Tag: Bagepalli

  • ಅಸಲಿ ಐಎಎಸ್ ಅಧಿಕಾರಿಯನ್ನೇ ಮೀರಿಸಿದ ನಕಲಿ ಐಎಎಸ್ ಅಧಿಕಾರಿ

    ಅಸಲಿ ಐಎಎಸ್ ಅಧಿಕಾರಿಯನ್ನೇ ಮೀರಿಸಿದ ನಕಲಿ ಐಎಎಸ್ ಅಧಿಕಾರಿ

    ಚಿಕ್ಕಬಳ್ಳಾಪುರ: ಅಬ್ಬಬ್ಬಾ ಅದೇನು ಸೂಟುಬೂಟು, ಕಾರಿನ ಖದರ್, ಕಾರು ಚಾಲಕನಿಗೆ ಸೇಮ್ ಟು ಸೇಮ್ ಪೈಲೆಟ್ ರೀತಿ ಡ್ರೆಸ್ ಕೋಡ್. ಸೂಟು ಬೂಟು ಹಾಕ್ಕೊಂಡು ಕೈಯಲ್ಲೊಂದು ಬುಕ್ ಹಿಡ್ಕೊಂಡು. ಜೇಬಿನಲ್ಲಿ ಕೂಲಿಂಗ್ ಗ್ಲಾಸ್ ವಿತ್ ಪೆನ್ ಇಟ್ಕೊಂಡು ಐಎಎಸ್ ಅಧಿಕಾರಿಯಂತೆ ಬಂದ ವ್ಯಕ್ತಿಯ ಅಸಲಿ ಸತ್ಯ ಬಯಲಾಗಿದೆ.

    ಹೌದು ಇಂತಹ ವಿಲಕ್ಷಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಭಾಗದ ಬಾಗೇಪಲ್ಲಿ ತಾಲೂಕಿನ ಚೇಳೂರು ಹಾಗೂ ಚಾಕ್ ವೇಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಅಂದಹಾಗೆ ಮಂಗಳವಾರ ಮಧ್ಯಾಹ್ನ ಹೈಟೆಕ್ ಸ್ಕಾರ್ಪಿಯೋ ಕಾರಿನಲ್ಲಿ ಎಂಟ್ರಿ ಕೊಟ್ಟ ನಾರೇಮದ್ದೇಪಲ್ಲಿ ಗ್ರಾಮದ ನಾಗೇಶ್ ಎಂಬಾತ ಸಿನಿಮಾ ಸ್ಟೈಲ್‍ನಲ್ಲಿ ತಾನು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಿಇಒ ಅಂತ ಹೇಳಿಕೊಂಡಿದ್ದ.

    ನಕಲಿ ಐಎಎಸ್ ಅಧಿಕಾರಿ ನಾಗೇಶ್ ಆಸ್ಪತ್ರೆಗೆ ಎಂಟ್ರಿಕೊಟ್ಟಿದ್ದೇ ತಡ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ಭಯ ಭೀತರಾಗಿ ಸರ್ ನಮಸ್ಕಾರ, ನಮಸ್ಕಾರ ಅಂತ ಸೆಲ್ಯೂಟ್ ಹೊಡೆದಿದ್ದರು. ಸರ್ ಆಸ್ಪತ್ರೆಯಲ್ಲಿ ಆ ಸಮಸ್ಯೆ ಇದೆ, ಈ ಸಮಸ್ಯೆ ವೇತನವೇ ಆಗುತ್ತಿಲ್ಲ ಅಂತ ಸಿಬ್ಬಂದಿ ಅಳಲು ತೋಡಿಕೊಂಡಿದ್ದರು. ಇದನ್ನು ಆಲಿಸಿದ ನಕಲಿ ಅಧಿಕಾರಿ ನಾಗೇಶ್ ಆಸ್ಪತ್ರೆಯ ರೆಕಾರ್ಡ್ ಬುಕ್‍ನಲ್ಲಿ ಇಂಗ್ಲೀಷ್‍ನಲ್ಲೇ ಬರೆದು ಹೋಗಿದ್ದ. ಆದರೆ ಈ ವಿಚಾರ ಅಂದು ಆಸ್ಪತ್ರೆಯಲ್ಲಿರದೆ ಚಿಕ್ಕಬಳ್ಳಾಪುರ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಸಭೆಗೆ ಹಾಜರಾಗಿದ್ದ ವೈದ್ಯರಿಗೂ ತಲುಪಿತ್ತು. ಆಗ ವೈದ್ಯರು ವಿಚಾರಿಸಿದಾಗ ಆಸಲಿ ವಿಷಯ ಗೊತ್ತಾಗಿದೆ.

    ಐಎಎಸ್ ಕನಸು ಕಂಡಿದ್ದ ನಾಗೇಶ್:
    ನಾನು ಎಂಎ ಪದವೀಧರನಾಗಿದ್ದು, ಐಎಎಸ್ ಆಫೀಸರ್ ಆಗಬೇಕು ಅಂತ ಕೋಚಿಂಗ್ ಕ್ಲಾಸ್‍ಗೆ ಹೋಗುತ್ತಿದ್ದೇನೆ. ಜೊತೆಗೆ ಮಾನವ ಹಕ್ಕು ಸಂಘಟನೆಯಲ್ಲಿ ಸಿಇಒ ಆಗಿದ್ದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಹೋಗಿರುವುದು ನಿಜ. ಆದರೆ ತಾಲೂಕು ಆರೋಗ್ಯಾಧಿಕಾರಿ ಸತ್ಯನಾರಾಯಣ ಅವರು ಕರೆ ಮಾಡಿ ಆ ರೀತಿ ಹೋಗಬಾರದು ಅಂತ ತಿಳಿಸಿದ್ದಾರೆ. ಇನ್ನೂ ಮುಂದೆ ಹಾಗೆ ಹೋಗುವುದಿಲ್ಲ ಅಂತ ಹೇಳಿದ್ದೇನೆ ಎಂದು ನಾಗೇಶ್ ಹೇಳಿಕೊಂಡಿದ್ದಾನೆ.

    ನನಗೆ ಮೂರು ಬಾರಿ ಹಾವು ಕಚ್ಚಿದ್ದು ಆಸ್ಪತ್ರೆಗಳಿಗೆ ಹೋದಾಗ ಸರಿಯಾದ ಚಿಕಿತ್ಸೆ ಸಿಕ್ಕಿರಲಿಲ್ಲ. ಹೀಗಾಗಿ ಈಗ ಅಧಿಕಾರಿಯಂತೆ ಹೋಗಿ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದೇನೆ ಎಂದು ನಾಗೇಶ್ ತಿಳಿಸಿದ್ದಾನೆ.

    ಆತ್ಮಹತ್ಯೆ ಬೆದರಿಕೆ:
    ನಕಲಿ ಐಎಎಸ್ ಅಫೀಸರ್ ನಾಗೇಶ್ ವಿರುದ್ಧ ಕೇವಲ ಮೌಖಿಕವಾಗಿ ಬಾಗೇಪಲ್ಲಿ ವೃತ್ತನೀರೀಕ್ಷಕರಿಗೆ ದೂರು ನೀಡಿ ಸುಮ್ಮನಾಗಿದ್ದಾರೆ. ನಾಗೇಶ್‍ಗೆ ಬುದ್ಧಿವಾದ ಹೇಳಿ ಟಿಎಚ್‍ಒ ಸತ್ಯನಾರಾಯಣ ಸುಮ್ಮನಾಗಿದ್ದಾರೆ ಎನ್ನಲಾಗಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಡಿಎಚ್‍ಒ ಯೋಗೇಶ್ ಗೌಡ, ಆತನ ಹೆಸರು ನಾಗೇಶ್ ಅಂತ ನಾರೇಮದ್ದೇಪಲ್ಲಿ ನಿವಾಸಿ. ಜೀವನದಲ್ಲಿ ಐಎಎಸ್ ಆಗಬೇಕೇಂಬ ಆಸೆ ಹೊಂದಿದ್ದ. ಆದರೆ 33 ವರ್ಷದ ನಾಗೇಶ್ ವಿಫಲನಾಗಿ ಈ ರೀತಿ ವರ್ತನೆ ಮಾಡುತ್ತಿದ್ದಾನೆ ಎನ್ನುವುದು ಗೊತ್ತಾಗಿದೆ. ಆತನನ್ನು ಕರೆಸಿ ವಿಚಾರಣೆ ಮಾಡಲಾಗಿದ್ದು, ಹಿಡಿದುಕೊಳ್ಳಲು ಹೋದರೆ ಬಾವಿಗೆ ಬೀಳುತ್ತೇನೆ ಅಂತ ಬೆದರಿಸುತ್ತಿದ್ದಾನೆ. ಹೀಗಾಗಿ ಬಲವಂತವಾಗಿ ಕ್ರಮ ಕೈಗೊಂಡರೆ ಅಚಾತುರ್ಯ ಆಗಬಹುದಾದ ಸಂಭವವಿದೆ. ಮುಂದಿನ ದಿನಗಳಲ್ಲಿ ಈ ರೀತಿ ಮಾಡಬಾರದು ಅಂತ ಎಚ್ಚರಿಕೆ ನೀಡಿದ್ದೇವೆ. ಜೊತೆಗೆ ನಾಗೇಶ್ ಮಾನಸಿಕ ಅಸ್ವಸ್ಥತೆಯಿಂದ ಗುಣಮುಖನಾಗಲು ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.

  • 3.72 ಲಕ್ಷ ರೂ. ಲಂಚಕ್ಕೆ ಬೇಡಿಕೆ- ಎಸಿಬಿ ಬಲೆಗೆ ಬಿದ್ದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ

    3.72 ಲಕ್ಷ ರೂ. ಲಂಚಕ್ಕೆ ಬೇಡಿಕೆ- ಎಸಿಬಿ ಬಲೆಗೆ ಬಿದ್ದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ

    ಚಿಕ್ಕಬಳ್ಳಾಪುರ: ಒಂದಲ್ಲ ಎರಡಲ್ಲಾ ಬರೋಬ್ಬರಿ 3.72 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

    ಬಾಗೇಪಲ್ಲಿ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ದೂರುದಾರ ಬಾಗೇಪಲ್ಲಿ ಪಟ್ಟಣದ ಗರುಡಾದ್ರಿ ಡ್ರಿಪ್ ಇರಿಗೇಷನ್ ಎಂಟರ್‌ಪ್ರೈಸರ್ಸ್‌ ಮಾಲೀಕ ಲಕ್ಷ್ಮೀನರಸಿಂಹಯ್ಯ ಅವರ ಬಳಿ ಚಂದ್ರಶೇಖರ್ 3,72000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

    ಲಕ್ಷ್ಮೀನರಸಿಂಹಯ್ಯ ರೈತರ ಜಮೀನುಗಳಿಗೆ ಸರ್ಕಾರಿ ಸಬ್ಸಿಡಿ ಸೌಲಭ್ಯದ ಡ್ರಿಪ್ ಸಿಸ್ಟಂ ಅಳವಡಿಕೆ ಯೋಜನೆ ಅಡಿ ಹನಿ ನೀರಾವರಿ ಪದ್ಧತಿ ಅನುಷ್ಠಾನಗೊಳಿಸಿದ್ದರು. ಇದರ ಮೊತ್ತ ಸರಿ ಸುಮಾರು 16 ಲಕ್ಷ ರೂಪಾಯಿಗಳಾಗಿದ್ದು, ಆ ಹಣ ಕೃಷಿ ಇಲಾಖೆಯಿಂದ ಬಿಡುಗಡೆ ಆಗಬೇಕಿತ್ತು. ಹೀಗಾಗಿ ಹಣ ಬಿಡುಗಡೆಗೆ ಸಹಿ ಹಾಕಲು ಸಹಾಯಕ ನಿರ್ದೇಶಕ ಚಂದ್ರಶೇಖರ್ ಒಟ್ಟು ಮೊತ್ತದಲ್ಲಿ ಶೇ. 22ರಷ್ಟು ಕಮೀಷನ್ ಕೊಡಬೇಕು ಎಂದು ಹೇಳಿದ್ದ. ಅದರಂತೆ ಮೊದಲು 50,000 ರೂಪಾಯಿ ಮುಂಗಡ ಹಣ ಕೊಟ್ಟಿದ್ದ ಲಕ್ಷ್ಮೀನರಸಿಂಹಯ್ಯ ಎರಡನೇ ಕಂತಿನ 50,000 ರೂಪಾಯಿ ಹಣ ಕೊಡುವಾಗ ಎಸಿಬಿ ಅಧಿಕಾರಿಗಳು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ.

    ಬಾಗೇಪಲ್ಲಿ ಪಟ್ಟಣದ ನ್ಯಾಷನಲ್ ಕಾಲೇಜು ಬಳಿ ಕಾರಿನಲ್ಲಿ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಚಂದ್ರಶೇಖರ್ ಅವರನ್ನು ಎಸಿಬಿ ಅಧಿಕಾರಿಗಳು ಹಿಡಿದಿದ್ದಾರೆ. ಎಸಿಬಿ ಡಿವೈಎಸ್‍ಪಿ ವೆಂಕಟೇಶ್ ನಾಯುಡು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಎಸಿಬಿ ಇನ್ಸ್‍ಪೆಕ್ಟರ್ ಲಕ್ಷ್ಮಿದೇವಮ್ಮ ಸೇರಿ ಕೆಲ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

  • ಮೇವು ವಿತರಣೆಗೆ ಎಂಎಲ್‍ಎ ಬರಬೇಕು – ಬರದಿಂದ ತತ್ತರಿಸುತ್ತಿದ್ರು ಅಧಿಕಾರಿಗಳ ದರ್ಬಾರ್

    ಮೇವು ವಿತರಣೆಗೆ ಎಂಎಲ್‍ಎ ಬರಬೇಕು – ಬರದಿಂದ ತತ್ತರಿಸುತ್ತಿದ್ರು ಅಧಿಕಾರಿಗಳ ದರ್ಬಾರ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಜನ ಬರಗಾಲದಿಂದ ನೀರಿಲ್ಲದೇ ಪರದಾಡುತ್ತಿದ್ದು, ಇತ್ತ ರೈತರು ಜಾನುವಾರುಗಳಿಗೆ ಕನಿಷ್ಟ ಮೇವು ನೀಡಲಾಗದ ದುಸ್ಥಿತಿ ಎದುರಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಸರ್ಕಾರದಿಂದ ಬಂದಿರುವ ಮೇವನ್ನು ವಿತರಣೆ ಮಾಡಲು ಕುಂಟು ನೆಪ ಹೇಳುತ್ತಿದ್ದಾರೆ.

    ಜಿಲ್ಲಾಡಳಿತ ಕಳೆದ ಎರಡು ದಿನಗಳ ಹಿಂದೆಯೇ ಜಾನುವಾರುಗಳಿಗೆ ಮೇವು ಸರಬರಾಜು ಮಾಡಲು ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹೋಬಳಿಗೆ 5 ಟನ್ ಮೇವು ಸರಬರಾಜು ಮಾಡಿದೆ. ಆದರೆ ಜಾನುವಾರುಗಳಿಗೆ ಮೇವು ವಿತರಣೆ ಮಾಡಬೇಕಾದ ಆಧಿಕಾರಿಗಳು ಮಿಟ್ಟೆಮರಿ ಗ್ರಾಮದ ಪಶು ಆಸ್ಪತ್ರೆಯ ಗೋಡಾನ್ ನಲ್ಲಿ ಮೇವು ದಾಸ್ತಾನು ಮಾಡಿ ಗೋಡಾನ್‍ಗೆ ಬೀಗ ಹಾಕಿಕೊಂಡಿದ್ದಾರೆ.

    ಮೇವು ಬಂದಿರುವ ವಿಷಯ ತಿಳಿದು ಆಸ್ಪತ್ರೆ ಬಳಿ ಮೇವು ಕೊಡಿ ಅಂತ ರೈತರು ಕೇಳಿದರೆ, ಶಾಸಕರು ಬಂದು ಉದ್ಘಾಟನೆ ಮಾಡಿದ ನಂತರ ಕೊಡುತ್ತೇವೆ ಎಂದಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ರೈತರು ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಾನುವಾರುಗಳಿಗೆ ಮೇವು ಇಲ್ಲದೆ ಮರದ ಎಲೆಗಳನ್ನ ತಂದು ಹಾಕುತ್ತಿದ್ದೇವೆ ಇಷ್ಟು ದಿನ ಮೇವು ಇರಲಿಲ್ಲ. ಈಗ ಮೇವು ಬಂದಿದೆ. ಈಗ ಕೊಡಿ ಅಂದರೂ ಎಂಎಲ್‍ಎ, ಎಂಪಿ ಬರಬೇಕು ಅಂತಿದ್ದಾರೆ ಎಂದು ರೈತ ಲಕ್ಷ್ಮೀಪತಿ ಹಾಗೂ ಮಂಜುನಾಥ್ ಆರೋಪಿಸಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಶಾಸಕ ಸುಬ್ಬಾರೆಡ್ಡಿ, ಕಳೆದ ಎರಡು ದಿನಗಳ ಹಿಂದೆ ಮೇವು ಬಂದಿದೆ. ನಿನ್ನೆ ರಂಜಾನ್ ರಜೆ ಇದ್ದ ಕಾರಣ ಕೊಟ್ಟಿರಲಿಲ್ಲ. ಇನ್ನೂ ನಾನು ಬರೋವರಗೆ ಕೊಡಬೇಡಿ ಅಂತ ಹೇಳಲಿಲ್ಲ. ರೈತರು ಬಂದರೆ ಕೊಡಿ ಎಂದು ಹೇಳಿದ್ದೇನೆ. ಇಂದಿನಿಂದಲೇ ಬಂದವರಿಗೆ ಮೇವು ವಿತರಣೆ ಮಾಡುವಂತೆ ಸೂಚನೆ ನೀಡುವುದಾಗಿ ತಿಳಿಸಿದರು.

  • ಪರಿವರ್ತನಾ ಯಾತ್ರೆಗೆ ಜನರನ್ನು ಸೆಳೆಯಲು ಬಿಜೆಪಿಯಿಂದ ಆರ್ಕೆಸ್ಟ್ರಾ ಆಯೋಜನೆ!

    ಪರಿವರ್ತನಾ ಯಾತ್ರೆಗೆ ಜನರನ್ನು ಸೆಳೆಯಲು ಬಿಜೆಪಿಯಿಂದ ಆರ್ಕೆಸ್ಟ್ರಾ ಆಯೋಜನೆ!

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಭದ್ರಕೋಟೆಯಾದ ಪಂಚಗಿರಿಗಳ ನಾಡು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಇಂದು ಬಿಜೆಪಿಯ ಪರಿವರ್ತನಾ ಯಾತ್ರೆ ಭರ್ಜರಿಯಾಗಿ ನಡೆದಿದೆ. ಆದರೆ ಪರಿವರ್ತನಾ ಯಾತ್ರೆಗೆ ಜನರನ್ನು ಸೆಳೆಯಲು ಆರ್ಕೆಸ್ಟ್ರಾ ಆಯೋಜನೆ ಮಾಡಿದ್ದು ಈಗ ಭಾರೀ ವಿರೋಧಕ್ಕೆ ಕಾರಣವಾಗಿದೆ.

    ಮೊದಲಿಗೆ ಯಾತ್ರೆ ಗೌರಿಬಿದನೂರು ನಗರದಲ್ಲಿ ಆರಂಭವಾಗಿತ್ತು. ಆದರೆ ಜನರನ್ನು ಬಾಗೇಪಲ್ಲಿ ಪಟ್ಟಣದ ಯಾತ್ರೆಗೆ ಸೆಳೆಯಲು ಆರ್ಕೆಸ್ಟ್ರಾ ಆಯೋಜಿಸಿದ್ದರು. ಬಾಗೇಪಲ್ಲಿ ಪಟ್ಟಣದ ಗೂಳೂರು ವೃತ್ತದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಅರಿಕೆರೆ ಕೃಷ್ಣಾರೆಡ್ಡಿ ಅವರು ಆರ್ಕೆಸ್ಟ್ರಾ ಆಯೋಜನೆ ಮಾಡಿದ್ದರು.

    ಆರ್ಕೆಸ್ಟ್ರಾ ದಲ್ಲಿ ಬೆಡಗಿಯರು ಮಸ್ತ್ ಮಸ್ತ್ ಸಾಂಗ್ ಗಳಿಗೆ ಸ್ಟೆಪ್ಸ್ ಹಾಕಿದ್ದಾರೆ. ಈ ವೇಳೆ ಜನರು ನಾ ಮುಂದು ತಾ ಮುಂದು ಎಂದು ನೋಡೋಕೆ ಮುಗಿಬಿದ್ದಿದ್ದರು. ಇನ್ನೂ ಕಾರ್ಯಕ್ರಮದ ವೇಳೆ ವಯಸ್ಸದ ವ್ಯಕ್ತಿಯೊಬ್ಬರು ಸ್ಟೇಜ್ ಹತ್ತಿ ಡ್ಯಾನ್ಸ್ ಆಡೋಕೆ ಮುಂದಾದರು. ಇದು ನೆರೆದಿದ್ದವರ ಗಮನ ಸೆಳೆದಿತ್ತು. ಮತ್ತೊಂದೆಡೆ ಹಲವರು ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅಶ್ಲೀಲ ನೃತ್ಯ ಆಯೋಜಿಸಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

    ಇನ್ನು ಕಾರ್ಯಕ್ರಮದ ಆರಂಭ ವೇಳೆಗೆ ತಲೆಯ ಮೇಲೆ ಕಳಶ ಹೊತ್ತು ಕುಂಭ ಮೇಳದೊಂದಿಗೆ ಮಾಜಿ ಸಿಎಂ ಯಡಿಯೂರಪ್ಪ ನವರ ಜೊತೆ ಜನರು ಹೆಜ್ಜೆ ಹಾಕಿದರು. ಮೊದಲಿಗೆ ಗೌರಿಬಿದನೂರು ನಗರಕ್ಕೆ ಆಗಮಿಸಿದ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ್, ಕೇಂದ್ರ ಸಚಿವ ಸದಾನಂದಗೌಡರಿಗೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಇನ್ನೂ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್, ಬಿಜೆಪಿ ಪರಿವರ್ತನಾ ಯಾತ್ರೆಗೆ ಹರಿದು ಬರುತ್ತಿರುವ ಜನಸ್ತೋಮ ಕಂಡು ಸಿಎಂ ಸಿದ್ದರಾಮಯ್ಯ ತಮ್ಮ ಬಟ್ಟೆ ಹರಿದು ಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಕಾಂಗ್ರೆಸ್ ಭದ್ರ ಕೋಟೆಯಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಯ ದರ್ಬಾರ್ ಭರ್ಜರಿಯಾಗೇ ನಡೆದರೂ ಆರ್ಕೆಸ್ಟ್ರಾ ಆಯೋಜನೆ ಹಲವು ಆಕ್ಷೇಪಗಳಿಗೆ ಕಾರಣವಾಗಿ ವಿಪಕ್ಷಗಳಿಗೆ ಟೀಕಾಸ್ತ್ರವಾಯಿತು. ಇನ್ನು ಪರಿವರ್ತನಾ ಯಾತ್ರೆ ಕಾರ್ಯಕ್ರಮದ ನಂತರ ಸೀರೆ ಟೋಕನ್ ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ.

  • ಕರ್ನಾಟಕದಲ್ಲಿ ಆಂಧ್ರ ಸಂಸದರ ಪುತ್ರನ ಗೂಂಡಾಗಿರಿ- ಟೋಲ್‍ಪ್ಲಾಜಾ ಪುಡಿ-ಪುಡಿ

    ಕರ್ನಾಟಕದಲ್ಲಿ ಆಂಧ್ರ ಸಂಸದರ ಪುತ್ರನ ಗೂಂಡಾಗಿರಿ- ಟೋಲ್‍ಪ್ಲಾಜಾ ಪುಡಿ-ಪುಡಿ

    ಚಿಕ್ಕಬಳ್ಳಾಪುರ: ಕರ್ನಾಟಕದಲ್ಲಿ ಆಂಧ್ರ ಸಂಸದರೊಬ್ಬರ ಪುತ್ರ ಗೂಂಡಾಗಿರಿ ನಡೆಸಿದ್ದು, ಕರ್ನಾಟಕ- ಆಂಧ್ರ ಪ್ರದೇಶದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಗಡಿಭಾಗದ ಟೋಲ್ ಪ್ಲಾಜಾವನ್ನ ಧ್ವಂಸಗೊಳಿಸಿದ್ದಾನೆ.

     

     

    ಸಂಸದ ಕೃಷ್ಟಪ್ಪ ನಿಮ್ಮಲ

    ತೆಲುಗುದೇಶಂ ಪಕ್ಷದ ಹಿಂದೂಪುರ ಸಂಸದ ನಿಮ್ಮಲ ಕೃಷ್ಟಪ್ಪ ಪುತ್ರ ಅಂಬರೀಶ್ ಈ ಕೃತ್ಯವೆಸಗಿದ್ದಾನೆ. ಟೋಲ್ ನಲ್ಲಿ ಹಣ ಪಾವತಿ ಮಾಡುವಂತೆ ಕೇಳಿದ್ದಕ್ಕೆ ಅಂಬರೀಶ್ ಆಕ್ರೋಶಗೊಂಡು ಟೋಲ್ ಗೇಟ್ ಬೇಧಿಸಿಕೊಂಡು ಕಾರು ಚಲಾಯಿಸಿದ್ದಾನೆ. 10 ನಿಮಿಷದ ನಂತರ 10 ಮಂದಿ ಅಂಬರೀಶ್ ಬೆಂಬಲಿಗರು ಟೋಲ್‍ಗೆ ನುಗ್ಗಿದ್ದು, ಟೋಲ್‍ಬೂತ್‍ಗಳ ಗಾಜುಗಳನ್ನ ಪುಡಿ ಪುಡಿ ಮಾಡಿದ್ದಾರೆ. ಟೋಲ್ ಕಚೇರಿಗೆ ನುಗ್ಗಿ ಕಂಪ್ಯೂಟರ್, ಪಿಠೋಪಕರಣಗಳನ್ನ ಧ್ವಂಸಗೊಳಿಸಿ, ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

    ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಸ್ವತಃ ನಿಮ್ಮಲ ಕೃಷ್ಟಪ್ಪ ಗಲಾಟೆ ಮಾಡಿ ದಾಂಧಲೆ ನಡೆಸಿದ್ದು, ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    https://youtu.be/lgkXXLmZlH0

     

  • ಕುಡಿದ ಮತ್ತಲ್ಲಿ ಚರಂಡಿಗೆ ಬಿದ್ದ ಯುವಕ- ಗಂಟೆಗಟ್ಟಲೇ ಒದ್ದಾಡಿ ಅಲ್ಲೇ ನಿದ್ದೆ ಮಾಡ್ದ

    ಕುಡಿದ ಮತ್ತಲ್ಲಿ ಚರಂಡಿಗೆ ಬಿದ್ದ ಯುವಕ- ಗಂಟೆಗಟ್ಟಲೇ ಒದ್ದಾಡಿ ಅಲ್ಲೇ ನಿದ್ದೆ ಮಾಡ್ದ

    ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ಯುವಕನೊಬ್ಬ ಚರಂಡಿಗೆ ಬಿದ್ದು ಒದ್ದಾಡಿ, ಅಲ್ಲೇ ನಿದ್ದೆ ಮಾಡಿದ ಘಟನೆ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಿನ್ನೆ ರಾತ್ರಿ ನಡೆದಿಒದೆ.

    ಹೌದು. ಪಾನಮತ್ತನಾದ ಯುವಕ ಕೆಲ ಗಂಟೆಗಳ ಕಾಲ ಚರಂಡಿಯಲ್ಲಿಯೇ ನಿದ್ದೆ ಮಾಡಿದ್ದಾನೆ. ರಾತ್ರಿ 10 ಗಂಟೆಯ ಸುಮಾರಿನಲ್ಲಿ ವಿದ್ಯುತ್ ಇಲ್ಲದ ವೇಳೆ ಯುವಕ ಆಯತಪ್ಪಿ ರಸ್ತೆ ಬದಿಯ ಚರಂಡಿಯಲ್ಲಿ ಬಿದ್ದಿದ್ದಾನೆ. ಕುಡಿದ ಅಮಲಿನಲ್ಲಿ ಮೇಲಕ್ಕೆ ಬರಲಾಗದೇ ಅಲ್ಲೆ ಕೆಲಕಾಲ ಮಲಗಿದ್ದಾನೆ. ಕೊನೆಗೆ ಸ್ಥಳೀಯರು ಯುವಕನನ್ನು ಮೇಲಕ್ಕೆ ಎತ್ತಿ ಕಳುಹಿಸಿದ್ದಾರೆ.

    ಇನ್ನು ಚರಂಡಿಯ ಮೇಲ್ಛವಾಣಿಯನ್ನು ಕೇವಲ ಅರ್ಧಭಾಗ ಮುಚ್ಚಿರುವುದು ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಪುರಸಭೆ ಅಧಿಕಾರಿಗಳು ಸಮರ್ಪಕವಾಗಿ ಚರಂಡಿಯ ಮೇಲ್ಛಾವಣಿಯನ್ನು ಮುಚ್ಚಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    https://www.youtube.com/watch?v=nG8Z9baMukE