Tag: Bangalore Mysore Expressway Anitha Kumaraswamy BJP

  • ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ: ಅನಿತಾ ಕುಮಾರಸ್ವಾಮಿ ಕಿಡಿ

    ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ: ಅನಿತಾ ಕುಮಾರಸ್ವಾಮಿ ಕಿಡಿ

    ಬೆಂಗಳೂರು: ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಿದ್ದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bangaluru Mysuru Expressway) ಕೆರೆಯಂತಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಈ ಅವ್ಯವಸ್ಥೆಗೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿವೆ.

    ಎಕ್ಸ್‌ಪ್ರೆಸ್‌ವೇ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ವಿಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಇದರ ಬೆನ್ನಲ್ಲೇ ಜಲಾವೃತಗೊಂಡ ರಸ್ತೆ ಪೋಟೋಗಳನ್ನು ಟ್ವಿಟ್ಟರ್‌ನಲ್ಲಿ ಜೆಡಿಎಸ್‌ (JDS) ಶಾಸಕಿ ಅನಿತಾ ಕುಮಾರಸ್ವಾಮಿ (Anitha Kumaraswamy) ಹಂಚಿಕೊಂಡು, ಅವ್ಯವಸ್ಥೆಯ ವಿರುದ್ಧ ಸರಣಿ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಡಬಲ್ ಎಂಜಿನ್ ಸರಕಾರಗಳು, ಈ ರಸ್ತೆ ನಮ್ಮ ಹೆಮ್ಮೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ. ಬೆಳಗಿನಜಾವ ಸುರಿದ ಒಂದು ಸಣ್ಣ ಮಳೆಗೇ (Rain) ಅದು ಕೆರೆಯಾಗಿ, ಚರಂಡಿಯಾಗಿ ಉಕ್ಕಿ ಹರಿದಿದೆ.

    ಕಳೆದ ವರ್ಷ ಅಬ್ಬರಿಸಿದ ಮಹಾಮಳೆಗೆ ಈ ಎಕ್ಸ್‍ಪ್ರೆಸ್ ಹೆದ್ದಾರಿ ತತ್ತರಿಸಿತ್ತು. ಕಾಮಗಾರಿಗಳು ಮುಗಿದಿರಲಿಲ್ಲ ಎಂದು ಹೇಳಿ ಗುತ್ತಿಗೆದಾರರು ಆಗ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಈಗ ವರ್ಷ ಮುಗಿಯುವ ಮೊದಲೇ ಮತ್ತೆ ಬಂದ ಸಣ್ಣ ಮಳೆಗೆ ಸಾವಿರಾರು ಕೋಟಿ ರೂ. ವೆಚ್ಚದ ಈ ಹೆದ್ದಾರಿ ವಾಹನ ಸವಾರರ ಪಾಲಿಗೆ ಸಾವಿನ ಮಾರಿಯಾಗಿ ಮಾರ್ಪಟ್ಟಿದೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲೂ ಗೆಲ್ಲುವುದಿಲ್ಲ: ಆರ್.ಅಶೋಕ್

    ಅವೈಜ್ಞಾನಿಕವಾದ ಈ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿದೆಯೇ, ತರಾತುರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಮಾಡಿಸಿದ ಈ `ಚುನಾವಣಾ ಗಿಮಿಕ್’ ಬಗ್ಗೆ ಜನರು ಹಾದಿಬೀದಿಯಲ್ಲಿ ಆಡಿಕೊಳ್ಳುತ್ತಿದ್ದಾರೆ. ವಾಹನ ಸವಾರರು ಶಪಿಸುತ್ತಿದ್ದಾರೆ. ಇದಕ್ಕೆ ಉತ್ತರದಾಯಿಗಳು ಯಾರು?

    ಬೆಳಗಿನಜಾವ ಸುರಿದ ಮಳೆಯಿಂದ ಹೆದ್ದಾರಿಯಲ್ಲಿ ನೀರು ಆಳೆತ್ತರ ನಿಂತಿದೆ. ವಾಹನಗಳು ಅಪಘಾತಕ್ಕೀಡಾಗಿ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. 270 ರೂ. ಟೋಲ್ ಕಟ್ಟಿ ಹೆದ್ದಾರಿಗೆ ಬಂದ ವಾಹನ ಸವಾರರು ಮಳೆ ಚಳಿಯಲ್ಲಿ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ನರಳಿದ್ದಾರೆ. ಇದು ನಿಜಕ್ಕೂ ನೋವಿನ ಸಂಗತಿಯಾಗಿದೆ.

    ಕೆಲ ದಿನಗಳ ಹಿಂದೆ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ವಾಹನದಲ್ಲಿದ್ದ ದಂಪತಿಯ ಹಣ, ಚಿನ್ನಾಭರಣವನ್ನು ದೋಚಿದ್ದ ಪ್ರಕರಣ ವರದಿಯಾಗಿತ್ತು. ಜೊತೆಗೆ ನಿರಂತರ ಅಪಘಾತಗಳಿಂದ 80ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಾಗಾದರೆ ಈ ಹೆದ್ದಾರಿಯ ಭದ್ರತೆ, ಸುರಕ್ಷತೆ ಪಾಡೇನು? ಟೋಲ್ ಸಂಗ್ರಹ ಮಾಡಿದರೆ ಸಾಕೇ?

    ನನ್ನ ಒತ್ತಾಯ ಇಷ್ಟೇ. ಸರ್ವಿಸ್ ರಸ್ತೆಯೂ ಸೇರಿದಂತೆ ಈ ಹೆದ್ದಾರಿಯ ಎಲ್ಲಾ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅಲ್ಲಿಯವರೆಗೂ ಟೋಲ್ ಸಂಗ್ರಹ ನಿಲ್ಲಿಸಬೇಕು. ಈ ರಸ್ತೆಗಾಗಿ ಭೂಮಿ ಕಳೆದುಕೊಂಡಿರುವ ರಾಮನಗರ, ಮಂಡ್ಯ ಸೇರಿ ಆ ಭಾಗದ ಎಲ್ಲ ಜನರು ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಒಂದು ಪುಟ್ಗೋಸಿ ಪಕ್ಷ – ಮಾಜಿ ಸಚಿವ ನರೇಂದ್ರ ಸ್ವಾಮಿ ಅವಾಜ್