ಬೆಂಗಳೂರು: ಭಾರತ ಕ್ರಿಕೆಟ್ ತಂಡದ 90 ರ ದಶಕದ ಪ್ರಖ್ಯಾತ ಬೌಲರ್ ವೆಂಕಟೇಶ್ ಪ್ರಸಾದ್, ಕಿರಿಯರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
2001 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ವೆಂಕಟೇಶ್ ಪ್ರಸಾದ್ ಈಗ ಆಯ್ಕೆ ಸಮಿತಿಗೆ ರಾಜೀನಾಮೆ ನೀಡುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ. ಈ ವರ್ಷದ ಅಂಡರ್-19 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇವರ ಪಾತ್ರ ಅಪಾರವಾಗಿತ್ತು. ಕಳೆದ 30 ತಿಂಗಳಿನಿಂದ ಬಿಸಿಸಿಐನ ಕಿರಿಯರ ಆಯ್ಕೆ ಸಮಿತಿಯಲ್ಲಿದ್ದರು.
ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ ಖನ್ನಾ ಈ ವಿಚಾರಕ್ಕೆ ಪ್ರತಿಕ್ರಿಯಿಸಿ, “ನಾನು ವೆಂಕಟೇಶ್ ಪ್ರಸಾದ್ ಅವರ ಜೊತೆ ಮಾತನಾಡಿ ತಮ್ಮ ನಿರ್ಧಾರವನ್ನ ಮತ್ತೊಮ್ಮೆ ಮರುಪರಿಶೀಲಿಸಲು ಹೇಳಿದೆ. ಆದರೆ ವೆಂಕಟೇಶ್ ಅವರು ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು. ಬಿಸಿಸಿಐ ವೆಂಕಟೇಶ್ ಅವರ ಸಾಧನೆಗೆ ಹೆಮ್ಮೆ ಪಟ್ಟಿದ್ದು, ಅವರ ಮುಂದಿನ ಜೀವನಕ್ಕೆ ಶುಭಕೋರುವೆವು” ಎಂದು ಹೇಳಿದರು.
ಮೂಲಗಳ ಪ್ರಕಾರ ವೆಂಕಟೇಶ್ ಪ್ರಸಾದ್ ಅವರು ಬಿಸಿಸಿಐ ಜೊತೆಗಿನ ಶೀತಲ ಸಮರದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ನಿಯಮದ ಪ್ರಕಾರ ಬಿಸಿಸಿಐ ಹುದ್ದೆಯಲ್ಲಿ ಇರುವವರು ಯಾವುದೇ ಖಾಸಗಿ ಮತ್ತು ಬೇರೆ ಕೋಚಿಂಗ್ ಸಂಸ್ಥೆಗಳ ಜೊತೆ ಒಡನಾಟ ಬೆಳೆಸಿಕೊಳ್ಳುವಂತಿಲ್ಲ. ಈ ನಿಯಮವು ರಾಷ್ಟ್ರ ಮತ್ತು ರಾಜ್ಯ ಫ್ರಾಂಚೈಸ್ ಆಧಾರಿತ ಲೀಗ್ ಗಳಿಗೆ ಅನ್ವಯವಾಗುತ್ತದೆ. ಆದರೆ ಐಪಿಎಲ್ ವೇಳೆ ವೆಂಕಟೇಶ್ ತಂಡವೊಂದರ ಜೊತೆ ಕೋಚಿಂಗ್ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಕೋಚಿಂಗ್‍ಗೆ ಈ ನಿಯಮವು ಅಡ್ಡಿ ಮಾಡುವ ಕಾರಣದಿಂದ ತಮ್ಮ ಹುದ್ದೆಗೆ ರಾಜಿನಾಮೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ಮಾಧ್ಯಮದವರು ಈ ವಿಚಾರವಾಗಿ ವೆಂಕಟೇಶ್ ಅವರಿಗೆ ಪ್ರಶ್ನಿಸಿದಾಗ ಉತ್ತರ ನೀಡಲು ನಿರಾಕರಿಸಿದ್ದಾರೆ. ವೆಂಕಟೇಶ್ ಅವರು ಐಪಿಎಲ್ ತಂಡವೊಂದಕ್ಕೆ ಕೋಚ್ ಆಗುತ್ತಾರೆಂಬ ವದಂತಿ ಕೆಲ ದಿನಗಳಿಂದ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ.
ಬೆಂಗಳೂರು: ಸಂಗೀತ ನಿರ್ದೇಶಕ ರಘು ದೀಕ್ಷಿತ್ ಪತ್ನಿ ನಾಟ್ಯ ಮಯೂರಿ ಎಂದು ಹೆಸರುವಾಸಿಯಾಗಿರುವ ಮಯೂರಿ ಉಪಾಧ್ಯಾಯ ಅವರಿಗೆ ಪ್ರಧಾನಿ ಮೋದಿಯಿಂದ ಒಂದು ವಿಷೇಶವಾದ ಉಡುಗೊರೆ ಸಿಕ್ಕಿದೆ.
ಮಯೂರಿ ಉಪಾಧ್ಯಾಯ ಅವರು ದೇಶದಾದ್ಯಂತ ಮಾತ್ರವಲ್ಲದೆ ಪ್ರಪಂಚದ ಮೂಲೆ ಮೂಲೆಯಲ್ಲೂ ಭಾರತೀಯ ನೃತ್ಯವನ್ನು ಪ್ರದರ್ಶನ ಮಾಡಿ ಕಲೆಯ ಕಂಪನ್ನು ಪಸರಿಸುವ ಮೂಲಕ ನಾಟ್ಯ ಮಯೂರಿ ಎಂದು ಫೇಮಸ್ ಆದವರು.
