Tag: Bangalore

  • ಇನ್ಮುಂದೆ ಇಂತಹ ಸಿನಿಮಾ ಮಾಡುವ ನಿರ್ದೇಶಕರಿಗೆ ನನ್ನ ಮೊದಲ ಆದ್ಯತೆ: ದರ್ಶನ್

    ಇನ್ಮುಂದೆ ಇಂತಹ ಸಿನಿಮಾ ಮಾಡುವ ನಿರ್ದೇಶಕರಿಗೆ ನನ್ನ ಮೊದಲ ಆದ್ಯತೆ: ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಸಿನಿಮಾರಂಗದಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ. ಇವರು ಒಂದು ಸಿನಿಮಾ ಮುಗಿಯುವವರೆಗೂ ಮತ್ತೊಂದು ಚಿತ್ರದ ಬಗ್ಗೆ ಮತ್ತು ಡೇಟ್ಸ್ ಗಳ ಬಗ್ಗೆ ಆಗಲಿ ಎಲ್ಲಿಯೂ ಮಾತನಾಡುವುದಿಲ್ಲ.

    ದರ್ಶನ್ ಕೆಲಸದಲ್ಲಿ ಯಾವಾಗಲೂ ಶಿಸ್ತು ಕಾಪಾಡುತ್ತಾರೆ. ಅಷ್ಟೇ ಅಲ್ಲದೇ ನಿರ್ದೇಶಕರಿಗೆ ಇಷ್ಟೇ ದಿನ ಡೇಟ್ಸ್ ಕೊಡುವುದು ಎಂದು ನಿರ್ಧಾರ ಮಾಡುತ್ತಾರೆ. ಆದರೆ ಕೆಲವೇ ಕೆಲ ನಿರ್ದೆಶಕರಿಗೆ ಚಾಲೆಂಜಿಂಗ್ ಸ್ಟಾರ್ ಮೊದಲ ಆದ್ಯತೆ ಕೊಡುತ್ತೇನೆ ಎಂದು ಹೇಳಿದ್ದಾರೆ.

    ದರ್ಶನ್ ಅಭಿನಯದ 50 ನೇ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. 50 ನೇ ಚಿತ್ರ ಪೌರಾಣಿಕ ಸಿನಿಮಾ ಆಗಿರುವುದರಿಂದ ಖುಷಿಯಾಗಿದ್ದಾರೆ. ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾ ಮಾಡಲು ಬರುವ ನಿರ್ದೇಶಕರಿಗೆ ದರ್ಶನ್ ಮೊದಲ ಆದ್ಯತೆ ನೀಡುತ್ತಾರೆ ಎಂದು ತಿಳಿದು ಬಂದಿದೆ.

    ದರ್ಶನ್ ಕಾಲ್ ಶೀಟ್ ಪಡೆದುಕೊಳ್ಳಲು ನಿರ್ದೇಶಕರು ಕ್ಯೂನಲ್ಲಿ ನಿಂತಿರುತ್ತಾರೆ. ಇಂತಹ ಸಮಯದಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ಕಥೆ ಮಾಡಿರುವ ನಿರ್ದೇಶಕರಿಗೆ ದರ್ಶನ್ ಡೇಟ್ಸ್ ಕೊಡುತ್ತಾರಾ ಎನ್ನುವ ಪ್ರಶ್ನೆಗೆ ದರ್ಶನ್ ಉತ್ತರಿಸಿದ್ದು, ಅಂತಹ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಆದ್ಯತೆ ನೀಡುತ್ತೇನೆ. ಅದಕ್ಕಾಗಿ ಕಮರ್ಷಿಯಲ್ ಚಿತ್ರಗಳನ್ನ ಪಕ್ಕಕ್ಕೆ ಇಡುತ್ತೇನೆ ಎಂದು ತಿಳಿಸಿದ್ದಾರೆ.

    ಕನ್ನಡ ಸಿನಿಮಾರಂಗದಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳನ್ನ ನಿರ್ಮಾಣ ಮಾಡುವವರು ತುಂಬಾ ಕಡಿಮೆ. ಇಂತಹ ಚಿತ್ರ ಮಾಡುತ್ತೀನಿ ಅಂತ ಬರುವವರೇ ಕಡಿಮೆ. ಆದ್ದರಿಂದ ಅಂತಹ ಅವಕಾಶ ಸಿಕ್ಕಾಗ ಖಂಡಿತ ಬಿಡುವುದಿಲ್ಲ ಅಂತ ದರ್ಶನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಕಾಂಗ್ರೆಸ್ ಕಾರ್ಪೋರೇಟರ್ ಪತಿ, ಬೆಂಬಲಿಗರಿಂದ ವ್ಯಕ್ತಿ ಮೇಲೆ ಹಲ್ಲೆ?

    ಕಾಂಗ್ರೆಸ್ ಕಾರ್ಪೋರೇಟರ್ ಪತಿ, ಬೆಂಬಲಿಗರಿಂದ ವ್ಯಕ್ತಿ ಮೇಲೆ ಹಲ್ಲೆ?

    ಬೆಂಗಳೂರು: ವ್ಯಕ್ತಿಯೊಬ್ಬರ ಮೇಲೆ ಕಾಂಗ್ರೆಸ್ ಕಾರ್ಪೋರೇಟರ್ ಅವರ ಪತಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.

    ಜೀವನ್ ಭೀಮಾನಗರದ ತಿಪ್ಪಸಂದ್ರ ವಾರ್ಡ್ ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಕಾರ್ಪೋರೇಟರ್ ಶಿಲ್ಪ ಅವರ ಪತಿ ಅಭಿಲಾಷ್ ರೆಡ್ಡಿ ಮತ್ತು ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಇನ್ನು ಹಲ್ಲೆಗೊಳಗಾದ ವಿಜಯ್ ಕುಮಾರ್ ಮತ್ತು ಸುರೇಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

    ನಮ್ಮದು ತಿಪ್ಪಸಂದ್ರದಲ್ಲಿ ಸ್ಟೀಲ್ ಅಂಗಡಿ ಇದೆ. ಹಲವು ದಿನಗಳಿಂದ ಅಂಗಡಿ ಮುಂದೆ ಕಾಮಗಾರಿ ನಡೆಯುತ್ತಿತ್ತು. ತ್ವರಿತವಾಗಿ ಕಾಮಗಾರಿ ಮಾಡಿ ವ್ಯವಹಾರಕ್ಕೆ ತೊಂದರೆ ಆಗುತ್ತಿದೆ ಎಂದು ಕಾರ್ಪೋರೇಟರ್ ಗೆ ಮನವಿ ಮಾಡಿದ್ದೆ. ಈ ವೇಳೆ ಅಭಿಲಾಷ್ ರೆಡ್ಡಿ ಬೇಗ ಕಾಮಗಾರಿ ನಡೆಸಬೇಕಾದರೆ ಎರಡು ಲಕ್ಷ ಬೇಕು ಕೊಡುತ್ತೀಯಾ ಅಂತಾ ಅವಾಜ್ ಹಾಕಿದ್ದಾರೆ. ಇದೇ ವಿಚಾರವಾಗಿ ಕಾರ್ಪೊರೇಟರ್ ಬೆಂಬಲಿಗರು ಭಾನುವಾರ ಸಂಜೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುರೇಶ್ ಹೇಳಿದ್ದಾರೆ.

    ಹಲ್ಲೆಗೊಳಾಗದ ಸುರೇಶ್ ಮತ್ತು ವಿಜಯ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆರೋಪ ತಳ್ಳಿ ಹಾಕಿದ ಅಭಿಲಾಷ್: ಈ ಪ್ರಕರಣಕ್ಕೂ ನನಗೂ ಇದಕ್ಕೂ ಸಂಬಂಧ ಇಲ್ಲ. ನಾನು ಭಾನುವಾರ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಹೋಗಿದ್ದೆ. ಏನಾಗಿದೆ ಅನ್ನೋದೇ ಗೊತ್ತಿಲ್ಲ. ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ನಾನು ಹೋಗಿ ನೋಡುತ್ತೀನಿ ಎಂದು ಹೇಳುವ ಮೂಲಕ ಕಾರ್ಪೋರೇಟರ್ ಪತಿ ಅಭಿಲಾಷ್ ರೆಡ್ಡಿ ಆರೋಪ ತಳ್ಳಿ ಹಾಕಿದ್ದಾರೆ.

  • ಚುನಾವಣೆ ಹೊತ್ತಲ್ಲಿ ಬಾರ್ ಮಾಲೀಕರಿಗೆ ಶಾಕ್ ನೀಡಿದ ಚುನಾವಣಾ ಆಯೋಗ

    ಚುನಾವಣೆ ಹೊತ್ತಲ್ಲಿ ಬಾರ್ ಮಾಲೀಕರಿಗೆ ಶಾಕ್ ನೀಡಿದ ಚುನಾವಣಾ ಆಯೋಗ

    ಬೆಂಗಳೂರು: ಚುನಾವಣೆಯಲ್ಲಿ ಕಿಕ್ ಏರಿಸಿಕೊಳ್ಳೋಣ ಅನ್ನೋರ ನಶೆಯಿಳಿಸುವ ರೂಲ್ಸ್ ಅನ್ನು ಚುನಾವಣಾ ಆಯೋಗ ಮಾಡಿದೆ.

    ಬಾರ್ ಗಳು ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮಗಳಿಗೆ ಬೆಂಡಾಗಿದೆ. ಬಾರ್ ನವರು ಪ್ರತಿ ದಿನದ ಮದ್ಯಮಾರಾಟದ ಸಂಪೂರ್ಣ ವಿವರವನ್ನು ಅಬಕಾರಿ ಇಲಾಖೆ ಮೂಲಕ ಚುನಾವಣಾ ಆಯೋಗಕ್ಕೆ ನೀಡಬೇಕಾಗಿದೆ.

    ಅಷ್ಟೇ ಅಲ್ಲದೇ ಕಳೆದ ವರ್ಷ ಇದೇ ದಿನ ಎಷ್ಟು ಎಣ್ಣೆ ಸೇಲ್ ಆಗಿತ್ತು ಅನ್ನೋ ಮಾಹಿತಿನೂ ನೀಡಬೇಕು. ಕಳೆದ ವರ್ಷಕ್ಕೆ ತಾಳೆ ಹಾಕಿ ಶೇ 10ಕ್ಕಿಂತ ಮದ್ಯವ್ಯಾಪಾರ ಹೆಚ್ಚಾದರೇ ಅಂತಹ ಬಾರ್ ಗಳಿಗೆ ನೋಟಿಸ್ ಕೊಟ್ಟು ಬೀಗ ಜಡಿಯುವ ಹೊಸ ನಿಯಮವನ್ನು ಮಾಡಿದೆ.

    ಈಗಾಗಲೇ ಬೆಂಗಳೂರಿನ ಎಂಟು ಬಾರ್ ಗಳಿಗೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿದೆ. ಇದರಿಂದ ಚುನಾವಣೆ ಸಮಯದಲ್ಲಿ ಭರ್ಜರಿ ಜೇಬು ತುಂಬಿಸಬಹುದು ಅನ್ನೋ ನಿರೀಕ್ಷೆಯಿಟ್ಟುಕೊಂಡಿದ್ದ ಬಾರ್ ಮಾಲೀಕರ ಲೆಕ್ಕಚಾರ ತಲೆಕೆಳಗಾಗಿದೆ.

  • ಬಿಜೆಪಿ ಸೇರ್ಪಡೆಯ ಬಗ್ಗೆ ಖಡಕ್ ಉತ್ತರ ಕೊಟ್ಟ ಅಂಬಿ

    ಬಿಜೆಪಿ ಸೇರ್ಪಡೆಯ ಬಗ್ಗೆ ಖಡಕ್ ಉತ್ತರ ಕೊಟ್ಟ ಅಂಬಿ

    ಬೆಂಗಳೂರು: ಕೈ ನಾಯಕರ ಜೊತೆ ಮುನಿಸಿಕೊಂಡಿರುವ ಅಂಬರೀಶ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ಕೆಲ ದಿನಗಳಿಂದ ಪ್ರಕಟಗೊಳ್ಳುತ್ತಿದ್ದ ಸುದ್ದಿಗೆ ಈಗ ಅವರೇ ಫುಲ್ ಸ್ಟಾಪ್ ಹಾಕಿದ್ದಾರೆ.

    ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಮುನಿಸಿಕೊಂಡಿರುವ ಅಂಬರೀಶ್ ಅವರನ್ನು ಪಕ್ಷಕ್ಕೆ ಕರೆತರಲು ಬಿಜೆಪಿ ನಾಯಕರು ಮುಂದಾಗಿದ್ದರು. ಪಕ್ಷದ ನಾಯಕರ ಸೂಚನೆ ಮೇರೆಗೆ ಕೇಂದ್ರದ ಮಾಜಿ ಸಚಿವ ಹಾಗೂ ನಟ ಕೃಷ್ಣಂ ರಾಜು ಹೈದರಾಬಾದ್ ನಲ್ಲಿ ಅಂಬರೀಶ್ ಅವರನ್ನು ಭೇಟಿಯಾಗಿ ಬಿಜೆಪಿಗೆ ಸೇರ್ಪಡೆಯಾಗುವಂತೆ ಆಹ್ವಾನಿಸಿದ್ದರು.

    ಆದರೆ ಈ ಆಹ್ವಾನವನ್ನು ಅಂಬರೀಶ್ ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿ ಸೇರಲು ಕೂಡ ನಿರಾಕರಿಸಿದ್ದು, ಯಾವುದೇ ಕಾರಣಕ್ಕೂ ನಾನು ಪಕ್ಷ ಬಿಡಲ್ಲ. ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ. ಆದ್ದರಿಂದ ಪಕ್ಷ ಬಿಡುವ ಬಗ್ಗೆ ಯೋಚಿಸಿಲ್ಲ. ನನ್ನ ಆರೋಗ್ಯದ ದೃಷ್ಟಿಯಿಂದ ಈ ಬಾರಿ ಮಂಡ್ಯದಿಂದ ಚುನಾವಣೆಗೆ ಸ್ಪರ್ಧೆ ಮಾಡಬೇಕೇ? ಬೇಡವೇ ಅನ್ನೋದು ಇನ್ನು ತೀರ್ಮಾನ ಮಾಡಿಲ್ಲ. ಪಕ್ಷದ ಯಾವ ನಾಯಕರ ಜೊತೆಗೂ ನನಗೆ ಭಿನ್ನಾಭಿಪ್ರಾಯ ಇಲ್ಲ ಎಂದು ಅಂಬರೀಶ್ ಖಡಕ್ ಉತ್ತರ ನೀಡಿದ್ದಾರೆ ಮೂಲಗಳು ತಿಳಿಸಿವೆ. ಇದನ್ನು ಓದಿ: ಕಾಂಗ್ರೆಸ್ ಹೈಕಮಾಂಡ್‍ಗೆ ಹೊಸ ಬೇಡಿಕೆಯಿಟ್ಟ ಮಂಡ್ಯದ ಗಂಡು ಅಂಬರೀಶ್

    ಮಂಡ್ಯ ಜಿಲ್ಲೆಯ 4 ಕ್ಷೇತ್ರದಲ್ಲಿ ತಾವು ಹೇಳಿದವರಿಗೆ ಟಿಕೆಟ್ ನೀಡಬೇಕೆಂದು ಹಿರಿಯ ನಟ ಮತ್ತು ಮಾಜಿ ಸಚಿವ ಅಂಬರೀಶ್ ಪಟ್ಟು ಹಿಡಿದಿದ್ದಾರೆ. ಆದರೆ ಅಂಬರೀಶ್ ಅವರ ಈ ಬೇಡಿಕೆಯನ್ನು ರಾಜ್ಯದ ಕೈ ನಾಯಕರು ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ನಾಯಕರ ಜೊತೆ ಅಂಬಿ ಮುನಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.

  • ಗಮನಿಸಿ, ಹೊಸ ಏರ್ ಪೋರ್ಟ್ ರಸ್ತೆಯಲ್ಲಿ ಹೋಗೋರೆ ಹುಷಾರ್..!

    ಗಮನಿಸಿ, ಹೊಸ ಏರ್ ಪೋರ್ಟ್ ರಸ್ತೆಯಲ್ಲಿ ಹೋಗೋರೆ ಹುಷಾರ್..!

    ಬೆಂಗಳೂರು: ಏರ್ ಪೋರ್ಟ್ ಹೋಗಬೇಕು ಅಂದರೆ ಸಾಕಷ್ಟು ಟೋಲ್ ಕಟ್ಟಬೇಕು. ಟೋಲ್ ಬಿಟ್ಟು ಹೋಗೋಕೆ ಬೇರೆ ದಾರಿ ಇಲ್ಲ ಅಂತ ಇದ್ದವರಿಗೆ ಸರ್ಕಾರ ಹೊಸದೊಂದು ರೋಡ್ ಮಾಡಿಕೊಟ್ಟಿತ್ತು. ಆದ್ರೆ ಈಗ ಆ ರೋಡ್‍ನಲ್ಲಿ ಯಾರೂ ಸಂಚಾರ ಮಾಡುವ ಹಾಗಿಲ್ಲ. ಯಾಕಂದ್ರೆ ಈ ರಸ್ತೆಯಲ್ಲಿ ಸಂಚರಿಸಿದ್ರೆ ಊರಿನ ಜನ ಹಿಗ್ಗಾಮುಗ್ಗವಾಗಿ ಥಳಿಸುತ್ತಾರೆ.

    ಬೇರೆ ಊರಿಗೆ ಹೋಗೋಕೆ ಏರ್ ಪೋರ್ಟ್ ಹೋಗುತ್ತಿದ್ದ ಜನಕ್ಕೆ ದಿನನಿತ್ಯ ಟೋಲ್‍ನ ಕಿರಿಕಿರಿ ಇತ್ತು. ಅದರಲ್ಲೂ ಕ್ಯಾಬ್‍ನ ಡ್ರೈವರ್ ಗಳು ಸರ್ಕಾರಕ್ಕೆ ಪದೇ ಪದೇ ಮನವಿ ನೀಡುತ್ತಿದ್ದರು. ಹೀಗಾಗಿ ಸರ್ಕಾರ ಏರ್ ಪೋರ್ಟ್ ರಸ್ತೆಯ ಟೋಲ್ ಕಿರಿಕಿರಿ ತಪ್ಪಿಸಲು ಕೋಟಿ ಕೋಟಿ ಹಣ ಖರ್ಚು ಮಾಡಿ ಪರ್ಯಾಯ ಮಾರ್ಗ ಕಲ್ಪಿಸಿದೆ.

    ಆದ್ರೆ ಈ ರಸ್ತೆಯಲ್ಲೂ ಪ್ರಯಾಣಿಕರಿಗೆ ನೆಮ್ಮದಿಯಿಲ್ಲ. ಏರ್ ಪೋರ್ಟ್ ಗೆ ಹೋಗುವ ರಸ್ತೆ ಮಾರ್ಗದಲ್ಲಿ ಹಲವು ಹಳ್ಳಿಗಳು ಸಿಗುತ್ತದೆ. ಇಲ್ಲಿ ಕ್ಯಾಬ್ ಚಾಲಕರು ವೇಗವಾಗಿ ವಾಹನ ಚಲಾಯಿಸಿ ಜನರ ಪ್ರಾಣಕ್ಕೆ ಕುತ್ತು ತರುತ್ತಾ ಇದ್ದಾರಂತೆ. ಹೀಗಾಗಿ ಹಳ್ಳಿಯ ಒಳಗೆ ಕಾರ್ ಗಳನ್ನು ತೆಗೆದುಕೊಂಡು ಹೋಗಲು ಇಲ್ಲಿನ ಜನ ಬಿಡ್ತಾ ಇಲ್ಲ. ಅಪ್ಪಿ-ತಪ್ಪಿ ಬಂದರೆ ಅವರನ್ನ ಹೊಡೆದು ಕಳುಹಿಸುತ್ತಿದ್ದಾರೆ. ಪೊಲೀಸರಿಗೂ ದೂರು ನೀಡಿದ್ದಾರೆ ಎಂದು ಕ್ಯಾಬ್ ಚಾಲಕ ಹರೀಶ್ ಹೇಳಿದ್ದಾರೆ.

    ಜನರು ರೊಚ್ಚಿಗೆದ್ದು ಈ ರೀತಿ ಹಲ್ಲೆ ಮಾಡುತ್ತಾ ಇರುವುದರಿಂದ ಸಾಕಷ್ಟು ಕ್ಯಾಬ್‍ಗಳು ಮತ್ತೆ ಅದೇ ಟೋಲ್ ರಸ್ತೆಯಲ್ಲೇ ಪ್ರಯಾಣಿಸ್ತಿದ್ದಾರೆ. ಆದರೆ ಈ ರಸ್ತೆಯಲ್ಲಿ ಓಡಾಡೋರಿಗೆ ಹಲ್ಲೆ ಮಾಡಿದರೆ ಮತ್ತೆ ಟೋಲ್ ರಸ್ತೆಗೆ ಇಳೀತಾರೆ. ಹೀಗಾಗಿ ಟೋಲ್ ಮ್ಯಾನೇಜ್ ಮೆಂಟ್‍ನವರೇ ಪೊಲೀಸರಿಗೆ ಮತ್ತು ಜನರಿಗೆ ಹಣಕೊಟ್ಟು ಹೀಗೆ ಹಲ್ಲೆ ಮಾಡಿಸುತ್ತಿದ್ದಾರೆ ಎಂದು ಕ್ಯಾಬ್ ಚಾಲಕ ನವೀನ್‍ಗೌಡ ಆರೋಪಿಸಿದ್ದಾರೆ.

  • ಕಾಂಗ್ರೆಸ್ ಹೈಕಮಾಂಡ್‍ಗೆ ಹೊಸ ಬೇಡಿಕೆಯಿಟ್ಟ ಮಂಡ್ಯದ ಗಂಡು ಅಂಬರೀಶ್

    ಕಾಂಗ್ರೆಸ್ ಹೈಕಮಾಂಡ್‍ಗೆ ಹೊಸ ಬೇಡಿಕೆಯಿಟ್ಟ ಮಂಡ್ಯದ ಗಂಡು ಅಂಬರೀಶ್

    ಬೆಂಗಳೂರು: ಚುನಾವಣಾ ದಿನಾಂಕ ಘೋಷಣೆಯಾದ್ರೂ ರಾಜ್ಯ ಕಾಂಗ್ರೆಸ್ ನಾಯಕರ ಕೈಗೆ ಸಿಗದ ಮಾಜಿ ಸಚಿವ ಅಂಬರೀಶ್ ಈಗ ಹೊಸ ಬೇಡಿಕೆಯೊಂದಿಗೆ ನಾಯಕರಿಗೆ ತಲೆನೋವು ತಂದಿಟ್ಟಿದ್ದಾರೆ.

    ಯಾರ ಸಂಪರ್ಕಕ್ಕೂ ಸಿಗದ ಅಂಬರೀಶ್‍ ರನ್ನ ಸಂಪರ್ಕಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಭಾನುವಾರ ಸಂಜೆಯೊಳಗೆ ತಮ್ಮ ತೀರ್ಮಾನ ತಿಳಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು. ಆ ನಂತರವೂ ಮೌನವಾಗಿದ್ದ ಅಂಬರೀಶ್, ಕಳೆದ ಬಾರಿಯಂತೆ ಈ ಬಾರಿಯೂ ಮಂಡ್ಯ ಜಿಲ್ಲೆಯ ನಾಯಕತ್ವದ ಪ್ರಶ್ನೆ ಎತ್ತಿ, ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಅಂಬರೀಶ್‍ಗೆ ಕೆ.ಸಿ ವೇಣುಗೋಪಾಲ್ ಖಡಕ್ ಸೂಚನೆ!

    ಮಂಡ್ಯದ ನಾಲ್ಕು ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ನಾನು ಹೇಳಿದಂತೆ ಆಗಬೇಕು ಅಂತ ಡಿಮ್ಯಾಂಡ್ ಮುಂದಿಟ್ಟಿದ್ದಾರೆ. ಮಂಡ್ಯ ನನ್ನ ಕ್ಷೇತ್ರ ಅದರ ಜೊತೆಗೆ ಶ್ರೀರಂಗಪಟ್ಟಣ, ಮದ್ದೂರು, ಕೆ.ಆರ್.ಪೇಟೆ ಹಾಗೂ ಮೇಲುಕೋಟೆಯ ಟಿಕೆಟ್ ಹಂಚಿಕೆ ಜವಾಬ್ದಾರಿ ನನಗೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

    ಸ್ಕ್ರಿನಿಂಗ್ ಕಮಿಟಿ ಸಭೆಗೆ ಒಂದು ದಿನವಷ್ಟೆ ಬಾಕಿ ಇದೆ. ಮಂಡ್ಯ ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಹುತೇಕ ಅಂತಿಮಗೊಂಡಿದೆ. ಆದರೆ ಕೊನೆ ಗಳಿಗೆಯಲ್ಲಿ ಅಂಬರೀಶ್ ಹೊಸ ವರಸೆ ತೆಗೆದಿದ್ದಾರೆ. ಇದನ್ನೂ ಓದಿ ಚುನಾವಣೆ ಹತ್ತಿರ ಬಂದ್ರೂ ಮಂಡ್ಯದಲ್ಲಿ ಅಂಬಿ, ರಮ್ಯಾ ನಾಪತ್ತೆ!

    ಶ್ರೀರಂಗಪಟ್ಟಣದಲ್ಲಿ ಪುಟ್ಟೇಗೌಡ, ಮದ್ದೂರಿನಲ್ಲಿ ಕಲ್ಪನಾ ಸಿದ್ದರಾಜು, ಕೆ.ಆರ್.ಪೇಟೆಯಲ್ಲಿ ಕಿಕ್ಕೇರಿ ಸುರೇಶ ಹಾಗೂ ಮೇಲುಕೋಟೆಯಲ್ಲಿ ಎಲ್.ಡಿ.ರವಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದು, ಕಾಂಗ್ರೆಸ್ ನಾಯಕರು ಇದಕ್ಕೆ ಒಪ್ಪುತ್ತಾರೆ ಅಥವಾ ಮಂಡ್ಯದಲ್ಲೇ ಬೇರೆ ಅಭ್ಯರ್ಥಿ ಹಾಕಿ, ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ತಿರುಗೇಟು ನೀಡುತ್ತಾರಾ ಎಂಬುದೇ ಸದ್ಯದ ಕುತೂಹಲ ವಿಷಯವಾಗಿದೆ.

  • ಊರಿಗೆ ಹೋಗಿ ವಾಪಸ್ಸಾಗುತ್ತಿದ್ದ ವ್ಯಕ್ತಿ ಹಳಿ ದಾಟುವಾಗ ರೈಲಿಗೆ ಸಿಲುಕಿ ದುರ್ಮರಣ

    ಊರಿಗೆ ಹೋಗಿ ವಾಪಸ್ಸಾಗುತ್ತಿದ್ದ ವ್ಯಕ್ತಿ ಹಳಿ ದಾಟುವಾಗ ರೈಲಿಗೆ ಸಿಲುಕಿ ದುರ್ಮರಣ

    ಬೆಂಗಳೂರು: ರೈಲ್ವೇ ಹಳಿ ದಾಟುವಾಗ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದಿದೆ.

    ಅನಂತಪುರ ಮೂಲದ 55 ವರ್ಷದ ಶ್ರೀನಿವಾಸಲು ಮೃತಪಟ್ಟ ದುರ್ದೈವಿ. ಬಿಬಿಎಂಪಿಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸಲು ಕಳೆದ ನಾಲ್ಕು ದಿನದ ಹಿಂದೆ ಊರಿಗೆ ಹೋಗಿದ್ದರು. ಹೀಗಾಗಿ ಶನಿವಾರ ರಾತ್ರಿ 10 ಗಂಟೆಗೆ ಬೆಂಗಳೂರಿಗೆ ವಾಪಸ್ ಬಂದಿದ್ದರು.

    ಹೆಬ್ಬಾಳದಲ್ಲಿರುವ ಮನೆಗೆ ತೆರಳುವ ಸಂದರ್ಭದಲ್ಲಿ ರೈಲ್ವೇ ಹಳಿ ದಾಟುವಾಗ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಯಶವಂತಪುರ ರೈಲ್ವೇ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡಿಸಿ ಮೃತದೇಹವನ್ನ ಬೌರಿಂಗ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.

    ಈ ಸಂಬಂಧ ಯಶವಂತಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಾನು ಹಲ್ಲೆ ಮಾಡಿಲ್ಲ, ದೌರ್ಜನ್ಯ ತಡೆಯಲು ಹೋಗಿದ್ದೆ- ಹಲ್ಲೆ ಸಂಬಂಧ ಜಗ್ಗೇಶ್ ಸ್ಪಷ್ಟನೆ

    ನಾನು ಹಲ್ಲೆ ಮಾಡಿಲ್ಲ, ದೌರ್ಜನ್ಯ ತಡೆಯಲು ಹೋಗಿದ್ದೆ- ಹಲ್ಲೆ ಸಂಬಂಧ ಜಗ್ಗೇಶ್ ಸ್ಪಷ್ಟನೆ

    ಬೆಂಗಳೂರು: ಮಲ್ಲೇಶ್ವರಂನಲ್ಲಿ ನಟ ಜಗ್ಗೇಶ್ ಹಾಗೂ ಸ್ಥಳೀಯ ರಿಯಲ್ ಎಸ್ಟೇಟ್ ಏಜೆಂಟ್ ನಡುವೆ ಕ್ಷುಲ್ಲಕ ಕಾರಣಕ್ಕೆ ತಳ್ಳಾಟ ನೂಕಾಟ ನಡೆದಿದ್ದು, ಈ ಬಗ್ಗೆ ತಮ್ಮ ವಿರುದ್ಧ ಕೇಳಿಬಂದ ಆರೋಪಕ್ಕೆ ನವರಸ ನಾಯಕ ನಟ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಅವರು, ಮಂಡಲ ಮಾದೇಗೌಡರು ನನ್ನ ಬಾವ. ಅವರು ಮಲೇಶ್ವರಂ ನಲ್ಲಿ ಆರ್ಗೆನಿಕ್ ಶಾಪ್ ಇಟ್ಟುಕೊಂಡಿದ್ದಾರೆ. ಮೆಟ್ರೋಗೆಲ್ಲಾ ಅವರೇ ತರಕಾರಿ ಸಪ್ಲೈ ಮಾಡುತ್ತಾರೆ. 2-3 ಸಾವಿರ ಎಕರೆ ಜಮೀನು ಇಟ್ಟುಕೊಂಡು ತರಕಾರಿ ಬೆಳೆದು ಮಾರಾಟ ಮಾಡುತ್ತಾರೆ. ಅವರ ಮಗನಿಗಾಗಿ ಮಲ್ಲೇಶ್ವರಂ 8ನೇ ಕ್ರಾಸ್ ಒಂದು ಔಟ್‍ಲೆಟ್ ಹಾಕಿಕೊಟ್ಟಿದ್ದಾರೆ. ಸುಮಾರು ಒಂದೂವರೆ ತಿಂಗಳಿಂದ ಒಬ್ಬ ವ್ಯಕ್ತಿ ಕಾರ್ಪೊರೇಟರ್ ಮಂಜಣ್ಣ ಅವರ ಹೆಸರು ಹೇಳಿಕೊಂಡು ಬೆದರಿಸಿ ರೋಲ್ ಕಾಲ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದನು.

    ಈ ಕುರಿತು ನಾನು ಪೊಲೀಸರಿಗೆ ಮಾಹಿತಿ ನೀಡಿ, ಮಂಜಣ್ಣ ಜೊತೆ ಮಾತನಾಡಿದೆ. ಈ ವೇಳೆ ಅವರು ನಮ್ಮ ಕಡೆಯವರು ಯಾರು ಹೋಗಿಲ್ಲ ಎಂದು ಹೇಳಿದ್ದಾರೆ. ಆದ್ರೆ ಶುಕ್ರವಾರ ಮತ್ತೆ ಚೇರ್ ಎಳೆದು ರಂಪಾಟ್ ಮಾಡುತ್ತಿದ್ದಾರೆ ಎಂದು ಕಾಲ್ ಮಾಡಿದ್ದರು. ಹೀಗಾಗಿ ನಾನು ಕಾರ್ಪೊರೇಟರ್ ಹೋಗಿದ್ದೆವು. ನನ್ನನ್ನ ನೋಡಿ ಆ ವ್ಯಕ್ತಿ ಓಡಿ ಹೋಗುತ್ತಿದ್ದನು. ತಕ್ಷಣ ಅವನನ್ನು ಹಿಡಿದು ಇಬ್ಬರು ಪೊಲೀಸರಿಗೆ ಒಪ್ಪಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದು, ನಂತರ ಎಲ್ಲರೂ ಕೂತು ಮಾತನಾಡಿ ಸರಿಪಡಿಸಿಕೊಂಡೆವು.

    ಈ ಘಟನೆಯನ್ನು ಯಾರೋ ರೆಕಾರ್ಡ್ ಮಾಡಿ ನನ್ನ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲ, ಟ್ವಿಟ್ಟರ್ ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿ ನಾಳೆ ಇದೆ ನಿಂಗೆ ಮಾಂಜ.. ಇದನ್ನ ಮಿಡಿಯಾಗಳಿಗೆ ಕೊಡ್ತೇನೆ ಎಂದು ಆ ದುಷ್ಕರ್ಮಿ ಬೆದರಿಸಿದ್ದನು. ಅದೇ ರೀತಿ ಮಾಡಿದ್ದಾನೆ. ಈ ಬಗ್ಗೆ ನಾನು ಸ್ಪಷ್ಟನೆ ನೀಡಿದ್ದೇನೆ. ಇದು ಯಾವುದೇ ಪಾನಿಪುರಿ, ತಳ್ಳೋಗಾಡಿ ಗಲಾಟೆ ಅಲ್ಲ. ಔಟ್‍ಲೆಟ್ ನಲ್ಲಿ ನಡೆದಿರುವ ಘಟನೆ ಎಂದು ಜಗ್ಗೇಶ್ ಹೇಳಿದ್ದಾರೆ.

    ಆರೋಪ ಏನು?
    ಶುಕ್ರವಾರ ರಾತ್ರಿ ಮಲ್ಲೇಶ್ವರಂ 8ನೇ ಕ್ರಾಸ್ ಬಳಿ ಜಗ್ಗೇಶ್ ಸಂಬಂಧಿ ಮಾದೇಗೌಡ ಎಂಬವರು ಪಾನಿಪುರಿ ವ್ಯಾಪಾರ ಮಾಡುತ್ತಾರೆ. ಅಲ್ಲಿಗೆ ಬಂದ ರವಿಕುಮಾರ್ ಹಾಗೂ ಕೆಲ ಸಂಗಡಿಗರು ಕಿರಿಕ್ ಮಾಡಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾದೇಗೌಡರು, ನಟ ಜಗ್ಗೇಶ್ ಗೆ ಫೋನ್ ಮಾಡಿ ಘಟನೆಯ ಕುರಿತು ತಿಳಿಸಿದ್ದಾರೆ. ಈ ವಿಷಯ ತಿಳಿಯುತ್ತಲೇ ಮಲ್ಲೇಶ್ವರಂನ ಸ್ಥಳೀಯ ಕಾರ್ಪೊರೇಟರ್ ಮಂಜುನಾಥ್ ಅವರ ಜೊತೆ ಸ್ಥಳಕ್ಕೆ ಬಂದ ಜಗ್ಗೇಶ್ ಈ ಕುರಿತು ಪ್ರಶ್ನಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ತಳ್ಳಾಟ-ನೂಕಾಟ ನಡೆದಿದ್ದು, ಜಗ್ಗೇಶ್ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

    https://www.youtube.com/watch?v=WVOT26COots

  • 3 ತಿಂಗ್ಳಲ್ಲಿ 2.5 ಕೋಟಿ ವೀವ್ಸ್ ಪಡೆದ `ಟಕಿಲಾ’ ಸಾಂಗ್ – ಫೇಸ್ ಬುಕ್ ಲೈವ್ ನಲ್ಲಿ ಖುಷಿ ಹಂಚಿಕೊಂಡ ಚಂದನ್

    3 ತಿಂಗ್ಳಲ್ಲಿ 2.5 ಕೋಟಿ ವೀವ್ಸ್ ಪಡೆದ `ಟಕಿಲಾ’ ಸಾಂಗ್ – ಫೇಸ್ ಬುಕ್ ಲೈವ್ ನಲ್ಲಿ ಖುಷಿ ಹಂಚಿಕೊಂಡ ಚಂದನ್

    ಬೆಂಗಳೂರು: ಬಿಗ್‍ಬಾಸ್ ವಿನ್ನರ್ ರ‍್ಯಾಪರ್ ಚಂದನ್ ಶೆಟ್ಟಿಯ `ಟಕಿಲಾ’ ಸಾಂಗ್ ಹೊಸ ದಾಖಲೆ ಬರೆದಿದ್ದು, ಕೇವಲ ಮೂರು ತಿಂಗಳಲ್ಲಿ 2.53 ಕೋಟಿ ಬಾರಿ ವೀವ್ಸ್ ಕಂಡಿದೆ.

    ಚಂದನ್ ಶೆಟ್ಟಿ ಬಿಗ್‍ಬಾಸ್ ಮನೆಯಲ್ಲಿರುವಾಗಲೇ ಈ ಸಾಂಗ್ ರಿಲೀಸ್ ಆಗಿತ್ತು. ಬಿಗ್‍ಬಾಸ್ ವೇದಿಕೆಯ ಮೇಲೆ ನಟ ಕಿಚ್ಚ ಸುದೀಪ್ ಈ ಸಾಂಗ್ ರಿಲೀಸ್ ಮಾಡಿದ್ದರು. ಬಿಡುಗಡೆಯಾದ 17 ಗಂಟೆಯಲ್ಲಿಯೇ ಇದು 1 ಮಿಲಿಯನ್ ಬಾರಿ ವೀಕ್ಷಿಸಲ್ಪಟ್ಟು ದಾಖಲೆ ಬರೆದಿತ್ತು. ಇದೀಗ `ಟಕಿಲಾ’ ಸಾಂಗ್ 2.53 ಕೋಟಿ ಬಾರಿ ವೀಕ್ಷಣೆಯಾಗಿದ್ದು, 2.79 ಲಕ್ಷ ಲೈಕ್ಸ್ ಆಗಿದೆ.

    ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರದ `ಬೊಂಬೆ ಹೇಳುತೈತೆ’ ಸಾಂಗ್ ಇದುವರೆಗೆ 5 ಕೋಟಿ ವೀವ್ಸ್, 1.72 ಲಕ್ಷ ಲೈಕ್ಸ್ ಪಡೆದಿದೆ. ರಕ್ಷಿತ್ ಶೆಟ್ಟಿಯ ಕಿರಿಕ್ ಪಾರ್ಟಿ ಚಿತ್ರದ `ಬೆಳಗೆದ್ದು ಯಾರ ಮುಖವಾ ನಾನು ನೋಡಲಿ’ ಹಾಡು 5 ಕೋಟಿ ವೀಕ್ಷಣೆಯಾಗಿದೆ. ಈ ಎರಡು ಸಾಂಗ್‍ಗಳು ಬಿಡುಗಡೆಯಾಗಿ ಒಂದು ವರ್ಷ ಕಳೆಯಿತು. ಆದರೆ ಚಂದನ್ ಶೆಟ್ಟಿಯ ಟಕಿಲಾ ಸಾಂಗ್ ಕೇವಲ ಮೂರೇ ತಿಂಗಳಿನಲ್ಲಿ 2.53 ಕೋಟಿ ವೀವ್ಸ್ ಪಡೆದುಕೊಂಡಿದೆ.

    ಚಂದನ್ ಫುಲ್ ಖುಷ್:
    ನಮ್ಮ ಟಕಿಲಾ ಸಾಂಗ್ ಯೂಟ್ಯೂಬ್ ನಲ್ಲಿ 2.5 ವೀವ್ಸ್ ಪಡೆದಿಕೊಂಡಿದೆ. ತುಂಬಾ ಖುಷಿಯಾಗಿದೆ. ಒಂದು ಕನ್ನಡ ಸಾಂಗ್ 90 ದಿನಗಳಲ್ಲಿ 2.5 ಕೋಟಿ ವೀವ್ಸ್ ಕಂಡಿದೆ ಅಂದ್ರೆ ಅದು ಕನ್ನಡಿಗರಿಗೆ ಒಂದು ಹೆಮ್ಮೆಯ ವಿಚಾರವಾಗಿದೆ. ನಮ್ಮ ಕರ್ನಾಟಕ ಕನ್ನಡಿಗರು, ಕರ್ನಾಟಕ ಬಿಟ್ಟು ಹೊರ ದೇಶದಲ್ಲಿರುವ ಕನ್ನಡಿಗರಿಗೆಲ್ಲಾ ಧನ್ಯವಾದ ಹೇಳೋಕೆ ಇಷ್ಟ ಪಡುತ್ತೇನೆ. ನೀವು ಕೊಟ್ಟಿರುವ ಸಪೋರ್ಟ್ ನನಗೆ ಮತ್ತು ನನ್ನ ತಂಡಕ್ಕೆ ಒಳ್ಳೆ ಎನರ್ಜಿ ಕೊಟ್ಟಿದೆ ಎಂದು ಹೇಳಿದ್ದಾರೆ.

    ಚಂದನ್ ಮತ್ತು ಅವರ ತಂಡ ತಮ್ಮ ಅನುಭವವನ್ನು ತುಂಬಾ ಸಂತಸದಿಂದ ಹಂಚಿಕೊಂಡಿದ್ದಾರೆ,

  • ಸ್ಯಾಂಡಲ್‍ವುಡ್ ಸಿಂಡ್ರೆಲಾಗೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಯಿಂದ ಮೆಸೇಜ್

    ಸ್ಯಾಂಡಲ್‍ವುಡ್ ಸಿಂಡ್ರೆಲಾಗೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಯಿಂದ ಮೆಸೇಜ್

    ಬೆಂಗಳೂರು: ಕನ್ನಡ ಸಿನಿಮಾರಂಗದಲ್ಲಿ ದಶಕಗಳನ್ನ ಯಶಸ್ವಿಯಾಗಿ ಪೂರೈಸಿ, ಅದ್ಭುತ ಕಲಾವಿದೆಯಾಗಿ ಗುರುತಿಸಿಕೊಂಡ ನಟಿ ರಾಧಿಕಾ ಪಂಡಿತ್ ಅವರು ಯಾವುದೇ ಪಾತ್ರವಾಗಲಿ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುತ್ತಾರೆ.

    ಹತ್ತು ವರ್ಷದಿಂದ ಕನ್ನಡ ಸಿನಿಮಾ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿರುವ ಸ್ಯಾಂಡಲ್ ವುಡ್ ನ ಸಿಂಡ್ರೆಲಾಗೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಪುಟ್ಟದೊಂದು ಮನವಿ ಹಾಗೂ ಸಲಹೆಯನ್ನು ನೀಡಿದ್ದಾರೆ. ಇತ್ತೀಚೆಗಷ್ಟೇ ನಟಿ ರಾಧಿಕಾ ಪಂಡಿತ್ ಸನ್ ಗ್ಲಾಸ್ ಹಾಕಿಕೊಂಡು ಫೋಟೋವನ್ನು ಅಪ್ಲೋಡ್ ಮಾಡಿದ್ದರು. ಅದನ್ನ ನೋಡಿ ಸಾಕಷ್ಟು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು.

    ಅದೇ ಫೋಟೋ ಕಮೆಂಟ್ ನಲ್ಲಿ ದರ್ಶನ್ ಅಭಿಮಾನಿ ರಾಧಿಕಾ ಅವರಿಗೆ ಡಿ ಬಾಸ್ ಜೊತೆ ಸಿನಿಮಾ ಮಾಡಿ ಎಂದು ಮನವಿ ಮಾಡಿದ್ದಾರೆ. ನಾಯಕಿ ಆಗಿ ಆಗದಿದ್ದರೂ ತಂಗಿಯಾಗಿ ಅಭಿನಯಿಸಿ ನಿಮ್ಮಬ್ಬರದ್ದು ಒಳ್ಳೆ ಜೋಡಿ ಆಗುತ್ತದೆ ಎಂದು ತಿಳಿಸಿದ್ದಾರೆ. ಅಭಿಮಾನಿ ಮಾಡಿದ ಕಮೆಂಟ್ ಗೆ ಉಳಿದವರು ಹೌದು ಯಾಕೆ? ನೀವು ದರ್ಶನ್ ಅವರ ಜೊತೆ ಅಭಿನಯಿಸಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನು ಓದಿ: ಶೂಟಿಂಗ್ ಸೆಟ್ ನಿಂದ ಸನ್ ಗ್ಲಾಸ್ ಕದ್ದ ರಾಧಿಕಾ ಪಂಡಿತ್!

    ರಾಧಿಕಾ ಪಂಡಿತ್ ಹಾಗೂ ದರ್ಶನ್ ಇಬ್ಬರು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಕಲಾವಿದರು. ಆದರೆ ಇಲ್ಲಿಯವರೆಗೂ ಯಾವುದೇ ನಿರ್ದೇಶಕರು ಅವರಿಬ್ಬರನ್ನ ಒಂದೇ ಸಿನಿಮಾದಲ್ಲಿ ನೋಡುವಂತ ಅವಕಾಶ ಪ್ರೇಕ್ಷಕರಿಗೆ ಮಾಡಿಕೊಟ್ಟಿಲ್ಲ. ಮುಂದಿನ ದಿನಗಳಲ್ಲಾದ್ರೂ ಇಬ್ಬರಿಗೂ ಹೊಂದಿಕೆ ಆಗುವಂತ ಕಥೆ ಸಿಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.