Tag: Bandobast

  • ಸಿಎಎ ವಿರೋಧಿಸಿ ಪ್ರತಿಭಟಿಸುವ ಮಾಹಿತಿ: ಮಂಗ್ಳೂರಿನಲ್ಲಿ ಭಾರೀ ಬಂದೋಬಸ್ತ್

    ಸಿಎಎ ವಿರೋಧಿಸಿ ಪ್ರತಿಭಟಿಸುವ ಮಾಹಿತಿ: ಮಂಗ್ಳೂರಿನಲ್ಲಿ ಭಾರೀ ಬಂದೋಬಸ್ತ್

    ಮಂಗಳೂರು: ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧಿಸಿ ಮುಸ್ಲಿಂ ಸಂಘಟನೆಗಳು ಅನುಮತಿಯಿಲ್ಲದೆ ಇಂದು ಪ್ರತಿಭಟನೆ ನಡೆಸುವ ಮುನ್ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಭಾರೀ ಬಂದೋಬಸ್ತ್ ನಡೆಸಿದ್ದರು.

    ನಗರದ ನೆಹರೂ ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿತ್ತು. ನಾಲ್ಕು ರ‍್ಯಾಪಿಡ್ ಆ್ಯಕ್ಷನ್ ಪೋರ್ಸ್(ಆರ್‌ಎಎಫ್) ಸೇರಿ 800ಕ್ಕೂ ಅಧಿಕ ಕೆ.ಎಸ್.ಆರ್.ಪಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಆಯುಕ್ತರ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ನಗರದ ಆಯಕಟ್ಟಿನ ಜಾಗದಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

    ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಡಿಸೆಂಬರ್ 19ರಂದು 144 ಸೆಕ್ಷನ್ ಹೊರತಾಗಿಯೂ ಪ್ರತಿಭಟನೆ ನಡೆಸಿದ್ದು ಹಿಂಸಾಚಾರಕ್ಕೆ ಕಾರಣವಾಗಿತ್ತು. ಇದೀಗ ಸಿಎಎ ವಿರೋಧಿಸಿ ಮತ್ತೆ ಪ್ರತಿಭಟನೆಗೆ ಇಂದು ಸಿದ್ಧತೆ ನಡೆಸಲಾಗಿತ್ತು. ಆದರೆ ಪೊಲೀಸ್ ಆಯುಕ್ತರು ತುರ್ತು ಸಂದರ್ಭದಲ್ಲಿ ಸಾರ್ವಜನಿಕ ಸೇವೆಗಳಿಗೆ ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತೆ ಎಂದು ಮೂರು ಕಾರಣಗಳನ್ನು ನೀಡಿ ಅನುಮತಿ ನಿರಾಕರಿಸಿದ್ದರು. ಇದು ಮುಸ್ಲಿಂ ಸಂಘಟನೆಗಳ ಸಿಟ್ಟಿಗೆ ಕಾರಣವಾಗಿತ್ತು. ಹೀಗಾಗಿ ಪೊಲೀಸರು ಫುಲ್ ಎಲರ್ಟ್ ಆಗಿದ್ದರು.

    ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಮಂಗಳೂರಿಗೆ ಆಗಮಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಸೇರಿದಂತೆ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದ್ದರು. ಬಳಿಕ ಮಾತನಾಡಿ ಡಾ.ಪಿ.ಎಸ್.ಹರ್ಷ ಅವರು, ಮಂಗಳೂರು ಸಂಪೂರ್ಣ ಶಾಂತಿಯುತ ಆಗಿದೆ. ಕೆಲವು ಸಂಘಟನೆಗಳು ಪ್ರತಿಭಟನೆಗೆ ಅನುಮತಿ ಕೇಳಿದ್ದವು. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅನುಮತಿ ಕೊಟ್ಟಿಲ್ಲ. ಈಗಾಗಲೇ ಮಂಗಳೂರು ನಗರ ಹೊರತುಪಡಿಸಿ ಉಳಿದೆಡೆ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಇದೇ 12ರಂದು ಸಿಎಎ ಪರ ಸಮಾವೇಶವನ್ನು ನಡೆಸುವುದಾಗಿ ಬಿಜೆಪಿ ಹೇಳಿತ್ತು. ಸದ್ಯ ಆ ಸಮಾವೇಶವನ್ನು ಸಂಘಟಕರು ಮುಂದೂಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.