ಬೆಂಗಳೂರು: ಆಟೋ ಚಾಲಕರು ತಪ್ಪದೇ ನೋಡಲೇಬೇಕಾದ ಸುದ್ದಿ. ಸಿಲಿಖಾನ್ ಸಿಟಿ ಸೇರಿದಂತೆ ರಾಜ್ಯದೆಲ್ಲೆಡೆ ಆಟೋಗಳ ಚಾಲಕರು ತಮ್ಮ ಡಿಎಲ್‍ಗೆ ಆಧಾರ್ ಕಾರ್ಡ್ ಜೋಡಣೆ ಮಾಡಿಸಬೇಕು. ಇದು ಕಡ್ಡಾಯವಾಗಿದ್ದು, ಇಂಥದ್ದೊಂದು ನಿಯಮವನ್ನು ಶೀಘ್ರವೇ ಸಾರಿಗೆ ಇಲಾಖೆ ಜಾರಿಗೆ ತರಲಿದೆ.
ಅದಕ್ಕಾಗಿ ಹೊಸ ಸಾಫ್ಟ್ ವೇರ್ ಅನ್ನು ಸಿದ್ಧಪಡಿಸಲಾಗುತ್ತಿದೆ. ಮುಂದಿನ ವರ್ಷದ ಜನವರಿಯ ಅಂತ್ಯದ ಒಳಗೆ ಎಲ್ಲಾ ಆಟೋ ಚಾಲಕರು ಆಧಾರ್ ಕಾರ್ಡ್‍ನ್ನು ತಮ್ಮ ಡಿಎಲ್‍ಗೆ ಲಿಂಕ್ ಮಾಡಿಸಲೇಬೇಕು. ಲಿಂಕ್ ಮಾಡಿಸದೇ ಇದ್ದರೆ ಅವರ ಲೈಸನ್ಸ್ ಅನ್ನು ರದ್ದುಗೊಳಿಸಲಾಗುತ್ತದೆ ಎಂದು ಸಾರಿಗೆ ಆಯುಕ್ತ ದಯಾನಂದ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಂದೇ ಪರವಾನಗಿ ಪಡೆದು ಹಲವು ಆಟೋಗಳನ್ನು ಓಡಿಸುತ್ತಿರೋದು ಆರ್ ಟಿಒ ಇಲಾಖೆಗೆ ಮಾಹಿತಿ ಬಂದಿದೆ. ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ಥುತ ಬೆಂಗಳೂರಿನಲ್ಲಿ ಸದ್ಯ 1 ಲಕ್ಷ 25 ಸಾವಿರ ಆಟೋಗಳಿಗೆ ಮಾತ್ರ ಪರವಾನಗಿ ನೀಡಲಾಗಿದೆ. ಅನಧಿಕೃತವಾಗಿ 50 ಸಾವಿರಕ್ಕೂ ಹೆಚ್ಚಿನ ಆಟೋಗಳು ಬೆಂಗಳೂರಲ್ಲಿ ಓಡಾಡುತ್ತಿವೆ ಎಂಬ ಮಾಹಿತಿ ಇದೆ. ಹಾಗಾಗಿ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದರಿಂದ ಅನಧಿಕೃತ ಆಟೋಗಳಿಗೆ ಕಡಿವಾಣ ಬೀಳೋದು ಗ್ಯಾರಂಟಿ ಅನ್ನೋದು ಆರ್ ಟಿಒ ಅಧಿಕಾರಿಗಳ ಮಾತಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರ ಪರಮಾಪ್ತ, ಕಾರ್ಪೋರೇಟರ್ ನಾಗಭೂಷಣ್ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ನಡೆದಿದೆ.
