Tag: Bangalore

  • ಲಾಂಗ್, ಮಚ್ಚು, ಕ್ರಿಕೆಟ್ ಬ್ಯಾಟ್, ಕಬ್ಬಿಣದ ರಾಡ್ ಹಿಡಿದು ಅಲಯನ್ಸ್ ವಿವಿಗೆ ನುಗ್ಗಿದ ಗೂಂಡಾಗಳು

    ಲಾಂಗ್, ಮಚ್ಚು, ಕ್ರಿಕೆಟ್ ಬ್ಯಾಟ್, ಕಬ್ಬಿಣದ ರಾಡ್ ಹಿಡಿದು ಅಲಯನ್ಸ್ ವಿವಿಗೆ ನುಗ್ಗಿದ ಗೂಂಡಾಗಳು

    ಬೆಂಗಳೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಅಲಯನ್ಸ್ ವಿವಿ ಒಡೆತನಕ್ಕಾಗಿ ಸಹೋದರರ ನಡುವೆ ನಡೆಯುತ್ತಿರುವ ಕಿತ್ತಾಟ ಇದೀಗ ತಾರಕಕ್ಕೇರಿದ್ದು ಸೋಮವಾರ ಕಾಲೇಜು ಆವರಣ ಅಕ್ಷರಶಃ ಸಹ ರಣಾಂಗಣವಾಗಿ ಮಾರ್ಪಾಟಿತ್ತು.

    2 ದಿನಗಳ ಹಿಂದೆ ಸುಧೀರ್ ಅಂಗುರ್ ರೌಡಿ ಪಡೆಯೊಂದಿಗೆ ಕಾಲೇಜಿನೊಳಗೆ ನುಗ್ಗಿ ಮಧುಕರ್ ಅಂಗೂರ್ ನೇಮಿಸಿದ್ದ ಸಿಬ್ಬಂದಿಗೆ ಹಾಗೂ ವಿದ್ಯಾರ್ಥಿಗಳಿಗೆ ಮನ ಬಂದಂತೆ ಥಳಿಸಿ ಹೊರ ಹಾಕಿದ್ದರು. ಇಂದು ಮಧುಕರ್ ಬೆಂಬಲಿಗರು ವಿವಿ ಆವರಣಕ್ಕೆ ನುಗ್ಗಿ ರೌಡಿಗಳಂತೆ ಬಡಿದಾಡಿಕೊಂಡಿದ್ದಾರೆ.

    ಲಾಂಗ್, ಮಚ್ಚು ಮತ್ತು ದೊಣ್ಣೆಗಳು ರಾರಾಜಿಸಿ ಪರಸ್ಪರ ಆವರಣದೊಳಗೆ ಓಡಾಡಿಸಿಕೊಂಡು ಬಡಿದಾಡಿಕೊಂಡಿದ್ದಾರೆ. ಇಡೀ ವಾತಾವರಣ ಮಾರುಕಟ್ಟೆಯಂತೆಯಾಗಿತ್ತು. ಒಟ್ಟಿನಲ್ಲಿ ಇಂದು ಸಂಜೆ ಅಲಯನ್ಸ್ ವಿವಿ ಆವರಣ ರಣಾಂಗಣವಾಗಿ ಮಾರ್ಪಟ್ಟು ಇಡೀ ವಿದ್ಯಾರ್ಥಿಗಳ ಬದುಕನ್ನು ಡೋಲಾಯಮಾನವಾಗಿಸಿದೆ.

    ಇಂದು ಸಂಜೆ ಕಾಲೇಜಿನಲ್ಲಿ ನಡೆದ ಗಲಾಟೆಯನ್ನು ನೋಡಿ ಡೀನ್ ಮಾರ್ಕೀಂಡೇಯಾ ಈ ದಾಂಧಲೆಗೆ ಸುಧೀರ್ ಅಂಗೂರ್ ಕಾರಣವೆಂದು ದೂರಿದ್ದಾರೆ.

    ವಿವಿ ಆಡಳಿತ ಮಂಡಳಿಯವರು ಆರು ತಿಂಗಳಿಗೊಮ್ಮೆ ಕಿತ್ತಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ವಿವಿ ಆಡಳಿತ ಮಂಡಳಿಯ ಸೋದರ ಸೋದರಿಯರಾದ ಮಧುಕರ್ ಅಂಗೂರ್ ಹಾಗೂ ಶೈಲಜಾ ಚಬ್ಬಿ ಅವರು ಅಧಿಕಾರ ದಾಹದಿಂದ ಕಳೆದ ಎರಡು ವರ್ಷಗಳಿಂದ ಆರು ತಿಂಗಳಿಗೊಮ್ಮೆ ಕಿತ್ತಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ದಾರಿ ಅತಂತ್ರವಾದಂತಾಗಿದೆ.

    ಕಳೆದ ಆರು ತಿಂಗಳಿಂದ ಅಲಯನ್ಸ್ ವಿವಿ ಕುಲಪತಿಯಾಗಿ ಮಧುಕರ್ ಅಂಗೂರ್ ಜವಾಬ್ದಾರಿ ತೆಗೆದುಕೊಂಡ ಮೇಲೆ ಪ್ರಶಾಂತವಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಮಧುಕರ್ ಸಹೋದರಿ ಶೈಲಜಾ ಚಬ್ಬಿ ಹಾಗೂ ಸುಧೀರ್ ಅಂಗೂರ್ ಅಕ್ರಮವಾಗಿ ವಿವಿ ಅವರಣಕ್ಕೆ ಬೌನ್ಸರ್ ಗಳನ್ನು ಕಳುಹಿಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಇಷ್ಟೆಲ್ಲ ನಡೆಯುತ್ತಿದ್ದರೂ ಇದನ್ನೆಲ್ಲ ಕಣ್ಣಾರೆ ಕಂಡರೂ ಇದನ್ನು ತಡೆಯಬೇಕಾದ ಆನೇಕಲ್ ಪೊಲೀಸರು ಕಂಡು ಕಾಣದಂತೆ ಸುಮ್ಮನೆ ಕೈಕಟ್ಟಿ ಕುಳಿತಿದ್ದಾರೆ. ಕಾಲೇಜಿನ ಕಿತ್ತಾಟದ ಬಗ್ಗೆ ತಾಲೂಕಿನವರಾದ ಗೃಹ ಸಚಿವರಿಗೂ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗಿದ್ದಾರೆ.

