Tag: bandipura

  • ಇನ್ಮುಂದೆ ಬಂಡೀಪುರ ಸಫಾರಿಗೆ ಮೊಬೈಲ್ ನಿಷೇಧ

    ಇನ್ಮುಂದೆ ಬಂಡೀಪುರ ಸಫಾರಿಗೆ ಮೊಬೈಲ್ ನಿಷೇಧ

    – ವನ್ಯಪ್ರಿಯರು ಸ್ವಾಗತ, ಪ್ರವಾಸಿಗರ ವಿರೋಧ

    ಚಾಮರಾಜನಗರ: ಸಫಾರಿಗೆ ಹೋಗಿ ಪ್ರಾಣಿಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದ ಪ್ರವಾಸಿಗರಿಗೆ ಅರಣ್ಯ ಇಲಾಖೆ ಶಾಕ್ ನೀಡಿದೆ. ಇನ್ಮುಂದೆ ಸಫಾರಿಗೆ ತೆರಳುವ ಪ್ರವಾಸಿಗರು ಮೊಬೈಲ್ ಬಳಸದಂತೆ ನಿಷೇಧವೇರಿದೆ. ಇದು ವನ್ಯ ಪ್ರಾಣಿಗಳ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ವನ್ಯಪ್ರಿಯರು ಅರಣ್ಯ ಇಲಾಖೆ ನಿರ್ಧಾರಕ್ಕೆ ತಲೆ ಬಾಗಿದ್ರೆ,ಪ್ರವಾಸಿಗರು ವಿರೋಧ ವ್ಯಕ್ತಪಡಿಸ್ತಿದ್ದಾರೆ.

    ಹೌದು. ಸಫಾರಿ ಅಂದ್ರೆ ಯಾರಿಗಿಷ್ಟವಿಲ್ಲ ಹೇಳಿ, ಕಾಡಿಗೆ ಹೋದ್ರೆ ಸಾಕು ಒಂದು ರೌಂಡ್ ಸಫಾರಿಗೆ ಹೋಗಿಬರಬೇಕು ಅನ್ಸುತ್ತೆ. ವನ್ಯ ಪ್ರಾಣುಗಳಾದ ಹುಲಿ, ಆನೆ ಸೇರಿದಂತೆ ಇತರ ಪ್ರಾಣಿಗಳ ದರ್ಶನ ಮಾಡಿ ಪ್ರಕೃತಿಯ ಸೌಂದರ್ಯ ಸವಿದು ಬರುವ ಮಜಾವೇ ಬೇರೆ. ಅದರಲ್ಲೂ ಮೊದಲ್ಲೆಲ್ಲಾ ಪ್ರವಾಸಿಗರು ಸಫಾರಿಗೆ ತೆರಳುವ ವೇಳೆ ಮೊಬೈಲ್ ಬಳಕೆ ಮಾಡ್ತಿದ್ರು ಪ್ರಾಣಿ ಪೋಟೋ, ವಿಡಿಯೋ ಎಲ್ಲವನ್ನೂ ಸೆರೆಹಿಡಿದು ತರುತ್ತಿದ್ದರು. ಅದನ್ನು ತಮ್ಮ ನೆನಪಿನಾಳದಲ್ಲಿ ಇಟ್ಟುಕೊಳ್ಳುತ್ತಿದ್ರು. ಆದರೆ ಇದೀಗ ಅದಕ್ಕೆಲ್ಲಾ ಬ್ರೇಕ್ ಬಿದ್ದಿದೆ.

    ವನ್ಯ ಪ್ರಾಣಿಗಳ ಹಿತದೃಷ್ಟಿಯಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಸಫಾರಿಗೆ ಮೊಬೈಲ್ ನಿಷೇಧ ಮಾಡಿ ಅರಣ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇನ್ಮುಂದೆ ಯಾರೂ ಕೂಡ ಸಫಾರಿಗೆ ತೆರಳುವ ವೇಳೆ ಮೊಬೈಲ್ ಬಳಸದಂತೆ ಸೂಚನೆ ಕೊಟ್ಟಿದ್ದಾರೆ. ದೇಶದ ಜಿಮ್ ಕಾರ್ಬೆಟ್, ಥಾಡಾ, ಕಡಬ ಸೇರಿದಂತೆ ಬೇರೆಲ್ಲಾ ಕಡೆ ಎನ್ ಟಿಸಿಎ ನಿಯಮದಂತೆ ಮೊಬೈಲ್ ಬಳಕೆಗೆ ನಿಷೇಧವಿದೆ. ಆದ್ದರಿಂದ ನಾವೂ ಕೂಡ ಮೊಬೈಲ್ ಬಳಕೆಗೆ ನಿಷೇಧ ವಿಧಿಸಿದ್ದೇವೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಹೇಳಿದ್ದಾರೆ.

    ಸಫಾರಿಯಲ್ಲಿ ಮೊಬೈಲ್ ಬಳಕೆ ಮಾಡದಂತೆ ಅರಣ್ಯ ಇಲಾಖೆ ಹೊರಡಿಸಿರುವ ಆದೇಶಕ್ಕೆ ವನ್ಯ ಪ್ರಿಯರು ಸ್ವಾಗತ ಕೋರಿದ್ದಾರೆ. ಸಫಾರಿ ವೇಳೆ ಮೊಬೈಲ್ ಬಳಕೆ ಮಾಡೋದ್ರಿಂದ ಕೆಲವು ದುರ್ಘಟನೆಗಳ ಚಿತ್ರೀಕರಣ ಮಾಡಿ ವೈರಲ್ ಮಾಡಲಾಗುತ್ತಿತ್ತು. ಈ ವಿಡಿಯೋ ಆಧರಿಸಿ ಬೇಟೆಗಾರರು ಹುಲಿ ಸೇರಿದಂತೆ ಇತರ ಪ್ರಾಣಿಗಳಿಗೆ ಹೊಂಚು ಹಾಕಿ ಬೇಟೆಯಾಡುತ್ತಿದ್ದರು. ಇದೀಗ ಅರಣ್ಯ ಇಲಾಖೆ ಮೊಬೈಲ್ ಬಳಕೆಗೆ ನಿಷೇಧ ವಿಧಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಪರಿಸರವಾದಿ ಪುಣಜನೂರು ದೊರೆಸ್ವಾಮಿ ಸ್ವಾಗತಿಸಿದ್ದಾರೆ.