ಮಯೂರಿ ತಮ್ಮದೇ ಆದ ನೃತ್ಯ ತಂಡವನ್ನ ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ನಾಟ್ಯವನ್ನ ಪ್ರದರ್ಶನ ಮಾಡುತ್ತಾರೆ. ಅಷ್ಟೇ ಅಲ್ಲದೆ ಸಿನಿಮಾಗಳಿಗೂ ಕೋರಿಯೋಗ್ರಫಿ ಮಾಡುತ್ತಾರೆ. ಜೊತೆಗೆ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಾರೆ. ಮಯೂರಿ ಅವರಿಗೆ ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಮಂತ್ರಿ ಕಡೆಯಿಂದ ವಿಶೇಷವಾದ ಉಡುಗೊರೆಯೊಂದು ಸಿಕ್ಕಿದೆ. ಈ ಬಗ್ಗೆ ಅವರು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಪ್ರಧಾನಿ ಕಡೆಯಿಂದ ಮೇಕ್ ಇನ್ ಇಂಡಿಯಾ ಥೀಮ್ ನಲ್ಲಿ ಸಿದ್ಧವಾಗುವ ಕೈ ಗಡಿಯಾರವನ್ನ ಮಯೂರಿ ಅವರಿಗೆ ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಉಡುಗೊರೆಯನ್ನ ಪಡೆದ ಮಯೂರಿ ಈ ಬಗ್ಗೆ ತಮ್ಮ ಸಂತಸವನ್ನು ಟ್ವಿಟ್ಟರ್ ನಲ್ಲಿ ವ್ಯಕ್ತಪಡಿಸಿದ್ದಾರೆ.
“ನಮ್ಮ ಪ್ರಧಾನಿ ಮೋದಿ ಅವರ ಅಮೂಲ್ಯ ಕೊಡುಗೆ ಇದು. ಅವರಿಂದ ಉಡುಗೊರೆ ಬಂದಿರುವುದು ಬೆಲೆ ಕಟ್ಟಲು ಸಾಧ್ಯವಾಗದೆ ಇರುವಂತದ್ದು” ಎಂದು ಅವರು ಟ್ವೀಟ್ ಮಾಡಿದ್ದಾರೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಮಯೂರಿ ಅವರ ತಂಡದಿಂದ ನೃತ್ಯವನ್ನ ಪ್ರದರ್ಶನ ಮಾಡಲಾಗಿತ್ತು. ಆದ್ದರಿಂದ ಪ್ರಧಾನಿ ಮೋದಿ ಅವರು ಈ ಉಡುಗೊರೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು: ನಲಪಾಡ್ ಗೂಂಡಾಗಿರಿ ಸೇರಿದಂತೆ ಕಾಂಗ್ರೆಸ್ ಮುಖಂಡರ ದಬ್ಬಾಳಿಕೆಯ ಪ್ರಕರಣಗಳನ್ನು ಖಂಡಿಸಿ ಇಂದಿನಿಂದ ಬಿಜೆಪಿ ಬೆಂಗಳೂರು ರಕ್ಷಿಸಿ ಯಾತ್ರೆ ಆರಂಭಿಸಲಿದೆ.
ಇಂದು ಬೆಳಗ್ಗೆ ಸುಮಾರು 9.30ಕ್ಕೆ ಬಸವನಗುಡಿ ಬಳಿ ಇರುವ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರಕ್ಷಾಯಾತ್ರೆಗೆ ಚಾಲನೆ ದೊರೆಯಲಿದೆ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಅನಂತಕುಮಾರ್, ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಬಿಜೆಪಿ ಶಾಸಕರು, ಬಿಬಿಎಂಪಿ ಸದಸ್ಯರು ಮತ್ತು ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾಲಿದ್ದಾರೆ.
ಸಂಜೆ 4 ಗಂಟೆಗೆ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತ್ಯೇಕವಾಗಿ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಯುಬಿ ಸಿಟಿ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ರಸ್ತೆಗಳಲ್ಲಿ ಸಾಗಲಿದೆ. 14 ದಿನಗಳ ಕಾಲ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಯಲಿದ್ದು, ಬಿಜೆಪಿ ನಾಯಕರು ಕಾಲ್ನಡಿಗೆಯಲ್ಲಿ ಈ ಯಾತ್ರೆಗೆ ಪಾಲ್ಗೊಳ್ಳುತ್ತಾರೆ.
ಪ್ರತಿದಿನ ಸುಮಾರು 3 ಕಿಲೋಮೀಟರ್ ನಡಿಗೆ ಇರಲಿದ್ದು, ಪಾದಯಾತ್ರೆಯಲ್ಲಿ ದಿನಂಪ್ರತಿ ಕೇಂದ್ರದ ಓರ್ವ ನಾಯಕ ಭಾಗಿಯಾಗಲಿದ್ದಾರೆ. ಮಾರ್ಚ್ 16ರಂದು ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪ ಸಮಾರಂಭಕ್ಕೆ ಅಮಿತ್ ಶಾ ಭಾಗಿಯಾಗಲಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ `ಕೈ’ ಗೂಂಡಾಗಿರಿ ಕಾರುಬಾರು ಶುರುವಾಗಿದ್ದು, ದೇಗುಲದ ಗೇಟನ್ನೇ ಒಡೆಸಿ ದೇವಸ್ಥಾನವನ್ನೇ ಕಬಳಿಕೆ ಮಾಡಲು ಮಾಜಿ ಕಾರ್ಪೊರೇಟರ್ ಮುಂದಾಗಿದ್ದಾನೆ.
ವಾರ್ಡ್ ನಂಬರ್ 90 ಹಲಸೂರಿನ ಮಾಜಿ ಕಾರ್ಪೊರೇಟರ್ ಉದಯ್ ಕುಮಾರ್ ಈ ರೀತಿಯ ಗೂಂಡಾ ವರ್ತನೆ ಮಾಡಿದ್ದು, ದೇಗುಲದ ಭಕ್ತರ ಮುಂದೆಯೇ ಅನ್ಯಧರ್ಮದವರನ್ನು ಬಿಟ್ಟು ದೇಗುಲದ ಗೇಟ್ ಬೀಗವನ್ನು ಒಡೆಸಿದ್ದಾನೆ. ಈತ ಬೆಂಗಳೂರಿನ ಪುರಾತನ ದೇಗುಲದ ಮೇಲೆ ಕಣ್ಣು ಹಾಕಿದ್ದು, ಮುಸ್ಲಿಮರನ್ನು ಕರೆಸಿ ಹಾರೆ, ರಾಡ್ ತೆಗೆದುಕೊಂಡು ಬಂದು ಹಿಂದೂ ದೇಗುಲದ ಕಿಟಕಿ, ಗೇಟ್ ಪುಡಿ ಪುಡಿ ಮಾಡಿಸಿದ್ದಾನೆ.
ಹಳೇ ಮದ್ರಾಸ್ ರಸ್ತೆಯಲ್ಲಿರುವ ಮೌನನಂದ ಮಠದ ಜಾಗಕ್ಕೆ ಉದಯ್ ಕುಮಾರ್ ಅತಿಕ್ರಮ ಪ್ರವೇಶ ಮಾಡಿದ್ದು, ದೇಗುಲದ ಜಾಗ ತನ್ನ ಪರಿಚಿತರಿಗೆ ಸೇರಿದ್ದು. ನಂಗೆ ಇದನ್ನು ಡೆಮಾಲಿಷನ್ ಮಾಡೋಕೆ ಕಂಟ್ರಾಕ್ಟ್ ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ. ಕಾರ್ಪೊರೇಟರ್ ವರ್ತನೆಗೆ ರೊಚ್ಚಿಗೆದ್ದ ಭಕ್ತರು, ನಿಮ್ಮ ವಂಶ ನಿರ್ವಂಶ ಆಗುತ್ತೆ. ಈ ದೇವಸ್ಥಾನ ಅಷ್ಟೊಂದು ಪವರ್ ಫುಲ್ ಎಂದು ಆಕ್ರೋಶದಿಂದ ಹೇಳಿದ್ದಾರೆ.
ಆದರೆ ಅಷ್ಟಕ್ಕೆ ಸುಮ್ಮನಾಗದೇ ಅಯ್ಯೋ ಅದೇನ್ ಆಗುತ್ತೋ ನಾನು ನೋಡುತ್ತೀನಿ. ಅದೆಲ್ಲ ನಾನ್ ನಂಬಲ್ಲ ಎಂದು ಮುಸ್ಲಿಮರನ್ನು ಬಿಟ್ಟು ಗೇಟ್ ಬೀಗ ಒಡೆಸಿದ್ದಾನೆ. ಕೊನೆಗೆ ಭಕ್ತರ ಆಕ್ರೋಶ ಹೆಚ್ಚಾದಾಗ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ಜನರ ಆಕ್ರೋಶಕ್ಕೆ ಕಾರ್ಪೊರೇಟರ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಮಠದವರು ಮಾಜಿ ಕಾರ್ಪೊರೇಟರ್ ಗೂಂಡಾ ವರ್ತನೆಯ ವಿರುದ್ಧ ಹಳೇ ಮದ್ರಾಸ್ ರಸ್ತೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರು: ಸಿನಿಮಾರಂಗಗಳಲ್ಲಿ ಸ್ಟಾರ್ ವಾರ್ ಗಳು ಆಗಾಗ ಆಗುತ್ತಲೇ ಇರುತ್ತವೆ. ಹೊಸ ಚಿತ್ರಗಳು ಬಿಡುಗಡೆ ಆದಾಗ, ಚಿತ್ರದಲ್ಲಿ ಬರುವ ಕೌಂಟರ್ ಡೈಲಾಗ್ ಗಳು ಇದ್ದಾಗ ವಾರ್ ಗಳು ಆಗುವುದು ಸಾಮಾನ್ಯವಾಗಿದೆ.
ಇತ್ತೀಚಿಗಷ್ಟೇ ದರ್ಶನ್ ಅಭಿಮಾನಿ ನಟ ಯಶ್ ಭಾವಚಿತ್ರಗಳನ್ನ ಬಳಸಿ ಅಸಹ್ಯವಾಗುವಂತಹ ರೀತಿಯಲ್ಲಿ ಟ್ರೋಲ್ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಅದನ್ನು ನೋಡಿದ ಯಶ್ ಅಭಿಮಾನಿಗಳು ಕೂಡ ದರ್ಶನ್ ಅವರ ಫೋಟೋಗಳನ್ನ ಬಳಸಿಕೊಂಡು ಟ್ರೋಲ್ ಮಾಡಿದ್ದರು. ಈ ವಿಚಾರಗಳು ಮಾಧ್ಯಮಗಳಲ್ಲಿ ಸುದ್ದಿ ಕೂಡ ಆಗಿತ್ತು.
