Tag: Bangalore

  • ಕಾಶಿನಾಥ್ ನನ್ನ ಪಾಲಿನ ದೇವರು: ಉಪೇಂದ್ರ

    ಕಾಶಿನಾಥ್ ನನ್ನ ಪಾಲಿನ ದೇವರು: ಉಪೇಂದ್ರ

    ಬೆಂಗಳೂರು: ಹಿರಿಯ ನಟ, ನಿರ್ದೇಶಕ ಅಗಲಿಕೆಯ ಬಗ್ಗೆ ಅವರ ಶಿಷ್ಯ ನಟ ಉಪೇಂದ್ರ ಸಂತಾಪ ಸೂಚಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಶಾಕಿಂಗ್ ಅಂತಾ ಹೇಳಬಹುದು. ಇಷ್ಟು ಬೇಗ ನಮ್ಮಲ್ಲೆರನ್ನು ಬಿಟ್ಟು ಹೋಗುತ್ತಾರೆ ಅಂತಾ ಅಂದುಕೊಂಡಿರಲಿಲ್ಲ. ನನಗೆ ಅವರಿಗೆ ಉಷಾರಿಲ್ಲ ಅಂತಾ ಗೊತ್ತಿರಲಿಲ್ಲ. ಅವರು ಯಾರ ಬಳಿನೂ ಏನನ್ನು ಹೇಳಿಕೊಳ್ಳಲ್ಲ. ಬೆಳಿಗ್ಗೆ ಸುದ್ದಿ ಬಂದಾಗ ಶಾಕ್ ಆಯಿತು. ನನ್ನ ಪಾಲಿಗೆ ಮಾತ್ರ ಅವರು ದೇವರು. ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ. ನನ್ನ ದೇವರು ಅವರು. ಅವರ ಕುಟುಂಬದವರಿಗೆ, ಕನ್ನಡ ಚಿತ್ರರಂಗಕ್ಕೆ ತುಂಬಲಾಗದ ನಷ್ಟ ಇದು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.

    ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ನಿಧನರಾಗಿದ್ದಾರೆ. 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಸುಮಾರು ನಸುಕಿನ ಜಾವ 4 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಇಬ್ಬರು ಗಂಡು ಮಕ್ಕಳನ್ನ ಕಾಶಿನಾಥ್ ಅಗಲಿದ್ದಾರೆ.

    43 ಸಿನಿಮಾಗಳಲ್ಲಿ ಕಾಶಿನಾಥ್ ನಟಿಸಿದ್ದರು. ಅಮರ ಮಧುರು ಪ್ರೇಮ, ಅನುಭವ, ಅನಾಮಿಕ, ಅಜಗಜಾಂತರ, ಶ್, ಅನಂತನ ಅವಾಂತರ, ಅವನೇ ನನ್ನ ಗಂಡ ಮುಂತಾದ ಸಿನಿಮಾಗಳಲ್ಲಿ ಕಾಶಿನಾಥ್ ನಟನೆ ಮಾಡಿದ್ದರು. ಉಪೇಂದ್ರರಂತಹ ಕಲಾವಿದರನ್ನ ಪರಿಚಯಿಸಿದ ಹೆಗ್ಗಳಿಕೆ ಕಾಶಿನಾಥ್ ಅವರದ್ದು. 11 ಕನ್ನಡ, 1 ಹಿಂದಿ ಹಾಗೂ 1 ತೆಲುಗು ಚಿತ್ರ ನಿರ್ಮಾಣ ಮಾಡಿದ್ದರು. 80ರ ದಶಕದ ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದರು. ಇತ್ತೀಚಿನ ಚೌಕ ಸಿನಿಮಾ ಕಾಶಿನಾಥ್ ಅವರ ಕೊನೆಯ ಸಿನಿಮಾ.

  • ಗೆಳೆಯನಿಗೆ ಪೊಲೀಸರು ವಾರ್ನ್ ಮಾಡಿದ್ದಕ್ಕೆ ಸೂಸೈಡ್ ಡ್ರಾಮಾ ಮಾಡಿದ್ಳಾ ಯುವತಿ?

    ಗೆಳೆಯನಿಗೆ ಪೊಲೀಸರು ವಾರ್ನ್ ಮಾಡಿದ್ದಕ್ಕೆ ಸೂಸೈಡ್ ಡ್ರಾಮಾ ಮಾಡಿದ್ಳಾ ಯುವತಿ?

    ಬೆಂಗಳೂರು: ಪೊಲೀಸರ ದುರ್ವರ್ತನೆಗೆ ಮನನೊಂದು ಯುವತಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದ್ದ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.

    ವೈಟ್‍ಫೀಲ್ಡ್ ಠಾಣೆಯ ಪಿಎಸ್‍ಐ ಸೋಮಶೇಖರ್, ಮುಖ್ಯ ಪೇದೆ ರೋಷನ್ ಅಲಿಖಾನ್ ವಿರುದ್ಧ ಯುವತಿ ಶಿಲ್ಪಾ ಹಾಗೂ ಆತನ ಗೆಳೆಯ ಷಡ್ಯಂತ್ರ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಮಹೇಂದ್ರ ಆಟೋ ಡ್ರೈವರ್‍ವೊಬ್ಬರ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಆರೋಪಿ ಮಹೇಂದ್ರನನ್ನು ಠಾಣೆಗೆ ಕರೆಸಿ ಪಿಎಸ್‍ಐ ಸೋಮಶೇಖರ್ ಹಾಗೂ ಮುಖ್ಯ ಪೇದೆ ರೋಷನ್ ಅಲಿಖಾನ್ ಎಚ್ಚರಿಕೆ ನೀಡಿದ್ದರು.

    ಇದರಿಂದ ಮಹೇಂದ್ರನ ಗೆಳತಿ ಶಿಲ್ಪಾ ಆತ್ಮಹತ್ಯೆ ಯತ್ನ ನಾಟಕವಾಡಿ ಪೊಲೀಸರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾಳೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಯುವತಿ ಪೊಲೀಸ್ ಠಾಣೆಗೆ ದೂರನ್ನೇ ನೀಡಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಯುವತಿ ತನ್ನ ಗೆಳೆಯನಿಗಾಗಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ ಎಂದು ಹೇಳಲಾಗಿದೆ.

    ನಡೆದಿದ್ದೇನು?: ಬುಧವಾರದಂದು ಯುವತಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಕಾಡುಗೋಡಿಯ ಪಟಾಲಮ್ಮ ಲೇಔಟ್ ನಲ್ಲಿ ನಡೆದಿತ್ತು. ಪಟಾಲಮ್ಮ ಲೇಔಟ್ ನಿವಾಸಿಯಾದ ಶಿಕ್ಷಕಿ ಶಿಲ್ಪಾ ದೇವಾಲಯಕ್ಕೆ ತೆರಳುತ್ತಿದ್ದಾಗ ಬೈಕ್ ವಿಲೀಂಗ್ ಮಾಡಿ ಯುವಕರ ಗುಂಪು ಚುಡಾಯಿಸಿದ್ದಾರೆ. ಚುಡಾಯಿಸಿದ ಬಗ್ಗೆ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಠಾಣೆಯ ಪಿಎಸ್‍ಐ ಸೋಮಶೇಖರ್ ಮತ್ತು ಮುಖ್ಯ ಪೇದೆ ರೋಷನ್ ಆಲಿಖಾನ್ ನನ್ನನ್ನು ಐದು ಗಂಟೆಗೂ ಹೆಚ್ಚು ಕಾಲ ಕಾಯಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಜೊತೆಗೆ ಜಾತಿನಿಂದನೆ ಮಾಡಿದಲ್ಲದೇ ನಿರ್ಲಕ್ಷ್ಯತನದಿಂದ ದೂರು ಸ್ವೀಕರಿಸಿದ್ದಾರೆ. ದೂರು ನೀಡಲು ಹೋದಾಗ ನೀನು ರೋಡಲ್ಲಿ ಯಾಕ್ ಓಡಾಡುತ್ತೀಯಾ, ಮನೆಯಲ್ಲಿ ಇರು, ಇದೆಲ್ಲಾ ಕಾಮನ್. ನೀವು ಯಾವ ಜಾತಿ ಎಂದು ವಿಚಾರಿಸಿ ಜಾತಿನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು.

    ವಿಷಯ ತಿಳಿದ ಮಹೇಂದ್ರ ಶಿಲ್ಪಾಳನ್ನು ವೈಟ್ ಫೀಲ್ಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

     

  • ಓವರ್ ಟೇಕ್ ಮಾಡಲು ಹೋಗಿ ಕಾರಿಗೆ ಬಸ್ ಡಿಕ್ಕಿ- ಸ್ಥಳದಲ್ಲಿಯೇ ಐವರ ದುರ್ಮರಣ

    ಓವರ್ ಟೇಕ್ ಮಾಡಲು ಹೋಗಿ ಕಾರಿಗೆ ಬಸ್ ಡಿಕ್ಕಿ- ಸ್ಥಳದಲ್ಲಿಯೇ ಐವರ ದುರ್ಮರಣ

    ಬೆಂಗಳೂರು: ರಸ್ತೆ ಸಾರಿಗೆ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ದಾರುಣವಾಗಿ ಮೃತಪಟ್ಟಿರುವ ಘಟನೆ ಕರ್ನಾಟಕಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರು ಸಮೀಪದ ಸುಳಗಿರಿಯಲ್ಲಿ ನಡೆದಿದೆ.

    ರಾಷ್ಟ್ರೀಯ 7 ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ಸುಮಾರು 4:30ರ ವೇಳೆ ಈ ಅಪಘಾತ ಸಂಭವಿಸಿದೆ. ತಮಿಳುನಾಡು ಬಸ್ ಮತ್ತು ಕಾರ್ ಎರಡು ಹೂಸೂರಿನಿಂದ ಕೃಷ್ಣಗಿರಿ ಕಡೆಗೆ ಹೋಗುತ್ತಿದ್ದವು. ಈ ಸಂದರ್ಭದಲ್ಲಿ ಕಾರು ಮುಂದೆ ಹೋಗುತ್ತಿತ್ತು, ಬಸ್ ಕಾರನ್ನು ಓವರ್ ಟೇಕ್ ಮಾಡಲು ಮುಂದಾಗಿದ್ದು, ಬಸ್ಸಿನ ಟಯರ್ ಬ್ಲಾಸ್ಟ್ ಆಗಿದೆ. ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಹೋಗಿ ಕಾರಿಗೆ ಡಿಕ್ಕಿ ಹೊಡೆದಿದೆ.

    ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ನಾಲ್ವರು ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದು, ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಬಸ್ ರಸ್ತೆ ಪಕ್ಕದ ಗುಂಡಿಗೆ ಉರುಳಿ ಬಿದ್ದಿದೆ. ಬಸ್‍ನಲ್ಲಿದ್ದ ಚಾಲಕ ಹಾಗೂ ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಸುಳಗಿರಿ ಹಾಗೂ ಹೊಸೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

    ಘಟನೆ ನಡೆದ ಸ್ಥಳಕ್ಕೆ ಸುಳಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 28 ವರ್ಷಗಳ ಬಳಿಕ ಸತ್ಯ ತಿಳಿದು ತಂದೆ-ತಾಯಿಯನ್ನ ಹುಡುಕಲು ಸ್ವೀಡನ್ ನಿಂದ ಭಾರತಕ್ಕೆ ಬಂದ ಮಹಿಳೆ

    28 ವರ್ಷಗಳ ಬಳಿಕ ಸತ್ಯ ತಿಳಿದು ತಂದೆ-ತಾಯಿಯನ್ನ ಹುಡುಕಲು ಸ್ವೀಡನ್ ನಿಂದ ಭಾರತಕ್ಕೆ ಬಂದ ಮಹಿಳೆ

    ಬೆಂಗಳೂರು: ವಿದೇಶಿ ಮಹಿಳೆಯೊಬ್ಬರು ತನ್ನ ಸ್ವಂತ ತಂದೆ-ತಾಯಿಯನ್ನ ಹುಡುಕಲು ಭಾರತಕ್ಕೆ ಬಂದಿದ್ದಾರೆ.

    ವಿದೇಶಿ ಮಹಿಳೆ ಸೋನಿ 2 ವರ್ಷದ ಮಗುವಾಗಿದ್ದಾಗ ಹುಬ್ಬಳ್ಳಿಯಲ್ಲಿ ತನ್ನ ಪೋಷಕರಿಂದ ತಪ್ಪಿಸಿಕೊಂಡಿದ್ದರು. ಅಳುತ್ತಿದ್ದ ಮಗುವನ್ನ ಕಂಡ ಬೆಂಗಳೂರಿನ ಮಾತೃಚಾಯ ಅನಾಥಾಶ್ರಮದವರು ಕರೆದುಕೊಂಡು ಹೋಗಿ ಸಾಕಿದ್ದು, ಎರಡು ವರ್ಷಗಳ ಕಾಲ ಪೋಷಿಸಿದ್ದಾರೆ. ನಂತರ ಸ್ವೀಡನ್ ಮೂಲದ ದಂಪತಿ ಈಕೆಯನ್ನು ದತ್ತು ಪಡೆದಿದ್ದು, ಸ್ವೀಡನ್‍ಗೆ ಕರೆದುಕೊಂಡು ಹೋಗಿದ್ದಾರೆ.

    ಸೋನಿ ಕಳೆದ 28 ವರ್ಷಗಳ ಕಾಲ ಅವರ ಪೋಷಣೆಯಲ್ಲಿದ್ದು, ಅವರು ಸೋನಿಗೆ ಮದುವೆ ಕೂಡ ಮಾಡಿದ್ದಾರೆ. ಆದರೆ ಸೋನಿಗೆ ತನ್ನ ನಿಜವಾದ ತಂದೆ-ತಾಯಿ ಇವರಲ್ಲ, ಅವರು ಭಾರತದಲ್ಲಿದ್ದಾರೆ ಎಂದು ತಿಳಿದಿದೆ.

    28 ವರ್ಷಗಳ ಬಳಿಕ ಸತ್ಯ ತಿಳಿದ ಸೋನಿ, ಅಪ್ಪ ಅಮ್ಮನನ್ನ ನೋಡಬೇಕೆಂಬ ಆಸೆಯಿಂದ ಭಾರತಕ್ಕೆ ಬಂದಿದ್ದು, ಹೆತ್ತ ತಂದೆತಾಯಿಯ ಹುಟುಕಾಟದಲ್ಲಿದ್ದಾರೆ. ಐಶ್ವರ್ಯ ಅಂತಸ್ತು ಎಲ್ಲಾ ಇದ್ದರು ಸೋನಿಯ ಹೆತ್ತ ತಂದೆ-ತಾಯಿ ಯಾರು ಅಂತಾ ಗೊತ್ತಿಲ್ಲದೇ ಪ್ರತಿದಿನ ನೋವಲ್ಲೇ ಕಾಲ ಕಳೆಯುತ್ತಿದ್ದಾರೆ.

  • ಸಿಎಂ ಮೇಲೆ ಗಣಿ ಕಳಂಕ- 2 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಎಚ್‍ಡಿಕೆ ಆರೋಪ

    ಸಿಎಂ ಮೇಲೆ ಗಣಿ ಕಳಂಕ- 2 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಎಚ್‍ಡಿಕೆ ಆರೋಪ

    ಬೆಂಗಳೂರು: ಅಸೆಂಬ್ಲಿ ಎಲೆಕ್ಷನ್ ಹೊತ್ತಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಗಣಿ ಅಕ್ರಮದ ಆರೋಪ ಕೇಳಿ ಬಂದಿದೆ.

    ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ, ಸರ್ಕಾರದ ಗಣಿ ಇಲಾಖೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಒಂದು ತಿಂಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದೆ. ಆ ಸಮಯ ಈಗ ಬಂದಿದೆ. ಭ್ರಷ್ಟಾಚಾರ ವಿಷಯದ ಬಗ್ಗೆ ಇತ್ತೀಚೆಗೆ ಮಾತನಾಡಲು, ಅಕ್ರಮಗಳ ಬಗ್ಗೆ ನಾವು ಎಷ್ಟು ದಾಖಲೆ ಕೊಟ್ಟರೂ ಹಾಗೂ ತಾರ್ಕಿಕ ಅಂತ್ಯ ಮುಟ್ಟಿಸಲು ಆಗುತ್ತಿಲ್ಲ ಅನ್ನೋ ಬೇಸರ ಇದೆ ಎಂದು ಹೇಳಿದ್ರು.

    ಗಣಿ ಇಲಾಖೆ ಮಂತ್ರಿ ನೆಪ ಮಾತ್ರಕ್ಕೆ ಅಷ್ಟೇ. ಸಿಎಂ ಕಚೇರಿಯಲ್ಲೇ ಇಲಾಖೆ ನಿರ್ವಹಣೆ ಆಗುತ್ತಿದೆ. ರಾಮನ ಲೆಕ್ಕ ಕೃಷ್ಣನ ಲೆಕ್ಕ ಆಗುತ್ತಿರೋದು ಅಲ್ಲಿಂದಲೇ. ಗಣಿ ಮಂತ್ರಿ ವಿನಯ್ ಕುಲಕರ್ಣಿ ಅವರನ್ನ ಸಮಾಜ ಒಡೆಯುವ ಕೆಲಸಕ್ಕೆ ನೇಮಿಸಿದ್ದಾರೆ. ಸಿಎಂ ಧರ್ಮ ಪ್ರಚಾರಕ್ಕೆ ವಿನಯ್ ಕುಲಕರ್ಣಿ ಅವರನ್ನ ನೇಮಿಸಿದ್ದಾರೆ ಎಂದು ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ರು.

    ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ಬಳಿ ಸುಬ್ಬರಾಯನ ಹಳ್ಳಿ, ತಿಮ್ಮಪ್ಪನ ಗುಡಿ ಬಳಿ ಎಂ.ಎಂ. ಹಿಲ್ಸ್ ಗೆ ಗಣಿ ಗುತ್ತಿಗೆ ನೀಡಲಾಗಿದೆ. ಮುಚ್ಚಂಡಿ ಎಂಟರ್ ಪ್ರೈಸಸ್‍ನಿಂದ ಅಕ್ರಮ ನಡೆದಿದೆ. ಸಿದ್ದರಾಮಯ್ಯ ಅವರ ಸರ್ಕಾರ ಮೂರು ಕಂಪನಿಗಳಿಗೆ ರೈಸಿಂಗ್ ಕಾಂಟ್ರಾಕ್ಟ್ ನೀಡಿದ್ದಾರೆ. ಸುಬ್ಬರಾಯನ ಹಳ್ಳಿ ಬಳಿ 30 ಲಕ್ಷ ಮೆಟ್ರಿಕ್ ಟನ್ ಉತ್ಖನನ ಮಾಡಲು ಅವಕಾಶ ನೀಡಲಿದೆ. ಟೆಂಡರ್ ಕೊಡುವುದಕ್ಕೆ, ಅಗ್ರಿಮೆಂಟ್ ಮಾಡಿಕೊಳ್ಳುವುದಕ್ಕೆ ಮುಂಚೆ ಆ ಕಂಪನಿ ಮೈನಿಂಗ್ ಶುರು ಮಾಡಿದ್ದಾರೆ ಎಂದು ಹೇಳಿದ್ರು.

    2014-15 ನೇ ಸಾಲಿನಲ್ಲೇ 2062 ಕೋಟಿ ರೂಪಾಯಿ ಅಕ್ರಮ ನಡೆದಿದೆ. ಈವರೆಗಿನ ಲೆಕ್ಕ ತೆಗೆದರೆ ಇದು ಇನ್ನೂ ದೊಡ್ಡ ಮೊತ್ತವಾಗಲಿದೆ. ಹೇಮಲತಾ ಎಂಬ ಅಧಿಕಾರಿ ಅಕ್ರಮದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದರು. ಆದರೆ ತಕ್ಷಣ ಅವರನ್ನು ಎತ್ತಂಗಡಿ ಮಾಡಿದರು. ಮೂರು ವರ್ಷಗಳಲ್ಲಿ 8 ಜನ ಅಧಿಕಾರಿಗಳು ಬದಲಾಗಿದ್ದಾರೆ. ತುಷಾರ್ ಗಿರಿನಾಥ್ ಅವರ ಅವಧಿಯಲ್ಲೇ ಇಷ್ಟೆಲ್ಲ ಅಕ್ರಮ ನಡೆದಿದೆ. ಈ ಕಾರಣಕ್ಕಾಗಿಯೇ ತುಷಾರ್ ಅವರನ್ನು ಸಿಎಂ ಕಚೇರಿಯಲ್ಲಿ ಉಳಿಸಿಕೊಂಡಿದ್ದಾರೆ. ತೋರಿಕೆಗೆ ಅಕ್ರಮದ ತನಿಖೆಗೆ ಸಮಿತಿ ರಚಿಸುತ್ತಾರೆ. ಜೊತೆಗೆ ಹಿರಿಯ ಅಧಿಕಾರಿಗಳ ಸಮಿತಿ ರಚಿಸಿ, ಅಕ್ರಮ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಅಷ್ಟೇ ಅಲ್ಲದೇ ಬಿಎಸ್‍ವೈ ಗೊತ್ತಾಗದೆ ಚೆಕ್ ಮೂಲಕ ಹಣ ಪಡೆದಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಬೇರೆ ಮಾರ್ಗದ ಮುಖಾಂತರ ವ್ಯವಹಾರ ನಡೆಸಿದ್ದರು ಎಂದು ಹೇಳಿದರು.

    ಮುಚ್ಚಂಡಿ ಕಂಪನಿಯಿಂದ ಭಾರಿ ಅಕ್ರಮ ನಡೆದಿದ್ದು, 2014-15 ರಲ್ಲಿ ಅದಿರು ಉತ್ಪಾದನೆ ಮಾಡಿರುವುದು 22,90,715 ಮೆಟ್ರಿಕ್ ಟನ್. ಆದರೆ ವರದಿ ಮಾಡಿರುವುದು  13,94,715 ಮೆ. ಟನ್. ಇವುಗಳ ಬಗ್ಗೆ ಮಾಡಿದ ಮೈನ್ಸ್ ಪ್ರೊಡಕ್ಷನ್ ರಿಜಿಸ್ಟರ್ ದಾಖಲೆಗಳೇ ಮಾಯವಾಗಿದೆ. 2015-16 ರಲ್ಲಿ ರೈಸಿಂಗ್ ಕಾಂಟ್ರಾಕ್ಟರ್ ಕೂಡಾ ರಿಜಿಸ್ಟರ್ ಗೆ ಸಹಿ ಮಾಡಿಲ್ಲ. ಉಸ್ತುವಾರಿ ಅಧಿಕಾರಿ ಕೂಡಾ ಸಹಿ ಮಾಡಿಲ್ಲ. 2015-16 ರಲ್ಲಿ ಕೂಡಾ ಇಷ್ಟೇ ಪ್ರಮಾಣದ ಅಕ್ರಮ ನಡೆದಿದೆ. 2014 ರಿಂದ 17 ರವರೆಗೆ ಅಧಿಕೃತವಾಗಿ ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ಗೆ 60,56,440 ಮೆ. ಟನ್ ಅದಿರನ್ನು ಗಣಿಗಾರಿಕೆ ಮಾಡಿದ ಬಗ್ಗೆ ವರದಿ ನೀಡಲಾಗಿದೆ. ಇದರ ಮೌಲ್ಯ ಟನ್‍ಗೆ ಮೂರು ಸಾವಿರದಂತೆ ಲೆಕ್ಕ ಹಾಕಿದರೂ 5,450 ಕೋಟಿ ಆಗುತ್ತದೆ. ಆದರೆ ಇದರ ಎರಡು ಪಟ್ಟು ಅಕ್ರಮ ನಡೆದಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

    ಮುಚ್ಚಂಡಿ ಸಂಸ್ಥೆಯ ಬಳಿ ಗಣಿಗಾರಿಕೆ ಯಂತ್ರಗಳೇ ಇರಲಿಲ್ಲ. ಮುಚ್ಚಂಡಿ ಹೆಸರಲ್ಲಿ ಸೌತ್ ವೆಸ್ಟ್ ಮೈನಿಂಗ್ ಕಾರ್ಪೊರೇಷನ್ ಕಂಪನಿ ಗಣಿಗಾರಿಕೆ ಮಾಡಿದೆ. ಯಡಿಯೂರಪ್ಪ ಅವರೊಂದಿಗೆ ಇದ್ದ ಸೌತ್‍ವೆಸ್ಟ್ ಮೈನಿಂಗ್ ಸಂಸ್ಥೆಯ ಸಂಬಂಧ ಈ ಸರ್ಕಾರದಲ್ಲೂ ಮುಂದುವರಿದೆ ಎಂದು ಹೇಳಿದ್ರು

    ಈ ಕಂಪನಿಗಳ ಮಾಲೀಕರು ಯಾರು ಎಂದು ನನಗೆ ಗೊತ್ತಿಲ್ಲ. ನನಗೆ ದುಡ್ಡು ಕೊಡುವುದಕ್ಕೂ ಯಾರೂ ಬರೋದಿಲ್ಲ. ಆದರೆ ನನ್ನ ಮನೆಗೆ ಬರುವವರೆಲ್ಲಾ ನನ್ನ ಹತ್ತಿರವೇ ದುಡ್ಡು ಕಿತ್ತುಕೊಂಡು ಹೋಗುತ್ತಾರೆ. ರಾಜ್ಯದ ಆಸ್ತಿ ಹೊಡೆಯುವವರ ಬಳಿ ಕಿಕ್ ಬ್ಯಾಕ್ ಪಡೆಯುವ ವ್ಯಕ್ತಿ ನಾನಲ್ಲ. ರಾಜ್ಯದ ಆಸ್ತಿ ಉಳಿಯಬೇಕು. ಇವತ್ತೂ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯ ಮಂತ್ರಿಗಳು ರಾಜ್ಯದ ಜನರಿಗೆ ಯಾವ್ಯಾವುದೋ ಭಾಗ್ಯ ಕೊಟ್ಟಿದ್ದಾರಲ್ಲಾ ಹಾಗೆ ರೈತರಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಿದ್ದಾರೆ ಎಂದು ಸಿಎಂ ವಿರುದ್ಧ ಕಿಡಿ ಕಾರಿದರು.

     

  • ಬೆಂಗಳೂರನ್ನು ದೇಶದ 2ನೇ ರಾಜಧಾನಿ ಮಾಡಿ- ಮೋದಿ ಸರ್ಕಾರಕ್ಕೆ ಕರ್ನಾಟಕದ ಪತ್ರ

    ಬೆಂಗಳೂರನ್ನು ದೇಶದ 2ನೇ ರಾಜಧಾನಿ ಮಾಡಿ- ಮೋದಿ ಸರ್ಕಾರಕ್ಕೆ ಕರ್ನಾಟಕದ ಪತ್ರ

    ಬೆಂಗಳೂರು: ನಮ್ಮ ಹೆಮ್ಮೆಯ ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಘೋಷಿಸುವಂತೆ ಕರ್ನಾಟಕ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

    ಭಾರತದಲ್ಲಿ ಎಲ್ಲಾ ಭಾಷೆಗಳನ್ನೂ ಆಡುವ ಜನರು ಸಿಲಿಕಾನ್ ಸಿಟಿಯಲ್ಲಿ ನೆಲೆಸಿದ್ದಾರೆ. ತಾಂತ್ರಿಕ, ವೈದ್ಯಕೀಯ, ಏರೋಸ್ಪೇಸ್, ಮಾಹಿತಿ-ತಂತ್ರಜ್ಞಾನ, ಸಂಗೀತ, ಸಾಹಿತ್ಯ ಹೀಗೆ ಎಲ್ಲಾ ಕ್ಷೇತ್ರಗಳ ಸಾಧಕರು ಇಲ್ಲಿದ್ದಾರೆ. ದೇಶದ 2ನೇ ರಾಜಧಾನಿಗೆ ಬೆಂಗಳೂರಿಗಿಂತ ಒಳ್ಳೆಯ ನಗರ ಮತ್ತೊಂದಿಲ್ಲ ಅಂತ ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

    ಬೆಂಗಳೂರು 2ನೇ ರಾಜಧಾನಿಯಾದರೆ ದಕ್ಷಿಣದ ರಾಜ್ಯಗಳಿಗೆ ನೆರವಾಗುತ್ತದೆ. ಅಷ್ಟೇ ಅಲ್ಲದೇ ಇಲ್ಲೇ ಚಳಿಗಾಲದ ಸಂಸತ್ ಅಧಿವೇಶನ ನಡೆಸಬಹುದು. ಸುಪ್ರೀಂಕೋರ್ಟ್ ಪೀಠ, ಯುಪಿಎಸ್‍ಸಿ ಕಚೇರಿ, ವಿದೇಶಗಳ ವೀಸಾ ಕಚೇರಿಗಳನ್ನು ತೆರೆಯಬಹುದು ಎಂದು ದೇಶಪಾಂಡೆ ಪತ್ರದಲ್ಲಿ ಹೇಳಿದ್ದಾರೆ.

  • ನನ್ನ ಸಾವಿಗೆ ನಾನು ಕಾರಣನಲ್ಲ, ನನ್ನ ದಡ್ಡತನ ಕಾರಣ- ಡೆತ್‍ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

    ನನ್ನ ಸಾವಿಗೆ ನಾನು ಕಾರಣನಲ್ಲ, ನನ್ನ ದಡ್ಡತನ ಕಾರಣ- ಡೆತ್‍ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

    ಬೆಂಗಳೂರು: ಇತ್ತೀಚೆಗೆ ಮೀಟರ್ ಬಡ್ಡಿ ದಂಧೆಗೆ ಸಿಲುಕಿದ್ದ ಯುವಕನೊಬ್ಬ ಪೊಲೀಸ್ ಕಂಟ್ರೋಲ್ ರೂಮ್ ಗೆ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಈ ಪ್ರಕರಣ ಮಾಸುವ ಮುನ್ನವೇ ಅದೇ ಮೀಟರ್ ಬಡ್ಡಿ ದಂಧೆಗೆ ಮತ್ತೊಬ್ಬ ಯುವಕ ಬಲಿಯಾಗಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಬಸವನಪುರದಲ್ಲಿ ನಡೆದಿದೆ.

    ಸಂತೋಷ್(28) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಇತ್ತೀಚೆಗೆ ಸುನಿಲ್ ಎಂಬವನಿಂದ ಮೀಟರ್ ಬಡ್ಡಿಗೆ ಸಾಲ ಪಡೆದಿದ್ದ. ಬಡ್ಡಿ ಕಟ್ಟಲಾಗದೆ ಒದ್ದಾಡುತ್ತಿದ್ದ. ಬಡ್ಡಿಗಾಗಿ ಸುನಿಲ್ ಸಂತೋಷನ ಬೈಕ್ ಹಾಗೂ ಮೊಬೈಲ್ ಕಿತ್ತುಕೊಂಡಿದ್ದ. ಇದರಿಂದ ಖಿನ್ನತೆಗೊಳಗಾಗಿದ್ದ ಸಂತೋಷ್, ಗುರುವಾರ ತಡರಾತ್ರಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

    ಡೆತ್‍ನೋಟ್‍ನಲ್ಲಿ ಏನಿದೆ?: ಅಮ್ಮ, ಅಪ್ಪ ನಾನು ಸಂತು. ಪಪ್ಪಾ ನನ್ನ ಕ್ಷಮಿಸಿಬಿಡಿ. ನನ್ನ ಕೈಯಲ್ಲಿ ಈ ಕಷ್ಟ ಅನುಭವಿಸಕ್ಕೆ ಆಗಲ್ಲ. ಇವತ್ತು ನನ್ನ ಜೊತೆ ಯಾರೂ ಇಲ್ಲ ಅಂತ ನನಗೆ ಅನ್ನಿಸುತ್ತಿದೆ. ಅಣ್ಣ ಅರುಣ ಅಪ್ಪ ಅಮ್ಮನ್ನ ಚೆನ್ನಾಗಿ ನೋಡಿಕೋ ಪ್ಲೀಸ್. ಅಪ್ಪ ನನಗೆ ಒಂದು ಅವಕಾಶ ಕೊಡಬೇಕಾಗಿತ್ತು. ಅಪ್ಪ ನನಗೆ ನೀನು ತುಂಬಾ ಸರಿ ಹೇಳಿದ್ದೆ, ಯಾರ ಜೊತೆ ಸೇರಬೇಡ ಅಂತಾ. ಆದರೂ ನಾನು ಕೇಳಿಲ್ಲ. ಅದೇ ಇವತ್ತು ನನ್ನ ಈ ತರ ಮಾಡಿಬಿಟ್ಟಿದೆ.

    ರಾಮ ಸಾರಿ ರಾಮ ನನ್ನ ಸ್ನೇಹಿತ ಅಂತ ನೀನೊಬ್ಬ ನನ್ನ ಜೊತೆ ಇದ್ದೆ. ಆದರೆ ನಾನು ಹೋಗ್ತಾ ಇದ್ದೀನಿ. ಮತ್ತೆ ಈ ಪತ್ರ ಓದೋ ಎಲ್ಲರಿಗೂ ನಾನು ಹೇಳೋದು ಒಂದೇ. ಸಾಲ ಕೊಡಿ ಆದರೆ ಪ್ರಾಣ ಕೇಳಬೇಡಿ. ನನ್ನ ಸಾವಿಗೆ ನಾನೇ ಕಾರಣವಲ್ಲ. ನನ್ನ ದಡ್ಡತನವೇ ಕಾರಣ. ನನ್ನನ್ನು ಎಲ್ಲರೂ ಕ್ಷಮಿಸಿ. ಮತ್ತೆ ಪಪ್ಪ ನನ್ನ ನೀವು ದಯವಿಟ್ಟು ಈ ಊರಲ್ಲಿ ಮಣ್ಣು ಮಾಡಬಾರದು. ನನ್ನನ್ನು ನೀವು ಸುಟ್ಟು ನಂತರ ನದಿಗೆ ಹಾಕಬೇಕು ಎಂದು ಡೆತ್‍ನೋಟ್ ಬರೆದಿದ್ದಾನೆ.

    ಈ ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಮೊದಲು ಬಿಜೆಪಿ, ಆರ್‍ಎಸ್‍ಎಸ್ ಬ್ಯಾನ್ ಮಾಡಬೇಕು, ಜಿಹಾದಿಗಳು ನೀವು: ದಿನೇಶ್ ಗುಂಡೂರಾವ್

    ಮೊದಲು ಬಿಜೆಪಿ, ಆರ್‍ಎಸ್‍ಎಸ್ ಬ್ಯಾನ್ ಮಾಡಬೇಕು, ಜಿಹಾದಿಗಳು ನೀವು: ದಿನೇಶ್ ಗುಂಡೂರಾವ್

    ಬೆಂಗಳೂರು: ಮೂಡಿಗೆರೆ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಎನ್‍ಎಸ್‍ಯುಐ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ಮಾಡಿದ್ದಾರೆ.

    ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಧನ್ಯಶ್ರೀ ಆತ್ಮಹತ್ಯೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಧನ್ಯಶ್ರೀ ಹಿಂದೂ ಅಲ್ಲವೇ. ದೀಪಕ್ ರಾವ್ ಹತ್ಯೆ ಬಗ್ಗೆ ಮಾತನಾಡುತ್ತೀರಾ. ಪ್ರವೀಣ್ ಪೂಜಾರಿ ಹತ್ಯೆ ಬಗ್ಗೆ ಮಾತನಾಡುತ್ತೀರಾ. ಆದರೆ ಧನ್ಯಶ್ರೀ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಆತ್ಮಹತ್ಯೆಯ ಹಿಂದೆ ಬಜರಂಗದಳದ ಮುಖಂಡ ಇರುವುದರಿಂದ ಮಾತನಾಡುತ್ತಿಲ್ವಾ. ದೀಪಕ್ ರಾವ್ ಬಗ್ಗೆ ಒಂದು ಧನ್ಯಶ್ರೀ ಬಗ್ಗೆ ಒಂದು ಸಿದ್ಧಾಂತ ನಿಮ್ಮದು. ಮೊದಲು ಬಿಜೆಪಿ ಮತ್ತು ಆರ್‍ಎಸ್‍ಎಸ್ ಬ್ಯಾನ್ ಮಾಡಬೇಕು ಜಿಹಾದಿಗಳು ನೀವು ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದರು.

    ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ಕುರಿತಂತೆ ಎನ್‍ಎಸ್‍ಯುಐ ಕಾರ್ಯಕರ್ತರು ಇಂದು ನಗರದ ಮೌರ್ಯ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು. ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಧನ್ಯಶ್ರೀ ಆತ್ಮಹತ್ಯೆಯ ಹಿಂದೆ ಬಜರಂಗದಳದ ಮುಖಂಡ ಅನಿಲ್ ಕೈವಾಡ ಇದೆ. ಆದ್ದರಿಂದ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಈ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಾರ್ಯಕರ್ತರು ಬಿಜೆಪಿ ನಾಯಕರನ್ನು ದೂಷಿಸಿದರು.

  • ಇಷ್ಟವಾದ ವಾಹನ ನೋಂದಣಿ ಸಂಖ್ಯೆಗೆ ಇನ್ಮುಂದೆ ತಿಂಗಳುಗಟ್ಟಲೆ ಕಾಯಬೇಕಿಲ್ಲ- ಬರ್ತಿದೆ `ವಾಹನ್ 4′ ವೆಬ್‍ಸೈಟ್

    ಇಷ್ಟವಾದ ವಾಹನ ನೋಂದಣಿ ಸಂಖ್ಯೆಗೆ ಇನ್ಮುಂದೆ ತಿಂಗಳುಗಟ್ಟಲೆ ಕಾಯಬೇಕಿಲ್ಲ- ಬರ್ತಿದೆ `ವಾಹನ್ 4′ ವೆಬ್‍ಸೈಟ್

    ಬೆಂಗಳೂರು: ರಾಜ್ಯದ ಜನತೆಗೆ ಸಾರಿಗೆ ಇಲಾಖೆ ಸಂತಸದ ಸಂಗತಿಯೊಂದನ್ನು ಹೊತ್ತು ತಂದಿದೆ. ಇಷ್ಟು ದಿನ ವಾಹನಗಳಿಗೆ ಇಷ್ಟವಾದ ನೋಂದಣಿ ಸಂಖ್ಯೆ ಅಥವಾ ತಮ್ಮ ಜನ್ಮದಿನಾಂಕದ ನಂಬರ್ ಪಡೆಯಲು ಜನರು ತಿಂಗಳಿನಿಂದ ಹಿಡಿದು ವರ್ಷಾನುಗಟ್ಟಲೆ ಕಾಯುತ್ತಿದ್ದರು. ಈಗ ತಕ್ಷಣ ಪಡೆಯವಂತಹ ಹೊಸ ಸಾಫ್ಟ್ ವೇರ್ ವೊಂದನ್ನ ಸಾರಿಗೆ ಇಲಾಖೆ ಲಾಂಚ್ ಮಾಡುತ್ತಿದೆ.

    ಇಷ್ಟು ದಿನ ತಮಗೆ ಇಷ್ಟವಾದ ನಂಬರ್ ಪಡೆಯಲು ಜನರು ವರ್ಷಾನುಗಟ್ಟಲೆ ಕಾದು, ಆ ನಂಬರಿನ ಸೀರೀಸ್ ಬರುವ ತನಕ ವಾಹನಗಳನ್ನೇ ಖರೀದಿ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಇಂತಹ ನಂಬರ್ ಪಡೆಯಲು ಹಣವನ್ನು ಸಹ ನೀಡಬೇಕಿತ್ತು. ಆದರೆ ಇದಕ್ಕೆಲ್ಲ ಕಡಿವಾಣ ಹಾಕೋದಕ್ಕೆ ಅಂತಾನೆ ಸಾರಿಗೆ ಇಲಾಖೆ ಇನ್ನು ಕೆಲವೇ ದಿನಗಳಲ್ಲಿ ‘ವಾಹನ್ 4’ ಎಂಬ ವಿನೂತನ ವೆಬ್‍ಸೈಟ್ ಹೊರತರುತ್ತಿದೆ. ಇದರಲ್ಲಿ ಸಾರಿಗೆ ಇಲಾಖೆಯ ಜೊತೆ ವ್ಯವಹಾರ ಮಾಡುವವರು ಸಂಪೂರ್ಣವಾಗಿ ಆನ್‍ಲೈನ್ ಮುಖಾಂತರವೇ ವ್ಯವಹಾರ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ ತಮಗೆ ಇಷ್ಟವಾದ ನಂಬರನ್ನು ಸಹ ವೆಬ್‍ಸೈಟ್ ಮೂಲಕ ಲಾಕ್ ಮಾಡಿಸಿ 24 ಗಂಟೆಗಳ ಒಳಗೆ ಖರೀದಿ ಮಾಡಬಹುದು.

    ವೆಬ್‍ಸೈಟ್‍ನ ಪ್ರಯೋಜನ

    * ಎಲ್ಲಾ ವಾಹನಗಳ ನೋಂದಣಿ ಸೇವೆಗಳಿಗೆ ಆನ್‍ಲೈನ್ ಅರ್ಜಿ ಸಲ್ಲಿಕೆ.
    * ಆನ್‍ಲೈನ್‍ನಲ್ಲೇ ಶುಲ್ಕ ಪಾವತಿ.
    * ಅರ್ಜಿದಾರರಿಗೆ ಎಸ್‍ಎಂಎಸ್ ಮೂಲಕ ಮಾಹಿತಿ.
    * ರ‍್ಯಾಂಡಮ್‌ ಪದ್ಧತಿಯಲ್ಲಿ ವಾಹನ ನೊಂದಣಿ ಸಂಖ್ಯೆ ಹಂಚಿಕೆ.
    * ವಾಹನದ ಎನ್‍ಓಸಿ ಶೀಘ್ರವಾಗಿ ನೀಡುವಿಕೆ.
    * ವಾಹನಗಳ ನೊಂದಣಿಗಳ ಬಗ್ಗೆ ಎಸ್‍ಎಂಎಸ್ ಮೂಲಕ ಮಾಹಿತಿ ಪಡಯಬುದು ಎಂದು ಸಾರಿಗೆ ಇಲಾಖೆಯ ಕಮಿಷನರ್ ದಯಾನಂದ್ ತಿಳಿಸಿದ್ದಾರೆ.

  • ದೀಪಕ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಪ್ರಥಮ್

    ದೀಪಕ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಪ್ರಥಮ್

    ಮಂಗಳೂರು: ದುಷ್ಕರ್ಮಿಗಳ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ಮಂಗಳೂರಿನ ದೀಪಕ್ ರಾವ್ ನಿವಾಸಕ್ಕೆ ಇಂದು ಬಿಗ್ ಬಾಸ್ ಸೀಸನ್ 4 ವಿಜೇತ ಪ್ರಥಮ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

    ಮೃತ ದೀಪಕ್ ರಾವ್ ಕುಟುಂಬದ ಸಂಕಷ್ಟಕ್ಕೆ ಪ್ರಥಮ್ ಸ್ಪಂದಿಸಿದ್ದು, ಕುಟುಂಬದವರು ಇನ್ನೂ ಶಾಕ್ ನಿಂದ ಹೊರಗೆ ಬಂದಿಲ್ಲ. ಎಲ್ಲರೂ ಸಾಮರಸ್ಯದಿಂದ ಇರಬೇಕು. ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೇ ಪರಿಹಾರವಾಗಿ ಐವತ್ತು ಸಾವಿರ ರೂಪಾಯಿಯನ್ನ ನೀಡಿದ್ದಾರೆ.

    ಸದ್ಯ ಎಂ.ಎಲ್.ಎ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಪ್ರಥಮ್ ಡಬ್ಬಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಆದರೂ ನೇರವಾಗಿ ಮಂಗಳೂರಿಗೆ ಹೋಗಿ ಮೃತ ದೀಪಕ್ ರಾವ್ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದಿದ್ದಾರೆ.

    ಇಂದು ಮೃತ ಪಟ್ಟಿರುವ ಬಶೀರ್ ಸಾವಿಗೂ ಸಾಂತಾಪ ತಿಳಿಸಿದ್ದಾರೆ. “ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾದ ಬಶೀರ್ ರ ಆತ್ಮಕ್ಕೆ ಶಾಂತಿ ಸಿಗಲಿ. ಯಾರೇ ಆಗಲಿ ಕೊಲ್ಲುವುದು ತಪ್ಪು. ಈ ಹತ್ಯೆಮಾಡಿದ ಅಯೋಗ್ಯರಿಗೆ ಉಗ್ರ ಶಿಕ್ಷೆಯಾಗಲಿ. ಸುಂದರ ಸಮಾಜ ನಿರ್ಮಾಣವಾಗಬೇಕೆಂದರೆ ಇಂತಹ ಮುಗ್ಧರ ಹತ್ಯೆ ನಿಲ್ಲಬೇಕು” ಎಂದು ತಮ್ಮ ಫೇಸ್‍ಬುಕ್‍ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

    ಕಳೆದ ಮೂರು ದಿನಗಳ ಹಿಂದೆ ದೀಪಕ್ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದು, ಬಹಳ ಪರಿಣಾಮಕಾರಿಯಾಗಿದೆ. ಈವರೆಗೆ ದೀಪಕ್ ತಾಯಿ ಪ್ರೇಮ ಅಕೌಂಟ್ ಗೆ ಬಿದ್ದಿರುವುದು 32 ಲಕ್ಷ ರುಪಾಯಿಗಳು. ಶುಕ್ರವಾರ ರಾತ್ರಿಯಷ್ಟೊತ್ತಿಗೆ 17 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಶನಿವಾರ ರಾತ್ರಿಯವರೆಗೆ 32 ಲಕ್ಷ ರೂಪಾಯಿ ಹಣ ಜಮೆಯಾಗಿದೆ.

    ದೀಪಕ್ ಹತ್ಯೆಯಾಗುವ ಮೊದಲು ತಾಯಿ ಪ್ರೇಮ ಅವರ ಖಾತೆಯಲ್ಲಿ ಎರಡೂವರೆ ಸಾವಿರ ರೂಪಾಯಿ ಹಣ ಇತ್ತು. ಸಾರ್ವಜನಿಕರ ಸಹಾಯ ಧನದ ಜೊತೆಗೆ ರಾಜ್ಯ ಸರ್ಕಾರ 5 ಲಕ್ಷ, ಜಿಲ್ಲಾಧಿಕಾರಿ ಪರಿಹಾರ ನಿಧಿಯಿಂದ 5 ಲಕ್ಷ ರುಪಾಯಿ ಕುಟುಂಬಕ್ಕೆ ಹಸ್ತಾಂತರವಾಗಿದೆ. ಚೆಕ್ಕನ್ನು ಇನ್ನೂ ಅಕೌಂಟಿಗೆ ಹಾಕಿಲ್ಲ. ಇದನ್ನು ಹೊರತುಪಡಿಸಿ ಬಿಜೆಪಿ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಒಟ್ಟು 52 ಲಕ್ಷ ರೂಪಾಯಿಯ ಆರ್ಥಿಕ ಸ್ಥೈರ್ಯ, ಧೈರ್ಯ ನೊಂದ ಕುಟುಂಬಕ್ಕೆ ಸಿಕ್ಕಿದೆ. ದೀಪಕ್‍ನ ನೂಂದ ಕುಟುಂಬಕ್ಕೆ ಎಲ್ಲಾ ಧರ್ಮದವರು ಸಹಾಯ ಹಸ್ತ ಚಾಚಿದ್ದಾರೆ. ಇಂದಿನವರೆಗೂ ಸಂದಾಯದ ಹಣ ಒಂದೂ ಕೋಟಿರೂಪಾಯಿಗೆ ತಲುಪಬಹುದು.

    ಸುರತ್ಕಲ್ ಸಮೀಪದ ಕಾಟಿಪಳ್ಳ 2 ನೇ ಬ್ಲಾಕ್ ನ ಕೈಕಂಬದಲ್ಲಿ ಜನವರಿ 3 ಬುಧವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ದೀಪಕ್ ರಾವ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದನ್ನು ಓದಿ: ಮೃತ ದೀಪಕ್ ರಾವ್ ಕುಟುಂಬಕ್ಕೆ ಕಾಣದ ಕೈಗಳ ಸಹಾಯಹಸ್ತ