Tag: Bangalore

  • ಇವತ್ತು ಸ್ಯಾಂಡಲ್‍ವುಡ್‍ ನಲ್ಲಿ ಒಂದಲ್ಲ, ಎರಡಲ್ಲ 9 ಸಿನಿಮಾ ರಿಲೀಸ್

    ಇವತ್ತು ಸ್ಯಾಂಡಲ್‍ವುಡ್‍ ನಲ್ಲಿ ಒಂದಲ್ಲ, ಎರಡಲ್ಲ 9 ಸಿನಿಮಾ ರಿಲೀಸ್

    ಬೆಂಗಳೂರು: ಇಂದು ಚಂದನವನದಲ್ಲಿ ಬರೋಬ್ಬರಿ 9 ಚಲನಚಿತ್ರಗಳು ಬಿಡುಗಡೆಯಾಗಲಿವೆ. ಯಾವ ಸಿನಿಮಾ ನೋಡೋದು ಅನ್ನೋ ಚಿಂತೆ ಪ್ರೇಕ್ಷಕರಲ್ಲಿ ಶುರುವಾಗಿದೆ.

    `ಕೆಂಪಿರ್ವೆ’, `ಕಾವೇರಿ ತೀರದ ಚಂದ್ರು’, `ನನ್ ಮಗಳೇ ಹೀರೋಯಿನ್’ `ಉಪೇಂದ್ರ ಮತ್ತೆ ಬಾ’, `ಮಹಾನುಭಾವರು’, `ಪಾನಿಪುರಿ’, `ಆಕಾಶ ಚಂದ್ರು ಸೂರ್ಯ ಭೂಮಿ’, `9 ಹಿಲ್ಟನ್ ಹೌಸ್’ ಸಿನಿಮಾಗಳು ಇಂದು ತೆರೆ ಕಾಣುತ್ತಿವೆ. ಇವುಗಳ ಜೊತೆ ಡಾ.ರಾಜ್ ಅವರ ‘ದಾರಿ ತಪ್ಪದ ಮಗ’ ಚಿತ್ರ ರೀ ರಿಲೀಸ್ ಆಗುತ್ತಿದೆ.

    `ಉಪೇಂದ್ರ ಮತ್ತೆ ಬಾ’, `ಮಹಾನುಭಾವರು’, `ಪಾನಿಪುರಿ’, ಈ ಮೂರು ಸಿನಿಮಾಗಳು ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿರುವ ಸಿನಿಮಾಗಳು. `ಮುಕುಂದ ಮುರಾರಿ’ ಸಿನಿಮಾದ ನಂತರ ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕಾರಣದಲ್ಲಿ ಮುಳುಗೋಗಿದ್ದರು. ಸಿನಿಮಾಗಳಿಗಿಂತ ಹೊಸ ಪಕ್ಷ ವಿಚಾರದಲ್ಲಿಯೇ ಸುದ್ದಿಯಾಗಿದ್ದರು. ಆದರೆ ಮತ್ತೆ ತಮ್ಮ ಡಿಫರೆಂಟ್ ಸಿನಿಮಾದ ಮೂಲಕ ಸದ್ದು ಮಾಡಲು ಬರುತ್ತಿದ್ದಾರೆ. ಉಪೇಂದ್ರ ಮತ್ತೆ ಬಾ ಇಂತಿ ನಿನ್ನ ಪ್ರೇಮ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ.

    ಎಚ್2ಓ ಚಿತ್ರವನ್ನ ನಿರ್ದೇಶಿಸಿ ಮಾಯವಾಗಿದ್ದ ಅರುಣ್ ಲೋಕ್‍ನಾಥ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಶೃತಿ ಹರಿಹರನ್ ಉಪ್ಪಿ ಜೊತೆಗೆ ಡ್ಯುಯೆಟ್ ಹಾಡಿದ್ದಾರೆ. ಉಪೇಂದ್ರ ಸಿನಿಮಾದ ಬಳಿಕ ನಟಿ ಪ್ರೇಮ ಮತ್ತೆ ಉಪ್ಪಿ ಜೊತೆ ಬಣ್ಣ ಹಚ್ಚಿದ್ದಾರೆ. ಹೀಗಾಗಿ ಸಿನಿಮಾ ಸಾಕಷ್ಟು ಹವಾ ಸೃಷ್ಟಿಸಿದೆ.

    ಮತ್ತೊಂದು `ಪಾನಿಪುರಿ’ ಸಿನಿಮಾ. ಹೊಸಬರ ತಂಡದಿಂದ ಚಿತ್ರ ಮೂಡಿಬಂದಿದ್ದು, ಥ್ರಿಲ್ಲರ್ ಜೊತೆ ಕಾಮಿಡಿ ಕಥಾಹಂದರವಿದೆ. ಆರು ಜನ ಸ್ನೇಹಿತರು ಟ್ರೆಕ್ಕಿಂಗ್‍ಗೆ ಹೋದಾಗ ಏನೇನು ಆಗುತ್ತದೆ ಅನ್ನೊದೇ ಈ ಚಿತ್ರದ ಅಂತರಾಳವಾಗಿದೆ.

    ಹಾರರ್ ಕಮ್ ಥ್ರಿಲ್ಲರ್ ಸಿನಿಮಾಗಳ ಜೊತೆ ಲವ್ ಕಮ್ ಫ್ಯಾಮಿಲಿ ಎಂಟರ್‍ಟೈನರ್ ಸಿನಿಮಾ `ಮಹಾನುಭಾವರು’ ಕೂಡ ತೆರೆ ಕಾಣುತ್ತಿದೆ. `ಮಹಾನುಭಾವರು’ ಯಾರಪ್ಪ ಅಂದ್ರೆ ಬಾಲಚಂದರ್ ಮತ್ತು ಗೋಕುಲ್ ರಾಜ್. ಇಬ್ಬರೂ ಹೊಸಬರು, ಹೊಸ ಕನಸುಗಳನ್ನು ಕಟ್ಟಿಕೊಂಡು ಗಂಧದಗುಡಿಗೆ ಬಂದಿರುವವರು. ಸಂದೀಪ್ ನಾಗಲೀಕರ್ ಈ ಚಿತ್ರದ ಸೂತ್ರಧಾರರಾಗಿದ್ದಾರೆ.

     

  • ಇಂದು ಸಿಎಂ ಜೊತೆ ವೈದ್ಯರ ಸಭೆ- ಅಂತ್ಯವಾಗುತ್ತಾ ಮುಷ್ಕರ?

    ಇಂದು ಸಿಎಂ ಜೊತೆ ವೈದ್ಯರ ಸಭೆ- ಅಂತ್ಯವಾಗುತ್ತಾ ಮುಷ್ಕರ?

    ಬೆಂಗಳೂರು: ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರ ಜಟಾಪಟಿ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ಸರ್ಕಾರಕ್ಕೆ ವೈದ್ಯರು ತಲೆಬಾಗುತ್ತಾರಾ? ಇಲ್ಲ ಸಂಧಾನಕ್ಕೆ ವೈದ್ಯರು ಸೊಪ್ಪು ಹಾಕ್ತಾರ ಎಂಬುದು ಇಂದು ನಿರ್ಧಾರವಾಗಲಿದೆ.

    ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ಇಂದು ನಡೆಯಲಿದೆ. ಬೆಳಗಾವಿಯ ಕನ್ನಡಸೌಧದಲ್ಲಿ ಇಂದು ಮಧ್ಯಾಹ್ನ ಸುಮಾರು 2 ಗಂಟೆಗೆ ವೈದ್ಯರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ.

    ವಿಧೇಯಕಕ್ಕೆ ಬ್ರೇಕ್ ಹಾಕುವಂತೆ ಪಟ್ಟು ಹಿಡಿದು ಹೋರಾಟಕ್ಕೆ ಧುಮುಕಿರುವ ಖಾಸಗಿ ಆಸ್ಪತ್ರೆ ವೈದ್ಯರೊಂದಿಗೆ ಸಿಎಂ ಸಂಧಾನದ ಮಾತುಕತೆ ನಡೆಸಲಿದ್ದಾರೆ. ಅಷ್ಟೇ ಅಲ್ಲದೇ ಗುರುವಾರ ಸಚಿವರೊಂದಿಗೆ ಚರ್ಚೆ ನಡೆಸಿದ ವಿಷಯವನ್ನು ಸಿದ್ದರಾಮಯ್ಯ ಸಭೆಯಲ್ಲಿ ವೈದ್ಯರ ಮುಂದಿಡಲಿದ್ದಾರೆ.

    ವಿಧೇಯಕ ಮಂಡನೆಗೆ ಸಿದ್ಧವಾಗಿರುವ ಸರ್ಕಾರ ಹಾಗೂ ಪಟ್ಟು ಬಿಡದ ಖಾಸಗಿ ಆಸ್ಪತ್ರೆ ವೈದ್ಯರ ನಡುವಿನ ಜಟಾಪಟಿಗೆ ಕೊನೆಯಾಗುತ್ತಾ? ಸಂಧಾನ ಫಲಪ್ರದವಾಗುತ್ತಾ ಕಾದುನೋಡಬೇಕಿದೆ.

     

  • ಬಿಡುಗಡೆಯಾದ 1 ವರ್ಷದ ನಂತರ ಹೊಸ ದಾಖಲೆ ನಿರ್ಮಿಸಿದ ‘ಕಿರಿಕ್ ಪಾರ್ಟಿ’

    ಬಿಡುಗಡೆಯಾದ 1 ವರ್ಷದ ನಂತರ ಹೊಸ ದಾಖಲೆ ನಿರ್ಮಿಸಿದ ‘ಕಿರಿಕ್ ಪಾರ್ಟಿ’

    ಬೆಂಗಳೂರು: ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ `ಕಿರಿಕ್ ಪಾರ್ಟಿ’ ಸಿನಿಮಾವು ಸೆಂಚುರಿಯನ್ನು ಬಾರಿಸಿದೆ. ಅಷ್ಟರ ಮಟ್ಟಿಗೆ ಪ್ರೇಕ್ಷಕರ ಮನವನ್ನು ಈ ಸಿನಿಮಾವು ಗೆದ್ದಿದೆ. ಈಗ ಇದರಲ್ಲಿನ ಹಾಡು ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದಿದೆ.

    ಕಿರಿಕ್ ಪಾರ್ಟಿಯ `ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ ಅಂದಾನೋ ಅದೃಷ್ಟನೋ ಮುಂದೆ ಕುಂತಿದೆ’…… ಈ ಹಾಡು ಇಂದಿಗೂ ಎಲ್ಲಾರು ಗುನುಗುತ್ತಿರುತ್ತಾರೆ. ಅದರಲ್ಲೂ ಯುವಕರು ತಮ್ಮ ಪ್ರೇಯಸಿ ಬಗ್ಗೆ ಯೋಚನೆ ಮಾಡಿಕೊಂಡು ಈ ಹಾಡನ್ನು ಆಡುತ್ತಿರುತ್ತಾರೆ. ಈ ಹಾಡಿಗೆ ವರ್ಷಗಳು ಕಳೆದರೂ ಇಂದಿಗೂ ಈ ಹಾಡಿನ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಮತ್ತಷ್ಟು ಸುಮಧುರವಾದ ಹಾಡುಗಳು ಬಂದರೂ, ಈ ಹಾಡಿಗೆ ಸರಿಸಾಟಿ ಇಲ್ಲ ಅನ್ನುವ ರೀತಿಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ.

    ಒಂದು ವರ್ಷದಲ್ಲೇ ಸುಮಾರು 4 ಕೋಟಿಗೂ ಅಧಿಕ ಬಾರಿ ಈ ಹಾಡು ವೀಕ್ಷಣೆಯಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ 4 ಕೋಟಿ ವ್ಯೂ ಕಂಡ ಮೊದಲ ಹಾಡು ಎನ್ನುವ ಹೆಗ್ಗಳಿಕಿಗೆ ಪಾತ್ರವಾಗಿದೆ.

    ಈ ಹಾಡಿಗೆ ಧನಂಜಯ ರಂಜನ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನವೆಂಬರ್ 25, 2016 ರಂದು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು.

    ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗಡೆ ಸೇರಿದಂತೆ ಹಲವಾರು ನಟರು ಅಭಿನಯಿಸಿದ್ದರು. ಡಿಸೆಂಬರ್ 30 ರಂದು ಈ ಸಿನಿಮಾ ತೆರೆ ಕಂಡಿತ್ತು.

     

     

     

     

  • ಪರಿಷೆಯಲ್ಲಿ ಕಡ್ಲೆಕಾಯಿ ಭಿಕ್ಷೆ ಬೇಡುತ್ತಿದ್ದ ಪೊಲೀಸ್ ಪೇದೆ ಅಮಾನತು

    ಪರಿಷೆಯಲ್ಲಿ ಕಡ್ಲೆಕಾಯಿ ಭಿಕ್ಷೆ ಬೇಡುತ್ತಿದ್ದ ಪೊಲೀಸ್ ಪೇದೆ ಅಮಾನತು

    ಬೆಂಗಳೂರು: ಬಸವನಗುಡಿಯ ಕಡಲೇಕಾಯಿ ಪರಿಷೆಯಲ್ಲಿ ವ್ಯಾಪಾರಿಗಳಿಂದ ಅಕ್ರಮವಾಗಿ ಕಡ್ಲೆಕಾಯಿಯನ್ನು ಸಂಗ್ರಹಿಸುತ್ತಿದ್ದ ಪೇದೆಯನ್ನು ಅಮಾನತು ಮಾಡಲಾಗಿದೆ.

    ಸಿಎಆರ್ ಪೇದೆ ಎಸ್ ಪಿ ಮಂಡಕ್ಕಿ ಅಮಾನತುಗೊಂಡಿರುವ ಪೇದೆ. ಎಸ್ ಪಿ ಮಂಡಕ್ಕಿ ಅವರನ್ನು ಸಿಎಆರ್ ಡಿಸಿಪಿ ತಿಮ್ಮಣ್ಣನವರ್ ಅಮಾನತು ಮಾಡಿರುವುದಾಗಿ ಆದೇಶ ಹೊರಡಿಸಿದ್ದಾರೆ.

    ಸೋಮವಾರದಿಂದ ಆರಂಭವಾಗಿರುವ ನಗರದ ದೊಡ್ಡ ಜಾತ್ರೆ ಬಸವನಗುಡಿಯ ಕಡ್ಲೆಕಾಯಿ ಪರಿಷೆ ವೇಳೆ ಪೊಲೀಸ್ ಪೇದೆ ಸಣ್ಣದಾದ ಚೀಲವೊಂದನ್ನು ಹಿಡಿದುಕೊಂಡು ಕಡ್ಲೆಕಾಯಿ ಬೇಡುತ್ತಿರುವುದನ್ನು ನೆರೆದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಪೇದೆಯ ವಿರುದ್ಧ ಕಿಡಿ ಕಾರಿ ಕ್ರಮಕ್ಕೆ ಆಗ್ರಹಿಸಿದ್ದರು.

    https://youtu.be/BDrCNJk5Fho

  • ಕಾಲಿಗೆ ಪೆಟ್ಟು ಮಾಡಿಕೊಂಡ ಕ್ರೇಜಿ ಕ್ವೀನ್

    ಕಾಲಿಗೆ ಪೆಟ್ಟು ಮಾಡಿಕೊಂಡ ಕ್ರೇಜಿ ಕ್ವೀನ್

    ಬೆಂಗಳೂರು: ನಟಿ ರಕ್ಷಿತಾ ಪ್ರೇಮ್ ಅವರು ತಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.

    ರಕ್ಷಿತಾ ಕಾಲಿಗೆ ಪೆಟ್ಟು ಮಾಡಿಕೊಂಡು ಮಲಗಿರುವ ಫೋಟೋವನ್ನು ‘ರಕ್ಷಿತಾ ಫ್ಯಾನ್ಸ್ ಕ್ಲಬ್’ ಟ್ವಿಟ್ಟರ್ ಖಾತೆಯಲ್ಲಿ ಹಾಕಲಾಗಿದೆ. ನಂತರ ಈ ವಿಷಯದ ಬಗ್ಗೆ ಸ್ವತಃ ರಕ್ಷಿತಾ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ನೀವೆಲ್ಲರೂ ನೋಡಬಹುದು ನನ್ನ ಕಾಲು ಗಾಯವಾಗಿದೆ. ಆದರೂ ನಾನು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದ ಸೆಮಿಫೈನಲ್ ಶೂಟಿಂಗ್ ಗೆ ಹೋಗುತ್ತಿದ್ದೇನೆ. ನಮ್ಮ ತಂಡಕ್ಕೆ ನಿಮ್ಮ ಬೆಂಬಲ ಬೇಕು ಎಂದು ವಿಡಿಯೋ ಮೂಲಕ ಹೇಳಿದ್ದಾರೆ.

    ತಮ್ಮ ಕಾಲಿಗೆ ಪೆಟ್ಟಾಗಲು ಕಾರಣ ಏನು ಎಂಬುದನ್ನು ರಕ್ಷಿತಾ ವಿಡಿಯೋದಲ್ಲಿ ತಿಳಿಸಿಲ್ಲ. ಕಾಲಿಗೆ ಚಿಕಿತ್ಸೆ ಪಡೆದಿರುವ ಅವರು ಸದ್ಯಕ್ಕೆ ನಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾಲು ಸಹಜ ಸ್ಥಿತಿಗೆ ಬರಲು ಕೆಲ ದಿನಗಳ ಕಾಲ ವಿಶ್ರಾಂತಿ ಬೇಕಾಗಿದೆ ಎಂದು ಹೇಳಲಾಗಿದೆ.

    https://www.instagram.com/p/BbeUKjxALKo/?taken-by=rakshithaprem

     

  • ಪಿಯು ವಿದ್ಯಾರ್ಥಿನಿಯನ್ನು ಅಪಹರಿಸಿ ಲಾಡ್ಜ್ ಗೆ ಕರೆದೊಯ್ದು 4 ಜನರಿಂದ 10 ದಿನಗಳ ಕಾಲ ನಿರಂತರ ಅತ್ಯಾಚಾರ

    ಪಿಯು ವಿದ್ಯಾರ್ಥಿನಿಯನ್ನು ಅಪಹರಿಸಿ ಲಾಡ್ಜ್ ಗೆ ಕರೆದೊಯ್ದು 4 ಜನರಿಂದ 10 ದಿನಗಳ ಕಾಲ ನಿರಂತರ ಅತ್ಯಾಚಾರ

    ಬೆಂಗಳೂರು: ಸ್ನೇಹಿತೆ ಆಹ್ವಾನಿಸಿದ ಪಾರ್ಟಿಗೆಂದು ಹೋದ 17 ವರ್ಷದ ವಿದ್ಯಾರ್ಥಿನಿಯ ಮೇಲೆ ಸತತ 10 ದಿನಗಳ ಕಾಲ ನಾಲ್ವರು ಗ್ಯಾಂಗ್ ರೇಪ್ ಮಾಡಿರುವ ಪೈಚಾಚಿಕ ಕೃತ್ಯ ನಗರದ ವೈಟ್ ಫೀಲ್ಡ್ ಸಮೀಪದ ಕ್ಲಾಸಿಕಲ್ ಇನ್ ಲಾಡ್ಜ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಅಕ್ಟೋಬರ್ 26 ರಿಂದ ಕಾಣೆಯಾಗಿದ್ದಳು. ಮಗಳು ಕಾಣೆಯಾದ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಅತ್ತ ಕ್ಲಾಸಿಕಲ್ ಇನ್ ಲಾಡ್ಜ್‍ನಲ್ಲಿ ಯುವತಿಯೊಬ್ಬಳು ಸಂಕಷ್ಟದಲ್ಲಿರುವ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಲಾಡ್ಜ್ ನಿಂದ ವಿದ್ಯಾರ್ಥಿನಿಯನ್ನು ನವೆಂಬರ್ 04 ರಂದು ರಕ್ಷಣೆ ಮಾಡಿದ್ದಾರೆ.

    ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ನಾಲ್ವರು ಆರೋಪಿಗಳಾದ ಉಡುಪಿ ಮೂಲದ ರಾಘವೇಂದ್ರ (27), ಪಶ್ಚಿಮ ಬಂಗಾಳ ಮೂಲದ ಮನೋರಂಜನ್ ಪಂಡಿತ್(52), ದಾವಣಗೆರೆ ಮೂಲದ ಸಾಗರ್ (22) ಹಾಗೂ ಮೈಸೂರು ಮೂಲದ ಮಂಜು ರಾಜ್ (32) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಲಾಡ್ಜ್ ನ ಸಮೀಪದಲ್ಲೇ ವಾಸಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಪಂಡಿತ್ ಲಾಡ್ಜ್ ನ ಮಾಲೀಕ ಎಂದು ವರದಿಯಾಗಿದೆ.

    ನಡೆದಿದ್ದೇನು?: ಸಂತ್ರಸ್ತೆಯನ್ನು ಆಕೆಯ ಸ್ನೇಹಿತೆ ಅಕ್ಟೋಬರ್ 26 ರಂದು ಪಾರ್ಟಿಗೆ ಆಹ್ವಾನಿಸಿ ವೈಟ್‍ಫೀಲ್ಡ್ ರೈಲ್ವೇ ನಿಲ್ದಾಣದ ಬಳಿ ಬರಲು ತಿಳಿಸಿದ್ದಳು. ಅಂದು ಸಂಜೆ 5 ಗಂಟೆಗೆ ಕರೆ ಮಾಡಿದ ಸ್ನೇಹಿತೆ ಪಾರ್ಟಿಗೆ ಬರುತ್ತಿರೋದನ್ನ ಖಚಿತಪಡಿಸಿಕೊಂಡಿದ್ದಳು. ಆದ್ರೆ ರಾತ್ರಿ 8 ಗಂಟೆಗೆ ಸ್ಥಳಕ್ಕೆ ತೆರಳಿದ್ದ ವಿದ್ಯಾರ್ಥಿನಿಗೆ ತನ್ನ ಗೆಳತಿಯ ಸ್ನೇಹಿತರು ಎಂದು ರಾಘವೇಂದ್ರ ಹಾಗೂ ಸಾಗರ್ ಎಂಬ ಇಬ್ಬರು ಪರಿಚಯಿಸಿಕೊಂಡು ಪಾರ್ಟಿ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದರು. ನಂತರ ವಿದ್ಯಾರ್ಥಿಯನ್ನು ಲಾಡ್ಜ್ ಗೆ ಕರೆದುಕೊಂಡು ಹೋಗಿ ರೂಮ್ ನಂ 6 ರಲ್ಲಿ ಇರಲು ತಿಳಿಸಿ ಆಕೆಯ ಗೆಳತಿ ಅಲ್ಲಿಗೆ ಬರುವುದಾಗಿ ಹೇಳಿದ್ದರು. ಆದ್ರೆ ಗೆಳತಿ ಮಾತ್ರ ಅಲ್ಲಿಗೆ ಬರಲಿಲ್ಲ. ಬದಲಿಗೆ ವಿದ್ಯಾರ್ಥಿನಿ ಕೊಠಡಿಗೆ ತೆರಳಿದ ಸ್ವಲ್ಪ ಸಮಯದ ನಂತರ ಆರೋಪಿ ರಾಘವೇಂದ್ರ ಹಾಗೂ ರಾಜ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.


    ಲಾಡ್ಜ್ ಮಾಲೀಕನಿಂದಲೂ ರೇಪ್: ಆರೋಪಿಗಳ ಚಲನವಲನ ಗಮನಿಸಿ ಅನುಮಾನಗೊಂಡು ಯುವತಿಯ ಬಗ್ಗೆ ಲಾಡ್ಜ್ ಮಾಲೀಕ ಪಂಡಿತ್ ವಿಚಾರಣೆ ನಡೆಸಿದ್ದ. ಆದ್ರೆ ಆರೋಪಿಗಳು ವಿಷಯವನ್ನು ಪೊಲೀಸರಿಗೆ ತಿಳಿಸದಂತೆ ಕೋರಿದ್ದು, ಇದಕ್ಕೆ ಪ್ರತಿಯಾಗಿ ಆಕೆಯ ಮೇಲೆ ರೇಪ್ ಮಾಡಲು ಪಂಡಿತ್‍ಗೂ ಅವಕಾಶ ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಸ್ನೇಹಿತೆಯೂ ಭಾಗಿಯಾಗಿರಬಹುದು ಎಂದು ಶಂಕಿಸಿದ್ದಾರೆ.

    ಲಾಡ್ಜ್‍ನಲ್ಲಿ ಯುವತಿಯೊಬ್ಬಳು ಇರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಕಾರ್ಯಾಚರಣೆ ನಡೆಸಿ ನವೆಂಬರ್ 4ರಂದು ಯುವತಿಯನ್ನ ರಕ್ಷಣೆ ಮಾಡಿದ್ದಾರೆ. ನಂತರ ಯುವತಿ ನಡೆದದ್ದೆಲ್ಲವನ್ನೂ ವಿವರಿಸಿ ಹೇಳಿಕೆ ನೀಡಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾಳೆ. ನವೆಂಬರ್ 6ರ ನಂತರ ಪೊಲೀಸರು ಆರೋಪಿಗಳನ್ನ ಬಂಧಿಸಲು ಶುರು ಮಾಡಿದ್ದರು. ನಂತರ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

    ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 376ಡಿ(ಗ್ಯಾಂಗ್‍ರೇಪ್) 368, 363, 343, 504, 506 ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 4 ಮತ್ತು 6ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಡಿಸಿಪಿ (ವೈಟ್ ಫೀಲ್ಡ್ ವಿಭಾಗ) ಅಬ್ದುಲ್ ಹೇಳಿದ್ದಾರೆ.

  • ಜಾತಿಗಣತಿ, ಸದಾಶಿವ ವರದಿ ಜಾರಿಯಾಗುತ್ತಾ? – ಸಿಎಂ ನೇತೃತ್ವದಲ್ಲಿಂದು ಶಾಸಕಾಂಗ ಸಭೆ

    ಜಾತಿಗಣತಿ, ಸದಾಶಿವ ವರದಿ ಜಾರಿಯಾಗುತ್ತಾ? – ಸಿಎಂ ನೇತೃತ್ವದಲ್ಲಿಂದು ಶಾಸಕಾಂಗ ಸಭೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ ಸುವರ್ಣ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

    ದಲಿತ ಎಡಗೈ ಸಮುದಾಯಕ್ಕೆ ಹೆಚ್ಚುವರಿ ಮೀಸಲಾತಿ ಕಲ್ಪಿಸುವಂತೆ ಶಿಫಾರಸ್ಸು ಮಾಡಲಾಗಿರುವ ಸದಾಶಿವ ಅವರ ವರದಿ ಜಾರಿ ವಿಚಾರ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್ ನ ಎಡಗೈ ಸಮುದಾಯದ ಶಾಸಕರು ಸದಾಶಿವ ಆಯೋಗದ ವರದಿ ಜಾರಿಯಾದರೆ ರಾಜಕೀಯವಾಗಿ ಲಾಭವಾಗುತ್ತೆ ಅನ್ನೋ ಒತ್ತಡ ತರುತ್ತಿದ್ದರು. ಆದ್ದರಿಂದ ಇಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ.

    ಸಾಮಾಜಿಕ ಆರ್ಥಿಕ ಗಣತಿ ಮತ್ತು ಜಾತಿ ಜನಗಣತಿ ವರದಿ ಬಿಡುಗಡೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಇದರ ಲಾಭ ನಷ್ಟಗಳ ಬಗ್ಗೆಯೂ ಗಂಭೀರ ಚರ್ಚೆ ನಡೆಯಲಿದೆ. ಚುನಾವಣಾ ಸಂದರ್ಭದಲ್ಲಿ ಬಿಡುಗಡೆ ಆಗುವುದರಿಂದ ಆಗುವ ಲಾಭ-ನಷ್ಟದ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ. ಎರಡು ವಿಚಾರದಲ್ಲಿ ಶಾಸಕರು ವ್ಯಕ್ತಪಡಿಸುವ ಅಭಿಪ್ರಾಯದ ಬಳಿಕ ಮುಂದಿನ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಕೈಗೊಳ್ಳಲಿದ್ದಾರೆ. ಎರಡು ವರದಿಗಳ ಜಾರಿ ಹಿಂದೆ ದಲಿತ ಪಾಲಿಟಿಕ್ಸ್ ನ ಲಾಭ ನಷ್ಟದ ಲೆಕ್ಜಾಚಾರವಿದೆ ಎನ್ನುವುದು ಸ್ಪಷ್ಟವಾಗಿದೆ.

    ಇನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ವಿಚಾರದಲ್ಲಿ ರಮೇಶ್ ಕುಮಾರ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಏನು ಉತ್ತರ ಕೊಡಲಿದ್ದಾರೆ ಎಂಬ ಕುತೂಹಲ ಸಹಜವಾಗಿದೆ. ಈ ತಿದ್ದುಪಡಿ ಕಾಯ್ದೆ ಜಾರಿ ಆಗದಿದ್ದರೆ ತಾವು ರಾಜೀನಾಮೆಗೂ ಸಿದ್ಧ ಎಂದು ರಮೇಶ್ ಕುಮಾರ್ ಈಗಾಗಲೇ ಸಿಎಂಗೆ ತಿಳಿಸಿದ್ದಾರೆ.

    ಮೌಢ್ಯ ಪ್ರತಿಬಂಧಕ ಕಾಯ್ದೆ ಬಗ್ಗೆಯೂ ಚರ್ಚೆ ನಡೆಯಲಿದೆ. ಸದನದಲ್ಲಿ ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರದ ಬಗ್ಗೆಯೂ ಚರ್ಚೆ ನಡೆಯಲಿದ್ದು, ಚುನಾವಣೆ ಸಮೀಪ ಬರುತ್ತಿದ್ದಂತೆ ಕ್ಷೇತ್ರದಲ್ಲಿ ಸಕ್ರಿಯವಾಗಿರುವಂತೆ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡುವ ಸಾಧ್ಯತೆ ಇದೆ.

  • ಜನತೆಗೆ ಸಾವಿನ ಭಾಗ್ಯ – ವೈದ್ಯರ ಪ್ರತಿಭಟನೆಗೆ ಮೂವರು ಮಕ್ಕಳು ಸೇರಿ 7 ಬಲಿ

    ಜನತೆಗೆ ಸಾವಿನ ಭಾಗ್ಯ – ವೈದ್ಯರ ಪ್ರತಿಭಟನೆಗೆ ಮೂವರು ಮಕ್ಕಳು ಸೇರಿ 7 ಬಲಿ

    ಬೆಂಗಳೂರು: ಮಂಗಳವಾರ ಮಕ್ಕಳ ದಿನಾಚರಣೆ ಒಂದು ಕಡೆಯಾದರೆ ಮತ್ತೊಂದು ಕಡೆ, ವೈದ್ಯರು ಮತ್ತು ಸರ್ಕಾರ ನಡುವಿನ ಹೋರಾಟ ಮಕ್ಕಳ ಜೀವವನ್ನೇ ಪರೋಕ್ಷವಾಗಿ ಬಲಿ ಪಡೆದಿದೆ.

    ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ ವಿಚಾರದಲ್ಲಿ ಸರ್ಕಾರ ಹಾಗೂ ವೈದ್ಯರ ಜಟಾಪಟಿಯಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಮೂವರು ಮಕ್ಕಳು ಎನ್ನುವುದು ದುರದೃಷ್ಟಕರ ಸಂಗತಿ. ಮಸೂದೆ ಮಂಡಿಸಿಯೇ ಸಿದ್ಧ ಎಂದು ಸರ್ಕಾರ ಬಿಗಿಪಟ್ಟು ಹಿಡಿದಿದ್ದರೆ, ಮಸೂದೆ ವಿರೋಧಿಸಿ ವೈದ್ಯರು ಬೀದಿಗೆ ಇಳಿದ ಪರಿಣಾಮ ಅಮಾಯಕರು ಪರಿತಪಿಸುವಂತಾಗಿದೆ.

    ರಾಜ್ಯದ ವಿವಿಧೆಡೆ ವೈದ್ಯರು ಲಭ್ಯವಿಲ್ಲದಿರುವುದರಿಂದ, ಸೂಕ್ತ ಸೌಲಭ್ಯಗಳಿಲ್ಲದೇ ಜನಸಾಮಾನ್ಯರು ಜೀವ ತೆತ್ತಿದ್ದಾರೆ. ವಿಧೇಯಕ ವಿಚಾರದಲ್ಲಿ ವೈದ್ಯರೊಂದಿಗೆ ಜಿದ್ದಿಗೆ ಬಿದ್ದಿರುವ ಸರ್ಕಾರ, ರಾಜ್ಯದ ಜನತೆಗೆ ಸಾವಿನ ಭಾಗ್ಯ ಕರುಣಿಸಿದೆ.

    ಎಲ್ಲಿ ಯಾರು ಮೃತಪಟ್ಟಿದ್ದಾರೆ?
    ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 3 ತಿಂಗಳ ಇಬ್ರಾಹಿಂ ಹಾಸನದಲ್ಲಿ ಸಾವನ್ನಪ್ಪಿದ್ದರೆ, ಧಾರವಾಡದಲ್ಲಿ ಡೆಂಗ್ಯೂ ಜ್ವರಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ 12 ವರ್ಷದ ವೈಷ್ಣವಿ ಮೃತಪಟ್ಟಿದ್ದಾಳೆ.

    ಬೆಳಗಾವಿಯ ಅಥಣಿಯಲ್ಲಿ 12 ವರ್ಷದ ಕಲ್ಲವ್ವಾ ಅಂಬಿ ಮೃತಪಟ್ಟರೆ, ತುಮಕೂರಿನಲ್ಲಿ 26 ವರ್ಷದ ಜ್ಯೋತಿ ಹೃದಯಾಘಾತಗೊಂಡು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ 25 ವರ್ಷದ ಮಹೇಶ್ ವಾಘ್ಮೋರ್ ಸಾವನ್ನಪ್ಪಿದ್ದರೆ, ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ 52 ವರ್ಷದ ಶೇಖಪ್ಪ ಎಂಬುವರು ಹೃದಯಾಘಾತದಿಂದ ಚಿಕಿತ್ಸೆ ಸಿಗದೆ ಮೃತ ಪಟ್ಟಿದ್ದಾರೆ. ಕೊಪ್ಪಳದಲ್ಲಿ ಹೃದಯಾಘಾತದಿಂದ ಚಿಕಿತ್ಸೆ ಸಿಗದೆ 55 ವರ್ಷದ ಗ್ಯಾನಪ್ಪ ಸಾವನ್ನಪ್ಪಿದ್ದಾರೆ.

    ಇದನ್ನೂ ಓದಿ: ಪರಿಷತ್‍ನಲ್ಲಿ ಕಣ್ಣೀರಿಟ್ಟ ರಮೇಶ್ ಕುಮಾರ್: ಪರಿಶೀಲನಾ ಸಮಿತಿಯ ವರದಿಯಲ್ಲಿ ಏನಿದೆ?

  • ಸದನಕ್ಕೆ ಚಕ್ಕರ್, ಉಪ್ಪು ಹುಳಿ ಖಾರಕ್ಕೆ ಅಂಬರೀಶ್ ಹಾಜರ್

    ಸದನಕ್ಕೆ ಚಕ್ಕರ್, ಉಪ್ಪು ಹುಳಿ ಖಾರಕ್ಕೆ ಅಂಬರೀಶ್ ಹಾಜರ್

    ಬೆಂಗಳೂರು: ಬೆಳಗಾವಿಯಲ್ಲಿ ಆಯೋಜನೆಗೊಂಡಿರುವ ವಿಶೇಷ ಅಧಿವೇಶನಕ್ಕೆ ಚಕ್ಕರ್ ಹಾಕಿ ಉಪ್ಪು ಹುಳಿ ಖಾರ ಸಿನಿಮಾದ ಕಾರ್ಯಕ್ರಮಕ್ಕೆ ಮಾಜಿ ವಸತಿ ಸಚಿವ ಅಂಬರೀಶ್ ಹಾಜರಾಗಿದ್ದು ಟೀಕೆಗೆ ಗುರಿಯಾಗಿದೆ.

    ಸೋಮವಾರದಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಆದರೆ ನಟ ಅಂಬರೀಶ್ `ಉಪ್ಪು ಹುಳಿ ಖಾರ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.

    ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ `ಉಪ್ಪು ಹುಳಿ ಖಾರ’ ಚಿತ್ರದ ಟೀಸರ್ ಲಾಂಚ್ ಮಾಡಲು ಅಂಬರೀಶ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ  ಟೀಸರ್ ಲಾಂಚ್ ಮಾಡಿದ ಅಂಬರೀಶ್ ಉಪ್ಪು ಹುಳಿ ಖಾರ ಚಿತ್ರದ ರೋಮಿಯೋ ಹಾಡಿಗೆ ಸ್ಜೇಜ್ ಮೇಲೆ ಸ್ಟೆಪ್ ಹಾಕಿದರು. ಮಾಲಾಶ್ರೀ ಅಂಬರೀಶ್‍ಗೆ ಲವ್ ಯು ಅಂದ್ರು ಅದಕ್ಕೆ ಅಂಬರೀಶ್ ಮೀಟು ಲವ್ ಎಂದು ಹೇಳಿ ಸ್ಜೇಜ್ ಮೇಲೆ ಮನೋರಂಜನೆ ನೀಡಿದರು.

    ವಿಧಾನಸಭಾ ಸಚಿವಾಲಯದಿಂದ ಸಿಕ್ಕಿದ ಮಾಹಿತಿ ಪ್ರಕಾರ ಸಚಿವ ಸ್ಥಾನ ಕಳೆದುಕೊಂಡ ಮೇಲೆ ಕೇವಲ ನಾಲ್ಕು ದಿನ ಮಾತ್ರ ಕಲಾಪಕ್ಕೆ ಅಂಬರೀಶ್ ಹಾಜರಾಗಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅಂಬರೀಶ್ ಮೇ 2013ರಿಂದ 2016ರ ಜೂನ್ ವರೆಗೆ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿ ಬಳಿಕ ರಾಜೀನಾಮೆ ನೀಡಿದ್ದರು.

    ಉತ್ತರ ಕರ್ನಾಟಕದ ಸಮಸ್ಯೆ ಪರಿಹಾರಕ್ಕಾಗಿ ಬೆಳಗಾವಿಯಲ್ಲಿ ಅಧಿವೇಶನ ಕರೆಯಲಾಗಿದೆ. ಒಟ್ಟು 225 ಶಾಸಕರ ಪೈಕಿ ಮೊದಲ ದಿನ ಬೆಳಗ್ಗೆ 11 ಗಂಟೆಗೆ ಹಾಜರಾಗಿದ್ದು ಕೇವಲ 20 ಮಂದಿ ಮಾತ್ರ.

    ಕೊನೇ ಪಕ್ಷದ ಇದು ವರ್ಷದ ಕೊನೇ ಅಧಿವೇಶನ. ಚುನಾವಣೆ ಹತ್ತಿರ ಇದೆ. ಜನ ನಮ್ಮ ನೋಡುತ್ತಿರುತ್ತಾರೆ. ಈ ಬಾರಿಯಾದ್ರೂ ನಾವು ಸದನದಲ್ಲಿ ಕಾಣಿಸಿಕೊಳ್ಳೋಣ ಎನ್ನುವ ಭಯವೂ ಶಾಸಕರಿಗೆ ಇಲ್ಲ. ಜವಾಬ್ದಾರಿ ಮೊದಲೇ ಇಲ್ಲದಂತೆ ವರ್ತಿಸಿದ್ದಾರೆ. ಶಾಸಕರ ಹಾಜರಾತಿ ಕಡಿಮೆ ಇದ್ದ ಕಾರಣ ಒಂದೇ ನಿಮಿಷಕ್ಕೆ ಸ್ಪೀಕರ್ ಕೋಳಿವಾಡ ಕಲಾಪವನ್ನು ಮುಂದೂಡಿದ್ದರು.

    10 ದಿನಗಳ ಅಧಿವೇಶನಕ್ಕೆ ಬರೋಬ್ಬರಿ 28 ರಿಂದ 30 ಕೋಟಿ ರೂ. ಖರ್ಚು ಆದರೆ ದಿನಕ್ಕೆ ಎರಡೂವರೆಯಿಂದ ಮೂರು ಕೋಟಿ ರೂ. ವೆಚ್ಚವಾಗುತ್ತದೆ. ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿರುವ ಶಾಸಕರಿಗೆ 2,500 ರೂ. ಸಾರಿಗೆ ಭತ್ಯೆ ನೀಡಿದರೆ, ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿರುವ ಶಾಸಕರಿಗೆ 5 ಸಾವಿರ ರೂ.ಸಾರಿಗೆ ಭತ್ಯೆ ನೀಡಲಾಗುತ್ತದೆ.

  • ಬೆಂಗ್ಳೂರಿನಲ್ಲಿ ಕನ್ನಡದ ಹೆಸರಲ್ಲಿ ಹೆಚ್ಚುತ್ತಿದೆ ದಾಂಧಲೆ!

    ಬೆಂಗ್ಳೂರಿನಲ್ಲಿ ಕನ್ನಡದ ಹೆಸರಲ್ಲಿ ಹೆಚ್ಚುತ್ತಿದೆ ದಾಂಧಲೆ!

    ಬೆಂಗಳೂರು: ನಗರದಲ್ಲಿ ಕನ್ನಡ ಪರ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡು ಜನ ಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ತಾಜಾ ಉದಾಹರಣೆ ಎಂಬಂತೆ ನಗರದ ಹುಳಿಮಾವಿನ ಪ್ರದೇಶದಲ್ಲಿ ಇಂತಹದ್ದೇ ಘಟನೆ ನಡೆದಿದೆ.

    ಅಂಗಡಿಯ ಮುಂದೇ ಕನ್ನಡದಲ್ಲೇ ಬೋರ್ಡ್ ಹಾಕಬೇಕೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ಹುಳಿಮಾವಿನ ಬಳಿ ಇರುವ ಜೆಸ್ ಎಂಬ ಬೇಕರಿಯಲ್ಲಿ ಕನ್ನಡ ಬೋರ್ಡ್ ಇರದ ಹಿನ್ನೆಲೆ ಕ್ಯಾತೆ ತೆಗೆದ ಕಾರ್ಯಕರ್ತರು ತಕ್ಷಣವೇ ಕನ್ನಡ ಬೋರ್ಡ್ ಹಾಕಬೇಕೆಂದು ಆಗ್ರಹಿಸಿದ್ದಾರೆ.

    ಅಲ್ಲದೇ ಸಂಘಟನೆಯ ಕಾರ್ಯಕರ್ತರು ನೇರವಾಗಿ ಬೇಕರಿಗೆ ನುಗ್ಗಿ ಅಂಗಡಿ ಮಾಲಕಿಯ ಜೊತೆ ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ಕುಪಿತಗೊಂಡ ಮಾಲಕಿ  ಕಾರ್ಯಕರ್ತನ ಮೊಬೈಲ್ ಪುಡಿ ಪುಡಿ ಮಾಡಿದ್ದಾರೆ.

    ಘಟನೆಯ ನಂತರ ಪೊಲೀಸ್ ಠಾಣೆಗೆ ತೆರಳಿರುವ ಸಂಘಟನೆಯ ಕಾರ್ಯಕರ್ತರು ನಮ್ಮ ಮೇಲೆ ಹಲ್ಲೆಯಾಗಿದೆ ಎಂದು ದೂರು ನೀಡಿದ್ದಾರೆ. ಪ್ರಸ್ತುತ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಮಾಲೀಕರ ವಿರುದ್ಧ ದೂರು ದಾಖಲಾಗಿದೆ.