    ವಿದ್ಯಾರ್ಥಿಗಳಿಂದ ಪ್ರತಿಭಟನೆ: ಅಲಯನ್ಸ್ ಕಾಲೇಜಿನಲ್ಲಿ ನಡೆಯುತ್ತಿರುವ ಗುಂಡಾಗಿರಿಯನ್ನು ಖಂಡಿಸಿ ಇವತ್ತು ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು ಅವರಿಗೆ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಸುಧೀರ್ ಅಂಗೂರ್ ಹಾಗೂ ಗೂಂಡಾಗಳು ಕಾಲೇಜಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಲ್ಲದೇ ಆಡಳಿತ ಮಂಡಳಿ ಬದಲಾವಣೆಯಾಗಿದ್ದು ಹೊಸದಾಗಿ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತಿದ್ದಾರೆ. ಮಧುಕರ್ ಜಿ ಅಂಗೂರ್ ಅವರನ್ನು ಹೊರಹಾಕಿ ಆಸ್ತಿ ಹೊಡೆಯಲು ಪ್ಲಾನ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಕಬ್ಬನ್ ಪಾರ್ಕ್ ನಲ್ಲಿ ಸೇರಿದ್ದ ವಿದ್ಯಾರ್ಥಿಗಳು ಹಾಗು ಸಿಬ್ಬಂದಿ ವರ್ಗ ಕಾನೂನು ಕ್ರಮಕ್ಕಾಗಿ ಒತ್ತಾಯಿಸಿದ್ದರು. ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿದ್ದ ಎಲ್ಲರನ್ನು ಹೊರಗೆ ಕಳುಹಿಸಿದರು.

  • ಗೌರಿ ಲಂಕೇಶ್ ಹತ್ಯೆ ತನಿಖೆ: ಕವಿತಾ ಲಂಕೇಶ್ ಅಸಮಾಧಾನ

    ಗೌರಿ ಲಂಕೇಶ್ ಹತ್ಯೆ ತನಿಖೆ: ಕವಿತಾ ಲಂಕೇಶ್ ಅಸಮಾಧಾನ

    ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಎಸ್‍ಐಟಿ ತನಿಖೆ ವಿಳಂಬವಾಗುತ್ತಿರುವ ಕುರಿತು ಸಹೋದರಿ ಕವಿತಾ ಲಂಕೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ತಮ್ಮ ಮುಂದಿನ ಚಿತ್ರದ ಸಮ್ಮರ್ ಹಾಲಿಡೇಸ್ ಟ್ರೇಲರ್ ಲಾಂಚ್ ವೇಳೆ ಮಾತನಾಡಿದ ಅವರು, ಸಹೋದರಿ ಗೌರಿ ಲಂಕೇಶ್ ಅವರನ್ನು ನೆನೆದು ಭಾವುಕರಾದರು. ಗೃಹ ಸಚಿವ ರಾಮಲಿಂಗ ರೆಡ್ಡಿ ಅವರು ಕಳೆದ ಎರಡು ತಿಂಗಳಿನಿಂದ ಎರಡು ವಾರದಲ್ಲಿ ತನಿಖೆ ಮುಕ್ತಾಯವಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ತನಿಖೆ ಬಗ್ಗೆ ಯಾವುದೇ ಸ್ಪಷ್ಟನೇ ಸಿಕ್ಕಿಲ್ಲ ಎಂದರು.

    ಗೃಹ ಸಚಿವರ ಮೇಲೆ ನಂಬಿಕೆ ಇಡ್ಬೇಕಾ ಬೇಡ್ವಾ ಅನ್ನುವ ಅನುಮಾನ ಕಾಡ್ತಿದೆ. ಎಸ್‍ಐಟಿ ತನಿಖಾಧಿಕಾರಿ ಬಿಕೆ ಸಿಂಗ್ ಅವರು ಇನ್ನು 2 ವಾರಗಳಲ್ಲಿ ತನಿಖೆ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಅವರ ಹೇಳಿಕೆ ಹಿನ್ನೆಲೆ ನಂಬಿಕೆ ಬಂದಿದೆ ಎಂದು ಹೇಳಿದರು.

    ತಮ್ಮ ಸಮ್ಮರ್ ಹಾಲಿಡೇಸ್ ಸಿನಿಮಾದಲ್ಲಿ ಗೌರಿ ಲಂಕೇಶ್ ಸಾಮಾಜಿಕ ಹೋರಾಟಗಾರ್ತಿಯ ಸಣ್ಣ ಪಾತ್ರವನ್ನು ಮಾಡಿದ್ದಾರೆ. ನಿಜ ಜೀವನದಲ್ಲೂ ಅವರು ಹಾಗೆಯೇ ಇದ್ದರು. ಅವರ ಸಾಮಾಜಿಕ ಹೋರಾಟವೇ ಅವರ ಪ್ರಾಣಕ್ಕೆ ಕಂಟಕವಾಗುತ್ತದೆ ಎಂದು ತಿಳಿದಿಲಿಲ್ಲ. ನಮ್ಮ ತಂದೆ ಲಂಕೇಶ್ ಅವರು ಸರ್ಕಾರ ವಿರುದ್ಧ ಹಲವು ಬರಹಗಳನ್ನು ಪ್ರಕಟಿಸಿದ್ದರು ಎಂದು ನೆನಪಿಸಿಕೊಂಡರು.

    ನಿಮ್ಮ ಹಾಗೂ ಸಹೋದರ ಇಂದ್ರಜಿತ್ ಲಂಕೇಶ್ ಅವರಿಗೆ ಯಾವುದಾರರು ಜೀವ ಬೆದರಿಕೆ ಕುರಿತ ಪ್ರಶ್ನೆಗೆ ಉತ್ತರಿಸದ ಅವರು ನಮಗೇ ಇಂತಹ ಯಾವುದೇ ಜೀವ ಬೆದರಿಕೆ ಇಲ್ಲ, ಆದರೆ ಗೌರಿ ಹತ್ಯೆ ನಂತರ ಅತಂಕಕ್ಕೆ ಒಳಗಾಗಿದ್ದೇವು ಎಂದು ತಿಳಿಸಿದರು.

     

  • ಮಿಸ್ಟರ್&ಮಿಸೆಸ್ ಐಕಾನ್ ಇಂಡಿಯಾ- ಫ್ಯಾಷನ್ ಶೋನಲ್ಲಿ ಮೆರುಗು ತುಂಬಿದ ಬೆಲ್ಲಿ ಡ್ಯಾನ್ಸ್

    ಮಿಸ್ಟರ್&ಮಿಸೆಸ್ ಐಕಾನ್ ಇಂಡಿಯಾ- ಫ್ಯಾಷನ್ ಶೋನಲ್ಲಿ ಮೆರುಗು ತುಂಬಿದ ಬೆಲ್ಲಿ ಡ್ಯಾನ್ಸ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾರಾಂತ್ಯ ಬಂದರೇ ಸಾಕು ಒಂದಿಲ್ಲೊಂದು ಮನರಂಜನಾ ಕಾರ್ಯಕ್ರಮಗಳ ಆಯೋಜನೆ ಮಾಡುವ ಮೂಲಕ ನೋಡುಗರನ್ನು ರಂಜಿಸುವ ಕಾರ್ಯ ನಡೆಯುತ್ತಲೇ ಇರುತ್ತದೆ.

    ಈ ಬಾರಿಯ ವೀಕೆಂಡ್‍ನಲ್ಲಿ ನಗರದ ಪ್ರತಿಷ್ಠಿತ ಹೊಟೇಲೊಂದರಲ್ಲಿ ಆಯೋಜಿಸಿದ್ದ ಮಿಸ್ಟರ್ ಆ್ಯಂಡ್ ಮಿಸೆಸ್ ಐಕಾನ್ ಇಂಡಿಯಾ ಫ್ಯಾಷನ್ ಶೋ ಎಲ್ಲರ ಗಮನ ಸೆಳೆಯಿತು.

    ಜಗಮಗಿಸುವ ಲೈಟ್‍ಗಳ ನಡುವೆ ಮಾದಕ ಕಣ್ಣೋಟದ ಸುಂದರಿಯರು ರಾಕಿಂಗ್ ಮ್ಯೂಸಿಕ್ ಗೆ ಕ್ಯಾಟ್ ವಾಕ್ ಮಾಡುವ ಮೂಲಕ ಎಲ್ಲರನ್ನೂ ಒಂದು ಕ್ಷಣ ಮಾಯಾ ಪ್ರಪಂಚಕ್ಕೆ ಕರೆದುಕೊಂಡು ಹೋದರು. ಇಂಥದೊಂದು ಮನಮೋಹಕ ಫ್ಯಾಶನ್ ಶೋ ಅನಾವರಣಗೊಂಡಿದ್ದು ಬೆಂಗಳೂರಿನ `ದಿ ಕ್ಯಾಪಿಟಲ್ ಹೋಟೆಲ್’ ನಲ್ಲಿ.

    ಖಾಸಗಿ ಸಂಸ್ಥೆಯೊಂದು ಆಯೋಜನೆ ಮಾಡಿದ್ದ ಫ್ಯಾಷನ್ ಶೋವನ್ನು ಖ್ಯಾತ ನೃತ್ಯ ನಿರ್ದೇಶಕ ಡ್ಯಾನಿ ಹಾಗೂ ಸಟಿ ಸನಿಹಾ ಯಾದವ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನೆ ಮಾಡಿದರು. ಇನ್ನು ಈ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಕೇರಳ ಮೂಲದ ನೂರಕ್ಕೂ ಹೆಚ್ಚು ಮಾಡೆಲ್ ಗಳು ಭಾಗವಹಿಸಿ, ತಮ್ಮ ಪ್ರತಿಭೆಯನ್ನು ರ್ಯಾಪ್ ವಾಕ್ ಮಾಡುವ ಮೂಲಕ ಪ್ರದರ್ಶಿಸಿದರು.

    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೇಕ್ಷಕರನ್ನು ಹುರಿದುಂಬಿಸುವ ಸಲುವಾಗಿ ಬೆಲ್ಲಿ ಡ್ಯಾನ್ಸ್ ಏರ್ಪಡಿಸಲಾಗಿದ್ದು ಮತ್ತೊಂದು ವಿಶೇಷ. ಬೆಲ್ಲಿ ಡ್ಯಾನ್ಸ್ ಕಂಡ ಫ್ಯಾಷನ್ ಪ್ರಿಯರು ಮಾಗಿ ಚಳಿಯಲ್ಲೂ ಮೈ ಬಿಸಿಯಾದಂತೆ ಭಾಸವಾದ್ರು. ಇಷ್ಟೇ ಅಲ್ಲದೇ ಕೋರಿಯೊಗ್ರಾಫರ್ ಡ್ಯಾನಿ ಮಾಡಲ್ ಗಳ ಜೊತೆ ಹಿಂದಿ ಹಾಡುಗಳಿಗೆ ಡ್ಯಾನ್ಸ್ ಮಾಡುವ ಮೂಲಕ ಪ್ರೇಕ್ಷಕರನ್ನು ಮತ್ತಷ್ಟು ಮನಸೂರೆಗೊಳಿಸಿದರು. ಒಟ್ಟಿನಲ್ಲಿ ವೀಕೆಂಡ್ ಮಸ್ತಿಯಲ್ಲಿದ್ದ ಬೆಂಗಳೂರಿನ ಜನರಿಗೆ ಕಲರ್ ಫುಲ್ ರ್ಯಾಪ್ ವಾಕ್ ವಿಶೇಷ ಮನರಂಜನೆಯನ್ನು ನೀಡಿತು.

