Tag: Bangalore

  • ಕೆಎಸ್‍ಆರ್‍ಟಿಸಿ, ಬಿಎಂಟಿಸಿ ನೌಕರರಿಂದ ಅಹೋರಾತ್ರಿ ಮುಷ್ಕರ

    ಕೆಎಸ್‍ಆರ್‍ಟಿಸಿ, ಬಿಎಂಟಿಸಿ ನೌಕರರಿಂದ ಅಹೋರಾತ್ರಿ ಮುಷ್ಕರ

    ಬೆಂಗಳೂರು: ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ನೌಕರರು ಅಹೋರಾತ್ರಿ ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸಿದ್ದಾರೆ.

    ಈ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಹೆಚ್‍ಎಸ್ ಮಂಜುನಾಥ್, ಮೂವತ್ತು ದಿನಗಳ ಒಳಗಾಗಿ ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ನಮ್ಮ ಹಿಂದಿನ ಮುಷ್ಕರವನ್ನು ಅಂತ್ಯಗೊಳಿಸಿದ್ದರು. ಆದರೆ ಈವರೆಗೂ ಯಾವುದೇ ರೀತಿಯ ಬೇಡಿಕೆಗಳನ್ನು ಈಡೇರಿಸಿಲ್ಲ. ಶೇ.12.5 ವೇತನ ಹೆಚ್ಚಳ ಮಾಡಲಾಗಿತ್ತು. ಇದರ ಹೊರತು ಬೇರಾವ ಬೇಡಿಕೆಯನ್ನೂ ಈಡೇರಿಸಿಲ್ಲ ಎಂದು ಹೇಳಿದ್ರು.

    ನಾವು ಒಟ್ಟು 52 ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ಹೂಡಿದ್ದೆವು. ಒಟ್ಟು 1600 ಸಿಬ್ಬಂದಿಯನ್ನು ವರ್ಗಾವಣೆ ಮಾಡಿ 2016ರ ಸೆಪ್ಟೆಂಬರ್ ನಲ್ಲಿ ಆದೇಶ ಹೊರಡಿಸಲಾಗಿತ್ತು. ಪುತ್ತೂರು ವಿಭಾಗದಿಂದ 250 ಜನರನ್ನು ಎಲ್ಲಿಗೆ ವರ್ಗಾವಣೆಯಾಗಿದೆಯೋ ಅಲ್ಲಿಗೆ ಕಳುಹಿಸಿಕೊಟ್ಟಿಲ್ಲ. ನಾಲ್ಕು ನಿಗಮಗಳಲ್ಲಿ ಬಿಎಂಟಿಸಿ ನೌಕರರಿಗೆ 2014-15ರ ಸಾಲಿನ ಎರಡು ವರ್ಷದ ಬೋನಸ್ ಹಣವನ್ನು ಕೊಟ್ಟಿಲ್ಲ. ಇನ್ನೂ 2016-17ನೇ ಸಾಲಿನ ಬೋನಸ್ ಹಣವನ್ನು ಘೋಷಣೆ ಮಾಡಿಲ್ಲ. ಏಪ್ರಿಲ್ ನಲ್ಲೇ ಘೋಷಣೆ ಮಾಡಬೇಕಿತ್ತು, ಆದರೆ ಮಾಡಿಲ್ಲ ಎಂದರು.

    ಸರ್ಕಾರದ ಸಚಿವರ ಪ್ರಾಮಾಣಿಕ ಪ್ರಯತ್ನಕ್ಕೂ ಸಾರಿಗೆ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಡಿಪೋಗಳಲ್ಲಿ ವಿಪರೀತ ಕಿರುಕುಳ ನೀಡಲಾಗುತ್ತಿದ್ದು, ನಿಯಮಾನುಸಾರ ಕೆಲಸ ಮಾಡುತ್ತಿಲ್ಲ. ನೌಕರರ ಕೆಲಸದ ಅವಧಿಯನ್ನ ಹೆಚ್ಚಳ ಮಾಡಲಾಗಿದೆ. ಮಂತ್ರಿಗಳು ಮಧ್ಯಪ್ರವೇಶಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರೆಸಲಿದ್ದೇವೆ ಎಂದು ಹೇಳಿದರು.

  • ರಾಜ್ಯಾದ್ಯಂತ ಇಂದು ಖಾಸಗಿ ವೈದ್ಯರ ಮುಷ್ಕರ – ಆರೋಗ್ಯ ಸೇವೆಗಳಲ್ಲಿ ಆಗಲಿದೆ ವ್ಯತ್ಯಯ

    ರಾಜ್ಯಾದ್ಯಂತ ಇಂದು ಖಾಸಗಿ ವೈದ್ಯರ ಮುಷ್ಕರ – ಆರೋಗ್ಯ ಸೇವೆಗಳಲ್ಲಿ ಆಗಲಿದೆ ವ್ಯತ್ಯಯ

    ಬೆಂಗಳೂರು: ಖಾಸಗಿ ಆಸ್ಪತ್ರೆಯ ವೈದ್ಯರು ಸರ್ಕಾರದ ವಿರುದ್ಧ ಇಂದು ಮುಷ್ಕರಕ್ಕೆ ಇಳಿದಿದ್ದಾರೆ.

    ಕರ್ನಾಟಕ ಖಾಸಗಿ ವೈದ್ಯಕೀಯ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಖಾಸಗಿ ಆಸ್ಪತ್ರೆಯ ವೈದ್ಯರು ಮುಷ್ಕರಕ್ಕೆ ಇಳಿದಿದ್ದಾರೆ. ಕಳೆದ ಜುಲೈನಲ್ಲಿ ಮುಷ್ಕರಕ್ಕೆ ಇಳಿದಿದ್ದ ವೈದ್ಯರು ಈಗ ಮತ್ತೆ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಹೊರಟ ಸರ್ಕಾರದ ನಿರ್ಧಾರ ಖಂಡಿಸಿ ಪ್ರತಿಭಟನೆ ನಡೆಸಲಿದ್ದಾರೆ.

    ಚಿಕ್ಕ ಕ್ಲಿನಿಕ್‍ನಿಂದ ಹಿಡಿದು ಕಾರ್ಪೊರೇಟ್ ಆಸ್ಪತ್ರೆಗಳು ಇಂದು ಬಂದ್ ಆಗಲಿವೆ. ಒಪಿಡಿ, ಒಟಿ ಸಂಪೂರ್ಣ ಸ್ಥಗಿತವಾಗಲಿದೆ. ಕೇವಲ ಆಕ್ಸಿಡೆಂಟ್ ಹಾಗೂ ಗರ್ಭಿಣಿಯರ ಕೇಸ್ ಮಾತ್ರ ಆಟೆಂಡ್ ಮಾಡೋದಾಗಿ ವೈದ್ಯರು ಹೇಳಿದ್ದಾರೆ.

    ಚಿಕಿತ್ಸೆ ವಿಫಲವಾದ್ರೆ ವೈದ್ಯರನ್ನು ಜೈಲಿಗಟ್ಟುವ ಕಾಯ್ದೆ ಹಾಗೂ ದಂಡ ಪ್ರಯೋಗಕ್ಕೆ ವಿರೋಧ. ಜಿಲ್ಲಾಮಟ್ಟದಲ್ಲಿ ಮತ್ತೆ ಕುಂದು ಕೊರತೆ ಪರಿಹಾರ ಸಮಿತಿ ಸ್ಥಾಪನೆಗೆ ವಿರೋಧ. ಚಿಕಿತ್ಸಾ ದರವನ್ನು ಸರ್ಕಾರವೇ ನಿಗಧಿ ಮಾಡುವ ನಿರ್ಧಾರ – ಈ ಎಲ್ಲಾ ನೀತಿಗಳ ವಿರುದ್ಧ ನಾವು ಮುಷ್ಕರ ಮಾಡುತ್ತೇವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ರವೀಂದ್ರ ತಿಳಿಸಿದ್ದಾರೆ.

    ವೈದ್ಯರ ಪ್ರತಿಭಟನೆ ಕುರಿತಂತೆ ಮಾತಾನಾಡಿದ ಸಿಎಂ ಸಿದ್ದರಾಮಯ್ಯ, ವೈದ್ಯರು ಮುಷ್ಕರ ಮಾಡೋದು ಸರಿಯಲ್ಲ. ಈಗಾಗಲೇ ಅವರ ಜೊತೆ ಮಾತನಾಡಿದ್ದೇವೆ. ಮುಷ್ಕರ ಮಾಡೋದು ಸರಿಯಾದ ಕ್ರಮವಲ್ಲ. ಅವಶ್ಯಕತೆ ಇದ್ದರೆ ಮತ್ತೊಂದು ಸಾರಿ ವೈದ್ಯರ ಜೊತೆ ಮಾತನಾಡುತ್ತೇನೆ. ಬಡವರಿಗೆ ಅನುಕೂಲವಾಗಲಿ ಎಂದು ಬಿಲ್ ವ್ಯವಸ್ಥೆಯನ್ನು ತರಲಾಗುತ್ತಿದೆ. ಆದ್ದರಿಂದ ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

    ಇಂದು ವೈದ್ಯರ ಮುಷ್ಕರದಿಂದ ಸಾಕಷ್ಟು ರೋಗಿಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ.

  • ಬಿಜೆಪಿ ಪಕ್ಷ ಪಶ್ಚಾತ್ತಾಪ ಯಾತ್ರೆ ಮಾಡಿದ್ರೆ ಜನರು ನೋಡಬಹುದು: ದಿನೇಶ್ ಗುಂಡೂರಾವ್

    ಬಿಜೆಪಿ ಪಕ್ಷ ಪಶ್ಚಾತ್ತಾಪ ಯಾತ್ರೆ ಮಾಡಿದ್ರೆ ಜನರು ನೋಡಬಹುದು: ದಿನೇಶ್ ಗುಂಡೂರಾವ್

    ಬೆಂಗಳೂರು: ಬಿಜೆಪಿಯವರು ಪರಿವರ್ತನಾ ಯಾತ್ರೆ ಬದಲು ಪಶ್ಚಾತ್ತಾಪ ಯಾತ್ರೆ ಮಾಡಿದರೆ ಜನರು ನೋಡಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು ಆಯೋಜಿಸಿದ್ದ ಪರಿವರ್ತನಾ ಯಾತ್ರೆ ಸಮಾರಂಭವು ವಿಫಲವಾಗಿದ್ದು, ರಾಷ್ಟ್ರೀಯ ಪಕ್ಷವೊಂದರ ಮೊದಲ ಚುನಾವಣಾ ಪ್ರಚಾರ ಚಾಲನಾ ಸಭೆ ಈ ಮಟ್ಟದಲ್ಲಿ ಫ್ಲಾಪ್ ಆಗಿರಲಿಲ್ಲ. ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಕಡಿಮೆ ಆಗಿರುವುದಕ್ಕೆ ರಾಜ್ಯದ ಪರಿವರ್ತನಾ ಯಾತ್ರೆ ಪ್ರಮುಖ ಉದಾಹರಣೆ. ಬಿಜೆಪಿ ನಾಯಕರ ಪರಿವರ್ತನಾ ಯಾತ್ರೆ ಮಾಡುವ ಬದಲು ಪಶ್ಚಾತ್ತಾಪ ಯಾತ್ರೆ ಮಾಡಿದರೆ ಜನ ಅವರ ಕಡೆ ನೋಡಬಹುದು ಎಂದು ವ್ಯಂಗ್ಯವಾಡಿದರು.

    ರಾಜ್ಯ ಸರ್ಕಾರಕ್ಕೆ ಕನ್ನಡ ರಾಜ್ಯೋತ್ಸವ ನಡೆಸಲು ಆಸಕ್ತಿ ಇಲ್ಲ, ಟಿಪ್ಪು ಜಯಂತಿ ಆಚರಿಸಲು ಹೆಚ್ಚು ಉತ್ಸುಕವಾಗಿದೆ ಎನ್ನುವ ಅಮಿತ್ ಶಾ ಹೇಳಿಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರು ಸೇರಿದಂತೆ ಬಿಜೆಪಿ ನಾಯಕರಿಗೆ ಕನ್ನಡದ ಮೇಲೆ ಪ್ರೀತಿ ಇದೆ ಅಥವಾ ಇಲ್ಲ ಅಂತ ನಾನು ಹೇಳಲ್ಲ. ಕನ್ನಡದ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ಅಮಿತ್ ಶಾ ಯಾರು ಎಂದು ಗರಂ ಆಗಿ ಪ್ರಶ್ನಿಸಿದರು.

    ಕೇಂದ್ರದಿಂದ ಅನುದಾನ ಪಡೆಯುವುದು ನಮ್ಮ ಹಕ್ಕು ಅದನ್ನು ಪಡೆಯುತ್ತಿದ್ದೇವೆ. ಈ ಕುರಿತು ಪ್ರಧಾನಿ ಅಥವಾ ಆರ್ಥಿಕ ಸಚಿವರು ಮಾಹಿತಿ ಕೇಳಲಿ. ಅಮಿತ್ ಶಾ ಅವರಿಗೆ ಸಂವಿಧಾನದ ಕುರಿತು ಅರಿವಿಲ್ಲ ಎಂದು ಕಿಡಿಕಾರಿದರು.

    ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರವೇನು ಭಿಕ್ಷೆ ಕೊಡಬೇಕಿಲ್ಲ, ನಾವು ಭಿಕ್ಷುಕರಲ್ಲ. ಕೇಂದ್ರದ ಮುಂದೆ ನಾವು ಎಂದು ಕೈ ಚಾಚಿ ನಿಲ್ಲಬೇಕಿಲ್ಲ. ಕಳೆದ ಬಾರಿ ಬರ ಪರಿಹಾರ ಸಮಯದಲ್ಲಿ ಕೇಂದ್ರ ಸರ್ಕಾರವು ಮಹಾರಾಷ್ಟ್ರ ಹಾಗೂ ಗುಜರಾತ್ ಗಿಂತ ಕಡಿಮೆ ಅನುದಾನವನ್ನು ನೀಡಿದೆ. ಕೇಂದ್ರದಿಂದ ಹಣ ನೀಡುವುದಿಲ್ಲ ಎಂದು ಹೇಳುವ ಅಧಿಕಾರ ಬಿಜೆಪಿ ನಾಯಕರಿಗಿಲ್ಲ ಎಂದರು.

    ರೈಲ್ವೇ ಯೋಜನೆಗಳಿಗೆ ಶೇಕಡಾ 50 ರಷ್ಟು ಅನುದಾನ ಹಾಗೂ ಭೂಮಿ ರಾಜ್ಯ ಸರ್ಕಾರ ನೀಡುತ್ತದೆ. ಆದರೆ ಮೊನ್ನೆ ಪ್ರಧಾನಿ ಮೋದಿ ಕಲಬುರಗಿ- ಬೀದರ್ ರೈಲ್ವೇ ಯೋಜನೆ ಉದ್ಘಾಟನೆ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಸರಿಯಾಗಿ ಅಹ್ವಾನ ಸಹ ಕೊಟ್ಟಿರಲಿಲ್ಲ. ಮೋದಿ ಅವರ ಈ ನಡೆ ಬಿಜೆಪಿಯ ಸಂಸದೀಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

    ಇನ್ನೂ ಅಮಿತ್ ಶಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಇಬ್ಬರಿಗೂ ಕೆಲವು ವಿಷಯಗಳಲ್ಲಿ ಸಾಮ್ಯತೆ ಇದೆ. ವಿಶೇಷವಾಗಿ ಇಬ್ಬರೂ ಜೈಲಿಗೆ ಹೋಗಿ ಬಂದವರು ಎಂದು ತಿಳಿಸಿದರು.

    ಇದನ್ನು ಓದಿ : ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ಎರಡೂವರೆ ಲಕ್ಷ ಕೋಟಿ ರೂ. ಅನುದಾನ ಏನಾಯ್ತು: ಸಿದ್ದರಾಮಯ್ಯಗೆ ಅಮಿತ್ ಶಾ ಪ್ರಶ್ನೆ

     

     

     

  • Exclusive: ಬಿಜೆಪಿ ಪರಿವರ್ತನಾ ಯಾತ್ರೆಗೆ ಬೆದರಿದ್ರಾ ಸಿಎಂ ಸಿದ್ದರಾಮಯ್ಯ?

    Exclusive: ಬಿಜೆಪಿ ಪರಿವರ್ತನಾ ಯಾತ್ರೆಗೆ ಬೆದರಿದ್ರಾ ಸಿಎಂ ಸಿದ್ದರಾಮಯ್ಯ?

    ಬೆಂಗಳೂರು: ಮುಂಬರುವ ಚುನಾವಣೆಗೆ ಬಿಜೆಪಿಯಿಂದ ಹಿಂದುತ್ವ ಅಜೆಂಡಾ ಘೋಷಣೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ನಡೆಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ವೇಳೆ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಎಸ್‍ಪಿ, ಪೊಲೀಸ್ ಆಯುಕ್ತರು ಸಭೆಯಲ್ಲಿ ಭಾಗವಹಿಸಿದ್ದರು.

    ಈ ಸಭೆಯಲ್ಲಿ ಸಿಎಂ ಬರೀ ಪರಿವರ್ತನಾ ರ‍್ಯಾಲಿಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಪರಿವರ್ತನಾ ರ‍್ಯಾಲಿ ಯಾವ ರೀತಿ ನಡೆಯುತ್ತೆ? ಎಲ್ಲೆಲ್ಲಿ ಏನೇನಾಗುತ್ತೆ ಎಂಬುದರ ಬಗ್ಗೆ ಇಂಚಿಚು ಮಾಹಿತಿ ನೀಡಬೇಕು. ಯಾತ್ರೆ ವೇಳೆ ಎಲ್ಲಿಯಾದರೂ ಉದ್ಧಟತನ ಮಾಡಿದ್ರೆ ಮುಲಾಜಿಲ್ಲದೆ ಅವರ ವಿರುದ್ಧ ಕೇಸ್ ಗಳನ್ನು ಹಾಕಬೇಕು. ಪರಿವರ್ತನಾ ಯಾತ್ರೆಯ ಅಲೆ ಹೇಗಿದೆ? ಅದಕ್ಕೆ ಎಷ್ಟು ಜನ ಸೇರಿದ್ರು, ಎಂಬುದರ ಬಗ್ಗೆ ಸಂಪೂರ್ಣ ವರದಿ ನೀಡಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

     

    ಸಾಧ್ಯವಾದರೆ ಪರಿವರ್ತನಾ ಯಾತ್ರೆಗೆ ಅಡ್ಡಗಾಲು ಹಾಕಿ, ಭಯಪಡುವ ಅಗತ್ಯ ಇಲ್ಲ. ಸೂಕ್ಷ ಪ್ರದೇಶಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡುವವರು ಯಾರಾದರೂ ಬಂದರೆ ಅವರನ್ನು ತಡೆಯಿರಿ. ಸೂಕ್ಷ್ಮ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ತಿಳಿದರೆ ತಕ್ಷಣ ನಿಷೇಧಾಜ್ಞೆ ಜಾರಿ ಮಾಡಿ. ನಿಷೇಧಾಜ್ಞೆ ಜಾರಿ ಮಾಡಿದ ಪ್ರದೇಶದಲ್ಲಿ ಯಾತ್ರೆ ಆಗದಂತೆ ನೋಡಿಕೊಳಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

    ಈ ಯಾತ್ರೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು. ಜೊತೆಗೆ ಸಾರ್ವಜನಿಕರಿಗೂ ಯಾವುದೇ ರೀತಿಯ ತೊಂದರೆ ಆಗಬಾರದು. ಟಿಪ್ಪು ಜಯಂತಿ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಕಾಪಾಡಬೇಕು. ಹಾಗೇನಾದರೂ ಅಹಿತಕರ ಘಟನೆ ನಡೆದರೆ ತಲೆದಂಡ ಗ್ಯಾರೆಂಟಿ ಎಂದು ಎಚ್ಚರಿಸಿದ್ದಾರೆ.

    ಪ್ರಚೋದನಕಾರಿ ಭಾಷಣ ಮಾಡುವ ನಾಯಕರ ಪಟ್ಟಿ ತಯಾರಿಸಿ, ಭದ್ರತೆ ನೋಡಿಕೊಳ್ಳಿ. ಅದನ್ನು ಬಿಟ್ಟು ಚಮಚಗಿರಿ ಮಾಡೋಕೆ ಹೋದ್ರೆ ನಿಮಗೆ ಬಹುಮಾನ ಸಿಕ್ಕುತ್ತೆ ನೋಡಿ ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.

     

     

  • ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ಎರಡೂವರೆ ಲಕ್ಷ ಕೋಟಿ ರೂ. ಅನುದಾನ ಏನಾಯ್ತು: ಸಿದ್ದರಾಮಯ್ಯಗೆ ಅಮಿತ್ ಶಾ ಪ್ರಶ್ನೆ

    ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ಎರಡೂವರೆ ಲಕ್ಷ ಕೋಟಿ ರೂ. ಅನುದಾನ ಏನಾಯ್ತು: ಸಿದ್ದರಾಮಯ್ಯಗೆ ಅಮಿತ್ ಶಾ ಪ್ರಶ್ನೆ

    ಬೆಂಗಳೂರು: ರಾಜ್ಯದ ವಿವಿಧ ಯೋಜನೆಗಳ ಅಭಿವೃದ್ಧಿಗೆ ಕೇಂದ್ರ ಸಕಾರವು ಒಟ್ಟು ಎರಡೂವರೆ ಲಕ್ಷ ಕೋಟಿ ರೂ.ಗಳ ಅನುದಾನವನ್ನು ನೀಡಿದೆ. ಆದರೆ ಒಂದೂವರೆ ಲಕ್ಷ ಕೋಟಿ ರೂ. ಹಣ ಖರ್ಚಾಗಿರೋದಕ್ಕೆ ದಾಖಲೆಗಳೇ ಇಲ್ಲ. ಪ್ರತಿ ಪೈಸೆಯನ್ನು ಕರ್ನಾಟಕ ವಿಕಾಸಕ್ಕೆ ಕೊಟ್ಟಿದ್ದೇವೆ. ಆದ್ರೆ ರಾಜ್ಯ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮಿತ್ ಶಾ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

     

    ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಮಾಜಿ ಮುಖ್ಯ ಮಂತ್ರಿ ಬಿಎಸ್‍ವೈ ಅವರಿಗೆ ಹಸಿರು ಶಾಲು ಹೊದಿಸಿ, ರೈತ ಕುಳಿತ ಎತ್ತಿನ ಬಂಡಿ ಮಾದರಿಯ ಪರಿವರ್ತನಾ ರಥಯಾತ್ರೆಗೆ ಅಮಿತ್ ಶಾ ಚಾಲನೆ ನೀಡಿದರು.

    ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 75 ದಿನಗಳ ಕಾಲ ಪರಿವರ್ತನಾ ಯಾತ್ರೆ ರಾಜ್ಯಾದ್ಯಂತ ಸಂಚಾರವನ್ನು ನಡೆಸಿ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೆಸೆಯಲಿದೆ ಎಂದರು.

    ಈ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಪುನರುಚ್ಚರಿಸಿದ ಶಾ, ರಾಜ್ಯದಲ್ಲಿ ನಡೆಯುವ ಪರಿವರ್ತನಾ ಯಾತ್ರೆ ಕೇವಲ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಬದಲಿಸಲು ಮಾತ್ರ ಕೈಗೊಂಡಿಲ್ಲ. ರಾಜ್ಯದ ಸ್ಥಿತಿಯನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

     

    ದೇಶದಲ್ಲಿಯೇ ಕರ್ನಾಟಕ ರಾಜ್ಯ ಸರ್ಕಾರವು ಭ್ರಷ್ಟಾಚಾರದ ನಡೆಸುವುದರಲ್ಲಿ ಮೊದಲ ಸ್ಥಾನ ಪಡೆದಿದೆ. ಸಿದ್ದರಾಮಯ್ಯ ಸಂಪುಟದ ಸಚಿವರ ಮೇಲೆ ಭ್ರಷ್ಟಾಚಾರ ಆರೋಪಗಳಿವೆ. ರಾಜ್ಯದ ಸಚಿವರ ಸಂಪತ್ತು, ಡೈರಿ ಸಿಕ್ಕಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಭ್ರಷ್ಟಾಚಾರ ಹಿನ್ನೆಲೆ ಹೊಂದಿರುವ ಸಿದ್ದರಾಮಯ್ಯ ಸರ್ಕಾರವನ್ನು ತೊಲಗಿಸಬೇಕಿದೆ ಎಂದು ಗುಡುಗಿದರು.

    ಬಿಜೆಪಿ ಸರ್ಕಾರವು ದೇಶಾದ್ಯಂತ ಪಾರದರ್ಶಕ ಆಡಳಿತ ಕೊಡುವ ಪ್ರಯತ್ನ ಮಾಡಿದೆ. ಕಳೆದ ಐದು ವರ್ಷ ಅವಧಿಯಲ್ಲಿ ಕರ್ನಾಟಕದಲ್ಲಿ ಅಭಿವೃದ್ಧಿಯೇ ಆಗಿಲ್ಲ. ಸ್ಟೀಲ್ ಬ್ರಿಡ್ಜ್ ನಿರ್ಮಾಣ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ. ಸಿದ್ದರಾಮಯ್ಯ ಸರ್ಕಾರ ಕನ್ನಡ ರಾಜ್ಯೋತ್ಸವದ ಬಗ್ಗೆ ಉತ್ಸಾಹ ಇಲ್ಲ. ಆದರೆ ಅವರಿಗೆ ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆಗೆ ಉತ್ಸಾಹ ಇದೆ. ಮತ ಬ್ಯಾಂಕ್‍ಗಾಗಿ ಕಾಂಗ್ರೆಸ್ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶಪ್ರೇಮಿ ಕಾರ್ಯಕರ್ತರ ಹತ್ಯೆಯಾಗಿದೆ. ಇದು ಅತ್ಯಂತ ನೋವಿನ ಸಂಗತಿ. ಇದರ ಬಗ್ಗೆ ಏಕೆ ಸಿದ್ದರಾಯ್ಯ ಮಾತಾಡಲ್ಲ ಎಂದು ಪ್ರಶ್ನಿಸಿದರು. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರಿಗೆ ದೇಶ ಹಾಗೂ ರಾಜ್ಯದ ಬಗ್ಗೆ ಚಿಂತೆಯಿಲ್ಲ. ಅದ್ದರಿಂದಲೇ ಕೊಲೆ ಆರೋಪಿಗಳ ಮೇಲಿನ ಮೊಕದ್ದಮೆಗಳನ್ನು ಸರ್ಕಾರ ವಾಪಸ್ ಪಡೆದಿದೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.

    ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಿಕ ಸ್ಥಾನಮಾನ ನೀಡಲು ಮುಂದಾಯ್ತು. ಆದರೆ ಕಾಂಗ್ರೆಸ್ ಈ ವಿದೇಯಕಕ್ಕೆ ಬೆಂಬಲ ನೀಡಲಿಲ್ಲ ಎಂದು ಆರೋಪಿಸಿದರು.

     

     

  • ಬಿಜೆಪಿ ಪರಿವರ್ತನಾ ಯಾತ್ರೆ: ವೇದಿಕೆಯ ಮೇಲೆ ರಾಜ್ಯ ನಾಯಕರಿಗೆ ಶಾ ಕ್ಲಾಸ್

    ಬಿಜೆಪಿ ಪರಿವರ್ತನಾ ಯಾತ್ರೆ: ವೇದಿಕೆಯ ಮೇಲೆ ರಾಜ್ಯ ನಾಯಕರಿಗೆ ಶಾ ಕ್ಲಾಸ್

    ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಮೊದಲ ದಿನವೇ ವೇದಿಕೆಯ ಮೇಲೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವೇದಿಕೆಯ ಮೇಲೆ ಹಿರಿಯ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಕಾರ್ಯಕ್ರಮ ಆಯೋಜನೆಗೊಂಡಿದ್ದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಹಾಕಿದ್ದ ಕುರ್ಚಿಗಳ ಮಧ್ಯಭಾಗ ಖಾಲಿ ಇತ್ತು. ಇದನ್ನು ನೋಡಿ ಅಸಮಾಧಾನಗೊಂಡ ಅಮಿತ್ ಶಾ ಕೇಂದ್ರ ಸಚಿವರಾದ ಅನಂತ್ ಕುಮಾರ್ ಮತ್ತು ಡಿವಿ ಸದಾನಂದ ಗೌಡರನ್ನು ತರಾಟೆಗೆ ತೆಗೆದುಕೊಂಡರು.

    ಶಾ ಗರಂ ಆಗಿದ್ದನ್ನು ನೋಡಿ ನಾಯಕರು, ಶಾಸಕರು ವೇದಿಕೆ ಮೇಲಿನಿಂದ ಇಳಿದು ಜನರನ್ನು ಖಾಲಿ ಕುರ್ಚಿಗಳಲ್ಲಿ ಕೂರಿಸಲು ಮುಂದಾದರು.

    ಬಿಜೆಪಿ ಪರಿವರ್ತನಾ ಯಾತ್ರೆಗೆ ಜನ ಕರೆತರುವಲ್ಲಿ ವೈಫಲ್ಯ ಆಗಿದ್ದು ಯಾಕೆ ಎಂದು ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಪಿಯುಷ್ ಗೋಯಲ್, ಅನಂತ್ ಕುಮಾರ್‍ಗೆ ಶಾ ಕ್ಲಾಸ್ ಮಾಡಿದರು.

    ಅಮಿತ್ ಶಾ ಅಸಮಾಧಾನಗೊಂಡಿದ್ದರಿಂದ ಸಮಾವೇಶದ ವೇದಿಕೆ ಮೌನವಾಗಿತ್ತು. ಬಿಜೆಪಿ ನಾಯಕರು ಪೆಚ್ಚು ಮೊರೆ ಹಾಕಿ ಕುಳಿತುಕೊಂಡಿದ್ದರು.

     

  • ಪರಿವರ್ತನಾ ಯಾತ್ರೆಗೆ ಸಂಖ್ಯಾಶಾಸ್ತ್ರದ ಮೊರೆ ಹೋದ್ರಾ ಬಿಎಸ್‍ವೈ?

    ಪರಿವರ್ತನಾ ಯಾತ್ರೆಗೆ ಸಂಖ್ಯಾಶಾಸ್ತ್ರದ ಮೊರೆ ಹೋದ್ರಾ ಬಿಎಸ್‍ವೈ?

    ಬೆಂಗಳೂರು: ಬಿಜೆಪಿಯ ಪರಿವರ್ತನಾ ಯಾತ್ರೆಗೆ ವೇಳೆಯಲ್ಲಿ ಬಳಸುವ ವಾಹನದ ನಂಬರ್‍ಗಳು ಒಂದೇ ಆಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಸಂಖ್ಯಾಶಾಸ್ತ್ರದ ಮೋರೆ ಹೋಗಿದ್ದಾರ ಎನ್ನುವ ಪ್ರಶ್ನೆ ಎದ್ದಿದೆ.

    ಬಿಎಸ್‍ವೈ ಅವರ ಲಕ್ಕಿ ನಂಬರ್ 9(4+5) ಆಗಿದ್ದು, ಹೀಗಾಗಿ ಅವರ ಕಾರಿನಲ್ಲಿ 45 ನಂಬರ್ ಇರುತ್ತದೆ. ಅವರು ಸದಾ ಪ್ರಯಾಣಿಸುವ ಫಾರ್ಚುನರ್ ಕಾರ್ ನಂಬರ್ 4545 ಆಗಿದ್ದು, ಇಂದಿನಿಂದ ರಾಜ್ಯಾದ್ಯಂತ ಬಿಜೆಪಿಯು ಪರಿವರ್ತನಾ ರ್ಯಾಲಿಯನ್ನು ಹಮ್ಮಿಕೊಂಡಿರುವ ರಥದ ನಂಬರ್ ಕೆಎ 01, ಎಎಚ್ 4545 ಆಗಿದೆ. ಅಷ್ಟೆ ಅಲ್ಲದೇ ಯಾತ್ರೆಗೆ ಬಳಸುವ ಮತ್ತೊಂದು ವಾಹನದ ಸಂಖ್ಯೆಯೂ 4545 ಆಗಿದೆ. ಇದೆಲ್ಲವನ್ನೂ ನೋಡಿದಾಗ ಬಿಎಸ್‍ವೈ ಅವರು ಸಂಖ್ಯಾಶಾಸ್ತ್ರದ ಮೋರೆ ಹೋಗಿದ್ದಾರೆ ಎನ್ನಲಾಗಿದೆ.

    ಪರಿವರ್ತನಾ ಯಾತ್ರೆಯ ವಾಹನ ಬಿಎಸ್‍ವೈ ಹೆಸರಲ್ಲಿ ನೋಂದಣಿಯಾಗಿದ್ದು. ಪರಿವರ್ತನಾ ಯಾತ್ರೆ ರಥದ ಜೊತೆಗೆ ಮತ್ತೊಂದು ವಾಹನವನ್ನು ಸಿದ್ಧಮಾಡಿದ್ದಾರೆ.

  • ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರಗೆ ಬಿಗ್ ರಿಲೀಫ್!

    ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರಗೆ ಬಿಗ್ ರಿಲೀಫ್!

    ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಯೂನಿಟ್ ಆರಂಭಕ್ಕೆ ಟೆಂಡರ್ ಅನ್ನು ನಿಯಮ ಬಾಹೀರವಾಗಿ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ವಿರುದ್ಧ ನೀಡಿದ್ದ ಪ್ರಕರಣಕ್ಕೆ ಕ್ಲೀನ್ ಚಿಟ್ ದೊರೆತಿದೆ.

    ಏನಿದು ಪ್ರಕರಣ?: 23.05.2016 ರಂದು ಸಿದ್ದರಾಮಯ್ಯ ನವರ ಪುತ್ರ ಯತೀಂದ್ರ ರವರು ನಡೆಸಿರುವ ಮ್ಯಾಟ್ರಿಕ್ಸ್ ಇಮೇಂಜಿಂಗ್ ಸಲ್ಯೂಷನ್ ಇಂಡಿಯಾ ಪ್ರೈವೇಟ್ ಲಿ ಸಂಸ್ಥೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಸ್ವಸ್ತ ಸುರಕ್ಷಾ ಯೋಜನೆ ಅಡಿಯಲ್ಲಿ ಡಯಾಗ್ನೋಸ್ಟಿಕ್ ಸರ್ವೀಸಸ್ ಅನ್ನು ಪ್ರಾರಂಭಿಸಿಲು ಟೆಂಡರ್‍ನ್ನು ನಿಯಮಬಾಹಿರವಾಗಿ ನೀಡಿರುತ್ತಾರೆಂದು ಆಪಾದಿಸಿ, ಸಾಮಾಜಿಕ ಕಾರ್ಯಕರ್ತ ಎಸ್. ಭಾಸ್ಕರನ್ ಸಲ್ಲಿಸಿದ್ದ ದೂರನ್ನು ಎಸಿಬಿ ಗೆ ನೀಡಿದ್ದರು.

    ಅರ್ಜಿಯ ವಿಚಾರಣೆಯಲ್ಲಿ ಭಾಸ್ಕರನ್ ಮಾಡಿರುವ ಆಪಾದನೆಗಳು ಸಾಬೀತಾಗದ ಕಾರಣ ಅವರು ಸಲ್ಲಿಸಿದ ದೂರು ಅರ್ಜಿಯ ವಿಚಾರಣೆಯನ್ನು ಮುಕ್ತಾಯ ಗೊಳಿಸಲಾಗದೆ ಎಂದು ಎಸಿಬಿ ತಿಳಿಸಿದೆ.

    ಎಸಿಬಿ ಧೋರಣೆಗೆ ಭಾಸ್ಕರನ್ ಆಕ್ರೋಶ ವ್ಯಕ್ತಪಡಿಸಿದ್ದು, ಹೈಕೋರ್ಟ್ ನಲ್ಲಿ ಕಾನೂನು ಸಮರ ಆರಂಭಿಸಲು ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಹೇಳಿಕೆಯನ್ನು ಪಡೆಯದೆ ಪ್ರಕರಣಕ್ಕೆ ಎಸಿಬಿ ತಿಲಾಂಜಲಿ ಇಟ್ಟಿದೆ ಎಂದು ಆರೋಪಿಸಿದ್ದಾರೆ.

     

  • ಬಿಜೆಪಿಯಿಂದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ- ಇಂದಿನಿಂದ 75 ದಿನ ಕೇಸರಿ ಕಹಳೆ

    ಬಿಜೆಪಿಯಿಂದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ- ಇಂದಿನಿಂದ 75 ದಿನ ಕೇಸರಿ ಕಹಳೆ

    – ಎಲೆಕ್ಷನ್ ಕಹಳೆ ಮೊಳಗಿಸಲಿದ್ದಾರೆ ಬಿಜೆಪಿ ಚಾಣಕ್ಯ

    ಬೆಂಗಳೂರು: ಬಿಜೆಪಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಗೆ ಇಂದು ಚಾಲನೆ ಸಿಗಲಿದೆ. ಬೆಳಗ್ಗೆ ಸುಮಾರು 11 ಗಂಟೆಗೆ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಆವರಣದಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸಿದ್ದು, ಈ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಲಿದ್ದಾರೆ.

    ಅಮಿತ್ ಶಾ ಅವರು ಬೆಳಗ್ಗೆ 11ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಿಐಇಸಿಗೆ ಬಂದು ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಸಮಾವೇಶಕ್ಕೆ ದಕ್ಷಿಣ ಕರ್ನಾಟಕ ಭಾಗದ 17 ಜಿಲ್ಲೆಗಳ 27 ಸಾವಿರ ಬೂತ್‍ಗಳಿಂದ ಕಾರ್ಯಕರ್ತರು ಆಗಮಿಸಲಿದ್ದು, ಒಂದು ಬೂತ್‍ನಿಂದ ಕನಿಷ್ಠ 3 ಬೈಕ್ ಗಳಲ್ಲಿ 6 ಕಾರ್ಯರ್ತರು ಭಾಗವಹಿಸಲಿದ್ದಾರೆ.


    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುವ ಯಾತ್ರೆ ಇದಾಗಿದ್ದು, ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಪರಿವರ್ತನಾ ಯಾತ್ರೆ ಸಂಚರಿಸಲಿದೆ. ಇದು ಕೇರಳದ ಜನರಕ್ಷಾ ಯಾತ್ರೆಯ ಸ್ವರೂಪದ ರೀತಿಯಲ್ಲಿ ರಾಜ್ಯದಲ್ಲೂ ಯಾತ್ರೆ ನಡೆಯಲಿದೆ. 75 ದಿನಗಳ ಕಾಲ ಯಾತ್ರೆಯಲ್ಲಿ ಪ್ರಯಾಣಿಸಲು ವಿಶೇಷವಾಗಿ ಸಿದ್ಧ ಪಡಿಸಿರುವ ವಾಹನದಲ್ಲಿ ಯಡಿಯೂರಪ್ಪ ಅವರು ಪ್ರಯಾಣ ಮಾಡಲಿದ್ದಾರೆ. ವಾರಕ್ಕೆ ಒಬ್ಬರು ಕೇಂದ್ರದ ಬಿಜೆಪಿ ದಿಗ್ಗಜರು ರ‍್ಯಾಲಿಯಲ್ಲಿ ಭಾಗವಹಿಸಲಿದ್ದು, ಯಾತ್ರೆಯಲ್ಲಿ ಭಾಗವಹಿಸುವ ಪ್ರತಿ ಕಾರ್ಯಕರ್ತರ ಮಾಹಿತಿಯನ್ನು ರಾಜ್ಯ ಬಿಜೆಪಿ ಸಂಗ್ರಹಿಸಿದೆ.

    ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಹಾಗೂ ನಿತಿನ್ ಗಡ್ಕರಿ ಸೇರಿದಂತೆ ಕೇಂದ್ರ ಸಚಿವರ ದಂಡು ಯಾತ್ರೆಯಲ್ಲಿ ಬಂದು ಪ್ರಚಾರ ನಡೆಸಲಿದ್ದು, ಕಟು ಹಿಂದುತ್ವ ವಾದಿಗಳಾದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಉಮಾಭಾರತಿ ಮತ್ತು ಸಾಧ್ವಿ ನಿರಂಜನ್ ಅವರು ಕೂಡ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಅಷ್ಟೇ ಅಲ್ಲದೇ ವಿವಿಧ ರಾಜ್ಯಗಳ ಬಿಜೆಪಿ ಸಿಎಂಗಳು ಕೂಡ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

    ಪ್ರತಿ ದಿನ ಸುಮಾರು 100 ಕಿಮೀಗೂ ಹೆಚ್ಚು ಸಂಚಾರ ಮಾಡಲಿರುವ ಯಾತ್ರೆ, ಒಟ್ಟು ಸುಮಾರು 11 ಸಾವಿರ ಕಿಮೀ ಸುತ್ತಲಿದೆ. ಯಾತ್ರೆ ಪ್ರಾರಂಭವಾಗಿ ಇಂದು ಸಂಜೆ 5 ಕ್ಕೆ ತುಮಕೂರು ಜಿಲ್ಲೆಯ ಕುಣಿಗಲ್ ಗೆ ಹೋಗಿ ಅಲ್ಲಿ ಯಾತ್ರೆಯ ಮೊದಲ ದಿನದ ವಾಸ್ತವ್ಯ ಹೂಡಲಿದ್ದಾರೆ. ಡಿಸೆಂಬರ್ 21 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಉತ್ತರ ಕರ್ನಾಟಕ ಭಾಗದ ರಥಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆ ಇದೆ.

    ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಪರಿವರ್ತನಾ ಯಾತ್ರೆಗೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಯಾತ್ರೆ ಕೊಡಗು ಜಿಲ್ಲೆಯಲ್ಲಿ ಸಂಚಾರ ಮಾಡುವ ಸಾಧ್ಯತೆ ಕಡಿಮೆ. ನವೆಂಬರ್ 8 ರಂದು ಕೊಡಗು ಯಾತ್ರೆಗೆ ಪ್ರವೇಶ ಮಾಡಬೇಕಿತ್ತು. ಇನ್ನೂ ನವೆಂಬರ್ 10, 11, 12 ಹಾಗೂ 13 ರಂದು ಮಂಗಳೂರು ಜಿಲ್ಲೆಯಲ್ಲಿ ಯಾತ್ರೆ ಸಂಚಾರ ಮಾಡಲಿದ್ದು, ಮಂಗಳೂರಿನಲ್ಲೇ ಕೋರ್ ಕಮಿಟಿ ಸಭೆ ನಡೆಸಲಿದೆ. ಜನವರಿ 25 ರಂದು ಮೈಸೂರಿನಲ್ಲಿ ಬೃಹತ್ ರ‍್ಯಾಲಿ ಸಮಾವೇಶ ನಡೆಯಲಿದೆ.

    224 ವಿಧಾನಸಭಾ ಕ್ಷೇತ್ರಗಳನ್ನು ಸುತ್ತಿ ಅಂತಿಮವಾಗಿ ಜನವರಿ 28ರಂದು ರ‍್ಯಾಲಿ ಅಂತ್ಯಗೊಳ್ಳಲಿದ್ದು, ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಅಧಿಕೃತವಾಗಿ ಚುನಾವಣಾ ರಣಕಹಳೆ ಊದಲಿದ್ದಾರೆ. ಇನ್ನು ಬಿಜೆಪಿ ಯಾತ್ರೆಯ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ. ತುಮಕೂರು- ಬೆಂಗಳೂರು ರಸ್ತೆಯಲ್ಲಿ ನಾಳೆ ಬ್ಯುಸಿ ಇರಲಿದ್ದು, ಟ್ರಾಫಿಕ್ ಇರುತ್ತೆ. ಹಾಗಾಗಿ ಈ ರಸ್ತೆಯಲ್ಲಿ ಸಂಚಾರ ಮಾಡುವುರುವರು ಸ್ವಲ್ಪ ಎಚ್ಚರ ವಹಿಸಿರಿ.

    https://twitter.com/ShobhaBJP/status/925772367703392256

    https://twitter.com/ShobhaBJP/status/925378322413973504

     

     

  • ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಸಂಭ್ರಮ

    ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಸಂಭ್ರಮ

    ಬೆಂಗಳೂರು: ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ 62ನೇ ಅದ್ಧೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಸಿಎಂ ಅವರು ರಾಷ್ಟ್ರಧ್ವಜ ಹಾಗೂ ಶಿಕ್ಷಣ ಸಚಿವ ತನ್ವೀರ್ ಸೇಠ್ ನಾಡ ಧ್ವಜಾರೋಹಣ ಹಾರಿಸಿದರು.

    ಸಿಎಂ ಅವರು ಬಿಳಿ ಬಣ್ಣದ ಪಾರಿವಾಳ, ರಾಜ್ಯೋತ್ಸವದ ಬಲೂನ್ ಹಾರಿ ಬಿಟ್ಟು ಸಮಾರಂಭಕ್ಕೆ ಚಾಲನೆ ನೀಡಿದರು. ಈ ವೇಳೆ ಭಾಗಿಯಾಗಿದ್ದ ಸಾವಿರಾರು ವಿದ್ಯಾರ್ಥಿಗಳು ಹಳದಿ, ಕೆಂಪು ಬಲೂನ್‍ಗಳನ್ನು ಹಾರಿಸಿದರು. ವಿವಿಧ ಶಾಲಾ ತಂಡಗಳು ಪಥ ಸಂಚಲನ ಮಾಡಿ ಸಿದ್ದರಾಮಯ್ಯ ಅವರಿಗೆ ಗೌರವ ವಂದನೆ ಸಲ್ಲಿಸಿದರು. ಇದೆ ವೇಳೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ “ಕನ್ನಡ ಸೌರಭ” ಸುಲಭ ಕನ್ನಡ ಕಲಿಗೆಗಾಗಿ ಇ ಕಲಿಕೆ ವೆಬ್ ಸೈಟ್ ಅನ್ನು ಸಿಎಂ ಅವರು ಬಿಡುಗಡೆ ಮಾಡಿದರು. ನಂತರ ಅರಬಿಂದೋ ಮೆಮೋರಿಯಲ್ ಶಾಲೆಯ 100 ವಿದ್ಯಾರ್ಥಿಗಳಿಂದ ನಾಡಗೀತೆ ಮತ್ತು ರೈತಗೀತೆ ಗಾಯನ ನಡೆಯಿತು.

    ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿಎಂ, ವಿಶಾಲ ಕರ್ನಾಟಕದ ದಿನವನ್ನು ಕನ್ನಡ ರಾಜ್ಯೋತ್ಸವ ದಿನವನ್ನಾಗಿ ಆಚರಣೆ ಮಾಡುತ್ತೇವೆ. ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಲಿಪಿ ಹಾಗೂ ದೀರ್ಘ ಇತಿಹಾಸ ಇದೆ. ಕನ್ನಡಿಗರು ಉದಾರಿಗಳು, ಬೇರೆ ಜನರನ್ನು ಪ್ರೀತಿಸುವ ಮನಸ್ಸು ಇರೋರು. ಭಾಷೆಯ ಬಗ್ಗೆ ಉದಾರವಾಗಿರಬೇಕಾಗಿಲ್ಲ, ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

    ಕಳೆದ 61 ವರ್ಷಗಳಲ್ಲಿ ನಾಡಿನ ಅಭಿವೃದ್ದಿ ಸಾಕಷ್ಟು ಆಗಿದೆ. ಆದರೆ ಕರ್ನಾಟಕದಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡುವಲ್ಲಿ ಇನ್ನೂ ಯಶಸ್ಸು ಸಾಧಿಸಿಲ್ಲ. ಕರ್ನಾಟಕದಲ್ಲಿ ವಾಸಿಸುವವರೆಲ್ಲ ಕನ್ನಡಿಗರೇ, ಇಲ್ಲಿರುವವರೆಲ್ಲಾ ಕನ್ನಡ ಭಾಷೆ ಕಲಿಯಲೇಬೇಕು. ನಾನು ಮೊದಲು ಕನ್ನಡಿಗ ನಂತರ ಭಾರತೀಯ ಅನ್ನೋ ಭಾವನೆ ಬರಬೇಕು. ಯಾವ ಭಾಷೆಯಾದರೂ ಕಲಿಯಿರಿ. ಕನ್ನಡ ಕಲಿಯದೇ ಇರೋದು ಕನ್ನಡಕ್ಕೆ ಮಾಡಿದ ಅವಮಾನ ಆಗುತ್ತೆ. ಕನ್ನಡೇತರರಿಗೆ ಕನ್ನಡ ಕಲಿಯುವ ವಾತಾವರಣ ನಿರ್ಮಾಣ ಮಾಡಬೇಕಾದುದ್ದು, ಕನ್ನಡಿಗರ ಕರ್ತವ್ಯ ಎಂದರು.

    ಇತ್ತೀಚೆಗೆ ಪೋಷಕರಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗಿದೆ. ಕನ್ನಡ ಭಾಷೆಯನ್ನು ಕಲಿಯೋದ್ರಿಂದ ಜ್ಞಾನ ಭಂಡಾರ ಜಾರಿ ಆಗುತ್ತೆ. ಪ್ರಾದೇಶಿಕ ಭಾಷೆ ಉಳಿವಿಗಾಗಿ ಪಿಎಂ ಸೇರಿದಂತೆ ಎಲ್ಲಾ ರಾಜ್ಯದ ಸಿಎಂಗಳಿಗೆ ಆಯಾ ರಾಜ್ಯಗಳ ಮಾತೃ ಭಾಷೆಯಲ್ಲೇ ಶಿಕ್ಷಣ ನೀಡುವ ತಿದ್ದುಪಡಿ ಬರುವಂತೆ ಪತ್ರ ಬರೆದಿದ್ದೇವೆ. ಆದರೆ ಪ್ರಧಾನಿಗಳು ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ ಎಂದು ಹೇಳಿದರು.

    ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ, ಕನ್ನಡ ನಾಡು ನುಡಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕನ್ನಡ ಭಾಷೆ ಕಡ್ಡಾಯವಾಗಿ ಶಾಲೆಗಳಲ್ಲಿ ಕಲಿಯಬೇಕು ಅನ್ನೋ ಆದೇಶವನ್ನು ಸರ್ಕಾರ ಹೊರಡಿಸಿದೆ. ಗುರು ಚೇತನದ ಮೂಲಕ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ. ವಿಶ್ವಾಸ ಕಿರಣ ಕಾರ್ಯಕ್ರಮದ ಮೂಲಕ ರಜಾ ದಿನಗಳಲ್ಲಿ ಮಕ್ಕಳಿಗೆ ತರಬೇತಿ ನೀಡುವ ಕೆಲಸ ಮಾಡಿದ್ದೇವೆ. ಶಿಕ್ಷಣ ಇಲಾಖೆಗೆ ಸಿದ್ದರಾಮಯ್ಯ ಅವರು ಹೆಚ್ಚಿನ ಅನುದಾನ ನೀಡಿದ್ದಾರೆ. ಜನವರಿ ಫೆಬ್ರವರಿಯಲ್ಲಿ 10 ಸಾವಿರ ಶಿಕ್ಷಕರ ನೇಮಕಾತಿ ಮುಕ್ತಾಯವಾಗಲಿದೆ. ಅಷ್ಟೇ ಅಲ್ಲದೇ ಕನ್ನಡ ಶಾಲೆಗಳ ಸಬಲೀಕರಣಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಮಿತಿ ಶಿಫಾರಸ್ಸು ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

    ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬೆಂಗಳೂರು ನಾಗರೀಕರು ಬಂದಿರಲಿಲ್ಲ. ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರಿಗೆ ಆಹ್ವಾನವಿದ್ದರೂ ಗೈರು ಹಾಜರಾಗಿದ್ದರು. ಇದರಿಂದ ಬಹುತೇಕ ಕ್ರೀಡಾಂಗಣ ಖಾಲಿ ಖಾಲಿ ಇತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿರುವ ಶಾಲಾ ಮಕ್ಕಳು ಮತ್ತು ಶಾಲಾ ಶಿಕ್ಷಕರು ಮಾತ್ರ ಪಾಲ್ಗೊಂಡಿದ್ದರು.

    ಕಾರ್ಯಕ್ರಮದಲ್ಲಿ ಇಂದು ನಿಧನರಾದ ಶಾಸಕ ಚಿಕ್ಕಮಾದು ಅವರಿಗೆ ಮಕ್ಕಳು ಮತ್ತು ಅಧಿಕಾರಿಗಳು ಎಲ್ಲರು ಎದ್ದು ನಿಂತು ಒಂದು ನಿಮಿಷ ಶ್ರದ್ಧಾಂಜಲಿ ಸಲ್ಲಿಸಿದರು.