Tag: Bahrain

  • ಹಿಜಬ್ ಧರಿಸಿದ ಮಹಿಳೆಗೆ ಪ್ರವೇಶ ನಿರಾಕರಣೆ – ಭಾರತೀಯ ಮೂಲದ ರೆಸ್ಟೋರೆಂಟ್ ಬಂದ್

    ಹಿಜಬ್ ಧರಿಸಿದ ಮಹಿಳೆಗೆ ಪ್ರವೇಶ ನಿರಾಕರಣೆ – ಭಾರತೀಯ ಮೂಲದ ರೆಸ್ಟೋರೆಂಟ್ ಬಂದ್

    ಮನಮಾ (ಬಹ್ರೇನ್): ಇಸ್ಲಾಮಿಕ್ ದೇಶವಾದ ಬಹ್ರೇನ್‌ನ ಅದ್ಲಿಯಾದಲ್ಲಿರುವ ಭಾರತೀಯ ರೆಸ್ಟೋರೆಂಟ್‌ನಲ್ಲಿ ಹಿಜಬ್ ಧರಿಸಿದ್ದ ಮಹಿಳೆಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿ ಅಧಿಕಾರಿಗಳು ಇಲ್ಲಿನ ಭಾರತೀಯ ರೆಸ್ಟೋರೆಂಟ್ ಒಂದನ್ನು ಬಂದ್ ಮಾಡಿಸಿದ್ದಾರೆ.

    ಹಿಜಬ್ ಧರಿಸಿದ್ದ ಮಹಿಳೆಯನ್ನು ರೆಸ್ಟೋರೆಂಟ್‌ನಲ್ಲಿದ್ದ ಸಿಬ್ಬಂದಿಯೊಬ್ಬರು ತಡೆದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಬ್ ಗದ್ದಲದ ನಡುವೆ ಈ ಘಟನೆಯು ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ. ಇದನ್ನೂ ಓದಿ: SSLC ಪರೀಕ್ಷೆಗೆ ಹಿಜಬ್ ಧರಿಸಿ ಬಂದ ವಿದ್ಯಾರ್ಥಿನಿಯರು – ಪರೀಕ್ಷಾ ಸಿಬ್ಬಂದಿಯಿಂದ ಮನವೊಲಿಕೆ

    HIJAB

    ಈ ಸಂಬಂಧ ಬಹ್ರೇನ್ ಪ್ರವಾಸೋದ್ಯಮ ಮತ್ತು ಪ್ರದರ್ಶನ ಪ್ರಾಧಿಕಾರವು ತನಿಖೆ ಪ್ರಾರಂಭಿಸಿದೆ. ಜೊತೆಗೆ ರಾಜ್ಯದ ಕಾನೂನುಗಳನ್ನು ಉಲ್ಲಂಘಿಸುವ ಕ್ರಮಗಳಿಗೆ ಕಡಿವಾಣ ಹಾಕಲು ಎಲ್ಲ ಪ್ರವಾಸೋದ್ಯಮ ಮಳಿಗೆಗಳ ಅಭಿಪ್ರಾಯವನ್ನೂ ಕೇಳಿದೆ. ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವ ಈ ನಾಡಿನಲ್ಲಿ ರೆಸ್ಟೋರೆಂಟ್‌ಗಳು ಇಂತಹ ನಿರ್ಧಾರ ಕೈಗೊಳ್ಳುವುದನ್ನು ಬಿಡಬೇಕು ಎಂದು ಸೂಚಿಸಿದೆ. ಇದನ್ನೂ ಓದಿ: ಹಿಜಬ್‍ಗೂ ಪರೀಕ್ಷೆಗೂ ಸಂಬಂಧವಿಲ್ಲ, ತುರ್ತು ವಿಚಾರಣೆ ನಡೆಸಲ್ಲ: ಸುಪ್ರೀಂ

    ಈ ನಡುವೆ ಘಟನೆಗೆ ವಿಷಾದ ವ್ಯಕ್ತಪಡಿಸಿ ರೆಸ್ಟೋರೆಂಟ್‌ನ ಆಡಳಿತ ಮಂಡಳಿ, ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚಿಸಿದೆ. ಕರ್ತವ್ಯದಲ್ಲಿದ್ದ ವ್ಯವಸ್ಥಾಪಕನನ್ನೂ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    hijab

    ಬಹ್ರೇನ್‌ನಲ್ಲಿ ನಾವು 35 ವರ್ಷಗಳಿಗೂ ಹೆಚ್ಚು ಕಾಲ ಎಲ್ಲ ದೇಶದವರಿಗೆ ಸೇವೆ ನೀಡುತ್ತಿದ್ದೇವೆ. ಪ್ರತಿಯೊಬ್ಬರಿಗೂ ಲ್ಯಾಂಟರ್ನ್ಸ್‌ಗೆ ಸ್ವಾಗತವಿದೆ. ಲ್ಯಾಂಟರ್ನ್ಸ್ ಪ್ರತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ ಆನಂದಿಸಲು ಮನೆಯ ವಾತಾವರಣದಿಂತಿರುವ ಸ್ಥಳವಾಗಿದೆ. ನಮ್ಮ ವ್ಯವಸ್ಥಾಪಕನಿಂದ ತಪ್ಪಾಗಿದೆ. ಅವರನ್ನೂ ಈಗಾಗಲೇ ಅಮಾನತುಗೊಳಿಸಲಾಗಿದೆ. ಅಲ್ಲದೆ, ಪರಿಹಾರವಾಗಿ ಮಾರ್ಚ್ 29ರಂದು ಬಹ್ರೇನ್‌ನ ಅತಿಥಿಗಳನ್ನು ಲ್ಯಾಂಟರ್ನ್ಸ್‌ ನಲ್ಲಿ ಕಾಂಪ್ಲಿಮೆಂಟರಿ ಔತಣ ಕೂಟಕ್ಕೂ ಸ್ವಾಗತಿಸುತ್ತೇವೆ ಎಂದು ರೆಸ್ಟೋರೆಂಟ್ ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಹಂಚಿಕೊಂಡಿದೆ.

     

  • ಬಹರೈನ್ ನಿಂದ ಮಂಗಳೂರಿಗೆ ಬಂತು 40 ಮೆಟ್ರಿಕ್ ಟನ್ ಆಕ್ಸಿಜನ್

    ಬಹರೈನ್ ನಿಂದ ಮಂಗಳೂರಿಗೆ ಬಂತು 40 ಮೆಟ್ರಿಕ್ ಟನ್ ಆಕ್ಸಿಜನ್

    ಮಂಗಳೂರು: ರಾಜ್ಯದಲ್ಲಿ ತಲೆದೋರಿರುವ ಆಕ್ಸಿಜನ್ ಸಮಸ್ಯೆ ನೀಗಿಸಲು ದೂರದ ಬಹರೈನ್ ನಿಂದ ಮಂಗಳೂರಿಗೆ ಆಕ್ಸಿಜನ್ ಹಡಗಿನ ಮೂಲಕ ಬಂದಿದೆ.

    ಬಹರೈನ್ ನ ಮನಾಮಾ ಬಂದರ್ ನಿಂದ 40 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೊತ್ತು ನೌಕಾಪಡೆಯ ಐಎನ್‍ಎಸ್ ತಲ್ವಾರ್ ಹೆಸರಿನ ಹಡಗು ನವಮಂಗಳೂರು ಬಂದರ್ ಗೆ ಇಂದು ತಲುಪಿದೆ. ಎರಡು ಕ್ರಯೋಜೆನಿಕ್ ಐಸೋ ಕಂಟೇನರ್ ರನ್ನು ಹೊತ್ತು ತಂದ ಹಡಗಿನಿಂದ ಕಂಟೇನರನ್ನು ಇಳಿಸಲಾಗಿದ್ದು, ಜಿಲ್ಲಾಡಳಿತದ ನೇತೃತ್ವದಲ್ಲಿ ಸಂಗ್ರಹಿಸಿಡಲಾಗುತ್ತದೆ.

    20 ಮೆಟ್ರಿಕ್ ಟನ್‍ನ್ನು ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡಕ್ಕೆ ಪೂರೈಕೆ ಮಾಡಲಾಗುವುದು, ಉಳಿದ 20 ಮೆಟ್ರಿಕ್ ಟನ್ ಆಕ್ಸಿಜನ್‍ನನ್ನು ರಾಜ್ಯದ ವಿವಿಧೆಡೆ ಅಗತ್ಯ ಇರುವಲ್ಲಿ ಸರಬರಾಜು ಮಾಡಲಾಗುವುದು. ಜೊತೆಗೆ ಕೋವಿಡ್ ಚಿಕಿತ್ಸೆಗೆ ಬಳಸಲಾಗುವ ಇತರ ವೈದ್ಯಕೀಯ ಉಪಕರಣಗಳನ್ನು ತರಲಾಗಿದೆ.

    ಭಾರತದೊಂದಿಗೆ ಬಹ್ರೈನ್ ರಾಷ್ಟ್ರ ಉತ್ತಮವಾದ ಸ್ನೇಹ ಬಾಂಧವ್ಯವನ್ನು ಹೊಂದಿದೆ.

  • ಬಹ್ರೇನ್‍ನ 200 ವರ್ಷ ಪುರಾತನ ಶ್ರೀ ಕೃಷ್ಣ ದೇವಾಲಯ ಜೀರ್ಣೋದ್ಧಾರಕ್ಕೆ ಮೋದಿ ಅಸ್ತು

    ಬಹ್ರೇನ್‍ನ 200 ವರ್ಷ ಪುರಾತನ ಶ್ರೀ ಕೃಷ್ಣ ದೇವಾಲಯ ಜೀರ್ಣೋದ್ಧಾರಕ್ಕೆ ಮೋದಿ ಅಸ್ತು

    ಮನಮಾ: ಪ್ರಧಾನಿ ನರೇಂದ್ರ ಮೋದಿ ಅವರು ಬಹ್ರೇನ್ ಪ್ರವಾಸದಲ್ಲಿದ್ದು, ಈ ವೇಳೆ ಅಲ್ಲಿನ ರಾಜಧಾನಿ ಮನಮಾದಲ್ಲಿರುವ 200 ವರ್ಷಕ್ಕೂ ಹಳೆಯದಾದ ಶ್ರೀ ಕೃಷ್ಣ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸುವ ಯೋಜನೆಗೆ 4.2 ಮಿಲಿಯನ್ ಯುಎಸ್ ಡಾಲರ್(30.03 ಕೋಟಿ ರೂ.) ನೀಡುವುದಾಗಿ ಘೋಷಿಸಿದ್ದಾರೆ.

    ಇಂದು ಬಹ್ರೇನ್ ಪ್ರವಾಸದಲ್ಲಿರುವ ನರೇಂದ್ರ ಮೋದಿ 200 ವರ್ಷಕ್ಕೂ ಹಳೆಯದಾದ ಶ್ರೀನಾಥ್ ಜೀ(ಶ್ರೀ ಕೃಷ್ಣ) ದೇವಸ್ಥಾನದಲ್ಲಿ ಬಹ್ರೇನ್‍ನಲ್ಲಿರುವ ಭಾರತೀಯರನ್ನು ಭೇಟಿ ಮಾಡಿದರು. ಇದೇ ವೇಳೆ ಶ್ರೀನಾಥ್ ಜೀ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 4.2 ಮಿಲಿಯನ್ ಯುಎಸ್ ಡಾಲರ್ ಘೋಷಿಸಿದ್ದಾರೆ.

    ಗಲ್ಫ್‍ನ ಪ್ರಮುಖ ರಾಷ್ಟ್ರ ಬಹ್ರೇನ್‍ಗೆ ಭಾರತದ ಪ್ರಧಾನಿಯ ಮೊದಲ ಭೇಟಿ ಇದಾಗಿದೆ. ಮನಮಾದಲ್ಲಿರುವ ಶ್ರೀನಾಥ್ ಜೀ ದೇವಸ್ಥಾನಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರು ಪೂಜೆ ಸಲ್ಲಿಸಿದ್ದು, ಪೂಜೆ ನಂತರ ಯುಎಇಯಲ್ಲಿ ಶನಿವಾರ ಬಿಡುಗಡೆ ಮಾಡಿದ ರೂಪೇ ಕಾರ್ಡ್ ಮೂಲಕವೇ ಪ್ರಸಾದವನ್ನು ಖರೀದಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ದೇವಸ್ಥಾನದ ಫಲಕವನ್ನು ಇಂದು ಅನಾವರಣಗೊಳಿಸಿದ್ದು, ಸಾಂಪ್ರದಾಯಿಕ ದೇವಸ್ಥಾನದ ಜೀರ್ಣೋದ್ಧಾರದ ಯೋಜನೆಯನ್ನು ಇದೇ ವೇಳೆ ಘೋಷಿಸಿದರು.

    ಪ್ರೀತಿ ಹಾಗೂ ವಾತ್ಸಲ್ಯವನ್ನು ತೋರಿದ ಬಹ್ರೇನ್‍ಗೆ ಧನ್ಯವಾದ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈ ಪ್ರದೇಶದ ಅತ್ಯಂತ ಹಳೆಯ ದೇವಸ್ಥಾನ, 200 ವರ್ಷದ ಇತಿಹಾಸವಿರುವ ಶ್ರೀನಾಥ್ ಜೀ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಈ ದೇವಾಲಯವು ಬಹ್ರೇನ್ ಸಮಾಜದ ಬಹುತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

    ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಈಗಾಗಲೇ ಸ್ಥಳದ ಅಳತೆ ಮಾಡಲಾಗಿದ್ದು, 16,500 ಚದರ ಅಡಿ ಭೂಮಿಯಲ್ಲಿ ನವೀಕರಣವಾಗಲಿದೆ. 45 ಸಾವಿರ ಚದರ ಅಡಿ ವಿಸ್ತೀರ್ಣದ ನಾಲ್ಕು ಅಂತಸ್ತಿನ ಹೊಸ ಕಟ್ಟಡ ನಿರ್ಮಾಣ ಮಾಡಲು ಚಿಂತಿಸಲಾಗಿದೆ. 30 ಮೀ. ಎತ್ತರದಲ್ಲಿ ದೇವಸ್ಥಾನ ನಿರ್ಮಾಣವಾಗಲಿದೆ. ದೇವಸ್ಥಾನದ 200 ವರ್ಷದ ಪರಂಪರೆಯನ್ನು ಜೀರ್ಣೋದ್ಧಾರ ಮಾಡಲಾಗುವ ಕಟ್ಟಡದಲ್ಲಿ ಪ್ರತಿಬಿಂಬಿಸುವಂತೆ ಮಾಡಲಾಗುವುದು. ಗರ್ಭಗುಡಿ, ಪ್ರಾರ್ಥನಾ ಮಂದಿರ, ಸಾಂಪ್ರದಾಯಿಕ ಹಿಂದೂ ವಿವಾಹ ಹಾಗೂ ಇತರೆ ಸಮಾರಂಭಗಳನ್ನು ಮಾಡಲು ಸಭಾಂಗಣದ ವ್ಯವಸ್ಥೆಯನ್ನೂ ಈ ದೇವಸ್ಥಾನದಲ್ಲಿ ಮಾಡಲಾಗುತ್ತಿದೆ. ಈ ಮೂಲಕ ಬಹ್ರೇನ್‍ನ್ನು ವಿವಾಹದ ತಾಣವಾಗಿ ಉತ್ತೇಜಿಸುವುದು, ಪ್ರವಾಸೋದ್ಯಮವನ್ನು ಹೆಚ್ಚಿಸಲಾಗುತ್ತಿದೆ.

  • ಬಾಲ್ಯ ಸ್ನೇಹಿತನ ಸಾವು ಊಹಿಸಿಕೊಳ್ಳಲಾಗುತ್ತಿಲ್ಲ- ಬಹ್ರೇನ್‍ನಲ್ಲಿ ಮೋದಿ ಭಾವುಕ ಭಾಷಣ

    ಬಾಲ್ಯ ಸ್ನೇಹಿತನ ಸಾವು ಊಹಿಸಿಕೊಳ್ಳಲಾಗುತ್ತಿಲ್ಲ- ಬಹ್ರೇನ್‍ನಲ್ಲಿ ಮೋದಿ ಭಾವುಕ ಭಾಷಣ

    – ಹೃದಯ ತೀವ್ರ ದುಃಖತಪ್ತವಾಗಿದೆ

    ಮನಮಾ: ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಬಹ್ರೇನ್‍ನಲ್ಲಿ ಭಾಷಣ ಮಾಡುವಾಗ ಭಾವುಕರಾಗಿದ್ದು, ವಿದ್ಯಾರ್ಥಿ ಜೀವನದಿಂದಲೂ ನಾವಿಬ್ಬರೂ ಒಟ್ಟಿಗೆ ಬಂದಿದ್ದೇವೆ, ರಾಜಕೀಯದಲ್ಲೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರ ಸಾವನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ಬಹ್ರೇನ್‍ನಲ್ಲಿ ಭಾವುಕ ಭಾಷಣ ಮಾಡಿದ್ದಾರೆ.

    ಶನಿವಾರ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಬಹ್ರೇನ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ 15 ಸಾವಿರಕ್ಕೂ ಅಧಿಕ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ವಿದ್ಯಾರ್ಥಿ ಜೀವನದಿಂದಲೂ ಇಬ್ಬರೂ ಒಟ್ಟಿಗೆ ಕಳೆದ ಕ್ಷಣಗಳನ್ನು ಹಂಚಿಕೊಳ್ಳುವ ಮೂಲಕ ಭಾವುಕರಾಗಿದ್ದಾರೆ.

    ನಾನು ಕರ್ತವ್ಯಕ್ಕೆ ಬದ್ಧನಾಗಿರುವ ಮನುಷ್ಯ, ಬಹ್ರೇನ್‍ನಲ್ಲಿ ಉತ್ಸಾಹದ ವಾತಾವರಣವಿರುವಾಗ, ನಮ್ಮ ದೇಶದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿರುವ ಸಂದರ್ಭದಲ್ಲಿ ಬಾಲ್ಯ ಸ್ನೇಹಿತನನ್ನು ಕಳೆದುಕೊಂಡ ನನ್ನ ಹೃದಯ ತೀವ್ರ ದುಃಖತಪ್ತವಾಗಿದೆ. ವಿದ್ಯಾರ್ಥಿ ದೆಸೆಯಿಂದಲೂ ಸ್ನೇಹಿತರಿದ್ದೆವು. ಸಾರ್ವಜನಿಕ ಜೀವನದಲ್ಲಿ ನನ್ನೊಂದಿಗೆ ಒಟ್ಟಿಗೆ ಹೆಜ್ಜೆ ಹಾಕಿದ ಸ್ನೇಹಿತ, ಇಬ್ಬರೂ ಒಟ್ಟಿಗೆ ರಾಜಕೀಯ ಪಯಣ ಆರಂಭಿಸಿದ್ದೆವು. ನಾನು ಎಲ್ಲ ಸಮಯದಲ್ಲೂ ಅವರೊಂದಿಗೆ ಸಂಪರ್ಕದಲ್ಲಿದ್ದೆ. ಅವರೊಂದಿಗೆ ನಾನು ಹೋರಾಟಗಳನ್ನು ಎದುರಿಸಿದ್ದೇನೆ, ನಾನು ಕಂಡಿದ್ದ ಕನಸುಗಳನ್ನು ಈಡೇರಿಸಿದ್ದ ಆ ನನ್ನ ಸ್ನೇಹಿತ ಅರುಣ್ ಜೇಟ್ಲಿ, ದೇಶದ ಮಾಜಿ ಹಣಕಾಸು ಸಚಿವರು ನಿಧನರಾಗಿದ್ದಾರೆ ಎಂದು ಭಾವುಕ ಭಾಷಣವನ್ನು ಮಾಡಿದ್ದಾರೆ.

    ಇದನ್ನು ನಾನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ನಾನು ಇಲ್ಲಿದ್ದೇನೆ. ಆದರೆ, ನನ್ನ ಸ್ನೇಹಿತ ನಮ್ಮನ್ನು ಬಿಟ್ಟು ಅಗಲಿದ್ದಾನೆ. ಆಗಸ್ಟ್ ತಿಂಗಳಲ್ಲಿ ನನ್ನ ಸಹೋದರಿ ಸುಷ್ಮಾ ಸ್ವರಾಜ್ ಅವರನ್ನು ಕಳೆದುಕೊಂಡಿದ್ದೇವೆ. ಇದೀಗ ನನ್ನ ಸ್ನೇಹಿತ ಅರುಣ್ ಜೇಟ್ಲಿಯನ್ನು ಕಳೆದುಕೊಂಡಿದ್ದೇನೆ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್, ಯುಎಇ ಹಾಗೂ ಬಹ್ರೇನ್ ಮೂರು ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಯುಎಇ ಭೇಟಿ ನಂತರ ಬಹ್ರೇನ್‍ಗೆ ಆಗಮಿಸಿದ್ದು, ಯುಎಇನ ಅಬುಧಾಬಿಯ ರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಅರುಣ್ ಜೇಟ್ಲಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜೇಟ್ಲಿ ಅವರ ಕುಟುಂಬದೊಂದಿಗೆ ಮಾತನಾಡಿ ಸಂತಾಪ ಸೂಚಿಸಿದ್ದಾರೆ. ಆಗ ಜೇಟ್ಲಿ ಅವರ ಕುಟುಂಬದವರು ವಿದೇಶದಲ್ಲಿ ತಾವು ಭಾಗಿಯಾಗಿರುವ ಕಾರ್ಯಕ್ರಮಗಳನ್ನು ಮೊಟಕುಗೊಳಿಸದಂತೆ ಪ್ರಧಾನಿ ನರೇಂದ್ರ ಮೋದಿಗೆ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಅರುಣ್ ಜೇಟ್ಲಿ ಅವರು ಮಾಜಿ ಹಣಕಾಸು ಸಚಿವರಾಗಿದ್ದು, ಅಲ್ಲದೆ, ಬಿಜೆಪಿಯ ಟ್ರಬಲ್ ಶೂಟರ್ ಆಗಿದ್ದರು. ಉಸಿರಾಟದ ತೊಂದರೆಯಿಂದ ಅರುಣ್ ಜೇಟ್ಲಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಅವರು ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಹಲವು ಗಣ್ಯರು ಅರುಣ್ ಜೇಟ್ಲಿ ಅವರ ಮನೆಗೆ ತೆರಳಿ ಸಂತಾಪ ಸೂಚಿಸಿದ್ದಾರೆ. ಇಂದು ಅವರ ಅಂತ್ಯಸಂಸ್ಕಾರ ನೆರವೇರಲಿದೆ.