Tag: Banana

  • ಬಾಳೆಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಲಾಭಗಳೆನು ಗೊತ್ತಾ?

    ಬಾಳೆಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಲಾಭಗಳೆನು ಗೊತ್ತಾ?

    ಬಾಳೆಹಣ್ಣನ್ನು ಅತ್ಯಂತ ಆರೋಗ್ಯಕರ ಹಣ್ಣೆಂದು ಪರಿಗಣಿಸಲಾಗುತ್ತದೆ. ಈ ಹಣ್ಣನ್ನು ಪ್ರತಿನಿತ್ಯ ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿರುವ ಪೋಷಕಾಂಶಗಳಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಹಾಗಿದ್ದರೆ ಬಾಳೆಹಣ್ಣಿನಿಂದ ನಿಮ್ಮ ಆರೋಗ್ಯಕ್ಕೆ ಸಿಗುವ ಲಾಭಗಳೇನು ಎಂದು ತಿಳಿದುಕೊಳ್ಳಲು ಇಲ್ಲಿದೆ ಕೆಲವು ಮಾಹಿತಿ.

    * ಮುಖ್ಯವಾಗಿ ಬಾಳೆ ಹಣ್ಣಿನಲ್ಲಿರುವ ಅಂಟಿ-ಅಕ್ಸಿಡೆಂಟ್‍ಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ

    * ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದರಲ್ಲಿ ವಿಟಮಿನ್ ಎ, ಬಿ, ಬಿ 6, ಸಿ, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಿಬೋಫ್ಲಾವಿನ್, ನಿಯಾಸಿನ್, ಫೋಲಿಕ್ ಆಸಿಡ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಮಹಿಳೆಯರು ವಿಶೇಷವಾಗಿ ಬಾಳೆಹಣ್ಣನ್ನು ಪ್ರತಿದಿನ ತಿನ್ನಬೇಕು. ಆಗ ಮಾತ್ರ ಅವರು ದೇಹದಲ್ಲಿರುವ ಕಬ್ಬಿಣ ಮತ್ತು ಕ್ಯಾಲ್ಸಿಯಂ ಕೊರತೆಯನ್ನು ಹೋಗಲಾಡಿಸಬಹುದು.

    * ರಕ್ತಹೀನತೆಯು ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಉಂಟಾಗುತ್ತದೆ. ಬಾಳೆಹಣ್ಣಿನಲ್ಲಿ ಕಬ್ಬಿಣಾಂಶ ಅಧಿಕವಾಗಿದೆ. ಪ್ರತಿದಿನ ಬಾಳೆಹಣ್ಣನ್ನು ತಿನ್ನುವುದರಿಂದ ದೇಹದಲ್ಲಿ ರಕ್ತದ ಕೊರತೆ ಕಡಿಮೆಯಾಗುತ್ತದೆ. ಇದು ರಕ್ತಹೀನತೆಗೆ ಕಾರಣವಾಗಬಹುದಾದ ಅಂಶಗಳನ್ನು ದೂರ ಮಾಡುತ್ತದೆ.

    * ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೃದಯಾಘಾತ, ಪಾಶ್ರ್ವವಾಯು, ಹೃದ್ರೋಗದಿಂದ ಬಾಳೆಹಣ್ಣು ಮುಕ್ತಿ ನೀಡುತ್ತದೆ.

    * ಬಾಳೆಹಣ್ಣಿನಲ್ಲಿ ವಿಟಮಿನ್-ಬಿ 6 ಸಮೃದ್ಧವಾಗಿದೆ. ಇದು ಮೆದುಳಿನ ಕಾರ್ಯವನ್ನು ಸುಧಾರಿಸಲು ಕೆಲಸ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಪ್ರೋಟೀನ್ ಮೆದುಳನ್ನು ಸಡಿಲಗೊಳಿಸುತ್ತದೆ. ಬಾಳೆಹಣ್ಣಿನಲ್ಲಿರುವ ಮೆಗ್ನೀಸಿಯಮ್ ನರಮಂಡಲದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

    * ಈ ಹಣ್ಣಿನಲ್ಲಿ ಹೆಚ್ಚಿನ ಫೈಬರ್ ಅಂಶವಿರುವುದರಿಂದ ಬೌಲ್ ಮೂವ್‍ಮೆಂಟ್ ಮತ್ತು ಮಲಬದ್ದತೆ ಸಮಸ್ಯೆಗೆ ಸಹಾಯ ಮಾಡುತ್ತದೆ.

    * ಬಾಳೆಹಣ್ಣನ್ನು ಪ್ರತಿನಿತ್ಯ ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು. ಹಾಗೆಯೇ ಬಿಪಿ ನಿಯಂತ್ರಣದಲ್ಲಿರುತ್ತದೆ.

  • ವಿಜಯಪುರ ಜಿಲ್ಲೆಯಾದ್ಯಂತ ಮಳೆಯ ಆರ್ಭಟ – ಬಾಳೆ ನಾಶಗೊಳಿಸಿದ ರೈತ ಮಹಿಳೆ

    ವಿಜಯಪುರ ಜಿಲ್ಲೆಯಾದ್ಯಂತ ಮಳೆಯ ಆರ್ಭಟ – ಬಾಳೆ ನಾಶಗೊಳಿಸಿದ ರೈತ ಮಹಿಳೆ

    ವಿಜಯಪುರ: ಬಿಸಿಲನಾಡು ವಿಜಯಪುರ ಜಿಲ್ಲೆಯಲ್ಲಿಂದು ವರುಣ ಆರ್ಭಟ ಭಾರೀ ಸದ್ದು ಮಾಡಿದೆ. ನಗರ ಸೇರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದೆ. ಬಿಟ್ಟು ಬಿಡದೇ ಸತತ ಎರಡು ಗಂಟೆಗಳ ಕಾಲ ಮಳೆ ಸುರಿದಿದೆ. ಮುದ್ದೇಬಿಹಾಳ, ಸಿಂದಗಿ, ಇಂಡಿ, ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಮಳೆರಾಯ ಆರ್ಭಟಿಸಿದ್ದಾನೆ.

    ಈಗಾಗಲೇ ಮುಂಗಾರು ಬಿತ್ತನೆಯಲ್ಲಿ ಜಿಲ್ಲೆಯ ರೈತರು ತೊಡಗಿದ್ದಾರೆ. ಈ ತಿಂಗಳ ಪ್ರಾರಂಭದಿಂದಲೇ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗಿದ್ದು, ವರುಣನಿಗೆ ರೈತರು ಬಹುಪರಾಕ್ ಎಂದಿದ್ದಾರೆ. ಇದನ್ನೂ ಓದಿ:ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ವಾರ ಭಾರೀ ಮಳೆ- ರೆಡ್ ಅಲರ್ಟ್ ಘೋಷಣೆ

    ಬಾಳೆ ಬೆಳೆ ನಾಶಮಾಡಿದ ರೂತ ಮಹಿಳೆ
    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಗ್ರಾಮದಲ್ಲಿ ಬಾಳೆ ಮಾರಾಟವಾಗದ್ದಕ್ಕೆ ತಾನೇ ಬೆಳೆದ ಬೆಳೆಯನ್ನು ರೈತ ಮಹಿಳೆ ನಾಶ ಮಾಡಿದ್ದಾರೆ. ಮೂರು ಲಕ್ಷ ಖರ್ಚು ಮಾಡಿ, 5 ಎಕರೆಯಲ್ಲಿ ಬಾಳೆ ಬೆಳೆಯನ್ನ ಸಂಗಮ್ಮ ಹಿರೇಮಠ ಬೆಳೆದಿದ್ದರು. ಆದರೆ ಬಾಳೆ ಫಸಲು ಬಂದರೂ ಮಾರಾಟವಾಗಲಿಲ್ಲ. ಲಾಕ್‍ಡೌನ್ ನಿಂದ ಉತ್ತಮ ಬೆಲೆ ಸಿಗಲೆ ಇಲ್ಲ. ಕೇವಲ 2 ರೂ ಮಾರುಕಟ್ಟೆಯಲ್ಲಿ ಬೆಲೆ ಕೇಳುತ್ತಿದ್ದರು. ನಂತರ ಮಳೆ ಹೊಡೆತಕ್ಕೆ ಬಾಳೆ ಬೆಳೆ ಕೊಳೆತು ಹೋಗಿದೆ. ಹೀಗಾಗಿ ಜೆಸಿಬಿ ಮೂಲಕ ಸಂಗಮ್ಮ ಸಂಪೂರ್ಣ ಬಾಳೆ ಬೆಳೆ ನಾಶ ಮಾಡಿದ್ದಾರೆ. ರಾಜ್ಯ ಸರಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ರೈತ ವರ್ಗ ಒತ್ತಾಯಿಸಿದೆ.

    ಶನಿವಾರ ದಕ್ಷಿಣ ಕನ್ನಡ ಮಂಗಳೂರು ಸೇರಿದಂತೆ ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿಯಲ್ಲೂ ಬಿರುಗಾಳಿ ಸಹಿತ ಭಾರೀ ಮಳೆಯ ಕೆಲ ಗಂಟೆಗಳ ಕಾಲ ಮಳೆ ಅಬ್ಬರಿಸಿದೆ. ಇನ್ನೂ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಮೂರು ದಿನಗಳ ಕಾಲ ಜಿಲ್ಲಾದ್ಯಂತ ಎಲ್ಲೋ ಅಲರ್ಟ್ ಘೋಷಿಸಿಲಾಗಿತ್ತು. ಗಾಳಿಯ ರಭಸ ಹೆಚ್ಚಾಗಿದ್ದರಿಂದ ನದಿ ಹಾಗೂ ಸಮುದ್ರ ತೀರದ ಜನ ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ಕೂಡ ನೀಡಿದೆ. ಇದನ್ನೂ ಓದಿ: ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

  • ಚಾರ್ಮಾಡಿ ಘಾಟಿಯಲ್ಲಿ ಮಂಗಗಳಿಗೆ ಬಾಳೆ ಹಣ್ಣು ನೀಡಿದ ಕಟೀಲ್

    ಚಾರ್ಮಾಡಿ ಘಾಟಿಯಲ್ಲಿ ಮಂಗಗಳಿಗೆ ಬಾಳೆ ಹಣ್ಣು ನೀಡಿದ ಕಟೀಲ್

    ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮಂಗಗಳಿಗೆ ಬಾಳೆಹಣ್ಣನ್ನು ನೀಡಿ ಹಸಿರ ಪರಿಸರದಲ್ಲಿ ಪ್ರಾಣಿಗಳ ಜೊತೆ ಸಮಯ ಕಳೆದಿದ್ದಾರೆ.

    ಲಾಕ್‍ಡೌನ್ ಪರಿಣಾಮ ಕಳೆದ ಎರಡು ತಿಂಗಳಿನಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಯಾವುದೇ ವಾಹನಗಳು ಸಂಚರಿಸುತ್ತಿಲ್ಲ. ವಾಹನ ಸಂಚಾರವಿಲ್ಲದೆ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರು, ಪ್ರಯಾಣಿಕರನ್ನೇ ನಂಬಿಕೊಂಡು ಬದುಕುತ್ತಿದ್ದ ಸಾವಿರಾರು ವಾನರ ಸೈನ್ ಆಹಾರಕ್ಕಾಗಿ ಪರದಾಟ ನಡೆಸುತ್ತಿತ್ತು. ಈ ವಾನರ ಸೈನ್ಯಕ್ಕೆ ನಳೀನ್ ಕುಮಾರ್ ಕಟೀಲ್ ಬಾಳೆಹಣ್ಣನ್ನು ನೀಡಿ ಹಸಿವನ್ನು ನೀಗಿಸಿದ್ದಾರೆ. ಇದನ್ನೂ ಓದಿ :15 ಅಡಿ ಉದ್ದದ ಬೃಹತ್ ಕಾಳಿಂಗ ಸೆರೆ

    ನಳೀನ್ ಕುಮಾರ್ ಕಟೀಲ್ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಮಾರ್ಗವಾಗಿ ಚಾರ್ಮಾಡಿ ಘಾಟ್ ಮೂಲಕ ಮಂಗಳೂರಿಗೆ ಹೋಗುತ್ತಿದ್ದರು. ಈ ವೇಳೆ, ಭಜರಂಗದಳದ ಕಾರ್ಯಕರ್ತರು ಚಾರ್ಮಾಡಿ ಘಾಟಿಯಲ್ಲಿ ಮಂಗಗಳಿಗೆ ಆಹಾರ ನೀಡುತ್ತಿದ್ದರು. ಇದನ್ನು ಗಮನಿಸಿದ ನಳೀನ್ ಕುಮಾರ್ ಕಟೀಲ್ ಗಾಡಿಯಿಂದ ಕೆಳಗೆ ಇಳಿದು ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾರ್ಯಕರ್ತರು ಹಾಗೂ ಮಂಗಗಳ ಜೊತೆ ಸಮಯ ಕಳೆದಿದ್ದಾರೆ.

    ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚರವಿಲ್ಲದೆ ಆಹಾರಕ್ಕಾಗಿ ಪರದಾಡುತ್ತಿದ್ದ ಮಂಗಗಳಿಗೆ ಭಜರಂಗದಳದ ಕಾರ್ಯಕರ್ತರು ನೂರು ಕೆ.ಜಿ. ಬಾಳೆಹಣ್ಣನ್ನು ತಂದು ನೀಡುತ್ತಿದ್ದರು. ಈ ವೇಳೆ ನಳೀನ್ ಕುಮಾರ್ ಕಟೀಲ್ ಕೂಡ ಮಂಗಗಳಿಗೆ ಬಾಳೆಹಣ್ಣನ್ನು ನೀಡುವ ಮೂಲಕ ಮೂಕ ಪ್ರಾಣಿಗಳ ಹೊಟ್ಟೆ ತುಂಬಿಸಿದ್ದಾರೆ.

  • ಬಾಳೆಹಣ್ಣಿನ ಗದ್ದೆಗೆ ಬೆಂಕಿ ಹಚ್ಚಿದ ಅನ್ನದಾತ

    ಬಾಳೆಹಣ್ಣಿನ ಗದ್ದೆಗೆ ಬೆಂಕಿ ಹಚ್ಚಿದ ಅನ್ನದಾತ

    ವಿಜಯಪುರ: ಸೂಕ್ತ ಬೆಲೆ ಸಿಗದ ಕಾರಣ ಅನ್ನದಾತ ತನ್ನ ಬಾಳೆಹಣ್ಣಿನ ಗದ್ದೆಗೆ ತಾನೇ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ.

    ರೈತ ಉಸ್ಮಾನಸಾಬ್ ಬಾಳೆ ಹಣ್ಣಿಗೆ ಸೂಕ್ತ ಬೆಲೆ ಸಿಗದ ಕಾರಣ ಹಾಗೂ ಲಾಕ್‍ಡೌನ್ ಪರಿಣಾಮದಿಂದ ಬಾಳೆ ಹಣ್ಣು ಮಾರಾಟವಾಗದ್ದಕ್ಕೆ ಮನನೊಂದು ಈ ರೀತಿ ಮಾಡಿದ್ದಾರೆ. ತಮ್ಮ ತೋಟದಲ್ಲಿನ 1,200 ಬಾಳೆ ಗಿಡಗಳಿಗೆ ಬೆಂಕಿ ಹಚ್ಚಿ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ಕಷ್ಟ ಪಟ್ಟು ಮೂರು ವರ್ಷಗಳಿಂದ ಮಕ್ಕಳಂತೆ ಜೋಪಾನ ಮಾಡಿದ್ದ ಬೆಳೆದ ಬಾಳೆಗೆ ಬೆಲೆಯಿಲ್ಲದ್ದಕ್ಕೆ ದಾನ ಮಾಡಿದ್ದಾರೆ. ಉಳಿದ ಬಾಳೆಗಿಡಗಳನ್ನೆಲ್ಲ ಸದ್ಯ ಸುಟ್ಟು ಹಾಕಿದ್ದಾರೆ. ಇದನ್ನೂ ಓದಿ: ಕೊರೊನಾಗೆ ಹೆದರಿ ಊರು ಬಿಟ್ಟು ಗುಡಿಸಲಲ್ಲಿ ಕುಟುಂಬ ಜೀವನ

    ಸಂಕಷ್ಟದ ಮೇಲೆ ಸಂಕಷ್ಟ ನೀಡುತ್ತಿರುವ ಕೊರೊನಾ ಮಹಾಮಾರಿಯಿಂದ ರೈತರ ಗೋಳು ಇಮ್ಮಡಿಯಾದಂತಾಗಿದೆ. ರೈತರು ಬಳೆ ಹಾನಿಗೊಳಿಸುತ್ತಿರುವ ನೂರಾರು ಘಟನೆಗಳು ನಡೆಯುತ್ತಿದ್ದು, ರೈತರ ಗೋಳು ಕೇಳೋರು ಯಾರು ಎನ್ನುವಂತಾಗಿದೆ.

  • ಬಾಳೆಗೊನೆ ನೇತು ಹಾಕಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ ವ್ಯಾಪಾರಿ

    ಬಾಳೆಗೊನೆ ನೇತು ಹಾಕಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ ವ್ಯಾಪಾರಿ

    ಚೆನ್ನೈ: ಕೊರೊನಾ ಸಂಕಷ್ಟದಲ್ಲಿ ಊಟವಿಲ್ಲದೆ ಹಸಿವಿನಿಂದ ಇರುವವರಿಗಾಗಿ ತಮಿಳುನಾಡಿನ ತೂತುಕುಡಿ ಕೋವಿಲ್‍ಪಟ್ಟಿಯ ಹಣ್ಣಿನ ವ್ಯಾಪಾರಿಯೊಬ್ಬರು ಹಸಿದವರಿಗಾಗಿ ತನ್ನಿಂದಾದ ಅಳಿಲು ಸೇವೆ ಮಾಡಲು ಹಣ್ಣಿನ ಅಂಗಡಿಯ ಎದುರು ಪ್ರತಿದಿನ ಬಾಳೆಗೊನೆಯನ್ನು ನೇತು ಹಾಕುತ್ತಿದ್ದಾರೆ.

    ತಮ್ಮ ಹಣ್ಣಿನ ಅಂಗಡಿಯ ಎದುರು ಪ್ರತಿದಿನ ಬಾಳೆಗೊನೆಗಳನ್ನು ನೇತು ಹಾಕುವ ವ್ಯಾಪಾರಿ ಮುತ್ತುಪಾಂಡಿ ಅದರ ಜೊತೆಗೆ ಬೋರ್ಡ್ ಒಂದನ್ನೂ ಸಹ ನೇತು ಹಾಕುತ್ತಾರೆ. ನೀವು ಹಸಿದಿದ್ದೆ ಈ ಬಾಳೆಹಣ್ಣನ್ನು ಉಚಿತವಾಗಿ ತೆಗೆದುಕೊಳ್ಳಿ, ಆದರೆ ವೇಸ್ಟ್ ಮಾಡಬೇಡಿ ಎಂದು ಬರೆದಿಡುತ್ತಾರೆ.

     

    ಮುತ್ತುಪಾಂಡಿ ಅವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೇ ವಲಸಿಗರು, ವೃದ್ಧರು, ಫೂಟ್‍ಪಾತ್‍ಗಳಲ್ಲೇ ಬದುಕುವವರು ಈ ಬಾಳೆಹಣ್ಣನ್ನು ತಿಂದು ತಮ್ಮ ಹಸಿವು ನೀಗಿಸಿಕೊಳ್ಳುತ್ತಿದ್ದಾರೆ.

  • ಯುವಕರ ಕೈಯಲ್ಲಿದ್ದ ಬಾಳೆಹಣ್ಣು ಕಿತ್ತು ತಿಂದ ತುಂಟ ಆನೆ

    ಯುವಕರ ಕೈಯಲ್ಲಿದ್ದ ಬಾಳೆಹಣ್ಣು ಕಿತ್ತು ತಿಂದ ತುಂಟ ಆನೆ

    ನೆಗಳು ಹೆಚ್ಚಾಗಿ ಬಾಳೆಹಣ್ಣು ತಿನ್ನಲು ಬಹಳ ಇಷ್ಟ ಪಡುತ್ತದೆ ಎಂಬ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಆನೆಗಳಂತಹ ಅನೇಕ ಪ್ರಾಣಿಗಳು ತಾವು ಇಷ್ಟು ಪಡುವಂತಹ ಹಣ್ಣುಗಳನ್ನು ಸಂಗ್ರಹಿಸಲು ತಪ್ಪನ್ನು ಮಾಡಿ ಬೇಕಾದರೂ ಪಡೆಯುತ್ತದೆ. ಅವುಗಳು ಯಾವಾಗ ಆಹಾರಕ್ಕಾಗಿ ಹಂಬಲಿಸುತ್ತಿರುತ್ತದೆಯೋ, ಆಹಾರದ ಅಗತ್ಯವಿದ್ದರೆ ಅದನ್ನು ಕದಿಯಲು ಕೂಡ ಮಂದಾಗುತ್ತದೆ. ಅದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನವನ್ನು ಸಹ ಮಾಡುತ್ತದೆ.

    ಸದ್ಯ ಆನೆಯೊಂದು ಇಬ್ಬರು ಯುವಕರ ಕೈಯಿಂದ ಬಾಳೆ ಹಣ್ಣುಗಳನ್ನು ಕಸಿದುಕೊಂಡು ಅದನ್ನು ಸಂತೋಷದಿಂದ ತಿಂದು ಆನಂದಿಸಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಪಾರ್ಕ್‍ನಲ್ಲಿ ಕುಳಿತು ಕೈಯಲ್ಲಿ ಬಾಳೆಹಣ್ಣು ಹಿಡಿದು ತಿನ್ನಲು ಮುಂದಾಗುತ್ತಾರೆ. ಇಬ್ಬರು ಬಾಳೆ ಹಣ್ಣಿನ ಸಿಪ್ಪೆ ತೆಗೆಯುತ್ತಿದ್ದಂತೆಯೇ ತಕ್ಷಣ ಅವರ ಬಳಿ ಬಂದ ಆನೆ ತನ್ನ ಸೊಂಡಿಲಿನಿಂದ ಬಾಳೆ ಹಣ್ಣು ಕಿತ್ತುಕೊಂಡಿದೆ. ಬಳಿಕ ಮತ್ತೋರ್ವ ವ್ಯಕ್ತಿಯ ಬಳಿ ಆನೆ ಬಂದಾಗ ತಮಾಷೆಗಾಗಿ ಆ ವ್ಯಕ್ತಿ ಬಾಳೆ ಹಣ್ಣನ್ನು ತನ್ನ ಬಾಯಿಯಲ್ಲಿ ಇಟ್ಟುಕೊಳ್ಳುತ್ತಾನೆ. ಆದರೆ ಆನೆ ಅದನ್ನೂ ಬಿಡದೇ ಆತನ ಬಾಯಿಯಿಂದ ಬಾಳೆ ಹಣ್ಣನ್ನು ಕಿತ್ತುಕೊಂಡು ತಿಂದು ಮುಂದೆ ಸಾಗುತ್ತದೆ.

    ಈ ವೀಡಿಯೋ ಎಲ್ಲಿಯದ್ದು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ವೀಡಿಯೋ ವೈರಲ್ ಆಗುತ್ತಿದ್ದು, ಆನೆಯ ತುಂಟತನಕ್ಕೆ ಜನರು ಮಾರುಹೋಗುತ್ತಿದ್ದಾರೆ.

  • ಬಾಳೆ ಮಾರಾಟದ ಹಣಕ್ಕಾಗಿ ಗಲಾಟೆ- ವ್ಯಕ್ತಿ ನೇಣಿಗೆ ಶರಣು

    ಬಾಳೆ ಮಾರಾಟದ ಹಣಕ್ಕಾಗಿ ಗಲಾಟೆ- ವ್ಯಕ್ತಿ ನೇಣಿಗೆ ಶರಣು

    ಚಾಮರಾಜನಗರ: ಬಾಳೆ ಮಾರಾಟ ಮಾಡಿದ್ದ ಹಣದ ಸಂಬಂಧ ಇಬ್ಬರ ನಡುವೆ ಗಲಾಟೆ ನಡೆದಿದ್ದು, ವ್ಯಕ್ತಿ ನೇಣು ಬಿಗಿದುಕೊಂಡಿರುವ ಆಘಾತಕಾರಿ ಘಟನೆ ತಾಲೂಕಿನ ಕೆಲ್ಲಂಬಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಹಾದೇವಪ್ಪ (60) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಗ್ರಾಮದ ಚೇತನ್ ಗೆ ಮಹಾದೇವಪ್ಪ ಬಾಳೆ ಮಾರಾಟ ಮಾಡಿದ್ದರು. ಹಣದ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಪ್ರಕರಣ ಬಳಿಕ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ವೇಳೆ ಪೊಲೀಸ್ ಠಾಣೆಯಲ್ಲಿ ವಿಷದ ಬಾಟಲ್ ಹಿಡಿದು ಮಹಾದೇವಪ್ಪ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ತಡೆದಿದ್ದರು.

    ಇದೆಲ್ಲರ ಬಳಿಕ ಪೊಲೀಸ್ ಠಾಣೆಯಿಂದ ಗ್ರಾಮಕ್ಕೆ ವಾಪಸ್ ಆಗಿದ್ದ ಮಹಾದೇವಪ್ಪ, ಚೇತನ್ ತೋಟದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಮಾಡಿ ನೇತು ಹಾಕಿರುವ ಶಂಕೆ ಇದೆ ಎಂದು ಮೃತನ ಪುತ್ರ ಮೋಹನ್ ಆರೋಪಿಸಿದ್ದಾರೆ. ಈ ಬಗ್ಗೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಕಿಡಿಗೇಡಿಗಳಿಂದ ಬೆಂಕಿ- 5 ಎಕರೆ ಬಾಳೆ ತೋಟ ಸುಟ್ಟು ಭಸ್ಮ

    ಕಿಡಿಗೇಡಿಗಳಿಂದ ಬೆಂಕಿ- 5 ಎಕರೆ ಬಾಳೆ ತೋಟ ಸುಟ್ಟು ಭಸ್ಮ

    ಕೋಲಾರ: ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಸುಮಾರು 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ, ಫಸಲಿಗೆ ಬಂದಿದ್ದ ಬಾಳೆ ತೋಟ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದ ರೈತ ಕೃಷ್ಣಪ್ಪ ಅವರಿಗೆ ಸೇರಿದ 5 ಎಕರೆ ತೋಟದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕಳೆದ ರಾತ್ರಿ ಕಿಡಿಗೇಡಿಗಳು ಪಕ್ಕದ ಜಮೀನಿನಲ್ಲಿರುವ ಹುಲ್ಲಿಗೆ ಬೆಂಕಿ ಹೊತ್ತಿಸಿರುವ ಅನುಮಾನವಿದೆ. ಇದರಿಂದ ಬಾಳೆ ತೋಟಕ್ಕೂ ಬೆಂಕಿ ಆವರಿಸಿದ ಪರಿಣಾಮ 5 ಎಕರೆಯಲ್ಲಿ ಬೆಳೆದಿದ್ದ ಬಾಳೆ ತೋಟ ಬೆಂಕಿಗಾಹುತಿಯಾಗಿದೆ ಎಂದು ಶಂಕಿಸಲಾಗಿದೆ.

    ಸಾಲ ಮಾಡಿ ಬೆಳಿದಿದ್ದ ಬಾಳೆಯನ್ನು ಇನ್ನೇನು ಕಿತ್ತು ಮಾರುಕಟ್ಟೆಗೆ ಮಾರಬೇಕಿತ್ತು, ಈ ಮಧ್ಯೆ ಫಸಲು ಬಂದು ತಮ್ಮ ಕಷ್ಟಗಳೆಲ್ಲಾ ನಿವಾರಣೆಯಾಗುತ್ತೆ ಎಂದು ರೈತ ಕನಸು ಕಂಡಿದ್ದ. ಆದರೆ ಬೆಂಕಿ ಹೊತ್ತಿಕೊಂಡಿದ್ದರಿಂದ ಇದೀಗ ಕಂಗಾಲಾಗಿದ್ದಾರೆ. ತೋಟ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬಾಳೆ ತೋಟ ಮಾತ್ರವಲ್ಲದೆ ಬಾಳೆ ತೋಟದಲ್ಲಿ ಅಳವಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಿಪ್ ಹಾಗೂ ಸ್ಪಿಂಕ್ಲರ್ ಗಳು ಸಹ ಬೆಂಕಿಗಾಹುತಿಯಾಗಿವೆ.

    ವಿಷಯ ತಿಳಿದ ಸ್ಥಳೀಯರು ಹಾಗೂ ಕೃಷ್ಣಪ್ಪ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಆದರೂ ನಿಯಂತ್ರಣಕ್ಕೆ ಬಂದಿಲ್ಲ. ಬೆಂಕಿಯ ಕೆನ್ನಾಲಿಗೆಯಿಂದ ಸುಮಾರು 90 ಟನ್ ಇಳುವರಿ ನಷ್ಟವಾಗಿದೆ. ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

  • ಈ ಸಲ ಕಪ್ ನಮ್ದೆ, ಜೈ ಆರ್​ಸಿಬಿ – ಬಾಳೆಹಣ್ಣಿನ ಮೂಲಕ ಅಭಿಮಾನಿ ಪ್ರಾರ್ಥನೆ

    ಈ ಸಲ ಕಪ್ ನಮ್ದೆ, ಜೈ ಆರ್​ಸಿಬಿ – ಬಾಳೆಹಣ್ಣಿನ ಮೂಲಕ ಅಭಿಮಾನಿ ಪ್ರಾರ್ಥನೆ

    ಚಿತ್ರದುರ್ಗ: ಹಿರಿಯೂರು ತೇರುಮಲ್ಲೇಶ್ವರ ರಥೋತ್ಸವದಲ್ಲಿ ಆರ್​ಸಿಬಿ ಅಭಿಮಾನಿಯೊಬ್ಬ ಬಾಳೆಹಣ್ಣಿನ ಮೇಲೆ ಈ ಬಾರಿ ಕಪ್ ನಮ್ದೆ ಎಂದು ಬರೆಯುವ ಮೂಲಕ ದೇವರಲ್ಲಿ ವಿಭಿನ್ನವಾಗಿ ಪ್ರಾರ್ಥಿಸಿರುವ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಆರ್​ಸಿಬಿ ಜಯ ಸಾಧಿಸುತ್ತದೆ, ಈ ಬಾರಿ ಕಪ್ ನಮ್ಮದಾಗುತ್ತದೆ ಎಂದು ಕಳೆದ 14 ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಆರ್​ಸಿಬಿ ಕೊನೆಯ ಹಂತದವರೆಗೂ ತಲುಪಿ ಸೋಲನ್ನುಭವಿಸುತ್ತಿದೆ. ಹೀಗಾಗಿ ಅಭಿಮಾನಿ ಈ ಬಾರಿ ಆರ್​ಸಿಬಿ ಗೆಲ್ಲಲೆಬೇಕೆಂದು ವಿಭಿನ್ನವಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.

    ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ನಡೆದ ರಥೋತ್ಸವದಲ್ಲಿ ಅಭಿಮಾನಿಯೊಬ್ಬ ಈಸಲ ಕಪ್ ನಮ್ದೆ, ಜೈ ಆರ್​ಸಿಬಿ ಎಂದು ಬಾಳೆಹಣ್ಣಿನ ಮೇಲೆ ಬರೆದು ತೇರಿಗೆ ಎರಡು ಕೈಗಳನ್ನು ಜೋಡಿಸಿ ಬೇಡಿಕೊಂಡು ಬಾಳೆಹಣ್ಣನ್ನು ತೇರಿನ ಮೇಲೆಸೆದು ಪ್ರಾರ್ಥಿಸಿದ್ದಾನೆ.

    ಇದೀಗ ಆರ್​ಸಿಬಿ ಅಭಿಮಾನಿ ಪ್ರಾರ್ಥನೆ ಸಲ್ಲಿಸುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

  • ಡಿವೈಡರ್‌ಗೆ ಡಿಕ್ಕಿ – ಬಾಳೆಹಣ್ಣು ಸಾಗಿಸುತ್ತಿದ್ದ ಬೊಲೆರೋ ಪಲ್ಟಿ

    ಡಿವೈಡರ್‌ಗೆ ಡಿಕ್ಕಿ – ಬಾಳೆಹಣ್ಣು ಸಾಗಿಸುತ್ತಿದ್ದ ಬೊಲೆರೋ ಪಲ್ಟಿ

    ಚಿಕ್ಕಬಳ್ಳಾಪುರ: ಬಾಳೆಹಣ್ಣು ಸಾಗಿಸುತ್ತಿದ್ದ ಬೊಲೆರೋ ಗೂಡ್ಸ್ ವಾಹನದ ಟೈರ್ ಪಂಕ್ಚರ್ ಆದ ಪರಿಣಾಮ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 07 ರ ನಂದಿ ಕ್ರಾಸ್ ಬಳಿ ನಡೆದಿದೆ.

    ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಾಳೆಹಣ್ಣು ತುಂಬಿಕೊಂಡು ಸಾಗುತ್ತಿದ್ದ ಬೊಲೆರೋ ವಾಹನ ಚಲಿಸುತ್ತಿದ್ದಾಗಲೇ ಟೈರ್ ಪಂಕ್ಚರ್ ಆಗಿ ಏಕಾಏಕಿ ಬ್ಲಾಸ್ಟ್ ಆದ ಪರಿಣಾಮ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೊಲೆರೋ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ.

     

    ನಂದಿಗಿರಿಧಾಮ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಚಾಲಕನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ನಂತರ ಪೊಲೀಸರು ಪಲ್ಟಿಯಾದ ವಾಹನ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.