     

  • ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಕದಿಯುತ್ತಿದ್ದ ಆರೋಪಿಗಳ ಬಂಧನ

    ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಕದಿಯುತ್ತಿದ್ದ ಆರೋಪಿಗಳ ಬಂಧನ

    ಬೆಂಗಳೂರು: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಕದಿಯುತ್ತಿದ್ದ ಮೂವರು ಆರೋಪಿಗಳನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.

    ಇಬ್ರಾಹಿಂ ಅಲಿಯಾಸ್ ಕಲು, ಫಾಯಾಜ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 300 ಗ್ರಾಂ ಚಿನ್ನ ಹಾಗೂ 8 ಸರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ನಗರದೆಲ್ಲೆಡೆ ಒಂಟಿಯಾಗಿ ಓಡಾಡುತ್ತಿದ್ದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಬೈಕ್‍ನಲ್ಲಿ ಬಂದು ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಈ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನಂತೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದು, ಇದೀಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸರಗಳ್ಳರು ಓಡಾಡೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಕಳ್ಳತನ ಮಾಡಲು ಬಳಸುತ್ತಿದ್ದ ಬೈಕ್ ಅನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

  • ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ- ಬೈಕ್ ಸವಾರ ಸ್ಥಳದಲ್ಲೇ ನರಳಿ ನರಳಿ ಸಾವು

    ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ- ಬೈಕ್ ಸವಾರ ಸ್ಥಳದಲ್ಲೇ ನರಳಿ ನರಳಿ ಸಾವು

    ಬೆಂಗಳೂರು: ಚಲಿಸುತ್ತಿದ್ದ ಬೈಕ್ ಗೆ ಅಡಿಕೆ ತುಂಬಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ನರಳಿ ನರಳಿ ಸಾವನಪ್ಪಿರುವ ಘಟನೆ ನೆಲಮಂಗಲದ ತಾಳೆಕೆರೆ ಗೇಟ್ ಬಳಿ ನಡೆದಿದೆ.

    ನೆಲಮಂಗಲ ಪಟ್ಟಣದ ನಿವಾಸಿ ಕಾಂತರಾಜು ತುಮಕೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದಾಗ ರಾಷ್ಟ್ರೀಯ  ಹೆದ್ದಾರಿ ನಾಲ್ಕರಲ್ಲಿ ಯಮಸ್ವರೂಪಿಯಾಗಿ ಬಂದ ಟ್ರ್ಯಾಕ್ಟರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಕಾಂತರಾಜು ಕೆಲ ಕಾಲ ನರಳಾಡಿ ಸಾವನ್ನಪ್ಪಿದ್ದಾರೆ.

    ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಅಂಬುಲೆನ್ಸ್ ಬಂದರೂ ಯಾವುದೇ ಪ್ರಯೋಜನವಾಗದೆ ಕಾಂತರಾಜು ಕೊನೆಯುಸಿರೆಳೆದಿದ್ದಾರೆ. ಘಟನೆಯಿಂದ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಘಟನಾ ಸ್ಥಳಕ್ಕೆ ಭೇಟಿ ನೀಡಿದ ನೆಲಮಂಗಲ ಸಂಚಾರಿ ಪೊಲೀಸರು ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟ್ರಾಕ್ಟರ್ ಚಾಲಕನನ್ನು ಪತ್ತೆಗೆ ಶೋಧಕಾರ್ಯ ಆರಂಭಿಸಿದ್ದಾರೆ.

  • ಅಪರಿಚಿತ ವ್ಯಕ್ತಿಯ ಶವದ ಮೇಲೆ ಸಂಚರಿಸಿದವು 150ಕ್ಕೂ ಹೆಚ್ಚು ವಾಹನಗಳು!

    ಅಪರಿಚಿತ ವ್ಯಕ್ತಿಯ ಶವದ ಮೇಲೆ ಸಂಚರಿಸಿದವು 150ಕ್ಕೂ ಹೆಚ್ಚು ವಾಹನಗಳು!

    ಬೆಂಗಳೂರು: ಅಪರಿಚಿತ ವ್ಯಕ್ತಿಯ ಶವದ ಮೇಲೆ ಸುಮಾರು 150 ಹೆಚ್ಚು ವಾಹನಗಳು ಸಂಚರಿಸಿರುವ ಭೀಕರ ಅಪಘಾತ ಮಡಿವಾಳ ಬಳಿ ಇರುವ ಬಿಎಟಿಪಿಎಲ್ ಎಲಿವೇಟೆಡ್ ಫ್ಲೈಓವರ್ ಮೇಲೆ ನಡೆದಿದೆ.

    ಅಪರಿಚಿತ ವ್ಯಕ್ತಿಯೊಬ್ಬರಿಗೆ ಇಂದು ನಸುಕಿನ ಜಾವ ಸುಮಾರು 3 ಗಂಟೆಗೆ ವಾಹನವೊಂದು ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ ಈ ವೇಳೆಯಲ್ಲಿ ಅಪಘಾತವಾಗಿರುವುದು ಯಾರಿಗೂ ತಿಳಿದ ಕಾರಣ ವಾಹನಗಳು ಶವದ ಮೇಲೆ ಹರಿದು ಹೋಗಿವೆ.

