Tag: Bandipur

  • ನಟ ಧನ್ವೀರ್ ವಿರುದ್ಧ ಎಫ್‍ಐಆರ್ ದಾಖಲು

    ನಟ ಧನ್ವೀರ್ ವಿರುದ್ಧ ಎಫ್‍ಐಆರ್ ದಾಖಲು

    ಚಾಮರಾಜನಗರ: ಬಜಾರ್ ಸಿನಿಮಾ ಖ್ಯಾತಿಯ ನಟ ಧನ್ವೀರ್ ವಿರುದ್ಧ ಬಂಡೀಪುರದಲ್ಲಿ ಎಫ್‍ಐಆರ್ ದಾಖಲಾಗಿದೆ.

    ಬಂಡೀಪುರದ ಜಿ.ಎಸ್ ಬೆಟ್ಟದಲ್ಲಿ ರಾತ್ರಿ ಸಫಾರಿ ನಡೆಸಿದ ಆರೋಪದ ಮೇಲೆ ಧನ್ವೀರ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ನಿಷೇದಿತ ಪ್ರದೇಶದೊಳಗೆ ಅತಿಕ್ರಮಣ ಪ್ರವೇಶ ಮಾಡಿದ ಆರೋಪದ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ 27/1ಅಡಿ ಪ್ರಕರಣ ದಾಖಲಾಗಿದೆ. ಇಂದು ಮೆಲುಕಾಮನಹಳ್ಳಿ ಆರ್.ಎಫ್.ಓ ಕಛೇರಿಗೆ ಧನ್ವೀರ್ ವಿಚಾರಣೆಗೆ ಹಾಜರಾಗಿದ್ದರು.

    ಇಂದು ವಿಚಾರಣೆಯ ವೇಳೆ ಅರಣ್ಯ ಇಲಾಖೆ ಅಧಿಕಾರಿ ನವೀನ್ ಕುಮಾರ್ ಕೇಳಿದ ರಾತ್ರಿ ಸಫಾರಿ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಧನ್ವೀರ್, ನಾನು ಸಂಜೆ ಹೊತ್ತಿಗೆ ಕಾಡಿನಿಂದ ಹೊರಗಿದ್ದೆ. ಅರಣ್ಯ ಇಲಾಖೆಯ ವಾಹನದಲ್ಲಿ ಸಫಾರಿ ಟಿಕೆಟ್ ಪಡೆದು ತೆರಳಿದ್ದು, ನೈಟ್ ಸಫಾರಿ ಮಾಡಿಲ್ಲ. ತಪ್ಪಾಗಿ ನೈಟ್ ಸಫಾರಿ ಎಂದು ಪೋಸ್ಟ್ ಮಾಡಿದ್ದೆ ಎಂದು ತಿಳಿಸಿದ್ದಾರೆ ಎನ್ನಲಾಗಿತ್ತು.

    ಶುಕ್ರವಾರ ನಟ ಧನ್ವೀರ್ ನೈಟ್ ಸಫಾರಿ ಮಾಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬಂಡೀಪುರ ಸಿಎಫ್‍ಒ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಧನ್ವೀರ್ ತೆಗೆದ ಫೋಟೋ, ವಿಡಿಯೋಗಳ ಸಮಯವನ್ನು ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ವೈರಲ್ ಆಗಿದ್ದ ವಿಡಿಯೋ, ಸ್ಕ್ರೀನ್ ಶಾಟ್ ಗಳನ್ನು ಅರಣ್ಯ ಇಲಾಖೆಗೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

    ವಿಚಾರಣೆಯ ನಂತರ ಮಾತನಾಡಿದ್ದ ಆರ್.ಎಫ್.ಒ ನವೀನ್ ಕುಮಾರ್ ಧನ್ವೀರ್ ಬಂಡೀಪುರದಲ್ಲಿ ನೈಟ್ ಸಫಾರಿ ಮಾಡಿಲ್ಲ ಅಂತ ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಲ್ಲ ಅಂತ ತಿಳಿಸಿದ್ದರು.

  • ಗಜರಾಜನ ಸದ್ದಿಗೆ ಓಟಕಿತ್ತ ಹುಲಿಗಳು

    ಗಜರಾಜನ ಸದ್ದಿಗೆ ಓಟಕಿತ್ತ ಹುಲಿಗಳು

    ಮೈಸೂರು: ಈ ವಿಡಿಯೋ ನೋಡಿದರೆ ಆನೆಗಳಿಗೆ ಹುಲಿಗಳು ಹೆದುರುತ್ತವಾ ಎಂಬ ಪ್ರಶ್ನೆ ಕಾಡದೆ ಇರದು. ಅಷ್ಟೊಂದು ರೋಮಾಂಚನಕಾರಿಯಾದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

    ಕಾಡಿನಲ್ಲಿ ಹುಲಿ ಹಾಗೂ ಆನೆಗಳ ನಡುವಿನ ಸಂಘರ್ಷದಿಂದಾಗಿ ಆನೆಗಳಿಗೆ ಹುಲಿಗಳು ಹೆದರುತ್ತಿವೆ ಎನ್ನಲಾಗಿದೆ. ಹುಲಿಗಳನ್ನು ಆನೆಗಳು ಹೆದರಿಸಿ ಓಡಿಸುತ್ತಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಂಡೀಪುರ, ನಾಗರಹೊಳೆ ಅರಣ್ಯದಲ್ಲಿ ಸಫಾರಿಗೆ ತೆರಳಿದವರಿಗೆ ಈ ಅಪರೂಪದ ದೃಶ್ಯಗಳು ಸಿಗುತ್ತಿವೆ.

    ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಹುಲಿಗಳು ಆನೆಗಳನ್ನು ಬೇಟೆಯಾಡಿರುವ ಸಾಕಷ್ಟು ಪ್ರಕರಣಗಳು ನಡೆದಿವೆ. ಆದರೆ ಇದೀಗ ಆನೆಗಳೇ ರಾಜ ಗಾಂಭೀರ್ಯದಿಂದ ಹುಲಿಗಳನ್ನು ಓಡಿಸಿವೆ. ಈ ದೃಶ್ಯಗಳು ಎಂತಹವನ್ನಾದರೂ ರೋಮಾಂಚಿತವಾಗಿಸುತ್ತವೆ. ಪ್ರವಾಸಿಗರು ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

  • ನಾಗರಹೊಳೆ, ಬಂಡೀಪುರ ಸಫಾರಿ ಬಂದ್

    ನಾಗರಹೊಳೆ, ಬಂಡೀಪುರ ಸಫಾರಿ ಬಂದ್

    ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಹೊಳೆ, ಬಂಡೀಪುರ ಸಫಾರಿ ಬಂದ್ ಮಾಡಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ.

    ಜುಲೈ 10ರಿಂದ ಮುಂದಿನ ಆದೇಶದವರೆಗೆ ಹೊರ ಜಿಲ್ಲೆ/ರಾಜ್ಯ/ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಹೆಚ್.ಡಿ.ಕೋಟೆ ತಾಲೂಕಿನ ಎಲ್ಲ ಹೋಟೆಲ್, ರೆಸಾರ್ಟ್, ಲಾಡ್ಜ್, ಹೋಂ ಸ್ಟೇಗಳಲ್ಲಿ ವಸತಿ ಸೌಕರ್ಯ ನೀಡಕೂಡದು. ಮುಂದಿನ ಹೊರಭಾಗದ ಪ್ರವಾಸಿಗರ ಆನ್‍ಲೈನ್ ಅಥವಾ ಆಫ್‍ಲೈನ್ ಮುಂತಾದ ರೂಪದ ಬುಕ್ಕಿಂಗ್ ಮಾಡಿಕೊಳ್ಳಬಾರದು.

    ಸದ್ಯ ವಸತಿ ಸೌಕರ್ಯ ಪಡೆದುಕೊಂಡಿರುವ ಪ್ರವಾಸಿಗರನ್ನು ಬಲವಂತವಾಗಿ ಕಳಿಸಕೂಡದು. ಅವರ ಬುಕ್ಕಿಂಗ್ ಅವಧಿ ಮುಗಿಯವರೆಗೂ ಸೇವೆ ನೀಡತಕ್ಕದ್ದು ಎಂದು ಆದೇಶಿಸಿದೆ. ಪ್ರವಾಸಿ ಉದ್ದೇಶಕ್ಕೆ ಮುಂಗಡ ಬುಕ್ಕಿಂಗ್ ಮಾಡಿ ಆಗಮಿಸಿರದಿದ್ದಲ್ಲಿ ಸೂಕ್ತ ಮಾಹಿತಿ ನೀಡಿ ಬುಕ್ಕಿಂಗ್ ರದ್ದುಗೊಳಿಸಬೇಕು.

    ಹೆಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯಲ್ಲಿ ಬರುವ ದಮ್ಮನಕಟ್ಟೆ, ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯಗಳಲ್ಲಿ ಬರುವ ಎಲ್ಲ ಸಫಾರಿಗಳಿಗೂ ಸಹ ಅನ್ವಯವಾಗುತ್ತದೆ. ಮುಂದಿನ ಆದೇಶದವರೆಗು ಇಡೀ ತಾಲೂಕಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸುವಂತಿಲ್ಲ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

  • ಪ್ರವಾಸಿಗರಿಗೆ ಸಿಹಿ ಸುದ್ದಿ- ಮೈಸೂರು ಮೃಗಾಲಯ, ಬಂಡೀಪುರ ಸಫಾರಿಗೆ ಅನುಮತಿ

    ಪ್ರವಾಸಿಗರಿಗೆ ಸಿಹಿ ಸುದ್ದಿ- ಮೈಸೂರು ಮೃಗಾಲಯ, ಬಂಡೀಪುರ ಸಫಾರಿಗೆ ಅನುಮತಿ

    – ಮಕ್ಕಳಿಗೆ, ವೃದ್ಧರಿಗಿಲ್ಲ ಪ್ರವೇಶ

    ಮೈಸೂರು/ಚಾಮರಾಜನಗರ: ದೇವಸ್ಥಾನಗಳು ತೆರೆಯುತ್ತಿರುವ ಬೆನ್ನಲ್ಲೇ ಪ್ರವಾಸಿಗರಿಗೆ ಮತ್ತೊಂದು ಸಿಹಿ ಸುದ್ದಿ ಲಭ್ಯವಾಗಿದೆ. ಜೂನ್ 8ರಿಂದ ಮೈಸೂರು ಮೃಗಾಲಯ ಹಾಗೂ ಬಂಡೀಪುರ ಸಫಾರಿಯನ್ನು ಆರಂಭಿಸಲು ಅನುಮತಿ ನೀಡಿದ್ದು, ಈ ಕುರಿತು ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

    ರಾಜ್ಯ ಸರ್ಕಾರ ಅನುಮತಿ ಸೂಚಿಸಿದ್ದು, ಇದಕ್ಕಾಗಿ ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ. ಈ ಹಿನ್ನೆಲೆ ಮೈಸೂರು ಮೃಗಾಲಯ ಹಾಗೂ ಬಂಡೀಪುರ ಸಫಾರಿ ಪುನರಾರಂಭಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ಎರಡೂ ಪ್ರವಾಸಿ ತಾಣಗಳಲ್ಲಿ ಸಿದ್ಧತೆ ಮಾಡಲಾಗುತ್ತಿದೆ. ಮೃಗಾಲಯದ ಒಳಭಾಗದಲ್ಲಿ ಸಾಮಾಜಿಕ ಅಂತರ, ಪ್ರತಿ ಕೀ ಪಾಯಿಂಟ್‍ನಲ್ಲಿ ಸ್ಯಾನಿಟೈಸ್, ಪ್ರವಾಸಿಗರ ಮಧ್ಯೆ 6 ಅಡಿ ಅಂತರ ಕಾಪಾಡುವುದು ಕಡ್ಡಾಯವಾಗಿದೆ.

    ಗಂಟೆಗೆ ಒಂದು ಸಾವಿರ ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಒಂದು ಸಾವಿರಕ್ಕಿಂತ ಹೆಚ್ಚು ಜನರಿದ್ದರೆ, ಒಂದು ಗಂಟೆ ಬಳಿಕ ಮೃಗಾಲಯಕ್ಕೆ ಪ್ರವೇಶ ಮಾಡಬೇಕು. ಮೃಗಾಲಯದ ಒಳ ಬರುವಾಗ ಥರ್ಮಲ್ ಸ್ಕ್ರೀನಿಂಗ್‍ಗೆ ವ್ಯವಸ್ಥೆ ಮಾಡಲಾಗಿದೆ. ಆದರೆ 10 ವರ್ಷದೋಳಿನ ಮಕ್ಕಳು, 65 ವರ್ಷ ವೃದ್ಧರಿಗೆ ಮೃಗಾಲಯ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ನಿತ್ಯ 8 ಗಂಟೆಗಳ ಕಾಲ ಮೃಗಾಲಯ ವಿಕ್ಷಣೆಗೆ ಲಭ್ಯವಿರಲಿದೆ.

    ಸೋಮವಾರ ಬೆಳಗ್ಗೆ 10ಕ್ಕೆ ಮೃಗಾಲಯ ತೆರೆಯಲಿದ್ದು, ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಮೃಗಾಲಯ ಪುನರಾರಂಭವಾಗಲಿದೆ. ಮಂಗಳವಾರದಿಂದ ಎಂದಿನಂತೆ ಬೆಳಗ್ಗೆ 8.30ಕ್ಕೆ ಆರಂಭವಾಗಲಿದೆ.

    ಬಂಡೀಪುರ ಸಫಾರಿ ಆರಂಭ
    ಕಳೆದ 85 ದಿನಗಳಿಂದ ಬಂದ್ ಆಗಿದ್ದ ಬಂಡೀಪುರ ಸಫಾರಿ ಸಹ ಪುರಾರಂಭವಾಗುತ್ತಿದೆ. ಜೂನ್ 8ರಿಂದ ಬಂಡೀಪುರ ಸಫಾರಿ ಆರಂಭವಾಗುವ ಸಾಧ್ಯತೆ ಇದೆ. ಈ ಮೂಲಕ ಪ್ರವಾಸಿಗರಿಗೆ ವನ್ಯಜೀವಿ ದರ್ಶನ ಭಾಗ್ಯ ಸಿಗಲಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‍ಟಿಸಿಎ) ಹಾಗೂ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಡ್ಡಾಯವಾಗಿದ್ದು, ಶೇ.50ರಷ್ಟು ಸೀಟುಗಳ ಭರ್ತಿಗೆ ಅನುಮತಿ ನೀಡಲಾಗಿದೆ. ಎಂಟು ಬಸ್, ಐದು ಜಿಪ್ಸಿ ವಾಹನ ಸಂಚಾರಕ್ಕೆ ಅನುಮತಿ ದೊರೆತಿದ್ದು, ಬಸ್ ಟಿಕೆಟ್ ದರ ಒಬ್ಬರಿಗೆ 350 ರೂ., ಒಂದು ಜಿಪ್ಸಿ ವಾಹನಕ್ಕೆ 3,500 ರೂ. ನಿಗದಿ ಮಾಡಲಾಗಿದೆ. ಲಾಕ್‍ಡೌನ್ ನಿಂದಾಗಿ ಸಫಾರಿ ಬಂದ್ ಆಗಿದ್ದಕ್ಕೆ ಮೂರುವರೆ ಕೋಟಿ ರೂ. ನಷ್ಟ ಸಂಭವಿಸಿದೆಯಂತೆ. ಇದೀಗ ಪುರಾರಂಭವಾಗುತ್ತಿದ್ದು, ಪ್ರವಾಸಿಗರು ಪ್ರಾಣಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

  • ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅನಧಿಕೃತ ಕಟ್ಟಡಗಳ ತೆರವಿಗೆ ಡಿಸಿ ನೋಟಿಸ್

    ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅನಧಿಕೃತ ಕಟ್ಟಡಗಳ ತೆರವಿಗೆ ಡಿಸಿ ನೋಟಿಸ್

    ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು, ಈಗಾಗಲೇ ಕಟ್ಟಡ ನಿರ್ಮಾಣ ಮಾಡಿರುವವರಿಗೆ ಕಟ್ಟಡ ತೆರವುಗೊಳಿಸಲು ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ.

    ಈಗಾಗಲೇ ಅನಧಿಕೃತ ಕಟ್ಟದ ನಿರ್ಮಾಣ ಮಾಡಿರುವ 8 ಮಂದಿಗೆ ನೋಟಿಸ್ ಜಾರಿ ಮಾಡಿದ್ದು, ಇನ್ನು ಉಳಿದ 7 ಅಕ್ರಮ ಕಟ್ಟಡ ಸಂಬಂಧ ಕ್ರಮಕ್ಕೆ ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಕೇಂದ್ರ ಸರ್ಕಾರ 2012ರ ಅಕ್ಟೋಬರ್ 4ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಪ್ರಕಾರ ಪ್ರಸ್ತುತ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರಡು ಅಧಿಸೂಚನೆ 2010ರ ಅಗಸ್ಟ್ 31ರ ಬಳಿಕ ಕಟ್ಟಡ ನಿರ್ಮಾಣ ಮಾಡಿರುವ 3 ಪ್ರಕರಣಗಳಲ್ಲಿ ಅನ್ಯಕ್ರಾಂತವಾಗಿರುವ ಆದೇಶವನ್ನು ರದ್ದುಪಡಿಸುವ ಕ್ರಮಕ್ಕೆ ಜಿಲ್ಲಾಧಿಕಾರಿಯವರು ಮುಂದಾಗಿದ್ದಾರೆ.

    ಪ್ರವಾಸೋದ್ಯಮ ಇಲಾಖೆಯವರು ಅನುಮತಿಸಿರುವ ಯಾವುದೇ ಅನ್ಯಕ್ರಾಂತವಾಗದೇ ನಿರ್ಮಿಸಿರುವ 3 ಹೋಂ ಸ್ಟೇ ಕಟ್ಟಡಗಳಿಗೆ ನೀಡಿರುವ ಅನುಮತಿಯನ್ನು ಹಿಂಪಡೆಯುವ ಆದೇಶಕ್ಕೆ ಜಿಲ್ಲಾಧಿಕಾರಿಯವರು ಕ್ರಮ ತೆಗೆದುಕೊಂಡಿದ್ದಾರೆ. ಅನುಮತಿ ಪಡೆಯದ ಇನ್ನೊಂದು ಹೋಂ ಸ್ಟೇ ನಡೆಸದಂತೆ ಬೀಗಮುದ್ರೆ ಹಾಕಲಾಗಿತ್ತು. ಆದರೂ ಸಹ ಬೀಗಮುದ್ರೆ ಆದೇಶ ಉಲ್ಲಂಘಿಸಿ ಹೋಂ ಸ್ಟೇ ತೆರೆದು ಕಟ್ಟಡ ದುರಸ್ತಿ ಕಾರ್ಯ ಕೈಗೊಂಡಿದ್ದ ಸದರಿ ಮಾಲೀಕರ ವಿರುದ್ಧ ಕ್ರಮಿನಲ್ ಮೊಕದ್ದಮೆ ಹೂಡಲು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.

    ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಅಧಿಸೂಚನೆ ಹೊರಡಿಸಿದ್ದು, ಇದರ ಅನುಸಾರ ಬಂಡೀಪುರ ಕಾಡಂಚಿನ ಒಟ್ಟು 123 ಗ್ರಾಮಗಳು ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಗೆ ಸೇರಿದೆ. ಈ ಗ್ರಾಮಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಚಟುವಟಿಕೆ ಕೈಗೊಳ್ಳಲು ಅವಕಾಶವಿರುವುದಿಲ್ಲ. ಆದಾಗಿಯೂ ಅಧಿಸೂಚನೆ ಉಲ್ಲಂಘಿಸಿ ಬೃಹತ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪೂರ್ವಾನುಮತಿ ಪಡೆಯದೇ ನಿರ್ಮಿಸಲಾಗಿರುವ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ವಹಿಸುವಂತೆ ಬಂಡೀಪುರ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ವರದಿ ನೀಡುವಂತೆ ತಹಶೀಲ್ದಾರರಿಗೆ ಪತ್ರ ಬರೆದಿದ್ದರು. ತಹಶೀಲ್ದಾರರು ನೀಡಿದ ವರದಿ ಅನ್ವಯ ಜಿಲ್ಲಾಧಿಕಾರಿಯವರು ಕ್ರಮಕ್ಕೆ ಮುಂದಾಗಿದ್ದಾರೆ.

  • ಕೊರೊನಾ ಎಫೆಕ್ಟ್- ಬಂಡೀಪುರ ಸಫಾರಿ, ಪಣಂಬೂರು ಬೀಚ್ ಬಂದ್

    ಕೊರೊನಾ ಎಫೆಕ್ಟ್- ಬಂಡೀಪುರ ಸಫಾರಿ, ಪಣಂಬೂರು ಬೀಚ್ ಬಂದ್

    ಚಾಮರಾಜನಗರ/ಮಂಗಳೂರು: ರಾಜ್ಯದ ಪ್ರಮುಖ ಹುಲಿ ಸಂರಕ್ಷಿತಾರಣ್ಯ ಪ್ರವಾಸಿಗರಿಲ್ಲದೆ ಬಣಗುಡುತ್ತಿರುವ ದೃಶ್ಯ ಸಾಮಾನ್ಯವಾಗಿದ್ದು, ಇದೀಗ ಪ್ರವಾಸಿಗರಿಗೆ ನಿಷೇಧ ಹೇರಿ ಆದೇಶ ಹೊರಡಿಸಲಾಗಿದೆ. ಇತ್ತ ಮಂಗಳೂರಿನ ಪಣಂಬೂರು ಬೀಚ್ ಸಹ ಜನರಿಲ್ಲದೆ ಬಿಕೋ ಎನ್ನುತ್ತಿದೆ.

    ಕೊರೊನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಬಂಡೀಪುರಕ್ಕೆ ಆಗಮಿಸುವ ಪ್ರವಾಸಿಗರಿಗೆ ನಿಷೇಧ ಹೇರಿ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ. ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿ ಜನರಿಲ್ಲದೇ ಖಾಲಿ ಹೊಡೆಯುತ್ತಿದೆ.

    ಬಂಡೀಪುರವಷ್ಟೇ ಅಲ್ಲದೆ ಕೆ.ಗುಡಿ ಸಫಾರಿ ಕೂಡ ಬಂದ್ ಮಾಡಲಾಗಿದೆ. ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮೇಲುಕಾಮನಹಳ್ಳಿ ಬಳಿಯ ಸಫಾರಿ ಕೇಂದ್ರ ಬಂದ್ ಮಾಡಲಾಗಿದೆ. ಬಂಡೀಪುರ ವ್ಯಾಪ್ತಿಯಲ್ಲಿ ಬರುವ ರೆಸಾರ್ಟ್, ಹೋಟೆಲ್‍ಗಳು ಕೂಡ ಬಂದ್ ಆಗಿದ್ದು ದೇಶ, ವಿದೇಶದಿಂದ ಬರುವ ಪ್ರವಾಸಿಗರ ಮೇಲೆ ಹದ್ದಿನ ಕಣ್ಣೀಡಲಾಗಿದೆ.