    ಪ್ರವಾಸಿಗರು ಅರಣ್ಯ ಇಲಾಖೆ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಾವೂ ಸಫಾರಿ ವೇಳೆ ಪ್ರಾಣಿಗಳಿಗಂತೂ ತೊಂದರೆ ಕೊಡಲ್ಲ. ಆ ಮೊಮೆಂಟಮ್ ನ ಆಗೆ ಮೊಬೈಲ್ ನಲ್ಲಿ ಸೆರೆಹಿಡಿದು ನೆನಪಿಗೆ ಇಟ್ಟುಕೊಳ್ತೇವೆ. ಅರಣ್ಯ ಇಲಾಖೆ ಮೊಬೈಲ್ ಬ್ಯಾನ್ ಮಾಡಿದ್ರಿಂದ ನಮಗೆ ನಿರಾಸೆಯಾಗಿದೆ ಎಂದು ಪ್ರವಾಸಿ ಚೈತನ್ಯ ಹೇಳಿದ್ದಾರೆ.

    ಒಟ್ಟಿನಲ್ಲಿ ವನ್ಯ ಪ್ರಾಣಿಗಳ ಹಿತದೃಷ್ಟಿಯಿಂದ ಮೊಬೈಲ್ ಬ್ಯಾನ್ ಮಾಡಿರೋದು ಸರಿಯೇ, ಆದರೆ ಪ್ರವಾಸಿಗರಿಗೆ ಅರಣ್ಯ ಇಲಾಖೆ ನಿರ್ಧಾರ ತುಂಬಾ ಬೇಸರ ತರಿಸಿದೆ.

  • ಬಂಡೀಪುರದಲ್ಲಿ ವರ್ಷದ ಮೊದಲ ವರ್ಷಧಾರೆ- ನಿಟ್ಟುಸಿರು ಬಿಟ್ಟ ಅರಣ್ಯ ಇಲಾಖೆ

    ಬಂಡೀಪುರದಲ್ಲಿ ವರ್ಷದ ಮೊದಲ ವರ್ಷಧಾರೆ- ನಿಟ್ಟುಸಿರು ಬಿಟ್ಟ ಅರಣ್ಯ ಇಲಾಖೆ

    ಚಾಮರಾಜನಗರ/ಕೋಲಾರ/ಶಿವಮೊಗ್ಗ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಳೆ ಆಗಿದ್ದು, ಈ ಮಳೆಯಿಂದ ಕಾಡ್ಗಿಚ್ಚು ಬೀಳುವ ಆತಂಕ ಕಡಿಮೆಯಾಗಿದೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೋಮವಾರ ಸಂಜೆ ಹಾಗೂ ರಾತ್ರಿ ಮಳೆ ಸುರಿದಿದೆ. ಮಳೆಯಿಂದಾಗಿ ಕಾಡ್ಗಿಚ್ಚು ಬೀಳುವ ಸಾಧ್ಯತೆ ಕಡಿಮೆಯಿದ್ದು, ಇದರಿಂದ ಅರಣ್ಯ ಇಲಾಖೆ ನಿಟ್ಟುಸಿರು ಬಿಟ್ಟಿದೆ.

    ಕಳೆದ ವರ್ಷ ಇದೇ ಕಾಡಿನಲ್ಲಿ ಕಾಡ್ಗಿಚ್ಚಿನಿಂದ ಸುಮಾರು ಮೂರುವರೆ ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗಾಹುತಿ ಆಗಿತ್ತು. ಗಿಡ-ಮರಗಳು ಚಿಗುರೊಡೆಯಲು ಆರಂಭಿಸುವುದರಿಂದ ಬೆಂಕಿ ಬೀಳುವ ಸಾಧ್ಯತೆ ಕಡಿಮೆ ಇದೆ. ಜಿಲ್ಲೆಯ ಹಲವೆಡೆ ತುಂತುರು ಮಳೆಯಾಗಿದ್ದು, ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ತುಂತುರು ಮಳೆಯ ಸಿಂಚನದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿತು.

    ಸೋಮವಾರ ಕೋಲಾರ ಜಿಲ್ಲೆಯ ಹಲವೆಡೆ ಅಕಾಲಿಕ ತುಂತುರು ಮಳೆ ಆಗಿದ್ದು, ವರ್ಷದ ಮೊದಲ ಮಳೆಗೆ ಜಿಲ್ಲೆಯ ಜನ ಫುಲ್ ಖುಷಿಯಾಗಿದ್ದಾರೆ. ಬಂಗಾರಪೇಟೆ ತಾಲೂಕಿನ ಕೆಲವೆಡೆ, ಕೋಲಾರ ತಾಲೂಕಿನ ಕೆಲವೆಡೆ ತುಂತುರು ಮಳೆ ಆಗಿದೆ. ಇತ್ತ ಶಿವಮೊಗ್ಗದಲ್ಲಿ ಸೋಮವಾರ ಮೋಡ ಕವಿದ ವಾತಾವರಣವಿತ್ತು. ಅಲ್ಲದೆ 15 ನಿಮಿಷಗಳ ಕಾಲ ತುಂತುರು ಮಳೆ ಆಗಿದೆ. ಬಿಸಿಲಿನಿಂದ ಬಸವಳಿದಿದ್ದ ಜನತೆಗೆ ವರುಣ ತಂಪೆರೆದಿದ್ದಾನೆ.

  • ಕಾಡ್ಗಿಚ್ಚು ತಡೆಗೆ ಬಂಡೀಪುರದಲ್ಲಿ ಹೊಸ ತಂತ್ರ

    ಕಾಡ್ಗಿಚ್ಚು ತಡೆಗೆ ಬಂಡೀಪುರದಲ್ಲಿ ಹೊಸ ತಂತ್ರ

    ಚಾಮರಾಜನಗರ: ಬೆಂಕಿ ಬೀಳದಂತೆ ತಡೆಯಲು ಅರಣ್ಯ ಇಲಾಖೆ ಪ್ಲಾನ್ ಒಂದನ್ನು ಮಾಡಿದ್ದು, ಈ ಮೂಲಕ ರಸ್ತೆಯ ಇಕ್ಕೆಲಗಳಲ್ಲಿ ನೀರಿನ ಸಿಂಪಡಣೆ ಮಡಲಾಗುತ್ತಿದೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದ ಅರಣ್ಯಾಧಿಕಾರಿಗಳು ಈ ಹೊಸ ತಂತ್ರ ರೂಪಿಸಿದ್ದಾರೆ. ಬಂಡೀಪುರ ಮೂಲಕ ಹಾದು ಹೋಗುವ ರಸ್ತೆ ಬದಿಯಲ್ಲಿ ಟ್ಯಾಂಕರ್ ಮೂಲಕ ನೀರಿನ ಸಿಂಪಡಣೆ ಮಾಡಲಾಗುತ್ತಿದೆ.

    ರಾಷ್ಟ್ರೀಯ ಹೆದ್ದಾರಿ 65ಎ ಭಾಗದಲ್ಲಿ ನೀರಿನ ಸಿಂಪಡಣೆ ಕಾರ್ಯ ನಡೆಯುತ್ತಿದೆ. ಈಗಾಗಲೇ ಬಂಡೀಪುರ ಬೇಸಿಗೆ ಬಿಸಿಯಿಂದ ಒಣಗಿ ಹೋಗಿರುವ ಹಿನ್ನೆಲೆಯಲ್ಲಿ ರಸ್ತೆಯ ಪಕ್ಕದಲ್ಲಿ ಹುಲ್ಲು ಹಸಿರಾಗಿ ಬೆಳೆಯಲಿ ಆ ಮೂಲಕ ಬೆಂಕಿ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವ ಉದ್ದೇಶದಿಂದ ಈ ಯೋಜನೆ ಜಾರಿಯಾಗಿದೆ.

    ಕಳೆದ ವರ್ಷ ಬಂಡೀಪುರದಲ್ಲಿ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಮೂರುವರೆ ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿತ್ತು.ಇದರಿಂದ ಹೆಚ್ಚೆತ್ತಿರೋ ಅರಣ್ಯಾಧಿಕಾರಿಗಳು ಬೇಸಿಗೆಯಲ್ಲಿ ಬೆಂಕಿ ನಿಯಂತ್ರಣಕ್ಕೆ ಈಗಾಗ್ಲೇ ಹಲವು ತಂತ್ರಗಳನ್ನು ಪ್ರಯೋಗಿಸಿದ್ದು, ಅದರ ಒಂದು ಭಾಗವಾಗಿ ರಸ್ತೆಯ ಇಕ್ಕೆಲಗಳಲ್ಲಿ ನೀರಿನ ಸಿಂಪಡಣೆ ಮಾಡುವ ಕಾರ್ಯದಲ್ಲಿ ನಿರತವಾಗಿದೆ.

  • ಮ್ಯಾನ್ ವರ್ಸಸ್ ವೈಲ್ಡ್ ಶೋಗಾಗಿ ಬಂಡೀಪುರ ಆಯ್ಕೆ ಮಾಡಿಕೊಂಡಿದ್ದೇ ರಜನಿಕಾಂತ್

    ಮ್ಯಾನ್ ವರ್ಸಸ್ ವೈಲ್ಡ್ ಶೋಗಾಗಿ ಬಂಡೀಪುರ ಆಯ್ಕೆ ಮಾಡಿಕೊಂಡಿದ್ದೇ ರಜನಿಕಾಂತ್

    ಚಾಮರಾಜನಗರ: ಡಿಸ್ಕವರಿ ಚಾನೆಲ್‍ನ ಜನಪ್ರಿಯ ಟಿವಿ ಶೋ ಮ್ಯಾನ್ ವರ್ಸಸ್ ವೈಲ್ಡ್ ವಿಶೇಷ ಸಂಚಿಕೆಗಾಗಿ ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಹಾಗೂ ಸಾಹಸಿಗ ಬೇರ್ ಗ್ರಿಲ್ಸ್ ಜೊತೆಯಾಗಿ ಕಾಡು ಸುತ್ತಲಿದ್ದು, ಈಗಾಗಲೇ ತಲೈವಾ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ.

    ಕಳೆದ ವರ್ಷ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಗ್ರಿಲ್ಸ್ ಜೊತೆ ಪ್ರಧಾನಿ ನರೇಂದ್ರ ಮೋದಿ ಕಾಡು ಸುತ್ತಾಡಿ ಪರಿಸರ, ವನ್ಯಜೀವಿಗಳ ಬಗ್ಗೆ ಸಂವಾದ ನಡೆಸಿದ್ದರು. ಈ ಶೋ ಯಶಸ್ಸಿನ ನಂತರ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅವರೊಂದಿಗೆ ವಿಶೇಷ ಸಂಚಿಕೆ ತಯಾರಾಗುತ್ತಿದೆ.

    ವಿಷಯವೇನೆಂದರೆ ಜಿಮ್ ಕಾರ್ಬೆಟ್ ಬಳಿಕ ಎರಡನೇಯ ಜನಪ್ರಿಯ ಅಭಯಾರಣ್ಯ ಹುಡುಕಾಟದಲ್ಲಿ ಮಧ್ಯ ಪ್ರದೇಶದ ಕಾನಾ ಹಾಗೂ ಕರ್ನಾಟಕದ ಬಂಡೀಪುರವನ್ನು ಆಯ್ಕೆ ಮಾಡುವಾಗ ರಜನಿ ಬಂಡೀಪುರ ಸೂಚಿಸಿ, ಅದನ್ನೇ ಆಯ್ಕೆ ಮಾಡಿಕೊಳ್ಳುವಂತೆ ಹೇಳಿದ್ದಾರೆ ಎಂದು ಅರಣ್ಯ ಇಲಾಖೆಯ ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಈ ಹಿಂದೆ ರಜನಿಕಾಂತ್ ಬಂಡೀಪುರದಲ್ಲಿ ಕೆಲ ಚಿತ್ರಗಳ ಚಿತ್ರೀಕರಣ ನಡೆಸಿದ್ದಾರೆ. ಅಲ್ಲದೆ ಸಾಕಷ್ಟು ಬಾರಿ ಭೇಟಿ ನೀಡಿದ್ದರಿಂದ ಬಂಡೀಪುರವನ್ನು ರಜನಿ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಮೂಳೆಹೊಲೆ ಅರಣ್ಯ ವಲಯದಲ್ಲಿ 6 ಗಂಟೆಗಳ ಕಾಲ ರಜನಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಗುಡ್ಡದಿಂದ ಹತ್ತಿ ಜಾರುವ ದೃಶ್ಯವೊಂದಿದ್ದು, ಆ ವೇಳೆ ನೆಲಕ್ಕೆ ಕೈ ಊರಿದಾಗ ಲಂಟಾನ ಮುಳ್ಳು ತರಚಿದೆಯಷ್ಟೇ ಎನ್ನಲಾಗಿದೆ.

    ಚಿತ್ರೀಕರಣದ ವೇಳೆ ಬಂಡೀಪುರ ಕಾಡನ್ನು ಕಂಡು ಫಿದಾ ಆಗಿರುವ ತಲೈವಾ, ಈ ರೀತಿಯ ಕಾಡನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ. ಈ ಕುರಿತು ನಾನೊಂದು ಸಂದೇಶವನ್ನು ನೀಡುತ್ತೇನೆ ಎಂದು ಹೇಳಿದ್ದಾರೆ ಎಂದು ಬಂಡೀಪುರ ಸಿಎಫ್‍ಒ ಬಾಲಚಂದ್ರಗೆ ತಿಳಿಸಿದ್ದಾರೆ.

  • ಕಳೆದ ವರ್ಷ ಬಂಡೀಪುರದಲ್ಲಿ ಕಾಡ್ಗಿಚ್ಚು- ಈ ಬಾರಿ ಎಚ್ಚೆತ್ತುಕೊಳ್ಳುತ್ತಾ ಸರ್ಕಾರ?

    ಕಳೆದ ವರ್ಷ ಬಂಡೀಪುರದಲ್ಲಿ ಕಾಡ್ಗಿಚ್ಚು- ಈ ಬಾರಿ ಎಚ್ಚೆತ್ತುಕೊಳ್ಳುತ್ತಾ ಸರ್ಕಾರ?

    ಬೆಂಗಳೂರು: ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದ ವ್ಯಾಪ್ತಿಯಲ್ಲಿ ಕಳೆದ ವರ್ಷ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಕಳೆದ ವರ್ಷದ ಫೆಬ್ರವರಿಯಲ್ಲಿ ಕುಂದುಕೆರೆ ವಲಯದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಗೆ 11,049 ಎಕರೆ ಅಮೂಲ್ಯ ಅರಣ್ಯ ಸಂಪತ್ತು ಆಹುತಿಯಾಗಿತ್ತು. ಬಂಡೀಪುರ ಅರಣ್ಯ ವಲಯದಲ್ಲಿ ಕಾಡ್ಗಿಚ್ಚು ಅಪರೂಪವೇನಲ್ಲ. ಆದರೆ ಕಳೆದ ವರ್ಷದ ಕಾಡ್ಗಿಚ್ಚಿಗೆ ಅರಣ್ಯ ಇಲಾಖೆಯ ಸ್ವಯಂ ತಪ್ಪುಗಳೇ ಕಾರಣ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ಈ ಸಲ ಮುಂಚಿತವಾಗಿಯೇ ಎಚ್ಚೆತ್ತುಕೊಳ್ಳಲಿದೆಯಾ ಅನ್ನುವ ನಿರೀಕ್ಷೆ ಪರಿಸರ ಮತ್ತು ವನ್ಯ ಜೀವಿ ಸಂರಕ್ಷಣಾಕಾರರಲ್ಲಿ ಮನೆ ಮಾಡಿದೆ.

    ಸದ್ಯ ಅರಣ್ಯ ಸಚಿವರಾಗಿರುವ ಸಿ.ಸಿ ಪಾಟೀಲ್, ಈ ಸಂಬಂಧ ಬೇಸಿಗೆ ಆರಂಭಕ್ಕೂ ಮುಂಚೆಯೇ ಮುಂಜಾಗರೂಕತೆ ತೆಗೆದುಕೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮೌಖಿಕ ಸೂಚನೆ ರವಾನಿಸಿದ್ದಾರೆ. ರಾಜ್ಯದ ಬಂಡೀಪುರ, ಕಪ್ಪತಗುಡ್ಡ, ನಾಗರಹೊಳೆ, ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ, ಸಕಲೇಶಪುರದ ಶುಂಠಿಕೊಪ್ಪ ಮುಂತಾದ ಪ್ರದೇಶದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸಚಿವ ಸಿ.ಸಿ ಪಾಟೀಲ್ ಖಡಕ್ಕಾಗಿ ಸೂಚನೆ ರವಾನಿಸಿದ್ದಾರೆ. ಅರಣ್ಯ ತಜ್ಞರ ಪ್ರಕಾರ ಒಮ್ಮೆ ಕಾಡು ನಾಶವಾದರೆ ಮತ್ತೆ ಅಂತಹ ಸಹಜ ಕಾಡು ಸೃಷ್ಟಿಯಾಗಲು ಮುನ್ನೂರು ವರ್ಷವಾದರೂ ಬೇಕಾಗಬಹುದು. ಹೀಗಾಗಿ ಬೇಸಿಗೆ ಆರಂಭದಲ್ಲೇ ಅಧಿಕಾರಿಗಳಿಗೆ ಎಚ್ಚರಿಕೆಯಿಂದ ಕೆಲಸ ಮಾಡಲು ಸಚಿವರು ಸೂಚನೆ ನೀಡಿದ್ದಾರೆ.