2015 ರಲ್ಲಿ ದರ್ಶನ್ ಅಭಿಮಾನಿಗಳಿಗೂ ಹಾಗೂ ಯಶ್ ಅಭಿಮಾನಿಗಳಿಗೂ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಸ್ಟಾರ್ ವಾರ್ ಶುರುವಾಗಿತ್ತು. ಈ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಈಗ ಮತ್ತೊಮ್ಮೆ ಸ್ಟಾರ್ ವಾರ್ ಆರಂಭಗೊಂಡ ಹಿನ್ನೆಲೆಯಲ್ಲಿ ದರ್ಶನ್ ಈ ಹಿಂದೆ ಮಾಡಿದ್ದ ಮನವಿಯನ್ನ ಮತ್ತೆ ಡಿ ಕಂಪನಿಯ ಸದಸ್ಯರು ಫೇಸ್ ಬುಕ್ ನಲ್ಲಿ ರೀ ಪೋಸ್ಟ್ ಮಾಡಿದ್ದಾರೆ.
“ನನಗೆ ನೋವಾಗುವಂತ ಕೆಲಸ ಮಾಡಬೇಡಿ ನನ್ನ ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ. ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಬೇರೆ ಸಹನಟರನ್ನು ನಿಂದಿಸಿ ಮಾತನಾಡುವುದು ಇವು ಯಾವುದು ಒಳಿತಲ್ಲ. ನನ್ನ ನಿಜವಾದ ಅಭಿಮಾನಗಳಾಗಿದ್ದಲ್ಲಿ ಅದನ್ನು ನಿಲ್ಲಿಸಬೇಕು. ಯಾರಾದರೂ ಅಂತ ಕೆಲಸಗಳಲ್ಲಿ ಭಾಗವಹಿಸಿದರೆ ನನಗೆ ನೋವಾಗುವುದಂತು ನಿಜ. ಬೇರೆಯವರು ಮಾಡುತ್ತಾರೆ ಎಂದು ನಾವು ಅವರ ವಿರುದ್ಧ ಅದೇ ರೀತಿ ವರ್ತಿಸಿದರೆ ನಮಗೂ ಬೇರೆಯವರಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಎಲ್ಲರನ್ನೂ ಪ್ರೀತಿಸಿ, ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ” ನಿಮ್ಮ ದಾಸ ದರ್ಶನ್ ಎಂದು ಹೇಳಿದ್ದಾರೆ.
ಸ್ಟಾರ್ ನಟರ ಹೆಸರಿನಲ್ಲಿ ಅಭಿಮಾನಿಗಳು ಎಂದು ಹೇಳಿಕೊಂಡು ಮತ್ತೊಬ್ಬ ನಟರನ್ನ ನಿಂದಿಸುತ್ತಾ ಸ್ಟಾರ್ ಗಳ ಹೆಸರಿಗೆ ಕಳಂಕ ತರುವಂತಹ ಕೆಲಸವನ್ನು ಕೆಲ ಕಿಡಿಗೇಡಿಗಳು ಮಾಡುತ್ತಿದ್ದಾರೆ. ಸ್ಟಾರ್ ಕಲಾವಿದರೇ ನಂಬರ್ ಒನ್ ಪಟ್ಟ ಬಿಟ್ಟು ಉತ್ತಮ ಸಿನಿಮಾಗಳತ್ತ ಗಮನ ಹರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸ್ಟಾರ್ ವಾರ್ ಗಳನ್ನ ಬಿಟ್ಟು ಕನ್ನಡ ಚಿತ್ರಗಳನ್ನ ಗೆಲ್ಲಿಸಲು ಮುಂದಾಗಿ ಎಂದು ಪ್ರಜ್ಞಾವಂತ ಸಿನಿ ಅಭಿಮಾನಿಗಳು ಮನವಿ ಮಾಡಿದ್ದಾರೆ.
ಬೆಂಗಳೂರು: ಒಂದು ಕಾಲದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ದಂಡುಪಾಳ್ಯ ಗ್ಯಾಂಗಿನದ್ದು ಕರಾಳ ಕಥೆ. ಅಂತಹ ಭೀಕರ ಕ್ರೌರ್ಯವನ್ನು ಸಿನಿಮಾ ಮಾಡಿ ಎರಡೆರಡು ಸಲ ಗೆದ್ದವರು ನಿರ್ದೇಶಕ ಶ್ರೀನಿವಾಸ ರಾಜು.
ದಂಡುಪಾಳ್ಯ ಸಿನಿಮಾ ನಿರ್ದೇಶಕ ಶ್ರೀನಿವಾಸ ರಾಜು ಇದೀಗ ಮೂರನೇ ಸಲ ಅದೇ ದಂಡುಪಾಳ್ಯ ಗ್ಯಾಂಗಿನೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ದಂಡುಪಾಳ್ಯ ಗ್ಯಾಂಗಿನ ಕಥೆಯನ್ನು ಈ ಹಿಂದೆಯೇ ಎರಡು ಚಿತ್ರಗಳ ಮೂಲಕ ಹೇಳಲಾಗಿತ್ತು. ಇದರ ಮೊದಲ ಭಾಗವಂತೂ ನಿರೀಕ್ಷೆಗೂ ಮೀರಿ ಭಾರಿ ಸದ್ದು ಮಾಡಿತ್ತು. ಇದರ ಮುಂದುವರಿದ ಭಾಗವಾಗಿ ಎರಡನೇ ಚಿತ್ರ ಬಿಡುಗಡೆಯಾಗಿತ್ತು. ಇದೀಗ ಇದೇ ಮಾರ್ಚ್ 2ರಂದು ದಂಡುಪಾಳ್ಯ-3 ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ನಿರ್ದೇಶಕ ಶ್ರೀನಿವಾಸ ರಾಜು ಈ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಲು ಸಿದ್ಧರಾಗುತ್ತಿದ್ದಾರೆ. ಬೇರೆ ಬೇರೆ ರೀತಿಯಾದ ನಿಜವಾದ ಕ್ರೌರ್ಯ ಕಥಾನಕಗಳು ಬಾಲಿವುಡ್ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಸಿಮಿಮಾಗಳಾಗಿವೆ. ಆದರೆ ಸರಣಿಯಂತೆ ಯಶಸ್ವಿಯಾಗಿ ಮೂರು ಚಿತ್ರಗಳಾಗಿ ತೆರೆ ಕಂಡ ಉದಾಹರಣೆಗಳಿಲ್ಲ. ದಂಡುಪಾಳ್ಯ ಸರಣಿ ಯಶಸ್ವಿಯಾಗಿ ಮೂರನೇ ಭಾಗವೂ ತೆರೆ ಕಾಣಲು ಸಜ್ಜಾಗಿದೆ.
ದಂಡುಪಾಳ್ಯದ ಸತ್ಯಕಥೆ ಅಪ್ಪಟ ರಕ್ತಸಿಕ್ತ. ಅದರ ಕಥೆಗೂ ಮನುಷ್ಯತ್ವಕ್ಕೂ ಸಂಬಂಧವೇ ಇಲ್ಲ. ಜೀವಂತವಾಗಿಯೇ ಮನುಷ್ಯರ ಕತ್ತು ಕುಯ್ದು ಆ ಸದ್ದನ್ನು ಸಂಭ್ರಮಿಸುವ, ಹೆಣ್ಣು-ಗಂಡೆನ್ನದೆ ಶವವನ್ನೇ ಸಂಭೋಗಿಸುವ ಪರಮ ವಿಕೃತಿ ದಂಡುಪಾಳ್ಯ ಗ್ಯಾಂಗಿನದ್ದು. ಇಂತಹ ಸಿನಿಮಾವನ್ನು ನಿರ್ಮಿಸಿವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಈ ಹಿಂದೆ ಎರಡು ಆವೃತ್ತಿಯ ಮೂಲಕ ಶ್ರೀನಿವಾಸ ರಾಜು ಅದರಲ್ಲಿ ಗೆದ್ದಿದ್ದಾರೆ. ಈಗ ಮೂರನೇ ಆವೃತ್ತಿ ಬಿಡುಗಡೆಗೆ ಸಿದ್ಧವಾಗಿದೆ.
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಸಿನಿಮಾ ಸೆಟ್ ನ ಮೊದಲ ದಿನವೇ ಯಜಮಾನನಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದಾರೆ.
ಹುಟ್ಟುಹಬ್ಬಕ್ಕಾಗಿ ಬ್ರೇಕ್ ತೆಗೆದುಕೊಂಡಿದ್ದ ಡಿ ಬಾಸ್ ಹುಟ್ಟು ಹಬ್ಬ ಮುಗಿದ ತಕ್ಷಣವೇ ಯಜಮಾನನಾಗಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಟೈಟಲ್ ಕೇಳಿದರೇ ಸಾಕಷ್ಟು ನಿರೀಕ್ಷೆಗಳು ಮೂಡುವಂತಹ ಸಿನಿಮಾ ಇದಾಗಿದ್ದು, ಅದೇ ರೀತಿಯ ಡ್ರೆಸ್ ಮಾಡಿಕೊಂಡು ಶೂಟಿಂಗ್‍ನ ಸ್ಥಳಕ್ಕೆ ಬಂದಿದ್ದಾರೆ.
ದರ್ಶನ್ ಅಭಿನಯದ 51ನೇ ಸಿನಿಮಾ ಯಜಮಾನ ಚಿತ್ರವಾಗಿದ್ದು, ಸಿನಿಮಾದಲ್ಲಿ ದರ್ಶನ್ ಗೆಟಪ್ ತುಂಬಾ ವಿಭಿನ್ನವಾಗಿಯೇ ಇದೆ. ಚಿತ್ರೀಕರಣ ಸೋಮವಾರದಿಂದಲೇ ಶುರು ಆಗಿದೆ. ಡಿ ಬಾಸ್ ಈ ಚಿತ್ರದಲ್ಲಿ ಪಕ್ಕ ಕನ್ನಡದ ಮಣ್ಣಿನ ಮಗನ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಹಾಕಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ದರ್ಶನ್ ಹುಟ್ಟಿದ ತವರೂರಾದ ಮೈಸೂರಿನಲ್ಲಿ ಯಜಮಾನ ಸಿನಿಮಾದ ಚಿತ್ರೀಕರಣ ಶುರು ಆಗಿದೆ. ಚಿತ್ರೀಕರಣಕ್ಕಾಗಿ ಸಿನಿಮಾ ತಂಡ ಬೃಹತ್ ಮತ್ತು ಅದ್ಧೂರಿಯಾಗಿರುವ ಸೆಟ್ ಹಾಕಿದ್ದರು. ದರ್ಶನ್ ಜೊತೆಯಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಧನಂಜಯ್ ಭಾಗಿ ಆಗಿದ್ದಾರೆ. ಕೃತಕವಾಗಿ ಹಾಕಲಾಗಿರುವ ಸೆಟ್ ನಲ್ಲಿ ಶೂಟಿಂಗ್ ಆರಂಭ ಆಗಿದೆ. ಮೈಸೂರಿನಲ್ಲಿ ಹಾಕಿರುವ ಸೆಟ್ ನಲ್ಲಿ ಚಿತ್ರೀಕರಣ ಮುಗಿದ ನಂತರ ರಿಯಲ್ ಲೊಕೇಷನ್ಸ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
ಬೆಂಗಳೂರು: ಹಲ್ಲೆ ಮಾಡಿರುವುದು ನಿಜ ಎಂದು ಹ್ಯಾರಿಸ್ ಪುತ್ರ ನಲಪಾಡ್ ತಪ್ಪೊಪ್ಪಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯನ್ನು ವಶಪಡಿಸಿಕೊಂಡು ಪರಿಶೀಲನೆ ಮಾಡಿದ್ದೇವೆ ಎಂದು ಡಿಸಿಪಿ ಚಂದ್ರಗುಪ್ತ ಹೇಳಿದ್ದಾರೆ.
ಶಾಸಕ ಹ್ಯಾರಿಸ್ ಮಗ ನಲಪಾಡ್ ಮತ್ತು ಆತನ ಸ್ನೇಹಿತರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಸಾಕ್ಷ್ಯ ಗಳು ಸಿಕ್ಕಿದ್ದು ಕಾಲು ತಗಲಿದ್ದಕ್ಕೆ ಹಲ್ಲೆ ನಡೆದಿದೆ ಎಂದು ಹೇಳಿದ್ದಾರೆ.
ಗಲಾಟೆ ಹೇಗಾಯ್ತು?
ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡಲು ಹೋಗಿದ್ದರು. ಉದ್ಯಮಿ ಲೋಕ್‍ನಾಥ್ ಪುತ್ರ ವಿದ್ವತ್ ಶನಿವಾರ ರಾತ್ರಿ ಸುಮಾರು 11 ಗಂಟೆಗೆ ಊಟಕ್ಕೆಂದು ಅದೇ ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ಸಂದರ್ಭದಲ್ಲಿ ವಿದ್ವತ್ ನ ಕಾಲು ಮುರಿದಿತ್ತು. ಆದ್ದರಿಂದ ಕಾಲು ಚಾಚಿಕೊಂಡು ಕುಳಿತ್ತಿದ್ದರು. ಆಗ ನಲಪಾಡ್ ನಿಗೆ ಕಾಲು ತಗುಲಿದೆ. ನಂತರ ವಿದ್ವತ್ ಕ್ಷಮೆ ಕೇಳಿರಲಿಲ್ಲ. ಇದರಿಂದ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದಾರೆ ಎಂದು ಡಿಸಿಪಿ ತಿಳಿಸಿದರು.
ಲೋಕಪಯೋಗಿ ಸಚಿವ ಹೆಚ್.ಸಿ ಮಹದೇವಪ್ಪ ಪುತ್ರ ಇರುವುದರ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಸಿಕ್ಕಿಲ್ಲ. ಮಹದೇವಪ್ಪ ಪುತ್ರನ ಹುಟ್ಟುಹಬ್ಬಕ್ಕೆ ಹೋಗಿದ್ದರು ಎಂಬ ಮಾಹಿತಿ ಇದೆ. ಆದ್ದರಿಂದ ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಇನ್ನು ಮಾಧ್ಯಮದವರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಾಗಿದೆ. ಓರ್ವನ ಬಂಧನ ಕೂಡ ಆಗಿದೆ. ಇನ್ನುಳಿದವರ ಹುಡುಕಾಟ ನಡೆಯುತ್ತಿದೆ ಎಂದು ಚಂದ್ರಗುಪ್ತ ವಿವರಿಸಿದರು.
ನಲಪಾಡ್‍ನ ವಿರುದ್ಧ ಮತ್ತೊಂದು ಕೇಸ್ ಆಗಿದ್ದು, 3 ವರ್ಷದ ಹಿಂದೆ ನಡೆದಿದ್ದ ಪ್ರಕರಣವಾಗಿದೆ. ಪೂರ್ಣಿಮಾ ದಾಸ್ ವಿಡಿಯೋ ವೈರಲ್ ಆಗಿರುವುದರ ಬಗ್ಗೆ ಗಮನಕ್ಕೆ ಬಂದಿಲ್ಲ. ಪೊಲೀಸರು ಸ್ವಯಂಪ್ರೇರಿತ ದಾಖಲು ಮಾಡಿಕೊಳ್ಳುತ್ತಾರೆ. ಮಲ್ಯ ಆಸ್ಪತ್ರೆ ವೈದ್ಯರಿಂದ ವರದಿ ಬಿಡುಗಡೆಯಾಗಿದೆ. ವಿದ್ವತ್ ಮುಖದಲ್ಲಿ ರಕ್ತ ಹೆಪ್ಪುಗಟ್ಟಿದೆ. ಮೂಗಿನ ಹೊಳ್ಳೆಗಳು ಒಡೆದಿದ್ದು, ಮೂಗು ಫ್ರಾಕ್ಚರ್ ಆಗಿದೆ. ಬಲಭಾಗದ 5 ಪಕ್ಕೆಲುಬುಗಳು ಮುರಿದಿದ್ದು, ಎಡಭಾಗದ 4 ಪಕ್ಕೆಲುಬುಗಳು ಮುರಿದಿವೆ. ಆದ್ದರಿಂದ ವಿದ್ವತ್ ಸ್ಥಿತಿ ಗಂಭೀರವಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧನ ಮಾಡಲಾಗಿದೆ. ಹಲ್ಲೆ ಮಾಡಿರುವುದು ಗೊತ್ತಿರುವುದರಿಂದ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಮಾಡಲಾಗುತ್ತಿದೆ. ನಲಪಾಡ್ ಮತ್ತು ಆತನ ಸ್ನೇಹಿತರನ್ನ ಈಗ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಅಂದು ಡ್ರಗ್ಸ್ ಸೇವನೆ ಮಾಡಿದ್ದಾ ಇಲ್ಲವಾ ತಿಳಿದಿಲ್ಲ. ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಆದರೆ ಇನ್ನು ವರದಿ ಬಂದಿಲ್ಲ ಎಂದು ವಿವರಿಸಿದರು.
ಯಾವೆಲ್ಲ ಕೇಸ್ ಹಾಕಲಾಗಿದೆ?
ಐಪಿಸಿ ಸೆಕ್ಷನ್ 141(ಗುಂಪು ಹಲ್ಲೆ), 143(ದಂಡನೆ), 144(ಮಾರಕಾಸ್ತ್ರಗಳಿಂದ ಗುಂಪು ಹಲ್ಲೆ), 146(ದೊಂಬಿ), 149( ಅಕ್ರಮವಾಗಿ ಗುಂಪುಗೂಡುವಿಕೆ), 341(ಅಕ್ರಮ ಪ್ರತಿಬಂಧಕ್ಕಾಗಿ ದಂಡನೆ), 326(ಅಪಾಯಕಾರಿ ಆಯುಧಗಳಿಂದ ಸ್ವ ಇಚ್ಚೆಯಿಂದ ತ್ರೀವ ಗಾಯ ಉಂಟು ಮಾಡುವುದು), 307(ಕೊಲೆ ಮಾಡುವ ಪ್ರಯತ್ನ), 504(ಶಾಂತಿ ಭಂಗ), ಐಪಿಸಿ 506(ಜೀವ ಬೆದರಿಕೆ) ಅಡಿ ಕೇಸ್ ದಾಖಲಾಗಿದೆ.
ಆರೋಪಿಗಳು ಮತ್ತು ಕೆಲಸ: ಆರೋಪಿ ನಂಬರ್ 1 ಶಾಸಕ ಹ್ಯಾರಿಸ್ ಮಗ ನಲಪಾಡ್ ಒಬ್ಬ ನಿರುದ್ಯೋಗಿಯಾಗಿದ್ದು, ಸ್ನೇಹಿತರಾದ ಅರುಣ್ ಬಾಬು(28) ಡಿಪ್ಲೋಮಾ ಮಾಡಿದ್ದು, ಕೊಕೋಟೆರಿನೋ ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಬಾಲಕೃಷ್ಣ (25) ಎಸ್‍ಎಸ್‍ಎಲ್‍ಸಿ ಮಾಡಿದ್ದು, ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಅಭಿಷೇಕ್(23) ಬಿಬಿಎಂ ಮಾಡಿದ್ದು, ಸ್ವಂತ ಉದ್ಯಮ ಮಾಡುತ್ತಿದ್ದಾನೆ. ಶ್ರೀಕೃಷ್ಣ ತಲೆ ಮರೆಸಿಕೊಂಡಿದ್ದಾನೆ. ಮಂಜುನಾಥ್ (31) ಈತ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಮಹಮದ್ ಅಪ್ರಾಸ್ ಆಶ್ರಾಪ್ (23) ಈತ ಬಿಕಾಂ ವ್ಯಾಸಂಗ ಮಾಡುತ್ತಿದ್ದಾನೆ. ನಾಫಿ ಮಹಮದ್ ನಾಸೀರ್(28) ಬಿಬಿಎಂ ವ್ಯಾಸಂಗ ಮಾಡುತ್ತಿದ್ದಾನೆ.
ಬೆಂಗಳೂರು: ಮಹಿಳೆಯೊಬ್ಬರು ಶಾಸಕ ಹ್ಯಾರಿಸ್ ಮಗ ಮೊಹಮದ್ ನಲ್ಪಾಡ್ ನ ಮತ್ತೊಂದು ಕರ್ಮಕಾಂಡವನ್ನು ಬಯಲು ಮಾಡಿದ್ದಾರೆ.
ಮೂರು ವರ್ಷದ ಹಿಂದೆ ಪೂರ್ಣಿಮಾ ದಾಸ್ ಎಂಬುವರ ಮೇಲೆ ನಲ್ಪಾಡ್ ಗುಂಡಾಗಿರಿ ಮಾಡಿದ್ದು, ಈಗ ಆ ಮಹಿಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಹ್ಯಾರಿಸ್ ಪುತ್ರನ ಗುಂಡಾವರ್ತನೆ ಕುರಿತು ಪೊಲೀಸರಿಗೆ ದೂರು ನೀಡಲು ಹೋಗಿದ್ದೆ. ಆಗ ಯಾವ ಪೊಲೀಸರು ದೂರು ಸ್ವೀಕರಿಸದೇ ಅಲೆದಾಡಿಸಿದ್ದರು ಎಂದು ನೊಂದ ಪೂರ್ಣಿಮಾ ದಾಸ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪೂರ್ಣಿಮಾ ದಾಸ್, ನಾನು ಬೆಂಗಳೂರಿನಲ್ಲಿ ಎನ್‍ಜಿಓ ಆಗಿದ್ದರಿಂದ ದಕ್ಷಿಣ ಭಾರತದ ಎನ್‍ಜಿಓ ಕಾನ್ಫರೆನ್ಸ್ ಗೆ ಹೋಗಿದ್ದೆ. ಅಲ್ಲಿ ನಡೆಯುತ್ತಿದ್ದ ಚಟುವಟಿಗೆಗಳು ತುಂಬಾ ಅನುಮಾನಸ್ಪದವಾಗಿ ನಡೆಯುತ್ತಿತ್ತು. ಅಲ್ಲಿ ನಾವು ಹಿಂದೂಗಳು ಎಂದು ಹೇಳಿಕೊಳ್ಳಲು ಮಾತ್ರವಲ್ಲ. ಹಿಂದೂಗಳೆಲ್ಲ ಕುಳಿತುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ದರಿಂದ ನಾನು ಈ ಬಗ್ಗೆ ನಾನು ಧ್ವನಿ ಎತ್ತಿದ್ದಕ್ಕೆ ಅಲ್ಲಿದ್ದ ಮುಸ್ಲಿಮರೆಲ್ಲ ಒಂದಾಗಿ ನನ್ನ ಜೊತೆ ಕೆಟ್ಟದ್ದಾಗಿ ವರ್ತಿಸಿದರು ಎಂದು ಹೇಳಿದ್ದಾರೆ.
ಎನ್‍ಜಿಓ ಕಾನ್ಫರೆನ್ಸ್ ಅಂತಾ ಕರೆದು ಇಸ್ಲಾಂ ಧರ್ಮದ ಪ್ರಚಾರ ಕಾರ್ಯ ಮಾಡಲು ಮುಂದಾಗಿದ್ದರು. ಈ ಬಗ್ಗೆ ನಾನು ಪ್ರಶ್ನೆ ಮಾಡಿದ್ದೆ. ನಂತರ ನಾನು ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟ್ ಮಾಡಲು ಹೋಗಿದ್ದೆ. ಆದರೆ ಪೊಲೀಸರಿಗೆ ಹ್ಯಾರಿಸ್ ಮತ್ತೆ ಮಗ ಕರೆ ಮಾಡಿ ದೂರು ತೆಗೆದುಕೊಳ್ಳದಂತೆ ಸೂಚಿಸಿದ್ದರು. ಅದೇ ರೀತಿ ದೂರಿನ ಕಾಪಿಯನ್ನು ಕೂಡ ಹರಿದು ಚೂರು ಚೂರು ಮಾಡಿದ್ದರು.
ಅಷ್ಟೇ ಅಲ್ಲದೇ ನನ್ನ ಮೇಲೆ ಎಂಎಲ್‍ಎ ಹ್ಯಾರಿಸ್ ಮತ್ತು ಮಗ ಮೊಹಮದ್ ನಲ್ಪಾಡ್ ನ ಬೆಂಬಲಿಗರು ಎಂಜಿ ರಸ್ತೆಯ ಹೋಟೆಲ್ ಕನಪಿ ಮುಂದೆ ಹಲ್ಲೆ ಮಾಡಲು ಪ್ರಯತ್ನ ಮಾಡಿದ್ದರು. ಆದ್ದರಿಂದ ಈಗ ಮತ್ತೆ ಅವರು ನನ್ನ ಮೇಲೆ ಹಲ್ಲೆ ಮಾಡುವ ಸಾಧ್ಯತೆಯಿದ್ದು ನನಗೆ ಜೀವ ಬೆದರಿಕೆ ಇದೆ. ಆದ್ದರಿಂದ ನಾನು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹೋಗುತ್ತಿದ್ದೇನೆ ಎಂದು ನೊಂದ ಪೂರ್ಣಿಮಾ ದಾಸ್ ಹೇಳಿದ್ದಾರೆ. ಇದನ್ನು ಓದಿ: ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ: ಕೊನೆಗೂ ಪೊಲೀಸರಿಗೆ ಶರಣಾದ ಶಾಸಕ ಹ್ಯಾರಿಸ್ ಪುತ್ರ
ಬೆಂಗಳೂರು: ಬೈಕಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಚಿಕ್ಕಜಾಲ ಬಳಿ ನಡೆದಿದೆ.
ಮೃತರು 25 ವರ್ಷ ವಯಸ್ಸಿನವರಾಗಿದ್ದು, ಇಬ್ಬರೂ ಚಿಕ್ಕಜಾಲ ಬಳಿಯ ಏರ್ ಪೋರ್ಟ್ ರೋಡ್ ನಲ್ಲಿ ತೆರಳುವ ಸಂದರ್ಭದಲ್ಲಿ ಅತಿವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಯುವಕರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಚಿಕ್ಕಜಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಮೃತ ಯುವಕರ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.