    ಬೀಕೋ ಎನ್ನುತ್ತಿವೆ ಬೀಚ್‍ಗಳು

    ರಾಜ್ಯದ ಕರಾವಳಿಯ ಪ್ರಮುಖ ಪ್ರವಾಸಿ ಕೇಂದ್ರಗಳಿಗೂ ಕೊರೊನಾ ಭೀತಿ ಎದುರಾಗಿದ್ದು, ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಭಾನುವಾರ ಪ್ರವಾಸಿಗರಿಂದ ತುಂಬಿರುತ್ತಿದ್ದ ಬೀಚ್ ಇಂದು ಬಿಕೋ ಎನ್ನುತ್ತಿದೆ. ಬೀಚ್ ಪಕ್ಕದ ಹೋಟೆಲ್ ಗಳೂ ಪ್ರವಾಸಿಗರಿಲ್ಲದೆ ಖಾಲಿ ಹೊಡೆಯುತ್ತಿವೆ. ಪಣಂಬೂರು ಬೀಚ್ ಮಾತ್ರವಲ್ಲದೆ ಕಡಲ ತೀರದ ಸೋಮೇಶ್ವರ ಬೀಚ್, ಉಳ್ಳಾಲ ಬೀಚ್, ತಣ್ಣೀರು ಬಾವಿ ಬೀಚ್, ಸುರತ್ಕಲ್ ಬೀಚ್, ಸಸಿಹಿತ್ಲು ಬೀಚ್ ಸೇರಿದಂತೆ ಎಲ್ಲ ಬೀಚ್‍ಗಳು ಪ್ರವಾಸಿಗರಿಲ್ಲದೆ ಬೀಕೋ ಎನ್ನುತ್ತಿವೆ.

  • ಬಂಡೀಪುರ ಅರಣ್ಯದಲ್ಲಿ ಹುಲಿ ಘರ್ಜನೆಯ ಮಧ್ಯೆ ತಲೈವಾ ನಗು

    ಬಂಡೀಪುರ ಅರಣ್ಯದಲ್ಲಿ ಹುಲಿ ಘರ್ಜನೆಯ ಮಧ್ಯೆ ತಲೈವಾ ನಗು

    ಚಾಮರಾಜನಗರ: ಡಿಸ್ಕವರಿ ಚಾನೆಲ್‍ನಲ್ಲಿ ಪ್ರಸಾರವಾಗುವ ಜನಪ್ರಿಯ ಶೋ ‘ಮ್ಯಾನ್ ವರ್ಸಸ್ ವೈಲ್ಡ್’ನಲ್ಲಿ ಬಂಡೀಪುರದಲ್ಲಿ ಚಿತ್ರೀಕರಣಗೊಂಡ ಸೂಪರ್ ಸ್ಟಾರ್ ರಜನಿಕಾಂತ್‍ರ ವಿಶೇಷ ಸಂಚಿಕೆಯ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ನಲ್ಲಿ ಅರಣ್ಯದಲ್ಲಿ ಹುಲಿ ಘರ್ಜನೆಯ ನಡುವೆ ತಲೈವಾರ ನಗು ಕಂಡು ಅಭಿಮಾನಿಗಳು ಖುಷ್ ಆಗಿದ್ದಾರೆ.

    ರಜನಿಕಾಂತ್ ಅವರು ಬೇರ್ ಗ್ರಿಲ್ಸ್ ಜೊತೆ ಬಂಡೀಪುರದ ಅರಣ್ಯದಲ್ಲಿ ‘ಮ್ಯಾನ್ ವರ್ಸಸ್ ವೈಲ್ಡ್’ನ ವಿಶೇಷ ಸಂಚಿಕೆಯ ಚಿತ್ರೀಕರಣ ನಡೆಯುತ್ತಿದ್ದ ವಿಚಾರವೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಆದರೆ ಈಗ ಮ್ಯಾನ್ ವರ್ಸಸ್ ವೈಲ್ಡ್‌ನ ರಜನಿಕಾಂತ್‍ರ ವಿಶೇಷ ಸಂಚಿಕೆಯ ಟೀಸರ್ ನಲ್ಲಿ ಹುಲಿ ಘರ್ಜನೆ ನಡುವೆ ತಲೈವಾರ ನಗು ಅಭಿಮಾನಿಗಳ ಗಮನ ಸೆಳೆದಿದೆ.

    ಈ ವಿಶೇಷ ಸಂಚಿಕೆಯ 40 ಸೆಕೆಂಡ್‍ಗಳ ಟೀಸರ್ ನಲ್ಲಿ ಬುಲೆಟ್ ಏರಿ ಬರುವ ಸಾಹಸಿಗ ಬೇರ್ ಗ್ರಿಲ್ಸ್ ಹಾಗೂ ಹುಲಿ ಘರ್ಜನೆ ಮತ್ತು ರಜಿನಿಯ ನಗುವಿದ್ದು ಸಾಕಷ್ಟು ಕೂತೂಹಲ ಕೆರಳಿಸಿದೆ. ಜೊತೆಗೆ ಮಾರ್ಚ್ 23ರ ರಾತ್ರಿ 8ಕ್ಕೆ ವಿಶೇಷ ಸಂಚಿಕೆ ಪ್ರಸಾರಗೊಳ್ಳಲಿದೆ ಎಂದು ಡಿಸ್ಕವರಿ ಚಾನೆಲ್ ಅಧಿಕೃತ ಟ್ವಿಟರ್ ಅಕೌಂಟ್‍ನಲ್ಲಿ ತಿಳಿಸಲಾಗಿದೆ. ಟೀಸರ್ ನಲ್ಲಿ ರಜಿನಿಯವರ ಮುಖ ತೋರಿಸದೇ ಅವರ ನಗುವಿನ ಶಬ್ಧವನ್ನು ಬಳಸಿಕೊಂಡಿರುವುದು ತಲೈವಾ ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದೆ.

    ಕಾರ್ಯಕ್ರಮದ ನಿರ್ದೇಶಕ ಬೇರ್ ಗ್ರಿಲ್ಸ್ ನೇತೃತ್ವದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರ ಮ್ಯಾನ್ ವರ್ಸಸ್ ವೈಲ್ಡ್‌ನ ವಿಶೇಷ ಸಂಚಿಕೆಯ ಶೂಟಿಂಗ್ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿತ್ತು. ಜನವರಿ 27 ರಿಂದ ಜನವರಿ 29 ರವರೆಗೆ ಅರಣ್ಯ ಇಲಾಖಾಧಿಕಾರಿಗಳ ಸಮಕ್ಷಮದಲ್ಲಿ ಈ ವಿಶೇಷ ಸಂಚಿಕೆಯ ಶೂಟಿಂಗ್ ನಡೆದಿತ್ತು. ಮೂರು ದಿನಗಳ ಕಾಲ ನಡೆದಿದ್ದ ಶೂಟಿಂಗ್‍ಗೆ ಅನುಮತಿ ನೀಡಲು ಅರಣ್ಯ ಇಲಾಖೆಯಿಂದ 17 ಕಂಡೀಷನ್ ವಿಧಿಸಲಾಗಿತ್ತು. ಶಬ್ದಮಾಲಿನ್ಯ, ವಾಯುಮಾಲಿನ್ಯ, ಬೆಂಕಿ ಅನಾಹುತ ನಡೆಯದಂತೆ ನೋಡಿಕೊಳ್ಳುವ 17 ಕಂಡೀಷನ್ ವಿಧಿಸಿ ಅನುಮತಿ ನೀಡಲಾಗಿತ್ತು.

    ಮೂಳೆಹೊಲೆ ಅರಣ್ಯ ವಲಯದಲ್ಲಿ ರಜನಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಗುಡ್ಡದಿಂದ ಹತ್ತಿ ಜಾರುವ ದೃಶ್ಯವೊಂದಿತ್ತು. ಆ ವೇಳೆ ನೆಲಕ್ಕೆ ಕೈ ಊರಿದಾಗ ಲಂಟಾನ ಮುಳ್ಳು ತರಚಿ ರಜನಿ ಗಾಯಮಾಡಿಕೊಂಡಿದ್ದರು. ಚಿತ್ರೀಕರಣದ ವೇಳೆ ಬಂಡೀಪುರ ಕಾಡನ್ನು ಕಂಡು ಫಿದಾ ಆಗಿದ್ದ ತಲೈವಾ, ಈ ರೀತಿಯ ಕಾಡನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ. ಈ ಕುರಿತು ನಾನೊಂದು ಸಂದೇಶವನ್ನು ನೀಡುತ್ತೇನೆ ಎಂದು ಹೇಳಿದ್ದರು.

  • ಬಂಡೀಪುರ ರಾತ್ರಿ ಸಂಚಾರ ನಿಷೇಧ- ಸುಪ್ರೀಂಗೆ ಕೇಂದ್ರದ ಅಫಿಡೆವಿಟ್

    ಬಂಡೀಪುರ ರಾತ್ರಿ ಸಂಚಾರ ನಿಷೇಧ- ಸುಪ್ರೀಂಗೆ ಕೇಂದ್ರದ ಅಫಿಡೆವಿಟ್

    ನವದೆಹಲಿ: ಬಂಡೀಪುರ ಹುಲಿ ರಕ್ಷಿತಾರಣ್ಯವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ಸಂಚಾರ ನಿಷೇಧ ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಅಫಿಡೆವಿಟ್ ಸಲ್ಲಿಕೆ ಮಾಡಿದೆ.

    ಕೇರಳ ಮತ್ತು ಕರ್ನಾಟಕ ನಡುವಿನ ಸಂಚಾರಕ್ಕೆ ಕೇಂದ್ರ ಸರ್ಕಾರ ಅಫಿಡೆಟಿವ್‍ನಲ್ಲಿ ಪರ್ಯಾಯ ರಸ್ತೆ ಮಾರ್ಗ ರಚನೆಯ ಪ್ರಸ್ತಾಪವನ್ನು ಮುಂದಿಟ್ಟಿದೆ. ಕರ್ನಾಟಕ ರಾಜ್ಯ ಹೆದ್ದಾರಿ 89 ಮತ್ತು 90ರ ಮೂಲಕ ಕೇರಳ ತಲುಪಬಹುದಾಗಿದ್ದು, ಎಸ್‍ಎಚ್ 89 ಮಡಿಕೇರಿ, ಗೋಣಿಕೊಪ್ಪ, ಕುಟ್ಟಾ ಮೂಲಕ ಕೇರಳ ತಲುಪಬಹುದಾಗಿದೆ. ಅಲ್ಲದೇ ಎಸ್‍ಎಚ್ 90 ಹುಣಸೂರು ನಿಂದ ತಲಕಾವೇರಿ ಮಾರ್ಗ ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 211 ಕಿಲೋ ಮೀಟರ್ ಪರ್ಯಾಯ ಮಾರ್ಗ ಸೂಚಿಸಿದೆ. ಇತ್ತ ಕೇರಳ ಭಾಗ ಪ್ರವೇಶಕ್ಕೆ ಜಿಲ್ಲಾ ಹೆದ್ದಾರಿ ಬಳಸಿ ವೈಯನಾಡು ತಲುಪಬಹುದಾಗಿದೆ.

    ಬಂಡೀಪುರ ಹುಲಿ ರಕ್ಷಿತಾರಣ್ಯವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ಸಂಚಾರ ನಿಷೇಧ ಮಾಡಲಾಗಿದ್ದು, ಈ ಕ್ರಮವನ್ನು ರದ್ದುಪಡಿಸಬೇಕು ಎಂದು ತಮಿಳುನಾಡು ಸರ್ಕಾರ ಒತ್ತಾಯ ಮಾಡಿತ್ತು. ಅಲ್ಲದೇ ವಯನಾಡು ಸಂಸದ ರಾಹುಲ್ ಗಾಂಧಿ ಅವರು ಕೂಡ ವಯನಾಡಿನಲ್ಲಿ ನಡೆದ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.

    ದೇಶದ 50ಕ್ಕೂ ಹೆಚ್ಚು ಹುಲಿ ರಕ್ಷಿತಾರಣ್ಯ ಪ್ರದೇಶಗಳಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶವಿದೆ. ಆದರೆ ಬಂಡೀಪುರದಲ್ಲಿ ಮಾತ್ರ ರಾತ್ರಿ ಸಂಚಾರ ನಿಷೇಧ ಮಾಡಲಾಗಿದೆ ಎಂದು ಕೇರಳ ಸರ್ಕಾರ ವಾದ ಮುಂದಿಟ್ಟಿತ್ತು. 2009ರಲ್ಲಿ ರಾಜ್ಯ ಸರ್ಕಾರ ಬಂಡೀಪುರ ಅಭಯಾರಣ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6ರ ವರೆಗೂ ಸಂಚಾರ ನಿಷೇಧ ಮಾಡಿ ಆದೇಶ ನೀಡಿತ್ತು. ಹುಲಿ, ಕಾಡೆಮ್ಮೆ, ಆನೆ ಸೇರಿದಂತೆ ಆನೇಕ ಕಾಡು ಪ್ರಾಣಿಗಳು ರಾತ್ರಿ ವೇಳೆ ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಿದ್ದರಿಂದ ಸರ್ಕಾರ ನಿಷೇಧವನ್ನು ಜಾರಿ ಮಾಡಿತ್ತು. ಬಂಡೀಪುರವನ್ನು ಹಾದುಹೋಗುವ ಹೆದ್ದಾರಿಗೆ ಪರ್ಯಾಯವಾಗಿ ರಾಷ್ಟ್ರೀಯ ಹೆದ್ದಾರಿ 275 ಮತ್ತು ರಾಜ್ಯ ಹೆದ್ದಾರಿ 90 ಅನ್ನು ಸೂಚಿಸಲಾಗಿತ್ತು.

  • ವನ್ಯ ಜೀವಿ ಪ್ರಿಯರ ಆಕ್ರೋಶಕ್ಕೆ ಮಣಿದ ಅರಣ್ಯ ಇಲಾಖೆ – ಶಾರ್ಪ್ ಶೂಟರ್ಸ್ ವಾಪಸ್

    ವನ್ಯ ಜೀವಿ ಪ್ರಿಯರ ಆಕ್ರೋಶಕ್ಕೆ ಮಣಿದ ಅರಣ್ಯ ಇಲಾಖೆ – ಶಾರ್ಪ್ ಶೂಟರ್ಸ್ ವಾಪಸ್

    ಚಾಮರಾಜನಗರ: ವನ್ಯ ಜೀವಿ ಪ್ರಿಯರ ಆಕ್ರೋಶಕ್ಕೆ ಮಣಿದ ಅರಣ್ಯ ಇಲಾಖೆ ಹುಲಿ ಕಾರ್ಯಾಚರಣೆಗೆ ಬಂದಿದ್ದ ಶಾರ್ಪ್ ಶೂಟರ್ಸ್ ಅನ್ನು ವಾಪಸ್ ಕಳುಹಿಸಿದೆ.

    ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲಿಯನ್ನು ಸೇರಿ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದ್ದು, ಹುಲಿ ಶೂಟೌಟ್‍ಗೆ ಎಪಿಸಿಸಿಎಫ್ ಅಧಿಕಾರಿ ಜಗತ್ ರಾಂ ಆದೇಶ ಹೊರಡಿಸಿದ್ದರು. ಈ ಆದೇಶ ಹೊರಬೀಳುತ್ತಿದ್ದಂತೆ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದರು.

    ಈಗ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಮಣಿದಿರುವ ಅರಣ್ಯ ಇಲಾಖೆ, ಶೂಟೌಟ್ ಅನ್ನು ಕೈಬಿಟ್ಟು, ಹುಲಿಯನ್ನು ಸೆರೆಹಿಡಿಯುವ ಕೆಲಸಕ್ಕೆ ಮುಂದಾಗಿದೆ. ಅದ್ದರಿಂದ ಹುಲಿ ಶೂಟೌಟ್ ಗೆ ಬಂದಿದ್ದ ಹೈದರಾಬಾದ್‍ನ ಶಾರ್ಪ್ ಶೂಟರ್ಸ್ ಅಸ್ಗರ್ ಅಲಿ ಮತ್ತು ಶಫತ್ ಅಲಿ ಖಾನ್ ಅವರನ್ನು ವಾಪಸ್ ಕಳುಹಿಸಲಾಗಿದೆ. ಇವರು 2019 ರಲ್ಲಿ ಮಹಾರಾಷ್ಟ್ರದಲ್ಲಿ 15 ಜನರನ್ನ ಬಲಿ ಪಡೆದಿದ್ದ ಅವನಿ ಹುಲಿ ಭೇಟೆಯಾಡಿದ್ದರು.

    ಹುಲಿಯನ್ನು ಶೂಟ್ ಮಾಡಬಾರದು. ಬದಲಿಗೆ ಅದನ್ನು ಸೆರೆಹಿಡಿಯಬೇಕು ಎಂದು ಪ್ರಾಣಿ ಪ್ರಿಯರು ಆಗ್ರಹ ಮಾಡಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಕೂಡ ಚರ್ಚೆಯಾಗಿತ್ತು. ಇದರಿಂದ ಎಚ್ಚೆತ್ತಾ ಬೆಂಗಳೂರು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಹುಲಿಯನ್ನು ಶೂಟ್ ಮಾಡದೇ ಸೆರೆಹಿಡಿಯುವಂತೆ ಸೂಚನೆ ನೀಡಿದ್ದಾರೆ.

    ಹುಲಿ ಸೆರೆಗೆ ಎರಡನೇ ದಿನವು ಕಾರ್ಯಾಚರಣೆ ಮುಂದುವರಿದಿದ್ದು, ಹುಲಿಯ ಚಲನವಲನ ಪತ್ತೆಗೆ ಬಂಡೀಪುರ, ಕೆಬ್ಬೇಪುರ, ಮಕ್ಕಳಮಲ್ಲಪ್ಪ ದೇವಸ್ಥಾನದ ಸುತ್ತಮುತ್ತ ಅರಣ್ಯದಲ್ಲಿ 224 ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಇದರ ಜೊತೆಗೆ ಇಂದು ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳಿಸಲು ಅರಣ್ಯ ಇಲಾಖೆ ತೀರ್ಮಾನ ಮಾಡಿದ್ದು, ಅಭಿಮನ್ಯು, ಜಯಪ್ರಕಾಶ್, ಗೋಪಾಲಸ್ವಾಮಿ, ರೋಹಿತ್, ಪಾರ್ಥಸಾರಥಿ, ಗಣೇಶ ಸಾಕಾನೆಗಳೊಂದಿಗೆ ಕಾರ್ಯಾಚರಣೆ ಮಾಡುತ್ತಿದ್ದಾರೆ. ಹುಲಿ ಪತ್ತೆಗೆ ಡ್ರೋನ್ ಕ್ಯಾಮೆರಾವನ್ನು ಬಳಕೆ ಮಾಡಲಾಗುತ್ತಿದೆ.

  • ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ, ರಾಹುಲ್ ಗಾಂಧಿ ಕೇರಳಕ್ಕೆ ಬೆಂಬಲ ಕೊಡಬಾರದು- ವಾಟಾಳ್

    ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ, ರಾಹುಲ್ ಗಾಂಧಿ ಕೇರಳಕ್ಕೆ ಬೆಂಬಲ ಕೊಡಬಾರದು- ವಾಟಾಳ್

    ಚಾಮರಾಜನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಹೇಳಿದ್ದು ಖಂಡನೀಯ. ಯಾವುದೇ ಕಾರಣಕ್ಕೂ ಕೇರಳಕ್ಕೆ ಬೆಂಬಲ ಕೊಡಬಾರದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

    ಕೇರಳದ ಹೋರಾಟವನ್ನು ಖಂಡಿಸಿ ಬಂಡೀಪುರ ಅಭಯಾರಣ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಮಲಗುವ ಮೂಲಕ ಹೋರಾಟ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಹುಲಿ, ಆನೆ, ಚಿರತೆ ಸೇರಿದಂತೆ ವಿವಿಧ ಪ್ರಾಣಿ ಸಂಕುಲಗಳಿವೆ. ನಮ್ಮಲ್ಲಿ ಆನೆ, ಹುಲಿ, ಚಿರತೆಗಳು ಹೆಚ್ಚಿವೆ. ವಾಹನಗಳ ಸಂಚಾರಕ್ಕೆ ಅನುಮತಿ ನೀಡುವುದರಿಂದ ಪ್ರಾಣಿ ಸಂಕುಲ ಅಪಘಾತಕ್ಕೆ ಬಲಿಯಾಗುತ್ತವೆ. ಹೀಗಾಗಿ ಯಾವುದೇ ಕಾರಣಕ್ಕೂ ರಾತ್ರಿ ಸಂಚಾರಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ – ಕೇರಳ ಹೋರಾಟಕ್ಕೆ ರಾಹುಲ್ ಬೆಂಬಲ

    ಪರಿಸ್ಥಿತಿಯನ್ನು ರಾಹುಲ್ ಗಾಂಧಿಯವರು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಹೊಸ ರಸ್ತೆಯೂ ಬೇಡ, ಇದರಿಂದ ವಾಹನಗಳು ಇನ್ನೂ ಹೆಚ್ಚು ಸಂಚರಿಸುತ್ತವೆ. ಮೇಲ್ಸೇತುವೆಯೂ ಬೇಡ, ಇದರಿಂದ ಲೈಟ್ ಬೆಳಕು ಬಿದ್ದು ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಮಾತ್ರವಲ್ಲದೆ, ಅಂಡರ್ ಬ್ರಿಡ್ಜ್ ಮಾಡುತ್ತೇವೆ ಎಂದರೂ ಬೇಡ. ಯಾವುದೇ ಕಾರಣಕ್ಕೂ ರಾತ್ರಿ ನಿಷೇಧವನ್ನು ತೆರವುಗೊಳಿಸಬಾರದು. ರಾಹುಲ್ ಗಾಂಧಿಯವರು ಕೇರಳಕ್ಕೆ ಬೆಂಬಲ ಕೊಡಬಾರದು ಎಂದು ಕಿಡಿಕಾರಿದರು.

    ಇದರಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಬಂಡೀಪುರದ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇದ ತೆರವುಗೊಳಿಸಿದರೆ ವನ್ಯಜೀವಿಗಳಿಗೆ ಕಂಟಕವಾಗಲಿದೆ. ಅಲ್ಲದೆ ಈ ಮಾರ್ಗದಲ್ಲಿ ಸ್ಮಗ್ಲಿಂಗ್‍ನಂತಹ ಅಕ್ರಮ ಚಟುವಟಿಕೆಗಳಿಗೆ ಅವಕಾಶವಾಗಲಿದೆ. ಆದ್ದರಿಂದ ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯಬಾರದು ಹಾಗು ಯಾವುದೇ ಕಾರಣಕ್ಕೂ ನಿಷೇಧ ತೆರವುಗೊಳಿಸಬಾರದು ಎಂದು ಆಗ್ರಹಿಸಿದರು.