ಮೈಸೂರು ಕಾರ್ಪೋರೇಟರ್ ನಾಗಭೂಷಣ್ ಪುತ್ರಿ ವನಿತಾ ಆತ್ಮಹತ್ಯೆ ಮಾಡಿಕೊಂಡಿರುವ ನವವಿವಾಹಿತೆ. ಆರು ತಿಂಗಳ ಹಿಂದೆಯಷ್ಟೇ ತಮಿಳುನಾಡು ಮೂಲದ ಟೆಕ್ಕಿ ವಸಂತ್ ಎಂಬವರ ಜೊತೆ ಮದ್ವೆಯಾಗಿದ್ದು, ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್ 25ನೇ ಕ್ರಾಸ್‍ನ ತನ್ನ ಗಂಡನ ಮನೆಯಲ್ಲಿ ವಾಸವಾಗಿದ್ದರು. ಆದರೆ ಗಂಡನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವನಿತಾ ಮತ್ತು ವಸಂತ್ ದಂಪತಿ ಅನ್ಯೋನ್ಯವಾಗಿದ್ದರು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮೃತ ವನಿತಾ ಸಾಯುವ ಮುಂಚೆ 4 ಪುಟದ ಡೆತ್‍ನೋಟ್ ಬರೆದಿದ್ದಾರೆ. ನನ್ನ ಅತ್ತೆ ಗಾಯತ್ರಿ ಪ್ರತಿನಿತ್ಯ ಮನೆಯಲ್ಲಿ ಕಿರುಕುಳ ನೀಡುತಿದ್ದಾರೆ. ಅಪ್ಪನ ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಾರೆ. ಅಷ್ಟೇ ಅಲ್ಲದೇ ಸರಿಯಾಗಿ ಊಟ ತಿಂಡಿಯನ್ನು ಸಹ ನೀಡದೆ ಹಿಂಸೆ ನೀಡುತ್ತಿದ್ದಾರೆ. ಇದರಿಂದ ನಾನು ಬೇಸತ್ತು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವನಿತಾ ಡೆತ್ ನೋಟ್‍ನಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಸಂಜೆ ಸುಮಾರು 6.30 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ರಾತ್ರಿ 8 ಗಂಟೆಗೆ ಪತಿ ವಸಂತ್ ಮನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಗೊತ್ತಾಗಿದೆ. ನಂತರ ಹೆಚ್‍ಎಸ್‍ಆರ್ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಹೆಚ್‍ಎಸ್‍ಆರ್ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ದೇಹವನ್ನು ಸೆಂಟ್ ಜಾನ್ಸ್ ಅಸ್ಪತ್ರೆಗೆ ರವಾನಿಸಲಾಗಿದೆ. ಸದ್ಯಕ್ಕೆ ಪೊಲೀಸರು ಎಫ್‍ಐಆರ್ ದಾಖಸಿಕೊಂಡಿದ್ದು, ಮೃತ ವನಿತಾಳ ಗಂಡ ವಸಂತ್ ಮತ್ತು ಅತ್ತೆ ಗಾಯತ್ರಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ವರ್ಷದ ಕೊನೆಯಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಸಾಲು ಸಾಲು ಸಿನಿಮಾಗಳು ಪ್ರೇಕ್ಷಕರನ್ನ ಮೋಡಿ ಮಾಡಲು ಬರುತ್ತಿವೆ. ಅದರಲ್ಲೂ ಈ ವಾರ ತೆರೆಕಾಣುತ್ತಿರುವ ಎರಡು ಸಿನಿಮಾಗಳಿಗಾಗಿ ಪ್ರೇಕ್ಷಕರು ಕಾದು ಕುಳಿತ್ತಿದ್ದರು.
2017ರ ಕೊನೆಯ ತಿಂಗಳಲ್ಲಿ ಸ್ಯಾಂಡಲ್‍ವುಡ್ ಮಸ್ತ್ ಮನೋರಂಜನೆ ನೀಡಲು ಸಜ್ಜಾಗಿದ್ದು, ಈ ವಾರ `ಮಫ್ತಿ’, `ಗೌಡ್ರು ಹೋಟೆಲ್’, `ಮಂತ್ರಂ’, `ಡ್ರೀಮ್ ಗರ್ಲ್’ ಸಿನಿಮಾಗಳು ತೆರೆಕಂಡಿವೆ.
ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಮಫ್ತಿ ರಾಜ್ಯಾದ್ಯಂತ ಸುಮಾರು 400ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಪ್ರದರ್ಶನಗೊಳ್ತಿದೆ. ಸೆಂಚುರಿ ಸ್ಟಾರ್ ಶಿವಣ್ಣ ಮತ್ತು ಶ್ರೀಮುರುಳಿ ಅಭಿನಯಿಸಿರುವ ಚಿತ್ರದ ಟ್ರೇಲರ್ ಈಗಾಗಲೇ ಯೂಟ್ಯೂಬ್‍ನಲ್ಲಿ ಹವಾ ಎಬ್ಬಿಸಿದೆ. ಮಫ್ತಿ ಮೂಲಕ ನರ್ತನ್ ತಮ್ಮ ಮೊದಲ ಸಿನಿಮಾದಲ್ಲೇ ನಿರ್ದೇಶನದ ಕೌಶಲ್ಯ ತೋರಿಸಿದ್ದಾರೆ. ಖ್ಯಾತ ನಿರ್ಮಾಪಕ ಜೋಡಿ ಜಯಣ್ಣ, ಭೋಗೇಂದ್ರ ನಿರ್ಮಾಣದೊಂದಿಗೆ ಕುಂದಾಪುರದ ಸಕಲಕಲಾವಲ್ಲಭ ರವಿ ಬಸ್ರೂರ್ ಅವರ ಸಂಗೀತದಲ್ಲಿ ಚಿತ್ರ ಮೂಡಿಬಂದಿದೆ.
ಮತ್ತೊಂದು ಸಿನಿಮಾ `ಗೌಡ್ರು ಹೋಟೆಲ್’ ತೆರೆ ಕಂಡಿದ್ದು, ಮಾಲಿವುಡ್‍ನಲ್ಲಿ ಸೂಪರ್ ಹಿಟ್ ಆಗಿದ್ದ `ಉಸ್ತಾದ್ ಹೋಟೆಲ್’ ಸಿನಿಮಾವನ್ನು ಕನ್ನಡಕ್ಕೆ `ಗೌಡ್ರು ಹೋಟೆಲ್’ ಹೆಸರಿನಲ್ಲಿ ಖ್ಯಾತ ನಿರ್ದೇಶಕ ಪಿ.ಕುಮಾರ್ ತಂದಿದ್ದಾರೆ. ಎಮಿನೆಂಟ್ ಮೂವೀ ಮೇಕರ್ಸ್ ನಿರ್ಮಾಣದಲ್ಲಿ `ಗೌಡ್ರು ಹೋಟೆಲ್’ ಅದ್ಧೂರಿಯಾಗಿ ನಿರ್ಮಾಣವಾಗಿದೆ. ಕಾಲಿವುಡ್‍ನ ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ಹಾಡುಗಳಿಗೆ ತಂತಿ ಮೀಟಿದ್ದಾರೆ. ಈ ಸಿನಿಮಾ ಒಂದು ತಾತ-ಮೊಮ್ಮಗನ ಬಾಂಧವ್ಯದ ಕಥೆಯಾಗಿದ್ದು, ಪ್ರಕಾಶ್ ರೈ ತಾತನಾಗಿ, ಲಂಡನ್‍ನಲ್ಲಿ ಎಂಜಿನಿಯರಿಂಗ್ ಮುಗಿಸಿರುವ ರಚನ್ ಚಂದ್ರ ಮೊಮ್ಮಗನಾಗಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಮೊಮ್ಮಗನಾಗಿ ಕ್ಯಾಮೆರಾ ಎದುರಿಸಿದ್ದು, ರಚನ್‍ಗೆ ಜೋಡಿಯಾಗಿ ನಟಿ ವೇದಿಕಾ ಸಾಥ್ ನೀಡಿದ್ದಾರೆ.
ಮೂರನೇ ಸಿನಿಮಾ `ಡ್ರೀಮ್ ಗರ್ಲ್’. ರಿಂಗ್ ರೋಡ್ ಶುಭ ಸಿನಿಮಾದ ನಂತರ ಪಟ್ರೆ ಅಜಿತ್ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಅಮೃತಾ ರಾವ್ ಮತ್ತು ದೀಪಿಕಾ ದಾಸ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಲಕ್ಷಣ್ ನಾಯಕ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಗಂಧರ್ವ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಡ್ರೀಮ್ ಗರ್ಲ್’ ಲವ್ ಸಸ್ಪೆನ್ಸ್ ಕಥಾಹಂದರ ಹೊಂದಿದೆ.
ನಾಲ್ಕನೇ ಸಿನಿಮಾ `ಮಂತ್ರಂ’. ಟ್ರೇಲರ್‍ನಿಂದಲೇ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದ ಸಿನಿಮಾ ಇದಾಗಿದ್ದು, ನೈಜ ಘಟನೆಯ ಆಧಾರವಿಟ್ಟುಕೊಂಡು ಕಥೆಯನ್ನು ಎಣೆಯಲಾಗಿದೆ. ಎಸ್.ಎಸ್. ಸಜ್ಜನ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಮಣಿಶೆಟ್ಟಿ ಹಾಗೂ ಪಲ್ಲವಿ ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ. ರಷೀದ್ ಖಾನ್ ಸಂಗೀತ ನಿರ್ದೇಶನ ಮಾಡಿದ್ದು, ರಾಜಶೇಖರ್ ಛಾಯಾಗ್ರಹಣ ಮಾಡಿದ್ದಾರೆ.
ಬೆಂಗಳೂರು: ಸ್ಯಾಂಡಲ್ ವುಡ್ ನ ನಟಿ, ನಟ ಯಶ್‍ನ ಮುದ್ದಿನ ಮಡದಿ ರಾಧಿಕಾ ಪಂಡಿತ್ ಮದುವೆ ನಂತರ ಮೊದಲ ಬಾರಿಗೆ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಧಿಕಾ ಪಂಡಿತ್ ಜೊತೆ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ನಟನಾಗಿ ಅಭಿನಯಿಸುತ್ತಿದ್ದಾರೆ. ಇಂದು ಸಿನಿಮಾ ಮುಹೂರ್ತ ನಡೆಯಲಿದ್ದು, ವಿ. ಪ್ರಿಯಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಜೊತೆ ಸಹಾಯಕರಾಗಿ ಕೆಲಸ ಮಾಡಿರುವ ಪ್ರಿಯಾ ಈಗಾಗಲೇ ಮೂರು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿ ಬಂದಿದ್ದಾರೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ತಾರಾ, ಸುಚೇಂದ್ರ ಪ್ರಸಾದ್ ಕೂಡ ನಟಿಸುತ್ತಿದ್ದು, ಸಿನಿಮಾದಲ್ಲಿ ಪ್ರೀತಂ ಜಯರಾಂ ಅವರ ಛಾಯಾಗ್ರಹಣ ಇರುತ್ತದೆ. ಡಿಸೆಂಬರ್ 11 ರಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ.
ರಾಧಿಕಾ ಪಂಡಿತ್ ಅವರ ಈ ಸಿನಿಮಾ ಮಹಿಳಾ ಪ್ರಧಾನ ಚಿತ್ರವಾಗಿಲ್ಲ. ಅವರ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಹೀರೋ ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆಯಂತೆ. ಚಿತ್ರದ ಟೈಟಲ್ ಇನ್ನು ಬಹಿರಂಗ ಆಗಿಲ್ಲ. ರಾಧಿಕಾ ಪಂಡಿತ್ ಮದುವೆಯ ಸಂದರ್ಭದಲ್ಲಿ `ಸಂತು ಸ್ಟ್ರೈಟ್ ಫಾರ್ವರ್ಡ್’ ಚಿತ್ರದಲ್ಲಿ ನಟಿಸಿದ್ದರು. ಆದರೆ ಈಗ ವರ್ಷದ ಬಳಿಕ ಮತ್ತೆ ರಾಧಿಕಾ ಪಂಡಿತ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಕಥೆ ತುಂಬ ಇಷ್ಟ ಆಗಿದ್ದು, ರಾಧಿಕಾ ಈ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ದರ್ಪ ಮೀತಿ ಮೀರಿ ಹೋಗುತ್ತಿದೆ. ಇತ್ತೀಚೆಗಷ್ಟೆ ಹೋಟೆಲ್ ಮಾಲೀಕನ ಮೇಲೆ ಎಸಿಪಿ ದರ್ಪ ತೋರಿಸಿದ್ದರು. ಈಗ ಮತ್ತೆ ಟ್ರಾಫಿಕ್ ಪೊಲೀಸರು ಸಿನಿಮಾ ನಟ ಕಂ ಕ್ಯಾಬ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಪೊಲೀಸರಿಂದ ದೌರ್ಜನ್ಯ ಹಾಗೂ ಹಲ್ಲೆಗೊಳಗಾದ ನಟನೇ ಸಂತೋಷ್. ಇವರು ನಗರದ ಚಿಕ್ಕಬಾಣವಾರ ನಿವಾಸಿಯಾಗಿದ್ದು, ಪಾರ್ಟ್ ಟೈಂನಲ್ಲಿ ಕೆಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಕನ್ನಡದ ಮುಗಿಲು, ದಿ ಲೋಕಲ್ ಹಾಗೂ ನಟ ಪ್ರಜ್ವಲ್ ದೇವರಾಜ್ ಅಭಿನಯದ ಮಾದ ಮತ್ತು ಮಾನಸಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇವರು ನಟನೆಯ ಜೊತೆಗೆ ಉಬರ್ ಕ್ಯಾಬ್ ಕೂಡ ಓಡಿಸುತ್ತಿದ್ದರು. ಕಳೆದ ನವೆಂಬರ್ 3 ರಂದು ಐಟಿಪಿಎಲ್ ನ ಜಿ.ಆರ್.ಟೆಕ್ ಪಾರ್ಕ್ ಬಳಿ ಪ್ಯಾಸೇಂಜರ್ ಒಬ್ಬರು ಉಬರ್ ಬುಕ್ ಮಾಡಿದ್ದರು. ಅವರನ್ನು ಪಿಕ್ ಮಾಡಲು ಬಂದಾಗ ರೋಡಿನಲ್ಲಿ ನಿಲ್ಲಿಸಿದ್ದ ಎಂಬ ಒಂದೇ ಕಾರಣಕ್ಕೆ ವೈಟ್ ಫೀಲ್ಡ್ ಕಾನ್ಸ್ ಟೇಬಲ್ ಸಂತೋಷ್ ನಾಯಕ್ ಕಾರು ತೆಗೆಯುವಂತೆ ಗಲಾಟೆ ಮಾಡಿದ್ದು, ಕಾರ್ ಕೀ ಕಿತ್ತುಕೊಂಡು ನಂತರ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ವೈಟ್ ಫೀಲ್ಡ್ ಟ್ರಾಫಿಕ್ ಸ್ಟೇಷನ್ ಗೆ ಕರೆದುಕೊಂಡು ಹೋಗಿ ಕಾನ್ಸ್ ಟೇಬಲ್ ಸಂತೋಷ್ ನಾಯಕ್, ಕಿರಣ್ ಹಾಗೂ ಇತರೆ ಸಿಬ್ಬಂದಿಗಳು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಅಲ್ಲದೇ ಸಂತೋಷ್ ಗೆ ಬೂಟ್ ನೆಕ್ಕಿಸಿ, ಬಾಯಿಗೆ ಬಟ್ಟೆ ತುರುಕಿ, ಮೈಯೆಲ್ಲಾ ಬಾಸುಂಡೆ ಬರೋವರೆಗೂ ಲಾಠಿ ಏಟು ಕೊಟ್ಟಿದ್ದಾರೆ. ನಂತರ ಕಾಡುಗೋಡಿ ಪೊಲೀಸ್ ಸ್ಟೇಷನ್ ಗೆ ಸಂತೋಷ್‍ನನ್ನು ಕರೆದುಕೊಂಡು ಹೋಗಿ ಅಲ್ಲಿ ಕೂಡ ಹಲ್ಲೆ ನಡೆಸಿ ಸಂಜೆ 5 ರಿಂದ ರಾತ್ರಿ 11 ಗಂಟೆವರೆಗೂ ಹೊಡೆದಿದ್ದಾರೆ. ಸಂತೋಷ್ ಯಾರಿಗಾದರೂ ಹೇಳಿದ್ದರೆ ಕೊಲೆ ಕೇಸ್, ರೇಪ್ ಕೇಸ್ ಎಲ್ಲಾ ಬುಕ್ ಮಾಡುತ್ತೀವಿ ಎಂದು ಹೆದರಿಸಿ ಖಾಕಿಗಳು ಕಳಿಸಿದ್ದಾರೆ.
ಸದ್ಯಕ್ಕೆ ನೊಂದ ನಟ ಸಂತೋಷ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕ್ಷುಲಕ ಕಾರಣಕ್ಕೆ ಹಲ್ಲೆ ಮಾಡಿದ ಪೊಲೀಸರ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರು: ಸ್ಯಾಂಡಲ್‍ವುಡ್ ನ `ಬುಲ್ ಬುಲ್’ ಸಿನಿಮಾದಲ್ಲಿ ಮೋಡಿ ಮಾಡಿದ ಜೋಡಿಗಳು ಮತ್ತೆ ತೆರೆ ಮೇಲೆ ಒಂದಾಗುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಬುಲ್ ಬುಲ್ ಸಿನಿಮಾದ ಮೂಲಕ ಕನ್ನಡ ಸಿನಿರಸಿಕರ ಮನಸ್ಸು ಕದ್ದಿರುವ ಡಿಂಪಲ್ ಕ್ವೀನ್ ರಚಿತಾ ರಾಮ್, ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ಸಿನಿಮಾದಲ್ಲಿಯೇ ಸ್ಟಾರ್ ನಟರ ಜೊತೆ ಅಭಿನಯಿಸಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. `ಬುಲ್ ಬುಲ್’, `ಅಂಬರೀಶ’, `ಜಗ್ಗುದಾದ’ ಚಿತ್ರಗಳಲ್ಲಿ ದರ್ಶನ್ ಜೊತೆ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೇ ರನ್ನ ಸಿನಿಮಾದಲ್ಲಿ ಕಿಚ್ಚನ ಜೊತೆ ಅಭಿನಯಿಸಿದ್ದಾರೆ.
ದರ್ಶನ್ ಹಾಗೂ ರಚಿತಾ ಎರಡು ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿದ್ದರು. ಅಭಿಮಾನಿಗಳು ಕೂಡ ಇವರಿಬ್ಬರ ಜೋಡಿಯನ್ನು ಮೆಚ್ಚಿಕೊಂಡಿದ್ದರು. ಈಗ ಅದೇ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಲು ಸಜ್ಜಾಗಿದೆ.
ದರ್ಶನ್ ಅಭಿನಯದ 51ನೇ ಚಿತ್ರಕ್ಕೆ ರಚಿತಾ ಅವರನ್ನೇ ನಾಯಕಿಯಾಗಿ ಚಿತ್ರತಂಡ ಆಯ್ಕೆ ಮಾಡಿದೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹಬ್ಬಿದೆ. ಆದ್ದರಿಂದ ತೆರೆ ಮೇಲೆ ಮತ್ತೆ ದಚ್ಚು-ರಚ್ಚು ಇಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
`ಕುರುಕ್ಷೇತ್ರ’ ದ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಇನ್ನು ಕೆಲವು ದಿನಗಳಲ್ಲಿ ಮುನಿರತ್ನ ಚಿತ್ರತಂಡ ಶೂಟಿಂಗ್ ಮುಗಿಸಲಿದ್ದಾರೆ. ನಂತರ ಡಿಸೆಂಬರ್ ಪ್ರಾರಂಭದಲ್ಲಿಯೇ ದರ್ಶನ್‍ನ 51 ನೇ ಚಿತ್ರ ಸೆಟ್ಟೇರಲಿದೆ. ದರ್ಶನ್ ನ 51ನೇ ಚಿತ್ರವನ್ನು ಪಿ.ಕುಮಾರ್ ನಿರ್ದೇಶನ ಮಾಡಲಿದ್ದು, ಪಕ್ಕಾ ಕಮರ್ಶಿಯಲ್ ಸಿನಿಮಾವಾಗಿದೆ. ಈಗಾಗಲೇ `ಜೈಲಲಿತಾ’, `ವಿಷ್ಣುವರ್ಧನ’ ಸಿನಿಮಾಗೆ ಆಕ್ಷನ್ ಕಟ್ ಹೇಳಿರುವ ಪಿ.ಕುಮಾರ್ ದರ್ಶನ್ ಗಾಗಿ ಕಮರ್ಶಿಯಲ್ ಸಿನಿಮಾದ ತಯಾರಿ ಮಾಡಿಕೊಂಡಿದ್ದಾರೆ.
ಆದರೆ ನಿರ್ಮಾಪಕರು ಮಾತ್ರ ಸಿನಿಮಾದ “ಪ್ರೀ ಪ್ರೊಡಕ್ಷನ್ ಕೆಲಸ ಶುರುವಾಗಿದೆ. ನಾಯಕಿ ಆಯ್ಕೆ ಕೆಲಸ ನಡೆಯುತ್ತಿದೆ, ಇನ್ನೂ ಫೈನಲ್ ಮಾಡಿಲ್ಲ” ಎಂದು ಹೇಳಿದ್ದಾರೆ. ಆದರೆ ಅಭಿಮಾನಿಗಳಿಗೆ ಮತ್ತೆ ಈ ಜೋಡಿ ಜೊತೆಯಾಗಿ ತೆರೆ ಮೇಲೆ ಬಂದರೆ ಸಂತಸವಾಗುವುದು ಖಂಡಿತ.
ಬೆಂಗಳೂರು: ಸ್ಯಾಂಡಲ್‍ವುಡ್‍ನ ಆ್ಯಕ್ಷನ್ ಕಿಂಗ್ ನಟ ಧ್ರುವ ಸರ್ಜಾ ಹೊಸ ಸವಾಲನ್ನು ಸ್ವೀಕರಿಸಿ ಎದುರಿಸಲು ಸಿದ್ಧರಾಗಿದ್ದಾರೆ.
`ಭರ್ಜರಿ’ ಸಿನಿಮಾದ ನಂತರ ಧ್ರುವ ಯಾವ ಸಿನಿಮಾ ಮಾಡುತ್ತಾರೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಂದಕಿಶೋರ್ ನಿರ್ದೇಶನ ಮಾಡುತ್ತಿರುವ `ಪೊಗರು’ ಸಿನಿಮಾಕ್ಕೆ ಧ್ರುವ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಸದ್ಯಕ್ಕೆ ಪೊಗರು ಚಿತ್ರೀಕರಣಕ್ಕೆ ಸಜ್ಜಾಗುತ್ತಿರುವ ನಿರ್ದೇಶಕರು ನಟನಿಗೆ ಒಂದು ಹೊಸ ಚಾಲೆಂಜ್ ಕೊಟ್ಟಿದ್ದಾರೆ. ಧ್ರುವ ಕೆಲಸದ ವಿಚಾರ ಬಂದರೆ ತುಂಬಾ ಶ್ರದ್ಧೆಯಿಂದ ಇರುತ್ತಾರೆ. ಚಿತ್ರದ ಪಾತ್ರಕ್ಕಾಗಿ 30 ಕೆಜಿ ತೂಕ ಇಳಿಸಿಕೊಳ್ಳಲು ನಿರ್ದೇಶಕರು ಸೂಚಿಸಿದ್ದರು. ಅದಕ್ಕಾಗಿ ಧ್ರುವ ವರ್ಕ್ ಔಟ್ ಮಾಡಿ ಬರೋಬ್ಬರಿ 26 ಕೆ.ಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ.
ಪೊಗರು ಸಿನಿಮಾದ ಫಸ್ಟ್ ಆಫ್ ನಲ್ಲಿ ಧ್ರುವ 8ನೇ ತರಗತಿ 12 ವರ್ಷದ ಬಾಲಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ದರಿಂದ ಬಾಲಕನಂತೆ ಧ್ರುವ ಲುಕ್ ಬದಲಾಯಿಸಲು ನಿರ್ದೇಶಕ ನಂದಕಿಶೋರ್ ಮುಂದಾಗಿದ್ದಾರೆ. ಆದ್ದರಿಂದ ನಿರ್ದೇಶಕರು 30 ಕೆ.ಜಿ ತೂಕ ಕಡಿಮೆ ಮಾಡಿಕೊಳ್ಳಿ ಎಂದಾಕ್ಷಣ ಯಾವುದೇ ವಿರೋಧವಿಲ್ಲದೆ ಒಪ್ಪಿಗೆ ಸೂಚಿಸಿದ್ದು, ಈಗಾಗಲೇ 26 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ.
ಧ್ರುವ ಇನ್ನು ಕೆಲವೇ ದಿನಗಳಲ್ಲಿ ನಾಲ್ಕು ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ. ನಂತರ ತೂಕ ಕಡಿಮೆಯಾದ ತಕ್ಷಣ ಚಿತ್ರೀಕರಣವನ್ನು ಪ್ರಾರಂಭ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಬೆಂಗಳೂರು: ನನ್ನ ಬದುಕು ಉಪ್ಪಿಟ್ಟು ಥರ ಆಗಿದೆ, ಈ ದೇಶದಲ್ಲಿ ರಾಜಕೀಯ ಮತ್ತು ಪ್ರಜಾಕೀಯ ಅನ್ನೊದು ಇರಬಾರದು ಎಂದು ನಟ ಉಪೇಂದ್ರ ಹೇಳಿದ್ದಾರೆ.
ನಗರದ ಜೈನ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವಾಗಲೂ ಭವಿಷ್ಯದಲ್ಲಿ ಗುರಿ ಹೇಗೆ ಇಡಬೇಕು ಅಂದರೆ ಪ್ರಪಂಚವನ್ನೇ ಸರಿ ಮಾಡುತ್ತೀನಿ ಎನ್ನುವ ರೀತಿ ಗುರಿ ಇಡಬೇಕು. ಗುರಿ ಎನ್ನುವುದನ್ನ ನಮಗೋಸ್ಕರ ಇಡಬಾರದು ಸಮಾಜಕ್ಕಾಗಿ ಇಡಬೇಕು ಎಂದು ಹೇಳಿದರು.
ಇಡೀ ಪ್ರಪಂಚದಲ್ಲಿ ಎಲ್ಲರನ್ನು ಖುಷಿಯಾಗಿಡಬೇಕು ಎನ್ನುವುದು ನನ್ನ ಗುರಿ. ಇದಕ್ಕಾಗಿ ಫೇಮಸ್ ಆಗಬೇಕೆಂದು ಸಿನಿಮಾಕ್ಕೆ ಕಾಲಿಟ್ಟೆ, ಆದರೆ ನನ್ನ ಬದುಕು ಉಪ್ಪಿಟ್ಟು ತರ ಆಗಿದೆ. ರಾಜಕೀಯ ಎನ್ನುವುದು ಈ ದೇಶದಲ್ಲಿ ಇರಬಾರದು, ಪ್ರಜಾಕೀಯ ಅನ್ನೊದು ಬರಬಾರದು. ವಿಧಾನ ಸೌಧ, ವಿಕಾಸ ಸೌಧ ಮಕ್ಕಳ ಶಾಲೆಯಾಗಬೇಕು ಎಂದು ತಿಳಿಸಿದರು.
ರಾಜರ ಆಡಳಿತದಿಂದ ಹೊರ ಬಂದು ದಶಕಗಳು ಕಳೆದಿದೆ. ಸತ್ ಪ್ರಜೆಗಳೇ ಏಳಿ ಎದ್ದೇಳಿ, ಪ್ರಜಾಕೀಯ ಆ್ಯಪ್ ಬಿಡುಗಡೆ ಆಗಿದೆ, ಅದನ್ನು ಡೌನ್ ಲೋಡ್ ಮಾಡಿಕೊಂಡು ಬಳಸಿರಿ. ನಾಯಕರು ನಾಯಕರಲ್ಲ ಅವರು ಕಾರ್ಮಿಕರು, ರಾಜಕೀಯ ವ್ಯಾಪಾರ, ಕೆಸರಾಟ ನಮಗೆ ಬೇಡ, ರಾಜಕೀಯದಲ್ಲಿ ಬದಲಾವಣೆ ಬೇಕು, ಅದನ್ನು ತರೋಣ ಎಂದು ಸೂಪರ್ ಸಿನಿಮಾದ ಡೈಲಾಗ್ ಹೊಡೆದು ವಿದ್ಯಾರ್ಥಿಗಳನ್ನು ರಂಜಿಸಿದ್ದಾರೆ.
ನಾನು ಬದಲಾವಣೆ ತರಲು ಹೊರಟಿದ್ದೇನೆ. ನಾನು ಸತ್ತರೂ ಏನಾದರು ಸಾಧಿಸಿದ್ದೇನೆ ಎಂಬ ತೃಪ್ತಿ ನನಗೆ ಇರುತ್ತದೆ ಎಂದು ಉಪೇಂದ್ರ ಹೇಳಿದರು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಟ ಉಪೇಂದ್ರ ಸೇರಿದಂತೆ ಕೆ.ಎಸ್.ಭಗವಾನ್, ರ್ಯಾಪರ್ ಅಲೋಕ್, ಸಾಹಿತಿ ಬೈರಮಂಗಲ ರಾಮೇಗೌಡರು ಪಾಲ್ಗೊಂಡಿದ್ದರು.
ಬೆಂಗಳೂರು: ಬಿಗ್ ಬಾಸ್ ಸೀಸನ್ 4ರ ವಿನ್ನರ್ ಒಳ್ಳೇ ಹುಡುಗ ಪ್ರಥಮ್ ಗೆ ಕಂಕಣ ಭಾಗ್ಯ ಕೂಡಿಬಂದಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧವಾಗಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರಥಮ್, ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇದೆ. ಆದ್ದರಿಂದ ಮದುವೆ ಆಗಲು ನಿರ್ಧರಿಸಿದ್ದೇವೆ. ಮನೆ ಅವರು ಒಪ್ಪಿದ್ದಾರೆ. ಆದರೆ ನನ್ನ ಒಂದು ಅಥವಾ ಎರಡು ಸಿನಿಮಾಗಳು ಬಿಡುಗಡೆಯಾದ ಮೇಲೆ 2-3 ವರ್ಷ ಬಿಟ್ಟು ಮದುವೆ ಆಗುತ್ತೇನೆ. ಸದ್ಯಕ್ಕೆ ನಾನು ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ಹುಡುಗಿ ಬಗ್ಗೆ ಕೇಳಿದಾಗ, ಹುಡುಗಿ ಹೆಸರು ಸದ್ಯಕ್ಕೆ ಬೇಡ. ಅವರಿಗೆ ಕಸಿವಿಸಿ ಆಗುತ್ತದೆ ಎಂದು ಹೇಳಿದ್ದಾರೆ. ಆದರೆ ಮೈಸೂರು ಮೂಲದ ಎಂಜಿನಿಯರ್ ಕೈ ಹಿಡಿಯಲಿದ್ದಾರೆ ಎಂದು ತಿಳಿದುಬಂದಿದೆ. ಧನುರ್ಮಾಸ ಆದ ನಂತರ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗಿದೆ.
ಬೆಂಗಳೂರು: ಬಿಜೆಪಿ ಮಾಧ್ಯಮ ಸಹಸಂಚಾಲಕ ವಿನಯ್ ಅವರ ಪತ್ನಿ ಶೋಭಾ 3 ಪುಟಗಳ ಪತ್ರ ಬರೆದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪರನ್ನು ಪ್ರಶ್ನೆ ಮಾಡಿದ್ದಾರೆ.
ಯಡಿಯೂರಪ್ಪನವರೇ ಕರುಣೆ ಇಲ್ವಾ? ಹೆಣ್ಣು ಮಕ್ಕಳ ಶಾಪ ಒಳ್ಳೆಯದಲ್ಲ. ನಿಮಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಸೊಸೆಯರಿದ್ದಾರೆ. ಅವರಿಗೂ ಹೀಗೆ ಆದರೆ ಸುಮ್ಮನಿರುತ್ತೀರಾ? ನನ್ನ ಜಾಗದಲ್ಲಿ ನಿಮ್ಮ ಮನೆ ಹೆಣ್ಣು ಮಕ್ಕಳಿದ್ದಿದ್ದರೆ ಏನು ಮಾಡುತ್ತಿದ್ರಿ, ಉತ್ತರ ಕೊಡಿ? ಎಂದು ಶೋಭಾ ಕೋಪದಿಂದ ಕೇಳಿದ್ದಾರೆ.
ನನ್ನ ಗಂಡನ ಸ್ನೇಹ ಬೆಳೆಸಿ ಸಂತೋಷ್ ರಾಜಕೀಯವಾಗಿ ಬೆಳೆದರು. ನಮ್ಮ ಮನೆಯಲ್ಲೇ ಅನ್ನ ತಿಂದು ನನ್ನ ಗಂಡನ ಕೊಲೆಗೆ ಪ್ರಯತ್ನಿಸಿದರು. ಅನ್ನ ಹಾಕಿದ ಮನೆಗೆ ಕನ್ನ ಹಾಕಿದವರ ಪರವಾಗಿ ನಿಂತಿದ್ದೀರ ನೀವು. ಸಂತೋಷನನ್ನು ಪೊಲೀಸರು ಹಿಡಿಯಲು ಬಂದಾಗ ತಪ್ಪಿಸಿಕೊಳ್ಳಲು ಸಹಾಯ ಮಾಡಿ ಬೇಲ್ ಕೊಡಿಸಿದ್ದೀರಿ. ಇದೇನಾ ನೀವು ಕಾನೂನಿಗೆ ಕೊಡುವ ಗೌರವ? ಏನೂ ತಪ್ಪು ಮಾಡದ ನನ್ನ ಗಂಡನನ್ನ ನೀವು, ನಿಮ್ಮ ಪಕ್ಷ ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುತ್ತಿದ್ದೀರಾ. ನಿಮ್ಮ ಹೋರಾಟ ಪ್ರಾಮಾಣಿಕ ಹೋರಾಟವಾಗಿರಬೇಕೆ ಹೊರತು ರಾಜಕೀಯ ಹೋರಾಟವಾಗಿರಬಾರದು ಎಂದು ಹೇಳಿದ್ದಾರೆ.
ನಿಮ್ಮ ಹತ್ರ ಅಧಿಕಾರವಿದೆ, ಹಣಬಲವಿದೆ. ಆದರೆ ನಾವು ಬಡವರು. ನೀವು ಕೋರ್ಟ್, ಕಚೇರಿಗೆ ದಿನ ಅಲೆದಾಡಿ ಅಭ್ಯಾಸ ಇದೆ. ಆದರೆ ನಮ್ಮ ಪ್ರಮಾಣಿಕತೆಗೆ ನ್ಯಾಯ ಸಿಕ್ಕೆ ಸಿಗುತ್ತದೆ. ಹೋರಾಡುವ ಹಾಗಿದ್ರೆ ಮುಂದೆಯಿಂದ ಹೋರಾಡಿ, ಪ್ರಾಣ ತೆಗೆಯೋ ಕೆಲಸ ಮಾಡಬೇಡಿ. ಇಂದಿನಿಂದ ಯಾವುದಕ್ಕೂ ಹೆದರಲ್ಲ. ಒಳ್ಳೆಯದು, ಕೆಟ್ಟದನ್ನ ಆ ದೇವರು ನೋಡಿಕೊಳ್ಳುತ್ತಾನೆ ಎಂದು ಶೋಭಾ ಆಕ್ರೋಶದಿಂದ ಪತ್ರದಲ್ಲಿ ಬರೆದಿದ್ದಾರೆ.
ಇಲ್ಲಿವರೆಗೂ ನಿಮ್ಮ ಬಗ್ಗೆ ರಾಜ್ಯದ ಹೆಣ್ಣುಮಕ್ಕಳಿಗೆ ತಿಳಿದಿರಲಿಲ್ಲ. ಆದರೆ ಇನ್ನು ಮುಂದೇ ನಿಮ್ಮ ಬಗ್ಗೆ ತಿಳಿಯುತ್ತದೆ. ನನ್ನ ಗಂಡನ ಪ್ರಮಾಣಿಕ ಹೋರಾಟದ ಬೆಂಬಲಕ್ಕೆ ನಿಮ್ಮ ಪಕ್ಷದಿಂದ ಯಾರೂ ಬರಲಿಲ್ಲ ಎಂದು ಹೇಳಿದ್ದಾರೆ.