ತಿದ್ದಾರೆ.

    ಕಳೆದ ವರ್ಷ `ಪುಲಿ ಮುರುಗನ್’ ಚಿತ್ರದ ಮೂಲಕ ಬಾಕ್ಸಾಫೀಸ್‍ನಲ್ಲಿ ಸೆಂಚುರಿ ಬಾರಿಸಿದ ಮೋಹನ್ ಲಾಲ್‍ಗೆ ಈ ಬಾರಿ ಕ್ರೈಂ ಥ್ರಿಲ್ಲರ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ಈ ಚಿತ್ರದಲ್ಲಿ ಕೇವಲ ಮೋಹನ್ ಲಾಲ್ ಮಾತ್ರವಲ್ಲ ಕಾಲಿವುಡ್‍ನ ಪ್ರಮುಖ ನಟರಾದ ವಿಶಾಲ್, ನಟಿ ಮಂಜು ವಾರಿಯರ್, ಹನ್ಸಿಕಾ ಮೊಟ್ವಾನಿ, ರಾಶಿ ಖನ್ನಾ ರಂಥ ಫೇಮಸ್ ಸ್ಟಾರ್‍ಗಳು ಬಣ್ಣ ಹಚ್ಚಿದ್ದಾರೆ.

    ಮಾಲಿವುಡ್‍ನ ಖ್ಯಾತ ನಿರ್ದೇಶಕ ಬಿ.ಉನ್ನಿಕೃಷ್ಣನ್ ಸಾರಥ್ಯದಲ್ಲಿ ವಿಲನ್ ಮೂಡಿಬಂದಿದ್ದು, ಕೆಲ ದಿನಗಳ ಹಿಂದೆ ಬಿಡುಗಡೆಯಾದ ಟ್ರೇಲರ್ ಸೋಷಿಯಲ್ ಮಿಡಿಯದಲ್ಲಿ ಸಖತ್ ಸದ್ದು ಮಾಡಿತ್ತು.

    ರಾಕ್‍ಲೈನ್ ವೆಂಕಟೇಶ್‍ರವರ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ವಿಷಯ ನಿಮಗೇ ಹೇಳಲೇ ಬೇಕು. ಏಕೆಂದರೆ ಇದು ಕನ್ನಡ ಚಿತ್ರರಸಿಕರಿಗೆ ಹೆಮ್ಮೆಯಾಗುವ ಸಮಾಚಾರ. ನಿರ್ಮಾಣದ ಜೊತೆಗೆ ಕೆಲ ಸಿನಿಮಾಗಳಲ್ಲಿ ಡಿಫರೆಂಟ್ ಪಾತ್ರಗಳನ್ನ ಮಾಡುತ್ತಿರುವ ವೆಂಕಟೇಶ್ ಮತ್ತೊಂದು ಸಾಧನೆಯ ಮೈಲುಗಲ್ಲು ಹತ್ತಲೂ ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ ರಾಕ್‍ಲೈನ್ ಚೀನಾ ಭಾಷೆಯಲ್ಲೊಂದು ಅದ್ದೂರಿ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರಂತೆ. ಚೀನಾದಲ್ಲಿಯೇ ಒಬ್ಬ ಹೊಸ ಪ್ರತಿಭೆಯೊಬ್ಬನನ್ನು ತಯಾರಿ ಮಾಡುತ್ತಿದ್ದಾರಂತೆ. ಚೀನಾ ಭಾಷೆಯ ಜೊತೆಗೆ ಜಗತ್ತಿನ ಬೇರೆ ಬೇರೆ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಮಾಡುವ ಮಹತ್ತರ ಯೋಜನೆಯಲ್ಲಿ ರಾಕ್‍ಲೈನ್ ಇದ್ದಾರೆ ಎನ್ನಲಾಗುತ್ತಿದೆ.

    ಈಗಾಗಲೇ `ವಿಲನ್’ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳು ಮೂಡಿಸಿರುವ ಸಂದರ್ಭದಲ್ಲಿ ಹೊಸ ಸುದ್ದಿ ಎಲ್ಲರನ್ನು ಹೆಮ್ಮೆ ಪಡುವಂತೆ ಮಾಡಿದೆ. `ವಿಲನ್’ ಸಿನಿಮಾದ ಪೋಸ್ಟರ್ ಹಾಗೂ ಟ್ರೇಲರ್‍ನ ನೋಡಿದ ಸೂಪರ್ ಸ್ಟಾರ್ ರಜನಿಕಾಂತ್, ಈ ಸಿನಿಮಾವನ್ನು ನಾನು ಖಂಡಿತ ಮೋಡುತ್ತೇನೆ ಎಂದು ತಿಳಿಸಿದ್ದಾರೆ.

     

  • ಗಮನಿಸಿ, ದಾಖಲೆ ಇದ್ರೆ ಮಾತ್ರ ಇನ್ನು ಮುಂದೆ ಈ ದ್ವಿಚಕ್ರ ವಾಹನಗಳು ನೋಂದಣಿ ಆಗುತ್ತೆ!

    ಗಮನಿಸಿ, ದಾಖಲೆ ಇದ್ರೆ ಮಾತ್ರ ಇನ್ನು ಮುಂದೆ ಈ ದ್ವಿಚಕ್ರ ವಾಹನಗಳು ನೋಂದಣಿ ಆಗುತ್ತೆ!

    ಬೆಂಗಳೂರು: 100 ಸಿಸಿ ಸಾಮರ್ಥ್ಯದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ನಿಷೇಧ ಹೇರಿರುವ ಸಾರಿಗೆ ಇಲಾಖೆ ಈಗ, ಈ ವಾಹನಗಳ ಪಟ್ಟಿಯನ್ನು ಪಟ್ಟಿಯನ್ನು ಬಿಡುಗಡೆ ಮಾಡಿ ನೋಂದಣಿಗೆ ಸಂಬಂಧಿಸಿದಂತೆ ಸೂಚನೆಗಳನ್ನು ಪ್ರಕಟಿಸಿದೆ.

    ಈ ವಾಹನಗಳನ್ನು ನೋಂದಣಿ ಮಾಡಿಸಬೇಕಾದರೆ ಒಂದು ಸೀಟಿಗೆ ಬದಲಾಯಿಸಿಕೊಂಡು, ಬೈಕಿನ ಆಸನ ಸಾಮರ್ಥ್ಯ ಒಂದು ಎಂಬುದಾಗಿ ನಮೂದಿಸಿದ ದಾಖಲೆಗಳನ್ನು ಸಲ್ಲಿಸಿದ್ದಲ್ಲಿ ಮಾತ್ರ ಈ ವಾಹನವನ್ನು ನೋಂದಾಯಿಸಲಾಗುವುದು ಎಂದು ಸಾರಿಗೆ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.

    100 ಸಿಸಿ ಕಡಿಮೆ ಸಾಮರ್ಥ್ಯ ಹೊಂದಿರುವ ದ್ವಿಚಕ್ರ ವಾಹನಗಳು: ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್(87.8 ಸಿಸಿ), ಟಿವಿಎಸ್ ಸ್ಪೋಟ್ರ್ಸ್ (99.77ಸಿಸಿ), ಹೀರೋ ಎಸ್‍ಎಫ್ ಡಿಲಕ್ಸ್ (97.2 ಸಿಸಿ), ಹೀರೋ ಸ್ಪ್ಲೆಂಡರ್ ಪ್ಲಸ್ (97.2 ಸಿಸಿ), ಟಿವಿಎಕ್ಸ್ ಎಕ್ಸ್‍ಎಲ್ 100 (99.7 ಸಿಸಿ), ಹೀರೋ ಸ್ಪ್ಲೆಂಡರ್ ಪ್ರೋ (97.2 ಸಿಸಿ), ಬಜಾಜ್ ಸಿಟಿ 100 (99.27ಸಿಸಿ), ಹೀರೋ ಎಸ್‍ಎಫ್ ಡಿಲಕ್ಸ್ ಎಕೋ (97ಸಿಸಿ), ಹೀರೋ ಪ್ಯಾಷನ್ ಪ್ರೋ ಐ3ಎಸ್ (97.2 ಸಿಸಿ).

    ಅಪಘಾತದಿಂದಾಗಿ ಹಿಂಬದಿ ಸವಾರರು ಮೃತಪಡುವುದನ್ನು ತಡೆಯುವ ನಿಟ್ಟಿನಲ್ಲಿ ಹೈಕೋರ್ಟ್ ಆದೇಶದಂತೆ ಕರ್ನಾಟಕ ಸರ್ಕಾರ ಮೋಟಾರು ವಾಹನ ಕಾಯ್ದೆಯಲ್ಲಿ ಈ ನಿಯಮವನ್ನು ರಾಜ್ಯಾದ್ಯಂತ ಜಾರಿಗೆ ತರಲು ತೀರ್ಮಾಸಿದೆ. ಈ ಕುರಿತು ಎಲ್ಲ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ರವಾನಿಸಲಾಗಿದೆ. ಮೋಟಾರು ವಾಹನ ಕಾಯ್ದೆಯ ನಿಯಮಗಳಲ್ಲಿ 100 ಸಿಸಿ ಸಾಮರ್ಥ್ಯಕ್ಕಿಂತ ಕಡಿಮೆ ಇರುವ ಬೈಕ್‍ಗಳಲ್ಲಿ ಹಿಂಬದಿ ಸಾವರರು ಪ್ರಯಾಣ ಮಾಡಲು ಸೂಕ್ತವಲ್ಲ ಎಂದು ತಿಳಿಸಲಾಗಿದೆ.

  • ಯೋಗಕ್ಷೇಮ ವಿಚಾರಿಸದ್ದಕ್ಕೆ ನೆಲಮಂಗಲದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

    ಯೋಗಕ್ಷೇಮ ವಿಚಾರಿಸದ್ದಕ್ಕೆ ನೆಲಮಂಗಲದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

    ಬೆಂಗಳೂರು: ರೈಲ್ವೇ ಹಳಿಯಲ್ಲಿ ರುಂಡ ಮುಂಡ ತುಂಡಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ರೇಣುಕಾನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಮೃತ ವ್ಯಕ್ತಿಯನ್ನು ಗೆದ್ದಲಹಳ್ಳಿಯ ನಿವಾಸಿ ಅಶೋಕ್ ಕುಮಾರ್ ಎಂದು ಗುರುತಿಸಲಾಗಿದೆ. ಯಶವಂತಪುರ ಹಾಸನ ಮಾರ್ಗದ ರೈಲ್ವೇ ಹಳಿಯ ಜನನಿಬಿಡ ಪ್ರದೇಶದಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಈ ಘಟನೆ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕವನ್ನು ಮೂಡಿಸಿದೆ.

    ಜನರು ಓಡಾಡುತ್ತಿದ್ದಂತಹ ಪ್ರದೇಶದ ಸಮೀಪದಲ್ಲಿಯೇ ಇಂದು ಬೆಳಗ್ಗೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವವನ್ನು ನೋಡಿದ ಜನರು ನೋಡಿ ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ನೆಲಮಂಗಲ ಪಟ್ಟಣ ಹಾಗೂ ಯಶವಂತಪುರ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

    ಪೊಲೀಸರು ಪರಿಶೀಲನೆ ನಡೆಸುವಾಗ ಮೃತ ವ್ಯಕ್ತಿ ಬಟ್ಟೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಇದರಲ್ಲಿ ನಾನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಯಾರೊಬ್ಬರು ನನ್ನ ಯೋಗಕ್ಷೇಮವನ್ನು ವಿಚಾರಿಸುತ್ತಿರಲಿಲ್ಲ. ಆದ್ದರಿಂದ ನನಗೆ ಜೀವನದಲ್ಲಿ ಜಿಗುಪ್ಸೆಯಾಗಿದೆ. ಇದರಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ತನ್ನ ಕುಟುಂಬಸ್ಥರ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದರು. ಪೊಲೀಸರು ಈ ಪ್ರಕರಣ ಕುರಿತು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.