Tag: Banana

  • ಕಟಾವು ಮಾಡಿದ್ದ ಬಾಳೆಯ ಬುಡದಲ್ಲಿ ಬಾಳೆಗೊನೆ – ಗ್ರಾಮಸ್ಥರಲ್ಲಿ ಅಚ್ಚರಿ

    ಕಟಾವು ಮಾಡಿದ್ದ ಬಾಳೆಯ ಬುಡದಲ್ಲಿ ಬಾಳೆಗೊನೆ – ಗ್ರಾಮಸ್ಥರಲ್ಲಿ ಅಚ್ಚರಿ

    ಚಿಕ್ಕಬಳ್ಳಾಪುರ: ಬಾಳೆಗೆ ಒಂದೇ ಗೊನೆ. ರಾಗಿಗೆ ಒಂದೇ ತೆನೆ ಫಸಲು. ಆದರೆ ಬುಡದವರೆಗೂ ಕಟಾವು ಮಾಡಲಾಗಿದ್ದ ಬಾಳೆಯ ಬುಡದಲ್ಲಿ ಬಾಳೆಯ ಗೊನೆ ಬೆಳೆದಿದ್ದು, ಗ್ರಾಮಸ್ಥರಲ್ಲಿ ಅಚ್ಚರಿಯನ್ನು ಮೂಡಿಸಿದೆ.

    ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಗ್ರಾಮದ ಅಯ್ಯಪ್ಪನ ಸನ್ನಿಧಾನದ ಆವರಣದಲ್ಲಿ ಬಾಳೆಯ ಬುಡದಲ್ಲಿ ಬಾಳೆಗೊನೆ ಬೆಳೆದಿದೆ. ಹಿಂದೂ-ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳವಾದ ಮುರಗಮಲ್ಲ ಗ್ರಾಮದಲ್ಲಿ ಒಂದೆಡೆ ದರ್ಗಾ ಮತ್ತೊಂದೆಡೆ ಮುಕ್ತೀಶ್ವರನ ದೇವಾಲಯ ಇವೆ. ಇವರೆಡೆರ ನಡುವೆ ಅಯ್ಯಪ್ಪನ ಆಲಯ ಇದೆ. ಅಯ್ಯಪ್ಪನ ಆಲಯದ ಆವರಣದಲ್ಲಿರುವ ಬಾಳೆಯ ಬುಡದಲ್ಲಿ ಈ ವಿಸ್ಮಯ ಜರುಗಿದೆ.

    ಎರಡು ವರ್ಷಗಳ ಹಿಂದೆ ನಿರ್ಮಾಣವಾದ ಆಯ್ಯಪ್ಪ ಆಲಯದಲ್ಲಿ ಇತ್ತೀಚೆಗೆ ಬಲಮುರಿ ಗಣಪತಿ ಹಾಗೂ ಸುಬ್ರಮಣ್ಯೇಶ್ವರನ ನೂತನ ಗುಡಿ ನಿರ್ಮಿಸಲಾಗಿದೆ. ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಈ ಬಾಳೆ ಗಿಡವನ್ನ ಕಟಾವು ಮಾಡಿ ದೇವರ ಅಲಂಕಾರಕ್ಕೆ ಬಳಸಲಾಗಿತ್ತಂತೆ. ಆದರೆ ಈಗ ಕಟಾವು ಮಾಡಲಾಗಿದ್ದ ಒಣಗಿದ ಬಾಳೆಯ ಬುಡದಲ್ಲೇ ಬಾಳೆಗೊನೆ ಬೆಳೆಯುತ್ತಿದ್ದು, ಅಚ್ಚರಿ ಮೂಡಿಸಿದೆ.

    ದೇವಾಲಯದ ಆವರಣದಲ್ಲಿ ಬಾಳೆಯ ಗಿಡಗಳಿದ್ದು, ಅದರಲ್ಲಿ ಇತ್ತೀಚೆಗೆ ದೇವರ ಕಾರ್ಯಕ್ಕೆ ಅಂತ ಬಾಳೆಗಿಡವನ್ನ ಕಟಾವು ಮಾಡಲಾಗಿತ್ತು. ಆದರೆ ಈಗ ಕಟಾವು ಮಾಡಲಾಗಿದ್ದ ಬಾಳೆಯ ಬುಡದಲ್ಲಿ ಹೂವಾಗಿ ಕಾಯಾಗಿ ಬಾಳೆಯ ಗೊನೆ ಬೆಳೆತಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇದೆಲ್ಲಾ ಅಯ್ಯಪ್ಪ ನ ಮಹಿಮೆ ಅಂತ ಇಲ್ಲಿಯ ಜನ ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಸ್ಥಳೀಯರಾದ ನಾಗರಾಜು ಹೇಳಿದ್ದಾರೆ.

