Tag: Bakrid

  • ಹಬ್ಬ ಬಿಡಿ, ಬದುಕು ಕಟ್ಟಿಕೊಳ್ಳಲು ನಮ್ಗೆ ಸಹಾಯ ಮಾಡಿ- ಮುಸ್ಲಿಂ ಮಹಿಳೆಯರು ಕಣ್ಣೀರು

    ಹಬ್ಬ ಬಿಡಿ, ಬದುಕು ಕಟ್ಟಿಕೊಳ್ಳಲು ನಮ್ಗೆ ಸಹಾಯ ಮಾಡಿ- ಮುಸ್ಲಿಂ ಮಹಿಳೆಯರು ಕಣ್ಣೀರು

    ಮಡಿಕೇರಿ: ಇಂದು ಬಕ್ರಿದ್ ಹಬ್ಬ, ಆದರೆ ಸಂಭ್ರಮದಿಂದ ಅದನ್ನು ಆಚರಿಸುವ ಜನರ ಖುಷಿಯನ್ನು ಪ್ರವಾಹ ಕಿತ್ತುಕೊಂಡಿದೆ. ಪ್ರವಾಹದಿಂದ ಮನೆಗಳನ್ನು ತೊರೆದು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಮುಸ್ಲಿಂ ಮಹಿಳೆಯರು ಹಬ್ಬವನ್ನು ಮುಂದಿನ ವರ್ಷ ಮಾಡುತ್ತೇವೆ. ನಮಗೆ ನಮ್ಮ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿ ಎಂದು ಕಣ್ಣೀರು ಹಾಕಿದ್ದಾರೆ.

    ಕೊಡಗಿನ ನೆಲ್ಯಹುದಿಕೇರಿಯ ನಿರಾಶ್ರಿತ ಕೇಂದ್ರದಲ್ಲಿ ತಂಗಿರುವ ಮುಸ್ಲಿಂ ಮಹಿಳೆಯರು ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮುಂದಿನ ವರ್ಷ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡುತ್ತೇವೆ. ಸದ್ಯ ನಮಗೆ ನಮ್ಮ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿ. ಒಂದು ತಿಂಗಳಿಂದ ಹಬ್ಬಕ್ಕೆ ತಯಾರಿ ಮಾಡಿಕೊಂಡಿದ್ದೆವು. ಆದರೆ ಪ್ರವಾಹಕ್ಕೆ ಸಿಲುಕಿ ಎಲ್ಲವೂ ಕೊಚ್ಚಿಹೋಯಿತು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ನಮ್ಮ ಮನೆಗಳು, ಆಸ್ತಿಪಾಸ್ತಿಗಳು ನಾಶವಾಗಿದೆ. ಕೆಲವರು ಎಲ್ಲವನ್ನೂ ಕಳೆದುಕೊಂದು ಸಂಕಷ್ಟದಲ್ಲಿದ್ದಾರೆ. ಸದ್ಯ ನಿರಾಶ್ರಿತ ಕೇಂದ್ರದಲ್ಲಿ ನಮಗೆ ಬಟ್ಟೆ, ಊಟವನ್ನು ಕೊಡುತ್ತಿದ್ದಾರೆ. ಆದರೆ ಪ್ರವಾಹ ತಗ್ಗಿದ ಬಳಿಕ ಇಲ್ಲಿಂದ ಹೊರಹೋದ ನಂತರ ನಮ್ಮ ಮುಂದಿನ ಜೀವನ ಹೇಗೆ ಎಂದು ತಿಳಿದಿಲ್ಲ ಎಂದು ತಮ್ಮ ಪರಿಸ್ತಿತಿ ಬಗ್ಗೆ ಹೇಳಿಕೊಂಡಿದ್ದಾರೆ.

    ಕೊಡಗಿನಲ್ಲಿ ಮಳೆಯ ಅಬ್ಬರಕ್ಕೆ ಜನರು ನಲುಗಿ ಹೋಗಿದ್ದಾರೆ. ಕೊಡಗಿನ ಬಹುತೇಕ ಪ್ರದೇಶಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂದು ನಿರಾಶ್ರಿತ ಕೇಂದ್ರಗಳಲ್ಲಿ ನೆರವು ಪಡೆದಿದ್ದಾರೆ. ಹೀಗಾಗಿ ಮುಸ್ಲಿಮರು ಸಂಭ್ರಮದಿಂದ ಆಚರಿಸುವ ಬಕ್ರಿದ್ ಹಬ್ಬವನ್ನು ಮಾಡಲು ಸಾಧ್ಯವಾಗುತ್ತಿಲ್ಲ.

  • 8 ಲಕ್ಷಕ್ಕೆ ಮಾರಾಟವಾದ ಸಲ್ಮಾನ್- ಮೇಕೆಯ ವಿಶೇಷತೆಯೇನು?

    8 ಲಕ್ಷಕ್ಕೆ ಮಾರಾಟವಾದ ಸಲ್ಮಾನ್- ಮೇಕೆಯ ವಿಶೇಷತೆಯೇನು?

    ಲಕ್ನೋ: ಇಂದು ದೇಶಾದ್ಯಂತ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಹೀಗಾಗಿ ಹಬ್ಬದ ವಿಶೇಷವಾಗಿ ಸಲ್ಮಾನ್ ಎಂಬ ಹೆಸರಿನ ಮೇಕೆ ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಬರೋಬ್ಬರಿ 8 ಲಕ್ಷಕ್ಕೆ ಮಾರಾಟವಾಗಿದೆ.