    ಬೆಳಗ್ಗೆ ಸಂಚಾರಿ ಪೊಲೀಸರು ಗಮನಿಸಿದ್ದು, ನಂತರ ಬಂದು ನೋಡಿದ್ದಾರೆ. ಆದರೆ ಅಷ್ಟರಲ್ಲಿ ಸುಮಾರು 150 ವಾಹನಗಳು ಹರಿದು ಹೋಗಿರುವುದರಿಂದ ವ್ಯಕ್ತಿಯ ಗುರುತು ಪತ್ತೆ ಹಚ್ಚುವುದು ಕಷ್ಟವಾಗಿದೆ. ನಂತರ ಪೊಲೀಸರು ಆಂಬುಲೆನ್ಸ್‍ಗೆ ಕರೆ ಮಾಡಿ ಸಮೀಪದ ಆಸ್ಪತ್ರೆಗೆ ಶವವನ್ನು ರವಾನಿಸಿದ್ದಾರೆ.

    ಮಡಿವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸರಿಯಾದ ಟೋಲ್ ಪೆಟ್ರೋಲಿಂಗ್ ಇಲ್ಲದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಆರೋಪಿಸುತ್ತಿದ್ದಾರೆ. ಆದರೆ ಮೃತಪಟ್ಟಿರುವ ವ್ಯಕ್ತಿ ಯಾರು ಇನ್ನು ತಿಳಿದು ಬಂದಿಲ್ಲ.

    ಇದನ್ನೂ ಓದಿ: ದ್ವಿಚಕ್ರ ವಾಹನಸವಾರರಿಗೆ ಶಾಕಿಂಗ್ ಸುದ್ದಿ – ಹೊಸೂರು ಫ್ಲೈಓವರ್‍ ನಲ್ಲಿ ಓಡಾಟ ಶೀಘ್ರದಲ್ಲೇ ಬಂದ್ ಸಾಧ್ಯತೆ

     

  • 30 ವರ್ಷಗಳ ಕಾಲ ಆಡಿದ್ರೂ ಬ್ಯಾಡ್ಮಿಂಟನ್ ಬಗ್ಗೆ ನನಗೆ ಜಾಸ್ತಿ ತಿಳಿದಿಲ್ಲ: ಗೋಪಿಚಂದ್

    30 ವರ್ಷಗಳ ಕಾಲ ಆಡಿದ್ರೂ ಬ್ಯಾಡ್ಮಿಂಟನ್ ಬಗ್ಗೆ ನನಗೆ ಜಾಸ್ತಿ ತಿಳಿದಿಲ್ಲ: ಗೋಪಿಚಂದ್

    ಬೆಂಗಳೂರು: 30 ವರ್ಷಗಳ ಕಾಲ ಬ್ಯಾಡ್ಮಿಂಟನ್ ಆಡುತ್ತಿದ್ದರೂ ಅದರ ಬಗ್ಗೆ ನನಗೆ ಜಾಸ್ತಿ ತಿಳಿದಿಲ್ಲ ಎಂದು ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಹೇಳಿದ್ದಾರೆ.

    ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಗ್ಲೋಬಲ್ ಲೀಡರ್‍ಶಿಪ್ ಫೋರಂ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ಜೀವನದ ಅನುಭವವನ್ನು ಉದಾಹರಣೆಯಾಗಿ ನೀಡುತ್ತಾ ಯುವ ಜನರಿಗೆ ಯಶಸ್ವಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಲಹೆಗಳನ್ನು ನೀಡಿದರು.

    ಪ್ರತಿ ವಿದ್ಯಾರ್ಥಿಯಲ್ಲೂ ವಿಶೇಷ ಸಾಮರ್ಥ್ಯವಿರುತ್ತದೆ. ಉಸೇನ್ ಬೋಲ್ಟ್ ಅವರ ವಿರುದ್ಧ ಸ್ಪರ್ಧಿಸಿ ಅವರನ್ನು ಸೋಲಿಸುವುದು ದೊಡ್ಡ ವಿಷಯವಲ್ಲ. ನಾನು ನನ್ನ ವಿರುದ್ಧ ಪ್ರತಿ ದಿನವು ಸ್ಪರ್ಧಿಸುತ್ತೇನೆ. ಪ್ರತಿ ಬಾರಿ ಸ್ಪರ್ಧೆ ಮಾಡುವಾಗಲೂ ಕಳೆದ ಅವಧಿಗಿಂತ ಉತ್ತಮ ಫಲಿತಾಂಶವನ್ನು ಪಡೆಯುತ್ತೇನೆ. ಆದು ನಮಗೇ ಹಲವು ಯಶಸ್ಸುಗಳನ್ನು ತಂದು ಕೊಡುತ್ತದೆ ಎಂದು ಸಲಹೆ ನೀಡಿದರು.

    ಬ್ಯಾಡ್ಮಿಂಟನ್ ತರಬೇತುದಾರನಾಗಿ ವೃತ್ತಿಜೀವನ ಆರಂಭಿಸಿದ್ದು ಅಚ್ಚರಿಯ ಆಯ್ಕೆಯಾಗಿದ್ದು, ತಾನು ಬ್ಯಾಡ್ಮಿಂಟನ್ ಆಯ್ಕೆ ಮಾಡಿಕೊಂಡ ಸಂದರ್ಭದಲ್ಲಿ ಕ್ರಿಕೆಟ್ ಜನಪ್ರಿಯವಾಗಿತ್ತು. ಯಾರು ಬ್ಯಾಡ್ಮಿಂಟನ್ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಇಂತಹ ಸಮಯದಲ್ಲಿ ನಾನು ಬ್ಯಾಡ್ಮಿಟನ್ ಆಯ್ಕೆ ಮಾಡಿಕೊಂಡೆ ಎಂದು ಹೇಳಿದರು.

