Tag: bandipura

  • ಬಿಳಿಗಿರಿರಂಗನ ಬೆಟ್ಟ, ಬಂಡೀಪುರಕ್ಕೆ ವರದಾನವಾಯ್ತು ಭಾರೀ ಮಳೆ

    ಬಿಳಿಗಿರಿರಂಗನ ಬೆಟ್ಟ, ಬಂಡೀಪುರಕ್ಕೆ ವರದಾನವಾಯ್ತು ಭಾರೀ ಮಳೆ

    ಚಾಮರಾಜನಗರ: ಕಳೆದ ಒಂದೆರಡು ತಿಂಗಳಿನಿಂದ ಎಡಬಿಡದೆ ಸುರಿಯುತ್ತಿರುವ ಬಾರಿ ಮಳೆಯಿಂದ ಬೆಂಗಳೂರು ಸೇರಿದಂತೆ ನಾಡಿನ ಹಲವೆಡೆ ಹಲವು ಅವಘಡಗಳು ಸಂಭವಿಸಿವೆ. ಆದ್ರೆ ಈ ಮಳೆ ಅರಣ್ಯ ಭಾಗಕ್ಕೆ ವರದಾನವಾಗಿದ್ದು ಇದರಿಂದ ಪ್ರಕೃತಿ ಸೌಂದರ್ಯ ಕಂಗೊಳಿಸುತ್ತಿದೆ.

    ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಣಾ ಪ್ರದೇಶ, ಬಂಡಿಪುರ ಹುಲಿ ಸಂರಕ್ಷಣಾ ಪ್ರದೇಶದ ಕಾಡು ಇದೀಗ ಹಚ್ಚ-ಹಸಿರಿನಿಂದ ಕಂಗೊಳಿಸುವುದರ ಜೊತೆಗೆ ಕಾಡಿನ ಮಧ್ಯ ಅಲ್ಲಿ ಝರಿಗಳು ನಿರ್ಮಾಣವಾಗಿವೆ. ಕಳೆದ ಒಂದೆರಡು ತಿಂಗಳಿನಿಂದ ಸುರಿದ ಭಾರೀ ಮಳೆ ಚಾಮರಾಜನಗರ ಜಿಲ್ಲೆ ಭಾಗದ ಅರಣ್ಯ ಪ್ರದೇಶವನ್ನು ಕಂಗೊಳಿಸುವಂತೆ ಮಾಡಿದೆ.

     

    ಭಾರೀ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ಕಾಡಿನ ಮಧ್ಯೆ ಅಲ್ಲಲ್ಲಿ ಝರಿಗಳು ಹರಿಯುತ್ತಿದ್ದು, ಕಾಡಿನ ಸೊಬಗಿಗೆ ಮತ್ತಷ್ಟು ರಂಗು ತಂದಿದೆ. ಹಸಿರಿನ ಸೊಬಗಿನ ಮಧ್ಯ ಭಾಗದಲ್ಲಿ ಮೈದುಂಬಿ ಹರಿಯುತ್ತಿರುವ ಇಂತಹ ಝರಿಗಳನ್ನು ನೋಡಲು, ನಾಡಿನ ಹಲವು ಭಾಗಗಳಿಂದ ಪ್ರೇಕ್ಷಕರು ಇಲ್ಲಿಗೆ ಆಗಮಿಸಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

    ಕಳೆದ ಏಳು ತಿಂಗಳ ಹಿಂದೆ ಬಿಳಿರಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಣ ಪ್ರದೇಶ ಹಾಗೂ ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದ ಕಾಡಿಗೆ ಬೆಂಕಿ ಬಿದ್ದು ಕಾಡು ಹೊತ್ತಿ ಉರಿದಿತ್ತು. ಇದರಿಂದ ಕಾಡಿನ ಅನೇಕ ಮರಗಿಡಗಳು ಬೆಂಕಿಗೆ ಆಹುತಿಯಾಗಿದ್ದವು. ಹೀಗಾಗಿ ಕಾಡಿನ ಸೌಂದರ್ಯ ಸಂಪೂರ್ಣವಾಗಿ ಕಳೆಗುಂದಿತ್ತು. ಇದೀಗ ಸುರಿಯುತ್ತಿರುವ ಮಳೆಯಿಂದ ಬೆಂಕಿ ಬಿದ್ದ ಪ್ರದೇಶಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ವರುಣನ ಆರ್ಭಟ ವನ್ಯ ಸಿರಿಯ ಸೊಬಗನ್ನು ಇದೀಗ ಮರುಕಳಿಸಿದ್ದು ಕಾಡಿಗೆ ಹಾಗೂ ಪ್ರೇಕ್ಷಕರಿಗೆ ಹಬ್ಬದೂಟ ಬಡಿಸುತ್ತಿದ್ದಾನೆ.

  • ಕೊನೆಗೂ ಬಯಲಾಯ್ತು ಬಂಡೀಪುರದ ಪ್ರಿನ್ಸ್ ಸಾವಿನ ರಹಸ್ಯ!

    ಕೊನೆಗೂ ಬಯಲಾಯ್ತು ಬಂಡೀಪುರದ ಪ್ರಿನ್ಸ್ ಸಾವಿನ ರಹಸ್ಯ!

    ಆನೇಕಲ್: ಬಂಡಿಪುರ ಅಭಯಾರಣ್ಯದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಪ್ರವಾಸಿಗರ ಅಚ್ಚುಮೆಚ್ಚಿನ ಹುಲಿ ಪ್ರಿನ್ಸ್ ಸಾವಿಗೆ ಕಾರಣ ಗೊತ್ತಾಗಿದೆ.

    ಒಂದು ವಾರದ ಹಿಂದೆ ಬಂಡಿಪುರದಲ್ಲಿ ಹುಲಿ ಪ್ರಿನ್ಸ್ ಸಾವನ್ನಪ್ಪಿತ್ತು. ಆದ್ರೆ ಅರಣ್ಯ ಇಲಾಖೆ ಹುಲಿ ಸಾವಿಗೆ ಕೊಟ್ಟ ಕಾರಣವನ್ನ ಕೇಳಿದಾಗ ಸಾಕಷ್ಟು ಅನುಮಾನ ಮೂಡಿತ್ತು. ಅಲ್ಲದೆ ಒಂದು ದಿಕ್ಕಿನಿಂದ ಮಾತ್ರ ತೆಗೆದ ಮೃತ ಪ್ರಿನ್ಸ್ ಹುಲಿಯ ಚಿತ್ರವೊಂದನ್ನ ಅರಣ್ಯ ಇಲಾಖೆ ಬಿಡುಗಡೆ ಮಾಡಿತ್ತು. ಇದು ಕೂಡ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಹೀಗಾಗಿ ಈ ಅನುಮಾನಗಳಿಗೆ ಉತ್ತರ ಹುಡುಕಿ ಪಬ್ಲಿಕ್ ಟಿವಿ ಫೀಲ್ಡ್ ಗೆ ಇಳಿದಿತ್ತು.

    ಸಿಡಿಮದ್ದಿನಿಂದ ಸಾವನ್ನಪ್ಪಿದ `ಪ್ರಿನ್ಸ್’: ವಿಷಾಹಾರದಿಂದ ಹುಲಿ ಸಾವನ್ನಪ್ಪಿದ್ದು ಅಂತಾ ಅರಣ್ಯ ಇಲಾಖೆ ಹೇಳುತ್ತಿದೆ. ಆದ್ರೆ ಪ್ರಿನ್ಸ್ ಹುಲಿ ಸಾವನ್ನಪ್ಪಿರೋದು ಸಿಡಿಮದ್ದಿನಿಂದ ಅನ್ನೋದು ತಿಳಿದುಬಂದಿದೆ. ಕಾಡಿನ ಸುತ್ತಮುತ್ತಲಿನ ಜನ ಸಾಮಾನ್ಯವಾಗಿ ಹಂದಿ ಹಿಡಿಯಲು ಕೋಳಿಯ ಕೊರಳಿಗೆ ಸಿಡಿಮದ್ದು ಕಟ್ಟಿರುತ್ತಾರೆ. ಈ ಕೋಳಿಯನ್ನ ತಿನ್ನಲು ಹೋದಾಗ ಪ್ರಿನ್ಸ್ ಬಾಯಲ್ಲಿ ಸಿಡಿಮದ್ದು ಸ್ಫೋಟವಾಗಿ ಸ್ಥಳದಲ್ಲೇ ಮೃತಪಟ್ಟಿದೆ.

    `ಪ್ರಿನ್ಸ್` ದವಡೆ, ನಾಲಿಗೆ, ಹಲ್ಲುಗಳು ನಾಪತ್ತೆ: ಕಳೆದ ವಾರ ಮೊಯಾರ್ ಕಣಿವೆಗೆ ಹೊಂದಿಕೊಂಡಿರೋ ಕುಂದ ಕೆರೆ ವಲಯದಲ್ಲಿನ ಲೊಕ್ಕೆರೆ ಬೀಟ್ ಬಳಿ ಪ್ರಿನ್ಸ್ ಹುಲಿಯ ಕಳೇಬರ ಪತ್ತೆಯಾಗಿತ್ತು. ಪ್ರಾಯದ ದಿನಗಳಲ್ಲಿ ಬಂಡೀಪುರ ಅರಣ್ಯ ಪ್ರದೇಶದಲ್ಲಿ ತನ್ನ ಹಕ್ಕನ್ನು ಸಾಧಿಸಲು ನಾಲ್ಕು ಗಂಡು ಹುಲಿಗಳನ್ನು ಸಾಯಿಸಿರುವ ಪ್ರಿನ್ಸ್ ಹುಲಿಗೆ ಇತ್ತೀಚೆಗೆ ವಯಸ್ಸಾದ ಕಾರಣ ಬೇಟೆಯಾಡಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಸತ್ತ ಜಿಂಕೆ ಸತ್ತ ಆನೆಗಳನ್ನು ತಿಂದು ಬದುಕುತ್ತಿತ್ತು. ಈ ಹುಲಿ ಬಂಡೀಪುರ ಅರಣ್ಯ ವ್ಯಾಪ್ತಿಯ ಮುದ್ದುಮಲೈ, ಹೆಡಿಯಾಲ, ಓಂಕಾರ ಅರಣ್ಯವಲಯದ 35 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸುತ್ತಿತ್ತು. ಆದ್ರೆ ಮೃತ ಪ್ರಿನ್ಸ್ ದೇಹದಲ್ಲಿ ದವಡೆ, ನಾಲಗೆ, ಹಲ್ಲುಗಳು ಕಾಣೆಯಾಗಿತ್ತು.

    20 ಕೋಟಿಗೂ ಅಧಿಕ ಆದಾಯ ತಂದುಕೊಟ್ಟಿದ್ದ `ಪ್ರಿನ್ಸ್’: ಕಳೆದೊಂದು ದಶಕದಲ್ಲಿ ಪ್ರಿನ್ಸ್ ಹುಲಿಯನ್ನ ನೋಡಲು ಲಕ್ಷಾಂತರ ಪ್ರವಾಸಿಗಳು ಆಗಮಿಸಿದ್ದರು, ಹೀಗೆ ಆಗಮಿಸಿದ ಪ್ರವಾಸಿಗರಿಂದ ಅರಣ್ಯ ಇಲಾಖೆಗೆ 20 ಕೋಟಿಗಿಂತಲೂ ಅಧಿಕ ಆದಾಯ ಬಂದಿದೆ.