Tag: Balachandra Kalagi

  • Kodagu| ಬಿಜೆಪಿ ಮುಖಂಡನ ಹತ್ಯೆ ಕೇಸ್‌- ಇಬ್ಬರಿಗೆ ಜೀವಾವಧಿ ಶಿಕ್ಷೆ, 10 ಸಾವಿರ ದಂಡ

    Kodagu| ಬಿಜೆಪಿ ಮುಖಂಡನ ಹತ್ಯೆ ಕೇಸ್‌- ಇಬ್ಬರಿಗೆ ಜೀವಾವಧಿ ಶಿಕ್ಷೆ, 10 ಸಾವಿರ ದಂಡ

    ಮಡಿಕೇರಿ: ಕೊಡಗು ಜಿಲ್ಲಾ ಬಿಜೆಪಿಯ (BJP) ಮುಖಂಡ, ಸಂಪಾಜೆ ನಿವಾಸಿ ಬಾಲಚಂದ್ರ ಕಳಗಿ (Balachandra Kalagi) ಅವರನ್ನು ಹತೈಗೈದ ಅಪರಾಧಿಗಳಿಗೆ ಕೊಡಗು ಜಿಲ್ಲಾ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

    ಕಲ್ಲುಗುಂಡಿ ನಿವಾಸಿ ಹರಿಪ್ರಸಾದ್ ಹಾಗೂ ಲಾರಿ ಚಾಲಕ ಮಡಿಕೇರಿಯ ಜಯನ್ ಶಿಕ್ಷೆಗೆ ಗುರಿಯಾದವರಾಗಿದ್ದಾರೆ. ಅ.16ರಂದು ಇಬ್ಬರನ್ನು ದೋಷಿಗಳೆಂದು ತೀರ್ಪು ನೀಡಿದ್ದ ಕೋರ್ಟ್‌ ಶನಿವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

    10 ಸಾವಿರ ರೂ. ದಂಡದ ಮೊತ್ತವನ್ನು ಮೃತ ಬಾಲಚಂದ್ರ ಕಳಗಿ ಅವರ ಪತ್ನಿಗೆ ನೀಡುವಂತೆ ಆದೇಶಿಸಿದೆ. ಪ್ರಾಸಿಕ್ಯೂಷನ್ ಪರವಾಗಿ  ಸರ್ಕಾರಿ ಅಭಿಯೋಜಕ ದೇವೇಂದ್ರಪ್ಪ ವಾದ ಮಂಡಿಸಿದ್ದರು.

    ಏನಿದು ಪ್ರಕರಣ?
    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸಂಪಾಜೆ ಗ್ರಾ.ಪಂ ಮಾಜಿ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿ ಮಾರ್ಚ್‌ 19, 2019 ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಮೇಕೇರಿ-ತಾಳತ್‌ಮನೆ ರಸ್ತೆಯಲ್ಲಿ ಲಾರಿಯಿಂದ ಡಿಕ್ಕಿ ಹೊಡೆಸಿ ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: ಅಪಘಾತವೆಂದು ಬಿಂಬಿಸಿ ಕೊಡಗು ಬಿಜೆಪಿ ಮುಖಂಡ ಕಳಗಿಯನ್ನುಕೊಲೆಗೈದ ಆರೋಪಿಗಳು ಸಿಕ್ಕಿಬಿದಿದ್ದು ಹೇಗೆ? ಪೊಲೀಸರು ಕೊಲೆ ಪ್ರಕರಣವನ್ನು ಬೇಧಿಸಿದ್ದು ಹೇಗೆ?

    ಮೇಲ್ನೋಟಕ್ಕೆ ಅಪಘಾತ ಪ್ರಕರಣದಂತೆ ಕಂಡು ಬಂದಿದ್ದರೂ ತನಿಖೆ ನಡೆಸಿದ ನಂತರ ಪೊಲೀಸರು ಈ ವ್ಯವಸ್ಥಿತ ಕೊಲೆ ಪ್ರಕರಣವನ್ನು ಬೇಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಾಜೆ ಕಲ್ಲುಗುಂಡಿ ನಿವಾಸಿಗಳಾದ ಸಂಪತ್ ಕುಮಾರ್, ಹರಿಪ್ರಸಾದ್ ಮತ್ತು ಲಾರಿ ಚಾಲಕ ಮಡಿಕೇರಿಯ ಜಯನ್ ಎಂಬವರನ್ನು ಮಡಿಕೇರಿ ಪೋಲೀಸರು ಬಂಧಿಸಿದ್ದರು.

    ಜಾಮೀನಿನಲ್ಲಿ ಹೊರಗೆ ಬಂದಿದ್ದ ಆರೋಪಿಗಳಲ್ಲಿ ಒಬ್ಬನಾದ ಸಂಪತ್ ಕುಮಾರ್(35) ಎಂಬಾತನನ್ನು ಸುಳ್ಯದ ಶಾಂತಿನಗರದಲ್ಲಿ ಗುಂಡು ಹೊಡೆದು ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: ಮಡಿಕೇರಿಯ ಬಿಜೆಪಿ ಮುಖಂಡ ಕಳಗಿ ಹತ್ಯೆಯ ಆರೋಪಿ ಸುಳ್ಯದಲ್ಲಿ ಬರ್ಬರ ಹತ್ಯೆ- ಸಿನಿಮಾ ಸ್ಟೈಲ್‌ನಲ್ಲಿ ಕೊಲೆ

    ಕೊಲೆ ಮಾಡಿದ್ದು ಯಾಕೆ?
    ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿ ಅವರಲ್ಲಿ ಸಂಪತ್ ವೈನ್ ಶಾಪ್ ತೆರೆಯಲು ಅನುಮತಿ ಕೇಳಿದ್ದ. ಕಳಗಿ ಅವರು ವೈನ್ ಶಾಪ್ ತೆರೆಯಲು ಅನುಮತಿ ನೀಡಿರಲಿಲ್ಲ. ರಿಕ್ರಿಯೇಶನ್ ಕ್ಲಬ್ ಮಾಡುವುದಕ್ಕೂ ಕಳಗಿ ವಿರೋಧ ವ್ಯಕ್ತಪಡಿಸಿದ್ದರು. ಅನುಮತಿ ನೀಡದ್ದಕ್ಕೆ ಅಸಮಾಧಾನಗೊಂಡಿದ್ದ ಸಂಪತ್ ಪ್ಲಾನ್‌ ಮಾಡಿ ಕೊಲೆ ಮಾಡಿದ್ದ.

  • ಮಡಿಕೇರಿಯ ಬಿಜೆಪಿ ಮುಖಂಡ ಕಳಗಿ ಹತ್ಯೆಯ ಆರೋಪಿ ಸುಳ್ಯದಲ್ಲಿ ಬರ್ಬರ ಹತ್ಯೆ

    ಮಡಿಕೇರಿಯ ಬಿಜೆಪಿ ಮುಖಂಡ ಕಳಗಿ ಹತ್ಯೆಯ ಆರೋಪಿ ಸುಳ್ಯದಲ್ಲಿ ಬರ್ಬರ ಹತ್ಯೆ

    – ತಲವಾರಿನಿಂದ ಕಡಿದು, ಬಂದೂಕಿನಿಂದ ಹೊಡೆದು ಶೂಟೌಟ್‌
    – ಮಚ್ಚಿನಿಂದ ಕಾರನ್ನು ಪುಡಿಗೈದ ಆರೋಪಿಗಳು

    ಮಂಗಳೂರು: ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬಂದೂಕಿನ ಸದ್ದಿಗೆ ಬೆಚ್ಚಿ ಬಿದ್ದಿತ್ತು. ಬೆಳಗ್ಗೆ 6:45ರ ಸುಮಾರಿಗೆ ಸುಳ್ಯದ ಶಾಂತಿನಗರ ಬಳಿ ಗುಂಡಿನ ದಾಳಿ ನಡೆದಿತ್ತು. ಗುಂಡಿನ ದಾಳಿ ವೇಳೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿ ನಿವಾಸಿ ಸಂಪತ್ ಕುಮಾರ್ ಬಲಿಯಾಗಿ ಹೋಗಿದ್ದ.

    ಅಷ್ಟಕ್ಕೂ ಈ ಸಂಪತ್ ಕುಮಾರ್ ಓರ್ವ ಕೊಲೆ ಆರೋಪಿ. 2019 ಮಾರ್ಚ್‌ 20 ರಂದು ಸಂಪಾಜೆ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ, ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಎಂಬವರ ಕೊಲೆಯಾಗಿತ್ತು. ಅಪಘಾತ ಮಾಡುವ ರೀತಿಯಲ್ಲಿ ಸ್ಕೆಚ್ ಹಾಕಿ ಕೊಲೆ ಮಾಡಿದ್ದರು. ಆ ಕೊಲೆಯ ಮಾಸ್ಟರ್ ಮೈಂಡ್ ಬೇರೆ ಯಾರು ಅಲ್ಲ ಇಂದು ಬರ್ಬರವಾಗಿ ಗುಂಡೇಟು ತಿಂದು ಕೊಲೆಯಾಗಿ ಹೋದ ಇದೇ ಸಂಪತ್ ಕುಮಾರ್.

     

    ಕಲ್ಲುಗುಂಡಿ ನಿವಾಸಿಯಾಗಿದ್ದರೂ ಸುಳ್ಯದ ಶಾಂತಿನಗರದಲ್ಲಿ ಒಂದು ದೊಡ್ಡ ಮನೆಯನ್ನು ಬಾಡಿಗೆ ಪಡೆದು ವಾಸವಿದ್ದ. ಮರಳುಗಾರಿಕೆ, ಕಲ್ಲು ಗಣಿಗಾರಿಕೆ ಟಚ್ ಇದ್ದ ಸಂಪತ್ ಕುಮಾರ್ ಲಾರಿಗಳನ್ನು ಇಟ್ಟುಕೊಂಡು ಒಳ್ಳೆ ಹಣ ಮಾಡುತ್ತಿದ್ದ. ಕಳೆದ ಮೂರು ತಿಂಗಳಿಂದ ಇದೇ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದ.

    ಸಿನಿಮಾ ಸ್ಟೈಲ್ ನಲ್ಲಿ ಕೊಲೆ
    ಸಂಪತ್ ಕುಮಾರ್ ತನ್ನ ಕಾರಿನಲ್ಲಿ ಹೋಗಿ ಬರುತ್ತಿದ್ದ. ಇಂದು ಬೆಳಗ್ಗೆ ಆರೂ ಮುಕ್ಕಾಲರ ಸಮಯದಲ್ಲಿ ಮನೆಯಿಂದ ಹೊರಟ ಸಂಪತ್ ಕುಮಾರ್‌ನನ್ನು ಮನೆಯಿಂದ 200 ಮೀಟರ್ ದೂರದಲ್ಲಿ ಅಡ್ಡ ಹಾಕಲಾಗಿತ್ತು. ಅಡ್ಡಹಾಕಿದ ತಂಡ ಸಂಪತ್ ಕುಮಾರ್ ಕಾರಿಗೆ ಮಚ್ಚಿನಿಂದ ಹೊಡೆದು ಪುಡಿಪುಡಿ ಮಾಡಿದ್ದರು. ಕಾರು ಮುಂದೆ ಹೋಗದಂತೆ ಮತ್ತೊಂದು ಕಾರು ಅಡ್ಡ ಇಟ್ಟು ಬಂದೂಕು ತೆಗೆದು ಶೂಟ್ ಮಾಡಲು ಮುಂದಾಗಿದ್ದರು.

    ಕಾರನ್ನು ಹಿಂದಕ್ಕೆ ತೆಗೆಯಲೂ ಆಗದೆ ಸಂಪತ್ ಕುಮಾರ್ ಕಾರಿನಿಂದ ಇಳಿದು ಅಡಕೆ ತೋಟದ ಮಾರ್ಗವಾಗಿ ಓಡಿಹೋಗಿದ್ದ. ಆತನನ್ನು ಅಟ್ಟಾಡಿಸಿಕೊಂಡು ಹೋದ ನಾಲ್ಕು ಜನ ದುಷ್ಕರ್ಮಿಗಳು ಆತನ ಹಿಂದೆಯೇ ಹೋದರು. ತನ್ನ ಮನೆಯ ಕೆಳಭಾಗದಲ್ಲಿ ಇದ್ದ ಮತ್ತೊಂದು ಮನೆ ಒಳಗೆ ನುಗ್ಗಿದ್ದನು. ಈ ಮನೆಯ ಮಾಲೀಕ ಹೊರಗಡೆ ಕೆಲಸ ಮಾಡುತ್ತಾ ನಿಂತಿದ್ದು ಆತನ ಪತ್ನಿ ಮತ್ತು ಸಣ್ಣ ಮಗು ಮನೆಯ ಒಳಗಿದ್ದರು.

    ಬಾಲಚಂದ್ರರನ್ನು ಹತೈಗೈದ ಆರೋಪಿಗಳು ಹರಿಪ್ರಸಾದ್, ಸಂಪತ್ ಕುಮಾರ್, ಜಯನ್
    ಬಾಲಚಂದ್ರರನ್ನು ಹತೈಗೈದ ಆರೋಪಿಗಳು ಹರಿಪ್ರಸಾದ್, ಸಂಪತ್ ಕುಮಾರ್, ಜಯನ್

    ಇನ್ನು ಮನೆಯೊಳಗೆ ರಕ್ತಸಿಕ್ತವಾಗಿ ಹೋದ ಸಂಪತ್ ನನ್ನು ಕಂಡು ಶೈಲಜಾ ಗಾಬರಿಯಾಗಿ ಯಾಕೆ ಮನೆ ಒಳಗೆ ಬಂದಿದ್ದು ಯಾಕೆ ಎಂದು ಕೇಳಿದ್ದಾರೆ.. ಅದಕ್ಕೆ ನಾಲ್ಕು ಜನ ಅಟ್ಟಾಡಿಸಿಕೊಂಡು ಬರುತ್ತಿದ್ದಾರೆ ಕಾಪಾಡಿ ಯಾರಿಗೂ ಹೇಳಬೇಡಿ ಅಂತ ಸಂಪತ್ ಕುಮಾರ್ ಹೇಳಿ ಒಳಗೆ ಹೋಗಿ ಮನೆಯ ಡೋರ್ ಲಾಕ್ ಮಾಡಿಕೊಂಡಿದ್ದಾನೆ.

    ಇತ್ತ ಮನೆಯಿಂದ ಶೈಲಜಾ ಹೊರಗಡೆ ಬಂದು ಕಿರುಚಿಕೊಂಡಿದ್ದಾರೆ. ಬಳಿಕ ಪಕ್ಕದ ಮನೆಯವರು ಬಂದು ಅಲ್ಲಿದ್ದ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಮನೆ ಒಳಗೆ ಇದ್ದ ಸಂಪತ್ ಕುಮಾರ್ ಬೆನ್ನಿಗೆ ಗುಂಡು ಹೊಡೆದು ಬಳಿಕ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಮನೆಯಲ್ಲಿ ನಾವು ಹೇಗೆ ವಾಸ ಮಾಡೋದು ಸರ್ಕಾರ ಬೇರೆ ಮನೆ ಮಾಡಿ ಕೊಡಲಿ ಅನ್ನೋದು ಈ ಮನೆಯವರ ಅಳಲು. ಇದನ್ನೂ ಓದಿ: ಅಪಘಾತವೆಂದು ಬಿಂಬಿಸಿ ಕೊಡಗು ಬಿಜೆಪಿ ಮುಖಂಡನ ಕೊಲೆಗೈದ ಆರೋಪಿಗಳು ಅಂದರ್- ಸಿಕ್ಕಿ ಬಿದ್ದಿದ್ದು ಹೇಗೆ?

    ಮನೆಯೊಳಗೆ ಹೋದ ನಾಲ್ಕು ಜನ ದುಷ್ಕರ್ಮಿಗಳು ಎರಡು ಬಂದೂಕು ಹಿಡಿದಿದ್ದರು. ಒಂದು ಚೂರಿ ಎರಡು ತಲವಾರುಗಳನ್ನು ಹಿಡಿದಿದ್ದರಂತೆ. ಸ್ಥಳೀಯರೋರ್ವರು ಓರ್ವ ದುಷ್ಕರ್ಮಿಯ ಬಂದೂಕನ್ನು ಕಿತ್ತುಕೊಂಡು ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಆತನ ಕೈಗೆ ಮಚ್ಚಿನಿಂದ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ. ಉಳಿದವರು ಬಂದೂಕು ತೋರಿಸಿ ಆತನನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ. ಆದರೆ ಹೋಗುವಾಗ ಒಂದು ಬಂದೂಕನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.

    ಬಾಲಚಂದ್ರ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಗುದ್ದಿಸಿದ್ದ ಆರೋಪಿಗಳು
    ಬಾಲಚಂದ್ರ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಗುದ್ದಿಸಿದ್ದ ಆರೋಪಿಗಳು

    ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಎಂ ಲಕ್ಷ್ಮೀಪ್ರಸಾದ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಂಡ ಸ್ಥಳಕ್ಕೆ ಆಗಮಿಸಿ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಿ ಕೊಂಡುಹೋಗಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಜನರು ಇದನ್ನು ನೋಡಲು ನೆರೆದಿದ್ದರು. ಆರೋಪಿಗಳು ಯಾರು ಎಂಬ ಜಾಡುಹಿಡಿದು ಎರಡು ತಂಡ ಆರೋಪಿಗಳ ಪತ್ತೆಗಾಗಿ ಹೋಗಿದ್ದಾರೆ. ಆರೋಪಿಗಳ ಸುಳಿವು ಕೂಡ ಸಿಕ್ಕಿದ್ದು ಹಳೆಯ ದ್ವೇಷಕ್ಕೆ ಕೊಲೆ ಆಗಿದೆ ಅನ್ನೋದು ಪ್ರಾಥಮಿಕ ವರದಿಯಲ್ಲಿ ದೃಢಪಟ್ಟಿದೆ.  ಇದನ್ನೂ ಓದಿ: ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹತ್ಯೆ – ಆರೋಪಿಗಳ ಗಡಿಪಾರಿಗೆ ಆಗ್ರಹಿಸಿ ಜನಾಂದೋಲನ

    ಕಳೆದ ಜೂನ್ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿ ಬಂದು ಸುಳ್ಯದಲ್ಲಿ ಒಳ್ಳೆ ಹಣ ಮಾಡುತ್ತಿದ್ದ ಸಂಪತ್ ಕುಮಾರ್ ಈಗ ಏಕಾಏಕಿ ಕೊಲೆಯಾಗಿ ಹೋಗಿದ್ದಾನೆ‌. ಸದ್ಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಏನೇ ಇದ್ದರೂ ಕೊಲೆ ಮಾಡಿದವನು ಕೊಲೆಯಿಂದಲೇ ಸಾಯುತ್ತಾನೆ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಿದೆ.

  • ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹತ್ಯೆ – ಆರೋಪಿಗಳ ಗಡಿಪಾರಿಗೆ ಆಗ್ರಹಿಸಿ ಜನಾಂದೋಲನ

    ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹತ್ಯೆ – ಆರೋಪಿಗಳ ಗಡಿಪಾರಿಗೆ ಆಗ್ರಹಿಸಿ ಜನಾಂದೋಲನ

    ಮಡಿಕೇರಿ: ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಲಚಂದ್ರ ಕಳಗಿ ಹತ್ಯೆ ಮಾಡಿದ ಆರೋಪಿಗಳ ಗಡಿಪಾರು ಮಾಡುವಂತೆ ಒತ್ತಾಯಿಸಿ ಬೃಹತ್ ಜನಾಂದೋಲನ ಮಡಿಕೇರಿ ತಾಲೂಕಿನ ಸಂಪಾಜೆಯಲ್ಲಿ ನಡೆಯಿತು.

    ಸಂಪಾಜೆ ಗೇಟ್ ಬಳಿಯಿಂದ ಕೊಯಿನಾಡುವರೆಗೆ ಬಾಲಚಂದ್ರ ಕಳಗಿಯ ಫೋಟೋ ಹಿಡಿದು ಮೆರವಣಿಗೆ ಸಾಗಿದ ಸಾವಿರಾರು ಜನ ಆರೋಪಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಜನಜಾಗೃತಿ ಸಭೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ವಿಶ್ವ ಹಿಂದು ಪರಿಷತ್‍ನ ವಿಭಾಗಿಯ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ಪಾಲ್ಗೊಂಡಿದ್ದರು.

    ಮಾರ್ಚ್ 19 ಸಂಜೆ ಮೇಕೇರಿ ಬಳಿ ಕಳಗಿಯ ಕಾರಿಗೆ ಲಾರಿ ಡಿಕ್ಕಿ ಹೊಡೆದು ಹತ್ಯೆ ಮಾಡಲಾಗಿತ್ತು. ಬಳಿಕ ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಜಯ, ಸಂಪತ್, ಹರಿಪ್ರಸಾದ್ ಎಂಬವರನ್ನು ಬಂಧಿಸಿದ್ದರು. ಇದೀಗ ಜಾಮೀನಿನಲ್ಲಿ ಹೊರಬಂದಿದ್ದು, ಅವರಿಗೆ ಗ್ರಾಮಕ್ಕೆ ಬರಲು ಅವಕಾಶ ನೀಡಬಾರದೆಂದು ಆಗ್ರಹಿಸಿ ಇಂದು ಕಾರ್ಯಕ್ರಮ ನಡೆಯಿತು. ಮುಖ್ಯ ಭಾಷಣ ಮಾಡಿದ ಶರಣ್ ಪಂಪ್‍ವೆಲ್ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.

    ಆರಂಭದಲ್ಲಿ ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಈ ಪ್ರಕರಣವನ್ನು ಬಿಂಬಿಸಲಾಗಿತ್ತು. ಆದರೆ ಬಾಲಚಂದ್ರ ಅವರ ಚಿಕ್ಕಪ್ಪ ರಾಜಾರಾಮ ಕಳಗಿ ಸಲ್ಲಿಸಿದ ಸಂಶಯಾಸ್ಪದ ಬಗ್ಗೆ ದೂರು ಪರಿಗಣಿಸಿ ತನಿಖೆ ನಡೆಸಿದ ಮಡಿಕೇರಿ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು.

    ಹತ್ಯೆ ಮಾಡಿದ್ದು ಯಾಕೆ?
    ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿ ಅವರಲ್ಲಿ ಸಂಪತ್ ವೈನ್ ಶಾಪ್ ತೆರೆಯಲು ಅನುಮತಿ ಕೇಳಿದ್ದ. ಕಳಗಿ ಅವರು ವೈನ್ ಶಾಪ್ ತೆರೆಯಲು ಅನುಮತಿ ನೀಡಿರಲಿಲ್ಲ. ರಿಕ್ರಿಯೇಶನ್ ಕ್ಲಬ್ ಮಾಡುವುದಕ್ಕೂ ಕಳಗಿ ವಿರೋಧ ವ್ಯಕ್ತಪಡಿಸಿದ್ದರು. ಅನುಮತಿ ನೀಡದ್ದಕ್ಕೆ ಅಸಮಾಧಾನಗೊಂಡಿದ್ದ ಸಂಪತ್ ಕೊಲೆ ಮಾಡಲು ಪ್ಲಾನ್ ಮಾಡಿದ್ದ.

    ಕೊಲೆ ನಡೆಸಲು ಜಯ ಮತ್ತು ಹರಿಪ್ರಸಾದ್‍ಗೆ ಸಂಪತ್ ಸುಪಾರಿ ನೀಡಿದ್ದ. ಹಿಂದೆ ಜಯನ ವಾಹನ ಅಪಘಾತಗೊಂಡಿದ್ದಾಗ ಸಂಪತ್ ಬಿಡಿಸಿಕೊಟ್ಟಿದ್ದ. ಹೀಗಾಗಿ ಜಯ ಮತ್ತು ಸಂಪತ್ ಸ್ನೇಹಿತರಾಗಿದ್ದರು. ಹತ್ಯೆ ಮಾಡಿದ್ರೆ 1.5 ಲಕ್ಷದ ಲೋನ್ ಕ್ಲಿಯರ್ ಮಾಡಿಕೊಡುತ್ತೇನೆ ಎಂದು ಸುಪಾರಿ ನೀಡಿದ್ದ. ಈ ಕೃತ್ಯಕ್ಕೆ ಸ್ನೇಹಿತ ಹರಿಪ್ರಸಾದ್ ಸಹಕರಿಸುವುದಾಗಿ ತಿಳಿಸಿದ್ದ.

    ಪ್ಲಾನ್ ಹೀಗಿತ್ತು:
    ಕಳಗಿಯನ್ನು ಹತ್ಯೆ ಮಾಡಲು ಮೂವರು ಒಂದು ತಿಂಗಳಿನಿಂದ ಸರಿಯಾದ ಸಮಯವನ್ನು ಕಾಯುತ್ತಿದ್ದರು. ಮಾರ್ಚ್ 19 ರಂದು ಕಳಗಿ ಅವರು ಮಡಿಕೇರಿಗೆ ತೆರಳಿ ಮರಳಿ ಮನೆಗೆ ಬರುತ್ತಿದ್ದಾಗ ಡ್ರೈವರ್ ಆಗಿದ್ದ ಜಯ ತಾಳತ್ತಮನೆ ಸಮೀಪ ಲಾರಿಯನ್ನು ಓಮ್ನಿಗೆ ಗುದ್ದಿಸಿದ್ದ. ಪರಿಣಾಮ ಕಳಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

    ಅನುಮಾನ ಬಂದಿದ್ದು ಹೇಗೆ?
    ಬಾಲಚಂದ್ರ ಕಳಗಿ ಸಾವಿನ ಬಗ್ಗೆ ಹಲವು ಸಂಶಯಗಳು ಹುಟ್ಟಿಕೊಂಡಿದ್ದು, ಸೂಕ್ತ ತನಿಖೆ ನಡೆಸಿ ಸತ್ಯಾಂಶವನ್ನು ಬಯಲಿಗೆ ಎಳೆಯುವಂತೆ ಮೃತರ ಚಿಕ್ಕಪ್ಪ ಹಾಗೂ ಬಿಜೆಪಿ ಪ್ರಮುಖ ರಾಜಾರಾಮ ಕಳಗಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರ್ಚ್ 23 ರಂದು ದೂರು ದಾಖಲಿಸಿದ್ದರು.

    ಸಾವಿನ ಬಗ್ಗೆ ಮೃತರ ಸಂಬಂಧಿಕರು ಹಾಗೂ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಜಿಲ್ಲಾ ಬಿಜೆಪಿಯೂ ಕಳಗಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿತ್ತು. ಮೃತರ ಚಿಕ್ಕಪ್ಪ ನೀಡಿರುವ ದೂರಿನ ಬೆನ್ನಲ್ಲೇ ಡಿವೈಎಸ್‍ಪಿ ಕೆ.ಎಸ್.ಸುಂದರರಾಜ್ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಸಿದ್ದಯ್ಯ ಹಾಗೂ ಠಾಣಾಧಿಕಾರಿ ಚೇತನ್ ತನಿಖೆ ಆರಂಭಿಸಿದ್ದರು.

    ಸಿಕ್ಕಿಬಿದ್ದಿದ್ದು ಹೇಗೆ?
    ಬಲವಾದ ಶಂಕೆ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ಜಯನನ್ನು ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ. ಈ ವಿಚಾರಣೆ ವೇಳೆ ಜಯ ಸತ್ಯವನ್ನು ಹೇಳಿದ್ದು, ವೈನ್, ಮರಳು ಮಾಫಿಯಾ, ರಿಕ್ರಿಯೇಶನ್ ಕ್ಲಬ್ ಮಾಡಲು ಬಿಡದಕ್ಕೆ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಈತ ತಿಳಿಸಿದ ಮಾಹಿತಿ ಆಧಾರದ ಹಿನ್ನೆಲೆಯಲ್ಲಿ ಉಳಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.