Tag: Balakot

  • ಬಾಲಾಕೋಟ್‌ ದಾಳಿಯ ನಂತರ ಶಕ್ತಿಶಾಲಿಯಾದ ಭಾರತ! – ಬತ್ತಳಿಕೆಗೆ ಏನೇನು ಸೇರಿದೆ?

    ಬಾಲಾಕೋಟ್‌ ದಾಳಿಯ ನಂತರ ಶಕ್ತಿಶಾಲಿಯಾದ ಭಾರತ! – ಬತ್ತಳಿಕೆಗೆ ಏನೇನು ಸೇರಿದೆ?

    ನವದೆಹಲಿ: ನಮ್ಮ ಮೇಲೆ ಭಾರತ (India) ಯುದ್ಧ ಸಾರಲಿದೆ ಎಂದು ಪಾಕ್‌ (Pakistan) ಹೇಳುತ್ತಾ ಬರುತ್ತಿದೆ. ಆದರೆ ಭಾರತ ಇಲ್ಲಿಯವರೆಗೆ ಯುದ್ಧದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಭಾರತ ಬಾಲಾಕೋಟ್‌ ಮೇಲಿನ ಏರ್‌ ಸ್ಟ್ರೈಕ್‌ (Balakot Air Strike) ಮಾಡಿದ ಬಳಿಕ ತನ್ನ ಬತ್ತಳಿಕೆಗೆ ಹಲವಾರು ಶಸ್ತ್ರಾಸ್ತ್ರಗಳನ್ನು ಸೇರ್ಪಡೆ ಮಾಡುವ ಮೂಲಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದೆ.

    ಹಾಗೇ ನೋಡಿದರೆ ಬಾಲಾಕೋಟ್‌ ಏರ್‌ಸ್ಟ್ರೈಕ್‌ ನಡೆಸಿದ ನಂತರ ಭಾರತದ ಮೂರು ಪಡೆಗಳು ಮತ್ತಷ್ಟು ಬಲಶಾಲಿಯಾಗಿದೆ. ಹೀಗಾಗಿ 2019 ರಿಂದ ಏನೇನು ಬದಲಾವಣೆಯಾಗಿದೆ? ಈ ಎಲ್ಲಾ ವಿವರಗಳನ್ನು ಇಲ್ಲಿ ನೀಡಲಾಗಿದೆ. ಇದನ್ನೂ ಓದಿ: ದೀರ್ಘ ರಜೆ ಕೊಡಲ್ಲ – ಶಸ್ತ್ರಾಸ್ತ್ರ ಕಾರ್ಖಾನೆ ಉದ್ಯೋಗಿಗಳಿಗೆ ಸೂಚನೆ

    ಭಾರತದ ಒಳಗಡೆಯಿಂದಲೇ ದಾಳಿ:
    2019 – ಬಾಲಾಕೋಟ್‌ ಮೇಲಿನ ಏರ್‌ ಸ್ಟ್ರೈಕ್‌ ವೇಳೆ ಮಿರಾಜ್‌ ವಿಮಾನಗಳು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ನೆಲೆಗಳ ಮೇಲೆ ಇಸ್ರೇಲ್‌ ನಿರ್ಮಿತ SPICE ಬಾಂಬ್‌ ಹಾಕಿತ್ತು. ಈ ರೀತಿಯ ಕಾರ್ಯಾಚರಣೆಯ ಸಂದರ್ಭದಲ್ಲಿ ಶತ್ರು ರಾಷ್ಟ್ರಗಳು ವಿಮಾನದ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚು. ಅಭಿನಂದನ್‌ ವರ್ಧಮಾನ್‌ ಅವರಂತೆ ಪೈಲಟ್‌ಗಳನ್ನು ಸೆರೆ ಹಿಡಿಯವ ಅಪಾಯದ ಸಾಧ್ಯತೆಯಿದೆ.

    2025 – 300 ಕಿ.ಮೀ ದೂರದಲ್ಲಿ ಟಾರ್ಗೆಟ್‌ ಧ್ವಂಸ ಮಾಡಬಲ್ಲ SCALP ಕ್ಷಿಪಣಿಯನ್ನು ಭಾರತ ಹೊಂದಿದೆ. ಭಾರತದ ಒಳಗಡೆಯೇ ರಫೇಲ್‌ ಯುದ್ಧ ವಿಮಾನದಲ್ಲಿ ಕ್ಷಿಪಣಿ ಹಾರಿಸಿ ಶತ್ರುಗಳ ನೆಲೆಗಳನ್ನು ಧ್ವಂಸ ಮಾಡಬಹುದು. ಗಡಿ ದಾಟದೇ ಬ್ರಹ್ಮೋಸ್‌ ಕ್ಷಿಪಣಿಯ ಮೂಲಕ ಶತ್ರು ದೇಶದ ವಾಯುನೆಲೆಯನ್ನೇ ಹಾಳು ಮಾಡಬಹುದು.  ಇದನ್ನೂ ಓದಿ: ಯುದ್ಧ ನಡೆದರೆ ಇಂಗ್ಲೆಂಡ್‌ಗೆ ಪಲಾಯನ – ಪಾಕ್‌ ಸಂಸದ

    ಡ್ರೋನ್‌ ಶಕ್ತಿ
    2019 – ಗಡಿ ನಿಯಂತ್ರಣ ರೇಖೆಯ ಬಳಿಯ ಶತ್ರುಗಳ ಪೋಸ್ಟ್‌ಗಳನ್ನು ಗುರಿಯಾಗಿಸಿ ಸೈನಿಕರು ಫಿರಂಗಿಯಿಂದ ಮಾತ್ರ ದಾಳಿ ನಡೆಸಬಹುದಾಗಿತ್ತು.

    2020 – ಭಾರತ ಈಗ ಸ್ವದೇಶಿ ALS-50 ರೆಕ್ಕೆಯನ್ನು ಹೊಂದಿರುವ ಡ್ರೋನ್‌ ಅಭಿವೃದ್ಧಿ ಪಡಿಸಿದೆ. ಈ ಡ್ರೋನ್‌ ಮೂಲಕ 50 ಕಿ.ಮೀ ದೂರದಲ್ಲಿರುವ ಶತ್ರುವಿನ ನೆಲೆಯನ್ನು ಟಾರ್ಗೆಟ್‌ ಮಾಡಬಹುದಾಗಿದೆ.

    ಗಡಿಗಳ ಬಳಿ ತ್ವರಿತ, ನಿಖರ ಮತ್ತು ಕಡಿಮೆ-ವೆಚ್ಚದ ಯುದ್ಧತಂತ್ರದ ಕಾರ್ಯಾಚರಣೆಗಳಿಗಾಗಿ ನಾಗಾಸ್ತ್ರದಂತ ಸೂಸೈಡ್‌ ಡ್ರೋನ್‌ ಮತ್ತು ಇತರ ಡ್ರೋನ್‌ಗಳನ್ನು ಭಾರತ ಖರೀದಿಸಿದೆ. ಜಿಪಿಎಸ್‌ ಆಧಾರಿತ ನಾಗಾಸ್ತ್ರ 30 ಕಿ.ಮೀ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

    ನೆಲದಿಂದಲೇ ಉರುಳಿಸಬಹುದು
    2019 – ಶತ್ರು ದೇಶದ ಯುದ್ಧ ವಿಮಾನಗಳು ಭಾರತದ ಗಡಿಯನ್ನು ದಾಟಿ ಬಂದರೆ ನಾವು ಯುದ್ಧ ವಿಮಾನವನ್ನು (ಎರಡು ಯುದ್ಧ ವಿಮಾನಗಳ ಕಾದಾಟಕ್ಕೆ ಡಾಗ್‌ ಫೈಟ್‌ ಎಂದು ಕರೆಯಲಾಗುತ್ತದೆ) ಹಾರಿಸಿ ಹಿಮ್ಮೆಟಿಸಬೇಕಿತ್ತು. ಬಾಲಾಕೋಟ್‌ ಏರ್‌ಸ್ಟ್ರೈಕ್‌ ಮಾಡಿದ ಬಳಿಕ ಪಾಕ್‌ ಯುದ್ಧ ವಿಮಾನಗಳು ಭಾರತದ ಮೇಲೆ ದಾಳಿ ನಡೆಸಲು ಬಂದಿತ್ತು. ಈ ಸಂದರ್ಭದಲ್ಲಿ ಮಿಗ್‌, ಸುಕೋಯ್‌ ವಿಮಾನಗಳನ್ನು ಹಾರಿಸಿ ಭಾರತ ತಡೆದಿತ್ತು. ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತವಾಗಿರುವ ಮಿಗ್‌ ವಿಮಾನದ ಮೂಲಕವೇ ಅಭಿನಂದನ್‌ AMRAAM ಕ್ಷಿಪಣಿ ಸಿಡಿಸಿ ಎಫ್‌16 ವಿಮಾನವನ್ನು ಹೊಡೆದು ಹಾಕಿದ್ದರು.

    2025 – ಭಾರತ ಈಗ ರಷ್ಯಾದ ಅತ್ಯಾಧುನಿಕ S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿದೆ. ಶತ್ರು ದೇಶದ ವಿಮಾನ ಅಥವಾ ಯಾವುದೇ ಕ್ಷಿಪಣಿ ಬಂದರೂ ಅದರ ವೇಗವನ್ನು ಗುರುತಿಸಿ ನೆಲದಿಂದಲೇ ಕ್ಷಿಪಣಿ ಹಾರಿಸಿ ಹೊಡೆದು ಹಾಕುತ್ತದೆ. ಈ ಮೂಲಕ ಭಾರತ ಶತ್ರು ದೇಶದ ಮೇಲೆ ದಾಳಿ ಮಾಡುವುದರ ಜೊತೆಗೆ ಶತ್ರು ದೇಶದಿಂದ ಬಂದ ಪ್ರತಿದಾಳಿಯನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಪಡೆದಿರುವುದು ವಿಶೇಷ.

  • ಏರ್‌ಸ್ಟ್ರೈಕ್‌ನಲ್ಲಿ 300 ಉಗ್ರರು ಹತ – ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ

    ಏರ್‌ಸ್ಟ್ರೈಕ್‌ನಲ್ಲಿ 300 ಉಗ್ರರು ಹತ – ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ

    ನವದೆಹಲಿ: ಇದೇ ಮೊದಲ ಬಾರಿಗೆ ಭಾರತ ಬಾಲಾಕೋಟ್‌ ಮೇಲೆ ನಡೆಸಿದ ಏರ್‌ಸ್ಟ್ರೈಕ್‌ನಲ್ಲಿ ಸುಮಾರು 300 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂಬುದನ್ನು ಪಾಕಿಸ್ತಾನ ಬಹಿರಂಗವಾಗಿಯೇ ಒಪ್ಪಿಕೊಂಡಿದೆ.

    ಉರ್ದು ವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ರಾಯಭಾರಿ ಅಘಾ ಹಿಲಾ ಅವರು ಏರ್‌ಸ್ಟ್ರೈಕ್‌ನಲ್ಲಿ 300 ಮಂದಿ ಸಾವನ್ನಪ್ಪಿರುವುದು ನಿಜ ಎಂದು ಹೇಳಿದ್ದಾರೆ.

    ಭಾರತ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ದಾಳಿ ನಡೆಸಿತ್ತು. ಇದರಲ್ಲಿ 300 ಮಂದಿ ಸಾವನ್ನಪ್ಪಿದ್ದರು. ನಾವು ಮಿಲಿಟರಿ ಸಿಬ್ಬಂದಿ ಇರುವ ಅವರ ಹೈಕಮಾಂಡ್​ನ್ನು ಗುರಿಯಾಗಿಸಿದ್ದೆವು. ನಮ್ಮದು ನ್ಯಾಯಯುತ ಗುರಿಯಾಗಿತ್ತು. ನಮ್ಮ ಗುರಿ ಅವರ ಗುರಿಗಿಂತಲೂ ವಿಭಿನ್ನವಾಗಿತ್ತು. ಯಾಕೆಂದರೆ ನಮ್ಮ ಗುರಿ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಸಿಬ್ಬಂದಿ ಆಗಿತ್ತು ಎಂದಿದ್ದಾರೆ.

    ಕಳೆದ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್-ಎನ್(ಪಿಎಂಎಲ್-ಎನ್) ನಾಯಕ ಆಯಾಝ್ ಸಾದಿಖ್ ಸಂಸತ್‌ನಲ್ಲಿ ಮಾಡಿದ ಭಾಷಣದಲ್ಲಿ ಭಾರತದ ದಾಳಿಗೆ ಹೆದರಿ ಪಾಕಿಸ್ತಾನ ಅಭಿನಂದನ್‌ ವರ್ಧಮಾನ್‌ ಅವರನ್ನು ಬಿಡುಗಡೆ ಮಾಡಿತ್ತು ಎಂದು ಹೇಳಿಕೆ ನೀಡಿದ ನಂತರ ಅಘಾ ಹಿಲಾ ಅವರ ಈ ಹೇಳಿಕೆ ಈಗ ಭಾರೀ ಮಹತ್ವ ಪಡೆದಿದೆ.

    ಕಳೆದ ವರ್ಷ 2019ರ ಫೆಬ್ರವರಿಯಲ್ಲಿ ಬಂಧಿತರಾಗಿದ್ದ ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದರೆ ಭಾರತ ಅಂದು ರಾತ್ರಿ 9 ಗಂಟೆಗೆ ದಾಳಿ ನಡೆಸಬಹುದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪರಿಪರಿಯಾಗಿ ಕೇಳಿಕೊಂಡಿದ್ದರು. ಈ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಜ. ಖಮರ್ ಜಾವೇದ್ ಬಜ್ವಾ ಅವರ ಕಾಲು ಭಯದಿಂದ ನಡುಗಿ ಹೋಗಿತ್ತು ಎಂದು ಹೇಳಿಕೆ ನೀಡಿದ್ದರು.

    ಪುಲ್ವಾಮಾದಲ್ಲಿ ಆತ್ಮಹುತಿ ದಾಳಿಕೋರನೊಬ್ಬ ಸ್ಫೋಟಕ ತುಂಬಿದ್ದ ಮಾರುತಿ ಇಕೋ ಕಾರನ್ನು ಸಿಆರ್‌ಪಿಎಫ್‌ ಬಸ್ಸಿಗೆ ಗುದ್ದಿಸಿದ್ದ. ಪರಿಣಾಮ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಈ ಕೃತ್ಯಕ್ಕೆ ಪ್ರತಿಯಾಗಿ ಭಾರತ 2019ರ ಫೆ.26ರಂದು ನಸುಕಿನ ಜಾವ ವಾಯುಸೇನೆ ಮಿರಾಜ್‌ ವಿಮಾನದ ಮೂಲಕ ಬಾಲಾಕೋಟ್‌ನಲ್ಲಿರುವ ಉಗ್ರರ ಶಿಬಿರದ ಮೇಲೆ ಬಾಂಬ್‌ ದಾಳಿ ನಡೆಸಿತ್ತು.

    ಈ ದಾಳಿಯಲ್ಲಿ 300ಕ್ಕೂ ಹೆಚ್ಚು ಜನ ಮೃತಪಟ್ಟಿರಬಹುದು ಎಂದು ಭಾರತ ಸರ್ಕಾರ ಹೇಳಿತ್ತು. ಆದರೆ ಪಾಕಿಸ್ತಾನ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಿ ಭಾರತದ ವಾದವನ್ನು ತಿರಸ್ಕರಿಸಿತ್ತು. ಬಳಿಕ ವಿದೇಶಿ ಮಾಧ್ಯಮಗಳು ಇಲ್ಲಿ ಉಗ್ರರ ಶಿಬಿರ ನಡೆಯುತ್ತಿತ್ತು. ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಮೂಲಗಳನ್ನು ಆಧಾರಿಸಿ ವರದಿ ಮಾಡಿದ್ದವು.

    ಭಾರತ ಸೇನೆ ಬಾಲಾಕೋಟ್‌ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಫೆ.28ರ ಬೆಳಗ್ಗೆ ಪಾಕಿಸ್ತಾನ ವಾಯುಸೇನೆ ಭಾರತೀಯ ಸೇನೆಯನ್ನು ಗುರಿಯಾಗಿಸಿ ದಾಳಿ ನಡೆಸಲು ಮುಂದಾಗಿತ್ತು. ಆದರ ಪಾಕಿಸ್ತಾನ ಈ ಕುತಂತ್ರವನ್ನು ಭಾರತದ ಯುದ್ಧವಿಮಾನಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದವು. ಈ ವೇಳೆ ಮಿಗ್‌ ವಿಮಾನವನ್ನು ಹಾರಿಸುತ್ತಿದ್ದ ಅಭಿನಂದನ್‌ ಪಾಕಿಸ್ತಾನದ ಎಫ್‌ 16 ಯುದ್ಧವಿಮಾನದ ಜೊತೆಗೆ ಡಾಗ್‌ಫೈಟ್‌ ಮಾಡಿ ಕೆಳಗೆ ಉರುಳಿಸಿದ್ದರು.

  • “ಬಾಲಕೋಟ್‍ನಲ್ಲಿ ಉಗ್ರರ ನೆಲೆ ಪುನಾರಂಭಿಸಲು ಪಾಕ್ ಯತ್ನ”

    “ಬಾಲಕೋಟ್‍ನಲ್ಲಿ ಉಗ್ರರ ನೆಲೆ ಪುನಾರಂಭಿಸಲು ಪಾಕ್ ಯತ್ನ”

    ನವದೆಹಲಿ: ಪಾಕಿಸ್ತಾನ ಮತ್ತೆ ನನ್ನ ಕುತಂತ್ರ ಬುದ್ಧಿ ಪ್ರದರ್ಶಿಸುತ್ತಿದ್ದು, ಭಾರತೀಯ ವಾಯು ಪಡೆ ಏರ್‌ಸ್ಟ್ರೈಕ್ ಮಾಡಿ ನೆಲಸಮ ಮಾಡಿದ್ದ ಬಾಲಕೋಟ್ ಉಗ್ರರ ನೆಲೆಗಳನ್ನು ಮತ್ತೆ ಪುನಾರಂಭಿಸಲು ಯತ್ನಿಸುತ್ತಿದೆ ಎಂದು ವರದಿಯಾಗಿದೆ.

    ಬುಧವಾರ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ರಾಜ್ಯಸಭೆಯಲ್ಲಿ ಈ ಬಗ್ಗೆ ತಿಳಿಸಿದ್ದಾರೆ. ಭಾರತವು ಏರ್‌ಸ್ಟ್ರೈಕ್ ನಡೆಸಿ ಉಗ್ರರ ತಾಣಗಳನ್ನು ನಾಶಗೊಳಿಸಿತ್ತು. ಆದರೆ ಈ ಶಿಬಿರಗಳನ್ನು ಮತ್ತೆ ಮರುಸ್ಥಾಪಿಸಲು ಪಾಕಿಸ್ತಾನ ಯತ್ನಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ದೇಶದ ಗಡಿ ರಕ್ಷಿಸಿ, ಸಾರ್ವಭೌಮತೆ ಹಾಗೂ ಏಕತೆ ಕಾಯ್ದುಕೊಳ್ಳುವ ಸಕಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.

    ಪಾಕಿಸ್ತಾನದ ಜೈಷ್-ಇ-ಮೊಹ್ಮಮದ್ ಉಗ್ರ ಸಂಘಟನೆಯ ತರಬೇತಿ ನೆಲೆಗಳನ್ನು ಭಾರತ ನಾಶಗೊಳಿಸಿತ್ತು. ಆದರೆ ಬಾಲಕೋಟ್‍ನಲ್ಲಿ ಉಗ್ರ ನೆಲೆ ಮರುಸ್ಥಾಪಿಸುವ ಯತ್ನ ನಡೆಯುತ್ತಿದೆ ಎಂಬ ಮಾಹಿತಿ ದೊರಕಿದೆ. ಅಲ್ಲದೆ ಅಲ್ಲಿ ಭಾರತದ ವಿರುದ್ಧ ಪಿತೂರಿ ಮಾಡಲಾಗುತ್ತಿದೆ. ಹೀಗಾಗಿ ಭಾರತದ ವಿರುದ್ಧ ಯುವಕರ ಮನ ಪರಿವರ್ತಿಸಲು ಜಿಹಾದಿ ಹಾಗೂ ಧಾರ್ಮಿಕ ಕೋರ್ಸುಗಳನ್ನು ಆರಂಭಿಸುತ್ತಿರುವ ಬಗ್ಗೆಯೂ ತಿಳಿದು ಬಂದಿದೆ ಎಂದು ಹೇಳಿದರು.

    ಭಾರತ ಉಗ್ರರು ಹಾಗೂ ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ಅನುಸರಿಸುತ್ತಿದೆ. ಕಾಶ್ಮೀರದಲ್ಲಿ ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಪರಿಣಾಮ ಭಾರೀ ಸಂಖ್ಯೆಯ ಉಗ್ರರು ಭದ್ರತಾ ಪಡೆಯಿಂದ ಹತರಾಗಿದ್ದಾರೆ. ಭಾರತ ಗಡಿಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

    ಫೆ. 14ರಂದು ಭಾರತೀಯ ಯೋಧರು ತೆರಳುತ್ತಿದ್ದ ವಾಹನದ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದರ ಪರಿಣಾಮ 40ಕ್ಕೂ ಹೆಚ್ಚು ಯೋಧರು ವೀರಮರಣ ಅಪ್ಪಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಫೆ. 26ರಂದು ಭಾರತೀಯ ವಾಯು ಪಡೆ ಏರ್‌ಸ್ಟ್ರೈಕ್ ನಡೆಸಿ ಬಾಲಕೋಟ್‍ನಲ್ಲಿದ್ದ ಜೈಶ್ ಉಗ್ರ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿ ನೆಲೆಗಳನ್ನು ನೆಲಸಮ ಮಾಡಿತ್ತು.

  • ಅಭಿನಂದನ್ ಕುರಿತು ಸಿನಿಮಾ ತಯಾರಿಯಲ್ಲಿ ವಿವೇಕ್ ಒಬೇರಾಯ್-ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್

    ಅಭಿನಂದನ್ ಕುರಿತು ಸಿನಿಮಾ ತಯಾರಿಯಲ್ಲಿ ವಿವೇಕ್ ಒಬೇರಾಯ್-ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್

    ಮುಂಬೈ: ನಟ ವಿವೇಕ್ ಒಬೇರಾಯ್ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಕುರಿತ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಂಬಂಧ ಶುಕ್ರವಾರ ಬಾಲಿವುಡ್ ಸಿನಿಮಾ ವಿಮರ್ಶಕ ತರಣ್ ಆದರ್ಶ್ ಟ್ವೀಟ್ ಮೂಲಕ ವಿಷಯವನ್ನು ರಿವೀಲ್ ಮಾಡಿದ್ದರು. ಸಿನಿಮಾ ವಿಷಯ ಹೊರ ಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಜನರು ವಿವೇಕ್ ಒಬೇರಾಯ್ ಅವರನ್ನು ಟ್ರೋಲ್ ಮಾಡಲಾರಂಭಿಸಿದ್ದಾರೆ.

    ವಿವೇಕ್ ಒಬೇರಾಯ್ ಬಾಲಕೋಟ್ ಏರ್ ಸ್ಟ್ರೈಕ್ ಕಥೆಯಾದರಿತ ಸಿನಿಮಾದಲ್ಲಿ ನಟಿಸುತ್ತಿದ್ದು, ‘ಬಾಲಕೋಟ್: ದಿ ಟ್ರ್ಯೂ ಸ್ಟೋರಿ’ ಎಂದು ಟೈಟಲ್ ಅಂತಿಮಗೊಳಿಸಲಾಗಿದೆ. ಜಮ್ಮು, ಕಾಶ್ಮೀರ, ದೆಹಲಿ ಮತ್ತು ಆಗ್ರಾದಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಈ ವರ್ಷದ ಅಂತಿಮದಲ್ಲಿ ಸಿನಿಮಾ ಶೂಟಿಂಗ್ ಆರಂಭಗೊಳ್ಳಲಿದೆ. ಹಿಂದಿ, ತಮಿಳು ಮತ್ತು ತೆಲಗು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ತರಣ್ ಆದರ್ಶ್ ಟ್ವೀಟ್ ಮೂಲಕ ತಿಳಿಸಿದ್ದರು.

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೀವನಾಧರಿತ ಸಿನಿಮಾದಲ್ಲಿ ವಿವೇಕ್ ಒಬೇರಾಯ್ ಪ್ರಧಾನಿಗಳ ಪಾತ್ರದಲ್ಲಿ ನಟಿಸಿದ್ದರು. ಆದ್ರೆ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಲು ವಿಫಲವಾಗಿತ್ತು. ಮೋದಿಯವರ ಪಾತ್ರಕ್ಕೆ ಜೀವ ತುಂಬುವಲ್ಲಿ ವಿವೇಕ್ ಒಬೇರಾಯ್ ಯಶಸ್ವಿಯಾಗಿರಲಿಲ್ಲ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದ್ದವು. ಇದೀಗ ವಿಂಗ್ ಕಮಾಂಡರ್ ಪಾತ್ರದಲ್ಲಿ ಅಭಿನಂದನ್ ಪಾತ್ರದಲ್ಲಿ ವಿವೇಕ್ ಒಬೇರಾಯ್ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

