Tag: Ballot Papers

  • ನೀವು ಗೆದ್ದಾಗ ಮಾತ್ರ ಇವಿಎಂ ತಿರುಚಿರಲ್ವಾ? – ಬ್ಯಾಲೆಟ್‌ ಪೇಪರ್‌ ಮತದಾನ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ನೀವು ಗೆದ್ದಾಗ ಮಾತ್ರ ಇವಿಎಂ ತಿರುಚಿರಲ್ವಾ? – ಬ್ಯಾಲೆಟ್‌ ಪೇಪರ್‌ ಮತದಾನ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ನವದೆಹಲಿ: ದೇಶದಲ್ಲಿ ಚುನಾವಣೆಗೆ ಬ್ಯಾಲೆಟ್‌ ಪೇಪರ್‌ ಮತದಾನ ವ್ಯವಸ್ಥೆ ತರುವಂತೆ ಕೋರಿದ್ದ ಪಿಐಎಲ್‌ನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಇಂತಹ ಅದ್ಭುತ ಐಡಿಯಾಗಳು ನಿಮಗೆ ಹೇಗೆ ಬರುತ್ತವೆ ಎಂದು ಅರ್ಜಿದಾರನನ್ನು ಸುಪ್ರೀಂ ತರಾಟೆಗೆ ತೆಗೆದುಕೊಂಡಿದೆ.

    ನೀವು ಚುನಾವಣೆಯಲ್ಲಿ ಗೆದ್ದಾಗ, ಇವಿಎಂಗಳನ್ನು (ವಿದ್ಯುನ್ಮಾನ ಮತಯಂತ್ರ) ತಿರುಚಲಾಗಿರಲ್ಲ. ನೀವು ಚುನಾವಣೆಯಲ್ಲಿ ಸೋತಾಗ ಮಾತ್ರ ಇವಿಎಂಗಳನ್ನು ತಿರುಚಲಾಗಿರುತ್ತೆ ಅಲ್ವಾ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿಬಿ ವರಾಳೆ ಅವರ ಪೀಠ ಟೀಕಿಸಿತು.

    ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಹಣ, ಮದ್ಯ ಅಥವಾ ಇತರೆ ಆಮಿಷ ಒಡ್ಡುವವರು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಕನಿಷ್ಠ ಐದು ವರ್ಷಗಳವರೆಗೆ ಅಭ್ಯರ್ಥಿಗಳನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿದಾರ ಕೆಎ ಪಾಲ್ ಕೋರಿದ್ದರು.

    ಟೆಸ್ಲಾದ ಸಿಇಒ ಮತ್ತು ಸಹ-ಸಂಸ್ಥಾಪಕ ಎಲೋನ್ ಮಸ್ಕ್, ಆಂಧ್ರದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಕೂಡ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಬಹುದು ಎಂದಿದ್ದಾರೆಂದು ಅರ್ಜಿದಾರರು ಉಲ್ಲೇಖಿಸಿದ್ದರು.

    ಚಂದ್ರಬಾಬು ನಾಯ್ಡು ಸೋತಾಗ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಬಹುದು ಎಂದು ಹೇಳಿದ್ದರು. ಈ ಬಾರಿ ಜಗನ್ ಮೋಹನ್ ರೆಡ್ಡಿ ಸೋತರು. ಅದಕ್ಕೆ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಬಹುದು ಎಂದು ಹೇಳಿದ್ದಾರೆಂದು ಕೋರ್ಟ್‌ ತಿಳಿಸಿತು.

  • ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ – ಕಾಯ್ದೆ ತರಲು ಮುಂದಾದ ಮಹಾರಾಷ್ಟ್ರ

    ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ – ಕಾಯ್ದೆ ತರಲು ಮುಂದಾದ ಮಹಾರಾಷ್ಟ್ರ

    ಮುಂಬೈ: ಮಹಾರಾಷ್ಟ್ರ ಸರ್ಕಾರ ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಸಲು ಚಿಂತನೆ ಮಾಡಿದೆ. ಇವಿಎಂ ಜೊತೆಯಲ್ಲೇ ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ಆಯೋಜಿಸಲು ಈಗ ಕಾನೂನು ತರಲು ಮುಂದಾಗಿದೆ.

    ವಿಧಾನಸಭೆ ಸ್ಪೀಕರ್‌ ನಾನಾ ಪಟೋಲೆ ಅವರು ಇವಿಎಂ ಸೇರಿದಂತೆ ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಸಲು ಸಾಧ್ಯವೇ ಪರಿಶೀಲಿಸಿ ಎಂದಿದ್ದಾರೆ. ಅಷ್ಟೇ ಅಲ್ಲದೇ ಈ ಸಂಬಂಧ ಮಸೂದೆ ರಚಿಸುವಂತೆ ಮಹಾ ವಿಕಾಸ್‌ ಆಘಾಡಿ ಸರ್ಕಾರಕ್ಕೆ ಸೂಚಿಸಿದ್ದಾರೆ.

     

    ಒಂದು ವೇಳೆ ಕರಡು ಸಿದ್ಧವಾಗಿದ್ದರೆ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಬಹುದು ಎಂದು ಪಟೋಲೆ ಪ್ರತಿಕ್ರಿಯಿಸಿದ್ದಾರೆ.  ಸಂವಿಧಾನದ ಅನುಚ್ಛೇದ 328ರ ಅಡಿ ರಾಜ್ಯದಲ್ಲಿ ಚುನಾವಣೆಗಳನ್ನು ನಡೆಸಲು ಕಾನೂನು ಸಿದ್ಧಪಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಈ ಸಂಬಂಧ ಹಲವರ ಜೊತೆಗೆ ಈಗಾಗಲೇ ಸಭೆಗಳನ್ನು ನಡೆಸಲಾಗಿದೆ ಎಂದು ಸ್ಪೀಕರ್‌ ನಾನಾ ಪಟೋಲೆ ಸೂಚನೆ ನೀಡಿದ್ದಕ್ಕೆ ಸಮರ್ಥನೆ ನೀಡಿದ್ದಾರೆ.

    ಮಹಾರಾಷ್ಟ್ರದಲ್ಲಿ 2024ಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿಂದಿನಿಂದಲೂ ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿ ಪಕ್ಷಗಳು ಇವಿಎಂನಿಂದ ದುರುಪಯೋಗ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದವು. ಆದರೆ ಕೇಂದ್ರ ಚುನಾವಣಾ ಆಯೋಗ ಈ ಆರೋಪಗಳನ್ನು ತಿರಸ್ಕರಿಸಿತ್ತು.

    ಒಂದು ವೇಳೆ ಕಾಯ್ದೆ ತಂದರೆ ಇದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಡುವೆ ತಿಕ್ಕಾಟ ನಡೆಯುವ ಸಾಧ್ಯತೆಯಿದೆ. ರಾಜ್ಯಪಾಲರು ಸಹಿ ಹಾಕುವುದು ಅನುಮಾನ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಕಾನೂನು ಸಮರ ನಡೆಯುವುದು ನಿಶ್ಚಿತ ಎಂದು ವಿಶ್ಲೇಷಿಸಲಾಗುತ್ತದೆ.