ರಾಜ್‍ಕೋಟ್: ವಿಂಡೀಸ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಬಳಕೆ ಮಾಡಿರುವ ಎಸ್‍ಜಿ ಚೆಂಡಿನ ವಿರುದ್ಧ ಟೀಂ ಇಂಡಿಯಾ ಅನುಭವಿ ಆಟಗಾರ ಆರ್ ಅಶ್ವಿನ್ ಅಸಮಾಧಾನ ಹೊರಹಾಕಿದ್ದು, ಎಸ್‍ಜಿ ಚೆಂಡು ಈ ಹಿಂದೆ ನಾವು ಬಳಕೆ ಮಾಡಿದ ಗುಣಮಟ್ಟದಲ್ಲಿ ಇಲ್ಲ ಎಂದು ನೇರವಾಗಿಯೇ ಆರೋಪಿಸಿದ್ದಾರೆ.
ಜಯಗಳಿಸಿದ ಬಳಿಕ ಮಾತನಾಡಿದ ಅಶ್ವಿನ್, ಪಂದ್ಯಕ್ಕೆ ಬಳಕೆ ಮಾಡಿದ ಎಸ್‍ಜಿ ಚೆಂಡು ಗುಣಮಟ್ಟ ನಿರಾಸೆ ಮೂಡಿಸಿದ್ದು, ಈ ಹಿಂದೆ ಬಳಕೆ ಮಾಡುತ್ತಿದ್ದ ಚೆಂಡು 70-80 ಓವರ್ ಗಳ ಬಳಿಕವೂ ಉತ್ತಮವಾಗಿರುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಕುಕಾಬುರಾ ಹಾಗೂ ಡ್ಯೂಕ್ಸ್ ಚೆಂಡಿನ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ಅಶ್ವಿನ್, ಕುಕಾಬುರಾ ಬಿಳಿ ಬಣ್ಣದ ಚೆಂಡು ಹೆಚ್ಚು ಸ್ವಿಂಗ್ ಆಗುವುದಿಲ್ಲ. ಆದರೆ ಕೆಂಪು ಬಣ್ಣದ ಚೆಂಡು ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.
ಈ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್ ಗಳಿಂದ 6 ವಿಕೆಟ್ ಪಡೆದ ಅಶ್ವಿನ್ ದಕ್ಷಿಣ ಆಫ್ರಿಕಾ ವೇಗಿ ಅಲನ್ ಡೊನಾಲ್ಡ್ (330 ವಿಕೆಟ್) ಅವರನ್ನು ಹಿಂದಿಕ್ಕಿದ್ದಾರೆ. ಅಶ್ವಿನ್ ಮೊದಲ ಇನ್ನಿಂಗ್ಸ್ ನಲ್ಲಿ 37 ರನ್ ನೀಡಿ 4 ವಿಕೆಟ್, 2ನೇ ಇನ್ನಿಂಗ್ಸ್ ನಲ್ಲಿ 71 ರನ್ ನೀಡಿ 2 ಪಡೆಯುವ ಮೂಲಕ ಒಟ್ಟಾರೆ ಟೆಸ್ಟ್ ಪಂದ್ಯಗಳಲ್ಲಿ 333 ವಿಕೆಟ್ ಪಡೆದ ಸಾಧನೆ ಮಾಡಿದರು. ಇದರೊಂದಿಗೆ ವಿಶ್ವ ಟೆಸ್ಟ್ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಅಶ್ವಿನ್ 24ನೇ ಸ್ಥಾನ ಪಡೆದಿದ್ದಾರೆ.

ಅಂದಹಾಗೇ ವಿಶ್ವ ಕ್ರಿಕೆಟ್‍ನಲ್ಲಿ ನಡೆಯುವ ಪಂದ್ಯದಲ್ಲಿ ವಿವಿಧ ದೇಶಗಳಲ್ಲಿ ಆಯಾ ಕಂಪೆನಿಗಳು ತಯಾರಿಸಿದ ಚೆಂಡು ಬಳಕೆ ಮಾಡುತ್ತಾರೆ. ಪ್ರಮುಖವಾಗಿ ಕುಕಾಬುರಾ ಚೆಂಡನ್ನು ಆಸ್ಟ್ರೇಲಿಯಾದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಈ ಚೆಂಡನ್ನು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ ಮತ್ತು ಜಿಂಬಾಂಬ್ವೆ ದೇಶಗಳಲ್ಲಿ ನಡೆಯುವ ಪಂದ್ಯದ ವೇಳೆ ಬಳಕೆ ಮಾಡಲಾಗುತ್ತದೆ.
ಡ್ಯೂಕ್ಸ್ ಚೆಂಡನ್ನು ಇಂಗ್ಲೆಂಡ್‍ನಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಇದನ್ನು ಇಂಗ್ಲೆಂಡ್, ಯುಕೆ ಮತ್ತ ವೆಸ್ಟ್ ಇಂಡೀಸ್ ದೇಶಗಳಲ್ಲಿ ಬಳಕೆ ಮಾಡಲಾಗುತ್ತದೆ. ಉಳಿದಂತೆ ಎಸ್‍ಜಿ ಚೆಂಡನ್ನು ಭಾರತದಲ್ಲಿ ಉತ್ಪಾದನೆ ಮಾಡಿ ಇಲ್ಲಿನ ಪಂದ್ಯಗಳಲ್ಲಿ ಮಾತ್ರ ಬಳಕೆ ಮಾಡುತ್ತಾರೆ.

ಈ ಮೂರು ಕಂಪೆನಿಗಳು ಉತ್ಪಾದನೆ ಮಾಡುವ ಚೆಂಡುಗಳಲ್ಲಿ ಪ್ರಮುಖವಾಗಿ ಚೆಂಡಿನ ಹೊಲಿಗೆ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ. ಆಯಾ ದೇಶಗಳ ವಾತಾವರಣಕ್ಕೆ ಅನುಗುಣವಾಗಿ ಚೆಂಡನ್ನು ತಯಾರು ಮಾಡಲಾಗುತ್ತದೆ. ಎಸ್‍ಜಿ ಬಾಲಿನ ಸಮಸ್ಯೆ ಏನೆಂದರೆ ಅದಷ್ಟು ಬೇಗ ಬಾಲ್ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಕುಕಾಬುರಾ ಚೆಂಡು 20 ಓವರ್, ಡ್ಯೂಕ್ಸ್ ಚೆಂಡು 50-55, ಎಸ್‍ಜಿ 10 ಓವರ್ ಗಳ ವರೆಗೂ ಸ್ವಿಂಗ್ ಆಗುವ ಸಾಮಥ್ರ್ಯ ಹೊಂದಿದೆ.
ಸ್ಯಾನ್ಸ್ಪೆರೆಲ್ಸ್ ಗ್ರೀನ್ಸ್ ಲ್ಯಾಂಡ್ ಬಾಲ್ ಗಳನ್ನು ಸಂಕ್ಷಿಪ್ತವಾಗಿ ಎಸ್‍ಜಿ ಬಾಲ್ ಎಂದೇ ಕರೆಯಲಾಗುತ್ತದೆ. ಉತ್ತರ ಪ್ರದೇಶ ಮೀರತ್ ನಲ್ಲಿರುವ ಕಂಪೆನಿ ಈ ಬಾಲ್ ಗಳನ್ನು ತಯಾರಿಸುತ್ತದೆ. ಕುಕಾಬುರಾ ಬಾಲಿಗೆ ಹೋಲಿಸಿದರೆ ಭಾರತದಲ್ಲಿ ಒಂದು ಎಸ್‍ಜಿ ಬಾಲ್ ಬೆಲೆ ಕಡಿಮೆಯಿದೆ. ಒಂದು ಕುಕಾಬುರಾ ಚೆಂಡಿನ ಬೆಲೆ 2,299 ರೂ. ಇದ್ದರೆ ಎಸ್‍ಜಿ ಬಾಲಿನ ಬೆಲೆ 1,464 ರೂ. ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv