Tag: bagalkote

  • SSLC Result 2024; ಬಾಗಲಕೋಟೆಯ ಅಂಕಿತಾ ಬಸಪ್ಪ ರಾಜ್ಯಕ್ಕೆ ಟಾಪರ್

    SSLC Result 2024; ಬಾಗಲಕೋಟೆಯ ಅಂಕಿತಾ ಬಸಪ್ಪ ರಾಜ್ಯಕ್ಕೆ ಟಾಪರ್

    ಬಾಗಲಕೋಟೆ: ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶ (Result) ಗುರುವಾರ ಪ್ರಕಟಗೊಂಡಿದ್ದು, 625ಕ್ಕೆ 625 ಅಂಕ ಗಳಿಸುವ ಮೂಲಕ ಬಾಗಲಕೋಟೆಯ (Bgalkote) ಅಂಕಿತಾ ಬಸಪ್ಪ ಕೊಣ್ಣುರ್ (Ankita Basappa Konnur) ರಾಜ್ಯಕ್ಕೆ ಟಾಪರ್ ಆಗಿದ್ದಾರೆ.

    ಅಂಕಿತಾ ಬಸಪ್ಪ ಮುಧೋಳ ತಾಲೂಕಿನ ಮೆಳ್ಳಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇದೀಗ 625ಕ್ಕೆ 625 ಅಂಕಗಳನ್ನು ಪಡೆದ ಏಕೈಕ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಅಂಕಿತಾ ಪಾತ್ರರಾಗಿದ್ದಾರೆ. ಈ ಬಾರಿ ಒಟ್ಟು 73.40% ಫಲಿತಾಂಶ ಬಂದಿದ್ದು, ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಇದನ್ನೂ ಓದಿ: SSLC Result: 73.40 % ಫಲಿತಾಂಶ – ಬಾಲಕಿಯರೇ ಮೇಲುಗೈ; ಉಡುಪಿಗೆ ಮೊದಲ ಸ್ಥಾನ

    ಪರೀಕ್ಷೆಯಲ್ಲಿ ಒಟ್ಟು 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉಡುಪಿ 94% ಫಲಿತಾಂಶ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದಿದ್ದು, 92% ಫಲಿತಾಂಶ ಪಡೆದು ದಕ್ಷಿಣ ಕನ್ನಡ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಮೂರನೇ ಸ್ಥಾನವನ್ನು ಶಿವಮೊಗ್ಗ ದಕ್ಕಿಸಿಕೊಂಡಿದ್ದು, ಯಾದಗಿರಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಫಲಿತಾಂಶ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಇಂದು SSLC ಫಲಿತಾಂಶ ಪ್ರಕಟ

  • ಮತದಾನ ಮಾಡಿ ಮಾದರಿಯಾದ ಶತಾಯುಷಿಗಳು!

    ಮತದಾನ ಮಾಡಿ ಮಾದರಿಯಾದ ಶತಾಯುಷಿಗಳು!

    ಬೀದರ್/ಬಾಗಲಕೋಟೆ: ರಾಜ್ಯದಲ್ಲಿಂದು 14 ಕ್ಷೇತ್ರಗಳಿಗೆ ಅಂತಿಮ ಹಂತದ ಮತದಾನ ನಡೆಯುತ್ತಿದ್ದು, ಜನ ಉತ್ಸಾಹದಿಂದಲೇ ಪಾಲ್ಗೊಳ್ಳುತ್ತಿದ್ದಾರೆ. ಬೆಳಗ್ಗೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದಾರೆ. ಅದರಂತೆ ಬಾಗಲಕೋಟೆ, ಬೀದರ್ ಜಿಲ್ಲೆಗಳಲ್ಲಿ ಶತಾಯುಷಿಗಳು (Centenarian) ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಬಾಲಕೋಟೆಯಲ್ಲಿ (Bagalkote) 104 ವರ್ಷದ ವೃದ್ಧೆ ಹಾಗೂ ಬೀದರ್‌ನಲ್ಲಿ 100 ವರ್ಷದ ಶತಾಯುಷಿ ಮತದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಬಾಗಲಕೋಟೆಯಲ್ಲಿ ಬೀಳಗಿ ಪಟ್ಟಣದ ನಿವಾಸಿ ಸಿದ್ದವ್ವ ಸಿದ್ದಪ್ಪ ಜಗ್ಗಲ (104) ಸಖಿ ಪಿಂಕ್ ಬೂತ್‌ನಲ್ಲಿ ಮತದಾನ ಮಾಡಿದ್ದಾರೆ. ಬೀಳಗಿ ಎಂಪಿಎಸ್ ಶಾಲೆಯ ಮತಗಟ್ಟೆ 76ರಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

    ಅಲ್ಲದೇ ಬೀದರ್ ನಗರದ ಮನ್ನಿಯರ್ ತಾಲೀಮ್ ನಿವಾಸಿ ಸುಭದ್ರಬಾಯಿ (100) ತಮ್ಮ ಹಕ್ಕು ಚಲಾಯಿಸುವ ಮೂಲಕ ಇತರರರಿಗೆ ಮಾದರಿಯಾಗಿದ್ದಾರೆ. ಮಗನ ಸಹಾಯದಿಂದ ಮತಗಟ್ಟೆಗೆ ಬಂದು, ಮತಗಟ್ಟೆ ಸಂಖ್ಯೆ 104ರಲ್ಲಿ ಮತದಾನ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: Jharkhand: 35 ಕೋಟಿಗೂ ಅಧಿಕ ಹಣ ಜಪ್ತಿ – ಇಡಿಯಿಂದ ಕಾಂಗ್ರೆಸ್‌ ಸಚಿವರ ಆಪ್ತ ಕಾರ್ಯದರ್ಶಿ, ಮನೆಕೆಲಸದವನ ಬಂಧನ!

    ಬಾಗಲಕೋಟೆ: ಮತಗಟ್ಟೆಗೆ ಸಾಂಪ್ರದಾಯಿಕ ಪೂಜೆ:
    ಜಿಲ್ಲೆಯ 1946 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಆದ್ರೆ ಬಾಗಲಕೋಟೆ ನಗರದ ಮುಚಖಂಡಿ ಕ್ರಾಸ್ ನಿವಾಸಿಯಾಗಿರುವ ವಿಠ್ಠಲ್ ಮಾಳಗೊಂಡ್ ಹಾಗೂ ಸುಜಾತಾ ದಂಪತಿ ಪಾದರಕ್ಷೆಯನ್ನ ಧರಿಸದೇ, ಕಂಬಳಿ ಹೊದ್ದು, ಮತಗಟ್ಟೆಗೆ ಪೂಜೆ ಸಲ್ಲಿಸಿ ಮತದಾನ ದಾನ ಮಾಡಿ ಗಮನ ಸೆಳೆದಿದ್ದಾರೆ.

    ಮತಗಟ್ಟೆ ಸಂಖ್ಯೆ 91, 92ಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಕಂಬಳಿ ಹಾಕಿಕೊಂಡು ಮತಗಟ್ಟೆ ಬಾಗಿಲಿಗೆ ವಿಭೂತಿ, ಕುಂಕುಮ ಹಚ್ಚಿ, ದೂದುಬತ್ತಿ ಬೆಳಗಿ ಮಾಲೆ ಹಾಕಿ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಬಳಿಕ ಮತಚಲಾಯಿಸಿದ್ದಾರೆ. ಇದನ್ನೂ ಓದಿ: Lok Sabha Election: ಶಿವಮೊಗ್ಗದಲ್ಲಿ ಅತಿ ಹೆಚ್ಚು, ರಾಯಚೂರಿನಲ್ಲಿ ಕಡಿಮೆ ಮತದಾನ 

  • ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಹೃದಯಾಘಾತ- ಶಿಕ್ಷಕ ದುರ್ಮರಣ

    ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಹೃದಯಾಘಾತ- ಶಿಕ್ಷಕ ದುರ್ಮರಣ

    ಬಾಗಲಕೋಟೆ: ಚುನಾವಣಾ  (Lok Sabha Elections 2024) ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ  (Heart Attack) ಸಾವನ್ನಪ್ಪಿದ ಘಟನೆ ಮುಧೋಳದಲ್ಲಿ ನಡೆದಿದೆ.

    ಮೃತ ಸಿಬ್ಬಂದಿಯನ್ನು ಗೋವಿಂದಪ್ಪ ಎಂದು ಗುರುತಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ ತೆರಳಲು ಬಸ್ ನಿಲ್ದಾಣದ ಗೇಟ್ ಬಳಿ ಬಂದಿದ್ದ ವೇಳೆ ಅವರಿಗೆ ಹೃದಯಾಘಾತವಾಗಿದೆ. ಈ ವೇಳೆ ಅವರು ಸ್ಥಳದಲ್ಲೇ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಭೇಟಿ ಕೊಟ್ಟ ಬಳಿಕ ನನ್ನನ್ನು ಟಾರ್ಗೆಟ್‌ ಮಾಡಲಾಗಿದೆ: ʼಕೈʼ ವಿರುದ್ಧ ರಾಧಿಕಾ ಕಿಡಿ

    ಜಮಖಂಡಿ ತಾಲೂಕಿನ ಮೈಗೂರು ಪ್ರಾಥಮಿಕ ಶಾಲೆ ಮತಗಟ್ಟೆಗೆ ಗೋವಿಂದಪ್ಪ ಅವರು ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರು ಮುಧೋಳದ ಬಿದರಿ ಶಾಲೆಯಲ್ಲಿ ಶಿಕ್ಷಕರಾಗಿ (Teacher) ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ನನಗೆ ಕೆಆರ್ ನಗರದ ಸಂತ್ರಸ್ತೆ ಗೊತ್ತಿಲ್ಲ, ದೂರನ್ನೂ ಕೊಡಿಸಿಲ್ಲ: ಶಾಸಕ ರವಿಶಂಕರ್

  • ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ: ಮೋದಿ

    ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ: ಮೋದಿ

    ಬಾಗಲಕೋಟೆ: ಭಾರತ ವಿಶ್ವದ ಟಾಪ್ 3ನೇ ಸ್ಥಾನಕ್ಕೆ ಏರಲಿದ್ದು, ಅದನ್ನು ನಿಮ್ಮ ಮತ ಮಾಡಲಿದೆ. ಈ ಬಾರಿಯ ಲೋಕಸಭಾ ಚುನಾವಣೆ ಆತ್ಮನಿರ್ಭರದ್ದಾಗಿದ್ದು, ಭಾರತದ ಭವಿಷ್ಯವನ್ನು ನಿರ್ಧಾರ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

    ಬಾಗಲಕೋಟೆಯಲ್ಲಿ (Bagalkote) ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತವನ್ನು ವಿಶ್ವದ ಟಾಪ್ 3 ಸ್ಥಾನಕ್ಕೆ ಮೋಜು, ಮಸ್ತಿಯಲ್ಲಿ ಕಾಲ ಕಳೆಯುವವರು ಏರಿಸುವುದಿಲ್ಲ. ಒಂದು ಸಂಕಲ್ಪ ಮಾಡಿಕೊಂಡು 24*7 ಕೆಲಸ ಮಾಡಿದರೆ ಇದು ಸಾಧ್ಯವಾಗಲಿದೆ. ಈ ವಿಚಾರದಲ್ಲಿ ಮೋದಿಯ ಗಮನ ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಬಿಗ್‌ ಶಾಕ್ -‌ ʻಕೈʼಕೊಟ್ಟು ಕಮಲ ಹಿಡಿದ ಅಭ್ಯರ್ಥಿ!

    ಸರ್ಕಾರದಲ್ಲಿ ಇದ್ದುಕೊಂಡು ದೇಶವನ್ನು ಕೊಳ್ಳೆ ಹೊಡೆಯುವವರಿಗೆ ನೀವು ಅಧಿಕಾರ ಕೊಡ್ತಿರಾ? ಈ ಕಾಂಗ್ರೆಸ್‍ನ (Congress) ಇತಿಹಾಸ ದೇಶವನ್ನು ಲೂಟಿ ಹೊಡೆಯುವುದೇ ಆಗಿದೆ. ಇಂತಹ ಲೂಟಿಕೋರರ ಕೈಯಲ್ಲಿ ದೇಶವನ್ನ ಕೊಡುತ್ತೀರಾ? ಕಾಂಗ್ರೆಸ್ ಕರ್ನಾಟಕವನ್ನು ಲೂಟಿಯ ಎಟಿಎಂ ಆಗಿ ಮಾಡಿಕೊಂಡಿದ್ದಾರೆ. ಅಧಿಕಾರ ಪಡೆದು ಇಷ್ಟು ಕಡಿಮೆ ಸಮಯದಲ್ಲೇ ಖಜಾನೆ ಲೂಟಿ ಹೊಡದಿದ್ದಾರೆ. ಇಲ್ಲಿನ ಸರ್ಕಾರಿ ನೌಕರರಿಗೆ ಸಂಬಳ ಕೂಡಲಾಗುತ್ತಿಲ್ಲ. ಜನರ ಹಿತಕ್ಕಾಗಿ ಒಂದು ಯೋಜನೆ ಇಲ್ಲ. ಕಾಂಗ್ರೆಸ್ ಬಂದ್ರೆ ದೇಶ ಹಾಳಾಗುತ್ತದೆ ಎಂದು ಇತಿಹಾಸ ಹೇಳುತ್ತದೆ ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕರ್ನಾಟಕದಲ್ಲಿ ನಮ್ಮ ಸರ್ಕಾರ, ರೇಲ್ವೆ ನಿಲ್ದಾಣ ಮಾಡುತ್ತಿದೆ. ವಿಜಯಪುರದಲ್ಲಿ ವಿಮಾನ ನಿಲ್ದಾಣ ಮಾಡಲಾಗುತ್ತಿದೆ. ಹಿಂದಿನ 10 ವರ್ಷದಲ್ಲಿ ಮೋದಿ ಸರ್ಕಾರ ಬಡ ಜನರ ಪರ ಯೋಚಿಸಿದೆ. ಕಾಂಗ್ರೆಸ್‍ನವರು ಒಂದು ಕ್ಷಣದಲ್ಲಿ ಬಡತನ ನಿರ್ಮೂಲನೆ ಮಾಡುತ್ತೇವೆ ಅಂತಾರೆ, 70 ವರ್ಷದಿಂದ ಆಗದದ್ದನ್ನು ಈಗೇನು ಮಾಡ್ತೀರಾ ಎಂದು ಅವರು ಪ್ರಶ್ನಿಸಿದ್ದಾರೆ.

    ನಾನು ಪ್ರಧಾನಿ ಆಗುವ ಮೊದಲು 18 ಸಾವಿರ ಗ್ರಾಮಗಳ ಜನರು ಕಗ್ಗತ್ತಲಲ್ಲಿ ಜೀವಿಸುತ್ತಿದ್ದರು. ನನಗೆ ಅವಕಾಶ ಕೊಟ್ಟ ನಂತರ ಎಲ್ಲೆಡೆ ವಿದ್ಯುತ್ ಕೊಟ್ಟೆವು, ದೇಶದಲ್ಲಿ ಒಂದೇ ಒಂದು ವಿದ್ಯುತ್ ಇಲ್ಲದ ಗ್ರಾಮವಿಲ್ಲ. 75%ನಷ್ಟು ಜನರಿಗೆ ನೀರು ಕೊಡಲಾಗಿದೆ. ಈ ಮೊದಲು ಕಾಂಗ್ರೆಸ್ ಮಾಡಬಹುದಿತ್ತಲ್ಲಾ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

    ಈ ವೇಳೆ ಬಾಲಕಿ ಮೇಟಿ ರಚಿಸಿದ ಮೋದಿ ಹಾಗೂ ಅವರ ತಾಯಿಯ ಭಾವಚಿತ್ರವನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಲಾಯಿತು. ಇದಕ್ಕೆ ಪ್ರತಿಯಾಗಿ, ಮಗಳೇ ನಿನಗೆ ಪತ್ರ ಬರೆಯುತ್ತೇನೆ ಎಂದರು. ಇದನ್ನೂ ಓದಿ: ಪ್ರಜ್ವಲ್ ಜರ್ಮನಿಯಲ್ಲಿರಲಿ, ಎಲ್ಲೇ ಇರಲಿ ಕ್ರಮಕ್ಕೆ ಸಿಎಂ ಆದೇಶಿಸಲಿ: ಅಲ್ಕಾ ಲಂಬಾ

  • ಮೋದಿಗಾಗಿ `ಒಲವಿನ ಉಡುಗೊರೆ’ – ತನ್ನ ರಕ್ತದಲ್ಲೇ ಭಾವಚಿತ್ರ ಬಿಡಿಸಿದ ಅಭಿಮಾನಿ!

    ಮೋದಿಗಾಗಿ `ಒಲವಿನ ಉಡುಗೊರೆ’ – ತನ್ನ ರಕ್ತದಲ್ಲೇ ಭಾವಚಿತ್ರ ಬಿಡಿಸಿದ ಅಭಿಮಾನಿ!

    ಬಾಗಲಕೋಟೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗಾಗಿ ಅಭಿಮಾನಿಯೊಬ್ಬರು ವಿಶೇಷ ಉಡುಗೊರೆಯನ್ನ ಸಿದ್ಧಪಡಿಸಿಕೊಂಡಿದ್ದಾರೆ.

    ಬಾಗಲಕೋಟೆ ಜಿಲ್ಲೆ ಜಮಖಂಡಿ ಮೂಲದ ಅಭಿಮಾನಿ (Modi Fan) ಆನಂದ ಭಾರತ, ಮೋದಿಗಾಗಿ ಅವರ ತಾಯಿ ಹೀರಾಬೆನ್ ಆಶೀರ್ವಾದ ಮಾಡಿರುವ ಚಿತ್ರವನ್ನು ತನ್ನ ರಕ್ತದಲ್ಲಿ ಬಿಡಿಸಿದ್ದಾರೆ. ಕೇವಲ 13 ಗಂಟೆಗಳಲ್ಲೇ ಮೋದಿ ಹಾಗೂ ತಾಯಿ ಹೀರಾಬೆನ್ ಇರುವ ಭಾವಚಿತ್ರವನ್ನು ತನ್ನ ರಕ್ತದಲ್ಲೇ ಬಿಡಿಸಿದ್ದಾರೆ. ಅದನ್ನು ಇಂದು (ಏ.29) ಮೋದಿಗೆ ನೀಡಲು ಉತ್ಸುಕರಾಗಿದ್ದಾರೆ. ಇದನ್ನೂ ಓದಿ: ಶ್ರೀನಿವಾಸ್‌ ಪ್ರಸಾದ್‌ ವಿಧಿವಶ – ಪ್ರಭಾವಿ ದಲಿತ ನಾಯಕನ ರಾಜಕೀಯ ಏಳು-ಬೀಳಿನ ಹಾದಿ ಹೇಗಿತ್ತು?

    ಅಲ್ಲದೇ ಮೋದಿ ಇಂದು ಬಾಗಲಕೋಟೆಗೆ ಆಗಮಿಸ್ತಾರೆಂಬ (Bagalkote) ಸುದ್ದಿ ತಿಳಿದ ಬಾಗಲಕೋಟೆ ನಿವಾಸಿ ನಾಗರಾತ್ನಾ ಮೇಟಿ ಅನ್ನೋ ವಿದ್ಯಾರ್ಥಿನಿ ವಿಶೇಷ ಚಿತ್ರಪಟವೊಂದನ್ನು ಬಿಡಿಸಿದ್ದಾಳೆ. ಮೋದಿಯವ್ರ ತಾಯಿ ಹೀರಾಬೆನ್, ಮೋದಿಯವ್ರಿಗೆ ಸಿಹಿ ತಿನ್ನಿಸಿ, ಆಶಿರ್ವಾದ ಮಾಡಿರುವ ಫೋಟೋ ಇದಾಗಿದ್ದು, ವಿದ್ಯಾರ್ಥಿನಿಯ ಕುಂಚದಲ್ಲಿ ಈ ಚಿತ್ರ ಅಂದವಾಗಿ ಮೂಡಿಬಂದಿದೆ.

    ಕಾರ್ಯಕ್ರಮ ಆಯೋಜಕರು ಅವಕಾಶ ಕೊಟ್ಟರೆ ಪ್ರಧಾನಿ ಮೋದಿಯವ್ರಿಗೆ ತಾನು ಬಿಡಿಸಿದ ಚಿತ್ರವನ್ನ ಕೊಡುಗೆಯಾಗಿ ಕೊಡಲು ಈ ವಿದ್ಯಾರ್ಥಿನಿ ಬಯಸಿದ್ದಾಳೆ. ಇದನ್ನೂ ಓದಿ: ಪ್ರಸಾದ್‌ ಅನ್ಯಾಯ-ಅಸಮಾನತೆಯ ವಿರುದ್ಧದ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದರು – ಸಿಎಂ ಸಂತಾಪ

  • ಮಹಿಳಾ ಕಾನ್ಸ್‌ಟೇಬಲ್ ನೇಣಿಗೆ ಶರಣು – ಕೌಟುಂಬಿಕ ಸಮಸ್ಯೆ ಶಂಕೆ

    ಮಹಿಳಾ ಕಾನ್ಸ್‌ಟೇಬಲ್ ನೇಣಿಗೆ ಶರಣು – ಕೌಟುಂಬಿಕ ಸಮಸ್ಯೆ ಶಂಕೆ

    ಉಡುಪಿ: ಮಹಿಳಾ ಕಾನ್ಸ್‍ಟೇಬಲ್ (Police Constable) ಒಬ್ಬರು ಪೊಲೀಸ್ ಕ್ವಾಟ್ರಸ್‍ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಾಪುವಿನಲ್ಲಿ (Kapu) ನಡೆದಿದೆ.

    ಬಾಗಲಕೋಟೆ (Bagalkote) ಮೂಲದ ಜ್ಯೋತಿ (29) ಆತ್ಮಹತ್ಯೆಗೆ ಶರಣಾದ ಕಾನ್ಸ್‌ಟೇಬಲ್ ಎಂದು ತಿಳಿದುಬಂದಿದೆ. ಅವರು ಕಾಪು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: Lok Sabha Election 2024: ಮತದಾನ ನಡೆಯುವ ದಿನ ರಾಜ್ಯಾದ್ಯಂತ ಸಾರ್ವತ್ರಿಕ ರಜೆ ಘೋಷಣೆ

    ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್‍ಪಿ ಡಾ.ಅರುಣ್ ಅವರು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.‌

    ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.‌ ಇದನ್ನೂ ಓದಿ: ಮುಲಾಯಂ ಸರ್ಕಾರದಿಂದ ರಕ್ಷಣೆ – ಅನ್ಸಾರಿಯನ್ನು ಬಂಧಿಸಿದ್ದಕ್ಕೆ ಡಿಎಸ್‌ಪಿಗೆ ರಾಜೀನಾಮೆ ಶಿಕ್ಷೆ!

  • ಟಿಕೆಟ್ ಕೈತಪ್ಪಿದ್ದಕ್ಕೆ ಗಳಗಳನೇ ಕಣ್ಣೀರು ಹಾಕಿದ ವೀಣಾ ಕಾಶಪ್ಪನವರ್

    ಟಿಕೆಟ್ ಕೈತಪ್ಪಿದ್ದಕ್ಕೆ ಗಳಗಳನೇ ಕಣ್ಣೀರು ಹಾಕಿದ ವೀಣಾ ಕಾಶಪ್ಪನವರ್

    – ಸ್ವತಂತ್ರ ಸ್ಪರ್ಧೆ ಬಗ್ಗೆ ನಿರ್ಧಾರ

    ಬಾಗಲಕೋಟೆ: ಸ್ವಾಭಿಮಾನಿ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ಆಯೋಜನೆ ಮಾಡಿ ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್ (Veena Kashappanavar) ಗಳಗಳನೇ ಕಣ್ಣೀರು ಹಾಕಿದ್ದಾರೆ.

    ಕಣ್ಣೀರು ಹಾಕುತ್ತಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವೀಣಾ, ಟಿಕೆಟ್ ಸಿಗುತ್ತೆ ಎಂದು ಸಾಕಷ್ಟು ನೀರೀಕ್ಷೆ ಇಟ್ಟುಕೊಂಡಿದ್ದೆ, ಆದರೆ ಹೇಗೆ ಟಿಕೆಟ್ ಕೈ ತಪ್ಪಿದೆ ಎಂದು ಗೊತ್ತಾಗ್ತಿಲ್ಲ. ನಾಯಕರು ನಮ್ಮ ಜಿಲ್ಲೆಯ ಸ್ವಾಭಿಮಾನವನ್ನು ಮಾರಿಕೊಂಡಿದ್ದಾರೆ. ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೆ, ಯಾರಿಂದ ಟಿಕೆಟ್ ತಪ್ಪಿತು ಎಂದು ಗೊತ್ತಿಲ್ಲ ಎಂದರು.

    ರಾಜ್ಯ ನಾಯಕರನ್ನು ಕೇಳಿದ್ರೆ ಜಿಲ್ಲಾ ನಾಯಕರ ಹೆಸರು ಹೇಳ್ತಾರೆ. ಜಿಲ್ಲಾ ನಾಯಕರನ್ನ ಕೇಳಿದ್ರೆ ರಾಜ್ಯ ನಾಯಕರ ಹೆಸರು ಹೇಳ್ತಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಸ್ವೀಕರಿಸಿದ ಸ್ವತಂತ್ರ ಸ್ಪರ್ಧೆ ಬಗ್ಗೆ ನಿರ್ಧರಿಸುತ್ತೇನೆ ಎಂದು ವೀಣಾ ಕಾಶಪ್ಪನವರ್ ಹೇಳಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್‌ ಅಕ್ರಮದ ಬಗ್ಗೆ ಸಾಕ್ಷ್ಯಗಳೊಂದಿಗೆ ಕಾಂಗ್ರೆಸ್‌ ದೂರು ನೀಡಿತ್ತು: ಬಿಜೆಪಿ ತಿರುಗೇಟು

    ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದಕ್ಕೆ ಸಭೆ ಆಯೋಜನೆ ಮಾಡಲಾಗಿತ್ತು. ನಗರದ ಚರಂತಿಮಠ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಹುನಗುಂದ ಶಾಸಕ ವಿಜಯಾನಂದ್ ಕಾಶಪ್ಪನವರ್ ಭಾಗಿಯಾಗಿದ್ದಾರೆ.

    ಈ ಬಾರಿಯ ಲೋಕಸಭಾ ಚುನಾವವಣೆಗೆ ಬಾಗಲಕೋಟೆಯಿಂದ ಸಂಯುಕ್ತಾ ಪಾಟೀಲ್‌ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಘೋಷಿಸಲಾಗಿದೆ.

  • ಚಲಿಸುತ್ತಿದ್ದ ಬಸ್‍ನಲ್ಲಿ ಕುಡುಕರ ಗಲಾಟೆ- ಓರ್ವನನ್ನು ತಳ್ಳಿ ಹತ್ಯೆಗೈದ

    ಚಲಿಸುತ್ತಿದ್ದ ಬಸ್‍ನಲ್ಲಿ ಕುಡುಕರ ಗಲಾಟೆ- ಓರ್ವನನ್ನು ತಳ್ಳಿ ಹತ್ಯೆಗೈದ

    ಬಾಗಲಕೋಟೆ: ಚಲಿಸುತ್ತಿದ್ದ ಬಸ್‍ನಲ್ಲಿ ಇಬ್ಬರು ಕುಡುಕರ ನಡುವೆ ನಡೆದ ಗಲಾಟೆಯಲ್ಲಿ ಓರ್ವ ಕೆಳಗೆ ಬಿದ್ದು ಸಾವಿಗೀಡಾದ ಘಟನೆ ಮುಧೋಳ (Mudhol)-ಕುಳಲಿ ರಸ್ತೆಯಲ್ಲಿ ನಡೆದಿದೆ.

    ಮುಧೋಳದ ಸೋರಗಾವಿ ಗ್ರಾಮದ ಪ್ರಹ್ಲಾದ್ ಮುರಿಗೆಪ್ಪ ಮಾದರ (38) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ. ಮುಧೋಳ ಮೂಲಕ ಬನಹಟ್ಟಿಗೆ ಬಸ್ ಹೊರಟಿತ್ತು. ಈ ವೇಳೆ ಬಸ್‍ನಲ್ಲಿ ಇಬ್ಬರು ಕುಡುಕರು ಗಲಾಟೆ ಶುರು ಮಾಡಿದ್ದಾರೆ. ಬಳಿಕ ಓರ್ವ ಕುಡುಕ ಮತ್ತೋರ್ವನನ್ನು ಬಸ್ಸಿನಿಂದ ಹೊರಗೆ ತಳ್ಳಿದ್ದಾನೆ. ಈ ವೇಳೆ ಚರಂಡಿಗೆ ಬಿದ್ದ ಪ್ರಹ್ಲಾದ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಇದನ್ನೂ ಓದಿ: ಶ್ರೀಲಂಕಾದಿಂದ ತಂದು ಅಕ್ರಮ ಸಾಗಾಟ – ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 1 ಕೆಜಿ ಚಿನ್ನ ಸೀಜ್‌

    ಸ್ಥಳಕ್ಕೆ ಮುಧೋಳ ಪೊಲೀಸರ (Police )ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಜೆಸಿಬಿ ಬಳಸಿ ಶವವನ್ನು ಹೊರಗೆ ತೆಗೆದಿದ್ದಾರೆ. ಆರೋಪಿ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: TMC ಪ್ರಭಾವಿ ಶೇಖ್ ಷಹಜಹಾನ್ ಬಂಧನಕ್ಕೆ ಕೋಲ್ಕತ್ತಾ ಹೈಕೋರ್ಟ್ ಆದೇಶ

  • ಬಾಗಲಕೋಟೆಯ ಜನಪದ ಕಲಾವಿದ ವೆಂಕಪ್ಪ ಅಂಬಾಜಿಯವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ

    ಬಾಗಲಕೋಟೆಯ ಜನಪದ ಕಲಾವಿದ ವೆಂಕಪ್ಪ ಅಂಬಾಜಿಯವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ

    ಬಾಗಲಕೋಟೆ: ಶಾಲೆಯ ಮೆಟ್ಟಿಲನ್ನೇ ಹತ್ತದೇ, ತಮ್ಮ ಬಾಲ್ಯದಿಂದಲೇ ಗೊಂದಲಿ ಜನಪದ ಹಾಡುಗಳ ಕಲೆಯನ್ನು ಉಸಿರಾಗಿಸಿಕೊಂಡು ನಾಡಿನಾದ್ಯಂತ ಹೆಸರು ವಾಸಿಯಾಗಿರುವ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್ (Venkappa Ambaji Sugatekar) ಅವರನ್ನು ಪ್ರಧಾನಿ ನರೇಂದ್ರ ಮೋದಿ  (Narendra Modi) ಶ್ಲಾಘಿಸಿದ್ದಾರೆ.

    ಬಾಗಲಕೋಟೆ (Bagalkote) ನಗರದ ನಿವಾಸಿಯಾಗಿರುವ ವೆಂಕಪ್ಪ ಅಂಬಾಜಿ ಸುಗತೇಕರ್ (81) ತಮ್ಮ 15ನೇ ವಯಸ್ಸಿನಿಂದಲೇ ವಂಶಪಾರಂಪರ್ಯವಾಗಿ ಬಂದ ಗೊಂದಲಿ ಜನಪದ ಹಾಡುಗಳನ್ನು ಕಲಿತಿದ್ದರು. ತಾವು ಕಲಿತಿದ್ದ ಸಾವಿರಾರು ಜನಪದ ಗೀತೆಗಳು, 150ಕ್ಕೂ ಹೆಚ್ಚು ವೈಚಾರಿಕ ಕಥೆಗಳು ಹಾಗೂ ತತ್ವಗಳನ್ನು ನಾಡಿಗೆ ತಲುಪಿಸಿದ್ದಾರೆ. ಇವರ ಸಾಧನೆಗೆ ಜನಪದ ವಿವಿಯಿಂದ ಗೌರವ ಡಾಕ್ಟರೇಟ್ ಸಿಕ್ಕಿದೆ. ಅಲ್ಲದೇ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ, ಅನೇಕ ಪ್ರಶಸ್ತಿಗಳು ಲಭಿಸಿವೆ. ಇದನ್ನೂ ಓದಿ: ವಿದೇಶಾಂಗ ಸಚಿವ ಜೈಶಂಕರ್ ಫೆ.28ಕ್ಕೆ ಹುಬ್ಬಳ್ಳಿಗೆ ಆಗಮನ

    ಇವರ ಕಲಾಸೇವೆಯನ್ನು ಗುರುತಿಸಿದ ಮೋದಿ, ತಮ್ಮ 110ನೇ ಮನ್ ಕೀ ಬಾತ್‍ನಲ್ಲಿ (Mann Ki Baat) ಅವರ ಗುಣಗಾನ ಮಾಡಿದ್ದಾರೆ. ಭಾರತದ ಸಂಸ್ಕೃತಿ, ಗಾಯನಗಳಿಗೆ ಲಕ್ಷಾಂತರ ಜನ ಕಲಾವಿದರು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅದರಂತೆ ವೆಂಕಪ್ಪ ಅಂಬಾಜಿ ಸುಗತೇಕರ್ ಅವರು ಸಾವಿರಕ್ಕೂ ಅಧಿಕ ಜನಪದ ಹಾಡುಗಳನ್ನ ಹಾಡಿ ಜನಪ್ರಿಯರಾಗಿದ್ದಾರೆ. ಸಾವಿರಾರು ಬಾಲ ಕಲಾವಿದರಿಗೆ ಒಂದು ನಯಾಪೈಸೆ ಪಡೆಯದೇ ಜನಪದ ಹಾಡುಗಳನ್ನು ಕಲಿಸಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ. ಈ ಮೂಲಕ ಜನಪದ ಕಲಾವಿದ ವೆಂಕಪ್ಪ ಅವರ ಸಾಧನೆಗೆ ಮತ್ತೊಂದು ಗರಿ ಬಂದಂತಾಗಿದೆ.

    ವೆಂಕಪ್ಪ ಅವರು, ಆಕಾಶವಾಣಿ, ದೂರದರ್ಶನ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದಲ್ಲೂ ಅನೇಕ ಜನಪದ ಕಾರ್ಯಕ್ರಮಗಳನ್ನು ನೀಡಿ, ಹೆಸರು ವಾಸಿಯಾಗಿದ್ದಾರೆ. ಪ್ರಧಾನಿಗಳ ಶ್ಲಾಘನೆಗೆ ಕಲಾವಿದ ವೆಂಕಪ್ಪ ಅವರು ಹಾಗೂ ಅವರ ಕುಟುಂಬಸ್ಥರು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಕರಂದ್ಲಾಜೆ ಕಳೆದ ಬಾರಿಯ ಮತಗಳಿಗಿಂತ ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ : ಬಿಎಸ್‌ವೈ ಭವಿಷ್ಯ

  • ರಂಭಾಪುರಿ ಶ್ರೀಗಳ ಕಾರಿನತ್ತ ಚಪ್ಪಲಿ ಎಸೆತ ಪ್ರಕರಣ- 59 ಮಂದಿ ವಿರುದ್ಧ ಎಫ್‍ಐಆರ್

    ರಂಭಾಪುರಿ ಶ್ರೀಗಳ ಕಾರಿನತ್ತ ಚಪ್ಪಲಿ ಎಸೆತ ಪ್ರಕರಣ- 59 ಮಂದಿ ವಿರುದ್ಧ ಎಫ್‍ಐಆರ್

    ಬಾಗಲಕೋಟೆ: ರಂಭಾಪುರಿ ಶ್ರೀಗಳ (Rambhapuri Shree) ಕಾರಿನ ಕಡೆ ಚಪ್ಪಲಿ ಎಸೆತ ಹಾಗೂ ಕಾರಿಗೆ ತಡೆ ಒಡ್ಡಿದ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀಗಳ ಭಕ್ತರು ಕಲಾದಗಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೀಗ ಮಹಿಳೆಯರು ಸೇರಿದಂತೆ 59 ಜನರ ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ.

    ತಾಲೂಕಿನ (Bagalkote) ಕಲಾದಗಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಶನಿವಾರ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಉತ್ಸವಕ್ಕೆ ತೆರಳುತ್ತಿದ್ದ ರಂಭಾಪುರಿ ಶ್ರೀಗಳ ಕಾರಿನತ್ತ ಚಪ್ಪಲಿ ಎಸೆದಿದ್ದಳು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೀಗ ಶ್ರೀಗಳ ಭಕ್ತರು ಈ ವಿಚಾರಕ್ಕೆ ಆಕ್ರೋಶಗೊಂಡಿದ್ದು, ಮಠದ ವಿವಾದ ಕೋರ್ಟ್ ನಲ್ಲಿರುವಾಗ ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದಾರೆ. ಶಾಂತಿ ಕದಡುವ ಉದ್ದೇಶದಿಂದ ಶ್ರೀಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ಎಸೆತ

    ಈ ಸಂಬಂಧ ಬಾಗಲಕೋಟೆ ಎಸ್‍ಪಿ ಅಮರನಾಥ ರೆಡ್ಡಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

    ಏನಿದು ಗಲಾಟೆ?:
    ಕಲಾದಗಿಯ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಅವರ ಉತ್ತರಾಧಿಕಾರಿಯನ್ನಾಗಿ ರಂಭಾಪುರಿ ಶ್ರೀಗಳು ಮಧ್ಯಸ್ಥಿಕೆ ವಹಿಸಿ ತಮ್ಮದೇ ಪೀಠದ ಶಿಷ್ಯರಾಗಿರುವ ಕೆ.ಎಮ್ ಗಂಗಾಧರ ಸ್ವಾಮೀಜಿಯನ್ನ ನೇಮಕ ಮಾಡಿದ್ದರು. ಗ್ರಾಮಸ್ಥರ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕ ಮಾಡದೇ ಏಕಪಕ್ಷೀಯವಾಗಿ ರಂಭಾಪುರಿ ಶ್ರೀಗಳು ನಿರ್ಧಾರ ತೆಗೆದುಕೊಂಡಿದ್ದಾರೆಂದು ಕೆಲ ಗ್ರಾಮಸ್ಥರು ಆರೋಪಿಸಿದ್ದರು. ನಂತರ ರಂಭಾಪುರಿ ಶ್ರೀಗಳ ವಿರೋಧಿ ಬಣ ನೂತನ ಸ್ವಾಮೀಜಿಯನ್ನಾಗಿ ಮಹಾಂತ ದೇವರು ಸ್ವಾಮೀಜಿಯನ್ನ ಕರೆತಂದು ಅದ್ಧೂರಿ ಮೆರವಣಿಗೆ ಮಾಡಿತ್ತು. ಪರ, ವಿರೋಧ ಬಣಗಳು ಹುಟ್ಟಿಕೊಂಡು ಪ್ರಕರಣ ಈಗ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದೆ.

    ಶನಿವಾರ, ಗಂಗಾಧರ ಸ್ವಾಮೀಜಿ ಮಠದ ಹೊಲದ ಉಳುಮೆಗೆ ಮುಂದಾದಾಗ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಮಠದ ಒಟ್ಟು 72 ಎಕರೆ ಭೂಮಿಯನ್ನು ರಂಭಾಪುರಿ ಶ್ರೀ ಮತ್ತು ಗಂಗಾಧರ ಸ್ವಾಮೀಜಿ ಲಪಟಾಯಿಸಲು ಮುಂದಾಗಿದ್ದಾರೆ ಎನ್ನುವುದು ಭಕ್ತರ ಆರೋಪ. ವಿವಾದ ಕೋರ್ಟ್‍ನಲ್ಲಿರುವಾಗ ಕಟ್ಟಡ ದುರಸ್ತಿ ಹಾಗೂ ಜಮೀನು ಉಳುಮೆಗೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಗಲಾಟೆ ನಡೆಯುತ್ತಿರುವಾಗಲೇ ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ರಂಭಾಪುರಿ ಶ್ರೀಗಳು ತೆರಳುತ್ತಿದ್ದರು. ಈ ವೇಳೆ ರಂಭಾಪುರಿ ಶ್ರೀಗಳ ಕಾರಿನ ಕಡೆ ಚಪ್ಪಲಿ ಎಸೆಯಲಾಗಿತ್ತು. ಇನ್ನೂ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ರಂಭಾಪುರಿ ಶ್ರೀಗಳು ಕಾರಿಗೆ ಯಾರು ಚಪ್ಪಲಿ ಎಸೆದಿಲ್ಲ ಎಂದಿದ್ದರು. ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್‌ಡಿಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