Tag: Bangalore

  • ಮಕ್ಕಳಿಗೆ ತಿಂಡಿ ತರುತ್ತಿದ್ದವ ಮನೆ ಮುಂದೆಯೇ ಹೆಣವಾದ!

    ಮಕ್ಕಳಿಗೆ ತಿಂಡಿ ತರುತ್ತಿದ್ದವ ಮನೆ ಮುಂದೆಯೇ ಹೆಣವಾದ!

    ಬೆಂಗಳೂರು: ಆಸ್ತಿಗಾಗಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಕೊತ್ತನೂರಿನಲ್ಲಿ ನಡೆದಿದೆ.

    ನಾಗರಾಜ್ ಹಂತಕರಿಂದ ಹತ್ಯೆಗೊಳಗಾದ ದುರ್ದೈವಿ. ಇವರು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮಕ್ಕಳಿಗೆ ತಿಂಡಿ ತೆಗೆದುಕೊಂಡು ಮನೆಗೆ ಬಂದಿದ್ದ ಸಂದರ್ಭದಲ್ಲಿ ಮನೆ ಮುಂದೆಯೇ ಹಂತಕರು ಕೊಚ್ಚಿ ಕೊಲೆ ಮಾಡಿದ್ದಾರೆ.


    ನಾಗರಾಜ್ ಕೊತ್ತನೂರಿನಲ್ಲಿ ರಿಯಲ್ ಎಸ್ಟೇಟ್ ಬ್ಯುಸ್‍ನೆಸ್ ಎಂದು ಯಾವಾಗಲೂ ಬ್ಯುಸಿಯಾಗಿದ್ದರು. ಹೆಂಡತಿ ಮಕ್ಕಳ ಜೊತೆ ಆರಾಮಾಗೇ ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ರಾಜಕೀಯವಾಗಿ ಅವರ ಏರಿಯಾದಲ್ಲಿ ಗುರುತಿಸಿಕೊಂಡಿದ್ದು, ಕೊತ್ತನೂರಿನಲ್ಲಿ ಸ್ವಲ್ಪ ಆಸ್ತಿ ಮಾಡಿಕೊಂಡಿದ್ದರು. ಆದರೆ ಹಲವು ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದರು ಎನ್ನಲಾಗಿದೆ. ನಾಗರಾಜನ ಸೋದರ ಸಂಬಂಧಿಗಳು ಆಗಾಗ ಆಸ್ತಿಯಲ್ಲಿ ಪಾಲು ಕೇಳುತ್ತಾ ಇದ್ದರು. ಆದರೆ ನಾಗರಾಜ್ ಮಾತ್ರ ಪಾಲು ಕೊಡುವುದಕ್ಕೆ ಒಪ್ಪಿರಲಿಲ್ಲ ಎಂದು ಹೇಳಲಾಗಿದೆ.

    ನಾಗರಾಜು ಎಂದಿನಂತೆ ಕೆಲಸ ಮುಗಿಸಿ ಬುಧವಾರ ರಾತ್ರಿ ಮನೆಗೆ ಹಿಂದಿರುಗಿದ್ದರು. ಮಕ್ಕಳಿಗಾಗಿ ಬಿಸ್ಕೆಟ್ ಮತ್ತು ಬ್ರೆಡ್ ತೆಗೆದುಕೊಂಡು ಮನೆ ಹತ್ತಿರ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಆಸ್ತಿಯ ಜಿದ್ದಿಗೆ ಬಿದ್ದಿದ್ದ ಸಂಬಂಧಿಗಳಾದ ಮನೋಜ್ ಹಾಗೂ ಹರೀಶ್ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ನಾಗರಾಜ್ ಮಾವ ಮುನಿರಾಜು ಹೇಳಿದ್ದಾರೆ.

    ಈ ಬಗ್ಗೆ ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇತ್ತ ನಾಗರಾಜ್ ಕುಟುಂಬ ಮಾತ್ರ ಮನೆ ಯಜಮಾನನ್ನು ಕಳೆದುಕೊಂಡು ರೋಧಿಸುತ್ತಿದೆ.

  • ಏಕಕಾಲದಲ್ಲಿ ಬಿಜೆಪಿಯ ಎರಡು ಹಕ್ಕಿಗಳನ್ನು ಹೊಡೆಯಲು ಮುಂದಾದ CM & ಟೀಮ್

    ಏಕಕಾಲದಲ್ಲಿ ಬಿಜೆಪಿಯ ಎರಡು ಹಕ್ಕಿಗಳನ್ನು ಹೊಡೆಯಲು ಮುಂದಾದ CM & ಟೀಮ್

    ಬೆಂಗಳೂರು: ಗುಜರಾತ್ ನಲ್ಲಿ ಬಿಜೆಪಿಯ ನಾಗಾಲೋಟದ ಓಟಕ್ಕೆ ರಾಜ್ಯ ಕಾಂಗ್ರೆಸ್ ಬೆಚ್ಚಿದ್ದು, ಕರ್ನಾಟಕವೇ ನಮ್ಮ ಮುಂದಿನ ಟಾರ್ಗೆಟ್ ಎಂಬ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಲು ಸಿದ್ದರಾಮಯ್ಯ ಆ್ಯಂಡ್ ಟೀಮ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

    ಬಿಜೆಪಿಯನ್ನು ಮಣಿಸಲು ಏಕಕಾಲದಲ್ಲಿ ಬಿಜೆಪಿಯ ಎರಡು ಹಕ್ಕಿಗಳನ್ನು ಹೊಡೆಯಲು ಸಿದ್ದರಾಮಯ್ಯ ಮತ್ತು ಅವರ ತಂಡ ಮುಂದಾಗಿದ್ದು, ಈಶ್ವರಪ್ಪ ಮತ್ತು ಯಡಿಯೂರಪ್ಪ ವಿರುದ್ಧ ಏಕಕಾಲದಲ್ಲಿ ಬ್ರಹ್ಮಾಸ್ತ್ರ ಪ್ರಯೋಗ ಮಾಡಲು ಸಕಲ ತಯಾರಿ ನಡೆದಿದೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಪರಿವರ್ತನಾ ರ್‍ಯಾಲಿ ಮುಖಾಂತರ ರಾಜ್ಯ ಸುತ್ತುತ್ತಿರುವ ಯಡಿಯೂರಪ್ಪ ಅವರನ್ನು ಮಣಿಸಲು ಎಲ್ಲಿಯೂ ಸುತ್ತಾಡದಂತೆ ಕಟ್ಟಿಹಾಕಲು ಎಸಿಬಿ ಬಳಸಿಕೊಳ್ಳಲು ಚಿಂತನೆ ನಡೆದಿದೆ. ಈಗಾಗಲೇ ದಾಖಲಾಗಿರುವ ದೂರುಗಳಿಗೆ ಸಂಬಂಧಿಸಿದಂತೆ ಇನ್ನೊಮ್ಮೆ ದೂರು ಕೊಡಿಸಲು ಚಿಂತನೆ ಮಾಡಿದ್ದು, ಹೊಸ ದೂರುಗಳನ್ನು ಸ್ವೀಕರಿಸಿದ ಕೂಡಲೇ ಎಫ್‍ಐಆರ್ ದಾಖಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಈಗಾಗಲೇ ದಾಖಲಾಗಿರುವ ಎಫ್‍ಐಆರ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ ಈಗ ವಕೀಲರು ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಒತ್ತಡ ಹಾಕುತ್ತಿದ್ದು, ತೆರುವುಗೊಳಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಲು ವಕೀಲರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

    ಯಡಿಯೂರಪ್ಪ ಜೊತೆ ಈಶ್ವರಪ್ಪ ಅವರನ್ನು ಸಹ ಕಟ್ಟಿ ಹಾಕಲು ಚಿಂತನೆ ನಡೆದಿದ್ದು, ಅವರ ವಿರುದ್ಧ ಹೊರಾಡುತ್ತಿರುವ ಶಿವಮೊಗ್ಗದ ವಕೀಲರನ್ನು ಕಾಂಗ್ರೆಸ್ ಶಾಸಕ ಉಗ್ರಪ್ಪ ಸಂಪರ್ಕ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅವರ ಮೇಲಿರುವ ಆರೋಪಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಅಂತಾ ಎನ್ನಲಾಗಿದೆ.

  • ರಾಜ್ಯಾದ್ಯಂತ 400 ಥಿಯೇಟರ್ ಗಳಲ್ಲಿ ಅಪ್ಪು ಹವಾ- ಬಳ್ಳಾರಿಯಲ್ಲಿ ಕೇಕ್ ಕತ್ತರಿಸಿ ಅಭಿಮಾನದ ಸಂಭ್ರಮ

    ರಾಜ್ಯಾದ್ಯಂತ 400 ಥಿಯೇಟರ್ ಗಳಲ್ಲಿ ಅಪ್ಪು ಹವಾ- ಬಳ್ಳಾರಿಯಲ್ಲಿ ಕೇಕ್ ಕತ್ತರಿಸಿ ಅಭಿಮಾನದ ಸಂಭ್ರಮ

    ಬೆಂಗಳೂರು: ಇಂದಿನಿಂದ ತೆರೆ ಮೇಲೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟನೆಯ ‘ಅಂಜನಿಪುತ್ರ’ ನ ಅಬ್ಬರ ಶುರುವಾಗಿದ್ದು, ರಾಜ್ಯದ ಹಲವೆಡೆ ಬೆಳಗ್ಗೆ ಸುಮಾರು 5 ಗಂಟೆಗೆ ರಿಲೀಸ್ ಆಗಿದೆ.

    ಬಳ್ಳಾರಿಯ ಶಿವಗಂಗಾ ಚಿತ್ರಮಂದಿರದಲ್ಲಿ ಅಂಜನಿಪುತ್ರನಿಗೆ ಭರ್ಜರಿ ಸ್ವಾಗತ ನೀಡಿದ ಅಭಿಮಾನಿಗಳು ಕೇಕ್ ಕತ್ತರಿಸಿ ಶುಭ ಹಾರೈಸಿದ್ದಾರೆ. ದಾವಣಗೆರೆಯಲ್ಲಿ ಫಸ್ಟ್ ಶೋ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಇನ್ನೇನು ಕೆಲವೇ ಕ್ಷಣಗಳಲ್ಲಿ ಅಂಜನಿಪುತ್ರ ಸಿನಿಮಾಕ್ಕೆ ಪ್ರೇಕ್ಷಕರಿಂದ ಮೊದಲ ಪ್ರತಿಕ್ರಿಯೆ ಸಿಗಲಿದೆ.

    ರಾಜಕುಮಾರ ಚಿತ್ರದ ಯಶಸ್ಸಿನ ನಂತರ ನಂತರ ಅಪ್ಪು ‘ಅಂಜನಿಪುತ್ರ’ ನಾಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಹೀಗಾಗಿ ಅಭಿಮಾನಿಗಳು ಕಾತರರಾಗಿದ್ದು, ರಾಜ್ಯದ ಬಹುತೇಕ ಚಿತ್ರಮಂದಿರಗಳು ಹೌಸ್‍ಫುಲ್ ಆಗಿದ್ದು, ರಾಜ್ಯಾದ್ಯಂತ ಸುಮಾರು 400 ಥಿಯೇಟರ್ ಗಳಲ್ಲಿ ಸಿನಿಮಾ ಶುರುವಾಗಿದೆ.

    ಸ್ಯಾಂಡಲ್‍ವುಡ್ ಹನುಮಭಕ್ತ ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಅದ್ದೂರಿಯಾಗಿ ಮೂಡಿಬಂದಿದೆ. ಉಗ್ರಂ ಖ್ಯಾತಿಯ ರವಿಬಸ್ರೂರು ಅಂಜನಿಪುತ್ರ ಚಿತ್ರದ ಸಂಗೀತದ ಸಾರಥ್ಯ ವಹಿಸಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ.

    ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಕೂಡ ಪೋಷಕ ಪಾತ್ರಾಭಿನಯದಲ್ಲಿ ಕಾಣಿಸಿಕೊಂಡಿದ್ದಾರೆ.

     

  • ಬೆಂಗ್ಳೂರು ರೆಸಾರ್ಟಿಗೆ ಬಂದಿದ್ದ ಶಾಸಕರಲ್ಲಿ ಎಷ್ಟು ಮಂದಿ ಜಯಗಳಿಸಿದ್ದಾರೆ: ಡಿಕೆಶಿ ಹೇಳಿದ್ರು

    ಬೆಂಗ್ಳೂರು ರೆಸಾರ್ಟಿಗೆ ಬಂದಿದ್ದ ಶಾಸಕರಲ್ಲಿ ಎಷ್ಟು ಮಂದಿ ಜಯಗಳಿಸಿದ್ದಾರೆ: ಡಿಕೆಶಿ ಹೇಳಿದ್ರು

    ಬೆಂಗಳೂರು: ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಗುಜರಾತಿನಿಂದ ರಾಜ್ಯಕ್ಕೆ ಬಂದಿದ್ದ 44 ಶಾಸಕರಲ್ಲಿ 32 ಶಾಸಕರು ಜಯಗಳಿಸಿದ್ದಾರೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ

    ಕೆಪಿಸಿಸಿ ಕಚೇರಿಯಲ್ಲಿ ಗುಜರಾತ್ ಚುನಾವಣಾ ಫಲಿತಾಂಶ ವಿಚಾರವಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಪಕ್ಷವನ್ನು ಹೋಳು ಮಾಡಿದರೂ ಇಂದು ನಮಗೆ ಹೆಚ್ಚಿನ ಸ್ಥಾನ ಸಿಕ್ಕಿದೆ. ಶೇಖಡವಾರು ಮತಗಳಿಕೆ ಕೂಡ ಹೆಚ್ಚಾಗಿದೆ ಆಗಿದೆ ಎಂದರು.

    ಮಾಧ್ಯಮಗಳು ಚುನಾವಣೆ ಬಗ್ಗೆ ವಾರದಿಂದ ವರದಿ ಮಾಡುತ್ತಿದ್ದವು. ಆದರೂ ನಮಗೆ ವಿಶ್ವಾಸವಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲ ಸಾಮಾನ್ಯ. ಚುನಾವಣೆ ನಡೆದ ರೀತಿ, ಮತದಾರರ ಮೇಲೆ ಹಾಕಿದ ಒತ್ತಡ. ನಗರದ ಮತದಾರರಿಗೆ ಬಿಜೆಪಿ ನಾಯಕರ ಬೆದರಿಕೆ. ಇವೆಲ್ಲವೂ ಚುನಾವಣೆ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದರು.

    ಬಿಜೆಪಿಯವರು 150 ದಾಟುತ್ತೇವೆ ಎಂದು ಹೇಳುತ್ತಿದ್ದರು. ನಮಗೆ ಕಡಿಮೆ ಸ್ಥಾನ ಬಂದಿರಬಹುದು. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳುವಷ್ಟು ಆಗಲಿಲ್ಲ. ನಮ್ಮ ಪಕ್ಷವನ್ನ ಹೋಳು ಮಾಡಿದ್ರು. ಗುಜರಾತ್ ಮತದಾರರು ನಮ್ಮ ಪರವಾಗಿ ನಿಂತಿದ್ದಾರೆ. ಆದ್ದರಿಂದ ಅವರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಡಿಕೆಶಿ ಹೇಳಿದರು.

    ರಾಜ್ಯದಲ್ಲೂ 2008 ರಿಂದ 2013 ರವರೆಗೆ ಬಿಜೆಪಿ ಆಡಳಿತ ನಡೆಸಿದೆ. ಆದ್ದರಿಂದ ಜನರು ಅವರ ಆಡಳಿತವನ್ನು ನೋಡಿದ್ದಾರೆ. ಅಲ್ಲಿನ ಗಾಳಿ ಇಲ್ಲಿ ಬೀಸುತ್ತೆ ಅನ್ನೋದು ಸುಳ್ಳು. ಪಕ್ಕದಲ್ಲಿ ಬಿಹಾರ, ಪಂಜಾಬ್, ತೆಲಂಗಾಣ ಇದ್ರೂ ಗಾಳಿ ಬೀಸಲಿಲ್ಲ. ಆದ್ದರಿಂದ ಇಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

