Tag: bandipura

  • ಕಳೆದ 8 ದಿನಗಳಿಂದ ಸ್ಥಗಿತಗೊಂಡಿದ್ದ ಬಂಡೀಪುರ ಸಫಾರಿ ಇಂದಿನಿಂದ ಆರಂಭ

    ಕಳೆದ 8 ದಿನಗಳಿಂದ ಸ್ಥಗಿತಗೊಂಡಿದ್ದ ಬಂಡೀಪುರ ಸಫಾರಿ ಇಂದಿನಿಂದ ಆರಂಭ

    ಚಾಮರಾಜನಗರ: ಕಾಡಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಬಂಡೀಪುರರ ಹುಲಿರಕ್ಷಿತಾರಣ್ಯದಲ್ಲಿ ಕಳೆದ ಎಂಟು ದಿನಗಳಿಂದ ಸ್ಥಗಿತಗೊಳಿಸಲಾಗಿದ್ದ ಸಫಾರಿ ಇಂದಿನಿಂದ ಪುನರಾರಂಭಗೊಂಡಿದೆ.

    ಒಂದು ವಾರ ಕಾಲ ಧಗಧಗನೆ ಹೊತ್ತಿ ಉರಿದ ಬೆಂಕಿ ಸತತ ಕಾರ್ಯಚರಣೆಯ ಫಲವಾಗಿ ಸಂಪೂರ್ಣವಾಗಿ ನಂದಿದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆಯಿಂದ ಸಫಾರಿ ಮತ್ತೆ ಆರಂಭಿಸಲಾಗಿದೆ. ಇನ್ನೊಂದೆಡೆ ಬಂಡೀಪುರದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಟ್ಟದ ತಪ್ಪಲಿನಿಂದ ಎಂದಿನಂತೆ ಕೆಎಸ್‍ಆರ್ ಟಿಸಿ ಬಸ್ ಗಳು ಸಂಚಾರ ಆರಂಭಿಸಿವೆ.

    ಬಂಡೀಪುರ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳೇ ಬೆಂಕಿ ಹಾಕಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಕೆಲ ಸಂಘಟನೆಗಳು ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕಿ ವಿದೇಶಗಳಿಂದ ಹಣ ಪಡೆಯಲು ಮುಂದಾಗಿದ್ರು ಎಂಬ ಶಂಕೆ ವ್ಯಕ್ತವಾಗಿದೆ.

    ಬಿದ್ದ ಜಾಗದ ಸ್ಯಾಟಲೈಟ್ ಪಿಕ್ಚರ್ ನಲ್ಲೂ ಕೂಡ ಇದು ಮಾನವನಿರ್ಮಿತ ಎಂದು ಬಯಲಾಗಿದೆ. ಗುಂಪು ಗುಂಪುಗಳಾಗಿ ಅಲ್ಲಲ್ಲಿ ಬೆಂಕಿ ಬಿದ್ದಿರೋದು ನೋಡಿದ್ರೆ ಇದು ಮಾನವ ನಿರ್ಮಿತ, ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರೋದು ಎಂದು ಅರಣ್ಯ ಇಲಾಖೆಯಿಂದ ಶಂಕೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಬಂಡೀಪುರ ಬೆಂಕಿ ಪ್ರಕರಣವನ್ನು ಉನ್ನತ ತನಿಖೆಗಾಗಿ ಆದೇಶಿಸುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಂಡೀಪುರ ಕಾಡ್ಗಿಚ್ಚು- ಗಮನಿಸಿ, ವೈರಲ್ ಆಗ್ತಿದೆ ಫೇಕ್ ಚಿತ್ರಗಳು

    ಬಂಡೀಪುರ ಕಾಡ್ಗಿಚ್ಚು- ಗಮನಿಸಿ, ವೈರಲ್ ಆಗ್ತಿದೆ ಫೇಕ್ ಚಿತ್ರಗಳು

    ಚಾಮರಾಜನಗರ: ಬಂಡೀಪುರದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನಲ್ಲಿ ಸುಮಾರು 2,500 ಹೆಕ್ಟೇರ್ ಪ್ರದೇಶ ಸುಟ್ಟು ಹೋಗಿದ್ದು, ಸಾಕಷ್ಟು ವನ್ಯಜೀವಿಗಳು ಮೃತಪಟ್ಟಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಫೋಟೋಗಳು ಹರಿದಾಡುತ್ತಿವೆ.

    ಕೊಲಂಬಿಯಾ, ಸ್ಪೇನ್, ಕ್ಯಾಲಿಫೋರ್ನಿಯಾ, ಇಂಡೊನೇಷ್ಯಾ ಹೀಗೇ ಹಲವೆಡೆ ಅರಣ್ಯ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚಿಗೆ ಬಲಿಯಾದ ಪ್ರಾಣಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಇದೇ ಬಂಡೀಪುರ ಅರಣ್ಯದ ಕಾಡ್ಗಿಚ್ಚಿಗೆ ಸಾವನ್ನಪ್ಪಿದ ವನ್ಯಜೀವಿಗಳು ಅಂತ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ರಕ್ಷಣೆಯ ಪ್ರಧಾನ ಅಧಿಕಾರಿ ಪುನ್ನತಿ ಶ್ರೀಧರ್ ಅವರು, ಬಂಡೀಪುರದಲ್ಲಿ ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣಿಗಳು ಮೃತದೇಹ ಪತ್ತೆಯಾಗಿಲ್ಲ. ಬೆಂಕಿ ಕಾವು ತಗುಲುತ್ತಿದ್ದಂತೆ ಪ್ರಾಣಿಗಳೆಲ್ಲಾ ಬೇರೆಡೆಗೆ ಹೋಗುತ್ತವೆ. ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ವಾಯುವ್ಯ ಕೊಲಂಬಿಯಾದ ನೆಕೊಕ್ಲಿ ಅರಣ್ಯ ಪ್ರದೇಶದಲ್ಲಿ ಕಾಣಿಕೊಂಡಿದ್ದ ಕಾಡ್ಗಿಚ್ಚಿನಲ್ಲಿ ಸುಟ್ಟು ಕರಕಲಾದ ಹಾವಿನ ಚಿತ್ರ ಈದಾಗಿದ್ದು, 2015ರ ಏಪ್ರೀಲ್ 15ರಂದು ಈ ಚಿತ್ರ ಕೊಲಂಬಿಯಾದ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

    ಬೆಂಕಿಗೆ ಪ್ರಾಣಬಿಟ್ಟ ಈ ಮೊಲದ ಫೋಟೋವನ್ನು ಜುಮಾ ಪ್ರೆಸ್‍ನ ಕ್ರಿಸ್ ರುಸಾನೊಸ್ಕಿ 2018ರಲ್ಲಿ ಕ್ಲಿಕ್ಕಿಸಿದ್ದರು. ಅಲ್ಲದೆ ಈ ಚಿತ್ರವು 2018ರ ನವೆಂಬರ್ 8ರಂದು ಕ್ಯಾಲಿಫೋರ್ನಿಯಾದ ಮಲ್ಲಿಬುಲ್ಲಿ ಅರಣ್ಯ ಪ್ರದೇಶದಲ್ಲಿ ಉಂಟಾದ ಕಾಡ್ಗಿಚ್ಚಿಗೆ ಪ್ರಾಣಬಿಟ್ಟ ಮೊಲದ ಫೋಟೋವಾಗಿದೆ.

    ಮೃತ ಒರಂಗುಟಾವ್ ಚಿತ್ರವು 2016ರ ಫೆಬ್ರವರಿಯಲ್ಲಿ ಕ್ಲಿಕ್ಕಿಸಲಾಗಿದ್ದು, ಸೆಂಟರ್ ಆಫ್ ಒರಂಗುಟಾವ್ ಪ್ರೋಟೆಕ್ಷನ್ ಸಂಸ್ಥೆಯೂ ಈ ಫೋಟೋವನ್ನು ಪತ್ರಿಕೆಯೊಂದರಲ್ಲಿ ಪ್ರಕಟಿಸಿತ್ತು.

    ಕೊನೆಗಿರುವ ಈ ಚಿತ್ರವು ಸ್ಪೇನ್- ಫ್ರಾನ್ಸ್ ಗಡಿಯಲ್ಲಿರುವ ಡಾರ್ನಿಯಸ್‍ನಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚಿನಲ್ಲಿ ಪ್ರಾಣಬಿಟ್ಟ ಕಾಡುಕುರಿಗಳ ಫೋಟೋವಾಗಿದೆ. ಈ ಫೋಟೋವನ್ನು ಸುದ್ದಿಸಂಸ್ಥೆಯೊಂದರ ಛಾಯಾಗ್ರಾಹಕ ಲೂಯಿಸ್ ಜೆನೆ ಕ್ಲಿಕ್ಕಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಂಡೀಪುರದಲ್ಲಿ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ: ಪ್ರತಾಪ್ ಸಿಂಹ

    ಬಂಡೀಪುರದಲ್ಲಿ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ: ಪ್ರತಾಪ್ ಸಿಂಹ

    ಮೈಸೂರು: ಬಂಡೀಪುರ ಅಭಯಾರಣ್ಯಕ್ಕೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ. ಇಲ್ಲದಿದ್ದರೆ ಕಾಡಿಗೆ ಬೆಂಕಿ ಬೀಳಲು ಸಾಧ್ಯವೇ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅನುಮಾನ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಳೆದ 5 ವರ್ಷಗಳಿಂದ ಬಂಡೀಪುರ ಹಾಗೂ ನಾಗರಹೊಳೆ ಅರಣ್ಯ ಪ್ರದೇಶಗಳನ್ನು ನೋಡಿದ್ದೇನೆ. ಬಂಡಿಪುರದ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಯಾವ ಕಾರಣಕ್ಕೆ ಬೆಂಕಿ ತಗುಲಿತು ಅಂತ ತನಿಖೆಯಿಂದ ಪ್ರಕರಣದ ಸತ್ಯಾಂಶ ಹೊರ ಬರಬೇಕಿದೆ. ಉದ್ದೇಶಪೂರ್ವಕವಾಗಿ ಈ ಕೃತ್ಯ ನಡೆದಿದೆ. ಅರಣ್ಯ ಪ್ರದೇಶದಲ್ಲಿ ಮರ, ಗಿಡಗಳು ಒಣಗಿರುವ ಕಾರಣಕ್ಕೆ ಒಂದು ಬೆಂಕಿ ಕಡ್ಡಿ ಇಟ್ಟರೆ ಇಡೀ ಕಾಡೇ ನಾಶ ಆಗುತ್ತದೆ ಎನ್ನುವ ಸಾಮಾನ್ಯ ಪ್ರಜ್ಞೆ ಇಲ್ಲದೇ ದುಷ್ಕರ್ಮಿಗಳು ಈ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

    ದೇಶದಲ್ಲಿ ಹುಲಿ ಸಂರಕ್ಷಣೆಗೆ ಸಾಕಷ್ಟು ಯೋಜನೆಗಳು ಜಾರಿಗೆ ಬಂದಿದೆ. ಅತಿ ಹೆಚ್ಚು ಹುಲಿ ಇರೋದು ಬಂಡೀಪುರ ಹಾಗೂ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ. ಇಲ್ಲೇ ಹುಲಿಗಳ ಸಂರಕ್ಷಣೆ ಮಾಡಲಿಲ್ಲ ಅಂದ್ರೆ ಹೇಗೆ? ಕಾರಿಗಾದ್ರೆ ಇನ್ಸೂರೆನ್ಸ್ ಇರುತ್ತೆ ಪ್ರಾಣಿಗಳಿಗೆ ಇಲ್ಲ. ಇಲ್ಲೇ ಈ ರೀತಿ ಸಂರಕ್ಷಣೆ ಮಾಡಿಲ್ಲ ಅಂದ್ರೆ ಬೇರೆಡೆ ಸಂರಕ್ಷಣೆ ಮಾಡಲು ಆಗುತ್ತಾ? ಇನ್ನು ಮುಂದೆ ಈ ರೀತಿಯ ಅವಘಡ ಎಂದೂ ಆಗಬಾರದು ಆ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

    ಈ ರೀತಿ ಅಗ್ನಿ ಅವಘಡಗಳು ನಡೆದಾಗ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಿ ಬೆಂಕಿ ನಂದಿಸಲು ಮುಂದಾಗಬೇಕು. ಹೆಲಿಕಾಪ್ಟರ್ ಮೂಲಕ ನೀರು ಅಥವಾ ಬೆಂಕಿ ಆರಿಸುವ ಸ್ಪ್ರೇಗಳನ್ನು ಬಳಸುವ ವ್ಯವಸ್ಥೆ ಮಾಡಬೇಕು. ಬಂಡೀಪುರ ಹಾಗೂ ನಾಗರಹೊಳೆ ಅರಣ್ಯವು ಅತಿ ಸೂಕ್ಷ್ಮ ಪ್ರದೇಶ, ಮಳೆಯ ತಾಣವೂ ಹೌದು. ಹಾಗೆಯೇ ಈ ಪ್ರದೇಶ ಪಶ್ಚಿಮ ಘಟ್ಟದ ಅರಣ್ಯಕ್ಕೆ ಸೇರುವುದರಿಂದ ಈ ಪ್ರದೇಶಗಳ ಬಗ್ಗೆ ನಾವು ಕಾಳಜಿ ವಹಿಸಬೇಕು. ಈ ವಿಚಾರದಲ್ಲಿ ನಾನು ಯಾರ ಮೇಲೂ ಆರೋಪ ಪ್ರತ್ಯಾರೋಪ ಮಾಡುವುದಿಲ್ಲ. ತನಿಖೆಯಿಂದ ಸತ್ಯ ಹೊರಬೀಳಲಿದೆ ಎಂದು ಪ್ರತಾಪ್ ಸಿಂಹ ಅಭಿಪ್ರಾಯ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುದ್ದಿ ಹರಡಿ ಕಾಡು ರಕ್ಷಿಸಲು ಇಲಾಖೆಗೆ ಸಹಾಯ ಮಾಡೋಣ- ಯದುವೀರ್ ಒಡೆಯರ್

    ಸುದ್ದಿ ಹರಡಿ ಕಾಡು ರಕ್ಷಿಸಲು ಇಲಾಖೆಗೆ ಸಹಾಯ ಮಾಡೋಣ- ಯದುವೀರ್ ಒಡೆಯರ್

    ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಕಳೆದ 5 ದಿನಗಳಿಂದ ಕಾಡ್ಗಿಚ್ಚು ಸಂಭಿಸಿದ್ದು, ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಟರಾದ ದರ್ಶನ್ , ಪುನೀತ್ ಮನವಿಯ ಬೆನ್ನಲ್ಲೇ ಇದೀಗ ಮೈಸೂರು ಮಹಾರಾಜ ಯದುವೀರ್ ಒಡೆಯರ್ ಕೂಡ ಮನವಿ ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಯದುವೀರ್, ದಯವಿಟ್ಟು ಈ ಬಗ್ಗೆ ಸುದ್ದಿ ಹರಡಿ ನಮ್ಮ ಕಾಡನ್ನು ರಕ್ಷಿಸಲು ಅರಣ್ಯ ಇಲಾಖೆಗೆ ಸಹಾಯ ಮಾಡೋಣ ಎಂದು ಜನರಲ್ಲಿ ಕೇಳಿಕೊಂಡಿದ್ದಾರೆ.

    ಮನವಿಯೇನು..?
    ಸ್ನೇಹಿತರೇ, ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಸಂಭವಿಸಿರುವ ಕಾಡ್ಗಿಚ್ಚಿನ ಸುದ್ದಿ ತಿಳಿಯಲು ಬಹಳ ನೋವಾಗಿದೆ. ಅಂದಾಜು ಸುಮಾರು 20,000 ಎಕರೆ ಅರಣ್ಯಪ್ರದೇಶದ ಪ್ರಾಣಿಸಂಕುಲ ಹಾಗು ಸಸ್ಯಸಂಕುಲಕ್ಕೆ ಅಪಾರ ಹಾನಿ ಉಂಟಾಗಿದೆ. ನಮ್ಮ ಪರಿಸರ ಪರಂಪರೆಗೆ ಸಂಭವಿಸಿರುವ ಈ ನಷ್ಟವು ಬಹಳ ದುಃಖಕರ ಸಂಗತಿಯಾಗಿದೆ. ಇದನ್ನೂ ಓದಿ: ದರ್ಶನ್ ನಂತ್ರ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಲ್ಲಿ ಮನವಿ

    ಅರಣ್ಯ ಇಲಾಖೆಯವರಿಗೆ ಸ್ವಯಂಸೇವಕರು ಬೇಕಾಗಿದ್ದಾರೆ ಹಾಗು ಸಾರ್ವಜನಿಕರಿಂದ ಸಹಾಯ ಕೋರಿದ್ದಾರೆ. ಬಂಡೀಪುರ ಪ್ರವೇಶದ ಚೆಕ್ ಪೋಸ್ಟ್ ಕಚೇರಿಯಲ್ಲಿ ನೀವು ನೀರಿನ ಬಾಟಲಿಗಳು, ಗ್ಲುಕೋಸ್, ಔಷಧ, (ವಿಶೇಷವಾಗಿ ಸುಟ್ಟ ಗಾಯಗಳ ಔಷಧ), ಇತರೆ ಅಗ್ನಿಶಾಮಕ ಅಗತ್ಯತೆಗಳು, ಆಹಾರ ಮತ್ತು ಇತರೆ ಸರಬರಾಜುಗಳನ್ನು ನೀಡಬಹುದಾಗಿದೆ.

    ದಯವಿಟ್ಟು ಈ ಸುದ್ದಿ ಹರಡಿ ನಮ್ಮ ಕಾಡನ್ನು ರಕ್ಷಿಸಲು ಅರಣ್ಯ ಇಲಾಖೆಯ ಸಹಾಯ ಮಾಡೋಣ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಂಡೀಪುರ ಉಳಿಸಿ – ಅಭಿಮಾನಿಗಳಲ್ಲಿ ‘ದಚ್ಚು’ ಮನವಿ

    ಕಳೆದ 5 ದಿನಗಳಿಂದ ಬಂಡೀಪುರ ಅಭಯಾರಣ್ಯದಲ್ಲಿ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಸ್ವಯಂ ಸೇವಕರು ಈಗಾಗಲೇ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸತತ ಪ್ರಯತ್ನ ನಡುವೆಯೂ ಬೆಂಕಿ ನರ್ತನ ಮುಂದುವರಿದಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೊಲ, ಕೋತಿ, ಜಿಂಕೆ, ಹಾವು ಸೇರಿದಂತೆ ಇತರೆ ಪ್ರಾಣಿಗಳು ಸಜೀವ ದಹನವಾಗಿವೆ. ಬೆಳಗ್ಗಿನ ಜಾವ ಬೆಂಕಿ ನಿಯಂತ್ರಣಕ್ಕೆ ಬರುತ್ತಿದ್ದು, ಮಧ್ಯಾಹ್ನದ ವೇಳೆ ಭೀಕರತೆಗೆ ತಿರುಗುತ್ತದೆ.

    ಬೆಳಗ್ಗಿನ ಜಾವ ಮಂಜು ಬೀಳುತ್ತಿರುವ ಕಾರಣ ಬೆಂಕಿ ಹತೋಟಿಗೆ ಬರುತ್ತದೆ. ಸದ್ಯ ಬೆಂಕಿ ಹತೋಟಿಗೆ ಬಂದು ನಿಯಂತ್ರಣ ಕಾಣುತ್ತಿರುವ ಬಂಡಿಪುರದಲ್ಲಿ ಬಿಸಿಲು ಮತ್ತು ಗಾಳಿ ಹೆಚ್ಚಾದ್ರೆ ಮತ್ತೆ ಬೆಂಕಿ ಹರಡುವ ಸಾಧ್ಯತೆಗಳಿವೆ. ನಿನ್ನೆಯೂ ಕೂಡ ಬೆಳಗಿನ ಜಾವ ಬೆಂಕಿ ಸಂಪೂರ್ಣ ಹತೋಟಿಗೆ ಬಂದಿತ್ತು. ಆದ್ರೆ ಮಧ್ಯಾಹ್ನ ವೇಳೆ ಮತ್ತೆ ರೌದ್ರವಾತಾರ ತಾಳಿತ್ತು. ಇದು ಹೀಗೆ ಮುಂದುವರಿದ್ರೆ ಕೇರಳ ಗಡಿ ವ್ಯಾಪಿಸುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಹಾರ ಸಾಮಾಗ್ರಿಗಳನ್ನ ಹೊತ್ತು ಬಂಡೀಪುರದತ್ತ ಹೊರಟ ದುನಿಯಾ ವಿಜಿ

    ಆಹಾರ ಸಾಮಾಗ್ರಿಗಳನ್ನ ಹೊತ್ತು ಬಂಡೀಪುರದತ್ತ ಹೊರಟ ದುನಿಯಾ ವಿಜಿ

    ಬೆಂಗಳೂರು: ಬಂಡೀಪುರ ಹುಲಿಸಂರಕ್ಷಿತಾರಣ್ಯದಲ್ಲಿ ಕಳೆದ ಐದು ದಿನಗಳಿಂದ ಕಾಡ್ಗಿಚ್ಚಿನಿಂದ ಸುಮಾರು ಹತ್ತು ಸಾವಿರ ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಈ ಹಿನ್ನೆಲೆಯಲ್ಲಿ ಬಂಡಿಪುರದತ್ತ ನಟ ದುನಿಯಾ ವಿಜಯ್ ಆಹಾರ ಸಾಮಗ್ರಿಗಳೊಂದಿಗೆ ಹೊರಟಿದ್ದಾರೆ.

    ದುನಿಯಾ ವಿಜಿ ಬಂಡಿಪುರ ಅಗ್ನಿದುರಂತ ವಿಚಾರ ಕೇಳಿ ಸ್ವಯಂ ಸೇವಕರಿಗಾಗಿ ಅಗತ್ಯ ವಸ್ತುಗಳನ್ನ ತೆಗೆದುಕೊಂಡು ಹೊರಟಿದ್ದಾರೆ. ಸದ್ಯ ಕಾರ್ಯಾಚರಣೆಯಲ್ಲಿ ಭಾಗಿ ಆಗಿರುವವರಿಗೆ ಆಹಾರ ನೀರು, ಜ್ಯೂಸ್, ಬಿಸ್ಕೆಟ್ಸ್, ಜಾಮೂನ್ ಸೇರಿದಂತೆ ಅಗತ್ಯ ಆಹಾರ ಸಾಮಗ್ರಿಗಳನ್ನ ವಿತರಣೆ ಮಾಡಲಿದ್ದಾರೆ.