    ಸಿನಿಮಾ ಕುರಿತು ಪ್ರತಿಕ್ರಿಯಿಸಿರುವ ವಿವೇಕ್ ಒಬೇರಾಯ್, ಓರ್ವ ಭಾರತೀಯ ಮತ್ತು ದೇಶಭಕ್ತನಾಗಿ ಹಾಗೂ ಸಿನಿಮಾ ಉದ್ಯಮದ ಸದಸ್ಯನಾಗಿ ಈ ರೀತಿಯ ಸಿನಿಮಾ ಮಾಡಲು ನನಗೆ ಹೆಮ್ಮೆಯಾಗುತ್ತಿದೆ. ನಮ್ಮ ಸೇನೆಯ ಶಕ್ತಿ ಮತ್ತು ಸಾಮಥ್ರ್ಯ ಬಿಂಬಿಸುವ ಸಿನಿಮಾ ಇದಾಗಿದೆ. ಅಭಿನಂದನ್ ಸೇರಿದಂತೆ ಭಾರತೀಯ ವಾಯುಸೇನೆಯ ಅಧಿಕಾರಿಗಳ ಪಾತ್ರಗಳು ಸಿನಿಮಾದ ಲೀಡ್ ನಲ್ಲಿ ಇರಲಿವೆ ಎಂದು ಹೇಳಿದ್ದಾರೆ.

    https://twitter.com/sagarcasm/status/1164791354582417409

    ಬಾಲಕೋಟ್ ಏರ್ ಸ್ಟ್ರೈಕ್ ಭಾರತೀಯ ವಾಯು ಸೇನೆ ನಡೆಸಿದ ದಾಳಿಯಲ್ಲಿ ಒಂದಾಗಿದೆ. ಪುಲ್ವಾಮಾ ದಾಳಿಯಿಂದ ಏರ್ ಸ್ಟ್ರೈಕ್ ವರೆಗಿನ ಎಲ್ಲ ವಿಷಯಗಳ ಬಗ್ಗೆ ಓದುತ್ತಾ ಬಂದಿದ್ದೇನೆ. ಈ ಸಿನಿಮಾ ಮೂಲಕ ಏರ್ ಸ್ಟ್ರೈಕ್ ದಾಳಿಯ ಸಂಪೂರ್ಣ ಮಾಹಿತಿಯನ್ನು ಚಿತ್ರದಲ್ಲಿ ನೀಡಲು ಪ್ರಯತ್ನಿಸಲಾಗುಗುವುದು ಎಂದು ವಿವೇಕ್ ತಿಳಿಸಿದ್ದಾರೆ.

    ಸಿನಿಮಾ ಘೋಷಣೆ ಬಳಿಕ ನೆಟ್ಟಿಗರು, ಚಿತ್ರದ ನಿರ್ದೇಶಕರು ವಿವೇಕ್ ಬದಲಾಗಿ ಅಕ್ಷಯ್ ಕುಮಾರ್ ಅವರನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು ಎಂದು ಸಲಹೆ ನೀಡಿದ್ದಾರೆ. ಕೆಲವರು ಅಜಯ್ ದೇವಗನ್, ಹೃತಿಕ್ ರೋಶನ್ ಅವರ ಹೆಸರನ್ನು ಸೂಚಿಸಿದ್ದಾರೆ. ಈ ಹಿಂದೆ ಉರಿ ಚಿತ್ರದಲ್ಲಿ ವಿಕ್ಕಿ ಕೌಶಲ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    https://twitter.com/ParijatSingh23/status/1164784448690241537

  • ಗಡಿ ದಾಟಿಯೂ ಪಾಕ್ ವಿರುದ್ಧ ಯುದ್ಧಕ್ಕೆ ಸೇನೆ ಸಿದ್ಧ ಎಂದಿದ್ದ ರಾವತ್

    ಗಡಿ ದಾಟಿಯೂ ಪಾಕ್ ವಿರುದ್ಧ ಯುದ್ಧಕ್ಕೆ ಸೇನೆ ಸಿದ್ಧ ಎಂದಿದ್ದ ರಾವತ್

    ನವದೆಹಲಿ: ಭಾರತೀಯ ಸೇನೆ ಗಡಿ ದಾಟಿ ಯುದ್ಧ ಮಾಡಲು ಸಿದ್ಧವಿದೆ ಎಂದು ಜನರಲ್ ಬಿಪಿನ್ ರಾವತ್ ಸರ್ಕಾರಕ್ಕೆ ತಿಳಿಸಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    2019ರ ಪುಲ್ವಾಮಾ ದಾಳಿ ಬಳಿಕ ಸರ್ಕಾರ ಪ್ರತೀಕಾರ ತೀರಿಸಲು ಮೂರು ವಿಭಾಗಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿತ್ತು. ಈ ಸಂದರ್ಭದಲ್ಲಿ ಬಿಪಿನ್ ರಾವತ್ ಭೂಸೇನೆ ಯಾವುದೇ ಕಾರ್ಯಾಚರಣೆಗೆ ಸಿದ್ಧವಾಗಿದೆ. ಅಗತ್ಯ ಬಿದ್ದರೆ ಗಡಿ ದಾಟಿ ಹೋರಾಟ ಮಾಡಲು ನಾವು ಪೂರ್ಣವಾಗಿ ತಯಾರಿದ್ದೇವೆ ಎಂಬುದಾಗಿ ಭರವಸೆ ನೀಡಿದ್ದ ವಿಚಾರವನ್ನು ಸೇನೆಯ ಇಬ್ಬರು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಪುಲ್ವಾಮಾ ದಾಳಿಯ ಬಳಿಕ ಯಾವ ರೀತಿ ಸಿದ್ಧಗೊಂಡಿದೆ ಎಂದು ಸರ್ಕಾರ ಸೇನೆಯನ್ನು ಕೇಳಿತ್ತು. ಈ ಪ್ರಶ್ನೆಗೆ ಬಿಪಿನ್ ರಾವತ್, 2016ರ ಉರಿ ಮೇಲಿನ ದಾಳಿಯ ಬಳಿ ಬಳಿಕ ಸಾಕಷ್ಟು ಮದ್ದುಗುಂಡುಗಳ ಸಂಗ್ರಹವನ್ನು ಮಾಡಿಕೊಂಡಿದ್ದೇವೆ. ಹೀಗಾಗಿ ಗಡಿಯನ್ನು ದಾಟಿಯೂ ಹೋರಾಟ ನಡೆಸಲು ಸೇನೆ ಪೂರ್ಣವಾಗಿ ತಯಾರಾಗಿದೆ ಎಂದು ಉತ್ತರಿಸಿದ್ದರು.

    ಸೋಮವಾರ ದೆಹಲಿಯನ್ನು ನಡೆದ ಸೇನೆಯ ನಿವೃತ್ತ ಅಧಿಕಾರಿಗಳ ಜೊತೆಗಿನ ಸಂವಾದದಲ್ಲಿ ಮಾತನಾಡಿದ ರಾವತ್,  ಬಾಲಾಕೋಟ್ ಮೇಲಿನ ಏರ್ ಸ್ಟ್ರೈಕ್ ಬಳಿಕ ಪಾಕಿಸ್ತಾನ ಯಾವುದೇ ದಾಳಿಯನ್ನು ಎದುರಿಸಲು ಸೇನೆ ಸಂಪೂರ್ಣ ಸಜ್ಜಾಗಿತ್ತು ಎಂದು ತಿಳಿಸಿದ್ದರು.

    ಫೆ.14 ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರಿದ್ದ ಬಸ್ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರ ತೀರಿಸಲು ಸರ್ಕಾರ ಮೂರು ಸೇನೆಯ ಮುಖ್ಯಸ್ಥರ ಜೊತೆ ಸರಣಿ ಸಭೆ ನಡೆಸಿತ್ತು. ಅಂತಿಮವಾಗಿ ಏರ್ ಸ್ಟ್ರೈಕ್ ನಡೆಸಲು ಒಪ್ಪಿಗೆ ನೀಡಿತ್ತು. ನಿಗದಿಯಂತೆ ಫೆ.26 ರಂದು ವಾಯುಸೇನೆ ಬಾಲಕೋಟ್, ಚಕೋಟಿ, ಮುಜಾಫರಾಬಾದ್ ಮೇಲೆ ಏರ್ ಸ್ಟ್ರೈಕ್ ನಡೆಸಿತ್ತು. ಬಾಲಕೋಟ್ ಮೇಲಿನ ಬಾಂಬ್ ದಾಳಿಯಲ್ಲಿ 300ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದರು ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿತ್ತು.

  • ಬಾಲಕೋಟ್ ಏರ್ ಸ್ಟ್ರೈಕ್ ಬಳಿಕ ಈಗ ವಾಯುಸೀಮೆ ತೆರವುಗೊಳಿಸಿದ ಪಾಕ್

    ಬಾಲಕೋಟ್ ಏರ್ ಸ್ಟ್ರೈಕ್ ಬಳಿಕ ಈಗ ವಾಯುಸೀಮೆ ತೆರವುಗೊಳಿಸಿದ ಪಾಕ್

    ಇಸ್ಲಾಮಾಬಾದ್: ಈಗಾಗಲೇ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಪಾಕಿಸ್ತಾನ ಕೊನೆಗೂ ಎಚ್ಚೆತ್ತುಕೊಂಡಿದ್ದು, ಮಂಗಳವಾರ ಎಲ್ಲ ನಾಗರಿಕ ವಿಮಾನಗಳಿಗೆ ತನ್ನ ವಾಯುಸೀಮೆಯನ್ನು ತೆರವುಗೊಳಿಸಿದೆ.