  • ಭಾರೀ ಗಾಳಿ-ಮಳೆಗೆ ನೆಲಕಚ್ಚಿದ ಬಾಳೆ ಗಿಡಗಳು-ಸಂಕಷ್ಟದಲ್ಲಿ ರೈತ

    ಭಾರೀ ಗಾಳಿ-ಮಳೆಗೆ ನೆಲಕಚ್ಚಿದ ಬಾಳೆ ಗಿಡಗಳು-ಸಂಕಷ್ಟದಲ್ಲಿ ರೈತ

    ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಮುಂಗಾರು ಮಳೆಯ ಆರ್ಭಟಕ್ಕೆ ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿದೆ.

    ರಮೇಶ್ ಗಂಗನಗೌಡ, ಅಮರಪ್ಪ ಗಂಗನಗೌಡ, ತಿಪ್ಪಣ ಕೆಂಬಾವಿ, ರೇವಣಪ್ಪ ಕೆಂಬಾವಿ ಎಂಬವರ ಹೊಲಗಳಲ್ಲಿ ಮಳೆಯ ಹೊಡೆತಕ್ಕೆ ಒಟ್ಟು ನಾಲ್ಕು ಎಕರೆ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ. ಭಾರೀ ಮಳೆ ಬಂದಿದ್ದರಿಂದ ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ.

    ರೈತರು ಸಾಲ ಮಾಡಿ ಬಾಳೆ ಬೆಳೆದಿದ್ದರು. ಭಾನುವಾರ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಬಾಳೆ ಗಿಡಗಳು ಮುರಿದು ಬಿದ್ದಿವೆ. ಗಿಡಗಳು ಬೀಳದಂತೆ ಮರದ ಕೋಲುಗಳನ್ನು ಕೊಟ್ಟಿದ್ದರು ಗಾಳಿ ಬೀಸಿದ್ದರಿಂದ ಬಿದ್ದಿವೆ. ಬಿದ್ದಿರುವ ಗಿಡಗಳಲ್ಲಿ ಇರುವ ಗೊನೆಗಳ ಕಾಯಿಗಳು ಇನ್ನೂ ಬಲಿತಿಲ್ಲ. ಸುಮಾರು 100 ಗಿಡಗಳು ಮುರಿದು ಬಿದ್ದಿವೆ ಎಂದು ರೈತ ಬಸಪ್ಪ ಹೇಳ್ತಾರೆ.

    ರೈತರು ಲಕ್ಷಾಂತರ ರೂಪಾಯಿ ಬೆಲೆಯ ಬಾಳೆ ನೆಲಕ್ಕಚ್ಚಿದ್ದರಿಂದ ಕಂಗಾಲಾಗಿದ್ದಾರೆ. ಪರಿಹಾರಕ್ಕಾಗಿ ಸರ್ಕಾರಕ್ಕೆ ಮೊರೆ ಇಡುತ್ತಿದ್ದಾರೆ.

  • ಸೊಂಟಕ್ಕೆ ಏಟು ತಗುಲಿ ನರಳುತ್ತಿದ್ದ ಮುಸುವದ ರಕ್ಷಣೆ

    ಸೊಂಟಕ್ಕೆ ಏಟು ತಗುಲಿ ನರಳುತ್ತಿದ್ದ ಮುಸುವದ ರಕ್ಷಣೆ

    ಮಂಗಳೂರು: ಸೊಂಟಕ್ಕೆ ಏಟು ತಗುಲಿ ಮುಸುವ(ಲಂಗೂರ್ ಕೋತಿ)ವೊಂದು ಪರದಾಡಿದ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

    ಬೆಳ್ತಂಗಡಿಯ ಪದ್ಮುಂಜ ಗ್ರಾಮದ ಮಲೆಂಗಲ್ಲು ರಕ್ಷಿತಾರಣ್ಯದಲ್ಲಿದ್ದ ಮುಸುವಗಳು ಆಹಾರ ಅರಸಿಕೊಂಡು ನಾಡಿಗೆ ಬಂದಿವೆ. ಬಾಳೆ, ಪಪ್ಪಾಯಿ ತಿನ್ನಲೆಂದು ಬಂದಿದ್ದಾಗ ಗುಂಡೇಟಿನ ಭಯದಿಂದ ಓಟ ಕಿತ್ತಾಗ ಈ ಮುಸಿಯ ಬಂಡೆ ಕಲ್ಲು ತಾಗಿ ಗಂಭೀರವಾಗಿ ಗಾಯಗೊಂಡು ನರಳಿದೆ.

    ಕೆಲ ಪ್ರಾಣಿಪ್ರಿಯರು ಮುಸುವಗೆ ನೀರು ಕೊಟ್ಟು ಆರೈಕೆ ಮಾಡಿದ್ದಾರೆ. ಜೊತೆಗೆ ಅರಣ್ಯಾಧಿಕಾರಿಗಳ ಮೂಲಕ ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಒಯ್ಯುವ ಕೆಲಸ ಮಾಡಿದ್ದಾರೆ.

  • ಹೆಸರಿಗೆ ಖಾಸಗಿ ಬಸ್ ಚಾಲಕ- ಬೀದಿನಾಯಿ, ಕೋತಿಗಳ ಪಾಲಿನ ಅನ್ನದಾತ ಕೋಲಾರದ ಮನೋಹರ್ ಲಾಲ್

    ಹೆಸರಿಗೆ ಖಾಸಗಿ ಬಸ್ ಚಾಲಕ- ಬೀದಿನಾಯಿ, ಕೋತಿಗಳ ಪಾಲಿನ ಅನ್ನದಾತ ಕೋಲಾರದ ಮನೋಹರ್ ಲಾಲ್

    ಕೋಲಾರ: ಬರದ ನಾಡು ಕೋಲಾರ ಜಿಲ್ಲೆಯಲ್ಲಿ ಹನಿ ನೀರಿಗೂ ಪ್ರಾಣಿ, ಪಕ್ಷಿಗಳು ಪರದಾಡುವ ಪರಿಸ್ಥಿತಿ. ಇಂತದ್ರಲ್ಲಿ ಇಲ್ಲೊಬ್ರು ಪ್ರತಿದಿನ ಮುಂಜಾನೆ ನೂರಾರು ನಾಯಿ-ಕೋತಿಗಳಿಗೆ ಹಾಲು, ಬ್ರೆಡ್, ಬಾಳೆ ಹಣ್ಣುಗಳನ್ನ ನೀಡುತ್ತಾ ಪ್ರಾಣಿಗಳ ಆರೈಕೆಯಲ್ಲಿ ತೊಡಗಿದ್ದಾರೆ.

    ಹೌದು. ಕೋಲಾರದ ಕೆಜಿಎಫ್‍ನ ರಾಬರ್ಟ್ ಸನ್ ಪೇಟೆಯ ನಿವಾಸಿ ಮನೋಹರ್ ಲಾಲ್ ವೃತ್ತಿಯಲ್ಲಿ ಖಾಸಗಿ ಬಸ್ ಚಾಲಕ. ಪ್ರವೃತ್ತಿಯಲ್ಲಿ ಪ್ರಾಣಿಪ್ರೇಮಿಯಾಗಿದ್ದಾರೆ. ಬೀದಿನಾಯಿಗಳಿಗೆ ಹಾಗೂ ಕೋತಿಗಳಿಗೆ ಬ್ರೆಡ್, ಬಾಳೆಹಣ್ಣು ನೀಡುತ್ತಿದ್ದಾರೆ.

    ಶ್ವಾನಗಳು ಅಂದ್ರೆ ಇವ್ರಿಗೆ ಎಲ್ಲಿಲ್ಲದ ಪ್ರೀತಿ. ತಾನು ದುಡಿದ ಅರ್ಧ ಹಣವನ್ನ ಮೂಕ ಜೀವಗಳಿಗೆ ಮೀಸಲಿಡ್ತಾರೆ. ನಿತ್ಯ ಬೆಳಗ್ಗೆ ಆಟೋದಲ್ಲಿ ಹಾಲು, ಬಾಳೆಹಣ್ಣು, ಬ್ರೆಡ್‍ಗಳನ್ನ ತುಂಬಿಸಿಕೊಂಡು ನಗರದ ಮೂಲೆ ಮೂಲೆ ಸುತ್ತಿ ನಾಯಿಗಳಿಗೆ ಪ್ರೀತಿಯಿಂದ ನೀಡ್ತಾರೆ. ಕಳೆದ 30 ವರ್ಷಗಳಿಂದ ಮನೋಹರ್ ಲಾಲ್ ಬೀದಿನಾಯಿಗಳ ರಕ್ಷಕನಾಗಿ ಕೆಲಸ ನಿರ್ವಹಿಸ್ತಿದ್ದಾರೆ. ಕೋತಿಗಳಿಗೂ ಆಹಾರ ನೀಡ್ತಾರೆ.

    ಅಲ್ಲದೇ ನಾಯಿಗಳಿಗೆ ರೋಗ ಬಂದ್ರೂ ಇವರೇ ಟ್ರೀಟ್‍ಮೆಂಟ್ ನೀಡ್ತಾರೆ. ಆಹಾರದ ಜೊತೆ ಔಷಧವನ್ನು ನಾಯಿಗಳಿಗೆ ನೀಡ್ತಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸ್ತಾರೆ. ಮನೋಹರ್ ಲಾಲ್ ಅವರ ಕೊನೆಯ ಮಗ ಕೊನೆಯುಸಿರೆಳೆದ ನಂತರ ನಾಯಿ ಮತ್ತು ಕೋತಿಗಳ ಮೇಲೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದಾರೆ. ಅವುಗಳನ್ನು ಪುಟ್ಟ ಮಕ್ಕಳಂತೆ ನೋಡಿಕೊಳ್ತಿದ್ದಾರೆ.

    ಒಟ್ಟಾರೆ ಮಕ್ಕಳನ್ನೇ ಸಾಕಿ ಸಲಹೋದು ಕಷ್ಟ. ಇಂತಹ ದಿನದಲ್ಲೂ ಬೀದಿನಾಯಿಗಳನ್ನು ಹೆತ್ತಮಕ್ಕಳಂತೆ ಸಾಕ್ತಿರೋ ಮನೋಹರ್ ಲಾಲ್ ಅವರ ಈ ಪ್ರಾಣಿ ಪ್ರೀತಿ ಮೆಚ್ಚುವಂತದ್ದು.

  • ಬಾಳೆಹಣ್ಣು ಸಾಗಿಸುತ್ತಿದ್ದ ಲಾರಿ ಪಲ್ಟಿ- ಚಾಲಕ ಪಾರು

    ಬಾಳೆಹಣ್ಣು ಸಾಗಿಸುತ್ತಿದ್ದ ಲಾರಿ ಪಲ್ಟಿ- ಚಾಲಕ ಪಾರು

    ಬಳ್ಳಾರಿ: ಚಾಲಕನ ನಿಯಂತ್ರಣ ತಪ್ಪಿ ಬಾಳೆಹಣ್ಣು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಇಲ್ಲಿನ ರಾಯಲ್ ವೃತ್ತದ ಬಳಿ ಈ ಘಟನೆ ನಡೆದಿದೆ. ಆಂಧ್ರಪ್ರದೇಶದ ಪುಲಿವೆಂದುಲದಿಂದ ಹೊಸಪೇಟೆ ಮೂಲಕ ಬಿಜಾಪುರ ಜಿಲ್ಲೆ ಇಂಡಿ ಕಡೆ ಹೊರಟಿದ್ದ ಲಾರಿ, ವೇಗವಾಗಿ ಬಂದು ವೃತ್ತದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ.

    ಲಾರಿಯಿಂದ ಡೀಸೆಲ್ ಸೋರಿಕೆಯಾಗುತ್ತಿದ್ದರಿಂದ ಕೆಲ ಕಾಲ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಕ್ರೇನ್ ಮೂಲಕ ಲಾರಿಯನ್ನು ಎತ್ತಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.

    ಘಟನೆ ಬಗ್ಗೆ ಬಳ್ಳಾರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.