Tag: Bandipur

  • ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ – ಕೇರಳ ಹೋರಾಟಕ್ಕೆ ರಾಹುಲ್ ಬೆಂಬಲ

    ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ – ಕೇರಳ ಹೋರಾಟಕ್ಕೆ ರಾಹುಲ್ ಬೆಂಬಲ

    ಬೆಂಗಳೂರು: ರಾಜ್ಯ ಸರ್ಕಾರ ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಹೇರಿರುವ ನಿಷೇಧ ತೆರವುಗೊಳಿಸುವಂತೆ ಒತ್ತಾಯಿಸಿ ವಯನಾಡ್‍ನಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದಾರೆ.

    ಗುಂಡುಪೇಟೆ ತಾಲೂಕಿನ ಬಂಡೀಪುರ ಮೂಲಕ ಕೇರಳಕ್ಕೆ ರಾತ್ರಿ ವೇಳೆ ವಾಹನ ಸಂಚಾರ ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಸ್ವಯಂ ಪ್ರೇರಿತ ಬಂದ್ ಮಾಡಲಾಗಿದ್ದು, ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ರಾಹುಲ್ ಗಾಂಧಿ ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದಾರೆ.

    ಬಂಡೀಪುರ-ಕೇರಳ ಮಾರ್ಗದ ರಾಷ್ಟ್ರಿಯ ಹೆದ್ದಾರಿ 766 ರಲ್ಲಿ ರಾತ್ರಿ ವೇಳೆ ಸಂಚಾರ ನಿಷೇಧಿಸಿದ್ದರಿಂದ ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಕ್ರಮ ವಿರೋಧಿಸಿ ಸೆ.25ರಿಂದ ವಯನಾಡ್‍ನಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನನ್ನ ಬೆಂಬಲವಿದೆ. ಯುವಕರೊಂದಿಗೆ ನಾನು ನಿಲ್ಲುತ್ತೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

    ರಾಹುಲ್ ಗಾಂಧಿ ಟ್ವೀಟ್ ಮಾಡಿರುವ ಕುರಿತು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರತಿಕ್ರಿಯಿಸಿದ್ದು, ತಮ್ಮ ಕ್ಷೇತ್ರದ ಜನರ ಭಾವನೆಗಳಿಗೆ ಸ್ಪಂದಿಸಿ ರಾಹುಲ್ ಟ್ವೀಟ್ ಮಾಡಿದ್ದಾರೆ. ಅಂತಿಮವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ರಾತ್ರಿ ವೇಳೆ ಸಂಚಾರ ನಿಲ್ಲಿಸಲು ವೈಜ್ಞಾನಿಕ ಕಾರಣಗಳೇನು? ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ ಎನ್ನುವುದಾದರೆ ಹಗಲು ಹೊತ್ತು ತೊಂದರೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ವೈಜ್ಞಾನಿಕ ಕಾರಣಗಳೇನು ಎನ್ನುವುದನ್ನು ಸರ್ಕಾರ ಹೇಳಲಿ, ವಾಹನ ಸಂಚಾರ ತೆರವುಗೊಳಿಸಬೇಕೋ ಬೇಡವೋ ಎನ್ನುವ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಸ್ಪಷ್ಟಪಡಿಸಿದ್ದಾರೆ.

    ಏನಿದು ಪ್ರಕರಣ?
    ಹುಲಿ, ಆನೆ, ಕಾಡೆಮ್ಮೆ ಸೇರಿದಂತೆ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಅಪಘಾತದಿಂದ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ 2009ರಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 212 ಮತ್ತು 69 ರಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಚಾಮಾರಾಜನಗರ ಜಿಲ್ಲಾ ಆಡಳಿತ ಆದೇಶ ಹೊರಡಿಸಿತ್ತು. ವಾಹನಗಳ ಸಂಚಾರ ನಿಷೇಧವನ್ನು ರದ್ದುಪಡಿಸದಂತೆ ಕರ್ನಾಟಕ ಹೈಕೋರ್ಟ್ 2010ರಲ್ಲಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇರಳ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ. ಕೇರಳ ಸರ್ಕಾರ ಈ ಹಿಂದೆ ಸಾಕಷ್ಟು ಬಾರಿ ನಿಷೇಧ ತೆರವುಗೊಳಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿಕೊಂಡಿತ್ತು. ಕೇರಳದ ಲಾಬಿಗೆ ರಾಜ್ಯ ಸರ್ಕಾರ ಮಣಿದಿರಲಿಲ್ಲ.

    ಪರಿಸ್ಥಿತಿಯನ್ನು ಅಧ್ಯಯನ ನಡೆಸಲು ಸುಪ್ರೀಂ ಕೋರ್ಟ್ ಕೇಂದ್ರ ಸಾರಿಗೆ ಸಚಿವಾಲಯದ ಮುಖ್ಯ ಕಾರ್ಯದರ್ಶಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಗಳ ಜೊತೆ ಕರ್ನಾಟಕ, ತಮಿಳುನಾಡು, ಕೇರಳದ ಸಾರಿಗೆ ಸಚಿವಾಲಯದ ಅಧಿಕಾರಿಗಳನ್ನು ಹೊಂದಿದ್ದ ಸಮಿತಿಯನ್ನು ರಚಿಸುವಂತೆ ಸೂಚಿಸಿತ್ತು.

    ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಹಿಂದಿದ್ದ ನಾಲ್ಕೂ ಸರ್ಕಾರಗಳು ಸಮ್ಮತಿ ಸೂಚಿಸಿರಲಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಸಿಎಂ ಕುಮಾರಸ್ವಾಮಿ ಸರ್ಕಾರದ ಜೊತೆಗೂ ಕೇರಳ ಮಾತುಕತೆ ನಡೆಸಿತ್ತು. ಅವರೂ ಇದಕ್ಕೆ ಅವಕಾಶ ನೀಡಿರಲಿಲ್ಲ.

    ಬಲಿಯಾದ ಪ್ರಾಣಿಗಳ ಸಂಖ್ಯೆ ಎಷ್ಟು?
    ರಾತ್ರಿ ಸಂಚಾರ ನಿಷೇಧಕ್ಕೂ ಮುನ್ನ ಅಂದ್ರೆ 2004-09ರ ಅವಧಿಯಲ್ಲಿ ಬಂಡಿಪುರ ಅರಣ್ಯ ಪ್ರದೇಶದಲ್ಲಿ 86 ಪ್ರಾಣಿಗಳು ಅಪಘಾತಕ್ಕೆ ಬಲಿಯಾಗಿವೆ. ರಾತ್ರಿ ಸಂಚಾರ ನಿಷೇಧ ಬಳಿಕ 2010-18ರ ಅವಧಿಯಲ್ಲಿ 17 ಪ್ರಾಣಿ ಮೃತಪಟ್ಟಿವೆ. ಒಟ್ಟಿನಲ್ಲಿ ರಾತ್ರಿ ವಾಹನ ಸಂಚಾರ ನಿಷೇಧದ ಬಳಿಕ ಅಪಘಾತದಲ್ಲಿ ಸತ್ತ ಪ್ರಾಣಿಗಳ ಸಂಖ್ಯೆ ಇಳಿಕೆಯಾಗಿತ್ತು. ಇದೀಗ ಮತ್ತೆ ಸಂಚಾರ ಮುಕ್ತ ಮಾಡಿದ್ರೆ ಮತ್ತೆ ಪ್ರಾಣಿಗಳು ಬಲಿಯಾಗುತ್ತವೆ ಅಂತ ಪ್ರಾಣಿಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.

    ಯಾವ ವರ್ಷದಲ್ಲಿ ಎಷ್ಟು ಪ್ರಾಣಿಗಳು ಪ್ರಾಣ ಕಳೆದುಕೋಂಡಿವೆ ಎಂಬ ವಿವರ ಈ ಕೆಳಗಿನಂತಿದೆ:
    2004 – 32, 2005 – 7, 2007 – 41, 2008 – 2, 2009 – 2, 2010 – 3, 2011 – 7, 2012 – 10, 2013 – 6, 2014 – 1, 2015 – 2, 2016 – 1, 2017 – 2, 2018 – 2 ಪ್ರಾಣಿಗಳು ಮೃತಪಟ್ಟಿವೆ.

  • ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಸಫಾರಿ ಸೇವೆ ಸ್ಥಳಾಂತರ

    ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಸಫಾರಿ ಸೇವೆ ಸ್ಥಳಾಂತರ

    ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಸೇವೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

    ಮುಂದಿನ ತಿಂಗಳು ಜೂನ್ 2 ರಿಂದ ಸಫಾರಿ ಜಾಗ ಬದಲಾವಣೆ ಆಗಲಿದೆ. ಬಂಡಿಪುರದಿಂದ ಮೇಲುಕಾಮನಹಳ್ಳಿಗೆ ಸ್ಥಳಾಂತರ ಮಾಡಲಾಗುತ್ತಿದ್ದು, ಹಿಮವದ್ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಮೇಲುಕಾಮನಹಳ್ಳಿ ಬರುತ್ತದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ.

    ಬಂಡೀಪುರದ ಕಾಡಿನ ಮಧ್ಯದಲ್ಲಿ ಹುಲಿಸಂರಕ್ಷಿತ ಪ್ರದೇಶದ ಸಫಾರಿ ಸೇವೆ ಇತ್ತು. ಇದರಿಂದ ಸಫಾರಿ ಮಾಡುವ ನೆಪದಲ್ಲಿ ಪ್ರವಾಸಿಗರು ಬಂದು ವಾಹನಗಳನ್ನು ಅತೀ ಹೆಚ್ಚಾಗಿ ಪಾರ್ಕಿಂಗ್ ಮಾಡುತ್ತಿದ್ದರು. ಇದರಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿತ್ತು. ಇನ್ನೊಂದೆಡೆ ಪ್ರವಾಸಿಗರು ತಾವು ತಂದಿದ್ದ ಆಹಾರವನ್ನು ಪ್ರಾಣಿಗಳಿಗೆ ಎಸೆಯುವ ಮೂಲಕ ತೊಂದರೆ ಕೊಡುತ್ತಿದ್ದರು.

    ಅಷ್ಟೇ ಅಲ್ಲದೇ ಬಂಡೀಪುರದಲ್ಲಿ ಪ್ರಸ್ತುತ ಖಾಸಗಿ ವ್ಯಕ್ತಿಗಳು ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಸಫಾರಿ ಮಾಡುತ್ತಿದ್ದರು. ಇದಕ್ಕೆಲ್ಲ ನಿರ್ಬಂಧ ಹಾಕಲು ರಾಷ್ಟ್ರೀಯ ಹೆದ್ದಾರಿ 181ರ ಮಾರ್ಗದಲ್ಲಿರುವ ವಿಶೇಷ ಹುಲಿ ಸಂರಕ್ಷಣಾದಳ ಕ್ಯಾಂಪಸ್‍ಗೆ ಸ್ಥಳಾಂತರ ಮಾಡಲಾಗುತ್ತಿದೆ.

  • ಬೆಂಕಿಯಿಂದ ಬೆಂದಿದ್ದ ಅರಣ್ಯದಲ್ಲಿ ಪ್ರಾಣಿಗಳ ಕಲರವ

    ಬೆಂಕಿಯಿಂದ ಬೆಂದಿದ್ದ ಅರಣ್ಯದಲ್ಲಿ ಪ್ರಾಣಿಗಳ ಕಲರವ

    ಚಾಮರಾಜನಗರ: ಕಳೆದ ಎರಡು ತಿಂಗಳ ಹಿಂದೆ ಬೆಂಕಿಗೆ ಆಹುತಿಯಾಗಿದ್ದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೀಗ ವನ್ಯಜೀವಿಗಳ ಕಲರವ ಆರಂಭವಾಗಿದೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯ ಪ್ರದೇಶಕ್ಕೆ ಎರಡು ತಿಂಗಳ ಹಿಂದೆ ಬೆಂಕಿ ಬಿದ್ದ ಕಾರಣ ಸಾವಿರಾರು ಹೆಕ್ಟರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಇದರಿಂದ ಇಲ್ಲಿದ್ದ ಪ್ರಾಣಿಗಳು ಬಂಡೀಪುರ ಉದ್ಯಾನವನ್ನು ಬಿಟ್ಟು ಬೇರೆ ಅರಣ್ಯ ಪ್ರದೇಶಕ್ಕೆ ವಲಸೆ ಹೋಗಿದ್ದವು. ಹೀಗಾಗಿ ಬಂಡಿಪುರ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳು ಕಾಣದೇ ಅರಣ್ಯ ಪ್ರದೇಶ ಬಿಕೋ ಎನ್ನುತ್ತಿತ್ತು.

    ಕಳೆದ 15 ದಿನಗಳಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತಣ್ಣನೆಯ ಹಾಗೂ ಚಿಗುರೊಡೆಯುತ್ತಿರುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ತಮ್ಮ ಗೂಡನ್ನು ಬಿಟ್ಟು ಹೋಗಿದ್ದ ವನ್ಯಜೀವಿಗಳು ಮತ್ತೆ ತಮ್ಮ ಗೂಡನ್ನು ಸೇರಿಕೊಂಡಿವೆ. ಇದರಿಂದ ಪ್ರತಿ ನಿತ್ಯ ಪ್ರಾಣಿಗಳು ಸಫಾರಿಗೆ ಹೋದ ಪ್ರವಾಸಿಗರಿಗೆ ಕಾಣ ಸಿಗುತ್ತಿವೆ.

    ಹುಲಿ, ಚಿರತೆ, ಚಿಂಕೆ, ಆನೆ, ಕಾಡೆಮ್ಮೆ ಸೇರಿದಂತೆ ಇತರೆ ಪ್ರಾಣಿಗಳು ಪ್ರವಾಸಿಗರ ಕ್ಯಾಮರಾಗಳಿಗೆ ಫೋಸ್ ನೀಡುತ್ತಿವೆ. ಇದರಿಂದ ಪ್ರವಾಸಿಗರು ಫುಲ್ ಖುಷ್ ಆಗಿದ್ದು, ವನ್ಯಜೀವಿ ಪ್ರಿಯರಲ್ಲೊಂತು ಸಂತಸ ಮನೆ ಮಾಡಿದೆ.

  • ಬಂಡೀಪುರಕ್ಕೆ ಬೆಂಕಿ- ಮೇವು, ನೀರಿಲ್ಲದೆ ನಾಡಿನತ್ತ ಆನೆಗಳ ಹೆಜ್ಜೆ

    ಬಂಡೀಪುರಕ್ಕೆ ಬೆಂಕಿ- ಮೇವು, ನೀರಿಲ್ಲದೆ ನಾಡಿನತ್ತ ಆನೆಗಳ ಹೆಜ್ಜೆ

    ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳು ಮೇವು ನೀರಿಲ್ಲದೆ ಕಂಗಾಲಾಗಿವೆ.

    ಸತತವಾಗಿ ಒಂದು ವಾರಕ್ಕೂ ಹೆಚ್ಚು ಬೆಂಕಿ ಹರಡಿದ ಪರಿಣಾಮ ಆ ಪ್ರದೇಶದಲ್ಲಿದ್ದ ಅಪಾರ ಪ್ರಮಾಣದ ಸಸ್ಯ ನಾಶವಾಗಿದೆ. ಇದರಿಂದ ಪ್ರಾಣಿಗಳು ಮೇವು ಹಾಗೂ ನೀರಿಲ್ಲದೆ ಆಹಾರವನ್ನರಸಿ ಕಾಡಂಚಿನ ಗ್ರಾಮಗಳಿಗೆ ಬರುತ್ತಿವೆ.

    ಸಣ್ಣ ಪ್ರಾಣಿಗಳಿಂದ ಹಿಡಿದು ಆನೆಗಳು ಕೂಡ ಗ್ರಾಮದ ಜಮೀನುಗಳಿಗೆ ಲಗ್ಗೆ ಹಾಕುತ್ತಿವೆ. ಇದರಿಂದ ಭಯಭೀತರಾಗಿರುವ ಕಾಡಂಚಿನ ಗ್ರಾಮಸ್ಥರು ತಮ್ಮ ಬೆಳೆಗಳು ನಾಶವಾಗುತ್ತದೆಯೆಂದು ಆನೆಗಳನ್ನು ಕಾಡಿಗೆ ಅಟ್ಟಲು ಹರಸಾಹಸ ಪಡುತ್ತಿದ್ದಾರೆ.

    ಚಾಮರಾಜನಗರದ ಬಂಡೀಪುರದಲ್ಲಿ ದುಷ್ಕರ್ಮಿಗಳು ಕಾಡಿಗೆ ಬೆಂಕಿ ಹಚ್ಚಿದ್ದರು. ಕಾಡು ಪ್ರಾಣಿಗಳಿಗೆ ಬೇಸತ್ತು ಬಂಡೀಪುರ ಅರಣ್ಯಕ್ಕೆ ಬೆಂಕಿ ಹಾಕಿರೋದಾಗಿ ಬಂಧಿತ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದರು. ಇತ್ತೀಚೆಗೆ ಬಂಡೀಪುರ ಅರಣ್ಯದಂಚಿನ ಚೌಡಹಳ್ಳಿ, ಕಲೀಗೌಡನಹಳ್ಳಿ, ಹಂಗಳ ಮೊದಲಾದ ಕಡೆ ಹುಲಿ, ಚಿರತೆ, ಆನೆ ಗ್ರಾಮದತ್ತ ಮುಖ ಮಾಡಿದ್ದವು.

    ಸತತ ನಾಲ್ಕೈದು ದಿನ ಕಾರ್ಯಾಚರಣೆ ನಡೆಸಿದ್ರೂ ಆತಂಕ ಮೂಡಿಸಿದ್ದ ಹುಲಿಯನ್ನು ಸೆರೆಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ವಿಫಲವಾಗಿದ್ದರು. ಹುಲಿಗೆ ಹೆದರಿದ ಕಾಡಂಚಿನ ಗ್ರಾಮಸ್ಥರು ಅರಣ್ಯಕ್ಕೆ ಬೆಂಕಿ ಇಟ್ಟಿದ್ದು, ಪರಿಣಾಮ ಸಾವಿರಾರು ಎಕರೆ ಪ್ರದೇಶ ಭಸ್ಮವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಡು ಪ್ರಾಣಿಗಳಿಗೆ ಬೇಸತ್ತು ಬಂಡೀಪುರಕ್ಕೆ ಬೆಂಕಿ

    ಕಾಡು ಪ್ರಾಣಿಗಳಿಗೆ ಬೇಸತ್ತು ಬಂಡೀಪುರಕ್ಕೆ ಬೆಂಕಿ

    ಚಾಮರಾಜನಗರ: ಕಾಡು ಪ್ರಾಣಿಗಳಿಗೆ ಬೇಸತ್ತು ಬಂಡೀಪುರ ಅರಣ್ಯಕ್ಕೆ ಬೆಂಕಿ ಹಾಕಿರೋದಾಗಿ ಬಂಧಿತ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕಳ್ಳೀಪುರದ ಅರುಣ್, ಚೌಡಹಳ್ಳಿಯ ಹನುಮಂತಯ್ಯ ಮತ್ತು ಗೋಪಾಲಯ್ಯ ಬಂಧಿತರು. ಅರಣ್ಯಾಧಿಕಾರಿಗಳ ವಿಚಾರಣೆ ವೇಳೆ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಬಂಡೀಪುರ ಅರಣ್ಯದಂಚಿನ ಚೌಡಹಳ್ಳಿ, ಕಲೀಗೌಡನಹಳ್ಳಿ, ಹಂಗಳ ಮೊದಲಾದ ಕಡೆ ಹುಲಿ, ಚಿರತೆ, ಆನೆ ಗ್ರಾಮದತ್ತ ಮುಖ ಮಾಡಿದ್ದವು. ಸತತ ನಾಲ್ಕೈದು ದಿನ ಕಾರ್ಯಚರಣೆ ನಡೆಸಿದ್ರೂ ಆತಂಕ ಮೂಡಿಸಿದ್ದ ಹುಲಿಯನ್ನು ಸೆರೆಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ವಿಫಲವಾಗಿದ್ದರು. ಹುಲಿಗೆ ಹೆದರಿದ ಕಾಡಂಚಿನ ಗ್ರಾಮಸ್ಥರು ಅರಣ್ಯಕ್ಕೆ ಬೆಂಕಿ ಹಾಕಿದ್ದಾರೆ.

    ಬೆಂಕಿ ಬಿದ್ದ ಜಾಗದ ಸ್ಯಾಟಲೈಟ್ ಚಿತ್ರಗಳಲ್ಲಿ ಇದು ಮಾನವ ನಿರ್ಮಿತ ಎನ್ನುವುದು ಬೆಳಕಿಗೆ ಬಂದಿತ್ತು. ಅಷ್ಟೇ ಅಲ್ಲದೇ ಗುಂಪು ಗುಂಪುಗಳಾಗಿ ಬೆಂಕಿ ಬಿದ್ದಿರೋದ್ರಿಂದ ಅನುಮಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಅರಣ್ಯಾಧಿಕಾರಿಗಳು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

    2,500 ಎಕರೆ ಅರಣ್ಯ ಪ್ರದೇಶ ಮಾತ್ರ ಕಾಡ್ಗಿಚ್ಚಿನಿಂದ ಭಸ್ಮವಾಗಿದೆ ಎಂಬ ಸುಳ್ಳು ಮಾಹಿತಿಯನ್ನು ಅರಣ್ಯ ಇಲಾಖೆ ಸರ್ಕಾರಕ್ಕೆ ನೀಡಿದೆ. ಅರಣ್ಯ ನಾಶದ ಬಗ್ಗೆ ಸಮೀಕ್ಷೆ ನಡೆಸಿರುವ ಇಸ್ರೋ ಬೆಂಕಿಗೆ ಭಸ್ಮವಾದ ಒಟ್ಟು ಪ್ರದೇಶ 10,920 ಎಕರೆ (4,420 ಹೆಕ್ಟೇರ್) ಎಂದು ತಿಳಿಸಿದೆ. ಬೆಂಕಿ ನಂದಿಸಲು ವಿಫಲವಾದ ಅರಣ್ಯಾಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಂಡಿಪುರ ಬೆಂಕಿ ಬಲೆಯ ಅಸಲಿ ಸತ್ಯ..!

    ಬಂಡಿಪುರ ಬೆಂಕಿ ಬಲೆಯ ಅಸಲಿ ಸತ್ಯ..!

    ಬೆಂಗಳೂರು: ಬಂಡೀಪುರ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳೇ ಬೆಂಕಿ ಹಾಕಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಕೆಲ ಸಂಘಟನೆಗಳು ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕಿ ವಿದೇಶಗಳಿಂದ ಹಣ ಪಡೆಯಲು (ಫಾರಿನ್ ಫಂಡ್) ಮುಂದಾಗಿದ್ರು ಎಂಬ ಶಂಕೆ ವ್ಯಕ್ತವಾಗಿದೆ.

    ಬಿದ್ದ ಜಾಗದ ಸ್ಯಾಟಲೈಟ್ ಪಿಕ್ಚರ್ ನಲ್ಲೂ ಕೂಡ ಇದು ಮಾನವನಿರ್ಮಿತ ಅಂತಾ ಬಯಲಾಗಿದೆ. ಗುಂಪು ಗುಂಪುಗಳಾಗಿ ಅಲ್ಲಲ್ಲಿ ಬೆಂಕಿ ಬಿದ್ದಿರೋದು ನೋಡಿದ್ರೆ ಇದು ಮಾನವ ನಿರ್ಮಿತ, ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರೋದು ಎಂದು ಅರಣ್ಯ ಇಲಾಖೆಯಿಂದ ಶಂಕೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಬಂಡೀಪುರ ಬೆಂಕಿ ಪ್ರಕರಣವನ್ನು ಉನ್ನತ ತನಿಖೆಗಾಗಿ ಆದೇಶಿಸುವ ಸಾಧ್ಯತೆಗಳಿವೆ.

    2014ರಲ್ಲಿ ಕೆಲ ಸಂಘಟನೆಗಳು ನಾಗರಹೊಳೆಗೆ ಬೆಂಕಿ ಹಾಕಿ ಫಾರಿನ್ ಫಂಡ್‍ಗೆ ಸ್ಕೆಚ್ ಹಾಕಿದ್ದವು. ರಾಜ್ಯದಲ್ಲಿ ಸರ್ಕಾರ ವಿಫಲವಾಗಿದ್ದು, ನಮ್ಮ ಸಂಘಟನೆಯೇ ಕೆಲಸ ಮಾಡುತ್ತಿದೆ ಎಂದು ತೋರಿಸಿ ಫಾರಿನ್ ಫಂಡ್ ಸಂಗ್ರಹಣೆಗೆ ಮುಂದಾಗಿದ್ದವು. ನಾಗರಹೊಳೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿ ಎಂದು ಅರಣ್ಯಾಧಿಕಾರಿಗಳು ಸುದೀರ್ಘ ಪತ್ರ ಬರೆದಿದ್ದರು. ಪತ್ರ ಬರೆದ ಕೂಡಲೇ ಪದೇ ಪದೇ ನಾಗರಹೊಳೆಯಲ್ಲಿ ಬೆಂಕಿ ಬೀಳುತ್ತಿದ್ದು ಕಡಿಮೆಯಾಗಿತ್ತು.

    2,500 ಎಕರೆ ಅರಣ್ಯ ಪ್ರದೇಶ ಮಾತ್ರ ಕಾಡ್ಗಿಚ್ಚಿನಿಂದ ಭಸ್ಮವಾಗಿದೆ ಎಂಬ ಸುಳ್ಳು ಮಾಹಿತಿಯನ್ನು ಅರಣ್ಯ ಇಲಾಖೆ ನೀಡಿದೆ. ಅರಣ್ಯ ನಾಶದ ಬಗ್ಗೆ ಸಮೀಕ್ಷೆ ನಡೆಸಿರುವ ಇಸ್ರೋ ಬೆಂಕಿಗೆ ಭಸ್ಮವಾದ ಒಟ್ಟು ಪ್ರದೇಶ 10,920 ಎಕರೆ (4,420 ಹೆಕ್ಟೇರ್) ಎಂದು ತಿಳಿಸಿದೆ. ಬೆಂಕಿ ನಂದಿಸಲು ವಿಫಲವಾದ ಅರಣ್ಯಾಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ವಲ್ಪ ದಿನದಲ್ಲಿ ಪ್ರಾಣಿಗಳು ಹಳ್ಳಿಗಳಿಗೆ ನುಗ್ಗುತ್ತವೆ, ಎಲ್ಲರು ತಯಾರಾಗಿರಿ: ದರ್ಶನ್

    ಸ್ವಲ್ಪ ದಿನದಲ್ಲಿ ಪ್ರಾಣಿಗಳು ಹಳ್ಳಿಗಳಿಗೆ ನುಗ್ಗುತ್ತವೆ, ಎಲ್ಲರು ತಯಾರಾಗಿರಿ: ದರ್ಶನ್

    ಬೆಂಗಳೂರು: ಬಂಡೀಪುರ ಹುಲಿರಕ್ಷಿತಾರಣ್ಯ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನ್ಯಜೀವಿ ಸಂಕುಲಕ್ಕೆ ತೊಂದರೆಯಾಗಿದ್ದು, ಇನ್ನೂ ಸ್ವಲ್ಪ ದಿನದಲ್ಲಿ ಪ್ರಾಣಿಗಳು ಹಳ್ಳಿಗಳಿಗೆ ನುಗ್ಗುತ್ತೆ, ಎಲ್ಲರು ತಯಾರಾಗಿರಿ ಎಂದು ದರ್ಶನ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಬಂಡೀಪುರದಲ್ಲಿ ಬೆಂಕಿ ಬಿದ್ದು 42 ಸಾವಿರ ಎಕ್ರೆ ಕಾಡು ಸುಟ್ಟು ಹೋಗಿದೆ. 42 ಸಾವಿರ ಕಾಡು ಎಕ್ರೆ ಕಾಡು ಬೆಳೆಯೋಕೆ ಎಷ್ಟು ಕಷ್ಟ. ಕಾಡಿಗೆ ಬೆಂಕಿ ಬಿದ್ದಾಗ ಪ್ರಾಣಿಗಳು ಓಡಿ ಹೋಗುತ್ತೆ. ಒಂದು ಗಂಡು ಹುಲಿ 12 ಕಿ.ಮೀ ಓಡುತ್ತೆ. ಅದರಲ್ಲಿ ನಾಲ್ಕು ಹೆಣ್ಣು ಹುಲಿಗಳು ಇರುತ್ತೆ. ಹುಲಿ ಓಡುವಾಗ ಮತ್ತೊಂದು ಹುಲಿ ಎದುರಿಗೆ ಬಂದರೆ ಅದು ಜಗಳವಾಡುತ್ತೆ. ಆಗ ಕಾಡು ಕೂಡ ನಾಶವಾಗುತ್ತೆ ಹಾಗೂ ಹುಲಿ ಕೂಡ ಸಾವನ್ನಪ್ಪುತ್ತದೆ. ಇದಕ್ಕೆ ಯಾರು ಹೊಣೆ ಎಂದು ದರ್ಶನ್ ಪ್ರಶ್ನಿಸಿದ್ದಾರೆ.

    ಕಾಡು ಹೋಯಿತು ಎಂದು ಎಲ್ಲರು ಯೋಚನೆ ಮಾಡಿ. ಇನ್ನೂ ಸ್ವಲ್ಪ ದಿನದಲ್ಲಿ ಪ್ರಾಣಿಗಳು ಹಳ್ಳಿಗಳಿಗೆ ನುಗ್ಗುತ್ತೆ. ಎಲ್ಲರು ತಯಾರಾಗಿರಿ. ಏಕೆಂದರೆ ಹುಲಿಗಳಿಗೆ ತಿನ್ನಲು ಏನು ಇಲ್ಲ. ಆಗ ನಾವು ಅರಣ್ಯ ಸಿಬ್ಬಂದಿಯನ್ನು ಕರೆಸಬೇಕು. ಆಗ ಅವರು ಪ್ರಾಣಿಗಳನ್ನು ಶೂಟ್ ಮಾಡುತ್ತಾರೆ, ಇಲ್ಲ ನಾವು ಶೂಟ್ ಮಾಡಬೇಕಾಗುತ್ತೆ. ಅರಣ್ಯ ಸಿಬ್ಬಂದಿಯವರು ಪ್ರಾಣಿಗಳನ್ನು ಸ್ಥಳಾಂತರಿಸೋಕ್ಕೆ ಆಗಲ್ಲ. ಸ್ಥಳಾಂತರಗೊಂಡರೆ ಪ್ರಾಣಿಗಳು ಬದುಕುವುದಿಲ್ಲ ಎಂದರು.

    ಈ ಹಿಂದೆ ಕೂಡ ದರ್ಶನ್ ಅವರು ಟ್ವಿಟ್ಟರಿನಲ್ಲಿ, “ಬಂಡೀಪುರ ಅಭಯಾರಣ್ಯದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನಜೀವಿ ಸಂಕುಲಕ್ಕೆ ತೊಂದರೆಯುಂಟಾಗಿದೆ. ಸರ್ಕಾರ, ಅರಣ್ಯ ಇಲಾಖೆ ಹಾಗೂ ಹಲವಾರು ಸ್ವಯಂಸೇವಕರು ಜೊತೆಗೂಡಿ ಈ ಅವಘಡವನ್ನು ಶಮನ ಮಾಡಲು ಯತ್ನಿಸುತ್ತಿದ್ದಾರೆ. ಆಸಕ್ತಿಯುಳ್ಳ ಸ್ವಯಂಸೇವಕರು ದಯಮಾಡಿ ಈ ಅಭಿಯಾನದಲ್ಲಿ ನೆರವಾಗಬೇಕಾಗಿ ವಿನಂತಿ” ಎಂದು ಟ್ವೀಟ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಂಡೀಪುರ ಬೆಂಕಿ ಪ್ರಕರಣ- ಸಹಾಯ ಚಾಚುವವರು ಈ ಕೆಳಗಿನ ವಸ್ತುಗಳನ್ನು ನೀಡಬಹುದು

    ಬಂಡೀಪುರ ಬೆಂಕಿ ಪ್ರಕರಣ- ಸಹಾಯ ಚಾಚುವವರು ಈ ಕೆಳಗಿನ ವಸ್ತುಗಳನ್ನು ನೀಡಬಹುದು

    ಮೈಸೂರು: ಕಳೆದೊಂದು ವಾರದಿಂದ ಬಂಡೀಪುರದ ಅರಣ್ಯ ಪ್ರದೇಶ ಧಗಧಗನೇ ಹೊತ್ತಿ ಉರಿಯುತ್ತಿದೆ. ಅಲ್ಲದೇ ಅರಣ್ಯ ಸಿಬ್ಬಂದಿ, ನೂರಾರು ಸ್ವಯಂ ಸೇವಕರು ಹಗಲಿರುಳೆನ್ನದೇ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಂಕಿಯ ಘಟನೆಗೆ ಸಹಾಯ ಹಸ್ತ ಚಾಚಲು ಇಚ್ಚಿಸುವ ಸಾರ್ವಜನಿಕರಿಗಾಗಿ ಮೈಸೂರು ಮೃಗಾಲಯದಲ್ಲಿ ಕೌಂಟರ್ ತೆರೆದಿದೆ.

    ಸಹಾಯ ಚಾಚುವವರು 5 ಲೀಟರ್ ನೀರಿನ ಕ್ಯಾನ್‍ಗಳು, ತಯಾರಿಸಿದ ಒಬ್ಬಿರಿಗೊಂದರಂತೆ ಪ್ಯಾಕ್ ಮಾಡಲಾದ ಹೆಚ್ಚು ಖಾರವಿಲ್ಲದ ಊಟ, ಟಾರ್ಚುಗಳು, ಸುಟ್ಟ ಗಾಯಗಳಿಗೆ ಹಾಕುವ ಬರ್ನಲ್ ಕ್ರೀಂ, ಬಾಳೆಹಣ್ಣು, ಮೂಸಂಬಿ, ಸೇಬು, ಕಿತ್ತಳೆ, ದ್ರಾಕ್ಷಿ (ಕಾಡಲ್ಲಿ ತೆಗೆದು ಕೊಂಡು ಹೋಗಲು ಅನುಕೂಲಕರ ಹಣ್ಣುಗಳು), ಗ್ಲುಕೋಸ್ ಹಾಗೂ ಒಆರ್‍ಎಸ್ ಲೀಕ್ವಿಡ್ ನೀಡುವುದಾಗಿ ತಿಳಿಸಿದೆ.

    ಬಂಡೀಪುರದಲ್ಲಿ ಧಗಧಗನೇ ಉರಿದ ಬೆಂಕಿ ಇನ್ನೂ ಅಲ್ಲಲ್ಲಿ ಜೀವಂತವಾಗಿದೆ. ಇದಲ್ಲದೆ ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಬಂಡೀಪುರಕ್ಕು ಹರಡುವ ಸಾಧ್ಯತೆಗಳಿದ್ದು, ಬೆಂಕಿ ಹರಡದಂತೆ ಜಾಗ್ರತೆ ವಹಿಸಲಾಗಿದೆ. ಇನ್ನೂ ಮುನ್ನೆಚ್ಚರಿಕಾ ಕ್ರಮವಾಗಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದ್ದು ಗೋಪಾಲಸ್ವಾಮಿ ದೇವಸ್ಥಾನ ಬಂದ್ ಮಾಡಲಾಗಿದೆ. ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಗೋಪಾಲಸ್ವಾಮಿ ಬೆಟ್ಟಿ ಇದೀಗ ಬಿಕೋ ಎನ್ನುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಂಡೀಪುರ ಬೆಂಕಿ ನಂದಿಸುವ ಕಾರ್ಯ ಶುರು – ಕರಡಿಹಳ್ಳಿ, ಚಮ್ಮನಹಳ್ಳಿಯಲ್ಲಿದೆ ಕಾಪ್ಟರ್

    ಬಂಡೀಪುರ ಬೆಂಕಿ ನಂದಿಸುವ ಕಾರ್ಯ ಶುರು – ಕರಡಿಹಳ್ಳಿ, ಚಮ್ಮನಹಳ್ಳಿಯಲ್ಲಿದೆ ಕಾಪ್ಟರ್

    – ಸೇನೆಗೆ ಇವತ್ತು ಅಗ್ನಿ ಆರಿಸುವ ವಿಶ್ವಾಸ

    ಚಾಮರಾಜನಗರ: ಕಳೆದೊಂದು ವಾರದಿಂದ ಬಂಡೀಪುರದ ಅರಣ್ಯ ಪ್ರದೇಶ ಧಗಧಗನೇ ಹೊತ್ತಿ ಉರಿದಿದೆ. ಬೆಂಕಿಯ ನರ್ತನಕ್ಕೆ ಹತ್ತು ಸಾವಿರ ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿದೆ. ಅರಣ್ಯ ಸಿಬ್ಬಂದಿ, ನೂರಾರು ಸ್ವಯಂ ಸೇವಕರು ಹಗಲಿರುಳೆನ್ನದೇ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಂಕಿಯ ತೀವ್ರತೆ ಮುಂಜಾನೆ ವೇಳೆಗೆ ಇಳಿಕೆಯಾದ್ರೆ, ಮಧ್ಯಾಹ್ನದ ವೇಳೆಗೆ ತೀವ್ರವಾಗುತ್ತಿದೆ.

    ತಡವಾಗಿಯಾದರೂ ಎಚ್ಚೆತ್ತುಕೊಂಡ ಸರ್ಕಾರ ಬೆಂಕಿ ನಂದಿಸಲು ಸೇನಾ ಹೆಲಿಕಾಪ್ಟರ್ ಗಳ ಮೊರೆ ಹೋಗಿದೆ. ಒಂದೆಡೆ ಬೆಂಕಿ ಬಿದ್ದ ಅರಣ್ಯ ಪ್ರದೇಶದ ಬಗ್ಗೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ವೈಮಾನಿಕ ಸಮೀಕ್ಷೆ ನಡೆಸಿದ್ರೆ, ಇತ್ತ ಬಂಡೀಪುರದ ಹಿರೆಕೆರೆಯಲ್ಲಿ ನೀರು ಸಂಗ್ರಹಿಸಿದ ಸೇನಾ ಹೆಲಿಕಾಪ್ಟರ್‍ಗಳು ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ವ್ಯಾಪಿಸಿದ್ದ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದವು.

    ಒಟ್ಟಾರೆ ಬಂಡೀಪುರದಲ್ಲಿ ಧಗಧಗನೇ ಉರಿದ ಬೆಂಕಿ ಇನ್ನೂ ಅಲ್ಲಲ್ಲಿ ಜೀವಂತವಾಗಿದೆ. ಇದಲ್ಲದೆ ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಬಂಡೀಪುರಕ್ಕು ಹರಡುವ ಸಾಧ್ಯತೆಗಳಿದ್ದು, ಬೆಂಕಿ ಹರಡದಂತೆ ಜಾಗ್ರತೆ ವಹಿಸಲಾಗಿದೆ. ಇನ್ನೂ ಮುನ್ನೇಚರಿಕಾ ಕ್ರಮವಾಗಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದ್ದು ಗೋಪಾಲಸ್ವಾಮಿ ದೇವಸ್ಥಾನ ಬಂದ್ ಮಾಡಲಾಗಿದೆ. ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಗೋಪಾಲಸ್ವಾಮಿ ಬೆಟ್ಟಿ ಇದೀಗ ಬಿಕೋ ಎನ್ನುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಂಡೀಪುರದಲ್ಲಿ ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಕೆ!

    ಬಂಡೀಪುರದಲ್ಲಿ ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಕೆ!

    – 7 ಹೆಲಿಕಾಪ್ಟರ್ ಗಳನ್ನು ಕಳುಹಿಸಿದ ವಾಯುಸೇನೆ
    – ಅಗ್ನಿಶಾಮಕ ದಳ, ಸಾರ್ವಜನಿಕರಿಂದ ಹರಸಾಹಸ

    ಚಾಮರಾಜನಗರ: ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರ ಬೆಂಕಿ ನಂದಿಸಲು ಏರ್ ಫೋರ್ಸ್ ನೆರವು ಪಡೆದಿದ್ದು, ಹೀಗಾಗಿ ಸೇನಾ ಹೆಲಿಕಾಪ್ಟರ್ ಮೊದಲು ಹಾನಿಗೊಳಗಾದ ಅರಣ್ಯ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದೆ.


    ಬಂಡೀಪುರಕ್ಕೆ ಹೊಂದಿಕೊಂಡಂತಿರುವ ತಮಿಳುನಾಡಿನ ಮಧುಮಲೈ ಕಡೆಯಿಂದ ಮತ್ತೆ ಬೆಂಕಿ ಹಬ್ಬುವ ಸಾಧ್ಯತೆಗಳಿವೆ. ಹೀಗಾಗಿ ಬೆಂಕಿ ಕರ್ನಾಟಕದ ಭಾಗಕ್ಕೆ ಹಬ್ಬದಂತೆ ಕಾರ್ಯಾಚರಣೆ ನಡೆಯುತ್ತಿದೆ. ಸಿಎಂ ಕೋರಿಕೆಯ ಮೇರೆಗೆ ಇದೀಗ ವಾಯುಪಡೆಯ ಹೆಲಿಕಾಪ್ಟರ್ ಬಳಕೆ ಮಾಡಲಾಗುತ್ತಿದೆ. ಈ ಮೂಲಕ ಹೆಲಿಕಾಪ್ಟರ್ ನಲ್ಲಿ ನೀರು ತಂದು ಹೊತ್ತಿ ಉರಿಯುತ್ತಿರುವ ಬಂಡೀಪುರವನ್ನು ನಿಯಂತ್ರಣಕ್ಕೆ ತರಲು ಪ್ಲಾನ್ ಮಾಡಲಾಗಿದೆ.

    ಇಂದು ಮುಂಜಾನೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಯವರು ಹಿರಿಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸುದೀರ್ಘವಾದ ಸಮಾಲೋಚನೆ ನಡೆಸಿದ್ದಾರೆ. ಸಭೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹಾಗೂ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತಿತರ ಅಧಿಕಾರಿಗಳು ಇದ್ದರು. ಚರ್ಚೆಯ ವೇಳೆ ಏರ್ ಪೋರ್ಸ್ ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸುವ ಕೆಲಸ ಮಾಡಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ ಈ ಬಗ್ಗೆ ಏರ್ ಫೋರ್ಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿದ್ದಾರೆ. ಇದನ್ನೂ ಓದಿ: ಸುದ್ದಿ ಹರಡಿ ಕಾಡು ರಕ್ಷಿಸಲು ಇಲಾಖೆಗೆ ಸಹಾಯ ಮಾಡೋಣ- ಯದುವೀರ್ ಒಡೆಯರ್

    ರೆಕ್ಕಿ ತಂತ್ರಜ್ಞಾನವನ್ನು ಬಳಸಿ ಹೆಲಿಕಾಪ್ಟರ್ ಗಳನ್ನು ಕಳುಹಿಸಿ ಎಚ್ ಡಿ ಕೋಟೆ ಸಮೀಪವಿರುವ ನುಗು ಜಲಾಶಯದಿಂದ ನೀರನ್ನು ಲಿಫ್ಟ್ ಮಾಡಿ ಬೆಂಕಿ ಹೊತ್ತಿಕೊಂಡಿರುವ ಅರಣ್ಯ ಪ್ರದೇಶಗಳಲ್ಲಿ ನೀರನ್ನು ಸಿಂಪಡಿಸುವ ಕೆಲಸವನ್ನು ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಸದ್ಯ ಹೆಲಿಕಾಪ್ಟರ್ ಗಳು ಪ್ರಾಯೋಗಿಕವಾಗಿ ಹಾರಾಟ ನಡೆಸಿವೆ. ಸ್ಥಳಕ್ಕೆ 7 ಹೆಲಿಕಾಪ್ಟರ್ ಗಳು ಆಗಮಿಸಿವೆ. ಆದರೆ ನೀರನ್ನು ಲಿಫ್ಟ್ ಮಾಡುವ ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ. ಬೆಂಕಿ ನಂದಿಸುವವರೆಗೆ ಅರಣ್ಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

    ಕಳೆದ 5 ದಿನಗಳಿಂದ ಬಂಡೀಪುರ ಅಭಯಾರಣ್ಯದಲ್ಲಿ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಸ್ವಯಂ ಸೇವಕರು ಈಗಾಗಲೇ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸತತ ಪ್ರಯತ್ನ ನಡುವೆಯೂ ಬೆಂಕಿ ನರ್ತನ ಮುಂದುವರಿದಿದ್ದು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೊಲ, ಕೋತಿ, ಜಿಂಕೆ, ಹಾವು ಸೇರಿದಂತೆ ಇತರೆ ಪ್ರಾಣಿಗಳು ಸಜೀವ ದಹನವಾಗಿವೆ. ಬೆಳಗ್ಗಿನ ಜಾವ ಬೆಂಕಿ ನಿಯಂತ್ರಣಕ್ಕೆ ಬರುತ್ತಿದ್ದು, ಮಧ್ಯಾಹ್ನದ ವೇಳೆ ಭೀಕರತೆಗೆ ತಿರುಗುತ್ತದೆ. ಬೆಳಗ್ಗಿನ ಜಾವ ಮಂಜು ಬೀಳುತ್ತಿರುವ ಕಾರಣ ಬೆಂಕಿ ಹತೋಟಿಗೆ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv