Tag: bagalkote

  • ಹಿಂದೂ ದೇವರುಗಳಿಗೆ ಅಪಮಾನ ಮಾಡಬೇಡಿ: ಸಿಎಂ ವಿರುದ್ಧ ಈಶ್ವರಪ್ಪ ಗರಂ

    ಹಿಂದೂ ದೇವರುಗಳಿಗೆ ಅಪಮಾನ ಮಾಡಬೇಡಿ: ಸಿಎಂ ವಿರುದ್ಧ ಈಶ್ವರಪ್ಪ ಗರಂ

    – ಹಿಂದೂ ಸಂಸ್ಕೃತಿಯನ್ನು ಉಳಿಸುವ ಪಕ್ಷ ಬಿಜೆಪಿ ಒಂದೇ

    ಬಾಗಲಕೋಟೆ: ಚೌತಿ ಗಣಪತಿ ಪ್ರಸಾದ ಪರೀಕ್ಷೆ ಮಾಡಿ ವಿತರಣೆ ವಿಚಾರಕ್ಕೆ, ಹಿಂದೂ ದೇವರುಗಳಿಗೆ ಅಪಮಾನ ಮಾಡಬೇಡಿ. ಸಿಎಂಗೆ ಯಾಕೆ ಹಿಂದೂಗಳ ಬಗ್ಗೆ ನಿಕೃಷ್ಠ ಭಾವನೆ. ಕಾನೂನಿಗೆ ಅಪಮಾನ ಮಾಡಬೇಡಿ ಎಂದು ಕೆಎಸ್ ಈಶ್ವರಪ್ಪ (K S Eshwarappa), ಸಿಎಂ ಸಿದ್ದರಾಮಯ್ಯ (CM Siddaramaiah)ವಿರುದ್ಧ ಗರಂ ಆಗಿದ್ದಾರೆ.

    ಬಾಗಲಕೋಟೆಯಲ್ಲಿ (Bagalkote) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಮಾತ್ರವಲ್ಲ ದೇಶದ ತುಂಬೆಲ್ಲ ಗಣಪತಿ ಕೂರಿಸಲಾಗುತ್ತದೆ. ಗಣಪತಿ ಪ್ರಸಾದ ಕೊಡಬೇಕಾದರೆ ಆಹಾರ ಇಲಾಖೆ ಪರೀಕ್ಷೆ ಮಾಡಬೇಕಂತೆ. ಸಿದ್ದರಾಮಯ್ಯ ಹುಟ್ಟೋ ಮುಂಚೆಯಿಂದಲೂ ದೇಶದಲ್ಲಿ ಗಣಪತಿ ಕೂರಿಸುತ್ತಿದ್ದರು. ಕಾಂಗ್ರೆಸ್ ಪಕ್ಷ ಹುಟ್ಟೋಕಿಂತ ಮುಂಚೆ ದೇಶದಲ್ಲಿ ಗಣಪತಿ ಇಡಲಾಗುತ್ತಿದೆ. ಈಗ ಸರ್ಕಾರ ಹೊಸ ವ್ಯವಸ್ಥೆ ಮಾಡಿಕೊಳ್ಳುತ್ತಿದೆ ಎಂದರು. ಇದನ್ನೂ ಓದಿ: ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಯುವಕ ದುರ್ಮರಣ

    ಪ್ರಸಾದ ಪರೀಕ್ಷೆ ಮಾಡಿ ನೀಡುವ ಕಾನೂನು ತಂದಿದ್ದಾರೆ. ಹಿಂದೂ ಧರ್ಮದ ಬಗ್ಗೆ ಇಷ್ಟು ಕೀಳುಮಟ್ಟದ ರಾಜಕಾರಣ ಕಾಂಗ್ರೆಸ್‌ನವರು (Congress) ಯಾಕೆ ಮಾಡುತ್ತಿದ್ದಾರೆ. ನೀವು ಮಸೀದಿ, ಚರ್ಚ್ ಗಳಲ್ಲಿ ತಿನ್ನುವ ಪದಾರ್ಥಗಳ ಪರೀಕ್ಷೆ ಮಾಡಿದ್ದೀರಾ? ಎಂದು ಪ್ರಶ್ನಿಸಿದರು.

    ನಮ್ಮ ದೇಶದ ಇತಿಹಾಸದಲ್ಲಿ ಕರ್ನಾಟಕದ (Karnataka) ಈಗಿನ ರಾಜಕಾರಣ ಬಹಳ ಕೀಳುಮಟ್ಟಕ್ಕೆ ಇಳಿದಿದೆ. ಆಡಳಿತ ಪಕ್ಷ ಭ್ರಷ್ಟಾಚಾರ ಮಾಡಿರುವುದಕ್ಕೆ ವಿರೋಧ ಪಕ್ಷ ಆಪಾದನೆ ಮಾಡೋದು ತಪ್ಪಲ್ಲ. ಆದರೆ ವಿರೋಧ ಪಕ್ಷ ಆಪಾದನೆ ಮಾಡಿದ್ದನ್ನು ಆಡಳಿತ ಪಕ್ಷ ತನಿಖೆ ಮಾಡಿಸಿ ಅದರಲ್ಲಿ ತಾವು ತಪ್ಪಿತಸ್ಥರಲ್ಲ ಅಂತ ಹೊರಗೆ ಬರಬೇಕು, ಅದು ಪದ್ಧತಿ. ತಪ್ಪಿತಸ್ಥರಾಗಿದ್ದರೆ ಅವರಿಗೆ ಏನು ಶಿಕ್ಷೆಯಾಗಬೇಕೊ ಅದು ಆಗುತ್ತದೆ. ಆದರೆ ಈಗ ಆಡಳಿತ ಪಕ್ಷ ಬಂದು ಒಂದೂವರೆ ವರ್ಷದ ನಂತರ ಸಿದ್ದರಾಮಯ್ಯ ಬಗ್ಗೆ ಇತರರ ಬಗ್ಗೆ ಆರೋಪವನ್ನು ವಿಪಕ್ಷದವರು ಮಾಡುತ್ತಿದ್ದಾರೆ. ಆಪಾದನೆ ಮಾಡುವ ಈ ಸಂದರ್ಭದಲ್ಲಿ ಒಂದೊಂದು ರೂಪದ ಹೋರಾಟ ನಡೆಯುತ್ತಿವೆ. ಭ್ರಷ್ಟಾಚಾರದ ತನಿಖೆಯ ಈ ಸಂದರ್ಭದಲ್ಲಿ ವೈಯಕ್ತಿಕ ಟೀಕೆ ಎಷ್ಟು ಕೀಳುಮಟ್ಟಕ್ಕೆ ಇಳಿದಿದೆ ಅಂದರೆ ಟಿವಿ ನೋಡುವುದಕ್ಕೆ ಬೇಸರ ಆಗುತ್ತಿದೆ. ಹೊಸದಾಗಿ ರಾಜಕಾರಣಕ್ಕೆ ಬರುವ ರಾಜಕಾರಣಿಗಳು ಮಹಿಳಾ ರಾಜಕಾರಣಿಗಳು ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ – ಟ್ರಾಫಿಕ್ ಸಿಗ್ನಲ್‌ಗಳ ಸಂಖ್ಯೆಯಲ್ಲಿ ಏರಿಕೆ

    ಈ ಸ್ಥಿತಿ ನೋಡಿದರೆ ನಾವು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರಬಾರದು ಅಂತ ತೀರ್ಮಾನ ಮಾಡುವ ಸ್ಥಿತಿ ರಾಜಕಾರಣದಲ್ಲಿ ಬೆಳೆಯುತ್ತಿದೆ. ಈ ಕೀಳುಮಟ್ಟದ ವೈಯಕ್ತಿಕ ಟೀಕೆಗಳನ್ನು ಎಂದು ನಾವು ಕಂಡಿರಲಿಲ್ಲ. ನನ್ನ ರಾಜಕೀಯ ಇತಿಹಾಸದಲ್ಲಿ ಕೇಳಿರಲಿಲ್ಲ. ನಾನು ಎಲ್ಲ ರಾಜಕಾರಣಿಗಳಿಗೂ ಮನವಿ ಮಾಡುತ್ತೇನೆ. ಇದುವರೆಗೂ ಆಗಿದ್ದು ಆಯಿತು. ಇನ್ಮುಂದೆ ವೈಯಕ್ತಿಕ ಟೀಕೆ ಬಿಟ್ಟು ರಾಜಕಾರಣ ಮಾಡಿ ಎಂದು ಹೇಳಿದರು.

    ಬಹಳ ಜನಕ್ಕೆ ಸಿಎಂ ಖುರ್ಚಿ ಮೇಲೆ ಕಣ್ಣಿದೆ:
    ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಖುರ್ಚಿ ಮೇಲೆ ಬಹಳಷ್ಟು ಜನರ ಕಣ್ಣಿದೆ. ಆದರೆ ಸಿಎಂ ಖುರ್ಚಿ ಮೇಲೆ ಟವೆಲ್ ಹಾಸ್ತಾ ಇದಾರೆ ಎಂಬ ಪದ ನಾನು ಬಳಸುವುದಿಲ್ಲ. ಆದರೆ ಬಹಳ ಜನಕ್ಕೆ (ಸಿಎಂ) ಅದರ ಮೇಲೆ ಕಣ್ಣಿದೆ. ಒಂದು ಕಡೆ ಮುಖ್ಯಮಂತ್ರಿಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸೋದಿಲ್ಲ, ಬೆಂಬಲ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಖುರ್ಚಿ ಮೇಲೆ ಬೆಂಬಲ ಕೊಡುವವರದ್ದೆ ಹಂಬಲ ಇದೆ. ಹಂಬಲದ ಮುಖಾಂತರ ರಾಜಕಾರಣ ನಡೆಯುತ್ತಿದೆ. ಇದು ಸ್ವಾಭಾವಿಕ. ಈಗ ಏನು ತೀರ್ಪು ಬರುತ್ತದೆ ಎಂದು ಎಲ್ಲರೂ ಕಾಯುತ್ತಿದ್ದಾರೆ ಎಂದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 3 ತಿಂಗಳು – ಪ್ರಕರಣ ಭೇದಿಸಿದ ಪೊಲೀಸರಿಗೆ ಹಿರಿಯ ಅಧಿಕಾರಿಗಳ ಮೆಚ್ಚುಗೆ

    ಬಹಳ ಜನ ಕಾಂಗ್ರೆಸ್‌ನವರು ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಉಳಿಯಲಿಕ್ಕಿಲ್ಲ ಅಂದುಕೊಂಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಸಿಎಂ ಆಗಿ ಉಳಿಯುತ್ತಾರೋ ಇಲ್ವೋ ಗೊತ್ತಿಲ್ಲ. ಅಕಸ್ಮಾತ್ ತೀರ್ಪಿನಲ್ಲಿ ಸಿದ್ದರಾಮಯ್ಯನವರದ್ದೇ ತಪ್ಪಿದೆ ಎಂದು ಎಫ್‌ಐಆರ್ ದಾಖಲಾದರೆ ರಾಜೀನಾಮೆ ಕೊಡಬಹುದು, ಕೊಡಬೇಕಾಗಬಹುದು. ಆ ಸಂದರ್ಭದಲ್ಲಿ ಏನಾಗಬಹುದು. ಸಿದ್ದರಾಮಯ್ಯ ಅಪೇಕ್ಷೆ ಪಡುವಂತಹ ವ್ಯಕ್ತಿ ಸಿಎಂ ಆಗ್ತಾರಾ? ಸಿದ್ದರಾಮಯ್ಯ ಇಷ್ಟಪಡುವ ವ್ಯಕ್ತಿ ಸಿಎಂ ಆಗಲು ಬಿಡ್ತಾರಾ? ಕಾಂಗ್ರೆಸ್‌ನ ಡಿಕೆಶಿ, ಎಂಬಿ ಪಾಟಿಲ್ ಉಳಿದಂತೆ ಎಲ್ಲ ಪ್ರಮುಖರು ಅವರಿಗೆ ಅವಕಾಶ ಕೊಡಲಿಲ್ಲ ಅಂದರೆ ಸರ್ಕಾರ ಎಷ್ಟರಮಟ್ಟಿಗೆ ಇರುತ್ತೆ ಇರೋದಿಲ್ಲ, ಅದು ಜಡ್ಜ್ಮೆಂಟ್ ಮೇಲೆ ತೀರ್ಮಾನ ಆಗುತ್ತದೆ ಎಂದು ಹೇಳಿದರು.

    ಸಿದ್ದರಾಮಯ್ಯ ಟೆಂಪಲ್ ರನ್ ವಿಚಾರವಾಗಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಿಂದೆ ಅನೇಕ ದೇವಸ್ಥಾನಗಳಿಗೆ ಹೋಗುತ್ತಿರಲಿಲ್ಲ. ಈಗ ಅನೇಕ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ. ನಾನು ಅದನ್ನು ಸ್ವಾಗತ ಮಾಡುತ್ತೇನೆ. ಚಾಮುಂಡಿ ಬೆಟ್ಟಕ್ಕಂತೂ ಮೇಲಿಂದ ಮೇಲೆ ಹೋಗುತ್ತಿದ್ದಾರೆ. ಹಿಂದೂ ಸಂಸ್ಕೃತಿ ಬಗ್ಗೆ ಅವರಿಗೆ ಹೆಚ್ಚಿನ ಗೌರವ ಬಂದಿದೆಯಲ್ಲ. ಅದಕ್ಕೆ ತುಂಬಾ ಸಂತೋಷದಿಂದ ಸ್ವಾಗತ ಮಾಡುತ್ತೇನೆ. ಇಂತಹ ಸಂದರ್ಭದಲ್ಲೇ ಹಿಂದೂ ಸಮಾಜದ ಮೇಲೆ ಆಗುತ್ತಿರುವ ಆಘಾತ ತಡೆದುಕೊಳ್ಳಲಾಗುತ್ತಿಲ್ಲ ಎಂದರು. ಇದನ್ನೂ ಓದಿ: ಮುಂಬೈ ಪೊಲೀಸರ ಹೆಸರಲ್ಲಿ ಚಿತ್ರದುರ್ಗದ ವೈದ್ಯನಿಗೆ ಕೋಟ್ಯಂತರ ರೂಪಾಯಿ ವಂಚನೆ: ಇಬ್ಬರ ಬಂಧನ

    ಹಿಜಬ್ ನಿಷೇಧ ಮಾಡಿದ ವಿಚಾರವಾಗಿ ಕುಂದಾಪುರ ಕಾಲೇಜಿನ ಪ್ರಿನ್ಸಿಪಾಲ್, ಹಿಜಾಬ್ ಹಾಕಿಕೊಂಡು ಕಾಲೇಜ್ ಗೇಟ್ ಒಳಗೆ ಬರಬೇಡಿ ಅಂದಿದ್ದರು. ಅವರನ್ನ ಈ ಬಾರಿ ರಾಜ್ಯಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಈಗ ಅದನ್ನು ತಡೆ ಹಿಡಿತಾರೆ ಅಂದರೆ ಇದು ಹಿಂದೂ ಧರ್ಮಕ್ಕೂ ಅಪಮಾನ. ಪ್ರಿನ್ಸಿಪಾಲ್‌ಗೂ ಅಪಮಾನ. ಇದು ಮುಸಲ್ಮಾನರಿಗೆ ಸಂತೃಪ್ತಪಡಿಸುವ ವ್ಯವಸ್ಥೆ. ಇದು ಒಳ್ಳೆಯದಲ್ಲ ಸಿದ್ದರಾಮಯ್ಯನವರೇ. ದೇವಸ್ಥಾನಗಳಿಗೆ ಹೋಗಿದಿರಾ. ಹಿಂದೂ ಧರ್ಮದ ಮೇಲೆ ನಿಮಗೆ ಆಸಕ್ತಿ ಇದೆ. ಆ ಪ್ರಿನ್ಸಿಪಾಲ್‌ಗೆ ತಕ್ಷಣ ಪ್ರಶಸ್ತಿ ಕೊಡಿ. ಒಳ್ಳೆ ಪ್ರಿನ್ಸಿಪಾಲ್ ಎಂದು ಘೋಷಣೆ ಮಾಡಿದ್ದನ್ನು ತಡೆ ಹಿಡಿಯಬೇಕಾದರೆ ಕಾನೂನಿಗೆ ಮಾಡಿದ ಅಪಮಾನ. ಹಿಂದೂಗಳಿಗೆ ಮಾಡಿದ ಅಪಮಾನ ಎಂದು ಹರಿಹಾಯ್ದರು. ಇದನ್ನೂ ಓದಿ: ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ – ಮತ್ತೆ ಮೂವರು ಆರೋಪಿಗಳು ಅರೆಸ್ಟ್

    ಕೇಂದ್ರದಲ್ಲಿ ಹೆಚ್‌ಡಿಕೆ ಪ್ರಾಬಲ್ಯ, ಬಿಜೆಪಿ ಜೆಡಿಎಸ್‌ನಲ್ಲಿ ಮರ್ಜ್ ಆಗುತ್ತಾ ಎಂಬ ಪ್ರಶ್ನೆಗೆ, ಬಿಜೆಪಿ (BJP) ಯಾವುದೇ ಪಕ್ಷದ ಜೊತೆ ಮರ್ಜ್ ಆಗಲ್ಲ. ಹಿಂದೂ ಸಂಸ್ಕೃತಿಯನ್ನು ಉಳಿಸುವ ಪಕ್ಷ ಬಿಜೆಪಿ ಒಂದೇ. ಹಾಗಾಗಿ ಯಾವುದೇ ಪಕ್ಷದ ಜೊತೆಗೆ ಬಿಜೆಪಿ ಮರ್ಜ್ ಮಾಡೋಕೆ ಸಾಧ್ಯ ಆಗಲ್ಲ. ದೇಶದ ಪ್ರಧಾನಿ, ಅನೇಕ ರಾಜ್ಯಗಳಲ್ಲಿ ಸಿಎಂಗಳು, ಶಾಸಕರು, ಅನೇಕ ಬಿಜೆಪಿ ಸಂಸದರು ಇರಲು ಕಾರಣ ಹಿಂದೂ ಸಂಸ್ಕೃತಿ. ಇವತ್ತು, ನಿನ್ನೆ ಯಾರೋ ಮಾಡುತ್ತಿರುವ ಪ್ರಯತ್ನದಿಂದ ಅಧಿಕಾರಕ್ಕೆ ಬಂದಿಲ್ಲ. ಅನೇಕ ವರ್ಷಗಳಿಂದ ರಕ್ತ ಬೆವರು ರೂಪದಲ್ಲಿ ಸುರಿಸಿದ ರಾಷ್ಟ್ರ ಭಕ್ತರು ಧರ್ಮ ನಿಷ್ಠರು ಈ ಪಕ್ಷವನ್ನ ಕಟ್ಟಿರೋದು. ಹಾಗಾಗಿ ಈ ಪಕ್ಷ ತಾತ್ಕಾಲಿಕವಾಗಿ ಕೆಲವರ ಕುಟುಂಬದ ಕೈಗೆ ಸಿಕ್ಕಿದೆ. ಇದನ್ನ ಸರಿ ಮಾಡೋದಕ್ಕೆ ಖಂಡಿತಾ ಆಗುತ್ತೆ, ಸರಿ ಆಗೇ ಆಗುತ್ತೆ ಅನುಮಾನವಿಲ್ಲ ಎಂದರು.

    ಈ ದೇಶಕ್ಕೆ ಒಂದೇ ಆಶಾ ಕಿರಣ ಬಿಜೆಪಿ, ಯಾವುದೇ ಪಕ್ಷದ ಜೊತೆ ಮರ್ಜ್ ಆಗಲ್ಲ. ಪರೋಕ್ಷವಾಗಿ ಬಿಎಸ್‌ವೈ ಕುಟುಂಬದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಹುಲ್‌ ಗಾಂಧಿ ಅಮೆರಿಕ ಪ್ರವಾಸ – ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಿದ ಸ್ಯಾಮ್‌ ಪಿತ್ರೋಡಾ

  • ಬಾಗಲಕೋಟೆಯಲ್ಲಿ ನಿಲ್ಲದ ಭ್ರೂಣಹತ್ಯೆ – ಗರ್ಭಪಾತದ ಬಳಿಕ ಬೆಳಕಿಗೆ ಬಂತು ಪ್ರಕರಣ

    ಬಾಗಲಕೋಟೆಯಲ್ಲಿ ನಿಲ್ಲದ ಭ್ರೂಣಹತ್ಯೆ – ಗರ್ಭಪಾತದ ಬಳಿಕ ಬೆಳಕಿಗೆ ಬಂತು ಪ್ರಕರಣ

    ಬಾಗಲಕೋಟೆ: ಜಿಲ್ಲೆಯಲ್ಲಿ (Bagalkote) ಕಳೆದ ಎರಡು ತಿಂಗಳ ಹಿಂದೆ ನಡೆದಿದ್ದ ಭ್ರೂಣಹತ್ಯೆ ಕೇಸ್ (Foeticide case) ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿದೆ. ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣಹತ್ಯೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

    ಮುಧೋಳ್‍ನ ರನ್ನಬೆಳಗಲಿ ಗ್ರಾಮದ 24 ವರ್ಷದ ಮಹಿಳೆಯ ಗರ್ಭದಲ್ಲಿ ಹೆಣ್ಣು ಮಗು ಇದೆ ಎಂದು ವೈದ್ಯರು ತಿಳಿಸಿದ್ದರು. ಇದರಿಂದ ಮಹಿಳೆಯ 14 ವಾರಗಳ ಭ್ರೂಣವನ್ನು ತೆಗೆಸಲು ಕುಟುಂಬದವರು ಮತ್ತು ವೈದ್ಯರು ನಿರ್ಧರಿಸಿದ್ದರು. ಬಳಿಕ ಗರ್ಭಪಾತದ ವೇಳೆ ಪೋಷಕರಿಗೆ ಅದು ಗಂಡು ಮಗು ಎಂದು ಗೊತ್ತಾಗಿದೆ. ಇದರಿಂದ ಈ ಪ್ರಕರಣ ಹೊರಬಂದಿದೆ.

    ಸ್ಥಳಕ್ಕೆ ಬಾಗಲಕೋಟೆ ಡಿಹೆಚ್‍ಓ ಸುವರ್ಣ ಕುಲಕರ್ಣಿ, ಮುಧೋಳ್ ಟಿಹೆಚ್‍ಓ ಮಲಘಾಣ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಆಸ್ಪತ್ರೆಯ ಡೆಲಿವರಿ ಥಿಯೇಟರ್, ಸ್ಕ್ಯಾನಿಂಗ್ ಸೆಂಟರ್, ಎಂಆರ್‍ಡಿ ರೂಮ್ ಸೀಜ್ ಮಾಡಲಾಗಿದೆ. ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ.

    ಇತ್ತೀಚೆಗೆ ಇದೇ ಮಹಾಲಿಂಗಪುರ ಪಟ್ಟಣದಲ್ಲಿ ಗರ್ಭಪಾತದಿಂದ ಮಹಾರಾಷ್ಟ್ರ ಮಹಿಳೆ ಮೃತಪಟ್ಟಿದ್ದಳು.

  • ಪೆಟ್ರೋಲ್ ಸುರಿದು ಶೆಡ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು – ತಾಯಿ, ಮಗಳು ಸಜೀವ ದಹನ

    ಪೆಟ್ರೋಲ್ ಸುರಿದು ಶೆಡ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು – ತಾಯಿ, ಮಗಳು ಸಜೀವ ದಹನ

    – ಮೂವರಿಗೆ ಗಾಯ

    ಬಾಗಲಕೋಟೆ: ಸಿಂಟೆಕ್ಸ್ ಟ್ಯಾಂಕ್‌ನಲ್ಲಿ ಪೆಟ್ರೋಲ್ (Petrol) ತುಂಬಿಸಿ ಶೆಡ್ (Shed) ಮೇಲೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ತಾಯಿ-ಮಗಳು ಸಜೀವ ದಹನವಾಗಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ಬಾಗಲಕೋಟೆ (Bagalkote) ಜಿಲ್ಲೆ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ನಡೆದಿದೆ.

    ಜೈಬಾನ್ (55), ಶಬಾನ್ (25) ಮೃತ ದುರ್ದೈವಿಗಳು. ಬೆಂಕಿ ಹಚ್ಚಿದ ಪರಿಣಾಮ ತಾಯಿ-ಮಗಳು ಸಜೀವ ದಹನವಾಗಿದ್ದುವ, ಶೆಡ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ದಸ್ತಗೀರಸಾಬ್, ಸುಬಾನ್ ಹಾಗೂ ಸಿದ್ದಿಕಿ ಎಂಬವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಥಳಕ್ಕೆ ಮಹಾಲಿಂಗಪುರ ಪೊಲೀಸರು ಭೇಟಿ ನೀಡಿದ್ದು, ಶ್ವಾನ ದಳ ಮೂಲಕ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಎಸ್‌ಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

  • ಗದ್ದಿಗೌಡರಿಗೆ 5 ನೇ ಬಾರಿಗೆ ಒಲಿದ ಬಾಗಲಕೋಟೆ ‘ಗದ್ದುಗೆ’

    ಗದ್ದಿಗೌಡರಿಗೆ 5 ನೇ ಬಾರಿಗೆ ಒಲಿದ ಬಾಗಲಕೋಟೆ ‘ಗದ್ದುಗೆ’

    ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಂತಿಮ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿ ಪಿ.ಸಿ ಗದ್ದಿಗೌಡರ್ (P. C. Gaddigoudar)  ಅವರು ಗೆಲುವು ಸಾಧಿಸಿದ್ದು, ಈ ಮೂಲಕ 5ನೇ ಬಾರಿ ಗೆಲುವಿನ ಗದ್ದುಗೆ ಏರಿದ್ದಾರೆ.

    ಲಿಂಗಾಯತ ಸಮುದಾಯದ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಲಿಂಗಾಯತ ಅಭ್ಯರ್ಥಿಗಳೇ ಅಖಾಡದಲ್ಲಿದ್ದರು. ಹೀಗಾಗಿ ಪೈಪೋಟಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಪಿಸಿ ಗದ್ದಿಗೌಡರ್ ಅವರು ಸ್ಪರ್ಧಿಸಿದರೆ, ಇತ್ತ ಕಾಂಗ್ರೆಸ್‍ನಿಂದ ಮೊದಲ ಬಾರಿ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ (Samyukta Patil) ಅದೃಷ್ಟ ಪರೀಕ್ಷೆಗೆ ಇಳಿದು ಸೋತಿದ್ದಾರೆ.

    ಗದ್ದಿಗೌಡರ್ ಅವರು ಸಂಯುಕ್ತಾ ಪಾಟೀಲ್ ವಿರುದ್ಧ 6,83,99 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗದ್ದಿಗೌಡರಿಗೆ 6,71,039 ಮತಗಳು ಬಿದ್ದರೆ, ಸಂಯುಕ್ತಾ ಪಾಟೀಲ್ ಅವರು 6,02,640 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಸಂಯುಕ್ತಾ ಪಾಟೀಲ್ ಅವರು ಮೊದಲ ಪ್ರಯತ್ನದಲ್ಲಿ ಸಂಸತ್ ಪ್ರವೇಶಿಸಲು ವಿಫಲರಾದರು.

    ಕಳೆದ ಚುನಾವಣೆಯಲ್ಲಿ ಏನಾಗಿತ್ತು?: 2019 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಪಿ.ಸಿ.ಗದ್ದಿಗೌಡರ್ 1,68,187 ಮತಗಳ ಅಂತರದಿಂದ ಗೆಲುವು ದಾಖಲಿಸಿ ಸತತ ನಾಲ್ಕನೆಯ ಬಾರಿ ಸಂಸದರಾಗಿ ಆಯ್ಕೆಯಾದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೀಣಾ ಕಾಶಪ್ಪನವರ್ ಭಾರೀ ಅಂತರದ ಸೋಲು ಅನುಭವಿಸಿದರು. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಬಿಜೆಪಿ ಅಭ್ಯರ್ಥಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ.

  • ಗುಡುಗು ಸಹಿತ ಭಾರೀ ಮಳೆ- ಪುತ್ತೂರು ಜಲಾವೃತ, ಚಾಮರಾಜನಗರದಲ್ಲಿ ರೈತ ದುರ್ಮರಣ

    ಗುಡುಗು ಸಹಿತ ಭಾರೀ ಮಳೆ- ಪುತ್ತೂರು ಜಲಾವೃತ, ಚಾಮರಾಜನಗರದಲ್ಲಿ ರೈತ ದುರ್ಮರಣ

    ಮಂಗಳೂರು: ಇಂದು ಕೂಡ ರಾಜ್ಯದ ಹಲವು ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಗುಡುಗು ಸಹಿತ ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು (Puttur) ನಗರ ಜಲಾವೃತಗೊಂಡಿದೆ.

    ಮಳೆಯ ಆರ್ಭಟಕ್ಕೆ ಪುತ್ತೂರಿನ ದರ್ಬೆಯಲ್ಲಿ ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿದೆ. ಅಲ್ಲದೇ ಕೋರ್ಟ್ ರೋಡ್ ಬಳಿಯ ಜ್ಯುವೆಲ್ಲರಿ ಅಂಗಡಿಯೊಂದು ಜಲಾವೃತಗೊಂಡಿದೆ. ಇನ್ನು ಭಾರೀ ಮಳೆಗೆ ರಸ್ತೆಗಳು ನದಿಯಂತಾದವು. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಯಲ್ಲೇ ನೀರು ನಿಂತಿದೆ. ಹೀಗಾಗಿ ರಸ್ತೆಯಲ್ಲಿ ನೀರು ಹೆಚ್ಚಾಗಿ ಪಕ್ಕದ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಒಟ್ಟಾರೆ ಇಂದು ಸುರಿದ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

    ಇತ್ತ ಚಾಮರಾಜನಗರದಲ್ಲಿ ಇಂದು ಮಳೆಯ ಅರ್ಭಟ ಜೋರಾಗಿದೆ. ಬಸ್ ನಿಲ್ದಾಣದಲ್ಲಿ ಮಳೆ ನೀರು ತುಂಬಿಕೊಂಡಿದೆ. ಹೀಗಾಗಿ ಗುಂಡ್ಲುಪೇಟೆ ಬಸ್ ನಿಲ್ದಾಣ ಜಲಾವೃತಗೊಂಡಿದೆ. ಬಸ್ ನಿಲ್ದಾಣದಲ್ಲಿ ನೀರು ತುಂಬಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಟ ಅನುಭವಿಸಿದರು. ಇದನ್ನೂ ಓದಿ: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕೌಂಟ್‌ಡೌನ್-‌ ಮುಂಬೈ‌ ಬಿಜೆಪಿಯಿಂದ 10 ಸಾವಿರ ಲಡ್ಡು ತಯಾರು

    ಇನ್ನು ಜಿಲ್ಲೆಯಲ್ಲಿ ಸಿಡಿಲಿಗೆ ರೈತರೊಬ್ಬರು ಬಲಿಯಾಗಿದ್ದಾರೆ. ಚಾಮರಾಜನಗರ ತಾಲೂಕು ಬೇಡರಪುರ ಗ್ರಾಮದಲ್ಲಿ ಶಿವನಂಕಾರಪ್ಪ (50) ಸಿಡಿಲಿಗೆ ಬಲಿಯಾದ ರೈತ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

    ಬಾಗಲಕೋಟೆ (Bagalkote) ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಹುನಗುಂದ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಮಧ್ಯರಾತ್ರಿಯಿಂದ ಸುರಿದ ಮಳೆಗೆ ಹುನಗುಂದ ತಾಲೂಕಿನ ಬೇಕಮಲದಿನ್ನಿ – ಕರಡಿ ಗ್ರಾಮಕ್ಕೆ ತೆರಳುವ ರಸ್ತೆ ಜಲಾವೃತಗೊಂಡಿದೆ. ಪರಿಣಾಮ ವಾಹನ ಸಂಚಾರ ಬಂದ್ ಆಗಿದೆ.

    ಭಾನುವಾರ ಸಂಜೆಯಿಂದಲೇ ಯಾದಗಿರಿ (Yadagiri) ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಸತತ 12 ಗಂಟೆಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ನಿರಂತರ ಮಳೆಯಿಂದಾಗಿ ಯಾದಗಿರಿ ವಾತಾವರಣ ಕೂಲ್ ಕೂಲ್ ಆಗಿದೆ. ಉತ್ತಮ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ವಾರದ ಹಿಂದಷ್ಟೇ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಮಳೆಯಾಗಿತ್ತು. ಹೀಗಾಗಿ ಮಳೆ ಬಿದ್ದ ಬಳಿಕ ಅನ್ನದಾತರು ಬಿತ್ತನೆ ಕಾರ್ಯ ಶುರು ಮಾಡಿದ್ದರು. ಇದೀಗ ಮತ್ತೆ ಮಳೆ ಆಗಿದ್ರಿಂದ ರೈತರು ಫುಲ್ ಖುಷಿಯಾಗಿದ್ದಾರೆ.

  • ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಅಕ್ಕ, ತಮ್ಮ ಸಾವು

    ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಅಕ್ಕ, ತಮ್ಮ ಸಾವು

    – ಮೊದಲ ದಿನ ಶಾಲೆಗೆ ಹೋಗದೇ ಚಕ್ಕರ್‌ ಹಾಕಿದ್ದ ಮಕ್ಕಳು
    – ಅಪಾಯದಿಂದ ಪಾರಾದ ಅಜ್ಜಿ

    ಬಾಗಲಕೋಟೆ: ಮಣ್ಣಿನ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಅಕ್ಕ (Sister), ತಮ್ಮ (Brother) ಸಾವನ್ನಪ್ಪಿದ ಘಟನೆ ಇಳಕಲ್ (Ilkal) ತಾಲೂಕಿನ ಕಂದಗಲ್‌ನಲ್ಲಿ ನಡೆದಿದೆ.

    ಗೀತಾ ಈಶ್ವರಯ್ಯ ಆದಾಪುರಮಠ(14) ಹಾಗೂ ಆಕೆಯ ಸಹೋದರ ರುದ್ರಯ್ಯ(10) ಮೃತಪಟ್ಟರೆ ಮನೆಯಲ್ಲಿದ್ದ ಅಜ್ಜಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ.  ಇದನ್ನೂ ಓದಿ: ನಿರೀಕ್ಷೆಗೂ ಮೀರಿ ಜಿಡಿಪಿ ಅಭಿವೃದ್ಧಿ – 4ನೇ ತ್ರೈಮಾಸಿಕದಲ್ಲಿ 7.8% , 2023-24 ಹಣಕಾಸು ವರ್ಷದಲ್ಲಿ 8.2% ಪ್ರಗತಿ

    ಬೆಳಗ್ಗೆ ತಂದೆ, ತಾಯಿ ಕೆಲಸಕ್ಕೆ ಹೋದಾಗ ಮನೆಯಲ್ಲಿ ಗೀತಾ, ರುದ್ರಯ್ಯ ಮತ್ತು ಅಜ್ಜಿ ಇದ್ದರು. ಮೇಲ್ಛಾವಣಿ ಬೀಳುವ ಕೆಲವೇ ಕ್ಷಣದ ಮೊದಲು ಅಜ್ಜಿ ಮನೆಯಿಂದ ಹೊರಗಡೆ ಬಂದಿದ್ದರು.

    ಮನೆಯಲ್ಲಿ ಮೊಬೈಲ್ ನೋಡುತ್ತಾ ಕುಳಿತಿದ್ದ ಗೀತಾ ಮತ್ತು ರುದ್ರಯ್ಯ ಅವರ ಮೇಲೆ ಅಪಾರ ಮಣ್ಣು, ಕಟ್ಟಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ಯಾಚರಣೆ ನಡೆಸಿ ಮಣ್ಣಲ್ಲಿ ಸಿಲುಕಿದ್ದ ಇಬ್ಬರ ಶವವನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಇಳಕಲ್ ತಾಲೂಕು ಆಸ್ಪತ್ರೆಗೆ ಮಕ್ಕಳ ಶವವನ್ನು ರವಾನೆ ಮಾಡಲಾಗಿದೆ. ಇದನ್ನೂ ಓದಿ: ಆರ್‌ಬಿಐನಿಂದ ಸಾಧನೆ – ಯುಕೆಯಿಂದ ಮರಳಿ ಭಾರತಕ್ಕೆ ಬಂತು 100 ಟನ್‌ ಚಿನ್ನ!

    ತಂದೆ ಬೆಳಗ್ಗೆ ಕೆಲಸಕ್ಕೆ ಹೋಗಿದ್ದರೆ, ತಾಯಿ ಹೊಲಕ್ಕೆ ಹೋಗಿದ್ದರು. ಈ ವೇಳೆ ಇಂದು ಶಾಲೆಗೆ (School) ಹೋಗಿ ಎಂದು ಪೋಷಕರು ಮಕ್ಕಳಿಗೆ ಸೂಚಿಸಿದ್ದರು. ಪೋಷಕರ ಮಾತನ್ನು ನಿರ್ಲಕ್ಷಿಸಿದ ಮಕ್ಕಳು ಇಂದು ಮೊದಲ ದಿನ ಅಂತ ಶಾಲೆಗೆ ಹೋಗದೇ ಮನೆಯಲ್ಲೇ ಇದ್ದರು. ಆಸ್ಪತ್ರೆ ಆವರಣದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

     

  • ಅಂತ್ಯಸಂಸ್ಕಾರದ ವೇಳೆ ಕೆಮ್ಮಿದ ಕಂದಮ್ಮ- ಇಳಕಲ್ ನಗರದಲ್ಲಿ ಅಚ್ಚರಿ ಘಟನೆ

    ಅಂತ್ಯಸಂಸ್ಕಾರದ ವೇಳೆ ಕೆಮ್ಮಿದ ಕಂದಮ್ಮ- ಇಳಕಲ್ ನಗರದಲ್ಲಿ ಅಚ್ಚರಿ ಘಟನೆ

    ಬಾಗಲಕೋಟೆ: ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಗುವೊಂದು ಕೆಮ್ಮುವ ಮೂಲಕ ಅಚ್ಚರಿ ಮೂಡಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ (Ilkal, Bagalkote) ನಗರದಲ್ಲಿ ನಡೆದಿದೆ.

    ಬಸವರಾಜ ಭಜಂತ್ರಿ ಹಾಗೂ ನೀಲಮ್ಮ ದಂಪತಿಯ 13 ತಿಂಗಳ ದ್ಯಾಮಣ್ಣ ಭಜಂತ್ರಿ ಬದುಕಿದ ಮಗು. ಉಸಿರಾಟ ತೊಂದರೆ ಸೇರಿದಂತೆ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಗುವನ್ನು ಕಳೆದ ನಾಲ್ಕೈದು ದಿನಗಳ ಹಿಂದೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮಗು ಬದುಕೋದು ಕಷ್ಟ ಎಂದು ಹೇಳಿದ್ದರು. ಹೀಗಾಗಿ ವಾಪಸ್ ವಾಹನದಲ್ಲಿ ಬರುವಾಗ ಮಗುವಿಗೆ ಪ್ರಜ್ಞೆ ತಪ್ಪಿದೆ.

    ಪ್ರಜ್ಞೆ ತಪ್ಪಿದ ಮಗು ಮೃತಪಟ್ಟಿದೆ ಎಂದು ಭಾವಿಸಿ ಪೋಷಕರು ಸಂಬಂಧಿಕರಿಗೆ ಸಾವಿನ ಸುದ್ದಿ ಮುಟ್ಟಿಸಿದ್ದರು. ಅದರಂತೆ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಅಂತ ಬಂದಿದ್ದು, ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಗು ಕೆಮ್ಮಿದೆ. ಈ ವೇಳೆ ಮಗು ಬದುಕಿದೆ ಎಂದು ಪೋಷಕರು ನಿಟ್ಟುಸಿರು ಬಿಟ್ಟರೆ, ಇತ್ತ ಅಂತ್ಯಸಂಸ್ಕಾರಕ್ಕೆಂದು ಬಂದವರಿಗೆ ಅಚ್ಚರಿಯಾಗಿದೆ.

    ಬಳಿಕ ಇದು ಮುರ್ತುಜಾ ಖಾದ್ರಿ ಪವಾಡ ಎಂದು ನಂಬಿ ಪೋಷಕರು ಮಗುವನ್ನು ದರ್ಗಾಕ್ಕೆ ಕರೆದುಕೊಂಡು ಹೋದರು. ಸದ್ಯ ಮಗಿವಿಗೆ ಇಳಕಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದನ್ನೂ ಓದಿ: ಕ್ರಿಕೆಟ್ ಜಗಳ ತಾರಕಕ್ಕೇರಿ ಗುಂಪು ಘರ್ಷಣೆ- ಬೆಳಗಾವಿ ನಗರದ ಅಳ್ವಾನ್ ಗಲ್ಲಿ ಉದ್ವಿಗ್ನ

  • ಕೊಟ್ಟ ಮಾತಿನಂತೆ ಚಿತ್ರ ಬಿಡಿಸಿದ ಯುವತಿಗೆ ಪತ್ರ ಬರೆದ ಪ್ರಧಾನಿ ಮೋದಿ

    ಕೊಟ್ಟ ಮಾತಿನಂತೆ ಚಿತ್ರ ಬಿಡಿಸಿದ ಯುವತಿಗೆ ಪತ್ರ ಬರೆದ ಪ್ರಧಾನಿ ಮೋದಿ

    ಬಾಗಲಕೋಟೆ: ಪ್ರಧಾನಿ ಮೋದಿ (Narendra Modi) ತಮ್ಮ ಭಾಷಣದ ವೇಳೆ ಫೋಟೋ (Photo) ಹಿಡಿದು ನಿಂತಿದ್ದ ಯುವತಿಯನ್ನು ಕಂಡು ತಮ್ಮ ಅಂಗರಕ್ಷಕ ಅಧಿಕಾರಿಗಳಿಂದ ಯುವತಿಯ ಫೋಟೊ ತರಿಸಿಕೊಂಡು, ಪತ್ರ ಬರೆಯುವುದಾಗಿ ತಿಳಿಸಿದ್ದರು. ಇದೀಗ ಕೊಟ್ಟ ಮಾತಿನಂತೆ ಪ್ರಧಾನಿ ಮೋದಿ ಯುವತಿಗೆ ಪತ್ರ (Letter) ಬರೆದಿದ್ದಾರೆ.

    ಪ್ರಧಾನಿ ಮೋದಿ ಹಾಗೂ ಅವರ ತಾಯಿ ಹೀರಾಬೆನ್ ಅವರ ಚಿತ್ರ ಬಿಡಿಸಿ, ಸ್ಕೆಚ್ ನೀಡಿದ್ದ ಯುವತಿಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ. ಬಾಗಲಕೋಟೆಯ (Bagalkote) ಯುವತಿ ನಾಗರತ್ನ ಮೇಟಿ ಎಂಬ ಯುವತಿಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ. ಏ.29 ರಂದು ಪ್ರಧಾನಿ ಮೋದಿ ಲೋಕಸಭಾ ಚುನವಣಾ (Lok Sabha Election) ಪ್ರಚಾರಾರ್ಥವಾಗಿ ಬಾಗಲಕೋಟೆಗೆ ಆಗಮಿಸಿದ್ದರು. ಭಾಷಣ ಮಾಡುವ ವೇಳೆಗೆ ವೇದಿಕೆ ಎದುರಿಗೆ ತಮ್ಮ (ಮೋದಿ) ಹಾಗೂ ತಾಯಿಯ ಚಿತ್ರ ಬಿಡಿಸಿದ ಫೋಟೋ ಹಿಡಿದು ನಿಂತಿದ್ದ ಯುವತಿಯನ್ನು ಗಮನಿಸಿದ ಮೋದಿ, ಭಾಷಣದ ಮಧ್ಯೆಯೇ ಎಸ್‌ಪಿಜಿ ಸಿಬ್ಬಂದಿಗೆ ಹೇಳಿ ಆ ಫೋಟೋವನ್ನು ತರಿಸಿಕೊಂಡಿದ್ದರು. ಅಲ್ಲದೇ ಅದರಲ್ಲಿ ನಿನ್ನ ಹೆಸರು, ವಿಳಾಸ ಬರೆದು ಕಳುಹಿಸು ಮಗಳೇ, ನಾನು ನಿನಗೆ ಖಂಡಿತವಾಗಿಯೂ ಪತ್ರ ಕಳುಹಿಸುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ದೇವರಾಜೇಗೌಡ, ಪೀತಂ ಗೌಡ ಆಪ್ತರ ಮನೆ ಸೇರಿದಂತೆ ಹಾಸನದ 6 ಕಡೆ ಎಸ್‌ಐಟಿ ದಾಳಿ

    ಯುವತಿಗೆ ಕೊಟ್ಟ ಮಾತಿನಂತೆ ಮೇ 5 ರಂದು ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ. ಯುವತಿಗೆ ಮೋದಿಯವರ ಪತ್ರ ಪೋಸ್ಟ್ ಮೂಲಕ ತಲುಪಿದೆ. ಮೋದಿಯವರ ಪತ್ರದಲ್ಲಿ ಸುಂದರವಾದ ಭಾವಚಿತ್ರ ಉಡುಗೊರೆಯಾಗಿ ನೀಡಿದ್ದಕ್ಕೆ ನಾನು ನಿಮಗೆ ಧನ್ಯವಾದ ತಿಳಿಸುತ್ತೇನೆ. ಈ ಕಲಾತ್ಮಕ ಕೆಲಸವು ಮಾನವ ಭಾವನೆಗಳ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ನಿಮ್ಮ ವರ್ಣಚಿತ್ರ ರೋಮಾಂಚಕ ಪ್ರದರ್ಶನವು ಯುವಶಕ್ತಿಯ ಸಾರವನ್ನು ಒಳಗೊಂಡಿರುತ್ತದೆ. ಹೊಸ ಭಾರತವನ್ನು ರೂಪಿಸುವ ಮತ್ತು ನಮ್ಮ ಯುವಕರಿಗೆ ಭರವಸೆಯ ಭವಿಷ್ಯವನ್ನು ಭದ್ರಪಡಿಸುವ ನನ್ನ ಬದ್ಧತೆಯನ್ನು ಪ್ರೇರೇಪಿಸುತ್ತದೆ. ನಿಮ್ಮ ಸೃಜನಶೀಲ ಪ್ರತಿಭೆ ಮತ್ತು ಕೌಶಲ್ಯಗಳನ್ನು ನಿಮ್ಮ ಕೆಲಸಕ್ಕೆ ಅನ್ವಯಿಸುವಲ್ಲಿ ನೀವು ನಿರಂತರವಾಗಿರಿ. ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಕೆಗಳು. ಇಂತಿ, ನಿಮ್ಮ ನರೇಂದ್ರ ಮೋದಿ ಎಂದು ಉಲ್ಲೇಖ ಮಾಡಿ ಮೋದಿ ಪತ್ರ ಬರೆದಿದ್ದಾರೆ. ಸದ್ಯ ಈ ಯುವತಿಗೆ ಮೋದಿ ಬರೆದಿರುವ ಪತ್ರ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಇದನ್ನೂ ಓದಿ: ಪಿಒಕೆಯಲ್ಲಿ ಹಿಂಸಾಚಾರ, ಗುಂಡಿನ ದಾಳಿಗೆ ಮೂವರು ಬಲಿ – ಮದರಸಾದ ಒಳಗಡೆ ಟಿಯರ್‌ ಗ್ಯಾಸ್‌ ಸಿಡಿಸಿದ ಸೇನೆ

  • ಹಾಲು ಹಾಕ್ಕೊಂಡು ಊಟ ಮಾಡ್ಬೇಡ ಎಂದಿದ್ದಕ್ಕೆ ಜಗಳ- ತಂದೆಯಿಂದ್ಲೇ ಮಗನ ಕೊಲೆ

    ಹಾಲು ಹಾಕ್ಕೊಂಡು ಊಟ ಮಾಡ್ಬೇಡ ಎಂದಿದ್ದಕ್ಕೆ ಜಗಳ- ತಂದೆಯಿಂದ್ಲೇ ಮಗನ ಕೊಲೆ

    ಬಾಗಲಕೋಟೆ: ಇತ್ತೀಚಿನ ದಿನಗಳಲ್ಲಿ ಕೆಲವೊಂದು ಕ್ಲುಲ್ಲಕ ಕಾರಣಗಳಿಗೆ ನಡೆಯುವ ಜಗಳ ಕೊಲೆಯಲ್ಲಿ ಅಂತ್ಯವಾಗುತ್ತಿವೆ. ಕೆಲವೊಮ್ಮೆ ಈ ಘಟನೆಗಳು ಅಚ್ಚರಿ ಮೂಡಿಸುತ್ತವೆ. ಬರೀ ಇಷ್ಟಕ್ಕೆ ಕೊಲೆ ಮಾಡಬೇಕಾ ಅಂತಾ ಅನಿಸೋದು ಸಹಜ. ಇದೀಗ ಅಂಥದ್ದೇ ಒಂದು ಘಟನೆ ಬಾಗಲಕೋಟೆಯಲ್ಲಿ (Bagalkote) ನಡೆದಿದೆ.

    ಹೌದು. ಹಾಲು ಹಾಕಿಕೊಂಡು ಊಟ ಮಾಡಬೇಡ ಎಂದು ತನ್ನೆತ್ತರಕ್ಕೆ ಬೆಳೆದ ಮಗನಿಗೆ ಬುದ್ಧಿ ಹೇಳಿದ್ದಾರೆ. ಆದರೆ ತಂದೆಗೆ ಇದು ಬುದ್ಧಿ ಮಾತು ಅನಿಸಿರೂ ಇಬ್ಬರ ಮಧ್ಯೆ ಇದೇ ವಿಚಾರಕ್ಕೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ತಂದೆ ಮಗನ ಕೊಲೆ ಮಾಡಲು ಸ್ಕೆಚ್‌ ಹಾಕುತ್ತಾನೆ.

    ಮಗ ಮಲಗಿದ್ದಾಗ ಕಂಠಪೂರ್ತಿ ಕುಡಿದು ಬಂದ ತಂದೆ, ಕೊಡಲಿಯಿಂದ ಮುಖ ಹಾಗೂ ಕತ್ತಿಗೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆ ಸೋಮವಾರ ರಾತ್ರಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಿಸನಾಳ ಗ್ರಾಮದಲ್ಲಿ ನಡೆದಿದೆ.

    ಕರಿಯಪ್ಪ ಬೀಳಗಿ (21) ನನ್ನು ತಂದೆ ಡೊಂಗರೆಪ್ಪ ಬೀಳಗಿಯಿಂದ ಹತ್ಯೆ ಮಾಡಿದ್ದಾನೆ. ಬೀಳಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸಾಲ ತೀರಿಸಲು ಗಂಡು ಮಗುವನ್ನೇ ಮಾರಿದ ತಂದೆ!

  • SSLCಯಲ್ಲಿ ರಾಜ್ಯಕ್ಕೆ ಪ್ರಥಮ ಬಂದ ಅಂಕಿತಾಗೆ ಜಿ.ಪಂ ಸಿಇಓ ಅಭಿನಂದನೆ

    SSLCಯಲ್ಲಿ ರಾಜ್ಯಕ್ಕೆ ಪ್ರಥಮ ಬಂದ ಅಂಕಿತಾಗೆ ಜಿ.ಪಂ ಸಿಇಓ ಅಭಿನಂದನೆ

    ಬಾಗಲಕೋಟೆ: ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿರುವ ಬಾಗಲಕೋಟೆ (Bagalkote) ಜಿಲ್ಲೆಯ ಅಂಕಿತಾ ಬಸಪ್ಪ ಕೊಣ್ಣುರ್ (Ankita Basappa Konnur) ಅವರ ಸಾಧನೆಗೆ ಜಿಲ್ಲಾ ಪಂಚಾಯಿತಿ ಸಿಇಓ (Zilla Panchayat CEO) ಶಶಿಧರ ಕುರೇರ್ ಅಭಿನಂದನೆ ಸಲ್ಲಿಸಿದ್ದಾರೆ.

    ಈ ಬಗ್ಗೆ ದೂರವಾಣಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಇಓ ಕುರೇರ್, ಇಡೀ ರಾಜ್ಯವೇ ಖುಷಿ ಪಡುವ ಸಾಧನೆಯನ್ನು ನಮ್ಮ ಜಿಲ್ಲೆಯ ಅಂಕಿತಾ ಕೊಣ್ಣುರ್ ಮಾಡಿದ್ದಾರೆ. ಸಣ್ಣ ರೈತ ಕುಟುಂಬದ ಅಂಕಿತಾ, ಸರ್ಕಾರಿ ಶಾಲೆಯಲ್ಲಿ ಓದಿ, ರಾಜ್ಯದ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ಮಾದರಿ ಆಗುವ ಸಾಧನೆ ಮಾಡಿದ್ದಾರೆ. ಬಾಲಕಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: SSLC Result 2024; ಬಾಗಲಕೋಟೆಯ ಅಂಕಿತಾ ಬಸಪ್ಪ ರಾಜ್ಯಕ್ಕೆ ಟಾಪರ್

    ಹಾಗೆಯೇ ಬಾಗಲಕೋಟೆ ಜಿಲ್ಲೆ ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ 24ನೇ ಸ್ಥಾನ ಪಡೆದಿತ್ತು. ಈ ಬಾರಿ 13ನೇ ಸ್ಥಾನಕ್ಕೆ ಬಂದಿದೆ. 11 ಸ್ಥಾನ ಪ್ರಗತಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: SSLC Result: 73.40 % ಫಲಿತಾಂಶ – ಬಾಲಕಿಯರೇ ಮೇಲುಗೈ; ಉಡುಪಿಗೆ ಮೊದಲ ಸ್ಥಾನ