    2004 ರಲ್ಲಿ ನಾನು ಬ್ಯಾಡ್ಮಿಟನ್ ತರಬೇತುದಾರನಾಗಿ ವೃತ್ತಿ ಜೀವನ ಆರಂಭ ಮಾಡಿದೆ. ಆ ಸಮಯದಲ್ಲಿ ತರಬೇತಿಗೆ ಬರುವ ವಿದ್ಯಾರ್ಥಿಗಳಲ್ಲಿ ಉತ್ತಮವಾಗಿರುವವರನ್ನು ಗುರುತಿಸಿ ತರಬೇತಿ ನೀಡಬೇಕಾಗಿತ್ತು. ಆದರೆ ಅದನ್ನು ನಾನು ಅದನ್ನು ತಪ್ಪು ಎಂದು ಸಾಬೀತು ಪಡಿಸಿದ್ದೇನೆ. ಕಾಕ್ ಹಿಡಿಯಲು ಬಾರದ ಹೆಣ್ಣು ಮಕ್ಕಳಿಗೆ ಆಟ ಹೇಳಿಕೊಟ್ಟಿದ್ದೇನೆ. ಇಂದು ಮಕ್ಕಳಿಗೆ ಶಿಕ್ಷಣ ಹಾಗೂ ತಂತ್ರಜ್ಞಾನದ ಮೇಲೆ ಆಸಕ್ತಿ ಹೆಚ್ಚಿಸಲು ಒತ್ತಡ ಹಾಕುತ್ತೇವೆ. ಇದರಿಂದಾಗಿ ಮಕ್ಕಳಲ್ಲಿ ಮಾನವೀಯ ಸಂಬಂಧಗಳು ಕಡಿಮೆಯಾಗುತ್ತದೆ ಎಂದು ಹೇಳಿದರು.

    ಸಮಾವೇಶದ ಕುರಿತು ಮಾತನಾಡಿದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ ಹಾಗೂ ಸಂಸ್ಥಾಪಕರಾದ ಶ್ರೀ ರವಿಶಂಕರ್ ಗುರೂಜಿ ಅವರು ಯುವ ಸಮುದಾಯದಲ್ಲಿ ನಾಯಕತ್ವ ಬೆಳವಣಿಗೆ ಮಹತ್ವದ ಕುರಿತು ವಿವರಿಸಿದರು.

    ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಎರಡನೇ ವರ್ಷದ ಸಮ್ಮೇಳನ ನಡೆದಿದ್ದು, ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತದೆ. ಈ ವೇಳೆ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.

     

  • ಬಿಗ್ ಬಾಸ್ ನ ಬಾರ್ಬಿ ಡಾಲ್ ಮದುವೆಯಾಗೋ ಹುಡುಗ ಹೀಗಿರಬೇಕಂತೆ!

    ಬಿಗ್ ಬಾಸ್ ನ ಬಾರ್ಬಿ ಡಾಲ್ ಮದುವೆಯಾಗೋ ಹುಡುಗ ಹೀಗಿರಬೇಕಂತೆ!

    ಬೆಂಗಳೂರು: ಬಿಗ್‍ಬಾಸ್ ಸೀಸನ್ 5 ನಲ್ಲಿ ಭಾಗವಹಿಸಿರುವ ಸ್ಪರ್ಧಿಗಳಲ್ಲಿ ಬಾರ್ಬಿ ಡಾಲ್ ಎಂದೇ ಪ್ರಸಿದ್ಧಿಯಾಗಿರುವ ಮೈಸೂರಿನ ನಿವೇದಿತಾಗೌಡ ಮನೆಯ ಒಳಗೆ ಹಾಗೂ ಹೊರಗೆ ಸಖತ್ ಸುದ್ದಿಯಾಗುತ್ತಿದ್ದು, ಪಡ್ಡೆ ಹುಡುಗರ ಕನಸಿನ ರಾಣಿಯಾಗಿದ್ದಾರೆ.

    ನಿವೇದಿತಾ ಗೌಡ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ. ಶುಕ್ರವಾರ ರಾತ್ರಿ ಬಿಗ್ ಬಾಸ್ ಮನೆಯಲ್ಲಿ ನಿನ್ನನ್ನು ಮದುವೆಯಾಗುವ ಹುಡುಗ ಹೇಗಿರಬೇಕೆಂದು ದಿವಾಕರ್, ಜೆಕೆ, ಜಗನ್ ಹಾಗೂ ಚಂದನ್ ಅವರು ಪ್ರಶ್ನೆಯನ್ನು ಕೇಳಿದ್ದಾರೆ. ಈ ಸಂದರ್ಭದಲ್ಲಿ ಬಾರ್ಬಿ ಡಾಲ್ ತನ್ನ ಕನಸಿನ ಹುಡುಗನ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

    ನನ್ನ ಹುಡುಗ ನನಗಿಂತ ಸ್ವಲ್ವ ಎತ್ತರವಿರಬೇಕು, ನನ್ನನ್ನು ತುಂಬಾ ಪ್ರೀತಿ ಮಾಡಬೇಕು. ಆದರೆ ಅದನ್ನು ತೋರಿಸಿಕೊಳ್ಳಬಾರದು. ಸಿಕ್ಸ್ ಪ್ಯಾಕ್ ಬಾಡಿ ಇಲ್ಲದೇ ಇದ್ದರೂ ಪರವಾಗಿಲ್ಲ ಅಚ್ಚುಕಟ್ಟಾದ ಮೈಕಟ್ಟು ಇರಬೇಕು. ವಯಸ್ಸಿನಲ್ಲಿ ನನಗಿಂತ 5 ವರ್ಷಕ್ಕೆ ದೊಡ್ಡವನಾಗಿರಬೇಕು. ಯಾವುದಾದರೂ ಒಂದು ಕಾರು ಇರಬೇಕು. ಶ್ರೀಮಂತರಾಗದಿದ್ದರೂ ಮಧ್ಯಮ ವರ್ಗದವರಾಗಿರಬೇಕು. ಕಷ್ಟ ಇರಬಾರದು, ಯಾವುದೇ ಚಿಂತೆ ಇರಬಾರದು, ಯಾವಾಗಲೂ ಸಂತೋಷದಿಂದ ಇರಬೇಕು ಎಂದು ಹೇಳಿದ್ದಾರೆ.

    ಇನ್ನು ಹುಡುಗನ ಕೆಲಸದ ಬಗ್ಗೆ ಮಾತನಾಡುವಾಗ ಹುಡುಗ ಡಾಕ್ಟರ್, ಇಲ್ಲವೇ ನಟರಾಗಿರಬಾರದು. ಏಕೆಂದರೆ ಡಾಕ್ಟರ್ ಹಾಗೂ ನಟರು ನನ್ನ ಜೊತೆ ಜಾಸ್ತಿ ಟೈಮ್ ಕಳೆಯೋಕೆ ಆಗುವುದಿಲ್ಲ. ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ಹೋದರೆ ಸಂಜೆ 6 ಗಂಟೆಗೆ ಮನೆಯಲ್ಲಿರಬೇಕಾಗುತ್ತದೆ. ನಟರು ಬೇರೆ ಹುಡುಗಿ ಜೊತೆ ಅಭಿನಯಿಸುತ್ತಾರೆ ಆಗ ನನಗೆ ಜಲಸ್ ಆಗುತ್ತದೆ. ನನ್ನ ಹುಡುಗನಿಗೂ ನನ್ನ ಬಗ್ಗೆ ತುಂಬಾ ಜಲಸ್ ಇರಬೇಕು. ನನ್ನನ್ನು ಬೇಕಾದಾಗ ಶಾಪಿಂಗ್‍ಗೆ ಕರೆದುಕೊಂಡು ಹೋಗಬೇಕು. ಆಗಾಗ ನನಗೆ ಸಪ್ರ್ರೈಸ್ ಉಡುಗೊರೆ ಕೊಡಿಸಬೇಕು ಎಂದರು.

    ಕೊನೆಯದಾಗಿ ನಾನು ಮದುವೆಯಾಗುವ ಹುಡುಗನಿಗೆ ಯಾವುದೇ ಗರ್ಲ್‍ಫ್ರೆಂಡ್ ಇರಬಾರದು. ಯಾರಿಗೂ ಕೂಡ ಹಗ್ ಮತ್ತು ಕಿಸ್ ಮಾಡಿರಬಾರದು. ಇಷ್ಟೆಲ್ಲಾ ಲಕ್ಷಣಗಳನ್ನು ಹೊಂದಿರುವ ಹುಡುಗ ಸಿಕ್ಕರೆ ಮದುವೆ ಆಗುತ್ತೀನಿ ಎಂದು ನಿವೇದಿತಾ ತಿಳಿಸಿದ್ದಾರೆ. ಇವರ ಕನಸಿನ ಹೀರೋನ ಬಗ್ಗೆ ಕೇಳುತ್ತಾ ಕುಳಿತ್ತಿದ್ದ ದಿವಾಕರ್, ಚಂದನ್, ಜೆಕೆ ದಂಗಾದರು.

  • ಅಲೆಯನ್ಸ್ ವಿವಿಯಲ್ಲಿ ಗುಂಡಾಗಿರಿ – ಸಿಬ್ಬಂದಿ ಮೇಲೆ ಬೌನ್ಸರ್ ಗಳಿಂದ ಹಲ್ಲೆ

    ಅಲೆಯನ್ಸ್ ವಿವಿಯಲ್ಲಿ ಗುಂಡಾಗಿರಿ – ಸಿಬ್ಬಂದಿ ಮೇಲೆ ಬೌನ್ಸರ್ ಗಳಿಂದ ಹಲ್ಲೆ

    ಬೆಂಗಳೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಅಲೆಯನ್ಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ಸದ್ಯ ವಿವಿ ಆಡಳಿತ ಮಂಡಳಿ ನಡುವಿನ ಕಿತ್ತಾಟ ಬೀದಿಗೆ ಬಂದಿದೆ.

    ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಅಲೆಯನ್ಸ್ ವಿವಿ ಕುಲಪತಿ ಮಧುಕರ್ ಅಂಗೂರ್ ಬೆಂಬಲಿಗರ ಮೇಲೆ ವಿವಿ ಆಡಳಿತ ಮಂಡಳಿ ಸದಸ್ಯರಾಗಿರುವ ಶೈಲಜಾ ಚಬ್ಬಿ ಪರ ಬೌನ್ಸರ್ ಗಳಿಂದ ಹಲ್ಲೆ ಮಾಡಲಾಗಿದೆ. ವಿವಿಯಲ್ಲಿನ ಪ್ರಮುಖ ಸಮಸ್ಯೆಗೆ ಕಾರಣ ಆಡಳಿತ ಸದಸ್ಯರು ಮತ್ತು ಶೈಲಜಾ ಚಬ್ಬಿ ಅವರ ಅಧಿಕಾರ ದಾಹ ಎಂದು ಆರೋಪಿಸಲಾಗಿದೆ. ಇಬ್ಬರ ನಡುವೆ ಕಳೆದ ಎರಡು ವರ್ಷಗಳಿಂದ ಕಿತ್ತಾಟ ನಡೆಯುತ್ತಿದ್ದು ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಕಷ್ಟಗಳು ಹೆಚ್ಚಾಗಿವೆ.

    ಅಲೆಯನ್ಸ್ ವಿವಿ ಕುಲಪತಿಯಾಗಿ ಮಧುಕರ್ ಅಂಗೂರ್ ಜವಾಬ್ದಾರಿ ತೆಗೆದುಕೊಂಡ ಮೇಲೆ ವಿವಿ ವಾತಾವರಣ ಪ್ರಶಾಂತವಾಗಿತ್ತು. ಆದರೆ ಶುಕ್ರವಾರ ಮಧುಕರ್ ಸಹೋದರಿ ಶೈಲಜ ಚಬ್ಬಿ ಹಾಗೂ ಸುದೀರ್ ಅಂಗೂರ್ ಅಕ್ರಮವಾಗಿ ವಿವಿ ಅವರಣಕ್ಕೆ ಬೌನ್ಸರ್ ಗಳನ್ನು ಕಳುಹಿಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ.

    ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದರೂ ಪೊಲೀಸರು ಕಂಡು ಕಾಣದಂತೆ ಸುಮ್ಮನಿರುವುದರಿಂದ ವಿದ್ಯಾರ್ಥಿಗಳು ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಇನ್ನು ವಿವಿ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುತ್ತಿರುವ ಕುರಿತು ಸುದ್ದಿ ಮಾಡಲು ಹೋದ ಮಾಧ್ಯಮ ಪ್ರತಿನಿಧಿಗಳಿಗೂ ಬೆದರಿಕೆ ಹಾಕಿ ಚಿತ್ರೀಕರಣ ಮಾಡದಂತೆ ತಾಕೀತು ಮಾಡಿದ್ದಾರೆ.

  • ಭಾರತ ರತ್ನ ಪುರಸ್ಕೃತ ಸರ್ ಸಿ.ವಿ.ರಾಮನ್ ಮನೆಯಲ್ಲಿ ಶ್ರೀಗಂಧದ ಮರ ಕಳ್ಳತನ

    ಭಾರತ ರತ್ನ ಪುರಸ್ಕೃತ ಸರ್ ಸಿ.ವಿ.ರಾಮನ್ ಮನೆಯಲ್ಲಿ ಶ್ರೀಗಂಧದ ಮರ ಕಳ್ಳತನ

    ಬೆಂಗಳೂರು: ಭಾರತ ರತ್ನ, ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್.ಸಿ.ವಿ.ರಾಮನ್ ಅವರ ಮನೆಯಂಗಳದಲ್ಲಿದ್ದ ಶ್ರೀಗಂಧದ ಮರಗಳನ್ನು ದುಷ್ಕರ್ಮಿಗಳು ಕತ್ತರಿಸಿಕೊಂಡು ಪರಾರಿಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

    ಮಲ್ಲೇಶ್ವರಂ 15 ನೇ ಕ್ರಾಸ್‍ನಲ್ಲಿರುವ ವಿಜ್ಞಾನಿ ಸಿ.ವಿ ರಾಮನ್ ಮನೆಯಲ್ಲಿ ಈ ಘಟನೆ ನಡೆದಿದ್ದು, ಮಧ್ಯರಾತ್ರಿ ಸುಮಾರು 3.30 ಕ್ಕೆ ದುಷ್ಕರ್ಮಿಗಳು ಇಬ್ಬರು ಸೆಕ್ಯುರಿಟಿಗಳ ಕುತ್ತಿಗೆಗೆ ಲಾಂಗ್ ಇಟ್ಟು 16 ಅಡಿಯ ಒಂದು ಮರ, 10 ಅಡಿಯ ಶ್ರೀಗಂಧದ ಮರ ಕಳ್ಳತನ ಮಾಡಿದ್ದಾರೆ.

    ಸದ್ಯ ಈ ಮನೆ ಸರ್ಕಾರದ ಒಡೆತನದಲ್ಲಿದ್ದು, ಮನೆ ಕಾಯಲು ಇಬ್ಬರು ಗಾರ್ಡ್‍ಗಳನ್ನ ನೇಮಿಸಲಾಗಿತ್ತು. ಆದರೆ ಎರಡು ಓಮಿನಿ ಕಾರಿನಲ್ಲಿ ಬಂದಿದ್ದ ಆರು ಜನರ ತಂಡ, ಲಾಂಗ್ ತೋರಿಸಿ ಹೆದರಿಸಿ ಮರಗಳನ್ನ ಕತ್ತರಿಸಿಕೊಂಡು ಹೋಗಿದ್ದಾರೆ.

    ಆರು ಮಂದಿ ಬಂದು, ಮೂವರು ನಮ್ಮ ಮೇಲೆ ಅಟ್ಯಾಕ್ ಮಾಡಿ ಕತ್ತಿಗೆ ಲಾಂಗ್ ಮತ್ತು ಗರಗಸ ಇಟ್ಟು ಕೂರಿಸಿದರು. ನಂತರ ಬಾಯಿ ಬಿಟ್ಟರೆ ಕೊಂದು ಬಿಡುತ್ತೀವಿ ಎಂದು ಹೆದರಿಸಿದ್ರು, ನಂತರ ಒಂದು ಮರ ಕತ್ತರಿಸಿ ಕಾರಿಗೆ ಫೋನ್ ಮಾಡಿ ಕರೆಸಿ ಅದರಲ್ಲಿ ತುಂಬಿ ಕಳಿಸಿದ್ರು, ನಂತರ ಇನ್ನೊಂದು ಮರ ಕತ್ತರಿಸಿ ಕಾರಿಗೆ ತುಂಬಿಕೊಂಡು ಅವರು ಪರಾರಿಯಾದರು ಎಂದು ಇಬ್ಬರು ಸೆಕ್ಯುರಿಟಿಗಳು ತಿಳಿಸಿದರು.

    ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಪೊಲೀಸರು, ಶ್ವಾನದಳ ಭೇಟಿ ನೀಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.