Tag: Bangalore

  • ರಾಜ್ಯದೆಲ್ಲೆಡೆ ಹೊಸ ವರ್ಷದ ಸಂಭ್ರಮ- ಬೆಂಗ್ಳೂರಲ್ಲಿ ಮಾದರಿಯಾದ್ರು ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್

    ರಾಜ್ಯದೆಲ್ಲೆಡೆ ಹೊಸ ವರ್ಷದ ಸಂಭ್ರಮ- ಬೆಂಗ್ಳೂರಲ್ಲಿ ಮಾದರಿಯಾದ್ರು ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್

    – ವಿವಿಧ ಜಿಲ್ಲೆಗಳಲ್ಲಿ ವಿವಿಧ ರೀತಿಯಲ್ಲಿ 2018ಕ್ಕೆ ಸ್ವಾಗತ

    ಬೆಂಗಳೂರು: ಇಂದು ಹೊಸ ವರ್ಷಕ್ಕೆ ಇಡೀ ಭಾರತ ಕಾಲಿಟ್ಟಿದೆ. ಸಿಲಿಕಾನ್ ಸಿಟಿಯಲ್ಲಿ ಸಂಭ್ರಮದಿಂದಲೇ ಜನ 2018ನ್ನು ಬರಮಾಡಿಕೊಂಡಿದ್ದಾರೆ.

    ನಗರದ ಪ್ರಮುಖ ರಸ್ತೆಗಳಾದ ಬ್ರಿಗೇಡ್ ರೋಡ್, ಎಂಜಿ ರೋಡ್, ಚರ್ಚ್ ಸ್ಟ್ರೀಟ್‍ನಲ್ಲಿ ಸಂಭ್ರಮ ಮನೆಮಾಡಿತ್ತು. ರಾತ್ರಿ ಸುಮಾರು 10.30 ಯಿಂದಲೇ ಜನ ಬ್ರಿಗೇಡ್ ರೋಡ್, ಎಂಜಿ ರೋಡ್‍ಗೆ ಆಗಮಿಸಿ ಭರ್ಜರಿ ಡ್ಯಾನ್ಸ್ ನಲ್ಲಿ ತೊಡಗಿದ್ದರು. ಡಿಜೆ ಸಾಂಗ್‍ಗಳಿಗೆ ಮಸ್ತಿ ಮಾಡಿದ ಜನ 2017ಕ್ಕೆ ವಿದಾಯ ಹೇಳಿ 2018ನ್ನು ಸ್ವಾಗತಿಸಿದರು. ಸಾವಿರಾರು ಜನ ಹೊಸ ವರ್ಷದ ಅಲೆಯಲ್ಲಿ ತೇಲಿಹೋಗಿದ್ದರು.

    ಸಿಲಿಕಾನ್ ಸಿಟಿಯ ಸೆಂಟರ್ ಪ್ಲೇಸ್‍ನಲ್ಲೊಂದಾದ ಕೆ.ಆರ್ ಮಾರ್ಕೆಟ್‍ನಲ್ಲಿ ಹೊಸವರ್ಷವನ್ನು ಸಂಭ್ರಮದಿಂದ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಭಾರತ ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್ ಯುವ ಜನತೆಗೆ ಮಾದರಿಯಾಗೋ ರೀತಿಯಲ್ಲಿ ಹೊಸವರ್ಷವನ್ನು ಆಚರಿಸಿದ್ದಾರೆ. ಕೆ.ಆರ್ ಮಾರ್ಕೆಟ್, ವಿವಿ ಪುರ, ಜೆಪಿ ನಗರದಲ್ಲಿ ನಿರಾಶ್ರಿತರಿಗೆ ತಿಂಡಿ ಹಾಗೂ ಹೊದಿಕೆಯನ್ನು ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಚಳಿಯಲ್ಲಿ ಬೀದಿಯಲ್ಲೇ ಮಲಗಿರುವವರಿಗೆ ಹೊದಿಕೆ, ತಿಂಡಿ ನೀಡಿ ಹೊಸ ವರ್ಷಾಚರಣೆಯಲ್ಲೂ ಮಾನವೀಯತೆ ಮೆರೆದಿದ್ದಾರೆ.

    ಇನ್ನೂ ಮಂಡ್ಯ, ರಾಯಚೂರು, ಚಿತ್ರದುರ್ಗ, ಉಡುಪಿ, ಧಾರವಾಡ ಸೇರಿದಂತೆ ವಯೋಮಿತಿ ಇಲ್ಲದೆ ಕುಣಿದು, ಕುಪ್ಪಳಿಸಿ ರಾಜ್ಯದೆಲ್ಲೆಡೆ ವಿವಿಧ ರೀತಿಯಲ್ಲಿ ಹೊಸ ವರ್ಷವನ್ನು ಸಂಭ್ರಮ ಸಡಗರದಿಂದ ಬರ ಮಾಡಿಕೊಂಡಿದ್ದಾರೆ.

  • ಶಂಕರ್ ಅಶ್ವಥ್‍ರನ್ನು ಭೇಟಿ ಮಾಡಿದ ಪ್ರಥಮ್

    ಶಂಕರ್ ಅಶ್ವಥ್‍ರನ್ನು ಭೇಟಿ ಮಾಡಿದ ಪ್ರಥಮ್

    ಬೆಂಗಳೂರು: ಹಿರಿಯ ನಟ ಕೆ.ಎಸ್.ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಸಿನಿಮಾ ಅವಕಾಶ ಇಲ್ಲದೆ ಊಬರ್ ಕ್ಯಾಬ್ ಓಡಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕನ್ನಡದ ಹಿರಿಯ ನಟರ ಮಗನ ಸ್ಥಿತಿಯನ್ನು ಪಬ್ಲಿಕ್ ಟವಿ ವರದಿ ಮಾಡಿದ್ದು, ಸುದ್ದಿ ತಿಳಿದ ಬಳಿಕ ಕನ್ನಡ ಚಿತ್ರರಂಗದ ಕೆಲವರು ಶಂಕರ್ ಸಹಾಯಕ್ಕೆ ಮುಂದಾಗಿದ್ದಾರೆ.

    ಶಂಕರ್ ಅಶ್ವತ್ಥ್ ಸಿನಿಮಾಗಳಲ್ಲಿ ಮತ್ತು ಧಾರಾವಾಹಿಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ತಮ್ಮ ಪಾತ್ರಕ್ಕೆ ತಕ್ಕ ಅವಕಾಶಗಳು ಸಿಗದೇ ಇರುವ ಕಾರಣ ಊಬರ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಪಬ್ಲಿಕ್ ಟಿವಿಯ ಜೊತೆ ಮಾತನಾಡಿ, ನನಗೆ ಸೂಕ್ತವಾದ ಪಾತ್ರ ಸಿಕ್ಕಿಲ್ಲ ಅಷ್ಟೇ. ಇದರಿಂದ ನಾವು ಸಿನಿಮಾ ರಂಗವನ್ನು ದೂರುವುದಿಲ್ಲ. ಈಗ ನಾನು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದೇನೆ ಎಂದು ಸ್ಪಷ್ಟವಾಗಿ ತಿಳಿಸಿದ್ದರು.

    ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಚಿತ್ರರಂಗದ ಹಲವರು ಇವರ ಬಳಿ ಹೋಗಿ ಅವಕಾಶಗಳನ್ನು ಕೊಟ್ಟಿದ್ದಾರೆ. ಆದರೆ ಅವರು ನಾನು ಸ್ವಾಭಿಮಾನಿಯಾಗಿ ಬದುಕುತ್ತೇನೆ ಎಂದು ಹೇಳಿದ್ದರು. ಆದರೂ ಮೈಸೂರಿಗೆ ತೆರಳಿ ಶಂಕರ್ ಅಶ್ವಥ್‍ರನ್ನು ಬಿಗ್‍ಬಾಸ್ ಸೀಸನ್ 4 ವಿಜೇತ ಪ್ರಥಮ್ ಭೇಟಿ ಮಾಡಿದ್ದಾರೆ. ತಮ್ಮ ಮುಂದಿನ `ಪ್ರಥಮ್ ಬಿಲ್ಡಪ್’ ಸಿನಿಮಾದಲ್ಲಿ ನೀವು ಅಭಿನಯಿಸಬೇಕು ಎಂದು ಹೇಳಿ ಮಾತನಾಡಿ ಬಂದಿದ್ದಾರೆ.

    `ಲವ್ ಗುರು’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ರಾಜ್ ಶಂಕರ್ ಅಶ್ವಥ್ ನೋವಿಗೆ ಸ್ಪಂದಿಸಿದ್ದು, ತಮ್ಮ ಮುಂದಿನ `ಆರೆಂಜ್’ ಸಿನಿಮಾವನ್ನು ನಟ ಗಣೇಶ್ ಜೊತೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಂಕರ್ ಅಶ್ವಥ್ ಅವರಿಗೆ ಒಂದು ಪಾತ್ರ ನೀಡಲು ಅವರು ಮುಂದಾಗಿದ್ದಾರೆ. ನವರಸನಾಯಕ ಜಗ್ಗೇಶ್ ಕೂಡ ಶಂಕರ್ ಅಶ್ವಥ್ ಪರಿಸ್ಥಿತಿಗೆ ಟ್ವೀಟ್ ಮೂಲಕ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

    ಜನವರಿ 19ಕ್ಕೆ ನನ್ನ ತಂದೆ ಕೆ.ಎಸ್.ಅಶ್ವಥ್ ಅವರ 8ನೇ ವರ್ಷದ ಶ್ರಾದ್ಧವಿದೆ. ನಮ್ಮ ಪದ್ಧತಿ ಪ್ರಕಾರ ಈ ಕಾರ್ಯ ಮಾಡುವಾಗ ಯಾವುದೇ ಸಾಲ ಮಾಡಬಾರದು. ಯಾವುದನ್ನೂ ಮಾರಿ ಕಾರ್ಯ ಮಾಡುವಂತಿಲ್ಲ. ಕಷ್ಟಪಟ್ಟು ದುಡಿದು, ಅದರಲ್ಲಿ ಕಾರ್ಯ ಮಾಡಬೇಕು. ಒಂದೂವರೆ ತಿಂಗಳಿನಿಂದ ಯಾವುದೇ ಸಂಪಾದನೆ ಇಲ್ಲದೆ ಮನೆಯಲ್ಲೇ ಕುಳಿತಿದ್ದೆ. ಆದ್ದರಿಂದ ಊಬರ್ ಕ್ಯಾಬ್ ಓಡಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದರು.

    ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ `ನಾಗರಹಾವು’ ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರಾಗಿ ಕಾಣಿಸಿಕೊಂಡ ಕೆ.ಎಸ್ ಅಶ್ವಥ್ ತಮ್ಮ ಪಾತ್ರಗಳ ಮೂಲಕ ಈಗಲೂ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಕನ್ನಡ ಚಿತ್ರರಂಗದ ದಿಗ್ಗಜರೊಡನೆ ಕೆ.ಎಸ್. ಅಶ್ವಥ್ ತೆರೆ ಹಂಚಿಕೊಂಡಿದ್ದರು. ಇದನ್ನು ಓದಿ: ಜೀವನ ನಿರ್ವಹಣೆಗೆ ಕ್ಯಾಬ್ ಡ್ರೈವರ್ ಆದ ಕೆ.ಎಸ್. ಅಶ್ವಥ್ ಪುತ್ರ!

     

  • `ಚಮಕ್’ ಚಿತ್ರ ನೋಡಿ ರಶ್ಮಿಕಾ ಮೇಲೆ ಮತ್ತೆ ಲವ್ವಾಯ್ತು ಅಂದ್ರು ರಕ್ಷಿತ್ ಶೆಟ್ಟಿ

    `ಚಮಕ್’ ಚಿತ್ರ ನೋಡಿ ರಶ್ಮಿಕಾ ಮೇಲೆ ಮತ್ತೆ ಲವ್ವಾಯ್ತು ಅಂದ್ರು ರಕ್ಷಿತ್ ಶೆಟ್ಟಿ

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ `ಚಮಕ್’ ಚಿತ್ರದ ಮೊದಲ ಶೋವನ್ನು ತಮ್ಮ ಭಾವಿ ಪತ್ನಿಯೊಂದಿಗೆ ನೋಡಿದ ರಕ್ಷಿತ್ ಶೆಟ್ಟಿ ಚಿತ್ರ ವಿಮರ್ಶೆಯನ್ನು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದು, ಚಮಕ್ ಚಿತ್ರದಲ್ಲಿ ರಶ್ಮಿಕಾ ಅವರ ಅಭಿನಯ ನೋಡಿ ಮತ್ತೆ ಲವ್ ಆಯ್ತು ಎಂದು ಟ್ವೀಟ್ ಮಾಡಿದ್ದಾರೆ.

    ಸ್ಯಾಂಡಲ್‍ವುಡ್ ಕ್ಯೂಟ್ ಜೋಡಿ ಎಂದೇ ಕರೆಸಿಕೊಳ್ಳುತ್ತಿರುವ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ಎಂಗೇಜ್ ಮೆಂಟ್ ನಂತರ ರಶ್ಮಿಕಾ ಅವರ ಎರಡು ಸಿನಿಮಾಗಳು ಬಿಡುಗಡೆಯಾಗಿದೆ. ಪುನೀತ್ ರಾಜ್ ಕುಮಾರ್ ಜೊತೆಗಿನ ಅಭಿನಯದ `ಅಂಜನೀಪುತ್ರ’ ಈಗಾಗಲೇ ಬಿಡುಗಡೆಗೊಂದು ಉತ್ತಮ ಪ್ರದರ್ಶನ ಕಾಣುತ್ತಿದೆ. ಬಳಿಕ ಇದೀಗ ಗಣೇಶ್ ಜೊತೆ ಕಾಣಿಸಿಕೊಂಡ `ಚಮಕ್’ ಚಿತ್ರ ಕೂಡ ಬಿಡುಗಡೆಯಾಗಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಜೋಡಿಯ ಪ್ರೇಕ್ಷರನ್ನು ಮೆಚ್ಚಿಸಿದೆ.

    ಈ ಚಿತ್ರವನ್ನು ತಮ್ಮ ಭಾವಿ ಪತ್ನಿಯೊಂದಿಗೆ ನೋಡಿರುವ ರಕ್ಷಿತ್ ಶೆಟ್ಟಿ, ನಟ ಗಣೇಶ್ ಮತ್ತು ರಶ್ಮಿಕಾ ಜೋಡಿಯ ಅಭಿನಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮ ಟ್ವೀಟ್‍ನಲ್ಲಿ ಗಣೇಶ್, ರಶ್ಮಿಕಾ ಜೋಡಿಯಾ ಅಭಿನಯ ಮತ್ತು ಚಿತ್ರದ ನಿರ್ದೇಶಕ ಸಿಂಪಲ್ ಸುನಿಯ ನಿರ್ದೇಶನಕ್ಕೆ ಫುಲ್ ಮಾಕ್ರ್ಸ್ ನೀಡಿದ್ದಾರೆ.

    ಫುಲ್ ಮಾಕ್ರ್ಸ್: ಚಮಕ್ ಚಿತ್ರದ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾರೇ ಅದ್ಭುತ. ಪೂರ್ತಿ ಸಿನಿಮಾ ತುಂಬ ಇಷ್ಟ ಆಯ್ತು. ಗಣೇಶ್ ಸರ್ ಅವರ ಅಭಿನಯ ಟಾಪ್ ಕ್ಲಾಸ್. ರಶ್ಮಿಕಾ ನೋಟ ಆಕರ್ಷಕವಾಗಿದೆ ಮತ್ತು ನಟನೆಯಲ್ಲಿ ಮೋಡಿ ಮಾಡ್ತಾರೆ. ಒಟ್ಟಿನಲ್ಲಿ ಚಮಕ್ ಚಿತ್ರವನ್ನ ನೋಡಿ ರಶ್ಮಿಕಾ ಅವರ ಮೇಲೆ ಮತ್ತೊಂದು ಬಾರಿ ಲವ್ ಆಗಿದೆ ಅಂತ ಬರೆದಿದ್ದಾರೆ.

    ವರ್ಷದ ಅತ್ಯುತ್ತಮ ಚಿತ್ರ: ಸುನಿ ನಿರ್ದೇಶನದ ಇದುವರೆಗಿನ ಚಿತ್ರಗಳಲ್ಲಿ `ಚಮಕ್’ ಚಿತ್ರ ಬೆಸ್ಟ್. ಪ್ರತಿಯೊಂದು ಚಿತ್ರದಲ್ಲೂ ಅವರ ನಿರ್ದೇಶನ ಮತ್ತು ಸಂಭಾಷಣೆಯಲ್ಲಿ ಬೆಳವಣಿಗೆ ಕಾಣುತ್ತಿದೆ. ಚಮಕ್ ಚಿತ್ರವನ್ನು ನಿಮ್ಮ ಜೊತೆಗಾರರ ಜೊತೆ ನೋಡಿ. ಈ ವರ್ಷದ ಅತ್ಯುತ್ತಮ ಫ್ಯಾಮಿಲಿ ಮನರಂಜನೆ ಚಿತ್ರ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ: ಆಡಿ ಕಾರ್ ಒಡತಿಯಾದ ಕಿರಿಕ್ ಹುಡ್ಗಿ ರಶ್ಮಿಕಾ- ಭಾವಿ ಪತಿ ಜೊತೆ ಫಸ್ಟ್ ರೌಂಡ್

  • ಹೀರೋ ಜೊತೆ ಅಕ್ರಮ ಸಂಬಂಧ ಇದೆ, ಕನ್ಯತ್ವ ಪರೀಕ್ಷೆ ಮಾಡಿಸ್ಕೋ ಎಂದ ಪೋಷಕ ನಟನ ವಿರುದ್ಧ ನಟಿ ಕೇಸ್

    ಹೀರೋ ಜೊತೆ ಅಕ್ರಮ ಸಂಬಂಧ ಇದೆ, ಕನ್ಯತ್ವ ಪರೀಕ್ಷೆ ಮಾಡಿಸ್ಕೋ ಎಂದ ಪೋಷಕ ನಟನ ವಿರುದ್ಧ ನಟಿ ಕೇಸ್

    ಬೆಂಗಳೂರು: ಹೀರೋ ಜೊತೆ ಅಕ್ರಮ ಸಂಬಂಧ ಇದೆ. ಕನ್ಯತ್ವ ಪರೀಕ್ಷೆ ಮಾಡಿಸ್ಕೋ ಎಂದ ಪೋಷಕ ನಟ ಅರೆಸ್ಟ್ ಆಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    `ಐಸ್ ಮಹಲ್’ ಚಿತ್ರದಲ್ಲಿ ಹೀರೋಯಿನ್ ತಂದೆ ಪಾತ್ರ ನಿರ್ವಹಿಸುತ್ತಿದ್ದ ರಾಜಶೇಖರ್ ಮೇಲೆ ದೂರು ದಾಖಲಾಗಿದೆ. ಸಿನಿಮಾದಲ್ಲಿ ನಾಯಕಿ ಪಾತ್ರ ಮಾಡುತ್ತಿರುವ ನಟಿಗೆ ರಾಜಶೇಖರ್, ನೀನು ನಾಯಕ ನಟನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀಯ ಎಂದು ಕ್ಯಾತೆ ತೆಗೆದಿದ್ದಾನೆ.

    ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಟಿ, ಇಲ್ಲ ನಮ್ಮಿಬ್ಬರ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ರಾಜಶೇಖರ್ ಇದಕ್ಕೆ ಪ್ರತಿಯಾಗಿ ಕನ್ಯತ್ವ ಪರೀಕ್ಷೆ ಮಾಡಿಸು ಎಂದು ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೆ. ಇದಕ್ಕೆ ನಟಿ ಬೈದಿದ್ದರಿಂದ ಕನ್ಯತ್ವ ಪರೀಕ್ಷೆ ಮಾಡಿದ್ರೆ ನಿಮ್ಮಿಬ್ಬರ ಅಕ್ರಮ ಸಂಬಂಧ ಬೆಳಕಿಗೆ ಬರುತ್ತೆ ಎಂದಿದ್ದಾನೆ.

    ರಾಜಶೇಖರ್ ವರ್ತನೆಗೆ ಬೇಸತ್ತು ಕೊನೆಗೆ ನಟಿ ಮಾಗಡಿ ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ನಟಿಯ ದೂರಿನ ಮೇರೆಗೆ ರಾಜಶೇಖರ್ ನನ್ನ ಪೊಲೀಸರು ಬಂಧಿಸಿದ್ದು, ಬೇಲ್ ಮೂಲಕ ಆರೋಪಿ ರಾಜಶೇಖರ ಹೊರಗೆ ಬಂದಿದ್ದಾನೆ.

  • ಅಂತ್ಯಸಂಸ್ಕಾರ ಯೋಜನೆಗೆ ಹಾಲು-ತುಪ್ಪ ಬಿಟ್ಟ ಸರ್ಕಾರ- 4 ವರ್ಷಗಳಿಂದ 9000 ಬಡ ಕುಟುಂಬಗಳಿಗೆ ನೀಡಿಲ್ಲ ಪರಿಹಾರ

    ಅಂತ್ಯಸಂಸ್ಕಾರ ಯೋಜನೆಗೆ ಹಾಲು-ತುಪ್ಪ ಬಿಟ್ಟ ಸರ್ಕಾರ- 4 ವರ್ಷಗಳಿಂದ 9000 ಬಡ ಕುಟುಂಬಗಳಿಗೆ ನೀಡಿಲ್ಲ ಪರಿಹಾರ

    ಬೆಂಗಳೂರು: ಸತ್ತವರ ಅಂತ್ಯ ಸಂಸ್ಕಾರದ ದುಡ್ಡು ಕೊಡುವುದಕ್ಕೆ ಸರ್ಕಾರದ ಬಳಿ ಹಣವಿಲ್ಲದ್ದರಿಂದ, “ಅಂತ್ಯ ಸಂಸ್ಕಾರ” ಯೋಜನೆಯನ್ನೇ ಸಿದ್ದರಾಮಯ್ಯ ಸರ್ಕಾರ ಅಂತ್ಯ ಮಾಡಿದೆ.

    ಕಡು ಬಡವರು ಮೃತಪಟ್ಟಾಗ ಅಂತ್ಯ ಸಂಸ್ಕಾರ ಮಾಡಲು ನೀಡುವ “ಅಂತ್ಯ ಸಂಸ್ಕಾರ ಯೋಜನೆಯ” ಪರಿಹಾರವನ್ನ ಕಳೆದ ನಾಲ್ಕು ವರ್ಷಗಳಿಂದ ಸರಿಯಾಗಿ ನೀಡುತ್ತಿಲ್ಲ. ಕಂದಾಯ ಇಲಾಖೆಯ ಅಧೀನದಲ್ಲಿ ಬರುವ ಯೋಜನೆಯಲ್ಲಿ ಕಳೆದ 4 ವರ್ಷಗಳಿಂದ ಮೃತರಾದ 9 ಸಾವಿರ ಬಡಕುಟುಂಬಗಳ ಪರಿಹಾರದ ಕಡತಗಳನ್ನ ಮೂಲೆಗೆ ಬಿಸಾಕಿದ್ದಾರೆ. ಸರ್ಕಾರದ ಅಂಕಿ ಅಂಶದ ಪ್ರಕಾರ 2017 ಅಕ್ಟೋಬರ್ ಅಂತ್ಯದ ವೇಳಗೆ 9120 ಮೃತರಾದ ಕುಟುಂಬಗಳಿಗೆ ಇನ್ನೂ ಪರಿಹಾರವೇ ಸಿಕ್ಕಿಲ್ಲ.