    ನಾವೆಲ್ಲ ಕರ್ನಾಟಕದ ಚರಿತ್ರೆಯನ್ನು ನೋಡಿದ್ದೇವೆ. ಹಿಂದೆ ಜನತಾ ಸರ್ಕಾರ, ವಾಜಪೇಯಿ ಸರ್ಕಾರ ಕೇಂದ್ರದಲ್ಲಿದ್ದಾಗಲೂ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು. ಬಿಜೆಪಿಯವರು ಆಸೆ ಪಡುವುದರಲ್ಲಿ ತಪ್ಪೇನಿಲ್ಲ. ಆದರೆ ರಾಜ್ಯದಲ್ಲಿ ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆ. ಸೂರತ್ ಮತ್ತು ಅಹಮದಾಬಾದ್‍ನಲ್ಲಿನ ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಎಷ್ಟು ಬೆದರಿಕೆ ಒಡ್ಡಬೇಕಿತ್ತೋ ಅಷ್ಟೆಲ್ಲವನ್ನೂ ಬಿಜೆಪಿ ಮಾಡಿದೆ. ನಾವು ಹಿಂದುಗಳಲ್ಲವೇ ಬಿಜೆಪಿಯವರು ಮಾತ್ರ ಹಿಂದುಗಳೇ..? ನಾವು ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಪಕ್ಷ ನಡೆಸುತ್ತೇವೆ ಎಂದರು.

    ರಾಜ್ಯಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ನಿಂದ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಕಣಕ್ಕೆ ಇಳಿದಿದ್ದರು. ಈ ವೇಳೆ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಆಗಮಿಸಿದ್ದರು. ಡಿಕೆ ಶಿವಕುಮಾರ್ ರೆಸಾರ್ಟ್ ನಲ್ಲಿ ಕೈ ಶಾಸಕರನ್ನು ನೋಡಿಕೊಳ್ಳುವ ಉಸ್ತುವಾರಿ ವಹಿಸಿಕೊಂಡಿದ್ದರು.

  • ಗುಜರಾತ್, ಹಿಮಾಚಲ ಚುನಾವಣಾ ಫಲಿತಾಂಶದ ಬಗ್ಗೆ ರಮ್ಯಾ ಹೀಗಂದ್ರು!

    ಗುಜರಾತ್, ಹಿಮಾಚಲ ಚುನಾವಣಾ ಫಲಿತಾಂಶದ ಬಗ್ಗೆ ರಮ್ಯಾ ಹೀಗಂದ್ರು!

    ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಬಿಜೆಪಿಗೆ ಶುಭಕೋರಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರೋ ರಮ್ಯಾ, ಬಿಜೆಪಿಗೆ ಧನ್ಯವಾದ. ಇಷ್ಟಕ್ಕೆ ನಾವು ಸುಮ್ಮನಾಗಲ್ಲ ಅಂತ ಹೇಳಿದ್ದಾರೆ.

    ರಮ್ಯಾ ಅವರ ಈ ಟ್ವೀಟ್ ಗೆ ಹಲವು ಮಂದಿ ಪ್ರತಿಕ್ರಿಯಿಸಿದ್ದು, ಬೇರೆ ಚುನಾವಣೆ ಹೋಲಿಸಿದರೆ ಬಿಜೆಪಿ ದೊಡ್ಡ ನಾಯಕರು ಅತಿ ಹೆಚ್ಚು ಪ್ರಚಾರ ಮಾಡಿದ್ದಾರೆ. ಹೀಗಾಗಿ ಕಮಲ ಇಲ್ಲಿ ಅರಳಿದೆ. ಈ ರೀತಿ ಪ್ರಚಾರ ಮಾಡಿದಂತೆ ಬೇರೆ ರಾಜ್ಯದಲ್ಲಿ ಬಿಜೆಪಿ ಪ್ರಚಾರ ನಡೆಸಿಲ್ಲ  ಎಂದು ಹೇಳಿದ್ದಾರೆ.

    ಇತ್ತೀಚಿನ ವರದಿಗಳ ಪ್ರಕಾರ ಗುಜರಾತ್ ನ ಒಟ್ಟು 182 ಕ್ಷೇತ್ರಗಳಲ್ಲಿ ಬಿಜೆಪಿ 106ರಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಕಾಂಗ್ರೆಸ್ 73ರಲ್ಲಿ ಮುನ್ನಡೆ ಸಾಧಿಸಿದೆ. ಹಿಮಾಚಲಪ್ರದೇಶದ ಒಟ್ಟು 68 ಕ್ಷೇತ್ರಗಳಲ್ಲಿ 45ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, 20 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

     

  • ‘ಈತ ಸಂಸದ ಹಾಗೂ ಕೇಂದ್ರ ಸಚಿವನಾಗಲೂ ನಾಲಾಯಕ್’: ಹೆಗಡೆ V/s ರಾಮಲಿಂಗಾ ರೆಡ್ಡಿ ಸ್ಟೇಟಸ್ ವಾರ್

    ‘ಈತ ಸಂಸದ ಹಾಗೂ ಕೇಂದ್ರ ಸಚಿವನಾಗಲೂ ನಾಲಾಯಕ್’: ಹೆಗಡೆ V/s ರಾಮಲಿಂಗಾ ರೆಡ್ಡಿ ಸ್ಟೇಟಸ್ ವಾರ್

    ಬೆಂಗಳೂರು: ಸಮಾಜದ ಶಾಂತಿ ಕದಡಿ ನಿರಂತರ ಭೀತಿ ಉಂಟುಮಾಡುವವರೇ ಭಯೋತ್ಪಾದಕರು, ಅವರು ಯಾರೇ ಆಗಿರಲಿ ಯಾವುದೇ ಧರ್ಮಕ್ಕೆ ಸೇರಿರಲಿ. ಈತ ಸಂಸದ ಹಾಗೂ ಕೇಂದ್ರ ಸಚಿವನಾಗಲೂ ನಾಲಾಯಕ್. ಇದನ್ನು ಜನರೇ ನಿರ್ಧರಿಸಲಿ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಕೇಂದ್ರ ಕೌಶಲ್ಯಾಭಿವೃದ್ಧಿ ಮಂತ್ರಿ ಅನಂತ್ ಕುಮಾರ್ ಹೆಗಡೆ ವಿರುದ್ಧ ಸ್ಟೇಟಸ್ ಹಾಕಿದ್ದಾರೆ.

    ಇಷ್ಟು ಸಾಕಾ ಇನ್ನೂ ಬೇಕಾ ತಪರಾಕಿ ಸಿದ್ದರಾಮಯ್ಯನವರೇ? ಹೇಮಂತ್ ನಿಂಬಾಳ್ಕರ್, ರಾಮಲಿಂಗಾರೆಡ್ಡಿ ಹಾಗೂ ಕೆಂಪಯ್ಯರಂಥ ಜನರಿದ್ದರೆ ಮುಂದಿದೆ ನೋಡಿ ಮಾರಿಹಬ್ಬ. ಪ್ರತಿಭಟನೆ ವೇಳೆ ಬಂಧಿರಾಗಿದ್ದ ಎಲ್ಲರಿಗೂ ನ್ಯಾಯಾಲಯ ಜಾಮೀನು ನೀಡಿದ್ದು, ಇದು ಪ್ರಜಾಪ್ರಭುತ್ವದ ವಿಜಯ ಎಂದು ಅನಂತ್ ಕುಮಾರ್ ಹೆಗಡೆ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದರು.

    ಈ ಪೋಸ್ಟಿಗೆ ಸಂಬಂಧಿಸಿದಂತೆ ರಾಮಲಿಂಗಾ ರೆಡ್ಡಿ ಅವರು ಎಫ್‍ಬಿ ಪೋಸ್ಟ್ ಪ್ರಕಟಿಸಿ, ಪರೇಶ್ ಮೇಸ್ತಾ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿದೆ. ಸಮಾಜದ ಶಾಂತಿ ಹಾಗೂ ಜನಹಿತ ಕಾಪಾಡಲು ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ ಎಂದು ಬರೆದು ತಿರುಗೇಟು ನೀಡಿದ್ದಾರೆ.

    ರಾಮಲಿಂಗಾ ರೆಡ್ಡಿ ಎಫ್‍ಬಿ ಪೋಸ್ಟ್ ನಲ್ಲಿ ಏನಿದೆ?
    ಹೊನ್ನಾವರದ ಘಟನೆಯನ್ನು ಸರಕಾರ ಪ್ರಾಮಾಣಿಕವಾಗಿ ಸಿಬಿಐಗೆ ವಹಿಸಿದೆ. ಸಮಾಜದ ಶಾಂತಿ ಕದಡಿ ನಿರಂತರ ಭೀತಿ ಉಂಟುಮಾಡುವವರೇ ಭಯೋತ್ಪಾದಕರು, ಅವರು ಯಾರೇ ಆಗಿರಲಿ ಯಾವುದೇ ಧರ್ಮಕ್ಕೆ ಸೇರಿರಲಿ. ಈತ ಸಂಸದ ಹಾಗೂ ಕೇಂದ್ರ ಸಚಿವನಾಗಲೂ ನಾಲಾಯಕ್. ಇದನ್ನು ಜನರೇ ನಿರ್ಧರಿಸಲಿ.

    ಮೊದಲು ನೀವು ಮನುಷ್ಯರಾಗಿ ಸಹಬಾಳ್ವೆಯಿಂದ ಬದುಕಲು ಕಲಿಯಿರಿ. ರಾಜ್ಯದ ಜನರಿಗೆ ರಕ್ಷಣೆ ಕೊಡುವುದು ರಾಜ್ಯ ಸರ್ಕಾರದ ಕರ್ತವ್ಯ, ಅದನ್ನ ರಾಜ್ಯ ಸರ್ಕಾರ ನಿಭಾಯಿಸುತ್ತದೆ. ಮುಂದೆಯೂ ಅದನ್ನ ನಿಭಾಯಿಸುತ್ತದೆ. ನಿಮ್ಮ ಹಾಗೆ ಒಡೆದು ಆಳುವ ನೀತಿ ನಮ್ಮದಲ್ಲ. ಎಲ್ಲಾ ಮಾನವರನ್ನು ಒಂದೇ ಆಗಿ ನೋಡುವುದೇ ರಾಜ್ಯಸರ್ಕಾರದ ಉದ್ದೇಶ. ಜನರಿಗೆ ತೊಂದರೆ ಕೊಟ್ಟು, ಸಾವಿನಲ್ಲಿ ರಾಜಕೀಯ ಮಾಡುವ ನಿಮಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ.

    ನಿಮ್ಮ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ನೀವು ಮಾಡುತ್ತಿರುವ ಹಿಂಸಾಚಾರಕ್ಕೆ ಜನರೇ ತಕ್ಕ ಉತ್ತರ ನೀಡುತ್ತಾರೆ. ರಾಜ್ಯ ಸರ್ಕಾರ ಕ್ಕೆ ಜವಾಬ್ದಾರಿ ನಿಭಾಯಿಸುವುದು ಗೊತ್ತಿದೆ. ಮೈಯಲ್ಲಾ ವಿಷ ತುಂಬಿಕೊಂಡು ಜನರಿಗೆ ತೊಂದರೆ ಕೊಡುವ ನಿಮ್ಮಗಳ ಮನಸ್ಥಿತಿ ಜನರಿಗೆ ಗೊತ್ತಿದೆ. ನಿಮ್ಮ ನಡವಳಿಕೆಗಳಿಗೆ ಕಾಲವೇ ಶೀಘ್ರ ಉತ್ತರ ಕೊಡಲಿದೆ.

    ಸಮಾಜದ ಶಾಂತಿ ಹಾಗೂ ಜನಹಿತ ಕಾಪಾಡಲು ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ. ಜನರು ಸರ್ಕಾರದ ಪರವಾಗಿದ್ದಾರೆ ನಮ್ಮ ಒಳ್ಳೆಯ ಕೆಲಸಗಳನ್ನು ನೀವುಗಳು ಸಹಿಸಲಾರದೆ ರಾಜ್ಯದ ಜನರಿಗೆ ತೊಂದರೆ ಮಾಡಲು ಹೊರಟಿರುವುದು ಹೀನಕೃತ್ಯ. ಜನರ ರಕ್ಷಣೆ ಸರ್ಕಾರದ ಮೇಲಿದೆ, ಅದನ್ನು ಸರ್ಕಾರ ನಿಭಾಯಿಸುತ್ತದೆ.

    ಇದನ್ನು ಓದಿ: ತಪರಾಕಿ ಸಿದ್ದರಾಮಯ್ಯನವರೇ ಸಾಕಾ, ಬೇಕಾ?-ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗಡೆ ಕಿಡಿ

    https://www.youtube.com/watch?v=CS00Fer7y7s

     

  • `ಸನ್ನಿ ನೈಟ್ಸ್’ ವಿರುದ್ಧ ಪೊರಕೆ ಹಿಡಿದ ಬೆಂಗ್ಳೂರು ಮಹಿಳೆಯರು

    `ಸನ್ನಿ ನೈಟ್ಸ್’ ವಿರುದ್ಧ ಪೊರಕೆ ಹಿಡಿದ ಬೆಂಗ್ಳೂರು ಮಹಿಳೆಯರು

    ಬೆಂಗಳೂರು: ಹೊಸ ವರ್ಷ ಸಂಭ್ರಮದಲ್ಲಿ ನಗರದಲ್ಲಿ ಆಯೋಜನೆಗೊಂಡಿರುವ `ಸನ್ನಿ ನೈಟ್ಸ್’ ವಿರುದ್ಧ ಸಿಲಿಕಾನ್ ಸಿಟಿ ಮಹಿಳೆಯರು ಪೊರಕೆ ಹಿಡಿದು ಪ್ರತಿಭಟನೆ ಮಾಡಿದ್ದಾರೆ.

    ಬಾಲಿವುಡ್ ನಟಿ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಮತ್ತೆ ವಿರೋಧ ವ್ಯಕ್ತವಾಗುತ್ತಿದ್ದು, ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೇನೆ ಆಕ್ರೋಶವನ್ನು ವ್ಯಕ್ತಪಡಿಸಿದೆ. ನಗರದ ಮಾನ್ಯತಾ ಟೆಕ್ ಪಾರ್ಕ್ ಬಳಿ ಕಪ್ಪು ಪಟ್ಟಿ ಧರಿಸಿ, ಪೊರಕೆ ಹಿಡಿದು ಸನ್ನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

    ಟೈಮ್ಸ್ ಕ್ರಿಯೆಷನ್ ಡಿಸೆಂಬರ್ 31 ರಂದು ರಾತ್ರಿ ಮಾನ್ಯತಾ ಟೆಕ್ ಪಾರ್ಕ್ ವೈಟ್ ಆರ್ಕಿಡ್‍ನಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮ ಆಯೋಜಿಸಿದೆ. ಇದು ನಮ್ಮ ನೆಲದ ಸಂಸ್ಕೃತಿ ವಿರೋಧ. ಪರಭಾಷಿಕರು ಕನ್ನಡದ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಾರ್ಯಕ್ರಮವನ್ನು ಆಯೋಜನೆಗೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.

    ಈ ಹಿಂದೆ ಕರವೇ ಯುವ ಸೇನೆ ಕ್ಯಾತೆ ತೆಗೆದಿದ್ದು, ಎಚ್ಚರಿಕೆಯನ್ನು ನೀಡಿತ್ತು. `ಸನ್ನಿ ನೈಟ್ಸ್’ ನಮ್ಮ ಸಂಸ್ಕೃತಿ ಅಲ್ಲ. ಬೆತ್ತಲೆ ನಟಿ ಇಲ್ಲಿ ಬಂದು ಸೊಂಟ ಕುಣಿಸಿ, ಡ್ಯಾನ್ಸ್ ಮಾಡಿ ನಮ್ಮ ಯುವಜನರನ್ನು ಹಾಳು ಮಾಡೋದು ಬೇಡ ಅಂತಾ ಕರವೇ ಯುವ ಸೇನೆ ಸನ್ನಿ ಎಂಟ್ರಿಗೆ ವಿರೋಧಿಸಿ ಮೌರ್ಯ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿದ್ದರು.

    ಸನ್ನಿ ಸೀರೆ ಉಟ್ಟುಕೊಂಡು ಬಂದು ಕಾರ್ಯಕ್ರಮ ನಡೆಸಲಿ ಅಂತಾ ಕರವೇ ಯುವ ಸೇನೆ ಸವಾಲು ಹಾಕಿದ್ದು, ಇದರ ಜೊತೆಗೆ ಕಾರ್ಯಕ್ರಮದ ಆಯೋಜಕರಿಗೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಸನ್ನಿ ಲಿಯೋನ್ ಕಾರ್ಯಕ್ರಮ ರದ್ದು ಮಾಡುವಂತೆ ಮನವಿ ಕೊಡೋದಾಗಿ ಹೇಳಿದ್ದರು. ಸನ್ನಿ ಕಾರ್ಯಕ್ರಮ ನಡೆಸಿದರೆ ಕಪ್ಪು ಬಾವುಟ ಹಾರಿಸೋದಾಗಿ ಕರವೇ ಯುವ ಸೇನೆ ರಾಜ್ಯಾಧ್ಯಕ್ಷ ಪ್ರೇಮ್ ಕುಮಾರ್ ಎಚ್ಚರಿಕೆ ನೀಡಿದ್ದರು.

    https://www.youtube.com/watch?v=05Jkbnw4rXE

    https://www.youtube.com/watch?v=naANm0aEdZs

     

     

     

     

  • ರೈತರಿಗಾಗಿ ಬಿಎಂಡಬ್ಲ್ಯೂ ಕಾರನ್ನೇ ಮಾರಾಟ ಮಾಡ್ತೀನಿ ಎಂದ ಕಿಚ್ಚ

    ರೈತರಿಗಾಗಿ ಬಿಎಂಡಬ್ಲ್ಯೂ ಕಾರನ್ನೇ ಮಾರಾಟ ಮಾಡ್ತೀನಿ ಎಂದ ಕಿಚ್ಚ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ನಟರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದು, ಇದೊಂದು ಒಳ್ಳೆಯ ಬೆಳವಣಿಗೆಯಾಗಿದೆ. ಇತ್ತೀಚೆಗೆ ಕಿಚ್ಚ ಸುದೀಪ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿ ಅವರ ಕೊನೆಯ ಆಸೆಯನ್ನು ನೆರವೇರಿಸಿದ್ದರು. ಈಗ ಮತ್ತೆ ರೈತರಿಗೆ ಸಹಾಯ ಮಾಡಲು ಮುಂದಾಗಿದ್ದು, ಬಡವರಿಗೆ ಆಶಾಕಿರಣರಾಗುತ್ತಾರೆ ಎಂಬುದನ್ನು ನಿರೂಪಿಸಿದ್ದಾರೆ.

    ‘ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್’ ರೈತ ಸ್ನೇಹಿ ಯೋಜನೆಯ ಲಾಂಛನ ಲೋಕಾರ್ಪಣೆ ಹಾಗೂ ಸಾರ್ಥಕ ನೇಗಿಲ ಯೋಗಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನ ಡಿಸೆಂಬರ್ 13 ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ಭಾಗಿಯಾಗಿ ‘ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್’ ನ ಲೋಗೋವನ್ನ ಬಿಡುಗಡೆ ಮಾಡಿದ್ರು.

    ಈ ಸಂದರ್ಭದಲ್ಲಿ ರೈತರ ಬಗ್ಗೆ ಮಾತನಾಡಿದ ಸುದೀಪ್, ಸಾಮಾನ್ಯವಾಗಿ ಕಲಾವಿದರಾದ ನಾವು ಇಂತಹ ಕಾರ್ಯಕ್ರಮಕ್ಕೆ ಅಥಿತಿಗಳಂತೆ ಬಂದು ಹೋಗುತ್ತೇವೆ. ಆದರೆ ರೈತರ ಕಷ್ಟ ಮಾತ್ರ ಹಾಗೆಯೇ ಇರುತ್ತದೆ. ನನಗೆ ರೈತರಿಗೆ ಹೇಗೆ ಸಹಾಯ ಮಾಡಬೇಕೆಂದು ತಿಳಿಯುತ್ತಿಲ್ಲ. ಆದರೆ ನನ್ನ ಬಳಿ ಕೆಲವು ಕಾರುಗಳಿವೆ. ಅದರಲ್ಲಿ ನನಗೆ ಇಷ್ಟವಾದ ಬಿಎಂಡಬ್ಲ್ಯೂ ಕಾರನ್ನ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಈ ಟ್ರಸ್ಟ್ ಗೆ ನೀಡುತ್ತೇನೆ” ಎಂದು ಹೇಳಿದ್ದಾರೆ.

    ಟ್ರಸ್ಟಿನವರು ಈ ಸಂದರ್ಭದಲ್ಲಿ ಸುದೀಪ್‍ಗೆ ಸನ್ಮಾನ ಮಾಡಲು ನಿರ್ಧರಿಸಿದ್ದರು. ಆದರೆ ಕಿಚ್ಚ ಅದನ್ನು ಸ್ವೀಕರಿಸಲು ನಿರಾಕರಿಸಿದ್ರು. ನಾನು ಭಾಷಣ ಮಾಡಲು ರಾಜಕೀಯ ವ್ಯಕ್ತಿ ಅಲ್ಲ. ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ್ರು.

  • ಖ್ಯಾತ ಕಾದಂಬರಿಕಾರ ಎಸ್‍ಎಲ್ ಭೈರಪ್ಪ ಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ

    ಖ್ಯಾತ ಕಾದಂಬರಿಕಾರ ಎಸ್‍ಎಲ್ ಭೈರಪ್ಪ ಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ

    ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೀಡುವ 2017ನೇ ಸಾಲಿನ ನೃಪತುಂಗ ಪ್ರಶಸ್ತಿಗೆ ಖ್ಯಾತ ಕಾದಂಬರಿಗಾರ ಎಸ್ ಎಲ್ ಭೈರಪ್ಪ ಭಾಜನರಾಗಿದ್ದಾರೆ.

    ನೃಪತುಂಗ ಪ್ರಶಸ್ತಿಯು ಏಳು ಲಕ್ಷ ನಗದು, ಫಲಕ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ಡಾ. ಎಸ್‍ಎಲ್ ಭೈರಪ್ಪ ಅವರನ್ನು ಆಯ್ಕೆ ಮಾಡಿರುವುದಾಗಿ ಕಸಾಪ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ನೃಪತುಂಗ ಸಾಹಿತ್ಯ ಪ್ರಶಸ್ತಿ ಯನ್ನು ಕನ್ನಡದ ಜ್ಞಾನಪೀಠ ಪ್ರಶಸ್ತಿಯೆಂದೇ ಕರೆಯಲಾಗುತ್ತದೆ. ಈ ಪ್ರಶಸ್ತಿಯನ್ನು 2008 ರಿಂದ ಪ್ರತಿ ವರ್ಷ ನೀಡಲಾಗುತ್ತಿದೆ.

    ಇನ್ನು 2017 ರ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಗೆ ಶ್ರೀ ರಾಮಲಿಂಗೇಶ್ವರ(ಸಿಸಿರಾ), ಡಾ. ನಂದಿನಿ ಸಿ. ಹಾಗೂ ಶ್ರೀಮತಿ ಶಾಂತಿ ಕೆ.ಅಪ್ಪಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು, ಫಲಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

  • ವೈದ್ಯರ ನಿರ್ಲಕ್ಷ್ಯಕ್ಕೆ ಯುವತಿ ಬಲಿ- 2 ಲಕ್ಷ ನೀಡಿ ಮೃತದೇಹ ಕೊಟ್ಟು ಕಳಿಸಿದ ಆಸ್ಪತ್ರೆಯ ಸಿಬ್ಬಂದಿ

    ವೈದ್ಯರ ನಿರ್ಲಕ್ಷ್ಯಕ್ಕೆ ಯುವತಿ ಬಲಿ- 2 ಲಕ್ಷ ನೀಡಿ ಮೃತದೇಹ ಕೊಟ್ಟು ಕಳಿಸಿದ ಆಸ್ಪತ್ರೆಯ ಸಿಬ್ಬಂದಿ

    ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಯುವತಿ ಬಲಿಯಾಗಿರುವ ಘಟನೆ ನಗರದ ಕಸ್ತೂರಿನಗರದ ಛಾಯ ಆಸ್ಪತ್ರೆಯಲ್ಲಿ ನಡೆದಿದೆ.

    ಪೂಜಾ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ದುರ್ದೈವಿ. ಕಳೆದ ಭಾನುವಾರ ಜ್ವರ ಎಂದು ಪೋಷಕರು ಪೂಜಾ ರನ್ನು ಛಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಡೆಂಗ್ಯೂ ಜ್ವರ ಎಂದು ಹೇಳಿ ಆಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರವೇ ಪೂಜಾ ಮೃತಪಟ್ಟಿದ್ದಾರೆ. ಆದರೂ ವೈದ್ಯರು ಐಸಿಯುವಿನಲ್ಲಿಟ್ಟು ಯಾರಿಗೂ ಯುವತಿಯನ್ನ ನೋಡಲು ಬಿಟ್ಟಿಲ್ಲ. ಗುರುವಾರ ಮಧ್ಯಾಹ್ನ ವೈದ್ಯರು ಪೂಜಾ ಮೃತಪಟ್ಟಿರುವ ವಿಚಾರವನ್ನು ತಿಳಿಸಿದ್ದಾರೆ. ಓವರ್ ಡೊಸೇಜ್ ಆಗಿ ಯುವತಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಯುವತಿ ಸಾವಿನಿಂದ ಆಕ್ರೋಶಗೊಂಡು ಆಸ್ಪತ್ರೆಯ ಕಿಟಿಕಿ ಗಾಜು ಧ್ವಂಸಗೊಳಿಸಿ ಪ್ರತಿಭಟನೆ ಮಾಡಿದ್ದಾರೆ.

    ಘಟನೆಯ ಬಗ್ಗೆ ತಿಳಿದು ರಾಮಮೂರ್ತಿನಗರ ಮತ್ತು ಬಾಣಸವಾಡಿ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ನಂತರ ಅವರ ಮಧ್ಯಸ್ತಿಕೆಯಲ್ಲಿ ಸೆಟಲ್‍ಮೆಂಟ್ ನಡೆದಿದ್ದು, ಆಸ್ಪತ್ರೆಯವರು ಸುಮಾರು 2 ಲಕ್ಷ ರೂ. ಹಣ ಕೊಟ್ಟು ಕೊನೆಗೆ ಮೃತದೇಹವನ್ನು ಕೊಟ್ಟು ಕಳಿಸಿದ್ದಾರೆ.

    ಸೆಟಲ್‍ಮೆಂಟ್ ಆಗೋವರೆಗೂ ಸಂಬಂಧಿಕರು ದೇಹವನ್ನು ತೆಗೆದುಕೊಂಡು ಹೋಗದೇ, ಸೆಟಲ್‍ಮೆಂಟ್ ಆದ ನಂತರ ದೇಹವನ್ನ ತೆಗೆದುಕೊಂಡು ಹೋಗಿದ್ದಾರೆ. ನ್ಯಾಯ ಕೊಡಿಸಬೇಕಾದ ಪೊಲೀಸರೇ ಡೀಲ್ ಮಾಡಿಸಿದ್ದು ವಿಪರ್ಯಾಸವಾಗಿದೆ.