    ಅಷ್ಟೇ ಅಲ್ಲದೇ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಅರಣ್ಯ ಸಿಬ್ಬಂದಿಗಳಿಗೆ ದುನಿಯಾ ವಿಜಯ್ ಸಹಾಯ ಮಾಡಲಿದ್ದಾರೆ. ನಟ ದರ್ಶನ್ ಕೂಡ ಹುಲಿರಕ್ಷಿತಾರಣ್ಯ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನ್ಯಜೀವಿ ಸಂಕುಲಕ್ಕೆ ತೊಂದರೆಯಾಗಿದ್ದು, ಬೆಂಕಿ ನಂದಿಸಲು ಸ್ವಯಂ ಸೇವಕರು ಸರ್ಕಾರದ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿದ್ದರು.

    ಕಳೆದ 5 ದಿನಗಳಿಂದ ಬಂಡೀಪುರ ಅಭಯಾರಣ್ಯದಲ್ಲಿ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಸ್ವಯಂ ಸೇವಕರು ಈಗಾಗಲೇ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಸತತ ಪ್ರಯತ್ನ ನಡುವೆಯೂ ಬೆಂಕಿ ನರ್ತನ ಮುಂದುವರಿದಿದ್ದು, ಅನೇಕ ಪ್ರಾಣಿಗಳು ಬೆಂಕಿಯಲ್ಲಿ ಸಿಕ್ಕಿ ಭಸ್ಮವಾಗಿದೆ. ಈ ಕುರಿತಂತೆ ದರ್ಶನ ಅವರು ಕೂಡ ಫೋಟೋ ಹಾಕಿ ಟ್ವೀಟ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಂಡೀಪುರ ಉಳಿಸಿ – ಅಭಿಮಾನಿಗಳಲ್ಲಿ ‘ದಚ್ಚು’ ಮನವಿ

    ಬಂಡೀಪುರ ಉಳಿಸಿ – ಅಭಿಮಾನಿಗಳಲ್ಲಿ ‘ದಚ್ಚು’ ಮನವಿ

    ಬೆಂಗಳೂರು/ಚಾಮರಾಜನಗರ: ಬಂಡೀಪುರ ಹುಲಿರಕ್ಷಿತಾರಣ್ಯ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನ್ಯಜೀವಿ ಸಂಕುಲಕ್ಕೆ ತೊಂದರೆಯಾಗಿದ್ದು, ಬೆಂಕಿ ನಂದಿಸಲು ಸ್ವಯಂ ಸೇವಕರು ಸರ್ಕಾರದ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ನಟ ದರ್ಶನ್ ಅಭಿಮಾನಿಗಳಲ್ಲಿ ವಿನಂತಿ ಮಾಡಿದ್ದಾರೆ.

    ಕಳೆದ 5 ದಿನಗಳಿಂದ ಬಂಡೀಪುರ ಅಭಯಾರಣ್ಯದಲ್ಲಿ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಸ್ವಯಂ ಸೇವಕರು ಈಗಾಗಲೇ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಸತತ ಪ್ರಯತ್ನ ನಡುವೆಯೂ ಬೆಂಕಿ ನರ್ತನ ಮುಂದುವರಿದಿದ್ದು, ಅನೇಕ ಪ್ರಾಣಿಗಳು ಬೆಂಕಿಯಲ್ಲಿ ಸಿಕ್ಕಿ ಭಸ್ಮವಾಗಿದೆ. ಈ ಕುರಿತಂತೆ ದರ್ಶನ ಅವರು ಕೂಡ ಫೋಟೋ ಟ್ವೀಟ್ ಮಾಡಿದ್ದು, ಮೊಲವೊಂದು ಸುಟ್ಟು ಕರಕಲಾಗಿರುವ ದೃಶ್ಯವನ್ನು ಕಾಣಬಹುದಾಗಿದೆ.

    ಸಫಾರಿ ಬಂದ್:
    ಇಂದು ಬೆಳಗಿನ ವೇಳೆ ನಿಯಂತ್ರಣಕ್ಕೆ ಬಂದಿದ್ದ ಬೆಂಕಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಕಳೆದ ಐದು ದಿನಗಳಿಂದ ಬಂಡೀಪುರದ ಗೋಪಾಲಸ್ವಾಮಿ ಬೆಟ್ಟ ಮತ್ತು ಕುಂದಕೆರೆ ವಲಯದ ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಇದೀಗ ಮತ್ತೆ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಬೆಂಕಿ ಕಾಣಿಸಿಕೊಂಡು ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಪರಿಣಾಮ ಅರಣ್ಯದಲ್ಲಿ ಒಂದು ವಾರದ ಕಾಲ ಸಫಾರಿಯನ್ನು ಸ್ಥಗಿತಗೊಳಿಸಲಾಗಿದೆ.

    ಹಸಿರಿನಿಂದ ಕಂಗೊಳಿಸುತ್ತಿದ್ದ ಬಂಡೀಪುರ ಹುಲಿರಕ್ಷಿತಾರಣ್ಯ ಇದೀಗ ಬೆಂದ ಕಾಡಾಗಿದ್ದು, ಹುಲಿ, ಕರಡಿ, ಚಿರತೆ, ಆನೆ, ಜಿಂಕೆ ಮೊದಲಾದ ವನ್ಯಪ್ರಾಣಿಗಳ ಆವಾಸ ಸ್ಥಾನವಾದ ಬಂಡೀಪುರ ಇದೀಗ ಅಕ್ಷರಶ: ಸ್ಮಶಾನದಂತೆ ಗೋಚರಿಸುತ್ತಿದೆ. ಸ್ಥಳೀಯರ ಪ್ರಕಾರ ಸುಮಾರು ಹತ್ತು ಸಾವಿರ ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದ್ದಾರೆ, ಅಪರೂಪದ ಸರಿಸೃಪಗಳು ಕೂಡ ಬೆಂಕಿಯ ಕೆನ್ನಾಲಿಗೆ ಭಸ್ಮವಾಗಿದೆ.

    ಕಳೆದ ಐದು ದಿನಗಳಿಂದ ನೂರಾರು ಅರಣ್ಯ ಸಿಬ್ಬಂದಿ, ಅಗ್ನಿಶಾಮಕದಳ ಹಾಗು ಸ್ವಯಂ ಸೇವಕರ ಸತತ ಕಾರ್ಯಾಚರಣೆ ಫಲವಾಗಿ ಬೆಂಕಿ ಹತೋಟಿ ಪ್ರಯತ್ನಿಸುತ್ತಿದ್ದಾರೆ. ಆದರೆ ಗಾಳಿಯ ರಭಸಕ್ಕೆ ವ್ಯಾಪಕವಾಗಿ ಹರಡುತ್ತಿದೆ.

    ಅಧಿಕ ನಷ್ಟ: ಬೆಂಕಿಯ ನರ್ತನಕ್ಕೆ ಆಪಾರ ಪ್ರಮಾಣದ ವನ್ಯ ಸಂಪತ್ತು ನಾಶವಾಗಿ ನಷ್ಟ ಅನುಭವಿಸಿದೆ. ಇದರೊಂದಿಗೆ ಸಫಾರಿಗೆ ಆಗಮಿಸುತ್ತ ಸಾವಿರಾರು ಪ್ರವಾಸಿಗರಿಗೂ ನಿರಾಸೆಯಾಗಿದ್ದು, ಸಫಾರಿ ನಿಷೇಧ ಮಾಡಿರುವುದರಿಂದ ಅರಣ್ಯ ಇಲಾಖೆಗೆ ಲಕ್ಷಾಂತರ ರೂಪಾಯಿ ಆದಾಯ ಕೂಡ ನಷ್ಟವಾಗಿದೆ.

    ಕಳೆದ ವರ್ಷ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಯಾವುದೇ ಬೆಂಕಿ ಅವಘಡ ಸಂಭವಿಸಿರಲಿಲ್ಲ. ಆದರೆ ಈ ವರ್ಷದ ಬೇಸಿಗೆ ಆರಂಭದಲ್ಲೇ ಕಾಡ್ಗಿಚ್ಚಿಗೆ ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿರುವುದು ಆತಂಕ ಮೂಡಿಸಿದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದು ವಾರ ಬಂಡಿಪುರದಲ್ಲಿ ಸಫಾರಿ ಬಂದ್!

    ಒಂದು ವಾರ ಬಂಡಿಪುರದಲ್ಲಿ ಸಫಾರಿ ಬಂದ್!

    ಚಾಮರಾಜನಗರ: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬೆಂಕಿ ಬಿದ್ದಿರುವ ಹಿನ್ನೆಲೆ ಒಂದು ವಾರಗಳ ಕಾಲ ಸಫಾರಿ ಬಂದ್ ಮಾಡಲಾಗಿದ್ದು, ಪ್ರವಾಸಿಗರಿಗೆ ಈ ಪ್ರದೇಶಕ್ಕೆ ಪ್ರವೇಶ ನಿಷೇಧಿಸಲಾಗಿದೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡಿಪುರದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡ ಪರಿಣಾಮ ಬೆಂಕಿಯಿಂದ ಬಂಡಿಪುರ ಕಾಡಿನ ಸಫಾರಿ ಝೋನ್ ನಾಶವಾಗಿದೆ. ಆದರಿಂದ ಸಫಾರಿ ಝೋನ್‍ನಲ್ಲಿ ಸಫಾರಿ ಬಂದ್ ಮಾಡಲಾಗಿದೆ. ನೂರಾರು ಪ್ರವಾಸಿಗರು ಸಫಾರಿಗಾಗಿ ಪ್ರತಿ ನಿತ್ಯ ಬಂಡಿಪುರಕ್ಕೆ ಬರುತ್ತಿದ್ದರು. ಸಫಾರಿಯಿಂದ ತಿಂಗಳಿಗೆ ಬಂಡಿಪುರದಲ್ಲಿ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿತ್ತು. ಆದ್ರೆ ಕಳೆದ ನಾಲ್ಕೈದು ದಿನಗಳಿಂದ ಅರಣ್ಯದಲ್ಲಿ ಹೊತ್ತಿಕೊಂಡಿರುವ ಕಾಡ್ಗಿಚ್ಚಿನಿಂದ ಪ್ರವಾಸಿಗರಿಲ್ಲದೆ ಬಂಡಿಪುರ ಬಿಕೋ ಎನ್ನುತ್ತಿದೆ.

    ಕಾಡ್ಗಿಚ್ಚಿನಿಂದ ಬಂಡಿಪುರದ ಸುಮಾರು 5 ಸಾವಿರ ಎಕರೆಗೂ ಅಧಿಕ ಅರಣ್ಯ ಪ್ರದೇಶ ನಾಶವಾಗಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ, ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಸ್ವಯಂ ಸೇವಕರ ಹರಸಾಹಸ ಪಟ್ಟಿದ್ದು, ಸದ್ಯ ಬೆಂಕಿ ಹತೋಟಿಗೆ ಬಂದಿದೆ ಎನ್ನಲಾಗುತ್ತಿದೆ.

    ಅಲ್ಲದೆ ಬಂಡಿಪುರದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡ ಹಿನ್ನೆಲೆ ಊಟಿ- ಗುಡ್ಲುಪೇಟೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೇ ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಊಟಿ- ಗುಡ್ಲುಪೇಟೆ ಸಂಚಾರಕ್ಕೆ ಅಣುವು ಮಾಡಿಕೊಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಾಮರಾಜನಗರದಲ್ಲಿ ನಿಲ್ಲದ ಬೆಂಕಿ: ಊಟಿ-ಗುಂಡ್ಲುಪೇಟೆ ಸಂಚಾರ ಸ್ಥಗಿತ

    ಚಾಮರಾಜನಗರದಲ್ಲಿ ನಿಲ್ಲದ ಬೆಂಕಿ: ಊಟಿ-ಗುಂಡ್ಲುಪೇಟೆ ಸಂಚಾರ ಸ್ಥಗಿತ

    ಚಾಮರಾಜನಗರ: ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತಾರಣ್ಯದ ಹೊರ ವಲಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಂದು ಕೂಡ ಕಾಡ್ಗಿಚ್ಚು ಮುಂದುವರಿದಿದೆ.

    ಬೆಂಕಿಯಿಂದ ನೂರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಕೂಡ ಭಸ್ಮವಾಗಿದ್ದು, ಬಂಡಿಪುರದ ಗೋಪಾಲಸ್ವಾಮಿ ಬೀಟ್‍ನಲ್ಲಿ ಇನ್ನೂ ಬೆಂಕಿ ಆರಿಲ್ಲ. ಕಾಡಿನ ಬೆಟ್ಟಕ್ಕೆ ಬೆಂಕಿ ಬಿದ್ದ ಕಾರಣ ಬೆಂಕಿಯನ್ನು ಆರಿಸಲಾಗದೇ ಧಗ ಧಗ ಉರಿಯುತ್ತಿದೆ. ಹೀಗಾಗಿ ಊಟಿ-ಗುಂಡ್ಲುಪೇಟೆ ಸಂಚಾರ ಕೆಲ ಕಾಲ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಟ ಅನುಭವಿಸುತ್ತಿದ್ದಾರೆ.

    ಗೋಪಾಲಸ್ವಾಮಿ ಬೀಟ್‍ನ ಜಾರ್ಕಕಲ್ಲುಕೊರೆ ಬೆಟ್ಟ, ಗುಮ್ಮನ ಗುಡ್ಡ ಮತ್ತು ಗೌರಿಕಲ್ಲು ಬೆಟ್ಟ ಬೆಂಕಿಯಿಂದ ಸಂಪೂರ್ಣ ನಾಶವಾಗಿದೆ. ಕುಂದಕೆರೆ ವಲಯದ ಬರೆಕಟ್ಟೆ ಮತ್ತು ಗುಡ್ಡ ಕೆರೆ ಬೆಟ್ಟಗಳು ಬೆಂಕಿಗೆ ಆಹುತಿಯಾಗಿವೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಗ್ನಿಶಾಮದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದು, ಹರಸಾಹಸ ಪಡುತ್ತಿದ್ದಾರೆ.

    ತೀವ್ರ ಗತಿಯಲ್ಲಿ ಬೆಂಕಿ ಕಾಡಿಗೆ ಆವರಿಸಿರುವುದರಿಂದ ಬೆಂಕಿ ಹತೋಟಿಗೆ ಬಾರದೆ, ಕ್ಷಣ ಕ್ಷಣಕ್ಕೂ ಕಾಡಿನ ಅಪಾರ ಪ್ರದೇಶವನ್ನು ಆವರಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಿಲ್ಯಾಕ್ಸ್ ಹೆಸ್ರಲ್ಲಿ ಸಿದ್ದರಾಮಯ್ಯ ರಣತಂತ್ರ- ಇಂದೂ ರೆಸಾರ್ಟ್‍ನಲ್ಲಿ ಆಪ್ತರೊಂದಿಗೆ ಸಭೆ

    ರಿಲ್ಯಾಕ್ಸ್ ಹೆಸ್ರಲ್ಲಿ ಸಿದ್ದರಾಮಯ್ಯ ರಣತಂತ್ರ- ಇಂದೂ ರೆಸಾರ್ಟ್‍ನಲ್ಲಿ ಆಪ್ತರೊಂದಿಗೆ ಸಭೆ

    ಚಾಮರಾಜನಗರ: ರಿಲ್ಯಾಕ್ಸ್ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದೂ ಕೂಡ ತಮ್ಮ ರೆಸಾರ್ಟ್ ರಾಜಕೀಯ ಮುಂದುವರೆಸಲಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸೆರಾಯ್ ರೆಸಾರ್ಟ್‍ನಲ್ಲಿ ಸಿಎಂ ಅವರು ರಿಲ್ಯಾಕ್ಸ್ ಮಾಡುವ ನೆಪದಲ್ಲಿ ಶುಕ್ರವಾರ ಇಡೀ ದಿನ ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರದ ಮುಖಂಡರೊಂದಿಗೆ ಚುನಾವಣೆ ಬಗ್ಗೆ ರಣತಂತ್ರ ರೂಪಿಸಿದ್ದರು. ಸಚಿವ ಮಹದೇವಪ್ಪ, ಪಿರಿಯಾಪಟ್ಟಣದ ಶಾಸಕ ವೆಂಕಟೇಶ್, ಮರಿಗೌಡ, ಚೆನ್ನಾರೆಡ್ಡಿ, ಪ್ರಭಾಕರ್ ಕೆ.ವಿ, ಕೆಪಿಸಿಸಿ ಸದಸ್ಯ ನಂಜಪ್ಪ ಅವರೊಂದಿಗೆ ನಿನ್ನೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮೊದಲ ಹಂತದ ಸಭೆ ನಡೆಸಿದ್ದರು. ಬಳಿಕ ಮತ್ತೆ ಸಂಜೆ 6 ಗಂಟೆಗೆ 2ನೇ ಹಂತದ ಸಭೆ ನಡೆಸಿದ್ದಾರೆ ಎಂಬುವುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ನಿನ್ನೆ ಮೊದಲ ಹಂತ ಹಾಗೂ ಎರಡನೆಯ ಹಂತದ ಸಭೆಗಳಲ್ಲಿ ಪಾಲ್ಗೊಂಡಿದ್ದ ಮುಖಂಡರನ್ನು ಇಂದು ಒಟ್ಟಿಗೆ ಸೇರಿಸಿ ಸಭೆ ನಡೆಸಲಿದ್ದಾರೆ. ನಂತರ ಈ ಸಭೆಗಳನ್ನು ಆಧರಿಸಿ ತಮ್ಮ ಆತ್ಯಾಪ್ತರೊಂದಿಗೆ ಸಭೆ ನಡೆಸಲಿದ್ದಾರೆ. ಈ ಎಲ್ಲಾ ಬೆಳವಣಿಗೆಯ ನಂತರ ಸಿಎಂ ಮೈಸೂರಿನತ್ತ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

  • ಕಾಂಗ್ರೆಸ್ ಭದ್ರಕೋಟೆಯಲ್ಲಿ ಕೇಸರಿ ಕಹಳೆ- ಇತ್ತ ಬಂಡೀಪುರದಲ್ಲಿ ರಿಲ್ಯಾಕ್ಸ್ ಮೂಡ್‍ನಲ್ಲಿ ಸಿಎಂ

    ಕಾಂಗ್ರೆಸ್ ಭದ್ರಕೋಟೆಯಲ್ಲಿ ಕೇಸರಿ ಕಹಳೆ- ಇತ್ತ ಬಂಡೀಪುರದಲ್ಲಿ ರಿಲ್ಯಾಕ್ಸ್ ಮೂಡ್‍ನಲ್ಲಿ ಸಿಎಂ

    ಮೈಸೂರು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರವಾಸ ಕೈಗಳ್ಳಲಿದ್ದಾರೆ.

    ಇಂದು ಬೆಳಗ್ಗೆ ಸುತ್ತೂರು ಮಠಕ್ಕೆ ಭೇಟಿ ನೀಡುವ ಮೂಲಕ ಪ್ರವಾಸ ಆರಂಭಿಸಲಿರುವ ಅಮಿತ್ ಶಾ, ಬಳಿಕ ಕಾಂಗ್ರೆಸ್ ಭದ್ರಕೋಟೆ ಚಾಮರಾಜನಗರ ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅಮಿತ್ ಶಾ ಪ್ರಚಾರ ನಡೆಸಲಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲ್ಲ: ಅಮಿತ್ ಶಾ

    ಸದ್ಯ ಜಿಲ್ಲೆಯ ನಾಲ್ಕೂ ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿದ್ದು, ಈ ಬಾರಿ ನಾಲ್ಕು ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಬಿಜೆಪಿ ಸರ್ಕಸ್ ನಡೆಸ್ತಿದೆ. ಇಂದು ಚಾಮರಾಜನಗರಕ್ಕೆ ಭೇಟಿ ನೀಡಲಿರುವ ಅಮಿತ್ ಶಾ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮೂರು ದಿನಗಳ ಹಿಂದೆ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಿದ್ದ ವೇದಿಕೆಯಲ್ಲೇ ಬಿಜೆಪಿ ಸಮಾವೇಶ ನಡೆಸ್ತಿರೋದು ಮತ್ತೊಂದು ವಿಶೇಷವಾಗಿದೆ. ಈಗಾಗಲೇ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಎಲ್ಲಾ ಸಿದ್ಧತೆಗಳು ನಡೆದಿದ್ದು, ಮನೆ ಮನೆಗೆ ತೆರಳಿ ಸಮಾವೇಶಕ್ಕೆ ಜನರನ್ನು ಆಹ್ವಾನಿಸಲಾಗಿದೆ. ಇದನ್ನೂ ಓದಿ:ಬಿಎಸ್‍ವೈ, ಈಶ್ವರಪ್ಪ ನಡುವಿನ ಶೀತಲ ಸಮರ ಅಂತ್ಯ- ಅಮಿತ್ ಶಾ ನೇತೃತ್ವದ ಸಂಧಾನ ಸಭೆ ಸಕ್ಸಸ್

    ಅತ್ತ ಗುರುವಾರ ಬಂಡೀಪುರಕ್ಕೆ ಆಗಮಿಸಿ ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ಸಿದ್ದರಾಮಯ್ಯ, ಸೆರಾಯಿ ರೆಸಾರ್ಟ್‍ನಲ್ಲಿ ತಂಗಿದ್ದಾರೆ. ಇಂದು ತಮ್ಮ ಆಪ್ತರೊಂದಿಗೆ ಮೈಸೂರಿನಲ್ಲಿ ಸಫಾರಿ ನಡೆಸಲಿದ್ದಾರೆ. ಬಳಿಕ ಚಾಮರಾಜನಗರದ ಬಂಡೀಪುರದಲ್ಲಿ ಚುನಾವಣೆ ಕುರಿತು ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಭೆಗೆ ಸಿದ್ದರಾಮಯ್ಯ ಆಪ್ತರಿಗೆ ಮಾತ್ರವೇ ಅವಕಾಶ ನೀಡಲಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ:ಸಿದ್ದರಾಮಯ್ಯ ಸರ್ಕಾರದ ಟ್ರಾನ್ಸ್ ಫಾರ್ಮರ್ ಸುಟ್ಟುಹೋಗಿದೆ, ಅದನ್ನು ಬದಲಿಸುವ ಬದಲು ಕಿತ್ತು ಬಿಸಾಕಿ: ಅಮಿತ್ ಶಾ