Tag: bagina

  • ಮೈಸೂರು | ಕಬಿನಿ ಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ ಅರ್ಪಣೆ – ನಾಡಿನ ಒಳಿತಿಗೆ ಪ್ರಾರ್ಥನೆ

    ಮೈಸೂರು | ಕಬಿನಿ ಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ ಅರ್ಪಣೆ – ನಾಡಿನ ಒಳಿತಿಗೆ ಪ್ರಾರ್ಥನೆ

    ಮೈಸೂರು: ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯಕ್ಕಿಂದು (Kabini Reservoir) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು‌ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಾಗಿನ ಅರ್ಪಿಸಿದರು.

    ಬಾಗಿನ ಸಮರ್ಪಿಸಿ ನಾಡಿನ ಒಳಿತಿಗಾಗಿ ಹಿರಿಯ ನಾಯಕರು ಪ್ರಾರ್ಥನೆ ಸಲ್ಲಿಸಿದರು. ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಕಾಂಗ್ರೆಸ್‌ನ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ- ಎಸ್‍ಐಟಿ ರಚಿಸಿದ ಸರ್ಕಾರ

    ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ದೆಹಲಿ ಭೇಟಿ ವಿಚಾರ ಪ್ರಸ್ತಾಪಿಸಿದರು. ಸಿಎಂಗೆ ಹೇಳಿಯೇ ನಿನ್ನೆ ದೆಹಲಿಗೆ ಹೋಗಿದ್ದೆ. ನಾನು ನನ್ನ ವೈಯುಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ. ಯಾವ ರಾಜಕೀಯಕ್ಕೂ ಹೋಗಿರಲಿಲ್ಲ. ದೆಹಲಿಯಲ್ಲಿ ವಕೀಲರ ಜೊತೆ ಸಮಯ ನಿಗದಿಯಾಗಿತ್ತು. ಅದಕ್ಕಾಗಿ ಹೋಗಿ ಬಂದೆ. ಅದನ್ನು ಮುಗಿಸಿಕೊಂಡು ರಾತ್ರಿಯೇ ವಾಪಸ್ ಬಂದಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಯಾರೀ ಕೇರಳ ನರ್ಸ್‌ ನಿಮಿಷಾ ಪ್ರಿಯಾ; ಯೆಮನ್‌ನಲ್ಲಿ ಗಲ್ಲುಶಿಕ್ಷೆಯೇ ಯಾಕೆ – ಏನಿದು ಸ್ಟೋರಿ!?

    ಬಿಜೆಪಿಯವರಿಗೆ ನನ್ನ ಬಗ್ಗೆ ಪ್ರೀತಿ ಜಾಸ್ತಿ. ಮೋರ್ ಸ್ಟ್ರಾಂಗ್ ಮೋರ್ ಲವ್ ಆಲ್ಸೋ. ನಿನ್ನೆ ನನ್ನ ಬೆಂಗವಾಲು ವಾಹನ ಪಲ್ಟಿ ಆಯ್ತು. ಬಹಳ ಸೀರಿಯಸ್‌ ಅಪಘಾತ ಆಯ್ತು. ಚಾಮುಂಡೇಶ್ವರಿ ದೇವಿ ಕೃಪೆಯಿಂದ ದೊಡ್ಡ ಅನಾಹುತ ಆಗಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಪಂಚಮಸಾಲಿ ಶ್ರೀ ಆರೋಗ್ಯದಲ್ಲಿ ಚೇತರಿಕೆ – ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ನಾಯಕರು

  • ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿ ದಾಖಲೆ ಬರೆದ ಸಿದ್ದರಾಮಯ್ಯ

    ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿ ದಾಖಲೆ ಬರೆದ ಸಿದ್ದರಾಮಯ್ಯ

    ಮಂಡ್ಯ: ಸಿಎಂ ಸಿದ್ದರಾಮಯ್ಯ (CM Siddaramaiah) ಕೃಷ್ಣರಾಜಸಾಗರ ಅಣೆಕಟ್ಟಿಗೆ (KRS) ಬಾಗಿನ (Bagina) ಅರ್ಪಿಸುವ ಮೂಲಕ ದಾಖಲೆ ಬರೆದಿದ್ದಾರೆ.

    ಕೆಆರ್‌ಎಸ್‌ 93 ವರ್ಷಗಳ ಇತಿಹಾಸದಲ್ಲಿ ಜೂನ್‌ ತಿಂಗಳಿನಲ್ಲಿ ಭರ್ತಿ ಆಗಿರಲಿಲ್ಲ. ಆದರೆ ಡ್ಯಾಂ ನಿರ್ಮಾಣವಾದ ಬಳಿಕ ಮೊದಲ ಬಾರಿಗೆ ಭರ್ತಿಯಾಗಿದೆ.

    ದೇವರಾಜ ಅರಸು ಕಾಲದಲ್ಲಿ 1979 ರಿಂದ ಬಾಗಿನ ಅರ್ಪಿಸುವ ಕಾರ್ಯಕ್ರಮ ಆರಂಭವಾಗಿತ್ತು. ಅಂದಿನಿಂದ ಇಂದಿನವರೆಗೂ ಜೂನ್ ತಿಂಗಳಲ್ಲಿ ಯಾರು ಬಾಗಿನ ಸಲ್ಲಿಸಿಲ್ಲ. ಹೀಗಾಗಿ ಜೂನ್‌ ತಿಂಗಳಿನಲ್ಲೇ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರವಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 4ನೇ ಬಾರಿ ಕೆಆರ್‌ಎಸ್‌ಗೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ಕಳೆದ ವರ್ಷ ಎಷ್ಟು ನೀರು ಹರಿದಿದೆ? ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?

     

     ಬಾಗಿನ ಕಾರ್ಯಕ್ರಮ ಹಿನ್ನೆಲೆ ಕನ್ನಡ ಬಾವುಟದಿಂದ ಕನ್ನಂಬಾಡಿ ಕಟ್ಟೆಯನ್ನು ಶೃಂಗರಿಸಲಾಗಿತ್ತು. ವೈದಿಕ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಬಾಗಿನ ಪೂಜಾ ಕೈಂಕರ್ಯ ನಡೆಯಿತು. ಮೈಸೂರಿನ ಸರ್ಕಾರಿ ಅತಿಥಿ ಗೃಹದಿಂದ ಬಸ್ಸಿನಲ್ಲಿ ಸಿಎಂ, ಡಿಸಿಎಂ ಹಾಗೂ ಸಚಿವ ಸಂಪುಟ ಸದಸ್ಯರು ಒಂದೇ ಬಸ್ ನಲ್ಲಿ ಪ್ರಯಾಣಿಸಿ ಕೆಆರ್‌ಎಸ್‌ಗೆ ಆಗಮಿಸಿದರು.

    ಸಿಎಂ ಜೊತೆಗೆ ಕಾವೇರಿ ಮಾತೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಾಗಿನ ಅರ್ಪಿಸಿದರು. ಸಿಎಂಗೆ ಸಚಿವರಾದ, ಚಲುವರಾಯಸ್ವಾಮಿ, ಮಹದೇವಪ್ಪ, ಬೋಸರಾಜು, ವೆಂಕಟೇಶ್ ಹಾಗೂ ಶಾಸಕರು ಸಾಥ್‌ ನೀಡಿದರು.

  • ತುಂಗಭದ್ರಾ ಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ ಅರ್ಪಣೆ

    ತುಂಗಭದ್ರಾ ಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ ಅರ್ಪಣೆ

    – 19ನೇ ಕ್ರಸ್ಟ್‌ ಗೇಟ್‌ಗೆ ಸ್ಟಾಪ್ ಲಾಗ್ ಅಳವಡಿಸಿದವರಿಗೆ ಸನ್ಮಾನ
    – ಬಾಗಿನ ಕಾರ್ಯಕ್ರಮದಲ್ಲಿ ಅಸಮಾಧಾನ; ಸ್ಥಳೀಯ ಶಾಸಕ ಗೈರು

    ಬಳ್ಳಾರಿ: ಮೂರನೇ ಬಾರಿಗೆ ತುಂಬಿದ ತುಂಗಭದ್ರಾ ಜಲಾಶಯಕ್ಕೆ (TB Dam) ಇಂದು ಬಾಗಿನ ಅರ್ಪಿಸಲಾಯಿತು. ಬಾಗಿನ ಅರ್ಪಣೆ ಕಾರ್ಯಕ್ರಮ ಹಿನ್ನೆಲೆ ಸಿಎಂ, ಡಿಸಿಎಂ ಸೇರಿ ಇಡೀ ಸರ್ಕಾರವೇ ಭಾನುವಾರ ತುಂಗಭದ್ರಾ ಜಲಾಶಯಕ್ಕೆ ಬಂದಿತ್ತು. ಸೇತುವೆ ಮೇಲೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ, ತುಂಗಭದ್ರೆಗೆ ಕಳಶದ ನೀರು ಸಮರ್ಪಣೆ ಮಾಡಿದರು. ಬಳಿಕ ಬಾಗಿನ ಅರ್ಪಿಸಿದರು.

    ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಪೊಲೀಸ್ ಪಡೆಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar), ಸಚಿವರಾದ ಜಮೀರ್ ಅಹಮ್ಮದ್, ಶಿವರಾಜ್ ತಂಗಡಗಿ, ಶರಣಪ್ರಕಾಶ್ ಪಾಟೀಲ್ ಸಾಥ್ ನೀಡಿದರು. ಬಳ್ಳಾರಿ ಸಂಸದ ತುಕಾರಾಂ, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಸೇರಿದಂತೆ ನಾಲ್ಕು ಜಿಲ್ಲೆಯ ಜನಪ್ರತಿನಿಧಿಗಳು ಬಾಗಿನ ಅರ್ಪಣೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ತಜ್ಞರ ವರದಿಯ ಆಧಾರದ ಮೇಲೆ ಟಿಬಿ ಡ್ಯಾಂ ಗೇಟ್‌ಗಳ ನಿರ್ವಹಣೆ: ಸಿಎಂ ಸಿದ್ದರಾಮಯ್ಯ

    ಇದಕ್ಕೂ ಮೊದಲು ಹೊಸಪೇಟೆ ಶಾಸಕ ಹೆಚ್.ಆರ್.ಗವಿಯಪ್ಪ ತಮ್ಮ ಬೆಂಬಲಿಗರ ಜೊತೆಗೆ ತುಂಗಭದ್ರಾ ಡ್ಯಾಂನ ಮುಖ್ಯ ಗೇಟ್ ಹತ್ತಿರ ಬಂದಿದ್ದರು. ಆಗ ಶಾಸಕರ ಬೆಂಬಲಿಗರನ್ನ ಒಳಗಡೆ ಬಿಡದೇ ಪೊಲೀಸರು ತಡೆದರು. ಆಗ ರೊಚ್ಚಿಗೆದ್ದ ಶಾಸಕ ಪೊಲೀಸರ ಜೊತೆಗೆ ವಾಗ್ವಾದಕ್ಕೆ ಇಳಿದರು. ಅಷ್ಟೇ ಅಲ್ಲದೇ, ಸಿಎಂ ಸಿದ್ದರಾಮಯ್ಯ ತುಂಗಭದ್ರಾ ಡ್ಯಾಂ ಎಂಟ್ರಿ ಗೇಟ್ ಬಳಿಯೇ ಭೇಟಿ ಮಾಡಿದ್ದರು. ಅದಾದ ಬಳಿಕ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಗೈರಾದರು.

    ಮಲೆನಾಡು ಭಾಗದಲ್ಲಿ ಮೇಘಸ್ಪೋಟದಿಂದ ತುಂಗಭದ್ರಾ ಜಲಾಶಯ ಈ ಬಾರಿ ಮೂರು ಸಲ ಭರ್ತಿ ಆಗಿದೆ. ಮೊದಲ ಬಾರಿ ಭರ್ತಿ ಆದಾಗ ಲಕ್ಷಾಂತರ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಅವರಿಂದ ಆ.13ಕ್ಕೆ ಬಾಗಿನ ಕಾರ್ಯಕ್ರಮ ನಿಗದಿ ಆಗಿದ್ದರಿಂದ ಜಲಾಶಯವನ್ನ ಸಂಪೂರ್ಣ ಭರ್ತಿ ಮಾಡಲಾಗಿತ್ತು. ಆದರೆ, ಆ.10ಕ್ಕೆ ಜಲಾಶಯಕ್ಕೆ ಸಂಕಷ್ಟ ಬಂದೊದಗಿತ್ತು. ಅಂದು ರಾತ್ರಿ 19ನೇ ಕ್ರಸ್ಟ್‌ ಗೇಟ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ನದಿ ಪಾಲಾಗಿತ್ತು. ಅಂದಾಜು 40 ಟಿಎಂಸಿ ನೀರು ವ್ಯರ್ಥವಾಗಿ ನದಿಗೆ ಹರಿದಿತ್ತು. ಇದು ಜಲಾಶಯ ನಂಬಿಕೊಂಡಿದ್ದ ಅನ್ನದಾತರು, ಕುಡಿಯೋ ನೀರಿಗೆ ಭರಸಿಡಿಲು ಬಂದಂತಾಗಿತ್ತು. ಹೀಗಾಗಿ ಇಂದಿನ ಕಾರ್ಯಕ್ರಮದಲ್ಲಿ ಕ್ರಸ್ಟ್‌ ಗೇಟ್ ಕೂಡಿಸಿದ ತಂತ್ರಜ್ಞರನ್ನ ಸನ್ಮಾನಿಸಲಾಯಿತು. ಇದನ್ನೂ ಓದಿ: ದಸರಾ ಆನೆಗಳ ಮುಂದೆ ಫೋಟೊ, ಸೆಲ್ಫಿ ತೆಗೆದುಕೊಳ್ಳುವವರಿಗೆ ಕಡಿವಾಣ ಹಾಕಬೇಕು: ಯದುವೀರ್

  • 2ನೇ ಬಾರಿಗೆ ತುಂಗಭದ್ರಾ ಜಲಾಶಯ ಭರ್ತಿ – ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ

    2ನೇ ಬಾರಿಗೆ ತುಂಗಭದ್ರಾ ಜಲಾಶಯ ಭರ್ತಿ – ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ

    ವಿಜಯನಗರ: 2ನೇ ಬಾರಿಗೆ ತುಂಗಭದ್ರಾ ಜಲಾಶಯ (Tungabhadra Dam) ಭರ್ತಿಯಾದ ಹಿನ್ನೆಲೆ ಇಂದು (ಭಾನುವಾರ) ಸಿಎಂ ಸಿದ್ದರಾಮಯ್ಯ (Siddaramaiah) ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ.

    ವಿಜಯನಗರ ಜಿಲ್ಲೆ ಹೊಸಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್‌ಗೆ ತಾತ್ಕಾಲಿಕ ಗೇಟ್ ಅಳವಳಡಿಕೆಯ 25 ದಿನಗಳ ಬಳಿಕ ಡ್ಯಾಂ ಭರ್ತಿಯಾಗಿದೆ. ಕಲ್ಯಾಣ- ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯ ಮತ್ತೆ ಭರ್ತಿ ಹಿನ್ನೆಲೆ ಸಿದ್ದರಾಮಯ್ಯ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಬಾಗಿನ ಅರ್ಪಣೆ ಕಾರ್ಯಕ್ರಮದ ಸಲುವಾಗಿ ತುಂಗಭದ್ರಾ ಜಲಾಶಯ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜಲಾಶಯದ ಸೇತುವೆಯ ಮೇಲೆ ಕನ್ನಡ ಧ್ವಜಗಳು ರಾರಾಜಿಸುತ್ತಿವೆ. ಅಲ್ಲದೇ ತಳಿರು ತೋರಣ, ಬಾಳೆಯಿಂದ ಜಲಾಶಯಯವನ್ನು ಅಲಂಕರಿಸಲಾಗಿದೆ. ಇದನ್ನೂ ಓದಿ: Bengaluru | ಹೇಗೆ ನಡೆಯುತ್ತೆ ಭೀಕರ ಕೊಲೆಯ ಮರಣೋತ್ತರ ಪರೀಕ್ಷೆ?

    ಕ್ರಸ್ಟ್ ಗೇಟ್ ಕಿತ್ತುಹೋದ ಸಂದರ್ಭದಲ್ಲಿ ಸಿಎಂ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಮತ್ತೆ ಜಲಾಶಯ ತುಂಬುತ್ತೆ. ನಾನು ಬಾಗಿನ ಅರ್ಪಣೆ ಮಾಡಲು ಬರುವೆ ಎಂದು ಹೇಳಿದ್ದರು. ಅದೇ ರೀತಿ ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಇಂದು ಬಾಗಿನ ಅರ್ಪಿಸಲಿದ್ದಾರೆ. ಬೆಳಗ್ಗೆ 11:0ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಜೊತೆ ಡಿಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಹಲವು ಸಚಿವರು, ಶಾಸಕರು, ಸಂಸದರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಡಿಜಿಟಲ್ ಪೇಮೆಂಟ್‌ನಲ್ಲಿ ಬೆಂಗಳೂರಿಗರೇ ಫಸ್ಟ್ – ಸೆಪ್ಟೆಂಬರ್‌ನಲ್ಲಿ ಬಿಎಂಟಿಸಿಗೆ ಬರೋಬ್ಬರಿ 8 ಕೋಟಿ ಆದಾಯ

    ಬಾಗಿನ ಅರ್ಪಣೆ ಬಳಿಕ 19ನೇ ಕ್ರಸ್ಟ್ಗೇಟ್ ಅಳವಡಿಕೆ ಕಾಮಗಾರಿಯಲ್ಲಿ ಭಾಗಿಯಾದ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಕೊಪ್ಪಳದ ಮುನಿರಾಬಾದ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಳಗ್ಗೆ 11:55 ಕ್ಕೆ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮ ಮುಕ್ತಾಯದ ಬಳಿಕ ಸಂಜೆ 4 ಗಂಟೆಗೆ ಸಿದ್ದರಾಮಯ್ಯ ಬೆಂಗಳೂರಿಗೆ ತೆರಳಲಿದ್ದಾರೆ. ಇದನ್ನೂ ಓದಿ: BBMP ವ್ಯಾಪ್ತಿಯ 110 ಹಳ್ಳಿ ಜನರ ಕನಸು ಶೀಘ್ರ ನನಸು – ಮುಂದಿನ ವಾರದಲ್ಲೇ ಮನೆಗಳಿಗೆ ಬರಲಿದೆ ಕಾವೇರಿ!

  • ಕಬಿನಿ, ಕೆಆರ್‌ಎಸ್‌ ಜಲಾಶಯಗಳು ಭರ್ತಿ – ಸೋಮವಾರ ಸಿದ್ದರಾಮಯ್ಯ, ಡಿಕೆಶಿ ಬಾಗಿನ ಅರ್ಪಣೆ

    ಕಬಿನಿ, ಕೆಆರ್‌ಎಸ್‌ ಜಲಾಶಯಗಳು ಭರ್ತಿ – ಸೋಮವಾರ ಸಿದ್ದರಾಮಯ್ಯ, ಡಿಕೆಶಿ ಬಾಗಿನ ಅರ್ಪಣೆ

    ಬೆಂಗಳೂರು: ಕಳೆದ ವರ್ಷ ಬರದಿಂದ ಬೆಂದು ಹೋಗಿದ್ದ ರಾಜ್ಯಕ್ಕೆ ಈ ವರ್ಷ ಮಳೆರಾಯ ಕರುಣೆ ತೋರಿದ್ದಾನೆ. ಮುಂಗಾರು ಮಳೆ ಅಬ್ಬರದಿಂದಾಗಿ ರಾಜ್ಯದ ಜಲಾಶಯಗಳು ತುಂಬಿ ತುಳುಕುತ್ತಿವೆ. ಕಾವೇರಿ ನದಿ ಪಾತ್ರದ ಜಲಾಶಯಗಳು ಮೈದುಂಬಿಕೊಂಡಿದ್ದು, ಕಾವೇರಿ ಮಾತೆಗೆ ಬಾಗಿನ ಸಲ್ಲಿಕೆಗೆ ಸರ್ಕಾರ ತೀರ್ಮಾನಿಸಿದೆ. ಇದೇ ಜುಲೈ 29ರಂದು ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಗೆ (KRS And Kabini Resorvoir) ಸಿಎಂ ಸಿದ್ದರಾಮಯ್ಯ ಬಾಗಿನ (Bagina) ಅರ್ಪಣೆ ಮಾಡಲಿದ್ದಾರೆ.

    ಕಳೆದ ವರ್ಷ ಇಡೀ ರಾಜ್ಯವನ್ನು ಬರಗಾಲ ಕಾಡಿತ್ತು. ಇದರಿಂದ 2023ರಲ್ಲಿ ಕೆಆರ್‌ಎಸ್ ಕಟ್ಟೆ ಭರ್ತಿಯಾಗಿರಲಿಲ್ಲ. ಆದ್ರೆ ಈ ಬಾರಿ ಜತೆಗೆ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ನಿರಂತರವಾಗಿ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಗೆ ನೀರಿನ ಒಳ ಹರಿವು ಹೆಚ್ಚಾಗಿದ್ದು ಜಲಾಶಯಗಳು ಭರ್ತಿಯಾಗಿವೆ. ಕಾವೇರಿ ನೀರಿಗಾಗಿ ಪ್ರತಿವರ್ಷ ತಮಿಳುನಾಡು ಮಾಡ್ತಿದ್ದ ಕಿರಿಕಿರಿ ಸದ್ಯಕ್ಕೆ ದೂರಾಗಿದೆ.

    ಅಲ್ಲದೇ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟಗಳು ಮತ್ತು ಅವುಗಳಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಶ್ರೀರಂಗಪಟ್ಟಣದಿಂದ ಹೊಗೇನಕಲ್‌ವರೆಗೆ ಕಾವೇರಿ ತಟದಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ಪ್ರವಾಸಿ ತಾಣಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

    ಮಳೆಯಿಂದ ಹಲವೆಡೆ ಪ್ರವಾಹ ಪರಿಸ್ಥಿತಿ:
    * ಕೆಆರ್‌ಎಸ್‌ನಿಂದ ನೀರು ರಿಲೀಸ್
    ಕೆಆರ್‌ಎಸ್ ಡ್ಯಾಮ್‌ಗೆ 1.20 ಲಕ್ಷ ಕ್ಯೂಸೆಕ್ ಒಳಹರಿವಿದ್ದು, 1.30 ಲಕ್ಷ ಕ್ಯೂಸೆಕ್ ದಾಖಲೆ ಪ್ರಮಾಣದಲ್ಲಿ ನದಿಗೆ ನೀರು ಹರಿಸಲಾಗಿದೆ.

    * ರಾಮಕೃಷ್ಣ ಆಶ್ರಮಕ್ಕೆ ಜಲದಿಗ್ಬಂಧನ
    ಕಾವೇರಿ ಆರ್ಭಟಕ್ಕೆ ಶ್ರೀರಂಗಪಟ್ಟಣದ ರಾಮಕೃಷ್ಣ ವಿವೇಕಾನಂದರ ಆಶ್ರಮಕ್ಕೆ ನೀರು ನುಗ್ಗಿದೆ. ಸ್ವಲ್ಪ ಪ್ರಮಾಣದ ನೀರು ನುಗ್ಗುತ್ತಿರೋದನ್ನು ಗಮನಿಸಿ ಎಚ್ಚೆತ್ತ ಅಧಿಕಾರಿಗಳು ಆಶ್ರಮದ ಸ್ವಾಮೀಜಿ, ಸಿಬ್ಬಂದಿಯನ್ನ ಸ್ಥಳಾಂತರಿಸಿದ್ದಾರೆ. ಈದೀಗ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ, ಸುತ್ತಮುತ್ತಲಿನ ರಸ್ತೆ, ತೋಟ ಜಲಾವೃತವಾಗಿದೆ.

    * ವೆಲ್ಲೆಸ್ಲಿ ಬ್ರಿಡ್ಜ್
    220 ವರ್ಷಗಳ ಇತಿಹಾಸವುಳ್ಳ ಶ್ರೀರಂಗಪಟ್ಟಣದ ವೆಲ್ಲೆಸ್ಲೀ ಬ್ರಿಡ್ಜ್ ಮುಳುಗಡೆ ಹಂತಕ್ಕೆ ಬಂದಿದೆ. ಈ ಬ್ರಿಡ್ಜ್ ಅನ್ನು 1804ರಲ್ಲಿ ಮೈಸೂರು-ಬೆಂಗಳೂರು ಸಂಚಾರಕ್ಕೆ ವೆಲ್ಲೆಸ್ಲೀ ಸೇತುವೆ ನಿರ್ಮಾಣ ಮಾಡಲಾಗಿತ್ತು. ಭಾನುವಾರ (ಜು.27) ಮತ್ತಷ್ಟು ಒಳಹರಿವು ಹೆಚ್ಚಿದರೆ ಐತಿಹಾಸಿಕ ವೆಲ್ಲೆಸ್ಲೀ ಬ್ರಿಡ್ಜ್ ಮುಳುಗಡೆಯಾಗುವ ಸಾಧ್ಯತೆ ಇದೆ. 2 ದಿನಗಳಿಂದ ಮಂಡ್ಯ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ವೆಲ್ಲೆಸ್ಲೀ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿಷೇಧ ಏರಿದೆ.

    * ಗೋಸಾಯ್ ಘಾಟ್ ಸಂಪೂರ್ಣ ಮುಳುಗಡೆ
    ಪಿಂಡಪ್ರಧಾನ, ಹೋಮ ಹವನ ಇತರೆ ಪೂಜಾ ಕೈಂಕರ್ಯಗಳಿಗೆ ಪ್ರಸಿದ್ಧಿಯಾಗಿರುವ ಗೋಸಾಯ್ ಘಾಟ್ ಕಾವೇರಿ ಅಬ್ಬರಕ್ಕೆ ಮುಳುಗಿಹೋಗಿದ್ದು, ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ. ಕಾಶಿ ವಿಶ್ವನಾಥ, ಶ್ರೀಕೃಷ್ಣ, ಶಿವ, ಆಂಜನೇಯ, ಗಣಪತಿ ದೇವಸ್ಥಾನಗಳು ಸಂಪೂರ್ಣ ಜಲಾವೃತಗೊಂಡಿವೆ.

  • ಕಬಿನಿ ಜಲಾಶಯ ಭರ್ತಿ – ಸಂತಸ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ

    ಕಬಿನಿ ಜಲಾಶಯ ಭರ್ತಿ – ಸಂತಸ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ

    ಮೈಸೂರು: ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ಭರ್ತಿಯಾಗಿರುವುದು ಸಂತಸ ತಂದಿದೆ. ಇದರಿಂದ ನಾಡಿನ ರೈತರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಮಂಗಳವಾರ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಕಬಿನಿಗೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನವೆಂಬರ್ ತಿಂಗಳಲ್ಲಿ ಬಾಗಿನ ಅರ್ಪಿಸುವುದು ವಿಶೇಷ. ಅಂತರರಾಜ್ಯ ನೀರಿನ ವಿಚಾರ ಇದೆ. ನೀರು ತುಂಬಿರುವುದರಿಂದ ತಮಿಳುನಾಡಿಗೂ ನೀರು ಕೊಡಬಹುದು, ನಾಲೆಗಳಿಗೂ ನೀರು ಹರಿಸಬಹುದು ಎಂದರು. ಇದನ್ನೂ ಓದಿ: ಮೊದಲೇ ಪೈಪೋಟಿ ನಿರೀಕ್ಷಿಸಿದ್ದೆವು, ಫಲಿತಾಂಶಕ್ಕೆ ಸಮಯವಿದೆ: ಬೊಮ್ಮಾಯಿ

    bommai

    ಕಳೆದ ವರ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ನಾನು ಕಬಿನಿ ಜಲಾಶಯಕ್ಕೆ ಬಾಗಿನ ಸಲ್ಲಿಸಲು ಬಂದಿದ್ದೆ. ನಾನು ಮುಖ್ಯಮಂತ್ರಿಯಾದ ನಂತರ ಅಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೀನಿ. ಈಗ ಕಾವೇರಿ ಜಲಾನಯನ ಪ್ರದೇಶದ ಎರಡು ಜಲಾಶಯಗಳಿಗೆ ಬಾಗಿನ ಸಲ್ಲಿಸುತ್ತಿದ್ದೇನೆ ಎಂದರು. ಇದನ್ನೂ ಓದಿ:  ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಹಿನ್ನಡೆ – ಕಾಂಗ್ರೆಸ್‌ ಮುನ್ನಡೆ

    ಕಬಿನಿ ಜಲಾಶಯದ ಕೆಳಭಾಗದಲ್ಲಿ ಬೃಂದಾವನ ಗಾರ್ಡನ್ ಮಾದರಿಯಲ್ಲಿ ಉದ್ಯಾನವನ ನಿರ್ಮಾಣವನ್ನು ಪಿ.ಪಿ.ಪಿ. ಮಾದರಿಯಲ್ಲಿ ಕೈಗೊಳ್ಳಲು ಪ್ರಸ್ತಾವನೆ ಬಂದಿದೆ. ಸರ್ಕಾರದಿಂದ ನೇರವಾಗಿಯೂ ಮಾಡಬೇಕು ಎಂಬ ವಿಚಾರವೂ ಇದೆ. ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕಬಿನಿ ಜಲಾಶಯದಲ್ಲಿ ಕೆಳಭಾಗದಲ್ಲಿ ಪ್ರವಾಹ ಬಂದಾಗ ನೀರು ನುಗ್ಗುವ ಪ್ರದೇಶದ ನಿವಾಸಿಗಳಿಗೆ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. ಇದಕ್ಕೆ ಅವರ ಸಹಕಾರವೂ ಬೇಕು ಎಂದು ಹೇಳಿದರು.

    bommai

    ಇದೇ ವೇಳೆ ಪುನಿತ್ ರಾಜ್‍ಕುಮಾರ್ ಅವರಿಗೆ ಪದ್ಮಶ್ರಿ ಪ್ರಶಸ್ತಿಗೆ ಶಿಫಾರಸ್ಸು ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪುನಿತ್ ರಾಜ್‍ಕುಮಾರ್ ಅವರ ಬಗ್ಗೆ ತಮಗೆ ಅಪಾರ ಗೌರವ ಪ್ರೀತಿ ಇದೆ. ಈ ವಿಚಾರವನ್ನು ಸರ್ವಾನುಮತದಿಂದ ಎಲ್ಲರೂ ಒಪ್ಪುತ್ತಾರೆ. ಶಿಫಾರಸ್ಸು ಮಾಡಲು ಅದಕ್ಕೊಂದು ಪದ್ಧತಿ ಇದೆ. ಸರ್ಕಾರ ಎಲ್ಲವನ್ನು ಯೋಚನೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನುಡಿದರು. ಇದನ್ನೂ ಓದಿ: ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕು: ಸಿದ್ದರಾಮಯ್ಯ

    ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಕೊಳ್ಳೇಗಾಲ ಶಾಸಕ ಎನ್. ಮಹೇಶ್, ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

  • ಸ್ವರ್ಣ ನದಿಗೆ ಬಾಗಿನ ಅರ್ಪಿಸಿದ ಸುನಿಲ್ ಕುಮಾರ್

    ಸ್ವರ್ಣ ನದಿಗೆ ಬಾಗಿನ ಅರ್ಪಿಸಿದ ಸುನಿಲ್ ಕುಮಾರ್

    ಉಡುಪಿ: ನಗರದ ಜೀವನದಿ ಸ್ವರ್ಣೆಗೆ ಇಂಧನ, ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ದಂಪತಿ ಬಾಗಿನ ಅರ್ಪಿಸಿದರು. ಬಳಿಕ ಶೀಂಬ್ರ ಸಿದ್ಧಿವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ಸಮೃದ್ಧಿಗಾಗಿ ಪ್ರಾರ್ಥಿಸಿದರು.

    ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹುಟ್ಟಿ ಉಡುಪಿ ನಗರದ ಜನರ ಜೀವನಾಡಿಯಾಗಿರುವ ಸ್ವರ್ಣ ನದಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೃತಜ್ಞತೆ ಸಲ್ಲಿಕೆ ಮಾಡಿದರು. ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಹ ಏರ್ಪಡಿಸಲಾಗಿತ್ತು. ಸಚಿವ ಸುನಿಲ್ ಕುಮಾರ್ ಪತ್ನಿ ಪ್ರಿಯಾಂಕಾ ಜೊತೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಸ್ವರ್ಣ ನದಿ ತಟದಲ್ಲಿ ಸುನಿಲ್ ಕುಮಾರ್ ದಂಪತಿ ಹಾಗೂ ಶಾಸಕ ರಘುಪತಿ ಭಟ್ ದಂಪತಿ ದೇವರಿಗೆ ಅರಶಿಣ, ಕುಂಕುಮ ಮಾಂಗಲ್ಯ ಸೀರೆ ಗಳನ್ನು ಅರ್ಪಣೆ ಮಾಡಿ ಆರತಿ ಎತ್ತಿ ಪೂಜಿಸಿದರು. ಇದನ್ನೂ ಓದಿ: ಜಾಲಿ ಮೂಡ್‍ನಲ್ಲಿ ಸಿದ್ದರಾಮಯ್ಯ- ದೆಹಲಿಯಲ್ಲಿ ಫುಲ್ ಶಾಪಿಂಗ್

    ಈ ಬಾರಿ ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಜನರಿಗೆ ಕುಡಿಯುವ ನೀರಿನ ಅಭಾವ ಬರುವುದಿಲ್ಲ. ಮುಂದಿನ ವರ್ಷದೊಳಗೆ ಭಕ್ತರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಮಾಡುತ್ತದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಸ್ನಾನ ಘಟ್ಟವನ್ನು ನಿರ್ಮಾಣ ಮಾಡುತ್ತೇವೆ ಎಂದರು.

    ಪ್ರಕೃತಿಯನ್ನು ಪೂಜಿಸಿ ಆರಾಧಿಸುವುದು ಭಾರತೀಯ ಸಂಪ್ರದಾಯ. ನದಿ, ಬೆಟ್ಟ ಪ್ರಕೃತಿಯ ಬಗ್ಗೆ ನಮಗೆ ಪೂಜನೀಯ ಭಾವನೆ ಇದೆ. ನದಿಗಳು ವರ್ಷ ಪೂರ್ತಿ ಹರಿಯಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಕುಡಿಯಲು ಮತ್ತು ಕೃಷಿ ಚಟುವಟಿಕೆಗಳು ನಡೆಯಲು ಹಾಗೂ ಜಲಚರಗಳಿಗೆ ವರ್ಷಪೂರ್ತಿ ನದಿ ತುಂಬಿ ಹರಿಯಲಿ. ಸಮೃದ್ಧಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು. ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಡಿಸಿ ಕೂರ್ಮಾರಾವ್, ಎಸ್.ಪಿ ವಿಷ್ಣುವರ್ಧನ್, ನಗರಸಭೆ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • ಹೇಮಾವತಿ ನದಿ ಉಗಮ ಸ್ಥಾನದಲ್ಲಿ ಬಾಗಿನ ಅರ್ಪಣೆ

    ಹೇಮಾವತಿ ನದಿ ಉಗಮ ಸ್ಥಾನದಲ್ಲಿ ಬಾಗಿನ ಅರ್ಪಣೆ

    ಚಿಕ್ಕಮಗಳೂರು: ಮಲೆನಾಡನಲ್ಲಿ ಜನ್ಮ ತಾಳಿ ನಾಡಿನ ಜೀವನದಿಯಾಗಿರುವ ಹೇಮಾವತಿಗೆ ಸಂಪ್ರಾದಾಯದಂತೆ ಬಾಗಿನ ಅರ್ಪಿಸಲಾಗಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಬಳಿ ಹನಿ-ಹನಿಯಾಗಿ ಜನ್ಮ ತಾಳಿರುವ ಹೇಮಾವತಿ, ಹಾಸನ, ಮೈಸೂರು, ಬೆಂಗಳೂರಿನ ಲಕ್ಷಾಂತರ ಜನ, ಜಾನುವಾರುಗಳ ಜೀವನಾಡಿಯಾಗಿದ್ದಾಳೆ. ಹೇಮಾವತಿ ನದಿ ಉಗಮ ಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪೂಜಾ ವಿಧಿ-ವಿಧಾನದೊಂದಿಗೆ ಬಾಗೀನ ಅರ್ಪಣೆ ಮಾಡಲಾಗಿದೆ. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯರು ಬಾಗಿನ ಸಮರ್ಪಣೆಯಲ್ಲಿ ಪಾಲ್ಗೊಂಡಿದ್ದರು. ಜಾವಳಿ ಗ್ರಾಮದ ಗಣಪತಿ ದೇವಸ್ಥಾನದ ಬಳಿ ಇರುವ ಕಲ್ಯಾಣಿಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

    ಈ ಬಾರಿ ಉತ್ತಮ ಹಾಗೂ ಸಮೃದ್ಧ ಮಳೆಯಾಗಿದೆ. ಮಳೆಯಿಂದ ಕಷ್ಟ-ನಷ್ಟದ ಪ್ರಮಾಣವೂ ಸಂರ್ಪೂಣ ತಗ್ಗಿದೆ. ಹೀಗಾಗಿ ಮಲೆನಾಡಿನ ಜನ ಕೂಡ ಸಂತಸದಿಂದ್ದಾರೆ. ಕಳೆದ ಎರಡ್ಮೂರು ವರ್ಷವೂ ಹೇಮಾವತಿಯ ಅಬ್ಬರದಿಂದಾದ ಅನಾಹುತಗಳಿಂದ ಜನ ಇಂದಿಗೂ ಹೊರಬಂದಿಲ್ಲ. ಜೀವನಕ್ಕಾಗಿ ಪರದಾಡುತ್ತಲೇ ಇದ್ದಾರೆ. ಆದರೆ ಈ ವರ್ಷ ತಕ್ಕಮಟ್ಟಿಗೆ ಶಾಂತನಾಗಿರೋ ವರುಣದೇವನಿಂದ ಹೇಮಾವತಿಯೂ ಶಾಂತಳಾಗಿದ್ದು, ಮಲೆನಾಡಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಹುಟ್ಟಿ ಹಾಸನ ಜಿಲ್ಲೆಯ ಹೃದಯವಾಗಿರೋ ಹೇಮಾವತಿ ಮೈಸೂರಿನಿಂದ ಬೆಂಗಳೂರಿಗೆ ಹರಿಯುತ್ತಾಳೆ. ಲಕ್ಷಾಂತರ ಜನರ ಬಾಯಾರಿಕೆ ನೀಗಿಸಿ ತಮಿಳುನಾಡಿನತ್ತವೂ ಹರಿಯುತ್ತಾಳೆ. ಅಂತಹ ಜೀವದಾತೆಗೆ ಇಂದು ಸಂಭ್ರಮದಿಂದ ಬಾಗಿನ ಅರ್ಪಣೆ ಮಾಡಲಾಗಿದೆ.

  • ಅಂಜನಾಪುರ ಜಲಾಶಯ ಭರ್ತಿ- ಬಾಗಿನ ಅರ್ಪಿಸಿದ ಬಿ.ವೈ.ರಾಘವೇಂದ್ರ

    ಅಂಜನಾಪುರ ಜಲಾಶಯ ಭರ್ತಿ- ಬಾಗಿನ ಅರ್ಪಿಸಿದ ಬಿ.ವೈ.ರಾಘವೇಂದ್ರ

    ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ರೈತರ ಜೀವನಾಡಿ ಆಗಿರುವ ಅಂಜನಾಪುರ ಜಲಾಶಯ ಭರ್ತಿಯಾಗಿದ್ದು, ಸಂಸದ ಬಿ.ವೈ. ರಾಘವೇಂದ್ರ ಅವರು ಪತ್ನಿ ತೇಜಸ್ವಿನಿ ಜೊತೆ ಬಾಗಿನ ಅರ್ಪಿಸಿದ್ದಾರೆ.

    ಬಿ.ವೈ ರಾಘವೇಂದ್ರ ದಂಪತಿ ಮೊದಲು ಜಲಾಶಯದ ದಡದಲ್ಲಿರುವ ಗಂಗಾ ದೇವಿಗೆ ಪೂಜೆ ಸಲ್ಲಿಸಿದರು. ಆ ಬಳಿಕ ಬಾಗಿನ ಅರ್ಪಿಸಿದ್ದಾರೆ. ಅಂಜನಾಪುರ ಜಲಾಶಯ ಶಿಕಾರಿಪುರ ತಾಲೂಕಿನ ರೈತರ ಜೀವನಾಡಿಯಾಗಿದೆ. ಸಾಮಾನ್ಯವಾಗಿ ಈ ಜಲಾಶಯ ವಾಡಿಕೆಯಂತೆ ಆಗಸ್ಟ್ ಮೊದಲ ವಾರದಲ್ಲಿ ಭರ್ತಿ ಆಗುತಿತ್ತು. ಆದರೆ ಈ ಬಾರಿ ಜುಲೈ ತಿಂಗಳಿನಲ್ಲಿಯೇ ಈ ಜಲಾಶಯ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಶಿಕಾರಿಪುರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ, ಕೃಷಿ ಚಟುವಟಿಕೆಯ ನೀರಿಗಾಗಿ ಈ ಜಲಾಶಯ ಅವಲಂಬಿತವಾಗಿದೆ. ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ

    ಅಂಜನಾಪುರ ಜಲಾಶಯ 1.80 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯ ಹೊಂದಿದೆ. ಹೊಸನಗರ ತಾಲೂಕಿನಲ್ಲಿ ಹುಟ್ಟುವ ಕುಮದ್ವತಿ ನದಿಯು ಹರಿದು ಶಿಕಾರಿಪುರ ತಾಲೂಕಿನ ಮೂಲಕ ಹಾವೇರಿ ಜಿಲ್ಲೆಯ ಮದಗದ ಕೆರೆಗೆ ಸೇರುತ್ತದೆ. ಹೀಗೆ, ಹರಿಯುವ ಕುಮದ್ವತಿ ನದಿಗೆ ಶಿಕಾರಿಪುರ ತಾಲೂಕಿನ ಅಂಜನಾಪುರ ಗ್ರಾಮದ ಬಳಿ ಸಣ್ಣ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಬಾಗಿನ ಅರ್ಪಣೆ ವೇಳೆ ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

  • 15 ವರ್ಷಗಳ ಬಳಿಕ ತುಂಬಿದ ಕೋಲಾರದ ಕೆರೆ- ನೀರಲ್ಲಿ ಕುಣಿದು ಕುಪ್ಪಳಿಸಿದ ಬಯಲುಸೀಮೆ ಜನ

    15 ವರ್ಷಗಳ ಬಳಿಕ ತುಂಬಿದ ಕೋಲಾರದ ಕೆರೆ- ನೀರಲ್ಲಿ ಕುಣಿದು ಕುಪ್ಪಳಿಸಿದ ಬಯಲುಸೀಮೆ ಜನ

    – ರಮೇಶ್ ಕುಮಾರ್ ಸೇರಿ ಮೂರು ಪಕ್ಷದ ಗಣ್ಯರಿಂದ ಬಾಗಿನ ಅರ್ಪಣೆ

    ಕೋಲಾರ: ನದಿ, ನಾಲೆಗಳಿಲ್ಲದ ಬರಗಾಲದ ಜಿಲ್ಲೆ, ಮಳೆ ಬರುವುದೇ ಅಪರೂಪ. ಪ್ರತಿ ವರ್ಷ ಯಾವಾಗ ಮಳೆ ಬರುತ್ತೋ ಎಂದು ಜನ ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಳೆ ರಾತ್ರೋರಾತ್ರಿ ಸುಂದರ, ನಯನ ಮನೋಹರ, ರಮಣೀಯ ಸ್ಥಳವನ್ನು ಸೃಷ್ಟಿಸಿದೆ. ಈ ಸ್ಥಳವನ್ನು ನೋಡಲು ಜಿಲ್ಲೆಯ ನಾನಾ ಕಡೆಗಳಿಂದ ಸಾವಿರಾರು ಜನರು ಬಂದಿದ್ದು, ರಾಜಕಾರಣಿಗಳು, ಅಧಿಕಾರಿಗಳ ದಂಡು ಸಹ ಬೀಡು ಬಿಟ್ಟಿದೆ.

    ಮಳೆಯಿಂದಾಗಿ ಕೋಲಾರ ತಾಲೂಕಿನ ಎಸ್.ಅಗ್ರಹಾರ ಕೆರೆ 15 ವರ್ಷಗಳ ಬಳಿಕ ಈ ಬಾರಿ ತುಂಬಿದ್ದು, ಸ್ಥಳೀಯರ ಮೊಗದಲ್ಲಿ ಮಂದಹಾಸ ಮೂಡಿದೆ. ನದಿ, ನಾಲೆಗಳಿಲ್ಲದ ಜಿಲ್ಲೆಗೆ ಇಂತಹ ಬೃಹತ್ ಕೆರೆಗಳೇ ಜೀವಾಳ, ಹೀಗಿರುವಾಗ ಕಳೆದ ಹದಿನೈದು ವರ್ಷಗಳಿಂದ ಸರಿಯಾದ ಮಳೆ ಇಲ್ಲದೆ ಒಣಗಿ ಹೋಗಿದ್ದ ಎಸ್.ಅಗ್ರಹಾರ ಕೆರೆಗೆ ಸದ್ಯ ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ನೀರು ಹರಿಸಲಾಗುತ್ತಿದೆ.

    ಇದರ ಜೊತೆಗೆ ಇತ್ತೀಚೆಗೆ ಜಿಲ್ಲೆಯಲ್ಲಿ ಒಳ್ಳೆಯ ಮಳೆಯಾದ ಪರಿಣಾಮ ಸುಮಾರು 1,200 ಎರಕೆಯಷ್ಟು ವಿಸ್ತೀರ್ಣ ಹೊಂದಿರುವ ಅಗ್ರಹಾರ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಈ ವಿಷಯ ತಿಳಿದ ಜಿಲ್ಲೆಯ ಜನರು, ಬರದ ಭೂಮಿಯಲ್ಲಿ ಇಂಥಹದ್ದೊಂದು ನಯನ ಮನೋಹರ ದೃಷ್ಯಗಳನ್ನು ಸವಿಯಲು ಸಾವಿರಾರು ಸಂಖ್ಯೆಯಲ್ಲಿ ತಂಡೋಪ ತಂಡವಾಗಿ ಅಗ್ರಹಾರ ಕೆರೆಯತ್ತ ಹರಿದು ಬರುತ್ತಿದ್ದಾರೆ. ಬರದ ನಾಡಲ್ಲಿ ಸುಂದರ ಜಲಧಾರೆಯನ್ನು ಹರಿಯುವುದನ್ನು ಅನುಭವಿಸುತ್ತಿದ್ದಾರೆ. ಇದೇ ವೇಳೆ ಹರಿಯುತ್ತಿರುವ ನೀರಿಗೆ ಜನಪ್ರತಿನಿಧಿಗಳು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ್ದಾರೆ.

    ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಅಂತರ್ಜಲ ವೃದ್ಧಿಸುವ ಕೆ.ಸಿ.ವ್ಯಾಲಿ ಯೋಜನೆಯಿಂದ ಈಗಾಗಲೇ ಜಿಲ್ಲೆಯಲ್ಲಿ 75 ಕೆರೆಗಳು ತುಂಬಿವೆ. ಆದರೆ ಜಿಲ್ಲೆಯ ಅತಿ ದೊಡ್ಡ ಎಸ್.ಆಗ್ರಹಾರ ಕೆರೆ ತುಂಬಿದ್ದು ಜಿಲ್ಲೆಯ ಜನರಲ್ಲಿ ಪರಮಾನಂದವನ್ನುಂಟು ಮಾಡಿದೆ. ಜಿಲ್ಲೆಯ ಅತಿ ದೊಡ್ಡ ಕೆರೆಗಳಲ್ಲಿ ಇದೂ ಒಂದು. ಹೀಗಾಗಿ ತುಂಬಿ ಹರಿಯುತ್ತಿದ್ದ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲು ಪಕ್ಷಾತೀತವಾಗಿ ರಾಜಕಾರಣಿಗಳ ದಂಡು ಡೋಲು ವಾದ್ಯ ಸಮೇತ ಆಗಮಿಸಿತ್ತು.

    ಮಾಜಿ ಸ್ಪೀಕರ್ ರಮೇಶ್‍ಕುಮಾರ್, ಶಾಸಕ ಶ್ರೀನಿವಾಸಗೌಡ, ಮಾಜಿ ಸಚಿವ ಕೃಷ್ಣ ಭೈರೇಗೌಡ, ಸಂಸದ ಮುನಿಸ್ವಾಮಿ ಹೀಗೆ ಮೂರು ಪಕ್ಷಗಳ ಮುಖಂಡರು ಒಟ್ಟಾಗಿ ಆಗಮಿಸಿ ಅಗ್ರಹಾರ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ವೇಳೆ ಮಾತನಾಡಿದ ಮುಖಂಡರು ಇದೊಂದು ಸುಂದರ ಪ್ರವಾಸಿ ತಾಣವಾಗಿಸಿ ಅಭಿವೃದ್ಧಿ ಪಡಿಸಬೇಕೆಂದು ಅಭಿಪ್ರಾಯ ಪಟ್ಟರು. ಜೊತೆಗೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡುತ್ತಿರುವ ಯೋಜನೆ ದೇಶಕ್ಕೆ ಹಾಗೂ ವಿಶ್ವಕ್ಕೆ ಮಾದರಿ ಎಂದರು.

    ಬರದ ನಾಡು ಕೋಲಾರಕ್ಕೆ ಕೆ.ಸಿ.ವ್ಯಾಲಿ ನೀರು ವರವಾಗಿ ಪರಿಣಮಿಸಿದ್ದು, ಯೋಜನೆಯಿಂದ ಜಿಲ್ಲೆಯ ಚಿತ್ರಣವೇ ಬದಲಾಗುತ್ತಿದೆ. ಜನರು ಕೂಡಾ ಯೋಜನೆಯಿಂದಾಗುತ್ತಿರುವ ಬದಲಾವಣೆಯನ್ನು ಸಂತೋಷವಾಗಿ ಅನುಭವಿಸುತ್ತಿದ್ದು, ಮುಂದಿನ ದಿನಗಳಲ್ಲಿ ಬರಗಾಲದ ಹಣೆ ಪಟ್ಟಿ ಕಳಚಲಿ ಅನ್ನೋದು ಜನರ ಮಾತಾಗಿದೆ.