    ವಿಶ್ವ ಬ್ಯಾಂಕ್‍ನ ಹೂಡಿಕೆ ವಿವಾದಗಳ ನ್ಯಾಯಾಲಯವು ಪಾಕಿಸ್ಥಾನಕ್ಕೆ 40 ಸಾವಿರ ಕೋಟಿ ರೂ. ದಂಡ ವಿಧಿಸಿದ ಬೆನ್ನಲ್ಲೇ ಪಾಕಿಸ್ತಾನದಿಂದ ಈ ನಿರ್ಧಾರ ಪ್ರಕಟವಾಗಿದೆ. ಚಿನ್ನದ ಗಣಿಯನ್ನು ವಿದೇಶಿ ಕಂಪೆನಿಗಳಿಗೆ ಗುತ್ತಿಗೆ ನೀಡಿ ಅನಂತರ ರದ್ದು ಮಾಡಿದ ಪ್ರಕರಣದಲ್ಲಿ ವಿಶ್ವಬ್ಯಾಂಕ್ ಕಳೆದ ವಾರ 40 ಸಾವಿರ ಕೋಟಿ ರೂ. ದಂಡ ವಿಧಿಸಿತ್ತು.

    ಬಾಲಕೋಟ್ ಮೇಲಿನ ವಾಯುದಾಳಿ ಬಳಿಕ ಭಾರತೀಯ ವಿಮಾನ ಸೇರಿದಂತೆ ಎಲ್ಲ ಏರ್ ಲೈನ್ಸ್ ಗಳಿಗೆ ತನ್ನ ವಾಯುಸೀಮೆ ಪ್ರವೇಶಿಸುವುದಕ್ಕೆ ಪಾಕಿಸ್ತಾನ ನಿಷೇಧ ಹೇರಿತ್ತು. ಈ ಸಂಬಂಧ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಇಂದು ಮಧ್ಯಾಹ್ನ 12:41 ರಿಂದ ಎಲ್ಲ ಏರ್ ಲೈನ್ಸ್ ಗಳಿಗೆ ತನ್ನ ವಾಯು ಸೀಮೆಯನ್ನು ಬಳಸಿಕೊಳ್ಳಲು ಪಾಕಿಸ್ತಾನ ಅನುಮತಿ ನೀಡಿದೆ. ಇಂದಿನಿಂದ ಭಾರತದ ಏರ್ ಲೈನ್ಸ್ ಪಾಕಿಸ್ತಾನ ವಾಯುಸೀಮೆಯನ್ನು ಬಳಸಿಕೊಂಡು ತನ್ನ ಎಂದಿನ ಮಾರ್ಗದಲ್ಲಿ ಸಂಚರಿಸಲಿದೆ ಎಂದು ತಿಳಿಸಿದರು.

    ತನ್ನ ವಾಯುಸೀಮೆಯನ್ನು ನಿರ್ಬಂಧಿಸಿದ್ದರಿಂದ ಈಗಾಗಲೇ ಕುಸಿತಗೊಂಡಿರುವ ಪಾಕ್ ಆರ್ಥಿಕತೆಗೆ ಭಾರೀ ನಷ್ಟವಾಗಿತ್ತು. ಪ್ರತಿದಿನ 400ಕ್ಕೂ ಹೆಚ್ಚು ವಿಮಾನಗಳು ಪಾಕ್ ವಾಯುಸೀಮೆಯನ್ನು ಬಳಸಿಕೊಳ್ಳುತ್ತಿವೆ. ವಾಯುಸೀಮೆಯನ್ನು ಬಳಕೆ ಮಾಡಿದ್ದಕ್ಕೆ ಅಲ್ಲದೇ ಲ್ಯಾಂಡಿಂಗ್ ಆದರೂ ವಿಮಾನದ ಗಾತ್ರಕ್ಕೆ ಅನುಗುಣವಾಗಿ ಶುಲ್ಕ ವಿಧಿಸುತ್ತದೆ. ವಿಮಾನದ ಗಾತ್ರ ಮತ್ತು ದರ್ಜೆಗೆ ಅನುಗುಣವಾಗಿ ಶುಲ್ಕ ಬದಲಾಗುತ್ತದೆ.

    ಬೋಯಿಂಗ್ 737 ಪ್ರಯಾಣಿಕ ವಿಮಾನ ತನ್ನ ವಾಯುಸೀಮೆಯನ್ನು ಬಳಕೆ ಮಾಡಿದರೆ ಪಾಕಿಸ್ತಾನ ಪ್ರತಿ ದಿನಕ್ಕೆ ಅಂದಾಜು 600 ಡಾಲರ್ ನಿಂದ 700 ಡಾಲರ್(ಅಂದಾಜು 41 ಸಾವಿರದಿಂದ 48 ಸಾವಿರ ರೂ.) ಶುಲ್ಕ ವಿಧಿಸುತ್ತದೆ. ಒಟ್ಟು 400 ವಿಮಾನಗಳಿಂದ ಪಾಕಿಸ್ತಾನ ಪ್ರತಿದಿನ 3ಲಕ್ಷ ಡಾಲರ್(ಅಂದಾಜು 2 ಕೋಟಿ) ಆದಾಯ ಗಳಿಸುತ್ತದೆ. ಅಂದಾಜು ಒಟ್ಟು 1685 ಕೋಟಿ ರೂ. ಆದಾಯವನ್ನು ಪಾಕಿಸ್ತಾನ ಕಳೆದುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ಕಂಪನಿಗಳಿಗೂ ಪ್ರತಿದಿನ 4.50 ಲಕ್ಷ ಡಾಲರ್(ಅಂದಾಜು 3.09 ಕೋಟಿ ರೂ.) ನಷ್ಟವಾಗಿದೆ.

    ಭಾರತೀಯ ವಾಯುಪಡೆ ಫೆ.26ರಂದು ಬಾಲಾಕೋಟ್‍ನಲ್ಲಿರುವ ಉಗ್ರರ ಅಡಗು ತಾಣದ ಮೇಲೆ ದಾಳಿ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಉಲ್ಬಣಿಸಿತ್ತು. ಈ ಹಿನ್ನೆಲೆಯಲ್ಲಿ ಭಾರತದ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ವಾಯುಸೀಮೆಯ ಮೇಲೆ ನಿಷೇಧ ಹೇರಿದ ಪರಿಣಾಮ ಭಾರತೀಯ ಕಂಪನಿಗಳು ಹಲವು ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ರದ್ದು ಮಾಡಿತ್ತು.

    ನಾಗರಿಕ ವಿಮಾನಯಾನ ಖಾತೆಯ ಸಚಿವ ಹರ್‍ದೀಪ್ ಸಿಂಗ್ ಪುರಿ ಜುಲೈ 3 ರಂದು ರಾಜ್ಯಸಭೆಯಲ್ಲಿ ಪಾಕಿಸ್ತಾನ ವಾಯುಸೀಮೆಯನ್ನು ನಿಷೇಧಿಸಿದ ಪರಿಣಾಮ ಭಾರತದ ವಿಮಾನಯಾನ ಕಂಪನಿಗಳಿಗೆ ನಷ್ಟವಾಗಿದೆ. ಏರ್ ಇಂಡಿಯಾಗೆ 491 ಕೋಟಿ ರೂ., ಸ್ಪೈಸ್ ಜೆಟ್, ಇಂಡಿಗೋ ಮತ್ತು ಗೋ ಏರ್ ಕಂಪನಿಗಳಿಗೆ ಕ್ರಮವಾಗಿ 30.73 ಕೋಟಿ ರೂ., 25.1 ಕೋಟಿ ರೂ., 2.1 ಕೋಟಿ ರೂ., ನಷ್ಟವಾಗಿದೆ ಎಂದು ತಿಳಿಸಿದ್ದರು.

    ಕಿರ್ಗಿಸ್ತಾನ ರಾಜಧಾನಿ ಬಿಷ್ಕೇಕ್‍ನಲ್ಲಿ ಜೂ.13 ಮತ್ತು 14ರಂದು ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆ ಆಯೋಜನೆಗೊಂಡಿತ್ತು. ಈ ಶೃಂಗದಲ್ಲಿ ಪ್ರಧಾನಿ ಮೋದಿ ಭಾಗವಹಿಸಬೇಕಿದ್ದ ಕಾರಣ ಭಾರತದ ಅಧಿಕಾರಿಗಳು ಪಾಕಿಸ್ತಾನಕ್ಕೆ ಮನವಿ ಮಾಡಿ ನಿಷೇಧ ತೆರವುಗೊಳಿಸುವಂತೆ ಮನವಿ ಮಾಡಿದ್ದರು. ಭಾರತದ ಮನವಿಗೆ ಪಾಕ್ ಒಪ್ಪಿ ಮೋದಿ ವಿಮಾನಕ್ಕೆ ಅನುಮತಿ ನೀಡಿತ್ತು. ಆದರೆ ಮೋದಿ ವಿಮಾನ ಪ್ರಯಾಣ ದೂರವಾದರೂ ಪರವಾಗಿಲ್ಲ. ಪಾಕ್ ಮೇಲೆ ಪ್ರಯಾಣಿಸಲ್ಲ ಎಂದು ಹೇಳಿದ್ದರು. ನಂತರ ಮೋದಿ ಓಮನ್, ಇರಾನ್ ಹಾಗೂ ಮಧ್ಯ ಏಷ್ಯಾ ಮೂಲಕ ಕಿರ್ಗಿಸ್ತಾನಕ್ಕೆ ತೆರಳಿದ್ದರು.

    ಈ ಹಿಂದೆ ಭಾರತ ಕೇಳಿಕೊಂಡಾಗ ಪಾಕಿಸ್ತಾನ, ಭಾರತದ ಗಡಿಯಲ್ಲಿ ನಿಯೋಜನೆಗೊಂಡಿರುವ ಯುದ್ಧ ವಿಮಾನಗಳನ್ನು ತೆರವುಗೊಳಿಸದ ಹೊರತು ವಾಯುಸೀಮೆಯನ್ನು ಪ್ರವೇಶಕ್ಕೆ ಹೇರಲಾಗಿರುವ ನಿಷೇಧವನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಹೇಳಿತ್ತು.

  • ಬಾಲಾಕೋಟ್ ಪ್ರೇರಣೆ – ಈಗ ಕಟ್ಟಡವನ್ನೇ ಉಡೀಸ್ ಮಾಡೋ ಬಾಂಬ್ ಖರೀದಿಗೆ ಮುಂದಾದ ಭಾರತ

    ಬಾಲಾಕೋಟ್ ಪ್ರೇರಣೆ – ಈಗ ಕಟ್ಟಡವನ್ನೇ ಉಡೀಸ್ ಮಾಡೋ ಬಾಂಬ್ ಖರೀದಿಗೆ ಮುಂದಾದ ಭಾರತ

    ನವದೆಹಲಿ: ಪಾಕಿಸ್ತಾನದ ಬಾಲಕೋಟ್ ಮೇಲಿನ ಏರ್ ಸ್ಟ್ರೈಕ್‍ನಿಂದ ಉತ್ತೇಜನಗೊಂಡಿರುವ ಭಾರತ ಈಗ ಕಟ್ಟಡವನ್ನೇ ಸಂಪೂರ್ಣವಾಗಿ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿರುವ ಬಾಂಬ್ ಖರೀದಿಸಲು ಮುಂದಾಗಿದೆ.

    ಹೌದು. ಬಾಲಾಕೋಟ್ ದಾಳಿ ವೇಳೆ ಭಾರತ ಇಸ್ರೇಲ್ ನಿರ್ಮಿತ ಸ್ಪೈಸ್-2000 ಬಾಂಬ್ ಬಳಸಿತ್ತು. ಈಗ ಸರ್ಕಾರ ಈ ಬಾಂಬ್‍ಗಿಂತ ಶಕ್ತಿಶಾಲಿಯಾಗಿರುವ ಮಾರ್ಕ್ 84 ಖರೀದಿಸಲು ಮುಂದಾಗಿದೆ ಎಂದು ವಾಯು ಸೇನೆಯಯ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

    ಬಾಲಾಕೋಟ್ ದಾಳಿ ವೇಳೆ ಮಿರಾಜ್ ಯುದ್ಧ ವಿಮಾನದ ಮೂಲಕ ಉಗ್ರರ ಶಿಬಿರದ ಮೇಲೆ ಸ್ಪೈಸ್ -2000 ಬಾಂಬ್ ಹಾಕಲಾಗಿತ್ತು. ಈ ಬಾಂಬ್ ಗಳು ಮೇಲಿನಿಂದ ಸಿಮೆಂಟ್ ಶೀಟ್ ಗಳನ್ನು ತೂತು ಮಾಡಿ ಕೆಳಗಡೆ ಬಿದ್ದ ಬಳಿಕ ಸ್ಫೋಟಗೊಂಡಿತ್ತು. ಈ 70-80 ಕೆಜಿ ಸ್ಫೋಟಕಗಳನ್ನು ಹೊಂದಿರುವ ಈ ಬಾಂಬ್‍ಗಳು ಸ್ಫೋಟಗೊಳ್ಳುತ್ತದೆ ಹೊರತು ಸಂಪೂರ್ಣ ಕಟ್ಟಡವನ್ನು ಧ್ವಂಸಗೊಳಿಸುವ ಸಾಮಥ್ರ್ಯವನ್ನು ಹೊಂದಿಲ್ಲ.

    ಈಗ ಭಾರತದ ವಾಯುಸೇನೆ ಬಂಕರ್ ಮತ್ತು ಕಟ್ಟಡಗಳನ್ನು ಧ್ವಂಸಗೊಳಿಸಬಲ್ಲ ಮಾರ್ಕ್ 84 ಬಾಂಬ್ ಗಳನ್ನು ಖರೀದಿಸಲು ಮುಂದಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ಬಾಂಬ್ ಗಳು ಬಂಕರ್ ಬಸ್ಟರ್ ಎಂದೇ ಪ್ರಸಿದ್ಧಿ ಪಡೆದಿದ್ದು, ಶತ್ರುಪಾಳಯದ ಬಂಕರ್‍ಗಳು ಎಷ್ಟೇ ಸುರಕ್ಷಿತವಾಗಿದ್ದರೂ ಛಿದ್ರಗೊಳಿಸುತ್ತವೆ. ಗುರಿ ನಿಗದಿ ಪಡಿಸಿ ಉಡಾವಣೆ ಮಾಡಿದರೆ ಸಾಕು ಗುರಿ ತಪ್ಪುವುದಿಲ್ಲ. ಎಂತಹುದೇ ಪರಿಸ್ಥಿತಿಯಲ್ಲೂ ಗುರಿಯನ್ನು ನಿಖರವಾಗಿ ಭೇದಿಸುತ್ತದೆ.

    ಕೇಂದ್ರ ಸರ್ಕಾರ ಮೂರು ಸೇನೆಗಳಿಗೆ ಗರಿಷ್ಠ 300 ಕೋಟಿ ರೂ. ವರೆಗಿನ ಸಲಕರಣೆಗಳನ್ನು ಖರೀದಿಸಲು ಅನುಮತಿ ನೀಡಿದೆ. ಈ ತುರ್ತು ವಿಶೇಷ ಅಧಿಕಾರದ ಅಡಿಯಲ್ಲಿ ವಾಯುಸೇನೆ ಈ ಬಾಂಬ್‍ಗಳನ್ನು ಖರೀದಿಸಲು ಮುಂದಾಗಿದೆ ಎನ್ನಲಾಗಿದೆ.

    ಭಾರತೀಯ ಸೇನೆ ಈಗಾಗಲೇ ಈ ವಿಶೇಷ ಅಧಿಕಾರದ ಅಡಿಯಲ್ಲಿ ಸ್ಪೈಕ್ ಆಂಟಿ ಟ್ಯಾಂಕ್ ಮಿಸೈಲ್ ಖರೀದಿಸಲು ಮುಂದಾಗಿದೆ. ಇದನ್ನೂ ಓದಿ:ಬಾಲಾಕೋಟ್ ಏರ್ ಸ್ಟ್ರೈಕ್‍ನಲ್ಲಿ 170 ಉಗ್ರರು ಬಲಿ – ಮೃತದೇಹವನ್ನು ನದಿಗೆ ಎಸೆದಿದ್ದ ಪಾಕ್

    ಪುಲ್ವಾಮಾದಲ್ಲಿ 44 ಸಿಆರ್‌ಪಿಎಫ್‌ ಯೋಧರು ಜೈಶ್ ಉಗ್ರನ ದಾಳಿಗೆ ಬಲಿಯಾದ ನಂತರ ಭಾರತ ಪ್ರತೀಕಾರ ತೀರಿಸಲು ಫೆ.26 ರಂದು ಪಾಕ್ ಆಕ್ರಮಿತ ಕಾಶ್ಮೀರವನ್ನು ದಾಟಿ ಬಾಲಾಕೋಟ್ ನಲ್ಲಿದ್ದ ಉಗ್ರರ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿತ್ತು.

  • ದಾಳಿಯಲ್ಲಿ ಹತ್ಯೆಯಾದ ಉಗ್ರರ ಸಂಖ್ಯೆ ಬಹಿರಂಗಪಡಿಸಲ್ಲ, ಸೇನೆ ಮೆಲೆ ನಂಬಿಕೆಯಿಡಿ- ನಿರ್ಮಲಾ ಸೀತಾರಾಮನ್

    ದಾಳಿಯಲ್ಲಿ ಹತ್ಯೆಯಾದ ಉಗ್ರರ ಸಂಖ್ಯೆ ಬಹಿರಂಗಪಡಿಸಲ್ಲ, ಸೇನೆ ಮೆಲೆ ನಂಬಿಕೆಯಿಡಿ- ನಿರ್ಮಲಾ ಸೀತಾರಾಮನ್

    ನವದೆಹಲಿ: ಬಾಲಕೋಟ್ ದಾಳಿಯಲ್ಲಿ ಎಷ್ಟು ಜನ ಸತ್ತಿದ್ದಾರೆ ಎನ್ನುವ ವಿಚಾರವನ್ನು ಸರ್ಕಾರ ಬಹಿರಂಗ ಪಡಿಸುವುದಿಲ್ಲ ಎಂದು ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಷ್ಟು ಉಗ್ರರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿಯನ್ನು ಸರ್ಕಾರ ಬಹಿರಂಗ ಪಡಿಸುವುದಿಲ್ಲ. ಸರ್ಕಾರದ ಮೇಲೆ ನಂಬಿಕೆಯಿಡಿ. ನಮ್ಮ ಸೇನೆಯ ಮೇಲೆ ನಂಬಿಯಿಡಿ ಎಂದು ಖಡಕ್ ಆಗಿ ತಿಳಿಸಿದ್ದಾರೆ.

    ದಾಳಿಯಲ್ಲಿ ಯಾವುದೇ ಹಾನಿಯಾಗಿಲ್ಲ ಮರಗಳು ಉರುಳಿವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಒಂದು ವೇಳೆ ದಾಳಿ ನಡೆಯದೇ ಇದ್ದರೆ ಪಾಕಿಸ್ತಾನ ಸರ್ಕಾರ ದೇಶದ ಒಳಗಿನ ಮಾಧ್ಯಮಗಳಿಗೆ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳು ಬಾಲಕೋಟ್ ಪ್ರವೇಶಕ್ಕೆ ನಿರ್ಬಂಧ ಹೇರಿದ್ದು ಯಾಕೆ? ಜವಾಬ್ದಾರಿ ಸರ್ಕಾರ ಈ ರೀತಿ ಮಾಡಿರುವುದು ಸರಿಯೇ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಬಾಲಕೋಟ್ ದಾಳಿಯಲ್ಲಿ 200ಕ್ಕೂ ಹೆಚ್ಚು ಉಗ್ರರ ಹತ್ಯೆ: ಪಾಕ್ ಸೇನಾಧಿಕಾರಿ

    ಆತ್ಮಾಹುತಿ ಉಗ್ರರ ಹೊಸ ಬ್ಯಾಚ್ ಗೆ ಬಾಲಕೋಟ್ ನೆಲೆಯಲ್ಲಿ ತರಬೇತಿ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ನಮಗೆ ಸಿಕ್ಕಿತ್ತು. ಈ ಕಾರಣಕ್ಕಾಗಿಯೇ ನಾವು ಬಾಲಕೋಟ್ ಗುರಿಯಾಗಿಸಿ ದಾಳಿ ಮಾಡಿದ್ದೇವೆ ಎಂದು ಸಮರ್ಥನೆ ನೀಡಿದರು. ಇದನ್ನೂ ಓದಿ: ಪೆಟ್ರೋಲ್ ಸುರಿದು ಮೃತದೇಹ ಸುಟ್ಟರು – ಏರ್ ಸರ್ಜಿಕಲ್ ಸ್ಟ್ರೈಕ್‍ಗೆ ಸಿಕ್ತು ಆಡಿಯೋ ಸಾಕ್ಷ್ಯ!

    ಈ ವೇಳೆ ಎಲ್ಲೆಲ್ಲಿ ಉಗ್ರರು ಕಾಣಸಿಗುತ್ತಾರೋ ಅವರ ಮೇಲೆ ಯಾವುದೇ ರೀತಿ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ ಎಂದು ತಿಳಿಸಿದರು.

    ಈ ಹಿಂದೆ ಏರ್ ಚೀಫ್ ಮಾರ್ಷಲ್ ಅವರಲ್ಲಿ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಕೇಳಿದ್ದಕ್ಕೆ, ಸತ್ತ ಉಗ್ರರ ತಲೆಯನ್ನು ಲೆಕ್ಕ ಹಾಕುವುದು ನಮ್ಮ ಕೆಲಸವಲ್ಲ. ಅದರ ಲೆಕ್ಕವನ್ನು ಸರ್ಕಾರ ನೀಡುತ್ತದೆ. ನಮಗೆ ಏನು ಗುರಿಯನ್ನು ನೀಡಲಾಗಿತ್ತೋ ಆ ಗುರಿಯನ್ನು ನಾವು ಯಶಸ್ವಿಯಾಗಿ ಮುಗಿಸಿದ್ದೇವೆ. ಎಲ್ಲಿ ಬಾಂಬ್ ಹಾಕಬೇಕಿತ್ತೋ ಆ ಸ್ಥಳಕ್ಕೆ ನಮ್ಮ ಸೈನಿಕರು ಬಾಂಬ್ ಹಾಕಿ ಯಶಸ್ವಿಯಾಗಿ ಮರಳಿ ಬಂದಿದ್ದಾರೆ ಎಂದು ಉತ್ತರಿಸಿದ್ದರು.

    ಬಾಲಕೋಟ್ ಉಗ್ರರ ನೆಲೆಯ ಮೇಲೆ ದಾಳಿ ನಡೆಸುವುದಕ್ಕೂ ಮೊದಲು 300 ಮೊಬೈಲ್ ಗಳು ಅಲ್ಲಿ ಸಕ್ರಿಯವಾಗಿತ್ತು ಎಂದು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ(ಎನ್‍ಟಿಆರ್‍ಒ) ದೃಢಪಡಿಸಿತ್ತು. ಭಾರತದ ದಾಳಿ ಬಳಿಕ ಪೆಟ್ರೋಲ್ ಹಾಕಿ ಪಾಕ್ ಸೇನೆ ಉಗ್ರರ ಮೃತ ದೇಹಗಳನ್ನು ಸುಟ್ಟು ಹಾಕಿದೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಇದನ್ನೂ ಓದಿ: 9 ದಿನಗಳಲ್ಲಿ 3ನೇ ಬಾರಿ ಪತ್ರಕರ್ತರಿಗೆ ನೋ ಎಂಟ್ರಿ: ಬಾಲಕೋಟ್ ಪ್ರದೇಶಕ್ಕೆ ಮಾಧ್ಯಮಗಳಿಗೆ ನಿಷೇಧ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲಕೋಟ್ ದಾಳಿಯಲ್ಲಿ 200ಕ್ಕೂ ಹೆಚ್ಚು ಉಗ್ರರ ಹತ್ಯೆ: ಪಾಕ್ ಸೇನಾಧಿಕಾರಿ

    ಬಾಲಕೋಟ್ ದಾಳಿಯಲ್ಲಿ 200ಕ್ಕೂ ಹೆಚ್ಚು ಉಗ್ರರ ಹತ್ಯೆ: ಪಾಕ್ ಸೇನಾಧಿಕಾರಿ

    ನವದೆಹಲಿ: ಬಾಲಕೋಟ್ ನಲ್ಲಿ ಏರ್ ಸ್ಟ್ರೈಕ್ ನಡೆದ ಬಳಿಕ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎನ್ನುವುದು ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೆ ಈಗ ಪಾಕಿಸ್ತಾನ ಸೇನೆಯ ಅಧಿಕಾರಿಗಳೇ ಸುಮಾರು 200ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಅಮೆರಿಕ ಮೂಲದ ಕಾರ್ಯಕರ್ತ ಪ್ರಸ್ತುತ ಗಿಲ್ಗಿಟ್ ನಲ್ಲಿ ನೆಲೆಸಿರುವ ಸೆನೆಜ್ ಹಸ್ನಾನ್ ಈ ಸಂಬಂಧ ವಿಡಿಯೋ ಒಂದನ್ನು ಟ್ವೀಟ್ ಮಾಡಿ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪಾಕ್ ಸೇನಾಧಿಕಾರಿಯೊಬ್ಬರು ಬಾಲಕೋಟ್ ನಲ್ಲಿ 200ಕ್ಕೂ ಹೆಚ್ಚು ಮಂದಿ ಹುತಾತ್ಮರಾಗಿದ್ದಾರೆ ಎಂದು ಹೇಳಿದ್ದಾರೆ.

    https://twitter.com/SengeHSering/status/1105660202337095681

    ಸೆನೆಜ್ ಹಸ್ನಾನ್ ಪ್ರತಿಕ್ರಿಯಿಸಿ, ಜೈಶ್ ಸಂಘಟನೆ ಬಾಲಕೋಟ್ ನಲ್ಲಿ ಮದರಸಾ ನಡೆಯುತಿತ್ತು ಎನ್ನುವುದನ್ನು ಒಪ್ಪಿಕೊಂಡಿದೆ. ದಾಳಿ ನಡೆದ ನಂತರ ಮೃತಪಟ್ಟ ಉಗ್ರರ ದೇಹಗಳನ್ನು ಮರು ದಿನ ಖೈಬರ್ ಪಖ್ತೂಕ್ವಾ ಮತ್ತು ಬುಡಕಟ್ಟು ಜನ ವಾಸಿಸುವ ಸ್ಥಳಕ್ಕೆ ತೆಗೆದುಕೊಂಡು ಹೋಗಲಾಗಿದೆ ಎಂದು ಸ್ಥಳಿಯ ಉರ್ದು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಭಾರತ ಬಾಲಕೋಟ್ ಮೇಲೆ ನಡೆಸಿದ ದಾಳಿ ಯಶಸ್ವಿಯಾಗಿದೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳು ಸಿಗುತ್ತದೆ. ಒಂದು ವೇಳೆ ದಾಳಿ ನಡೆಯದೇ ಇದ್ದಲ್ಲಿ ಇದೂವರೆಗೆ ದೇಶದ ಮಾಧ್ಯಮಗಳನ್ನು ಮತ್ತು ವಿದೇಶಿ ಮಾಧ್ಯಮಗಳನ್ನು ಸ್ಥಳಕ್ಕೆ ತೆರಳಲು ಅನುಮತಿ ನೀಡಿಲ್ಲ ಯಾಕೆ? ಘಟನೆ ನಡೆದು ಹಲವು ದಿನಗಳು ಕಳೆದರೂ ಇದೂವರೆಗೂ ಯಾರನ್ನು ಬಿಡಲಿಲ್ಲ. ಪಾಕ್ ಸರ್ಕಾರದ ಈ ವರ್ತನೆಗಳನ್ನು ನೋಡಿದಾಗ ಯಾವುದನ್ನೋ ಮರೆಮಾಚಲು ಮುಂದಾಗುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್ ಸುರಿದು ಮೃತದೇಹ ಸುಟ್ಟರು – ಏರ್ ಸರ್ಜಿಕಲ್ ಸ್ಟ್ರೈಕ್‍ಗೆ ಸಿಕ್ತು ಆಡಿಯೋ ಸಾಕ್ಷ್ಯ!

    ಬಾಲಕೋಟ್ ಉಗ್ರರ ನೆಲೆಯ ಮೇಲೆ ದಾಳಿ ನಡೆಸುವುದಕ್ಕೂ ಮೊದಲು 300 ಮೊಬೈಲ್ ಗಳು ಸಕ್ರಿಯವಾಗಿತ್ತು ಎಂದು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ(ಎನ್‍ಟಿಆರ್‍ಒ) ದೃಢಪಡಿಸಿತ್ತು. ಭಾರತದ ದಾಳಿ ಬಳಿಕ ಪೆಟ್ರೋಲ್ ಹಾಕಿ ಪಾಕ್ ಸೇನೆ ಉಗ್ರರ ಮೃತ ದೇಹಗಳನ್ನು ಸುಟ್ಟು ಹಾಕಿದೆ ಎಂದು ವರದಿಯಾಗಿತ್ತು. ಇದನ್ನೂ ಓದಿ: 9 ದಿನಗಳಲ್ಲಿ 3ನೇ ಬಾರಿ ಪತ್ರಕರ್ತರಿಗೆ ನೋ ಎಂಟ್ರಿ: ಬಾಲಕೋಟ್ ಪ್ರದೇಶಕ್ಕೆ ಮಾಧ್ಯಮಗಳಿಗೆ ನಿಷೇಧ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಏರ್ ಸ್ಟ್ರೈಕ್ ಸಾಕ್ಷಿ ತರಲು ಪಾಕಿಸ್ತಾನಕ್ಕೆ ಹೋಗ್ತೀರಾ: ಸಿಬಲ್‍ಗೆ ರಾಜ್ಯವರ್ಧನ್ ಸವಾಲ್

    ಏರ್ ಸ್ಟ್ರೈಕ್ ಸಾಕ್ಷಿ ತರಲು ಪಾಕಿಸ್ತಾನಕ್ಕೆ ಹೋಗ್ತೀರಾ: ಸಿಬಲ್‍ಗೆ ರಾಜ್ಯವರ್ಧನ್ ಸವಾಲ್

    ನವದೆಹಲಿ: ಭಾರತದ ವಾಯುಪಡೆ ನಡೆಸಿರುವ ಏರ್ ಸ್ಟ್ರೈಕ್ ದಾಳಿಗೆ ಸಾಕ್ಷಿ ತರಲು ಪಾಕಿಸ್ತಾನಕ್ಕೆ ಹೋಗುತ್ತಿರಾ ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರಿಗೆ ಸವಾಲ್ ಎಸೆದಿದ್ದಾರೆ.

    ಫಬ್ರವರಿ 26ರಂದು ಭಾರತದ ವಾಯುಪಡೆ ನಡೆಸಿರುವ ಏರ್ ಸ್ಟ್ರೈಕ್‍ಗೆ ವಿಪಕ್ಷಗಳು ಸಾಕ್ಷಿ ಕೇಳುತ್ತಿವೆ. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಸಹ ವಾಯುದಾಳಿಗೆ ಸರ್ಕಾರ ಸಾಕ್ಷಿ ನೀಡಬೇಕು. ಮೋದಿ ಸರ್ಕಾರ ವಾಯುಸೇನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಕಪಿಲ್ ಸಿಬಲ್ ಹೇಳಿಕೆಗೆ ಕೇಂದ್ರ ಸಚಿವರು ತಿರುಗೇಟು ನೀಡಿದ್ದಾರೆ.

    ಕಪಿಲ್ ಸಿಬಲ್ ಜಿ, ನೀವು ನಮ್ಮ ಗುಪ್ತಚರದಳ ಮತ್ತು ವಾಯುಸೇನೆಯ ಶಕ್ತಿಯ ಬಗ್ಗೆ ನಿಮಗೆ ನಂಬಿಕೆಯಿಲ್ಲ. ಬದಲಾಗಿ ಅಂತರಾಷ್ಟ್ರೀಯ ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳ ಮೇಲೆ ನೀವು ಹೆಚ್ಚು ನಂಬಿಕೆಯನ್ನು ಹೊಂದಿದ್ದೀರಿ. ವಾಯುದಾಳಿಯಲ್ಲಿ ಯಾವುದೇ ಪ್ರಾಣಪಾಯ ಆಗಿಲ್ಲ ಅಂದ್ರೆ ನಿಮ್ಮ ಮುಖದ ಮೇಲೆ ನಗು ಕಾಣುತ್ತದೆ. ಇವಿಎಂ ವಿರುದ್ಧ ಸಾಕ್ಷ್ಯಾಧಾರಕ್ಕಾಗಿ ಲಂಡನ್ ವರೆಗೂ ಹೋಗಿ ಬಂದಿದ್ದೀರಿ. ಇದೀಗ ಏರ್ ಸ್ಟ್ರೈಕ್ ಸಾಕ್ಷಿಗಾಗಿ ಬಾಲಕೋಟ್‍ಗೆ ಹೋಗಲು ಸಿದ್ಧರಿದ್ದೀರಾ ಎಂದು ರಾಜ್ಯವರ್ಧನ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.

    ಸಿಬಲ್ ಟ್ವೀಟ್: ಮೋದಿ ಜೀ, ಅಂತರಾಷ್ಟ್ರೀಯ ಮಾಧ್ಯಮಗಳು ಬಾಲಕೋಟ್ ನಲ್ಲಿ ಯಾವುದೇ ಉಗ್ರರು ಹತರಾಗಿರುವ ವರದಿ ಆಗಿಲ್ಲ ಎಂದು ಹೇಳುತ್ತಿವೆ. ಹಾಗಾದ್ರೆ ಅವರೆಲ್ಲರೂ ಪಾಕಿಸ್ತಾನದ ಬೆಂಬಲಿಗರಾ? ನೀವು ಭಯೋತ್ಪದನೆ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದ್ದೀರಾ ಎಂದು ಕಪಿಲ್ ಸಿಬಲ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv