Tag: Bakrid 2024

  • ತ್ಯಾಗ ಬಲಿದಾನಗಳ ಸಂಕೇತ ʻಬಕ್ರೀದ್‌ʼ

    ತ್ಯಾಗ ಬಲಿದಾನಗಳ ಸಂಕೇತ ʻಬಕ್ರೀದ್‌ʼ

    ಮುಸ್ಲಿಂ ಬಾಂಧವರು ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಆಚರಿಸುವ ಹಬ್ಬವೇ ‘ಈದುಲ್ ಅದ್‌ಹಾʼ. ಭಾರತದಲ್ಲಿ ಈ ಹಬ್ಬವನ್ನು ಮುಸ್ಲಿಂ ಬಾಂಧವರ ಪವಿತ್ರ ಬಕ್ರೀದ್‌ ಎಂದು ಆಚರಿಸುತ್ತಾರೆ. ಈ ಬಾರಿ ಜೂನ್‌ 17ರಂದು (ಇಂದು) ದೇಶದಾದ್ಯಂತ ಮುಸ್ಲಿಮರು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

    ಪುಣ್ಯ ಸಂಪಾದಿರುವ ರಂಜಾನ್‌ ತಿಂಗಳ ಉಪವಾಸದ ಬಳಿಕ ‘ಈದ್‌ ಉಲ್‌ ಫಿತ್ರ್‌’ ಹಬ್ಬ ಆಚರಿಸುವುದಾದರೆ, ಇಸ್ಲಾಮಿಕ್ ಕ್ಯಾಲೆಂಡರಿನ ‘ದುಲ್ ಹಜ್’ ತಿಂಗಳ 10ರಂದು ಬಕ್ರೀದ್‌ ಆಚರಣೆ ನಡೆಯುತ್ತದೆ. 4 ಸಾವಿರ ವರ್ಷಗಳಿಗೂ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗವನ್ನು ನೆನಪಿಸುವುದು ‘ಬಕ್ರೀದ್‌’ನ ಮುಖ್ಯ ಆಶಯ. ಇಬ್ರಾಹಿಂ ಅವರು ಪ್ರವಾದಿ ಮುಹಮ್ಮದ್ ಅವರಿಗಿಂತ ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ್ದರು ಎಂದು ಮುಸ್ಲಿಂ ಬಾಂಧವರ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.

    ಸಾಂರ್ಭಿಕ ಚಿತ್ರ

    ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು, ಸೋದರತ್ವ ಬೆಳೆಸಿಕೊಳ್ಳುವುದು, ಅಲ್ಲಾಹುವಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ. ಈ ದಿನ ಮಸೀದಿಗಳಲ್ಲಿ ಸಾಮೂಹಿಕ ಈದ್ ನಮಾಜ್ ಇರುತ್ತದೆ. ಮಕ್ಕಳು, ಹಿರಿಯರು ಹೊಸ ಉಡುಗೆ ತೊಟ್ಟು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವರು. ನಮಾಜ್‌ಗೂ ಮುನ್ನ ಕೆಲ ಹೊತ್ತು ‘ತಕ್ಷೀರ್’ ಮೊಳಗಿಸಲಾಗುತ್ತದೆ.

    ನಮಾಜ್ ಬಳಿಕ ಪರಸ್ಪರ ಶುಭಾಶಯ ತಿಳಿಸಿ, ಗೆಳೆಯರ ಮತ್ತು ಸಂಬಂಧಿಕರ ಮನೆಗೆ ಭೇಟಿ ನೀಡುವರು. ಯಾವುದಾದರೂ ಕಾರಣದಿಂದ ಕೋಪಿಸಿಕೊಂಡಿರುವರು ಕೂಡ ದ್ವೇಷವನ್ನು ಮರೆತು ಶುಭಾಶಯ ವಿನಿಮಯ ಮಾಡುವರು. ವ್ಯಕ್ತಿಗಳು, ಕುಟುಂಬಗಳ ನಡುವೆ ಬಾಂಧವ್ಯ ಬೆಳೆಯಲು ಹಬ್ಬ ನೆರವಾಗುತ್ತದೆ.

    ಮನೆ ಮನೆಗಳಲ್ಲಿ ಹಬ್ಬದೂಟ:
    ಮನೆಗಳಲ್ಲಿ ಹಬ್ಬದ ಊಟ, ವಿಶೇಷ ಖಾದ್ಯಗಳನ್ನು ತಯಾರಿಸುವರು. ಗೆಳೆಯರು, ಬಂಧುಗಳನ್ನು ಆಹ್ವಾನಿಸಿ ಜೊತೆಯಾಗಿ ಊಟ ಮಾಡಿ, ಸಂಭ್ರಮ ಹಂಚಿಕೊಳ್ಳುವರು. ಹಬ್ಬದ ದಿನ ದಾನವಾಗಿ ದೊರೆಯುವ ಮಾಂಸ, ಹಣ, ದಿನಸಿ ಸಾಮಗ್ರಿಗಳಿಂದ ಎಷ್ಟೋ ಬಡಕುಟುಂಬಗಳಿಗೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸುತ್ತದೆ.

    ಜಾನುವಾರು ಬಲಿ ನೀಡುವ ಆಚರಣೆ:
    ಜಾನುವಾರುಗಳನ್ನು ಬಲಿ ಕೊಡುವುದು ಸಹ ‘ಬಕ್ರೀದ್‌’ನ ಪ್ರಮುಖ ಆಚರಣೆಯಾಗಿದೆ. ಪ್ರವಾದಿ ಇಬ್ರಾಹಿಂ ಅವರ ಜೀವನದಲ್ಲಿ ನಡೆದಿದ್ದ ಘಟನೆಯೊಂದರ ನೆನಪಿನಲ್ಲಿ ಜಾನುವಾರು ಬಲಿ ನೀಡಲಾಗುತ್ತದೆ. ಇದಕ್ಕೆ ಒಂದು ಹಿನ್ನೆಲೆಯೂ ಇದೆ.

    ಅಲ್ಲಾಹನ ಆದೇಶದಂತೆ ಇಬ್ರಾಹಿಂ, ತಮ್ಮ ಪುತ್ರ ಇಸ್ಮಾಯಿಲ್ ಅವರನ್ನು ಬಲಿಯರ್ಪಿಸಲು ಮುಂದಾಗುವರು. ತಮ್ಮ ಮಗನನ್ನೇ ಬಲಿ ನೀಡಲು ಸಿದ್ಧವಾಗಿದ್ದ ಇಬ್ರಾಹಿಂ ಅವರ ಭಕ್ತಿಯನ್ನು ಅಲ್ಲಾಹನು ಮೆಚ್ಚಿ ಪುತ್ರನ ಬದಲು ಒಂದು ಟಗರನ್ನು ಬಲಿಯರ್ಪಿಸುವಂತೆ ಸೂಚಿಸುತ್ತಾರೆ. ಇದು ತಮ್ಮ ಧರ್ಮಗ್ರಂಥಗಳಲ್ಲೂ ಉಲ್ಲೇಖವಾಗಿದೆ ಎಂದು ಮುಸ್ಲಿಂ ಧರ್ಮಗುರುಗಳು ಹೇಳಿದ್ದಾರೆ.

    ಇಬ್ರಾಹಿಂ ಅವರ ತ್ಯಾಗವನ್ನು ನೆನಪಿಸಲು ಹಬ್ಬದ ದಿನ ಜಾನುವಾರು ಬಲಿ ಅರ್ಪಿಸಲಾಗುತ್ತದೆ. ಆರ್ಥಿಕವಾಗಿ ಸಬಲರಾಗಿರುವ ಎಲ್ಲರೂ ಪ್ರಾಣಿಬಲಿ ನೀಡಬೇಕು. ಪ್ರಾಣಿಯಿಂದ ಲಭಿಸಿದ ಮಾಂಸವನ್ನು ಸಮನಾಗಿ ಮೂರು ಪಾಲು ಮಾಡಬೇಕು. ಅದರಲ್ಲಿ ಒಂದು ಭಾಗವನ್ನು ಸ್ವತಃ ಬಳಸಿಕೊಳ್ಳಬಹುದು. ಇನ್ನೆರಡು ಪಾಲುಗಳನ್ನು ಸಂಬಂಧಿಕರು ಹಾಗೂ ಬಡವರಿಗೆ ಹಂಚಬೇಕು.

    ಹಜ್ ಯಾತ್ರೆ:
    ಸೌದಿ ಅರೇಬಿಯಾದ ಮಕ್ಕಾದಲ್ಲಿ ಪವಿತ್ರ ಹಜ್ ಯಾತ್ರೆ ನಡೆಯುವ ಸಮಯದಲ್ಲೇ ಈ ಹಬ್ಬ ಆಚರಿಸಲಾಗುತ್ತದೆ. ಜೀವನದಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂದು ಇಸ್ಲಾಂ ಹೇಳುತ್ತದೆ. ಹಜ್‌ನ ಧಾರ್ಮಿಕ ವಿಧಿ-ವಿಧಾನಗಳು ಈ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ. ಬಕ್ರೀದ್ ಮುನ್ನಾದಿನ ಅಥವಾ ‘ದುಲ್ ಹಜ್’ ತಿಂಗಳ ಒಂಬತ್ತರಂದು ಹಜ್ ಯಾತ್ರಿಕರು ಮಕ್ಕಾ ನಗರದ ಅರಫಾತ್ ಎಂಬ ಬೆಟ್ಟದ ಬಳಿ ಸೇರುತ್ತಾರೆ. ಈ ಯಾತ್ರಿಕರಿಗೆ ಬೆಂಬಲ ನೀಡಲು ವಿಶ್ವದಾದ್ಯಂತ ಮುಸ್ಲಿಮರು ಈ ದಿನ ಉಪವಾಸವಿರುತ್ತಾರೆ. ಪುಣ್ಯ ಸಂಪಾದಿಸುವ ರಂಜಾನ್‌ ಮಾಸದಲ್ಲಿ ಮುಸ್ಲಿಂ ಬಾಂಧವರು ಮಕ್ಕಾ, ಮದೀನಕ್ಕೆ ಭೇಟಿ ನೀಡುತ್ತಾರೆ.

  • ಬಕ್ರೀದ್‌ ಹಬ್ಬಕ್ಕೆ ಗೋವುಗಳು ಕುರ್ಬಾನಿಯಾಗದಂತೆ ಕ್ರಮ ವಹಿಸಿ – ಬಜರಂಗದಳ ಆಗ್ರಹ

    ಬಕ್ರೀದ್‌ ಹಬ್ಬಕ್ಕೆ ಗೋವುಗಳು ಕುರ್ಬಾನಿಯಾಗದಂತೆ ಕ್ರಮ ವಹಿಸಿ – ಬಜರಂಗದಳ ಆಗ್ರಹ

    ಧಾರವಾಡ: ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್‌ ಹಬ್ಬ ಸಮೀಪಿಸುತ್ತಿದ್ದು, ಪ್ರಾಣಿಯನ್ನು ಕೊಯ್ದು ಮಾಂಸ ವಿತರಿಸುವ ಕುರ್ಬಾನಿ ನಡೆಸಲು ಸಿದ್ಧತೆ ಎಲ್ಲೆಡೆ ನಡೆದಿದೆ. ಬಕ್ರೀದ್‌ ಹಬ್ಬದ (Bakrid Festival) ದಿನ ಸೇರಿದಂತೆ ಮೂರು ದಿನಗಳಲ್ಲಿ ಆಡು, ಟಗರು ಮೊದಲಾದ ಪ್ರಾಣಿಗಳನ್ನು ಕೊಂದು ಮಾಂಸ ಮಾಡಿ, ಸಂಬಂಧಿಕರು, ನೆರೆಹೊರೆಯವರು, ಬಡವರಿಗೆ ಹಂಚುವುದು ಸಂಪ್ರದಾಯ. ಇದಕ್ಕಾಗಿಯೇ ಕೆಲ ವ್ಯಾಪಾರಿಗಳು ಹೊರ ರಾಜ್ಯಗಳಿಂದಲೂ ಪ್ರಾಣಿಗಳನ್ನ ತಂದು ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ.

    ಈ ಬಾರಿ ಬಕ್ರೀದ್‌ ಹಬ್ಬದಂದು ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ-2020 ಹಾಗೂ ಕರ್ನಾಟಕ ಪ್ರಾಣಿ ಬಲಿ ನಿಷೇಧ-1959 ಕಾಯ್ದೆ ಅಡಿಯಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗದಳದ (Bajarangadala) ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ತಪ್ಪಿತಸ್ಥರಿಗೆ ಶಿಕ್ಷೆಯಾಗೋವರೆಗೂ ಪ್ರಾಮಾಣಿಕ ತನಿಖೆ ನಡೆಸಬೇಕು: ಬೊಮ್ಮಾಯಿ

    ಯಾವುದೇ ಗೋವುಗಳ (Cows) ಕುರ್ಬಾನಿ ಮಾಡುವುದನ್ನು ನಿಷೇಧಿಸಬೇಕು, ಇತರೇ ಪ್ರಾಣಿಗಳ ಬಲಿಯನ್ನು ನಿಲ್ಲಿಸಬೇಕು ಹಾಗೂ ಅಕ್ರಮ ಗೋವುಗಳ ಸಾಗಾಟ ಆಗದಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಗೋವು ಸಾಕಾಣಿಕೆ ಮಾಡುವವರ ಮನೆಗಳಿಂದ, ಬೀದಿಗಳಿಂದ, ಗುಡ್ಡಗಳಿಂದ ಗೋವುಗಳ ಕಳ್ಳತನವಾಗದಂತೆ ನೋಡಿಕೊಳ್ಳಬೇಕು ಎಂದು ಬಜರಂಗದಳದ ಕಾರ್ಯಕರ್ತರು ಆಗ್ರಹಿಸಿದ್ದಾರೆ.

    ಪೊಲೀಸರು ಅಹೋರಾತ್ರಿ ಗಸ್ತು ಹಾಗೂ ಅಗತ್ಯ ಇರುವ ಕಡೆ ನಾಕಾಬಂದಿ ಹಾಕಬೇಕು. ಜೂನ್ 18ರ ತನಕ ಯಾರೂ ಸಹ ಖಾಲಿ ಜಾಗದಲ್ಲಿ ಅಥವಾ ಮನೆಯ ಅಂಗಳದಲ್ಲಿ ಗೋವಂಶವನ್ನು ತಂದು ಕಟ್ಟಿ ಹಾಕಿ ಶೇಖರಿಸದಂತೆ ಎಚ್ಚರಿಕೆ ವಹಿಸಬೇಕು. ಯಾರಾದರೂ ಗೋ ವಧೆ ಮಾಡಿದ್ದು ಕಂಡುಬಂದಲ್ಲಿ ಅವರ ಮೇಲೆ ಗೋ ಹತ್ಯೆ ನಿಷೇಧ ಕಾಯ್ದೆ-2020ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಿಂದ ಮಾಂಜ್ರಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ; ಬೀದರ್‌ ರೈತರ ಜಮೀನುಗಳಿಗೆ ನುಗ್ಗಿದ ನೀರು