    ಆದರೆ ಕಾಡ್ಗಿಚ್ಚು ಸಂಭವಿಸಿದರೆ ಬೆಂಕಿ ನಂದಿಸಲು ಆಧುನಿಕ ಸೌಕರ್ಯಗಳು ಇಲಾಖೆ ಬಳಿ ಇಲ್ಲ ಎನ್ನಲಾಗಿದೆ. ಗಸ್ತು ತಿರುಗಲು ವಾಹನಗಳು ಮತ್ತು ಅಗತ್ಯ ಅರಣ್ಯ ಸಿಬ್ಬಂದಿ ಕೊರತೆಯೂ ಸಾಕಷ್ಟಿದೆ. ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಕೆಳಹಂತದ ಸಿಬ್ಬಂದಿ ಕೊರತೆಯಿದೆ. ಕಾಡ್ಗಿಚ್ಚಿನ ಸಮಯದಲ್ಲಿ ಸಿಬ್ಬಂದಿ ಕೊರತೆ ಇದ್ದರೆ ಕಾರ್ಯಾಚರಣೆಗೆ ಹಿನ್ನಡೆಯಾಗುತ್ತದೆ. ಹೀಗಾಗಿ ಸರ್ಕಾರ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸುವತ್ತ ತುರ್ತು ಕ್ರಮ ಕೈಗೊಳ್ಳಲೇಬೇಕಿದೆ.

  • ಬೆಂಗಳೂರಿನಲ್ಲಿ ಬ್ಲಾಸ್ಟ್‌ಗೆ ಜಿಹಾದಿ ಗ್ಯಾಂಗ್ ಸಂಚು

    ಬೆಂಗಳೂರಿನಲ್ಲಿ ಬ್ಲಾಸ್ಟ್‌ಗೆ ಜಿಹಾದಿ ಗ್ಯಾಂಗ್ ಸಂಚು

    -ಬಂಡೀಪುರದಲ್ಲಿ ತರಬೇತಿಗೆ ಸಿದ್ಧತೆ

    ಬೆಂಗಳೂರು: ರಾಜಧಾನಿಯಲ್ಲಿ ಸ್ಫೋಟಿಸಬೇಕು, ಹಿಂದೂ ಮುಖಂಡರ ಹತ್ಯಾಕಾಂಡ ನಡೆಸಬೇಕು ಅಂದುಕೊಂಡಿದ್ದ ಜಿಹಾದಿ ಗ್ಯಾಂಗ್ ಮಾಡಬಾರದ ಕೆಲಸ ಮಾಡೋದಕ್ಕೆ ತಯಾರಾಗಿ ನಿಂತಿತ್ತು. ಅಷ್ಟೇ ಅಲ್ಲದೆ ಇದಕ್ಕೆ ಬಂಡೀಪುರದಲ್ಲಿ ತರಬೇತಿಗಾಗಿ ಸಜ್ಜಾಗಿತ್ತು ಎಂಬ ಸ್ಫೋಟಕ ಮಾಹಿತಿ ತಿಳಿದು ಬಂದಿದೆ.

    ಹೌದು. ಗುರುವಾರ ಸಿಸಿಬಿ ಪೊಲೀಸರಿಂದ ಬಂಧನವಾಗಿದ್ದ ಮೆಹಬೂಬ್ ಪಾಷಾ ಸ್ಫೋಟಕ ಮಾಹಿತಿ ಹೊರಹಾಕಿದ್ದು, ಕಳೆದ 6 ತಿಂಗಳಿದ ಬಾಂಬ್ ತಯಾರಿಕೆ ಟ್ರೈನಿಂಗ್ ನೀಡಲಾಗುತ್ತಿತ್ತು ಎಂದು ಹೇಳಿದ್ದಾನೆ. ಬೆಂಗಳೂರಿನ ಗುರಪ್ಪನಪಾಳ್ಯದ ಮನೆಗಳಲ್ಲಿ ಬಾಂಬ್ ತಯಾರಿಕೆ ಟ್ರೈನಿಂಗ್ ನೀಡಿದ್ದು, ಕಂಪ್ಯೂಟರ್ ಸೈನ್ಸ್ ಪದವೀಧರನಾಗಿರುವ ಬಂಧಿತ ಅಜ್ಮತ್ತುಲ್ಲ ಇದರ ರೂವಾರಿಯಾಗಿದ್ದನು ಎಂದು ಆರೋಪಿ ಬಾಯಿಬಿಟ್ಟಿದ್ದಾನೆ. ಇದನ್ನೂ ಓದಿ: ಮೊಬೈಲ್ ಸಿಮ್ ಖರೀದಿಸಿ ಸಿಕ್ಕಿಬಿದ್ದ ಜಿಹಾದಿ ಉಗ್ರರು

    ಖ್ವಾಜಾ ಮೋಹಿನುದ್ದೀನ್ ಹಾಗೂ ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳಿಂದ ಬಂಧಿತರು ಬಾಂಬ್ ತಯಾರಿಕೆ ಟ್ರೈನಿಂಗ್ ಅನ್ನು ಪಡೆದುಕೊಳ್ಳುತ್ತಿದ್ದರು. ಮಾಸ್ಟರ್ ಮೈಂಡ್‍ಗಳು ಬಾಂಬ್ ಬ್ಲಾಸ್ಟ್ ಮಾಡೋದಕ್ಕೆ ಆಗದೇ ಇದ್ದರೆ ಗನ್ ನಿಂದ ಶೂಟ್ ಮಾಡೋದನ್ನ ಆದರೂ ಕಲಿತುಕೊಳ್ಳೋದಕ್ಕೆ ಸೂಚನೆ ನೀಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

    ಅದಕ್ಕಾಗಿ ಬಂಡಿಪುರದ ಅರಣ್ಯದಲ್ಲಿ ಗನ್ ಶೂಟಿಂಗ್ ತರಬೇತಿಗೆ ಸಿದ್ಧತೆ ಮಾಡಲಾಗಿತ್ತು. ಕಣ್ಣೂರಿನ ಮಾದರಿಯಲ್ಲಿ ಗನ್ ಶೂಟಿಂಗ್ ತರಬೇತಿಗೆ ಸಿದ್ಧತೆಯಾಗಿತ್ತು. ಶೂಟಿಂಗ್ ಜಾಗವನ್ನೂ ಫಿಕ್ಸ್ ಮಾಡಿಕೊಂಡಿದ್ದ ಶಂಕಿತ ಉಗ್ರರು ಎಲ್ಲಾ ತಯಾರಿಯನ್ನು ನಡೆಸಿದ್ದರು. ತರಬೇತಿಗಾಗಿ ಖ್ವಾಜಾ ಮೊಹಿನುದ್ದೀನ್ ಮೂರು ಗನ್ ಸಪ್ಲೈ ಕೂಡ ಮಾಡಿದ್ದನು. ಕಳೆದ ಡಿ. 24ರಂದು ಗುರಪ್ಪನಪಾಳ್ಯಕ್ಕೆ ಗನ್ ಸಪ್ಲೈ ಮಾಡಿ ಖ್ವಾಜಾ ಹೋಗಿದ್ದನು. ಗನ್ ಸರಬರಾಜು ಬೆನ್ನತ್ತಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  • ಬಂಡೀಪುರ ಕಾಡಂಚಿನ ಗ್ರಾಮಗಳಲ್ಲಿ ದಾಂಧಲೆ ನಡೆಸಿದ್ದ ಪುಂಡಾನೆ ಕೊನೆಗೂ ಸೆರೆ

    ಬಂಡೀಪುರ ಕಾಡಂಚಿನ ಗ್ರಾಮಗಳಲ್ಲಿ ದಾಂಧಲೆ ನಡೆಸಿದ್ದ ಪುಂಡಾನೆ ಕೊನೆಗೂ ಸೆರೆ

    ಚಾಮರಾಜನಗರ: ಕಳೆದ 3 ದಿನಗಳಿಂದ ಬಂಡೀಪುರ ಕಾಡಂಚಿನ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದ್ದ ಪುಂಡಾನೆಯನ್ನು ಕೊನೆಗೂ ಬನ್ನಿತಾಳಪುರ ಸಮೀಪ ಸೆರೆ ಹಿಡಿಯಲಾಗಿದೆ.

    ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರದಲ್ಲಿ ಇಬ್ಬರು ರೈತರನ್ನು ಗಾಯಗೊಳಿಸಿದ್ದ ಈ ಆನೆ ಮೂರು ಜಾನುವಾರುಗಳನ್ನು ಕೊಂದಿತ್ತು. ತಮಿಳುನಾಡಿನ ಮಧುಮಲೈ ಕಾಡಿನಿಂದ ಓಡಿ ಬಂದಿದ್ದ ಪುಂಡಾನೆಯನ್ನು ಸಾಕಾನೆಗಳಾದ ಅಭಿಮನ್ಯು, ಕೃಷ್ಣ, ಗೋಪಾಲಸ್ವಾಮಿ, ಗಣೇಶ ಸಹಾಯದೊಂದಿಗೆ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯಲಾಗಿದೆ.

    ತಮಿಳುನಾಡಿನಲ್ಲಿ 8 ಜನರನ್ನು ಕೊಂದಿತ್ತು ಎನ್ನಲಾದ ಪುಂಡಾನೆಯನ್ನು ಸೆರೆ ಹಿಡಿದ ಪರಿಣಾಮ ಕಾಡಂಚಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಸಾಕಷ್ಟು ತೊಂದರೆ ನೀಡುತ್ತಿದ್ದ ಕಾರಣ ಆನೆ ಚಲನವಲನ ಮೇಲೆ ನಿಗಾ ಹಿಡಲು ಅರಣ್ಯಾಧಿಕಾರಿಗಳು ಇದನ್ನು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಮಧುಮಲೈ ಅರಣ್ಯಕ್ಕೆ ಬಿಟ್ಟಿದ್ದರು. ಆದರೆ ಅಲ್ಲಿಂದ ಬಂಡೀಪುರ ಅರಣ್ಯಕ್ಕೆ ಬಂದಿದ್ದ ಆನೆ ದಾಂಧಲೆ ನಡೆಸಿ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿತ್ತು. ಸದ್ಯ ಸೆರೆ ಹಿಡಿಯಲಾಗಿರುವ ಪುಂಡಾನೆಯನ್ನು ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಆನೆ ಶಿಬಿರಕ್ಕೆ ರವಾನಿಸಲಾಗಿದೆ.

  • ಬಂಡೀಪುರ ಬೆಂಕಿ ಪ್ರಕರಣ – ಫೈರ್‌ಲೈನ್‌ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ

    ಬಂಡೀಪುರ ಬೆಂಕಿ ಪ್ರಕರಣ – ಫೈರ್‌ಲೈನ್‌ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ

    ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯಕ್ಕೆ ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಒಂದು ವರದಿ ಸಲ್ಲಿಕೆಯಾಗಿದೆ. ಫೈರ್‌ಲೈನ್‌ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಬಿದ್ದ ಪರಿಣಾಮ 4419.54 ಅರಣ್ಯ ಬೆಂಕಿಗೆ ಆಹುತಿಯಾಗಿತ್ತು. ಅರಣ್ಯಕ್ಕೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಹರಿಕುಮಾರ್ ಝಾ ನೇತೃತ್ವದಲ್ಲಿ ಒಂದು ವಿಚಕ್ಷಣಾ ಸಮಿತಿ ನೇಮಿಸಲಾಗಿತ್ತು.

    ಈ ವಿಚಕ್ಷಣಾ ಸಮಿತಿ ಇದೀಗ ಸರ್ಕಾರಕ್ಕೆ ಒಂದು ವರದಿ ಸಲ್ಲಿಕೆ ಮಾಡಿದೆ. ಅಂದಿನ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾದವನ್, ಹುಲಿ ಯೋಜನೆ ಎಪಿಸಿಸಿಎಫ್ ಜಗತ್ ರಾಮ್ ಅವರ ಕರ್ತವ್ಯ ಲೋಪದ ಬಗ್ಗೆ ತನಿಖಾ ವರದಿ ಬೊಟ್ಟು ಮಾಡಿದೆ.

    ನಿಗದಿತ ಪ್ರಮಾಣದಲ್ಲಿ ಫೈರ್ ಲೈನ್ ಮತ್ತು ವಿವ್ ಲೈನ್ ನಿರ್ಮಿಸದೆ ಕರ್ತವ್ಯ ಲೋಪದ ಬಗ್ಗೆ ವರದಿ ಸಲ್ಲಿಕೆ ಮಾಡಿದ್ದು ನೌಕರರ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯತೆ, ಅಧಿಕಾರಿಗಳ ಕರ್ತವ್ಯ ಲೋಪವೇ ಬೆಂಕಿ ಹರಡಲು ಪ್ರಮುಖ ಕಾರಣ ಎನ್ನುವ ಅಂಶಗಳು ಕಂಡು ಬಂದಿದೆ.

    ಮತ್ತೆ ಕಾಮಗಾರಿ ನಡೆಸದೆ ಬಿಲ್ ಪಾಸ್ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸರ್ಕಾರಕ್ಕೆ ನಷ್ಟವಾಗಿರುವ ಹಣವನ್ನು ಅಧಿಕಾರಿಗಳ ನಿವೃತ್ತಿ ವೇತನದಿಂದ ಭರಿಸುವಂತೆ ಶಿಫಾರಸ್ಸು ಮಾಡಿದ್ದು ಈ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತಾರಾ ಎನ್ನುವುದೇ ಪ್ರಶ್ನೆಯಾಗಿದೆ.

  • ಬಂಡೀಪುರ ವನದ ಸೌಂದರ್ಯ ಹೆಚ್ಚಿಸಲು ಅರಣ್ಯ ಇಲಾಖೆ ಮಾಸ್ಟರ್ ಪ್ಲಾನ್

    ಬಂಡೀಪುರ ವನದ ಸೌಂದರ್ಯ ಹೆಚ್ಚಿಸಲು ಅರಣ್ಯ ಇಲಾಖೆ ಮಾಸ್ಟರ್ ಪ್ಲಾನ್

    ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಕಳೆದೆರಡು ತಿಂಗಳ ಹಿಂದೆ ಬೆಂಕಿಯ ಕೆನ್ನಾಲೆಗೆ ಸಿಲುಕಿ ಅಕ್ಷರಶಃ ಸುಟ್ಟು ಕರಕಲಾಗಿತ್ತು. ಇದೀಗ ಆ ಪ್ರದೇಶದಲ್ಲಿ ಒಂದೆರಡು ಮಳೆಯಾಗಿರುವ ಕಾರಣ ಕೊಂಚ ಹಸಿರಿನ ಸಿರಿ ಗೋಚರವಾಗುತ್ತಿದೆ. ಇದಲ್ಲದೆ ಅರಣ್ಯ ಇಲಾಖೆ ವನದ ಸೌಂದರ್ಯವನ್ನು ಹೆಚ್ಚಿಸಲು ಮಾಸ್ಟರ್ ಪ್ಲಾನ್ ಕೂಡ ಮಾಡಿದೆ.

    ರಾಜ್ಯದಲ್ಲೇ ಅತೀ ಹೆಚ್ಚು ಹುಲಿಗಳಿರುವ ತಾಣ ಎಂದರೆ ಅದು ಬಂಡೀಪುರ. ಆನೆ, ಚಿರತೆ, ಕರಡಿ ಜಿಂಕೆ ಕಾಡೆಮ್ಮೆ ಸೇರಿದಂತೆ ಅಸಂಖ್ಯಾತ ಪ್ರಾಣಿಪಕ್ಷಿಗಳ ಆವಾಸ ಸ್ಥಾನವೂ ಆಗಿರುವ ಬಂಡೀಪುರ ಅರಣ್ಯ ಪ್ರದೇಶ ಕಿಡಿಗೇಡಿಗಳ ಕೃತ್ಯದಿಂದ ಅಕ್ಷರಶ: ಬೆಂಕಿಪುರವಾಗಿತ್ತು. ಕಳೆದ ಫೆಬ್ರವರಿಯಲ್ಲಿ ಬಿದ್ದ ಬೆಂಕಿಯ ಪರಿಣಾಮ ನಾಲ್ಕೂವರೆ ಸಾವಿರ ಹೆಕ್ಟೇರ್ ಪ್ರದೇಶದ ಅರಣ್ಯ ಸುಟ್ಟು ಕರಕಲಾಗಿತ್ತು. ನೆಲದಲ್ಲಿ ತೆವಳುವ ಹಾಗೂ ಹರಿದಾಡುವ ಸರಸೃಪಗಳು ಹಾಗೂ ಇತರ ಸೂಕ್ಷ್ಮಾಣು ಜೀವಿಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದವು. ನೂರಾರು ಅರಣ್ಯ ಸಿಬ್ಬಂದಿ, ಸ್ವಯಂಸೇವಕರು ಹಾಗೂ ಹೆಲಿಕಾಪ್ಟರ್ ಕಾರ್ಯಚರಣೆ ಮೂಲಕ ಕೊನೆಗೂ ಬೆಂಕಿ ನಂದಿಸಲಾಗಿತ್ತು.

    ಬಂಡೀಪುರದಲ್ಲೀಗ ಉತ್ತಮ ಮಳೆಯಾಗಿದ್ದು ಅರಣ್ಯ ಇಲಾಖೆ ಹಾಗು ಪರಿಸರ ಪ್ರಿಯರಲ್ಲಿ ಆಶಾಭಾವನೆ ಮೂಡಿಸಿದೆ. ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ಅರಣ್ಯ ಇಲಾಖೆ ಬಂಡೀಪುರವನ್ನು ಹಂತ ಹಂತವಾಗಿ ಪುನಶ್ಚೇತನಗೊಳಿಸುವ ಮೂಲಕ ಸಹಜ ಸ್ಥಿತಿಗೆ ತರಲು ಮುಂದಾಗಿದೆ. ಇದಕ್ಕಾಗಿ ಬೆಂಕಿ ಬಿದ್ದಿರುವ ಪ್ರದೇಶಗಳಲ್ಲಿ ನಾನಾ ರೀತಿ ಮರಗಿಡಗಳ ಬೀಜಗಳನ್ನು ಬಿತ್ತನೆ ಮಾಡುವ ಕಾರ್ಯ ಆರಂಭಿಸಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದರ್ ತಿಳಿಸಿದ್ದಾರೆ.

    ಬೀಜ ಸಂಶೋಧನಾ ಕೇಂದ್ರದಿಂದ ಈಗಾಗಲೇ 8 ಟನ್ ಬೀಜಗಳನ್ನು ಖರೀದಿಸಲಾಗಿದೆ. ಬಂಡೀಪುರ ಪರಿಸರಕ್ಕೆ ಹೊಂದಿಕೊಳ್ಳುವ ಅಂಟುವಾಳ, ಕರಿಮತ್ತಿ, ಶ್ರೀಗಂಧ, ಹುಣಸೆ, ಕರಿಜಾಲಿ, ಹೊಂಗೆ, ಹೆಬ್ಬೇವು, ಬೆಟ್ಟದ ನಲ್ಲಿ ಬೀಜಗಳನ್ನು, ಸುಟ್ಟು ಕರಕಲಾಗಿದ್ದ ಅರಣ್ಯ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿದೆ. ಇದರ ಜೊತೆಗೆ ಹೆಮೆಟಾ ಎಂಬ ಹುಲ್ಲಿನ ಬೀಜವನ್ನು ಬಿತ್ತನೆ ಮಾಡಲಾಗುತ್ತಿದೆ. ಪ್ರಮುಖವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಿದಿರು ಬೀಜ ಬಿತ್ತನೆ ಮಾಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಇದಕ್ಕಾಗಿ 5 ಟನ್ ಬಿದಿರು ಬೀಜಕ್ಕಾಗಿ ಬೀಜ ಸಂಶೋಧನಾ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೀಗ ಪೂರ್ವ ಮುಂಗಾರು ಮಳೆ ಆರಂಭವಾಗಿದ್ದು ಮೊದಲ ಹಂತದ ಬಿತ್ತನೆ ಕಾರ್ಯ ಮಾಡಲಾಗುತ್ತಿದೆ. ಈ ಭಾಗದಲ್ಲಿ ಹೆಚ್ಚಿನ ಮಳೆ ಬೀಳುವ ಜೂನ್, ಜುಲೈ ಹಾಗು ಸೆಪ್ಟೆಂಬರ್ ತಿಂಗಳಲ್ಲಿ ಬೀಜ ಬಿತ್ತನೆ ಕಾರ್ಯ ಮುಂದುವರಿಸುವ ಉದ್ದೇಶ ಹೊಂದಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಮಹದೇವಗೌಡ ಹೇಳಿದ್ದಾರೆ.

    ಒಟ್ಟಿನಲ್ಲಿ ಬಂಡೀಪುರ ಪುನಶ್ಚೇತನಗೊಳಿಸಲು ಮುಂದಾಗಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ವರುಣನ ಕೃಪೆ ಅತ್ಯಗತ್ಯವಾಗಿದೆ.

  • ಬಂಡೀಪುರ ಅರಣ್ಯದಲ್ಲಿ ಮತ್ತೆ ಬೆಂಕಿ..!

    ಬಂಡೀಪುರ ಅರಣ್ಯದಲ್ಲಿ ಮತ್ತೆ ಬೆಂಕಿ..!

    ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಕುಂದಕೆರೆವಲಯದ ಕಣಿಯನಪುರದ ಬೀಟ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಿಂದ ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಹೋಗಿದೆ.

    ಗುರುವಾರ ಮಧ್ಯಾಹ್ನ 2.30 ರ ವೇಳೆಗೆ ಕಾಡಿನ ಪಕ್ಕದ ಜಮೀನಿನೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದಾದ ಬಳಿಕ ಕಣಿಯನಪುರದ ಬೀಟ್‍ಗೆ ಬೆಂಕಿ ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮಸ್ಥರು ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಕಾಡಿನ ಪಕ್ಕದ ಜಮೀನಿನಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ ಕಣಿಯನಪುರದ ಬೀಟ್ ಪ್ರದೇಶಕ್ಕೂ ಆವರಿಸಿದೆ.

    ಬೆಟ್ಟದ ಪ್ರದೇಶದಲ್ಲಿ ಬೆಂಕಿ ಬಿದ್ದಿರುವ ಕಾರಣ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. 15 ದಿನಗಳ ಹಿಂದೆಯಷ್ಟೇ ಬಂಡೀಪುರ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಂಡು 15 ಸಾವಿರ ಎಕರೆಗೂ ಅಧಿಕ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಇದನ್ನೂ ಓದಿ; ಕಾಡು ಪ್ರಾಣಿಗಳಿಗೆ ಬೇಸತ್ತು ಬಂಡೀಪುರಕ್ಕೆ ಬೆಂಕಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv