Tag: bailahongala

  • ರಾಜ್ಯೋತ್ಸವಕ್ಕೆ ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಸಾವು

    ರಾಜ್ಯೋತ್ಸವಕ್ಕೆ ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಸಾವು

    ಬೆಳಗಾವಿ: ಕನ್ನಡ ರಾಜ್ಯೋತ್ಸವ (Kannada Rajyotsava) ಹಿನ್ನೆಲೆ ಧ್ವಜಸ್ತಂಭ (Flagpole) ನಿಲ್ಲಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ (Electric Shock) ಯುವಕ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ (Bailahongala) ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ವಕ್ಕುಂದ ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು, ಪ್ರಜ್ವಲ್ ಚನ್ನಗೌಡ ಮುನೇಪ್ಪನವರ (18) ಮೃತಪಟ್ಟ ಯುವಕ. ಗ್ರಾಮದ ಬಸ್ ನಿಲ್ದಾಣದ ಮುಂದೆ ಧ್ವಜಸ್ತಂಭ ನಿಲ್ಲಿಸಲು ತಯಾರಿ ನಡೆಸುತ್ತಿದ್ದಾಗ ಸರ್ವಿಸ್ ತಂತಿ ತಾಗಿದ್ದರಿಂದ ವಿದ್ಯುತ್ ಪ್ರವಹಿಸಿ ಪ್ರಜ್ವಲ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಬೈಕ್ ರಿಪೇರಿ ಹಣ ಕೊಡದೆ ಸತಾಯಿಸಿದ್ದಕ್ಕೆ ವ್ಯಕ್ತಿ ಹತ್ಯೆ- ಅಪ್ರಾಪ್ತ ಸೇರಿ ನಾಲ್ವರು ಅರೆಸ್ಟ್

    ವಿದ್ಯುತ್ ಶಾಕ್ ತಗುಲಿದ ತಕ್ಷಣ ಸ್ಥಳೀಯರು ಯುವಕನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕೆರೆಗೆ ಧುಮುಕಿದ ಕಾರು- ಓರ್ವ ಪಾರು, ಇಬ್ಬರು ನೀರುಪಾಲು

    ಮನೆ ಮಗನ ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದ್ದ ಒಬ್ಬ ಮಗನನ್ನು ಚೆನ್ನಾಗಿ ಓದಿಸಿ, ನೂರಾರು ಕನಸು ಕಟ್ಟಿಕೊಂಡಿದ್ದ ತಂದೆ-ತಾಯಿಗೆ ಈಗ ದಿಕ್ಕೇ ತೋಚದಾಗಿದೆ. ಅಗ್ನಿವೀರ್ ಪರೀಕ್ಷೆ ಪಾಸ್ ಆಗಿದ್ದ ಯುವಕ ಪ್ರಜ್ವಲ್, ದೈಹಿಕ ಪರೀಕ್ಷೆಗೆ ತಯಾರಾಗುತ್ತಿದ್ದ. ಅಷ್ಟರೊಳಗೆ ಈ ರೀತಿ ದುರಂತ ಸಂಭವಿಸಿರೋದು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

    ಮರಣೋತ್ತರ ಪರೀಕ್ಷೆಗಾಗಿ ಯುವಕನ ಮೃತದೇಹ ಬೈಲಹೊಂಗಲ ತಾಲ್ಲೂಕಾಸ್ಪತ್ರೆಯ ಶವಾಗಾರದಲ್ಲಿದ್ದು, ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಿಲ್ಲಾಧಿಕಾರಿ ಕಚೇರಿಯಲ್ಲೇ ಮಕ್ಕಳ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    ಜಿಲ್ಲಾಧಿಕಾರಿ ಕಚೇರಿಯಲ್ಲೇ ಮಕ್ಕಳ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    ಬೆಳಗಾವಿ: ವಿಶ್ವ ಮಹಿಳಾ ದಿನದಂದೇ ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ (Suicide Attempt) ಘಟನೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ (DC Office) ನಡೆದಿದೆ.

    ಬೆಳಗಾವಿಯ (Belagavi) ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ (Bailahongala) ಜನತಾ ಫ್ಲ್ಯಾಟ್‌ ನಿವಾಸಿ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ (40) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಆಕೆ ಜೊತೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಮಕ್ಕಳಾದ ಸೃಷ್ಟಿ (14), ಸಾಕ್ಷಿ (8), ಸಾನ್ವಿ (3) ಅವರಿಗೂ ಫಿನಾಯಿಲ್ (Phenyl) ಕುಡಿಸಿದ್ದಾರೆ. ಇದನ್ನೂ ಓದಿ: ಧ್ವನಿಯಿಂದ ಎದುರಿಸಿದ ಟೀಕೆ ಬಗ್ಗೆ ಬಾಯ್ಬಿಟ್ಟ ರಾಣಿ ಮುಖರ್ಜಿ

    ಕಳೆದ ಹಲವು ವರ್ಷಗಳಿಂದ ಪತಿ ಅದೃಶ್ಯಪ್ಪ ಹಂಪಣ್ಣವರ ಜೊತೆಗೆ ಬೆಳಗಾವಿಯ ಅನಗೋಳದ ಬಾಡಿಗೆ ಮನೆಯಲ್ಲಿ ಸರಸ್ವತಿ ವಾಸವಿದ್ದರು. ಅನಗೋಳದ ಸಲೂನ್ ಶಾಪ್‌ನಲ್ಲಿ ಅದೃಶ್ಯಪ್ಪ ಹಂಪಣ್ಣವರ ಕೆಲಸ ಮಾಡುತ್ತಿದ್ದರು. ಕೈತುಂಬ ಸಾಲ ಮಾಡಿ 15 ದಿನಗಳ ಹಿಂದೆಯೇ ಪತ್ನಿ ಹಾಗೂ ತನ್ನ ಮೂವರು ಹೆಣ್ಣು ಮಕ್ಕಳನ್ನು ಬಿಟ್ಟು ಅದೃಶ್ಯಪ್ಪ ಹೋಗಿದ್ದರು. ಇದನ್ನೂ ಓದಿ: ಬಿಜೆಪಿಯಿಂದ ಹೋಗುವವರನ್ನು ಗೌರವಯುತವಾಗಿ ಕಳುಹಿಸಿಕೊಡುತ್ತೇವೆ: ಬಿಎಸ್‌ವೈ

    ತುತ್ತು ಅನ್ನಕ್ಕೂ ಗತಿಯಿಲ್ಲದೇ ಸರಸ್ವತಿ ತನ್ನ ಮಕ್ಕಳ ಜೊತೆಗೆ ಜಿಲ್ಲಾಧಿಕಾರಿ ಭೇಟಿಗಾಗಿ ಡಿಸಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಮಹಿಳೆಯನ್ನು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಳು ವಿಚಾರಿಸಿದ್ದಾರೆ. ಆಗ ಜ್ಯೂಸ್ ಎಂದು ನನ್ನ ತಾಯಿ ಏನೋ ಕುಡಿಸಿದ್ದಾಳೆಂದು ಸಿಬ್ಬಂದಿ ಎದುರು ಹಿರಿಯ ಪುತ್ರಿ ಸೃಷ್ಟಿ ಹೇಳಿದ್ದಾಳೆ. ಬಳಿಕ ಸರಸ್ವತಿ ಹಾಗೂ ಮೂವರು ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ. ತಕ್ಷಣ ಅಲರ್ಟ್ ಆದ ಡಿಸಿ ಕಚೇರಿ ಸಿಬ್ಬಂದಿಗಳು ಡಿಸಿ ಕಚೇರಿ ಬಳಿಯ ಪೊಲೀಸರ ನೆರವು ಪಡೆದು ಜಿಲ್ಲಾಸ್ಪತ್ರೆಗೆ ಅಸ್ವಸ್ಥರನ್ನು ಶಿಫ್ಟ್ ಮಾಡಿದ್ದಾರೆ. ಸದ್ಯ ಸರಸ್ವತಿ ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ (District Hospital) ಚಿಕಿತ್ಸೆ ಮುಂದುವರೆಸಲಾಗಿದೆ. ಇದನ್ನೂ ಓದಿ: ನಡುಬೀದಿಯಲ್ಲಿಯೇ ಹೊಡೆದಾಡಿಕೊಂಡ ಯುವತಿಯರು!

  • ನಾನು ತಪ್ಪು ಮಾಡಿಲ್ಲ, ಯಾರನ್ನೂ ವಿಚಾರಣೆ ಮಾಡ್ಬೇಡಿ: ಮಡಿವಾಳೇಶ್ವರ ಸ್ವಾಮೀಜಿ ಡೆತ್‍ನೋಟ್

    ನಾನು ತಪ್ಪು ಮಾಡಿಲ್ಲ, ಯಾರನ್ನೂ ವಿಚಾರಣೆ ಮಾಡ್ಬೇಡಿ: ಮಡಿವಾಳೇಶ್ವರ ಸ್ವಾಮೀಜಿ ಡೆತ್‍ನೋಟ್

    ಬೆಳಗಾವಿ: ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಸಾವಿಗೆ ನಾನೇ ಕಾರಣ. ಯಾರನ್ನೂ ವಿಚಾರಣೆಗೆ ಒಳಪಡಿಸಬೇಡಿ ಎಂದು ಬೈಲಹೊಂಗಲದ ಮಡಿವಾಳೇಶ್ವರ ಮಠದ ಸ್ವಾಮೀಜಿ ಡೆತ್ ನೋಟ್‍ನಲ್ಲಿ ತಿಳಿಸಿದ್ದಾರೆ.

    ಚಿತ್ರದುರ್ಗದ ಮುರುಘಾಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬಳಿಕ ಮಹಿಳೆಯರಿಬ್ಬರು ಮಾತನಾಡಿದ ಆಡಿಯೋ ವೈರಲ್ ಆಗಿತ್ತು. ಈ ಆಡಿಯೋದಲ್ಲಿ ಹಲವು ಪ್ರತಿಷ್ಠಿತ ಸ್ವಾಮೀಜಿಗಳ ವಿರುದ್ಧ ಮಹಿಳೆಯರು ಮಾತನಾಡಿದ್ದರು. ಈ ಆಡಿಯೋದಲ್ಲಿ ನೇಗಿನಹಾಳ ಮಠದ ಶ್ರೀಗಳ ಹೆಸರು ಉಲ್ಲೇಖಿಸಲಾಗಿತ್ತು. ಇದಾದ ಬೆನ್ನಲ್ಲೇ ನೇಗಿನಹಾಳ ಮಡಿವಾಳೇಶ್ವರ ಮಠದ ಬಸವ ಸಿದ್ಧಲಿಂಗ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್ ಬರೆದಿರುವ ಸ್ವಾಮೀಜಿ, ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಸಾವಿಗೆ ನಾನೇ ಕಾರಣ. ಯಾರನ್ನೂ ವಿಚಾರಣೆಗೆ ಒಳಪಡಿಸಬೇಡಿ. ಈ ಲೋಕದ ಗೊಡವೆ ಸಾಕು, ಹಡೆದ ತಾಯಿ ನನ್ನ ಕ್ಷಮಿಸು, ಮಠದ ಭಕ್ತರು ನನ್ನನ್ನು ಕ್ಷಮಿಸಿ. ನನ್ನ ನಡೆ ಮಡಿವಾಳೇಶ್ವರ ಕಡೆಗೆ. ಮಠದ ಕಮಿಟಿ, ಭಕ್ತರು ಮಠವನ್ನು ಮುನ್ನಡೆಸಿಕೊಂಡು ಹೋಗಿ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮಡಿವಾಳೇಶ್ವರ ಬಸವಸಿದ್ಧಲಿಂಗ ಸ್ವಾಮೀಜಿ ನೇಣಿಗೆ ಶರಣು

    ಇತ್ತ ಸ್ವಾಮೀಜಿಗಳು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ವೈರಲ್ ಆದ ಆಡಿಯೋದಲ್ಲಿ ಮಾತನಾಡಿರುವ ಮಹಿಳೆಯರ ಬಂಧನ ಆಗಬೇಕು ಎಂದು ಮಠದ ಭಕ್ತರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಎಸ್‍ಪಿ ಡಾ.ಸಂಜೀವ ಪಾಟೀಲ್, ಎಫ್‍ಎಸ್‍ಎಲ್ ತಂಡ ಪರಿಶೀಲನೆ ನಡೆಸಿದರು. ಘಟನೆ ಬಳಿಕ ಮಾಹಿತಿ ನೀಡಿದ ಎಸ್‍ಪಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೈಲಹೊಂಗಲದಲ್ಲಿ ಕುಡಿಯೋ ನೀರಿಗೆ ಹಾಹಾಕಾರ – ಒಂದು ಕೊಡ ನೀರಿಗೆ ಗುಡ್ಡ ಹತ್ತಿ ಇಳಿಯಬೇಕು!

    ಬೈಲಹೊಂಗಲದಲ್ಲಿ ಕುಡಿಯೋ ನೀರಿಗೆ ಹಾಹಾಕಾರ – ಒಂದು ಕೊಡ ನೀರಿಗೆ ಗುಡ್ಡ ಹತ್ತಿ ಇಳಿಯಬೇಕು!

    ಬೆಳಗಾವಿ: ತಮ್ಮ ಕಷ್ಟಕ್ಕೆ ಅನುಕೂಲ, ತಮ್ಮ ಗ್ರಾಮದ ಅಭಿವೃದ್ಧಿ ಜೊತೆಗೆ ಮೂಲಭೂತ ಸೌಕರ್ಯಗಳನ್ನ ಒದಗಿಸಿಕೊಡುತ್ತಾರೆ ಎಂದು ಜಿಲ್ಲೆಯ ಗ್ರ್ರಾಮದ ಜನರು ಅವರನ್ನೆಲ್ಲಾ ಚುನಾಯಿಸಿ ಕಳುಹಿಸಿದ್ದರು. ಹೀಗೆ ಆಯ್ಕೆಯಾದ ಅವರು ಜನ ಸೇವೆ ಮರೆತು ಅಧಿಕಾರದ ದುರ್ಬಳಕೆ ಮಾಡಿಕೊಳ್ಳಲು ಆರಂಭಿಸಿರುವುದು ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಹೌದು. ಒಂದು ಕಡೆ ಬಿರು ಬೇಸಿಗೆಯ ಎಫೆಕ್ಟ್. ಇನ್ನೊಂದು ಕಡೆ ನೀರಿಗಾಗಿ ಹಾಹಾಕಾರ. ಕಲ್ಲಿನ ಗುಡ್ದದ ಕೆಳಭಾಗದಲ್ಲಿರುವ ಈ ಗ್ರಾಮ ಹಲವು ದಶಕಗಳಿಂದ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಇದನ್ನ ಮನಗಂಡ ಸರ್ಕಾರ 96 ಲಕ್ಷ ವೆಚ್ಚದಲ್ಲಿ ಎರಡು ದೊಡ್ಡ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿದೆ. ಆರಂಭದಲ್ಲಿ ಗ್ರಾಮಸ್ಥರಿಗೆ ನೀರು ಕೂಡ ಸಿಕ್ಕಿತ್ತು. ಆದರೆ ಕ್ರಮೇಣ ಗುಡ್ಡದಲ್ಲಿದ್ದ ಬೋರ್ ವೆಲ್ ಬತ್ತಿ ಹೋಗಿ ಗ್ರಾಮಸ್ಥರು ಮತ್ತೆ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಹತ್ತು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ 23 ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ನೀರಿನ ಸಮಸ್ಯೆಯನ್ನ ಬಗೆ ಹರಿಸಬೇಕಿದ್ದ ಸದಸ್ಯರುಗಳು ಇರೋ ಒಂದು ಬೋರ್ ವೆಲ್ ನೀರನ್ನ ತಮ್ಮ ತಮ್ಮ ಮನೆಗಳಿಗೆ ಪೈಪ್‍ಲೈನ್ ಮಾಡಿಸಿಕೊಂಡು ನೀರು ಬಿಡಿಸಿಕೊಳ್ಳುತ್ತಾ ನೆಮ್ಮದಿಯಿಂದಿದ್ದಾರೆ. ಇತ್ತ ತಾವೇ ಆಯ್ಕೆ ಮಾಡಿ ಕಳುಹಿಸಿರುವ ಗ್ರಾಮ ಪಂಚಾಯ್ತಿ ಸದಸ್ಯರುಗಳು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯ ವೈದ್ಯರಾದ ಡಾ. ಯೂಸುಫ್ ಕಿಡಿಕಾರಿದ್ದಾರೆ.

    ಗ್ರಾಮದ ಮಧ್ಯದಲ್ಲಿ ಒಂದು ಬೋರವೆಲ್ ಇದ್ದು ಅದರಿಂದ ನೀರು ಇಡೀ ಗ್ರಾಮಕ್ಕೆ ಬಿಡಲಾಗುತ್ತಿದೆ. ಆದರೆ ಸಣ್ಣ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಕೊಡ ತುಂಬಲು ಗಂಟೆ ಗಟ್ಟಲೆ ಕಾಯಬೇಕು. ಕಾರ್ಮಿಕರು ತಮ್ಮ ಕೂಲಿ ಕೆಲಸ ಬಿಟ್ಟು ನಲ್ಲಿ ಮುಂದೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ‘ಜಲಯುದ್ಧ’ ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಜಿಪಂ ಸಿಇಓ ಸ್ಥಳಕ್ಕೆ ದಿಢೀರ್ ಭೇಟಿ

    ಗುಡ್ಡದ ಮೇಲೆ ಮನೆ ಇರುವವರ ಪರಿಸ್ಥಿತಿ ಇನ್ನೂ ದಾರುಣ. ಒಂದು ಕಿಲೋಮೀಟರ್‍ನಷ್ಟು ದೂರ ನಡೆದು ಹೋಗಿ ನೀರು ತುಂಬಿಕೊಂಡು ಕೊಡ ಹೊತ್ತು ಮತ್ತೆ ಮೇಲಕ್ಕೆ ಹತ್ತಬೇಕು. ರಸ್ತೆ ಕೂಡ ಸರಿಯಾಗಿ ಇಲ್ಲದ ಕಾರಣ ಎಲ್ಲೆಂದರಲ್ಲಿ ಜನ ಬೀಳೋದು ಸಾಮಾನ್ಯವಾಗಿದೆ. ಹೀಗಿದ್ದರೂ ಮಹಿಳೆಯರು ಮಕ್ಕಳು ಎರಡೆರಡು ಕೊಡ ಹೊತ್ತು ಗುಡ್ಡದ ಮೇಲಿರುವ ಮನೆಯತ್ತ ಸಾಗುತ್ತಾರೆ. ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವೊಮ್ಮೆ ಒಳಚರಂಡಿ ನೀರು ಕೂಡ ಕುಡಿಯುವ ನೀರಿನಲ್ಲಿ ಮಿಕ್ಸ್ ಆಗಿ ಗ್ರಾಮಸ್ಥರು ಕಾಯಿಲೆ ಬೀಳುತ್ತಿರುವುದು ಕೂಡ ಕಂಡಬಂದಿದೆ ಎಂದು ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಗೌರಮ್ಮ ದೂರಿದ್ದಾರೆ.

    ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದು ಇಲ್ಲದಂತಾಗಿದೆ. ಅದನ್ನ ಬಳಕೆ ಮಾಡದೇ ಕೀ ಹಾಕಿ ಹಾಗೇ ಇಟ್ಟಿದ್ದರಿಂದ ಯಂತ್ರಗಳು ಕೂಡ ಹಾಳಾಗುತ್ತಿವೆ. ಜನರ ಸಮಸ್ಯೆಗಳನ್ನ ಆಲಿಸಿ ಪರಿಹರಿಸಬೇಕಿದ್ದ ಜನಪ್ರತಿನಿಧಿಗಳೇ ಇಂದು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇತ್ತ ಜಿಲ್ಲಾಡಳಿತ ಕೂಡ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜನರಿಗೆ ನೀರು ಕೊಡಿಸುವ ಕೆಲಸ ಮಾಡಬೇಕಿದೆ.