Tag: Bangalore

  • ಐಪಿಎಲ್ 11ರಲ್ಲಿ ರಾಜ್ಯದ ಆಟಗಾರರಿಗೆ ಬಂಪರ್ – ರಾಹುಲ್ 11 ಕೋಟಿ, ಕರುಣ್ ನಾಯರ್ 5.60 ಕೋಟಿ ರೂ.ಗೆ ಸೇಲ್

    ಐಪಿಎಲ್ 11ರಲ್ಲಿ ರಾಜ್ಯದ ಆಟಗಾರರಿಗೆ ಬಂಪರ್ – ರಾಹುಲ್ 11 ಕೋಟಿ, ಕರುಣ್ ನಾಯರ್ 5.60 ಕೋಟಿ ರೂ.ಗೆ ಸೇಲ್

    ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ 11ನೇ ಆವೃತ್ತಿಯ ಹರಾಜು ಬೆಂಗಳೂರಿನಲ್ಲಿ ಶುರುವಾಗಿದೆ. ಕರ್ನಾಟಕ ಇಬ್ಬರು ಆಟಗಾರರು ಐಪಿಎಲ್ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ದಾರೆ.

    ಕರ್ನಾಟಕದ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪಾಲಾಗಿದ್ದಾರೆ. ಕರುಣ್ ನಾಯರ್ ಮೂಲ ಬೆಲೆ 50 ಲಕ್ಷ ಇದ್ದರೂ ಅವರನ್ನು ಕಿಂಗ್ಸ್ ಇಲವೆನ್ ಪಂಜಾಬ್ ತಂಡ 5.60 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ.

    ಇನ್ನೋರ್ವ ಆಟಗಾರ ಕೆ.ಎಲ್ ರಾಹುಲ್ 11 ಕೋಟಿ ರೂಪಾಯಿಗೆ ಸೇಲ್ ಆಗಿದ್ದಾರೆ. ರಾಹುಲ್ ಕಳೆದ ಸೀಸನ್‍ನಲ್ಲಿ ಆರ್‍ಸಿಬಿ ಪರ ಆಡಿದ್ದರು. ಈ ಬಾರಿ ರಾಹುಲ್ ಖರೀದಿಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪಂಜಾಬ್ ಹಾಗೂ ಹೈದರಾಬಾದ್ ತಂಡಗಳು ರಾಹುಲ್‍ರನ್ನು ಖರೀದಿಸಲು ತೀವ್ರ ಪೈಪೋಟಿ ನಡೆಸಿದ್ದರು. ಕೊನೆಗೆ ರಾಹುಲ್ ಪಂಜಾಬ್ ತಂಡದ ಪಾಲಾದರು.

    ಶಿಖರ್ ಧವನ್ ಹರಾಜಿನಲ್ಲಿ ಸೇಲ್ ಆದ ಮೊದಲ ಆಟಗಾರ ಎನಿಸಿಕೊಂಡರು. ಶಿಖರ್ ಧವನ್‍ಗೆ 2 ಕೋಟಿ ರೂ. ಮೂಲ ಬೆಲೆ ಫಿಕ್ಸ್ ಮಾಡಲಾಗಿತ್ತು. ಆದರೆ ಧವನ್ 5.20 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾದರು.

    ಇಂದಿನ ಹರಾಜಿನಲ್ಲಿ 36 ಆಟಗಾರರ ಬೇಸ್ ಪ್ರೈಸ್ 2 ಕೋಟಿ ರೂ. ಎಂದು ನಿಗದಿಗೊಳಿಸಲಾಗಿತ್ತು. ಭಾನುವಾರದವರೆಗೆ ನಡಯಲಿರುವ ಹರಾಜಿನಲ್ಲಿ ಒಟ್ಟು 8 ತಂಡಗಳಿಗಾಗಿ 182 ಆಟಗಾರರ ಹರಾಜು ನಡೆಯಲಿದೆ.

    https://twitter.com/IPLCricket/status/957150488742514690

    https://twitter.com/IPLCricket/status/957155147653746689

  • ನಾನ್ ಇಲ್ಲಿರಲ್ಲ..ನನ್ನ ಮಠಕ್ಕೆ ಕಳುಹಿಸಿ – ಆಸ್ಪತ್ರೆಯಲ್ಲಿ ಹಠ ಹಿಡಿದ ಸಿದ್ದಗಂಗಾ ಶ್ರೀ

    ನಾನ್ ಇಲ್ಲಿರಲ್ಲ..ನನ್ನ ಮಠಕ್ಕೆ ಕಳುಹಿಸಿ – ಆಸ್ಪತ್ರೆಯಲ್ಲಿ ಹಠ ಹಿಡಿದ ಸಿದ್ದಗಂಗಾ ಶ್ರೀ

    ಬೆಂಗಳೂರು: ಶತಾಯುಷಿ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಆಸ್ಪತ್ರೆಯಲ್ಲಿ ನಾನಿರಲ್ಲ.. ನನ್ನನ್ನು ಮಠಕ್ಕೆ ಕಳುಹಿಸಿ ಎಂದು ಶ್ರೀಗಳು ಹಠ ಮಾಡುತ್ತಿದ್ದಾರೆ.

    ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಶುಕ್ರವಾರ ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜಿಎಸ್ ಆಸ್ಪತ್ರೆಯಲ್ಲಿ ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಮುಂಜಾನೆ 6 ಗಂಟೆಗೆ ನುರಿತ ವೈದ್ಯರಿಂದ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ.

    ಇಂದು ಬೆಳಗ್ಗೆ 7.30ರ ಲಿಂಗ ಪೂಜೆ ಬಳಿಕ ಬಿಜಿಎಸ್ ವೈದ್ಯರ ತಂಡ ಸಿಟಿ ಸ್ಕ್ಯಾನ್ ಮಾಡಿದ್ದಾರೆ. ಸಿಟಿ ಸ್ಕ್ಯಾನ್ ಬಳಿಕ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡುಬಂದಲ್ಲಿ ಡಿಸ್ಚಾರ್ಜ್ ಮಾಡುವುದಾಗಿ ವೈದ್ಯರು ತಿಳಿಸಿದ್ದರು. ಆದರೆ ಶ್ರೀಗಳು ನಾನು ಆಸ್ಪತ್ರೆಯಲ್ಲಿ ಇರಲ್ಲ. ನನ್ನನ್ನ ಮಠಕ್ಕೆ ಕಳುಹಿಸಿ ಎಂದು ಹಠ ಮಾಡಿದ್ದಾರೆ. ಆದ್ದರಿಂದ ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಶ್ರೀಗಳನ್ನು ಡಿಸ್ಚಾರ್ಜ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ರವೀಂದ್ರ, ಶ್ರೀಗಳಿಗೆ ಎಲ್ಲಾ ತಪಾಸಣೆ ಮಾಡಿದ್ದೇವೆ. ನಾವು ಮುಂದಿನ ತಿರ್ಮಾನ ತೆಗೆದುಕೊಳ್ಳುತ್ತಿದ್ದು, ಡಿಸ್ಚಾರ್ಜ್ ಮಾಡಲು ನಿರ್ಧಾರ ಮಾಡಿದ್ದೇವೆ, ಆದರೆ ಮಠಕ್ಕೆ ಹೋದ ನಂತರ 10 ದಿನಗಳ ವಿಶ್ರಾಂತಿ ಪಡೆಯಬೇಕು. ಆದ್ದರಿಂದ ಅಲ್ಲಿಯೂ ಎಲ್ಲಾ ಸಿದ್ಧತೆ ಮಾಡಿದ್ದೇವೆ. ಈಗಾಗಲೇ ಬಂದವರಿಗೆ ದರ್ಶನ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.

  • ಲ್ಯಾಂಬೋರ್ಗಿನಿ ಕಾರು ನೋಡಲು ದಚ್ಚು ಮನೆಗೆ `ಸ್ಟಾರ್’ ನಟರು ಭೇಟಿ

    ಲ್ಯಾಂಬೋರ್ಗಿನಿ ಕಾರು ನೋಡಲು ದಚ್ಚು ಮನೆಗೆ `ಸ್ಟಾರ್’ ನಟರು ಭೇಟಿ

    ಬೆಂಗಳೂರು: ಚಾಲೆಜಿಂಗ್ ಸ್ಟಾರ್ ದರ್ಶನ್ ಅವರನ್ನು ಇದೀಗ ಸ್ಯಾಂಡಲ್‍ವುಡ್ ನ ದುಬಾರಿ ನಟ ಎಂದು ಕರೆಯುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಕೂಡ ಪಡೆಯುತ್ತಾರೆ.

    ಈಗ ತಾನೇ `ಕುರುಕ್ಷೇತ್ರ’ ಸಿನಿಮಾದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮತ್ತೊಂದೆಡೆ ಲ್ಯಾಂಬೋರ್ಗಿನಿ ಕಾರು ಹತ್ತಿ ದರ್ಶನ್ ಸವಾರಿ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ದಚ್ಚು ಮನೆಗೆ ಕನ್ನಡದ ಸ್ಟಾರ್ ನಟರು ಭೇಟಿ ಕೊಟ್ಟಿದ್ದಾರೆ. ದರ್ಶನ್ ಅವರ ಆಪ್ತ ಸ್ನೇಹಿತರು, ಕಲಾವಿದರು ಮತ್ತು ನಿರ್ಮಾಪಕರು ಮನೆಗೆ ಭೇಟಿ ಕೊಟ್ಟು ಫೋಟೋ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

    ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ `ಕುರುಕ್ಷೇತ್ರ’ ಸಿನಿಮಾದಲ್ಲಿ ದರ್ಶನ್ ಜೊತೆ ಅಭಿನಯಿಸಿದ್ದು, ಅಂದಿನಿಂದಲೂ ತುಂಬಾ ಆತ್ಮೀಯರಾಗಿದ್ದಾರೆ. ದರ್ಶನ್ ಫಾರ್ಮ್ ಹೌಸ್, ಮನೆ ಸೇರಿದಂತೆ ಅವರ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತಿಚೇಗಷ್ಟೇ ದರ್ಶನ್ ಖರೀದಿಸಿರುವ ಲ್ಯಾಂಬೋರ್ಗಿನಿ ಕಾರು ನೋಡಲು ಅವರ ಮನೆಗೆ ಸರ್ಜಾ ಭೇಟಿ ನೀಡಿದ್ದಾರೆ

    ಅರ್ಜುನ್ ಸರ್ಜಾ ಜೊತೆ ಚಿರಂಜೀವಿ ಸರ್ಜಾ ಮತ್ತು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೂಡ ದಚ್ಚು ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. `ಮೆಜೆಸ್ಟಿಕ್’ ಚಿತ್ರದಲ್ಲಿ ಅವಕಾಶ ನೀಡಿದ್ದ ನಿರ್ಮಾಪಕ ಎಂ.ಜಿ ರಾಮಮೂರ್ತಿ ಕೂಡ ದರ್ಶನ್ ಮನೆಗೆ ಆಗಮಿಸಿ ಹೊಸ ಕಾರು ನೋಡಿ ಖುಷಿ ಪಟ್ಟಿದ್ದಾರೆ.

    ನಿರ್ದೇಶಕ, ನಟ ತರುಣ್ ಸುಧೀರ್ ಕೂಡ ಹೋಗಿದ್ದಾರೆ. ಯುವ ನಟ ಯಶಸ್ ಸೂರ್ಯ ಕೂಡ ದರ್ಶನ್ ಮನೆಯಲ್ಲಿ ಕಾಣಿಸಿಕೊಂಡಿದ್ದು, ಯಶಸ್ ಸೂರ್ಯ `ಕುರುಕ್ಷೇತ್ರ’ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

    ಸಂಕ್ರಾಂತಿ ಹಬ್ಬದ ದಿನದಂದು ದರ್ಶನ್ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದರು. ಮೈಸೂರಿಗೆ ಹೊಸ ಕಾರಿನಲ್ಲಿ ತೆರಳಿ ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಬೆಟ್ಟದ ಅರ್ಚಕರಿಂದ ಪೂಜೆ ಮಾಡಿಸಿ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದರು. ದರ್ಶನ್ ಅವರ ಜೊತೆಯಲ್ಲಿ ಅವರ ಹಲವು ಗೆಳೆಯರು ಸಾಥ್ ನೀಡಿದ್ದರು.

    ಸದ್ಯಕ್ಕೆ ದರ್ಶನ್ ಈಗ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮುನಿರತ್ನ ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದೊಡ್ಡ ತಾರಾಂಗಣವಿರುವ ಈ ಸಿನಿಮಾ ಬಿಡುಗಡೆಗಾಗಿ ಕರ್ನಾಟಕ ಜನತೆ ಕಾಯುತ್ತಿದ್ದಾರೆ. ಇದನ್ನು ಓದಿ: ಸ್ಯಾಂಡಲ್ ವುಡ್ ನಲ್ಲಿ ಫಸ್ಟ್ ಟೈಂ ಲ್ಯಾಂಬೋರ್ಗಿನಿಗೆ ಒಡೆಯರಾದ ದರ್ಶನ್: ವಿಡಿಯೋ ನೋಡಿ

     

  • ಕರ್ನಾಟಕ ಬಂದ್- ಸರ್ಕಾರಿ ವೈದ್ಯರಿಗೆ ರಜೆ ಇಲ್ಲ, ಎಲ್ರೂ ತಪ್ಪದೆ ಕೆಲಸಕ್ಕೆ ಹಾಜರಾಗುವಂತೆ ಆರೋಗ್ಯ ಇಲಾಖೆ ಸೂಚನೆ

    ಕರ್ನಾಟಕ ಬಂದ್- ಸರ್ಕಾರಿ ವೈದ್ಯರಿಗೆ ರಜೆ ಇಲ್ಲ, ಎಲ್ರೂ ತಪ್ಪದೆ ಕೆಲಸಕ್ಕೆ ಹಾಜರಾಗುವಂತೆ ಆರೋಗ್ಯ ಇಲಾಖೆ ಸೂಚನೆ

    ಬೆಂಗಳೂರು: ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಇಂದು ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದು, ಇಂದು ಎಲ್ಲಾ ಸರ್ಕಾರಿ ವೈದ್ಯರ ರಜೆಯನ್ನು ರದ್ದುಗೊಳಿಸಲಾಗಿದೆ.

    ಎಲ್ಲರೂ ತಪ್ಪದೆ ಕೆಲಸಕ್ಕೆ ಹಾಜರಾಗುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆಯನ್ನು ನೀಡಿದೆ. ಬಂದ್ ವೇಳೆ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಅಹಿತಕರ ಘಟನೆಗಳು ನಡೆದಾಗ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಹಾಗಾಗಿ ಯಾರೂ ರಜೆ ಹಾಕುವುಂತಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ಇದನ್ನು ಓದಿ: ಮಹದಾಯಿಗಾಗಿ ಕರ್ನಾಟಕ ಬಂದ್- ರಸ್ತೆಗಿಳಿಯದ BMTC, KSRTC ಬಸ್

  • ವಾಟಾಳ್ ಹಾಗೂ ಕರವೇ ಪ್ರವೀಣ್ ಶೆಟ್ಟಿ ನಡುವೆ ಮುನಿಸು?

    ವಾಟಾಳ್ ಹಾಗೂ ಕರವೇ ಪ್ರವೀಣ್ ಶೆಟ್ಟಿ ನಡುವೆ ಮುನಿಸು?

    ಬೆಂಗಳೂರು: ಮಹದಾಯಿಗಾಗಿ ಗುರುವಾರ ಕರೆ ನೀಡಿದ್ದ ಬಂದ್ ವಿಚಾರದಲ್ಲಿ ಕನ್ನಡ ಸಂಘಟನೆಗಳ ಭಿನ್ನಮತ ಶಮನ ಆಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಈ ನಡುವೆ ಕನ್ನಡ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರ ನಡುವೆ ಬಂದ್ ವಿಚಾರವಾಗಿ ಮುನಿಸು ಏರ್ಪಟ್ಟಿದೆ ಎನ್ನಲಾಗಿದೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರವೀಣ್ ಶೆಟ್ಟಿ ಅವರು, ಜನವರಿ 25 ರ ಬಂದ್‍ಗೆ ಬೆಂಬಲ ಕೊಡುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅಂದು ಬಂದ್ ಮಾಡುವ ಬದಲು ಹೋರಾಟ ಮಾಡೋಣ ಎನ್ನುವುದು ನಮ್ಮ ಕರವೇ ಕಾರ್ಯಕರ್ತ ಅಭಿಪ್ರಾಯ ಎಂದರು.

    ಮಹದಾಯಿ ವಿಚಾರವಾಗಿ ಅನಿವಾರ್ಯವಾಗಿ ಬಂದ್ ಮಾಡೋಣ, ಆದರೆ ಈಗ ಜನರಲ್ಲಿ ಬಂದ್ ಅಗತ್ಯದ ಪ್ರಶ್ನೆ ಮೂಡಿದೆ. ಫೆಬ್ರವರಿ ನಾಲ್ಕರಂದು ಬೆಂಗಳೂರು ಬಂದ್ ಮಾಡುವ ನಿರ್ಧಾರಕ್ಕೆ ನಾವು ಬೆಂಬಲ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ರಾಜ್ಯದಲ್ಲಿ ಪದೇ ಪದೇ ಬಂದ್ ನಡೆಸುವುದು ಸರಿಯಾಗುವುದಿಲ್ಲ, ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ. ಆದರೆ ಫೆಬ್ರವರಿ ನಾಲ್ಕರಂದು ಬಂದ್ ಗೆ ಕರೆ ನೀಡಿದ್ದು ಯಾಕೆ ಎಂಬುದನ್ನು ಅವರ ಬಳಿಯೇ ಕೇಳಬೇಕು ಎಂದು ಪ್ರಶ್ನಿಸುವ ಮೂಲಕ ವಾಟಾಳ್ ನಾಗರಾಜ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

    ಕನ್ನಡ ಸಂಘಟನೆಗಳಿಗೆ ಒಂದು ಪ್ರಾದೇಶಿಕ ಪಕ್ಷದ ಚಿಂತನೆ ಬೇಕಾಗಿದೆ. ಆದರೆ ಒಂದು ರಾಷ್ಟ್ರೀಯ ಪಕ್ಷದ ಜೊತೆ ಕೈ ಜೋಡಿಸುವುದು ಅಥವಾ ಒಂದೇ ಪಕ್ಷಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಸಂಘಟನೆ ಅಂದರೆ ಎಲ್ಲಾ ಹೋರಾಟಗಳಲ್ಲಿ ಒಟ್ಟಿಗೆ ಹೋಗಬೇಕು. ಆದರೆ ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯದಿಂದ ಈ ವಿಚಾರದಿಂದ ಕೊಂಚ ಹೊರ ಉಳಿದಿದ್ದೇನೆ ಎಂದರು.

  • ಮಹದಾಯಿ ಬಂದ್ ಗೆ ಬೆಂಬಲ ನೀಡಲ್ಲ ಎಂದ ಹೋಟೆಲ್ ಮಾಲೀಕರ ಸಂಘಟನೆ

    ಮಹದಾಯಿ ಬಂದ್ ಗೆ ಬೆಂಬಲ ನೀಡಲ್ಲ ಎಂದ ಹೋಟೆಲ್ ಮಾಲೀಕರ ಸಂಘಟನೆ

    ಬೆಂಗಳೂರು: ಮಹದಾಯಿಗಾಗಿ ಗುರುವಾರ ಕರೆ ನೀಡಿದ್ದ ಬಂದ್ ವಿಚಾರದಲ್ಲಿ ಕನ್ನಡ ಸಂಘಟನೆಗಳ ಭಿನ್ನಮತ ಸ್ಫೋಟಗೊಂಡ ಬೆನ್ನಲ್ಲೇ ಹೋಟೆಲ್ ಮಾಲೀಕರು ಬಂದ್ ಗೆ ಬೆಂಬಲ ನೀಡಲ್ಲ ಎಂದು ಹೇಳಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಹೋಟೆಲ್ ಅಸೊಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಅವರು, ಹೋಟೆಲ್ ಮಾಲೀಕರ ಸಂಘ ವತಿಯಿಂದ ಜನವರಿ 25 ರಂದು ನಡೆಯುವ ಬಂದ್ ಗೆ ಬೆಂಬಲ ನೀಡದಿರಲು ನಿರ್ಧರಿಸಲಾಗಿದೆ. ಬಂದ್ ನಡೆಯುವುದರಿಂದ ಜನ ಜೀವನ ಅಸ್ತವ್ಯಸ್ತವಾಗುತ್ತದೆ. ಹಾಗಾಗಿ ನಾವು ಯಾವುದೇ ರೀತಿಯ ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

    ಹೋಟೆಲ್ ಮಾಲೀಕರ ಬೆನ್ನಲ್ಲೇ ಕರ್ನಾಟಕ ಟ್ಯಾಕ್ಸಿ ಚಾಲಕರ ಸಂಘಟನೆಯೂ ಬಂದ್ ಬೆಂಬಲ ನೀಡುವ ವಿಚಾರವಾಗಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿಗೆ ¸ಸ್ಪಷ್ಟನೆ ನೀಡಿದ ಟ್ಯಾಕ್ಸಿ ಚಾಲಕರ ಅಧ್ಯಕ್ಷರು, ನಮ್ಮನ್ನು ಯಾವ ಕನ್ನಡಪರ ಸಂಘಟನೆಗಳು ಸಂಪರ್ಕಿಸಿ ಬಂದ್ ಗೆ ಬೆಂಬಲ ಕೇಳಿಲ್ಲ. ಹಾಗಾಗಿ ಬಂದ್ ಗೆ ಬೆಂಬಲ ನೀಡುವ ವಿಚಾರವಾಗಿ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಹೇಳಿದ್ದಾರೆ.

  • ಎಳನೀರಲ್ಲಿ ಮತ್ತು ಬರೋ ಐಟಂ ಹಾಕಿ ರೇಪ್- ಕೋಲ್ಡ್ & ಟೆಂಪ್ಟ್ ಗೆ ಹೀಗಾಗೋಯ್ತು, ಯಾರಿಗೂ ಹೇಳ್ಬೇಡ ಎಂದ

    ಎಳನೀರಲ್ಲಿ ಮತ್ತು ಬರೋ ಐಟಂ ಹಾಕಿ ರೇಪ್- ಕೋಲ್ಡ್ & ಟೆಂಪ್ಟ್ ಗೆ ಹೀಗಾಗೋಯ್ತು, ಯಾರಿಗೂ ಹೇಳ್ಬೇಡ ಎಂದ

    ಬೆಂಗಳೂರು: ಎಳನೀರಲ್ಲಿ ಮೆಡಿಸಿನ್ ಮಿಕ್ಸ್ ಮಾಡಿ ಸ್ನೇಹಿತೆಯನ್ನು ಅತ್ಯಾಚಾರ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು, ಆರೋಪಿ ದಿನೇಶ್ ವಿರುದ್ಧ ಸಂತ್ರಸ್ತೆ ಈಗ ದೂರು ದಾಖಲಿಸಿದ್ದಾರೆ.

    ಸಂತ್ರಸ್ತೆ ಮತ್ತು ದಿನೇಶ್ ಎರಡೂವರೆ ವರ್ಷಗಳಿಂದ ಸ್ನೇಹಿತರಾಗಿದ್ದರು. ದಿನೇಶ್ ಒಂದು ದಿನ ಮುರುಡೇಶ್ವರಕ್ಕೆ ಟ್ರಿಪ್‍ಗೆ ಹೋಗೋಣ ಎಂದು ಸಂತ್ರಸ್ತೆಯನ್ನು ಕರೆದೊಯ್ದಿದ್ದು, ಎಳನೀರಿನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈಗ ನೊಂದ ಯುವತಿ ಎಚ್‍ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ದೂರಿನಲ್ಲಿ ಏನಿದೆ?: ದಿನೇಶ್ ಮುರುಡೇಶ್ವರಕ್ಕೆ ಟ್ರಿಪ್‍ಗೆ ಹೋಗೋಣ ಎಂದು ಕರೆದೊಯ್ದಿದ್ದ. ಆದರೆ ರಾತ್ರಿ ಬಸ್ ಮಿಸ್ ಆಯಿತು. ಇಲ್ಲೇ ಸ್ಟೇ ಮಾಡಬೇಕು ಎಂದು ಹೇಳಿದ್ದು, ಹೋಟೆಲ್‍ವೊಂದರಲ್ಲಿ ಸ್ಟೇ ಮಾಡಿ ಆಮೇಲೆ ಎಳನೀರಲ್ಲಿ ಮತ್ತು ಬರೋ ಮೆಡಿಸಿನ್ ಮಿಕ್ಸ್ ಮಾಡಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ನಂತರ ಕೋಲ್ಡ್ ಅಂಡ್ ಟೆಂಪ್ಟ್ ಗೆ ಹೀಗಾಗೋಯ್ತು, ಯಾರಿಗೂ ಹೇಳಬೇಡ. ನಮ್ಮಿಬ್ಬರಲ್ಲೇ ಈ ವಿಚಾರ ಇರಬೇಕು. ಸ್ವಲ್ಪ ದಿನದ ನಂತರ ಮದುವೆಯಾಗುತ್ತೇನೆ ಎಂದು ಹೇಳಿ ನಂಬಿಸಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಸ್ವಲ್ಪ ದಿನದ ನಂತರ ದಿನೇಶ್ ಬೇರೆ ಯುವತಿಯೊಂದಿಗೆ ಮದುವೆಯಾಗಲು ಸಿದ್ಧನಾಗಿದ್ದು, ಈ ಬಗ್ಗೆ ಕೇಳಿದ್ದಕ್ಕೆ ನೀನು ಚೆನ್ನಾಗಿಲ್ಲ. ಎಂಗೇಜ್‍ಮೆಂಟ್ ಆಗಿರುವ ಹುಡುಗಿ ಚೆನ್ನಾಗಿದ್ದಾಳೆ. ನಮ್ಮ ಫ್ಯಾಮಿಲಿಯವರಿಗೆ ಬ್ಲ್ಯಾಕ್ ಕಲರ್ ಅಂದರೆ ಅಸಹ್ಯ. ನನ್ನ ಅಮ್ಮ ಬ್ಲ್ಯಾಕ್ ಕಲರ್ ಅಂದರೆ ಟಚ್ ಕೂಡ ಮಾಡಲ್ಲ ಎಂದು ಹೇಳಿದ. ಕೊನೆಗೆ ನಿನ್ನ ಜೊತೆ ಮಾನಾಡಬೇಕು ಎಂದು ಮಡಿಕೇರಿಗೆ ಕರೆದೊಯ್ದು ಮತ್ತೆ ಅಲ್ಲಿ ಅತ್ಯಾಚಾರ ಮಾಡಿದ. ಬಳಿಕ ಅತ್ಯಾಚಾರ ಮಾಡಿರುವ ವೀಡಿಯೊ ರೆಕಾರ್ಡ್ ಮಾಡಿಟ್ಟಕೊಂಡಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇನೆ. ನಿನ್ನ ಅಪ್ಪ ಅಮ್ಮನಿಗೆ ಕಳಿಸುತ್ತೇನೆ. ಅಲ್ಲದೇ ನಿಮ್ಮ ಊರಿನಲ್ಲಿರುವ ಸೈಬರ್ ಸೆಂಟರ್ ಗಳಿಗೆ ಕೊಡುತ್ತೀನಿ ಎಂದು ಹೆದರಿಸುತ್ತಿದ್ದಾನೆ. ಹೀಗಾಗಿ ನ್ಯಾಯ ದೊರಕಿಸಿಕೊಡಬೇಕು ಎಂದು ನೊಂದ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

  • ಯುವತಿಯ ಮೇಲೆ ದೊಡ್ಡಪ್ಪನಿಂದಲೇ ರೇಪ್ – 8 ತಿಂಗ್ಳ ಗರ್ಭಿಣಿಯಾದ ಮೇಲೆ ಪೋಷಕರಿಗೆ ಗೊತ್ತಾಯ್ತು

    ಯುವತಿಯ ಮೇಲೆ ದೊಡ್ಡಪ್ಪನಿಂದಲೇ ರೇಪ್ – 8 ತಿಂಗ್ಳ ಗರ್ಭಿಣಿಯಾದ ಮೇಲೆ ಪೋಷಕರಿಗೆ ಗೊತ್ತಾಯ್ತು

    ಬೆಂಗಳೂರು: ಬುದ್ಧಿಮಾಂದ್ಯ ಯುವತಿಯೊಬ್ಬಳ ಮೇಲೆ ಸ್ವಂತಃ ದೊಡ್ಡಪ್ಪನೇ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರು ಹೊರವಲಯ ಹೊಸಕೋಟೆ ತಾಲೂಕಿನ ನೀಡಘಟ್ಟ ಗ್ರಾಮದಲ್ಲಿ ನಡೆದಿದೆ.

    ಆರೋಪಿ ಈಜಾಜ್ ಪಾಷ (51) 21 ವರ್ಷದ ಯುವತಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದು, ಈಗ ಯುವತಿ 8 ತಿಂಗಳ ಗರ್ಭಿಣಿಯಾಗಿದ್ದಾಳೆ. ಬುದ್ಧಿಮಾಂದ್ಯ ಯುವತಿಯ ಪೋಷಕರು ಕೂಲಿ ಕೆಲಸಕ್ಕೆ ಹೋದ ನಂತರ ಪಕ್ಕದ ಮನೆಯಲ್ಲಿದ್ದ ದೊಡ್ಡಪ್ಪನೇ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಬುದ್ಧಿಮಾಂದ್ಯ ಯುವತಿ ಹೊಟ್ಟೆನೋವು ಎನ್ನುತ್ತಿದ್ದ ಪರಿಣಾಮ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

    ಈ ಸಂಬಂಧ ಆರೋಪಿ ಈಜಾಜ್ ಪಾಷನ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತ ಪೋಷಕರು 8 ತಿಂಗಳ ಗರ್ಭಿಣಿಯಾದ ಬುದ್ಧಿಮಾಂದ್ಯ ಮಗಳನ್ನ ಕಂಡು ಗೋಳಾಡುತ್ತಿದ್ದಾರೆ. ಪ್ರತಿನಿತ್ಯ ಮಗಳನ್ನ ಕಂಡು ಕಣ್ಣೀರಿಡುತ್ತಾ ನ್ಯಾಯಕ್ಕಾಗಿ ಬಡ ದಂಪತಿಯ ಪರದಾಟ ನಡೆಸುತ್ತಿದ್ದು, ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

  • ಇನ್ನು ಮುಂದೆ ಡಿಎಲ್, ಆರ್ ಸಿ ಕೇಳಿದ್ರೆ ಮೊಬೈಲ್‍ನಲ್ಲೇ ತೋರಿಸಿ

    ಇನ್ನು ಮುಂದೆ ಡಿಎಲ್, ಆರ್ ಸಿ ಕೇಳಿದ್ರೆ ಮೊಬೈಲ್‍ನಲ್ಲೇ ತೋರಿಸಿ

    ಬೆಂಗಳೂರು: ಟ್ರಾಫಿಕ್ ಪೊಲೀಸ್ ಅಥವಾ ಆರ್‍ಟಿಓ ಅಧಿಕಾರಿಗಳು ನಿಮ್ಮ ಗಾಡಿ ಹಿಡಿದರೆ ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿಯೇ ದಾಖಲಾತಿಗಳನ್ನು ತೋರಿಸಬಹುದು.

    ಹೌದು, ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ, ವಿತರಿಸುವ ಮತ್ತು ದೃಢೀಕರಿಸುವ ದೇಶದ ಮೊದಲ ಸುರಕ್ಷಿತ `ಡಿಜಿ ಲಾಕರ್’ ವ್ಯವಸ್ಥೆಯನ್ನು ಅಳವಡಿಸಲು ಸಾರಿಗೆ ಇಲಾಖೆ ಈ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ.

    ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣಪತ್ರ (ಆರ್‍ಸಿ), ವಿಮೆ ಇತರ ಎಲ್ಲಾ ದಾಖಲಾತಿಗಳನ್ನು, ಡಿಜಿ ಲಾಕರ್‍ನಲ್ಲಿ ಸ್ಕ್ಯಾನ್ ಮೂಲಕ ಸೇವ್ ಮಾಡಿಕೊಳ್ಳಬೇಕು. ಬಳಿಕ ದಾಖಲಾತಿಗಳನ್ನು ತೋರಿಸಿದರೆ ಸಾಕು ನಿಮ್ಮ ಗಾಡಿಗಳ ದಾಖಲಾತಿಗಳು ಪರಿಶೀಲನೆ ಆದಂತೆಯೇ ಲೆಕ್ಕ. ಈಗಾಗಲೇ ಇದರ ಬಗ್ಗೆ ಸಾಧ್ಯಸಾಧ್ಯತೆಗಳ ಪರೀಶೀಲನೆ ಕೆಲಸ ಮುಗಿಸಿರುವ ಆರ್‍ಟಿಓ ಇನ್ನು ಕೆಲವೇ ದಿನಗಳಲ್ಲಿ ಹೊಸ ವಿಧಾನವನ್ನು ಜಾರಿ ಮಾಡಲಿದೆ.

    ರಾಜ್ಯದಲ್ಲಿ ಮೊದಲ ಪ್ರಯೋಗ:
    ಕರ್ನಾಟಕದಲ್ಲಿ ಇದು ಯಶಸ್ವಿಯಾದರೆ ದೇಶದೆಲ್ಲೆಡೆ ಜಾರಿಗೆ ತರಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಅಷ್ಟೇ ಅಲ್ಲದೆ ಡಿಜಿ ಲಾಕರ್‍ನಲ್ಲಿ ಎಲ್ಲಾ ರೀತಿಯ ದಾಖಲಾತಿಗಳನ್ನು ಸೇವ್ ಮಾಡಬಹುದಾಗಿದ್ದು, ಮುಂದೊಂದು ದಿನ ಎಲ್ಲಾ ಸೇವೆಗಳಿಗೆ ಡಿಜಿ ಲಾಕರ್ ಮೂಲಕವೇ ದಾಖಲಾತಿಗಳ ಪರಿಶೀಲನೆ ನಡೆಯಲಿದೆ ಎಂದು ಸಾರಿಗೆ ಆಯುಕ್ತ ದಯಾನಂದ್ ತಿಳಿಸಿದ್ದಾರೆ.

    2016ರ ಸೆಪ್ಟೆಂಬರ್ ನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಕಾಗದರಹಿತ ಆಡಳಿತ ಪರಿಕಲ್ಪನೆಯ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಡಿಜಿ ಲಾಕರ್ ಅನ್ನು ಜಂಟಿಯಾಗಿ ಉದ್ಘಾಟಿಸಿದ್ದರು. ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರದಿಂದ ಜನರು ತಪ್ಪಿಸಿಕೊಳ್ಳಲು ನೆರವಾಗಲು ಕೇಂದ್ರ ಸರ್ಕಾರ ಈ ಸೇವೆಯನ್ನು ಆರಂಭಿಸಿದೆ.

  • ಕಸದ ವಿಚಾರಕ್ಕೆ ಬಿತ್ತು ಹೆಣ- ಬಿಲ್ಡಿಂಗ್ ಮೇಲಿಂದ ಯುವಕನನ್ನು ತಳ್ಳಿ ಕೊಲೆ

    ಕಸದ ವಿಚಾರಕ್ಕೆ ಬಿತ್ತು ಹೆಣ- ಬಿಲ್ಡಿಂಗ್ ಮೇಲಿಂದ ಯುವಕನನ್ನು ತಳ್ಳಿ ಕೊಲೆ

    ಬೆಂಗಳೂರು: ಕಸ ಎಸೆದ ಯುವಕನನ್ನು ಬಿಲ್ಡಿಂಗ್ ಮೇಲಿನಿಂದ ತಳ್ಳಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಹನುಮಂತನಗರ ಬಳಿಯ ಪಿಇಎಸ್ ಕಾಲೇಜ್ ಬಳಿ ನೆಡೆದಿದೆ.

    ತುಮಕೂರು ಮೂಲದ ದೇವರಾಜ್ 29 ಮೃತ ಯುವಕ. ಮೃತ ದೇವರಾಜ್ ಶುಕ್ರವಾರ ರಾತ್ರಿ ಮನೆಯಲ್ಲಿ ಊಟ ಮುಗಿಸಿ ನಂತರ ಮನೆ ಮೇಲಿನಿಂದ ಕಸದ ಕವರನ್ನು ಕೆಳಕ್ಕೆ ಎಸೆದಿದ್ದಾನೆ. ಈ ಸಂದರ್ಭದಲ್ಲಿ ದೇವರಾಜ್ ಮನೆಯ ಮುಂದೆ ರಸ್ತೆಯಲ್ಲಿ ನಿಂತಿದ್ದ ಮೂವರು ಯುವಕರು ಕಸ ಎಸೆದಿದ್ದನ್ನು ನೋಡಿ ಪ್ರಶ್ನೆ ಮಾಡಿದ್ದಾರೆ.

    ಅಲ್ಲದೇ ಮೂವರು ಯುವಕರು ದೇವರಾಜ್ ಮನೆಗೆ ತೆರಳಿ ಗಲಾಟೆ ಮಾಡಿದ್ದಾರೆ. ಕಸ ವಿಚಾರವಾಗಿ ಗಲಾಟೆ ತಾರಕಕ್ಕೇರಿ  ಯುವಕರು  ದೇವರಾಜ್ ನನ್ನು ಬಿಲ್ಡಿಂಗ್ ಮೇಲಿನಿಂದ ತಳ್ಳಿ ಪರಾರಿಯಾಗಿದ್ದಾರೆ. ಇತ್ತ ಬಿಲ್ಡಿಂಗ್ ಮೇಲಿನಿಂದ ಬಿದ್ದ ದೇವರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಈ ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.