    ಏನಿದು ಅಂತ್ಯ ಸಂಸ್ಕಾರ ಯೋಜನೆ?: ಬಡತನ ರೇಖೆಯಲ್ಲಿರುವ ಕುಟುಂಬಸ್ಥರಲ್ಲಿ ಯಾರಾದರೂ ಸತ್ತರೆ ಅವರ ಅಂತ್ಯ ಸಂಸ್ಕಾರಕ್ಕೆ ಹಣ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ. ಸತ್ತವರ ಅಂತ್ಯ ಸಂಸ್ಕಾರ ಮಾಡಿದವರು ಅಥವಾ ಅವರ ಕುಟುಂಬದವರು ಫಲಾನುಭವಿಗಳಾಗಿರುತ್ತಾರೆ. ಕಂದಾಯ ಇಲಾಖೆ ತಹಶೀಲ್ದಾರರ ಮೂಲಕ ಯೋಜನೆಯ ಪರಿಹಾರವನ್ನ ನೀಡುತ್ತದೆ. ಯೋಜನೆ ಪ್ರಾರಂಭದಲ್ಲಿ ಪರಿಹಾರ ರೂಪದಲ್ಲಿ 1 ಸಾವಿರ ನೀಡಲಾಗುತ್ತಿತ್ತು. ಈಗ 5 ಸಾವಿರ ಹಣವನ್ನ ಪರಿಹಾರದ ರೂಪದಲ್ಲಿ ನೀಡಲಾಗುತ್ತದೆ.

    4 ವರ್ಷಗಳಲ್ಲಿ 9 ಸಾವಿರ ಮೃತರ ಕುಟುಂಬಕ್ಕೆ ಪರಿಹಾರ ಹಣ ನೀಡಬೇಕು. ಆದರೆ ಸರ್ಕಾರ ಇನ್ನೂ ಇದನ್ನ ನೀಡಿಲ್ಲ. ಇದರಲ್ಲಿ ಮಂಡ್ಯ ಜಿಲ್ಲೆಯೊಂದರಲ್ಲೇ 1508 ಮೃತ ಕುಟುಂಬಕ್ಕೆ ಪರಿಹಾರ ನೀಡಬೇಕು. ಸಿಎಂ ತವರು ಜಿಲ್ಲೆ ಮೈಸೂರಿನಲ್ಲೂ ಅಂತ್ಯ ಸಂಸ್ಕಾರ ಯೋಜನೆ ಹಳ್ಳ ಹಿಡಿದಿದ್ದು, 223 ಕುಟುಂಬಗಳಿಗೆ ಪರಿಹಾರ ಇನ್ನೂ ವಿತರಣೆ ಆಗಿಲ್ಲ. ಉಳಿದಂತೆ ಕಲಬುರಗಿಯಲ್ಲಿ 778, ತುಮಕೂರಿನಲ್ಲಿ 698, ರಾಯಚೂರಿನಲ್ಲಿ 572, ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ 430 ಕುಟುಂಬಗಳು ಸೇರಿದಂತೆ 30 ಜಿಲ್ಲೆಗಳಲ್ಲಿ 9120 ಕುಟುಂಬಳಿಗೆ ಪರಿಹಾರ ಸಿಗಬೇಕಾಗಿದೆ.

  • ಜೀವನ ನಿರ್ವಹಣೆಗೆ ಕ್ಯಾಬ್ ಡ್ರೈವರ್ ಆದ ಕೆ.ಎಸ್. ಅಶ್ವಥ್ ಪುತ್ರ!

    ಜೀವನ ನಿರ್ವಹಣೆಗೆ ಕ್ಯಾಬ್ ಡ್ರೈವರ್ ಆದ ಕೆ.ಎಸ್. ಅಶ್ವಥ್ ಪುತ್ರ!

    ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ಹಿರಿಯ ನಟ ಕೆ.ಎಸ್. ಅಶ್ವಥ್ ಅವರ ಪುತ್ರ ಈಗ ಜೀವನ ನಿರ್ವಹಣೆಗೆ ಕ್ಯಾಬ್ ಚಾಲಕರಾಗಿ ಕೆಲಸ ಮಾಡ್ತಿದ್ದಾರೆ.

    ಮನೋಜ್ಞ ಅಭಿನಯದ ಮೂಲಕವೇ ಕನ್ನಡಿಗರ ಮನೆ-ಮನ ಗೆದ್ದವರು ಕೆ.ಎಸ್ ಅಶ್ವಥ್. ಇಂತಹ ಮೇರು ನಟನ ಮಗನಾಗಿ ಎರಡೂವರೆ ದಶಕಗಳಿಂದ ಪುತ್ರ ಶಂಕರ್ ಅಶ್ವಥ್ ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಅಭಿನಯಿಸಿದ್ದರು.

    ಶಂಕರ್ ಅಶ್ವಥ್ ಹೊಟ್ಟೆಪಾಡಿಗಾಗಿ ಇದೀಗ ಕ್ಯಾಬ್ ಚಾಲಕರಾಗಿ ದುಡಿಯುತ್ತಿದ್ದಾರೆ. ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಹೆಚ್ಚಿನ ಅವಕಾಶ ಸಿಗದಿದ್ದಕ್ಕೆ ಜೀವನ ನಿರ್ವಹಣೆಗಾಗಿ ಊಬರ್ ಕ್ಯಾಬ್ ಚಾಲಕರಾಗಿ ಜೀವನ ಸಾಗಿಸುತ್ತಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಂಕರ್ ಪತ್ನಿ ಸುಧಾ, ಅವರು ಬದುಕುವ ದಾರಿ ನೋಡಿಕೊಂಡಿದ್ದಾರೆ. ನಾವು ಯಾರ ಹಂಗು ಇಲ್ಲದೆ ಬದುಕುವುದಕ್ಕಾಗಿ ಈ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ರಂಗವನ್ನು ಬಿಟ್ಟಿಲ್ಲ. ಸಣ್ಣ ಪುಟ್ಟ ಸಿನಿಮಾ ಮಾಡುತ್ತಿದ್ದಾರೆ. ಏಪ್ರಿಲ್ ನಿಂದ ಧಾರಾವಾಹಿ ಅವಕಾಶ ಸಿಕ್ಕಿಲ್ಲ. ಬಿಡುವಿನ ವೇಳೆ ಮನೆಯಲ್ಲಿ ಕುಳಿತುಕೊಳ್ಳೊವುದು ಬೇಡ. ಸ್ವಾಭಿಮಾನಿಗೆಯಾಗಿ ಬದುಕಬೇಕು ಎಂದು ಈ ಕೆಲಸ ಮಾಡುತ್ತಿದ್ದಾರೆ ಅಂದ್ರು.

    ನಮ್ಮ ಅತ್ತೆ, ಮಗನಿಗೆ ಸ್ವಲ್ಪ ಬೇಸರವಾಗಿದೆ. ಆದರೆ ಸಿನಿಮಾ ಧಾರಾವಾಹಿ ಇಲ್ಲದೇ ಇದ್ದಾಗ ಈ ಕೆಲವಸವನ್ನು ಮಾಡುತ್ತಿದ್ದಾರೆ. ಸಿನಿಮಾ ವೃತ್ತಿಯನ್ನೇ ಅವಲಂಭಿತರಾಗುವುದು ಬೇಡ ಎಂದು ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.

  • ಇಂದು ಡಾ. ವಿಷ್ಣುವರ್ಧನ್ 8ನೇ ಪುಣ್ಯಸ್ಮರಣೆ- ಅಭಿಮಾನಿಗಳಿಂದ ಅನ್ನದಾನ, ರಕ್ತದಾನ

    ಇಂದು ಡಾ. ವಿಷ್ಣುವರ್ಧನ್ 8ನೇ ಪುಣ್ಯಸ್ಮರಣೆ- ಅಭಿಮಾನಿಗಳಿಂದ ಅನ್ನದಾನ, ರಕ್ತದಾನ

    ಬೆಂಗಳೂರು: ಚಂದನವನದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿಮಾನಿಗಳನ್ನ ಅಗಲಿ ಇಂದಿಗೆ 8 ವರ್ಷಗಳು ಕಳೆದಿವೆ. ಇಂದು ಅವರ 8ನೇ ಪುಣ್ಯಸ್ಮರಣೆ ದಿನವಾಗಿದೆ.

    ಡಾ.ವಿಷ್ಣುವರ್ಧನ್ ಮರೆಯಲಾಗದ ಮಾಣಿಕ್ಯವಾಗಿದ್ದು, 8ನೇ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ಅನ್ನದಾನ, ರಕ್ತದಾನದ ಜೊತೆಗೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ.

    ಬೆಳಗ್ಗೆಯೇ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಆಗಮಿಸಿದ್ದು, ವಿವಿಧ ಹೂವುಗಳಿಂದ ಸಮಾಧಿಯನ್ನು ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಭಾರತಿ ವಿಷ್ಟುವರ್ಧನ್ ತಮ್ಮ ನಿವಾಸದಲ್ಲೇ ಪೂಜೆ ಸಲ್ಲಿಸಲಿದ್ದಾರೆ. ವಿಷ್ಣುವರ್ಧನ್ 2009 ಡಿಸೆಂಬರ್ 30 ರಂದು ಅಭಿಮಾನಿಗಳನ್ನ ಅಗಲಿದ್ದರು.

    ವಿಷ್ಣುವಧನ್ ನಾಗರಹಾವು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು ಸುಮಾರು 200 ಚಿತ್ರಗಳನ್ನ ಮಾಡಿದ್ದು, ಕೊನೆಯ ಚಿತ್ರವಾಗಿ ಆಪ್ತರಕ್ಷಕ ಸಿನಿಮಾವನ್ನು ಮಾಡಿದ್ದರು. ಆದರೆ ಇಂದಿಗೂ ವಿಷ್ಣುವರ್ಧನ್ ಅಭಿಮಾನಿಗಳ ಮನಸ್ಸಿನಲ್ಲಿ ಚಿರಸ್ಮರಣಿಯವಾಗಿ ಉಳಿದಿದ್ದಾರೆ.

  • ಹೆಚ್‍ಡಿಡಿ ವಿರುದ್ಧ ರಫ್&ಟಫ್ ವರ್ತನೆ ಬೇಡ- ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ

    ಹೆಚ್‍ಡಿಡಿ ವಿರುದ್ಧ ರಫ್&ಟಫ್ ವರ್ತನೆ ಬೇಡ- ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ

    – ದೇವೇಗೌಡರ ನಿವಾಸಕ್ಕೆ ಪಿಯೂಶ್ ಗೋಯಲ್ ಭೇಟಿ ಹಿಂದೆ ಗರಿಗೆದರಿದ ಕುತೂಹಲ
    – ಮೋದಿಯನ್ನು ಟೀಕಿಸಬೇಡಿ ಎಂದಿರುವ ಹೆಚ್‍ಡಿಡಿ

    ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ರಫ್ ಆಂಡ್ ಟಫ್ ವರ್ತನೆ ಬೇಡ ಎಂದು ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ ಅಂತ ಹೇಳಲಾಗಿದೆ.

    ದೇವೇಗೌಡ, ಹಾಗೂ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ವೈಯುಕ್ತಿಕ ಟೀಕೆಗಳನ್ನು ಮಾಡಬೇಡಿ. ನಮ್ಮ ಟಾರ್ಗೆಟ್ ಕಾಂಗ್ರೆಸ್, ಆದ್ದರಿಂದ ಕಾಂಗ್ರೆಸ್ ವಿರುದ್ಧವೇ ನಮ್ಮ ಅಸ್ತ್ರವಾಗಿರಬೇಕು. ರಾಜಕೀಯವಾಗಿ ಜೆಡಿಎಸ್ ಪಕ್ಷವನ್ನು ಎಷ್ಟು ಎದುರಿಸಬೇಕೋ ಅಷ್ಟು ಎದುರಿಸಿ. ಆದರೆ ಯಾವುದೇ ಕಾರಣಕ್ಕೂ ರಫ್ ಆಂಡ್ ಟಫ್ ಆಗಿ ವರ್ತನೆ ತೋರಬಾರದು ಎಂದು ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಖಡಕ್ ಆದೇಶವನ್ನು ನೀಡಿದೆ ಎನ್ನಲಾಗಿದೆ.

    ಗುರುವಾರ ದೆಹಲಿಯಲ್ಲಿ ದೇವೇಗೌಡರ ನಿವಾಸಕ್ಕೆ ಕೇಂದ್ರ ರೈಲ್ವೇ ಸಚಿವ ಹಾಗೂ ರಾಜ್ಯ ಚುನಾವಣಾ ಸಹ ಉಸ್ತುವಾರಿ ಪಿಯೂಶ್ ಗೋಯಲ್ ಸ್ವಯಂಪ್ರೇರಿತರಾಗಿ ಭೇಟಿ ನೀಡಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಗರಿಗೆದರಿಸಿದೆ.

    ಈ ನಡುವೆ ಮೋದಿಯನ್ನು ಟೀಕಿಸಬೇಡಿ ಎಂದು ಜೆಡಿಎಸ್ ಶಾಸಕರಿಗೆ ದೇವೇಗೌಡರು ಸೂಚನೆ ನೀಡಿದ್ದಾರೆ ಅಂತ ಹೇಳಲಾಗಿದೆ. ಈ ಎಲ್ಲಾ ಬೆಳವಣಿಗೆಗಳು 2018ರ ಚುನಾವಣೆಗೆ ಅಚ್ಚರಿಯ ರಾಜಕಾರಣದ ತಂತ್ರ ಕಾದಿದ್ಯಾ ಎಂಬ ಪ್ರಶ್ನೆ ಮೂಡಿಸಿದೆ.

  • ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಬೆರೆಸಿ ನಾಯಕ ನಟನಿಂದ ಅತ್ಯಾಚಾರ!

    ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಬೆರೆಸಿ ನಾಯಕ ನಟನಿಂದ ಅತ್ಯಾಚಾರ!

    ಬೆಂಗಳೂರು: ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಬೆರೆಸಿ ಹೊಂಬಣ್ಣ ಚಿತ್ರದ ನಾಯಕ ನಟ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯೊಬ್ಬರು ದೂರು ನೀಡಿದ್ದಾರೆ.

    ಹೊಂಬಣ್ಣ ಚಿತ್ರದ ನಾಯಕ ಸುಬ್ರಮಣ್ಯ ನನಗೆ ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಸಂತ್ರಸ್ತೆ ದೂರು ನೀಡಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸುಬ್ರಮಣ್ಯ ಬೆಂಗಳೂರು ಬಿಟ್ಟು ಪರಾರಿಯಾಗಿದ್ದಾನೆ. ಸುಬ್ರಮಣ್ಯ ಮೂಲತಃ ತೀರ್ಥಹಳ್ಳಿಯವನಾಗಿದ್ದು, ಹೊಂಬಣ್ಣ ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿದ್ದಾನೆ.

    ದೂರಿನಲ್ಲಿ ಏನಿದೆ?
    ಕಳೆದ 2 ವರ್ಷಗಳಿಂದ ನನಗೂ ನಮ್ಮ ಕುಟುಂಬದವರಿಗೆ ಸುಬ್ರಮಣ್ಯನ ಪರಿಚಯವಿದೆ. ಕುಟುಂಬದವರ ಜೊತೆ ಮಾತನಾಡಿ ಮದುವೆಯಾಗುವುದಾಗಿ ಹೇಳಿದ್ದ. ಈ ವಿಚಾರ ಆತನ ಪೋಷಕರಿಗೂ ತಿಳಿದಿತ್ತು. ಮದುವೆ ಮಾಡಿಕೊಳ್ಳೋಣ ಎಂದಿದ್ದಕ್ಕೆ ನನ್ನ ಸಿನಿಮಾ ಈ ವರ್ಷದ ಜುಲೈ 7 ರಂದು ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಯಾದ ಬಳಿಕ ಮದುವೆ ಆಗುತ್ತೇನೆ ಎಂದು ಹೇಳಿದ್ದ. ಸಿನಿಮಾ ರಿಲೀಸ್ ಆದ ಮೇಲೆ ನಮ್ಮ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಡೆಯಲಿ. ಆಮೇಲೆ ನಿನ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿ ದಿನ ದೂಡುತ್ತಿದ್ದ.

    ನವೆಂಬರ್ 1 ರಂದು ನನ್ನ ಅಕ್ಕನ ಮನೆಯಲ್ಲಿ ಪಾರ್ಟಿ ಇದೆ ಎಂದು ಸುಳ್ಳು ಹೇಳಿ ಕರೆದುಕೊಂಡು ಹೋದ. ಮನೆಯವರಿಗೂ ಗೊತ್ತಿದೆ ಎಂದು ನಾನು ಹೋಗಿದ್ದೆ. ಆದರೆ ಆತ ಅಕ್ಕನ ಮನೆಗೆ ಬದಲು ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಕುಡಿಯಲು ಜ್ಯೂಸ್ ಕೊಟ್ಟಿದ್ದಾನೆ. ಸ್ವಲ್ಪ ಸಮಯದ ನಂತರ ನನಗೆ ಪ್ರಜ್ಞೆ ತಪ್ಪಿತ್ತು. ಎಚ್ಚರವಾದಾಗ ಅವನ ಮತ್ತು ನನ್ನ ಮೈಮೇಲೆ ಬಟ್ಟೆ ಇರಲಿಲ್ಲ. ಈ ವೇಳೆ ಸುಬ್ರಮಣ್ಯ ನನ್ನನ್ನು ದೈಹಿಕವಾಗಿ ಬಳಸಿಕೊಂಡಿರುವುದು ತಿಳಿಯಿತು. ನನ್ನ ಅನುಮತಿ ಇಲ್ಲದೆ ಅತ್ಯಾಚಾರ ಮಾಡಿದ್ದಾನೆ. ನಾನು ಪ್ರಶ್ನೆ ಮಾಡಿದ್ದಕ್ಕೆ ನಿನ್ನನ್ನೇ ನಾನು ಮದುವೆಯಾಗುತ್ತೇನೆ ಸಮಾಧಾನವಾಗಿರು ಎಂದು ಹೇಳುತ್ತಿದ್ದ. ಆದರೆ ಕೆಲವು ದಿನಗಳಾದ ಬಳಿಕ ನನ್ನನ್ನು ನಿರ್ಲಕ್ಷ್ಯ ಮಾಡಲು ಪ್ರಾರಂಭಿಸಿದ್ದಾನೆ.

    ಯಾಕೆ ನನ್ನನ್ನು ನೀನು ಮದುವೆಯಾಗುತ್ತಿಲ್ಲ ಎಂದು ಕೇಳಿದಾಗ ನನಗೆ 20 ಲಕ್ಷ ರೂ. ಹಾಕಿ ಸಿನಿಮಾ ತೆಗೆಯುವಂತಹ ಹುಡುಗಿ ಬೇಕು ನೀವು ಬಡವರು ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೇ ಸಿನಿಮಾ ರಂಗದವರು ಬಂದರೆ ಅವರ ಜೊತೆ ಸಹಕರಿಸು ಎಂದು ಹೇಳಿದ್ದ. ಆದರೆ ಇದಕ್ಕೆ ನಾನು ನಿರಾಕರಿಸಿದೆ. ನಂತರ ಇಲ್ಲಸಲ್ಲದ ಆರೋಪ ಮಾಡಿ ನನಗೆ ಮತ್ತು ನನ್ನ ಕುಟುಂಬದವರ ತೇಜೋವಧೆ ಮಾಡಿದ್ದಾನೆ. ಇದೆಲ್ಲವನ್ನು ಪ್ರಶ್ನೆ ಮಾಡಿದ್ದಕ್ಕೆ ನನಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • ಹೊಸ ವರ್ಷದಂದು ಹುಟ್ಟುವ ಮೊದಲ ಹೆಣ್ಣು ಮಗುವಿಗೆ ಬಿಬಿಎಂಪಿಯಿಂದ ಬಂಪರ್ ಆಫರ್!

    ಹೊಸ ವರ್ಷದಂದು ಹುಟ್ಟುವ ಮೊದಲ ಹೆಣ್ಣು ಮಗುವಿಗೆ ಬಿಬಿಎಂಪಿಯಿಂದ ಬಂಪರ್ ಆಫರ್!

    ಬೆಂಗಳೂರು: ಹೊಸ ವರ್ಷದಂದು ಹುಟ್ಟುವ ಮೊದಲ ಹೆಣ್ಣು ಮಗುವಿಗೆ ಬಿಬಿಎಂಪಿ ಬಂಪರ್ ಆಫರ್ ನೀಡಲು ಮುಂದಾಗಿದೆ.

    ಪಾಲಿಕೆ ಆಸ್ಪತ್ರೆಯಲ್ಲಿ ಹೊಸ ವರ್ಷದಂದು ಹುಟ್ಟುವ ಮೊದಲ ಹೆಣ್ಣು ವಗುವಿಗೆ ಅದೃಷ್ಟ ಲಕ್ಷ್ಮಿ ಒಲಿದಿದೆ. ಹೊಸ ವರ್ಷದ ಮಧ್ಯರಾತ್ರಿ 12 ಗಂಟೆಗೆ ಹುಟ್ಟುವ ಮೊದಲ ಮಗುವಿಗೆ ಅಂದರೆ 2018ನೇ ವರ್ಷದ ಮೊದಲ ಹೆಣ್ಣು ಮಗುವಿಗೆ ಬಿಬಿಎಂಪಿ ಮೇಯರ್ 5 ಲಕ್ಷ ರೂ. ಮೊತ್ತದ ನಗದು ಉಡುಗೊರೆ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.

    ಮಗುವಿನ ಹೆಸರಲ್ಲಿ ಮತ್ತು ಬಿಬಿಎಂಪಿ ಆಯುಕ್ತರ ಹೆಸರಿನಲ್ಲಿ ಜಾಯಿಂಟ್ ಅಕೌಂಟ್ ಮಾಡಿಸಿ, ಆ ಖಾತೆಗೆ ಹಣವನ್ನು ಜಮೆ ಮಾಡಲಾಗುತ್ತದೆ. ಆ ಮಗುವಿಗೆ 18 ವರ್ಷವಾದ ನಂತರ ಮಗುವಿನ ಉನ್ನತ ಶಿಕ್ಷಣಕ್ಕೆ ಹಣ ಬಳಕೆ ಮಾಡಿಕೊಳ್ಳಬಹುದು ಎಂದು ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ. ಸಹಜ ಹೆರಿಗೆ ಮೂಲಕ ಹುಟ್ಟುವ ಮಗುವಿಗೆ ಮಾತ್ರ ಈ ಸದಾವಕಾಶ ಲಭಿಸಲಿದೆ.

    ಈ ಬಗ್ಗೆ ಮಾತನಾಡಿದ ಮೇಯರ್ ಸಂಪತ್ ರಾಜ್, ಇವತ್ತಿನ ಕಾಲದಲ್ಲಿ ಹೆಣ್ಣು ಮಗು ಅಂದರೆ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಹೆಣ್ಣು ಮಕ್ಕಳು ನಮ್ಮಂತೆ ಸರಿ ಸಮಾನರಾಗಿ ನಿಂತು ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಅಂತಹ ಹೆಣ್ಣು ಮಕ್ಕಳು ಎಷ್ಟು ಮುಖ್ಯ ಎಂದು ನಾವು ಪ್ರೋತ್ಸಾಹಿಸುವ ಸಲುವಾಗಿ ಈ ರೀತಿಯ ಯೋಜನೆಯನ್ನು ಮಾಡಿದ್ದೇವೆ ಅಂದ್ರು.

    ಮಧ್ಯರಾತ್ರಿ ಸಹಜ ಹೆರಿಗೆಯಿಂದ ಜನಿಸಿದ ಮಗುವಿಗೆ 5 ಲಕ್ಷ ರೂ. ಜಾಯಿಂಟ್ ಅಕೌಂಟ್ ಮಾಡಿಸಿ ಹಾಕುತ್ತೇವೆ. ಅದರ ಬಡ್ಡಿಯನ್ನು ಮಗುವಿನ ಉತ್ತಮ ಶಿಕ್ಷಣಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ರು.