    ಮೇಕೆಯನ್ನು ದಷ್ಟಪುಷ್ಟವಾಗಿ ಸಾಕಿರುವ ಮಾಲೀಕ ಮೊಹಮ್ಮದ್ ನಿಜಾಮುದ್ದೀನ್, ಇದನ್ನು 8 ಲಕ್ಷ ಮಾರಾಟ ಮಾಡುವುದಾಗಿ ಹೇಳಿದ್ದಾರೆ. ತ್ಯಾಗ ಹಾಗೂ ಬಲಿದಾನದ ಅಂಗವಾಗಿ ಅಚರಿಸುವ ಈ ಬಕ್ರೀದ್ ಹಬ್ಬದಲ್ಲಿ ಕುರಿ ಮೇಕೆಗಳು ಅಪಾರ ಪ್ರಮಾಣದಲ್ಲಿ ಮಾರಾಟವಾಗುತ್ತವೆ.

    ಸಲ್ಮಾನ್ ಮೇಕೆಯ ವಿಶೇಷತೆಯ ಬಗ್ಗೆ ಹೇಳಿರುವ ಮಾಲೀಕ ಮೊಹಮ್ಮದ್ ನಿಜಾಮುದ್ದೀನ್, ಇದಕ್ಕೆ ಈ ಪ್ರಮಾಣದ ಬೆಲೆ ಬರಲು ಆದರ ಮೈ ಮೇಲೆ ಇರುವ ಕಪ್ಪು ಚುಕ್ಕಿಗಳು ಕಾರಣವಾಗಿದೆ. ಏಕೆಂದರೆ ಈ ಕಪ್ಪು ಚುಕ್ಕೆಗಳನ್ನು ಕೂಡಿಸಿದರೆ, ಅರೇಬಿಕ್ ಭಾಷೆಯಲ್ಲಿ `ಅಲ್ಲಾಹ್’ ಎಂಬ ಅರ್ಥ ಬರತ್ತದೆ. ಹೀಗಾಗಿ ಸಲ್ಮಾನ್ ಮೇಕೆಯನ್ನು 8 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದೇನೆ ಎಂದಿದ್ದಾರೆ.

    ಇದರ ಜೊತೆಗೆ ಮೇಕೆಯನ್ನು ಸಾಕಲು ದಿನಕ್ಕೆ 700ರಿಂದ 800 ರೂ. ಖರ್ಚು ಮಾಡಿದ್ದೇನೆ. ಇಷ್ಟು ದಿನ ಇದು ನಮ್ಮ ಮನೆಯ ಸದಸ್ಯನಾಗಿತ್ತು, ನಮ್ಮ ಜೊತೆಯಲ್ಲೇ ಮಲಗುತ್ತಿತ್ತು. ನಾವು ತಿನ್ನುವ ಆಹಾರವನ್ನೇ ಅದೂ ತಿನ್ನುತ್ತಿತ್ತು. ಬೇರೆ ಮೇಕೆಗಳ ಹಾಗೇ ನಾವು ಇದಕ್ಕೆ ಹುಲ್ಲು, ಎಲೆ ಮತ್ತು ಸೊಪ್ಪು ಹಾಕಿ ಬೆಳೆಸಿಲ್ಲ ಅದರ ಬದಲು ನಾವು ತಿನ್ನುವ ಚಿಪ್ಸ್, ಹಣ್ಣುಗಳು, ಊಟ ತಿನ್ನಿಸಿ ತುಂಬಾ ಚೆನ್ನಾಗಿ ಬೆಳೆಸಿದ್ದೇವೆ. ಈಗ ಇದರ ತೂಕ ಬರೊಬ್ಬರಿ 95 ಕೆ.ಜಿ ಇದೆ ಎಂದು ಮಾಲೀಕ ನಿಜಾಮುದ್ದೀನ್ ಹೇಳಿದ್ದಾರೆ.

    ಈ ಮೇಕೆಗೆ ಇಷ್ಟೊಂದು ಬೆಲೆ ಬರಲು ಅದಕ್ಕೆ ಇಟ್ಟಿರುವ ಹೆಸರು ಕೂಡ ಕಾರಣ ಎಂದು ಹೇಳಲಾಗುತ್ತಿದೆ. ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಹೆಸರು ಮೇಕೆಗೆ ಇಟ್ಟಿರುವ ಕಾರಣ ಸಲ್ಲು ಅಭಿಮಾನಿಗಳು ಇದಕ್ಕೆ ಜಾಸ್ತಿ ಬೆಲೆ ಕೊಟ್ಟು ಖರೀದಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.

    ಸಾಂಪ್ರದಾಯಿಕವಾಗಿ, ಹಜ್ ತೀರ್ಥ ಯಾತ್ರೆ ಪ್ರಾರಂಭವಾದ ಎರಡು ದಿನಗಳ ನಂತರ ಈದ್ ಅಲ್-ಅಧಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಪ್ರಾರಂಭದ ದಿನಾಂಕವು ಹೊಸ ಅರ್ಧಚಂದ್ರವನ್ನು ನೋಡುವುದರ ಮೇಲೆ ಅವಲಂಬಿತವಾಗಿರುತ್ತದೆ. ಇದು ಇಸ್ಲಾಂ ಕ್ಯಾಲೆಂಡರ್‍ನಲ್ಲಿ ಪವಿತ್ರ ತಿಂಗಳುಗಳ 10 ನೇ ದಿನದಂದು ಪ್ರಾರಂಭವಾಗುತ್ತದೆ.

  • ಈದ್ ಅಲ್-ಅಧಾ ಹಬ್ಬಕ್ಕೆ ಗೋವನ್ನು ಬಲಿ ಕೊಡಬೇಡಿ- ತೆಲಂಗಾಣ ಸಚಿವರಿಂದ ಮನವಿ

    ಈದ್ ಅಲ್-ಅಧಾ ಹಬ್ಬಕ್ಕೆ ಗೋವನ್ನು ಬಲಿ ಕೊಡಬೇಡಿ- ತೆಲಂಗಾಣ ಸಚಿವರಿಂದ ಮನವಿ

    ಹೈದರಾಬಾದ್: ಬಕ್ರೀದ್ ಎಂದು ಜನಪ್ರಿಯವಾಗಿರುವ ಈದ್ ಅಲ್-ಅಧಾ ಹಬ್ಬದಲ್ಲಿ ಗೋವುಗಳನ್ನು ಬಲಿ ಕೊಡಬೇಡಿ ಎಂದು ತೆಲಂಗಾಣ ಗೃಹ ಸಚಿವ ಮಹಮೂದ್ ಅಲಿ ಅವರು ಮುಸ್ಲಿಂ ಬಾಂಧವರ ಬಳಿ ಮನವಿ ಮಾಡಿದ್ದಾರೆ.

    ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಸದಸ್ಯತ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದು ನಿರ್ದಿಷ್ಟ ಸಮುದಾಯದ ಜನರು ಗೋವುಗಳನ್ನು ಪೂಜಿಸುತ್ತಾರೆ. ಅವರ ನಂಬಿಕೆಯನ್ನು ನಾವು ಗೌರವಿಸಬೇಕು. ಹೀಗಾಗಿ ಬಕ್ರೀದ್ ಸಮಯದಲ್ಲಿ ಗೋವುಗಳನ್ನು ಬಲಿ ಕೊಡಬೇಡಿ ಎಂದು ಮುಸ್ಲಿಂ ಬಾಂಧವರ ಬಳಿ ಕೇಳಿಕೊಂಡರು.

    ನಾನು ಎಲ್ಲಾ ಮುಸ್ಲಿಂ ಸಹೋದರರಿಗೆ ಗೋವುಗಳ ಬಲಿ ಕೊಡುವುದನ್ನು ತಪ್ಪಿಸಬೇಕೆಂದು ಮನವಿ ಮಾಡುತ್ತೇನೆ. ಹಸುವನ್ನು ಒಂದು ಧರ್ಮದಲ್ಲಿ ಗೌರವಿಸಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ. ಮುಸ್ಲಿಂ ಬಾಂಧವರು ಗೋವುಗಳ ಬದಲಿಗೆ ಆಡು ಮತ್ತು ಇತರೆ ಸಣ್ಣ ಪ್ರಾಣಿಗಳನ್ನು ಹಬ್ಬದಲ್ಲಿ ಬಲಿ ಕೊಡಲು ಬಳಸಬಹುದು ಎಂದು ಅಲಿ ಅವರು ಸಲಹೆ ನೀಡಿದರು.

    ಈ ವೇಳೆ ಹೈದರಾಬಾದ್‍ನ ಐತಿಹಾಸಿಕ ಸ್ಥಳವಾದ ಚಾರ್ಮಿನಾರ್ ರನ್ನು ಉಲ್ಲೇಖಿಸಿ, ಈ ಸ್ಮಾರಕವು ನಮ್ಮ ಪೂರ್ವಜರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಚಾರ್ಮಿನಾರ್ ನ ನಾಲ್ಕು ಸ್ತಂಭಗಳು ಹಿಂದೂ, ಇಸ್ಲಾಂ, ಸಿಖ್ ಮತ್ತು ಕ್ರಿಶ್ಚಿಯನ್ ನಾಲ್ಕು ಧರ್ಮವನ್ನು ಪ್ರತಿನಿಧಿಸುತ್ತದೆ. ಜನರ ನಂಬಿಕೆಯನ್ನು ಒಗ್ಗುಡಿಸುವ ಉದ್ದೇಶದಿಂದ ಮೊಹಮ್ಮದ್ ಕುಲಿ ಕುತುಬ್ ಶಾಹಿ ಚಾರ್ಮಿನಾರ್ ನಿರ್ಮಿಸಿದ್ದಾರೆ ಎಂದರು.

    ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರು ಕೂಡ ಶಾಹಿಯ ರೀತಿಯೇ ಯೋಚಿಸುತ್ತಾರೆ. ಶಾಹಿಯ ನಂತರ, ಎಲ್ಲಾ ಜನರನ್ನು ಒಗ್ಗೂಡಿಸಿ ಇರಿಸುವ ನಂಬಿಕೆಯನ್ನು ಹೊಂದಿರುವ ನಾಯಕರಿದ್ದಾರೆ ಎಂದರೆ, ಅವರೇ ನಮ್ಮ ಸಿಎಂ ಕೆ.ಸಿ ರಾವ್ ಎಂದು ಹಾಡಿ ಹೊಗಳಿದರು.

    ಈ ಬಾರಿ ಬಕ್ರೀದ್ ಹಬ್ಬವನ್ನು ಆಗಸ್ಟ್ 11ರಂದು ಆಚರಿಸಲಾಗುತ್ತಿದ್ದು, ಹಬ್ಬದಲ್ಲಿ ಪ್ರಾಣಿ ಬಲಿ ನೀಡುವುದು ಸಂಪ್ರದಾಯವಾಗಿದೆ. ಹೀಗಾಗಿ ಬಕ್ರೀದ್ ಹಬ್ಬಕ್ಕೆ ಗೋವುಗಳನ್ನು ಬಲಿ ನೀಡುವವರ ವಿರುದ್ಧ ಕಾನೂನಿನ ತನ್ನ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಅಲ್ಲದೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ರಾಜ್ಯದಲ್ಲಿ ಪೊಲೀಸರು ಜಾಗರೂಕರಾಗಿದ್ದಾರೆ. ಕಳೆದ ಬಾರಿ ಎಲ್ಲಾ ಸಾರಿಗೆ ವಾಹನಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದರು. ಆದ್ದರಿಂದ ಗೋವುಗಳ ಬಲಿ ಪಡೆಯಬೇಡಿ ಎಂದು ಸೂಚಿಸಿದರು.

