Tag: Bangalore

  • ನಾನು ಹೇಳಿಕೆ ನೀಡಲ್ಲ, ಹೋರಾಡೋ ವ್ಯಕ್ತಿ: ಪ್ರತಾಪ್ ಸಿಂಹ ವಿರುದ್ಧ ರೈ ಕಿಡಿ

    ನಾನು ಹೇಳಿಕೆ ನೀಡಲ್ಲ, ಹೋರಾಡೋ ವ್ಯಕ್ತಿ: ಪ್ರತಾಪ್ ಸಿಂಹ ವಿರುದ್ಧ ರೈ ಕಿಡಿ

    ಬೆಂಗಳೂರು: ಟ್ವಿಟ್ಟರ್‍ನಲ್ಲಿ ನನ್ನ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.

    ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇವತ್ತು ನಾನು ಈ ಪ್ರತಿಭಟನೆಯ ಅಂಗವಾಗಿ ಒಬ್ಬ ಪ್ರಜೆಯಾಗಿ ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರಿಗೆ ನಾನು ಒಂದು ಕಾನೂನಿನ ನೋಟಿಸ್ ಕಳುಹಿಸಿದ್ದೇನೆ. ಅವರಿಗೆ ನೀಡಿರುವ ನಿಗದಿತ ಸಮಯದಲ್ಲಿ ಉತ್ತರ ನೀಡದೇ ಇದ್ದರೆ ಅವರ ವಿರುದ್ಧ ಕ್ರಿಮಿನಲ್ ಕ್ರಮವನ್ನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

    ಮೋದಿ ಬಿಜೆಪಿ ನಾಯಕ ಅಂತ ಪ್ರಶ್ನೆ ಮಾಡಿಲ್ಲ. ಅವರು ನಮ್ಮ ದೇಶದ ಪ್ರಧಾನಿ ಅಂತ ಪ್ರಶ್ನೆ ಮಾಡಿದ್ದೇನೆ. ನಿಮ್ಮ ಕ್ಷೇತ್ರದ ಜನರಿಗೆ ಪ್ರಶ್ನೆ ಮಾಡಲು ಇಚ್ಚಿಸುತ್ತೇನೆ ನೀವು ಎಂಥ ವ್ಯಕ್ತಿಯನ್ನ ಆಯ್ಕೆ ಮಾಡಿದ್ದೀರಿ. ನಾನು ಕೇವಲ ಹೇಳಿಕೆ ಕೊಡುವುದಿಲ್ಲ. ನಾನು ಹೋರಾಟ ಮಾಡುತ್ತೇನೆ. ನಾನು ಬಿಜೆಪಿ ಪಾರ್ಟಿ ವಿರುದ್ಧ ಹೋರಾಟ ಮಾಡುತ್ತಿಲ್ಲ. ನಾನು ಪ್ರತಾಪ್ ಸಿಂಹ ವಿರುದ್ಧ ಹೋರಾಟ ಮಾಡುತ್ತೇನೆ. ನಿಮ್ಮ ಬಳಿ ಪವರ್ ಇರಬಹುದು ಆದ್ರೆ ಕಾಮನ್ ಮ್ಯಾನ್ ಆದ ನಾನು ಪ್ರಶ್ನೆ ಕೇಳುವ ಹಕ್ಕಿದೆ ಎಂದು ಹೇಳಿದರು.

    ಈ ದೇಶದ ಪ್ರಜೆಯಾಗಿ ನಾನು ಒಂದು ಪ್ರಶ್ನೆಯನ್ನು ಕೇಳುತ್ತಿದ್ದೇನೆ. ನಮ್ಮ ದೇಶದಲ್ಲಿ ಟ್ರೋಲ್ ಎನ್ನುವುದು ಗುಂಡಾಗಿರಿಯಾಗಿದೆ. ಇದರಿಂದ ಯಾವ ವ್ಯಕ್ತಿಯು ತನ್ನ ಅಭಿವ್ಯಕ್ತಿ ಸ್ವಾತಂತ್ರದಲ್ಲಿ ಮಾತನಾಡಿದರೂ ಅದಕ್ಕೆ ಹಲವು ಅರ್ಥವನ್ನು ಕೊಡುತ್ತಾ, ಬಿಂಬಿಸುತ್ತಾ ಇಲ್ಲ ಅವರನ್ನೇ ಗುರಿಯಾಗಿಸಿಕೊಂಡು ಇನ್ನೊಮ್ಮೆ ಪ್ರಶ್ನೆಯನ್ನು ಕೇಳದ ರೀತಿಯಲ್ಲಿ ಮಾಡುತ್ತಿದೆ. ಇದು ಎಲ್ಲಾ ಕ್ಷೇತ್ರದಲ್ಲೂ ನಡೆಯುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ನಮ್ಮ ದೇಶದಲ್ಲಿ ಪ್ರತಿಯೊಬ್ಬರು ಅವರ ಆತಂಕ, ಅನಿಸಿಕೆ, ಕೋಪ ಮತ್ತು ನೋವನ್ನು ವ್ಯಕ್ತಪಡಿಸುವ ಹಕ್ಕಿಲ್ಲ. ಇಂದು ರಾಜಕೀಯದಲ್ಲಿ ನೋಡಿದಾಗ ನಾನು ಏನು ಕೇಳಿದರೂ, ನಿಮ್ಮ ತಾಯಿಯ ಮತ ಯಾವುದೂ, ನೀನು ಪಾಕಿಸ್ತಾನಕ್ಕೆ ವಾಪಸ್ ಹೋಗು, ನೀನು ನಿಜ ಜೀವದಲ್ಲೂ ಖಳನಟ ಎಂದು ನನ್ನ ವೈಯಕ್ತಿಕ ಜೀವನದ ಘಟನೆಗಳನ್ನು ತಿರುಚಿ ಟ್ರೋಲ್ ಮಾಡುತ್ತಿದ್ದಾರೆ ಎಂದು ಆಕ್ರೋಶದಿಂದ ಹೇಳಿದರು.

    ಇದು ಯಾವುದೇ ಪಕ್ಷ, ಪಂಗಡದ ವಿರುದ್ಧ ಅಲ್ಲ. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಇನ್ನೊಬ್ಬರನ್ನು ಈ ರೀತಿ ಟ್ರೋಲ್ ಮಾಡುವುದು ಸರಿಯಲ್ಲ. ಅದಕ್ಕಾಗಿ ನಾನು ಹೋರಾಡುತ್ತಿದ್ದೇನೆ. ನನ್ನ ಮಗನ ಸಾವಿನ ಸುದ್ದಿಯನ್ನು ನೀವು ಟ್ರೋಲ್ ಮಾಡಿದ್ದೀರಿ ಅದು ನನಗೆ ತುಂಬಾ ಆಘಾತ ಆಗಿದೆ. ಇದರಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನನಗೆ ನಿಮ್ಮನ್ನು ಚುನಾಯಿಸಿದ ಯುವಕರ ಮತ್ತು ನಿಮ್ಮ ಕ್ಷೇತ್ರದ ಹೆಣ್ಣುಮಕ್ಕಳ ಬಗ್ಗೆ ನೋವಾಗುತ್ತಿದೆ. ಅವರಿಗೆಲ್ಲಾ ಉತ್ತರ ಕೊಡಿ ಎಂದು ನೋವಿನಿಂದ ಹೇಳಿದರು.

    ಒಂದು ಸಮುದಾಯವಾಗಿ ನಿಮ್ಮ ರಾಜಕೀಯ ಬೇಡ. ಆದರೆ ಆರೋಗ್ಯವಾದ ಸಜ್ಜನವಾದ ವಾತಾವರಣ ಬೇಕಾಗಿದೆ. ನಮ್ಮ ಯುವಕರಿಗೆ, ಪ್ರಜೆಗಳಿಗೆ ಪ್ರಶ್ನೆಕೇಳುವ ಉತ್ತರ ಬಯಸುವ ಹಕ್ಕು ಇದೆ. ಆದರೆ ನೀವು ಉತ್ತರಕೊಡುವ ಜವಬ್ದಾರಿ ಇದೆ ಹೊರತು ಹೀಗೆ ಅಸಯ್ಯ, ಅಸಭ್ಯವಾಗಿ ಮಾತನಾಡುತ್ತಾ ಸಮಾಜದ ಆರೋಗ್ಯವನ್ನು ಹಾಳು ಮಾಡಬೇಡಿ. ನಾನು ಕೇವಲ ಹೇಳಿಕೆ ಕೊಡುವವನು ಮಾತ್ರವಲ್ಲ, ನಾನು ನನ್ನ ಹಕ್ಕುಗಳಿಗೆ ಹೋರಾಡೋನು ಎಂದು ಸ್ಪಷ್ಟವಾಗಿ ಹೇಳಿದರು.

    ಪದ್ಮಾವತಿ ಚಿತ್ರದ ವಿವಾದ ವಿಚಾರವನ್ನು ಕೇಳಿದಾಗ ಸುಪ್ರೀಂ ಕೋರ್ಟ್ ಬ್ಯಾನ್ ಮಾಡಲು ಸಾಧ್ಯವಿಲ್ಲ ಅಂತಾ ಹೇಳಿದೆ. ಆದರೂ ಇದಾದ ಮೇಲೂ ಚಿತ್ರವನ್ನು ಬ್ಯಾನ್ ಮಾಡುವುದು ಯಾಕೆ ಬೇಕಿತ್ತು ಎಂದು ಅವರು ಪ್ರಶ್ನಿಸಿದರು.

    ನನಗೆ ರಾಜಕೀಯಕ್ಕೆ ಬರುವ ಯಾವುದೇ ಉದ್ದೇಶವಿಲ್ಲ. ಮೋದಿ ವಿರುದ್ಧ ಧ್ವನಿ ಎತ್ತಲು ಭಯ ಪಡುತ್ತಾರೆ. ಯುವ ಜನತೆ ಈ ದೋರಣೆ ವಿರುದ್ಧ ಧ್ವನಿ ಎತ್ತಬೇಕು. ನಾನು ಮಾತಾನಾಡುತ್ತೇನೆ ಮಾತನಾಡುತ್ತಲೇ ಇರುತ್ತೇನೆ ಎಂದು ಹೇಳಿ ತಮ್ಮ ಮಾತನ್ನ ಮುಗಿಸಿದರು.

    ಸುದ್ದಿಗೋಷ್ಠಿ ಆರಂಭಿಸುವ ಮುನ್ನ ಮೈಸೂರಿನ ಆಂದೋಲನ ಪತ್ರಿಕೆಯ ಸಂಸ್ಥಾಪಕ ರಾಜಶೇಖರ ಕೋಟಿ ನಿಧಾನಕ್ಕೆ 2 ನಿಮಿಷ ಎದ್ದು ನಿಂತು ಮೌನಾಚಾರಣೆ ಮಾಡಿದ ನಂತರ ಮಾತನಾಡಿದರು.

    ಇದನ್ನು ಓದಿ: ನಟ ಪ್ರಕಾಶ್ ರಾಜ್ ವಿರುದ್ಧ ಕೇಸ್ ದಾಖಲು

    ಪ್ರತಾಪ್ ಸಿಂಹ ಟ್ವೀಟ್ ಏನಿತ್ತು?
    ಅಕ್ಟೋಬರ್ 2 ರಂದು ಪ್ರತಾಪ್ ಸಿಂಹ ವೆಬ್‍ಸೈಟ್ ಒಂದರಲ್ಲಿ ಬಂದಿದ್ದ ಸುದ್ದಿಯನ್ನು ಟ್ವೀಟ್ ಮಾಡಿದ್ದರು. “ಮಗನ ಸಾವಿನ ದು:ಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿದ ರೈಯಂತಹವನು ಮೋದಿ – ಯೋಗಿಗೆ ಹೇಳುವಷ್ಟು ಯೋಗ್ಯತೆಯಿರುವವನಾ?” ಎನ್ನುವ ಹೆಡ್‍ಲೈನ್ ಈ ಸುದ್ದಿಯಲ್ಲಿತ್ತು.

    ಇದನ್ನು ಓದಿ: ತಮ್ಮ ದಂಧೆಗಾಗಿ, ಹಣಕ್ಕಾಗಿ ತಮಿಳುನಾಡಿನಲ್ಲಿ ರೈ, ಇಲ್ಲಿ ರಾಜ್: ಪ್ರತಾಪ್ ಸಿಂಹ

    ಇದನ್ನು ಓದಿ: ಮೋದಿ, ಪ್ರತಾಪ್ ಸಿಂಹಗೆ ಪರೋಕ್ಷವಾಗಿ ಟಾಂಗ್ ನೀಡಿದ ನಟ ಪ್ರಕಾಶ್ ರೈ

    https://www.youtube.com/watch?v=PEcjqcLb2_Y

     

  • ಶಾಲೆಯ 3ನೇ ಮಹಡಿಯಿಂದ ಕಿಟಕಿ ಗಾಜು ಬಿದ್ದು ವಿದ್ಯಾರ್ಥಿಗಳಿಗೆ ಗಂಭೀರ ಗಾಯ- ಪೋಷಕರ ಪ್ರತಿಭಟನೆ

    ಶಾಲೆಯ 3ನೇ ಮಹಡಿಯಿಂದ ಕಿಟಕಿ ಗಾಜು ಬಿದ್ದು ವಿದ್ಯಾರ್ಥಿಗಳಿಗೆ ಗಂಭೀರ ಗಾಯ- ಪೋಷಕರ ಪ್ರತಿಭಟನೆ

    ಬೆಂಗಳೂರು: ಶಾಲೆಯ ಮೂರನೇ ಮಹಡಿಯಿಂದ ಕಿಟಕಿಯ ಗಾಜು ಬಿದ್ದು ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲ್ಯಾಣ ನಗರದ ರಾಯಲ್ ಕಾನ್‍ಕಾರ್ಡ್ ಶಾಲೆಯಲ್ಲಿ ನಡೆದಿದೆ.

    ಮಾಜಿ ಶಾಸಕ ಶಿವರಾಮೇಗೌಡರಿಗೆ ಸೇರಿದ ಶಾಲೆ ಇದಾಗಿದೆ. ಬುಧವಾರ ಮಧ್ಯಾಹ್ನ  3.30ರ ಸುಮಾರಿಗೆ ಈ ಘಟನೆ ನಡೆದಿದೆ. ಕೆಳಗೆ ಆಟವಾಡ್ತಿದ್ದ ಮಕ್ಕಳ ಮೇಲೆ ಅಲಂಕಾರಿಕ ಗ್ಲಾಸ್ ಬಿದ್ದು ತಲೆಗೆ ಗಾಯವಾಗಿದೆ. ವಾಟ್ಸಪ್ ಮೂಲಕ ಮಕ್ಕಳ ಪೋಷಕರ ಗಮನಕ್ಕೆ ಈ ಬಗ್ಗೆ ಮಾಹಿತಿ ತಿಳಿದುಬಂದ ನಂತರ ಪೋಷಕರು ಇಂದು ಶಾಲೆಗೆ ಮಕ್ಕಳನ್ನು ಕಳಿಸಲು ನಿರಾಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಗಾಜು ಬಿದ್ದ ಪ್ರಕರಣ ಮಾತ್ರವಲ್ಲದೆ ಶಾಲೆಯಲ್ಲಿ ಇತರೆ ಸಮಸ್ಯೆಗಳೂ ಇದೆ ಎಂದು ಪೋಷಕರು ಆರೋಪಿಸಿದ್ದಾರೆ. ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ಮಕ್ಕಳಿಗೆ ಈ ಶಾಲೆಯಲ್ಲಿ ರಕ್ಷಣೆ ಇಲ್ಲ. ಮಕ್ಕಳನ್ನು ಶಾಲೆಗೆ ಕಳಿಸೋಕೆ ನಮಗೆ ಭಯವಾಗುತ್ತಿದೆ. ಈ ಹಿಂದೆಯೂ ಕೂಡ ಇಂಥದ್ದೇ ಅನಾಹುತಗಳು ನಡೆದಿದ್ದರೂ ಶಾಲೆ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶಾಲೆಯ ಆಡಳಿತ ಮಂಡಳಿಗೆ ಇ-ಮೇಲ್ ಕಳಿಸಿ ನಂತರ ಪೋಷಕರು ಪ್ರತಿಭಟನೆ ಮಾಡುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಪೋಷಕರು ಶಾಲೆಯ ಆವರಣದಲ್ಲಿ ಸೇರಿದ್ದಾರೆ. ಅಷ್ಟೇ ಅಲ್ಲದೇ ಶಾಲೆಯ ವಿರುದ್ಧ ಪೊಲೀಸರ ಮೊರೆ ಹೋಗಲು ಪೋಷಕರು ಚಿಂತನೆ ಮಾಡಿದ್ದಾರೆ.

    ಪ್ರತಿಭಟನೆ ನಡೆಸುತ್ತಿರುವ ಪೋಷಕರ ಜೊತೆಗೆ ರಾಯಲ್ ಕಾನ್‍ಕಾರ್ಡ್ ಚೇರ್ಮನ್ ಎಲ್.ಆರ್ ಶಿವರಾಮೇಗೌಡ ಮಾತುಕತೆ ನಡೆಸಿದ್ದು, ಶಾಲೆಗೆ ಇಂದಿನಿಂದ ಮೂರು ದಿನಗಳ ಕಾಲ ರಜೆಯನ್ನು ಘೋಷಿಸಿದ್ದಾರೆ. ಅಲ್ಲದೇ ಮೂರು ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸುವಂತೆ ಭರವಸೆ ನೀಡಿದ್ದಾರೆ.

    ಒಟ್ಟು ನಾಲ್ವರು ಮಕ್ಕಳಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿತ್ತು. ಗಾಯಗೊಂಡಿರುವರಲ್ಲಿ ಇಬ್ಬರು ಮಕ್ಕಳು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.

     

  • ಕಾರ್ ಅಪಘಾತದ ಬಳಿಕ ಆದಿಕೇಶವಲು ಮೊಮ್ಮಗ ಗೀತಾ ವಿಷ್ಣುಪ್ರಿಯ ಸ್ಪಷ್ಟನೆ ನೀಡಿದ್ದು ಹೀಗೆ

    ಕಾರ್ ಅಪಘಾತದ ಬಳಿಕ ಆದಿಕೇಶವಲು ಮೊಮ್ಮಗ ಗೀತಾ ವಿಷ್ಣುಪ್ರಿಯ ಸ್ಪಷ್ಟನೆ ನೀಡಿದ್ದು ಹೀಗೆ

    ಬೆಂಗಳೂರು: ಉದ್ಯಮಿ ಆದಿಕೇಶವಲು ಮೊಮ್ಮಗ ಗೀತಾ ವಿಷ್ಣುಪ್ರಿಯ ಕೇಸ್ ದಿನದಿಂದ ದಿನಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ. ಅಪಘಾತ ನಡೆದು ಒಂದೂವರೆ ತಿಂಗಳ ಬಳಿಕ ಗೀತಾ ವಿಷ್ಣು ಘಟನೆಯ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

    ನಾನು ಡ್ರಗ್ ಸೇವಿಸೋದಿಲ್ಲ. ನನ್ನ ಕಾರಿನಲ್ಲಿ ಗಾಂಜಾ ಹೇಗೆ ಬಂತು ಅಂತಾ ಗೊತ್ತಿಲ್ಲ. ಅಷ್ಟೇ ಅಲ್ಲದೇ ಅಪಘಾತ ನಡೆದಾಗ ನನ್ನ ಜೊತೆ ನಟರಾದ ದಿಗಂತ್ ಮತ್ತು ಪ್ರಜ್ವಲ್ ದೇವರಾಜ್ ಇರಲಿಲ್ಲ. ಸ್ನೇಹಿತನ ಕಾರು ಆಕ್ಸಿಡೆಂಟ್ ಆಗಿದೆಯಲ್ಲಾ ಅಂತಾ ಪ್ರಣವ್ ದೇವರಾಜ್ ಸ್ಥಳಕ್ಕೆ ಬಂದಿದ್ದು ನಿಜ ಅಂತಾ ಅವರು ಸ್ಪಷ್ಟನೆ ನೀಡಿದ್ದಾರೆ.

    ಅಷ್ಟಕ್ಕೂ ನಾನು ಅವತ್ತು ಕಾರನ್ನು ಚಾಲಯಿಸುತ್ತಿರಲಿಲ್ಲ. ನನ್ನ ಡ್ರೈವರ್ ಕಾರನ್ನು ಓಡಿಸುತ್ತಿದ್ದ. ಸ್ಥಳದಲ್ಲಿ ಜಮಾಯಿಸಿದ ಕೆಲವು ಜನರು ನನ್ನ ಮೇಲೆ ಹಲ್ಲೆ ಮಾಡಿ, ನನ್ನ ಕಾರಿಗೆ ಬೆಂಕಿ ಹಚ್ಚಿದ್ದರು. ಇನ್ನು ಮಲ್ಯ ಆಸ್ಪತ್ರೆಯ ಐಸಿಯುನಿಂದ ನಾನು ಓಡಿಹೋಗಿಲ್ಲ. ನನ್ನ ಪಕ್ಕದ ಬೆಡ್‍ನ ವ್ಯಕ್ತಿ ಸತ್ತು ಹೋಗಿದ್ದರು. ಆದ್ದರಿಂದ ನಾನು ಸಹಜವಾಗಿ ಭಯಗೊಂಡು ಆಸ್ಪತ್ರೆಯಿಂದ ಹೊರಬಂದೆ. ನನ್ನ ಮತ್ತು ಕುಟುಂಬದ ಮೇಲೆ ಇಲ್ಲಸಲ್ಲದ ವರದಿಗಳನ್ನು ತೋರಿಸಲಾಗಿದೆ ಎಂದು ಹೇಳಿದ್ದಾರೆ.

    ಈ ಘಟನೆಯಿಂದ ನನಗೆ ನನ್ನ ಕುಟುಂಬಕ್ಕೆ ಡ್ಯಾಮೇಜ್ ಆಗಿರೋದು ಸತ್ಯವಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ನ್ಯಾಯಾಲಯದಲ್ಲಿ ನಾನು ಗೆದ್ದು ಬರುವ ವಿಶ್ವಾಸವಿದೆ ಅಂತಾ ಗೀತಾ ವಿಷ್ಣು ಹೇಳಿದ್ದಾರೆ.

    ಅಪಘಾತ ನಡೆದಿದ್ದು ಹೇಗೆ?: ಗೀತಾವಿಷ್ಣು ಅವರು ಜಯನಗರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಘಟನೆ ನಡೆದ ದಿನ ಅವರು ವ್ಯಾಪಾರ ಮುಗಿಸಿ ಮನೆಗೆ ತೆರಳುತ್ತಿದ್ದರು. ಹಾಗೆ ತೆರಳುವ ಹೊತ್ತಲ್ಲಿ ಅವರು ಹೋಗುವ ದಾರಿಯಲ್ಲಿ ಗ್ರೀನ್ ಸಿಗ್ನಲ್ ಇದ್ದುದರಿಂದ ಚಾಲಕರು ವಾಹನವನ್ನು ಮುನ್ನಡೆಸುತ್ತಿದ್ದರು. ಅದೇ ಹೊತ್ತಿಗೆ ಪಕ್ಕದ ರಸ್ತೆಯಿಂದ ರೆಡ್ ಸಿಗ್ನಲ್ ಇದ್ದಾಗಲ್ಲೂ ಮಾರುತಿ ಓಮ್ನಿ ವಾಹನ ವೇಗವಾಗಿ ಬಂದಿದ್ದರಿಂದ ಅಪಘಾತವನ್ನು ತಪ್ಪಿಸುವ ಸಲುವಾಗಿ ಚಾಲಕ ಕಾರನ್ನು ಪಕ್ಕಕ್ಕೆ ತಿರುಗಿಸಿದ್ದಾರೆ. ಹಾಗಿದ್ದರೂ ಅದು ಓಮ್ನಿಗೆ ಡಿಕ್ಕಿ ಹೊಡೆದಿದೆ. ನಂತರ ವಾಹನ ಫುಟ್ ಪಾತ್ ಮೇಲೆ ಏರಿ ಎರಡು ಕಂಬಗಳ ನಡುವೆ ನಿಂತಿದೆ.

    ಅಪಘಾತದ ತೀವ್ರತೆ ತಪ್ಪಿಸುವ ಸಲುವಾಗಿ ಎಚ್ಚರಿಕೆಯಿಂದಲೂ ಚಾಕಚಕ್ಯತೆಯಿಂದಲೂ ವಾಹನ ಓಡಿಸುವ ಮೂಲಕ ಚಾಲಕನಿಗೆ ಆಗಬಹುದಾಗಿದ್ದ ಹಾನಿಯನ್ನು ತಪ್ಪಿಸಿದ್ದಾರೆ. ಅಪಘಾತದ ಸದ್ದು ಕೇಳುತ್ತಿದ್ದಂತೆ ಅಕ್ಕಪಕ್ಕದ ಅಂಗಡಿಗಳಲ್ಲಿದ್ದ ಮೊಹಮ್ಮಡನ್ ಬ್ಲಾಕ್ ಮಂದಿ ಬಂದು ಗೀತಾವಿಷ್ಣು ಅವರಿಗೆ ಮಾತಾಡಲಿಕ್ಕೂ ಅವಕಾಶ ಕೊಡದೇ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ಗೀತಾವಿಷ್ಣು ತಪ್ಪಿಲ್ಲವೆಂದು ಹೇಳಿ ಅವರ ಪರವಾಗಿ ನಿಂತಿದ್ದಾರೆ ಚಾಲಕನ ಸಮಯ ಪ್ರಜ್ಞೆಯಿಂದ ಅಪಘಾತದ ತೀವ್ರತೆಯನ್ನು ಕಡಿಮೆ ಮಾಡಿದ್ದಾರೆ ಎಂದು ಹೇಳಿ ಅವರನ್ನು ಒಳಗೆ ಕೂರಿಸಿ ಉಪಚರಿಸಿದ್ದಾರೆ. ಸರಿಯಾದ ಸಮಯಕ್ಕೆ ಆಗಮಿಸಿದ ಪೊಲೀಸರು ಹೆಚ್ಚಿನ ಘರ್ಷಣೆ ನಡೆಯುವ ಮೊದಲು ಬಂದೋಬಸ್ತ್ ಮಾಡಿ ಎರಡೂ ಕಡೆಯ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.

    https://www.youtube.com/watch?v=-qMErQzjP_U

  • ಬಿಕಿನಿ ಬಗ್ಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಖಡಕ್ ಮಾತು

    ಬಿಕಿನಿ ಬಗ್ಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಖಡಕ್ ಮಾತು

    ಬೆಂಗಳೂರು: ಸ್ಯಾಂಡಲ್ ವುಡ್‍ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಬಿಕಿನಿ ಬಗ್ಗೆ ಖಡಕ್ ಆಗಿ ಮಾತನಾಡಿದ್ದಾರೆ.

    ಸದ್ಯಕ್ಕೆ ಅವರು ನಟ ದುನಿಯಾ ವಿಜಯ್ ಜೊತೆ ಅಭಿನಯಿಸುತ್ತಿರುವ `ಜಾನಿ ಜಾನಿ ಎಸ್ ಪಪ್ಪಾ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯ ಪಾತ್ರವನ್ನು ಮಾಡುತ್ತಿದ್ದು, ಎನ್ ಆರ್ ಐ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೇ ಅಭಿನಯಿಸಿರುವ ಸಿನಿಮಾಗಳಿಗಿಂತ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಂಡೋ-ವೆಸ್ಟ್ರನ್ ಶೈಲಿಯಲ್ಲಿ ವಿನ್ಯಾಸಗೊಳಿಸಿರುವ ಕೆಂಪು ಬಣ್ಣದ ಸೀರೆಯನ್ನು ತೊಟ್ಟು ಗ್ಲಾಮರಸ್ ಆಗಿ ಮಿಂಚಲಿದ್ದಾರೆ.

    ಮಾಧ್ಯಮ ಸಂದರ್ಶನವೊಂದರಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಿದ್ದಾಗ, ನಾನು ಅಭಿನಯಿಸುತ್ತಿರುವ ಎನ್ ಆರ್ ಐ ಪಾತ್ರಕ್ಕೆ ಹೆಚ್ಚಿನ ಪಾಶ್ಚಾತ್ಯ ಲುಕ್ ಅಗತ್ಯವಿದೆ. ನನ್ನ ಡೈಲಾಗ್ ಗಳೂ ಸಹ ಬಹುತೇಕ ಕಂಗ್ಲಿಷ್ ನಲ್ಲಿಯೇ ಇರುತ್ತವೆ. ಆದ್ದರಿಂದ ಇದರ ಬಗ್ಗೆ ಚಿತ್ರ ತಂಡ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ಹೇಳಿದ್ದಾರೆ.

    ಇದೇ ಸಂದರ್ಭದಲ್ಲಿ ಗ್ಲಾಮರ್ ಬಗ್ಗೆ ಕೂಡ ಮಾತನಾಡಿದ್ದು, ಅವರನ್ನು ಗ್ಲಾಮರ್ ಕ್ವೀನ್ ಎಂದು ಕರೆಯುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದು, ನಂತರ ಬಿಕಿನಿ ತೊಡುವುದರಿಂದ ಮಾತ್ರ ಗ್ಲಾಮರ್ ಆಗಿ ಕಾಣಿಸುವುದು ಎಂಬ ಮಾತನ್ನು ನಿರಾಕರಿಸಿದ್ದಾರೆ. ಬಿಕಿನಿ ತೊಟ್ಟು ಎಕ್ಸ್ ಪೋಸ್ ಮಾಡುವುದೇ ಗ್ಲಾಮರ್ ನ ವ್ಯಾಖ್ಯಾನ ಎನ್ನುವುದನ್ನು ನಾನು ಒಪ್ಪುವುದಿಲ್ಲ. ನನ್ನ ಪ್ರಕಾರ ಗ್ಲಾಮರ್ ಎಂದರೆ ಸೌಂದರ್ಯ ಹಾಗೂ ಸಮಾಧಾನಕರವಾಗಿರುವುದು ಎಂದರು. ಅಷ್ಟೇ ಅಲ್ಲದೇ ಬಿಕಿನಿಯನ್ನು ಧರಿಸದೆ ಇದ್ದರೂ ಕೂಡ ಗ್ಲಾಮರಸ್ ಆಗಿ ಕಾಣಬಹುದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

    ಪ್ರೀತಮ್ ಗುಬ್ಬಿ ನಿರ್ದೇಶನದಿಂದ ಮೂಡಿ ಬರುತ್ತಿರುವ `ಜಾನಿ ಜಾನಿ ಎಸ್ ಪಪ್ಪಾ’ ಸಿನಿಮಾ `ಜಾನಿ’ ಚಿತ್ರದ ಮುಂದುವರಿದ ಭಾಗವಾಗಿದೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ದುನಿಯಾ ವಿಜಯ್, ರಂಗಾಯಣ ರಘು ಅವರು ಕೂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  • ಬೆಂಗ್ಳೂರಿನಲ್ಲಿ ಒಂದೇ ಬುಲೆಟ್‍ನಲ್ಲಿ 58 ಮಂದಿ ಯೋಧರು ಸಂಚರಿಸಿ ವಿಶ್ವದಾಖಲೆ!

    ಬೆಂಗ್ಳೂರಿನಲ್ಲಿ ಒಂದೇ ಬುಲೆಟ್‍ನಲ್ಲಿ 58 ಮಂದಿ ಯೋಧರು ಸಂಚರಿಸಿ ವಿಶ್ವದಾಖಲೆ!

    ಬೆಂಗಳೂರು: ಭಾರತೀಯ ಸೇನಾ ಯೋಧರ ತಂಡವೊಂದು ಒಂದೇ ಬೈಕ್‍ನಲ್ಲಿ 58 ಮಂದಿ ಪ್ರಯಾಣಿಸುವ ಮೂಲಕ ನೂತನ ವಿಶ್ವದಾಖಲೆಯನ್ನು ಸೃಷ್ಟಿಸಿದ್ದಾರೆ.

    ಆರ್ಮಿ ಸರ್ವಿಸ್ ಕಾಪ್ರ್ಸ್ (ಎಎಸ್‍ಸಿ) ಟೋರ್ನೆಡೊ ಹೆಸರಿನ ಬೈಕ್ ತಂಡವೊಂದು 500 ಸಿಸಿ ರಾಯಲ್ ಎನ್‍ಫೀಲ್ಡ್ ಮೋಟಾರ್ ಬೈಕ್‍ನಲ್ಲಿ 58 ಯೋಧರು ಯಲಹಂಕದ ವಾಯು ಪಡೆ ನಿಲ್ದಾಣದಲ್ಲಿ ಸುಮಾರು 1.2 ಕಿ.ಮೀ ದೂರವನ್ನು ಪ್ರಯಾಣಿಸಿದ್ದಾರೆ. ಯೋಧರ ತಂಡವು ಬೈಕ್‍ನಲ್ಲಿ ಪ್ರಯಾಣಿಸುವಾಗ ತ್ರಿವರ್ಣ ಧ್ವಜದ ಬಟ್ಟೆಗಳನ್ನು ಧರಿಸಿದ್ದರು. ಈ ತಂಡದ ಚಾಲಕ ಸುಬೇದರ್ ರಾಮ್‍ಪಾಲ್ ಯಾದವ್ ಅವರು ತುಂಬಾ ಸಾಹಸಿಯಾಗಿ ಬೈಕ್ ಚಲಾಯಿಸಿದ್ದಾರೆ ಎಂದು ರಕ್ಷಣಾ ಇಲಾಖೆಯು ತಿಳಿಸಿದೆ.

    ಮೇಜರ್ ಬನ್ನಿಶರ್ಮಾ ನೇತೃತ್ವದಲ್ಲಿ 150 ಜನರ ತಂಡ ಸತತವಾಗಿ 10 ತಿಂಗಳುಗಳ ಕಾಲ ತರಬೇತಿ ನಡೆಸಿತ್ತು. ಈ ಬೈಕ್ ಸುಮಾರು 3.5 ಟನ್ ತೂಕವನ್ನು ಹೊತ್ತೊಯ್ಯುವ ಸಾಮಥ್ರ್ಯವನ್ನು ಹೊಂದಿದೆ. ಈ ಎಲ್ಲಾ ಸಾಹಸ ದೃಶ್ಯವನ್ನು ಎಎಸ್‍ಸಿ ಸೆಂಟರ್ ಮತ್ತು ಕಾಲೇಜಿನ ಕಮಾಂಡೆಂಟ್ ವಿಪಾನ್ ಗುಪ್ತಾ, ದಕ್ಷಿಣದ ತರಬೇತಿ ಕೇಂದ್ರದ ಬ್ರಿಗೇಡಿಯರ್ ಅಶೋಕ್ ಚೌಧರಿ, ಸೇನೆಯ ಹಿರಿಯ ಅಧಿಕಾರಿಗಳು, ಭಾರತೀಯ ವಾಯುಪಡೆ ಅಧಿಕಾರಿಗಳು ಮತ್ತು ಇತರ ಶ್ರೇಯಾಂಕ ಸದಸ್ಯರು ವೀಕ್ಷಿಸಿದ್ದಾರೆ.

    ಮೊದಲಿಗೆ 60 ಜನ ರಾಯಲ್ ಎನ್‍ಫೀಲ್ಡ್ 500ಸಿಸಿ ಬೈಕ್ ಏರಿ ಟ್ರಯಲ್ ಮಾಡಿದ್ದರು. ಆದರೆ ರೆಕಾರ್ಡ್ ಸೃಷ್ಟಿಸಲು ಮುಂದಾದಾಗ ಎರಡು ಬಾರಿ ಆಯತಪ್ಪಿ ಬಿದ್ದಿದ್ದರು. ಈ ವೇಳೆ ಕೆಲ ಯೋಧರು ಗಾಯಗೊಂಡಿದ್ದಾರೆ. ಆದರೂ ಯೋಧರು ಇದಕ್ಕೆ ಅಂಜದೆ, 58 ಮಂದಿ ಒಟ್ಟಾಗಿ ಸಂಚರಿಸಿ ದಾಖಲೆಯನ್ನು ಸೃಷ್ಟಿಸಿದ್ದಾರೆ.

    ಮೂರು ದಶಕಗಳಲ್ಲಿ ವಿಶ್ವದಾದ್ಯಂತ 1000 ಪ್ರದರ್ಶನಗಳನ್ನು ನೀಡಿರುವ ಎಎಸ್‍ಸಿ ತಂಡವು 19 ವಿಶ್ವದಾಖಲೆಯನ್ನು ಹೊಂದಿದೆ. ಮೊದಲು 1990 ರಲ್ಲಿ 26 ಯೋಧರು ಸಂಚರಿಸಿ ಮೊದಲ ದಾಖಲೆಯನ್ನು ಮಾಡಿದ್ದರು. ನಂತರ 2010 ರಲ್ಲಿ 56 ಯೋಧರು ಒಂದೇ ಬೈಕ್ ನಲ್ಲಿ ಸಂಚರಿಸಿ ವಿಶ್ವದಾಖಲೆ ಸೃಷ್ಟಿಸಿದ್ದರು. ಈಗ 58 ಯೋಧರು ಪ್ರಯಾಣಿಸಿ ನೂತನ ದಾಖಲೆ ಮಾಡಿದ್ದಾರೆ.

  • ಸೊಂಟ ಹಿಡಿದು ಯುವತಿ ಮೇಲೆ ಲೈಂಗಿಕ ದೌರ್ಜನ್ಯ- ಕಾಮುಕನನ್ನು ಬೆನ್ನಟ್ಟಿ ಪೊಲೀಸರಿಗೆ ಒಪ್ಪಿಸಿದ್ರು

    ಸೊಂಟ ಹಿಡಿದು ಯುವತಿ ಮೇಲೆ ಲೈಂಗಿಕ ದೌರ್ಜನ್ಯ- ಕಾಮುಕನನ್ನು ಬೆನ್ನಟ್ಟಿ ಪೊಲೀಸರಿಗೆ ಒಪ್ಪಿಸಿದ್ರು

    ಬೆಂಗಳೂರು: ಜಿಮ್‍ನಿಂದ ಮನೆಗೆ ತೆರಳುತ್ತಿದ್ದ ಯುವತಿಯ ಸೊಂಟ ಹಿಡಿದು ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ಹೆಚ್‍ಎಸ್‍ಆರ್ ಲೇಔಟ್‍ನ 6ನೇ ಬ್ಲಾಕ್‍ನಲ್ಲಿ ನಡೆದಿದೆ. ಸಂತ್ರಸ್ತೆ ನೀಡಿದ ದೂರಿನನ್ವಯ ಆರೋಪಿ ಬೇಗೂರು ನಿವಾಸಿ ನಾರಾಯಣ ಸ್ವಾಮಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಘಟನೆ?: ಸಂತ್ರಸ್ತೆ ಮೂಲತಃ ಕಲಬುರಗಿಯವರಾಗಿದ್ದು, ಒಂದು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಗರದ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ವಾಸವಿದ್ದಾರೆ. ನವೆಂಬರ್ 17ರಂದು ಕೆಲಸ ಮುಗಿಸಿ ರಾತ್ರಿ ಜಿಮ್‍ಗೆ ಹೋಗಿದ್ದು, ಜಿಮ್ ಮುಗಿಸಿ ರಾತ್ರಿ ಸುಮಾರು 8 ಗಂಟೆಗೆ ಮನೆಗೆ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಕಾಮುಕರು ಬೈಕ್‍ನಲ್ಲಿ ಬಂದಿದ್ದು, ಹಿಂಬದಿಯಲ್ಲಿ ಕುಳಿತ್ತಿದ್ದವನು ಯುವತಿಯ ಸೊಂಟವನ್ನು ಹಿಡಿದು ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ನಂತರ ಯುವತಿ ಜೋರಾಗಿ ಕೂಗಿಕೊಂಡಾಗ ತಕ್ಷಣ ಕಾಮುಕರು ಬೈಕ್‍ನಲ್ಲಿ ಪರಾರಿಯಾಗಿದ್ದಾರೆ.

    ಯುವತಿ ಕೂಗಿಗೆ ಕೂಡಲೇ ಅವರ ಸ್ನೇಹಿತರು ಬಂದಿದ್ದಾರೆ. ನಂತರ ಸುಮಾರು ಅರ್ಧ ಕಿ.ಮೀ ದೂರ ಕಾಮುಕರನ್ನು ಬೆನ್ನಟ್ಟಿಸಿಕೊಂಡು ಹೋಗಿ ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿಗಳು ಮತ್ತೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಅಲ್ಲಿ ಸೇರಿದ್ದ ಸಾರ್ವಜನಿಕರು ಅವರನ್ನ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಆರೋಪಿ ಜೊತೆಗಿದ್ದ ಇನ್ನೊಬ್ಬನ ತಪ್ಪಿಲ್ಲದ ಕಾರಣ ಆತನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಆದರೆ ಆರೋಪಿ ನಾರಾಯಣ ಸ್ವಾಮಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 354 ರಡಿ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

  • ಒಂದೇ ಪಿಕ್ಚರ್‍ಗೆ ತೆಲುಗು ಅಮ್ಮಾಯಿ ಆದ್ರು ಅಚ್ಚ ಕನ್ನಡತಿ ರಶ್ಮಿಕಾ

    ಒಂದೇ ಪಿಕ್ಚರ್‍ಗೆ ತೆಲುಗು ಅಮ್ಮಾಯಿ ಆದ್ರು ಅಚ್ಚ ಕನ್ನಡತಿ ರಶ್ಮಿಕಾ

    ಬೆಂಗಳೂರು: ಕಿರಿಕ್ ಪಾರ್ಟಿ ಮೂಲಕ ಕನ್ನಡಿಗರ ಮನಗೆದ್ದ ರಶ್ಮಿಕಾ ಮಂದಣ್ಣ ನಟನೆಯ ಮೊದಲನೇ ತೆಲುಗು ಸಿನಿಮಾ `ಚಲೋ’ ಟೀಸರ್ ರಿಲೀಸ್ ಆಗಿದೆ.

    ಶನಿವಾರ ಹೈದ್ರಾಬಾದ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಕೊಡವರ ಬೆಡಗಿ ರಶ್ಮಿಕಾ ತೆಲುಗಿನಲ್ಲಿ ಮಾತನಾಡಿದ್ದಾರೆ. ನಾನು ಕನ್ನಡದಲ್ಲಿ ಒಂದು ಸಿನಿಮಾವನ್ನು ಮಾಡಿದ್ದು, ಇದು ನನ್ನ ಎರಡನೇ ಸಿನಿಮಾವಾಗಿದೆ. ನನಗೆ ತೆಲುಗು ಮಾತನಾಡಲು ಬರುವುದಿಲ್ಲ. ಆದರೂ ಪ್ರಯತ್ನ ಮಾಡುತ್ತೇನೆ ಎಂದು ಹೇಳಿ ವೇದಿಕೆ ಮೇಲೆ ಇದ್ದ ಗಣ್ಯರೆಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

     

     

    ವೆಂಕಿ ಕುಡುಮುಲು ನಿರ್ದೇಶನದಲ್ಲಿ ಮೂಡಿ ಬಂದಿರುವ ಚೆಲೋ ಸಿನಿಮಾದಲ್ಲಿ ನಟಿ ರಶ್ಮಿಕಾ ತೆಲುಗಿನ ನಟ ನಾಗ ಶೌರ್ಯ ಅವರಿಗೆ ಜೋಡಿಯಾಗಿದ್ದಾರೆ. ಮೆಹಟಿ ಸ್ವರ ಸಾಗರ್ ಅವರ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದೆ. ವಿನ್ನೆಲ್ ಕಿಶೋರ್ ಸತ್ಯ, ಅಚ್ಯುತ್ ಕುಮಾರ್, ರಘು ಬಾಬು, ಪ್ರಗತಿ ಸೇರಿದಂತೆ ದೊಡ್ಡ ತಾರಾಗಣವನ್ನು ಸಿನಿಮಾದಲ್ಲಿ ಕಾಣಬಹುದಾಗಿದೆ.

    ಒಂದು ಗ್ರಾಮ ತೆಲುಗು ಮತ್ತೊಂದು ತಮಿಳು ಗ್ರಾಮ ಇವರ ಮಧ್ಯೆ ದ್ವೇಷ ಜಗಳ, ಕಾದಾಟ ನಡೆಯುತ್ತಿದ್ದು, ಒಬ್ಬರು ಇನ್ನೊಬ್ಬರ ಊರಿಗೆ ಹೋಗಬಾರದು, ಬರಬಾರದು ಅವರೇ ಒಂದು ಗಡಿ ಹಾಕಿಕೊಂಡು ವೈಮನಸ್ಸಿನಿಂದ ಇರುವ ಕಥಾಹಂದರವನ್ನು ಹೊಂದಿದೆ. ಇನ್ನೂ ಕಿರಿಕ್ ಪಾರ್ಟಿಯಲ್ಲಿ ಮಿಂಚಿದ ರೀತಿಯಲ್ಲಿಯೇ ಈ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

     

     

  • ಒನ್‍ವೇಯಲ್ಲಿ ಫೋನ್‍ನಲ್ಲಿ ಮಾತಾಡ್ಕೊಂಡು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ

    ಒನ್‍ವೇಯಲ್ಲಿ ಫೋನ್‍ನಲ್ಲಿ ಮಾತಾಡ್ಕೊಂಡು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ

    ಬೆಂಗಳೂರು: ಒನ್ ವೇಯಲ್ಲಿ ಬರುವುದಲ್ಲದೇ ಫೋನ್‍ನಲ್ಲಿ ಕೂಡ ಮಾತಾಡಿಕೊಂಡು ಬಂದಿದ್ದನ್ನು ಪ್ರಶ್ನೆ ಮಾಡಿದ ಟ್ರಾಫಿಕ್ ಪೊಲೀಸ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆ ನಗರದ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ.

    ಆರೋಪಿ ದಿಲೀಪ್ ಎಂಬಾತ ಎಚ್‍ಎಸ್‍ಅರ್ ಟ್ರಾಫಿಕ್ ಪೇದೆ ಭೀಮಶಂಕರ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆ ಎರಡು ದಿನಗಳ ಹಿಂದೆ ಅಂದರೆ ಗುರುವಾರ ಬೆಳಿಗ್ಗೆ ಸುಮಾರು 10.30ಕ್ಕೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿ ದಿಲೀಪ್ ಸರ್ಜಾಪುರದ ಒನ್ ವೇ ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದ. ಅಷ್ಟೇ ಅಲ್ಲದೇ ಡ್ರೈವ್ ಮಾಡುತ್ತಿದ್ದಾಗ ಫೋನಿನಲ್ಲಿ ಮಾತನಾಡಿಕೊಂಡು ಬಂದಿದ್ದಾನೆ. ನಂತರ ಟ್ರಾಫಿಕ್ ಪೊಲೀಸ್ ಭೀಮಶಂಕರ್ ಅವರು ಕಾರನ್ನು ತಡೆದು ಒನ್ ವೇಯಲ್ಲಿ, ಅದೂ ಫೋನಿನಲ್ಲಿ ಮಾತಾಡಿಕೊಂಡು ಬರುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿ ಫೈನ್ ಹಾಕಲು ಮುಂದಾಗಿದ್ದಾರೆ. ಇದರಿಂದ ಕೋಪಕೊಂಡ ದಿಲೀಪ್ ತನ್ನ ಕಾರಿನಲ್ಲಿದ್ದ ಬೇಸ್‍ಬಾಲ್ ಬ್ಯಾಟ್ ತಂದು “ನನಗೆ ಫೈನ್ ಹಾಕ್ತೀಯಾ” ಎಂದು ಕರ್ತವ್ಯ ನಿರತ ಪೊಲೀಸ್ ಗೆ ಹೊಡೆದಿದ್ದಾನೆ.

    ಈ ಘಟನೆ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ದಿಲೀಪ್‍ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಆತನನ್ನು ಜೈಲಿಗೆ ಕಳುಹಿಸಿದ್ದಾರೆ.

  • ರಾಜ್ಯದಲ್ಲಿ ಲಿಕ್ಕರ್ ಬ್ಯಾನ್ ಆಗುತ್ತಾ?- ಕರ್ನಾಟಕದಲ್ಲಿ ಮದ್ಯ ನಿಷೇಧಕ್ಕೆ ಸಿಎಂ ಸಿದ್ಧತೆ

    ರಾಜ್ಯದಲ್ಲಿ ಲಿಕ್ಕರ್ ಬ್ಯಾನ್ ಆಗುತ್ತಾ?- ಕರ್ನಾಟಕದಲ್ಲಿ ಮದ್ಯ ನಿಷೇಧಕ್ಕೆ ಸಿಎಂ ಸಿದ್ಧತೆ

    ಬೆಂಗಳೂರು: ಕರ್ನಾಟಕದಲ್ಲಿ ಲಿಕ್ಕರ್ ಬ್ಯಾನ್. ಈ ಸುದ್ದಿ ಅದೆಷ್ಟು ಹೆಣ್ಣು ಮಕ್ಕಳಿಗೆ ಖುಷಿ ಕೊಡುತ್ತೋ ಏನೋ. ಹಾಗೇ ಕರ್ನಾಟಕದ ಮದ್ಯ ಪ್ರಿಯರಿಗೆ ಶಾಕಿಂಗ್ ಸುದ್ದಿಯೂ ಆಗಬಹುದು. ಇಂತಹದ್ದೊಂದು ಐಡಿಯಾವನ್ನ ಸಿಎಂ ಸಿದ್ದರಾಮಯ್ಯ ಹರಿಬಿಟ್ಟಿದ್ದಾರೆ. ಶೀಘ್ರದಲ್ಲೇ ಕರ್ನಾಟಕದಲ್ಲಿ ಲಿಕ್ಕರ್ ಬ್ಯಾನ್ ಮಾಡಿ ಕರ್ನಾಟಕವನ್ನು ಮದ್ಯ ಮುಕ್ತವಾಗಿ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಸಿದ್ಧತೆ ಮಾಡುತ್ತಿದ್ದಾರೆ ಎಂದು ಹೇಳಲಾಗ್ತಿದೆ.

     

    ಇದು ಎಲೆಕ್ಷನ್ ವರ್ಷ ಆಗಿರೋ ಕಾರಣಕ್ಕೆ ವಿಪಕ್ಷಗಳಿಗಿಂತ ನಾವೇ ಮತದಾರರು, ಅದರಲ್ಲೂ ಮಹಿಳಾ ಮತದಾರರ ಮನ ಗೆಲ್ಲಬೇಕೆಂದು ಪ್ಲ್ಯಾನ್ ಸಿದ್ದ ಮಾಡಿಕೊಂಡಿದ್ದಾರೆ ಸಿದ್ದರಾಮಯ್ಯ. ಇದೇ ಕಾರಣಕ್ಕೆ ಲಿಕ್ಕರ್ ಬ್ಯಾನ್ ಮಾಡಿರುವ ಬಿಹಾರಕ್ಕೆ ಅಧಿಕಾರಿಗಳ ತಂಡವನ್ನು ಕಳುಹಿಸಿ ಅಲ್ಲಿನ ಸಕ್ಸಸ್ ಮಾಡೆಲ್ ಬಗ್ಗೆ ಮಾಹಿತಿ ಪಡಿದುಕೊಂಡಿರೋ ಸಿಎಂ, ರಾಜ್ಯದಲ್ಲೂ ಎಲೆಕ್ಷನ್ ವೇಳೆ ಇದೇ ಪ್ಲ್ಯಾನ್ ಮಾಡೋದು ಉತ್ತಮ ಅನ್ನೋ ತೀರ್ಮಾನಕ್ಕೆ ಬಂದಿದ್ದಾರಂತೆ.

    ಜೆಡಿಎಸ್, ಬಿಜೆಪಿ ಭರವಸೆಯನ್ನೇ ಬಂಡವಾಳ ಮಾಡಿಕೊಳ್ಳೋಕೆ ಹೊರಟ ಸಿಎಂ, 18 ಸಾವಿರ ಕೋಟಿ ರೂಪಾಯಿ ಆದಾಯವೇ ಬೇಡ ಅನ್ನೋಕೆ ಹೊರಟಿದ್ದಾರೆ. ಇಷ್ಟರ ನಡುವೆ ಲಿಕ್ಕರ್ ಬ್ಯಾನ್ ಆದ್ರೆ ಏನು ಕೊಡೋದು ಅನ್ನೋ ಪ್ರಶ್ನೆ ಬಂದಾಗ ನೀರಾ ಅದರಲ್ಲೂ ಟೆಟ್ರಾ ಪ್ಯಾಕ್‍ಗಳ ಮೂಲಕ ಕೊಡೋಕೂ ಕೂಡ ಪ್ಲ್ಯಾನ್ ಸಿದ್ದ ಮಾಡಿಕೊಳ್ಳಲು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಲಾಗ್ತಿದೆ.

     

  • ದೇವಯ್ಯ ಪಾರ್ಕ್ ಬಳಿ ಫ್ಲೈಓವರ್ ಮೇಲೆ ಕಾರುಗಳ ಡಿಕ್ಕಿ- ಕೆಳಗೆ ಬೀಳಬೇಕಿದ್ದ ಕಾರು ಜಸ್ಟ್ ಮಿಸ್

    ದೇವಯ್ಯ ಪಾರ್ಕ್ ಬಳಿ ಫ್ಲೈಓವರ್ ಮೇಲೆ ಕಾರುಗಳ ಡಿಕ್ಕಿ- ಕೆಳಗೆ ಬೀಳಬೇಕಿದ್ದ ಕಾರು ಜಸ್ಟ್ ಮಿಸ್

    ಬೆಂಗಳೂರು: ಮಲ್ಲೇಶ್ವರಂ ನ ದೇವಯ್ಯ ಪಾರ್ಕ್ ಬಳಿಯ ಫ್ಲೈಓವರ್ ಮೇಲೆ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಫ್ಲೈಓವರ್ ಕೆಳಗೆ ಬೀಳಬೇಕಿದ್ದ ಕಾರು ಸ್ವಲ್ಪದರಲ್ಲೇ ಪಾರಾಗಿದೆ.

    ಫ್ಲೈಓವರ್ ಮೇಲೆ ಬರುತ್ತಿದ್ದ ಫೋರ್ಡ್ ಫಿಗೊ ಕಾರಿಗೆ ಹಿಂಬದಿಯಿಂದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಿಂದ ಕೆಳಗಿಳಿದು ಚಾಲಕ ಹೊರಗೆ ಓಡಿ ಬಂದಿದ್ದಾರೆ. ಇದರಿಂದ ಬಾರಿ ಅನಾಹುತ ತಪ್ಪಿದೆ. ಕಾರು ಫ್ಲೈಓವರ್ ಕೆಳಗೆ ಬೀಳದೆ ತಡೆಗೋಡೆಯ ಮೇಲೆ ಸಿಲುಕಿಕೊಂಡಿದೆ.

    ಘಟನೆ ನಡೆದ ಸ್ಥಳಕ್ಕೆ ಮಲ್ಲೇಶ್ವರಂ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಕಾರನ್ನು ತೆರವುಗೊಳಿಸಿದ್ದಾರೆ. ಇತ್ತ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರಿನ ಚಾಲಕ ಪರಾರಿಯಾಗಿದ್ದಾರೆ. ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಯಶವಂತಪುರ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಕ್ಯಾಂಟರ್- ಚಾಲಕನಿಗೆ ಗಂಭೀರ ಗಾಯ