Tag: Bagalakot

  • ಏಷ್ಯನ್ ಚಾಂಪಿಯನ್ ಗೇಮ್‍- ಕುಸ್ತಿಯಲ್ಲಿ ಮುಧೋಳ ಹುಡುಗನಿಗೆ ಚಿನ್ನದ ಪದಕ

    ಏಷ್ಯನ್ ಚಾಂಪಿಯನ್ ಗೇಮ್‍- ಕುಸ್ತಿಯಲ್ಲಿ ಮುಧೋಳ ಹುಡುಗನಿಗೆ ಚಿನ್ನದ ಪದಕ

    ಬಾಗಲಕೋಟೆ: ಏಷ್ಯನ್ ಚಾಂಪಿಯನ್ಸ್ ಗೇಮ್ಸ್ ಕುಸ್ತಿಯಲ್ಲಿ ಜಿಲ್ಲೆಯ ಮುಧೋಳ ತಾಲೂಕಿನ ಕುಸ್ತಿಪಟು ಚಿನ್ನದ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.

    ನಿಂಗಪ್ಪ ಗೆನೆಣ್ಣವರ ಎಂಬ ಕುಸ್ತಿಪಟುವೇ ಈ ವಿಶಿಷ್ಟ ಸಾಧನೆ ಮಾಡಿದ ಯುವಕ. ನಿಂಗಪ್ಪ 17 ವರ್ಷದೊಳಗಿನ 45 ಕೆ.ಜಿ ವಿಭಾಗದಲ್ಲಿ ದೇಶಕ್ಕೆ ಚಿನ್ನ ತಂದ ಕುಸ್ತಿಪಟುವಾಗಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಹಳಿಂಗಳಿ ಮೂಲದ ಪೈಲ್ವಾನ್ ನಿಂಗಪ್ಪ, ಕಿರಗಿಸ್ತಾನದ ಬಿಸ್ಕೆಕ್ ನಗರದಲ್ಲಿ ನಡೆದಿರುವ ಏಷ್ಯನ್ ಗೇಮ್ಸ್‌ನಲ್ಲಿ, 4 ರಾಷ್ಟ್ರದ ಕುಸ್ತಿಪಟುಗಳನ್ನು ಸೋಲಿಸಿ ಚಿನ್ನದ ಬೇಟೆಯಾಡಿದ್ದಾರೆ.

    ಫೈನಲ್‍ನಲ್ಲಿ ಇರಾನ್ ದೇಶದ ನವಾಜಿ ಅಲಿ ಎಂಬ ಕುಸ್ತಿಪಟುವನ್ನು ಮಣಿಸಿ ದೇಶದ ತಿರಂಗ ಹೊತ್ತು ಕುಣಿದು ಕುಪ್ಪಳಿಸಿದರು. ನಿನ್ನೆ ನಡೆದ ಫೈನಲ್‍ನಲ್ಲಿ ನಿಂಗಪ್ಪ ಈ ವಿಜಯದ ನಗೆ ಬೀರಿದ್ದಾರೆ. ಸದ್ಯಕ್ಕೆ ಮುಧೋಳ ನಗರದಲ್ಲಿ ಕುಸ್ತಿಪಟು ನಿಂಗಪ್ಪ ಕುಟುಂಬ ನೆಲೆಸಿದ್ದಾರೆ. ನಿಂಗಪ್ಪ ಮುಧೋಳ ಜೈ ಹನುಮಾನ ವ್ಯಾಯಾಮ ಶಾಲೆಯಲ್ಲಿ 7 ವರ್ಷ ತರಬೇತಿ ಪಡೆದಿದ್ದಾರೆ. ನಂತರ ರಾಜ್ಯ ಮಟ್ಟದ ಕುಸ್ತಿಯಲ್ಲಿ ಪ್ರಥಮ, ರಾಜಸ್ಥಾನದಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ತೃತೀಯ ಸ್ಥಾನ ಪಡೆದು ನಿಂಗಪ್ಪ ಎಲ್ಲರ ಗಮನವನ್ನ ತನ್ನತ್ತ ಸೆಳೆದಿದ್ದರು. ಇದನ್ನೂ ಓದಿ: ಬೀದಿ ಬೀದಿ ಸುತ್ತಾಡಬೇಡಿ ಕೊಹ್ಲಿ, ರೋಹಿತ್ ವಿರುದ್ಧ ಬಿಸಿಸಿಐ ಗರಂ

    ನಿಂಗಪ್ಪನ ಸಾಧನೆ ಕಂಡು ಹರಿಯಾಣದ ಕುಸ್ತಿ ಇಂಡಿಯನ್ ಕ್ಯಾಂಪ್‍ಗೆ ಆಯ್ಕೆಯಾಗಿದ್ದರು. ಹರಿಯಾಣ ಇಂಡಿಯನ್ ಕ್ಯಾಂಪ್‍ನಲ್ಲಿ ಕಳೆದ ಎರಡು ವರ್ಷ ತರಬೇತಿ ಪಡೆದಿದ್ದರು. ಇದೀಗ ಎಸ್‍ಎಸ್‍ಎಲ್‍ಸಿ ಓದುತ್ತಿರುವ ನಿಂಗಪ್ಪ ಗೆನೆಣ್ಣವರ, ತಂದೆ ತಾಯಿ ಕೃಷಿ ಕಾರ್ಮಿಕರು, ಮತ್ತೊಬ್ಬರ ಜಮೀನಿನಲ್ಲಿ ಕೃಷಿ ಕೆಲಸ ಮಾಡ್ತಾರೆ. ನಿಂಗಪ್ಪ ಬಡತನದಲ್ಲಿ ಬೆಳೆದು, ಕುಸ್ತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ನಕಂಗಪ್ಪ ಏಷ್ಯನ್ ಗೆಮ್ಸ್‌ಗೆ, ಕರ್ನಾಟಕದಿಂದ ಇವರೊಬ್ಬರಷ್ಟೇ ಭಾಗಿಯಾಗಿದ್ದರು. ಅಲ್ಲಿ ವಿಜಯ ಪತಾಕೆ ಹಾರಿಸುವ ಮೂಲಕ ದೇಶ, ರಾಜ್ಯ ಹಾಗೂ ಬಾಗಲಕೋಟೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇದನ್ನೂ ಓದಿ: ತಂಡಕ್ಕೆ ಸ್ಫೂರ್ತಿ ತುಂಬಲು ಲಕ್ಷ, ಲಕ್ಷ ಸುರಿದು ಜ್ಯೋತಿಷಿಯನ್ನು ನೇಮಕ ಮಾಡಿದ AIFF

    Live Tv

  • ಹಲ್ಲಿಲ್ಲದ ಹಾವಿನ ರೀತಿ ಬುಸು ಬುಸು ಅನ್ಕೊಂಡು ಕೂತಿದ್ದಾರೆ: ಗೋವಿಂದ ಕಾರಜೋಳ

    ಹಲ್ಲಿಲ್ಲದ ಹಾವಿನ ರೀತಿ ಬುಸು ಬುಸು ಅನ್ಕೊಂಡು ಕೂತಿದ್ದಾರೆ: ಗೋವಿಂದ ಕಾರಜೋಳ

    ಬಾಗಲಕೋಟೆ: ಕೈ ನಾಯಕರು ಹಲ್ಲಿಲ್ಲದ ಹಾವಿನ ರೀತಿ ಬುಸು ಬುಸು ಅನ್ಕೊಂಡು ಕೂತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.

    ಮೇಕೆದಾಟು ಪಾದಯಾತ್ರೆ ತಡೆಯಲು ಸರ್ಕಾರ ದುರ್ಬಲವಾಗಿದೆಯೇ ಎಂಬ ಹೈಕೋರ್ಟ್ ಪ್ರಶ್ನೆಮಾಡಿದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅದೇನಿಲ್ಲ, ನಮ್ಮದು ದುರ್ಬಲ ಸರ್ಕಾರ ಅಲ್ಲ. ರೈತರಿಗಾಗಿ ಪಾದಯಾತ್ರೆ ಎಂದು ಅವರು ಗಿಮಿಕ್ ಮಾಡಿದ್ದಾರೆ. ನಮ್ಮ ನೀರು ನಮ್ಮ ಹಕ್ಕಿಗಾಗಿ ಪಾದಯಾತ್ರೆ ಎಂಬ ಡೊಂಬರಾಟ ಸರಿಯಲ್ಲ ಇಂತಹ ಗಿಮಿಕ್ ಗಳನ್ನ ಬಿಡಬೇಕು. ಇಂತಹ ಗಿಮಿಕ್ ಗಳಿಂದ ದೇಶದಲ್ಲಿ 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ನವರಿಗೆ ಯಾವುದೇ ಲಾಭವಾಗಿಲ್ಲ ಹೀಗಾಗಿ ಇವತ್ತು ಸ್ಕ್ರಾಪ್ ಆಗಿದ್ದಾರೆ. ಹಲ್ಲಿಲ್ಲದ ಹಾವಿನ ರೀತಿ ಬುಸು ಬುಸು ಅನ್ಕೊಂಡು ಕೂತಿದ್ದು, ಅವರು ಇಂತಹ ನಾಟಕ ಬಿಡಬೇಕು. ಸರ್ಕಾರಕ್ಕೆ ಸಲಹೆ ಮಾಡಲಿ, ಸಹಕಾರ ಮಾಡಲಿ, ಯೋಜನೆ ಯಾವರೀತಿ ಮಾಡಬೇಕೆಂದು ಹೇಳಲಿ ಅದನ್ನ ನಾವು ಸ್ವಾಗತ ಮಾಡುತ್ತೇವೆ ಎಂದರು. ಇದನ್ನೂ ಓದಿ: ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ

    ಸರ್ಕಾರದಿಂದ ಪಾದಯಾತ್ರೆ ರದ್ದು ಆದೇಶ ವಿಚಾರವಾಗಿ ಮಾತನಾಡಿದ ಅವರು, ನಿಯಮಾವಳಿ ಮೀರಿ ಹೆಚ್ಚು ಜನ ಸೇರಿ ಕೋವಿಡ್ ಹರಡೋದಕ್ಕೆ ಕಾರಣ ಆಗುತ್ತಿದ್ದಾರೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ಈಗಾಗಲೇ ಕಾಂಗ್ರೆಸ್ ಶಾಸಕರಿಗೆ, ನಾಯಕರಿಗೆ ಕೋವಿಡ್ ಬಂದಿದೆ ಎಂದರು.

    ಡಿಕೆಶಿ ಮಕ್ಕಳ ಜೊತೆ ಭೇಟಿ ಹಿನ್ನೆಲೆ ಹೇಳಿಕೆ ನೀಡಿದ ಅವರು, ಕಾಂಗ್ರೆಸ್ ನಾಯಕರು ಹೋದ ಶಾಲೆಗಳಲ್ಲಿ ಮಕ್ಕಳಿಗೂ ಕೋವಿಡ್ ಬಂದಿದ್ದು, ಅಧಿಕಾರಿಗಳಿಗೂ ಸಹ ಕೋವಿಡ್ ಬಂದಿದೆ. ಅದಕ್ಕಾಗಿ ಜವಾಬ್ದಾರಿಯುತ ಪ್ರತಿಪಕ್ಷವಾಗಿದ್ದು, ಕಾಂಗ್ರೆಸ್ ನವರು ಪಾದಯಾತ್ರೆ ಮೊಟಕುಕೊಳಿಸೋದು ಒಳ್ಳೆಯದು ಎಂದರು.

    ಪಾದಯಾತ್ರೆಯನ್ನು ಮಾಡುವುದೇ ಆದರೆ 50 ಜನ ಸೇರಿ ಸಾಂಕೇತಿಕವಾಗಿ ಮಾಡೋದಕ್ಕೆ ನಾವು ಯಾವತ್ತೂ ಬೇಡ ಅಂದಿಲ್ಲ. ನಮಗೆ ಹೋರಾಟ ಹತ್ತಿಕ್ಕುವ ಪ್ರಶ್ನೆಯೇ ಇಲ್ಲ. ಜನರಿಗೆ ಯಾರು ಎಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ ಎನ್ನೋದು ಗೊತ್ತಿದೆ. ವೋಟ್ ಬ್ಯಾಂಕ್ ಕಾರಣಕ್ಕಾಗಿ ಕಾಂಗ್ರೆಸ್ ನೀರಾವರಿ ಹೋರಾಟ ಮಾಡುತ್ತಿದ್ದು, ಇದು ಯಾವತ್ತೂ ಒಳ್ಳೆಯದಲ್ಲ. 2013 ರಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಅಂತ ಪಾದಯಾತ್ರೆ ಮಾಡಿದರು. ನಂತರ ಅಧಿಕಾರಕ್ಕೆ ಬಂದು ಏನೂ ಮಾಡಿಲ್ಲ. ಜನರಿಗೆ ಇವರು ಮೋಸಗಾರರು ಅಂತ ಗೊತ್ತಾಗಿದೆ. ಅದಕ್ಕಾಗಿ ಕರ್ತವ್ಯಲೋಪ ಕೆಲಸ ಮಾಡಿ, ಭಂಡತನದಿಂದ ಹೋರಾಟ ಮಾಡುತ್ತೇನೆ ಅಂದರೆ ಜನ ಒಪ್ಪೋದಿಲ್ಲ. ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಜನರ ಜೀವ ರಕ್ಷಣೆಗಾಗಿ ಹೋರಾಟ ಮೊಟಕು ಗೊಳಿಸೋದು ಒಳ್ಳೆಯದು ಎಂದು ನುಡಿದರು. ಇದನ್ನೂ ಓದಿ: ಅನಿವಾರ್ಯತೆ ಬಂದ್ರೆ ಮೇಕೆದಾಟು ಪಾದಯಾತ್ರೆ ನಿಲ್ಲಿಸಿ: ಕೈ ಹೈಕಮಾಂಡ್‌ ಸೂಚನೆ

    ಮೇಕೆದಾಟು ಪಾದಯಾತ್ರೆ ನಿಲ್ಲಲ್ಲ ಎಂದು ಸಂಸದ ಡಿ.ಕೆ ಸುರೇಶ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಹಾಗಾದ್ರೆ ಅವರಿಗೆ ದೇಶದ ಕಾನೂನಿನ ಬಗ್ಗೆ ಗೌರವ ಇಲ್ಲ. ಗೌರವ ಕೊಡಬೇಕಾದ ಜವಾಬ್ದಾರಿ ಯಾರದ್ದು? ಪ್ರತಿಪಕ್ಷದ ನಾಯಕರು ಅಷ್ಟೇ ಅಲ್ಲದೇ, ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಿದ್ದಾರೆ, ಸಂಸದರಿದ್ದಾರೆ. ಆ ರೀತಿ ಮಾತನಾಡುವದು ಅವರಿಗೆ ಗೌರವ ತರಲ್ಲ. ದೇಶದ ಕಾನೂನನ್ನ ಗೌರವಿಸಬೇಕಾಗಿದ್ದು ದೇಶ 130 ಕೋಟಿ ಜನರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ತಿರುಗೇಟು ನೀಡಿದರು.

    ಮೇಲಿಂದ ಮೇಲೆ ಕೋವಿಡ್ ಕೇಸ್ ಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಮತ್ತೆ ಲಾಕಡೌನ್ ಅನಿವಾರ್ಯವಾಗುತ್ತಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಲ್ಲ ಅದರ ಬಗ್ಗೆ ನಾನಿನ್ನೂ ತಿಳಿದುಕೊಂಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿಯವರ ಜೊತೆಗೂ ಮಾತಾಡಿಲ್ಲ. ತಜ್ಞರ ಜೊತೆ ಮಾತನಾಡಿದ ನಂತರ ಮಾತನಾಡುತ್ತೇನೆ. ಈ ನಾಡಿನ ಜನರ ಹಿತದೃಷ್ಟಿಯಿಂದ ಮೇಕೆದಾಟು ಹೋರಾಟ ಮೊಟಕುಗೊಳಿಸೋದು ಒಳ್ಳೆಯದು ಎಂದು ಹೇಳಿದರು.

  • ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ – ಓರ್ವ ಚಿಕಿತ್ಸೆ ಫಲಿಸದೇ ಸಾವು

    ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ – ಓರ್ವ ಚಿಕಿತ್ಸೆ ಫಲಿಸದೇ ಸಾವು

    ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ ಒಡೆತನದ ಕೇದಾರನಾಥ ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡವಾಗಿದ್ದು, ಬೆಂಕಿ ತಗುಲಿದ್ದ 3 ಕಾರ್ಮಿಕರಲ್ಲಿ ಓರ್ವ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ನಗರದ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿ ಇರುವ ಕಾರ್ಖಾನೆಯಲ್ಲಿ ನಡೆದಿದೆ.

    ಅಶೋಕ ಚೌಹಾಣ್ (37) ಮೃತ ಕಾರ್ಮಿಕ. ಕಾರ್ಮಿಕರು ಬುಧವಾರ ಬೆಳಗ್ಗೆ ಅತಿಯಾದ ಚಳಿ ಹಿನ್ನೆಲೆ ಬ್ಯಾರಲ್‍ನಲ್ಲಿ ಬೆಂಕಿ ಹಾಕಿ ಕಾಯಿಸಿಕೊಳ್ಳುತ್ತಿದ್ದರು. ಬೆಂಕಿಯೂ ಹೆಚ್ಚು ಉರಿಯ ಬೇಕು ಅಂತ ಥಿನ್ನರ್ ಹಾಕಿದಾಗ ಒಮ್ಮೆಲೆ 3 ಕಾರ್ಮಿಕರಿಗೆ ಬೆಂಕಿ ತಗುಲಿದೆ. ನಂತರ ಓಡೋಡಿ ಬಂದು ನೀರಿನ ಪೈಪ್ ಕೆಳಗೆ ಕೂತು ಬೆಂಕಿ ನಂದಿಸಿಕೊಂಡಿದ್ದರು. ಇದನ್ನೂ ಓದಿ: ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ

    ಅದರಲ್ಲಿ ಅಶೋಕ ಎಂಬುವರಿಗೆ ಶೇ.80 ರಷ್ಟು ಬೆಂಕಿ ತಗುಲಿ ಗಾಯವಾಗಿತ್ತು. ಈ ಹಿನ್ನೆಲೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್.ಡಿಎಂ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ನಂತರ ಅಲ್ಲಿಂದ ಬೆಳಗಾವಿ ಕೆಎಲ್‍ಇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ನಿವಾಸಿಯಾದ ಮೃತ ಕಾರ್ಮಿಕನಿಗೆ ಪತ್ನಿ, ಇಬ್ಬರು ಗಂಡು ಮಕ್ಕಳಿದ್ದಾರೆ. ಇದನ್ನೂ ಓದಿ: ಅನಿವಾರ್ಯತೆ ಬಂದ್ರೆ ಮೇಕೆದಾಟು ಪಾದಯಾತ್ರೆ ನಿಲ್ಲಿಸಿ: ಕೈ ಹೈಕಮಾಂಡ್‌ ಸೂಚನೆ

    ಇನ್ನುಳಿದ ಇಬ್ಬರು ಕಾರ್ಮಿಕರಾದ ಪ್ರಮೋದ ಹಾಗೂ ಮೆಹಬೂಬ್ ಎಂಬುವವರಿಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ಹೃದಯಾಘಾತದಿಂದ ಯೋಧ ಸಾವು- ಸಂಜೆ ಬಾದಾಮಿಗೆ ಪಾರ್ಥಿವ ಶರೀರ

    ಹೃದಯಾಘಾತದಿಂದ ಯೋಧ ಸಾವು- ಸಂಜೆ ಬಾದಾಮಿಗೆ ಪಾರ್ಥಿವ ಶರೀರ

    ಬಾಗಲಕೋಟೆ: ಅಮೃತಸರದಲ್ಲಿ ಬಾಗಲಕೋಟೆ ಜಿಲ್ಲೆಯ ಕರ್ತವ್ಯ ನಿರತ ಬಿಎಸ್‍ಎಫ್ ಯೋಧ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರು ಗ್ರಾಮದ 53 ವರ್ಷದ ಚಂದ್ರಶೇಖರ ಕಿನ್ನಾಳ ಸೋಮವಾರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ವೇಳೆ ಆಸ್ಪತ್ರೆಗೆ ದಾಖಲಾಗಿಸಿತ್ತು. ಹೃದಯಾಘಾತದಿಂದ ಮೃತಪಟ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    31 ವರ್ಷದಿಂದ ಅವರು ಪಂಜಾಬ್ ರಾಜ್ಯದ ಅಮೃತಸರದ 183ರ ಬಿಎಸ್‍ಎಫ್ ಬಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಜುಲೈ 26ರಂದು ರಜೆಗೆಂದು ಸ್ವಗ್ರಾಮಕ್ಕೆ ಬಂದು ಕರ್ತವ್ಯಕ್ಕೆ ಮರಳಿದ್ದರು. ತಾಯಿ ಬಸಮ್ಮ, ಪತ್ನಿ ಶಿವಲೀಲಾ, ಪುತ್ರ ಅಭಿಷೇಕ್, ವಿಶ್ವನಾಥ್, ಸಹೋದರಿಯರು ಮೃತ ಯೋಧನಿಗಿದ್ದು, ಗ್ರಾಮಕ್ಕೆ ತಹಶೀಲ್ದಾರ್ ಎಸ್.ಎಸ್.ಇಂಗಳೆ, ಸಿಪಿಐ ರಮೇಶ್ ಹಾನಾಪೂರ, ಪಿಎಸ್‍ಐ ನೇತ್ರಾವತಿ ಪಾಟೀಲ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

    ಇವತ್ತು ಬೆಳಗ್ಗೆ 9 ಗಂಟೆಗೆ ಬೆಂಗಳೂರಿಗೆ ಮೃತ ಯೋಧನ ಪಾರ್ಥಿವ ಶರೀರ ಆಗಮಿಸಿದ್ದು, ರಾತ್ರಿ ಸ್ವಗ್ರಾಮ ಬೇಲೂರಿಗೆ ಬರಲಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

  • ಮೋದಿ ಮತ್ತು ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದೆ – ಸಿದ್ದರಾಮಯ್ಯ

    ಮೋದಿ ಮತ್ತು ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದೆ – ಸಿದ್ದರಾಮಯ್ಯ

    ಬಾಗಲಕೋಟೆ: ಕೊರೊನಾ ಎರಡನೇ ಅಲೆ ತಡೆಯುವಲ್ಲಿ ಮೋದಿ ಮತ್ತು ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ದೂರಿದ್ದಾರ.

    ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣಕ್ಕೆ ಆಗಮಿಸಿ, ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣ ಕುರಿತಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2ನೇ ಅಲೆಯ ಬಗ್ಗೆ ಮಾಹಿತಿ ಇದ್ದರೂ ಸರ್ಕಾರ ಜಾಗೃತಿ ವಹಿಸಲಿಲ್ಲ. ಆಕ್ಸಿಜನ್, ರೆಮ್ ಡಿಸಿವರ್, ವೆಂಟಿಲೇಟರ್ ಬೆಡ್‍ಗಳ ಸಿದ್ದತೆ ನಡೆಸಲಿಲ್ಲ. ರೋಗಿಗಳಿಗೆ ಆಕ್ಸಿಜನ್, ರೆಮ್‍ಡಿಸಿವರ್ ಇಂಜೆಕ್ಷನ್ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

    ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅದು ನಮ್ಮ ರೋಗವಲ್ಲ. ಬಿಜೆಪಿಯವರಿಗೆ ಬಂದ ರೋಗ. ಬಿಜೆಪಿ ಅವರು ಬೀದಿ ಜಗಳ ಮಾಡುತ್ತಿದ್ದಾರೆ. ಮಾಡಲಿ ಎಂದು ಲೇವಡಿ ಮಾಡಿದರು. ರಾಜ್ಯದಲ್ಲಿ ಮೊದಲೇ ಆಡಳಿತ ಇಲ್ಲ, ಈ ಬೀದಿ ಜಗಳದಿಂದ ಇನ್ನಷ್ಟು ಆಡಳಿತ ಕುಸಿದು ಹೋಗುತ್ತದೆ ಎಂದು ಹೇಳಿದರು.

    ಸಿಎಂ ಬದಲಾವಣೆ ಆಗುತ್ತದೆ ಎಂಬ ಮಾಹಿತಿ ನನಗಿದೆ. ಆದರೆ ಕೊರೊನಾ ಹಿನ್ನೆಲೆ ಮುಂದಕ್ಕೆ ಹಾಕುತ್ತಾ ಇರಬೇಕು, ನನಗೆ ಗೊತ್ತಿಲ್ಲ ಎಂದರು. ಇದೇ ಸಮಯದಲ್ಲಿ ಹಕ್ಕು ಚ್ಯುತಿ ಮಂಡನೆ ವಿಚಾರವಾಗಿ ಮಾತನಾಡಿ, ಜಿಲ್ಲಾಧಿಕಾರಿಗಳ ಜೊತೆ ಝೂಮ್ ಮೀಟ್‍ಗೆ ಅವಕಾಶ ಕೇಳಿದ್ದೆ. ಕೊಡುವುದಕ್ಕೆ ಆಗಲ್ಲ ನೀವು ಸರ್ಕಾರದ ಭಾಗವಲ್ಲ ಅಂದರು. ನಾನೊಬ್ಬ ವಿರೋಧ ಪಕ್ಷದ ನಾಯಕ, ನಾನು ಎಕ್ಸ್ ಚೀಫ್ ಮಿನಿಸ್ಟರ್. ವಿರೋಧ ಪಕ್ಷದ ನಾಯಕ ಅಂದರೆ ಶ್ಯಾಡೋ ಆಫ್ ಚೀಫ್ ಮಿನಿಸ್ಟರ್ ಇದ್ದಾಂಗೆ ನಾನು ಮಾಹಿತಿ ತಿಳಿದುಕೊಳ್ಳುವಂತಿಲ್ಲ ಎಂದರೆ ಇದು ಪ್ರಜಾಪ್ರಭುತ್ವದ ವ್ಯವಸ್ಥೆ ನಾ ಎಂದು ಆಕ್ಷೇಪಿಸಿ ಪ್ರಶ್ನೆ ಮಾಡಿದರು. ಇದನ್ನು ಓದಿ: ರಾಜಕಾರಣದಲ್ಲಿ ಬೆಂಕಿ ಇಲ್ಲದೆಯೂ ಹೊಗೆಯಾಡುತ್ತೆ, ಆಧಾರವಿಲ್ಲದ ಸುದ್ದಿಯೂ ಬರುತ್ತೆ: ಸಿ.ಟಿ.ರವಿ

  • ಗದಗದಲ್ಲಿ ವಿವಿಧ ಕಾಮಗಾರಿಗೆ ಡಿಸಿಎಂ ಕಾರಜೋಳ ಚಾಲನೆ

    ಗದಗದಲ್ಲಿ ವಿವಿಧ ಕಾಮಗಾರಿಗೆ ಡಿಸಿಎಂ ಕಾರಜೋಳ ಚಾಲನೆ

    ಬಾಗಲಕೋಟೆ/ಗದಗ: ಗದಗ ಜಿಲ್ಲೆಯಲ್ಲಿ 25 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಚಾಲನೆ ನೀಡಿದ್ದಾರೆ.

    ಗದಗ ಜಿಲ್ಲಾ ಕೇಂದ್ರದಲ್ಲಿ 3.39 ಕೋಟಿ ರೂ.ವೆಚ್ಚದ ಡಾ.ಬಾಬು ಜಗಜೀವನರಾಂ ಭವನ, 42 ಬಾಬು ಜಗಜೀವನರಾಂ ಭವನಗಳು, ಗದಗ ಬೆಟಗೇರಿ ನಗರದ ಹತ್ತಿರ 2.32 ಕೋಟಿ ರೂ. ಪರಿಶಿಷ್ಠ ವರ್ಗಗಳ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ, ಗದಗ ಬೆಟಗೇರಿ ನಗರದ ಹುಯೀಲಗೋಳ ರಸ್ತೆಯಲ್ಲಿ 3 ಕೋಟಿ 38 ಲಕ್ಷ ರೂ.ಗಳ ಅನುದಾನದಲ್ಲಿ ಪರಿಶಿಷ್ಠ ಜಾತಿ ಮೆಟ್ರಿಕ್ ನಂತರ ವೃತ್ತಿಪರ ಬಾಲಕಿಯರ ವಸತಿ ನಿಲಯ, ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜನ್ನು 1046.00 ಲಕ್ಷ ಅನುದಾನದಲ್ಲಿ ನಿರ್ಮಿಸಲಾಗಿದೆ. ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮ ಯೋಜನೆಗಳಡಿ ಗದಗ-ಬೆಟಗೇರಿ ಅವಳಿ ನಗರದಲ್ಲಿ 5 ಎಕರೆ 10 ಗುಂಟೆ ಜಾಗದಲ್ಲಿ ವಸತಿ ರಹಿತ ಹರಣಶಿಕಾರಿ ಸಮುದಾಯದವರಿಗೆ 109 ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ಅವುಗಳಲ್ಲಿ 220.00 ಲಕ್ಷ ರೂ.ಗಳ ಅನುದಾನದಲ್ಲಿ 40 ಮನೆಗಳು ಪೂರ್ಣಗೊಂಡಿರುತ್ತವೆ.

    ಗದಗ ತಾಲೂಕಿನ ವಸತಿ ನಿಲಯಗಳಲ್ಲಿರುವ ಕಂಪ್ಯೂಟರ್ ಲ್ಯಾಬ್ ಗಳು, ಅಭ್ಯಾಸ ಕೊಠಡಿಗಳು ಮತ್ತು ನಿಲಯಗಳ ನವೀಕರಣ, ದುರಸ್ತಿ ಮತ್ತು ನೂತನ ಕೊಠಡಿಗಳ ನಿರ್ಮಾಣ ಮುಂತಾದ ಕಾಮಗಾರಿಗಳನ್ನು 349.00 ಲಕ್ಷ ರೂ.ಗಳ ಅನುದಾನದಲ್ಲಿ ನಿರ್ಮಿಸಲಾಗಿದ್ದು, ಈ ಕಾಮಗಾರಿಗಳನ್ನು ಡಿಸಿಎಂ ಕಾರಜೋಳ ಉದ್ಘಾಟಿಸಿದರು.

    ಶಾಸಕರಾದ ಶ್ರೀ ಹೆಚ್.ಕೆ.ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಪೆದ್ದಪ್ಪಯ್ಯ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಂ ಮಾದರ್, ಜಿಲ್ಲಾಧಿಕಾರಿ ಹಿಮೇಮಠ ಮತ್ತಿತರರು ಉಪಸ್ಥಿತರಿದ್ದರು.

  • ಶಾಲೆಯಲ್ಲಿ ನಿಗೂಢವಾಗಿ ಬೀಳ್ತಿದ್ದ ಕಲ್ಲುಗಳ ಅಸಲಿಯತ್ತು ಬಯಲು

    ಶಾಲೆಯಲ್ಲಿ ನಿಗೂಢವಾಗಿ ಬೀಳ್ತಿದ್ದ ಕಲ್ಲುಗಳ ಅಸಲಿಯತ್ತು ಬಯಲು

    ಬಾಗಲಕೋಟೆ: ಕಳೆದ ಒಂದು ತಿಂಗಳಿನಿಂದ ಶಾಲೆಯಲ್ಲಿ ನಿಗೂಢವಾಗಿ ಬೀಳುತ್ತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಶಾಲಾ ವಿದ್ಯಾರ್ಥಿನಿ ನಡೆಸುತ್ತಿದ್ದ ಕೃತ್ಯ ಎಂದು ಬಾಗಲಕೋಟೆ ಎಸ್‍ಪಿ ಲೋಕೇಶ್ ಜಗಲಾಸರ್ ಹೇಳಿದ್ದಾರೆ.

    ಪ್ರಕರಣದ ಕುರಿತು ಮಾಹಿತಿ ನೀಡಿದ ಎಸ್‍ಪಿ ಅವರು, ಇದು ಶಾಲಾ ಬಾಲಕಿ ನಡೆಸಿದ ಕೃತ್ಯವಾಗಿದ್ದು, ವಿದ್ಯಾರ್ಥಿನಿಯ ಶಾಲೆಯ ಬ್ಯಾಗ್‍ನಲ್ಲಿ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೇ ಆಕೆಯೇ ತಲೆ ಮೇಲೆ ಕಲ್ಲು ಬಿದ್ದಿದೆ ಎಂದು ಹೇಳುತ್ತಿದ್ದಳು. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಹೇಳಿದ್ದಾರೆ.

    ಸದ್ಯ ವಿದ್ಯಾರ್ಥಿನಿಯ ಬ್ಯಾಗಿನಲ್ಲಿ ಕಲ್ಲು ಪತ್ತೆಯಾಗಿರುವುದರಿಂದ ಪೊಲೀಸರು ಬಾಲಕಿಯ ಹೇಳಿಕೆ ಪಡೆಯಲು ಮುಂದಾಗಿದ್ದಾರೆ. ಬಾಲಕಿಗೆ ಬೇರೆ ಯಾರೋ ಈ ರೀತಿ ಮಾಡುವಂತೆ ಹೇಳಿ ಕೃತ್ಯ ನಡೆಸಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಎಸ್‍ಪಿ ತಿಳಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿನಿ ಚಿಕ್ಕವಳು ಆಗಿರುವುದರಿಂದ ಕೌನ್ಸಿಲಿಂಗ್ ಮೂಲಕ ಮಾಹಿತಿ ಪಡೆಯಲಾಗುತ್ತಿದೆ. ಏಕೆಂದರೆ ನೇರ ಪ್ರಶ್ನೆ ಮಾಡಿದರೆ ಇದು ಅಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದಿದ್ದಾರೆ.

    ಜಿಲ್ಲೆಯ ಇಂಜಿನವಾರಿ ಗ್ರಾಮದಲ್ಲಿ ಕಳೆದ 1 ತಿಂಗಳಿನಿಂದ ಶಾಲೆಯ ಮೇಲೆ ಕಲ್ಲು ಎಸೆಯಲಾಗುತ್ತಿತ್ತು. ಪರಿಣಾಮ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಯಪಡುವ ವಾತಾವರಣ ನಿರ್ಮಾಣವಾಗಿತ್ತು. ಘಟನೆಯಿಂದ ಹಲವು ಮಕ್ಕಳ ತಲೆಗೆ ಗಾಯಗಳಾಗಿತ್ತು. ಇದರಿಂದ ಭಯಭೀತರಾಗಿ ಮಕ್ಕಳು ಶಾಲೆ ಬಿಟ್ಟ ಘಟನೆಗಳು ಇಡೀ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಭಾನಾಮತಿಯ ಕಾಟದಿಂದ ಕಲ್ಲು ಬೀಳುತ್ತಿವೆ ಎಂದು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು. ಆದರೆ ಇದನ್ನು ಅಲ್ಲಗೆಳೆದಿದ್ದ ಜಿಲ್ಲಾಧಿಕಾರಿಗಳು ಹಾಗೂ ಎಸ್‍ಪಿ ಅವರು ಪ್ರಕರಣವನ್ನು ಪತ್ತೆ ಮಾಡಲು ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು.

    ಶಿಕ್ಷಣ ಇಲಾಖೆಯ ಸಿಬ್ಬಂದಿ ಶಾಲೆಯಲ್ಲಿ ಐದು ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಶಾಲೆಯ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಿದ್ದರು. ಆ ಬಳಿಕ ಕಲ್ಲು ಬೀಳುವುದು ನಿಂತಿತ್ತು. ಶಿಕ್ಷಣ ಇಲಾಖೆಯ ಮಾರ್ಗದರ್ಶನದಲ್ಲಿ ವಿಜ್ಞಾನ ಪರಿವೀಕ್ಷಕರು, ಪವಾಡ ಬಯಲು ತಜ್ಞರು ಶಾಲೆಗೆ ಭೇಟಿ ನೀಡಿ ಪವಾಡ ಬಯಲು ಮಾಡುವ ಪ್ರಯತ್ನ ಮಾಡಿದರು. ಮಕ್ಕಳ ಮುಂದೆ ಕೆಲ ತಾಂತ್ರಿಕ ಪ್ರಯೋಗ ಮಾಡಿದ್ದರು. ಆದರೂ ಮಕ್ಕಳು ಮಾತ್ರ ಮಂತ್ರಿಸಿದಿ ನಿಂಬೆಹಣ್ಣು, ದೇವರ ಪ್ರಸಾದ ಹಿಡಿದುಕೊಂಡು ಶಾಲೆಗೆ ಆಗಮಿಸುತ್ತಿದ್ದರು.

  • ಬಾಡಿಗೆ ಕೇಳಿದ್ದಕ್ಕೆ ವೃದ್ಧ ತಂದೆ, ಮಗಳ ಮೇಲೆ ವಕೀಲ ಹಲ್ಲೆ!

    ಬಾಡಿಗೆ ಕೇಳಿದ್ದಕ್ಕೆ ವೃದ್ಧ ತಂದೆ, ಮಗಳ ಮೇಲೆ ವಕೀಲ ಹಲ್ಲೆ!

    ಬಾಗಲಕೋಟೆ: ಬಾಡಿಗೆ ಕೇಳಿದ್ದಕ್ಕೆ ಸಿಟ್ಟುಗೊಂಡ ವಕೀಲನೊಬ್ಬ ಜಿಲ್ಲೆಯ ರಬಕವಿಬನಹಟ್ಟಿ ವೃದ್ಧ ತಂದೆ ಹಾಗೂ ಆತನ ಮಗಳ ಮೇಲೆ ಹಲ್ಲೆಗೈದ ಆರೋಪ ಕೇಳಿ ಬಂದಿದೆ.

    ವಕೀಲ ಹರ್ಷವರ್ಧನ ಪಟವರ್ಧನ ಗಂಗವ್ವ ಜಾಡರ ಹಾಗೂ ಆಕೆಯ ವೃದ್ಧ ತಂದೆ ಸದಾಶಿವ ಜಾಡರ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಹಲ್ಲೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹಲ್ಲೆಗೈದ ವಕೀಲ ಗಂಗವ್ವಗೆ ಸೇರಿದ ಕಟ್ಟಡದಲ್ಲಿ ಬಾಡಿಗೆ ಕಚೇರಿ ಹೊಂದಿದ್ದನು. ಆದ್ರೆ ವಕೀಲ ಹಣ ಕೊಡುತ್ತಿರಿಲ್ಲ. ಈ ವಿಚಾರಕ್ಕಾಗಿ ಗಂಗವ್ವ ಹಾಗೂ ವಕೀಲನ ಮಧ್ಯೆ ಆಗಾಗ ನಡೆಯುತ್ತಿತ್ತು. ಮಾರ್ಚ್ 15 ರಂದು ನಡೆದ ಜಗಳ ವಿಕೋಪಕ್ಕೆ ತಿರುಗಿತ್ತು.

    ಮಾಲಕಿ ಹಾಗೂ ಆಕೆಯ ವೃದ್ಧ ತಂದೆ ಬಾಡಿಗೆ ಕೇಳಲು ಹರ್ಷವರ್ಧನನ ಕಚೇರಿಗೆ ತೆರಳಿದ್ದರು. ಇದರಿಂದ ಸಿಟ್ಟುಗೊಂಡ ವಕೀಲ ಸದಾಶಿವರ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಗಂಗವ್ವ, ಬಾಡಿಗೆ ಕೇಳಿದ್ರೆ ಯಾಕೆ ಹೊಡೆಯುತ್ತಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ವಕೀಲನ ಕಚೇರಿಯೊಳಗೆ ನುಗ್ಗಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟುಗೊಂಡ ವಕೀಲ ಸದಾಶಿವ ಅವರನ್ನು ಕತ್ತು ಹಿಸುಕಿ ತನ್ನ ಟೇಬಲ್ ನತ್ತ ದೂಡಿ ಹಲ್ಲೆ ಮಾಡಿದ್ದಾನೆ. ಅಲ್ಲದೆ ವಕೀಲನ ಸಹಚರರು ಕೂಡ ಮಹಿಳೆ ಗಂಗವ್ವನ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.

    ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ವಕೀಲ ಹರ್ಷವರ್ಧನ ಪಟವರ್ಧನ ಹಾಗೂ ಆತನ ಸಹಚರನ ವಿರುದ್ಧ ದೂರು ದಾಖಲಾಗಿದೆ. ಆದ್ರೆ ಇದುವರೆಗೂ ವಕೀಲ ಹಾಗೂ ಸಹಚರನನ್ನು ಬನಹಟ್ಟಿ ಪೊಲೀಸರು ಬಂಧಿಸಿಲ್ಲ. ಹೀಗಾಗಿ ಆರೋಪಿಗಳನ್ನು ಬಂಧಿಸಿ ನ್ಯಾಯ ಕೊಡಿಸಲು ಗಂಗವ್ವ ಹಾಗೂ ತಂದೆ ಒತ್ತಾಯಿಸುತ್ತಿದ್ದಾರೆ.

  • ಖಾಸಗಿ ಆಸ್ಪತ್ರೆಗಳು ಬಂದ್-ಆಸ್ಪತ್ರೆಯಿಂದ ಆಸ್ಪತ್ರೆಗೆ ರೋಗಿಗಳ ಅಲೆದಾಟ!

    ಖಾಸಗಿ ಆಸ್ಪತ್ರೆಗಳು ಬಂದ್-ಆಸ್ಪತ್ರೆಯಿಂದ ಆಸ್ಪತ್ರೆಗೆ ರೋಗಿಗಳ ಅಲೆದಾಟ!

    ಬಾಗಲಕೋಟೆ: ಜಿಲ್ಲೆಯ ಎಲ್ಲೆಡೆ ಖಾಸಗಿ ಆಸ್ಪತ್ರೆಗಳ ಬಂದ್ ಹಿನ್ನೆಲೆ ಕೆಲವು ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ.

    ಹಾವು ಕಡಿತಕ್ಕೆ ಒಳಗಾಗಿ ಸಿದ್ದಪ್ಪ ತುಪ್ಪದ ಎಂಬ ವ್ಯಕ್ತಿ ಸೂಕ್ತವಾದ ಚಿಕಿತ್ಸೆ ದೊರೆಯದ ಕಾರಣ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

    ಸಿದ್ದಪ್ಪ ಎಂಬವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲ್ಲೂರು ಗ್ರಾಮದ ನಿವಾಸಿ. ಹಾವಿನ ಕಡಿತಕ್ಕೆ ಒಳಗಾಗಿ, ಅವರನ್ನು ಸ್ಥಳೀಯ ಕಲ್ಲೂರು ಗ್ರಾಮ ಹಾಗೂ ರಾಮದುರ್ಗದಲ್ಲಿ ದಾಖಲಿಸಿದ್ದರು. ಆದರೆ ಅಲ್ಲಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಖಾಸಗಿ ಆಸ್ಪತ್ರೆಗೆ ಸಾಗಿಸುವಂತೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಸೂಚಿಸಿದರು.

    ಹಾಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಾಥಮಿಕ ಚಿಕಿತ್ಸೆ ಕೊಟ್ಟರೂ ವೆಂಟಿಲೇಟರ್ ಸೌಲಭ್ಯವಿಲ್ಲದೇ ರೋಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ರೋಗಿಯ ಸಂಬಂಧಿಕರು ಆತಂಕದಲ್ಲಿದ್ದಾರೆ.

    ಪ್ರತಿಭಟನೆ ಏಕೆ:
    ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‍ಎಂಸಿ) ಮಸೂದೆಯನ್ನು ಜಾರಿಗೆ ತರದಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘವು ಬಂದ್‍ಗೆ ಕರೆ ನೀಡಿದೆ.

    ಏನಿದು ಎನ್‍ಎಂಸಿ ಮಸೂದೆ?:
    ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣ ಕ್ಷೇತ್ರ ಹಾಗೂ ವೈದ್ಯ ವೃತ್ತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ‘ರಾಷ್ಟ್ರೀಯ ವೈದ್ಯಕೀಯ ಆಯೋಗ-2017’ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಈಗಿರುವ ಭಾರತೀಯ ವೈದ್ಯಕೀಯ ಪರಿಷತ್ (ಎಂಸಿಐ) ವಿಸರ್ಜಿಸಿ ಅದರ ಸ್ಥಾನದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುವುದು ಈ ವಿಧೇಯಕದ ಪ್ರಮುಖ ಉದ್ದೇಶವಾಗಿದೆ.

  • ನೀವೆಂದೂ ಕಂಡರಿಯದ ಲೈವ್ ಮರ್ಡರ್: ನೋಡ ನೋಡುತ್ತಲೇ ತಂದೆಯನ್ನ ಕೊಂದೇಬಿಟ್ರು!

    ನೀವೆಂದೂ ಕಂಡರಿಯದ ಲೈವ್ ಮರ್ಡರ್: ನೋಡ ನೋಡುತ್ತಲೇ ತಂದೆಯನ್ನ ಕೊಂದೇಬಿಟ್ರು!

    ಬಾಗಲಕೋಟೆ: ಮಗ ಹಾಗೂ ತಮ್ಮಂದಿರು ಸೇರಿ ಮನೆಯ ಯಜಮಾನನ್ನೇ ಕೊಲೆಮಾಡಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಕೊಡಿಹಾಳ ಗ್ರಾಮದಲ್ಲಿ 2016 ಅಕ್ಟೋಬರ್ 29 ರಂದು ನಡೆದಿದೆ. ಸದ್ಯ ಲೈವ್ ಮರ್ಡರ್ ವಿಡಿಯೋ ವಾಟ್ಸಪ್‍ನಲ್ಲಿ ವೈರಲ್ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

    ಮಲ್ಲಪ್ಪ ಕೈರವಾಡಗಿ ಎಂಬವರೇ ಮಕ್ಕಳು ಮತ್ತು ಸಹೋದರರಿಂದ ಕೊಲೆಯಾದ ವ್ಯಕ್ತಿ. ಆಸ್ತಿ ವಿಚಾರವಾಗಿ ತಂದೆ ಮಲ್ಲಪ್ಪ ಹಾಗೂ ಮಗ ದೇವಪ್ಪ ಮಧ್ಯೆ ಗಲಾಟೆಯಾಗಿತ್ತು. ದೇವಪ್ಪ ಹಾಗು ಮಲ್ಲಪ್ಪರ ಸಹೋದರ ಶಿವಪ್ಪ ತಮ್ಮ ಸಹಚರೊಂದಿಗೆ ಸೇರಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಪ್ಪರನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ.

    ಏನಿದು ಪ್ರಕರಣ?: ಕೋಡಿಹಾಳ ಗ್ರಾಮದ ನಿವಾಸಿಯಾಗಿರುವ ಮಲ್ಲಪ್ಪ 20 ಎಕರೆಗೂ ಹೆಚ್ಚು ಭೂಮಿಯನ್ನು ಹೊಂದಿದ್ದರು. ಆದರೆ ಮಲ್ಲಪ್ಪರ ಮಗ ದೇವಪ್ಪ ತನಗೆ ಆಸ್ತಿಯಲ್ಲಿ ಪಾಲು ಬೇಕೆಂದು ಜಗಳ ಮಾಡಿಕೊಂಡಿದ್ದನು. ಮಲ್ಲಪ್ಪ ಅವರು ದೇವಪ್ಪನಿಗೆ ಅವನ ಪಾಲಿನ ಆಸ್ತಿಯನ್ನು ಹಂಚಿಕೊಟ್ಟು, ತಮ್ಮ ಜೀವನೋಪಯಾಕ್ಕಾಗಿ 4 ಎಕರೆ ಭೂಮಿಯನ್ನು ಉಳಿಸಿಕೊಂಡಿದ್ರು. ಈ ವಿಚಾರವಾಗಿ ತಂದೆ ಮತ್ತು ಮಗನ ಮಧ್ಯೆ ಆಗಾಗ ಗಲಾಟೆಗಳು ನಡೆಯುತ್ತಿತ್ತು. ಕೊನೆಗೆ ದೇವಪ್ಪ ತನ್ನ ಚಿಕ್ಕಪ್ಪಂದಿರ ಸಹಾಯದಿಂದ ತಂದೆಯನ್ನು ಕೊಲೆ ಮಾಡಿದ್ದಾನೆ.

    ಹೊಲದಲ್ಲಿ ದೇವಪ್ಪ, ಶಿವಪ್ಪ ಸೇರಿ ಹಲವರು ಮಲ್ಲಪ್ಪನ ಮೇಲೆ ಹಲ್ಲೆ ಮಾಡುವ ವೇಳೆ ಪಕ್ಕದ ಹೊಲದ ರೈತರು ತಡೆಯಲು ಮುಂದಾಗಿದ್ದರು. ಆದರೆ ದೇವಪ್ಪ ಮಲ್ಲಪ್ಪನ ನೆರವಿಗೆ ಬಂದ ಗ್ರಾಮಸ್ಥರಿಗೆ ಕೊಲೆಯ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ. ಕೊಲೆಯ ನಂತರ ಮೃತ ದೇಹವನ್ನು ಗ್ರಾಮಕ್ಕೆ ತಂದು ವಿಧಿವಿಧಾನಗಳ ಮೂಲಕ ಅಂತ್ಯಸಂಸ್ಕಾರ ಮಾಡಿದ್ದಾರೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: 2016 ಅಕ್ಟೋಬರ್‍ನಲ್ಲಿ ಕೊಲೆ ಮಾಡವಾಗ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದು, ಅದನ್ನು ಈಗ ಯಾರೋ ವಾಟ್ಸಪ್ ನಲ್ಲಿ ಹರಿಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಇಳಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    https://www.youtube.com/watch?v=Dza3ulNSEc0