Tag: Banana Planter

  • ಬಾಳೆಹಣ್ಣಿನ ಗದ್ದೆಗೆ ಬೆಂಕಿ ಹಚ್ಚಿದ ಅನ್ನದಾತ

    ಬಾಳೆಹಣ್ಣಿನ ಗದ್ದೆಗೆ ಬೆಂಕಿ ಹಚ್ಚಿದ ಅನ್ನದಾತ

    ವಿಜಯಪುರ: ಸೂಕ್ತ ಬೆಲೆ ಸಿಗದ ಕಾರಣ ಅನ್ನದಾತ ತನ್ನ ಬಾಳೆಹಣ್ಣಿನ ಗದ್ದೆಗೆ ತಾನೇ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ.

    ರೈತ ಉಸ್ಮಾನಸಾಬ್ ಬಾಳೆ ಹಣ್ಣಿಗೆ ಸೂಕ್ತ ಬೆಲೆ ಸಿಗದ ಕಾರಣ ಹಾಗೂ ಲಾಕ್‍ಡೌನ್ ಪರಿಣಾಮದಿಂದ ಬಾಳೆ ಹಣ್ಣು ಮಾರಾಟವಾಗದ್ದಕ್ಕೆ ಮನನೊಂದು ಈ ರೀತಿ ಮಾಡಿದ್ದಾರೆ. ತಮ್ಮ ತೋಟದಲ್ಲಿನ 1,200 ಬಾಳೆ ಗಿಡಗಳಿಗೆ ಬೆಂಕಿ ಹಚ್ಚಿ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ಕಷ್ಟ ಪಟ್ಟು ಮೂರು ವರ್ಷಗಳಿಂದ ಮಕ್ಕಳಂತೆ ಜೋಪಾನ ಮಾಡಿದ್ದ ಬೆಳೆದ ಬಾಳೆಗೆ ಬೆಲೆಯಿಲ್ಲದ್ದಕ್ಕೆ ದಾನ ಮಾಡಿದ್ದಾರೆ. ಉಳಿದ ಬಾಳೆಗಿಡಗಳನ್ನೆಲ್ಲ ಸದ್ಯ ಸುಟ್ಟು ಹಾಕಿದ್ದಾರೆ. ಇದನ್ನೂ ಓದಿ: ಕೊರೊನಾಗೆ ಹೆದರಿ ಊರು ಬಿಟ್ಟು ಗುಡಿಸಲಲ್ಲಿ ಕುಟುಂಬ ಜೀವನ

    ಸಂಕಷ್ಟದ ಮೇಲೆ ಸಂಕಷ್ಟ ನೀಡುತ್ತಿರುವ ಕೊರೊನಾ ಮಹಾಮಾರಿಯಿಂದ ರೈತರ ಗೋಳು ಇಮ್ಮಡಿಯಾದಂತಾಗಿದೆ. ರೈತರು ಬಳೆ ಹಾನಿಗೊಳಿಸುತ್ತಿರುವ ನೂರಾರು ಘಟನೆಗಳು ನಡೆಯುತ್ತಿದ್ದು, ರೈತರ ಗೋಳು ಕೇಳೋರು ಯಾರು ಎನ್ನುವಂತಾಗಿದೆ.

  • ಕಿಡಿಗೇಡಿಗಳಿಂದ ಬೆಂಕಿ- 5 ಎಕರೆ ಬಾಳೆ ತೋಟ ಸುಟ್ಟು ಭಸ್ಮ

    ಕಿಡಿಗೇಡಿಗಳಿಂದ ಬೆಂಕಿ- 5 ಎಕರೆ ಬಾಳೆ ತೋಟ ಸುಟ್ಟು ಭಸ್ಮ

    ಕೋಲಾರ: ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಸುಮಾರು 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ, ಫಸಲಿಗೆ ಬಂದಿದ್ದ ಬಾಳೆ ತೋಟ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದ ರೈತ ಕೃಷ್ಣಪ್ಪ ಅವರಿಗೆ ಸೇರಿದ 5 ಎಕರೆ ತೋಟದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕಳೆದ ರಾತ್ರಿ ಕಿಡಿಗೇಡಿಗಳು ಪಕ್ಕದ ಜಮೀನಿನಲ್ಲಿರುವ ಹುಲ್ಲಿಗೆ ಬೆಂಕಿ ಹೊತ್ತಿಸಿರುವ ಅನುಮಾನವಿದೆ. ಇದರಿಂದ ಬಾಳೆ ತೋಟಕ್ಕೂ ಬೆಂಕಿ ಆವರಿಸಿದ ಪರಿಣಾಮ 5 ಎಕರೆಯಲ್ಲಿ ಬೆಳೆದಿದ್ದ ಬಾಳೆ ತೋಟ ಬೆಂಕಿಗಾಹುತಿಯಾಗಿದೆ ಎಂದು ಶಂಕಿಸಲಾಗಿದೆ.

    ಸಾಲ ಮಾಡಿ ಬೆಳಿದಿದ್ದ ಬಾಳೆಯನ್ನು ಇನ್ನೇನು ಕಿತ್ತು ಮಾರುಕಟ್ಟೆಗೆ ಮಾರಬೇಕಿತ್ತು, ಈ ಮಧ್ಯೆ ಫಸಲು ಬಂದು ತಮ್ಮ ಕಷ್ಟಗಳೆಲ್ಲಾ ನಿವಾರಣೆಯಾಗುತ್ತೆ ಎಂದು ರೈತ ಕನಸು ಕಂಡಿದ್ದ. ಆದರೆ ಬೆಂಕಿ ಹೊತ್ತಿಕೊಂಡಿದ್ದರಿಂದ ಇದೀಗ ಕಂಗಾಲಾಗಿದ್ದಾರೆ. ತೋಟ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬಾಳೆ ತೋಟ ಮಾತ್ರವಲ್ಲದೆ ಬಾಳೆ ತೋಟದಲ್ಲಿ ಅಳವಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಿಪ್ ಹಾಗೂ ಸ್ಪಿಂಕ್ಲರ್ ಗಳು ಸಹ ಬೆಂಕಿಗಾಹುತಿಯಾಗಿವೆ.

    ವಿಷಯ ತಿಳಿದ ಸ್ಥಳೀಯರು ಹಾಗೂ ಕೃಷ್ಣಪ್ಪ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಆದರೂ ನಿಯಂತ್ರಣಕ್ಕೆ ಬಂದಿಲ್ಲ. ಬೆಂಕಿಯ ಕೆನ್ನಾಲಿಗೆಯಿಂದ ಸುಮಾರು 90 ಟನ್ ಇಳುವರಿ ನಷ್ಟವಾಗಿದೆ. ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.