Tag: Baghdad

  • ಇರಾಕ್‌ನಲ್ಲಿ ಮರಳಿನ ಬಿರುಗಾಳಿ – 4 ಸಾವಿರ ಜನರು ಆಸ್ಪತ್ರೆಗೆ

    ಇರಾಕ್‌ನಲ್ಲಿ ಮರಳಿನ ಬಿರುಗಾಳಿ – 4 ಸಾವಿರ ಜನರು ಆಸ್ಪತ್ರೆಗೆ

    ಬಗ್ದಾದ್: ಇರಾಕ್‌ನಲ್ಲಿ ಸೋಮವಾರ ಪ್ರಾರಂಭವಾದ ಮರಳಿನ ಬಿರುಗಾಳಿಯಿಂದಾಗಿ ಬರೋಬ್ಬರಿ 4,000 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಏಪ್ರಿಲ್ ಮಧ್ಯಭಾಗದ ಬಳಿಕ ಇರಾಕ್‌ನಲ್ಲಿ ಅಪ್ಪಳಿಸಿದ 8ನೇ ಧೂಳಿನ ಬಿರುಗಾಳಿ ಇದಾಗಿದ್ದು, ರೋಗಿಗಳು ಉಸಿರಾಟದ ತೊಂದರೆಯಿಂದ ಆಸ್ಪತ್ರೆ ದಾಖಲಾಗುತ್ತಿದ್ದಾರೆ.

    ಇರಾಕ್ ದೇಶದಲ್ಲಿ ತೀವ್ರವಾದ ಬರ, ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಕಡಿಮೆ ಮಳೆಯ ಕಾರಣದಿಂದಾಗಿ ತೀವ್ರವಾದ ಮರಳಿನ ಬಿರುಗಾಳಿ ಏಳುತ್ತಿದೆ. ಮೇ ತಿಂಗಳ ಆರಂಭದಲ್ಲಿ ಇರಾಕ್‌ನಲ್ಲಿ ಇದೇ ರೀತಿ ಮರಳಿನ ಬಿರುಗಾಳಿ ಎದ್ದಿದ್ದು, ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು. ಸುಮಾರು 5,000 ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಇದನ್ನೂ ಓದಿ: ಏರ್‌ಲೈನ್ ಸಿಬ್ಬಂದಿ ಸಹಾಯದಿಂದ ವಿಮಾನದಲ್ಲೇ ಆಯ್ತು ಹೆರಿಗೆ

    ಸೋಮವಾರ ಪ್ರಾರಂಭವಾದ ಬಿರುಗಾಳಿಯಿಂದಾಗಿ ಅಲ್ಲಿನ ಜನರಿಗೆ ಉಸಿರಾಟದ ತೊಂದರೆ ಹೆಚ್ಚಾಗಿದೆ. ಮುಂಜಾಗೃತಾ ಕ್ರಮವಾಗಿ ಅಲ್ಲಿನ ವಿಮಾನ ನಿಲ್ದಾಣಗಳು, ಶಾಲೆಗಳು ಹಾಗೂ ಕಚೇರಿಗಳನ್ನು ಮುಚ್ಚಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ

    ಮರಳಿನ ಬಿರುಗಾಳಿಯ ಪರಿಣಾಮ ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿ ಧೂಳು ಆವರಿಸಿಕೊಂಡಿದೆ. ದಕ್ಷಿಣ ಇರಾಕ್‌ನ ನಜಾಫ್ ಹಾಗೂ ಉತ್ತರ ಕುರ್ದ್ ಸೇರಿದಂತೆ ಇತರ ನಗರಗಳ ಪರಿಸ್ಥಿತಿಯೂ ಹದಗೆಟ್ಟಿದೆ ಎಂದು ವರದಿಗಳು ತಿಳಿಸಿವೆ.

  • ಬಾಗ್ದಾದ್ ವಿಮಾನ ನಿಲ್ದಾಣದ ಬಳಿ 3 ರಾಕೆಟ್‍ಗಳ ದಾಳಿ

    ಬಾಗ್ದಾದ್: ಬಾಗ್ದಾದ್‍ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಾಗೂ ಸೇನಾ ನೆಲೆಯ ಬಳಿ 3 ರಾಕೆಟ್‍ಗಳು ದಾಳಿ ನಡೆಸಿರುವುದಾಗಿ ಇರಾಕಿನ ಅಧಿಕಾರಿಗಳು ತಿಳಿಸಿದ್ದಾರೆ.

    ಬಾಗ್ದಾದ್ ವಿಮಾನ ನಿಲ್ದಾಣದ ಬಳಿ ಶುಕ್ರವಾರ ನಡೆದ ರಾಕೆಟ್ ದಾಳಿಯಿಂದಾಗಿ ಕೆಲವು ವಾಣಿಜ್ಯ ವಿಮಾನಗಳಿಗೆ ಹಾನಿಯಾಗಿದೆ. ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.

    ಇರಾಕ್‍ನಲ್ಲಿ ಪತ್ರಿಕಾ ಮಾಹಿತಿಗೆ ಅಧಿಕಾರವಿಲ್ಲದಿರುವ ಕಾರಣ ಇಬ್ಬರು ಅನಾಮಧೇಯ ಭದ್ರತಾ ಅಧಿಕಾರಿಗಳು ಶುಕ್ರವಾರ ಮುಂಜಾನೆ ವಿಮಾನ ನಿಲ್ದಾಣ ಹಾಗೂ ಮಿಲಿಟರಿ ಪ್ರದೇಶಗಳ ನಡುವೆ ರಾಕೆಟ್‍ಗಳು ದಾಳಿ ಮಾಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪಬ್‌ಜಿ ವ್ಯಸನ – ತಾಯಿ, ಒಡಹುಟ್ಟಿದವರನ್ನೇ ಗುಂಡಿಕ್ಕಿ ಕೊಂದ ಬಾಲಕ!

    ವಿಮಾನ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ಒಂದು ವಿಮಾನಕ್ಕೆ ರಾಕೆಟ್ ದಾಳಿಯಿಂದಾಗಿ ಹಾನಿಯಾಗಿದೆ. ಆದರೂ ಯಾವುದೇ ಕಾರ್ಯಾಚರಣೆಗಳಿಗೆ ಅಡ್ಡಿಯಾಗಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: 74 ವರ್ಷಗಳ ನಂತ್ರ ಸೋದರನ ಭೇಟಿಗೆ ಬಂದ ಭಾರತೀಯನಿಗೆ ಪಾಕಿಸ್ತಾನ ವೀಸಾ!

    ಇರಾನಿ ಜನರಲ್ ಖಾಸಿಮ್ ಸೊಲೈಮಾನಿ ಹಾಗೂ ಇರಾಕಿ ಮಿಲಿಟರಿ ಕಮಾಂಡರ್ ಅಬು ಮಹದಿ ಅವರ ಹತ್ಯೆಯ ಬಳಿಕ ವರ್ಷದ ಪ್ರಾರಂಭದಿಂದಲೂ ಇರಾಕ್‍ನಲ್ಲಿ ಅಮೆರಿಕದ ಉಪಸ್ಥಿತಿಯನ್ನು ರಾಕೆಟ್ ಹಾಗೂ ಡ್ರೋನ್ ದಾಳಿಗಳು ಗುರಿಯಾಗಿಸಿಕೊಂಡಿವೆ. ಇರಾಕ್‍ನಲ್ಲಿರುವ ಇರಾನ್ ಪರ ಶಿಯಾ ಬಣಗಳು ಸೊಲೈಮಾನಿ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿವೆ. ದೇಶದಿಂದ ಅಮೆರಿಕ ಪಡೆಗಳ ಸಂಪೂರ್ಣ ನಿರ್ಗಮನದವರೆಗೂ ಈ ರೀತಿಯ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಆತ್ಮಹತ್ಯಾ ಬಾಂಬ್ ದಾಳಿಗೆ 30 ಮಂದಿ ಸಾವು, 110 ಜನರಿಗೆ ಗಾಯ

    ಆತ್ಮಹತ್ಯಾ ಬಾಂಬ್ ದಾಳಿಗೆ 30 ಮಂದಿ ಸಾವು, 110 ಜನರಿಗೆ ಗಾಯ

    – ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟ

    ಬಾಗ್ಧಾದ್: ಆತ್ಮಹತ್ಯಾ ಬಾಂಬ್ ದಾಳಿಯಿಂದಾಗಿ 30 ಮಂದಿ ಸಾವನ್ನಪ್ಪಿದ್ದು, 110 ಮಂದಿ ಗಾಯಗೊಂಡಿರುವ ಘಟನೆ ಇರಾಕ್ ರಾಜಧಾನಿಯಾದ ಬಾಗ್ಧಾದ್‍ನಲ್ಲಿ ನಡೆದಿದೆ.

    ತಯರಾನ್ ಸ್ವೇರ್‍ನಲ್ಲಿರುವ ಮಾರುಕಟ್ಟೆ ಪ್ರದೇಶದಲ್ಲಿ ಬಾಂಬ್ ಧರಿಸಿದ್ದ ವ್ಯಕ್ತಿ ಜನರ ಮಧ್ಯಕ್ಕೆ ನುಗ್ಗಿ ತನ್ನನ್ನು ತಾನೂ ಸ್ಫೋಟಿಸಿಕೊಂಡಿದ್ದಾನೆ. ಕಿಕ್ಕಿರಿದ ಜನಸಂದಣಿ ಇರುವ ಪ್ರದೇಶಕ್ಕೆ ಬಂದು ಬಾಂಬ್ ಸ್ಫೋಟಿಸಿಕೊಂಡಿದ್ದಾನೆ. ಇದರಿಂದಾಗಿ ಹಲವು ಸಾವು ನೋವುಗಳು ಸಂಭವಿಸಿದೆ.

    ಬಾಂಬ್ ಸ್ಫೋಟಗೊಂಡ ವೇಳೆ ಹತ್ತಿರದಲ್ಲಿದ್ದವರು ಹಲವರು ಮೃತಪಟ್ಟಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದಿರುವ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಅಂಬುಲೆನ್ಸ್‍ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಮೂರು ವರ್ಷಗಳ ಅವಧಿಯಲ್ಲಿ ನಡೆದ ಅತ್ಯಂತ ಭೀಕರ ಬಾಂಬ್ ದಾಳಿ ಇದಾಗಿದೆ. ಈ ಅವಘಡದಲ್ಲಿ ಮಾರುಕಟ್ಟೆಯಲ್ಲಿದ್ದ ವ್ಯಾಪಾರಸ್ಥರು ಹಾಗೂ ಗ್ರಾಹಕರು ಸಾವನ್ನಪ್ಪಿದ್ದಾರೆ. ಈ ದುರಂತದ ಕುರಿತಾಗಿ ಹೆಚ್ಚಿನ ತನಿಖೆಯಿಂದ ಮಾಹಿತಿ ತಿಳಿದು ಬರಬೇಕಿದೆ.

  • ಇರಾನ್, ಅಮೆರಿಕ ಸಂಘರ್ಷ- ಬಾಗ್ದಾದ್ ಮೇಲೆ ಮತ್ತೆ 2 ಕ್ಷಿಪಣಿ ದಾಳಿ

    ಇರಾನ್, ಅಮೆರಿಕ ಸಂಘರ್ಷ- ಬಾಗ್ದಾದ್ ಮೇಲೆ ಮತ್ತೆ 2 ಕ್ಷಿಪಣಿ ದಾಳಿ

    ಬಾಗ್ದಾದ್: ಇರಾಕ್‍ನಲ್ಲಿರುವ ಅಮೆರಿಕ ಸೇನಾ ಕ್ಯಾಂಪ್‍ಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಮತ್ತೆ ಇರಾಕ್ ಮೇಲೆ 2 ಕ್ಷಿಪಣಿ ದಾಳಿ ನಡೆದಿದೆ.

    ಇರಾಕ್ ರಾಜಧಾನಿ ಬಾಗ್ದಾದ್‍ನ ಸುರಕ್ಷಿತ ಪ್ರದೇಶವಾದ ಹಸಿರು ವಲಯದಲ್ಲಿ 2 ಕ್ಷಿಪಣಿ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಇರಾನ್ ಕ್ಷಿಪಣಿ ದಾಳಿ ನಡೆದ ಕೇವಲ 24 ಗಂಟೆಗಳ ಒಳಗೆ ಮತ್ತೆರಡು ಕ್ಷಿಪಣಿಗಳ ದಾಳಿಯಿಂದ ಇರಾಕ್‍ನಲ್ಲಿ ಭಯಯ ವಾತಾವರಣ ಸೃಷ್ಟಿಯಾಗಿದೆ. ಇದನ್ನೂ ಓದಿ: ಇರಾನ್ ಮೇಲೆ‌ ಯುದ್ಧವಿಲ್ಲ, ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡಲ್ಲ: ಟ್ರಂಪ್

    ಬಾಗ್ದಾದ್‍ನ ಹಸಿರು ವಲಯವನ್ನು ಇರಾಕ್‍ನ ಸುರಕ್ಷಿತ ಸ್ಥಳವಾಗಿದ್ದು, ಇಲ್ಲಿ ಅಮೆರಿಕ ಸೇರಿದಂತೆ ವಿಶ್ವದ ವಿವಿಧ ದೇಶಗಳ ರಾಯಭಾರ ಕಚೇರಿಗಳಿವೆ. ಹೀಗಾಗಿ ಇದೇ ಪ್ರದೇಶವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ಮಾಡಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‍ಗೆ ಎಚ್ಚರಿಕೆ ನೀಡಿದ ಬೆನ್ನೆಲ್ಲೇ ಈ ದಾಳಿ ನಡೆದಿದ್ದು, ದಾಳಿಯಲ್ಲಿ ಯಾವುದೇ ರೀತಿಯ ಹಾನಿಯಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ತೈಲ ಬೆಲೆ ಏರಿಕೆ ಎಚ್ಚರಿಕೆ!

    ಇರಾನ್ ಮತ್ತು ಅಮೆರಿಕದ ಮಧ್ಯೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಬುಧವಾರ ಟ್ರಂಪ್ ಪ್ರತಿಕ್ರಿಯೆ ನೀಡಿದ್ದರು. ಕಳೆದ ರಾತ್ರಿ ಇರಾಕ್ ನಲ್ಲಿರುವ ನಮ್ಮ ವಾಯುನೆಲೆಯ ಮೇಲೆ ನಡೆದ ದಾಳಿಯಲ್ಲಿ ಯಾವುದೇ ಸೈನಿಕ ಹಾಗೂ ಅಧಿಕಾರಿಗಳಿಗೆ ತೊಂದರೆಯಾಗಿಲ್ಲ. ಯಾವುದೇ ಸಾವು, ನೋವುಗಳನ್ನು ಸಂಭವಿಸಿಲ್ಲ. ನಮ್ಮ ಎಲ್ಲಾ ಸೈನಿಕರು ಸುರಕ್ಷಿತರಾಗಿದ್ದಾರೆ. ಅಮೆರಿಕದ ಮಿಲಿಟರಿ ನೆಲೆಗಳಲ್ಲಿ ಕನಿಷ್ಠ ಹಾನಿಯಾಗಿದೆ ಎಂದು ತಿಳಿಸಿದ್ದರು.

    ಮೊದಲಿಗಿಂತಲೂ ಅಮೆರಿಕ ಸೈನ್ಯವೂ ಎಲ್ಲದಕ್ಕೂ ಸಿದ್ಧವಾಗಿದೆ. ಸುಧಾರಿತ ಕ್ಷಿಪಣಿಗಳನ್ನು ಹೊಂದಿದ್ದೇವೆ. ಆದರೆ ಅವುಗಳನ್ನು ನಾವು ಬಳಸಲು ಇಚ್ಛಿಸುವುದಿಲ್ಲ. ಯಾಕೆಂದರೆ ನಾವು ಶಾಂತಿಯನ್ನು ಬಯಸುತ್ತೇವೆ. ಇರಾನ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಲು ಹಾಗೂ ವಿಶ್ವ ಶಾಂತಿಯನ್ನು ಕಾಪಾಡಲು ಇಚ್ಛಿಸುತ್ತೇವೆ ಎಂದು ಟ್ರಂಪ್ ಹೇಳಿದ್ದರು. ಇದನ್ನೂ ಓದಿ: ಇರಾನ್ ಕ್ಷಿಪಣಿ ದಾಳಿಗೆ 80 ಅಮೆರಿಕ ಸೈನಿಕರು ಹತ 

    ಇರಾನ್ ದೇಶದ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿ ಉಗ್ರರಿಗೆ ತರಬೇತಿ ನೀಡುತ್ತಿದ್ದ. ಅಷ್ಟೇ ಅಲ್ಲದೆ ಅಮೆರಿಕದ ಭದ್ರತೆಗೆ ಬೆದರಿಕೆ ಒಡ್ಡಿದ್ದ. ಇದರಿಂದಾಗಿ ಆತನನ್ನು ಹತ್ಯೆಗೈಯುವುದು ಅನಿವಾರ್ಯವಾಗಿತ್ತು ಎಂದು ಖಾಸಿಂ ಸೊಲೈಮನಿ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದರು.

    ಇಂಧನ ಹಾಗೂ ಅನಿಲ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ನಾವು ನಂಬರ್ 1. ಸ್ಥಾನದಲ್ಲಿದ್ದೇವೆ. ಹೀಗಾಗಿ ತೈಲ ವಿಚಾರದಲ್ಲಿ ಯಾವುದೇ ದೇಶದ ಮೇಲೆ ಅವಲಂಬಿಸಿಲ್ಲ ಎಂದಿದ್ದರು. ಇರಾನ್ ಉಗ್ರರ ತವರೂರು ಆಗಿದ್ದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿದೆ. ನಮ್ಮ ಅವಧಿಯಲ್ಲಿ ಆಲ್ ಖೈದಾ ಉಗ್ರ ಬಾಗ್ದಾದಿಯನ್ನು ಹತ್ಯೆ ಮಾಡಲಾಗಿದೆ. ಆರ್ಥಿಕವಾಗಿ ನಾವು ಪ್ರಬಲವಾಗಿದ್ದೇವೆ. ಸೇನೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದ್ದರು.

  • ಅಮೆರಿಕದಿಂದ ಇರಾನ್ ಸೇನಾಧಿಕಾರಿ ಹತ್ಯೆ- ಡೆಡ್ಲಿ ಡ್ರೋನ್ ವಿಶೇಷತೆ ಏನು? ಬೆಲೆ ಎಷ್ಟು?- ವಿಡಿಯೋ ನೋಡಿ

    ಅಮೆರಿಕದಿಂದ ಇರಾನ್ ಸೇನಾಧಿಕಾರಿ ಹತ್ಯೆ- ಡೆಡ್ಲಿ ಡ್ರೋನ್ ವಿಶೇಷತೆ ಏನು? ಬೆಲೆ ಎಷ್ಟು?- ವಿಡಿಯೋ ನೋಡಿ

    ಬಾಗ್ದಾದ್: ಅಮೆರಿಕ ಏರ್ ಸ್ಟ್ರೈಕ್ ನಡೆಸಿ ಇರಾನ್ ದೇಶದ ಸೇನಾ ಮುಖ್ಯಸ್ಥ ಖಾಸೀಂ ಸುಲೈಮನಿಯನ್ನು ಶುಕ್ರವಾರ ಕೊಲೆಗೈದಿತ್ತು. ಈ ದಾಳಿಯ ಬಳಿಕ ಇಡೀ ವಿಶ್ವವೇ ಬೆಚ್ಚಿ ಬಿದ್ದಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ದಾಳಿಗೆ ಅಮೆರಿಕ ಸೇನೆ ಬಳಿಸಿದ ಮಾನವ ರಹಿತ ಡ್ರೋನ್ ವಿಶ್ವದ ಗಮನ ಸೆಳೆದಿದೆ.

    ಅಮೆರಿಕ ಸೇನೆ ತನ್ನ ವಿರೋಧಿಗಳ ವಿರುದ್ಧದ ಪ್ರಮುಖ ಕಾರ್ಯಾಚರಣೆಯಲ್ಲಿ ಎಂಕ್ಯೂ-9 ಹೆಸರಿನ ರೀಪರ್ ಡ್ರೋನ್ ಬಳಕೆ ಮಾಡುತ್ತದೆ. ಇದು ಪ್ರಿಡೇಟರ್ ಡ್ರೋನ್ ಎಂದೇ ಖ್ಯಾತವಾಗಿದ್ದು, ಪ್ರಿಡೇಟರ್ ಎಂದರೇ ಬೇಟೆಗಾರ ಎಂಬರ್ಥವನ್ನು ಹೊಂದಿದೆ. ಎದುರಾಳಿನ ನೆಲದಲ್ಲಿ ಗೂಢಾಚಾರ ಮತ್ತು ನಿಖರ ದಾಳಿ ನಡೆಸುವ 2 ಸಾಮರ್ಥ್ಯಗಳನ್ನು ಹೊಂದಿರುವುದು ಎಂಕ್ಯೂ-9 ಡ್ರೋನ್‍ನ ವಿಶೇಷತೆಯಾಗಿದೆ.

    ಎಂಕ್ಯೂ-9 ರೀಪರ್ ಡ್ರೋನ್ ನಲ್ಲಿ ‘ಎಂ’ ಅಕ್ಷರ ಅಮೆರಿಕ ರಕ್ಷಣಾ ಪಡೆಗಳ ಬಹುಪಾತ್ರವನ್ನು(Multi Role)ಪ್ರತಿನಿಧಿಸಿದರೆ, ‘ಕ್ಯೂ’ ಅಕ್ಷರವೂ ಮಾನವ ರಹಿತ ಹಾಗೂ 9 ಸಂಖ್ಯೆಯೂ ಈ ಮಾದರಿಯ ಡ್ರೋನ್ ವಿಮಾನಗಳ 9ನೇ ಸರಣಿಯನ್ನು ಪ್ರತಿನಿಧಿಸುತ್ತದೆ. ಎಂಕ್ಯೂ-9 ರೀಪರ್ ಡ್ರೋನ್ ಸುಧಾರಿತ ಕ್ಯಾಮೆರಾ ಮತ್ತು ಕ್ಷಿಪಣಿಗಳನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನವನು ಹೊಂದಿರುವ ಡ್ರೋನ್ ನಿರ್ಧಿಷ್ಟ ಗುರಿಯನ್ನು ತಲುಪಲು ವಿಷ್ಯುವಲ್ ಸೆನ್ಸರ್ ಹೊಂದಿದೆ. ದೂರದಲ್ಲಿದ್ದುಕೊಂಡೇ ಇಬ್ಬರ (ಒಬ್ಬರು ಪೈಲಟ್, ಸೆನ್ಸರ್ ಆಪರೇಟರ್) ಮೂಲಕ ಈ ಡ್ರೋನ್ ನಿಯಂತ್ರಿಸಬಹುದಾಗಿದೆ. ಇದನ್ನು ಓದಿ: ದೆಹಲಿ ದಾಳಿಗೆ ನೆರವು ನೀಡಿದ್ದ ಸುಲೈಮನಿಯನ್ನು ಹತ್ಯೆ ಮಾಡಿದ್ದೇವೆ – ಡೊನಾಲ್ಡ್ ಟ್ರಂಪ್

    ಡ್ರೋನ್ ವಿಶೇಷತೆಗಳು: ಎಂಕ್ಯೂ-9 ರೀಪರ್ ಡ್ರೋನ್ 2,200 ಲೀಟರ್  ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ಟೇಕ್ ಆಫ್ ವೇಳೆ ಗರಿಷ್ಠ 4,760 ಕೆಜಿ ತೂಕ ಆಗಿದ್ದು, 1,701 ಕೆಜಿ ತೂಕ ಶಸ್ತ್ರಾಸ್ತ್ರಗಳನ್ನು ಒತ್ತು ಸಾಗುವ ಸಾಮರ್ಥ್ಯವನ್ನು ಹೊಂದಿದೆ. ಭೂಮಿಯಿಂದ 50 ಸಾವಿರ ಅಡಿ ಎತ್ತರದಲ್ಲಿ ಹಾರಾಟ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, 1,150 ಮೈಲಿ (1,850 ಕಿ.ಮೀ) ದೂರದ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಡ್ರೋನ್ 66 ಅಡಿ ಅಗಲ, 36 ಅಡಿ ಉದ್ದ ಹಾಗೂ 12.5 ಅಡಿ ಎತ್ತರವನ್ನು ಹೊಂದಿದೆ.

    ಜನರಲ್ ಆಟೋವಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್ ಐಎನ್‍ಸಿ ಸಂಸ್ಥೆಯೂ ಎಂಕ್ಯೂ-9 ರೀಪರ್ ಡ್ರೋನ್‍ಗಳನ್ನು ಉತ್ಪಾದಿಸುತ್ತಿದೆ. ಒಂದು ಡ್ರೋನ್ ಯ್ಯೂನಿಟ್‍ಗೆ 2016 ರಂತೆ 64.2 ಮಿಲಿಯನ್ ಡಾಲರ್(ಅಂದಾಜು 460.70 ಕೋಟಿ) ವೆಚ್ಚವಾಗಲಿದ್ದು, ಒಂದು ಯ್ಯೂನಿಟ್ ಏರ್ ಕ್ರಾಫ್ಟ್ ಹಾಗೂ ಸೆನ್ಸರ್ ಗಳನ್ನು ಹೊಂದಿರುತ್ತದೆ. ಇದನ್ನು ಓದಿ: ಅಮೆರಿಕದಿಂದ ಏರ್ ಸ್ಟ್ರೈಕ್ – ಕಚ್ಚಾ ತೈಲ ಬೆಲೆ ಏರಿಕೆ

    ಎಂಕ್ಯೂ-9 ರೀಪರ್ ಡ್ರೋನ್ ಮೂಲಕ ಲೇಸರ್ ಗೈಡೆಡ್ ಕ್ಷಿಪಣಿಗಳನ್ನು ಉಡಾಯಿಸಬಹುದಾಗಿದೆ. ಈ ಕ್ಷಿಪಣಿಗಳು ನಿಖರ ಹಾಗೂ ಕಡಿಮೆ ಹಾನಿಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಗಂಟೆಗೆ 400 ಕಿಮೀ ವೇಗದಲ್ಲಿ ಹಾರುವ ಹಾಗೂ ಸತತ 27 ಗಂಟೆ ಹಾರಬಲ್ಲದು. ಅಮೆರಿಕ ನೌಕಾ ಪಡೆಯಲ್ಲಿ ಎಂಕ್ಯೂ-9 ರೀಪರ್ ಡ್ರೋನ್ ಗಳನ್ನು ಬಳಕೆ ಮಾಡಲಾಗುತ್ತಿದೆ. ವಿಶ್ವದ ಅತಿಹೆಚ್ಚು ಶಕ್ತಿಶಾಲಿ ಡ್ರೋನ್‍ಗಳಲ್ಲಿ ಎಂಕ್ಯೂ-9 ಸ್ಥಾನ ಪಡೆದಿದೆ.

  • ಅತ್ಯಾಚಾರ ಸಂತ್ರಸ್ತೆಯ ಖಡಕ್ ಪ್ರಶ್ನೆಗೆ ತಲೆ ತಗ್ಗಿಸಿ ನಿಂತ ಐಸಿಸ್ ರೇಪಿಸ್ಟ್

    ಅತ್ಯಾಚಾರ ಸಂತ್ರಸ್ತೆಯ ಖಡಕ್ ಪ್ರಶ್ನೆಗೆ ತಲೆ ತಗ್ಗಿಸಿ ನಿಂತ ಐಸಿಸ್ ರೇಪಿಸ್ಟ್

    ಬಾಗ್ದಾದ್: ಐಸಿಸ್ ಒತ್ತೆಯಾಳಾಗಿದ್ದ ಸಂತ್ರಸ್ತೆ ಮಾಧ್ಯಮವೊಂದರ ಸಂದರ್ಶನದಲ್ಲಿ ಐಸಿಸ್ ರೇಪಿಸ್ಟ್ ಹುಮಾನ್‍ಗೆ ಖಡಕ್ ಪ್ರಶ್ನೆ ಮಾಡಿದ್ದು, ಆಕೆಯ ಪ್ರಶ್ನೆಗೆ ಉತ್ತರಿಸಲಾಗದೆ ಉಗ್ರ ತಲೆತಗ್ಗಿಸಿ ನಿಂತಿದ್ದ ಘಟನೆ ಇರಾಕ್‍ನಲ್ಲಿ ನಡೆದಿದೆ.

    ನಿಮಗೇನಾದರೂ ಭಾವೆನಗಳು ಇದೆಯಾ? ನೈತಿಕತೆ ಅನ್ನೋದು ಇದೆಯಾ ಎಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಪ್ರಶ್ನಿಸಿದಾಗ ಉತ್ತರಿಸಲಾಗದೇ ಐಸಿಸ್ ರೇಪಿಸ್ಟ್ ಹುಮಾನ್ ತಲೆ ತಗ್ಗಿಸಿ ನಿಂತಿದ್ದನು. ಇರಾಕ್‍ನಲ್ಲಿ ಐಸಿಸ್ ಒತ್ತೆಯಾಳಾಗಿದ್ದ ಸಂತ್ರಸ್ತೆ ಅಶ್ವಾಖ್ ಹಾಜೀ ಹಮೀದ್ ತನ್ನನ್ನು ಅತ್ಯಾಚಾರಗೈದ ಹುಮಾನ್ ಮುಂದೆ ನಿಂತು ಖಡಕ್ ಪ್ರಶ್ನೆ ಮಾಡಿದ್ದಾಳೆ.

    ತಾನು 14 ವಯಸ್ಸಿನಲ್ಲಿದ್ದಾಗ ನನ್ನ ಮೇಲೆ ನೀನು ಅತ್ಯಾಚಾರಗೈದೆ. ಆಗ ನನ್ನಲ್ಲಿ ಏನು ಕಂಡು ನೀನು ವಿಕೃತಿ ಮೆರೆದೆ. ನನ್ನ ಜೀವನವನ್ನೇ ನೀನು ಹಾಳು ಮಾಡಿದೆ. ನನ್ನ ಕನಸ್ಸನ್ನು ದರೋಡೆಮಾಡಿ ಕತ್ತಲ ಕೂಪಕ್ಕೆ ತಳ್ಳಿದೆ. ನಿನಗೇನಾದ್ರೂ ಭಾವನೆಗಳು ಇದೆಯಾ? ನೈತಿಕತೆ ಅನ್ನೋದು ಇದೆಯಾ ಎಂದು ಪ್ರಶ್ನಿಸಿ ಕಣ್ಣಿರಿಟ್ಟಿದ್ದಾಳೆ.

    ಅಶ್ವಾಖ್ 14 ವರ್ಷದವಳಾಗಿದ್ದಾಗ ಆಕೆಯನ್ನು ಐಸಿಸ್ ಉಗ್ರರು ಕುಟುಂಬದಿಂದ ದೂರಮಾಡಿ 100 ಡಾಲರ್‍ಗೆ ಆಕೆಯನ್ನು ಮಾರಾಟ ಮಾಡಿ ಒತ್ತೆಯಾಳಾಗಿ ಇರಿಸಿದ್ದರು. ಕೆಲ ವರ್ಷದ ಬಳಿಕ 2015ರಲ್ಲಿ ಅಶ್ವಾಖ್ ತಪ್ಪಿಸಿಕೊಂಡು ಜರ್ಮನಿಗೆ ಹೋಗಿದ್ದಳು. ಇದೀಗ ಮತ್ತೆ ಇರಾಕ್‍ಗೆ ವಾಪಸ್ ಆಗಿದ್ದು, ಸಂದರ್ಶವೊಂದರಲ್ಲಿ ಐಸಿಸ್ ರೇಪಿಸ್ಟ್ ಹುಮಾನ್ ಮುಂದೆ ನಿಂತು ಖಡಕ್ ಪ್ರಶ್ನೆ ಕೇಳಿದ್ದಾಳೆ. ಸಂತ್ರಸ್ತೆಯ ಪ್ರಶ್ನೆಗಳಿಗೆ ಐಸಿಸ್ ಉಗ್ರ ತತ್ತರಿಸಿದ್ದು, ತಲೆ ತಗ್ಗಿಸಿ ನಿಂತಿದ್ದನು. ಕೊನೆಗೆ ಅಶ್ವಾಖ್ ಭಾವುಕಳಾಗಿ ಪ್ರಜ್ಞೆ ತಪ್ಪಿ ಬೀಳುವ ದೃಶ್ಯಾವಳಿ ವಿಡಿಯೋದಲ್ಲಿ ಸೆರೆಯಾಗಿದೆ.

    ಇರಾಕಿ ರಾಷ್ಟ್ರೀಯ ಗುಪ್ತಚರ ಸೇವೆ ಈ ಸಂದರ್ಶವನ್ನು ರೆಕಾರ್ಡ್ ಮಾಡಿದ್ದು, ಅದರಲ್ಲಿ ಸಂತ್ರಸ್ತೆ ಅಬು ಹುಮಾನ್ ಮುಂದೆ ನಿಂತು, ನನಗೆ ಹೀಗೇಕೆ ಮಾಡಿದಿರಿ? ನಾನು ಯಾಜಿದಿ (ಕುರ್ದಿಷ್) ಅನ್ನೋ ಕಾರಣಕ್ಕಾ? ನಾನು 14 ವರ್ಷದವಳಿದ್ದಾಗ ರೇಪ್ ಮಾಡಿದ್ರಿ, ನಿಮಗೇನಾದರೂ ಭಾವನೆಗಳಿವೆಯಾ? ನಿಮಗೇನಾದರೂ ನೈತಿಕತೆ ಇದೆಯಾ? ನನಗಾಗ 14 ವರ್ಷ ನಿಮ್ಮ ಮಗಳು, ಮಗ, ತಂಗಿಯಷ್ಟು ವಯಸ್ಸು. ನೀವು ನನ್ನ ಬಾಳನ್ನು ಹಾಳು ಮಾಡಿದಿರಿ. ನನ್ನ ಕನಸುಗಳನ್ನ ದರೋಡೆ ಮಾಡಿದ್ದೀರಿ. ನಿಮ್ಮಿಂದ ನಾನು ಹಿಂದೊಮ್ಮೆ ಐಸಿಸ್ ತೆಕ್ಕೆಯಲ್ಲಿದ್ದೆ. ನಾನು ಪಟ್ಟ ನೋವು, ಹಿಂಸೆ, ಒಂಟಿತನ ಈಗ ನೀನು ಜೈಲಿನಲ್ಲಿ ಇರುವಾಗ ಅರ್ಥ ಆಗ್ತಿದೆ ಅಲ್ವಾ? ನಿಮಗೆ ಭಾವನೆಗಳು ಇದ್ದಿದ್ದರೆ ನನ್ನನ್ನು ರೇಪ್ ಮಾಡುತ್ತಿರಲಿಲ್ಲ. ಆಗ ನನ್ನ ವಯಸ್ಸು ನಿನ್ನ ಮಗನಷ್ಟು, ಮಗಳಷ್ಟು ಇತ್ತು ಎಂದು ಪ್ರಶ್ನೆಯ ಮೇಲೆ ಪ್ರಶ್ನೆ ಮಾಡಿದ್ದಾಳೆ. ಆಕೆಯ ಪ್ರಶ್ನೆಗಳ ಸುರಿಮಳೆಗೆ ಉಗ್ರ ತತ್ತರಿಸಿ ಒಂದೇ ಒಂದು ಮಾತು ಆಡದೆ ತಲೆ ತಗ್ಗಿಸಿ ನಿಂತಿದ್ದನು. ಕೊನೆಗೆ ತಾನು ಪಟ್ಟ ಕಷ್ಟಗಳನ್ನು ಹೇಳುತ್ತಾ ಕಣ್ಣೀರಿಡುತ್ತಾ ಪ್ರಜ್ಞೆ ತಪ್ಪಿ ಬಿದ್ದಿರುವುದು ವಿಡಿಯೋದಲ್ಲಿ ರೆರ್ಕಾಡ್ ಆಗಿದೆ.

    ಐಸಿಸ್ ಉಗ್ರರು ನಮ್ಮನ್ನು ಎಳೆದುಕೊಂಡು ಹೋಗಿದ್ದಾಗ ನಮ್ಮನ್ನು ಜೀವಂತ ಬಿಡುತ್ತಾರೋ, ಹತ್ಯೆಗೈಯ್ಯುತ್ತಾರೋ ಎನ್ನುವ ಬಗ್ಗೆ ನಮಗೆ ಅರಿವಿರಲಿಲ್ಲ. ನಾನೊಬ್ಬಳೆ ಅಲ್ಲ, ನನ್ನ ಜೊತೆ ಇನ್ನೂ 300ರಿಂದ 400 ಮಂದಿ 9 ವರ್ಷಕ್ಕೆ ಮೇಲ್ಪಟ್ಟ ಮಕ್ಕಳು, ಯುವತಿಯರು ಹಾಗೂ ಮಹಿಳೆಯರನ್ನು ಉಗ್ರರು ಎಳೆದುಕೊಂಡು ಹೋಗಿದ್ದರು. ಮೊದಲು ಎಲ್ಲರನ್ನು ಒಟ್ಟಿಗೆ ಇಟ್ಟಿದ್ದರು. ಆದರೆ ಬಳಿಕ ಎಲ್ಲರನ್ನೂ ಹಣಕ್ಕೆ ಮಾರಾಟ ಮಾಡಿ, ಒತ್ತೆಯಾಳುಗಳಾಗಿ ಇರಿಸಿದ್ದರು ಎಂದು ಹೇಳಿದ್ದಾಳೆ.

    ನಾನು ಅಬು ಹುಮಾನ್ ಕೈಯಲ್ಲಿ ಸಿಕ್ಕಿಬಿದ್ದೆ. ನನ್ನನ್ನು ಎಳೆದುಕೊಂಡು ಒತ್ತೆಯಾಳಾಗಿ ಉಗ್ರ ಮಧ್ಯೆ ಇರಿಸಿಕೊಂಡನು, ಪ್ರತಿದಿನ ಹುಮಾನ್ ಹಾಗೂ ಹಲವರು ನನ್ನ ಮೇಲೆ ಅತ್ಯಾಚಾರವೆಸಗುತ್ತಿದ್ದರು. ಪ್ರತಿದಿನ ಹೊಡೆದು ಬಡಿದು ಹಿಂಸೆ ನೀಡುತ್ತಿದ್ದರು ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

    https://www.youtube.com/watch?v=4NPq4Gse5t0

  • 16 ಟರ್ಕಿ ಮಹಿಳೆಯರಿಗೆ ಗಲ್ಲು ಶಿಕ್ಷೆ ವಿಧಿಸಿದ ಇರಾಕ್ ಕೋರ್ಟ್

    16 ಟರ್ಕಿ ಮಹಿಳೆಯರಿಗೆ ಗಲ್ಲು ಶಿಕ್ಷೆ ವಿಧಿಸಿದ ಇರಾಕ್ ಕೋರ್ಟ್

    ಬಾಗ್ದಾದ್: ಐಸಿಸ್ ಸಂಘಟನೆ ಸೇರಿದ್ದಕ್ಕೆ ಇರಾಕ್ ನ್ಯಾಯಾಲಯವೊಂದು ಟರ್ಕಿ ದೇಶದ 16 ಮಹಿಳೆಯರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿ ಆದೇಶ ಪ್ರಕಟಿಸಿದೆ.

    ವಿದೇಶದಿಂದ ಬಂದ ಮಹಿಳೆಯರು ಐಸಿಸ್ ಸಂಘಟನೆಗೆ ಸೇರಿ ಬೆಂಬಲ ನೀಡುತ್ತಿರುವ ಕಾರಣದಿಂದ ಇರಾಕ್ ಸೇನೆ ಇಸ್ಲಾಮಿಕ್ ಸಂಘಟನೆ ಸೇರಿರುವ ವಿರುದ್ಧ ಕಾರ್ಯಾಚರಣೆ ನಡೆಸಿ ಬಂಧಿಸುತ್ತಿದೆ. ಕಳೆದ ಕೆಲ ದಿನಗಳಿಂದ ಸುಮಾರು 1,700 ಅಧಿಕ ವಿದೇಶಿ ಮಹಿಳೆಯರನ್ನು ಬಂಧಿಸಿರುವುದಾಗಿ ಇರಾಕ್ ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಮಹಿಳೆಯರಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ಮುನ್ನ ಅವರ ಮೇಲಿನ ಆರೋಪಗಳ ಕುರಿತು ವಿಚಾರಣೆ ನಡೆಸಲಾಗಿದ್ದು, ಈ ಮಹಿಳೆಯರು ಐಸಿಸ್ ಸಂಘಟನೆ ಭಯಾನಕ ದಾಳಿ ನಡೆಸಲು ಬೆಂಬಲ ನೀಡಿದ್ದರು. ಪ್ರಕರಣಗಳಿಗೆ ಸಾಕ್ಷ್ಯಗಳು ಸಿಕ್ಕಿದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ ಎಂದು ಇರಾಕ್ ನ ಕೇಂದ್ರ ಕ್ರಿಮಿನಲ್ ಕೋರ್ಟ್ ನ್ಯಾಯಾಧೀಶ ಅಬ್ದುಲ್ ಸತ್ತರ್ ಅಲ್ ಬರ್ಕರ್ ಅವರ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    2014 ರಿಂದ ಇಸ್ಲಾಮಿಕ್ ಉಗ್ರರು ನಡೆಸುತ್ತಿರುವ ಭಯೋತ್ಪಾದನೆಗೆ ಹಲವು ಮಹಿಳೆಯರು ಬೆಂಬಲ ಸೂಚಿಸಿ ಇರಾಕ್ ಮತ್ತು ಸಿರಿಯಾಗೆ ಆಗಮಿಸಿದ್ದರು. ಕಳೆದ ಆಗಸ್ಟ್ ನಲ್ಲಿ ಇರಾಕ್ ಸೈನಿಕರು ಕುರ್ದಿಶ್ ಪೆಶ್ಮೆರ್ಗಾ ಸೇನೆ ಮೇಲೆ ದಾಳಿ ನಡೆಸಿದ ವೇಳೆ ಸುಮಾರು 1,700 ಕ್ಕೂ ಹೆಚ್ಚಿನ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಶರಣಾಗಿದ್ದರು.

    ಕಳೆದ ಒಂದು ಒಂದು ವಾರದ ಹಿಂದೆಯಷ್ಟೇ ಟರ್ಕಿಯ ಮಹಿಳೆಗೆ ಮರಣದಂಡನೆ ಹಾಗೂ ಇತರೇ ರಾಷ್ಟ್ರೀಯತೆ ಹೊಂದಿರುವ 10 ಮಹಿಳೆಯರಿಗೆ ಕೋರ್ಟ್ ಜೀವವಾಧಿ ಶಿಕ್ಷೆ ವಿಧಿಸಿತ್ತು. ಕಳೆದ ವರ್ಷದ ಐಸಿಸ್‍ಗೆ ಸೇರ್ಪಡೆ ಮಾಡಿದ ಆರೋಪದ ಅಡಿ ರಷ್ಯಾ ಮಹಿಳೆಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.

    ವಿದೇಶದಿಂದ ಇರಾಕ್ ಮತ್ತು ಸಿರಿಯಾ ಗೆ ಆಗಮಿಸುವ ಮಹಿಳೆಯರು ಸ್ವ ಇಚ್ಛೆಯಿಂದ ಐಸಿಸ್ ಸಂಘಟನೆಗೆ ಸೇರಿ ಉಗ್ರರನ್ನೇ ಮದುವೆಯಾಗುತ್ತಾರೆ. ಈ ಮೂಲಕ ದೊಡ್ಡ ಮಟ್ಟದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡಲು ಸಹಕಾರ ನೀಡುತ್ತಾರೆ.