  • ಉಡುಪಿಯಲ್ಲಿ ನೆರೆ ಸಂತ್ರಸ್ತರಿಗಾಗಿ ಸಾಮೂಹಿಕ ನಮಾಜ್, ಕೊಡಗಿಗೆ ದಾನ

    ಉಡುಪಿಯಲ್ಲಿ ನೆರೆ ಸಂತ್ರಸ್ತರಿಗಾಗಿ ಸಾಮೂಹಿಕ ನಮಾಜ್, ಕೊಡಗಿಗೆ ದಾನ

    ಉಡುಪಿ: ಜಿಲ್ಲೆಯಲ್ಲಿ ಸೌಹಾರ್ದತೆಯ ಅರ್ಥ ಪೂರ್ಣ ಬಕ್ರೀದ್ ಆಚರಣೆ ಮಾಡಲಾಗಿದ್ದು, ಈ ಬಾರಿ ನೂರಾರು ಮುಸ್ಲಿ ಬಾಂಧವರು ಕೊಡಗು ಹಾಗೂ ಕೇರಳ ಸಂತ್ರಸ್ತರಿಗಾಗಿ ನಗರದ ಇಂದ್ರಾಣಿ ನೂರಾನಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

    ತ್ಯಾಗ ಮತ್ತು ಬಲಿದಾನದ ಹೆಸರಾಗಿರುವ ಬಕ್ರೀದ್ ಹಬ್ಬವನ್ನು ನಗರದಲ್ಲಿ ಆಚರಿಸಲಾಗಿದ್ದು, ಈ ವೇಳೆ ನೂರಾರು ಮುಸ್ಲಿಂ ಬಾಂಧವರು ನೆರೆ ಪೀಡಿತ ಕೊಡಗು ಮತ್ತು ಕೇರಳ ರಾಜ್ಯದಲ್ಲಿನ ಸಂತ್ರಸ್ತರಿಗಾಗಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. ಅಲ್ಲದೇ ಈ ವೇಳೆ ಸ್ಥಳದಲ್ಲಿ ಸಂತ್ರಸ್ತರಿಗೆ ನಿಧಿ ಸಂಗ್ರಹಿಸುವ ಕಾರ್ಯವನ್ನು ಮಾಡಿದರು.

    ಪಾರ್ಥನೆಯ ವೇಳೆ ಧರ್ಮಗುರುಗಳು ಜಲಪ್ರಳಯದ ಕುರಿತು ಪ್ರಸ್ತಾಪಿಸಿ ಪ್ರವಚನ ನೀಡಿದರು. ಈ ವೇಳೆ ಎಲ್ಲಾ ಮುಸ್ಲಿಂ ಬಾಂಧವರಿಗೆ ಕೊಡಗು ಹಾಗೂ ಕೇರಳದ ಅಣ್ಣ-ತಮ್ಮಂದಿರು ಕಷ್ಟದಲ್ಲಿದ್ದಾರೆ. ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದು ನಿಜವಾದ ಮಾನವ ಧರ್ಮ, ನಾವೆಲ್ಲರೂ ಅವರಿಗಾಗಿ ಸಹಾಯ ಮಾಡೋಣ ಎಂದು ತಿಳಿಸಿದ್ದಾರೆ.

    ಪ್ರಾರ್ಥನೆಯ ನಂತರ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮಸೀದಿ ಧರ್ಮಗುರುಗಳಾದ ಮಸೀಯುಲ್ಲಾ ಖಾನ್ ರವರು ಮಾತನಾಡಿ, ಬಕ್ರೀದ್ ಹಬ್ಬವನ್ನು ಮುಸ್ಲಿಮರು ಹೆಚ್ಚು ಸಂತೋಷದಿಂದ ಆಚರಿಸುತ್ತೇವೆ, ಅಲ್ಲದೇ ಈ ಹಬ್ಬಕ್ಕೆ ಸ್ವಲ್ಪ ಹೆಚ್ಚು ಹಣವನ್ನೇ ಖರ್ಚು ಮಾಡುತ್ತಾರೆ. ಆದರೆ ಈ ಬಾರಿ ಸಂಭ್ರಮಕ್ಕೆಂದು ಖರ್ಚು ಮಾಡುವ ಒಂದು ಅಂಶವನ್ನು ಪರಿಹಾರ ರೂಪದಲ್ಲಿ ಕೊಡಲು ಕರೆ ನೀಡಲಾಗಿದೆ ಎಂದು ಹೇಳಿದರು.

    ನಾವೆಲ್ಲ ಭಾರತೀಯರು, ಒಂದೇ ತಾಯಿಯ ಮಕ್ಕಳಾಗಿದ್ದೇವೆ. ಕೊಡಗು ಜನರಿಗೆ ಈಗಾಗಲೇ ಮಸೀದಿಯಲ್ಲಿ ದುಡ್ಡು ಸಂಗ್ರಹ ಮಾಡಿ ಕೊಟ್ಟಿದ್ದೇವೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕೇರಳ ಜನರಿಗೆ ಸಹಾಯಮಾಡಲು ಮುಂದಾಗಿದ್ದೇವೆ. ನಮ್ಮ ಹಬ್ಬದ ಖುಷಿಯನ್ನು ದಾನ-ಧರ್ಮದ ಮೂಲಕ ಆಚರಿಸಿದರೆ, ಅದು ಅಲ್ಲಾನಿಗೆ ಪ್ರಿಯವಾಗುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಕ್ರೀದ್ ಹಬ್ಬಕ್ಕಾಗಿ ಮಟನ್ ಲಿವರ್ ಫ್ರೈ ಮಾಡುವ ವಿಧಾನ

    ಬಕ್ರೀದ್ ಹಬ್ಬಕ್ಕಾಗಿ ಮಟನ್ ಲಿವರ್ ಫ್ರೈ ಮಾಡುವ ವಿಧಾನ

    ಪ್ರತಿ ವರ್ಷ ಬಕ್ರೀದ್ ಹಬ್ಬಕ್ಕಾಗಿ ಚಿಕನ್ ಫ್ರೈ, ಕಬಾಬ್ ಮಾಡುತ್ತೀರಿ. ಈ ವರ್ಷ ಬಕ್ರೀದ್ ಹಬ್ಬಕ್ಕಾಗಿ ಏನಾದರೂ ವಿಶೇಷವಾದ ಅಡುಗೆ ಮಾಡಬೇಕು ಎಂದುಕೊಂಡಿರುತ್ತೀರಾ. ಆದ್ದರಿಂದ ನಿಮಗಾಗಿ ಸ್ಪೆಷಲ್ ಮಟನ್ ಲಿವರ್ ಫ್ರೈ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಾಗ್ರಿಗಳು
    1. ಮಟನ್ ಲಿವರ್ – 1/4 ಕೆಜಿ
    2. ಈರುಳ್ಳಿ – 1 ದಪ್ಪದು
    3. ಎಣ್ಣೆ – ಕೊತ್ತಂಬರಿ
    4. ಬ್ಲಾಕ್ ಪೆಪ್ಪರ್ ಪುಡಿ – ಒಂದೂವರೆ ಚಮಚ
    5. ಅರಿಶಿನ ಪುಡಿ – ಚಿಟಿಕೆ
    6. ಖಾರದ ಪುಡಿ – 1 ಚಮಚ
    7. ನಿಂಬೆ ರಸ – 1 ಹಣ್ಣಿನ ರಸ
    8. ಶುಂಠಿ – ಬೆಳ್ಳುಳ್ಳಿ ಪೇಸ್ಟ್
    9. ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ನಾನ್ ಸ್ಟಿಕ್ ಪ್ಯಾನ್‍ಗೆ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಅದಕ್ಕೆ ಉದ್ದುದ್ದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಈರುಳ್ಳಿ ಗೋಲ್ಡನ್ ಬ್ರೌನ್ ಬರುವ ತನಕ ಫ್ರೈ ಮಾಡಿರಿ.
    * ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವ ತನಕ ಕೈಯಾಡಿಸಿ.
    * ನಂತರ ತೊಳೆದ ಮಟನ್ ಲಿವರ್ ಸೇರಿಸಿ. ಬಣ್ಣ ಬದಲಾಗುವವರೆಗೆ ಫ್ರೈ ಮಾಡಿರಿ.
    * ಲಿವರ್ ಬಣ್ಣ ಬದಲಾದ ಮೇಲೆ ಅದಕ್ಕೆ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಬ್ಲಾಕ್ ಪೆಪ್ಪರ್ ಪುಡಿ ಸೇರಿಸಿ ಮಿಕ್ಸ್ ಮಾಡಿರಿ.
    * 3-4 ನಿಮಿಷ ಕಡಿಮೆ ಉರಿಯಲ್ಲಿ ಲಿಡ್ ಮುಚ್ಚಿ ಬೇಯಲು ಬಿಡಿ.
    * ಮಿಶ್ರಣದೊಂದಿಗೆ ಲಿವರ್ ಬೆಂದ ಬಳಿಕ. ಅದಕ್ಕೆ ಕೊತ್ತಂಬರಿ ಸೊಪ್ಪು, ನಿಂಬೆ ಹಣ್ಣಿನ ರಸ ಸೇರಿಸಿ ಕೆಳಗಿಳಿಸಿರಿ.
    ( ಬೇಕಿದ್ದಲ್ಲಿ ಚೆನ್ನಾಗಿ ಬಲಿತ ಕರಿಬೇವನ್ನು ಎಣ್ಣೆಯಲ್ಲಿ ಫ್ರೈ ಮಾಡಿ ಸೇರಿಸಬಹುದು)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತ್ಯಾಗ ಬಲಿದಾನದ ಸಂಕೇತ ಬಕ್ರೀದ್: ಈ ಹಬ್ಬದ ವಿಶೇಷತೆ ಏನು? ಇಲ್ಲಿದೆ ವಿವರ

    ತ್ಯಾಗ ಬಲಿದಾನದ ಸಂಕೇತ ಬಕ್ರೀದ್: ಈ ಹಬ್ಬದ ವಿಶೇಷತೆ ಏನು? ಇಲ್ಲಿದೆ ವಿವರ

    ಮುಸ್ಲಿಮ್ ಬಾಂಧವರಿಗೆ ಹಬ್ಬಗಳು ಅಂದರೆ ಎರಡೇ. ಒಂದು ಈದ್ ಉಲ್ ಫಿತ್ರ್ ಅಥವಾ ರಂಜಾನ್ ಹಬ್ಬ ಹಾಗೂ ಈದ್ ಅಲ್ ಅಧಾ (ಈದ್ ಉಲ್ ಧುಹಾ) ಅಥವಾ ಬಕ್ರೀದ್ ಹಬ್ಬ. ಇಸ್ಲಾಮಿಕ್ ಕ್ಯಾಲೆಂಡರ್‍ ನ ಒಂಬತ್ತನೆಯ ತಿಂಗಳಲ್ಲಿ ಒಂದು ತಿಂಗಳ ಉಪವಾಸ ಆಚರಣೆಯ ಬಳಿಕ ರಂಜಾನ್ ರಬ್ಬ ಆಚರಿಸಿದರೆ ಕಡೆಯ ತಿಂಗಳಾದ ದುಲ್ ಹಜ್ ನ ಹತ್ತನೆಯ ದಿನದಂದು (ಚಂದ್ರದರ್ಶನವಾದ ಹತ್ತನೆಯ ದಿನ) ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ.

    ಇತಿಹಾಸ: ಬಕ್ರೀದ್ ಆಚರಣೆಗೆ ಕಾರಣವಾದ ಕಥೆಗೆ ನಾಲ್ಕು ಸಾವಿರ ವರ್ಷ ಹಿಂದಿನ ಇತಿಹಾಸವಿದೆ. ಆ ಸಮಯದಲ್ಲಿ ಮೆಕ್ಕಾ ನಗರದಲ್ಲಿ ವಾಸವಾಗಿದ್ದ ಪ್ರವಾದಿ ಇಬ್ರಾಹಿಂ(ಸ) ರವರ ಭಕ್ತಿ ಮತ್ತು ನಿಷ್ಠೆಯನ್ನು ಪರೀಕ್ಷಿಸಲು ಅಲ್ಲಾಹ ಮುಂದಾಗುತ್ತಾರೆ. ಕನಸಿನಲ್ಲಿ ಬರುವ ಅಲ್ಲಾಹ ಜಗತ್ತಿನಲ್ಲಿ ನಿಮಗೆ ಅತ್ಯಂತ ಪ್ರಿಯರು ಯಾರು ಎಂದು ಕೇಳಿದಾಗ, ನನ್ನ ಪುತ್ರ ನನಗೆ ಅತ್ಯಂತ ಪ್ರಿಯವಾದ ವ್ಯಕ್ತಿಯೆಂದು ಇಬ್ರಾಹಿಂ(ಸ) ಹೇಳ್ತಾರೆ. ಹಾಗಾದರೆ ಓರ್ವನೇ ಮಗನಾದ ಇಸ್ಮಾಯಿಲ್ ರನ್ನು ಬಲಿ ನೀಡಬೇಕೆಂದು ಕನಸಿನಲ್ಲಿ ಆಜ್ಞೆಯಾಗುತ್ತದೆ.

    ಅಲ್ಲಾಹನ ಆಜ್ಞೆಯಂತೆ ಇಬ್ರಾಹಿಂ(ಸ) ಮಗನನ್ನು ಬಲಿ ನೀಡಲು ಮುಂದಾಗುತ್ತಾರೆ. ತಂದೆಯ ಮಾತನ್ನು ಇಸ್ಮಾಯಿಲ್ ಸಹ ಒಪ್ಪಿಕೊಂಡು ಬಲಿಗೆ ನಗುಮೊಗದಲ್ಲಿಯೇ ಸಿದ್ಧಗೊಳ್ಳುತ್ತಾನೆ. ಆದರೆ ಇಬ್ರಾಹಿಂ(ಸ) ಅವರಿಗೆ ಮಗನನ್ನು ಬಲಿ ಕೊಡಲು ಪುತ್ರ ವಾತ್ಸಲ್ಯ ಅಡ್ಡಿಯಾಗುತ್ತದೆ. ಈ ಸದರ್ಭದಲ್ಲಿ ಕಣ್ಣಿಗೆ ಕಪ್ಪು ಪಟ್ಟಿಕೊಂಡ ಅವರು ಮಗನ ಕುತ್ತಿಗೆಗೆ ಕತ್ತಿ ಬೀಸಲು ಸಿದ್ಧರಾಗುತ್ತಾರೆ.

    ಆ ವೇಳೆ, ಪ್ರತ್ಯಕ್ಷರಾದ ದೇವದೂತ ಜಿಬ್ರಾಯಿಲ್, ಇಸ್ಮಾಯಿಲ್‍ರನ್ನು ಬದಿಗೆ ಸರಿಸಿ ಅವರ ಬದಲಿಗೆ ಒಂದು ಕುರಿಯನ್ನು ಬಲಿಕೊಡುವಂತೆ ಆಜ್ಞಾಪಿಸುತ್ತಾರೆ. ಕುರಿಯ ಕುತ್ತಿಗೆಯ ಮೇಲೆ ಹರಿಸಿದ ಕತ್ತಿ ಸಫಲವಾಗುತ್ತದೆ. ದೇವನಲ್ಲಿ ತಮಗಿರುವ ಸತ್ಯನಿಷ್ಠೆಯ ಸಂಕೇತವಾಗಿ ವಿಶ್ವದಾದ್ಯಂತ ಮುಸ್ಲಿಮರಿಂದ ಬಕ್ರೀದ್ ಹಬ್ಬ ಆಚರಿಸಲಾಗುತ್ತಿದೆ. ಇದೇ ಕಥೆಯನ್ನು ಹಲವರು ತಮ್ಮದೇ ಶೈಲಿಯಲ್ಲಿ ಭಿನ್ನ ಭಿನ್ನವಾಗಿ ಹೇಳುತ್ತಾರೆ.

    ಈದ್ ನಮಾಜ್: ಮುಂಜಾನೆಯ ಪ್ರಾರ್ಥನೆ ಬಕ್ರೀದ್ ಹಬ್ಬದ ಬೆಳಗ್ಗೆ ಊರಿನ ಜನರೆಲ್ಲರೂ ಹೊಸ ಬಟ್ಟೆ ಧರಿಸಿ ಈದ್ಗಾ ಮೈದಾನಕ್ಕೆ ತೆರಳುತ್ತಾರೆ. ಈದ್ಗಾ ವ್ಯವಸ್ಥೆ ಇಲ್ಲದ ಊರಿನಲ್ಲಿ ಪ್ರಮುಖ ಮಸೀದಿಗಳಲ್ಲಿಯೇ ಈದ್ ಪ್ರಾರ್ಥನೆಯನ್ನು ಮಾಡುತ್ತಾರೆ. ತೆರೆದ ಮೈದಾನದಲ್ಲಿ ಊರಿನ ಅಷ್ಟೂ ಜನರು ಒಂದಾಗಿ ಈದ್ ನಮಾಜ್ ನಿರ್ವಹಿಸುವ ಕ್ರಿಯೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮಸೀದಿಯಲ್ಲಿ ಮೊದಲೇ ನಿರ್ಣಯಿಸಿದ ಸಮಯಕ್ಕೆ ಎಲ್ಲರೂ ಸಾಮೂಹಿಕ ಪ್ರಾರ್ಥನೆಗೆ ಒಂದೆಡೆ ಸೇರುತ್ತಾರೆ. ನಮಾಜ್ ಬಳಿಕ ಎಲ್ಲರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.

    ಕುರ್ಬಾನಿ: ಈದ್ ನಮಾಜ್ ಬಳಿಕ ನಾಲ್ಕು ಕಾಲುಗಳ್ಳ ಪ್ರಾಣಿಯೊಂದನ್ನು ಬಲಿ ನೀಡಲಾಗುತ್ತದೆ. ಆದ್ರೆ ಕುರ್ಬಾನಿಗೆ ಪ್ರಾಣಿಗಳನ್ನು ಬಳಸುವಾಗ ಕೆಲವು ಮಾನದಂಡಗಳನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಬಲಿ ನೀಡುವ ಪ್ರಾಣಿಗೆ ಯಾವುದೇ ರೀತಿಯಲ್ಲಿ ಗಾಯಗೊಂಡಿರಬಾರದು ಅಥವಾ ಸಾವಿನ ಸ್ಥಿತಿಯಲ್ಲಿರಬಾರದು ಎಂಬಿತ್ಯಾದಿ ಮಾನದಂಡಗಳನ್ನು ಅವಶ್ಯಕವಾಗಿ ಕುರ್ಬಾನಿ ನೀಡುವವರು ಪಾಲಿಸಬೇಕಾಗುತ್ತದೆ.

    ಕುರ್ಬಾನಿಯ ಬಳಿಕ ದೊರಕುವ ಮಾಂಸದಲ್ಲಿ ಮೂರು ಪಾಲು ಮಾಡಲಾಗುತ್ತದೆ. ಒಂದು ಪಾಲು ಬಡವರಿಗೆ, ಇನ್ನೊಂದು ಸಂಬಂಧಿಕರಿಗೆ ಮತ್ತು ಮೂರನೆಯ ಪಾಲನ್ನು ಸ್ವಂತಕ್ಕಾಗಿ ಎಂದು ವಿಂಗಡಿಸಲಾಗುತ್ತದೆ. ಕುರ್ಬಾನಿ ಮಾಡಲು ಅನುಕೂಲತೆ ಇಲ್ಲದವರು ಅಥವಾ ಊರಿನಿಂದ ದೂರವಿರುವ ಅಥವಾ ಬೇರಾವುದೋ ಕಾರಣದಿಂದ ನೀಡಲು ಸಾಧ್ಯವಾಗದಿರುವವರು ಇದೇ ಕಾರ್ಯಕ್ಕಾಗಿ ನಿಯೋಜಿಸಿರುವ ಸಂಸ್ಥೆಗಳಿಗೆ ದಾನದ ರೂಪದಲ್ಲಿ ಹಣ ನೀಡಬಹುದು. ಹಣ ನೀಡುವುದರಿಂದ ದೇಶದ ಬಡಜನತೆ ಪೌಷ್ಠಿಕವಾದ ಆಹಾರವನ್ನು ಪಡೆಯಲು ಸಾಧ್ಯವಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಕ್ರೀದ್ ಸ್ಪೆಷಲ್ – ಮಟನ್ ಬಿರಿಯಾನಿ ಮಾಡೋ ವಿಧಾನ ಇಲ್ಲಿದೆ

    ಬಕ್ರೀದ್ ಸ್ಪೆಷಲ್ – ಮಟನ್ ಬಿರಿಯಾನಿ ಮಾಡೋ ವಿಧಾನ ಇಲ್ಲಿದೆ

    ಸಾಲುಸಾಲಾಗಿ ಹಬ್ಬಗಳು ಬರುತ್ತಿರುತ್ತವೆ. ಹಬ್ಬಗಳು ಬಂದರೆ ಹಬ್ಬಕ್ಕೆ ವಿಶೇಷ ಅಡುಗೆ ಮಾಡಬೇಕು ಅಂದುಕೊಳ್ಳುತ್ತೀರಾ. ಬಕ್ರೀದ್ ಹಬ್ಬಕ್ಕಾಗಿ ವಿಶೇಷವಾಗಿ ಅಡುಗೆ ಮಾಡಬೇಕು. ಬಕ್ರೀದ್ ಹಬ್ಬಕ್ಕೆ ಮಾಂಸ ಊಟವೇ ವಿಶೇಷ. ಪ್ರತಿ ವರ್ಷ, ಚಿಕನ್ ಬಿರಿಯಾನಿ, ಕಬಾಬ್, ಚಿಕನ್ ಪ್ರೈ ಇವುಗಳನ್ನೇ ಮಾಡಿರುತ್ತೀರಾ. ಈ ವರ್ಷ ಏನಾದರೂ ಬೇರೆ ರೀತಿ ಮಾಡಬೇಕು ಅಂದುಕೊಳ್ಳುತ್ತೀರಾ. ಆದ್ದರಿಂದ ನಿಮಗಾಗಿ ಸ್ಪೆಷಲ್ ಮಟನ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಬಾಸುಮತಿ ಅಕ್ಕಿ – 1 ಪಾವು
    2. ಮಟನ್ – ಅರ್ಧ ಕೆಜಿ
    3. ಧನಿಯಾ ಪುಡಿ – 1 ಚಮಚ
    4. ಗರಂ ಮಸಾಲ ಪುಡಿ – 1 ಚಮಚ
    5. ಬಿರಿಯಾನಿ ಮಸಾಲ ಪುಡಿ – 1.5 ಚಮಚ
    6. ಖಾರದ ಪುಡಿ – 1 ಚಮಚ
    7. ಕೊತ್ತಂಬರಿ ಮತ್ತು ಪುದೀನ – 1 ಬಟ್ಟಲು
    8. ಉಪ್ಪು – ರುಚಿಗೆ ತಕ್ಕಷ್ಟು
    9. ಮೊಸರು – 4-5 ಚಮಚ
    10. ಎಣ್ಣೆ+ತುಪ್ಪ – 2-4 ಚಮಚ
    11. ಅರಿಶಿನ ಪುಡಿ – ಚಿಟಿಕೆ
    12. ನಿಂಬೆ ರಸ – 1 ನಿಂಬೆಹಣ್ಣು
    13. ಈರುಳ್ಳಿ – 1 ದೊಡ್ಡದು
    14. ಶುಂಠಿ+ಬೆಳ್ಳುಳ್ಲಿ ಪೇಸ್ಟ್ – 1 ಚಮಚ
    15. ಟೊಮೋಟೋ – 1

    ಮಾಡುವ ವಿಧಾನ
    * ಮೊದಲಿಗೆ ಬಾಸುಮತಿ ಅಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿ ಅನ್ನ ಮಾಡಿಟ್ಟುಕೊಳ್ಳಿ.
    * ನಂತರ ಒಂದು ಪ್ಯಾನ್‍ಗೆ ತುಪ್ಪ ಸ್ವಲ್ಪ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಅದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿರಿ.
    * ಬಳಿಕ ಅದಕ್ಕೆ ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಸೇರಿಸಿ ಫ್ರೈ ಮಾಡಿರಿ.
    * ಎಲ್ಲವೂ ಫ್ರೈ ಆದ ಮೇಲೆ ಅದಕ್ಕೆ ತೊಳೆದ ಮಟನ್, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ ಹಾಕಿ 2 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿರಿ.
    * ಬಳಿಕ ಅದಕ್ಕೆ ಧನಿಯಾ ಪುಡಿ, ಖಾರದ ಪುಡಿ, ಗರಂ ಮಸಾಲ, ಬಿರಿಯಾನಿ ಮಸಾಲ ಪುಡಿ ಸೇರಿಸಿ ಮಿಕ್ಸ್ ಮಾಡಿ ಫ್ರೈ ಮಾಡಿರಿ.
    * ಈಗ ಸಣ್ಣಗೆ ಹೆಚ್ಚಿದ ಕೊತ್ತಂಬರಿ, ಪುದಿನಾ, ಟೋಮೊಟೋ, ಸ್ವಲ್ಪ ಮೊಸರು ಸೇರಿಸಿ ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿರಿ.
    (ಕುಕ್ಕರ್‍ನಲ್ಲಿ ಮಾಡುವುದಾದರೆ 2 -3 ಕೂಗು ಕೂಗಿಸಿ)
    * ಮಟನ್ ಚೆನ್ನಾಗಿ ಬೆಂದ ಬಳಿಕ ಆ ಮಿಶ್ರಣವನ್ನು ಪಾತ್ರೆಗೆ ಹಾಕಿ. ಮಾಡಿಟ್ಟುಕೊಂಡ ಅನ್ನವನ್ನು ಮಿಕ್ಸ್ ಮಾಡಿರಿ.
    * ಕೊನೆಯದಾಗಿ ನಿಂಬೆರಸ ಸೇರಿಸಿ ಮುಚ್ಚಳ ಮುಚ್ಚಿ ದಮ್ ಕಟ್ಟಿ 2-3 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿರಿ.
    * ಕೊನೆಗೆ ಮುಚ್ಚಳ ತೆಗೆದು ಬಿಸಿಬಿಸಿಯಾಗಿ ರುಚಿಯಾದ ಮಟನ್ ಬಿರಿಯಾನಿ ಸರ್ವ್ ಮಾಡಿ.
    (ಈರುಳ್ಳಿಯನ್ನು ಉದ್ದುದ್ದ ಹೆಚ್ಚಿ, ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಆಗೋವರೆಗೆ ಫ್ರೈ ಮಾಡಿ ಕೊನೆಯಲ್ಲಿ ಮಿಕ್ಸ್ ಮಾಡಿಕೊಳ್ಳಬಹುದು)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv